ಪುರಿ ಜಗನ್ನಾಥ ದೇವಾಲಯದ ವಿಸ್ಮಯಗಳು

ಪ್ರತಿಯೊಂದು ದೇವಾಲಯಕ್ಕೂ ಅದರದ್ದೇ ಆದ ಕ್ಷೇತ್ರ ಮಹಿಮೆ ಇದ್ದರೆ, ಇಂದಿಗೂ ವಿಜ್ಞಾನಕ್ಕೆ ಕಗ್ಗಂಟಾಗಿಯೇ ಉಳಿದಿರುವ ಪುರಿಯ ಶ್ರೀ ಜಗನ್ನಾಥ ದೇವಾಲಯದ ಹತ್ತಾರು ವಿಸ್ಮಯಗಳು ಇದೋ ನಿಮಗಾಗಿ

  • 1515 ರ ಸುಮಾರಿಗೆ ವಿಜಯನಗರದ ಸಾಮ್ರಾಜ್ಯ ಶ್ರೀ ಕೃಷ್ಣದೇವರಾಯ ಒರಿಸ್ಸಾದ ಅಂದಿನ ರಾಜ ಗಜಪತಿಯನ್ನು ಸೋಲಿಸಿ ಒರಿಸ್ಸಾದ ಕೆಲಭಾಗವನ್ನು ಕೆಲವರ್ಷಗಳ ಕಾಲ ತನ್ನ ವಶಪಡಿಸಿಕೊಂದಿದ್ದ. ನಂತರದ ದಿನಗಳಲ್ಲಿ  ಒಡಿಶಾದ ಗಜಪತಿ ಪ್ರತಾಪರುದ್ರ ದೇವರು ತನ್ನ ಮಗಳಾದ ಜಗನ್ಮೋಹಿನಿಯನ್ನು ಶ್ರೀ ಕೃಷ್ಣದೇವರಾಯನಿಗೆ ಮದುವೆ ಮಾಡಿಕೊಟ್ಟ ಶಾಂತಿ ಒಪ್ಪಂದದ ಪರಿಣಾಮವಾಗಿ ಮತ್ತೆ ಆ ಪ್ರದೇಶವೆಲ್ಲವೂ ಗಜಪತಿಗೆ ಹಿಂದಿಗುರಿಸುವ ಮೂಲಕ   ಪುರಿಯ ಜಗನ್ನಾಥನಿಗೂ ಕರ್ನಾಟಕಕ್ಕೂ ಒಂದು ಸಂಬಂಧ ಏರ್ಪಟ್ಟಿತ್ತು.
  • ದೇವಾಲಯದ ವಾಸ್ತುಶಿಲ್ಪವು ಕಳಿಂಗ ಶೈಲಿಯಲ್ಲಿದೆ ಮತ್ತು ಎತ್ತರದ ಗೋಡೆಗಳಿಂದ ಆವೃತವಾಗಿದೆ, ಇದರಲ್ಲಿ ಅನೇಕ ದೇವಾಲಯಗಳು, ಕೊಠಡಿಗಳು ಮತ್ತು ಅಂಗಳಗಳಿವೆ.
  • ಹಿಂದಿನ ಕಾಲದಲ್ಲಿ ಪುರಿಯ ಜಗನ್ನಾಥನ ರಥ ಎಳೆಯುವ ಮುನ್ನ ರಾಜ ಮಹಾರಾಜರು ಚಿನ್ನದ ಪೊರಕೆಯಿಂದ ಆ ಪ್ರದೇಶವನ್ನು ಗುಡಿಸುತ್ತಿದ್ದರು. ಇಂದಿಗೂ ಅದೇ ಸಂಪ್ರದಾಯವನ್ನು ಅಲ್ಲಿನ ಮಹಾರಾಜ ಮನೆತನದವರು ಚಿನ್ನದ ಪೊರಕೆಯಿಂದ ಗುಡಿಸುವ ಮೂಲಕ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
  • ಇನ್ನು ಪುರಿಯ ಜಗನ್ನಾಥ ದೇವಾಲಯದ ಮೇಲಿರುವ ಸುದರ್ಶನ ಚಕ್ರವು ಸುಮಾರು ಎರಡು ಟನ್ (2200 ಕೆಜಿ) ತೂಕವಿದ್ದು, 20 ಅಡಿ (6 ಮೀಟರ್) ಎತ್ತರವಿದ್ದು ಇದಕ್ಕೆ ನೀಲ ಚಕ್ರ ಎಂದೂ ಕರೆಯಲಾಗುತ್ತದೆ. ಈ ಚಕ್ರವನ್ನು ಪುರಿಯ ಯಾವ ದಿಕ್ಕಿನಿಂದ ನೋಡಿದರೂ ಈ ಚಕ್ರ ನಮ್ಮ ಕಡೆಯೇ ಮುಖ ಮಾಡಿಕೊಂಡು ನೋಡುತ್ತಿರುವಂತೆ ಭಾಸವಾಗುತ್ತದೆ.
  • ಅಷ್ಟು ಭಾರವಾದ ಮಿಶ್ರಲೋಹದ ಈ ಚಕ್ರವನ್ನು ಅಂದಿನ ಕಾಲದಲ್ಲಿ ಯಾವುದೇ ತಂತ್ರಜ್ಞಾನವಿಲ್ಲದೇ ಹೇಗೆ ಅಷ್ಟು ಎತ್ತರದಲ್ಲಿ ಸ್ಥಾಪಿಸಿದರು ಎನ್ನುವುದೇ  ಎಲ್ಲರಿಗೂ ಅಚ್ಚರಿಯ ಸಂಗತಿಯಾಗಿದೆ.
  • ಈ ನೀಲಾ ಚಕ್ರದ ಮೇಲೆ ಹಾರಿಸಲಾಗಿರುವ ಧ್ವಜವನ್ನು ಪತೀತ ಪಾವನಾ ಎಂದು ಕರೆಯಲಾಗುತ್ತದೆ ಮತ್ತು ಇದು ಗರ್ಭಗುಡಿಯಲ್ಲಿ ಇರಿಸಲಾಗಿರುವ ದೇವತೆಗಳ ಚಿತ್ರಕ್ಕೆ ಸಮನಾಗಿದೆ, ಈ ದೇವಸ್ಥಾನದ ಗೋಪುರವು ಸುಮಾರು 1000 ಅಡಿ ಎತ್ತರವಿದ್ದು ಅಲ್ಲಿನ  ಸಂಪ್ರದಾಯದಂತೆ ಪ್ರತಿದಿನವೂ ಇಲ್ಲಿನ ಅರ್ಚಕರು ಅಷ್ಟು ಎತ್ತರದ ಗೋಪುರವನ್ನು ಹತ್ತಿ ಧ್ವಜವನ್ನು ಬದಲಾಯಿಸುತ್ತಾರೆ. ಈ ಪ್ರಕ್ರಿಯೆ ಅಕಸ್ಮಾತ್ ಒಂದು ದಿನ ತಪ್ಪಿದರೆ, 18 ವರ್ಷಗಳ ಕಾಲ ದೇವಾಲಯ ತೆರೆಯುವಂತಿಲ್ಲ, ಎಂಬ ಪ್ರತೀತಿ ಇರುವ ಕಾರಣ ಈ ಪ್ರಕ್ರಿಯೆಯನ್ನು ಅತ್ಯಂತ ಶ್ರದ್ಧೆಯಿಂದ ಅಲ್ಲಿನ ಅರ್ಚಕರು ನಡೆಸಿಕೊಂಡು ಬರುತ್ತಿದ್ದಾರೆ. ಇದನ್ನು ನೋಡುವುದಕ್ಕೆ ನಿಜಕ್ಕೂ ಎದೆ ಘಲ್ ಎನಿಸಿವಷ್ಟು ರೋಚಕವಾಗಿರುತ್ತದೆ.
  • ಯಾವುದೇ ಧ್ವಜವು ಗಾಳಿ ಬೀಸುವ ದಿಕ್ಕಿಗೆ ಅನುಗುಣವಾಗಿ ಹಾರುತ್ತದೆ ಎನ್ನುವುದು ಜಗದ ನಿಯಮ ಆದರೆ ಜಗನ್ನಾಥ ದೇವಾಲಯದ ಮೇಲ್ಭಾಗದಲ್ಲಿ ಜೋಡಿಸಲಾದ ಧ್ವಜವು ಈ ತತ್ವಕ್ಕೆ ವಿರುದ್ಧವಾಗಿದೆ. ಈ ನಿರ್ದಿಷ್ಟ ಧ್ವಜವು ವಿರುದ್ಧ ದಿಕ್ಕಿನಲ್ಲಿ ಹಾರುತ್ತದೆ ಎನ್ನಲಾಗುತ್ತದೆ.
  • ಸಮುದ್ರಕ್ಕೆ ಹತ್ತಿರದಲ್ಲೇ ಇರುವ ಕಾರಣ, ದೇವಾಲಯ ಪ್ರವೇಶಿಸುವ ಮುನ್ನಾ ಸಮುದ್ರದ ಅಲೆಗಳ ಶಬ್ಧ ಕಿವಿಗಳಿಗೆ ಅಪ್ಪಳಿಸುತ್ತವಾದರೂ, ಒಮ್ಮೆ ದೇವಸ್ಥಾನದ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಸಮುದ್ರದ ಶಬ್ದ ಕಿಂಚಿತ್ತೂ ಕೇಳದಿರುವುದು ನಿಜಕ್ಕೂ ಸೋಜಿಗವೆನಿಸುತ್ತದೆ.
  • ಸಾಮಾನ್ಯವಾಗಿ ಸಮುದ್ರದ ತಟದಲ್ಲಿ ಪ್ರಕೃತಿಯ ಸಹಜ ಪ್ರಕ್ರಿಯೆಯ ಪ್ರಕಾರ ಬೆಳಗಿನ ಸಮಯದಲ್ಲಿ ಗಾಳಿ ಸಮುದ್ರದಿಂದ ಭೂಮಿಯೆಡೆಗೆ ಚಲಿಸುತ್ತದೆ. ಅದೇ ಸಂಜೆಯ ಸಮಯದಲ್ಲಿ ಗಾಳಿ ಭೂಮಿಯಿಂದ ಸಮುದ್ರದೆಡೆಗೆ ಸಂಚರಿಸುತ್ತದೆ. ಆದರೆ ಪುರಿಯಲ್ಲಿ ಮಾತ್ರಾ ಈ ಪ್ರಕ್ರಿಯೆ ಪ್ರಕೃತಿಯ ವಿರುದ್ಧವಾಗಿರುವುದು ಮತ್ತಷ್ಟು ವಿಸ್ಮಯಕಾರಿಯಾಗಿದೆ.
  • ಸಾಮಾನ್ಯವಾಗಿ ಎಲ್ಲಾ ದೇವಾಲಯಗಳ ಮೇಲೆಯೂ ಹಕ್ಕಿಗಳು ಹಾರಾಡುವುದು ಸರ್ವೇಸಾಮಾನ್ಯವಾದರೆ,  ಜಗನ್ನಾಥನ ದೇವಾಲಯದ ಮೇಲೆ ಯಾವುದೇ ಪಕ್ಷಿಗಳು ಹಾರಾಡುವುದಿಲ್ಲ ಎನ್ನುವುದು ಕುತೂಹಲಕಾರಿ ವಿಷಯವಾಗಿದೆ.
  • ಸಾಮಾನ್ಯವಾಗಿ ಸೂರ್ಯನು ನೆತ್ತಿಯ ಮೇಲೆ ಬಂದಾಗ ದೇವಾಸ್ಥಾನದ ನೆರಳು ಬೀಳುವುದು ಸಹಜ ಪ್ರಕ್ರಿಯೆಯಾಗಿದ್ದರೆ, ಇಲ್ಲಿ ಎಂತಹ ಪ್ರಖರವಾದ ಬಿಸಿಲಿದ್ದರೂ ಈ ದೇವಾಲಯದಲ್ಲಿ ಮತ್ತು ದೇವಾಲಯದ ಆವರಣದಲ್ಲಿ ಕೊಂಚವೂ ನೆರಳು ಬೀಳದಿರುವುದು ಅಂದಿನ ನಮ್ಮ ವಾಸ್ತುತಜ್ಣರ ಕಲಾ ನೈಪುಣ್ಯಕ್ಕೆ ಸಾಕ್ಶಿಯಾಗಿದೆ ಎಂದರೂ ಅತಿಶಯವಲ್ಲವಾದರೂ, ಇದೊಂದು ಸ್ಥಾನಿಕ ವಿಸ್ಮಯ ಇಲ್ಲವೇ ಪವಾಡವೆಂದೇ ಅಲ್ಲಿನ ಸ್ಥಳೀಯರು ನಂಬುತ್ತಾರೆ.
  • ಇನ್ನು ಇಲ್ಲಿ ಪ್ರಸಾದ ಮಾಡುವ ವಿಧಾನವೂ ಬಹಳ ವಿಶೇಷವಾಗಿದೆ, ಕಟ್ಟಿಗೆಯ ಒಲೆಯ ಮೇಲೆ  ಏಳು ಮಣ್ಣಿನ ಮಡಕೆಗಳನ್ನು ಒಂದರ ಮೇಲೆ ಮತ್ತೊಂದು ಮಡಿಕೆ ಇಟ್ಟು, ಪ್ರಸಾದವನ್ನು ಬೇಯಲು ಇಡುತ್ತಾರೆ. ಸಾಮನ್ಯವಾಗಿ ಕೆಳಗಿನ ಮಡಿಗೆಯ ಪ್ರಸಾದ ಮೊದಲು ಬೆಂದ ನಂತರ ಅದರ ಮೇಲಿನದ್ದು ಬೇಯುವುದು ಸಹಜ ಪ್ರಕ್ರಿಯೆಯಾದರೆ, ಇಲ್ಲಿ ಮಾತ್ರಾ ಅಚ್ಚರಿಯಂತೆ ಮೇಲಿನ ಮಡಿಕೆಯ ಪ್ರಸಾದ ಬೆಂದ ನಂತರವೇ ಕೆಳಗಿನ ಮಡಿಕೆಯ ಪ್ರಸಾದ ಬೇಯುವುದು ನಿಜಕ್ಕೂ ಕುತೂಹಲಕಾರಿಯಾಗಿದೆ.
  • ವಿಶೇಷ ದಿನಗಳ ಹೊರತಾಗಿ ಈ ದೇವಸ್ಥಾನಕ್ಕೆ ಪ್ರತಿ ದಿನವೂ ಅಂದಾಜಿನಂತೆ 2 ಸಾವಿರದಿಂದ 10 ಸಾವಿರ ವರೆಗೆ ಭಕ್ತರು ಬರುತ್ತಾರೆ. ಎಷ್ಟೇ ಜನರು ಬಂದರೂ ಇಲ್ಲಿ ಮಾಡುವ ಪ್ರಸಾದದ ಪ್ರಮಾಣದಲ್ಲಿ ಮಾತ್ರ ಎಂದಿಗೂ ಹೆಚ್ಚು ಅಥವಾ ಕಡಿಮೆಯಾಗುವುದಿಲ್ಲ. ಅಷ್ಟು ನಿಖರವಾಗಿಯೇ ಪ್ರಸಾದವನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಪ್ರತೀ ದಿನವೂ ಒಂದೇ ಪ್ರಮಾಣದಲ್ಲಿಯೇ ಆಹಾರ ತಯಾರಿಸಿದರೂ ಒಂದು ಅಗುಳೂ ಹೆಚ್ಚು ಕಡಿಮೆಯಾಗದಂತೆ ಅಷ್ಟೂ ಜನಕ್ಕೆ ಸಾಕಾಗುವಷ್ಟು ಆಹಾರ ಅಕ್ಷಯವಾಗುವುದು ನಿಜಕ್ಕೂ ಆಶ್ಚರ್ಯಕರವಾದ ವಿಷಯವಾಗಿದೆ
  • ಹಿಂದೂಯೇತರರಿಗೆ ದೇವಾಲಯಕ್ಕೆ ಪ್ರವೇಶಿಸಲು ಅನುಮತಿ ಇಲ್ಲ. ಪ್ರವೇಶಿಸಲು ಅನುಮತಿಸದ ಸಂದರ್ಶಕರು ದೇವಾಲಯವನ್ನು ನೋಡಬಹುದು ಮತ್ತು ಹತ್ತಿರದ ರಘುನಂದನ್ ಗ್ರಂಥಾಲಯದ ಮೇಲ್ಛಾವಣಿಯಿಂದ ಮತ್ತು ದೇವಾಲಯದ ಮುಖ್ಯ ದ್ವಾರದಲ್ಲಿರುವ ಜಗನ್ನಾಥ ದೇವರ ಚಿತ್ರಕ್ಕೆ ಗೌರವ ಸಲ್ಲಿಸಬಹುದು. ದೇವಾಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ವಿದೇಶಿಯರು ನಡೆಸಿದ ಆಕ್ರಮಣಗಳ ನಂತರ ಈ ನೀತಿ ಜಾರಿಗೆ ಬಂದಿತು ಎಂಬುದಕ್ಕೆ ಕೆಲವು ಪುರಾವೆಗಳಿವೆ.
  • ರಥಯಾತ್ರೆ ವಾರ್ಷಿಕ ಮೆರವಣಿಗೆಯಾಗಿದ್ದು, ದೇವರನ್ನು ದೇವಾಲಯದ ಹೊರಗೆ 2 ಸೆಟ್ ರಥಗಳಲ್ಲಿ ಸಾಗಿಸಲಾಗುತ್ತದೆ. ಮೊದಲ ರಥವು ಜಗನ್ನಾಥ ದೇವಾಲಯ ಮತ್ತು ಮೌಸಿ ಮಾ ದೇವಾಲಯವನ್ನು ಬೇರ್ಪಡಿಸುವ ನದಿಯ ತನಕ ದೇವತೆಗಳನ್ನು ಒಯ್ಯುತ್ತದೆ. ಅದರ ನಂತರ, ವಿಗ್ರಹಗಳನ್ನು ನದಿ ದಾಟಲು 3 ದೋಣಿಗಳಲ್ಲಿ ಸಾಗಿಸಲಾಗುತ್ತದೆ. ಈಗ ಎರಡನೇ ರಥವು ದೇವರನ್ನು ನದಿಯಿಂದ ಮೌಸಿ ಮಾ ದೇವಸ್ಥಾನಕ್ಕೆ ಕೊಂಡೊಯ್ಯುತ್ತದೆ.
  • ಪುರಿಗೆ ಹೋದವರು ಬೇಡಿ ಹನುಮಂತನ ದರ್ಶನ ಪಡೆಯದೇ ಹೊದಲ್ಲಿ ಪುರಿ ದರ್ಶನದ ಪುಣ್ಯ ಲಭಿಸುವುದಿಲ್ಲ

ಈ ಎಲ್ಲಾ ಸಂಗತಿಗಳು ಪುರಿ ಜಗನ್ನಾಥ ದೇವಾಲಯವನ್ನು ಭಾರತದ ಅತ್ಯಂತ ನಿಗೂಢ ಮತ್ತು ಪವಿತ್ರ ಸ್ಥಳಗಳಲ್ಲಿ ಒಂದನ್ನಾಗಿ ಮಾಡಿರುವ ಕಾರಣ, ಸ್ವಲ ಸಮಯ ಮಾಡಿಕೊಂಡು ಪುರಿ ಜಗನ್ನಾಥನ ದರ್ಶನ ಪಡೆದು ಅಲ್ಲಿನ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

Leave a comment