ಬಡವರ ಮಕ್ಕಳು ಬೆಳೀ ಬೇಕು ಕಣ್ರಯ್ಯ

ಬಡವರ ಮಕ್ಕಳು ಬೆಳೀ ಬೇಕು ಕಣ್ರಯ್ಯ!!  ಎನ್ನುವುದು ಸರ್ವೇ ಸಾಮಾನ್ಯವಾಗಿ  ಜನರು ಆಡುವ ಮಾತಾಗಿದ್ದು, ಇದರ  ಅರ್ಥ ಬಡತನದಲ್ಲಿರುವ ಮಕ್ಕಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬೆಳೆಯಬೇಕು ಮತ್ತು ಅಭಿವೃದ್ಧಿ ಹೊಂದಬೇಕು ಎನ್ನುವ ಆಶಾಭಾವನೆಯಾಗಿದೆ. ಹೀಗೆ ಹೇಳುವುದು ಸಾಮಾಜಿಕ ಕಾಳಜಿ ಮತ್ತು ಬದ್ಧತೆಯನ್ನು ವ್ಯಕ್ತಪಡಿಸುವುದಲ್ಲದೇ, ಬಡತನದಲ್ಲಿರುವ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಜೀವನ ಮಟ್ಟವನ್ನು ಸುಧಾರಿಸುವ ಅಗತ್ಯವನ್ನು ಒತ್ತಿ ಹೇಳುತ್ತದೆ. ಈ ಮಾತುಗಳು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ. ಬಡವರ ಮಕ್ಕಳು ಕೂಡ ಉತ್ತಮ ಜೀವನವನ್ನು ನಡೆಸಲು ಅರ್ಹರು ಮತ್ತು ಅವಕಾಶಗಳನ್ನು ಕಲ್ಪಿಸಿಕೊಟ್ಟಲ್ಲಿ ಅವರು ಸಹಾ ಉತ್ತಮವಾಗಿ ಜೀವಿಸಬಲ್ಲರು ಎಂಬುದಕ್ಕೆ ಕಳೆದ ಭಾನುವಾರ ನಾನು ಭಾಗವಹಿಸಿದ್ದ ಮಗುವೊಂದರ ವರ್ಷದ ಹುಟ್ಟು ಹಬ್ಬವೇ ಸಾಕ್ಷಿಯಾಗಿದ್ದು ಆ ಸುಂದರ ಕ್ಷಣಗಳು ಇದೋ ನಿಮಗಾಗಿ

ಅದು 80ರ ದಶಕ. ನಮ್ಮೆಲ್ಲರ  ವಿದ್ಯಾಭ್ಯಾಸವು ಚೆನ್ನಾಗಿ ಆಗಲೆಂದೇ ಆಗ ತಾನೇ ನಾವು ನೆಲಮಂಗಲದಿಂದ ನಮ್ಮ ತಂದೆಯವರ ಕೆಲಸ ಮಾಡುತ್ತಿದ್ದ ಬಿಇಎಲ್ ಕಾರ್ಖಾನೆಯ ಹಿಂದೆಯೇ ಇದ್ದ ಲೊಟ್ಟೇಗೊಲ್ಲಹಳ್ಳಿ (Railway Colony) ಎಂಬ ಪ್ರದೇಶಕ್ಕೆ ನಮ್ಮ ವಾಸ್ತವ್ಯವನ್ನು ಬದಲಿಸಿದ್ದೆವು. ಅಲ್ಲಿಯವರೆಗೂ ದೊಡ್ಡ ದೊಡ್ಡ ಮನೆಗಳಲ್ಲಿದ್ದ (ಆ ಮನೆಯಲ್ಲೇ  ನಮ್ಮ ಇಬ್ಬರು ಚಿಕ್ಕಮ್ಮಂದಿರ ಮದುವೆ ಆಗಿತ್ತು ಎಂದರೆ ಮನೆ ಎಷ್ಟು ದೊಡ್ಡದಿರಬಹುದು ಎಂಬುದು ನಿಮಗೇ ಅರ್ಥವಾಗುತ್ತದೆ)  ಇಲ್ಲಿ  ಒಂದು ಸಣ್ಣದಾದ ಒಂದೇ ಕೊಠಡಿಯಿದ್ದ ವಠಾರಕ್ಕೆ ಬಂದಾಗ ಆರಂಭದ ದಿನಗಳಲ್ಲಿ ನಮೆಲ್ಲರಿಗೂ ಒಂದು ರೀತಿಯ ಕಸಿವಿಸಿ ಆಗಿದ್ದಂತೂ ಸುಳ್ಳಲ್ಲ. ಊರಿಗೆ ಬಂದವಳು ನೀರಿಗೆ ಬಾರದಿರುವಳೇ  ಎನ್ನುವ ಗಾದೆ ಮಾತಿನಂತೆ ಮನೆಗೆ ಬಂದ ತಕ್ಷಣ ಜೀವನಾವಶ್ಯಕವಿದ್ದ ನೀರು, ಹಾಲು ದಿನಸಿ ಎಲ್ಲದ್ದಕ್ಕೂ ವ್ಯವಸ್ಥೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಪರಿಚಯವಾದವರೇ ಶ್ರೀಮತಿ ಗೌರಮ್ಮ. ಅವರ ಹೆಸರು ಗೌರಮ್ಮ ಎಂದಿದ್ದರೂ ನಾವುಗಳು ಪ್ರೀತಿಯಿಂದ ಹಾಲಮ್ಮಾ ಎಂದೇ ಕರೆಯುತ್ತಿದ್ದೆವು.

ನಮ್ಮಿಬ್ಬರ ಮನೆಗಳು ಕೂಗಳತೆಯ ದೂರದಲ್ಲೇ ಇದ್ದರೂ ಮಧ್ಯೆ ಕೆಲವೊಂದು ಮನೆಗಳು ಇದ್ದ ಕಾರಣ, ಸ್ವಲ್ಪ ಬಳಸಿಕೊಂಡು ಹೋಗಬೇಕಿತ್ತು. ಗೌರಮ್ಮನ ಮನೆಯಲ್ಲಿ  ಹಸು ಮತ್ತು ಎಮ್ಮೆಗಳನ್ನು ಸಾಕಿದ್ದು ಅವರ ಮನೆಯವರು ಪ್ರತೀ ದಿನ  ದನಕರುಗಳನ್ನು ಹುಲ್ಲು ಮೇಯಿಸಿಕೊಂಡು ಬರುವುದಲ್ಲದೇ ಕೊಟ್ಟಿಗೆಯ ಕೆಲಸದಲ್ಲಿ ನಿರತರಾಗಿದ್ದರೆ, ಗೌರಮ್ಮನವರು ಹಾಲು ಕರೆದು ಅದನ್ನು ವರ್ತನೆಯ ಮನೆಗಳಿಗೆ ಕೊಟ್ಟು ಬರುತ್ತಿದ್ದರು. ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದ ಸುಂದರ ಸಂಸಾರ. ದೊಡ್ಡ ಮಗ ಚಿಕ್ಕವಯಸ್ಸಿನಲ್ಲೇ ಡ್ರೈವರ್ ಕೆಲಸಕ್ಕೆ ಸೇರಿಕೊಂಡು  ಬೆಳಿಗ್ಗೆ ಹೋದರೆ ತಡರಾತ್ರಿ ಬರುತ್ತಿದ್ದರು. ಇನ್ನು ವಯಸ್ಸಿಗೆ ಬಂದ ಜಯ (ಜಯಮ್ಮ) ಹೈಸ್ಕೂಲಿಗೇ ವಿದ್ಯಾಭ್ಯಾಸ ನಿಲ್ಲಿಸಿ ಟೈಲರಿಂಗ್ ಕಲಿತು ಹತ್ತಿರದ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದು ಒಳ್ಳೆಯ ಸಂಬಂಧ ಬಂದಲ್ಲಿ ಮದುವೆ ಮಾಡಲು ಸಿದ್ದವಾಗಿದ್ದರು.  ನನಗಿಂತ ಎರಡು ಮೂರು ವರ್ಷ ದೊಡ್ಡವಳಾದ ಸುಶೀಲ ಮತ್ತು ನನ್ನ ಓರಗೆಯವನೇ ಆದ ರಾಜ ಜಾಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು.

ನಾವು ಆಂಜನಮೂರ್ತಿಗಳ ವಠಾರಕ್ಕೆ ಬಂದಾಗ ಇಂತಹ ಸುಂದರ ಕುಟುಂಬದ ಪರಿಚಯವಾಗಿ  ಅವರಿಂದ ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆ ವರ್ತನೆಗ ಹಾಲು ತೆಗೆದುಕೊಳ್ಳಲಾರಂಭಿಸಿದೆವು. ಆರಂಭದ ಕೇವಲ ಹಾಲು ತೆಗೆದುಕೊಳ್ಳುವುದಕ್ಕೇ ಸೀಮಿತವಾಗಿದ್ದ ಸಂಬಂಧ ನಂತರದ ದಿನಗಳಲ್ಲಿ ನಮ್ಮ ಅಮ್ಮನ ಸಹೃದತೆಯಿಂದ ನಿಧಾನವಾಗಿ ಬೆಳೆಯುತ್ತಾ ಹೋಗಿ,  ಹಾಲು ಕೊಡಲು ಗೌರಮ್ಮನವರು ಬಂದಾಗ, ಕೊತ್ಕೋ ಗೌರಮ್ಮಾ, ಕಾಫಿ ಮಾಡಿ ಕೊಡ್ತೀನಿ ಎಂದು  ಆಗ ತಾನೇ ತಂದಿದ್ದ ಹಾಲನ್ನು ಚೆನ್ನಾಗಿ ಕಾಯಿಸಿ ದಿನದ 24 ಗಂಟೆಗಳೂ ಸಿದ್ಧವಾಗಿರುತ್ತಿದ್ದ ಡಿಕಾಕ್ಷನ್ ನೊಂದಿಗೆ ಬೆರೆಸಿ ನೊರೆ ನೊರೆಯಾದ ಬಿಸಿ ಬಿಸಿ ಫಿಲ್ಟರ್ ಕಾಫಿಯೊಂದಿಗೆ  ಅಂದು ಮಾಡಿದ್ದ ತಿಂಡಿಯನ್ನೂ ಸ್ವಲ್ಪ ತಟ್ಟೆಗೆ ಹಾಕಿಕೊಟ್ಟಲ್ಲೀ ಅಯ್ಯೋ ಬೇಡಮ್ಮಾ, ಎಂದರೂ ಅಮ್ಮನ ಬಲವಂತಕ್ಕೆ ತಿಂಡಿ ಕಾಫೀ ಮುಗಿಸಿ ತಟ್ಟೆಯನ್ನು ಗಲಬರಿಸಿ ಹೋಗುವುದು ನಿತ್ಯದ ರೂಢಿಯಾಗಿತ್ತು.

ನಂತರದ ದಿನಗಳಲ್ಲಿ ಮದುವೆ ವಯಸ್ಸಿಗೆ ಬಂದ ಮಗಳಿಗೆ ಯಾವಾಗ ಬೇಕಾದರೂ ಮದುವೆ ಗೊತ್ತಾದಾಗ, ಆಗ ಸೀರೆ ಬಟ್ಟೆ ಆಭರಣಗಳನ್ನು ತೆಗೆದುಕೊಳ್ಳಲು ಹಣ ಇರೋದಿಲ್ಲಾ ಎಂದು ಅಮ್ಮನೇ ತಮಗೆ ಪರಿಚಯ  ಇರುವವವರ ಬಳಿ ಚೀಟಿ ಹಾಕಿಸಿ ತಿಂಗಳು   ತಿಂಗಳು ಅವರಿಗೆ ಕೊಡಬೇಕಿದ್ದ ಹಾಲಿನ ಬಾಬ್ತಿನಲ್ಲೇ ಚೀಟಿ ಕಟ್ಟಿಸುತ್ತಿದ್ದರು. ನಂತರ ಮದುವೆಯ ಸಮಯದಲ್ಲಿ ಪರಿಚಯಸ್ಥರ ಬಳಿ ಸೀರೆ ಬಟ್ಟೆಗಳನ್ನು ಕಂತಿನಲ್ಲಿ ಕೊಡಿಸಿದ್ದಲ್ಲದೇ,  ಅಲ್ಪ ಸ್ವಲ್ಪ ಹಣಕಾಸಿನ ಸಹಾಯ ಮಾಡಿದ್ದ ನೆನಪು ಇದೆ. ನಮ್ಮ ವಠಾರದಲ್ಲಿದ್ದ ಭಾವಿಯಲ್ಲಿ ನೀರು ಕಡಿಮೆ ಆದಾಗ ನಮ್ಮ ಮನೆಗೆ ಅಗತ್ಯವಿದ್ದ ನೀರನ್ನು ಅವರ ಭಾವಿಯಿಂದಲೇ ತರುವ ಮೂಲಕ ನಮಗೆ ಅವರ ಮನೆಯ ಹಾಲು ಮತ್ತು ನೀರಿನ ಋಣ ಇತ್ತು. ಜಯ ಅವರ ಮದುವೆ ಆಗಿ, ವರ್ಷದೊಳಗೇ ಗುಂಡು ಗುಂಡಾಗಿದ್ದ, ಗುಂಗುರು ಕೂದಲಿನ ರಾಜೇಶ ಹುಟ್ಟಿದಾಗಲಂತೂ ನಮ್ಮ ಮನೆಯಲ್ಲೂ ಸಂಭ್ರಮವೋ ಸಂಭ್ರಮ. ಶಾಲೆಗೆ ಹೋಗಿ ಬರುವಾಗ ಸಮಯ ಸಿಕ್ಕಾಗಲೆಲ್ಲಾ ರಾಜೇಶನನ್ನು ನಾವೆಲ್ಲರೂ ಮುದ್ದಾಡುತ್ತಿದ್ದ ನೆನಪು ಇನ್ನೂ ಹಚ್ಚ ಹಸಿರಾಗಿಯೇ ಇದೆ.

ಇದೇ ಸಂಬಂಧ ಸುಮಾರು 6-7 ವರ್ಷಗಳ ಕಾಲ ಮುಂದುವರೆದು  ನಂತರ ಸ್ವಂತ ಮನೆ ಕಟ್ಟಿಸಲೆಂದು ಅಲ್ಲಿಂದ ಸುಮಾರು 4-5 ಕಿ.ಮೀ ದೂರದ ದೊಡ್ಡಬೊಮ್ಮಸಂದ್ರಕ್ಕೆ ಬಂದರೂ, ಚಿಕ್ಕ ಮಗ ರಾಜನ ಮೂಲಕ ನಮ್ಮ ಮನೆಗೆ ಪ್ರತೀ ದಿನ ಬೆಳಿಗ್ಗೆ ಒಂದು ಬಾರಿಯಾದರೂ ವರ್ತನೆ ಹಾಲು ಕಳುಹಿಸುತ್ತಿದ್ದದ್ದಲ್ಲದೇ, ಆಗ್ಗಾಗ್ಗೆ ಮನೆಗೆ ಬಂದು ಹೋಗಿ ಮಾಡುತ್ತಿದ್ದರು. ಹಾಗೆ ಬರುವಾಗ, ಸ್ವಲ್ಪ ರಾಗಿ ಇಲ್ಲವೇ ಹುರಳೀಕಾಳು, ಇಲ್ಲವೇ ಅವರೇ ಕಾಳು ಹೀಗೆ ಏನನ್ನಾದರು ತೆಗೆದುಕೊಂಡು ಬರುತ್ತಿದ್ದರೆ, ಅಮ್ಮನೂ ಹಾಗೇ  ಅವರನ್ನು ಹಾಗೆಯೇ ಬರೀ ಕೈಯಲ್ಲಿ ಕಳುಹಿಸಿದರೆ, ಹಣ, ಬಟ್ಟೆ ಹೀಗೆ ಏನಾದರೂ ಕೊಡುವ ಮೂಲಕ ಪರಸ್ಪರ ದೂರ ಇದ್ದರೂ ಸಂಬಂಧ ಮಾತ್ರಾ ಹಾಗೆಯೇ ಮುಂದುವರೆದಿತ್ತು. ನಂತರ ನಾವುಗಳು ವಿದ್ಯಾರಣ್ಯಪುರದಲ್ಲಿ ಹೊಸಾ ಮನೆಯನ್ನು ಕಟ್ಟಿಸಿಕೊಂಡು  ಬಂದ ಮೇಲೂ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಬಂದು ಹಾಗೇ ತಿಂಗಳಿಗೆ ಒಮ್ಮೆಯಾದರೂ ನಮ್ಮ ಮನೆಗೆ ಬಂದು ಹೋಗುವ ವಾಡಿಕೆ ಅಮ್ಮಾ ಇರುವುವರೆಗೂ  ಇದ್ದು ನಂತರದ ದಿನಗಳಲ್ಲಿ ಎಲ್ಲರೂ ಕೆಲಸಕ್ಕೆ ಹೋಗುತ್ತಿದ್ದ ಕಾರಣ ಮನೆಗೆ ಬರುವುದು ಕಡಿಮೆ ಆದರೂ, ಅವರ ಮನೆಯ  ಎಲ್ಲಾ ಶುಭ ಕಾರ್ಯಗಳಿಗೂ ಕರೆಯುತ್ತಿದ್ದು ನಾವುಗಳೂ ಸಹಾ ಅದು ಎಷ್ಟೇ ದೂರದ ಊರಿನಲ್ಲಿದ್ದರೂ ಹೋಗಿ ಶುಭ ಹಾರೈಸಿ ಬರುತ್ತಿದ್ದೆವು.

ಅಚಾನಕ್ಕಾಗಿ ನಮ್ಮಮ್ಮ ಅಗಲಿದಾಗ ಗಾಭರಿಯಲ್ಲಿ ಬಹಳ ಜನರಿಗೆ ತಿಳಿಸದೇ ಹೋದದ್ದರಲ್ಲಿ ಹಾಲಮ್ಮನ ಮನೆಯವರೂ ಇದ್ದೂ  ಅಮ್ಮ ಹೋದ ಮೂರ್ನಾಲ್ಕು ದಿನಗಳ ನಂತರ  ಅವರಿಗೆ ಹೇಗೂ ವಿಷಯ ತಿಳಿದು ಮನೆಗೆ ಬಂದು ಅತ್ತು ಕರೆದು ಗೋಳಾಡಿದ್ದಲ್ಲದೇ, ಕಡೆಯ ಗಳಿಗೆಯಲ್ಲಿ ಅಮ್ಮನ  ಮುಖ ನೋಡಲು ಸಾಧ್ಯವಾಗದೇ  ಹೋದದ್ದಕ್ಕಾಗಿ  ನನ್ನ ಮೇಲೆ ಸಾತ್ವಿಕ ಕೋಪ ತೋರಿಸಿದ್ದೂ ಉಂಟು.  ನಮ್ಮ ಮತ್ತು ಅವರ ಮನೆಯ ಅವಿನಾಭಾವ ಸಂಬಂಧ ಹೇಗಿತ್ತು ಎಂದರೆ, ಜಯ ಅವರ ಮಗಳಿಗೆ ನನ್ನ ಚಿಕ್ಕ ತಂಗಿ ಲಕ್ಷ್ಮಿಯ ಹೆಸರು ಇಟ್ಟಿದ್ದರೆ, ಸುಶೀಲಳ ಮಗಳಿಗೆ ನನ್ನ ದೊಡ್ಡ ತಂಗಿ ಸುಧಾಳ ಹೆಸರನ್ನು ಇಡುವ ಮೂಲಕ ಅವರ ಹೆಸರನ್ನು ಕರೆಯುವಾಗಲೆಲ್ಲಾ ನಮ್ಮ ಅವರ ಮಧುರ ಬಾಂಧ್ಯವ್ಯ ನೆನಪಿನಲ್ಲೇ ಇಟ್ಟುಕೊಳ್ಳುವಂತಾಗಿದೆ.

ಗಡಿಯಾರದ ಮುಳ್ಳು  ಹೇಗೆ  ಒಂದು ಸೆಕೆಂಡ್ ಸಹಾ ನಿಲ್ಲುವುದಿಲ್ಲವೂ ಹಾಗೆಯೇ ಕಾಲ ಚಕ್ರ ಮುಂದುವರೆದು, ಇಂದು ಜಯ ಮತ್ತು ಸುಶೀಲ, ರಾಜನ ಮಕ್ಕಳೆಲ್ಲರೂ ದೊಡ್ಡವರಾಗಿ ಚೆನ್ನಾಗಿ ಓದಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಸಿ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಐದಾರು ಅಂಕಿಗಳ ಸಂಬಳ ಗಳಿಸುವಂತಾಗಿದ್ದರೂ, ನಮ್ಮ ಮತ್ತು ಅವರ ಮನೆಯ ಮಧುರ ಬಾಂಧ್ಯವ್ಯ ಗೌರಮ್ಮನವರ ನಾಲ್ಕನೇ ತಲೆ ತಲೆಮಾರಿಗೂ ಮುಂದುವರೆದುಕೊಂಡು ಹೋಗಿದೆ.

ನೆನ್ನೆ ಮೊನ್ನೆಯಷ್ಟೇ ಕೊಡುಗೇ ಹಳ್ಳಿಯ ಗುಂಡಾಂಜನೇಯ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಬಹುರಾಷ್ಟ್ರೀಯ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿರುವ ಇಂಜಿನೀಯರ್ ನೊಂದಿಗೆ ಜಯ ಅವರ ಮಗಳು ಲಕ್ಷ್ಮೀ ಮದುವೆ ಹೋಗಿದ್ದ ನೆನಪು ಇನ್ನೂ ಇರುವಾಗಲೇ  ಆ ದಂಪತಿಗಳಿಗೆ ಲಿಯಾಂಶ್ ಎಂಬ  ಮುದ್ದಾದ ಮಗುವಾಗಿ ಆ ಮಗುವಿನ ಒಂದು ವರ್ಷದ  ಹುಟ್ಟು ಹಬ್ಬವನ್ನು 06.07.2025ರ ಭಾನುವಾರ ರಾಜಾನುಕುಂಟೆಯ ಕಾಕೋಳು ಬಳಿಯ  Kings 1989 ಎಂಬ Resortನಲ್ಲಿ ಏರ್ಪಡಿಸಿದ್ದು ಅದಕ್ಕೆ  ಖುದ್ದಾಗಿ ಮಗುವಿನ ತಾಯಿ ಲಕ್ಷ್ಮೀಯ ಕರೆ ಮಾಡಿ ಆಹ್ವಾನಿಸಿದ್ದಕ್ಕೆ ಅಲ್ಲಿಗೆ ಹೋಗಿದ್ದಾಗ ಅಲ್ಲಿನ ಅದ್ದೂರಿಯ ವ್ಯವಸ್ಥೆಗಳು ನಿಜಕ್ಕೂ ಮೂಗಿನ ಮೇಲೆ ಬೆರೆಳಿಡುವಂತಾಗಿತ್ತು ಎಂದರೂ ತಪ್ಪಾಗದು.

ನಾನು ಹೋಗುವಷ್ಟರಲ್ಲೇ ಹಲವಾರು ಐಶಾರಾಮಿ ಕಾರುಗಳಲ್ಲಿ ನೂರಾರು ಜನರಿಂದ ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ Event managementನವರು ಮಕ್ಕಳು ಮತ್ತು ದೊಡ್ಡವರಿಗೆ  ಬಗೆ ಬಗೆಯ ಆಟವಾಡಿಸುತ್ತಿದ್ದರೆ, ನಂತರ ವಿವಿಧ ರಾಜಕಾರಣಿಗಳು, ನಟ ನಟಿಯರ ವಿಮಿಕ್ರಿ ಸಹಾ  ಎಲ್ಲರ ಮನ ರಂಜಿಸಿತು.   ಇವೆಲ್ಲ ಅಗುವಷ್ಟರಲ್ಲಿ ಮೋಡಗಳ ಮಧ್ಯೆ ಪುಟ್ಟ ಕಾರಿನಲ್ಲಿ ಪುಟಾಣಿ ಲಿಯಾಂಶ್ ಬರುವಂತಹ  ಕೃತಕ ಸನ್ನಿವೇಶವಂತೂ ಎಲ್ಲರನ್ನೂ ಆಕರ್ಷಿಸಿದ್ದಂತೂ ಸುಳ್ಳಲ್ಲಾ. ಆ ನಂತರ ಎಲ್ಲಾ ಹುಟ್ಟಿದ ಹಬ್ಬಗಳಲ್ಲಿ ನಡೆಯುವಂತೆ ಯಥಾ ಪ್ರಕಾರ ಬಂದ ಮಕ್ಕಳೆಲ್ಲರಿಗೂ ಬಣ್ಣ ಬಣ್ಣದ ಟೋಪಿ ಮತ್ತು ಕಣ್ಣಿಗೆ ಮಾಸ್ಕ್ ಹಾಕಿಸಿ ಕೇಕ್ ಕತ್ತರಿಸಿ ಸಂಭ್ರಮ ಪಟ್ಟು, ಮಕ್ಕಳಿಗೆ ಒಂದು ಕಡೆ ಚಂದನೆಯ Return gift ಕೊಡುತ್ತಿದ್ದರೆ ಇನ್ನು ಮತ್ತೊಂದು ಕಡೆ ಮಗುವಿಗೆ ಶುಭಾಶಯ ಕೋರಿ ಉಡುಗೊರೆ ಕೊಡುವುದಕ್ಕೇ ಹನುಮಂತನ ಬಾಲದಷ್ಟು ದೊಡ್ಡ ಸರದಿಯ ಸಾಲಿತ್ತು ಎಂದರೆ  ಅದು ಎಷ್ಟು ಅದ್ದೂರಿಯಾದ ಸಮಾರಂಭವಾಗಿತ್ತು  ಎಂಬುದರ ಕಲ್ಪನೆ ಬರುತ್ತದೆ.

ಸುಮ್ಮನೆ ಅಷ್ಟು ದೊಡ್ಡ ಸರದಿಯ ಸಾಲಿನಲ್ಲಿ ನಿಲ್ಲುವ ಬದಲು ಗೌರಮ್ಮನವರನ್ನೂ ಮತ್ತು ಅವರ ಮನೆಯವರನ್ನು ಮಾತನಾಡಿಸೋಣ ಎಂದು ಹುಡುಕಿಕೊಂಡು 85+ ವಯಸ್ಸಿನ ಗೌರಮ್ಮನವರ ಬಳಿಗೆ ಹೋಗಿ ನಮಸ್ಕಾರ ತಿಳಿಸಿ ಉಮಾ ಅವರ ಮಗ ಶ್ರೀಕಂಠ ಎಂದು ನನ್ನ ಪರಿಚಯ ಮಾಡಿಕೊಳ್ಳುತ್ತಲೇ, ಭಾವುಕರಾಗಿ ಎರಡೂ ಕೈ ಜೋಡಿಸಿ ನಮಸ್ಕಾರ ಮಾಡಿ ನನ್ನ ಎರಡೂ ಕೈಗಳನ್ನು ಅಪ್ಯಾಯಮಾನವಾಗಿ ಹಿಡಿದು ಕೊಂಡು ಅಮ್ಮ ಅಪ್ಪನ ಬಗ್ಗೆ ಕೊಂಡಾಡುತ್ತಿರುವಾಗ ನನಗೇ ಅರಿವಿಲ್ಲದಂತೆ ಗಂಟಲು ಗದ್ಗತಿತವಾಗಿ ಕಣ್ಗಳಲ್ಲಿ ಧಾರಾಕಾರವಾಗಿ ಕಣ್ಣೀರು ಸುರಿದ್ದಂತೂ ಸುಳ್ಳಲ್ಲ.  ನಂತರ ನಮ್ಮ ತಂಗಿಯರು ಅವರ ಮಕ್ಕಳು ನಂತರ ನಮ್ಮ ಮಡದಿ ಮಕ್ಕಳ ಬಗ್ಗೆ ಕೂಲಂಕುಶವಾಗಿ ವಿಚಾರಿಸಿದ್ದಲ್ಲದೇ, ನೂರ್ಕಾಲ ದೇವರು ನಿಮ್ಮ ಮನೆಯವರಿಗೆ ಆಯುರಾರೋಗ್ಯ ನೀಡುವಂತಾಗಲೀ ಎಂದು ಬಾಯಿ ತುಂಬಾ ಹರಸಿದ್ದನ್ನು ಜೀವಮಾನ ಮರೆಯಲು ಸಾಧ್ಯವೇ ಇಲ್ಲಾ.

ಅದೇ ಸಮಯದಲ್ಲಿ ಜಯ ಮತ್ತು ಸುಶೀಲ ಅವರೂ ಸಹಾ ನನ್ನನ್ನು ನೋಡಿದ ಕೂಡಲೇ ಓಡಿ ಬಂದು ಬಹಳ  ಆತ್ಮೀಯವಾಗಿ ಮಾತನಾಡಿಸಿದ್ದಲ್ಲದೇ, ಅಲ್ಲೇ ಸಡಗರ ಸಂಭ್ರಮಗಳಿಂದ ಓಡ್ಡಾಡುತ್ತಿದ್ದ  ಅವರ ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳೆಲ್ಲರಿಗೂ ನನ್ನ ಪರಿಚಯ ಮಾಡಿಸುವಾಗ ಅವರ ಕಣ್ಗಳಲ್ಲಿದ್ದ ಹೊಳಪು ನಿಜಕ್ಕೂ ವರ್ಣಾತೀತ.  ಹಾಗೇ ಸುಶೀಲಳ ಜೊತೆ ಮಾತನಾಡುತ್ತಾ, ಹೊಲದಲ್ಲಿ  ಈ ಸಲಾ ಏನು ಹಾಕಿದ್ದೀರಿ? ಮಳೆ ಬೆಳೆ ಹೇಗಿದೆ? ಎಂದು ವಿಚಾರಿಸುತ್ತಿರುವಾಗಲೇ, ಈ ಬಾರಿ ರಾಗಿ ಹಾಕಿದ್ದೆವು. ರಾಗಿ ತಿಂತಿರಲ್ವಾ? ನಾನೇ ಅಲ್ಲೇ ಕ್ಲೀನ್ ಮಾಡಿಸಿ ಸ್ವಲ್ಪ ರಾಗಿಯನ್ನು ನಿಮ್ಮ ಮನೆಗೆ ಕಳುಹಿಸಿಕೊಡುತ್ತೇನೆ  ಎಂದು ಹೇಳಿದಾಗ, ಹೇ ಬೇಡಾ ಬೇಡಾ! ಸುಮ್ಮನೇ ನಿಮಗೇಕೆ ತೊಂದರೆ ಎಂದರೂ, ನಿಮ್ಮ ಅಮ್ಮ ನಮಗೆ ಮಾಡಿರುವುದರ ಮುಂದೆ  ಇದೇನೂ ಇಲ್ಲಾ ಸುಮ್ಮನಿರು ಎಂದಾಗ ಅವರ ಪ್ರೀತಿಯ ಮಂದೆ ಏನೂ ಹೇಳಲಾಗದೇ ಸುಮ್ಮನಾಗ ಬೇಕಾಯಿತು.

ಅಂದು ಚಿಕ್ಕದಾದ ಕೊಟ್ಟಿಗೆ ಇದ್ದ ಶೀಟ್ ಮನೆಯಲ್ಲಿ ಇದ್ದ ಗೌರಮ್ಮನವರ ಕುಟುಂಬ ಇಂದು ಮಕ್ಕಳು ಮೊಮ್ಮಕ್ಕಳು ಚೆನ್ನಾಗಿ ಓದಿ ಒಳ್ಳೊಳ್ಳೇ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪರಿಣಾಮ ಅದೇ ಜಾಗದಲ್ಲೇ ಮೂರಂತಸ್ತಿನ ಆಧುನಿಕ ಶೈಲಿಯ ಮನೆಯಲ್ಲಿ ಐಶಾರಾಮ್ಯ ಎನ್ನಲಾಗದಿದ್ದರೂ  ಬಹಳ ಚೆನ್ನಾಗಿ ವಾಸ ಮಾಡುತ್ತಾ,  ಬಹಳ ಅದ್ದೂರಿಯಾಗಿ  ಮದುವೆ ನಾಮಕರಣ ಹುಟ್ಟು ಹಬ್ಬ ಮಾಡುತ್ತಿರುವುದನ್ನು ನೋಡಿದಾಗ, ನಟ ಡಾಲಿ ಧನಂಜಯ ಅವರು ತಮ್ಮ ಚಿತ್ರವೊಂದರ ಪ್ರಮೋಷನ್ ಸಮಯದಲ್ಲಿ ಬಡವರ ಮಕ್ಕಳು ಬೆಳೀ ಬೇಕು ಕಣ್ರಯ್ಯ ಎಂದು ಹೇಳಿದ್ದದ್ದು ನೆನಪಾಗಿ ಇಂದು ನಮ್ಮ ಕಣ್ಣ ಮುಂದೆಯೇ ಗೌರಮ್ಮನವರ ಕುಟುಂಬ ಬೆಳೆದಿರುವುದು ನಿಜಕ್ಕೂ ಸಂತಸ ನೀಡಿದ್ದಲ್ಲದೇ, ಒಳ್ಳೆಯ ಶಿಕ್ಷಣ, ದೊಡ್ಡವರ ಮೇಲೆ ಗೌರವ ಮತ್ತು  ಉತ್ತಮ ಸಂಸ್ಕಾರ ಇದ್ದಲ್ಲಿ ಎಲ್ಲರೂ ಸಹಾ  ಇದೇ ರೀತಿಯಲ್ಲೇ ಬೆಳೆಯಬಹುದು ಎನ್ನುವುದಕ್ಕೆ  ಗೌರವಮ್ಮನವರ ಕುಟುಂಬವೇ ಜ್ವಲಂತ ಸಾಕ್ಷಿ ಎನಿಸುತ್ತದೆ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

Leave a comment