ಮೂಲತಃ ಇಂಗ್ಲೇಂಡಿನಲ್ಲಿ ಪ್ರಾರಂಭವಾದ ಕ್ರಿಕೆಟ್ ಆಟವನ್ನು ಒಂದು ಸಜ್ಜನರ ಆಟ (gentleman’s game) ಎಂದು ಕರೆಯುತ್ತಾರೆ. ಈ ಕ್ರಿಕೆಟ್ ಆಟವನ್ನು ಬ್ರಿಟೀಷರು ತಾವು ವಸಾಹತು ಮಾಡಿಕೊಂಡಿದ್ದ ಎಲ್ಲಾ ದೇಶಗಳಲ್ಲಿಯೂ ಪಸರಿಸಿದ್ದ ಕಾರಣ, ಭಾರತದಲ್ಲಿಯೂ ಕ್ರಿಕೆಟ್ ಬಹಳ ಪ್ರಸಿದ್ಧವಾಗಿದ್ದು, ಅದೊಂದು ರೀತಿಯ ಧರ್ಮವಾಗಿ ಹೋಗಿದೆ ಎಂದರೂ ತಪ್ಪಾಗದು. ಸಜ್ಜನರ ಆಟ ಎಂದು ಕರೆಸಿಕೊಳ್ಳುಫುದಾದರೂ ಇತ್ತೀಚಿನ ದಿನಗಳಲ್ಲಿ ಮೈದಾನದಲ್ಲಿ ಕ್ರೀಡಾಸ್ಪೂರ್ತಿಯನ್ನು ಮರೆತು ಕೆಲವೊಮ್ಮೆ ಆಟಗಾರರ ತೋರುವ ದುರ್ವತನೆಗಳಿಗೆ ಕಡಿವಾಣ ಹಾಕಿ ಆಟವು ನಿರ್ವಿಘ್ನವಾಗಿ ಮತ್ತು ಯಾವುದೇ ರೀತಿಯ ಸಮಸ್ಯೆಗಳು ಇಲ್ಲದೇ ಆಡುವಂತಾಗಲು ತೀರ್ಪುಗಾರರು ಅರ್ಥಾತ್ ಅಂಪೈರ್‌ಗಳು ಮಹತ್ತರ ಪಾತ್ರವಹಿಸುತ್ತಾರೆ. ಅಂಪೈರ್‌ಗಳು ಪಂದ್ಯನಡೆಯುವಾಗ ಯಾವುದೇ ತಂಡದ ಪರವಹಿಸದೇ ನಿಷ್ಪಕ್ಷಪಾತ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೀಗೆ ಕ್ರಿಕೆಟ್ ಅಂಗಳದಲ್ಲಿ ತಮ್ಮ ವಿಭಿನ್ನ ಶೈಲಿಯ ಅಂಪೈರಿಂಗ್ ಮೂಲಕ ಗುರುತಿಸಿಕೊಂಡಿದ್ದ 92 ವರ್ಷ ವಯಸ್ಸಿನ ಹ್ಯಾರಲ್ಡ್ ಡಿಕಿ ಬರ್ಡ್ ಅವರು 2025ರ ಸೆಪ್ಟೆಂಬರ್ 23 ಮಂಗಳವಾರದಂದು ನಿಧನರಾಗುವ ಮೂಲಕ ಕ್ರಿಕೆಟ್ ಜಗತ್ತಿಗೆ ತುಂಬಲಾರದ ನಷ್ಟವನ್ನುಂಟುಮಾಡಿದ್ದಾರೆ.
ಸಾಮಾನ್ಯವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಅಂಪೈರ್ ಆಗುವವರು ತಮ್ಮ ಯೌವನದಲ್ಲಿ ಕ್ರಿಕೆಟ್ ಆಟಗಾರರಾಗಿ ನಂತರ ಕ್ತಿಕೆಟ್ ಮೇಲಿನ ಉತ್ಕಟ ಪ್ರೀತಿ ಮತ್ತು ಕ್ರಿಕೆಟ್ ಮೈದಾನದಿಂದ ಹೆಚ್ಚು ಕಾಲ ದೂರ ಇರಲು ಬಯಸದೇ ಕ್ರಿಕೆಟ್, ವೀಕ್ಷಕ ವಿವರಣೆಗಾರರಾಗಿಯೋ, ತರಭೇತುದಾರರಾಗಿಯೋ ಇಲ್ಲವೇ ಅಂಪೈರಿಂಗ್ ಪರೀಕ್ಷೆಗಳನ್ನು ತೆಗೆದುಕೊಂಡೋ ಒಟ್ಟಿನಲ್ಲಿ ಕ್ರಿಕೆಟ್ ಆಟದೊಂದಿಗೆ ಸದಾಕಾಲವೂ ಇರಲು ಬಯಸುತ್ತಾರೆ. ಇಂತಹ ರೂಢಿಗೆ ಡಿಕ್ಕಿ ಬರ್ಡ್ ಸಹಾ ಹೊರತಾಗಿರಲಿಲ್ಲ.
19 ಏಪ್ರಿಲ್ 1933 ರಂದು ಇಂಗ್ಲೆಂಡ್‌ನ ಯಾರ್ಕ್‌ಷೈರ್‌ನ ವೆಸ್ಟ್ ರೈಡಿಂಗ್‌ನ ಬಾರ್ನ್ಸ್‌ಲಿಯ ಚರ್ಚ್ ಲೇನ್‌ನ ಸಾಮಾಮ್ಯ ಕೊಳಗೇರಿ ಪ್ರದೇಶದಲ್ಲಿ ಜನಿಸಿದಾಗ ಅವರ ಹೆಸರು ಹೆರಾಲ್ಡ್ ಡೆನ್ನಿಸ್ ಬರ್ಡ್ ಎಂದಾಗಿತ್ತು. ಅವರಿಗೆ ಎರಡು ವರ್ಷ ವಯಸ್ಸಾಗಿದ್ದಾಗ, ಕೊಳೆಗೇರಿ ನಿರ್ಮೂಲನಾ ಯೋಜನೆಯಲ್ಲಿ ಅವರ ಮನೆಯನ್ನು ಕೆಡವಿದ್ದರಿಂದ ಅವರು ತಮ್ಮ ಕುಟುಂಬದೊಂದಿಗೆ ನ್ಯೂ ಲಾಡ್ಜ್ ಎಸ್ಟೇಟ್‌ಗೆ ತೆರಳಬೇಕಾಯಿತು. ಸಾಮಾನ್ಯ ಕಲ್ಲಿದ್ದಲು ಗಣಿಗಾರನ ಮಗನಾಗಿದ್ದ ಕಾರಣ, ಅವರಿಗೆ ಶಾಲೆಯಲ್ಲಿ ಅವರ ಸಹಪಾಠಿ ಸ್ನೇಹಿತರು ಡಿಕಿ ಎಂಬ ಅಡ್ಡಹೆಸರನ್ನು ಇಟ್ಟಿದ್ದು, ಅದೇ ಹೆಸರು ಅವರಿಗೆ ಶಾಶ್ವತವಾಯಿತು.
ಓದಿನಲ್ಲಿ ಅಷ್ಟೇನು ಚುರುಕಾಗಿರದಿದ್ದ ಡಿಕ್ಕಿ ಬರ್ಡ್ 1944ರಲ್ಲಿ ತನ್ನ 11-ಪ್ಲಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರ 15 ನೇ ವಯಸ್ಸಿನಲ್ಲಿ ಶಾಲೆಯನ್ನು ತೊರೆದು ಜೀವನೋಪಾಯಕ್ಕಾಗಿ ಸ್ವಲ್ಪ ಸಮಯ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡಿದರಾದರೂ ಬಾಲ್ಯದಿಂದಲೂ ಫುಟ್ಬಾಲ್ ಮತ್ತು ಕ್ರಿಕೆಟ್ ಆಟದಲ್ಲಿ ಆಸಕ್ತಿ ಹೊಂದಿದ್ದ ಕಾರಣ, ಕಲ್ಲಿದ್ದಲು ಗಣಿಗಾರಿಕೆಯು ತನಗಾಗಿ ಅಲ್ಲ ಎಂದು ನಿರ್ಧರಿಸಿ ಕ್ರೀಡೆಯಲ್ಲಿ ತಮ್ಮ ವೃತ್ತಿ ಜೀವನವನ್ನು ನಡೆಸಲು ಮುಂದಾದರು. ಆದರೆ ಮೊಣಕಾಲಿಗೆ ಬಾರಿ ಬಾರಿ ಗಾಯವಾಗುತ್ತಿದ್ದ ಕಾರಣ, ವೃತ್ತಿಪರವಾಗಿ ಫುಟ್ಬಾಲ್ ಆಡಲು ಸಾಧ್ಯವಾಗದೇ ಹೋದಾಗ, ತಮ್ಮ ಎರಡನೇ ಪ್ರೀತಿಯಾದ ಕ್ರಿಕೆಟ್ ಆಟವನ್ನು ಮುಂದುವರೆಸಿ, ಕ್ರಿಕೆಟ್ ದಿಗ್ಗಜ ಜೆಫ್ರಿ ಬಾಯ್ಕಾಟ್ ಅವರ ಕ್ಲಬ್ ಪರ ಕ್ರಿಕೆಟ್ ಆಟವಾಡಲು ತಂಡಕ್ಕೆ ಸೇರಿಸಿಕೊಂಡರು. ನಂತರ 1956 ರಲ್ಲಿ, ಬರ್ಡ್ ಕೌಂಟಿ ಯಾರ್ಕ್‌ಷೈರ್‌ನೊಂದಿಗೆ ಸಹಿ ಹಾಕಿದರು. 1956 ರಿಂದ 1964ರ ವರೆಗೆ ಯಾರ್ಕ್‌ಶೈರ್ ಮತ್ತು ಲೀಸೆಸ್ಟರ್‌ಶೈರ್ ಕೌಂಟಿ ಪರವಾಗಿ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಆರಂಭಿಕ ಆಟಗಾರನಾಗಿ ನಂತರ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಸುಮಾರು 93 ಪಂದ್ಯಗಳಿಂದ 3,314 ರನ್ ಗಳಿಸಿ ನಂತರ ಬಿಟ್ಟೂ ಬಿಡದೇ ಕಾಡುತ್ತಿದ್ದ ಮೊಣಕಾಲು ನೋವಿನಿಂದಾಗಿ 1964 ರಲ್ಲಿ ನಿವೃತ್ತಿ ಘೋಷಿಸಿದ್ದರು.
ಕೌಂಟಿ ವೃತ್ತಿಜೀವನ ಮುಗಿದ ನಂತರ ಬರ್ಡ್ 1965 ಮತ್ತು 1969 ರ ನಡುವೆ ಪೈಗ್‌ಟನ್ ಪರ ವೃತ್ತಿಪರರ ಕ್ರಿಕೆಟ್ ಆಟಗಾರನಾಗಿ ಸುಮಾರು 10,000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸುವುದರ ಜೊತೆ ಜೊತೆಯಲ್ಲಿಯೇ 1966 ಮತ್ತು 1968 ರ ನಡುವೆ ಪ್ಲೈಮೌತ್ ಕಾಲೇಜಿನಲ್ಲಿ ಕ್ರಿಕೆಟ್ ತರಬೇತುದಾರರಾಗಿದ್ದಲ್ಲದೇ, 1968 ಮತ್ತು 1969 ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ತರಬೇತುದಾರರಾಗಿದ್ದು, 1970 ರಲ್ಲಿ ಮೊದಲ ಬಾರಿಗೆ ಕೌಂಟಿ ಪಂದ್ಯದಲ್ಲಿ ಅಂಪೈರ್ ಮಾಡಿ, ನೋಡ ನೋಡುತ್ತಿದ್ದಂತೆಯೇ ಕೇವಲ ಮೂರೇ ವರ್ಷಗಳಲ್ಲಿ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಂತರಾಷ್ಟ್ರೀಯ ಅಂಪೈರ್ ನಿಯುಕ್ತಿಗೊಂಡ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.
ಕ್ರಿಕೆಟ್ ಅಂಪೈರ್ ಆಗಿ ವೃತ್ತಿ ಜೀವನದಲ್ಲಿ ಅನೇಕ ವಿಶಿಷ್ಟ ಪ್ರಸಂಗಗಳಿಗೆ ಬರ್ಡ್ ಸಾಕ್ಷಿಯಾಗಿದ್ದು ಅವುಗಳಲ್ಲಿ ಪ್ರಮುಖವಾದವುಗಳು ಹೀಗಿವೆ
1973ರ ಬೇಸಿಗೆಯಲ್ಲಿ ವೆಸ್ಟ್ ಇಂಡೀಸ್ ತಂಡದ ಇಂಗ್ಲೇಂಡ್ ಪ್ರವಾಸದ ಎರಡನೇ ಮತ್ತು ಮೂರನೇ ಟೆಸ್ಟ್‌ಗಳಲ್ಲಿ ಬರ್ಡ್ ಅಂಪೈರ್ ಆಗಿದ್ದರು. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ, ವೆಸ್ಟ್ ಇಂಡೀಸ್ ಆಟಗಾರರ ವರ್ತನೆಯನ್ನು ವಿರೋಧಿಸಿ ಮತ್ತೊಬ್ಬ ಅಂಪೈರ್ ಆರ್ಥರ್ ಫಾಗ್ ಆಟದಲ್ಲಿ ಮುಂದುವರಿಯದಿರಲು ನಿರಾಕರಿಸಿದಾಗ, ಬರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಬದಲಿ ಅಂಪೈರ್ ಜೊತೆಗೆ ಎರಡೂ ತುದಿಗಳಲ್ಲಿ ಬೌಲರ್‌ನ ತುದಿಯಿಂದ ಎರಡು ಓವರ್‌ಗಳವರೆಗೆ ಅಂಪೈರ್ ಮಾಡಬೇಕಾಯಿತು ಅದೇ ಸರಣಿಯ ಮೂರನೇ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯುತ್ತಿದ್ದಾಗ, ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಮೈದಾನದಲ್ಲಿ ಇದ್ದಕ್ಕಿದ್ದಂತೆಯೇ ಬಾಂಬ್ ಬೆದರಿಕೆಯ ಕರೆ ಬಂದು ಪ್ರೇಕ್ಷಕರೆಲ್ಲರೂ ದಿಕ್ಕಾಪಾಲಾಗಿ ಮೈದಾನದಿಂದ ಹೊರಬರಲು ಪ್ರಯತ್ನಿಸುತ್ತಿದ್ದಾಗ, ಬರ್ಡ್ ಮಾತ್ರಾ ಶಾಂತ ಮೂರ್ತಿಯಂತೆ ಇದು ಹುಸಿ ಕರೆ ಎಂದು ನಿರೂಪಿಸಲು ಆಟಗಾರರೊಂದಿಗೆ ಪಿಚ್ಚಿನ ಮಧ್ಯ ಭಾಗದಲ್ಲಿ ಕುಳಿತುಕೊಳ್ಳುವ ಮೂಲಕ ತಮ್ಮ ದಿಟ್ಟತನವನ್ನು ಪ್ರದರ್ಶಿಸಿದ್ದರು.
1974ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ದಂತಕತೆ ಸುನಿಲ್ ಗಾವಸ್ಕರ್ ಆಟವಾಡುತ್ತಿದ್ದಾಗ ಅವರ ಸೊಂಪಾದದ ತಲೆಗೂದಲು ಅವರ ಕಣ್ಣಿಗೆ ಪದೇ ಪದೇ ಅಡ್ಡಬಂದು ಆಡಲು ತೊಂದರೆ ಕೊಡುತ್ತಿದ್ದದ್ದನ್ನು ಗಮನಿಸಿದ ಅಂಪೈರ್ ಡಿಕಿ ಬರ್ಡ್ ಚಂಡಿನ ದಾರದ ಎಳೆಯನ್ನು ಕತ್ತರಿಸುವ ತಮ್ಮ ಬಳಿ ಇರಿಸಿಕೊಂಡಿದ್ದ ಕತ್ತರಿಯಲ್ಲಿ ಮೈದಾನದಲ್ಲೇ ಗಾವಸ್ಕರ್ ಅವರ ಮುಂಗುರಳನ್ನು ಕತ್ತರಿಸುವ ಮೂಲಕ ಗವಾಸ್ಕರ್ ಅವರು ಆಟವನ್ನು ಮುಂದುವರೆಸಲು ಸಹಾಯ ಮಾಡಿದ್ದರು.
ಸದಾ ಕಾಲವೂ ಆಟಗಾರರ ರಕ್ಷಣೆಗೆ ಒತ್ತು ನೀಡುತ್ತಿದ್ದ ಡಿಕ್ಕಿ ಬರ್ಡ್, ಹವಾಮಾನ ವೈಪರೀತ್ಯವನ್ನು ಸೂಕ್ಷ್ಮವಾಗಿ ಗಮನಿಸಿ ಅದಕ್ಕೆ ಅನುಗುಣವಾಗಿ ಆಟವನ್ನು ನಿಲ್ಲಿಸುತ್ತಿದ್ದದ್ದಲ್ಲದೇ, ಸಾಧಾರಣವಾಗಿ ಅವರು ಎಲ್‌ಬಿಡಬ್ಲ್ಯೂ ನಿರ್ಣಯಗಳಲ್ಲಿ ಬ್ಯಾಟ್ಸ್ಮನ್ ಪರ ನಿಲ್ಲುತ್ತಿದ್ದು, ಹೆಚ್ಚಾಗಿ ಔಟ್ ನೀಡುತ್ತಿರಲಿಲ್ಲ. ಆಕಸ್ಮಾತ್ ಅಪರೂಪಕ್ಕೆ ಅವರು ಎಲ್‌ಬಿಡಬ್ಲ್ಯೂ ನೀಡಿದ್ದಾರೆ ಎಂದರೆ, ಅದು ನಿಸ್ಸಂದೇಯವಾಗಿಯೂ ಬ್ಯಾಟ್ಸ್‌ಮನ್ ಔಟ್ ಆಗಿದ್ದಾರೆ ಎಂದೇ ಪರಿಭಾವಿಸಿ ಯಾರೂ ಸಹಾ ಅದರ ವಿರುದ್ಧ ಚಕಾರ ಎತ್ತುತ್ತಿರಲಿಲ್ಲ. ಬೌಲರ್ಗಳು ಶಾರ್ಟ್-ಪಿಚ್ ಎಸೆತ ಮತ್ತು ಹೈ ಫುಲ್ ಟಾಸ್‌ಗಳಿಂದ ಬ್ಯಾಟ್ಸ್ಮನ್ನುಗಳನ್ನು ಬೆದರಿಸುವ ಬೌಲಿಂಗ್ ನ ವಿರುದ್ಧವೂ ಬಹಳ ಕಟ್ಟುನಿಟ್ಟಾಗಿದ್ದರು.
1973 ರಿಂದ 1996ರವರೆಗೆ ಮೊದಲ ಮೂರು ಏಕದಿನ ವಿಶ್ವಕಪ್ ಫೈನಲ್ ಪಂದ್ಯವೂ ಸೇರಿದಂತೆ ಸುಮಾರು 66 ಟೆಸ್ಟ್ ಪಂದ್ಯ ಹಾಗೂ 69 ಏಕದಿನ ಪಂದ್ಯಗಳಿಗೆ ಡಿಕಿ ಬರ್ಡ್ ಅವರು ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. 1996ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತದ ಅದ್ಭುತ ಆಟಗಾರರಾಗಿದ್ದಂತಹ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ಟೆಸ್ಟ್ ಕ್ರಿಕೆಟ್ಟಿಗೆ ಪದಾರ್ಪಣೆ ಮಾಡಿದ್ದ ಪಂದ್ಯ ಡಿಕಿ ಬರ್ಡ್ ಅವರು ಅಂಪೈರ್ ಕಾರ್ಯನಿರ್ವಹಿಸಿದ ಕೊನೆಯ ಪಂದ್ಯವಾಗಿತ್ತು. ಆ ಪಂದ್ಯ ಆರಂಭವಾಗುವ ಮುನ್ನಾ ಇಂಗ್ಲೆಂಡ್ ನಾಯಕ ಮೈಕ್ ಅಥರ್ಟನ್ ಅಭೂತಪೂರ್ವ ಗೌರವ ವಂದನೆಯನ್ನು (guard of honour) ನೀಡಿ ಅಭಿನಂದಿಸಿದ್ದರೆ, ಕಾಕತಾಳೀಯ ಎನ್ನುವಂತೆ, ಆರಂಭಿಕ ಆಟಗಾರನಾಗಿ ಅದೇ ಮೈಕ್ ಅಥರ್ಟನ್ ಆಡಲು ಮೈದಾನಕ್ಕೆ ಇಳಿದ ಮೂರನೇ ಎಸೆತದಲ್ಲಿಯೇ ಡಿಕ್ಕಿ ಬರ್ಡ್ ಅವರಿಂದ ಅಪರೂಪದ ಎಲ್ಬಿಡಬ್ಲ್ಯೂ ನಿರ್ಣಯದಿಂದ ಔಟ್ ಆಗಿದ್ದರು.
1983ರಲ್ಲಿ ಡಿಕ್ಕಿಬರ್ಡ್ ಅವರಿಗೆ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (MBE) ಸದಸ್ಯರನ್ನಾಗಿಸಿದರೆ, 1996 ರಲ್ಲಿ ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ ಮತ್ತು 2000ದಲ್ಲಿ ಬಾರ್ನ್ಸ್‌ಲೇ ಸ್ವಾತಂತ್ರ್ಯ ಕ್ರಿಕೆಟ್ ಕ್ಲಬ್ಬಿನ ಗೌರವ ಆಜೀವ ಸದಸ್ಯತ್ವವನ್ನು ನೀಡಿ ಗೌರವಿಸಲಾಗಿತ್ತು. 2013 ರ ಹೊಸ ವರ್ಷದ ಗೌರವಗಳಲ್ಲಿ ಕ್ರಿಕೆಟ್ ಮತ್ತು ದತ್ತಿ ಸೇವೆಗಳಿಗಾಗಿ ಅಧಿಕಾರಿಯಾಗಿಯೂ ಸಹಾ ನೇಮಿಸಲಾಯಿತು. ಹಡ್ಡರ್ಸ್‌ಫೀಲ್ಡ್, ಲೀಡ್ಸ್ ಮತ್ತು ಶೆಫೀಲ್ಡ್ ಹಾಲಮ್ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿಗಳಿಗೂ ಸಹಾ ಬರ್ಡ್ ಭಾಜನರಾಗಿದ್ದರು. ಜೂನ್ 30, 2009 ರಂದು ಅವರ ಜನ್ಮಸ್ಥಳದವಾದ ಬಾರ್ನ್ಸ್ಲೆಯಲ್ಲಿ ಸುಮಾರು ಆರು ಅಡಿ ಎತ್ತರ ಅಂಪೈರ್ ಆಗಿ ಬಲಗೈ ತೋರ್ಬೆರಳನ್ನು ಎತ್ತಿ ಔಟ್ ಎಂದು ಸೂಚಿಸುತ್ತಿರುವ ಬರ್ಡ್ ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ಅವರಿಗೆ ಗೌರವನ್ನು ಸಲ್ಲಿಸಲಾಗಿತ್ತು.
1975ರ ಉದ್ಘಾಟನಾ ವಿಶ್ವಕಪ್ ಕ್ರಿಕೆಟ್‌ನ ಫೈನಲ್‌ನಲ್ಲಿ ಬರ್ಡ್ ಅಂಪೈರ್ ಆಗಿದ್ದಾಗಿನ ಈ ಪ್ರಸಂಗವಂತೂ ಬಹಳ ರೋಚಕವಾಗಿದೆ. ಆ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ 17 ರನ್‌ಗಳಿಂದ ಗೆಲುವನ್ನು ಸಂಪಾದಿಸಿದಾಗ, ಇಂಗ್ಲೇಂಡಿನ ಪ್ರೇಕ್ಷಕರು ಮೈದಾನಕ್ಕೆ ನುಗ್ಗಿ ಆಟಗಾರರು ಮತ್ತು ಅಂಪೈರುಗಳ ಟೋಫಿ, ಬ್ಯಾಟ್ ಮತ್ತು ಬಾಲ್ ಮುಂತಾದವುಗಳನ್ನು ಸ್ಮರಣಿಕೆಯಾಗಿ ತೆಗೆದುಕೊಂಡು ಹೋಗಿದ್ದರು. ಈ ಪ್ರಸಂಗವಾದ ಸುಮಾರು ಒಂದು ವರ್ಷದ ಬಳಿಕ ಬರ್ಡ್ ದಕ್ಷಿಣ ಲಂಡನ್‌ನಲ್ಲಿ ಬಸ್‌ನಲ್ಲಿ ಪ್ರಯಾಣಿಕನಾಗಿದ್ದಾಗ ಅಲ್ಲಿನ ಕಂಡಕ್ಟರ್ ಧರಿಸಿದ್ದ ಬಿಳಿ ಟೋಪಿಯನ್ನು ನೋಡಿ ಅನುಮಾನಗೊಂಡ ಬರ್ಡ್ ಈ ಟೋಪಿಯನ್ನು ನೀವು ಎಲ್ಲಿ ಖರೀಧಿಸಿದಿರಿ? ಎಂದು ಕಂಡಕ್ಟರ್‌ನನ್ನು ಬರ್ಡ್ ಕೇಳಿದಾಗ ಆತನ ಉತ್ತರ ಬರ್ಡ್ ಅವರನ್ನು ದಂಗು ಬಡಿಸಿತ್ತು.
ಅರೇ, ನೀವು ಕ್ರಿಕೆಟ್ ಆಟವನ್ನು ನೋಡುವುದಿಲ್ಲವೇ? ನಿಮಗೆ ಖ್ಯಾತ ಕ್ರಿಕೆಟ್ ಅಂಪೈರ್ ಡಿಕಿ ಬರ್ಡ್ ಬಗ್ಗೆ ಕೇಳಿಲ್ಲವೇ? ಈ ಟೋಪಿ ಡಿಕಿಬರ್ಡ್ ಅವರು ವಿಶ್ವಕಪ್ ಫೈನಲ್‌ನಲ್ಲಿ ಧರಿಸಿದ್ದ ಟೋಪಿಯಾಗಿದ್ದು, ಪಂದ್ಯ ಮುಗಿದ ನಂತರ ಪ್ರೇಕ್ಷಕರೆಲ್ಲರೂ ಮೈದಾನಕ್ಕೆ ನುಗ್ಗಿ ಸಿಕ್ಕಿಪಕ್ಕಿದ್ದನ್ನು ಎತ್ತಿಕೊಂಡು ಹೋಗುತ್ತಿದ್ದ ಸಂಧರ್ಭದಲ್ಲಿ ನಾನು ಈ ಟೋಪಿಯನ್ನು ಡಿಕ್ಕಿ ಬರ್ಡ್ ಅವರ ತಲೆಯಿಂದ ಎಗರಿಸಿದ್ದೆ! ಎಂದು ಕೊಚ್ಚಿಕೊಳ್ಳುತ್ತಿದ್ದಾಗ, ಸದ್ದಿಲ್ಲದೇ ಮೌನವಾಗಿ ಡಿಕ್ಕಿ ಬರ್ಡ್ ನಕ್ಕಿದ್ದರಂತೆ.
ಕ್ರಿ
ಕೆಟ್ ಮೈದಾನದಲ್ಲಿ ಡಿಕ್ಕಿ ಬರ್ಡ್ ಮತ್ತು ಗ್ಲೌಸೆಸ್ಟರ್‌ಶೈರ್ ಪರ ಕೌಂಟಿ ಕ್ರಿಕೆಟ್ ಆಡಿ ನಂತರ ಇಂಗ್ಲೇಂಡಿನ ಮತ್ತೊಬ್ಬ ಪ್ರಖ್ಯಾತ ಅಂಪೈರ್ ಆಗಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (MBE) ಸದಸ್ಯರನ್ನಾಗಿದ್ದಂತಹ ಡೇವಿಡ್ ರಾಬರ್ಟ್ ಶೆಫರ್ಡ್ ಎಲ್ಲರ ಪ್ರೀತಿಯ ಡೇವಿಡ್ ಶೆಪರ್ಡ್ ಜೋಡಿ ನಿಜಕ್ಕೂ ಮೋಡಿ ಮಾಡಿತ್ತು ಎಂದರೂ ಅಚ್ಚರಿಲ್ಲ. ಇಂಗ್ಲೀಷ್ ಸಿನಿಮಾದ ಪ್ರಖ್ಯಾತ ಹಾಸ್ಯ ಜೋಡಿ ಲಾರೆಲ್ ಮತ್ತು ಹಾರ್ಡಿಯಂತೆಯೇ ಡಿಕ್ಕಿ ಮತ್ತು ಡೇವಿಡ್ ರೂಪ ಮತ್ತು ಗಾತ್ರದಲ್ಲಿಯೂ ಅನುರೂಪವಾಗಿದ್ದರು. 1983ರಲ್ಲಿ ವೆಸ್ಟ್ ಇಂಡೀಸರನ್ನು ಸೋಲಿಸಿ ಅಚ್ಚರಿಯಂತೆ ಮೊಟ್ಟ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದ ಭಾರತದ ಆ ಪಂದ್ಯದಲ್ಲಿ ಇದೇ ಜೋಡಿ ಮೈದಾನದಲ್ಲಿ ಕಾರ್ಯ ನಿರ್ವಹಿಸಿದ್ದಲ್ಲದೇ, ಮುಂದೇ ಅನೇಕ ಪಂದ್ಯಗಳಲ್ಲಿ ಒಟ್ಟಾಗಿದ್ದು ಪ್ರಖ್ಯಾತ ಜೋಡಿಯಾಗಿತ್ತು.
ಹೀಗೆ ತಮ್ಮ ಕ್ರೀಡಾಸ್ಪೂರ್ತಿಯ ಮೂಲಕ ಕ್ರಿಕೆಟ್ ಜಗತ್ತಿನ ನೆನಪಿನಲ್ಲಿ ಉಳಿಯುವಂತಹ ಅಂಪೈರ್‌ಗಳಲ್ಲಿ ಒಬ್ಬರಾಗಿರುವ ಡಿಕಿ ಬರ್ಡ್ ಇಂಗ್ಲೇಂಡಿನ ರಾಣಿ ಎಲಿಜಬೆತ್ ಮತ್ತು ಲೇಖಕ ಸ್ಟೀಫನ್ ಕಿಂಗ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಂತಹ ಡಿಕ್ಕಿ ಬರ್ಡ್ ಅಜನ್ಮ ಬ್ರಹ್ಮಚಾರಿಯಾಗಿದ್ದರು ಎನ್ನುವುದೂ ಸಹಾ ಅಚ್ಚರಿಯ ಸಂಗತಿಯಾಗಿತ್ತು. ಅವರ ಆತ್ಮಚರಿತ್ರೆಯ ಪುಸ್ತಕ ಪ್ರಪಂಚಾದ್ಯಂತ ಸುಮಾರು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಪ್ರತಿಗಳು ಮಾರಾಟವಾಗಿ, ಇಂಗ್ಲೇಂಡಿನ ಅತಿ ಹೆಚ್ಚು ಮಾರಾಟವಾದ ಕ್ರೀಡಾ ಪುಸ್ತಕ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.
ಕ್ರಿಕೆಟ್ ಜಗ್ಗತ್ತಿನ ಅತ್ಯಂತ ಪ್ರೀತಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಂತಹ ಹೆರಾಲ್ಡ್ ಡೆನ್ನಿಸ್ ಬರ್ಡ್ ಅರ್ಥಾತ್ ಎಲ್ಲರ ಪ್ರೀತಿಯ ಡಿಕಿ ಬರ್ಡ್ ಆವರು ತಮ್ಮ 92 ನೇ ವಯಸ್ಸಿನಲ್ಲಿ 2025ರ ಸೆಪ್ಟೆಂಬರ್ 23 ಮಂಗಳವಾರದಂದು ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ ಎಂದು ಘೋಷಿಸಲು ತೀವ್ರ ದುಃಖವಾಗಿದೆ ಎಂದು ಯಾರ್ಕ್‌ಷೈರ್ ಕೌಂಟಿ ಕ್ರಿಕೆಟ್ ಕ್ಲಬ್ ಹೇಳಿಕೆ ಇಡೀ ಜಗತ್ತಿನ ಕ್ರಿಕೆಟ್ ಪ್ರೇಮಿಗಳನ್ನು ದಂಗು ಬಡಿಸಿದೆ ಎಂದರೂ ತಪ್ಪಾಗದು. ಮೈದಾನದಲ್ಲಿ ಬಿಳಿ ಕೋಟ್ ಧರಿಸಿಕೊಂಡು ಸತ್ಯದ ಪರವಾಗಿ ತೀರ್ಪನ್ನು ನೀಡುತ್ತಿದ್ದ ಡಿಕಿ ಬರ್ಡ್ ಅವರಿಗೆ ಆ ಭಗವಂತ ಸದ್ಗತಿಯನ್ನು ಕೊಡಲಿ ಎಂದು ನಾವೂ ನೀವು ಪ್ರಾರ್ಥಿಸೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ