ನವರಾತ್ರಿಯ ಸಂಧರ್ಭದಲ್ಲಿ ಶ್ರೀ ದುರ್ಗಾ ದೇವಿ ಪೂಜೆಯ ಆಚರಣೆ ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಬಹಳ ಪ್ರಸಿದ್ಧವಾಗಿದೆ. ನಮ್ಮಲ್ಲಿ ಹೇಗೆ ಸಾರ್ವಜನಿಕವಾಗಿ ಗಣೇಶೋತ್ಸವಗಳನ್ನು ಮಾಡುತ್ತೇವೆಯೋ ಅದೇ ರೀತಿಯಲ್ಲಿ ಗುಜರಾತಿನಲ್ಲಿ ಗರ್ಭ ಹಬ್ಬವನ್ನು ಹೇಗೆ ಆಚರಿಸುತ್ತಾರೆಯೋ ಅದೇ ರೀತಿ ಅಲ್ಲಿ ಸುಮಾರು ಒಂದು ತಿಂಗಳಿಗೂ ಮುಂಚೆಯೇ ಭರದಿಂದ ಸಿದ್ಧತೆ ಮಾಡಿಕೊಂಡು ನವರಾತ್ರಿಯ 6ನೇ ದಿನವಾದ ಷಷ್ಠಿ ಯಿಂದ ಆರಂಭಿಸಿ ಸಪ್ತಮಿ, ಅಷ್ಟಮಿ, ನವಮಿ ಮತ್ತು ವಿಜಯ ದಶಮಿ ಹೀಗೆ ಒಟ್ಟಿ 5 ದಿನಗಳ ಕಾಲ ಬಹಳ ಅದ್ದೂರಿಯಂದ ಪ್ರಮುಖ ಬೀದಿಗಳಲ್ಲಿ ದೊಡ್ಡ ಪೆಂಡಾಲ್ ಗಳಲ್ಲಿ ವಿವಿಧ ರೂಪದ ಮತ್ತು ವರ್ಣರಂಜಿತವಾದ ಮೂರ್ತಿಗಳನ್ನು ಪೂಜಿಸಿ ಸಂತೋಷ ಪಟ್ಟು ವಿಜಯ ದಶಮಿಯ ಸಂಜೆ ನಾವು ಗಣೇಶನ ವಿಸರ್ಜನೆ ಮಾಡುವಂತೆಯೇ ಅವರೂ ಸಹಾ ಹತ್ತಿರದ ಹಳ್ಳ, ನದಿ ಇಲ್ಲವೇ ಸಮುದ್ರದಲ್ಲಿ ವಿಸರ್ಜಿಸುತ್ತಾರೆ. ಇನ್ನೂ ಕೆಲವೆಡೆ ಉತ್ಸಾಹಿ ಭಕ್ತರು ಮಹಾಲಯ ಅಮಾವಾಸ್ಯೆಯಿಂದಲೇ ದುರ್ಗಾ ಪೂಜಾ ಪೆಂಡಲ್‌ಗಳನ್ನು ತೆರೆದು ಹತ್ತು ದಿನಗಳ ಕಾಲ ಸಾರ್ವಜನಿಕರಿಗೆ ದುರ್ಗಾ ಪೂಜೆಯ ಅವಕಾಶವನ್ನು ನೀಡುತ್ತಾರೆ.
ಕೇವಲ ಬಗೆ ಬಗೆಯ ವಿದ್ಯುತ್ ದೀಪಗಳಿಂದ ಅಲಂಕೃತಳದ ಶ್ರೀ ದುರ್ಗಾದೇವಿಯಷ್ಟೇ ಅಲ್ಲದೇ ಆ ಪೆಂಡಾಲ್ ಗಳಲ್ಲಿ ಸಂಜೆ ನಡೆಯುವ ಭಜನೆ, ರಸಮಂಜರಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜೊತೆಗೆ ಜಾತ್ರೆ ಮತ್ತು ವಿವಿಧ ಆಹಾರ ಮೇಳಗಳು ಪ್ರಮುಖ ಆಕರ್ಷಣೆಗಳಾಗಿ ಲಕ್ಷಾಂತರ ಜನರು ಅಲ್ಲಿಗೆ ಬಂದು ಭಕ್ತಿಯಲ್ಲಿ ಮಿಂದು ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಿ ಕೃತಾರ್ಥರಾಗುವುದನ್ನು ವರ್ಣಿಸುವುದಕ್ಕಿಂತಲೂ ನೋಡಿ ಅನುಭವಿಸಿದರೆ ಚಂದ ಎಂದರೂ ತಪ್ಪಾಗದು
ನಿಜ ಹೇಳಬೇಕೆಂದರೆ 17 ನೇ ಶತಮಾನದವರೆಗೂ ಈ ದುರ್ಗಾದೇವಿಯ ಆಚರಣೆ ಅಲ್ಲಿನ ಸ್ಥಳೀಯ ಜಮೀನ್ದಾರರು ತಮ್ಮ ರಾಜಬರಿಗಳಲ್ಲಿ ಮಾತ್ರಾ ಸಣ್ಣ ಪ್ರಮಾಣದಲ್ಲಿ ಆಚರಿಸಲ್ಪಡುತ್ತಿದ್ದ ಕೌಟುಂಬಿಕ ಕಾರ್ಯಕ್ರಮವಾಗಿತ್ತು, ಅಲ್ಲಿ ವಿವಿಧ ಸಮುದಾಯಗಳು ದೇವಿಯನ್ನು ಪೂಜಿಸಲು ಮತ್ತು ಹಬ್ಬಕ್ಕೆ ಸಂಬಂಧಿಸಿದ ಹಳೆಯ ಸಂಪ್ರದಾಯಗಳಲ್ಲಿ ಕೇವಲ ಶ್ರೀಮಂತ ಕುಟುಂಬಗಳಷ್ಟೇ ಪಾಲ್ಗೊಳ್ಳುತ್ತಿದ್ದ ಉತ್ಸವವನ್ನು ಸಾರ್ವಜನಿಕವಾಗಿ ಎಲ್ಲರೂ ಸೇರಿ ಕೊಂಡು ಅಚರಿಸುವ ಸಂಪ್ರದಾಯವನ್ನು ಪ್ರಾರಂಭಿಸಿದ ಕೀರ್ತಿ ಬಹುಶಃ 16 ನೇ ಶತಮಾನದ ಅಂತ್ಯದ ವೇಳೆಗೆ ಬಂಗಾಳದಲ್ಲಿ ಪ್ರಸಿದ್ಧ ಜಮೀನ್ದಾರರಾಗಿದ್ದಂತಹ ಶ್ರೀ ರಾಜಾ ಕಂಗ್ಸನಾರಾಯಣ್ ಅವರಿಗೆ ಸಲ್ಲುತ್ತದೆ. ಅವರು ತಮ್ಮ ನಾಡಿಯಾ ಜಿಲ್ಲೆಯ ತಾಹೆರ್‌ಪುರದಲ್ಲಿ ಅಂದಿನ ಕಾಲಕ್ಕೇ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ಬಹಳ ಅದ್ದೂರಿಯ ಉತ್ಸವವನ್ನು ಆಯೋಜಿಸಿ ಎಲ್ಲರಿಗೂ ಆ ಉತ್ಸವದಲ್ಲಿ ಭಾಗವಹಿಸಲು ಅನುಗ್ರಹ ಮಾಡಿಕೊಡುವ ಮೂಲಕ ದುರ್ಗಾ ಪೂಜೆಯನ್ನು ಸಾರ್ವಜನಿಕಗೊಳಿಸಿದರು.
ಇದರಿಂದ ಪ್ರೇರಿತರಾಗಿ 1610ರಲ್ಲಿ, ಸಬರ್ಣ ರಾಯ್ ಚೌಧರಿ ಕುಟುಂಬವು ಕೋಲ್ಕತ್ತಾದ ಬರಿಶಾದಲ್ಲಿರುವ ತಮ್ಮ ಮೂಲ ನಿವಾಸದಲ್ಲಿ ಸಾರ್ವಜನಿಕವಾಗಿ ಆಯೋಜಿದ ದುರ್ಗಾ ಪೂಜೆಯೇ ಬಹುಶಃ ಕೋಲ್ಕತ್ತಾದ ಅತ್ಯಂತ ಹಳೆಯ ದುರ್ಗಾ ಪೂಜಾ ಎನ್ನಲಾಗುತ್ತದೆ. ನಂತರದ ದಿನಗಳಲ್ಲಿ ನಬಕೃಷ್ಣ ದೇವ್ 1757 ರಲ್ಲಿ ಶೋಭಾಬಜಾರ್ ರಾಜ್‌ಬರಿಯಲ್ಲಿ ದುರ್ಗಾ ಪೂಜೆಯನ್ನು ಪ್ರಾರಂಭಿಸಿದರೆ, ಇಪ್ಪತ್ತನೇ ಶತಮಾನದ ಆರಂಭದಲ್ಲಿ ಕೋಲ್ಕತ್ತಾದಲ್ಲಿ ಬರೋವಾರಿ ದುರ್ಗಾ ಪೂಜೆ ಪ್ರಾರಂಭವಾಯಿತು. ಬಾರ್ವಾರಿ ದುರ್ಗಾ ಪೂಜೆ ಅತ್ಯಂತ ವೇಗದಲ್ಲಿ ಕೋಲ್ಕತ್ತಾದಲ್ಲಿ ಸಾಮಾನ್ಯ ಜನರ ಹಬ್ಬವಾಯಿತು. 1910 ರಲ್ಲಿ, ಕೋಲ್ಕತ್ತಾದಲ್ಲಿ ಮೊದಲ ಬರೋವಾರಿ ದುರ್ಗಾ ಪೂಜೆಯನ್ನು ಭೋವಾನಿಪೋರ್‌ನ ಬಲರಾಮ್ ಬಸು ಘಾಟ್ ರಸ್ತೆಯಲ್ಲಿ ಭೋವಾನಿಪೋರ್ ಸನಾತನ ಧರ್ಮತ್ಸಹಿನಿ ಸಭಾ ಆಯೋಜಿಸಿದ ನಂತರವಂತೂ ಇಡೀ ರಾಜ್ಯದಲ್ಲಿ ದುರ್ಗಾ ಪೂಜೆಯ ಸಾರ್ವಜನಿಕವಾಗಿ ಎಲ್ಲರಲ್ಲೂ ಸಂತೋಷ ಮತ್ತು ಅಪರಿಮಿತ ಆನಂದದ ಸಂಕೇತ ಎನಿಸಿಕೊಂಡಿತು. ಶತಮಾನಗಳಷ್ಟು ಹಳೆಯದಾದ ಈ ರಾಜಬರಿ ಪೂಜೆಗಳು ಅವುಗಳ ಸಬೆಕಿ ಪ್ರತಿಮಾ ಮತ್ತು ಸಂಪ್ರದಾಯಗಳೊಂದಿಗೆ ಇನ್ನೂ ಜನಪ್ರಿಯವಾಗಿದ್ದರೂ, ಪ್ರಸ್ತುತ ಸನ್ನಿವೇಶದಲ್ಲಿ ವಿಷಯಾಧಾರಿತ ಪೂಜೆಗಳು ಹೆಚ್ಚಿವೆ ಮತ್ತು ಅತ್ಯಂತ ಜನಪ್ರಿಯವಾಗಿವೆ, ಪ್ರತಿ ವರ್ಷವೂ ಐದು ದಿನಗಳಲ್ಲಿ ಅಪಾರ ಸಂಖ್ಯೆಯ ಜನರು ಇಲ್ಲಿಗೆ ಭೇಟಿ ನೀಡಿ ಭಕ್ತಿಯ ಪರವಶರಾಗುತ್ತಾರೆ.
1985ರಲ್ಲಿ ಏಷ್ಯನ್ ಪೇಂಟ್ಸ್ ಪ್ರಾಧಿಕಾರವು ಕೋಲ್ಕತ್ತಾದ ದುರ್ಗಾ ಪೂಜಾ ಸಮಿತಿಗಳಿಗೆ ಪ್ರಶಸ್ತಿ ನೀಡುವ ಪದ್ಧತಿಯನ್ನು ಪರಿಚಯಿಸಿದ ನಂತರ ಸಾಂಪ್ರದಾಯಿಕ ದುರ್ಗಾ ಪೂಜೆಗಳು ನಿಧಾನವಾಗಿ ಕಾರ್ಪೋರೆಟ್ ಸಂಸ್ಕೃತಿಗೆ ಬದಲಾಗಿ ಏಷ್ಯನ್ ಪೇಂಟ್ಸ್ ನೀಡುವ ಶರದ್ ಶಮ್ಮನ್ ಪ್ರಶಸ್ತಿಗಾಗಿ ವಿವಿಧ ಬಣ್ಣ ಬಣ್ಣಗಳಲ್ಲಿ ಅದ್ದೂರಿಯ ಅಲಂಕಾರ ಮಾಡುವ ರೀತಿಯನ್ನು ರೂಢಿಸಿಕೊಂಡ ನಂತರ ಅನೇಕ ಇತರ ವಾಣಿಜ್ಯ ಸಂಸ್ಥೆಗಳು ಕೋಲ್ಕತ್ತಾದಲ್ಲಿ ದುರ್ಗಾ ಪೂಜೆಗಾಗಿ ಶರದ್ ಸಮ್ಮಾನ್ ಅಥವಾ ದುರ್ಗಾ ಪೂಜಾ ಪ್ರಶಸ್ತಿಗಳನ್ನು ನೀಡುವ ಸತ್ ಸಂಪ್ರದಾಯವನ್ನು ಜಾರಿಗೆ ತಂದರೆ, ಪಶ್ಚಿಮ ಬಂಗಾಳ ರಾಜ್ಯ ಸರ್ಕಾರವು 2013ರಲ್ಲಿ ಬಿಸ್ವಾ ಬಾಂಗ್ಲಾ ಶರದ್ ಸಮ್ಮಾನ್ ಅನ್ನು ಪರಿಚಯಿಸಿತು
ನಮಗಿಲ್ಲರಿಗೂ ತಿಳಿದಿರುವಂತೆ ಸ್ವಾಮಿ ವಿವೇಕಾನಂದರು ಮೇ 1, 1897 ರಂದು ಉತ್ತರ ಕೋಲ್ಕತ್ತಾದ ಅನುಯಾಯಿಯ ಮನೆಯಲ್ಲಿ ತಮ್ಮ ನೆಚ್ಚಿನ ಗುರುಗಳಾದ ರಾಮಕೃಷ್ಣ ಪರಮಹಂಸರ ಹೆಸರಿನಲ್ಲಿ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‌ನ ಪ್ರಧಾನ ಕಛೇರಿಯಾಗಿ ಬೇಲೂರು ಮಠವನ್ನು ಸ್ಥಾಪಿಸಿದರು. ಆದಾದ ನಂತರ ರಾಮಕೃಷ್ಣರು ಪೂಜೆ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಹೂಗ್ಲಿ ನದಿಯ ತಡಲ್ಲಿದ್ದ ಬೇಲೂರಿನಲ್ಲಿಯೂ ಬೇಲೂರು ಮಠವನ್ನು ಸ್ವಾಮಿ ವಿವೇಕಾನಂದರು ಸ್ಥಾಪಿಸಿದರು. 1901 ರಲ್ಲಿ ಪ್ರಥಮಬಾರಿಗೆ ಸ್ವಾಮಿ ವಿವೇಕಾನಂದರು ಬೇಲೂರು ಮಠದಲ್ಲಿ ದುರ್ಗಾ ಪೂಜೆಯನ್ನು ಪ್ರಾರಂಭಿಸಿದರು. ಹಿಂದೂ ಸನ್ಯಾಸಿಗಳು ಈ ರೀತಿಯ ಧಾರ್ಮಿಕ ಪೂಜೆಯನ್ನು ನಡೆಸುವ ಸಂಪ್ರದಾಯ ಇಲ್ಲದ ಕಾರಣ, ರಾಮಕೃಷ್ಣ ಮಿಷನ್ ನಲ್ಲಿ ಸನ್ಯಾಸಿಗಳು ಈ ರೀತಿಯಾಗಿ ನಡೆಸುತ್ತಿದ್ದ ಪೂಜಾ ಸಂಕಲ್ಪವನ್ನು ತಾಯಿ ಶಾರದೆಯ ಹೆಸರಿನಲ್ಲಿ ನಡೆಸಲು ನಿರ್ಧರಿಸಿದರು. ಅಂದು ಸ್ವಾಮೀ ವಿವೇಕಾನಂದರಿಂದ ಕೊಲ್ಕತ್ತಾದ ಬೇಲೂರು ರಾಮಕೃಷ್ಣ ಮಠದಲ್ಲಿ ಆರಂಭವಾದ ದುರ್ಗಾ ಪೂಜೆಗೆ ಇಂದಿನ 2025ಕ್ಕೆ ಸರಿಯಾಗಿ 125ನೇ ವರ್ಷ ತುಂಬುತ್ತದೆ.
ವರ್ಷದಿಂದ ವರ್ಷಕ್ಕೆ ದುರ್ಗಾ ಪೂಜೆಯ ಸಮಯದಲ್ಲಿ ಬೇಲೂರು ಮಠಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾದ ಪರಿಣಾಮ. ಬೇಲೂರ ಮಠದ ಅಧಿಕಾರಿಗಳು ಶ್ರೀ ರಾಮಕೃಷ್ಣ ದೇವಸ್ಥಾನದಲ್ಲಿ ನಡೆಸಲಾಗುತ್ತಿದ್ದ ಪೂಜೆಯ ಬದಲಾಗಿ ಮುಖ್ಯ ದೇವಾಲಯದ ಪಕ್ಕದಲ್ಲಿರುವ ತೆರೆದ ಮೈದಾನದಲ್ಲಿ ನಡೆಸಲಾಗುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಈ ಪೂಜೆಯನ್ನು ನೋಡಲು ಸರಾಸರಿ 5 ಲಕ್ಷಕ್ಕೂ ಹೆಚ್ಚು ಭಕ್ತರು ಬೇಲೂರಿಗೆ ಭೇಟಿ ನೀಡುವುದು ಗಮನಾರ್ಹವಾಗಿದೆ
ಈ ಬಾರಿ 125ನೇ ವರ್ಷದ ಅಚರಣೆಗಾಗಿ ಸೆಪ್ಟೆಂಬರ್ 30 ರಂದು ಮಹಾ ಅಷ್ಟಮಿಯ ದಿನದಂದು ಬೆಳಿಗ್ಗೆ 9 ಗಂಟೆಗೆ ಕುಮಾರಿ ಪೂಜೆ ನಡೆಯಲಿದೆ. ಒಬ್ಬ ಹುಡುಗಿಯನ್ನು ಮಾ ದುರ್ಗಾ ಎಂದು ಪೂಜಿಸಲಾಗುತ್ತದೆ. ಪೂಜೆಯನ್ನು ನೋಡಲು ಲಕ್ಷಾಂತರ ಜನರು ಮಠಕ್ಕೆ ಭೇಟಿ ನೀಡುತ್ತಾರೆ. ಸ್ವಾಮಿ ವಿವೇಕಾನಂದರು 1898 ರಲ್ಲಿ ಕಾಶ್ಮೀರದಲ್ಲಿ ಕುಮಾರಿ ಪೂಜೆಯನ್ನು ಮಾಡಿ ಮುಸ್ಲಿಂ ಹುಡುಗಿಗೆ ಪೂಜೆ ಸಲ್ಲಿಸಿದ್ದರು. ಕೋವಿಡ್ ಸಮಯದಲ್ಲಿ ಎರಡು ವರ್ಷಗಳ ಕಾಲ ಬೇಲೂರು ಮಠದ ಆವರಣದೊಳಗೆ ಭಕ್ತರಿಗೆ ಪ್ರವೇಶವಿಲ್ಲದಿದ್ದ ಕಾರಣ, ಈ ಪೂಜೆಯ ನೇರ ಪ್ರಸಾರವನ್ನು ತೋರಿಸಲಾಗಿತ್ತು. ಈ ಬಾರಿ ಅಕ್ಟೋಬರ್ 2, ವಿಜಯ ದಶಮಿಯ ದಿನದಂದು ವಿಗ್ರಹವನ್ನು ನಿಮಜ್ಜನ ಮಾಡಲಾಗುತ್ತದೆ.
ಕೇವಲ ಬೇಲೂರ ಮಠದಲ್ಲಷ್ಟೇ ಅಲ್ಲದೇ ಈ ದುರ್ಗಾ ಪೂಜೆಯನ್ನು ದೇಶಾದ್ಯಂತ ಇರುವ ಮಾಲ್ಡಾ, ಲಕ್ನೋ, ಅಸನ್ಸೋಲ್‌ನಲ್ಲಿ ಅಲ್ಲದೇ ವಿವಿಧ ರಾಮಕೃಷ್ಣ ಮಠದ ಕೇಂದ್ರಗಳಲ್ಲಿ ಬಹಳ ಉತ್ಸಾಹ ಮತ್ತು ಶ್ರದ್ಧಾ ಭಕ್ತಿಗಳಿಂದ ಪ್ರತಿವರ್ಷವೂ ನಡೆಸಲಾಗುತ್ತದೆ. ರಾಮಕೃಷ್ಣ ಮಠದ ನೀತಿ ನಿಯಮಗಳ ಅನುಸರಿಸಿ ಆಚರಿಸಲಾಗುವ ದುರ್ಗಾ ಪೂಜೆಯನ್ನು ನೋಡಲು ಪ್ರಪಂಚದಾದ್ಯಂತದ ಭಕ್ತರು ಬೇಲೂರು ಮಠಕ್ಕೆ ಈ ಬರುತ್ತಾರೆ ಮತ್ತು ಈ ಬಾರಿ 125ನೇ ವರ್ಷದ ಅಚರಣೆಯಾಗಿರುವ ಕಾರಣ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರಬಹುದೆಂದು ನಿರೀಕ್ಷಿಸಲಾಗಿದೆ.
ಕೊಲ್ಕತ್ತಾ ಮತ್ತು ರಾಮಕೃಷ್ಣ ಮಠದ ಶ್ರೀ ದುರ್ಗಾ ಪೂಜೆಯ ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ ಇನ್ನೇಕೆ ತಡಾ, ಹೇಗಿದ್ದರೂ ಒಂದು ವಾರಗಳ ಕಾಲ ಸುಧೀರ್ಘ ರಜೆ ಇರುವ ಕಾರಣ, ಸ್ವಲ್ಪ ಸಮಯ ಮಾಡಿಕೊಂಡು ಸಕುಟುಂಬ ಸಮೇತರಾಗಿ ಕೊಲ್ಕತ್ತಾಕ್ಕೆ ಹೋಗಿ ಅಲ್ಲಿನ ಸಾರ್ವಜನಿಕ ಪೆಂಡಾಲಿನ ದುರ್ಗಾಪೂಜೆ ಮತ್ತು ರಾಮಕೃಷ್ಣ ಮಠದ ಶ್ರೀ ದುರ್ಗಾ ಪೂಜೆಯಲ್ಲಿ ಭಾಗವಹಿಸಿ ಅದರ ಸಂಭ್ರಮವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ