ಅದು 70ರ ದಶಕ. ಮಲ್ಲೇಶ್ವರ ರೈಲ್ವೇ ನಿಲ್ದಾಣದ ಸಮೀಪ ನಾವು ವಾಸವಾಗಿದ್ದಂತಹ ಸಮಯದಲ್ಲಿ (ಶಾಸಕ ಸುರೇಶ್ ಕುಮಾರ್ ಅವರ ಹಳೆಯ ಮನೆಯ ಹಿಂದಿನ ರಸ್ತೆ) ನಾನಿನ್ನೂ ಸಣ್ಣ ವಯಸ್ಸಿನವನು. ಪ್ರತೀ ದಿನ ಸಂಜೆ ನಮ್ಮ ಚಿಕ್ಕಪ್ಪ ಶ್ರೀರಾಮಪುರದ ಶ್ರೀರಾಂ ಸಾಯಂ ಶಾಖೆಗೆ ಹೋಗುವಾಗ, ಹಾಗೇ ನನ್ನನ್ನೂ ಶಾಖೆಗೆ ಕರೆದುಕೊಂಡು ಹೋಗುತ್ತಿದ್ದರು. ಅವರೆಲ್ಲಾ ಆಟವಾಡುತ್ತಿದ್ದರೆ, ನಾನು ಮಾತ್ರಾ ಅಲ್ಲೇ ಕುಳಿತುಕೊಂಡು ಅವರ ಆಟ, ಹಾಡು ಶ್ಲೋಕ ಮತ್ತು ಅಮೃತವಚನಗಳನ್ನು ಕೇಳಿಸಿಕೊಳ್ಳುತ್ತಲೇ ಕಂಠಸ್ತ ಮಾಡುಕೊಳ್ಳುತ್ತಿದ್ದಂತಹ ಸಂದರ್ಭ. ಅದೊಮ್ಮೆ ಶಾಖೆ ಮುಗಿದ ನಂತರ ಅಲ್ಲೇ ಹತ್ತಿರದಲ್ಲೇ ಇದ್ದ ಒಬ್ಬರ ಮನೆಗೆ ನಮ್ಮ ಚಿಕ್ಕಪ್ಪನ ಜೊತೆ ಹೋದಾಗಲೇ ನಾನು ಮೊತ್ತ ಮೊದಲ ಬಾರಿ ಸಂಘದ ಮನೆ ಎಂದರೆ ಹೇಗಿರುತ್ತದೆ ಎಂದು ನೋಡಿದ್ದಲ್ಲದೇ, ಅಲ್ಲಿಯೇ ಶ್ರೀಯುತ ಸೂರೂ ಜೀ ಅರ್ಥಾತ್ ಶ್ರೀ ಕೃ. ಸೂರ್ಯನಾರಾಯಣ ಮತ್ತು ಅವರ ತಮ್ಮ ಶ್ರೀ ಕೃ. ನರಹರಿಗಳನ್ನು ಮೊತ್ತ ಮೊದಲ ಬಾರಿಗೆ ನೋಡಿದ್ದು.
ಆನಂತರ 1985ರ ದಸರಾ ರಜೆಯಲ್ಲಿ ಚನ್ನೇಹಳ್ಳಿಯ ITCಯಲ್ಲಿ ಮತ್ತೆ ಕೃ. ನರಹರಿಗಳ ಬೌದ್ಧಿಕ್ ಕೇಳುವ ಸುಯೋಗ ಒದಗಿದರೆ, 1986ರ ಪ್ರಥಮ ವರ್ಷ OTCಯಲ್ಲಿರುವಾಗಲೇ SSLC ಫಲಿತಾಂಶ ಬಂದು ಈಗಿನಂತೆ ಮೊಬೈಲ್ ಅಥವಾ Online website ಇಲ್ಲದಿರುವಾಗ ಅರೇ ಫಲಿತಾಂಶ ಏನಾಗಿದೆಯೋ? ಎಂದು ನನ್ನಂತೆಯೇ ಶಿಬಿರದಲ್ಲಿದ್ದ ನೂರಾರು ಸ್ವಯಂಸೇವಕರು ಚಡಪಡಿಸುತ್ತಿದ್ದಾಗ, ನಮ್ಮೆಲ್ಲರ Register No. ಪಡೆದು ಕೊಂಡು ನೇರವಾಗಿ SSLC Boardನಿಂದಲೇ ನಮ್ಮ ಫಲಿತಾಂಶವನ್ನು ತರಿಸಿಕೊಟ್ಟವರೇ ಅಂದು ಶಿಕ್ಷಕರ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನ ಪರಿಷತ್ತಿಗೆ ಶಾಸಕರಾಗಿ ಆಯ್ಕೆಯಾಗಿದ್ದಂತಹ ಶ್ರೀಯುತರಾದ ಕೃ. ನರಹರಿಯವರು.
ಮುಂದೆ 1988ರಲ್ಲಿ ಬೆಂಗಳೂರಿನ ಅರಮನೆಯ ಲಾಯ (ಈಗ ಅದು ದೊಡ್ಡ ಕಲ್ಯಾಣ ಮಂಟಪವಾಗಿದೆ)ದಲ್ಲಿ ನಡೆದಿದ್ದ ಎರಡು ದಿನಗಳ ಶಿಬಿರದಲ್ಲಿ ಅದೇ ಕೃ. ನರಹರಿಯವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿದ್ದ ಬೈಠಕ್ಕಿನಲ್ಲಿ ಸಂಘದಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ. ಇಲ್ಲಿ ಭಗವಾಧ್ವಜವೇ ಗುರು ಎಂದು ಹೇಳುತ್ತೇ ಆದರೂ, ಪ್ರತಿಯೊಂದು ಸಂಘದ ಕಾರ್ಯಕ್ರಮದಲ್ಲಿ ಸಂಘದ ಮೊದಲ ಮತ್ತು ಎರಡನೆಯ ಸರಸಂಘ ಚಾಲಕರ ಭಾವಚಿತ್ರಗಳನ್ನು ಇಡುತ್ತೇವಾದರೂ, ಕೆಲವೊಮ್ಮೆ ಅವರುಗಳಿಗೂ ಪುಪ್ಪಾರ್ಚನೆಯನ್ನೂ ಮಾಡಲಾಗುತ್ತೆ. ಇದನ್ನು ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕು? ಎಂದು ನಾನು ಕೇಳಿದ ಪ್ರಶ್ನೆಗೆ ನರಹರಿಯವರು ಉತ್ತರಿಸಲು ಮುಂದಾದಾಗ, ಅದೇ ಬೈಠಕ್ಕಿನಲ್ಲಿದ್ದ ಮತ್ತೊಬ್ಬರು ಇದು ವಯಕ್ತಿಯ ಪ್ರಶ್ನೆಯಾದ್ದರಿಂದ ಈ ಕಾರ್ಯಕ್ರಮ ಮುಗಿದ ನಂತರ ವಯಕ್ತಿಕವಾಗಿ ನಿಮ್ಮ ಪ್ರಶ್ನೆಗೆ ಉತ್ತರಿಸಲಾಗುತ್ತದೆ ಎಂದು ಹೇಳಿದರಾದರೂ, ಇಂದಿಗೂ ಆ ಪ್ರಶ್ನೆಗೆ ಯಾರಿಂದಲೂ ಉತ್ತರ ಸಿಗದೇ ಇರುವುದು ನಿಜಕ್ಕೂ ವಿಪರ್ಯಾಸವೇ ಸರಿ.
ಇಷ್ಟೆಲ್ಲಾ ಪೀಠಿಕೆ ಏಕಪ್ಪಾ ಎಂದರೆ, ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿಯೂ, ರಾಜಕೀಯ ವಲಯದಲ್ಲಿಯೂ ಅಚ್ಚಳಿಯದ ಗುರುತು ಮೂಡಿಸಿ, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ವಿಧಾನಸೌಧಕ್ಕೆ ತಲುಪಿಸುವ ನಿಷ್ಠಾವಂತ ಜನಪ್ರತಿನಿಧಿಯಾಗಿದ್ದಂತಹ ಪ್ರೊ. ಕೃ. ನರಹರಿಯವರು ವಯೋಸಹಜ ಖಾಯಿಲೆಗಳಿಂದಾಗಿ ತಮ್ಮ 93ನೇ ವಯಸ್ಸಿನಲ್ಲಿ 2025ರ ಅಕ್ಟೋಬರ್ 8ರ ಬೆಳಗ್ಗೆ 4.30ಕ್ಕೆ ನಿಧನರಾಗುವ ಮೂಲಕ ರಾಜ್ಯದ ಶಿಕ್ಷಣ ಕ್ಷೇತ್ರಕ್ಕೂ ಮತ್ತು ರಾಜಕೀಯ ಕ್ಷೇತ್ರಕ್ಕೂ ದೊಡ್ಡ ನಷ್ಟವನ್ನುಂಟು ಮಾಡಿದ್ದಾರೆ.
25 ಮೇ 1932ರಂದು ಬೆಂಗಳೂರಿನ ಶ್ರೀರಾಂ ಪುರದ ಶ್ರೀ ಕೃಷ್ಣಪ್ಪ ಹಾಗೂ ಶ್ರೀಮತಿ ಸುಂದರಮ್ಮ ದಂಪತಿಗಳ ಮಗನಾಗಿ ಶ್ರೀ ನರಹರಿಯವರು ಜನಿಸುತ್ತಾರೆ. ಈಗಾಗಲೇ ತಿಳಿಸಿದ್ದಂತೆ ಅವರ ಮನೆ ಸಂಘದ ಮನೆಯಾಗಿದ್ದು, ಅವರ ಮನೆಯ ಆಬಾಲವೃದ್ಧರಾದಿಯಾಗಿ ಪ್ರತಿಯೊಬ್ಬ ಸಂಘದ ಮತ್ತು ಸಮಿತಿಯ ಸದಸ್ಯರಾಗಿದ್ದರು. ನರಹರಿಯವರಿಗಿಂತಲೂ 8 ವರ್ಷ ಹಿರಿಯರಾದ ಅನಾನುಭಾಹು ಅವರ ಅಣ್ಣ ಕೃ. ಸೂರ್ಯನಾರಾಯಣರಾಯರು ಅರ್ಥಾತ್ ಎಲ್ಲರ ಪ್ರೀತಿಯ ಸೂರೂಜೀ ಅವರು ಬಾಲ್ಯದಿಂದಲೇ ಸಂಘದ ಸ್ವಯಂಸೇವಕರಾಗಿ ಗಣಿತ ಶಾಸ್ತ್ರದಲ್ಲಿ ತಮ್ಮ ಪದವಿಯನ್ನು ಮುಗಿಸುತ್ತಿದ್ದಂತೆಯೇ ಜೀವನಪೂರ್ತಿ ಅವಿವಾಹಿತರಾಗಿಯೇ ಉಳಿದು ಸಂಘದ ಪ್ರಚಾರಕರಾಗಿ ಸಮಾಜ ಸೇವೆ ಮಾಡುವ ನಿರ್ಧಾರ ಕೈಗೊಂಡರು. ಕರ್ನಾಟಕದಿಂದ ಸಂಘದ ಪ್ರಚಾರಕರಾದ ಮೊದಲ ತಂಡದಲ್ಲಿ ಸೂರು ಜೀ ಅವರು ಸಹಾ ಒಬ್ಬರು ಎನ್ನುವುದು ವಿಶೇಷವಾಗಿದ್ದು ಮುಂದೆ ಅವರು ಸಂಘದ ದಕ್ಷಿಣ ಭಾರತದ ಅನೇಕ ಗುರುತರ ಜವಾಬ್ಧಾರಿಗಳನ್ನು ನಿಭಾಯಿಸಿ ಕರ್ನಾಟಕ, ಆಂಧ್ರ, ತಮಿಳು ನಾಡು ಮತ್ತು ಕೇರಳ ರಾಜ್ಯದಲ್ಲಿ ಸಂಘದ ಬೆಳವಣಿಗೆಗೆ ಕಾರಣೀಭೂತರಾದವರು. ಹೀಗೆ ಮನೆಯಲ್ಲಿ ಸಂಘದ ವಾತಾವರಣ ಇದ್ದ ಕಾರಣ ಸಹಜವಾಗಿಯೇ ಬಾಲ್ಯದಿಂದಲೂ ನರಹರಿಯವರೂ ಸಹಾ ಸಂಘದ ಸ್ವಯಂಸೇಕರಾಗಿದ್ದರೆ, ಅವರ ಸಹೋದರರಾದ ಕೃ. ಅನಂತ, ಕೃ. ಗೋಪಿನಾಥ್ ಮತ್ತು ಕೃ. ಶಿವು ಅವರೂ ಸಹಾ ಸಂಘದ ಅನ್ಯಾನ್ಯಾ ಜವಾಬ್ಧಾರಿಯನ್ನು ನಿಭಾಯಿಸಿದ್ದರೆ, ಅವರ ಸಹೋದರಿ ಕೃ. ರುಕ್ಮಿಣಿಯವರು ಸಹಾ ರಾಷ್ಟ್ರೀಯ ಸೇವಿಕಾ ಸಮಿತಿಯ ಹಿರಿಯ ಪದಾಧಿಕಾರಿಯಾಗಿ ಜವಾಬ್ಧಾರಿಯನ್ನು ನಿಭಾಯಿಸಿದ್ದಾರೆ. ಈ ಕಾರಣಕ್ಕಾಗಿಯೇ ಸಂಘದ ಎರಡನೇ ಸರಸಂಘ ಚಾಲಕರಾಗಿದ್ದಂತಹ ಶ್ರೀ ಗುರೂಜಿಯವರಿಗೆ ಅವರ ಇಡೀ ಕುಟುಂಬ ಬಹಳ ಹತ್ತಿರವಾಗಿತ್ತು.
ಕೇವಲ ಆಟವಷ್ಟೇ ಅಲ್ಲದೇ, ಓದಿನಲ್ಲಿಯೂ ಬಹಳ ಚುರುಕಾಗಿದ್ದ ನರಹರಿಯವರು ತಮ್ಮ ಬಿ.ಎಸ್ಸಿ ಪದವಿ ಗಳಿಸಿದ ನಂತರ ಬೆಂಗಳೂರಿನ ಪ್ರತಿಷ್ಠಿತ ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜೀನಿಯರಿಂಗ್ ನಲ್ಲಿ ಬಿ.ಇ ಪದವಿಯನ್ನು ಪಡೆದು, ಶಿಕ್ಷಣ ಕ್ಷೇತ್ರದಲ್ಲೇ ಮುಂದುವರೆಯಲು ನಿರ್ಧರಿಸಿ, ಅದೇ ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಕೆಲ ವರ್ಷಗಳ ಕಾಲ ಉಪನ್ಯಾಸಕರಾಗಿದ್ದಲ್ಲದೇ, ನಂತರ ಅಲ್ಲಿನ ವಿದ್ಯಾರ್ಥಿ ಕಲ್ಯಾಣ ಅಧಿಕಾರಿಯಾಗಿ ಮತ್ತು ಬಿಎಂಎಸ್ ಎಂಜಿನಿಯರಿಂಗ್ ನೌಕರರ ಕಾಲೇಜಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹಿತಾಸಕ್ತಿಯ ಚಟುವಟಿಕೆಗಳಲ್ಲಿಯೂ ಅವರು ಸದಾ ಮುಂಚೂಣಿಯಲ್ಲಿದ್ದರು.
ಸಂಘದಲ್ಲಿ ಕ್ಷೇತ್ರೀಯ ಕಾರ್ಯವಾಹರಾಗಿ ಯಶಸ್ವಿಯಾಗಿ ನಿರ್ವಹಿಸುತ್ತಲೇ, ವಿವಿಧ ಸಮಾಜಮುಖೀ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸುತ್ತಿದ್ದದ್ದನ್ನು ಗಮನಿಸಿದ ಸಂಘ ಪರಿವಾರ, 1984ರಲ್ಲಿ ಅವರನ್ನು ಬಿಜೆಪಿ ಪಕ್ಷದ ವತಿಯಿಂದ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಮಾಡಿದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬಾರದೇ, ಸತವಾಗಿ ಮೂರು ಬಾರಿ 1984ರಿಂದ 2002ರವರೆಗೆ ನಿರಂತರವಾಗಿ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ ಮೂಲಕ ಸದನದಲ್ಲಿ ಶಿಕ್ಷಣ ಮತ್ತು ಶಿಕ್ಷಕರ ಧ್ವನಿಯಾಗಿ, ಆವರ ಹಕ್ಕುಗಳಿಗಾಗಿ, ಶಿಕ್ಷಕರ ವೇತನ, ಸೇವಾ ಶರತ್ತುಗಳು ಹಾಗೂ ಶಿಕ್ಷಣದ ಗುಣಮಟ್ಟದ ಕುರಿತಂತೆ ನಿರಂತರವಾಗಿ ಕಾಳಜಿ ವಹಿಸಿ ಹೋರಾಡುವ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು.
ಕೇವಲ ಸಂಘದ ಅನ್ಯಾನ್ಯ ಜವಾಬ್ಧಾರಿ ಮತ್ತು ಬಿಜೆಪಿ ಪಕ್ಷದವತಿಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದಷ್ಟೇ ಅಲ್ಲದೇ ಅನೇಕ ಜವಾಬ್ಧಾರಿಗಳನ್ನು ನಿಭಾಯಿಸಿದ್ದು ಅವುಗಳಲ್ಲಿ ಪ್ರಮುಖವಾದದ್ದು ಹೀಗಿವೆ.
- ಅವರು ಹಲವು ಶಿಕ್ಷಕರ ಸಂಘಟನೆಗಳ ಜೊತೆಗಿದ್ದರು
- ಆಲ್ ಇಂಡಿಯಾ ಸೆಕೆಂಡರಿ ಟೀಚರ್ಸ್ ಫೆಡರೇಶನ್‌ನ ಉಪಾಧ್ಯಕ್ಷರು
- ರಾಷ್ತ್ರೀಯ ಶೈಕ್ಷಣಿಕ ಮಹಾಸಂಘದ ಉಪಾಧ್ಯಕ್ಷರು
- ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ.
- ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು
- ಅಖಿಲ ಭಾರತೀಯ ಶಿಕ್ಷಕ ಮಹಾ ಸಂಘದ (ABSM) ಪೋಷಕರು
- ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷ
- ಸಂಘದ ರಾಜ್ಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದರು
ನರಹರಿಯವರು ತಮ್ಮ ವೃತ್ತಿ ಜೀವನದುದ್ದಕ್ಕೂ ಶಿಕ್ಷಣ, ಸಾಮಾಜಿಕ ಸೇವೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಲ್ಲದೇ, ತುರ್ತು ಪರಿಸ್ಥಿತಿಯ ಸಮಯದಲ್ಲಿ ಅಂದಿನ ಸರ್ಕಾರದ ಸರ್ವಾಧಿಕಾರದ ವಿರುದ್ಧವೂ ಹೋರಾಟ ಮಾಡಿ ಜೈಲುವಾಸವನ್ನೂ ಅನುಭವಿಸಿದ್ದರು. ಉತ್ತಮ ವಾಗ್ಮಿ ಮತ್ತು ಲೇಖಕರೂ ಆಗಿದ್ದಲ್ಲದೇ, ಎ ವಿಷನ್ ಅಂಡ್ ಡೈರೆಕ್ಷನ್ ಟು ಎಜುಕೇಶನ್ ಎಂಬ ಪುಸ್ತಕವನ್ನೂ ಬರೆದಿದ್ದರು.
ತುರ್ತು ಪರಿಸ್ಥಿತಿಯ ವಿರುದ್ಧ ಅಂದು ಹೋರಾಟ ಮಾಡಿದ್ದ, ನಮ್ಮ ಮಕ್ಕಳಿಗೆ ಭಾರತೀಯರಿಗೆ ಕೀಳರಿಮೆ ಬರುವಂತೆ ಪರಕೀಯರನ್ನೇ ಹೊಗಳುವ ಶಿಕ್ಷಣವನ್ನೇ ಪಠ್ಯದಲ್ಲಿ ಅಳವಡಿಸಿರುವುದರ ವಿರುದ್ಧ ಪ್ರಭಲ ಹೋರಾಟ ನಡೆಸಿದ್ದಲ್ಲದೇ, ಭಾರತೀಯ ಶಿಕ್ಷಣ ಪದ್ದತಿಯನ್ನು ಶಿಕ್ಷಣದಲ್ಲಿ ಅಳವಡಿಸಲು ಅಪಾರವಾಗಿ ಹೋರಾಡಿದ್ದಂತಹ ಶ್ರೀ ಕೃ. ನರಹರಿ ಅವರನ್ನು ಬೆಂಗಳೂರಿನ ಶ್ರೀರಾಮ ಪುರ ನಿವಾಸಕ್ಕೆ ತಮಿಳುನಾಡು ಬಿಜೆಪಿಯ ಹಿಂದಿನ ರಾಜ್ಯಾಧ್ಯಕ್ಷ ಶ್ರೀ ಕೆ. ಅಣ್ಣಾಮಲೈ ಅವರು ಕೆಲವು ತಿಂಗಳುಗಳ ಹಿಂದೆ ಭೇಟಿ ನೀಡಿ ಅವರನ್ನು ಸನ್ಮಾನಿಸಿದ್ದಲ್ಲದೇ, ತುರ್ತು ಪರಿಸ್ಥಿತಿಯ ಕುರಿತಾಗಿ ಚರ್ಚೆಯನ್ನು ನಡೆಸಿದ್ದದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇನ್ನು ವಯಕ್ತಿಯವಾಗಿ ಹೇಳಬೇಕೆಂದರೆ, ನಾನು ಓದಿದ್ದ ಬಿ.ಇ.ಎಲ್ ವಿದ್ಯಾ ಸಂಸ್ಥೆಯ ಔನ್ನತಿಗಾಗಿ ಸರ್ಕಾರದ ವತಿಯಿಂದ ಆಗಬೇಕಿದ್ದ ಅನೇಕ ಕೆಲಸ ಕಾರ್ಯಗಳಿಗೆ ಶ್ರೀ ಕೃ.ನರಹರಿ ಅವರ ಕೊಡುಗೆ ಅಪಾರವಾಗಿದ್ದ ಕಾರಣ, ಕಳೆದ ತಿಂಗಳು ನಮ್ಮ ಶಾಲೆಯ ನಿವೃತ್ತ ಪ್ರಾಂಶುಪಾಲರ ಅಭಿನಂದನಾ ಸಮಾರಂಭದಲ್ಲಿ ಶ್ರೀ ನರಹರಿಗಳನ್ನೇ ಅಧ್ಯಕ್ಷರನ್ನಾಗಿ ಮಾಡಬೇಕೆಂದು ತೀರ್ಮಾನಿಸಿ, ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲು ಹೋದಾಗ, ತೀವ್ರ ತರವಾದ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ, ನರಹರಿಯವರು ಯಾವುದೇ ಸಾರ್ವಜನಿಕ ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲ ಎಂದು ತಿಳಿದ ನಂತರವಷ್ಟೇ, ಅನಿವಾರ್ಯವಾಗಿ ಮತ್ತೊಬ್ಬರನ್ನು ಅಧ್ಯಕ್ಷರನ್ನಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರೂ, ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣದಲ್ಲಿ ನಮ್ಮ ಬಿ.ಇ.ಎಲ್ ಶಾಲೆಯ ಉನ್ನತಿಗೆ ಶ್ರೀ ಕೃ.ನರಹರಿ ಅವರ ಕೊಡುಗೆಯನ್ನು ಸ್ಮರಿಸಿದ್ದೆವು.
ಸರಳ ಜೀವನದ ಆದರ್ಶದೊಂದಿಗೆ ಸೌಮ್ಯ, ಶಿಸ್ತಿನ, ತಾತ್ವಿಕ ವಿನಮ್ರ ಸ್ವಭಾವದ ಪ್ರತೀಕವಾಗಿದ್ದಂತಹ ಶ್ರೀ ನರಹರಿಗಳು ವಯೋಸಹಜ ಖಾಯಿಲೆಗಳಿಂದಾಗಿ ತಮ್ಮ 93ನೇ ವಯಸ್ಸಿನಲ್ಲಿ 2025ರ ಅಕ್ಟೋಬರ್ 8ರ ಬೆಳಗ್ಗೆ 4.30ಕ್ಕೆ ನಿಧನರಾಗುವ ಮೂಲಕ , ಕರ್ನಾಟಕದ ಶಿಕ್ಷಕರು, ವಿದ್ಯಾರ್ಥಿಗಳ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದಂತಹ, ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ, ಶಿಕ್ಷಕರ ಹಕ್ಕುಗಳಿಗಾಗಿ ಧೈರ್ಯ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದಂತಹ ನಾಯಕರನ್ನು ಕಳೆದುಕೊಂಡಂತಾಗಿದ್ದರೂ. ಅವರ ಹೋರಾಟ ಮತ್ತು ಸಾಧನೆಗಳು ಮುಂದಿನ ಅನೇಕ ಪೀಳಿಗೆಗಳಿಗೆ ಪ್ರೇರಣೆಯಾಗಿ ಆಚಂದ್ರಾರ್ಕವಾಗಿ ಮಾದರಿಯಾಗಿಯೇ ಉಳಿಯಲಿದೆ ಎಂದರೂ ತಪ್ಪಾಗದು.
ನರಹರಿ ಅವರ ನಿಧನಕ್ಕೆ ಸಂಘದ ಪ್ರಮುಖರು, ಬಿಜೆಪಿ ನಾಯಕರಷ್ಟೇ ಅಲ್ಲದೇ ಶಿಕ್ಷಣ ಕ್ಷೇತ್ಸದ ಅನೇಕ ಗಣ್ಯರು ಕಂಬನಿ ಮಿಡಿದಿದ್ದರೆ, ಉಡುಪಿಯ ಪೇಜಾವರ ಶ್ರೀಗಳು ನರಹರಿಯವರು ಮತ್ತು ಉಡುಪಿ ಶ್ರೀಕೃಷ್ಣ ಮಠದ ನಡುವೆ ಇದ್ದ ಅವಿನಾಭಾವ ಸಂಬಂಧವನ್ನು ಈ ರೀತಿಯಾಗಿ ತಿಳಿಸಿದ್ದಾರೆ.
ಕೃ.ನರಹರಿ ಅವರ ನಿಧನ ವಾರ್ತೆ ತಿಳಿದು ಖೇದವಾಗಿದೆ.
ತಮ್ಮ 93 ವರ್ಷದ ಜೀವನದಲ್ಲಿ ಬಹುಶ: 80 ವರ್ಷಕ್ಕೂ ಹೆಚ್ಚು ಕಾಲ ದೇಶದ ಹಿತಕ್ಕೆ.. ಸಾಮಾಜಿಕ ಚಟುವಟಿಕೆಗಳಿಗೆ.. ಜೀವನವನ್ನು ಮೀಸಲಿರಿಸಿ ಪ್ರಾಮಾಣಿಕ ಹಾಗೂ ಆದರ್ಶಮಯ ಜೀವನ ನಡೆಸಿದ ನರಹರಿಯವರು ನಮ್ಮ ಗುರುಗಳಾದ ಪೇಜಾವರ ಶ್ರೀ ವಿಶ್ವೇಶ ತೀರ್ಥರಿಗೂ ಮತ್ತು ನಮಗೂ ಅತ್ಯಂತ ಪ್ರೀತಿ ಪಾತ್ರರಾಗಿದ್ದವರು.. ಅವರ ಎಲ್ಲ ಚಟುವಟಿಕೆಗಳನ್ನು ನಾವು ಹತ್ತಿರದಿಂದ ಬಲ್ಲೆವು.. ಅವರ ಸಹೋದರ.. ಸಹೋದರಿ ಕೂಡಾ ದೇಶ ಸೇವೆಗೆ ಇಡೀ ಜೀವನವನ್ನೇ ಮುಡಿಪು ಇಟ್ಟವರು.. ಶೈಕ್ಷಣಿಕ ಕ್ಷೇತ್ರದಲ್ಲಿ ಇವರ ಸಾಧನೆ ಅಪ್ರತಿಮ.. ವಿಧಾನ ಪರಿಷತ್ ಸದಸ್ಯರಾಗಿ ಇವರು ಪ್ರತಿಪಾದಿಸಿದ ವಿಚಾರಗಳು ಸರ್ವ ವೇದ್ಯ..
ಶ್ರೀ ಕೃಷ್ಣ ಮುಖ್ಯ ಪ್ರಾಣರು ಅವರಿಗೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸಿದ್ದೇವೆ.
ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಪೇಜಾವರ ಮಠ
ಉಡುಪಿ ಪೇಜಾವರ ಶ್ರೀಗಳು ಹೇಳಿದಂತೆಯೇ, ರಾಷ್ಟ್ರದ ಸೇವೆಗಾಗಿ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟಿದ್ದ ಶ್ರೀ ಕೃ ನರಹರಿಗಳಆತ್ಮಕ್ಕೆ ಆ ಭಗವಂತ ಸದ್ಗತಿಯನ್ನು ನೀಡಲಿ. ಅವರ ಕುಟುಂಬ ಮತ್ತು ಅಪಾರ ಸಂಖ್ಯೆಯ ಅವರ ಅಭಿಮಾನಿಗಳಿಗೆ ನರಹರಿಗಳ ಅಕಾಲಿಕ ಆಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ನಾವೂ ನೀವೂ ಪ್ರಾರ್ಥಿಸೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಈ ಲೇಖನ ವರ್ತಮಾನ ಪತ್ರಿಕೆಯ 2025ರ ಅಕ್ಟೋಬರ್ 09ರ ಸಂಚಿಕೆಯಲ್ಲಿ ಪ್ರಕಟವಾಗಿದೆ
