ರಮಾ ಏಕಾದಶಿ

ಏಕಾದಶಿ ಎಂದರೆ 11ನೇಯ ದಿನವಾಗಿದ್ದು, ನಮ್ಮ ಹಿಂದೂ ಪಂಚಾಂಗದಲ್ಲಿ ಪ್ರತಿ 15 ದಿನಕ್ಕೊಮ್ಮೆ (ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷ) ಹನ್ನೊಂದನೆಯ ದಿನಕ್ಕೆ ಏಕಾದಶಿ ಬರುತ್ತದೆ. ಈ ದಿನದಂದು ಬಹುತೇಕ ಆಸ್ತಿಕರು ನಿರಾಹಾರಿಗಳಾಗಿ ಅತ್ಯಂತ ಕಟ್ಟು ನಿಟ್ಟು ಉಪವಾಸವನ್ನು ಮಾಡುತ್ತಾ ಭಗವಂತನ ಧ್ಯಾನದಲ್ಲಿ ನಿರತರಾಗಿರುವುದು ಅನೂಚಾನಾಗಿ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ. ಹೀಗೆ ಚೈತ್ರ ಮಾಸದ ಕಾಮದಾ ಏಕಾದಶಿ, ಆಷಾಢ ಮಾಸದ ಏಕಾದಶಿ, ಕಾರ್ತೀಕ ಮಾಸದ ರಮಾ ಏಕಾದಶಿ ಮತ್ತು ಪ್ರಬೋಧಿನಿ ಏಕಾದಶಿ, ಪುಷ್ಯ ಮಾಸದ ವೈಕುಂಠ ಏಕಾದಶಿ, ಫಾಲ್ಗುಣದ ಪಾಪ ವಿಮೋಚನೀ ಏಕಾದಶಿಯವರೆಗೂ ಹೀಗೆ ವರ್ಷವಿಡೀ ಬರುವ ಏಕಾದಶಿಗಳಿಗೆ ಅದರದ್ದೇ ಆದ ಮಹತ್ವವಿದೆ.

ಇನ್ನು ವೈಜ್ಞಾನಿಕವಾಗಿಯೂ ಏಕಾದಶಿಯ ಉಪವಾಸ ಅತ್ಯಂತ ಮಹತ್ವದ್ದಾಗಿದೆ. ಲಂಘನಂ ಪರಮೌಷಧಂ ಎಂದರೆ ಉಪವಾಸ ಮಾಡುವುದೂ ಒಂದು ರೀತಿಯ ಔಷಧ ಎಂದೇ ಆಯುರ್ವೇದದಲ್ಲಿ ತಿಳಿಸಿದ್ದರೆ, ವಶಿಷ್ಠ ಮಹರ್ಷಿಗಳು ಸಹಾ ಏಕಾದಶ್ಯಾಂ ಉಪವಾಸೋ ಯಂ ನಿರ್ಮಿತಂ ಪರಮೌಷಧಮ್ ಅಂತ ಹೇಳಿದ್ದಾರೆ. ಹೀಗಾಗಿ ಏಕಾದಶಿಯಂದು ಉಪವಾಸ ಮಾಡುವುದೂ ಧಾರ್ಮಿಕವಾಗಿ ಅತ್ಯಂತ ಮಹತ್ವವಾಗಿದೆ. ಉಪವಾಸದ ಮುಖಾಂತರ ನಮ್ಮ ದೇಹದ ಪಚನ ಕ್ರಿಯೆ ಶುದ್ಧಿಗೊಂಡಲ್ಲಿ, ಇಡೀ ದಿನ ದೇವರ ಧ್ಯಾನದಲ್ಲಿ ಆಸಕ್ತರಾಗಿರುವ ಕಾರಣ, ಅದು ಆತ್ಮವನ್ನು ಶುದ್ಧೀಕರಿಸಿಮೋಕ್ಷವನ್ನು ಸಾಧಿಸಲು ಸಹಾಯಕವಾಗುತ್ತದೆ. ಇಡೀ ದಿನ ನಿಟ್ಟುಪವಾಸ ಮಾಡಲು ಆಶಕ್ತರಾದವರು ಮತ್ತು ವಯೋವೃದ್ಧರು, ಸಾತ್ವಿಕವಾದ ಲಘು ಫಲಹಾರವಾದ ವಿವಿಧ ಬಗೆಯ ಹಣ್ಣುಗಳು, ಹಾಲು ಮತ್ತು ಮುಸುರೆಯಲ್ಲದ ಪದಾರ್ಥಗಳನ್ನು ಸ್ವೀಕರಿಸುವ ಪದ್ದತಿಯೂ ರೂಢಿಯಲ್ಲಿದೆ. ಒಂದು ವರ್ಷದಲ್ಲಿ ಬರುವ 24 ಏಕಾದಶಿಗಳನ್ನೂ ವಿಷ್ಣುವಿನ ಒಂದೊಂದು ಅವತಾರವೆಂದೇ ಭಾವಿಸಿದ್ದು ಅಂದು ಉಪವಾಸದಿಂದಿದ್ದು, ಮಾನಸಿಕವಾಗಿ ದೃಢಚಿತ್ತದಿಂದ ಹರಿ ನಾಮ ಜಪ ಮಾಡಿದಲ್ಲಿ ಪುಣ್ಯ ಲಭಿಸುತ್ತದೆ ಎಂದೇ ಬಹುತೇಕ ಆಸ್ತಿಕರ ನಂಬಿಕೆಯಾಗಿದೆ. ಹೀಗೆ ನಿರಾಹಾರಿಗಳಾಗಿ ಭಗವಂತನ ಸ್ಮರಣೆ ಮಾಡುವುದರಿಂದ ಸಾತ್ವಿಕ ಗುಣ ಹೆಚ್ಚಾಗಿ ದೇಹ ಮತ್ತು ಮನಸ್ಸು ಸ್ವಸ್ಥವಾಗಿ ಇರುತ್ತದೆ ಎನ್ನುವುದು ವೈಜ್ಞಾನಿಕವಾಗಿಯೂ ಸಾಭೀತಾಗಿದೆ.

ಏಕಾದಶಿ ವ್ರತದ ಅಂಗವಾಗಿ, ಏಕಾದಶಿಯ ಹಿಂದಿನ ದಿನ ದಶಮಿಯಂದು ಕೇವಲ ಮಧ್ಯಾಹ್ನ ಒಂದು ಹೊತ್ತು ಮಾತ್ರವೇ ಊಟ ಮಾಡಿ, ಸಕಲ ಭೋಗಗಳನ್ನು ತ್ಯಜಿಸಿ, ಏಕಾದಶಿಯಂದು ಇಡೀ ದಿನ ಉಪವಾಸವಿದ್ದು, ಮಾರನೆಯ ದಿನ ದ್ವಾದಶಿಯಂದು ನಿತ್ಯಕರ್ಮ ಮುಗಿಸಿ ಭೋಜನ ಮಾಡುವುದು ರೂಢಿಯಲ್ಲಿದೆ. ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥದಲ್ಲಿ ಭಗವಂತನ ಸಮೀಪದಲ್ಲಿರುವುದು ಎಂಬ ಅರ್ಥ ಬರುತ್ತದೆ. ಹೀಗೆ ಶುಚಿರ್ಭೂತನಾಗಿ ಎಡಬಿಡದೆ ಭಗವಂತನ ಸ್ಮರಣೆ ಮಾಡುತ್ತಿರುವುದು ಎಂದರ್ಥವಾಗಿದೆ. ಹೀಗೆ ಮಾಡುವುದರಿಂದ ಏಕ ಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ.   ಇದನ್ನೇ ಪ್ಯಾರಿಸ್ ನಗರದ ಡಾ. ಅಲೆಕ್ಸಿ ಕ್ಯಾರೆಲ್ ಕೂಡ 15 ದಿನಗಳಿಗೊಮ್ಮೆ ಹೊಟ್ಟೆಗೆ ವಿಶ್ರಾಂತಿ ಕೊಟ್ಟರೆ ಆರೋಗ್ಯ ಲಭಿಸುವುದು ಜೊತೆಗೆ ದೀರ್ಘಾಯುಷ್ಯದ ಲಾಭ ಉಂಟಾಗುವುದು ಎಂದಿದ್ದರೆ, ಜಪಾನಿನ ವಿಜ್ಞಾನಿ ಯೋಶಿನೂರಿ ಒಹ್ಸುಮಿ ಸದಾ ಇದೇ ವಿಚಾರವನ್ನೇ ಸುಧೀರ್ಘವಾಗಿ ಅಧ್ಯಯನ ಮಾಡಿ ವಿಚಾರ ಮಂಡಿಸಿ 2016ರಲ್ಲಿ ನೋಬೆಲ್ ಪಾರಿತೋಷಕ ಗಿಟ್ಟಿಸಿದ್ದಾರೆ. ಒಟ್ಟಿನಲ್ಲಿ ದೇವನೊಬ್ಬ ನಾಮ ಹಲವು ಎನ್ನುವಂತೆ ನಮ್ಮ ಏಕಾದಶಿಯ ಉಪವಾಸ ವ್ರತವು ವಿವಿಧ ರೂಪದಲ್ಲಿ ವಿಶ್ವಮಾನ್ಯ ಪಡೆದಿದೆ.

ಇನ್ನು ದೀಪಾವಳಿಗೂ ಮುನ್ನ ಬರುವ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ವಿಷ್ಣು ಪತ್ನಿ ರಮಾ ಏಕಾದಶಿ ಅಥವಾ ರಂಭಾ ಏಕಾದಶಿ  ಎಂದು ಕರೆಯಲಾಗುತ್ತದಾದರೂ, ಈ ಏಕಾದಶಿಯಂದು ವಿಷ್ಣು ದೇವರ ನೆನೆಯುವ ಹಬ್ಬವಾಗಿದೆ. ರಮಾ ಏಕಾದಶಿಯಂದು ಉಪವಾಸ ಮಾಡುವುದರಿಂದ ಬ್ರಹ್ಮಹತ್ಯೆ ದೋಷ ನಿವಾರಣೆಯಾಗುತ್ತದೆ ಎನ್ನುವ ಪ್ರತೀತಿ ಇದೆ. ಈ ಏಕಾದಶಿದಂದು  ಶ್ರೀ ಲಕ್ಷ್ಮಿ ದೇವಿ ಮತ್ತು ವಿಷ್ಣುವನ್ನು ಪೂಜಿಸುವುದರಿಂದ ನಮ್ಮ ಎಲ್ಲಾ ಪಾಪಗಳು ನಾಶವಾಗಿ ಸಂತೋಷ ಮತ್ತು  ಶಾಂತಿ ಸಿಗುತ್ತದೆ ಎಂದು ನಂಬಲಾಗಿದೆ.

ಇನ್ನು ಕಾರ್ತಿಕ ಮಾಸ ಕೃಷ್ಣ ಪಕ್ಷದಲ್ಲಿ ಬರುವ ಏಕಾದಶಿಯ ವೈಶಿಷ್ಟ್ಯಗಳನ್ನು ತಿಳಿಬೇಕೆಂದು  ಧರ್ಮರಾಯನು ಶ್ರೀ ಕೃಷ್ಣ ಪರಮಾತ್ಮನಲ್ಲಿ ಕೇಳಿದಾಗ ಆತ ತಿಳಿಸಿದ ಕಥೆಯು ಅತ್ಯಂತ ರೋಚಕವಾಗಿದ್ದು ಅದನ್ನು ತಿಳಿಯೋಣ ಬನ್ನಿ.

ಅಯ್ಯಾ ಧರ್ಮರಾಜನೇ, ಕಾರ್ತಿಕ ಮಾಸದ ಕತ್ತಲೆಯ ಸಮಯದಲ್ಲಿ ಬರುವ ಏಕಾದಶಿಯನ್ನು ರಮ ಏಕಾದಶಿ ಎಂದು ಕರೆಯಲಾಗಿದ್ದು  ಈ ಏಕದಶಿಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಿದ ತಕ್ಷಣವೇ ಮಹಾಪಾಪಗಳೆಲ್ಲವೂ ನಿವಾರಿಸಲ್ಪಟ್ಟು  ಆಧ್ಯಾತ್ಮಿಕ ವಾಸಸ್ಥಾನಕ್ಕೆ ದಾರಿಯನ್ನು ನೀಡುವ ಕಾರಣ ಇದು ಅತ್ಯಂತ ಶುಭಕರವಾಗಿದ್ದು ಹಾಗಾಗಿಇದರ ಪೌರಾಣಿಕ ಹಿನ್ನಲೆ ಮತ್ತು ವೈಭವಗಳನ್ನು ತಿಳಿಸುತ್ತೇನೆ ಎಂದು ಹೇಳೀ,

ಅದೊಮ್ಮೆ ಮುಚಕುಂದ ಎಂಬ ಪ್ರಜಾರಕ್ಷಕ ರಾಜ ದೇವಾನುದೇವತೆಗಳ ಒಡೆಯ ಇಂದ್ರ, ಯಮ, ವರುಣ ಮತ್ತು ರಾವಣನ ತಮ್ಮ ವಿಭೀಷಣನೊಂದಿಗೆ ಅತ್ಯಂತ ಉತ್ತಮ ಗೆಳೆತನ ಹೊಂದಿದ್ದು, ಸದಾಕಾಲವೂ ಸತ್ಯದ ಪರವಾಗಿ ಮತ್ತು ಧರ್ಮದಿಂದ ರಾಜ್ಯವನ್ನು ಆಳುತ್ತಿದ್ದ  ಅವನ ರಾಜ್ಯವು ಅತ್ಯಂತ ಸುಭೀಕ್ಷವಾಗಿತ್ತು.  ಈ ಮುಚಕುಂದ ರಾಜನಿಗೆ ಚಂದ್ರಭಾಗ ಎಂಬ ಹೆಸರಿನ ಮಗಳಿದ್ದು ಆವಳನ್ನು ಚಂದ್ರಸೇನನ ಮಗ ಶೋಭನನಿಗೆ ಮದುವೆ ಮಾಡಿಕೊಟ್ಟಿದ್ದನು. ಆದೊಮ್ಮೆ ಶೋಭನನು ತನ್ನ ಮಾವನ ಮನೆಗೆ ಬಂದ ದಿನವು ಏಕಾದಶಿಯಾಗಿದ್ದು, ಏಕಾದಶಿಯನ್ನು ಮುಚುಕುಂದ ರಾಜನು ಬಹಳ ಕಟ್ಟುನಿಟ್ಟಿನಿಂದ ಆಚರಿಸುತ್ತಿದ್ದು, ಅವನ ಅರಮನೆಯಲ್ಲಿ ಕೇವಲ ಮನುಷ್ಯರಲ್ಲದೇ, ಆನೆ, ಕುದುರೆ ಅಥವಾ ಯಾವುದೇ ಪ್ರಾಣಿಗಳಿಗೆ ಧಾನ್ಯಗಳು, ಎಲೆಗಳು, ಹುಲ್ಲು ಅಥವಾ ನೀರನ್ನೂ ಸಹಾ  ನೀಡದೇ ಎಲ್ಲರೂ ಉಪವಾಸವನ್ನು ಆಚರಿಸುವ ರೂಢಿ ಇರುತ್ತದೆ.

ಆದರೆ ಚಂದ್ರಾಭಾಗಳ ಪತಿ ಶೋಭನನ ಇಡೀ ದಿನ ಉಪವಾಸ ಮಾಡುವ ಸಾಧ್ಯವಿಲ್ಲದಂತಹ ಕೃಶಕಾಯನಾಗಿದ್ದರಿಂದ ಆತ ದಿನವಿಡೀ ಉಪವಾಸ ಮಾಡುವ ಕಠಿಣತೆಯನ್ನು ಸಹಿಸಲಾರನೆಂದು ಚಂದ್ರಾಭಾಗಳಿಗೆ  ತಿಳಿದಿದ್ದ ಕಾರಣ, ಆಕೆಯು ತನ್ನ ಪತಿಯ ಬಳಿ ತನ್ನ ತಂದೆ ಬಹಳ ಕಟ್ಟುನಿಟ್ಟಾಗಿ  ಏಕಾದಶಿಯನ್ನು ಅನುಸರಿಸುವುದರಿಂದ ದಯವಿಟ್ಟು ಈ ಕೂಡಲೇ ಅರಮನೆಯಿಂದ ಹೊರಟು ಹೋಗಲು ತಿಳಿಸುತ್ತಾಳೆ.  ಆದರೆ ತನ್ನ ಪತ್ನಿಯ ಸಲಹೆಯನ್ನು ಒಪ್ಪದ ಶೋಭನನು, ಏನೇ ಆಗಲೀ ನಾನು ಈ ಪವಿತ್ರ ಏಕಾದಶಿಯಂದು ನಿಟ್ಟುಪವಾಸವನ್ನು ಮಾಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದನು.

ಮೊದಲೇ ಕೃಶಕಾಯನಾಗಿದ್ದ ಶೋಭನನು ಏಕಾದಶಿಯಂದು  ಇಷ್ಟ ಪಟ್ಟು ಕಷ್ಟ ಪಟ್ಟು ಉಪವಾಸ ಮಾಡಲು ಪ್ರಯತ್ನಿಸಿದನಾದರೂ, ಅತಿಯಾದ ಹಸಿವು ಮತ್ತು ಬಾಯಾರಿಕೆಯಿಂದ ವಿಪರೀತವಾಗಿ ಬಳಲಿ ಸೂರ್ಯಾಸ್ತವಾದ ನಂತರ ಕುಸಿದು ಬಿದ್ದರೆ, ಅರಮನೆಯ ಉಳಿದ ಸದಸ್ಯರು ರಾತ್ರಿ ಇಡೀ ಎಚ್ಚರವಾಗಿದ್ದು ಶ್ರೀ ಹರಿಯನ್ನು ಪೂಜಿಸುತ್ತಾ ಆನಂದದಿಂದಿದ್ದರೆ, ಆ ಇಡೀ ರಾತ್ರಿ ರಾಜಕುಮಾರ ಶೋಭನನು ಸಂಪೂರ್ಣವಾಗಿ ಅಸಹನೀಯವಾಗಿ  ದ್ವಾದಶಿಯ ಸೂರ್ಯೋದಯದ ಸಮಯದಲ್ಲಿ ಅಸುನೀಗಿದಾಗ, ಪತಿಯ ಚಿತೆಯೊಂದಿಗೆ ಸಹಗಮನವಾಗಲು ಚಂದ್ರಾಭಾಗ ಬಯಸಿದಳಾದರೂ, ಆಕೆಯ ತಂದೆ ಅದಕ್ಕೆ ಒಪ್ಪದೇ ತನ್ನ ಅಳಿಯನ ಅಂತ್ಯಕ್ರಿಯೆಯ ಪ್ರಕ್ರಿಯೆ ಎಲ್ಲವೂ ಮುಗಿದ ನಂತರ ತನ್ನ ಮಗಳನ್ನು ತನ್ನ ಅರಮನೆಯಲ್ಲಿ ಉಳಿಸಿಕೊಂಡನು.

ಇಷ್ಟ ಪಟ್ಟು ಕಷ್ಟ ಪಟ್ಟಾದರೂ, ಶೋಭನನು ರಮ ಏಕಾದಶಿಯನ್ನು ಆಚರಿಸಿದ್ದ ಕಾರಣ ಮರಣಹೊಂದಿದ ಏಕಾದಶಿಯ ಪುಣ್ಯದಿಂದ ಮಂದಾರ್ಚಲ ಪರ್ವತದ ಆಡಳಿತಗಾರನಾಗಿ ನಿಯುಕ್ತನಾದನು. ಮುತ್ತು ರತ್ನ ಮಾಣಿಕ್ಯಗಳಿಂದ ಮಾಡಲ್ಪಟ್ಟ ಕಂಬಗಳಿಂದ ಕಟ್ಟಲ್ಪಟ್ಟ ಕಟ್ಟಡಗಳು, ಚಿನ್ನ, ವಜ್ರಗಳಿಂದ ಕೂಡಿದ್ದ ಆಭರಣಗಳಿಂದ ರಾಜವಿಡೀ ಒಂದು ರೀತಿಯ ದೇವತೆಗಳ ನಗರದಂತಿತ್ತು. ಮೈತುಂಬ ಆಭರಣಗಳನ್ನು ಧರಿಸಿದ್ದ ರಾಜ ಶೋಭನನು ಕಿರೀಟಧಾರಿಯಾಗಿ  ಸಿಂಹಾಸನದ ಮೇಲೆ ಕುಳಿತರೆ  ಅಕ್ಕ ಪಕ್ಕದಲ್ಲಿ ದಾಸಿಯರು ಚಾಮರ ಬೀಸುತ್ತಿದ್ದರೆ,  ಗಂಧರ್ವರು ಗಾಯನದ ಸೇವೆ ಮತ್ತು  ಅಪ್ಸರೆಯರು ನರ್ತನದ ಸೇವೆ ಸಲ್ಲಿಸುತ್ತಾ  ನಿಜಕ್ಕೂ, ಅವನು ಎರಡನೇ ದೇವೇಂದ್ರನಂತೆ ಇದ್ದನು.

ಅದೊಮ್ಮೆ  ಮುಚಕುಂದನ ರಾಜ್ಯದ ಸೋಮಶರ್ಮ ಎಂಬ ಬ್ರಾಹ್ಮಣನು ವಿವಿಧ ತೀರ್ಥಯಾತ್ರೆಗಳಿಗೆ ಹೋಗುವ ಮಾರ್ಗದಲ್ಲಿ ಅಚಾನಕ್ಕಾಗಿ ಶೋಭನನ ರಾಜ್ಯಕ್ಕೆ ಬಂದು ಅಲ್ಲಿ ಎಲ್ಲಾ ವೈಭವದಿಂದ ಕೂಡಿ ರಾಜ್ಯಭಾರ ಮಾಡುತ್ತಿದ್ದ  ಶೋಭನನನ್ನು ನೋಡಿ ಆತ ತನ್ನ ರಾಜ ಮುಚಕುಂದನ ಅಳಿಯನಾಗಿರಬಹುದು ಎಂದು ಭಾವಿಸಿ ರಾಜನ ಬಳಿ ಬಂದಾಗ, ಆ ಬ್ರಾಹ್ಮಣನನ್ನು ಗುರುತಿಸಿ ಆತನನ್ನು ಗೌರವಯುತವಾಗಿ ಸ್ವಾಗತಿಸಿ ಅವನ ಯೋಗಕ್ಷೇಮದ ಜೊತೆಗೆ ತನ್ನ ಪತ್ನಿ, ಮಾವ ಮತ್ತು ಅವರ ರಾಜ್ಯದ ಪ್ರಜೆಗಳ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ವಿಚಾರಿಸಿದಾಗ, ಸೋಮಶರ್ಮನು, ರಾಜ, ನಿಮ್ಮ ಮಾವನವರ ರಾಜ್ಯದಲ್ಲಿ ಎಲ್ಲಾ ಪ್ರಜೆಗಳು ಮತ್ತು  ಚಂದ್ರಭಾಗ ಎಲ್ಲರೂ ಚೆನ್ನಾಗಿದ್ದು, ರಾಜ್ಯದಾದ್ಯಂತ ಶಾಂತಿ ಮತ್ತು ಸಮೃದ್ಧಿ ಇಂದಿದೆ ಎಂದು ತಿಳಿಸಿ. ಇಂತಹ ಸುಂದರವಾದ ನಗರವನ್ನು ನಾನು ಎಂದೂ  ನೋಡಿಲ್ಲ. ಹಾಗಾಗಿ ನೀವು ಇಂತಹ ಸುಂದರ ನಗರಕ್ಕೆ ಹೇಗೆ ರಾಜನಾಗಿ ಆಯ್ಕೆಯಾದಿರಿ ಎಂದು ಕೇಳಲು ಕಾತುರನಾಗಿದ್ದೇನೆ ಎಂದನು.

ಅದಕ್ಕೆ  ಹಾಗೇಯೇ ನಕ್ಕ ಶೋಭನನು ತಾನು ರಮ ಏಕಾದಶಿಯನ್ನು ಆಚರಿಸಿದ ಪುಣ್ಯಫಲದಿಂದಾಗಿ, ತನ್ನ ಮರಣಾನಂತರ  ಈ ಭವ್ಯ ನಗರದ ರಾಜನಾಗಿ ಆಯ್ಕೆಯಾಗಿ ಎಲ್ಲಾ ವೈಭವದ ಹೊರತಾಗಿಯೂ, ಇದು ಕೇವಲ ತಾತ್ಕಾಲಿಕವಾದ ಅಲ್ಪಕಾಲಿಕ ನಗರವಾಗಿದ್ದು  ಈ ಸೌಂದರ್ಯಯುತ ರಾಜ್ಯ ಮತ್ತು ವೈಭವಗಳನ್ನು ಹೇಗೆ ಶಾಶ್ವತಗೊಳಿಸಬಹುದು ಎಂಬುದರ ಬಗ್ಗೆ ನಿಮಗೆ ತಿಳಿದಿದ್ದರೆ ದಯವಿಟ್ಟು ತಿಳಿಸಿ ಎಂದು ಕೋರಿಕೊಳ್ಳುತ್ತಾನೆ.  ಅದಕ್ಕೆ ಆ ಬ್ರಾಹ್ಮಣರು ಈ ರಾಜ್ಯ ಏಕೆ ಅಸ್ಥಿರವಾಗಿದೆ ಮತ್ತು ಅದು ಹೇಗೆ ಸ್ಥಿರವಾಗುತ್ತದೆ? ಎಂಬುದರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಸಿದರೆ,  ನಾನು ನಿಮಗೆ ಸಹಾಯ ಮಾಡಲು ಪ್ರಯತ್ನಿಸುತ್ತೇನೆ ಎನ್ನುತ್ತಾನೆ. ಆಗ ಶೋಭನನು  ನಾನು ಯಾವುದೇ ನಂಬಿಕೆಯಿಲ್ಲದೆ ರಮ ಏಕಾದಶಿಯಂದು ಉಪವಾಸ ಮಾಡಿದ್ದರಿಂದ, ಈ ರಾಜ್ಯವು ಅಶಾಶ್ವತವಾಗಿದೆ. ದಯವಿಟ್ಟು ನೀವು ಈ ಕೂಡಲೇ ನಿಮ್ಮ ರಾಜ್ಯಕ್ಕೆ ಹಿಂದಿರುಗಿ ನಿಮ್ಮ ರಾಜ ಮುಚುಕುಂದನ ಸುಂದರ ಮಗಳಾದ ನನ್ನ ಮಡದಿ ಚಂದ್ರಭಾಗಳಿಗೆ ಈ ಸ್ಥಳ ಮತ್ತು ನೀವು ನೋಡಿದ್ದನ್ನು ಮತ್ತು ನಾನು ಹೇಳಿದ್ದನ್ನು ಅವಳಿಗೆ ತಿಳಿಸಿ. ಅವಳು ಖಂಡಿತವಾಗಿಯೂ ಪರಿಹಾರವನ್ನು ಸೂಚಿಸುತ್ತಾಳೆ ಎನ್ನುತ್ತಾನೆ.

ಕೂಡಲೇ ಆ ಬ್ರಾಹ್ಮಣನು ತನ್ನ ನಗರಕ್ಕೆ ಹಿಂತಿರುಗಿ ಇಡೀ ಘಟನೆಯನ್ನು ಚಂದ್ರಭಾಗನಿಗೆತ ತಿಳಿಸಿದಾಗ, ಅಕೆ ತನ್ನ ಗಂಡನ ಬಗ್ಗೆ ಕೇಳಿ ಆಶ್ಚರ್ಯ ಮತ್ತು ಸಂತೋಷದಿಂದ ಸ್ವಾಮೀ ತಾವು  ಕಂಡಿದ್ದು ಕನಸೇ ಇಲ್ಲವೇ ನನಸೇ ಎಂದು ಮತ್ತೊಮ್ಮೆ ಕೇಳಿದಾಗ ಆತ ಸ್ವರ್ಗದಂತಹ ಆ ಅದ್ಭುತ ರಾಜ್ಯದಲ್ಲಿ ಆಕೆಯ ಗಂಡನನ್ನು ಮುಖಾಮುಖಿಯಾಗಿ ನೋಡಿದ್ದನ್ನು ತಿಳಿಸಿ, ಆ ರಾಜ್ಯವು ಅಸ್ಥಿರವಾಗಿದ್ದು ಅದು ಯಾವುದೇ ಕ್ಷಣದಲ್ಲಿ ಗಾಳಿಯಲ್ಲಿ ಕಣ್ಮರೆಯಾಗಬಹುದು ಹಾಗಾಗಿ ಅದನ್ನು  ಶಾಶ್ವತಗೊಳಿಸಲು ಆಕೆಯ  ಸಹಾಯವನ್ನು ಕೋರಿದ ವಿಷಯವನ್ನು ತಿಳಿಸುತ್ತಾಳೆ.

ಆಗ  ಚಂದ್ರಭಾಗಳು, ಸ್ವಾಮಿ  ದಯವಿಟ್ಟು ಈ ಕೂಡಲೇ ನನ್ನ ಪತಿ ವಾಸಿಸುವ ಸ್ಥಳಕ್ಕೆ ನನ್ನನ್ನು ಒಮ್ಮೆ ಕರೆದುಕೊಂಡು ಹೋಗಿ,  ನಾನು ನನ್ನ ಜೀವನದುದ್ದಕ್ಕೂ ಪ್ರತಿ ಏಕಾದಶಿಯಂದು ಉಪವಾಸ ಮಾಡಿ ಗಳಿಸಿದ ಪುಣ್ಯದಿಂದ  ಖಂಡಿತವಾಗಿಯೂ ಆ ರಾಜ್ಯವನ್ನು ಶಾಶ್ವತಗೊಳಿಸುತ್ತೇನೆ. ಇದರಿಂದ ರಾಜ್ಯವನ್ನು ಉಳಿಸಿದ ಮತ್ತು  ಬೇರ್ಪಟ್ಟ ದಂಪತಿಗಳನ್ನು ಒಗ್ಗೂಡಿಸಿದ  ಪುಣ್ಯವೂ ಸಹಾ ನಿಮಗೆ ದೊರೆಯ್ತ್ತದೆ  ಎಂದು ಹೇಳಿದಾಗ, ಸೋಮಶರ್ಮನು ಚಂದ್ರಭಾಗಳನ್ನು ಶೋಭನನ ಪ್ರಕಾಶಮಾನವಾದ ರಾಜ್ಯಕ್ಕೆ ಕರೆದೊಯ್ಯುವ ಮಾರ್ಗದಲ್ಲಿ  ಮಂದಾರಚಲ ಪರ್ವತದ ಬುಡದಲ್ಲಿದ್ದ ವಾಮದೇವನ ಪವಿತ್ರ ಆಶ್ರಮಕ್ಕೆ ಹೋಗಿ ತಾವು  ಅಲ್ಲಿಗೆ ಬಂದ ಕಥೆಯನ್ನು ತಿಳಿದಾಗ ವಾಮದೇವನು ವೇದ ಮಂತ್ರಗಳನ್ನು ಪಠಿಸುತ್ತಾ, ದೇವರ ಪವಿತ್ರ ನೀರನ್ನು ಚಂದ್ರಭಾಗಳ ಮೇಲೆ ಸಿಂಪಡಿಸಿದಾಗ, ಆ ಆ ಮಹಾನ್ ಋಷಿಗಳ ತಪಸ್ಸಿನ ಫಲದಿಂದ ಮತ್ತು ಅನೇಕ ಏಕಾದಶಿಗಳ ಉಪವಾಸದಿಂದ ಆಕೆ ಗಳಿಸಿದ ಪುಣ್ಯದಿಂದಾಗಿ ಅವಳ ದೇಹವನ್ನು ಅಲೌಕಿಕವಾಗಿಸಿತು. ಭಕ್ತಿ ಭಾವಪರವಶಳಾಗಿ ಆಕೆ ತನ್ನ ಪ್ರಯಾಣವನ್ನು ಮುಂದುವರೆಸಿದಳು.

ಮಂದಾರಚಲ ಪರ್ವತದ ಮೇಲೆ ತನ್ನ ಮಡದಿ  ತನ್ನ ಬಳಿಗೆ ಬರುತ್ತಿರುವುದನ್ನು ಶೋಭನನು ನೋಡಿ ಸಂತೋಷದಿಂದ  ಅವರಳನ್ನು ಸ್ವಾಗತಿಸಿ ಅವಳನ್ನು ತನ್ನ ಎಡಭಾಗದಲ್ಲಿ ಕೂರಿಸಿಕೊಂದಾಗ, ಆಕೆ ತಾನು ಎಂಟು ವರ್ಷ ವಯಸ್ಸಿನ ಪ್ರಾಯದವಳಿದ್ದಾಗಿನಿಂದಲೂ  ಪ್ರತಿ ಏಕಾದಶಿಯಂದು ನಿಯಮಿತವಾಗಿ ಮತ್ತು ಪೂರ್ಣ ನಂಬಿಕೆಯಿಂದ ಉಪವಾಸ ಮಾಡಿ ಸಂಗ್ರಹಿಸಿದ್ದ ಎಲ್ಲಾ ಪುಣ್ಯವನ್ನು ತನ್ನ ಗಂಡನಿಗೆ  ವರ್ಗಾಯಿಸಿದ ಪರಿಣಾಮ ಆ ರಾಜ್ಯವು ಖಂಡಿತವಾಗಿಯೂ ಶಾಶ್ವತವಾಗಿ ರಮ ಏಕಾದಶಿಯ ಶಕ್ತಿಯಿಂದ ತನ್ನ ಪತಿಯೊಂದಿಗೆ ಶಾಂತಿ ಮತ್ತು ಸಂತೋಷದಿಂದ ನೂರ್ಕಾಲ ಜೀವನವನ್ನು ನಡೆಸಿದಲು ಎಂದು ಶ್ರೀಕೃಷ್ಣನು ಯುಧಿಷ್ಠಿರನಿಗೆ ತಿಳಿಸಿ ಕಾರ್ತಿಕ ಮಾಸದ ಕತ್ತಲೆಯ ಹದಿನೈದು ದಿನಗಳಲ್ಲಿ ಬರುವ ರಮಾ  ಏಕಾದಶಿಯ ಮಹಿಮೆಯನ್ನು ಯಾರು ಭಕ್ತಿಯಿಂದ ಆಚರಿಸುತ್ತಾರೂ ಅವರು ನಿಸ್ಸಂದೇಹವಾಗಿ ಬ್ರಾಹ್ಮಣನನ್ನು ಕೊಂದ ಪಾಪದ ಪ್ರತಿಕ್ರಿಯೆಗಳಿಂದ ಮುಕ್ತರಾಗುತ್ತಾರೆ ಎನ್ನುತ್ತಾನೆ.

ರಮಾ ಏಕಾದಶಿಯ ಬಗ್ಗೆ ಇಷ್ಟೆಲ್ಲಾ ಮಾಹಿತಿಗಳು ತಿಳಿದ ನಂತರ ಇನ್ನೇಕೇ ತಡಾ, ಈ ದಿನದಂದು ಉಪವಾಸ ಮಾಡಬೇಕು ಅದಾಗದೇ ಹೋದಲ್ಲಿ.  ಅಕ್ಕಿ, ಗೋಧಿ, ಬಾರ್ಲಿ, ರಾಗಿ, ಜೋಳ ಅಥವಾ ಯಾವುದೆ ದ್ವಿದಳ ಧಾನ್ಯಗಳಿಂದ ಮಾಡಿದ ಆಹಾರವನ್ನು ಸೇವಿಸದೇ,  ಉಪ್ಪು ಬಳಸದೆ ಸಾತ್ವಿಕ ಆಹಾರವಾದ ಅವಲಕ್ಕಿ ಇಲ್ಲವೇ ಹಣ್ಣು ಹಂಪಲುಗಳನ್ನು  ಸೇವಿಸುತ್ತಾ, ನಕಾರಾತ್ಮಕ ಆಲೋಚನೆಗಳಿಂದ ದೂರವಿದ್ದು ಜಾಗರಣೆ ಮಾಡಿ  ರಾತ್ರಿ ವಿಷ್ಣು ಸಹಸ್ರನಾಮ ಓದುತ್ತಾ, ವಿಷ್ಣುವಿಗೆ ಪ್ರಿಯವಾದ ನೈವೇದ್ಯ ಅರ್ಪಿಸಿ ಹಾಗೆ ಲಕ್ಷ್ಮಿ ದೇವಿಗೆ ಹಸಿರು ಬಳೆ, ಸೀರೆ ನೀಡಿ ಪೂಜಿಸುವ ಮೂಲಕ ಪುಣ್ಯವನ್ನು ಪಡೆಕೊಳ್ತೀರೀ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

Leave a comment