ಪ್ರಿಯಾಂಕ್ ಖರ್ಗೆ ಮುಖ(ಗರ್ವ)ಭಂಗ

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವ ಸುಂದರವಾದ ಮಾತು ಕನ್ನಡದಲ್ಲಿದ್ದು, ಎನೋ ಮಾಡಲು ಹೋಗಿ ಏನೋ ಮಾಡಿದ,  ಬೆಣೆ ತೆಗೆಯೋದಿಕ್ಕೆ ಹೋಗಿ ಬಾಲ ಸಿಗಿಸಿಕೊಂಡಂತೆ, ಎಲ್ಲಾ ಬಿಟ್ಟ ಮಗ ಭಂಗಿ ನೆಟ್ಟ, ಸುಮ್ಮನಿರಲಾದದೇ ಇರುವೆ ಬಿಟ್ಟುಕೊಂಡಂತೆ, ಕೋಲು ಕೊಟ್ಟು ಹೊಡೆಸಿಕೊಂಡಂತೆ ಎನ್ನುವ ಗಾದೆಗಳೂ ಸಹಾ ಇದ್ದು, ಈ ಎಲ್ಲಾ ಗಾದೆಗಳಿಗೂ ಅನ್ವಯವಾಗುವಂತೆ  ಧಾರವಾಡ ಹೈಕೋರ್ಟಿನ ನ್ಯಾಯಾಧೀಶರ ನೆನ್ನೆಯ ಮಧ್ಯಂತರ ಆದೇಶವ  ಸಿದ್ದರಾಮಯ್ಯನವರ ರಾಜ್ಯ ಸರ್ಕಾರ ಅದರಲ್ಲೂ ಟ್ರೋಲಿಂಗ್ ಮಂತ್ರಿ ಮತ್ತು  first class idiot (ಹಿಮಂತ ಬಿಸ್ವಾಸ್ ಹೇಳಿಕೆ) ಪ್ರಿಯಾಂಕ್ ಖರ್ಗೆ ಅವರಿಗೆ ತೀವ್ರ ಮುಖ(ಗರ್ವ)ಭಂಗವಾಗಿದೆ ಎಂದರೂ ತಪ್ಪಾಗದು.

ಬಾಯಲ್ಲಿ ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿದ್ದರೂ, ಓದಿದ್ದು ಮಾತ್ರಾ ಪಿಯೂಸಿ ಆದ್ರೂ, ಆಡೋದು ಮಾತ್ರಾ ತಾನೊಬ್ಬನೇ ಪ್ರಭೂತಿ.  ಜಾತಿಯ ಬಲ ಮತ್ತು ಅಪ್ಪನ ಹೆಸರು ಇಲ್ಲದೇ ಹೋಗಿದ್ದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬಿಡಿ, ಚಿತ್ತಾಪುರದ ಬಸ್ ಸ್ಟಾಂಡಿನಲ್ಲಿ ಕಡಲೇ ಕಾಯಿ ಮಾರಲೂ ಲಾಯಕ್ಕಿಲ್ಲದಿದ್ದರೂ 3 ಬಾರಿ ಶಾಸಕನಾಗಿ ಆಯ್ಕೆಯಾಗಿ, ಮೊದಲನೇ ಬಾರಿ ಆಯ್ಕೆಯಾದಾಗಲೇ ಅಪ್ಪನನ್ನು ಕೇಂದ್ರಕ್ಕೆ ಕಳುಹಿಸಿದ ಪ್ರಾಯಶ್ಚಿತ್ತಕ್ಕಾಗಿ ರಾಜ್ಯದಲ್ಲಿ  ಮರಿ ಖರ್ಗೆಯನ್ನು ಮಂತ್ರಿ ಮಾಡಿದ್ದ ಸಿದ್ದು, ಮತ್ತೆ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗುವಷ್ಟರಲ್ಲಿ  ಮಲ್ಲಿಕಾರ್ಜುನ ಖರ್ಗೆ AICC ಅಧ್ಯಕ್ಷರಾಗಿದ್ದ ಕಾರಣ ಮತ್ತೆ ಓಲೈಕೆ ರಾಜಕಾರಣದ ಪರಿಣಾಮ ಗ್ರಾಮೀಣಾಭಿವೃದ್ಧಿ ಮತ್ತು IT&BT ಸಚಿವನನ್ನಾಗಿಸಿ ಕಪ್ಪ ಕಾಣಿಕೆ ಸಲ್ಲಿಸಿಯಾಗಿತ್ತು.

ಮರಿ ಖರ್ಗೆ ಮಂತ್ರಿ ಆದದ್ದೇ ತಡಾ ಕಳೆದ ಎರಡೂವರೆ ವರ್ಷಗಳಿಂದಲೂ ತನ್ನ ಖಾತೆಗಳನ್ನು ಬಿಟ್ಟು ಉಳಿದೆಲ್ಲರ ಖಾತೆಗಳಲ್ಲೂ ಮೂಗು ತೂರಿಸುತ್ತಲೇ  ಇದ್ದರೂ ಅಪ್ಪನಿಂದಾಗಿ ಮಗನನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಸಿದ್ದು ಸಂಪುಟಕ್ಕಿರುವುದು ದುರಾದೃಷ್ಟಕರ.  ಅಪ್ಪಾ ಮಗ, ಅಳಿಯ ಎಲ್ಲರೂ ಸೇರಿ ಕಳೆದ 5-6 ದಶಕಗಳಿಂದಲೂ ಗುಲ್ಬರ್ಗಾ ಜಿಲ್ಲೆಯಲ್ಲಿ ಅಧಿಕಾರ ಹೊಂದಿದ್ದರೂ ಆ ಜಿಲ್ಲೆ ಇಂದಿಗೂ ಎಲ್ಲಾ ವಿಷಯಗಳಲ್ಲೂ  ಹಿಂದುಳಿದ ಜಿಲ್ಲೆಯಾಗಿದೆ. ಇನ್ನೂ ಮರಿ ಖರ್ಗೆ IT&BT ಸಚಿವ ಆದ ನಂತರ ಭಾರತ ಸಿಲಿಕಾನ್ ಕಣಿವೆ ಎಂದೇ ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಹೊಸಾ ಕಂಪನಿಗಳು ಬರುವುದು ಬಿಡಿ, ಇರುವ ಕಂಪನಿಗಳೇ ಒಂದೊಂದಾಗಿ ಪರ ರಾಜ್ಯದತ್ತ ಗುಳೇ ಏಳುತ್ತಿವೆ. ಕುಣಿಯಲಾರದವಳು ನೆಲ ಡೊಂಕು ಎಂದಳಂತೆ ಎನ್ನುವಂತೆ ಮಾತಿಗೆ ಮುಂಚೆ ಇವೆಲ್ಲವೂ ಕೇಂದ್ರ ಸರ್ಕಾರದ ಹುನ್ನಾರ/ ಮಲತಾಯಿ ಧೋರಣೆ ಎನ್ನುತ್ತಲೇ ಕಾಲ ಕಳೆದ ಈ ಮರಿ ಖರ್ಗೆಗೆ ಅದೇಕೋ ಏನೋ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರ ಬಂದ್ರೇ ಮೈಯೆಲ್ಲಾ ಉರಿಯುವಂತೆ ಆಡುತ್ತಿದ್ದಾರೆ.

ಪದೇ ಪದೇ ಸಂಘ, ಸಂಘ ಪರಿವಾರ ಮತ್ತು ಸಂಘದ ಸ್ವಯಂ ಸೇವಕರನ್ನು ದ್ವೇಷಿಸುತ್ತಲೇ  ಎಗರಿ ಬೀಳುತ್ತಿದ್ದ ಮರಿ ಖರ್ಗೆ, ನಾವು ಕೇಂದ್ರದಲ್ಲಿ ಅಧಿಕಾರಕ್ಕೆ  ಬಂದ ತಕ್ಷಣವೇ ಸಂಘವನ್ನು ನಿಷೇಧಿಸುತ್ತೇವೆ ಎಂದು ಅಬ್ಬರಿಸುತ್ತಿದ್ದವರು ಈಗ  ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷ  ತುಂಬಿದ್ದರ ಸಂಭ್ರಮಾಚರಣೆಯಲ್ಲಿ  ಗಣವೇಶಧಾರಿ ಸ್ವಯಂಸೇವಕರ ಪಥಸಂಚಲನದ ಮೂಲಕ ಇಡೀ ದೇಶಾದ್ಯಂತ ಬಹಳಷ್ಟು ಕಡೆಯಲ್ಲಿ ನಡೆಯುತ್ತಿದ್ದದ್ದು ಸಹಜವಾಗಿ ಅವರಿಗೆ ತಡೆದುಕೊಳ್ಳಲಾಗದೇ, ಇದ್ದಕ್ಕಿದ್ದಂತೆಯೇ,  2025ರ ಅಕ್ಟೋಬರ್ 4 ರಂದು ಮುಖ್ಯಮಂತ್ರಿಗೆ ಏಕಾಏಕಿ  ಪತ್ರ ಬರೆದು, ಆರೆಸ್ಸೆಸ್ ಪೊಲೀಸರ ಅನುಮತಿಯಿಲ್ಲದೆ ಸರ್ಕಾರೀ ಜಾಗಗಳಲ್ಲಿ ಶಾಖೆ, ಬೈಠಕ್ ಗಳನ್ನು ನಡೆಸುವ ಮೂಲಕ ಭಾರತೀಯ ಏಕೀಕರಣದ ವಿರುದ್ಧ ಘೋಷಣೆಗಳೊಂದಿಗೆ ಮತ್ತು ಸಂವಿಧಾನದ ವಿರುದ್ಧ ಮಕ್ಕಳು ಮತ್ತು ಯುವಕರ ಮನಸ್ಸಿನಲ್ಲಿ ಭಾವನೆಗಳನ್ನು  ತುಂಬುತ್ತಿದೆ. ಅಷ್ಟೇ ಅಲ್ಲದೇ, ಪಥಸಂಚಲನದಲ್ಲಿ ನೂರಾರು ಮುಗ್ಧ ಮಕ್ಕಳ ಕೈಯ್ಯಲ್ಲಿ ಲಾಠಿ ಹಿಡಿಸುವ ಮೂಲಕ ಇತರೇ ಜನರಿಗೆ ಭಯವನ್ನುಂಟು ಮಾಡುತ್ತಿರುವ ಪರಿಣಾಮ ಇದರ ಕುರಿತಾಗಿ  ಈ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಲ್ಲದೇ, ಸಾರ್ವಜನಿಕ ಸ್ಥಳಗಳು, ಉದ್ಯಾನವನಗಳು, ಸರ್ಕಾರಿ ಶಾಲಾ ಆಟದ ಮೈದಾನಗಳು ಮತ್ತು ಮುಜರಾಯಿ ದೇವಾಲಯದ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಪತ್ರ ಬರೆದಿದ್ದರು.

ಇನ್ನು ಈಗಾಗಲೇ ಹೇಳಿದಂತೆ ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳಿಂದಲೂ ಬಿಟ್ಟಿ ಭಾಗ್ಯ ಮತ್ತು ಮುಖ್ಯ ಕುರ್ಚಿ ಉಳಿಸಿ ಕೊಳ್ಳುವುದರಲ್ಲೇ ಸಮಯ ಕಳೆಯುತ್ತಿರುವ ಸಿದ್ದ ರಾಮಯ್ಯನವರಿಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಓಲೈಸಿಕೊಳ್ಳಲು ಮರಿ ಖರ್ಗೆ ಹಾಕಿದ ತಾಳಕ್ಕೆ ತಕ್ಕಂತೆ ಕುಣಿಯಲೇ ಬೇಕಾದ ಅನಿವಾರ್ಯತೆಯಿಂದಾಗಿ, ಆ ಪತ್ರದ ಮೇಲೆ  ಈ ಕುರಿತಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದು ಎಂಬ ಷರ ಬರೆದು ಸರ್ಕಾರದ ಮುಖ್ಯಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್ ಅವರಿಗೆ ಆದೇಶ ನೀಡಿದ್ದೇ  ತಡಾ, ತುರ್ತು ಮಂತ್ರಿಮಂಡಲ ಸಭೆ ಕರೆದು ಈ ಕುರಿತಾಗಿ ವಿಧೇಯಕವನ್ನೂ ಮಂಡಿಸಿ  ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಇಲ್ಲದೇ ಕಾರ್ಯ ಚಟುವಟಿಕೆ ನಡೆಸುವವರಿಗೆ ಜೈಲು ಮತ್ತು ದಂಡ ವಿಧಿಸುವ ವಿದೇಯಕ್ಕೆ ಮಂತ್ರಿಮಂಡಲದ ಒಪ್ಪಿಗೆಯನ್ನೂ ಪಡೆದಿದ್ದಲ್ಲದೇ, ಸರ್ಕಾರಿ ನೌಕರಿಯಲ್ಲಿ ಇರುವವರು ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂಬ ಮತ್ತೊಂದು ಪತ್ರವನ್ನೂ ಬರೆದು ಗಣವೇಶಧಾರಿಗಳಾಗಿ ಪಥಸಂಚಲನದಲ್ಲಿ ಭಾಗವಹಿಸಿದ್ದ  ಒಂಬಿಬ್ಬರು ಸರ್ಕಾರಿ ನೌಕರರನ್ನೂ ಅಮಾನತ್ತು ಮಾಡಿದ್ದೂ ಆಯಿತು. ಆತುರದಲ್ಲಿ ಕೊಯ್ದುಕೊಂಡ ಮೂಗು ಮತ್ತೆ ಬೆಳೆಯದು ಎನ್ನುವಂತೆ ಸಂಘ ಚಟುವಟಿಕೆಗಳನ್ನು ನಿರ್ಭಂಧಿಸುವ ಭರದಲ್ಲಿ  ಸಮಯ ಸಿಕ್ಕಾಗಲೆಲ್ಲಾ  ಸಾರ್ವಜನಿಕ ರಸ್ತೆಯ ಮೇಲೆಯೇ ನಮಾಜ್ ಮಾಡುವ ಅವರ ಭಾಂಧವರ ಬುಡಕ್ಕೇ ಬೆಂಕಿ ಬೀಳಿಸಿದ ಕೂಡಲೇ ಕೇವಲ ರಾಜ್ಯವೇಕೆ ಇಡೀ ದೇಶಾದ್ಯಂತ ಮರಿ ಖರ್ಗೆ ವಿರುದ್ಧ ಸಂಘದ ಸ್ವಯಂಸೇವಕರು ಬಿಡಿ ಸಂಘವನ್ನು ವಿರೋಧಿಸುವವರೂ ಕಿಡಿ ಕಾರ ತೊಡಗಿದ್ದಾರೆ.

ಸಂವಿಧಾನ ವಿರೋಧಿ ಮತ್ತು ಪ್ರಜೆಗಳ ಹಕ್ಕನ್ನು ಕಸಿದುಕೊಳ್ಳುವಂತಹ ಸರ್ಕಾರದ ಈ ಆಜ್ಞೆಯ ವಿರುದ್ದ ಹುಬ್ಬಳ್ಳಿಯ ಪುನಃಶ್ಚೇತನ ಸೇವಾ ಸಂಸ್ಥೆ ಎಂಬ ಎನ್‌ಜಿಓ ಧಾರವಾಡದ ಹೈಕೋರ್ಟ್ ಪೀಠದಲ್ಲಿ  ದೂರನ್ನು ದಾಖಲಿಸಿ ಅರ್ಜಿಯಲ್ಲಿ ಸರ್ಕಾರದ ಈ ಆದೇಶ ಕಾನೂನು ಬಾಹಿರ ಮತ್ತು ಸಂವಿಧಾನ ಬಾಹಿರವಾಗಿದೆ. ಆದೇಶದಲ್ಲಿ 10 ಜನಕ್ಕಿಂತ ಹೆಚ್ಚು ಸೇರುವಂತಿಲ್ಲ ಎಂದು  ನಿರ್ಬಂಧ ವಿಧಿಸಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಇದು ಸಂವಿಧಾನದ ಆರ್ಟಿಕಲ್ 91 ಎ ಪ್ರಕಾರ ಜನಗಳು ಸಭೆ ಸಮಾರಂಭಗಳಲ್ಲಿ ಜನ ಸೇರುವ ಹಕ್ಕಿದೆ ಆ ಹಕ್ಕನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ತಿಳಿಸಲಾಗಿತ್ತು. ಅವರ ಪರ ವಾದಿಸಿದ ಹಿರಿಯ ವಕೀಲರಾದ ಶ್ರೀ ಅಶೋಕ್ ಹಾರನಹಳ್ಳಿಯವರೂ ಸಹಾ ಸರ್ಕಾರದ ಈ ರೀತಿಯ ನಿಯಂತ್ರಣ ಸಂವಿಧಾನ ಬಾಹಿರ ಎಂದು  ವಾದ ಮಾಡಿದರು. ವಾದ ಪ್ರತಿವಾದಗಳನ್ನು ಆಲಿಸಿದ ಧಾರವಾಡ ಹೈಕೋರ್ಟ್  ನ್ಯಾಯಮೂರ್ತಿಗಳಾದ ಶ್ರೀ ನಾಗಪ್ರಸನ್ನ ಅವರ ಏಕ ಸದಸ್ಯ ಪೀಠ, ಈ ರೀತಿಯಾಗಿ ಸರ್ಕಾರ ಹೇರಿರುವ ನಿಯಂತ್ರಣ ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕನ್ನು ಸರ್ಕಾರದ ಒಂದು ಆದೇಶದ ಮೂಲಕ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಸರ್ಕಾರದ  ಆದೇಶದ ವಿರುದ್ಧ ಮಧ್ಯಂತರ ತಡೆ ನೀಡುವ ಮೂಲಕ ಸಿದ್ದು ಸರ್ಕಾರ ಮತ್ತು ಮರಿ ಖರ್ಗೆಯ ಪ್ರತಿಷ್ಠೆಗೆ ಭಂಗ ಆಗಿರುವುದನ್ನು ಕಂಡು ಇಡೀ ನಾಡಿಗೇ ನಾಡೇ ಸಂತೋಷ ಪಡುತ್ತಿದ್ದಾರೆ. ಈ ಮಧ್ಯಂತರ ಆದೇಶ ಕುರಿತಾಗಿ ರಾಜ್ಯ ಸರ್ಕಾರದ ಪರ ವಕೀಲರು ವಾದ ಮಾಡಲು ಒಂದು ದಿನದ ಕಾಲಾವಕಾಶ ಕೇಳಿದ್ದು ಕೋರ್ಟ್ ನಿಮಗೆ ನೋಟಿಸ್ ನೀಡುತ್ತೆ ವಾದ ಮಾಡಿ ಎಂದು ಹೇಳಿ ಹೈಕೋರ್ಟ್ ಆದೇಶ ನೀಡಿರುವುದು ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಧಾರವಾಡ ಹೈಕೋರ್ಟಿನ ಏಕ ಪೀಠ ಸದಸ್ಯದ ನ್ಯಾಯಾಧೀಷರು ನೀಡಿರುವ ಮಧ್ಯಾಂತರ ಹೇಳಿಕೆಯ ಕುರಿತಾಗಿ ಇದುವರೆವಿಗೂ ಅಂಡು ಸುಟ್ಟ ಬೆಕ್ಕಿನಂತಾಗಿರುವ ಮರಿ ಖರ್ಗೆ ಯಾವುದೇ ಹೇಳಿಕೆ ನೀಡದೇ  ಹೋದರೂ, ಈ ನಾಡು ಕಂಡ ಅತ್ಯಂತ  ಹುಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರು,  ಇದರ ಕುರಿತಾಗಿ ಮೇಲ್ಮನೆ ಸಲ್ಲಿಸುವುದಾಗಿ ಹೇಳಿಕೆಯನ್ನು ನೀಡಿ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತಹ ಹೇಳಿಕೆ ನೀಡಿರುವುದು ನಿಜಕ್ಕೂ ಹಾಸ್ಯಾಸ್ಪದ  ಎನಿಸಿದೆ.

ಸಂಘದ ವಿರುದ್ಧ ಈ ಸರ್ಕಾರದ ಇಡೀ ಪ್ರಹಸನದಲ್ಲಿ ಮರಿ ಖರ್ಗೆ, ಒಂದೂ ಚುನಾವಣೆಯನ್ನು ಗೆಲ್ಲದ ಪೇಪರ್ ಟೈಗರ್ ಬಿ.ಕೆ ಹರಿಪ್ರಸಾದ್ ಮತ್ತು ಸಿದ್ದರಾಮಯ್ಯ ಬಿಟ್ಟರೆ ಉಳಿದ ಯಾವ ಕಾಂಗ್ರೇಸ್ ನಾಯಕರೂ ಮರಿ ಖರ್ಗೆ ಪರವಾಗಿ ನಿಲ್ಲದೇ ಇರುವುದು ಅತ್ಯಂತ ಗಮನಾರ್ಹವಾಗಿದೆ. ಸರ್ಕಾರದ ಈ ಅದೇಶದ ಕುರಿತಂತೆ ಸಂಘವಾಗಲೀ, ಸಂಘದ ಹಿರಿಯ ಅಧಿಕಾರಿಗಳಾಗಲೀ ಇದರ ಬಗ್ಗೆ ಕಿಂಚಿತ್ತೂ ಪ್ರತಿಕ್ರಿಯಿಸದೇ, ಚರೈವೇತಿ ಚರೈವೇತಿ ಯಹೀತೋ ಮಂತ್ರ  ಹೈ ಅಪನಾ ಎಂದು ಸಂಘದ ಹಾಡಿನಲ್ಲಿ ಹೇಳುವಂತೆ ಸಂಘದ ಶತಮಾನೋತ್ಸವದ ಪ್ರಯುಕ್ತ ಈಗಾಗಲೇ ರಾಜ್ಯಾದ್ಯಂತ ಹಲವಾರು ಸ್ಥಳಗಳಲ್ಲಿ  ಹಮ್ಮಿಕೊಂಡಿದ್ದ ಪಥಸಂಚಲನ ಅತ್ಯಂತ ಶಾಂತಿ ಪೂರ್ಣವಾಗಿ  ನಭೂತೋ ನ ಭವಿಷ್ಯತೆ ಎನ್ನುವಂತೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಈ ಪಥಸಂಚಲನಕ್ಕೆ ಕೇವಲ ಸಂಘದ ಸ್ವಯಂಸೇಕರಷ್ಟೇ ಅಲ್ಲದೇ, ಅನೇಕ ಸರ್ಕಾರಿ ನೌಕರರು ಮತ್ತು ಅಚ್ಚರಿ ಎಂಬಂತೆ ಮರಿ ಖರ್ಗೆ ಮತ್ತು ಸಕಾರದ ಆದೇಶಕ್ಕೆ ಕವಡೆಯ ಕಿಮ್ಮನ್ನನ್ನೂ ನೀಡದೆ, ಕೆಲವೊಂದು ಕಡೆ ಖುದ್ದು ಕಾಂಗ್ರೇಸ್ ಶಾಸಕರು ಮತ್ತು ಕಾಂಗ್ರೇಸ್ ಕಾರ್ಯಕರ್ತರು ಗಣವೇಷಧಾರಿಗಳಾಗಿ ಭಾಗವಹಿಸುತ್ತಿರುವುದನ್ನು ಸಾರ್ವಜನಿಕರು ತುಂಬು ಹೃದಯದಿಂದ ಒಪ್ಪಿ ಅಪ್ಪಿ, ಮಳೆ ಛಳಿ, ಗಾಳಿ ಯಾವುದನ್ನೂ ಲೆಖ್ಖಿಸದೇ  ಪಥಸಂಚಲನ ನಡೆಯುತ್ತಿರುವ ಎಲ್ಲಾ ಕಡೆಯಲ್ಲಿ ಅತ್ಯಂತ ಸಂತೋಷದಿಂದ  ಪುಷ್ಪಾರ್ಚನೆಯನ್ನು ಮಾಡಿ ಸ್ವಾಗತ ಮಾಡಿರುವುದು ಅತ್ಯಂತ  ಗಮನಾರ್ಹವಾಗಿದ್ದು, ಇದು ಸಂಘದ ಬಗ್ಗೆ ಸಾರ್ವಜನಿಕರಿಗೆ ಇರುವ ಆಭಿಪ್ರಾಯವನ್ನು ಸೂಚಿಸುತ್ತಿದೆ.

ಯಾರನ್ನೋ ಮೆಚ್ಚಿಸುವ ಸಲುವಾಗಿಯೋ, ತಮ್ಮ ಅಧಿಕಾರದ ಕುರ್ಚಿಯನ್ನು ಉಳಿಸಿಕೊಳ್ಳುವುದಕ್ಕಾಗಿಯೋ,  ಇಲ್ಲವೇ ಹೆಚ್ಚಿನ ಅಧಿಕಾರಕ್ಕಾಗಿಯೋ ಅಥವಾ ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ತಮ್ಮ ಸರ್ಕಾರ ಮತ್ತು ಇಲಾಖೆಯ ವೈಫಲ್ಯತೆಗಳನ್ನು ಮುಚ್ಚಿ ಹಾಕುವ ಸಲುವಾಗಿ ಸಂಘವನ್ನು ಕಟ್ಟಿ ಹಾಕುತ್ತೇವೆ ಎಂಬ ಮರಿ ಖರ್ಗೆಯ ಆಶಯ ನಿಸ್ಸಂದೇಹವಾಗಿ ಓ ಭ್ರಮೇ!! ಎನ್ನುವಂತಿದೆ.  ಕಲುಬುರ್ಗಿ ಜಿಲ್ಲೆಯಲ್ಲೇ ಈಗಾಗಲೇ 10ಕ್ಕೂ ಹೆಚ್ಚಿನ ಪ್ರದೇಶದಲ್ಲಿ ಶಾಂತಿಯುತವಾಗಿ ಪಥದಂಚಲನ ನಡೆದಿರುವಾಗಿ  ಮರಿಖರ್ಗೆಯ ಸ್ವಕ್ಷೇತ್ರ ಚಿತ್ತಾಪುರದಲ್ಲಿ ಮಾತ್ರ ಅನುಮತಿ ನಿರಾಕರಣೆ ಮಾಡಿರುವುದು ಸ್ಪಷ್ಟವಾಗಿ ಖರ್ಗೆ ಕುಟುಂಬದ ಕೈವಾಡವನ್ನು ಧೃಡ ಪಡಿಸುತ್ತಿದೆ. ಅಷ್ಟೇ ಅಲ್ಲದೇ ಕೇವಲ ಚಿತ್ತಾಪುರದಲ್ಲಿ ಮಾತ್ರವೇ ಅದೇ ದಿನ ವಿವಿಧ ದಲಿತ ಸಂಘಟನೆಗಳು ಮತ್ತು ಕ್ರಿಶ್ಚಿಯನ್ ಸಂಘಟನೆಯೂ ಸೇರಿದಂತೆ ಕೆಲವು ಸ್ವಘೋಷಿತ ಪ್ರಗತಿ ಪರ ಸಂಘಟನೆಗಳೂ  ಸಹಾ ಪಥಸಂಚಲನ ಮಾಡಲು ಅನುಮತಿ ಕೋರಿರುವುದರ ಹಿಂದಿರುವ ಕಾಣದ ಕೈಗಳು ಈಗ ಸ್ಪಷ್ಟವಾಗಿ ಮರಿಖರ್ಗೆಯತ್ತವೇ ಬೆಟ್ಟು ಮಾಡುತ್ತಿದೆ (all eys on Chittapur).  ಹಿಂದೂಗಳನ್ನು ಒಡೆಯುವ ಸಲುವಾಗಿಯೇ ದಲಿತರು ಹಿಂದೂಗಳಲ್ಲಾ!! ಹಾಗಾಗಿಯೇ ಅಂಬೇಡ್ಕರ್ ತಮ್ಮ ಕಡೆಯ ಗಳಿಗೆಯಲ್ಲಿ ಬೌದ್ಧಧರ್ಮಕ್ಕೆ ಮತಾಂತರ ಆದದ್ದು ಎಂದು ವಾದಿಸುವ ಸಂಘಟನೆಗಳು ಅದೇ  ಅಂಬೇಡ್ಕರ್ ಯಾರನ್ನು ದೇಶದ್ರೋಹಿಗಳು ಎಂದಿದ್ದರೋ, ಯಾರನ್ನು ಧರ್ಮಾಧಾರಿತವಾಗಿ ಈ ದೇಶದಿಂದ ಹೊರಹಾಕಬೇಕು ಎಂದಿದ್ದರೋ ಅಂಥಹವರನ್ನೇ ಈ ಚೋಟಾ ಭೀಮ್ ಗಳು ತಮ್ಮ ಸಂಘಟನೆಯಲ್ಲಿ ಉನ್ನತ ಹುದ್ದೆಗಳನ್ನು ನೀಡಿ ತಮ್ಮ ದಲಿತರ ಹಕ್ಕನ್ನು ಪರೋಕ್ಷವಾಗಿ ಮುಸಲ್ಮಾನರ ಪಾಲಾಗಿಸುತ್ತಿರುವುದು ನಿಜಕ್ಕೂ ದುರಾದೃಷ್ಟಕರವಾಗಿದೆ.

ಹಿಂದೂ ಸಂಘಟನೆಯನ್ನೇ ಧ್ಯೇಯವಾಗಿಸಿಕೊಂಡು, ನಮ್ಮ ರಾಷ್ಟ್ರವನ್ನು ಪರಮ ವೈಭವ ಸ್ಥಿತಿಗೆ ತೆಗೆದುಕೊಂಡು ಹೋಗಲು ಕಟಿ ಬದ್ಧರಾಗಿರುವ ಸಂಘಟನೆಯನ್ನು  ಈ ಹಿಂದೆಯೂ ಮೂರು ಬಾರಿ ನಿರ್ಭಂಧಿಸಿದಾಗಲೂ, ಅಗ್ನಿ ಪರೀಕ್ಷೆಯಲ್ಲಿ ತನ್ನನ್ನೇ ತಾನು ಒಡ್ಡಿಕೊಂಡು ಹೇಗೆ ಸೀತಾಮಾತೆ ಪರಿಶುದ್ಧಳಾಗಿ ಹೊರ ಬಂದಳೋ ಅದೇ ರೀತಿಯಲ್ಲೇ ಸಂಘವೂ ಸಹಾ ಭಾರತ ದೇಶದ ಸಂವಿಧಾನ ಬದ್ಧವಾದ ಕಾನೂನಾತ್ಮಕವಾಗಿ ಹೋರಾಡಿಯೇ ತನ್ನ ಮೇಲಿನ ಕಳಂಕದಿಂದ ಹೊರಬಂದಿದ್ದು, ಈಗಲೂ  ರಾಜ್ಯದಲ್ಲಿ ಆರ್ ಎಸ್ ಎಸ್ ನಿರ್ಬಂಧಕ್ಕೆ ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ನೀಡಿರುವ ಮಧ್ಯಾಂತರ  ಆದೇಶದಿಂದಾಗಿ ಮರಿಖರ್ಗೆಗೆ  ಭಾರಿ ಮುಖಭಂಗ ಆಗಿರುವುದು ಸ್ಪಷ್ಟವಾಗಿದೆ. ಈ ಹಿಂದೆಯೇ ಹೇಳಿದಂತೆ ಸಂಘ ಎನ್ನುವುದು ಒಂದು ಆನೆ ಇದ್ದಂತೆ. ಆನೆಯ ಅಂಬಾರಿ ಹೋಗುವಾಗ ಬೀದಿಯಲ್ಲಿ ನಾಯಿ ಬೊಗಳಿದರೆ ಜನಾ ನಾಯಿಗೆ ಹಚ್ಚಾ ಎಂದು ಕಲ್ಲು ತೂರುತ್ತಾರೆ ಮತ್ತು  ಅಂಬಾರಿ ಹೊತ್ತ ಆನೆಗೆ ಕೈ ಮುಗಿಯುತ್ತಾರೆ, ಸಂಘ ಆನೆ ಅಂತಾ ಗೊತ್ತಿದೆ, ನಾಯಿ ಯಾರು? ಅಂತಾ ಬಿಡಿಸಿ ಹೇಳಬೇಕಿಲ್ಲಾ ಅಲ್ವೇ? ಕಾಲಾಯ ತಸ್ಮೈ ನಮಃ. ಗಡಿಯಾರದ ಮುಳ್ಳು  ಮತ್ತು ಅಧಿಕಾರ ಎಂದಿಗೂ ಒಂದೇ ಕಡೆ ನಿಲ್ಲುವುದಿಲ್ಲಾ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment