ಎಸ್. ವಿ. ರಾಜೇಂದ್ರ ಸಿಂಗ್ ಬಾಬು

ಕುತ್ತೇ ಕನ್ವರ್ ನಹೀ ಕನ್ವರ್ ಲಾಲ್ ಬೋಲೋ!! ಬಹುಶಃ 80ರ ದಶಕದವರಿಗೆ ಅಂಬರೀಷ್ ಅವರ ಈ ಸಂಭಾಷಣೆ ಚೆನ್ನಾಗಿಯೇ ತಿಳಿದಿರುತ್ತದೆ. ಅಂಬರೀಶ್ ಅವರಿಗೆ ರೆಬೆಲ್ ಸ್ಟಾರ್ ಪಟ್ಟವನ್ನು ತಂದು ಕೊಟ್ಟ ಮತ್ತು ಆ ಸಿನಿಮಾದಲ್ಲಿ ಹಿಂಸೆಯನ್ನು ವೈಭವೀಕರಿಸಲಾಗಿದೆ ಎಂದು ದಿಲ್ಲಿಯವರೆಗೂ ಹೋಗಿ ಅಂದಿನ ಪ್ರಧಾನಿಗಳಾಗಿದ್ದ ಇಂದಿರಾ ಗಾಂಧಿ ಅವರನ್ನೂ ಭೇಟಿಯಾಗಿ ಆ ಚಿತ್ರದ ಬಿಡುಗಡೆಯ ಕುರಿತು ಸಂಸತ್ತಿನಲ್ಲಿ ಚರ್ಚೆಯಾಗಿ ನಂತರ ನ್ಯಾಯಾಲಯದಲ್ಲಿ ಜಯಗಳಿಸಿ ಬಿಡುಗಡೆಗೊಂಡು ವಾಣಿಜ್ಯಿಕವಾಗಿ ಅತ್ಯಂತ ಯಶಸ್ಸನ್ನು ಕಂಡ  ಆಂತದಂತಹ ಸಿನಿಮಾವನ್ನು ನಿರ್ದೇಶಿಸಿದ ಕನ್ನಡ ಚಲನಚಿತ್ರ ರಂಗದ ಅತ್ಯಂತ ಹಿರಿಯ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಇತ್ತೀಚೆಗಷ್ಟೇ, ತಮ್ಮ 50 ವರ್ಷಗಳ ವೃತ್ತಿ ಜೀವನಕ್ಕಾಗಿ ಸಂಭ್ರಮಾಚರಣೆ ನಡೆಸುತ್ತಿರುವ ನಾಗರಹೊಳೆ, ಮುತ್ತಿನಹಾರ, ಬಂಧನ, ಕುರಿಗಳು ಸಾರ್ ಕೋತಿಗಳು, ಕತ್ತೆಗಳು ಸಾರ್ ಸರಣಿಯ ಚಿತ್ರಗಳನ್ನು ತಮ್ಮ ತಂದೆ ಶಂಕರ್ ಸಿಂಗ್ ಅವರ ಮಹಾತ್ಮ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ/ನಿರ್ದೇಶನ ಮಾಡಿರುವ ರಾಷ್ಟ್ರಪ್ರಶಸ್ತಿ ವಿಜೇತರಾದ ಶ್ರೀ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಮೈಸೂರಿನ ಮಾಹಾತ್ಮ ಪಿಕ್ಚರ್ಸ್ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದಂತಹ ಶ್ರೀ ಶಂಕರ್ ಸಿಂಗ್ ಮತ್ತು ಅಪ್ರತಿಮ ನಟಿಯಾಗಿದ್ದಂತಹ ಶ್ರೀಮತಿ ಪ್ರತಿಮಾ ಸಿಂಗ್ ಅವರ  ಸುಪುತ್ರನಾಗಿ ರಜಪೂತ ಕುಟುಂಬದಲ್ಲಿ 22 ಅಕ್ಟೋಬರ್ 1952ರಂದು ಮೈಸೂರಿನಲ್ಲಿ ರಾಜೇಂದ್ರ ಸಿಂಗ್ ಬಾಬು ಅವರ ಜನನವಾಗುತ್ತದೆ. ತಂದೆ ತಾಯಿ ಇಬ್ಬರೂ ಸಿನಿಮಾ ರಂಗದಲ್ಲಿ ಇದ್ದ ಕಾರಣ  ಶಿವಶರಣೆ ನಂಬೆಕ್ಕ  ಮತ್ತು ಭಕ್ತ ಚೇತ ಚಿತ್ರಗಳಲ್ಲಿ ವರನಟ ಡಾ. ರಾಜಕುಮಾರ್ ಅವರೊಂದಿಗೆ ಬಾಲ ಕಲಾವಿದರಾಗಿ ನಟಿಸಿರುತ್ತಾರೆ. ಆ ಸಿನಿಮಾದಲ್ಲಿ ನಟಿಸುತ್ತಿದ್ದಾಗ ಬಹಳ ಪ್ರೀತಿಯಿಂದ ಬಾ ಕಂದ (ಬಾ ಮಗು) ಎಂದು ರಾಜಕುಮಾರ್ ಅವರು ಬಾಬು ಅವರನ್ನು ಸಂಬೋಧಿಸುತ್ತಿದ್ದದ್ದಲ್ಲದೇ, ಅವರು ಮೈಸೂರಿಗೆ ಬಂದಾಗಲೆಲ್ಲಾ ಮೈಸೂರಿನ ಪ್ರಖ್ಯಾತ ಹೋಟೆಲ್ಲುಗಳಲ್ಲಿ  ಕೋಳಿ ತಿನ್ನಲು ಕರೆದುಕೊಂಡು ಹೋಗುವಷ್ಟರ ಮಟ್ಟಿಗಿನ ಒಡನಾಟವನ್ನು ಹೊಂದಿದ್ದರು.

ಇಡೀ ಕುಟುಂಬವೇ ಸಿನಿಮಾ ರಂಗದಲ್ಲಿದ್ದರೂ ತಮ್ಮ ಮಗ ಬಾಬು ಅವರನ್ನು ದೊಡ್ಡ ವೈದ್ಯನನ್ನಾಗಿಸ ಬೇಕೆಂದು ಬೇಕೆಂದು ಪ್ರತಿಮಾ ದೇವಿಯವರು ಇಚ್ಚಿಸಿದ್ದರೂ, ಬಾಬು ಅವರಿಗೆ ವೈದ್ಯನಾಗುವುದಕ್ಕಿಂತಲೂ ಕಲೆಯನ್ನೇ  ಒಪ್ಪಿ ಅಪ್ಪಿಕೊಳ್ಳುತ್ತಾರೆ. ಕ್ಯಾಮೆರಾ ಮತ್ತು ಧ್ವನಿ ಯಾವಾಗಲೂ ಆವರನ್ನು  ಗಮನ ಸೆಳೆಯುತ್ತಿದ್ದ ಕಾಅಣ, ಮಿಚೆಲ್ ಕ್ಯಾಮೆರಾವನ್ನು ತಮ್ಮ ಭುಜದ ಮೇಲೆ ಎತ್ತಿ ಹೊತ್ತುಕೊಂಡು ಆ  ಕ್ಯಾಮೆರಾ ಮೂಲಕ ಚಿತ್ರಗಳನ್ನು ನೋಡುವುದು ಅವರಿಗೆ  ಆನಂದವಾಗಿದ್ದ ಕಾರಣ, ಅದೇ ಕ್ಯಾಮೆರಾ ನೇತಾಕಿಕೊಂಡು ಯಾರೂ ಹೋಗದಂತಹ ಅಜ್ಞಾತ ಸ್ಥಳಗಳಿಗೆ ಹೋಗಿ ಅಲ್ಲಿನ ಸುಂದರ ತಾಣಗಳ ಪೋಟೋ ತೆಗೆದು ಆವರ ಅನುಭವಗಳೆಲ್ಲವನ್ನೂ ಅಂದಿನ ಪ್ರಸಿದ್ಧ ಪತ್ರಿಕೆಗಳಾದ ಸುಧಾ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ  ಸಚಿತ್ರ ಸಮೇತವಾಗಿ ಲೇಖನಗಳನ್ನು ಬರೆಯುತ್ತಲೇ ಪ್ರಖ್ಯಾತಿ ಪಡೆಯುತ್ತಾರೆ.

ಇದರ ಜೊತೆಗೆ ದಿ ಗ್ರೇಟ್ ಎಸ್ಕೇಪ್ , ಗನ್ಸ್ ಆಫ್ ನವರೋನ್ ಮತ್ತು ದಿ ಬ್ರಿಡ್ಜ್ ಆನ್ ದಿ ರಿವರ್ ಕ್ವಾಯ್‌ನಂತಹ ಚಿತ್ರಗಳಿಂದ ಆಕರ್ಷಿತರಾಗಿದ್ದರು. ಸಿನಿಮಾ ಪ್ರೇಕ್ಷಕರ ಹತ್ತಿರ ಹೋಗಬೇಕು ಎಂಬ ನಂಬಿಕೆಯನ್ನು ಹೊಂದಿದ್ದಲ್ಲದೇ ಇದಕ್ಕೆ ಪೂರಕ ಎನ್ನುವ ಹಾಗೆ  ನೀರಿನಲ್ಲಿರುವ ಮೀನಿಗೆ ಈಜು ಕಲಿಸಸೇಕೇ? ಎನ್ನುವಂತೆ ಇಡೀ ಕುಟುಂಬವೇ ಸಿನಿಮಾ ವೃತ್ತಿಯಲ್ಲಿ ಇದ್ದ ಕಾರಣ, ಸಿಕ್ಕವಯಸ್ಸಿನಲ್ಲಿಯೇ ಎಸ್. ವಿ. ರಾಜೇಂದ್ರಸಿಂಗ್ ಬಾಬು ಅವರಿಗೆ ಕಥೆ, ಚಿತ್ರಕತೆ, ನಟನೆ, ನಿರ್ದೇಶನ, ನಿರ್ಮಾಣ ಹೀಗೆ ಸಿನಿಮಾದ ಕುರಿತಾದ ಎಲ್ಲಾ ವಿಷಯಗಳು ಮನೆಯೇ ಮೊದಲ ಪಾಠ ಶಾಲೆ ತಂದೆ ತಾಯಿಯರೇ ಮೊದಲ ಗುರುಗಳು ಎನ್ನುವಂತೆ ಮನೆಯ ವಾತಾವರಣದಿಂದಲೇ  ಕರಗತವಾಗಿ ಬಿಡುತ್ತದೆ. ಜೊತೆಗೆ ತಾಯಿ ತಾಯಿ ಪ್ರತಿಮಾ ದೇವಿ,  ಸಹೋದರ ಸಂಗ್ರಾಮ್ ಸಿಂಗ್ ಮತ್ತು ಸಹೋದರಿ ವಿಜಯಲಕ್ಷ್ಮಿಸಿಂಗ್, ಮಗ ಆದಿತ್ಯ ಮಗಳು ರಿಷಿಕಾ ಅವರೊಂದಿಗೆ  ರಾಜೇಂದ್ರಸಿಂಗ್ ಬಾಬು ಅವರು ಸಿನಿಮಾ ನಿರ್ಮಾಣ ಮತ್ತು ನಿರ್ದೇಶನದ ಮೂಲಕ ತಮ್ಮ ತಂದೆಯವರ ಮಹಾತ್ಮ ಲಾಂಛನದ ದೀಪವನ್ನು ಬೆಳಗಿಸುವ ಕಾರ್ಯವನ್ನು ಕಳೆದ ೫೦ ವರ್ಷಗಳಿಂದಲೂ ನಿರಂತರವಾಗಿ ಮುಂದುವರೆಸಿಕೊಂಡು ಬಂದಿರುವುದು ಅನನ್ಯ ಮತ್ತು ಅದ್ಭುತವೇ ಸರಿ.

ಸಮಸ್ತ ಕನ್ನಡಿಗರಿಗೆ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ  ಕುಚುಕು ಗೆಳೆತನದ ಬಗ್ಗೆ ತಿಳಿದಿದೆ. ಅದಕ್ಕಿಂತಲೂ ಅಚ್ಚರಿಯ ವಿಷಯವೆಂದರೆ ಇವರಿಬ್ಬರ ಜೊತೆ ಏಕವಚನದಲ್ಲಿ ಮಾತನಾಡಿಸುವಷ್ಟು ಸಲಿಗೆ ಇದ್ದ ಮತ್ತೊಬ ಗೆಳೆಯನೇ ರಾಜೇಂದ್ರ ಸಿಂಗ್ ಬಾಬು. ವಿಷ್ಣುವರ್ಧನ್ ಅವರ ತಂದೆ ಸಿಂಗ್ ಅವರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ  ಮತ್ತು ಮೈಸೂರಿನಲ್ಲಿ ಇಬ್ಬರ ಮನೆಯೂ ಹತ್ತಿರದಲ್ಲೇ ಇದ್ದ ಕಾರಣ  ಇಬ್ಬರ ಕುಟುಂಬಕ್ಕೂ ಬಹಳ ನಂಟಿತ್ತು. ಅದೇ ರೀತಿಯಲ್ಲಿ ಬಾಬು ಅವರ ಸಹೋದರ ಸಂಗ್ರಾಮ್ ಸಿಂಗ್ ಮತ್ತು  ಅಂಬರೀಶ್ ಸಹಪಾಠಿಗಳಾಗಿದ್ದ ಕಾರಣ,  ಅಂಬರೀಶ್ ಅಗ್ಗಾಗ್ಗೆ ಬಾಬು ಆವರ ಮನೆಗೆ ಬಂದು ಹೋಗಿ ಮಾಡುತ್ತಿದ್ದ ಕಾರಣ,   ಅವರೆಲ್ಲರೂ a brother from another mother ಎನ್ನುವಷ್ಟರ ಮಟ್ಟಿಗೆ ಹತ್ತಿರವಾಗಿದ್ದರು. ಇಂಗ್ಲೀಶ್ ಚಿತ್ರಗಳನ್ನು ನೋಡುವ ಸಲುವಾಗಿಯೇ ಮೋಟರ್ ಬೈಕಿನಲ್ಲಿ ವಿಷ್ಣು, ಬಾಬು, ಅಂಬರೀಶ್ ಮತ್ತು ಸಂಗ್ರಾಮ್ ಸಿಂಗ್ ಮೈಸೂರಿನಿಂದ ಬೆಂಗಳೂರಿಗೆ ಹೋಗಿ ಬರುವಷ್ಟರ ಮಟ್ಟಿಗಿನ ಬಂಧನದ ಗೆಳೆತನ ಅವರಲ್ಲಿತ್ತು.  ಹಾಗಾಗಿಯೇ ಬಾಬು ಅವರು ತಮ್ಮ ವೃತ್ತಿ ಜೀವನ ಆರಂಭದಲ್ಲಿಯೇ ಮೊದಲು ಅಂಬರೀಶ್ ಮತ್ತು ವಿಷ್ಣುವರ್ಧನ್ ಅವರನ್ನು ತಮ್ಮ ಪ್ರಮುಖ ಚಿತ್ರಗಳಲ್ಲಿ ನಿರ್ದೇಶಿಸಿ ಅವರನ್ನು ಪ್ರಮುಖ ತಾರೆಯರನ್ನಾಗಿಸುವುದರಲ್ಲಿ ಬಾಬು ಆವರ ಕೊಡುಗೆ ಅಪಾರವಾಗಿದೆ ಎಂದರೂ ತಪ್ಪಾಗದು.

ವಿಷ್ಣುವರ್ಧನ್, ಭಾರತಿ ಮತ್ತು ಅಂಬರೀಶ್ ಅಭಿಯಿಸಿದ 1977ರಲ್ಲಿ ಬಿಡುಗಡೆಯಾಗಿ ಅತ್ಯಂತ ಯಶಸ್ವಿಯದ ಮಕ್ಕಳ ಸಾಹಸ ಚಿತ್ರ ನಾಗರಹೊಳೆಯನ್ನು ಬಾಬು ನಿರ್ಮಿಸಿ ನಿರ್ದೇಶಿಸಿದ್ದರು. 1984ರಲ್ಲಿ ನಿರ್ದೇಶಿಸಿದ ಬಂಧನ ಮತ್ತು 1990ರ ಮುತ್ತಿನ ಹಾರ ವಿಷ್ಣುವರ್ಧನ್ ಅವರ ಸೂಪರ್ ಸ್ಟಾರ್ ಇಮೇಜ್  ಗಟ್ಟಿಗೊಳಿಸಲು ಸಹಾಯ ಮಾಡಿದರೆ, ಈಗಾಗಲೇ ತಿಳಿಸಿದಂತೆ 1981ರಲ್ಲಿ ಬಿಡುಗಡೆಯಾದ ಅಂತ ಸಿನಿಮಾ ಅಂಬರೀಶ್ ಅವರನ್ನು ಪೂರ್ಣ ಪ್ರಮಾಣದ ನಾಯಕನನ್ನಾಗಿಸಿದ್ದಲ್ಲದೇ ಅವರಿಗೆ ರೆಬೆಲ್ ಸ್ಟಾರ್ ಪಟ್ಟವನ್ನು ತಂದು ಕೊಟ್ಟಿತು.

ಕನ್ನಡ ಚಿತ್ರರಂಗದಲ್ಲಿ ಪುಟ್ಟಣ್ಣ ಕಣಗಾಲ್, ಸಿದ್ಧಲಿಂಗಯ್ಯ, ದೊರೈ-ಭಗವಾನ್ ಅವರಂತೆ, ಕನ್ನಡದ ಪ್ರಸಿದ್ಧ ಕಾದಂಬರಿಗಳನ್ನು ಸುಂದರ ಚಲನಚಿತ್ರಗಳಾಗಿ ಮಾರ್ಪಡಿಸಿದ ಕಾರ್ಯದಲ್ಲಿ ರಾಜೇಂದ್ರ ಸಿಂಗ್ ಬಾಬು ಅವರ ಪಾಲಿದ್ದು  ಕನ್ನಡ ಚಿತ್ರರಂಗದಲ್ಲಿ ಅನೇಕ ಹೊಸತನಗಳಿಗೆ ಕಾರಣೀಭೂತರಾಗಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಭಾರತದಲ್ಲಿ  ಮಕ್ಕಳ ಸಾಹಸಮಯ ಚಿತ್ರವನ್ನು ಮಾಡಲು ಯಾರೂ ಪ್ರಯತ್ನಿಸಿರದ ಸಮಯದಲ್ಲಿಯೇ ನಾಗರಹೊಳೆಯನ್ನು ನಿರ್ಮಿಸಿ ನಿರ್ದೇಶನ ಮಾಡಿದ್ದರು. ಆ ಚಿತ್ರದ  ಬಣ್ಣ ಶ್ರೇಣೀಕರಣವನ್ನು ಅಧ್ಯಯನ ಮಾಡಲು ನಾಗರಹೊಳೆಯ ರೀಲ್ ಅನ್ನು  ಚೆನ್ನೈನಲ್ಲಿರುವ ಜೆಮಿನಿ ಕಲರ್ ಲ್ಯಾಬ್ ಅದರ ಸಂಗ್ರಹಿಸಿದ ವಿಷಯ  ಹಾಲಿವುಡ್ ನ ವಾರ್ನರ್ ಬ್ರದರ್ಸ್‌ನ ಗಮನ ಸೆಳೆದು ಅವರು ಬಾಬು ಅವರನ್ನು ತಮ್ಮ ಹಾಂಗ್ ಕಾಂಗ್‌ನ ಸ್ಟುಡಿಯೋಗೆ ಕರೆಸಿಕೊಂಡು ಸುಮಾರು ಎರಡು ತಿಂಗಳು ಕಾಲ ಅವರಿಗಾಗಿ ಕೆಲಸವನ್ನು ನೀಡಿತ್ತು.

1980 ರ ದಶಕದಲ್ಲಿ, ಕನ್ನಡ ವಾರಪತ್ರಿಕೆ ಸುಧಾದಲ್ಲಿ ಎಚ್.ಕೆ. ಅನಂತ ರಾವ್ ಅವರ ಅಂತ ಕಾದಂಬರಿ ಧಾರಾವಾಹಿಯಾಗಿ ಪ್ರಕಟವಾಗಿ ಬಹಳ ಪ್ರಸಿದ್ದಿ ಪಡೆದದ್ದನ್ನು ಗಮನಿಸಿದ ಬಾಬು ಆದನ್ನು ಡಾ. ರಾಜ್‌ಕುಮಾರ್ ಅವರಿಗಾಗಿ ಚಿತ್ರ ಮಾಡಲು ಬಯಸಿದರಾದರೂ, ರಾಜಕುಮಾರ್ ಅವರ ವ್ಯಕ್ತಿತ್ವಕ್ಕೆ  ಪಾತ್ರ ಅವರಿಗೆ ಸರಿ ಹೊಂದದೇ ಹೋದ ಕಾರಣ ವಿಷ್ಣುವರ್ಧನ್ ಮತ್ತು ರಜನಿಕಾಂತ್ ಸಹಾ ನಟಿಸಲು ಇಚ್ಚಿಸಿದ್ದರೂ ಅವರೆಲ್ಲರೂ ಆದಾಗಲೇ ಸೂಪರ್ ಸ್ಟಾರ್ ಗಳಾಗಿದ್ದರಿಂದ  ಅದುವರೆಗೂ ಯಾವುದೇ ಸ್ಟಾರ್‌ಡಮ್  ಪಡೆಯದಿದೇ ಸಣ್ಣ ಪುಟ್ಟ ಪೋಷಕ ಪಾತ್ರ ಮತ್ತು ಖಳನಾಯಕನ ಪಾತ್ರವನ್ನು ವಹಿಸುತ್ತಿದ್ದ ಅಂಬರೀಷ್ ಅವರನ್ನು ಆರಿಸಿಕೊಂಡು ಮಾಡಿದ ಚಿತ್ರ ಮುಂದೆ ಇತಿಹಾಸವನ್ನು ನಿರ್ಮಿಸಿತು.

1969ರ ಅಮೇರಿಕನ್ ಚಲನಚಿತ್ರ ಮೆಕೆನ್ನಾಸ್ ಗೋಲ್ಡ್ ನಿಂದ ಸ್ಫೂರ್ತಿ ಪಡೆದ ಬಾಬು ಅವರು 1984ರಲ್ಲಿ ಗಂಡ ಭೇರುಂಡ ಸಿನಿಮಾವನ್ನು ನಟ ವಜ್ರಮುನಿ ಅವರ ನಿರ್ಮಾಣದಲ್ಲಿ ಎಂಬ ಚಿತ್ರವನ್ನು ಅಂಬರೀಷ್, ಶಂಕರ್ ನಾಗ್ ಮತ್ತು ಶ್ರೀನಾಥ್ ಅವರೊಂದಿಗೆ ನಿರ್ದೇಶಿಸಿದ ಚಿತ್ರ ತಾಂತ್ರಿಕವಾಗಿ ಅದ್ಭುತ ಎಂದು ಪರಿಗಣಿಸಲ್ಪಟ್ಟು ಅಂದಿನ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಗಳು ಮತ್ತು ಖ್ಯಾತ ನಟರಾಗಿದ್ದಂತಹ ಶ್ರೀ  ಎನ್.ಟಿ. ರಾಮರಾವ್  ಮೆಚ್ಚುಗೆ ಪಡೆದು, ಅವರನ್ನು ಭೇಟಿಯಾದಾಗ, ಅವರು ಎದ್ದು ನಿಂತು ನನಗೆ ನಮಸ್ಕರಿಸಿ, ಅಂತಹ ಕಠಿಣ ಚಿತ್ರದಲ್ಲಿ ನಾನು ನಟಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರಂತೆ. ಇದೇ ಚಿತ್ರ ಹಿಂದೀ ನಟ ಧರ್ಮೇಂದ್ರ ಅವರ ಗಮನ ಸೆಳೆದಿದ್ದು ನಂತರ ಖಜಾನ ಚಿತ್ರವಾಗಿತ್ತು. 1981ರಲ್ಲಿ ಅರ್ಜುನ್ ಸರ್ಜಾ ಅವರೊಂದಿಗೆ ನಿರ್ದೇಶಿಸಿದ ಮಕ್ಕಳ ಚಿತ್ರ ಸಿಂಹದ ಮರಿ ಸೈನ್ಯ ಜಯಾ ಬಚ್ಚನ್ ಅವರ ಗಮನ ಸೆಳೆದು ಅದನ್ನು ಹಿಂದಿಗೆ ಡಬ್ ಮಾಡಿ ಸುಮಾರು 3 ಕೋಟಿ ರೂ. ವ್ಯವಹಾರವನ್ನು ಗಳಿಸಿದ್ದಲ್ಲದೇ, ಪ್ಯಾರಿಸ್ ಮತ್ತು ಮಾಸ್ಕೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಆಯ್ಕೆಯಾಗಿತ್ತು.

1984ರಲ್ಲಿ ಬಂಧನ ಚಿತ್ರಕ್ಕಾಗಿ, ಮೊದಲು ಅಂಬರೀಶ್ ಅವರನ್ನು ವಿಚಾರಿಸಿದರೂ, ಅವರ ಡೇಟ್ಸ್  ಇರದಿದ್ದ ಕಾರಣ, ವಿಷ್ಣುವರ್ಧನ್ ಅವರನ್ನು ಆಯ್ಕೆ ಮಾಡಿ, ನಾಯಕಿಯ ಹುಡುಕಾಟದಲ್ಲಿದ್ದಾಗ. ಅವರ ತಂಗಿ ವಿಜಯಸಿಂಗ್ ಜೊತೆ ಬಂದಿದ್ದ ಸ್ನೇಹಿತೆಯನ್ನು ಲಿಫ್ಟ್‌ನಲ್ಲಿ ನೋಡಿ ಅಕೆಯೇ ಬಂಧನದ ನಂದಿನಿ ಪಾತ್ರಕ್ಕೆ ಸೂಕ್ತ ಎನಿಸಿ ಸುಹಾಸಿನಿವರನ್ನು ಆಯ್ಕೆ ಮಾಡಿ ಅವರ ಭಾವ ಜೈಜಗದೀಶ್ ಅವರೊಂದಿಗಿನ  ಚಿತ್ರಕ್ಕೆ ಬಂಧನ ಕನ್ನಡ ಚಿತ್ರರಂಗದಲ್ಲಿ ಹೊಸಾ ಇತಿಹಾಸ ನಿರ್ಮಿಸಿತ್ತು.

ಬಂಧನದಂತಹ  ಅದ್ಭುತ ಯಶಸ್ಸಿನ ನಂತರ, ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಅವರ ಅಭಿಮಾನಿಗಳ ನಡುವಿನ ಘರ್ಷಣೆಯಿಂದ ಬೇಸತ್ತ ಬಾಬು ಸುಮಾರು ಐದು ವರ್ಷಗಳ ಕಾಲ ಮುಂಬೈಗೆ ಸ್ಥಳಾಂತರಗೊಂಡಾಗ ಮುಂಬೈನಲ್ಲಿ ಅಮ್ಜದ್ ಖಾನ್, ಸಂಜಯ್ ದತ್, ಪರ್ವೀನ್ ಬಾಬಿ, ರೇಖಾ, ಅಮಿತಾಬ್ ಬಚ್ಚನ್, ಧರ್ಮೇಂದ್ರ ಮತ್ತು ದಿಲೀಪ್ ಕುಮಾರ್ ಅವರೊಂದಿಗೆ ಮೇರಿ ಆವಾಜ್ ಸುನೋ (1981), ಮೇರಾ ಫೈಸ್ಲಾ (1984), ಏಕ್ ಸೆ ಭಲೇ ದೋ (1985) ಮತ್ತು ಆಗ್ ಕಾ ದರ್ಯಾ (1990)  ಮುಂತಾದ ಹಿಂದಿ ಚಲನಚಿತ್ರಗಳನ್ನು ನಿರ್ದೇಶಿದರು.

ವಿಷ್ಣುವರ್ಧನ್ ಮತ್ತು ಸುಹಾಸಿನಿ ಯಶಸ್ಫಿ ಜೋಡಿಯೊಂದಿಗೆ ಮತ್ತೊಮ್ಮೆ ಚಿತ್ರ ಮಾಡಬೇಕೆಂಬ ಅಭಿಮಾನಿಗಳ ಆಸೆಯನ್ನು ಈಡೇರಿಸುವ ಸಲುವಾಗಿಯೇ V. M. ಜೋಶಿಯವರ ಯುದ್ಧದ ಕಥೆಯಾದ ಮುತ್ತಿನಹಾರ ಚಿತ್ರದ ಮೂಲಕ ಬಾಬು ಕನ್ನಡಕ್ಕೆ ಮತ್ತೆ ಮರಳಿ ಹಲವಾರು ಅಡೆತಡೆಗಳ ನಡುವೆಯೇ ಹಿಮಾಚ್ಚಾದಿತ  ಗಡಿಗಳಲ್ಲಿ ಚಿತ್ರೀಕರಿಸಲಾದ ಮಹತ್ವಾಕಾಂಕ್ಷೆಯ ಚಿತ್ರವು ಕ್ಲಾಸ್ ಚಿತ್ರರಸಿಕರ ಮನ ಗೆಲ್ಲುವುದರಲ್ಲಿ ಸಫಲವಾಯಿತಾದರೂ, ಮಾಸ್ ಜನರಲ್ಲಿ ಅಷ್ಟೋಂದು ಸಾಧನೆ ಮಾಡದೇ ಆರ್ಥಿಕವಾಗಿ ಅಷ್ಟೇನೂ ಯಶಸ್ವಿಯಾಗದೇ ಹೋದರೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅತ್ಯಂತ ಉತ್ತಮ ಚಿತ್ರ ಅಲ್ಲದೇ ಹತ್ತು ಹಲವಾರು ಪ್ರಶಸ್ತಿಗಳನ್ನು ಬಾಚಿ ಕೊಂಡಿತು. ನಿರಂತರವಾಗಿ ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಲೇ, ಕನ್ನಡದಲ್ಲಿ ಸುಮಾರು 35 ಚಿತ್ರಗಳು, ಹಿಂದಿಯಲ್ಲಿ8, ತೆಲುಗಿನಲ್ಲಿ7 ಚಿತ್ರಗಳನ್ನು ಬಾಬು ಮಾಡಿರುವುದಲ್ಲದೇ,  ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ಮತ್ತು ಆಸ್ಕರ್ ನಾಮನಿರ್ದೇಶನಗಳಿಗಾಗಿ ಭಾರತೀಯ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುವ ಮೂಲಕ ಚಿತ್ರರಂಗದ ಆಲ್ರೌಂಡರ್ ಆಗಿದ್ದಾರೆ ಎಂದರೂ ಆತಿಶಯವಾಗದು.

ಹೀಗೆಂದ ಮಾತ್ರಕ್ಕೆ ಎಸ್. ವಿ. ರಾಜೇಂದ್ರಸಿಂಗ್ ಬಾಬು ಸಿನಿಮಾರಂಗದಲ್ಲಿ ಅತ್ಯಂತ ಯಶಸ್ಸನ್ನೇ ನೋಡಿ ಸೋಲಿಲ್ಲದ ಸರದಾರೇ ಎಂದರೆ ಅದು ನಿಶ್ಚಿತವಾಗಿಯೂ ತಪ್ಪಾಗುತ್ತದೆ. ಮುತ್ತಿನಹಾರದಂತಹ ಅದ್ಧೂರಿ ಚಿತ್ರ ಸಹಾ ಆರ್ಥಿಕವಾಗಿ ಸೋಲನ್ನು ಕಾಣುವ ಮೂಲಕ ಸಾಕಷ್ಟು ಸಂಕಷ್ಟಗಳನ್ನುಂಟು ಮಾಡಿತ್ತು ಇದರ ಜೊತೆ ಜೊತೆಯಲ್ಲೇ ತಮ್ಮ ಮಗ ಆದಿತ್ಯನನ್ನು ನಾಯಕ ನಟನಾಗಿ ಮಾಡಬೇಕೆಂದು ಮಾಡಿದ ಪ್ರಯತ್ನಗಳೆಲ್ಲವೂ ಸಹಾ ವಿಫಲವಾದರೂ, ಕಳೆದುಕೊಂಡ ಜಾಗದಲ್ಲೇ ಮತ್ತೆ ಹುಡುಕು ಎನ್ನುವಂತೆ ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು ಎಂದು ಎದೆಗುಂದದೆ ಹಾಸ್ಯ ಚಿತ್ರಗಳತ್ತ ಮುಖ ಮಾಡಿ, ಕುರಿಗಳು ಸಾರ್ ಕುರಿಗಳು, ಕೋತಿಗಳು ಸಾರ್ ಕೋತಿಗಳು, ಕತ್ತೆಗಳು ಸಾರ್ ಕತ್ತೆಗಳು ಚಿತ್ರಗಳ ಮೂಲಕ ರಮೇಶ್ ಅರವಿಂದ್, ಎಸ್.ನಾರಾಯಣ್, ಮೋಹನ್, ಕೋಮಲ್‌ ಕುಮಾರ್ ಮುಂತಾದ ಕಲಾವಿದರುಗಳಿಗೂ ಸಹಾ ಮಾನ್ಯತೆ ತಂದು ಕೊಟ್ಟಿದ್ದಲ್ಲದೇ ಆರ್ಥಿಕವಾಗಿ ಸ್ವಲ್ಪ ಚೇತರಿಸಿಕೊಳ್ಳಲು ಸಹಕಾರಿಯಾಗಿತು.  ಕಾದಂಬರಿ ಆಧಾರಿತ ಸಾಂಸಾರಿಕ ಚಿತ್ರಗಳು, ಮಕ್ಕಳ ಚಿತ್ರಗಳು, ಬಾಂಡ್ ಶೈಲಿಯ ಚಿತ್ರಗಳೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಬಾಬು ಅದೇಕೋ ಏನೋ?  ಪೌರಾಣಿಕ ಚಿತ್ರಗಳತ್ತ ಚಿತ್ತ ಹರಿಸಿರದೇ ಇರುವುದು ಆಚ್ಚರಿಯ ಸಂಗತಿಯಾಗಿದೆ.

ರಾಜೇಂದ್ರ ಸಿಂಗ್ ಬಾಬು ತಮ್ಮ ನೆಚ್ಚಿನ ಗೆಳೆಯ ಮತ್ತು ಕನ್ನಡದ ಶ್ರೇಷ್ಠ ನಟ ಶ್ರೀ ವಿಷ್ಣುವರ್ಧನ್ ಅವರ ನೆನಪಿನಲ್ಲಿ ನೆನಪಿನ ಮುತ್ತಿನ ಹಾರ ಎಂಬ ಪುಸ್ತಕವನ್ನು ಬರೆದಿದ್ದು, ಆ ಪುಸ್ತಕದಲ್ಲಿ ವಿಷ್ಣುವರ್ಧನ್ ಅವರೊಂದಿಗೆ ತಮ್ಮ ಹಲವಾರು ಅನುಭವಗಳು ಮತ್ತು  ವಿಶೇಷ ಬಂಧವನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ವಿಷ್ಣುವರ್ಧನ್ ಮತ್ತು ಡಾ. ರಾಜ್‌ಕುಮಾರ್  ಇಬ್ಬರನ್ನೂ ಒಂದೇ ಚಿತ್ರದಲ್ಲಿ ನಿರ್ದೇಶಿಸುವ ಅವರ ಕನಸು ನನಸಗಾದೇ ಹೋದದ್ದಕ್ಕಾಗಿ ಬೇಸರವನ್ನೂ ಆ ಪುಸ್ತಕದಲ್ಲಿ ವ್ಯಕ್ತ ಪಡಿಸಿದ್ದಾರೆ. ಹೀಗೆ 50 ವರ್ಷಗಳ ಕಾಲ ನಿರಂತರವಾಗಿ ಚಲನಚಿತ್ರ ವೃತ್ತಿಜೀವನವನ್ನು ಆಚರಿಸಲು ಅವರಿಗಾಗಿಯೇ  ಒಂದು ಚಿತ್ರೋತ್ಸವವನ್ನು ಆಯೋಜಿಸಲಾಗಿರುವುದು ಸಹಾ ನಿಜಕ್ಕೂ ಶ್ಲಾಘನೀಯವಾದ ಗೌರವವಾಗಿದೆ. ಹೀಗೆ ಕನ್ನಡ ಚಿತ್ರರಂಗದ ಎಲ್ಲಾ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ಅರ್ಪಿಸಿಕೊಂಡಿರುವ  ಎಸ್. ವಿ. ರಾಜೇಂದ್ರಸಿಂಗ್ ಬಾಬು ಅವರು ನಿಸ್ಸಂದೇಹವಾಗಿಯೂ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a comment