ಕನ್ನಡಿಗರಿಗೆ ಭಾಷಾಭಿಮಾನ ಸ್ವಲ್ಪ ಕಡಿಮೆ ಎನ್ನುವುದು ಬಹುತೇಕರ ಅಭಿಪ್ರಾಯ. ಆದರೆ ಅದೇ ನವೆಂಬರ್ ತಿಂಗಳು ಬರುವ ಎರಡು ದಿನಗಳ ಮಂಚೆಯೇ ಬಿಳಿ ಪಂಚೆ, ಬಿಳೀ ಅಂಗಿ ಹೆಗಲು ಮೇಲೆ ಹಾಕಿಕೊಳ್ಳಲು ಹಳದಿ ಕೆಂಪು ಬಣ್ಣದ ಶಾಲುಗಳನ್ನು ಒಗೆದು ಗರಿ ಗರಿ ಇಸ್ತ್ರೀ ಮಾಡಿಸಿ ಇಡೀ ನವೆಂಬರ್ ಪೂರ್ತಿ ಕನ್ನಡ ಭಾಷೆ, ನೆಲ ಜಲಗಳ ಬಗ್ಗೆ ಅಬ್ಬಿರಿದು ಬೊಬ್ಬಿರಿದು ನವೆಂಬರ್ 30ರ ರಾತ್ರಿ ಬರುತ್ತಿದ್ದಂತೆಯೇ ಕುಂಭಕರ್ಣನಂತೆ ನಿದ್ರೆಗೆ ಜಾರಿ ಇನ್ನು ಏಳೋದೇ ಮುಂದಿನ ವರ್ಷ ನವೆಂಬರ್ ತಿಂಗಳಿಗೆ ಎನ್ನುವುದೇ ಎಲ್ಲರ ಆರೋಪ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಕಲವು ಕನ್ನಡಿಗರು ಬಹಳ ವೈವಿಧ್ಯಮಯವಾಗಿ ಮತ್ತು ಅರ್ಥಪೂರ್ಣವಾಗಿ ಸದ್ದಿಲ್ಲದೇ ಎಲೆಮರೆಕಾಯಿಯಂತೆ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮಿಸುವವರ ಪೈಕಿ ಗೆಳೆಯ ಸುನೀಲ್ ಹಳೆಯೂರು ಸಹಾ ಒಬ್ಬರಾಗಿದ್ದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.
ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನ ಹಳೆಯೂರು ಗ್ರಾಮದ ಸಂಪ್ರದಾಯಸ್ಥ ಕುಟುಂಬದ ಶ್ರೀ ಹಿರಣ್ಣಯ್ಯ ಮತ್ತು ಶ್ರೀಮತಿ ಪ್ರಭಾವತಿ ದಂಪತಿಗಳ ಸುಪುತ್ರನಾಗಿ 1977ರ ಜೂನ್ 11ರಂದು ಸುನೀಲ್ ಅವರ ಜನನವಾಗುತ್ತದೆ. ಊರು ನೋಡಿ ಸಂಬಂಧ ಬೆಳೆಸು ಎನ್ನುವ ಮಾತಿನಂತೆ ಕನ್ನಡದ ಹಿರಿಯ ಲೇಖಕರೂ, ಅಂಕಣಕಾರರೂ ಮತ್ತು ಅನುವಾದಕರಾಗಿದ್ದಂತಹ H.S. ಕೃಷ್ಣಸ್ವಾಮಿ ಎಲ್ಲರ ಪ್ರೀತಿಯ ಪ್ರೊ. ಎಚ್ಚೆಸ್ಕೆ ಅವರೂ ಸಹಾ ಇದೇ ಹಳೆಯೂರಿನವರೇ. ಎಚ್ಚೆಸ್ಕೆಯವರು ಸರಳ, ಸಂಕ್ಷಿಪ್ತ, ಮತ್ತು ಸುಲಭವಾಗಿ ಸಾಮಾನ್ಯ ಜನರಿಗೂ ಅರ್ಥವಾಗುವ ಶೈಲಿಯಲ್ಲಿ ವಾಣಿಜ್ಯ, ವಿಮರ್ಶೆ, ಮತ್ತು ವ್ಯಕ್ತಿಚಿತ್ರಣ ಸೇರಿದಂತೆ ಹಲವು ವಿಷಯಗಳ ಮೇಲೆ ಬರೆಯುವ ಮೂಲಕ ಪ್ರಖ್ಯಾತರಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು.
ಬಹುಶಃ ಎಚ್ಚೆಸ್ಕೆ ಅವರ ಪ್ರಭಾವ ಸುನೀಲ್ ಅವರ ಮೇಲೆ ಸಾಕಷ್ಟಿದೆ ಎನ್ನುವುದಕ್ಕೆ ಅವರಿಬ್ಬರ ವ್ಯಕ್ತಿತ್ವ ಮತ್ತು ಆಸಕ್ತಿಗಳೇ ಸಾಕ್ಷಿಯಾಗಿವೆ ಎಂದರೂ ತಪ್ಪಾಗದು. ತಮ್ಮ ಹುಟ್ಟೂರಿನಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಉನ್ನತ ದರ್ಜೆಯಲ್ಲಿ ಮುಗಿಸಿದ ಸುನೀಲ್ ನಂತರ ಕೆ ಆರ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿಕೊಂಡು ತಮ್ಮ ಬಿ.ಕಾಂ ಪದವಿಯನ್ನು ಪಡೆಯುತ್ತಾರೆ. ಸುಮಾರು 25-30 ವರ್ಷಗಳ ಹಿಂದೆ ಉದ್ಯೋಗವನ್ನು ಅರಸಿಕೊಂಡು ಬೆಂಗಳೂರಿಗೆ ಬಂದು ಪ್ರಸ್ತುತ ಬಸವೇಶ್ವರನಗರ ನಿವಾಸಿಯಾಗಿದ್ದಾರೆ. ಚಿಕ್ಕವಯಸ್ಸಿನಿಂದಲೂ ಓದಿನ ಜೊತೆ ಕಲೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಇದ್ದ ಸುನೀಲ್ ಅವರು ಶಾಲೆಯಲ್ಲಿನ ಚರ್ಚಾ ಸ್ಪರ್ಧೆ, ಪ್ರಬಂಧ, ಆಶುಭಾಷಣ, ನಾಟಕ ಹೀಗೆ ಎಲ್ಲದರಲ್ಲೂ ಅಸಕ್ತಿ. ಅದೇ ರೀತಿಯಲ್ಲಿ ಕನ್ನಡ ಬಹುತೇಕ ಎಲ್ಲಾ ಸಾಹಿತಿಗಳ ಪುಸ್ತಕಗಳನ್ನೂ ಅರೆದು ಕುಡಿದಿರುವಂತಹವರು.
ಅದರಲ್ಲೂ ಇತ್ತೀಚೆಗಷ್ಟೇ ನಮ್ಮೆಲ್ಲರನ್ನೂ ಭೌತಿಕವಾಗಿ ಅಗಲಿದ ಶ್ರೀ ಎಸ್. ಎಲ್. ಭೈರಪ್ಪನವರು ಮತ್ತು ಕನ್ನಡದ ಭಗವದ್ಗೀತೇ ಎಂದೇ ಪ್ರಸಿದ್ಧವಗಿರುವ ಮಂಕುತಿಮ್ಮನ ಕಗ್ಗ ಬರೆದಿರುವ ಡಿ.ವಿ. ಗುಂಡಪ್ಪನವರು ಬಹಳ ಅಚ್ಚು ಮೆಚ್ಚಾಗಿರುವ ಕಾರಣ ಈ ಇಬ್ಬರೂ ಲೇಖಕರ ಬಹುತೇಕ ಎಲ್ಲಾ ಕೃತಿಗಳನ್ನೂ ಸುನೀಲ್ ಓದಿದ್ದಾರೆ. ಅದರಲ್ಲೂ ಕಗ್ಗದ 945 ಪದ್ಯಗಳು ಅವರಿಗೆ ಕಂಠಪಾಠವಾಗಿದ್ದು, ಬಹಳ ವರ್ಷಗಳಿಂದ ಸಮಾನ ಮನಸ್ಕರ ತಂಡವೊಂದನ್ನು ಕಟ್ಟಿಕೊಂಡು ಪ್ರತೀ ದಿನವೂ ವಾಟ್ಸಾಪ್ ಮೂಲಕ ದಿನಕ್ಕೊಂದು ಕಗ್ಗ ಎನ್ನುವಂತೆ ಕಗ್ಗದ ವಾಚನ ಮತ್ತು ವ್ಯಾಖ್ಯಾನವನ್ನು ಮಾಡಿಕೊಂಡು ಬರುತ್ತಿದ್ದು ಕಗ್ಗ ಸುನೀಲ್ ಎಂದು ಪ್ರಸಿದ್ಧಿಯಾಗಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ.
ಪ್ರ
ಸ್ತುತ ವೃತ್ತಿಯಾಗಿ ಬೆಂಗಳೂರಿನ ಖಾಸಗಿ ಜೀವವಿಮಾ ಕಂಪನಿಯಲ್ಲಿ ಹಿರಿಯ ಮಾರಾಟ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರೂ, ಪ್ರವೃತ್ತಿಯಲ್ಲಿ ಕವಿ, ಲೇಖಕ ಮತ್ತು ಉತ್ತಮ ವಾಗ್ಮಿ ಎಂದೇ ಹೆಸರುವಾಸಿಯಾಗಿದ್ದಾರೆ. ಬಾಳು ಬಾಳದೇ ಬಿಡದು (ಕವನ ಸಂಕಲನ), ನವ್ಯಜೀವಿ (ಮುಕ್ತಕಗಳ ವ್ಯಾಖ್ಯಾನ) ಹಾಗೂ ಮನದೊಳಮಿಡಿತ ಇವರ ಕೃತಿಗಳಾಗಿದ್ದು, ಇವರ ಲೇಖನಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಸುನೀಲ್ ಹಳೆಯೂರು ಅವರು ಭಾವಜೀವಿ ಮತ್ತು ಸ್ನೇಹಜೀವಿಯಾಗಿರುವ ಸುನೀಲ್ ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಸಮಾಜ ಸೇವೆ, ಪರಿಸರ ಸಂರಕ್ಷಣೆಯ ಜೊತೆ ಜೊತೆಗೆ ಸಾಹಿತ್ಯದ ಆಸಕ್ತಿಯನ್ನು ಹೊಂದಿದ್ದು, ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎನ್ನುವಂತೆ ಸದಭಿರುಚಿಯ ಸದಸ್ಯರ ಗುಂಪನ್ನು ಕಟ್ಟಿಕೊಂಡು ತಾವು ಓದಿದ ಪುಸ್ತಕಗಳು ಮತ್ತು ತಾವು ಅನುಭವಿಸಿದ ಬರೆದ ಕವಿತೆಗಳನ್ನು ಅವರೊಡನೆ ಹಂಚಿಕೊಂಡು ಅವರೂ ಸಹಾ ತಮ್ಮಂತೆಯೇ ಕನ್ನಡ ಪುಸ್ತಕಗಳನ್ನು ಓದುವಂತೆಯೂ (ಅದರಲ್ಲೂ ಕೊಂಡು ಓದುವುದು) ಮತ್ತು ಕನ್ನಡದಲ್ಲಿ ಕವನವನ್ನೋ, ಬರಹಗಳನ್ನೋ ಬರೆಯುವಂತೆ ಪ್ರೇರೇಪಿಸುವುದರಲ್ಲಿ ನಿಪುಣರಾಗಿದ್ದಾರೆ.
ಕನ್ನಡದ ಹೊಸಾ ಪುಸ್ತಕ ವಿಮರ್ಶೆಗಳನ್ನು ಬರೆಯುವುದಷ್ಟೇ ಅಲ್ಲದೇ ಇನ್ನೂ ಬಿಸಿ ರಕ್ತದ ತರುಣರಾಗಿರುವ ಕಾರಣ, ದೇಶಾದ್ಯಂತ ಇರುವ ಸುಂದರವಾದ ಮತ್ತು ಇನ್ನೂ ಸಾಕಷ್ಟು ಜನರಿಗೆ ತಿಳಿಯದ ಅವಿಖ್ಯಾತ ಬೆಟ್ಟ ಗುಡ್ಡಗಳನ್ನು ಹತ್ತಿಳಿದು, ತಮ್ಮ ಚಾರಣದ ಅನುಭವಗಳ ಕುರಿತಾದ ಲೇಖನಗಳನ್ನು ತಮ್ಮದೇ ಆದ https://sunilhaleyur.com/ Website ಮತ್ತು ಹಲವಾರು ಜಾಲತಾಣದ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.
ಅರೇ ಇದೆಲ್ಲವನ್ನೂ ನಾವೂ ಸಹಾ ಮಾಡುತ್ತೇವೆ ಅದರಲ್ಲಿ ಸುನೀಲ್ ಅವರದ್ದೇನು ವಿಶೇಷ? ಎಂದರೆ, ಈಗಾಗಲೇ ಲೇಖನದ ಪೀಠಿಕೆಯಲ್ಲೇ ತಿಳಿಸಿರುವಂತೆ ಪ್ರತಿ ವರ್ಷದ ನವೆಂಬರ್ ಮಾಸದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಪುಸ್ತಕ ತಾಂಬೂಲ ಎನ್ನುವ ಅಭಿಯಾನದ ಮೂಲಕ ಕನ್ನಡ ಪುಸ್ತಕಗಳನ್ನು ಓದುವ ಆಸಕ್ತಿಯಿರುವವರನ್ನು ಬೂದುಗನ್ನಡಿಯಲ್ಲಿ ಹುಡುಕಿ, ಹುಡುಕೀ ಇಡೀ ನವೆಂಬರ್ ತಿಂಗಳು ಪ್ರತಿದಿನವೂ ಪುಸ್ತಕ ತಾಂಬೂಲ ಕೊಡುತ್ತಿರುವುದು ವಿಶೇಷವಾಗಿದ್ದು ಅದು ಅವರ ಕನ್ನಡ ಭಾಷೆ, ಕನ್ನಡದ ಲೇಖಕರು ಮತ್ತು ಕನ್ನಡ ಪುಸ್ತಕಗಳನ್ನು ಎಲ್ಲರೂ ಓದುವಂತಾಗಬೇಕು ಎನ್ನುವ ಅವರ ಸುಂದರವಾದ ಮನಸ್ಥಿತಿಗೆ ಸಾಕ್ಷಿಯಾಗಿದ್ದು ಅದು ಇತರೇ ಕನ್ನಡಿಗರಿಗೆ ಪ್ರೇರಣಾದಾಯಿ ಆಗಿದೆ ಎಂದರೂ ತಪ್ಪಾಗದು.
ಹಾಗೆ ನೋಡಿದರೆ ಸುನೀಲ್ ಹಳಿಯೂರು ವಯಕ್ತಿಕವಾಗಿ ಪರಿಯವಾದದ್ದೇ ಕೆಲವಾರಗಳ ಹಿಂದೆ ಭೈರಪ್ಪನವರ ಸ್ಮರಣಾರ್ಥ ಸಹಕಾರ ನಗರದಲ್ಲಿನ ಕಾರ್ಯಕ್ರಮವೊಂದರಲ್ಲಿ ಇವಿಬ್ಬರೂ ಒಂದೇ ವೇದಿಕೆಯನ್ನು ಹಂಚಿಕೊಂಡಾಗಲೇ. ಆ ಅಲ್ಪ ಸಮಯದಲ್ಲಿ ಅವರ ಕಗ್ಗದ ಪ್ರೀತಿ, ಭೈರಪ್ಪನವರ ಕೃತಿಗಳ ಓದು ಅವರ ವಾಗ್ಝರಿಗಳ ಕುರಿತಾಗಿ ಪರಿಚಯವಾಗಿ, ಪ್ರತೀ ದಿನವೂ ಪರಸ್ಪರ ವಾಟ್ಸಾಪ್ ಮೂಲಕ ಸಂದೇಶಗಳನ್ನು ರವಾನಿಸುವಷ್ಟರ ಮಟ್ಟಿಗೆ ಗೆಳೆತನ ಬೆಳೆದಿತ್ತಾದರೂ. ಆವರ ಈ ಪುಸ್ತಕದ ತಾಂಬೂಲದ ಬಗ್ಗೆ ಬಿಡುವಿಲ್ಲದ ಬರಹಗಾರ್ತಿ ಎಂದೇ ಪ್ರಖ್ಯಾತರಾಗಿರುವ ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರತೀ ದಿನವೂ ವೈವಿಧ್ಯಮಯ ಅಂಕಣಗಳನ್ನು ಬರೆಯುವ ಆತ್ಮೀಯರಾದ ಶ್ರೀಮತಿ ಮಾಧುರಿ ದೇಶಪಾಂಡೆಯವರ ಸುನೀಲ್ ಅವರ ಪುಸ್ತಕ ತಾಂಬೂಲ ಲೇಖನ ಓದಿದಾಗ ತಿಳಿಯಿತು.
ಆರಂಭದಲ್ಲೇ ಅರೇ, ನಾನೂ ಸಹಾ ಬಹುತೇಕ ಸಾಹಿತ್ಯಾಸಕ್ತರ ಮನೆಗಳ ಮದುವೆ ಮುಂಜಿ ಮುಂತಾದ ಶುಭಸಮಾರಂಭಗಳಲ್ಲಿ ಉಡುಗೊರೆಯ ಮೂಲಕ ನನ್ನ ಪುಸ್ತಕಗಳನ್ನು ಕೊಡುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದೇನೆ. ಅದೇ ರೀತಿಯಲ್ಲಿ ನಮ್ಮ ಆತ್ಮೀಯರೂ, ಹಿತೈಶಿಗಳು ಮತ್ತು ಕಗ್ಗ ಆಶೋಕ್ ಎಂದೇ ಪ್ರಸಿದ್ಧವಾಗಿರುವ ಇಸ್ರೋನ ನಿವೃತ್ತ ಇಂಜೀನಿಯರ್ ಅಶೋಕ್ ಕುಮಾರ್ ಅವರೂ ಸಹಾ ಅವರ ಮನೆಗೆ ಬರುವ ಪ್ರತಿಯೊಬ್ಬರಿಗೂ ಒಂದೊಂದು ಪುಸ್ತಕವನ್ನು ಉಡುಗೊರೆಯಾಗಿ ನೀಡುವುದಲ್ಲದೇ, ಅವರ ಮಕ್ಕಳ ಮದುವೆ, ಮೊಮ್ಮಕ್ಕಳ ನಾಮಕರಣಗಳಂತಹ ಶುಭ ಸಮಾರಂಭಗಳಿಗೆಂದೇ ವಿಶೇಷವಾಗಿ ಪುಸ್ತಕವನ್ನು ಬರೆದು ಹಂಚುವುದನ್ನು ನೋಡಿರುವಾಗ ಈ ಪುಸ್ತಕ ತಾಂಬೂಲದಲ್ಲಿ ಹೆಚ್ಚಿನ ವಿಶೇಷತೆ ಎನೂ? ಎಂದು ಕುತೂಹಲದಿಂದ ಲೇಖನ ಓದಿದಾಗಲೇ ಗೊತ್ತಾದದ್ದು ಅದರ ಗಮ್ಮತ್ತು.
ನವೆಂಬರ್ ತಿಂಗಳಿನ 1ನೇ ತಾರೀಖಿನಿಂದ ಹಿಡಿದು ಮೂವತ್ತರವರೆಗೆ ಪುಸ್ತಕಾಸಕ್ತರಿಗೆ ಒಂದೊಂದು ಪುಸ್ತಕಗಳನ್ನು ತಾಂಬೂಲ ರೂಪದಲ್ಲಿ ನೀಡುವುದು ಒಪ್ಪುವಂತಹ ಮಾತು. ಆದರೆ ಸುನೀಲ್ ಅವರ ಆಲೋಚನಾ ಲಹರಿ ಎಲ್ಲರಿಗಿಂತಲೂ ವಿಭಿನ್ನವಾಗಿದ್ದು ಮೊದಲ ದಿನಕ್ಕೆ ಒಂದು, ಎರಡನೇ ದಿನಕ್ಕೆ ಎರಡು. ಮೂರನೇ ದಿನಕ್ಕೆ ಮೂರು ಹೀಗೆ 30ನೇ ದಿನ 30 ಪುಸ್ತಕಗಳನ್ನು ಓದುಗರಿಗೆ ಉಡುಗೊರೆಯಾಗಿ ನೀಡುವುದನ್ನು ಕಳೆದ 9 ವರ್ಷಗಳಿಂದ ರೂಢಿಯಲ್ಲಿಟ್ಟುಕೊಂಡು ಬಂದಿದ್ದು ಕಳೆದ 9 ವರ್ಷಗಳಲ್ಲಿ ಸರಿ ಸುಮಾರು 10,000ಕ್ಕೂ ಹೆಚ್ಚು ಪುಸ್ತಕಗಳನ್ನು ತಾಂಬೂಲ ರೂಪವಾಗಿ ನೀಡಿದ್ದಾರೆ. ಇದಕ್ಕಾಗಿ ಪ್ರತೀ ತಿಂಗಳೂ ತಮ್ಮ ಆದಾಯದ ಹಣದಿಂದ ಕನಿಷ್ಠ ಮೂರು ಸಾವಿರ ರೂಪಾಯಿ ಮೌಲ್ಯದ 6-8 ಪುಸ್ತಕಗಳನ್ನು ಖರೀದಿಸಿ, ಒಟ್ಟು ಒಂದು ವರ್ಷದಲ್ಲಿ ಸುಮಾರು 50-60 ಸಾವಿರ ರೂಪಾಯಿಗಳಷ್ಟು ಪುಸ್ತಕಗಳನ್ನು ಸಂಗ್ರಹಿಸಿ ಅದನ್ನು ನವೆಂಬರ್ ತಿಂಗಳಿನಲ್ಲಿ ಕನ್ನಡ ಪುಸ್ತಕಗಳನ್ನು ತಾಂಬೂಲ ರೂಪದಲ್ಲಿ ನೀಡುತ್ತಾರೆ.
ರಾಜ್ಯೋತ್ಸವ ಸಂಧರ್ಭದ ಈ ಪುಸ್ತಕ ತಾಂಬೂಲದ ಕಲ್ಪನೆ ಏಕಾಏಕಿ ಹುಟ್ಟಿಕೊಂಡಿದ್ದಲ್ಲಾ. ಅದು ನಿಧಾನವಾಗಿ ವಿಕಸಿತಗೊಂಡಿದ್ದೇ ಒಂದು ರೋಜಕತೆ. ಆರಂಭದಲ್ಲಿ ಎಲ್ಲರಂತೆಯೇ ಯಾವುದೇ ಮದುವೆ ಮುಂಜಿ, ಗೃಹ ಪ್ರವೇಶದಂತಹ ಸಮಾರಂಭಗಳಲ್ಲಿ ಉಡುಗೊರೆಯ ರೂಪದಲ್ಲಿ ಕನ್ನಡ ಪುಸ್ತಕಗಳನ್ನು ಕೊಡುವ ಅಭ್ಯಾಸವನ್ನು ರೂಡಿಸಿಕೊಂಡ ನಂತರ, ಅವರಿಗೆ ಪರಿಚಯವಾಗುವ ಹೊಸಾ ಸ್ನೇಹಿತರಿಗೆ ಪುಸ್ತಕವನ್ನು ಉಡುಗೊರೆಯನ್ನು ನೀಡಿ ಸ್ನೇಹ ಬೆಳೆಸುವುದನ್ನು ಜಾರಿಗೆ ತಂದರು. ನಂತರ ಕನ್ನಡ ರಾಜ್ಯೋತ್ಸವವನ್ನು ವೈಶಿಷ್ಟ್ಯವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಆಲೋಚನೆ ಬಂದಾಗಲೇ ರಾಜ್ಯೋತ್ಸವದ ಮಾಸವಿಡೀ ಪುಸ್ತಕವನ್ನು ಉಡುಗೊರೆಯಾಗಿ ನೀಡಿ ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳನ್ನು ಪರಿಚಯಿಸುವ ಮಹತ್ತರವಾದ ಕಾರ್ಯವನ್ನು 2017ರಲ್ಲಿ ಆರಂಭಿಸಿದರು. ಮೊದಲ ವರ್ಷ ಕೇವಲ ದಿನಕ್ಕೊಂದು ಪುಸ್ತಕವನ್ನು ನೀಡಿದ ಸುನೀಲ್, 2018ರಿಂದ ದಿನವೂ ಅಂದಿನ ದಿನಾಂಕದಷ್ಟು ಪುಸ್ತಕಗಳನ್ನು ಕೊಡುವುದನ್ನು ರೂಢಿಸಿಕೊಂಡು ಅದನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಹಾಗಾದರೆ ಇವರು ಯಾರಿಗೆ ಪುಸ್ತಕ ತಾಂಬೂಲವನ್ನು ನೀಡುತ್ತಾರೆ? ಮತ್ತು ಅವರ ಬಳಿ ಪುಸ್ತಕ ತಾಂಬೂಲ ಪಡೆಯುವುದು ಹೇಗೆ? ಎಂಬ ಜಿಜ್ಞಾಸೆ ಮೂಡುವುದು ಸಹಜ. ಅದಕ್ಕೂ ಸಹಾ ಸುನೀಲ್ ಅವರ ಬಳಿ ಸರಳವಾದ ಪರಿಹಾರವಿದ್ದು, ತಮ್ಮ ಪರಿಚಿತ ಓದುಗರು, ಸಾಹಿತ್ಯದ ಕಾರ್ಯಕ್ರಮಗಳಲ್ಲಿ, ಪರಿಚಯವಾದವರು, ಅಷ್ಟೇ ಅಲ್ಲದೇ ಆಟೋಗಳ ಮೇಲೆ ಕನ್ನಡದಲ್ಲಿ ಸುಂದರವಾಗಿ ಬರಹಗಳನ್ನು ಬರೆಸಿಕೊಂಡು ಸದ್ದಿಲ್ಲದೇ ನಿತ್ಯ ನಿರಂತರ ಕನ್ನಡ ತಾಯಿಯ ಸೇವೆ ಮಾಡುತ್ತಿರುವ ಎಲೆಮರೆಕಾಯಿಯಂತ ಆಟೋ ಚಾಲಕರನ್ನೂ ಮಾತನಾಡಿಸಿ ಬಹಳ ಅವರ ಕನ್ನಡದ ಪ್ರೀತಿಯನ್ನು ಅಭಿನಂದಿಸಿ ಅಂತಹವರಿಗೂ ಪುಸ್ತಕ ತಾಂಬೂಲವನ್ನು ನೀಡುತ್ತಾರೆ. ಇನ್ನು ರಸ್ತೆ ಬದಿಯ ಕನ್ನಡ ಅಭಿಮಾನದ ವ್ಯಾಪಾರಿಗಳನ್ನು ಕಂಡರೂ ಅವರನ್ನೂ ಪ್ರೀತಿಯಿಂದ ಮಾತನಾಡಿಸಿ ಪುಸ್ತಕ ತಾಂಬೂಲವನ್ನು ನೀಡುತ್ತಾರೆ.
ಹೆಸರಾಂತ ಸಾಹಿತಗಳಾದ ಪ್ರೊ. ದೊಡ್ಡರಂಗೇಗೌಡರು, ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್‌ರವರು, ಸತ್ಯೇಶ್ ಬೆಳ್ಳೂರ್‌ರವರು, ಪ್ರಖ್ಯಾತ ನಾಟಕಕಾರ ಸೇತುರಾಂ, ಕೊಕ್ಕಡ ವೆಂಕಟರಮಣ ಭಟ್ಟರು ಮುಂತಾದ ವಿದ್ವಾಂಸರುಗಳೂ ಸಹಾ ಇವರಿಂದ ಪುಸ್ತಕ ತಾಂಬೂಲವನ್ನು ಪಡೆದಿರುವ ಮಹನೀಯರ ಸಾಲಿಗೆ ಸೇರುತ್ತಾರೆ. ಇನ್ನು ಸಾಮಾಜಿಕ ಜಾಲತಾಣ, ವಿಜಯ ಕರ್ನಾಟಕ ಮತ್ತು ವಿಶ್ವವಾಣಿಯ ಖ್ಯಾತ ಅಂಕಣಕಾರರಾದ ಅಮೇರಿಕಾದಲ್ಲಿರುವ ಶ್ರೀವತ್ಸ ಜೋಶಿಯವರು ಕೂಡ ಇವರ ಕಾರ್ಯವನ್ನು ಮೆಚ್ಚಿ ತಮ್ಮ ಅಂಕಣದಲ್ಲಿ ಇವರ ಬಗ್ಗೆ ಬರಹವನ್ನು ಬರೆಯುವ ಮೂಲಕ ಸುನೀಲ್ ಅವರನ್ನು ವಿಶ್ವವಿಖ್ಯಾತರನ್ನಾಗಿಸಿದ್ದಾರೆ. ಹೀಗೆ ಸುನೀಲ್ ಅವರಿಂದ ಪುಸ್ತಕ ತಾಂಬೂಲವನ್ನು ಪಡೆಯಲು ಪರಿಚಿತರೇ ಆಗಬೇಕೆಂದಿಲ್ಲ. ಕನ್ನಡ ಪುಸ್ತಕವನ್ನು ಓದುವ ಆಸಕ್ತಿ ತೋರುವವರು ರಸ್ತೆಯಲ್ಲಿ ಕಂಡರೂ ಸಾಕು ಅವರ ಪರಿಚಯ ಮಾಡಿಕೊಂಡು ಅಂತಹವರಿಗೂ ಸಹಾ ಪುಸ್ತಕಗಳನ್ನು ಕೊಡುತ್ತಾರೆ.
ಡಾ. ದೊಡ್ಡರಂಗೇಗೌಡರಿಗೆ ಪುಸ್ತಕ ತಾಂಬೂಲ ನೀಡಲು ಹೋಗಿದ್ದಾಗ ಈ ಹಿಂದೆ ಅಪ್ಪಟ ಕನ್ನಡಿಗರು, ಬರಹಗಾರರು ಮತ್ತು ಬೆಂಗಳೂರಿನ ಮಾಜೀ ಮೇಯರ್ ಆಗಿದ್ದಂತಹ ಜಿ ನಾರಾಯಣ ಎನ್ನುವವರು ತರಕಾರಿ ಗಾಡಿಯಲ್ಲಿ ತುಂಬಿ ಪುಸ್ತಕ ಹಂಚುತ್ತಿದ್ದರು. ಅದೇ ರೀತಿ ಹಿರಿಯ ಸಾಹಿತಿಗಳಾದ ಗಳಗನಾಥರೂ ಸಹಾ ತಾವು ಬರೆದಿದ್ದ ಪುಸ್ತಕಗಳ ಜೊತೆ ಇತರೇ ಲೇಖಕರ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ಮನೆ ಮನೆಗೆ ಹೋಗಿ ಮಾರುತ್ತಿದ್ದದ್ದನ್ನು ನೆನಪಿಸಿ, ನೀವು ಮಾಡುತ್ತಿರುವ ಕನ್ನಡ ಸೇವೆ ಅತೀ ಉತ್ತಮವಾದುದು ಎಂದು ಶ್ಲಾಘಿಸಿದ್ದಾರೆ.
ಇಂತಹ ಸತ್ಕಾರ್ಯಕ್ಕೆ ಪ್ರೋತ್ಸಾಹಿಸುವರು ಕೆಲವರಾದರೆ, ಕಾಲು ಎಳೆಯುವವರು ಹತ್ತಾರು ಜನರಿದ್ದಾರೆ. ಜೀವನದಲ್ಲಿ ಆರಂಭದಲ್ಲಿ ಅನುಮಾನ ನಂತರ ಅವಮಾನ ಅನುಭವಿಸಿದ ನಂತರವೇ ಸನ್ಮಾನ ಸಿಗುವುದು ಎಂಬುದನ್ನು ಚೆನ್ನಾಗಿ ಅರಿತಿರುವ ಸುನೀಲ್ ತಮ್ಮ ವಿರೋಧಿಗಳಿಗೂ ತಾಯಿ ಭುವನೇಶ್ವರಿ ಒಳ್ಳೆಯದನ್ನು ಮಾಡಲಿ ಎಂದು ಹಾರೈಸುವ ಭಾವ ಜೀವಿಯಾಗಿರುವುದು ಅದ್ಭುತವೇ ಸರಿ.
ಈ ರೀತಿಯಾಗಿ ಪುಸ್ತಕ ತಾಂಬೂಲವಷ್ಟೇ ಅಲ್ಲದೇ ತಮ್ಮೂರಿನ ಗ್ರಂಥಾಲಯ, ಮಂಡ್ಯದ ಸಂತೆ ಕಸಲಗೆರೆ, ಹಗರಿಬೊಮ್ಮನಹಳ್ಳಿಯ ಕಲಿಕಾರ್ಥಿ ಅಂತಹ ಅನೇಕ ಗ್ರಂಥಾಲಯಗಳಿಗೆ ಪುಸ್ತಕಳನ್ನು ನೀದಿದ್ದಾರೆ. ಇನ್ನು ತಮ್ಮ ಸ್ವಂತ ಅಧ್ಯನಕ್ಕೆಂದೇ ಸುಮಾರು 3000ಕ್ಕೂ ಹೆಚ್ಚು ಪುಸ್ತಕಗಳು ಇಟ್ಟುಕೊಂಡು ಮನೆಯೇ ಒಂದು ಮಧ್ಯಮ ಗಾತ್ರದ ಗ್ರಂಥಾಲಯವನ್ನಾಗಿಸಿದ್ದಾರೆ. ಈ ಮೂಲಕ ನೂರಾರು ಹೊಸ ಮತ್ತು ಹಳೆಯ ಸಾಹಿತಿಗಳ ಆರ್ಥಿಕ ಸಬಲೀಕರಣಕ್ಕೆ ಪರೋಕ್ಷವಾಗಿ ಕಾರಣೀಭೂತರಾಗಿದ್ದಾರೆ. ಪುಸ್ತಕ ಓದುವ ಸಂಸ್ಕೃತಿಯೇ ನಶಿಸಿಹೋಗುತ್ತಿರುವ ಈ ಕಾಲಘಟ್ಟದಲ್ಲಿ ಈ ರೀತಿಯಾಗಿ ನಿಸ್ವಾರ್ಥವಾಗಿ ಸ್ವಂತ ಹಣದಲ್ಲಿ ಪುಸ್ತಕಗಳನ್ನು ನೀಡುವ ಮೂಲಕ ಕನ್ನಡ ಸಾಹಿತ್ಯ ಸೇವೆಯನ್ನು ಮಾಡುತ್ತಿರುವ ಸುನೀಲ್ ಹಳೆಯೂರು ನಿಜಕ್ಕೂ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ
ಈ ಲೇಖನ ಬರೆಯಲು ಸ್ಪೂರ್ತಿಯಾಗಿ ಮತ್ತು ಸೂಕ್ತ ಮಾಹಿತಿಯನ್ನು ನೀಡಿದ್ದಕ್ಕಾಗಿ ಶ್ರೀಮತಿ ಮಾಧುರಿ ದೇಶಪಾಂಡೆಯವರಿಗೆ ಹೃತ್ಪೂರ್ವಕ ಧನ್ಯವಾದಗಳು