ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಲು ಅಥವಾ ಮನೆಯಿಂದ ಕಛೇರಿಗೆ ಹೋಗಲು ಇಂದು ಬಹುತೇಕರು ಸಾರ್ವಜನಿಕ ಸಾರಿಗೆ ಬಳಸುವ ಬದಲು ಕ್ಯಾಬ್ ಇಲ್ಲವೇ ಟ್ರಾವೆಲ್ಸ್ ಗಳ ಮೂಲಕ ಕಾರುಗಳನ್ನು ಬಾಡಿಗೆ ಪಡೆದು ಪ್ರಯಾಣಿಸುವುದು ಇತ್ತೀಚಿಗೆ ಸರ್ವೇ ಸಾಮಾನ್ಯವಾಗಿದೆ. ಇಂತಹವರಿಗೆ ಅನುಕೂಲವಾಗಲೆಂದೇ ಇಂದು ನೂರಾರು ಟ್ರಾವೆಲ್ಸ್ ಕಂಪನಿಗಳು ಇದ್ದು, ಅಂತಹ ಟ್ರಾವೆಲ್ಸ್ ನಡೆಸಲು ಲಕ್ಷಾಂತರ ಹಣ ಬೇಕಾಗುತ್ತದೆ. ಆದರೆ ಕೋಲಾರದಿಂದ ಉದ್ಯೋಗವನ್ನರಸಿ ಬೆಂಗಳೂರಿಗೆ ಬರಿಗೈಯಲ್ಲಿ ಬಂದ ಚಂದ್ರಶೇಖರ್ ಬಾಬು ಕೆ.ಎಂ. ಎಂಬ ತರುಣ ಇಂದು ದೇಶಾದ್ಯಂತ ತನ್ನದೇ ಆದ ವಿಶಾಲವಾದ ಟ್ರಾವೆಲ್ಸ್ ಕಂಪನಿಯೊಂದನ್ನು ಕಟ್ಟಿರುವ ರೋಚಕತೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.
ಪ್ರಯಾಣ ಅನ್ನುವುದು ಇಂದು ಪ್ರತಿಯೊಬ್ಬರ ಜೀವನದ ಒಂದು ಭಾಗವಾಗಿ ಹೋಗಿದೆ. ಹಾಗಾಗಿ ಪ್ರಸ್ತುತ ದಿನಗಳಲ್ಲಿ ಪ್ರವಾಸೋದ್ಯಮವು ಪ್ರಪಂಚದಾದ್ಯಂತ ಬಹಳ ದೊಡ್ಡ ಉದ್ಯಮವಾಗಿ ಬೆಳೆದಿದೆ. ತತ್ಪರಿಣಾಮ ಪ್ರವಾಸದ ಈ ಉದ್ಯಮದಲ್ಲಿ ಸಾಕಷ್ಟು ಸ್ಪರ್ಧೆ ಏರ್ಪಟ್ಟಿದೆ. ಈ ಸ್ಪರ್ಧೆಯ ಯುಗದಲ್ಲಿ ಯಾರು ಕೊಟ್ಟ ಕಾಸಿಗೆ ಮೋಸವಾಗದೇ ಇರುವಂತಹ ಸೇವೆಯನ್ನು ಕೊಡುತ್ತಾರೋ ಅಂತಹವರಿಗೇ ಇಂದು ಕಾಲ ಎಂಬುದನ್ನು ಸಣ್ಣ ವಯಸ್ಸಿನಲ್ಲಿಯೇ ಅರಿತ ಕೋಲಾರದ ಕೂಳೂರು ಎಂಬ ಸಣ್ಣ ಹಳ್ಳಿಯಿಂದ ಬಂದ ಚಂದ್ರಶೇಖರ್ ಬಾಬು ಕೆ.ಎಂ ಎಂಬ ಹುಡುಗ ಧೈರ್ಯ ಮತ್ತು ಕಾರ್ಯ ದಕ್ಷತೆಯಿಂದ ಎಸ್‌ಆರ್‌ಸಿ ಟ್ರಾವೆಲ್ಸ್ ಎಂಬ ಕಂಪನಿಯನ್ನು ಕಟ್ಟಿ ನಿಲ್ಲಿಸಿರುವ ಕಥೆಯೂ ಬಹಳ ರೋಚಕವಾಗಿತ್ತು. ಎಷ್ಟು ಓದಿದರೂ ಕೆಲಸ ಇಲ್ಲಾ ಎಂದು ಮನೆಯಲ್ಲಿ ಖಾಲೀ ಪೀಲೀ ಉಂಡಾಂಡಿ ಗುಂಡರಂತೆ ಅಡ್ಡಾಡಿಕೊಂಡು ಓಡಾಡುವವರಿಗೆ ಪ್ರೇರಣಾದಾಯಿಗಳಾಗಿದ್ದಾರೆ ಎಂದರೂ ಅತಿಶಯವಾಗದು.
ಚಂದ್ರಶೇಖರ್ ತಮ್ಮ ಹಳ್ಳಿಯಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಮುಗಿಸಿ ಯಥಾ ಪ್ರಕಾರ ಅವರ ಊರಿನವರು ಮಾಡುವಂತೆಯೇ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ಸುರಕ್ಷತಾ ಸೀಟ್ ಬೆಲ್ಟ್‌ಗಳನ್ನು ತಯಾರಿಸುವ ಕಂಪನಿಯೊಂದರಲ್ಲಿ ತಮ್ಮ ಗೆಳೆಯರ ಸಹಾಯದಿಂದ ಕೆಲಸಕ್ಕೆ ಸೇರಿಕೊಂಡರು. ಅಲ್ಲಿದೆ ನಮ್ಮನೆ. ಇಲ್ಲಿ ಬಂದೆ ಸುಮ್ಮನೆ ಎನ್ನುವಂತೆ ಚಿಕ್ಕಂದನಿಂದಲೂ ದೇಶ ಸುತ್ತಿ ನೋಡು ದೂರ ದೂರದ ಊರುಗಳಿಗೆ ಪ್ರಯಾಣ ಮಾಡುವುದು ಬಹಳವಾಗಿ ಇಷ್ಟಪಡುತ್ತಿದ್ದ ಕಾರಣ, ಈಗಾಗಲೇ ನಾಡಿನಾದ್ಯಂತ ಪ್ರತಿಷ್ಠಿತ ಟ್ರಾವೆಲರ್ಸ್ ಕಂಪನಿ ಎನಿಸಿಕೊಂಡಿರುವ ಎಸ್‌ಆರ್‌ಎಸ್ ಟ್ರಾವೆಲ್ಸ್ನಲ್ಲಿ ಕಾರ್ಯನಿರ್ವಾಹಕರಾಗಿ ಸೇರಿಕೊಂಡರು.
ಎಸ್‌ಆರ್‌ಎಸ್ ಟ್ರಾವೆಲ್‌ನಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಕೆಲಸ ಮಾಡುವಷ್ಟರಲ್ಲೇ ಟ್ರಾವೆಲ್ಸ್ ಉದ್ಯಮದ ಒಳ ಹೊರಹುಗಳನ್ನು ಬಹಳ ಸೂಕ್ಷ್ಮತೆಯಿಂದ ನೋಡಿ ಅರಗಿಸಿಕೊಂಡ ಚಂದ್ರಶೇಖರ್ ಮತ್ತೊಬ್ಬರ ಕೈ ಕೆಳಗೆ ದುಡಿಯುವ ಬದಲು ತಾವೇ ಹತ್ತಾರು ಜನರಿಗೆ ಕೆಲಸ ಕೊಡುವಂತಾಗ ಬೇಕೆಂದು ನಿರ್ಧರಿಸಿ, ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಜೀವನದಲ್ಲಿ ಮಹತ್ತರವಾದ ಕಾರ್ಯವನ್ನು ಸಾಧಿಸಬೇಕು ಎಂಬ ಹಂಬಲದಿಂದ 2014ರಲ್ಲಿ 10 ಗುತ್ತಿಗೆ ಪಡೆದ ವಾಹನಗಳ ಮೂಲಕ ಎಸ್‌ಆರ್‌ಸಿ ಟ್ರಾವೆಲ್ಸ್ ಎಂಬ ಸ್ವಂತ ಕಂಪನಿಯನ್ನು ಆರಂಭಿಸಿ ಆರಂಭಿಕ ಯಶಸ್ಸಿನಿಂದ ಪ್ರೇರಿತವಾಗಿ ಮೂರೇ ತಿಂಗಳಲ್ಲಿ 40 ಗುತ್ತಿಗೆ ವಾಹನಗಳು ಅವರ ಕಂಪನಿಯ ಪರವಾಗಿ ದುಡಿಯಲು ತೊಡಗಿದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬಾರಲಿಲ್ಲ.
ಸ್ಪಷ್ಟ ಗುರಿ, ಸ್ವಾಮಿನಿಷ್ಠ ಕೆಲಸಗಾರರು ಜೊತೆಗೆ ಸ್ವಲ್ಪ ಪರಿಶ್ರಮದ ಈ ಮೂರು ಇದ್ದರೆ ಎಂತಹವರೂ ಅತೀ ಶೀಘ್ರದಲ್ಲೇ ಎತ್ತರಕ್ಕೆ ಏರುತ್ತಾರೆ ಎನ್ನುವುದಕ್ಕೆ ಜ್ವಲಂತ ಉದಾರರಣೆಯಾಗಿ ಒಂದೇ ವರ್ಷದಲ್ಲಿ ಅವರ ಬಳಿ 250 ವಾಹನಗಳು ಸೇರಿಕೊಳ್ಳುವ ಮೂಲಕ ಕೇವಲ ಬೆಂಗಳೂರು ನಗರಕ್ಕೆ ಮಾತ್ರವೇ ಸೀಮಿತವಾಗಿದ್ದ ತಮ್ಮ ಕಂಪನಿಯ ಪರಿಧಿಯನ್ನು ಭಾರಿ ಪ್ರಮಾಣದಲ್ಲಿ ವಿಸ್ತರಿಸಿ, ತಮ್ಮ ವ್ಯವಹಾರಗಳನ್ನು ದೇಶಾದ್ಯಂತ ವಿಸ್ತರಿಸಿದರು. ಬೆಂಗಳೂರು, ಚೆನೈ, ಹೈದರಾಬಾದ್, ವೆಲ್ಲೂರ್ ಹಾಗೂ ಹೊಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರ ಜತೆಗೆ ಮುಂಬೈ, ದೆಹಲಿ, ಕೋಲ್ಕತಾ, ಕೊಚ್ಚಿನ್ ಮತ್ತು ಗೋವಾದಲ್ಲೂ ತಮ್ಮ ಕಚೇರಿಗಳನ್ನು ತೆರೆದು ಈ ಎಲ್ಲ ಕಡೆಯಲ್ಲೂ ಅವರ ಎಸ್‌ಆರ್‌ಸಿ ಟ್ರಾವಲ್ಸ್ ಕಚೇರಿಗಳು ಆರಂಭವಾದವು.
ಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲಾ ಎನ್ನುವಂತೆ ಕನ್ನಡ, ತೆಲುಗು, ತಮಿಳು, ಹಿಂದಿ ಇಂಗ್ಲೀಶ್ ಅಲ್ಪ ಸ್ವಲ್ಪ ಮಳೆಯಾಳಂ ಭಾಷೆಯ ಪರಿದಯವಿದ್ದ ಚಂದ್ರಶೇಖರ್ ಅವರಿಗೆ ಈ ಭಾಷಾ ಕೋವಿದತೆಯೇ ವರವಾಗಿ ಪರಿಣಮಿಸಿ ಅದುವರೆವಿಗೂ ಕೇವಲ ಎಸ್‌ಆರ್‌ಸಿ ಟ್ರಾವಲ್ಸ್ ಎಂಬ ಹೆಸರಲ್ಲಿದ್ದ ಕಂಪನಿ ಎಸ್‌ಆರ್‌ಸಿ ಟೂರ್ಸ್ & ಟ್ರಾವಲ್ಸ್ ಎಂಬ ಹೆಸರಿನಲ್ಲಿ 2018 ರಲ್ಲಿ ಮಾರ್ಪಟ್ಟು ದೂರ ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಸರಾಂತ ಸಂಸ್ಥೆಯಾಗಿ ಬೆಳೆಯತೊಡಗಿತು. ಪ್ರವಾಸಿಗರ ಅನುಕೂಲ ಮತ್ತು ಬೇಡಿಕೆಗಳನ್ನು ಪೂರೈಸುವ ಸಲುವಾಗಿ ಮರ್ಸಿಡಿಸ್ ಬೆಂಜ್ E250, BMW 520d, ಆಡಿ A6, ಜಾಗ್ವಾರ್ Xf, ಟೊಯೋಟಾ – ಇನ್ನೋವಾ ಕ್ರಿಸ್ಟಾ, ಎಟಿಯೋಸ್ ಮತ್ತು ಫೋರ್ಸ್ – ಎಕ್ಸಿಕ್ಯುಟಿವ್ ಟೆಂಪೋ ಟ್ರಾವೆಲರ್‌ನಂತಹ ಐಷಾರಾಮಿ ಕಾರುಗಳನ್ನು ತಮ್ಮ ಸಂಸ್ಥೆಗೆ ಜೋಡಿಸಿಕೊಂಡಿದ್ದಲ್ಲದೇ ಈಗಾಗಲೇ ತಿಳಿಸಿದಂತೆ ಹೊರ ರಾಜ್ಯ ಮತ್ತು ವಿದೇಶಗಳಿಂದ ಬರುವ ಗ್ರಾಹಕರು (ಅತಿಥಿ) ಗಳಿಗೆ ಉತ್ತಮ ರೀತಿಯಲ್ಲಿ ಸೇವಾ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಕನ್ನಡ, ಇಂಗ್ಲಿಷ್, ಹಿಂದಿ ತಮಿಳು. ತೆಲುಗು ಮುಂದಾದ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಅನುಭವಿ ವೃತ್ತಿಪರ ಚಾಲಕರುಗಳನ್ನೇ ಆಯ್ಕೆ ಮಾಡಿಕೊಂಡ ಪರಿಣಾಮ ಸಂಸ್ಥೆಯ ಖ್ಯಾತಿ ಮತ್ತಷ್ಟು ಹೆಚ್ಚಾಯಿತು.
ಆರಂಭದಲ್ಲಿ ಒಬ್ಬೊಬ್ಬರೇ ಗ್ರಾಹಕರುಗಳೊಂದಿಗೆ ವ್ಯವಹರಿಸುತ್ತಿದ್ದ ಇವರ ಕಂಪನಿ ಯಾವಾಗ ತಮ್ಮ ಬಳಿ ಮೂಲ ಸಂಪನ್ಮೂಲಗಳಾದ ವಾಹನಗಳು ಮತ್ತು ಸಿಬ್ಬಂದ್ಧಿಗಳು ಹೆಚ್ಚಾಗುತ್ತಿದ್ದಂತೆಯೇ. ಲಾರ್ಸೆನ್ & ಟೂಬ್ರೊ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಆಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್, TCS, ಟೆಕ್ಸಾಸ್ ಎಂಜಿನಿಯರಿಂಗ್ ಸೇವೆಗಳು, ಟ್ರಾನ್ಸ್‌ಟೋನೆಲ್‌ಸ್ಟ್ರಾಯ್ ಆಫ್ಕಾನ್ಸ್, ಗ್ರೂಪಾನ್, CMRL, ದಕ್ಷಿಣ ಭಾರತ ಕೃಷ್ಣಾ ಆಯಿಲ್, ಫ್ರೈಟೈಫೈ ಮುಂತಾದ ಕಂಪನಿಗಳ ಸಂಪೂರ್ಣ ಟ್ರಾನ್ಸ್ ಪೋರ್ಟ್ ಸೇವೆಗಳನ್ನು ಮಾಡುವಂತಹ ದೀರ್ಘ ಕಾಲಿಕ ಒಪ್ಪಂದಗಳನ್ನು ಮಾಡಿಕೊಂಡರು. ಹೊತ್ತಲ್ಲದ ಹೊತ್ತಿನಲ್ಲಿ ಸೇವೆಗಾಗಿ ಬರುತ್ತಿದ್ದ ಕರೆಗಳನ್ನು ಬಹಳ ಸಂತೋಷದಿಂದಲೇ ಸ್ವೀಕರಿಸಿ ಅವರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡಿದ ಪರಿಣಾಮ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ವ್ಯವಹಾರ ನಡೆಸುವಂತಾಗಿದ್ದಲ್ಲದೇ 99% ರಿಂದ 100% ವರೆಗಿನ ಗ್ರಾಹಕ ತೃಪ್ತಿ ರೇಟಿಂಗ್‌ಗಳನ್ನು ಸಾಧಿಸಿದೆ.
ಇಂದು SRC ಟ್ರಾವೆಲ್ಸ್ ಈ ಕೆಳಕಂಡಂತೆ 5 ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ
- ಕಾರ್ಪೊರೇಟ್ / ಬಿಪಿಓ / ಕಾಲ್ ಸೆಂಟರ್ ಮತ್ತು ವೈದ್ಯಕೀಯ ಪ್ರತಿಲೇಖನ ಸೇವೆ (Medical transcription)
- ಏರ್ಲೈನ್ಸ್ ಕ್ಯಾಬಿನ್ ಸಿಬ್ಬಂದಿ ಸೇವೆ
- ಲಾಜಿಸ್ಟಿಕ್ಸ್
- ಪ್ರವಾಸಗಳು
- ಈವೆಂಟ್‌ಗಳು, ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳ ಬುಕಿಂಗ್
ಕೇವಲ 10 ವಾಹನಗಳಿಂದ ಆರಂಭವಾದ ಎಸ್‌ಆರ್‌ಸಿ ಟ್ರಾವೆಲ್ಸ್ ಇಂದು ಸ್ವಂತದ 400 ಫ್ಲೀಟ್‌ಗಳು ಮತ್ತು ಗುತ್ತಿಗೆ ಆಧಾರದ ಮೇಲೆ 800 ಫ್ಲೀಟ್‌ಗಳನ್ನುಹ ಹೊಂದುವ ಮೂಲಕ ಒಟ್ಟಾರೆ 1200 ವಾಹನಗಳನ್ನು ಹೊಂದಿರುವಂತಹ ಇಷ್ಟು ಕಡಿಮೆ ಸಮಯದಲ್ಲಿ ಈ ಪರಿಯಾಗಿ ಕಂಪನಿ ಬೆಳೆಯಲು ಇಷ್ಟ ಪಟ್ಟು ಕಷ್ಟ ಪಟ್ಟು ಬಹಳ ಪ್ರಾಮಾಣಿಕತೆಯಿಂದ ತಮ್ಮಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳೇ ಕಾರಣ ಎಂದು ಬಹಳ ವಿನಮ್ರತೆಯಿಂದ ಚಂದ್ರಶೇಖರ್ ಹೇಳಿಕೊಳ್ಳುತ್ತಾರೆ. ಉಳಿದ ಕಂಪನಿಯಂತೆ ಯಾವಾಗ ಅಂದರೆ ಆವಾಗ ಕಡಿಮೆ ಸಂಬಳ ಕೊಡುವುದರ ಬದಲು ನಿಗಧಿತ ದಿನಾಂಕದಂದು ಅವರು ಮಾಡಿದ ಕೆಲಸಕ್ಕೆ ತಕ್ಕಷ್ಟು ಸಂಬಳ ಮತ್ತು ಅದರ ಜೊತೆ ಗ್ರಾಹಕರ ರೇಟಿಂಗ್ಸ್ ಅನುಗುಣವಾಗಿ ಪ್ರೋತ್ಸಾಹಕ ಧನದ ಜೊತೆಗೆ ಬೋನಸ್ ಸಹಾ ನೀಡುವ ಮೂಲಕ ತಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವುದಲ್ಲದೇ, ತಮ್ಮ ಸಹೋದ್ಯೋಗಿಗಳು ಅಥವಾ ಅವರ ಕುಟುಂಬದವರಿಗೆ ಸಂಕಷ್ಟ ಎದುರಾದಾಗ ಅದಕ್ಕೆ ತಕ್ಷಣವೇ ಸ್ಪಂದಿಸಿ ಹಿರಿಯಣ್ಣನ ರೀತಿಯಲ್ಲಿ ಆವರ ಜೊತೆ ನಿಂತು ತಮ್ಮ ಕೈಲಾದ ಸಹಾಯವನ್ನು ಮಾಡುವುದು ಗಮನಾರ್ಹವಾಗಿದೆ.
ಕೆರೆಯ ನೀರನು ಕೆರಗೆ ಚೆಲ್ಲಿ ಎನ್ನುವಂತೆ ಈ ಸಮಾಜದಲ್ಲಿ ಗಳಿಸಿದ್ದನ್ನು ಮತ್ತೆ ಸಮಾಜಕ್ಕೇ ವ್ಯಯಿಸು ಎನ್ನುವಂತೆ ಆದಷ್ಟು ಬಿಡುವು ಮಾಡಿಕೊಂಡು ಅನಾಥಾಶ್ರಮಗಳಿಗೆ ಆರ್ಥಿಕವಾಗಿ ಸಹಾಯ ಮತ್ತು ಅನ್ನದಾನಗಳ ಮೂಲಕ ಸಾಮಾಜಿಕ ಮತ್ತು ಧಾರ್ಮಿಕ ಸೇವೆಗಳಲ್ಲೂ ತೊಡಗಿಸಿಕೊಂಡಿರುವ ಚಂದ್ರಶೇಖರ್ ಅವರಿಗೆ ದೇಶಾದ್ಯಂತ ತಮ್ಮದೇ ಅದ ಸ್ವಂತ ಶಾಖಾ ಕಚೇರಿಗಳನ್ನು ತೆರೆದು ಸುಮಾರು 5-10 ಸಾವಿರ ಜನರಿಗೆ ಪ್ರತ್ಯಕ್ಷವಾಗಿ ಮತ್ತೊ ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಕೆಲಸ ಕೊಡುವಂತಾಗಬೇಕು ಎಂಬ ಮಹತ್ತರವಾದ ಗುರಿಯನ್ನು ಹೊಂದಿದ್ದಾರೆ.
ಚಂದ್ರಶೇಖರ್ ಅವರ ಶ್ರಮ, ಕಾರ್ಯವೈಖರಿ ಮತ್ತು ಇರುವರೆವಿಗೂ ಬೆಳೆದಿರುವ ಪರಿ ಗಮನಿಸಿದರೆ, ಅವರ ಗುರಿ ಅತ್ಯಂತ ಶೀಘ್ರದಲ್ಲೇ ಈಡೇರುವುದು ಖಂಡಿತ ಎಂದರೂ ಅತಿಶಯವಾಗದು. ಈ ರೀತಿಯಾಗಿ ಕೋಲಾರದಿಂದ ಕೊರಮಂಗಲವರೆಗೆ ಆರಂಭಿಸಿ ಈಗ ದೇಶಾದ್ಯಂತ ಕನ್ನಡದ ಕಂಪನ್ನು ಹರಿಸಿರುವ ಶ್ರೀ ಚಂದ್ರಶೇಖರ್ ಬಾಬು ನಿಜಕ್ಕೂ ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ
