ಗುರುಮುಖೇನ ವಿದ್ಯೆ ಕಲಿಯುವುದೇ ಬಹಳ ಉತ್ತಮ ಎನ್ನುವುದೇ ಎಲ್ಲರ ಆಭಿಪ್ರಾಯ. ಆದರೆ ಎಲ್ಲರಿಗೂ ಒಳ್ಳೆಯ ಗುರುಗಳು ಸಿಗುವುದು ಇಲ್ಲವೇ ಒಳ್ಳೆಯ ಗುರುಗಳು ಇದ್ದರೂ ಅವರ ಬಳಿ ಹೋಗಿ ಕಲಿಯಲು ಆರ್ಥಿಕ ಪರಿಸ್ಥಿತಿಯೂ ಕಾರಣವಾಗಿರಬಹುದು. ಹೆಸರಾಂತ ಗಮಕಿಗಳು ಮತ್ತು ಹರಿಕಥಾ ವಿದ್ವಾನ್ ಆಗಿದ್ದ ತಮ್ಮ ತಂದೆಯವರ ಜೊತೆ ಮೈಸೂರಿನ ದಸರಾ ದರ್ಬಾರ್ ಹಾಲಿಗೆ ಹೋಗಿದ್ದಾಗ ಅಲ್ಲಿನ ಸಂಗೀತೋತ್ಸವದಲ್ಲಿ ಬಾಯಿ ಅಡ್ಡಲಾಗಿ ಹಿಡಿದುಕೊಂಡು ನುಡಿಸುತ್ತಿದ್ದ ತಾಳವಾದ್ಯಕ್ಕೆ ಮಾರು ಹೋಗಿ ಅದರ ಹೆಸರು ಏನು? ಎಂದು ತಿಳಿದುಕೊಂಡು ಅಂದೇ ಆ ವಾದನವನ್ನು ಖರೀಧಿಸಿ ಕೆಲವೇ ಕೆಲವು ತಿಂಗಳಲ್ಲಿ ಸ್ವಂತ ಪರಿಶ್ರಮದಿಂದ ಏಕಲವ್ಯನಂತೆ ಸ್ವಸಾಮರ್ಥ್ಯದಿಂದ ಮೋರ್ಚಿಂಗ್ ವಾದನವನ್ನು ಕರಗರತ ಮಾಡಿಕೊಂಡು ಮುಂದೆ ನಾಡಿನ ಹಲವಾರು ಪ್ರಖ್ಯಾತ ವಿದ್ವಾಂಸರುಗಳ ಜೊತೆ ವೇದಿಕೆಯಲ್ಲಿ ಮೋರ್ಚಿಂಗ್ ನುಡಿಸಿ ಸೈ ಎನಿಸಿಕೊಂಡ ಹಿರಿಯ ಗಮಕಿಗಳು ಮತ್ತು ಮುಖಶಂಖು ವಾದಕರಾದ ಶ್ರೀ ಬಾ. ನಂ. ಶಿವಮೂರ್ತಿಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.
ಶಿಲ್ಪ ಕಲೆಗಳ ತವರೂರಾದ ಹಾಸನ ಜಿಲ್ಲೆಯ ಆರಂಭದ ಊರಾದ, ಗುರು ವಿದ್ಯಾರಣ್ಯರ ಹುಟ್ಟೂರು ಅಥವಾ ಆವರು ತಪಸ್ಸು ಮಾಡಿ ದೇವಿಯನ್ನು ಒಲಿಸಿಕೊಂಡರು ಎಂಬ ಪ್ರತೀತಿಯನ್ನು ಪಡೆದಿರುವಂತಹ ಪುಟ್ಟ ಗ್ರಾಮ ಬಾಳಗಂಚಿಯ ಖ್ಯಾತ ವಾಗ್ಗೇಯಕಾರರೂ, ಹರಿಕಥಾ ವಿದ್ವಾನ್ ಮತ್ತು ಗಮಕ ವಿದ್ವಾನ್ ಶ್ರೀ ಬಾಳಗಂಚಿ ನಂಜುಡಯ್ಯ ಹಾಗೂ ಶ್ರೀಮತಿ ಚೆನ್ನಮ್ಮನವರ ಗರ್ಭದಲ್ಲಿ 1937ರ ಜೂನ್ 6 ರಂದು ಹಲವು ವರ್ಷಗಳಿಂದ ದೇವರ ಪೂಜೆ ಮಾಡಿದ ಫಲವಾಗಿ ಹೋಳೇನರಸೀಪುರದಲ್ಲಿ ಹಿರಿಯ ಮಗನಾಗಿ ಜನಿಸಿದ ಮಗುವೇ ನಮ್ಮ ಇಂದಿನ ಕಥಾ ನಾಯಕ ಶಿವಮೂರ್ತಿ.
ಹೆಸರಿಗೆ ಶ್ಯಾನುಭೋಗ ಕುಟುಂಬವಾದರೂ ಬಹಳ ದಕ್ಷರು ಮತ್ತು ಪ್ರಾಮಾಣಿಕರಾಗಿದ್ದ ಕಾರಣ, ಮನೆಯಲ್ಲಿ ಕಿತ್ತು ತಿನ್ನುವ ಬಡತನ. ದುಡಿಯುವ ಕೈ ಒಂದಾದರೆ, ತಿನ್ನುವ ಕೈ ಹದಿನೆಂಟು. ಸುತ್ತಮುತ್ತಲಿನ ಹತ್ತಾರೂ ಹಳ್ಳಿಗಳಲ್ಲಿ ರಾಮೋತ್ಸವ, ಗಣೇಶೋತ್ಸವ, ರಾಮ ಸಾಮ್ರಾಜ್ಯ ಪಟ್ಟಾಭಿಷೇಕ ಮುಂತಾದ ಕಾರ್ಯಕ್ರಮಗಳು ನಡೆದು ಆ ಸಮಾರಂಭದ ಆಯೋಜಕರು ಕರೆಸಿ ಹರಿಕಥೆ/ಗಮಕ ವಾಚನವನ್ನು ಮಾಡಿಸಿ ಅವರು ಕೊಟ್ಟ ಹಣದಲ್ಲಿ ಪಕ್ಕವಾದ್ಯದವರೆಲ್ಲರಿಗೂ ಹಂಚಿ ಉಳಿದ ಹಣವನ್ನು ಮನೆಗೆ ತೆಗೆದುಕೊಂಡು ಹೋದಲ್ಲಿ ಮಾತ್ರವೇ ಮನೆಯಲ್ಲಿ ನಾಲ್ಕು ಕಾಸು ಓಡಾಟ, ಹೊಟ್ಟೆ ತುಂಬಾ ಊಟ. ಇಲ್ಲದಿದ್ದಲ್ಲಿ ಸೊಪ್ಪು, ಸೆದೆ, ಬೇಯಿಸಿದ ಅಳಿದುಳಿದ ಕಾಳುಗಳೇ ಊಟ. ಇಂತಹದ್ದರ ನಡುವೆ ಅವರ ಮೂರ್ನಾಲ್ಕು ದೊಡ್ಡಪ್ಪಂದಿರು ಅದಾಗಲೇ ನಿಧನರಾಗಿದ್ದ ಕಾರಣ ಅವರಲ್ಲೆರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ ಕಾರಣ ಶಿವಮೂರ್ತಿಗಳು ಬೆಳದದ್ದು ದೊಡ್ಡಮ್ಮನವರ ಆರೈಕೆಯಲ್ಲೇ. ಹಾಗಾಗಿಯೇ ಅಕೆಯೇ ಅವರಿಗೆ ಅಮ್ಮಾ ಮತ್ತು ಹೆತ್ತ ತಂದೆ ತಾಯಿಗಳು ಚಿಕ್ಕಪ್ಪ, ಚಿಕ್ಕಮ್ಮ ಬಹುಷಃ ತನ್ನ ತಂದೆ ತಾಯಿಯರನ್ನು ಚಿಕ್ಕಪ್ಪ, ಚಿಕ್ಕಮ್ಮ ಎಂದು ಸಂಬೋಧಿಸಿದ ಪ್ರಪ್ರಥಮ ಪುತ್ರ ಪ್ರಪಂಚದಲ್ಲೇ ಇವರೊಬ್ಬರೇ ಇರಬೇಕೇನೋ?
ಪ್ರಾಥಮಿಕ ಶಾಲಾಭ್ಯಾಸ ಹುಟ್ಟೂರಿನಲ್ಲಿ ಪ್ರಾರಂಭವಾದರೂ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿರದಿದ್ದ ಕಾರಣ, ದೊಡ್ಡಪ್ಪನ ಊರಾದ ತುರುವೇಕೆರೆ, ಅಜ್ಜಿಯ ಮನೆ ಹೋಳೆನರಸೀಪುರದಲ್ಲಿ ಆನಂತರ ತಮ್ಮ ತಂದೆಯವರ ಸ್ನೇಹಿತರಾಗಿದ್ದಂತಹ ನಾಡಿನ ಖ್ಯಾತ ಹಾಸ್ಯ ಬರಹಗಾರರಾಗಿದ್ದಂತಹ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರರ ಮನೆಯಲ್ಲಿ ಕೆಲ ತಿಂಗಳುಗಳ ಕಾಲ ನೆಡೆದು ರಾಮಸ್ವಾಮಿ ಅಯ್ಯಂಗಾರರು ಬೆಂಗಳೂರಿಗೆ ತಮ್ಮ ನಿವಾಸವನ್ನು ಬದಲಿಸಿದಾಗ ಶಿವಮೂರ್ತಿಗಳು ಓದನ್ನು ನಿಲ್ಲಿಸಲಾಗದೇ,ತಮ್ಮ ಸಹಪಾಠಿಗಳ ಮನೆಯಲ್ಲೇ ಆಶ್ರಯ ಮತ್ತು ಊಟೋಪಚಾರಕ್ಕಾಗಿ ಅಲ್ಲಿನ ಅಕ್ಕ ಪಕ್ಕದ ಮನೆಗಳ ವಾರಾನ್ನವೇ ಆಶ್ರಯಿಸುವಂತಾದಾಗ ಶಿವಮೂರ್ತಿಗಳ ವಯಸ್ಸು ಕೇವಲ 9-10. ಮುಂದೆ ಊರಿಗೆ ಮರಳಿ ಓದನ್ನು ಮುಂದುವರೆಸಿ ಹಿರಿಸಾವೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಂದುವರೆಸಿ SSLCಯನ್ನು ಉತ್ತಮ ಶ್ರೇಣಿಯಲ್ಲಿ ಮುಗಿಸಿದರಾದರೂ ಮನೆಯ ಪರಿಸ್ಥಿತಿಯ ಫಲವಾಗಿ ಕಾಯಕಕ್ಕೆ ಇಳಿಯಬೇಕಾಯಿತು.
ಇದ್ದ ಅಲ್ಪ ಸ್ವಲ್ಪ ಜಮೀನಿನಲ್ಲಿ ಬೇಸಾಯ ಆರಂಭಿಸಿ ಕುಟುಂಬದ ನಿರ್ವಹಣೆಗಾಗಿ ಅಕ್ಕ ಪಕ್ಕದವರ ಜಮೀನಿನಲ್ಲಿಯೂ ಕೂಲಿ ಕೆಲಸ ಮಾಡುತ್ತಿದ್ದದ್ದಲ್ಲದೇ, ಮಳೆ ಇಲ್ಲದೆ ನೀರಿಗಾಗಿ ಹಾಹಾಕಾರವಾದಾಗ ಅಧಿಕ ದೈಹಿಕ ಪರಿಶ್ರಮದ ಭಾವಿ ತೋಡುವ ಕೆಲಸವನ್ನೂ ಮಾಡುತ್ತಾರೆ. ಇದೇ ಸಮಯದಲ್ಲಿ ಸಂಬಂಧೀಕರ ಸಲಹೆ ಮೇರೆಗೆ ತುಮಕೂರಿಗೆ ಬಂದು ಅಲ್ಲಿ ಸರ್ಕಾರೀ ಹೊಲಿಗೆ ತರಬೇತಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಪರಿಣಾಮವಾಗಿ ಹೊಲಿಗೆ ಯಂತ್ರವನ್ನೂ ಬಹುಮಾನವಾಗಿ ಪಡೆದು ಹೊಲಿಗೆ ವೃತ್ತಿಯನ್ನು ಆರಂಭಿಸಲು ಯೋಚಿಸಿದರಾದರೂ ಅದೇ ಸಮಯದಲ್ಲಿ ತಂಗಿಯ ಮದುವೆಗೆ ದುಡ್ಡಿನ ಅಭಾವದ ಕಾರಣಕ್ಕಾಗಿ ಬಹುಮಾನವಾಗಿ ದೊರೆತಿದ್ದ ಹೊಸಾ ಹೊಲಿಗೆ ಯಂತ್ರವನ್ನು ಮಾರಿ ತಂಗಿಯ ಮದುವೆಗೆ ಹಣ ಸಹಾಯ ಮಾಡುತ್ತಾರೆ ಆನಂತರ ಸಹಕಾರ ಸಂಘದ ತರಬೇತಿಗೆ ಸೇರಿ ಅಲ್ಲಿಯೂ ಸಹಾ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಕೆಲಸವನ್ನು ಗಿಟ್ಟಿಸಿಕೊಂಡರೂ, ಅಂದಿನ ಸರ್ಕಾರದ ಬದಲಾದ ನಿಯಮದಿಂದಾಗಿ ಕೆಲಸವನ್ನು ಕಳೆದುಕೊಂಡು ಕೆಲವು ದಿನಗಳ ತಿಂಗಳುಗಳ ಕಾಲ ಅಕ್ಕನ ಊರಾದ ಕಗ್ಗರೆಯಲ್ಲೂ ಮತ್ತು ತಮ್ಮ ಊರಿನಲ್ಲೂ ಬೇಸಾಯವನ್ನು ಮುಂದುವರೆಸುತ್ತಾ ತಮ್ಮ ಆರಾಧ್ಯದೈವ ಶ್ರೀ ಲಕ್ಷ್ಮೀ ನರಸಿಂಹ ದೇವರ ಅರ್ಚಕರಾಗಿಯೂ ಬೇರೆಯವರ ಹೊಲಗಳಲ್ಲಿ ಕೂಲಿ ಮಾಡುತ್ತಾ ಜೀವನ ನಡೆಸುತ್ತಿದ್ದಾಗಲೇ ಅವರ ಬಾಳಿನ ಮಹತ್ತರ ತಿರುವನ್ನು ಅವರ ಮೈಸೂರು ದೊಡ್ಡಪ್ಪ ಮತ್ತು ದೊಡ್ಡಮ್ಮನವರ ಮೂಲಕ ಪಡೆಯುತ್ತಾರೆ. ಬುದ್ದಿವಂತನಾದರೂ ಪರಿಸ್ಥಿತಿಯ ಅನುಗುಣವಾಗಿ ಊರಿನಲ್ಲೇ ಕೊಳೆಯುತ್ತಿದ್ದ ಪ್ರತಿಭೆಗೆ ಆತ್ಮ ಸ್ಥೈರ್ಯ ತುಂಬಿದ ಅವರ ದೊಡ್ಡಪ್ಪ ಅವರನ್ನು ಮೈಸೂರಿಗೆ ಕರೆದೊಯ್ದು ತಮ್ಮ ಮನೆಯಲ್ಲಿ ಕೆಲವು ದಿನಗಳವರೆವಿಗೂ ಆಶ್ರಯ ಕೊಡುತ್ತಾರೆ.
ಮೈಸೂರಲ್ಲಿ ದೊಡ್ಡಪ್ಪ-ದೊಡ್ಡಮ್ಮನ ಮನೆಯ ಪರಿಸ್ಥಿತಿಯೂ ಅಷ್ಟೇನೂ ಚೆನ್ನಾಗಿರದಿದ್ದನ್ನು ಮನಗಂಡು ಅವರಿಗೆ ಹೆಚ್ಚು ಹೊರೆ ಆಗಬಾರದೆಂದು ನಿರ್ಧರಿಸಿ, ಬೆಳ್ಳಂ ಬೆಳಗ್ಗೆಯೇ ಚುಮು ಚುಮು ಚಳಿ, ಗಾಳಿ, ಮಳೆಯನ್ನೂ ಲೆಕ್ಕಿಸದೆ ಮನೆ ಮನೆಗೆ ವೃತ್ತಪತ್ರಿಕೆ ಮಾರುವ ಕೆಲಸ ಆರಂಭಿಸಿ, ಹಗಲಿನಲ್ಲಿ ಅಂಗಡಿಗಳಲ್ಲಿ ಲೆಕ್ಕ ಬರೆಯುವ ಕೆಲಸವನ್ನು ಮಾಡಿದರಾದರೂ ಅದರಲ್ಲಿ ಹೆಚ್ಚಿನ ಆಸಕ್ತಿ ಇರದೇ ಇದ್ದಂತಹ ಸಂಧರ್ಭದಲ್ಲಿ ಮೈಸೂರಿನ ಸರ್ಕಾರಿ ಐಟಿಐ ಫಿಟ್ಟರ್ ತರಬೇತಿಗೆ ಸೇರಿಕೊಳ್ಳಲು ಇಚ್ಚಿಸುತ್ತಾರಾದರೂ. ವಯಸ್ಸಿನಾಧಾರವಾಗಿ ಸೇರಿಕೊಳ್ಳಲು ಸಾಧ್ಯವಾಗದೇ ಹೋಗಿ ಬೇಸರಿಸಿ ಕೊಂಡದ್ದನ್ನು ಗಮನಿಸಿದ ಅದೇ ತರಭೇತಿಯ ಕ್ಲರ್ಕ್ ಒಬ್ಬರು, ಅಲ್ಲೇ ಹತ್ತಿರದ ನೋಟರಿ ಅವರ ಬಳಿ ಹೋಗಿ 8ನೇ ತರಗತಿ ಫೇಲ್ ಆಗಿದ್ದೇನೆ ಮತ್ತು ಐದಾರು ವರ್ಷಗಳು ಕಡಿಮೆ ವಯಸ್ಸು ಬರೆಸಿಕೊಂಡು ಬಂದಲ್ಲಿ ಅವಕಾಶವಿದೆ ಎಂದಾಗ ಆವರು ಹೇಳಿದಂತೆಯೇ ಪರಿಚಯವಿದ್ದ ನೋಟರಿ ಅವರ ಹೋಗಿ SSLC ಆಗಿದ್ದರೂ ಮತ್ತೆ LS fail ಎಂದು ಜೊತೆಗೆ ಸುಮಾರು ಆರು ವರ್ಷಗಳ ಕಡಿಮೆ ವಯಸ್ಸಿನ ಸರ್ಟಿಫಿಕೇಟ್ ಪಡೆದು ಫಿಟ್ಟರ್ ಕೋರ್ಸಿಗೆ ಸೇರಿಕೊಳ್ಳುತ್ತಾರೆ. ಒಳ್ಳೆಯ ಮನಸ್ಸಿನವರಿಗೆ ಸದಾಕಾಲವೂ ಒಳ್ಳೆಯದೇ ಆಗುತ್ತದೆ ಎನ್ನುವುದಕ್ಕೆ ಆ ಕಾಲೇಜಿನಲ್ಲಿ ಅವರಿಗೆ ಶ್ರೀ ಸುಬ್ರಹ್ಮಣ್ಯಂರಂತಹ ಬಹಳ ಉತ್ತಮ ಗುರುಗಳು ದೊರೆತು ಅವರ ನೆಚ್ಚಿನ ಶಿಷ್ಯರಾಗಿ ಅವರ ಮಾರ್ಗದರ್ಶನದಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅಂದಿನ ದಿನದಲ್ಲೇ ಪ್ರಖ್ಯಾತ ಕಾರ್ಖಾನೆಯಾದ ಭಾರತ್ ಎಲೆಕ್ಟ್ರಾನಿಕ್ಸ್ (BEL) ನಲ್ಲಿ campous seletion ಮೂಲಕ ಕೆಲಸ ಗಿಟ್ಟಿಸಿಕೊಳ್ಳುವ ಅವರ ಜೀವನದ ಎರಡನೇ ಮಗ್ಗಲು ಬೆಂಗಳೂರಿನಲ್ಲಿ ಆರಂಭವಾಗುತ್ತದೆ.
ಕೆಲಸ ಏನೂ ಸಿಕ್ಕಿದೆ ಆದರೆ ಕೈಯ್ಯಲ್ಲಿ ಒಂದು ನಯಾಪೈಸೆಯೂ ಇಲ್ಲಾದಿರುವಾಗ ಉಳಿದುಕೊಳ್ಳುವುದು ಎಲ್ಲಿ? ಎಂದು ಯೋಚಿಸುತ್ತಿರುವಾಗಲೇ, ಅವರ ಅತ್ತೆಯ ಮೊಮ್ಮಗನ ಮನೆಯಲ್ಲಿ ಕೆಲಕಾಲವಿದ್ದು ನಂತರ ಒಂದೆರದು ತಿಂಗಳುಗಳ ಸಂಬಳ ಪಡೆದ ನಂತರ ತಮ್ಮ ಸ್ನೇಹಿತರೊಡನೆ ಸಣ್ಣ ಕೊಠಡಿಯನ್ನು ಮಾಡಿಕೊಂಡು ಹಾಗೂ ಹೀಗೂ ಎರಡು ವರ್ಷಗಳ ಕೆಲಸ ಮಾಡುತ್ತಿರುವಾಗಲೇ, ಮನೆಯವರಿಗೆ ವಯಸ್ಸು 31 ಆಯ್ತು ಇನ್ನೂ ಮದುವೆಯೇ ಆಗಿಲ್ಲ ಎಂಬ ಚಿಂತೆ. ಅದೊಮ್ಮೆ ಅವರ ತಂದೆಯವರು ಬೆಂಗಳೂರಿನ ಪೈಪ್ ಲೈನ್ ಬಳಿಯಲ್ಲಿರುವ ದತ್ತಾತ್ರೇಯ ಸ್ವಾಮಿ ದೇವಾಲಯದಲ್ಲಿ ಹರಿಕಥೆಗೆ ಹೋಗಿದ್ದಾಗ, ಅಲ್ಲಿ ಪರಿಚಯವಾದವರೊಬ್ಬರು ತಮ್ಮ ಮೊಮ್ಮಗಳಿಗೆ ಗಂಡು ನೋಡುತ್ತಿದ್ದೇವೆ ಎಂಬ ವಿಷಯ ತಿಳಿದು, ಅರೇ ಸ್ವಾಮೀ ನಮ್ಮ ಮಗನೇ ಇದ್ದಾನೆ! ಎಂದು ಹೇಳಿ ಜಾತಕ ಎಲ್ಲವೂ ಕೂಡಿ ಬಂದು ಕೆಜಿಎಫ್ ನ ಗೋಲ್ದ್ ಮೈನ್ಸ್ ನಲ್ಲಿ ಹಿರಿಯ ಅಧಿಕಾರಿಗಳಾಗಿದ್ದಂತಹ ಶ್ರೀ ರಾಜಾರಾವ್ ಮತ್ತು ಶ್ರೀಮತಿ ವಿಶಾಲಾಕ್ಷಿಯವರ ಹಿರಿಯ ಪುತ್ರಿ ಉಮಾರವರನ್ನು ವರಿಸಿ, ಆವರಿಬ್ಬರ ಸುಖಃ ಸಂಸಾರದ ಫಲವಾಗಿ ಶ್ರೀಕಂಠ, ಸುಧಾ ಮತ್ತು ಲಕ್ಷ್ಮಿ ಎಂಬ ಮಕ್ಕಳ ತಂದೆಯೂ ಆಗುತ್ತಾರೆ.
ಮನೆಯಲ್ಲಿ ಮೊದಲ ಮಗನಾಗಬಾರದು ಊಟಕ್ಕೆ ಕೊನೆಯವನಾಗಬಾರದು ಎಂಬ ಗಾದೆ ಮಾತಿನಂತೆ ಗಂಡ ಮತ್ತು ಹೆಂಡತಿ ಇಬ್ಬರೂ ಸಹಾ ತಮ್ಮ ತಮ್ಮ ಮನೆಯಲ್ಲಿ ಹಿರಿಯರೇ ಆಗಿದ್ದೂ ಶಿವಮೂರ್ತಿಗಳ ಮಾವನವರ ಅಕಾಲಿಕ ಮರಣದಿಂದಾಗಿ ಮಡದಿಯ ತವರು ಮನೆಯ ಸಂಪೂರ್ಣ ಕುಟುಂಬದ ಹೊಣೆ ಹೊತ್ತು ಅವರ ಉಳಿದ ನಾಲ್ಕೂ ನಾದಿನಿಯರ ಹಾಗೂ ಭಾವ ಮೈದುನನನಲ್ಲದೇ ಅಮ್ಮ ಇಬ್ಬರು ತಮ್ಮಂದಿರು ಮತ್ತು ತಂಗಿಯಂದಿರ ಮದುವೆಯನ್ನು ಅವರ ಸಾರಥ್ಯದಲ್ಲಿಯೇ ಉತ್ತಮ ಸಂಬಂಧಗಳೊಂದಿಗೆ ಮಾಡಿ ಮುಗಿಸಿ, ತಮ್ಮ ಮಕ್ಕಳ ವಿದ್ಯಾಭ್ಯಾಸದತ್ತ ಗಮನ ಹರಿಸುತ್ತಿರುವಾಗಲೇ ತಮ್ಮಲ್ಲಿ ಸುಪ್ತವಾಗಿ ಅಡಗಿದ್ದ ಹಾಗೂ ಬಾಲ್ಯದಿಂದಲೂ ಹಂಬಲಿಸುತ್ತಿದ್ದ ಮತ್ತು ತಂದೆಯವರ ಪ್ರಭಾವದಿಂದಾಗಿ ಕರ್ನಾಟಕದ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿಯಲು ಆರಂಭಿಸಿದಾಗ ಅವರ ವಯಸ್ಸು 45.
ವಯಸ್ಸಾಗಿರುವುದು ದೇಹಕ್ಕೆ ಮಾತ್ರವಷ್ಟೇ, ಮನಸ್ಸಿಗಲ್ಲಾ ಎನ್ನುವಂತೆ ವಿದ್ವಾನ್ ಶ್ರೀ ಚಿಂತಲಪಲ್ಲಿ ರಂಗರಾಯರಲ್ಲಿ ಸಂಗೀತವನ್ನೂ ಮತ್ತು ತಂದೆಯವರಿಂದ ಕೇಳಿ ಕೇಳಿ ಅದಾಗಲೇ ಬಹುತೇಕ ಬರುತ್ತಿದ್ದ ಗಮಕವನ್ನು ಅಧಿಕೃತವಾಗಿ ಗುರುಗಳಾದ ಶ್ರೀ ನಾರಾಯಣರಲ್ಲೂ ಮುಂದುವರೆಸಿ ಗಮಕದಲ್ಲಿ ವಿದ್ವತ್ ಪರೀಕ್ಷೆಯನ್ನು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದುತ್ತಾರೆ. ದೈವದತ್ತವಾಗಿ ದೊರೆತ ಉತ್ತಮ ಶಾರೀರವಿದ್ದರೂ ಅವರಿಗೆ ಗಮಕವಾಚನಕ್ಕಿಂತಲು ವ್ಯಾಖ್ಯಾನವೇ ಬಹಳ ಆಸಕ್ತಿ (ಬಹುಶಃ ತಂದೆಯವರ ಹರಿಕಥೆ ಪ್ರಭಾವವೋ ಏನೋ?) ಹೊಂದಿದ್ದು ಅನಿವಾರ್ಯ ಸಂಧರ್ಭದಲ್ಲಿ ಅಷ್ಟೇ ಸುಮಧುರವಾಗಿ ಮತ್ತು ಕೇಳುಗರಿಗೆ ಅರ್ಥವಾಗುವಂತೆ ಹಳೆಗನ್ನಡದ ಪದಗಳನ್ನು ವಿಂಗಡಿಸುತ್ತಾ ವಾಚನ ಮಾಡುವುದರಲ್ಲೂ ಸೈ ಎನಿಸಿಕೊಳ್ಳುತ್ತಾರೆ.
ಕನ್ನಡ ನಾಡು ಮತ್ತು ಭಾಷೆಯ ಮೇಲೆ ಅಪಾರವಾದ ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದ ಶಿವಮೂರ್ತಿಗಳು ಚಿಕ್ಕವಯಸ್ಸಿನಲ್ಲಿ ತಿಳಿಯದೇ ಆಂಗ್ಲ ಭಾಷೆಯಲ್ಲಿ ಮಾಡುತ್ತಿದ್ದ ಅವರ ಅಧಿಕೃತ ಸಹಿಯನ್ನು 1980ರ ದಶಕದಲ್ಲಿ ಕರ್ನಾಟಕದಲ್ಲಿ ಭಾಷಾ ಹಕ್ಕುಗಳ ಕುರಿತಾಗಿ ನಡೆದ ಗೋಕಾಕ್ ಚಳುವಳಿಯಿಂದ ಪ್ರಭಾವಿತರಾಗಿ ನೋಟರಿಗಳ ಸಮ್ಮುಖದಲ್ಲಿ ತಮ್ಮ ಅಧಿಕೃತ ಸಹಿಯನ್ನು ಕನ್ನಡಕ್ಕೆ ಬದಲಾಯಿಸಿಕೊಂಡಿದ್ದಲ್ಲದೇ ಅದನ್ನೇ ಜೀವಮಾನವಿಡೀ ಪಾಲಿಸಿದರು. ಇನ್ನು ಅವರ ಅಕ್ಷರಗಳಂತೂ ಒಳ್ಳೇ ಮುತ್ತು ಪೋಣಿಸಿದಂತೆ ಬಹಳ ಮುದ್ದಾಗಿ ಮತ್ತು ಚಿತ್ತಿಲ್ಲದೇ ಬರೆಯುತ್ತಿದ್ದದ್ದೂ ಸಹಾ ವಿಶೇಷವೇ.
ಇವಿಷ್ಟರ ಮಧ್ಯೆ ತಮ್ಮ ತಾರುಣ್ಯದಲ್ಲಿ ಸ್ವಸಾಮಾರ್ಥ್ಯದಿಂದಲೇ ಕಲಿತಿದ್ದ ಮೋರ್ಚಿಂಗ್ ವಾದನವನ್ನು ಮುಂದುವರೆಸುತ್ತಾ, ನಾಡಿನ ಹಲವಾರು ಪ್ರಖ್ಯಾತ ವಿದ್ವಾಂಸರ ಕಛೇರಿಗಳಲ್ಲೂ ಮತ್ತು ಹೆಸರಾಂತ ನೃತ್ಯ ಕಾರ್ಯಕ್ರಮಗಳಲ್ಲಿ ಅಮೋಘವಾಗಿ ನುಡಿಸಿ ವಿದ್ವತ್ ಜನರ ಮೆಚ್ಚುಗೆ ಗಳಿಸುತ್ತಾರೆ. ಇವೆಲ್ಲದರ ನಡುವೆಯೂ ತಮ್ಮ ಅಮೋಘ ಗಾಯನ ಸಿರಿಯಿಂದ ಅಂತರ್ ಕಾರ್ಖಾನೆಗಳ ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗಳಿಸಿ ತಮ್ಮ ಕಾರ್ಖಾನೆಯ ಹಿರಿಮೆಯನ್ನು ಎತ್ತಿ ಹಿಡಿದಿರುತ್ತಾರೆ. ದೇವರ ಮೇಲೆ ಹೂವು ತಪ್ಪಿದರೂ ಶಿವಮೂರ್ತಿಗಳು ಪ್ರತೀ ದಿನ ಭಜನೆಯನ್ನು ತಪ್ಪಿಸುತ್ತಿರಲಿಲ್ಲ. ಪ್ರತೀ ದಿನ ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ತಕ್ಷಣವೇ ಕೈಕಾಲು ತೊಳಿದು ವಿಭೂತಿ ಧರಿಸಿ ದೇವರಿಗೆ ಕೈ ಮುಗಿದು ಕಾಫಿ ಕುಡಿದು ಸೈಕಲ್ ಹತ್ತಿದರೆಂದರೆ, ಮತ್ತೀಕೆರೆ, ಯಶವಂತಪುರ, ನಾಗಶೆಟ್ಟಹಳ್ಳಿ, ಹೆಬ್ಬಾಳ, ಮಲ್ಲೇಶ್ವರ, ಚಿಕ್ಕ ಪೇಟೆ, ಬಳೇಪೇಟೆ ಹೀಗೆ ಪ್ರತೀ ದಿನವೂ ಬೆಂಗಳೂರಿನ ಹಲವಾರು ದೇವಸ್ಥಾನಗಳು ಮತ್ತು ಭಜನಾ ಮಂಡಳಿಗಳಲ್ಲಿ ಸಕ್ರೀಯರಾಗಿ ತಮ್ಮ ಸುಶ್ರಾವ್ಯ ಕಂಠಸಿರಿಯಿಂದ ಭಗವಂತನ ನಾಮಸ್ಮರಣೆ ಮಾಡುತ್ತಾ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗುತ್ತಾರೆ.
ಶಿವಮೂರ್ತಿಗಳ ಸೇವಾ ಚಟುವಟಿಕೆಗಳನ್ನು ಗುರುತಿಸಿ ಅನೇಕ ಸಂಘಸಂಸ್ಥೆಗಳು ಅವರಿಗೆ ಸನ್ಮಾನ ಮಾಡಿ ಗೌರವ ಸಲ್ಲಿಸಿದ್ದು ಅವುಗಳಲ್ಲಿ ಪ್ರಮುಖವಾಗಿ
- ಶಂಕರ ಸೇವಾ ಸಮಿತಿಯ ಭಜನ ಸಾಮ್ರಾಟ
- ತ್ಯಾಗರಾಜ ಗಾನ ಸಭೆಯಲ್ಲಿ ಪಡೆದ ಗಮಕ-ಮುಖಶಂಖು ಕಲಾಭೂಷಣ
- ಗಮಕ ಕಲಾ ಪರಿಷತ್ತಿನಲ್ಲಿ ಪಡೆದ ಗಮಕ ಕಲಾರತ್ನ ಪ್ರಶಸ್ತಿಗಳು ಪ್ರಮುಖವಾದವುಗಳು.
ಬಿಇಎಲ್ ಕಾರ್ಖಾನೆಯಿಂದ ನಿವೃತ್ತಿ ಹೊಂದಿದ ಮಾರನೇಯ ದಿನದಿಂದಲೇ ಪ್ಯಾಂಟ್ ಧರಿಸುವುದನ್ನು ನಿಲ್ಲಿಸಿ ಅಲ್ಲಿಂದ ಮುಂದೆ ತಮ್ಮ ಜೀವಿತಾವಧಿಯವರೆಗೂ ಶುಭ್ರವಾದ ಪಂಚೆಯನ್ನು ಉಟ್ಟು ಹಣೆಯ ಪೂರ್ತಿ ವಿಭೂತಿ ಧರಿಸುತ್ತಿದ್ದ ಶಿವಮೂರ್ತಿಗಳು ಮತ್ತವರ ಮಡದಿ ಉಮಾ ಅವರನ್ನು ನೋಡಿದರೆ ಸಾಕ್ಷಾತ್ ಈಶ್ವರ ಪಾರ್ವತಿಯನ್ನು ನೋಡಿದ ಹಾಗುತ್ತಿತ್ತು ಎಂದು ಅನೇಕರು ಹೇಳುತ್ತಿದ್ದದ್ದು ಅತಿಶಯ ಎಂದೇನೂ ಎನಿಸುತ್ತಿರಲಿಲ್ಲ. ತಮ್ಮ ನಿವೃತ್ತಿಯ ನಂತರ ಧರ್ಮ ಜಾಗರಣ ಮತ್ತು ಪ್ರಸರಣದ ಜೊತೆ ಜೊತೆ ವಿವಿಧ ಧಾರ್ಮಿಕ ಚಟುವಟಿಕೆಗಳ ಜೊತೆಗೆ ಸಂಗೀತ ಮತ್ತು ಗಮಕ ಕಲೆಗಳಿಗೆ ತಮ್ಮ ಬದಕನ್ನು ಮೀಸಲಿಟ್ಟಿದ್ದಲ್ಲದೇ, ಬೆಂಗಳೂರಿನ TTD ದೇವಸ್ಥಾನದ ಧರ್ಮ ಪ್ರಚಾರ ಸಮಿತಿಯು ಹಿಂದೂ ಧರ್ಮ ಜಾಗರಣೆಯ ಭಾಗವಾಗಿ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡ ಬಳ್ಳಾಪುರ, ತುಮಕೂರು ಮುಂತಾದ ಕಡೆಯಲ್ಲೆಲ್ಲಾ ನಡೆಸುತ್ತಿದ್ದ ನೂರಾರು ಕಾರ್ಯಕ್ರಮಗಳಲ್ಲಿ ಶ್ರೀ ಶಿವಮೂರ್ತಿಗಳು ಭಜನೆ, ಗಮಕ ಮತ್ತು ಪ್ರವಚನಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.
ಇಷ್ಟರ ಮಧ್ಯೆ ತಮ್ಮ ಎಲ್ಲಾ ಮಕ್ಕಳ ಮುಂಜಿ ಮದುವೆಗಳನ್ನು ಸಕಾಲದಲ್ಲಿ ಮಾಡಿ ಆರು ಮೊಮಕ್ಕಳ ಮುದ್ದಿನ ತಾತನಾಗಿ ಅವರಿಗೆಲ್ಲಾ, ತಮ್ಮ ಮಕ್ಕಳಿಗೆ ಹೇಳಿಕೊಟ್ಟಂತೆಯೇ ಶ್ಲೋಕ, ಭಗವದ್ಗೀತೆ, ಬಾಲಪಾಠ, ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳಿ ಉತ್ತಮ ಸಂಸ್ಕಾರ ನೀಡಿದ ಪರಿಣಾಮ ಅವರ ನಾಲ್ಕು ಮೊಮ್ಮಕ್ಕಳು ಭರತನಾಟ್ಯ ನೃತ್ಯಗಾರ್ತಿಯರಾಗಿದ್ದು, ತಾವು ಕಲಿತ ಪಾಠವನ್ನು ನೂರಾರು ಮಕ್ಕಳಿಗೆ ಕಲಿಸಿಕೊಡುವ ಮೂಲಕ ಮುತ್ತಾತ/ಅಜ್ಜಾ/ತಾತನವರು ಹಾಕಿಕೊಟ್ಟ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯವಾಗಿದೆ.
ಬಹಳ ಅಪರೂಪದ ಮತ್ತೊಂದು ಸಂಗತಿಯೆಂದರೆ, ಈಗೇನು ವೋಟ್ ಚೋರಿ, EVM hack ಎಂದೆಲ್ಲಾ ಮಾತನಾಡುತ್ತಿದ್ದಾರೋ ಅಂತಹ Electronic Voting Meching ಮೊಟ್ಟ ಮೊದಲ ಬಾರಿಗೆ ತಯಾರಾದದ್ದೇ 80ರ ದಶಕದ ಆರಂಭದಲ್ಲಿ ಶಿವಮೂರ್ತಿಗಳು ಕೆಲಸ ಮಾಡುತ್ತಿದ್ದ BEL ಕಾರ್ಖಾನೆಯಾಗಿದ್ದು, ಅಂತಹ EVMಗಳ assemole ಆದದ್ದು Assemply LPE department ಮತ್ತು ಶಿವಮೂರ್ತಿಗಳು ತಂಡದ ಭಾಗವಾಗಿ ಸಾವಿರಾರು EVM ಜೋಡಿಸಿರುವುದೂ ಸಹಾ ಅವರ ಹೆಗ್ಗಳಿಕೆ.
ಚಿಕ್ಕ ವಯಸ್ಸಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ ಸಂಘದ ಅನ್ಯಾನ್ಯ ಜವಾಬ್ಧಾರಿಗಳನ್ನು ನಿಭಾಯಿಸುತ್ತಿದ್ದದ್ದಲ್ಲದೇ, ಬೆಂಗಳೂರಿನ ಬಿಇಎಲ್ ಕಾರ್ಖಾನೆಯ ಬಳಿಯ ರಾಮಚಂದ್ರಪುರ ಮತ್ತು ಕುವೆಂಪು ನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಕ್ರಿಶ್ಚಿಯನ್ ಮತಾಂತರಾದ ವಿರುದ್ಧ ಹಿಂದೂಗಳ ಜಾಗೃತಿ ನಡೆಸುವ ಸಲುವಾಗಿ, ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ಹೋರಾಟ ಮತ್ತು ಅಲ್ಲಿನ ವಿವಿಧ ದೇವಾಲಯಗಳಲ್ಲಿ ನಿರಂತವಾಗಿ ಭಜನೆಗಳನ್ನು ಮಾಡಿರುತ್ತಾರೆ ಇದಲ್ಲದೇ, ತಮ್ಮ ಗುರುಗಳಾದ ಶ್ರೀ ನಾರಾಯಣರೊಂದಿಗೆ ಹಲವಾರು ಗಮಕ ಕಾರ್ಯಕ್ರಮಗಳಲ್ಲಿ ಅದರಲ್ಲೂ ನಂದಿ ಬಳಿಯ ಆವತಿಯ ಶ್ರೀ ತಿಮ್ಮರಾಯನಸ್ವಾಮಿ ಬೆಟ್ಟದ ಜಾತ್ರಾ ಸಮಯದಲ್ಲಿ ಸತತವಾಗಿ ಇಪತ್ತು ವರ್ಷಗಳಿಗೂ ಅಧಿಕ ಕಾಲ ಕಾವ್ಯ ವಾಚನ ಮತ್ತು ವ್ಯಾಖ್ಯಾನಕಾರರಾಗಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು ನಮ್ಮ ಸನಾತನ ಸಂಸ್ಕೃತಿಯ ಪರಿಚಯವನ್ನು ನಾಡಿನಾದ್ಯಂತ ಪಸರಿಸುವ ಹೆಮ್ಮೆಯ ಸಂಗತಿಯ ಭಾಗವಾಗುತ್ತಾರೆ.
ತಮಗೆ ದಾಳಿಂಬೆಹಣ್ಣಿನಂತೆ ಬಹಳ ಅಂದವಾಗಿ ಜೋಡಿಸಿದಂತಹ ದಂತ ಪಂಕ್ತಿಯನ್ನು ಹೊಂದಿದ್ದರುವುದಕ್ಕೆ ಸದಾ ಕಾಲವೂ ಹೆಮ್ಮೆ ಪಡುತ್ತಿದ್ದ ಶಿವಮೂರ್ತಿಗಳಿಗೆ ವಯೋಸಹಜವಾಗಿಯೋ ಇಲ್ಲವೇ ಸುದೀರ್ಘ ಕಾಲ ಹಲ್ಲಿಗೆ ಒತ್ತರಿಸಿಕೊಂಡು ಮೋರ್ಚಿಂಗ್ ನುಡಿಸುತ್ತಿದ್ದರಿಂದಲೋ ಏನೋ, ಒಂದೊಂದೇ ಹಲ್ಲುಗಳು ಅವರ 70+ ವರ್ಷದ ಹೊತ್ತಿಗೆ ಉದುರಿ ಹೋಗಲು ಆರಂಭಿಸಿದಾಗ, ಆಯ್ತು ಅಷ್ಟೇ ಬಿಡಿ!! ಇನ್ನು ಮುಂದೆ ನೀವು ಮೋರ್ಚಿಂಗ್ ನುಡಿಸಲು ಆಗುವುದಿಲ್ಲಾ ಎಂದು ಮಕ್ಕಳು ಮೊಮ್ಮಕ್ಕಳು ಛೇಡಿಸುತ್ತಿದ್ದಾಗ, ಛಲ ಬಿಡದ ತ್ರಿವಿಕ್ರಮನಂತೆ ರಾಮಯ್ಯ ಆಸ್ಪತ್ರೆಯಲ್ಲಿ ಕೃತಕ ಹಲ್ಲುಗಳನ್ನು ಕಟ್ಟಿಸಿಕೊಂಡು ಕೆಲ ತಿಂಗಳುಗಳ ನಂತರ ಮತ್ತೆ ಅದೇ ಕೃತಕ ಹಲ್ಲುಗಳ ಸಹಾಯದಿಂದ ಮೊದಲಿಗಿಂತಲೂ ಸುನಾದವಾಗಿ ಮೋರ್ಚಿಂಗ್ ನುಡಿಸುವ ಮೂಲಕ ಹೆಂಗೇ ನಾವೂ!! ಎಂದು ಅವರ ಕುಟುಂಬದವರ ಮುಂದೆ ಮೀಸೆ ಮತ್ತು ಹುಬ್ಬನ್ನು ಹಾರಿಸಿಕೊಂಡು ಹುಸಿ ನಕ್ಕಿದ್ದನ್ನು ಅವರ ಕುಟುಂಬದವರು ಎಂದಿಗೂ ಮರೆಯಲು ಸಾಧ್ಯವೇ ಇಲ್ಲಾ.
ಇಷ್ಟಲ್ಲಾ ಬಹುಮುಖ ಪ್ರತಿಭೆಯ ಜೊತೆಗೆ ಕಾರ್ಮಿಕ ಕವಿ ಗಮಕಿ ಶಿವಮೂರ್ತಿ ಎಂಬ ಕಾವ್ಯ ನಾಮದೊಂದಿಗೆ ಹಲವಾರು ಹಾಡುಗಳನ್ನು ಅದರಲ್ಲೂ ವಿಶೇಷವಾಗಿ ಭಾಮಿನೀ ಷಟ್ಪದಿಯಲ್ಲಿ ರಚಿಸುತ್ತಿದ್ದ ಆಶೀರ್ವಚನಗಳನ್ನು ಕೇಳುವುದೇ ಮಹದಾನಂದವಾಗುತ್ತಿತ್ತು.
- ಶ್ರೀ ವನಿತೆಯರಸನೆ…
- ಶರಣ ಸಂಗವ್ಯಸನ..
- ಭೂ ವ್ಯೋಮ ಪಾತಾಳ..
- ಗೀತೆ ಶ್ರೀ ಹರಿ ಮುಖ ಜಾತೆ….
- ಶೈಲ ಬಾಲೆ ಸ್ವರ್ಣಾಂಬೆ ..
ಮುಂತಾದವುಗಳನ್ನು ಅವರ ಕಂಚಿನ ಕಂಠದಲ್ಲಿ ಕೇಳಿದವರ ಕಿವಿಗಳಲ್ಲಿ ಅವರ ನಿನಾದ ಇನ್ನೂ ಗುಂಯ್ ಗುಟ್ಟುವಂತಿದೆ.
ಆರೋಗ್ಯವೇ ಭಾಗ್ಯ ಎಂಬುದನ್ನು ಅಕ್ಷರಶಃ ಪಾಲಿಸುತ್ತಿದ್ದ ಶಿವಮೂರ್ತಿಗಳು ದೀರ್ಘ ನಡಿಗೆ, ಪ್ರಾಣಾಯಾಮ, ಯೋಗಾಸನಗಳನ್ನು ಚಾಚೂ ತಪ್ಪದೆ ಅಭ್ಯಾಸ ಮಾಡುತ್ತಲೇ ಸುಮಾರು 6 ದಶಕಗಳ ಕಾಲ ಒಂದೇ ರೀತಿಯ ಮೈಕಟ್ಟನ್ನು ಹೊಂದಿದ್ದೂ ಸಹಾ ಅನುಕರಣೀಯ. ತಮ್ಮ ಮೊಮ್ಮಗಳ ಭರತನಾಟ್ಯದ ರಂಗಪ್ರವೇಶದಲ್ಲಿ ಮನೆಯ ಹಿರಿಯರಂತೆ ಸ್ಟೇಜ್ ಮುಂದೆ ಕುಳಿತು ಕಾರ್ಯಕ್ರಮವನ್ನು ಸವಿಯುವುದರ ಬದಲು, ಪಕ್ಕ ವಾದ್ಯವವರೊಂದಿಗೆ ಸಹಕಲಾವಿದರಾಗಿ ತಮ್ಮ 81ನೇ ವಯಸ್ಸಿನಲ್ಲಿಯೂ ಚಿಕ್ಕ ವಯಸ್ಸಿನವರಂತೆ ಬಹಳ ಅಚ್ಚುಕಟ್ಟಾಗಿ ಇಚ್ಚೆಯಿಂದ ಮೋರ್ಚಿಂಗ್ ನುಡಿಸಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದರು. ಈ ಕಾರ್ಯಕ್ರಮವಾಗಿ ಒಂದು ವಾರದಲ್ಲೇ ಜಾತಸ್ಯ ಮರಣಂ ದೃವಂ ಅಂದರೆ ಹುಟ್ಟಿದವರು ಸಾಯಲೇ ಬೇಕೆಂಬ ಜಗದ ನಿಯಮದಂತೆ ದಿ. 2.10.2017ರ ಆಶ್ವಯುಜ ಶುಕ್ಲ ದ್ವಾದಶಿಯಂದು ತೀವ್ರ ಹೃದಯ ಸ್ಥಂಭನದಿಂದಾಗಿ ಅಕಾಲಿಕವಾಗಿ ಅಗಲಿದರೂ, ಆಡು ಮುಟ್ಟದ ಸೊಪ್ಪಿಲ್ಲ, ಶಿವಮೂರ್ತಿಗಳಿಗೆ ಗೊತ್ತಿಲ್ಲದಿದ್ದ ಕಲೆಯೇ ಇಲ್ಲ ಎಂದು ಹೇಳಿದರೂ ಅತಿಶಯೋಕ್ತಿ ಆಗಲಾರದು.
ಶಿವಮೂರ್ತಿಗಳ ಸ್ವಾಮಿನಿಷ್ಠೆ ನಿಜಕ್ಕೂ ಅದ್ಬುತವೇ ಸರಿ. ಅವರ ಧರ್ಮ, ನಂಬಿದ ದೇವರುಗಳು ಮತ್ತು ಸಿದ್ಧಾಂತಕಷ್ಟೇ ಕಟಿಬದ್ಧರಾಗಿದ್ದದ್ದಲ್ಲದೇ, ತಾವು ಕೆಲಸ ಮಾಡುತ್ತಿದ್ದ ಬಿಇಎಲ್ ಕಾರ್ಖಾನೆಯನ್ನು ಅವರು ಕೇವಲ ಕೆಲಸ ಮಾಡುವ ಸ್ಥಳ ಎನ್ನುವುದಕ್ಕಿಂತಲೂ ಅದನ್ನು ದೇವಾಲಯ ಎಂದೇ ನಂಬಿದ್ದ ಕಾರಣ ಅವರು ಕೆಲಸ ಮಾಡುತ್ತಿದ್ದ ಸಮಯದಲ್ಲಿ ಪ್ರತೀ ದಿನವೂ ಕಾರ್ಖಾನೆ ಒಳಗೆ ಹೋಗುವಾಗ ನಮಸ್ಕಾರ ಮಾಡಿಕೊಂಡು ಹೋಗುತ್ತಿದ್ದದ್ದಲ್ಲದೇ, ನಿವೃತ್ತರಾದ ನಂತರೂ, ತಮ್ಮ ಬದುಕನ್ನು ಕಟ್ಟಿಕೊಳ್ಳಲು ಆಶ್ರಯ ನೀಡಿದ ಬಿಇಎಲ್ ಕಾರ್ಖಾನೆಯ ಮುಂದೆ ಹೋಗುವಾಗಲೆಲ್ಲಾ ದೇವಾಸ್ಥಾನಕ್ಕೆ ಕೈ ಮುಗಿಯುವಂತೆ ನಿಂತು ನಮಸ್ಕಾರ ಮಾಡುತ್ತಿದ್ದದ್ದಲ್ಲದೇ ಅದೇ ಸಂಪ್ರದಾಯವನ್ನು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೂ ಕಲಿಸಿಕೊಟ್ಟಿದ್ದರು. ಇನ್ನು ಕೆಲಸ ಮಾಡುವಾಗ ಮಧ್ಯಾಹ್ನ ಟೀ ಸಮಯದಲ್ಲಿ ಸುಮಾರು ವರ್ಷಗಳ ಕಾಲ ತಮ್ಮ ಸಹೋದ್ಯೋಗಿಗಳಿಗೆ ಸಂಪೂರ್ಣ ರಾಮಾಯಣ ಮತ್ತು ಮಹಾಭಾರತಗಳನ್ನು ಲೆಕ್ಕವಿಲ್ಲದಷ್ಟು ವರ್ಷಗಳ ಹೇಳಿದ್ದರು. ಶ್ರೀ ಗೋಪಾಲ ಕೃಷ್ಣ ಎಂಬ ಅವರ ಅಂಧ ಸಹೋದ್ಯೋಗಿಗಳು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಷ್ಟೂ ಕಾಲ ಅವರನ್ನು ಊಟಕ್ಕೆ ಕರೆದುಕೊಂಡು ಹೋಗುವ ಜವಾಬ್ಧಾರಿಯನ್ನು ಸ್ವಪ್ರೇರಣೆಯಿಂದಲೇ ಮಾಡುತ್ತಿದ್ದರು. ಬಿಇಎಲ್ ಕಾರ್ಖಾನೆಯ ಮೇಲೆ ಅವರ ವ್ಯಾಮೋಹ ಎಷ್ಟಿತ್ತೆಂದರೆ, ಉಸಿರಾಟದಲ್ಲಿ ವ್ಯತ್ಯಾಸದಿಂದಾಗಿ ಅಂಬ್ಯುಲೆನ್ಸ್ ನಲ್ಲಿ ರಾಮಯ್ಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ್ ಬಿಇಎಲ್ ಕಾರ್ಖಾನೆಯ ಮುಂದಿರುವ ಎರಡು ಹಂಪ್ ದಾಟುತ್ತಿದ್ದಂತೆಯೇ ಎರಡು ಬಾರಿ ಜೋರಾಗಿ ಉಸಿರಾಡಿ, ಶಾಶ್ವತವಾಗಿ ಅವರ ಉಸಿರು ನಿಂತಿತ್ತು. ಬಹುಶಃ ಬಿಇಎಲ್ ಕಾರ್ಖಾನೆಗೆ ಅಂತಿಮ ನಮನ ಸಲ್ಲಿಸುವುದಕ್ಕಾಗಿಯೇ ಅವರ ಜೀವ ಹಂಬಲಿಸುತ್ತಿತ್ತೋ ಏನೋ?
ಅಗಾಧವಾದ ನೆನಪಿನ ಶಕ್ತಿಯು ಶಿವಮೂರ್ತಿಗಳ ಮತ್ತೊಂದು ಪ್ರಮುಖ ಅಂಶವಾಗಿತ್ತು. ಒಮ್ಮೆ ಯಾವುದೇ ಒಂದು ವಿಷಯವನ್ನು ಕೇಳಿದರೆ, ಅಥವಾ, ಯಾರನ್ನಾದರೂ ನೋಡಿ ಮಾತನಾಡಿಸಿದರೆ, ಅಥವಾ ಯಾವುದೋ ಒಂದು ಹಾಡನ್ನು ಕೇಳಿದರೆ ಸುಮಾರು ವರ್ಷಗಳ ನಂತರ ಕೇಳಿದರೂ ಕ್ಷಣ ಮಾತ್ರದಲ್ಲೇ ಹೇಳಿ ಬಿಡುತ್ತಿದ್ದರು ಎನ್ನುವುದಕ್ಕೆ ಅವರು ಅಸುನೀಗಿದ ಕೆಲವೇ ನಿಮಿಷಗಳ ಹಿಂದೆ ಸ್ವಲ್ಪ ವಾಂತಿ ಮಾಡಿಕೊಂಡರೆಂದು ಹತ್ತಿರದ ನರ್ಸಿಂಗ್ ಹೋಂಗೆ ಕರೆದುಕೊಂಡು ಹೋದಾಗ, ಏನು ಅಡವಿಯಮ್ಮಾ ಚೆನ್ನಾಗಿದ್ದೀರಾ? ಬಿಇಎಲ್ ಆಸ್ಪತ್ರೆಯಿಂದ ನಿವೃತ್ತರಾದ ಮೇಲೆ ಇಲ್ಲಿ ಎಷ್ಟು ದಿನಗಳಿಂದ ಕೆಲಸ ಮಾಡುತ್ತಿದ್ದೀರೀ? ಎಂದು ನರ್ಸ್ ಅವರನ್ನು ವಿಚಾರಿಸಿದಾಗ ಆಕೆಯೇ ಮೊದಲು ತಬ್ಬಿಬ್ಬಾಗಿ ಸ್ವಲ್ಪ ಸಮಯದ ನಂತರ ಅವರನ್ನು ನೆನಪಿಸಿಕೊಂಡು ಮಾತನಾಡಿಸಿದ್ದರು. ಇನ್ನು ರಾಮಾಯಣ ಮಾಹಾಭಾರತ, ಭಾಗವತ, ಇತಿಹಾಸ, ಪೌರಾಣಿಕ ನಾಟಕಗಳ ಮಟ್ಟುಗಳು ಮತ್ತು ಸಂಭಾಷಣೆಗಳು ಹೀಗೆ ಎಲ್ಲವೂ ಸದಾ ಕಾಲ ಅವರ ನಾಲಿಗೆಯ ತುದಿಯಲ್ಲಿಯೇ ಇರುತ್ತಿತ್ತು.
ಬಡವನಾಗಿ ಹುಟ್ಟುವುದು ತಪ್ಪಲ್ಲ ಬಡವನಾಗಿ ಸಾಯುವುದು ತಪ್ಪು ಎಂಬ ಮಾತಿಗೆ ಅನ್ವರ್ಥವಾಗಿ ಹುಟ್ಟಿನಿಂದಲೇ ಆರ್ಥಿಕವಾಗಿ ಬಡವರಾಗಿದ್ದ ವಾರನ್ನ ಮಾಡುತ್ತಾ, ಓದಿ ಬೆಳೆದು, ನಂತರದ ದಿನಗಳಲ್ಲಿ ಆರ್ಥಿಕವಾಗಿ ತಕ್ಕಮಟ್ಟಿಗೆ ಸದೃಢರಾದರೂ ಅದಕ್ಕಿಂತಲೂ ಹೆಚ್ಚಾಗಿ ತಮ್ಮ ಸ್ವಂತ ಪರಿಶ್ರಮದಿಂದ ಬೌದ್ಧಿಕವಾಗಿ ಅತ್ಯಂತ ಶ್ರೀಮಂತರಾಗಿ ತಾವು ಕಲಿತ ಸಂಸ್ಕಾರ, ಸಂಪ್ರದಾಯ, ಧೈರ್ಯ, ಸ್ಥೈರ್ಯ, ಸ್ವಾಭಿಮಾನ ದೇಶಾಭಿಮಾನ, ಕನ್ನಡ ಭಾಷೆಯ ಬರವಣಿಗೆ,ಮಾತನಾಡುವ ಕಲೆ, ಸಂಗೀತ, ಗಮಕ ಮುಂತಾದವುಗಳನ್ನು ನೂರಾರು ಜನರಿಗೆ ಕಲಿಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ತಕ್ಕ ಮಟ್ಟಿಗೆ ಕಾಪಾಡುವಂತಹ ಕಾಯಕದಲ್ಲಿ ತೊಡಗಿಕೊಂಡಿದ್ದ ಶ್ರೀ ಶಿವಮೂರ್ತಿಗಳು ಖಂಡಿತವಾಗಿಯೂ ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ