ಧನುರ್ಮಾಸ

ಕಾರ್ತೀಕಮಾಸ ಮುಗಿದು ಮಾರ್ಗಶಿರ ಮಾಸ ಆರಂಭವಾಗುತ್ತಿದ್ದಂತೆಯೇ, ಪ್ರಕೃತಿಯಲ್ಲಿಯೂ ಸಹಾ ಭಾರೀ ಬದಲಾವಣೆಯಾಗಿ  ಹಗಲೆಲ್ಲಾ ಬಿಸಿ ರಾತ್ರಿ ಆಗುತ್ತಿದ್ದಂತೆಯೇ ವಿಪರೀತ ಛಳಿ ಶುರುವಾಗಿ ಕೊರೆಯುವ ಛಳಿಯನ್ನು ತಡೆಯಲಾರಂದಂತೆ ರಾತ್ರಿಯ ವೇಳೆ ಮನುಷ್ಯರು ತಮ್ಮ ದೇಹವನ್ನು ಬಿಲ್ಲಿನಂತೆ ಬಾಗಿಸಿ ಬೆಚ್ಚನೆಯ ಹೊದ್ದಿಗೆಯನ್ನು ಹೊದ್ದು ಕೊಂಡು ಮುದುರಿಕೊಂಡು ಮಲಗುವ ಕಾರಣ ಈ ಮಾಸವನ್ನು ಧನುರ್ಮಾಸ ಎಂದು ಕರೆಯಲಾಗುತ್ತದೆ ಎಂಬ ಪ್ರತೀತಿ ಇದ್ದರೆ, ಇನ್ನು ಹಿಂದೂ ಪಂಚಾಂಗದ ಪ್ರಕಾರ,  ಸೂರ್ಯನು ಧನುರಾಶಿಯಲ್ಲಿ ಗೋಚರಿಸುವ ತಿಂಗಳನ್ನೇ ಧನುರ್ಮಾಸ ಎಂದು ಕರೆಯಲಾಗುತ್ತದೆ.  ಶ್ರೀಕೃಷ್ಣನು ಕೂಡ ಭಗವದ್ಗೀತೆಯಲ್ಲಿ ಮಾಸಾನಾಂ ಮಾರ್ಗಶೀಷೋಸ್ಮಿ ಎಂದಿದ್ದಾನೆ. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಒಂದು ತಿಂಗಳ ಅವಧಿ ಬೇಕಾಗುತ್ತದೆ. ಅಂತೆಯೇ ಧನುರಾಶಿಯನ್ನು ಪ್ರವೇಶಿಸಿ ಮಕರರಾಶಿಗೆ ಬರಲು ಒಂದು ತಿಂಗಳು ಬೇಕು. ಸೂರ್ಯನು ಧನುರಾಶಿಯಲ್ಲಿರುವ ಈ ಒಂದು ತಿಂಗಳ ಅವಧಿಯನ್ನೇ ಧನುರ್ಮಾಸ ಎಂದು ಕರೆಯಲಾಗುತ್ತದೆ.

ನಮ್ಮ ಸನಾತನ ಪಂಚಾಂಗದ ಪ್ರಕಾರ ಒಂದು ವರ್ಷವನ್ನು ಉತ್ತರಾಯಣ(ಹಗಲು ಜಾಸ್ತಿ)  ಮತ್ತು ದಕ್ಷಿಣಾಯನ(ರಾತ್ರಿ ಜಾಸ್ತಿ) ಎಂದು ಎರಡು ಭಾಗಗಳನ್ನಾಗಿ ವಿಂಗಡಿಸಲಾಗಿದ್ದು ನಮ್ಮ  ಇಡೀ ಒಂದು ವರ್ಷ ದೇವತೆಗಳಿಗೆ ಒಂದು ದಿನದ ಸಮಾನವಾಗಿದ್ದುದಕ್ಷಿಣಾಯನ ಪುಣ್ಯಕಾಲದಲ್ಲಿ ಬರುವ ಮಾರ್ಗಶಿರ ಮಾಸವು ದೇವತೆಗಳಿಗೆ ರಾತ್ರಿಯ ನಿದ್ದೆ ಕಳೆದು ಬೆಳ್ಳಿಗ್ಗೆ ಏಳುವ ಸಮಯವಾಗಿರುತ್ತದೆ, ಹೀಗೆ ರಾತ್ರಿ ಮುಗಿಯುತ್ತಿರುವ ಸಮಯವನ್ನು ಬ್ರಾಹ್ಮಿಮುಹೂರ್ತವಾಗಿದ್ದು ಇಡೀ ಒಂದು ತಿಂಗಳ ಪೂರ್ತಿ ಬ್ರಹ್ಮ ಮುಹೂರ್ತವೇ ಆಗಿರುತ್ತದೆ. ಹಾಗಾಗಿ  ಈ ಧನುರ್ಮಾಸದಲ್ಲಿ ಬೆಳ್ಳಂಬೆಳಿಗ್ಗೆ ಎದ್ದು ಚಳಿ ಮಳೆ ಗಾಳಿಯನ್ನು ಲೆಖ್ಖಿಸದೇ ಕೆರೆ ಕಟ್ಟೆ ಇಲ್ಲವೇ ನದಿಯಲ್ಲಿ ಅಥವಾ ಮನೆಯಲ್ಲಿ ಆದರೂ ಸ್ನಾನ ಮಾಡಿ ದೇಹವನ್ನು ದಂಡಿಸಿ ದೇವರ ಕಾರ್ಯಗಳನ್ನೇ ಮಾಡಿದರೆ ನಮ್ಮ ಇಷ್ಟಾರ್ಥಗಳು ಫಲಿಸುತ್ತವೆ ಎನ್ನುವ ನಂಬಿಕೆಯಿದೆ.

ಧನುರ್ಮಾಸದ ಮೂವತ್ತು ದಿನಗಳ ಆರಂಭವು ಮಾರ್ಗಶಿರ ಮಾಸದ ಮಧ್ಯಂತರದಲ್ಲಿ ಪ್ರಾರಂಭವಾಗಿ ಪುಷ್ಯ ಮಾಸದ ಮಧ್ಯದಲ್ಲಿ ಮಕರ ಸಂಕ್ರಾಂತಿಯಂದು ಮುಕ್ತಾಯಗೊಳ್ಳುತ್ತದೆ, ಧನುರ್ಮಾಸದ ಮೂವತ್ತೂ ದಿನಗಳೂ ಹಬ್ಬವಾಗಿದ್ದು ಈ ಮಾಸದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಭಗವಾನ್ ಶ್ರೀ ವಿಷ್ಣುವಿನನ್ನು  ಪೂಜೆ ಮಾಡುವುದು ಶ್ರೇಷ್ಠ ಎನ್ನಲಾಗುತ್ತದೆ.  ಉತ್ಥಾನ ದ್ವಾದಶಿ ತುಳಸೀ ಹಬ್ಬದಂದು ಎಚ್ದರಗೊಳ್ಳುವ ಭಗವಾನ್ ವಿಷ್ಣುವಿಗೆ  ಧನುರ್ಮಾಸ ಅರುಣೋದಯವಾಗಿದೆ. ಹಾಗಾಗಿ ಮಹಾವಿಷ್ಣುವಿನ ಪೂಜೆಗೆ ಇದು ಸಕಾಲವಾಗಿದೆ ಎನ್ನಲಾಗುತ್ತದೆ.  ಇನ್ನು ಧನುರ್ಮಾಸವನ್ನು ಧನುಮಾಸ, ಅಧ್ಯಾಯ ಮಾಸ, ಕೋದಂಡ ಮಾಸ, ಕಾರ್ಮುಕ ಮಾಸ, ಖಾರ್ಮಾಸ,  ಶೂನ್ಯಮಾಸ ಎಂಬ ವಿವಿಧ ಹೆಸರುಗಳಿಂದ ಕರೆಯುತ್ತಾರೆ.

ಧನುರ್ಮಾಸದಂದು  ಏನು ಮಾಡಬೇಕು ಮತ್ತು ಹೇಗೆ ಆಚರಿಸಬೇಕು ಎಂಬುದನ್ನು ಸ್ಥೂಲವಾಗಿ ಈ ಶ್ಲೋಕದಲ್ಲಿ ವಿವರಿಸಲಾಗಿದೆ.

ತಸ್ಮಾತ್ ಸರ್ವಪ್ರಯತ್ನೇನ ಚಾಪಮಾಸೇ ದಿನೆ ದಿನೆ | ಉಷ:ಕಲೆ ತು ಸಂಪ್ರಾಪ್ತೇ ಅರ್ಚಯಿತ್ವಾ ಜನಾರ್ಧನಂ|
ಉಪಚಾರೈ: ಷೋಡಶೀಭಿರ್ಮುದ್ಗಾನ್ನಂ ಚ ನಿವೇದಯೇತ್ | ಯಥಾ ಸಂಕೋಚ್ಯ ಸತ್ಕರ್ಮ ಭುಂಕ್ತೇಲ್ಪದ್ವಾದಶೀದಿನೇ |
ತಥಾ ಪ್ರಾತರ್ಧನುರ್ಮಾಸೇ ತ್ಯಕ್ತಾ ವ ಕರ್ಮಾಣ್ಯರ್ಚಯೇಚ್ಚಮಾಮ್ | 

ಧನುರ್ಮಾಸದ ಸಮಯದಲ್ಲಿ ಪ್ರತೀ ದಿನವೂ,  ಉಷ ಕಾಲದಲ್ಲೇ ಎದ್ದು ಸೂರ್ಯೋದಯಕ್ಕಿಂತಲೂ ಮುಂಚೆಯೇ ಆಕಾಶದಲ್ಲಿ ಇನ್ನೂ ನಕ್ಷತ್ರ ಕಾಣಿಸುತ್ತಿರುವ  ಹೊತ್ತಿನಲ್ಲೇ ದೇವರ ಪೂಜೆ ಮಾಡಿದಲ್ಲಿ ಅದು ಶ್ರೇಷ್ಠ ಪೂಜೆ ಎನಿಸಿಕೊಳ್ಳುತ್ತದೆ. ಆದಾದ ನಂತರ ಮಾಡಿದ ಪೂಜೆ ಮಧ್ಯಮ. ಸೂರ್ಯೋದಯದ  ನಂತರ ಮಾಡುವ ಪೂಜೆ  ಅಧಮ ಅಥವಾ ನಿಷ್ಫಲ ಎನಿಸಿಕೊಳ್ಳುತ್ತದೆ. ಧನುರ್ಮಾಸದ ಪೂಜೆಯ ಸಮಯದಲ್ಲಿ ಪ್ರತಿನಿತ್ಯವೂ ದೇವರಿಗೆ ಬೇರೇ ಯಾವುದೇ ನೈವೇದ್ಯವನ್ನು ಮಾಡಲಾಗದೇ ಹೋದರೂ, ಕನಿಷ್ಟ ಪಕ್ಷ ಮುದ್ಗಾನ್ನ(ಹುಗ್ಗಿ)ವನ್ನಾದರೂ  ನೈವೇದ್ಯವಾಗಿ ಸಮರ್ಪಿಸಿ ನಂತರ ಪಾರಾಯಣಾದಿಗಳನ್ನು ಮಾಡಬೇಕು ಎನ್ನುತ್ತದೆ ಈ ಶ್ಲೋಕ

ಧನುರ್ಮಾಸದಲ್ಲಿ ಬಹುತೇಕ  ದೇವಾಲಯಗಳಲ್ಲಿನ ಅರ್ಚಕರು ಸೂರ್ಯೋದಯಕ್ಕೆ ಮನ್ನವೇ ಸಾಂಗೋಪಾಂಗವಾಗಿ ಶೋಷಡೋಪಚಾರ  ದೇವರ ಪೂಜೆ ಮಾಡುತ್ತಿದರೆ, ಇನ್ನು ಭಕ್ತಾದಿಗಳು ಬಹುತೇಕ ದೇವಾಲಯಗಳಲ್ಲಿ ಪ್ರತೀ ದಿನವೂ ಭಜನೆಯನ್ನು ಮಾಡುವ ಇಲ್ಲವೇ ವಿಷ್ಣು/ಲಲಿತಾ ಸಹಸ್ರನಾಮ ಪಠಿಸುವ ಸಂಪ್ರದಾಯವನ್ನು ರೂಢಿಸಿಕೊಂಡಿರುತ್ತಾರೆ.

 

ಇನ್ನು ನೈವೇದ್ಯಕ್ಕೆ ವಿಶೇಷವಾಗಿ ಸಿಹಿ ಮತ್ತು ಖಾರಾ ಹುಗ್ಗಿಯನ್ನೇ ಮಾಡುವ ಪದ್ದತಿಯಿದ್ದು ಈ ಪದ್ದತಿಯ ಹಿಂದೆಯೂ ವೈಜ್ಞಾನಿಕ ಕಾರಣವಿದೆ. ಚಳಿಗಾಲದಲ್ಲಿ ದೇಹ ಎಣ್ಣೆ ಅಂಶ ಕಳೆದುಕೊಳ್ಳುವುದರಿಂದ ಚರ್ಮ ಎಲ್ಲವೂ ಒಡೆದು ಹೋಗಿರುತ್ತದೆ. ಇದಕ್ಕೆ ಪೂರಕವಾಗಿ ಹುಗ್ಗಿಯಲ್ಲಿ ಬಳಸಲಾಗುವ ತುಪ್ಪ ಮತ್ತು ಒಣ ಕೊಬ್ಬರಿ ಇಲ್ಲವೇ ಕಾಯಿ ತುರಿ ದೇಹಕ್ಕೆ ಅಗತ್ಯವಿರುವ ಎಣ್ಣೆಯ ಅಂಶವನ್ನು ನೀಡಿ ಚರ್ಮವನ್ನು ಹೊಳೆಯುವಂತೆ ಮಾಡಿದರೆ, ಮೆಣಸು ಮತ್ತು ಜೀರಿಗೆ ದೇಹದಲ್ಲಿ ಶಾಖವನ್ನು ಹೆಚ್ಚು ಮಾಡುವ ಮೂಲಕ  ಕಫ, ವಾಂತಿ ಪಿತ್ತ ನಿವಾರಿಸಿ ದೇಹಕ್ಕೆ ಉಷ್ಣವನ್ನು ನೀಡಿ  ಶೀತದಿಂದ ರಕ್ಷಿಸುವಂತಾಗುತ್ತದೆ. ಇನ್ನು ಹಸಿ ಶುಂಠಿ ಜೀರ್ಣಕ್ರಿಯೆಗೆ ಶ್ರೇಷ್ಠವಾದರೆ, ಅರಿಶಿನ ಸಕಲ ರೋಗನಿವಾರಕ ಶಕ್ತಿಯನ್ನು ಹೊಂದಿದೆ. ಈ ರೀತಿಯಾಗಿ ಹವಾಮಾನದ ವೈಪರೀತ್ಯವನ್ನು  ಹುಗ್ಗಿಯ ಪ್ರಸಾದ ರೂಪದಲ್ಲಿ ಸೇವಿಸಿ ರಕ್ಷಿಸಿಕೊಳ್ಳುವಂತೆ ಮಾಡುವುದರ ಹಿಂದೆ ನಮ್ಮ ಪೂರ್ವಜರ ಜ್ಞಾನವನ್ನು ಎಷ್ಟು ಕೊಂಡಾಡಿದರೂ ಸಾಲದು.

ಇನ್ನು ಧನುರ್ಮಾಸ ಆಚರಣೆಯಿಂದ ದೊರೆಯಬಹುದಾದ ಪ್ರಾಪ್ತಿಯನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ

ದಧ್ಯಾರ್ದಕಂ ಚ ಮುದ್ಗಾನ್ನಂ ದದ್ಯಾಚ್ಚೈಲಾಗುಡೋಜ್ಜ್ವಲಂ | ಸುಸುಖೋಷ್ಣಂ ಸಕಂದಂ ಚ ವಿಷ್ಣವೇ ಯ: ಸಮರ್ಪಯೇತ್|
ದೃಷ್ಟ್ವಾ ತಚ್ಚುಭಮುದ್ಗಾನ್ನಂ ಸಂತುಷ್ಟೋ ಭಕ್ತವತ್ಸಲ: | ದದಾತಿ ಸಕಲಾನ್ ಭೋಗಾನ್ ಮೋಕ್ಷಂ ಚ ಜಗದೀಶ್ವರ: |

ಧನುರ್ಮಾಸದಲ್ಲಿ ಭಗವಂತನಿಗೆ ಅತ್ಯಂತ ಪ್ರೀತಿಪಾತ್ರವಾದ  ಮುದ್ಗಾನ್ನ(ಹುಗ್ಗಿ) ನಿವೇದನೆಯಿಂದಾಗಿ, ಭಗವಂತನನ್ನು ಸಂಪ್ರೀತಗೊಳಿಸುವ ಮೂಲಕ, ಶತ್ರುಗಳು ನಿವಾರಣೆ, ದೀರ್ಘಾಯಸ್ಸು. ಧನಧಾನ್ಯ ಸಂಪತ್ತು ವೃದ್ಧಿಯಾಗುವುದಲ್ಲದೇ ವೇದಶಾಸ್ತ್ರಾಭ್ಯಾಸಕ್ಕೂ ಸಾಧನವಾಗಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಪ್ರತಿಜನ್ಮದಲ್ಲೂ ವಿಷ್ಣುವಿನ ಭಕ್ತರಾಗಿ ಜನಿಸುವ ಮಹಾಭಾಗ್ಯವು ಲಭಿಸುವಂತಾಗುತ್ತದೆ ಎನ್ನುತ್ತದೆ ಈ ಶ್ಲೋಕ.

ಇನ್ನು ವೈಜ್ಞಾನಿಕವಾಗಿ ಯಾವುದೇ ಒಂದು ಕ್ರಿಯೆಯನ್ನು ಸತತವಾಗಿ 21 ದಿನಗಳವರೆಗೆ ಮಾಡಿದಲ್ಲಿ  ಅಂತಹ ಅಭ್ಯಾಸಗಳು ನಮ್ಮ ದೈನಂದಿನ ಚಟುವಟಿಕೆಯನ್ನಾಗಿ ನಮ್ಮ ದೇಹ ಒಗ್ಗಿಕೊಳ್ಳುತ್ತದೆ ಎನ್ನುತ್ತದೆ. ಧನುರ್ಮಾಸದ ಮೂವತ್ತು ದಿನಗಳ ಕಾಲಪ್ರತೀ ದಿನ ಬೆಳಿಗ್ಗೆ ಎದ್ದು ಸ್ನಾನ ಸಂಧ್ಯಾವಂದನಾದಿಗಳನ್ನು ಮುಗಿಸಿ ಭಗವಂತನ ಸ್ಮರಣೆ ಮಾಡುವುದು ಮತ್ತು ಹತ್ತಿರದ ದೇವಾಲಯಗಳಿಗೆ ಹೋಗುವುದುದನ್ನು ರೂಢಿಸಿಕೊಂಡಲ್ಲಿ ಅಂತಹ ಅಭ್ಯಾಸ ಯಾಂತ್ರೀಕರಣಚಾಗಿ (ಮೆದುಳು, ನಿರ್ದಿಷ್ಟವಾಗಿ ಬಾಸಲ್ ಗ್ಯಾಂಗ್ಲಿಯಾ, ಅಲ್ಲಿ ತೆಗೆದುಕೊಳ್ಳುತ್ತದೆ) ದೀರ್ಘಕಾಲದವರೆಗೆ ನಮ್ಮ ದೈನಂದಿನ ಜೀವನಶೈಲಿಯನ್ನಾಗಿಸಿ ಉತ್ತಮ ಆರೋಗ್ಯವನ್ನು ಸಹಾ ಪಡೆಯಬಹುದಾಗಿದೆ.

ಭಗವಂತನ ಆರಾಧನೆ ಮತ್ತು ಭಕ್ತಿಗೆ ಹೆಚ್ಚು ಮಹತ್ವ ಕೊಡುವ ಢನುರ್ಮಾಸವು ಧಾರ್ಮಿಕ ಕಾರ್ಯಗಳಿಗೆ ತುಂಬಾನೇ ಶ್ರೇಷ್ಠವಾಗಿದ್ದು, ಈ ತಿಂಗಳಿನಲ್ಲಿ ಬ್ರಾಹ್ಮಿಮುಹೂರ್ತದಲ್ಲಿ ಅನೇಕ ದೇವತಾ ಕಾರ್ಯಗಳನ್ನು ಮಾಡಲಾಗುವುದಾದರೂ, ಧನುರ್ಮಾಸದಲ್ಲಿ ಮದುವೆ, ಮುಂಜಿಗಳಂತಹ ಶುಭ ಕಾರ್ಯಗಳನ್ನು ಮಾಡುವುದಿಲ್ಲ ಏಕೆಂದರೆ ಇದು ಭಗವಾನ್ ವಿಷ್ಣುವಿನ ಆರಾಧನೆಗೆ ಮೀಸಲಾದ ಭಕ್ತಿಯ ಮಾಸವಾಗಿದ್ದು ಈ ಸಮಯದಲ್ಲಿ ಸೂರ್ಯನು ಧನು ರಾಶಿಗೆ ಪ್ರವೇಶಿಸುವುದರಿಂದ ಶುಭ ಮುಹೂರ್ತಗಳು ಇರುವುದಿಲ್ಲ ಹಾಗಾಗಿ ಈ ಮಾಸದಲ್ಲಿ ಮದುವೆ, ವಧು ಪ್ರವೇಶ, ಹೊಸ ಕಟ್ಟಡ ನಿರ್ಮಾಣ, ಹೊಸ ವ್ಯಾಪಾರ, ವ್ಯಾಪಾರ, ಕ್ಷೌರ, ನಿಶ್ಚಿತಾರ್ಥ ಇತ್ಯಾದಿ ಅನೇಕ ಶುಭ ಕಾರ್ಯಕ್ರಮಗಳಿಗೆ ನಿಷಿದ್ಧವಿದೆ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಮಯದಲ್ಲಿ ಸೂರ್ಯನ ಚಲನೆ ನಿಧಾನ ಆಗಿರುವುದಲ್ಲದೇ, ಗುರುವಿನ ಮೇಲೆ ಪರಿಣಾಮ ಕಡಿಮೆ ಇರುತ್ತದೆ. ಹಾಗಾಗಿ ಈ ಸಮಯದಲ್ಲಿ ದೇವರ ಪೂಜೆಗಳ ಹೊರತಾಗಿ ಮಂಗಳ ಕಾರ್ಯಗಳನ್ನು ಮಾಡುವುದಿಲ್ಲವಾದ್ದರಿಂದ ಈ ಮಾಸವನ್ನು ಶೂನ್ಯ ಮಾಸ ಎಂದೂ ಸಹಾ ಕರೆಯಲಾಗುತ್ತದೆ. ಸೂರ್ಯನ ಚಲನೆಯು ಮಕರ ಸಂಕ್ರಾಂತಿಯ ಸಮಯದಲ್ಲಿ ದಿಕ್ಕು ಬದಲಿಸಿದ ನಂತರ ಶುಭಕಾರ್ಯಗಳನ್ನು ಮಾಡಬಹುದಾಗಿದೆ. ಧನುರ್ಮಾಸವನ್ನು ಸರಿಯಾಗಿ ಆಚರಿಸದೇ ಇದ್ದಲ್ಲಿ ದಾರಿದ್ರ್ಯಬುದ್ಧಿಯಿಂದಾಗಿ ಮುಂದಿನ ಏಳು ಜನುಮಗಳಲ್ಲೂ ದಾರಿದ್ರ್ಯ, ಕ್ಷಯರೋಗಗಳೂ ಮಂದಬುದ್ಧಿಯೂ ಬರುತ್ತದೆ ಎಂದು ಆಗ್ನೇಯ ಪುರಾಣದಲ್ಲಿ ತಿಳಿಸಲಾಗಿದೆ.

ಇದನ್ನು ಸಾಮಾಜಿಕ ಹಿನ್ನಲೆಯಲ್ಲಿ ಸೂಕ್ಷ್ಮವಾಗಿ ಅವಲೋಕನ ಮಾಡಿದಲ್ಲಿ ಈ ಸಮಯದಲ್ಲಿ ರೈತಾಪಿ ಜನರು ತಮ್ಮ ಹೊಲ ಗದ್ದೆಗಳಲ್ಲಿ ಬೆಳೆದ ಬೆಳೆಯನ್ನು ಕೊಯ್ಲು/ಕಟಾವು ಮಾಡುವ  ಇಲ್ಲವೇ ಕೊಯ್ದ ಫಸಲನ್ನು ಸೂಕ್ತವಾಗಿ ಸಂಗ್ರಹಿಸಿವಂತಹ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ, ಇಂತಹ ಸಮಯದಲ್ಲಿ ಶುಭಕಾರ್ಯಗಳನ್ನು ಇಟ್ಟುಕೊಂಡಲ್ಲಿ ಎಲ್ಲರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಸಾಧ್ಯವಾಗಬಹುದು ಎನ್ನುವುದು ಒಂದು ಕಡೆಯಾದರೆ, ಇನ್ನು  ಈ ಛಳಿಗಾಲದಲ್ಲಿ ಬಂದವರನ್ನು ಬೆಚ್ಚೆಗೆ ಆತಿಧ್ಯ ವಹಿಸಲೂ ಸಹಾ ಕಷ್ಟ ಆಗಬಹುದಾದ ಕಾರಣ ಶುಭ ಸಮಾರಂಭಗಳು ನಿಷಿದ್ಧವಾಗಿರಬಹುದು ಎನ್ನುವುದು ವಯಕ್ತಿಕ ಅಭಿಪ್ರಾಯವಾಗಿದೆ.

ಒಟ್ಟಿನಲ್ಲಿ ಧನುರ್ಮಾಸ ಆಚರಣೆಯಲ್ಲಿ ಪಾರಮಾರ್ಥಿಕತೆ, ವೈಜ್ಞಾನಿಕತೆ, ಭಾವನಾತ್ಮಕ ಸಂಬಂಧವೆಲ್ಲ ಕೂಡಿಕೊಂಡು ಒಳ್ಳೆಯದನ್ನೇ ನೀಡುವಂತಹ ಉತ್ತಮ ಅಂಶಗಳು ಇರುವ ಕಾರಣ, ಶ್ರದ್ಧಾ ಭಕ್ತಿಗಳಿಂದ ಮಹಾವಿಷ್ಣು, ಮಹಾ ಲಕ್ಷ್ಮಿ ಆದಿಯಾಗಿ ಎಲ್ಲಾ ದೇವಾನು ದೇವತೆಗಳನ್ನು ಭಕ್ತಿಯಿಂದ ಧ್ಯಾನಿಸುತ್ತಾ, ಧನುರ್ಮಾಸದ ಸಂಪೂರ್ಣ ಫಲವನ್ನು ಪಡೆಯೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನ 20205 ಡಿಸೆಂಬರ್ 18ರ ಹಂಪೆ ವರ್ಲ್ಡ್ ಪತ್ರಿಕೆಯಲ್ಲಿ ಪ್ರಕಟವಾಗಿದೆ

Leave a comment