ಖ್ಯಾತ ವಾಗ್ಗೇಯಕಾರರಾದ ಶ್ರೀ ತ್ಯಾಗರಾಜರು

ಕಲೆ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಇಡೀ ವಿಶ್ವಕ್ಕೆ ಭಾರತದ ಕೊಡುಗೆ ಅಪಾರವಾಗಿದೆ. ಸಂಗೀತ ಮತ್ತು ಸಾಹಿತ್ಯದ ಮೂಲಕ ಭಗವಂತನನ್ನು ಒಲಿಸಿಕೊಂಡ ಸಂತ ತುಳಸಿದಾಸರು, ಪುರಂದರದಾಸರು, ಕನಕದಾಸರುಗಳಲ್ಲದೇ ಬಸವಣ್ಣನವರು ಮತ್ತು ಅನೇಕ ವಚಕನಾರರು ನಮ್ಮ ದೇಶದಲ್ಲಿ ಕಾಣಬಹುದಾಗಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರಾದ ಶ್ರೀ ಪುರಂದರದಾಸರ ಉತ್ತರಾಧಿಕಾರಿಯಂತೆ ತಮ್ಮ ಅತ್ಯುನ್ನದ ಕೃತಿಗಳ ಮೂಲಕ  ಅದರಲ್ಲೂ ಪಂಚರ್ತನ ಕೀರ್ತನೆಗಳ ಮೂಲಕ  ಕರ್ನಾಟಕ ಸಂಗೀತವನ್ನು ಮತ್ತೊಂದು ಮಜಲಿಗೆ ತೆಗೆದುಕೊಂಡು ಹೋದ ಕೀರ್ತಿ ಶ್ರೀ ತ್ಯಾಗರಾಜರದ್ದಾಗಿದ್ದು, ಅವರ ಆರಾಧನೆಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ

ಕ್ರಿ.ಶ. 18ನೇ ಶತಮಾನದಲ್ಲಿ ತ್ರಿಮೂರ್ತಿಗಳಾದ ಶ್ರೀ ಶ್ಯಾಮಶಾಸ್ತ್ರೀ, ಶ್ರೀ ತ್ಯಾಗರಾಜರು ಮತ್ತು ಶ್ರೀ ಮುತ್ತುಸ್ವಾಮಿ ದೀಕ್ಷಿತರುಗಳನ್ನು  ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಮೂರು ಧ್ರುವತಾರೆಗಳೆಂದೇ ಕರೆಯಲಾಗುತ್ತದೆ. ಈ ಎಲ್ಲಾ ಮಹಾನುಭಾವರುಗಳು ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಸಲುವಾಗಿ ತಮ್ಮ ತಮ್ಮ ಕೃತಿಗಳು ಮತ್ತು  ಅದಕ್ಕೆ ಸೂಕ್ತವಾದ ರಾಗ ಮತ್ತು ತಾಳಗಳನ್ನು ಅಳವಡಿಸಿಕೊಂಡು ಹಾಡಿ ಹೊಗಳಿರುವವುದರ ಪೈಕಿ ಪ್ರಸ್ತುತ ನಮ್ಮೊಂದಿಗೆ ಕೆಲವೇ ಕೆಲವು ಕೃತಿಗಳು ಉಳಿದಿದ್ದರೂ ಅವುಗಳು ಉತ್ಕೃಷ್ಠ ಕೃತಿಗಳೆಂದೇ ಪ್ರಸಿದ್ಧಿಯನ್ನು ಪಡೆದಿರುವುದು ಗಮನಾರ್ಹವಾಗಿದೆ.

ಪ್ರಸ್ತುತ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಾರ್ಕಪುರಂ ಬಳಿಯ ಕಂಬಂ ಮೂಲದ ಕಾಕರ್ಲ ಎಂಬ ಸ್ಮಾರ್ತ ಮುಲಕನಾಡು ಬ್ರಾಹ್ಮಣ ಕುಟುಂಬ ವಿಜಯನಗರ ಸಾಮ್ರಾಜ್ಯದ ಪತನದ ನಂತರ ರಾಜಾಶ್ರಯಕ್ಕಾಗಿ  ಇಂದಿನ ತಮಿಳುನಾಡಿನ ತಿರುವರೂರು ಜಿಲ್ಲೆಯ ತಿರುವೈಯಾರು ಎಂಬ ಪ್ರದೇಶಕ್ಕೆ ವಲಸೆ ಬಂದ ನಂತರ ಮಹಾನ್ ಸಂಗೀತಗಾರಾಗಿದ್ದಂತಹ ಶ್ರೀ ಕಾಕರ್ಲ ರಾಮಬ್ರಹ್ಮ ಮತ್ತು ಶ್ರೀಮತಿ  ಸೀತಮ್ಮ ದಂಪತಿಗಳ ಮೂರನೇ ಮಗನಾಗಿ ಸರ್ವಜಿತ್ ಸಂವತ್ಸರದ ಚೈತ್ರಮಾಸದ ಇಪ್ಪತ್ತೈದನೇ ದಿನ, ಅರ್ಥಾತ್ 4-5-1767 ರಲ್ಲಿ ತಿರುವರೂರಿನಲ್ಲಿ ಜನಿಸಿದ ಮಗುವಿಗೆ ತಿರುವರೂರಿನ ಪ್ರಧಾನ ದೇವರಾದ ತ್ಯಾಗರಾಜನ ನೆನಪಿಗಾಗಿ ತ್ಯಾಗಬ್ರಹ್ಮನೆಂದು ನಾಮಕರಣ ಮಾಡಿದರೂ ಎಲ್ಲರೂ ಪ್ರೀತಿಯಿಂದ ತ್ಯಾಗರಾಜ ಎಂದೇ ಕರೆಯಲಾರಂಭಿಸಿ ಅದೇ ಹೆಸರು ಶಾಶ್ವತವಾಗಿ ಉಳಿದು ಹೋಯಿತು.

ತ್ಯಾಗರಾಜರ ಇಡೀ ಕುಟುಂಬ ಸಂಗೀತ ಸಾಧನೆಗೆ ಅಂದಿನ ಕಾಲದಲ್ಲೇ ಬಹಳ ಸುಪ್ರಸಿದ್ದಿಯನ್ನು ಹೊಂದಿದ್ದು. ಅವರ ತಂದೆಯ ಅಜ್ಜ ಕಾಕರ್ಲ ಗಿರಿರಾಜ ಬ್ರಹ್ಮಂ ಸ್ವತಃ ವಾಗ್ಗೇಯಕಾರಗಾಗಿದ್ದಲ್ಲದೇ ಸಂಗೀತಗಾರರಾಗಿದ್ದರೆ. ಇನ್ನು ಅವರ  ತಾಯಿಯ ಅಜ್ಜ ವೀಣಾ ಕಾಲಹಸ್ತಯ್ಯನವರು ಪ್ರಸಿದ್ಧ ವೀಣಾ ವಾದಕರಾಗಿದ್ದು, ಅವರಿಂದಲೇ ಬಾಲ್ಯದಲ್ಲಿ ತ್ಯಾಗರಾಜರಿಗೆ ಸಂಗೀತದ ಜೊತೆಗೆ ವೀಣಾವಾದನವೂ ಸೇರಿದಂತೆ ಬಾಲಪಾಠ ಆರಂಭವಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಮಾತೃ ಭಾಷೆ ತೆಲುಗು ಜೊತೆಗೆ ಆಡು ಭಾಷೆ ತಮಿಳೂ ಮತ್ತು  ಮನೆಯಲ್ಲಿ  ಸಂಸ್ಕೃತ ಕರಗತವಾಗಿದ್ದು, ತಂಜಾವೂರು ರಾಜರ ಅರಮನೆಯಲ್ಲಿ ಧರ್ಮ ಪ್ರವಚನಗಳನ್ನು ಮಾಡುತ್ತಿದ್ದ ತಂದೆಯವರಿಂದ ಅವರಿಗೇ ಅರಿವಿಲ್ಲದಂತೆ ಹಿಂದೂ ಧರ್ಮದ ಆಚಾರ ವಿಚಾರಗಳ ಜೊತೆ ಭಾಗವತ ಮತ್ತು ರಾಮಾಯಣಗಳು ಅವರಿಗೆ ಕರಗತವಾಗುತ್ತದೆ.

ವೀಣಾ ಕಾಲಹಸ್ತಯ್ಯನವರು ಕಾಲವಾದ ನಂತರ ತ್ಯಾಗರಾಜರು ತಂಜಾವೂರಿನ ಆಸ್ಥಾನ ವಿದ್ವಾಂಸರಾಗಿದ್ದ ಸೋಂಟಿ ವೇಂಕಟ ರಮಣಯ್ಯನವರಲ್ಲಿ ತಮ್ಮ  ಸಂಗೀತ ಶಿಕ್ಷಣವನ್ನು ಮುಂದುವರೆಸುವುದರ ಜೊತೆಯಲ್ಲೇ ಮನೆಯಲ್ಲಿ  ಸ್ವತಃ ಪ್ರಬುದ್ಧ ಸಂಗೀತಗಾರ್ತಿಯಾಗಿದ್ದ  ಅವರ ತಾಯಿಯವರಿಂದ ಪುರಂದರರು ಮತ್ತು ಭದ್ರಾಚಲ ರಾಮದಾಸರ ರಚನೆಗಳನ್ನು ಕಲಿತಿದ್ದಲ್ಲದೇ, ಅವರುಗಳ ಕೃತಿಗಳಿಗಳಿಂದ ಪ್ರಭಾವಿತರಾಗಿ ಸಣ್ಣ ವಯಸ್ಸಿನಲ್ಲಿಯೇ ತಾವೂ ಸಹಾ ಕೃತಿಗಳ ರಚನೆಯನ್ನು ಆರಂಭಿಸಿ ಎಲ್ಲರ ಮೆಚ್ಚುಗೆಯನ್ನು ಪಡೆದದ್ದಲ್ಲದೇ, ಪುರಂದರರ ದಾಸರ ಗುರುಗಳಾಗಿದ್ದಂತಹ ವ್ಯಾಸರಾಯರಿಂದ ದಾಸರೆಂದರೆ ಪುರಂದರದಾಸರಯ್ಯ ಎಂದು ಹೊಗಳಿಸಿಕೊಂಡ ರೀತಿಯಲ್ಲೇ  ಗುರುಗಳಾದ ಶ್ರೀ ವೆಂಕಟರಮಣಯ್ಯನವರೂ ಸಹಾ ದೊರಕುನಾ ಇಟುವಂಟಿ ಶಿಷ್ಯುಡು ಎಂದು ತಮ್ಮ ಶಿಷ್ಯ ತ್ಯಾಗರಾಜರನ್ನು ಕೊಂಡಾಡುವ ಮಟ್ಟಿಗೆ ಅತ್ಯಂತ  ಕಡಿಮೆ ಸಮಯದಲ್ಲೇ ನಾದವಿದ್ಯೆಯನ್ನು ಸಿದ್ಧಿಸಿಕೊಳ್ಳುತ್ತಾರೆ.

ತ್ಯಾಗರಾಜರು ವಾಗ್ಗೇಯಕಾರಾದ ಹಿನ್ನಲೆಯೂ ಸಹಾ ಬಹಳ ರೋಚಕವಾಗಿದೆ. ಸಣ್ಣ ವಯಸ್ಸಿನಲ್ಲಿಯೇ ರಾಮಕೃಷ್ಣ ಯತೀಂದ್ರರೆಂಬ ಸಂನ್ಯಾಸಿಗಳಿಂದ ರಾಮತಾರಕ ಮಂತ್ರದ ಉಪದೇಶ ಪಡೆದು ಅವರ ಆದೇಶದಂತೆ ತೊಂಭತ್ತಾರು ಕೋಟಿ ಬಾರಿ ಶ್ರೀ ರಾಮನಾಮ ಜಪದ ವ್ರತವನ್ನು ಮಾಡುವ ಸಂಧರ್ಭದಲ್ಲಿಯೇ ಅವರಿಗೆ ರಾಮನ ದರ್ಶನದ ಪ್ರಾಪ್ತಿಯಾಗಿ ’ಅಲಕಲಲ್ಲಲಾಡಗ’ (ಮಧ್ಯಮಾವತಿ), ’ಬಾಲಕನಕಮಯ’ (ಅಠಾಣ), ’ಸೀತಮ್ಮ ಮಾಯಮ್ಮ’ (ವಸಂತ), ’ಗಿರಿಪೈ ನೆಲಕೊನ್ನ’ (ಶಹಾನ) ಕೃತಿಗಳ ರಚನೆಯಾದರೆ, ಅದೊಮ್ಮೆ ನಾರದ ಮಹರ್ಷಿಗಳೇ ಸಂನ್ಯಾಸಿ ವೇಷದಲ್ಲಿ ತ್ಯಾಗರಾಜರ ಮನೆಗೆ ಬಂದು, ಕಾವೇರಿಯಲ್ಲಿ ಸ್ನಾನ ಮಾಡಿ ಬಂದು ನಿಮ್ಮ ಆತಿಥ್ಯ ಸ್ವೀಕರಿಸುವೆನೆಂದು ಹೇಳಿ ಹೋದವರು ಎಷ್ಟು ಹೊತ್ತಾದರೂ ಬಾರದೇ ಹೋದಾಗ ಚಿಂತಾಕ್ರಾಂತರಾಗಿದ್ದ  ತ್ಯಾಗರಾಜರ ಕನಸಿನಲ್ಲಿ ನಾರದರು ಕಾಣಿಸಿಕೊಂಡು ಸಂಗೀತಶಾಸ್ತ್ರ ಗ್ರಂಥ ಸ್ವರಾರ್ಣವವನ್ನು ನಿನಗೆ ಕೊಡಲು ಬಂದಿದ್ದೆ  ಎಂದು ಹೇಳಿದಾಗ ಥಟ್ ಎಂದು ನಿದ್ರೆಯಿಂದ ಎಚ್ಚೆತ್ತು ಮನೆಯಲ್ಲಿ ಹುಡುಕಿದಾಗ ಅವರಿಗೆ ಆ ಪುಸ್ತಕ ದೊರಕಿತಂತೆ ಅದೇ ರೀತಿಯಲ್ಲಿ ಅವರ ಅಜ್ಜ  ವೀಣಾ ಕಾಳಹಸ್ತಯ್ಯನವರಿಂದ ಬಳುವಳಿಯಾಗಿ ಬಂದ ನಾರದೀಯಂ ಎಂಬ  ಸಂಗೀತಗ್ರಂಥವು ಇವರಿಗೆ ಲಭಿಸಿ ಅಮೂಲ್ಯವಾದ ನಾದಲಹರಿಯು ಅವರಲ್ಲಿ  ಹರಿದು ಕೃತಿರತ್ನಗಳನ್ನು ರಚಿಸಲು ಸಾಧ್ಯವಾಯಿತು ಎಂದು ಬಲ್ಲವರು ಹೇಳುತ್ತಾರೆ.

ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆಯೂ ಒಬ್ಬ ಮಹಿಳೆಯು ಇರುತ್ತಾಳೆ ಎಂಬ ವಾಕ್ಯದಂತೆ ತ್ಯಾಗರಾಜರ ಜೀವನದಲ್ಲೂ ಅವರ  ಎರಡನೆಯ ಹೆಂಡತಿಯು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ತ್ಯಾಗರಾಜರ ಮೊದಲನೆಯ ಪತ್ನಿಯ ನಿಧನರಾದಾಗ ಅಕೆಯ  ತಂಗಿಯನ್ನೇ ವರಿಸಿದ ನಂತರ ಆಕೆಗೆ ತ್ಯಾಗರಾಜರ ಪಾಂಡಿತ್ಯದ ಸಂಪೂರ್ಣ ಅರಿವಿದ್ದದ್ದರಿಂದ ಆಕೆಯ ಪೂರ್ಣಸಹಕಾರವೂ ಲಭಿಸಿತಲ್ಲದೇ, ವಂಶಪಾರಂಪರ್ಯವಾಗಿ ಕುಟುಂಬದವರೆಲ್ಲರೂ ಪೂಜಿಸುತ್ತಿದ್ದ ರಾಮನ ವಿಗ್ರಹಕ್ಕೆ ಪ್ರತಿನಿತ್ಯವೂ ಭಕ್ತಿಯಿಂದ ಪೂಜೆ ಮಾಡಿ ಭಾಗವತ ಸಂಪ್ರದಾಯದಂತೆ ಮತ್ತು ಖ್ಯಾತ ದಾಸರುಗಳಂತೆಯೇ ತ್ಯಾಗರಾಜರೂ ಸಹಾ  ಪ್ರತಿನಿತ್ಯವೂ  ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ತಮ್ಮ ಶಿಷ್ಯವೃಂದದೊಂದಿಗೆ ತಂಬೂರಿ ಮೀಟುತ್ತಾ, ಭಗವಂತನ ನಾಮ ಸಂಕೀರ್ತನೆ ಮಾಡುವ ಉಂಛಾವೃತ್ತಿಯ ಪ್ರಕಾರ ನಗರ ಸಂಚಾರ ಮಾಡುವಾಗ ಅಯಾಚಿತವಾಗಿ ಸಾರ್ವಜನಿಕರಿಂದ ದೊರೆಯಲ್ಪಟ್ಟ ಸಾಮಗ್ರಿಗಳಿಂದ ಅಡುಗೆಯನ್ನು ತಯಾರಿಸಿ ರಾಮನಿಗೆ ಭಕ್ತಿಯಿಂದ ನೈವೇದ್ಯ ಮಾಡಿ  ಆ ಪ್ರಸಾದವನ್ನು ತಾವೂ ತಮ್ಮ ಕುಟುಂಬ ಮತ್ತು ಶಿಷ್ಯವೃಂದದೊಂದಿಗೆ ನೀಡೀ ಜೀವನ ನಡೆಸಿದರು. ತ್ಯಾಗರಾಜರು ಹಾಗೆ  ಊಂಛಾವೃತ್ತಿಯಲ್ಲಿ ಭಕ್ತಿ ಪರವಶರಾಗಿ ರಾಮನ ಸಗುಣಾರಾಧನೆಯನ್ನು ನಾದೋಪಾಸನೆಯ ಮೂಲಕ ಮುಂದುವರಿಸಿಕೊಂಡು ಹೋದಂತೆಲ್ಲಾ ಅವುಗಳನ್ನು ಶ್ರದ್ದೆಯಿಂದ ಒಂದೊಂದು ಭಾಗವನ್ನು ಒಬ್ಬೊಬ್ಬ ಶಿಷ್ಯರುಗಳು ಗ್ರಹಿಸಿ ಅದನ್ನೆಲ್ಲವನ್ನೂ  ಒಟ್ಟು ಗೂಡಿಸಿ ಕೃತಿರೂಪಕ್ಕೆ ತಂದು ಅದನ್ನು ಗುರುಗಳ ಮುಂದೆ ಹಾಡಿ ತ್ಯಾಗರಾಜರು ಒಪ್ಪಿದ ನಂತರವೇ ಆ ಕೃತಿಗಳು ಪುಸ್ತಕ ಇಲ್ಲವೇ ತಾಳೇಗರಿಯಲ್ಲಿ ದಾಖಲುಗೊಂಡ ಪರಿಣಾಮವಾಗಿಯೇ  ಇಂದಿಗೂ ತ್ಯಾಗರಾಜರರ ಕೃತಿಗಳು ನಮಗೆ ಲಭ್ಯವಾಗಲು ಸಾಧ್ಯವಾಗಿದೆ.

ತ್ಯಾಗರಾಜರು ರಾಮಾಯಣದ ಶ್ಲೋಕಗಳ ಸಂಖ್ಯೆಗೆ ಸಮನಾಗಿ ಸುಮಾರು 24000 ಕೃತಿಗಳನ್ನು ರಚಿಸಿದರೆಂದು ತಿಳಿದುಬಂದಿದೆಯಾದರೂ, ಇದುವರೆವಿಗೂ ಕೇವಲ 700 ಕೃತಿಗಳು ಮಾತ್ರಾ ನಮಗೆ ಲಭ್ಯವಿದೆ. ಇದಲ್ಲದೇ, ಪ್ರಹ್ಲಾದ ಭಕ್ತಿ ವಿಜಯ ಮತ್ತು ನೌಕಾಚರಿತ ಎಂಬ ಎರಡು ಗೇಯರೂಪಕಗಳನ್ನು ಕೂಡ ಅವರು ರಚಿಸಿದ್ದಾರೆ. ತ್ಯಾಗರಾಜರ ಕೃತಿಗಳನ್ನು ಸಂಗ್ರಹಿಸಿ ಅವುಗಳನ್ನು ಇಂದಿಗೂ ನಮ್ಮೆಲ್ಲರಿಗೂ ಸಿಗುವಂತೆ ಮಾಡುವ ಮಹಾನ್ ಕಾರ್ಯದಲ್ಲಿ ಅಳಿಲು ಸೇವೆಗೈದ ತ್ಯಾಗರಾಜರ ಎಲ್ಲಾ ಶಿಷ್ಯವೃಂದಕ್ಕೆ ಸಕಲ ಸಂಗೀತ ಪ್ರಿಯರೂ ಗೌರವವನ್ನು ಸಲ್ಲಿಸಲೇ ಬೇಕು.

ನವ ಕೋಟಿನಾರಾಯಣರಾಗಿದ್ದ ಶ್ರೀ ಪುರಂದರದಾಸರು ತಮ್ಮ ಸಮಸ್ತ ಸಂಪತ್ತನ್ನು ದಾನ ಮಾಡಿ ಊಂಛಾವೃತ್ತಿಯಲ್ಲಿ ಭಗವಂತನನ್ನು ಆರಾಧಿಸಿದಂತೆಯೇ, ತಮ್ಮ ಮನೆಯ ಬಾಗಿಲಿಗೇ ಬಂದಿದ್ದತಂಜಾವೂರಿನ ಶರಭೋಜಿ ಮಹಾರಾಜರ ರಾಜಾಶ್ರಯವನ್ನು ನಿರಾಕರಿಸಿ, ರಾಮನೆಂಬ ಅಮೂಲ್ಯ ನಿಧಿಯನ್ನೇ ಅಪ್ಪಿಕೊಂಡ ತ್ಯಾಗರಾಜರನ್ನು ಕಂಡು ಕೋಪಗೊಂಡ  ಅವರ  ಅಣ್ಣ ಮನೆಯಲ್ಲಿದ್ದ ರಾಮನ ವಿಗ್ರಹವನ್ನು ಯಾರಿಗೂ ತಿಳಿಯದಂತೆ ಕಾವೇರಿಯ ನದಿಗೆ  ಎಸೆದಾಗ, ನೋವಿನಿಂದ ತ್ಯಾಗರಾಜರು ನೇನೆಂದು ವೆತುಕುದುರಾ (ಹರಿಕಾಂಭೋಜಿ) ರಚನೆಯ ಮೂಲಕ ಭಗವಂತನನ್ನು ಪ್ರಾರ್ಥಿಸಿದಾಗ, ಅವರ ಕನಸಿನಲ್ಲಿ ಬಂದ  ರಾಮನು ಅವನಿರುವ ಜಾಗವನ್ನು ತಿಳಿಸಿದ ಕೂಡಲೇ ವಿಗ್ರಹವನ್ನು ಹುಡುಕಿ, ಅದನ್ನು ಅಪ್ಪಿಕೊಂಡು ’ಕನುಕೊಂಟಿನಿ’ (ಬಿಲಹರಿ)  ರಚನೆಯನ್ನು ಹಾಡುತ್ತಾ ಆನಂದ ಸಾಗರದಲ್ಲಿ ಮುಳುಗಿದರು  ಎಂದು ತಿಳಿದು ಬರುತ್ತದೆ. ಕೇವಲ ತಮ್ಮ ಹುಟ್ಟೂರಿಗಷ್ಟೇ ಸೀಮಿತಗೊಳ್ಳದೇ, ಆಗ್ಗಾಗ್ಗೆ  ತಮ್ಮ ಶಿಷ್ಯರೊಂದಿಗೆ ತಿರುಮಲ, ಶ್ರೀರಂಗ, ತಿರುವೆಟ್ರಿಯೂರ್, ಲಾಲ್ಗುಡಿ ಮುಂತಾದ ಶ್ರೀಕ್ಷೇತ್ರಗಳಿಗೆ ಹೋಗಿ ಅಲ್ಲಿಯ ದೇವತೆಗಳ ಕುರಿತಾದ ಕೃತಿಗಳನ್ನೂ ರಚಿಸಿದ್ದಾರೆ.

ಈಗಾಗಲೇ ತಿಳಿಸಿದಂತೆ ತೆಲುಗು ಮತ್ತು ಸಂಸ್ಕೃತ ಭಾಷೆಯಲ್ಲಿ ಸುಂದರವಾದ ಆಲಂಕಾರಿಕ ಪದಬಂಧಗಳೊಂದಿಗೆ ಚಮತ್ಕಾರಯುತವಾಗಿ ಮತ್ತು ರಾಮನನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದರಿಂದಲೋ ಏನೋ? ತ್ಯಾಗರಾಜರು ತಮ್ಮ  ಬಹುತೇಕ ಕೃತಿಗಳನ್ನು ರಾಮನ ಗುಣಗಾನಕ್ಕೇ  ಮೀಸಲಾಗಿರಿಸಿದ್ದರು. ಅವರು  ರಾಮನನ್ನು ವಿವಿಧ ರೂಪದಲ್ಲಿ  ಅರ್ಥಾತ್ಪ ರಬ್ರಹ್ಮವಸ್ತುವಾಗಿ, ತಂದೆ, ತಾಯಿ, ಗುರು, ಬಂಧು, ಸಖನಾಗಿ ಕಾಣುತ್ತಾ,  ಅವನ ರೂಪ ಲಾವಣ್ಯಗಳ ವರ್ಣನೆಗಳ ಜೊತೆ ರಾಮನ ಶೌರ್ಯ ಮತ್ತು ಪ್ರತಾಪಗಳ ಲೀಲಾವಿಲಾಸಗಳನ್ನು ತಮ್ಮ ಕೃತಿಗಳಲ್ಲಿ ವಿವರಿಸಿದ್ದಾರೆ. ಅದೆಷ್ಟೋ ಬಾರಿ ರಾಮ ತಮ್ಮ ಮಿತ್ರ ಎನ್ನುವಂತೆ ರಾಮನನ್ನು ಹೊಗಳುತ್ತ, ತೆಗಳುತ್ತಾ, ನವವಿಧ ಭಕ್ತಿಯ ಮೂಲಕ ಅವರು ಕೊಂಡಾಡಿದ ಪರಿ ಕೇವಲ ಅದು ಅವರ ಸ್ವಾನುಭವದವಷ್ಟೇ ಅಲ್ಲದೇ ಅದನ್ನು ಹಾಡುವಾಗ ಸಂಗೀತಗಾರರಿಗೂ ಅದೇ ಆನಂದದ ಅನುಭವವಾಗುವುದು ವಿಶೇಷವಾಗಿದೆ.

ರಾಮನ ಕೃತಿಗಳ ಮೂಲಕವೇ ವಿಶ್ವವಿಖ್ಯಾತರಾದ ತ್ಯಾಗರಾಗರು ಅದರ ಸಂಪೂರ್ಣ ಯಶಸ್ಸನ್ನು ಮತ್ತೆ ರಾಮನಿಗೇ ತಮ್ಮ ತೋಡಿರಾಗದ ’ದಾಶರಥೇ ನೀ ಋಣಮು ದೀರ್ಪ ನಾ ತರಮಾ’ ಎಂಬ ಕೃತಿಯಲ್ಲಿ ನೀಡುವ ಮೂಲಕ ತೇನವಿನಾ ತೃಣಮಪಿ ನ ಚಲತಿ ಎಂಬುದಕ್ಕೆ ಅನ್ವರ್ಥವಾಗುವಂತೆ ತಮ್ಮೆಲ್ಲಾ ಸಾಧನೆಗಳನ್ನೂ ಭಗವಂತನಿಗೆ ಅರ್ಪಿಸಿದ್ದಾರೆ. ತ್ಯಾಗರಾಜರ ರಚನಾಕೌಶಲದಿಂದ ಪ್ರಭಾವಿತರಾಗಿದ್ದ  ಕೇರಳದಲ್ಲಿ ತ್ಯಾಗರಾಜರ ಸಮಕಾಲೀನರಾಗಿದ್ದ ಸ್ವಾತಿ ತಿರುನಾಳ್ ಮಹಾರಾಜರು ತಮ್ಮ ಆಸ್ಥಾನ ವಿದ್ವಾಂಸರೊಬ್ಬರ ಮೂಲಕ ತ್ಯಾಗರಾಜರನ್ನು ತಮ್ಮ ಆಸ್ಥಾನಕ್ಕೆ  ಆಹ್ವಾನಿಸಿದಾಗ, ಸ್ವತಃ ಉತ್ತಮ ಜ್ಯೋತಿಷಿಗಳಾಗಿದ್ದ ತ್ಯಾಗರಾಜರು ಖಂಡಿತ ತಮ್ಮನ್ನು ಭೇಟಿ ಆಗುವ ಮನಸ್ಸಿದ್ದು, ಆದರೆ ಅದು ಇಲ್ಲಲ್ಲಾ  ಊರ್ಧ್ವಲೋಕದಲ್ಲಿ ಎಂದು ಮಾರ್ಮಿಕವಾಗಿ ಹೇಳಿ ಕಳುಹಿಸಿತ್ತಾರೆ. ಅದಾದಾ ಕೆಲವೇ ದಿನಗಳಲ್ಲಿ ಸ್ವಾತಿ ತಿರುನಾಳರು ಅನಂತ ಪದ್ಮನಾಭನ ಪಾದವನ್ನು ಸೇರಿಕೊಂಡಾಗ ತ್ಯಾಗರಾಜಾರ ಗೂಡಾರ್ಥ ಎಲ್ಲರಿಗೂ ಅರ್ಥವಾಗುತ್ತದೆ.

ಅಂತಹ ರಾಮ ಭಂಟನಿಗೆ ಅದೊಮ್ಮೆ ಪ್ರಭು ಶ್ರೀರಾಮಚಂದ್ರನು ಕನಸಿನಲ್ಲಿ ಬಂದು ಇನ್ನು ಹತ್ತು ದಿವಸಗಳಲ್ಲಿ ನಾನು ನಿನಗೆ ಮುಕ್ತಿಯನ್ನು ನೀಡುತ್ತೇನೆ ಎಂದು ಹೇಳಿದ ಕೂಡಲೇ, ನಾದಬ್ರಹ್ಮಾನಂದ ಎಂಬ ನಾಮಧೇಯದೊಂದಿಗೆ ಜನವರಿ 5, 1847ರ  ಪುಷ್ಯ ಬಹುಳ ಪಂಚಮಿಯಂದು ತಮ್ಮ 79 ನೇ ವಯಸ್ಸಿನಲ್ಲಿ ತ್ಯಾಗರಾಜರು ಅದ್ವೈತ ದಶನಾಮ ಸಂಪ್ರದಾಯ ರೀತಿಯಲ್ಲಿ ಸನ್ಯಾಸವನ್ನು ಸ್ವೀಕರಿಸಿದ ಮಾರನೇಯ ದಿನವೇ 6-1-1847ರ ಬೆಳಗ್ಗೆ 11 ಘಂಟೆಗೆ ತಮ್ಮ ಶಿಷ್ಯಕೋಟಿಗಳ ಸಮ್ಮುಖದಲ್ಲೇ  ಭಗವಂತನಲ್ಲಿ ಲೀನವಾದ ಮಾರನೇಯ ದಿನ ಅವರು ಹುಟ್ಟಿದ ತಿರುವೈಯಾರು ಬಳಿಯ ಕಾವೇರಿ ನದಿಯ ದಡದಲ್ಲಿ ಅವರ ಪಾರ್ಥಿವಶರೀರವನ್ನು ಇರಿಸಿ ಸೂಕ್ತ ವಿಧಿವಿಧಾನಗಳಂತೆಯೇ  ಸಮಾಧಿ ಮಾಡಲಾಯಿತು.

ತ್ಯಾಗರಾಜರ ನಿಧನರಾದ ಬಹುಕಾಲದವರೆಗೂ ಅವರ  ಸಮಾಧಿಗೊಂದು ಮಂದಿರ ಇಲ್ಲವೆಂಬುದನ್ನು ಗಮನಿಸಿದ ಕರ್ನಾಟಕದ ಬೆಂಗಳೂರು ಮೂಲದ ಖ್ಯಾತ ಸಂಗೀತ ವಿದುಷಿ ವಿದ್ಯಾಸುಂದರಿ ನಾಗರತ್ನಮ್ಮನವರು ತಾವು ಜೀವಿತಾವಧಿಯಲ್ಲಿ ಗಳಿಸಿದ್ದ ಸಂಪತ್ತು ಮತ್ತು ಇತರೇ ಆಸಕ್ತ ಸಜ್ಜನರ ಸಹಕಾರದಿಂದ ತಿರುವಯ್ಯಾರಿನಲ್ಲಿ ಸುಂದರವಾದ ಮಂದಿರವನ್ನು ಕಟ್ಟಿಸಿ ತಮ್ಮ ಜೀವ ಹೋಗುವವರೆಗೂ ಅಲ್ಲಿಯೇ ನೆಲೆಸಿ ತಮ್ಮ ಆರಾಧ್ಯದೈವವಾದ ತ್ಯಾಗರಾಜಸ್ವಾಮಿಗಳ ಪಾದಾರವಿಂದವನ್ನು ಸೇರಿದಾಗ, ಗುರುಗಳ ಸಮಾಧಿಯ ಸ್ವಲ್ಪ ದೂರದಲ್ಲೇ ಆಕೆಯ ಸಮಾಧಿಯನ್ನು ನಿರ್ಮಿಸಲಾಗಿದೆ. ಕರ್ನಾಟಕದಲ್ಲಿ ಶ್ರೀರಂಗಪಟ್ಟಣ ಹಾಗೂ ಬೆಂಗಳೂರಿನ ವಸಂತಪುರದಲ್ಲಿ ತ್ಯಾಗರಾಜರ ಮಂದಿರವನ್ನು ನಿರ್ಮಿಸಲಾಗಿದೆ.

ತ್ಯಾಗರಾಜರ ನೆನಪಿನಾರ್ಥ ಪ್ರತೀವರ್ಷವೂ ಅವರನ್ನು ಸಮಾಧಿ ಮಾಡಿದ ದಿನದಂದು  ದೇಶಾದ್ಯಂತವಷ್ಟೇ ಅಲ್ಲದೇ ಪ್ರಪಂಚಾದ್ಯಂತ ಇರುವ ಕರ್ನಾಟಕ ಸಂಗೀತಾಸಕ್ತರು ಮತ್ತು ಸಂಗೀತಗಾರರು ಒಟ್ಟಿಗೆ ಸೇರಿ ದೇವಾಲಯಗಳಲ್ಲಿ ಸೇರಿ ತ್ಯಾಗರಾಜರ ಕೃತಿಗಳು ಅದರಲ್ಲೂ ತ್ಯಾಗರಾಜರ ಸುಪ್ರಸಿದ್ಧ ಪಂಚರತ್ನಕೃತಿಗಳನ್ನು ಒಟ್ಟಿಗೆ ಹಾಡುವ ಮೂಲಕ ಅವರ ಆರಾಧನೆಯನ್ನು ಬಹಳ ಶ್ರದ್ಧಾ ಭಕ್ತಿಗಳಿಂದ ಅಂದಿನಿಂದ  ಇಂದಿನವರೆಗೂ ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವುದು ಗಮನಾರ್ಹವಾಗಿದೆ. ಕರ್ನಾಟಕದ ಕಾವೇರಿ ನದಿಯ ತೀರದಲ್ಲಿರುವ ಶ್ರೀರಂಗ ಪಟ್ಟಣದಲ್ಲಿಯೂ ನಾಡಿನ ಸುಪ್ರಸಿದ್ಧ ಸಂಗೀತರಾಗರು ಒಟ್ಟಿಗೆ ಸೇರಿ ತ್ಯಾಗರಾಜರ ಆರಾಧನೆಯನ್ನು ಮಾಡುವುದು ರೂಢಿಯಲ್ಲಿದೆ.

ತ್ಯಾಗರಾಜರ ಸುಪ್ರಸಿದ್ದ ಪಂಚರತ್ನ ಕೀರ್ತನೆಗಳಲ್ಲಿ ಒಂದಾದಾ, ಶ್ರೀ ರಾಗ ಮತ್ತು ಆದಿ ತಾಳದಲ್ಲಿ,ತೆಲುಗು ಭಾಷೆಯಲ್ಲಿ ರಚಿಸಿರುವ ಎಂದರೋ ಮಹಾನುಭಾವುಲು ಅಂದರಿಕೀ ವಂದನಮುಲು ಎಂಬ ಭಗವಂತನ ಸೌಂದರ್ಯವನ್ನು ಕಂಡು ಬ್ರಹ್ಮಾನಂದವನ್ನು ಅನುಭವಿಸುವವರನ್ನು, ಗಾನದಲ್ಲಿ ಆನಂದಿಸುವವರನ್ನು, ಮಾನಸ ಸರೋವರದಲ್ಲಿ ಭಗವಂತನ ಸ್ವರೂಪವನ್ನು ಧ್ಯಾನಿಸುವವರನ್ನು ಮತ್ತು ಭಗವಂತನ ಪಾದಗಳಿಗೆ ಮನಸ್ಸನ್ನು ಅರ್ಪಿಸುವವರನ್ನು ಕೊಂಡಾಡುವಂತಿದ್ದರೂ, ಅದು ಪ್ರಸ್ತುತ ಲೌಕಿಕ ಜೀವನದಲ್ಲೂ ಎಲ್ಲರಿಗೂ ಅನ್ವಯಿಸುವಂತೆ ಎಷ್ಟೋ ಮಹಾನುಭಾವರು  ಇಲ್ಲಿದ್ದು ಎಲ್ಲರಿಗೂ ನನ್ನ ನಮಸ್ಕಾರಗಳು ಎನ್ನುವ ವಿನೀತತೆಯನ್ನು ತೋರಿಸುತ್ತದೆ ಎಂದರೂ ತಪ್ಪಾಗದು. ಅಂತಹ ಪ್ರಾರ್ಥಸ್ಮರಣೀಯ ವಾಗ್ಗೇಯಕಾರರನ್ನು  ‍ಸ್ಮರಿಸುತ್ತಾ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಂಡು ಪರಮ ಸುಖಃವನ್ನು ಪಡೆಯುವುದು ಪ್ರತಿಯೊಬ್ಬ ಸನಾತನಿಗಳ ಆದ್ಯ ಕರ್ತವ್ಯವೇ ಆಗಿದೇ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment