ನಮ್ಮ ದೇಶದಲ್ಲಿ ಈ ಹಿಂದೆ ಮಕ್ಕಳಿರಲವ್ವಾ ಮನೆ ತುಂಬಾ ಎಂಬ ಗಾದೆ ಮಾತಿತ್ತು. ಮದುವೆಯಲ್ಲಿ ನವ ದಂಪತಿಗಳಿಗೆ ಹರಸುವಾಗ ವರುಷದೊಳಗೇ ಮುದ್ದಾದ ಹಸುಕಂದನು ಮಡಲಲಿ ನಗುತಿರಲಿ ಎಂದು ಹಾರೈಸುತ್ತಿದ್ದವರು, ಭಾರತದಲ್ಲಿ ಏರುತ್ತಿರುವ ಜನಸಂಖ್ಯೆಯನ್ನು ನಿಯಂತಿಸುವ ಸಲುವಾಗಿಯೇ. ನಮ್ಮ ದೇಶದಲ್ಲಿ 1952 ರಲ್ಲೇ ಕುಟುಂಬ ಯೋಜನೆಗಾಗಿ ರಾಷ್ಟ್ರೀಯ ಕಾರ್ಯಕ್ರಮವನ್ನು ಪ್ರಾರಂಭಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಹೀಗೆ ಕುಟುಂಬ ಕಲ್ಯಾಣ ಯೋಜನೆ ದೇಶದಲ್ಲಿ ಜಾರಿಗೆ ಬಂದ ಕೂಡಲೇ, ದೇಶದ ಜನಸಂಖ್ಯಾ ಸ್ಪೋಟವನ್ನು ತಡೆಯುವ ಉದ್ದೇಶದಿಂದ ಆರತಿಗೊಬ್ಭಳು ಮಗಳು, ಕೀರ್ತಿಗೊಬ್ಬ ಮಗ ಎನ್ನುವ ಧ್ಯೇಯ ವಾಕ್ಯವನ್ನು ಪಠಿಸತೊಡಗಿದರು. ನಂತರದ ವರ್ಷಗಳಲ್ಲಿ ಹೆಚ್ಚುತ್ತಿರುವ ಬೆಲೆಗಳಿಂದ ಮಕ್ಕಳನ್ನು ಸಾಕುವುದೇ ಕಷ್ಟ ಎನಿಸಿದಾಗ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಹೆಣ್ಣಾಗಲೀ, ಗಂಡಾಗಲೀ ಮಕ್ಕಳೊಂದೇ ಇರಲಿ ಎನ್ನುವಂತಾಯಿತು. ಇತ್ತೀಚೆಗೆ ಸುಖಃ ಸಂಸಾರ ನಡೆಸಲು ಗಂಡ ಹೆಂಡತಿ ಇದ್ದರೆ ಸಾಕು ಮಕ್ಕಳೇಕೆ ಬೇಕು? ಎನ್ನುವ ಮನಸ್ಥಿತಿಗೆ ಬಂದಿದ್ದರೂ, ಇನ್ನೂ ಈ ದೇಶದ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ ಏನೂ ಎಂದು ಅರಿಯಲು ಮುಂದಾದಾಗ, ದೇಶಕ್ಕಿಂತಲೂ ನಮಗೆ ಧರ್ಮವೇ ಮುಖ್ಯ ಎಂದು ದೇಶದ ಕಾನೂನನ್ನೇ ಧಿಕ್ಕರಿಸಿ, ಇನ್ನೂ ತುಂಬಿ ತುಳುಕುತ್ತಿರುವ ಬಡತನದಿಂದ ಕೂಡಿದ ಅಜ್ಞಾನ, ಮೌಢ್ಯಯುತ ಧಾರ್ಮಿಕ ಶ್ರದ್ಧೆ, ಅಪಕ್ವ ಚಾಪಲ್ಯತೆ ಮುಂತಾದ ಕಾರಣಗಳು ಜನಸಂಖ್ಯೆಯ ಏರಿಕೆ ನಿರಂತರವಾಗಿ ಏರುಮುಖದತ್ತಲೇ ಇರುವಂತೆ ಮಾಡಿರುವುದು ನಿಜಕ್ಕೂ ನಮ್ಮ ದೇಶದ ಅಭಿವೃದ್ಧಿಗೆ ಕಳಕವಳಕಾರಿಯಾಗಿದೆ.
ಇವೆಲ್ಲದರ ನಡುವೆ, ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ಯಾವುದೇ ಬೇಧ ಭಾವವಿಲ್ಲದೇ, ಇಬ್ಬರಿಗೂ ಸರಿ ಸಮಾನತೆಯ ಬಗ್ಗೆ ಮಾತನಾಡುತ್ತಿರುವ ಸಂಧರ್ಭದಲ್ಲಿಯೇ ಇನ್ನೂ ಪುರುಷ ಪ್ರಧಾನವ ಮನಸ್ಥಿತಿಯ ಹರಿಯಾಣದ ಫತೇಹಾಬಾದ್ ಜಿಲ್ಲೆಯ ಭುನಾ ಪ್ರದೇಶದ ಧನಿ ಭೋಜರಾಜ್ ಗ್ರಾಮದ ಸಂಜಯ್ ಕುಮಾರ್ ಮತ್ತು ಸುನೀತಾ ಅವರು 2007 ರಲ್ಲಿ ವಿವಾಹವಾಗಿ ಕಳೆದ 19 ವರ್ಷಗಳಲ್ಲಿ ಗಂಡು ಮಗುವಿನಾಸೆಗಾಗಿ ಸರಾಸರಿ ವರ್ಷಕ್ಕೊಂದು ಮೇಲಿಂದ ಮೇಲೆ ಹೆಣ್ಣು ಮಕ್ಕಳನ್ನು ಹೆರುತ್ತಾ ಅಂತಿಮವಾಗಿ ತಮ್ಮೂರಿಂದ 50 ಕಿ.ಮೀ ದೂರವಿರುವ ಉಚ್ಚನಾ ಪಟ್ಟಣದ ಜಿಂದ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ೨೦೨೬ರ ಜನವರಿ 3 ರಂದು ಆಸ್ಪತ್ರೆಗೆ ದಾಖಲಾಗಿ, ಮಾರನೇ ದಿನ ಜನವರಿ 4 ರಂದು ಹತ್ತು ಹೆಣ್ಣು ಮಕ್ಕಳ ನಂತರ 11ನೇ ಮಗುವಾಗಿ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ವಿಚಿತ್ರವಾದ ಧಾಖಲೆಗೆ ಪಾತ್ರರಾಗಿರುವುದಲ್ಲದೇ, ಆ ಮಗುವಿನ ತಂದೆಯ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿ ಎಲ್ಲರ ಗಮನವನ್ನು ಸೆಳೆಯುವಂತಾಗಿದೆ.
ಮಗುವಿನ ತಂದೆ ಸಂಜಯ್ ಕುಮಾರ್ 38 ವರ್ಷದ ದಿನಗೂಲಿ ಕಾರ್ಮಿಕನಾಗಿದ್ದು, ಯೂಟ್ಯೂಬರ್ ಕುಸುಮ್ ಗೋಯತ್ ಅವರೊಂದಿಗೆ ಮಾತನಾಡುತ್ತಾ, ನಮಗೆ ಗಂಡು ಮಗು ಬೇಕಿತ್ತು ಮತ್ತು ನಮ್ಮ ಹೆಣ್ಣುಮಕ್ಕಳಿಗೂ ಸಹಾ ಸಹೋದರನನ್ನು ಹಂಬಲಿಸಿದ್ದರು ಹಾಗಾಗಿ ಸತತವಾಗಿ 10 ಹೆಣ್ಣು ಮಕ್ಕಳ ನಂತರ ಈಗ ಹನ್ನೊಂದನೇ ಮಗುವಾಗಿ ಗಂಡು ಮಗು ಹುಟ್ಟುವ ಮೂಲಕ ತಮ್ಮ ಮತ್ತು ತಮ್ಮ ಹೆಣ್ಣು ಮಕ್ಕಳ ಆಸೆ ಈಡೇರಿದ್ದು ಅವರ ಹತ್ತು ಅಕ್ಕಂದಿರು ತಮ್ಮ ಮಗನಿಗೆ ದಿಲ್ಖುಷ್ (ಮನಸ್ಸಂತೋಷ) ಎಂದು ಹೆಸರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದಷ್ಟೇ ಅಲ್ಲದೇ, ಅದೇ ವೀಡಿಯೋದಲ್ಲಿ ತಮ್ಮ ಎಲ್ಲಾ ಹೆಣ್ಣು ಮಕ್ಕಳ ವಿವರಗಳನ್ನು ಬಹಿರಂಗಪಡಿಸುತ್ತಾ, ಅವರ ಹಿರಿಯ ಮಗಳು ಶ್ರೀನಾ 12ನೇ ತರಗತಿ, ಅಮೃತಾ 11ನೇ ತರಗತಿ, ಸುಶೀಲಾ 7ನೇ ತರಗತಿ, ಕಿರಣ್ 6ನೇ ತರಗತಿ, ದಿವ್ಯಾ 5ನೇ ತರಗತಿ, ಮನ್ನತ್ 3ನೇ ತರಗತಿ, ಕೃತಿಕಾ 2ನೇ ತರಗತಿ ಮತ್ತು ಅಮ್ನಿಶ್ 1ನೇ ತರಗತಿಯಲ್ಲಿ ಓದುತ್ತಿದ್ದರೆ, ಒಂಬತ್ತನೇ ಮತ್ತು ಹತ್ತನೇ ಹೆಣ್ಣುಮಕ್ಕಳು ಲಕ್ಷ್ಮಿ ಮತ್ತು ವೈಶಾಲಿ ಇನ್ನೂ ಶಾಲೆಗೆ ಸೇರಬೇಕಿದ್ದು ವೈಶಾಲಿ ನಂತರ, ನಮ್ಮ ಕುಟುಂಬದ ಅಂತಿಮ ಸದಸ್ಯನಾಗಿ ಮಗ ದಿಲ್ಖುಷ್ ಹುಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ತಮ್ಮ ದಿನಗೂಲಿಯ ಅಲ್ಪ ಆದಾಯದಲ್ಲೂ ತಮ್ಮ ಎಲ್ಲಾ ಮಕ್ಕಳನ್ನು ಉತ್ತಮವಾಗಿ ನೋಡಿಕೊಳ್ಳುತ್ತಿರುವುದಲ್ಲದೇ, ಉತ್ತಮ ಶಿಕ್ಷಣವನ್ನು ನೀಡಲು ಕೈಲಾದಷ್ಟು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಲ್ಲಿ, ಏನೇ ಆದರೂ ಇದು ಎಲ್ಲವೂ ದೇವರ ಚಿತ್ತವಾಗಿದ್ದು ನಾನು ಮಾತ್ರ ನಿಮಿತ್ತನಾಗಿದ್ದು, ನಾನು ಮತ್ತು ನಮ್ಮ ಕುಟುಂಬ ಇರುವುದರಲ್ಲಿಯೇ ಸಂತೋಷವಾಗಿದ್ದೇವೆ ಎಂದು ತಿಳಿಸಿದ್ದಾರೆ.
ಅವರ ಹೆಂಡ ಅವರ ಬುರುಡೆ. ಸಾಕಲು ಯೋಗ್ಯತೆ ಇದ್ದಲ್ಲಿ ಅವರು ಎಷ್ಟು ಮಕ್ಕಳನ್ನು ಬೇಕಾದರೂ ಹೆತ್ತುಕೊಳ್ಳಲಿ ನಮಗೆ ನಿಮಗೆ ಅದರಲ್ಲೇಕೆ ಉಸಾಬರಿ ಎಂದು ಹೇಳುವ ಮುನ್ನಾ ಇದು ಕೇವಲ ಒಂದು ಕುಟುಂಬದ ವಿಷಯವಾಗಿರದೇ, ಇದು ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಬಹಳಷ್ಟು ದುಷ್ಪರಿಣಾಮವನ್ನು ಬೀರಲಿದೆ ಎನ್ನುವುದೇ ಪರಮ ಸತ್ಯವಾಗಿದೆ. ಹತ್ತು ಹೆಣ್ಣು ಮಕ್ಕಳ ನಂತರ ಗಂಡು ಮಗುವಾಗಿದೆ ಎಂದ ಮೇಲೆ ಸಹಜವಾಗಿ ಆ ಇಡೀ ಕುಟುಂಬದ ಗಮನವೆಲ್ಲಾ ಆ ಹುಡುಗನ ಮೇಲೆಯೇ ಇದ್ದು ಉಳಿದ ಹೆಣ್ಣು ಮಕ್ಕಳ ಬಗ್ಗೆ ಗಮನ ಹರಿಸುವುದು ಸ್ವಲ್ಪ ಕಡಿಮೆಯಾಗಿ ಆ ಹೆಣ್ಣು ಮಕ್ಕಳ ಬೆಳವಣಿಗೆಯ ಮೇಲೆ ಭಾರೀ ಪ್ರಮಾಣದ ಬೀರಬಹುದಲ್ಲವೇ?
ಈಗಾಗಲೇ ತಿಳಿಸಿರುವಂತೆ ಸ್ವಾತಂತ್ಯ ಭಾರತದಲ್ಲಿ ಪ್ರಸ್ತುತ ಹೆಣ್ಣು ಮತ್ತು ಗಂಡು ಮಕ್ಕಳಲ್ಲಿ ಯಾವುದೇ ಬೇಧವಿಲ್ಲವಾಗಿದ್ದು, ಹೆಣ್ಣು ಮಕ್ಕಳು ಗಂಡು ಮಕ್ಕಳಷ್ಟೇ, ಇನ್ನೂ ಕೆಲವೊಂದು ಸಂಧರ್ಭದಲ್ಲಿ ಗಂಡು ಮಕ್ಕಳಿಗಿಂತಲೂ ಹೆಚ್ಚಿನ ಕ್ಷಮತೆಯಿಂದ ಕಾರ್ಯ ನಿರ್ವಹಿಸುತ್ತಿರುವುದಲ್ಲದೇ, ಪೋಷಕರನ್ನು ನೋಡಿ ಕೊಳ್ಳುವುದರಲ್ಲಿ ಗಂಡು ಮಕ್ಕಳಿಗಿಂತಲೂ ಒಂದು ಕೈ ಮುಂದೆಯೇ ಇದ್ದಾರೆ. ಹೆಣ್ಣು ಮಕ್ಕಳು ಈಗಾಗಲೇ ನಮ್ಮ ದೇಶದಲ್ಲಿ ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ, ಸಂಸಾದರು, ಶಾಸಕರು, ಜಿಲ್ಲಾ/ಮಂಡಲ ಪಂಚಾಯಿತಿ/ ನಗರ ಪಾಲಿಕೆ ಸದಸ್ಯರಾಗಿ ನಗರ, ರಾಜ್ಯ ಮತ್ತು ದೇಶವನ್ನು ಮುನ್ನೆಡೆಸಿದ್ದಾರೆ.
ಇದಕ್ಕೆ ಪೂರಕ ಎನ್ನುವಂತೆ ಕೇಂದ್ರ ಸರ್ಕಾರದ ಸಹಾ ಬೇಟಿ ಬಚಾವೊ ಬೇಟಿ ಪಡಾವೊ ಎಂಬ ಕಾರ್ಯಕ್ರಮ, ರಾಜ ಸರ್ಕಾರಗಳ ವಿವಿಧ ಯೋಜನೆಗಳು ಹೆಣ್ಣು ಮಕ್ಕಳಿಗೇ ಮೀಸಲಿದ್ದು, ಹೆಣ್ಣು ಮಕ್ಕಳನ್ನು ಸಮಾಜದಲ್ಲಿ ಮುನ್ನಲೆಗೆ ತಂದ ಪರಿಣಾಮ ಎಲ್ಲಾ ವಿಭಾಗಗಳಲ್ಲಿಯೂ ಭಾರತೀಯ ಹುಡುಗಿಯರು ಗಮನಾರ್ಹ ಪ್ರಗತಿ ಸಾಧಿಸುತ್ತಿದ್ದಾರೆ, ಇದು ಹೆಚ್ಚಿನ ಸಾಕ್ಷರತೆ ಮತ್ತು ಶಿಕ್ಷಣ ದಾಖಲಾತಿಯಲ್ಲಿ ಸ್ಪಷ್ಟವಾಗಿದೆ, ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯಲ್ಲಿ ಹೆಚ್ಚಳವಾಗಿದೆ ಮತ್ತು ನಾಯಕತ್ವ ಮತ್ತು ಸವಾಲಿನ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ಹೊಂದಿರುವಾಗ, ಈ ರೀತಿಯ ಲಿಂಗ ತಾರತಮ್ಯ ಮತ್ತು ಗಂಡು ಮಕ್ಕಳ ಮೇಲಿನ ಮಮಕಾರ ನಿಜಕ್ಕೂ ವಿಷಾಧನೀಯ ಎನಿಸುತ್ತಿದೆ
ಸಾಂಪ್ರದಾಯಿಕವಾಗಿ ಪುರುಷ ಪ್ರಾಬಲ್ಯದ ಮಿಲಿಟರಿ (ಉದಾ. IAF ನ ಫ್ಲೈಯಿಂಗ್ ಬುಲೆಟ್ ಸ್ಕ್ವಾಡ್ರನ್‌ನಲ್ಲಿ ಮೊದಲ ಮಹಿಳೆ) ವಲಯಗಳಲ್ಲಿ ಮಹಿಳೆಯರು ಅಡೆತಡೆಗಳನ್ನು ಮುರಿಯುತ್ತಿದ್ದಾರೆ ಮತ್ತು ಪ್ರಮುಖ ಯೋಜನೆಗಳನ್ನು ಮುನ್ನಡೆಸುತ್ತಿದ್ದಾರೆ, ಟೆಸ್ಸಿ ಥಾಮಸ್ (ಕ್ಷಿಪಣಿ ಮಹಿಳೆ) ಮತ್ತು ದೀಪಾ ಮಲಿಕ್ (ಪ್ಯಾರಾಲಿಂಪಿಕ್ ಪದಕ ವಿಜೇತೆ) ನಂತಹ ಮಹಿಳೆಯರು ಮುನ್ನಡೆಸುತ್ತಿದ್ದಾರೆ, ಬಹುತೇಕ ಎಲ್ಲಾ ಕ್ರೀಡಾ ವಿಭಾಗಗಳಲ್ಲಿಯೂ ಭಾರತದ ಮಾನವನ್ನು ಕಾಪಾಡುತ್ತಿರುವವರೇ ಹೆಣ್ಣು ಮಕ್ಕಳು ಎನ್ನುವುದೂ ಗಮನಾರ್ಹವಾಗಿದೆ.
ಉದ್ಯಮಶೀಲತೆ ಮತ್ತು ಹಣಕಾಸು ವ್ಯವಹಾರಗಳಲ್ಲಿಯೂ ಸಹಾ ಹೆಣ್ಣು ಮಕ್ಕಳು ಮುಂದಿದ್ದು, ಲಿಜ್ಜತ್ ಪಾಪಡ್‌ನಂತಹ ಸಣ್ಣ ಗೃಹ ಕೈಗಾರಿಕೆಯಿಂದ ಹಿಡಿದು, ಇನ್ಫೋಸಿಸ್ ಸುಧಾ ಮೂರ್ತಿ, ಫಲ್ಗುಣಿ ನಾಯರ್ (ನೈಕಾ – ಬ್ಯೂಟಿ ಇ-ಕಾಮರ್ಸ್), ಕಿರಣ್ ಮಜುಂದಾರ್-ಶಾ (ಬಯೋಕಾನ್ – ಬಯೋಟೆಕ್), ಇಂದ್ರಾ ನೂಯಿ (ಮಾಜಿ ಪೆಪ್ಸಿಕೋ ಸಿಇಒ – ಗ್ಲೋಬಲ್ ಎಫ್‌ಎಂಸಿಜಿ), ವಾಣಿ ಕೋಲಾ (ಕಲಾರಿ ಕ್ಯಾಪಿಟಲ್ – ವೆಂಚರ್ ಕ್ಯಾಪಿಟಲ್), ವಿನೀತಾ ಸಿಂಗ್ (ಶುಗರ್ ಕಾಸ್ಮೆಟಿಕ್ಸ್ – ಬ್ಯೂಟಿ), ಶ್ರದ್ಧಾ ಶರ್ಮಾ (ಯುವರ್‌ಸ್ಟೋರಿ – ಮೀಡಿಯಾ) ಹೀಗೆ ಲೆಕ್ಕವಿಲ್ಲದಷ್ಟು ಮಹಿಳಾಮಣಿಗಳು ಗಂಡಸ ಭುಜಕ್ಕೆ ಭುಜನೀಡಿ ಯಶಸ್ವಿ ಉದ್ಯಮಿಗಳಾಗಿ ಕಾರ್ಪೊರೇಟ್ ನಾಯಕತ್ವದಲ್ಲಿ ಏರುತ್ತಿರುವಉದಾರಣೆಗಳು ನಮ್ಮ ಕಣ್ಣ ಮುಂದೆಯೇ ಇರುವಾಗ ಇನ್ನೂ ಹಳೆಯ ಕಾಲದಂತೆ ಪುರುಷಪ್ರಧಾನವಾಗಿ ಗಂಡು ಮಕ್ಕಳಿಗೆ ಹಪಾಹಪಿಸುವುದು ಮತ್ತು ಗಂಡು ಮಕ್ಕಳಾಗುವವರೆಗೂ ಹೆಣ್ಣು ಮಕ್ಕಳನ್ನು ಹೆರುತ್ತಾ ಹೋಗುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಸಂಜಯ್ ಕುಮಾರ್ ಏನೋ ತಮ್ಮ ತಮ್ಮ ಹತ್ತು ಹೆಣ್ಣು ಮಕ್ಕಳ ಹೆಸರು ಮತ್ತು ಅವರು ಓದುತ್ತಿರುವ ತರಗತಿಗಳನ್ನು ಸರಿಯಾಗಿ ಹೇಳಿದ್ದಾರೆ. ಅದರೆ ನಮ್ಮ ಭಾರತದ ಆರ್ಥಿಕ ಪರಿಸ್ಥಿತಿಯನ್ನೂ ಗಮನಿಸದೇ, ಭಾರದ ಯಾವುದೇ ಕಾನೂನಿಗೂ ತಲೆ ಬಾಗದೇ, ಧರ್ಮದ ಹೆಸರಿನಲ್ಲಿ ಮತ್ತು ಮತಾಂಧರಾಗಿ ನಾಲ್ಕಾರು ಮದುವೆಯಾಗಿ ನಾಯಿ ಮರಿಗಳಂತೆ ಹಿಂಡು ಹಿಂಡಾಗಿ ಹತ್ತಾರು ಮಕ್ಕಳನ್ನು ಹುಟ್ಟಿಸುವ ಬಹುತೇಕರಿಗೆ ಅವರ ಮಕ್ಕಳ ಹೆಸರು ಬಿಡಿ ಅವರು ತಮ್ಮ ಮಕ್ಕಳೋ ಅಲ್ಲವೋ ಎಂಬದನ್ನೂ ಅರಿಯದೇ, ಆ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ಮತ್ತು ಸಂಸ್ಕಾರವನ್ನು ನೀಡಲಾಗದೇ, ಮುಂದೆ ಅದೇ ಮಕ್ಕಳೇ ಸಮಾಜಘಾತಕ ಶಕ್ತಿಗಳಾಗಿಯೋ ಇಲ್ಲವೇ ದೇಶ ವಿದ್ರೋಹಕ ಕೆಲಸಗಳಲ್ಲಿ ಭಾಗಿಯಾಗಿರುವ ಉದಾಹರಣೆಗಳೂ ನಮ್ಮಲ್ಲಿ ಸಾಕಷ್ಟಿರುವಾಗ, ಈ ಆಧುನಿಕ ಭಾರತದಲ್ಲಿ ಕುಟುಂಬವು ಕೇವಲ ಗಂಡು ಮಗುವಿನೊಂದಿಗೆ ಸಂಪೂರ್ಣ ಆಗುತ್ತದೆ ಎಂದು ನಂಬುವುದು ದುಃಖಕರ ಮತ್ತು ದುರದೃಷ್ಟಕರವಾಗಿದ್ದು ಅನಗತ್ಯವಾಗಿ ಈ ಪ್ರಸಂಗ ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗಿದೆ. ಇಂತಹ ವ್ಯವಸ್ಥೆಯ ವಿರುದ್ಧ ಖಂಡಿತವಾಗಿಯೂ ಸರ್ಕಾರವಷ್ಟೇ ಅಲ್ಲದೇ ಸಾರ್ವಜನಿಗರೂ ಸಹಾ ಮಧ್ಯಪ್ರವೇಶಿಸ ಬೇಕಾಗಿದೆ ಏಕೆಂದರೆ ಇದೊಂದು ನಿಶ್ಚಿತವಾಗಿಯೂ ಹುಚ್ಚುತನದ ಪರಮಾವಧಿಯಾಗಿದೆ.
ಹೇಗೆ ಜೀವ ಇದ್ದಲ್ಲಿ ಜೀವನವೋ ಹಾಗೆಯೇ ಈ ದೇಶ ಮತ್ತು ದೇಶದ ಸಂಪನ್ಮೂಲಗಳು ಇದ್ದಲ್ಲಿ ಮಾತ್ರವೇ ನಾವು ನೀವು ಸುಖ ಜೀವನವನ್ನು ನಡೆಸಬಹುದು. ಹೇಗೆ ಎರಡು ಕೆಜಿ ಅಕ್ಕಿ ಹಿಡಿಯುವ ಚೀಲದಲ್ಲಿ ಅದಕ್ಕಿಂತಲೂ ಹೆಚ್ಚಿನ ಅಕ್ಕಿಯನ್ನು ಹಾಕಿದರೆ ಅಕ್ಕಿಯೂ ಚೆಲ್ಲುತ್ತದೆ ಮತ್ತು ಭಾರವನ್ನು ತಡೆಯಲಾರದೆ ಚೀಲವೂ ಹರಿಯುವಂತೆ, ಈಗಾಗಲೇ ಜನಸಂಖ್ಯೆಯಲ್ಲಿ ಚೀನಾವನ್ನೂ ಮೀರಿ ವಿಶ್ವದಲ್ಲೇ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಇಂತಹ ಹುಚ್ಚುತನಗಳಿಗೆ ಖಂಡಿತವಾಗಿಯೂ ಆಸ್ಪದವೇ ಇಲ್ಲಾವಾಗಿದೆ. ಒಳ್ಳೆಯ ಆದಾಯ ಇರುವ ಕುಟುಂಬದಲ್ಲಿ ಒಂದು ಅಥವಾ ಎರಡು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಮತ್ತು ಆರೋಗ್ಯವನ್ನು ಕೊಡಿಸುವುದು ಬಹಳ ತ್ರಾಸದಾಯಕವಾಗಿರುವಾಗ, ಈ ರೀತಿಯಾಗಿ ಅನಗತ್ಯವಾಗಿ ಮತ್ತು ಅವೈಜ್ಞಾನಿಕವಾಗಿ ಹತ್ತಾರು ಮಕ್ಕಳನ್ನು ಹೆತ್ತು, ಕುಟುಂಬಕ್ಕೂ ಮತ್ತು ಸಮಾಜಕ್ಕೂ ಭಾರವಾಗುತ್ತಿದ್ದೇವೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಜನಸಂಖ್ಯಾ ನಿಯಂತ್ರಣದತ್ತ ಗಮನ ಹರಿಸುವುದರ ಜೊತೆಗೆ, ಇತರರಿಗೂ ಆದರ ಅರಿವನ್ನು ಮೂಡಿಸುವುದು ಎಲ್ಲರ ಕರ್ತವ್ಯವೇ ಆಗಿದೆ.
ದೇಶ ಮೊದಲು ಧರ್ಮ ಆನಂತರ. ದೇಶ ಉಳಿದಲ್ಲಿ ಮಾತ್ರವೇ ಧರ್ಮ ಉಳಿಯುತ್ತದೆ, ಧರ್ಮ ಉಳಿದಲ್ಲಿ ಮಾತ್ರವೇ ಸಂಪ್ರದಾಯ ಮತ್ತು ಸಂಸ್ಕಾರ ಉಳಿಯುವ ಮೂಲಕ ದೇಶ ಪ್ರಾಭಲ್ಯಮಾನಕ್ಕೆ ಬರುತ್ತದೆ ಅಲ್ವೇ? ಮಕ್ಕಳು ಹೆಣ್ಣಾಗಲಿ ಗಂಡಾಗಲೀ ಅವರು ದೇಶದ ಕೀರ್ತಿ ಪ್ರಾಯರಾಗಲಿ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ