ಸಂಕ್ರಾಂತಿಯಂದು ದನಕರುಗಳ ಕಿಚ್ಚು ಹಾಯಿಸುವುದು

ಸಂಕ್ರಾಂತಿ ಎಂದರೆ ಅದು ಕೇವಲ ನೇಸರನು ತನ್ನ ಪಥವ ಬದಲಿಸಿ, ಮಾಗಿಯ ಚಳಿ ಮಾಯವಾಗಿಸುವ ಪ್ರಕೃತಿಯ ಬದಲಾವಣೆ ಅಷ್ಟೇ ಅಲ್ಲಾ. ಅದು ಪ್ರಕೃತಿ, ಪ್ರಾಣಿ ಮತ್ತು ಮನುಷ್ಯರಲ್ಲಿ ಹೊಸ ಚೈತನ್ಯ ಮೂಡಿಸುವ ಸುಗ್ಗಿಯ ಹಬ್ಬ. ರೈತಾಪಿ ಜನಗಳು ತಾವು ಬೆಳೆದ ಧಾನ್ಯಗಳನ್ನು ಕಣದಲ್ಲಿ ಒಟ್ಟು ಮಾಡಿ ಅದಕ್ಕೆ ಪೂಜೆ ಮಾಡಿ ತಮ್ಮ ಮನೆಗೆ ಎಷ್ಟು ಬೇಕೋ ಅಷ್ಟು ಇಟ್ಟುಕೊಂಡು ಉಳಿದದ್ದನ್ನು ಮಾರಿ ಸ್ವಲ್ಪ ಹಣ ಮಾಡಿಕೊಂಡು ಆ ಹಣದಲ್ಲಿ ತಮ್ಮ ಕುಟುಂಬ ಮತ್ತು ತಮ್ಮ ಸಾಕು ಪ್ರಾಣಿಗಳೊಂದಿಗೆ ಸಂಭ್ರಮಿಸುವ ಹಬ್ಬವೇ ಸಂಕ್ರಾಂತಿ.

ಸಂಕ್ರಾಂತಿ ಹಬ್ಬದ ಸಂಜೆ ನಮ್ಮ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗ್ರಾಮೀಣ ಭಾಗಗಳಲ್ಲಿ ಸಾಂಪ್ರದಾಯಿಕವಾಗಿ ತಮ್ಮ ಎತ್ತುಗಳೊಂದಿಗೆ ಕಿಚ್ಚು ಹಾಯಿಸುವ ಆಚರಣೆ ರೂಢಿಯಲ್ಲಿದೆ. ಈಗಿನಂತೆ ಜಮೀನಿನಲ್ಲಿ ಉಳುವುದಕ್ಕೆ ಟ್ರಾಕ್ಟರ್ ಗಳು ಮತ್ತು ಫಲವತ್ತೆಗಾಗಿ ರಸಗೊಬ್ಬರಗಳು ಇಲ್ಲದಿದ್ದಂತಹ ಸಂಧರ್ಭದಲ್ಲಿ ಎಲ್ಲರ ಮನೆಯಗಳಲ್ಲಿಯೂ ಹಸು ಮತ್ತು ಕರುಗಳು ಇದ್ದು ಅವುಗಳ ಸಗಣಿಯೇ ಫಲವತ್ತಾದ ಗೊಬ್ಬರ ಮಾತ್ತು ಅವುಗಳನ್ನೇ ಬಳಸಿ ಊಳುತ್ತಿದ್ದದ್ದಲ್ಲದೇ ಅವುಗಳನ್ನೆ ಬಳಸಿಕೊಂಡು ಸಾಮಾನು ಸರಂಜಾಮುಗಳನ್ನು ಸಾಗಿಸುತ್ತಿದ್ದರಿಂದ ಎತ್ತುಗಳು ರೈತಾಪಿ ವರ್ಗದ ಕುಟುಂಬದ ಅವಿನಾಭಾವ ಸಂಬಂಧವಾಗಿತ್ತು.

ಹಾಗಾಗಿಯೇ ಹಿಂದಿನ ಕಾಲದಲ್ಲಿ ಸಂಕ್ರಾಂತಿ ಕೇವಲ ಬೆಳೆಯುವ ಸುಗ್ಗಿಯ ಹಬ್ಬವಾಗಿರದೇ, ಅದು ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಮತ್ತು ಕೃಷಿ ಜೀವನದ ಆಧಾರವಾದ ಪಶುಗಳನ್ನು ಗೌರವಿಸುವ ಸಂಪ್ರದಾಯವಾಗಿತ್ತು ಎನ್ನುವುದಕ್ಕೇ ಕಿಚ್ಚು ಹಾಯಿಸುವ ಸಂಪ್ರದಾಯ ಉದಾಹರಣೆಯಾಗಿತ್ತು ಎಂದರೂ ತಪ್ಪಾಗದು. ಹಾಗಾಗಿಯೇ ಸಂಕ್ರಾಂತಿಯಂದು ರೈತಾಪಿವರ್ಗದವರು ತಮ್ಮ ದನಕರುಗಳಿಗೆ ಚೆನ್ನಾಗಿ ಸ್ನಾನ ಮಾಡಿಸಿ, ಕೋಡುಗಳಿಗೆ ಬಣ್ಣ ಬಳಿದು, ನಾನಾ ರೀತಿಯ ಹೂಗಳಿಂದ ಸಿಂಗಾರ ಮಾಡಿ, ಕೊರಳಿಗೆ ಮತ್ತು ಕಾಲ್ಗಳಿಗೆ ಗೆಜ್ಜೆ ಕಟ್ಟಿ, ಬಗೆ ಬಗೆಯ ಹೂವಿನ ಹಾರವನ್ನು ಹಾಕಿ ಒಬ್ಬರ ಹಸುಗಳಿಗಿಂತಲೂ ಮತ್ತೊಬ್ಬರ ಹಸು ಚೆನ್ನಾಗಿ ಕಾಣಿಸುವಂತೆ ಅಂದ ಚಂದವಾಗಿ ಆಲಂಕಾರ ಮಾಡಿದ ನಂತರ ಮನೆಯ ಹೆಣ್ಣು ಮಕ್ಕಳು ಅದಕ್ಕೆ ಪೂಜೆ ಮಾಡುತ್ತಾರೆ.

ಸಂಜೆ ಕತ್ತಲಾದ ಮೇಲೆ ಊರಿನ ಮುಂಭಾಗದ ಅರಳೀ ಕಟ್ಟೆಯ ಮುಂದೆಯೋ ಅಥವಾ ದೊಡ್ಡದಾದ ಮೈದಾನದಲ್ಲಿ ಒಣ ಹುಲ್ಲು ಹಾಗೂ ಕೃಷಿ ಅವಶೇಷಗಳನ್ನು ಹಾಕಿ ಅವುಗಳಿಗೆ ಬೆಂಕಿ ಹಚ್ಚಿ ಆ ಬೆಂಕಿಯ ಮೇಲೆ ಚಂದನೆಯದಾಗಿ ಆಲಂಕಾರ ಮಾಡಿರುವ ತಮ್ಮ ಹಸುಗಳನ್ನು ಹಾರಿಸುತ್ತಾರೆ. ಈ ರೀತಿಯಾಗಿ ಕಿಚ್ಚು ಹಾಯಿಸುವುದನ್ನು ನೋಡಿ ಸಂಭ್ರಮಿಸಲೆಂದೇ, ಊರಿನ ಹಿರಿ ಕಿರಿಯರೆಲ್ಲಾ ವರ್ಷವಿಡೀ ಕಾಯುತ್ತಿರುತ್ತಾರೆ ಎನ್ನುವುದೇ ವಿಶೇಷವಾಗಿದೆ. ಈ ರೀತಿ ದನಕರುಗಳನ್ನು ಬೆಂಕಿಯ ಮೇಲೆ ದಾಟಿಸುವ ಈ ಆಚರಣೆ ಕೇವಲ ಮನರಂಜನೆಗಾಗಿ ಅಷ್ಟೇ ಅಲ್ಲದೇ, ಬೆಂಕಿಯು ನಮ್ಮ ಧರ್ಮದಲ್ಲಿ ಪವಿತ್ರವೆಂದು ಭಾವಿಸಲಾಗಿದ್ದು, ದನಕರುಗಳು ಬೆಂಕೆಯ ಮೇಲೆ ಜಿಗಿಯುವುದರಿಂದ ಅವುಗಳ ಒತ್ತಡ ಕಡಿಮೆಯಾಗುತ್ತದೆ ಮತ್ತು ಅದು ಧೈರ್ಯ ಮತ್ತು ಸಮುದಾಯದ ಒಗ್ಗಟ್ಟಿನ ಸಂಕೇತವಾಗಿದೆ. ಇನ್ನು ಬೆಂಕಿಎಯ ಉಷ್ಣತೆ ಮತ್ತು ಹೊಗೆ ಹಸುಗಳ ಚರ್ಮಕ್ಕೆ ಅಂಟಿರುವ ಸೂಕ್ಷ್ಮಾತಿ ಸೂಕ್ಷ್ಮ ಹುಳುಗಳು, ಜಿಗುಟು ಕೀಟಗಳು ಹಾಗೂ ರೋಗಾಣುಗಳನ್ನು ಸುಟ್ಟು ಹಾಕುವ ಮೂಲಕ ದನಗಳನ್ನು ರೋಗಗಳಿಂದ ರಕ್ಷಿಸುತ್ತದೆ ಎನ್ನುವುದು ಇದರ ಹಿಂದಿರುವ ವೈಜ್ಞಾನಿಕ ಕಾರಣವಾಗಿದೆ.

ದುರಾದೃಷ್ಟವಷಾತ್ ಆಧುನಿಕ ಕೃಷಿಯ ಹೆಸರಿನಲ್ಲಿ ಹೆಚ್ಚು ಹೆಚ್ಚು ಧಾನ್ಯಗಳನ್ನು ಬೆಳೆಯುವ ಹುಚ್ಚಾಟದಲ್ಲಿ ದನಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಸಾವಯವ ಕೃಷಿಯ ಬದಲಾಗಿ ಟ್ರಾಕ್ಟರ್ ಮತ್ತು ರಾಸಾಯಿನಿಕ ಗೊಬ್ಬರಗಳನ್ನು ಬಳಸುವ ಮೂಲಕ ಮಣ್ಣಿನ ಫಲವತ್ತೆಯನ್ನೂ ಹಾಳು ಮಾಡುತ್ತಿರುವುದಲ್ಲದೇ, ಸಂಕ್ರಾಂತಿ ಮತ್ತು ಕಿಚ್ಚು ಹಾಯಿಸುವಂತಹ ಸುಂದರವಾದ ಪರಂಪರೆಯ ನೈಜ ಅರ್ಥವನ್ನು ಮರೆ ಆಗುತ್ತಿರುವುದು ನಿಜಕ್ಕೂ ದುಃಖಕರವಾಗಿದೆ.

ಇದೆಲ್ಲಾ ನೋಡಿದ್ರೇ, ಎತ್ತಿನ ಗಾಡಿ ಹೊಗೆ ಉಗುಳುವುದಿಲ್ಲ, ಟ್ರಾಕ್ಟರ್ ಸಗಣಿ ಹಾಕುವುದಿಲ್ಲ ಎಂಬ ಮಾತು ಎಷ್ಟು ಪ್ರಸ್ತುತವಾಗಿತ್ತದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment