ಅತ್ತೆ ಮನೆಯಲ್ಲಿ ಅಳಿಯನಿಗೆ ಅದ್ದೂರಿ ಆತಿಥ್ಯ

ಮಗಳಿಗಿಂತ ಮುತ್ತೈದೆ ಇಲ್ಲಾ‍, ಅಳಿಯನಿಗಿಂತ ಬ್ರಾಹ್ಮಣನಿಲ್ಲ ಎನ್ನುವ ಗಾದೆ ಮಾತೊಂದೆ. ಅದರ ಪ್ರಕಾರ ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎನ್ನುವ ಮಾತಿದ್ದರೂ. ಮನೆಯಲ್ಲಿ ಅತ್ಯಂತ ಪ್ರೀತಿಯಿಂದ ಸಾಕಿ ಸಲಹಿದ ಮನೆಯ ಮಹಾಲಕ್ಷ್ಮಿ ಮಗಳನ್ನು ಮತ್ತೊಬ್ಬರ ಮನೆಯನ್ನು ಬೆಳಗಳು ಮದುವೆ ಮಾಡಿಕೊಟ್ಟರೂ, ತಮ್ಮ ಮನೆಯಲ್ಲಿ ನಡೆಯುವ ಪ್ರತಿಯೊಂದು ಶುಭ ಕಾರ್ಯಗಳಲ್ಲಿ ಮನೆಯ ಮಗಳು ಇರಲೇ ಬೇಕು. ಮದುವೆ ಮಾಡಿಕೊಟ್ಟ ಮೇಲೆ ಮಗಳೊಬ್ಬಳೇ ಬಂದರೆ ಸಾಕೇ? ಅವಳ ಜೊತೆ ಅಳಿಯನೂ ಬರಲೇ ಬೇಕು. ಮನೆಯ ಮಗಳೇನೋ ತವರು ಮನೆಯಲ್ಲಿ ಹೇಗಿದ್ದರೂ ಚೆನ್ನಾಗಿಯೇ ಇರುತ್ತದೆ. ಆದರೆ ಅತ್ತೆಯ ಮನೆಗೆ ಅಳಿಯನಿಗೆ ಬಂದ ಅಳಿಯನಿಗಂತೂ ವಿಶೇಷ ಆದರಾತಿಥ್ಯ. ಅದರಲ್ಲೂ ಮದುವೆಯಾದ ಮೊದಲ ವರ್ಷದ ಪ್ರತೀ ಹಬ್ಬದಲ್ಲೂ (ಗತಿಗೆಟ್ಟ ಅಳಿಯ ಗೌರಿ ಹಬ್ಬಕ್ಕೆ ಬಂದ ಎನ್ನುವ ಗೌರಿ ಹಬ್ಬದ ಹೊರತಾಗಿ) ಅಳಿಯನಿಗೆ ವಿಶೇಷ ಗೌರವ. ಅದೇ ರೀತಿಯಲ್ಲಿ ಆಂಧ್ರಪ್ರದೇಶದ ನರಸೀಪಟ್ಟಣಂನ ಶ್ರೀಮತಿ ಕಲಾವತಿ ಮತ್ತು ಶ್ರೀ ನಾಲೆಂ ರಮೇಶ್‌ ಕುಮಾರ್‌ ದಂಪತಿಗಳ ಮೊದಲನೇ ವರ್ಷದ ಸಂಕ್ರಾಂತಿಗೆಂದು ಬಂದಿದ್ದ ತಮ್ಮ ಅಳಿಯ ಶ್ರೀಹರ್ಷ ಮಾಡಿರುವ ಅದ್ಧೂರಿ ಆತಿಥ್ಯ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.

ಆಂಧ್ರ ಪ್ರದೇಶದಲ್ಲಿ ಸಂಕ್ರಾಂತಿ ಕೋಥ ಅಲ್ಲುಡು ಅರ್ಥಾತ್ ಸಂಕ್ರಾಂತಿಯ ಸಮಯದಲ್ಲಿ ಹೊಸ ಅಳಿಯಂದಿರಿಗೆ ಹಬ್ಬಗಳು ಎಂಬುದು ಬಹಳ ಜನಪ್ರಿಯವಾಗಿದ್ದು, ಸಾಮಾನ್ಯವಾಗಿ ಮೊದಲನೇ ಸಂಕ್ರಾಂತಿ ಹಬ್ಬಕ್ಕೆ ಮಗಳ ಜೊತೆ ಅತ್ತೆ ಮಾವನ ಮನೆಗೆ ಬರುವ ಅಳಿಯನಿಗೆ ವಿಶೇಷವಾದ ಅತಿಥಿ ಸತ್ಕಾರ ಮಾಡುವ ಸಂಪ್ರದಾಯವಿದೆ. ಅದೇ ರೀತಿಯಲ್ಲಿ ಸಂಕ್ರಾಂತಿ ಹಬ್ಬಕ್ಕೆಂದು ತನ್ನ ಮಡದಿಯ ನರಸೀಪಟ್ಟಣಂನ ಶಾಂತಿ ನಗರದಲ್ಲಿದ್ದ ತವರು ಮನೆಗೆ ಆಗಮಿಸಿದ್ದ ಅಳಿಯ ಶ್ರೀಹರ್ಷನಿಗೆ ಭೋಜನದಲ್ಲಿ ತಮ್ಮ ಅತ್ತೆ ಮತ್ತು ಮಾವ ಅವರು ಸಿದ್ಧ ಪಡಿಸಿದ್ದ ಅದ್ಭುತವಾದ ಗೋದಾವರಿ ಶೈಲಿಯ ಊಟವನ್ನು ನೋಡಿ ನಿಜಕ್ಕೂ ದಂಗುಬಡಿಸಿದೆ

29 ವರ್ಷ ವಯಸ್ಸಿನ ಶ್ರೀಹರ್ಷ ಅವರಿಗಾಗಿ ಸುಮಾರು 290 ವಿಭಿನ್ನ ಸಾಂಪ್ರದಾಯಿಕ ಭಕ್ಷ್ಯಗಳನ್ನು ಸಿದ್ಧಪಡಿಸಿ ಅದನ್ನು ಬೃಹತ್ತಾದ ಟೇಬಲ್ ಮೇಲೆ ಇಟ್ಟು ಅದರ ಮುಂದೆ ಶ್ರೀಹರ್ಷ ಇರುವ ಪೋಟೋ ಮತ್ತು ವೀಡಿಯೋ ಈಗ ಸಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿದೆ. ನಾವೆಲ್ಲಾ ಚಿಕ್ಕವರಿದ್ದಾಗ ನೋಡಿದ್ದ ಮಾಯಾ ಬಜಾರ್ ಸಿನಿಮಾದಲ್ಲಿ ಘಟೋಧ್ಗಜ ಊಟವಾಡುವ ವಿವಾಹ ಭೋಜನವಿದು, ವಿಚಿತ್ರ ಭಕ್ಷಗಳಿವು (ಜನವಿದು ವಿಚಿತ್ರ ಸಂಗೀತ: ಘಂಟಸಾಲ ಸಾಹಿತ್ಯ: ಚಿ.ಸದಾಶಿವಯ್ಯ ಗಾಯನ: ಮಾಧವಪೆದ್ದಿ ಸತ್ಯಂ) ಈ ಹಾಡನ್ನು ನೆನಪಿಸುವಂತಿತ್ತು ಎಂದರೂ ತಪ್ಪಾಗದು.

ವಿವಾಹ ಭೋಜನವಿದು ವಿಚಿತ್ರ ಭಕ್ಷೆಗಳಿವು ಬೀಗರಿಗೆ ಔತಣವಿದು ದೊರೆಗೊಂಡಿತೆನಗೆ ಬಂದು
ಅಹಹ ಹ ಹಹಾ ಅಹಹ ಹ ಹಹಾ

ಓಹೋರೆ ಪಾರಿಗೆಗಳೇ ಆಹಾರ ಮಂಡಿಗೆಗಳೇ ಗೂಳೂರಿಗೆ ಚಿರೋಟಿ ಇವೆಲ್ಲ ನನಗೆ ಸಾಟಿ
ಅಹಹ ಹ ಹಹಾ ಅಹಹ ಹ ಹಹಾ

ಭಳಿರೇ ಲಾಡು ಸಾಲು ವಹ ಪೇಣಿ ಹೋಳಿಗೆಗಳು ಭಲೇ ಜಿಲೇಬಿ ಮೊದಲು ಇವೆಲ್ಲ ನನ್ನ ಪಾಲು
ಅಹಹ ಹ ಹಹಾ ಅಹಹ ಹ ಹಹಾ

ಮಜಾರೆ ಹಪ್ಪಳಗೂ ಪುಳಿಹೊರೆ ಉಪ್ಪಿಟ್ಟುಗಳು ವಹಾರೇ ಪಾಯಸಗಳು ಇವೆಲ್ಲ ನನಗೆ ಸಾಕು
ಅಹಹ ಹ ಹಹಾ ಅಹಹ ಹ ಹಹಾ

ಮಗಳ ಮದುವೆಯ ನಂತರದ ಮೊದಲ ಸಂಕ್ರಾಂತಿಯನ್ನು ಅತ್ಯಂತ ವಿಶೇಷವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ, ನಾಲೆಂ ರಮೇಶ್‌ ಕುಮಾರ್‌ ದಂಪತಿಗಳು ತಮ್ಮ ಅಳಿಯನಿಗೆ ಇಂತಹ ಅದ್ಧೂರಿ ಆತಿಥ್ಯ ನೀಡಿದ್ದಾರೆ. ಅದ್ದೂರಿಯ ಭೋಜನದ ಭಾಗವಾಗಿ, ವಿಶಾಲವಾದ ಬಾಳೆ ಎಲೆಗಳ ಮೇಲೆ ಜೋಡಿಸಿದ್ದ ಭೋಜನದಲ್ಲಿ ಬಗೆ ಬಗೆಯ ಪಾಯಸಗಳು, ಸಿಹಿ ಮತ್ತು ಖಾರಾ ಹುಗ್ಗಿ, ವಿವಿಧ ರೀತಿಯ ಮತ್ತು ಆಕಾರದ ಲಾಡುಗಳು, ಒಬ್ಬಟ್ಟು, ಕಾಜಾ ಮುಂತಾದ ಮುಂತಾದ ಸಿಹಿತಿಂಡಿಗಳು ಜೊತೆಗೆ ಪಚ್ಚಡಿ, ಆಂಧ್ರ ಶೈಲಿಯ ಕೂರ, ಪಪ್ಪು (ತೊವ್ವೆ), ಚಾರು (ರಸಂ), ವಡೆ ವಿವಿಧ ಬಗೆಯ ಮೇಲೋಗರಗಳು, ಹಪ್ಪಳ, ಒಡಿಯಾಲು, ಚಟ್ನಿ, ಆವಕಾಯ ಬಗೆ ಬಗೆಯ ಫ್ರೈಗಳು, ಉಪ್ಪು-ಖಾರ ತಿನಿಸುಗಳು ಸೇರಿ ಆಂಧ್ರ ಸಂಪ್ರದಾಯಿಕ ಶೈಲಿಯ ಸುಮಾರು 290 ಬಗೆಯ ಸಸ್ಯಹಾರಿ ಅಡುಗೆಗೆಳನ್ನು ಒಳಗೊಂಡ ಭರ್ಜರಿ ಭೋಜನದ ರುಚಿ ತೋರಿಸಿದ್ದಾರೆ.

ಗೋದಾವರಿ ಪ್ರದೇಶದ ಸಂಪ್ರದಾಯಕ್ಕೆ ಅನುಗುಣವಾಗಿ ಆಂಧ್ರ ಪ್ರದೇಶದ ಶ್ರೀಮಂತ ಆಹಾರ ಸಂಸ್ಕೃತಿಯ ಸಂಪೂರ್ಣ ವೈಭವವನ್ನು ಪ್ರತಿಬಿಂಬಿಸುವ ಇಷ್ಟೊಂದು ಬಗೆಯ ಆಹಾರಗಳಿರುವ ಈ ವಿಶೇಷ ಭೋಜನದ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ನಂದೆಲ್ಲಿ ಇಡಲಿ ನಂದ ಗೋಪಾಲ ಎನ್ನುವಂತೆ ಇದರ ಪರ ಮತ್ತು ವಿರೋಧ ವ್ಯಕ್ತ ಪಡಿಸಿರುವವರ ಸಂಖ್ಯೆಯೂ ಅಲ್ಲಿ ತಯಾರಿಸಿದ್ದ ಭಕ್ಷಗಳಿಗಿಂತಲೂ ಅಧಿಕವಾಗಿರುವುದು ವಿಶೇಷವಾಗಿದೆ.


ಬಹುತೇಕರು ಇದು ಅವಿಭಜಿತ ಆಂಧ್ರ ಪ್ರದೇಶದ ಸಾಂಪ್ರದಾಯಿಕ ಆತಿಥ್ಯ ಮತ್ತು ಸಂಸ್ಕೃತಿಯ ಗರ್ವದ ಸಂಕೇತ ಎಂದು ಕೊಂಡಾಡಿದ್ದಲ್ಲದೇ, ನನಗೂ ಇಂತಹ ಅತ್ತೇ ಮಾವ ಸಿಕ್ಕಿದ್ದಂತೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾರೆ. ನಿಂದಕರಿರಬೇಕು ಇರಬೇಕು ನಿಂದಕರಿರಬೇಕು. ಹಂ.. ಇದ್ದರೆ ಕೇರಿ ಹ್ಯಾಂಗೆ ಶುದ್ಧಿಯೊ ಹಾಂಗೆ ಎನ್ನುವ ಪುರಂದರ ದಾಸರ ಪದದಂತೆ ಇಷ್ಟು ದೊಡ್ಡ ಪ್ರಮಾಣದ ಅಡುಗೆಗಳನ್ನು ಅಳಿಯನೊಬ್ಬ ತಿನ್ನಲು ಸಾಧ್ಯವೇ? ಸಮಾಜದಲ್ಲಿ ಎಷ್ಟೋ ಮಂದಿ ಒಂದು ಹೊತ್ತಿನ ತುತ್ತಿನ ಕೂಳಿಗೂ ಕಷ್ಟ ಪಡುತ್ತಿರುವಾಗ ಇಷ್ಟೊಂದು ಬಗೆಯ ಖಾದ್ಯಗಳನ್ನು ತಯಾರಿಸಿ ಅವುಗಳನ್ನು ಈ ರೀತಿಯಾಗಿ ಪೋಲು ಮಾಡಿರುವುದು ಖಂಡನಾರ್ಹ ಎಂಬ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬಂದ ಈ ರೀತಿಯ ನಕಾರಾತ್ಮಕ ಪ್ರತಿಕ್ರಿಯನ್ನು ಸಕಾರಾತ್ಮಕವಾಗಿಯೇ ತೆಗೆದುಕೊಂಡಿರುವ ಆ ಕುಟುಂಬ, ಅಳಿಯ ಎಂದರೆ ಹೊರಗಿನವನಲ್ಲಾ. ಮಗಳನ್ನು ಮದುವೆ ಮಾಡಿ ಕೊಟ್ಟ ನಂತರ ಅಳಿಯನೂ ನಮ್ಮ ಕುಟುಂಬದ ಮಗನಂತೆಯೇ, ಎಂಬ ಭಾವನೆಯಲ್ಲಿ ತಮ್ಮ ಮಗಳು ಮತ್ತು ಅಳಿಯನ ಮೊದಲ ಸಂಕ್ರಾಂತಿ ಅವರ ಜೀವನದಲ್ಲಿ ಒಂದು ರೀತಿಯಲ್ಲಿ ಮರೆಯಲಾಗದ ವಿಶೇಷವಾಗಿರಲಿ ಎಂಬ ಸದುದ್ದೇಶದಿಂದ ಅದನ್ನು ಸಂಪ್ರದಾಯಬದ್ಧವಾಗಿ ಮತ್ತು ಭವ್ಯವಾಗಿ ಆಚರಿಸಿದ್ದೇವೆ. ಫೋಟೋಗಾಗಿ ಮಾತ್ರವೇ ಅಳಿಯನ ಮುಂದೆ ಆ ರೀತಿಯಾಗಿ ಎಲ್ಲಾ ಅಡುಗೆಗಳನ್ನು ಜೋಡಿಸಿ ಪೋಟೋ ವಿಡೀಯೋ ತೆಗೆಸಿ ನಂತರ ಇಡೀ ಕುಟುಂಬ ಮತ್ತು ನೆರೆಹೊರೆಯವರು ಸೇರಿ ಆ ವಿಶೇಷ ಅಡುಗೆಯನ್ನು ಸವಿದಿದ್ದೇವೆಯೇ ಹೊರತು ಇಲ್ಲಿ ಯಾವುದೇ ಆಹಾರವನ್ನು ವ್ಯರ್ಥ ಮಾಡಿಲ್ಲ ಎಂಬ ಸ್ಪಷ್ಟನೆಯನ್ನು ರಮೇಶ್‌ ಕುಮಾರ್‌ ನೀಡಿದ್ದಾರೆ.

ಭಾರತ ಎನ್ನುವುದು ಕೇವಲ ಸಾವಿರಾರು ಭಾಷೇ, ಲಕ್ಷಾಂತರ ಆಚರಣೆಗಳು, ಕೋಟ್ಯಾಂತರ ಜನರನ್ನು ಹೊಂದಿರುವ ಒಂದು ಒಕ್ಕೂಟ ರಾಷ್ಟ್ರವಾಗಿರದೇ ಅದು ಏಕತೆಯಲ್ಲೂ ವಿವಿಧತೆಯನ್ನು ಹೊಂದಿರುವಂತಹ ಉಪಖಂಡವಾಗಿದೆ ಎನ್ನುವುದಕ್ಕೇ ಈ ಪ್ರಸಂಗವೇ ಸಾಕ್ಷಿಯಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment