ವಿವೇಕದೀಪ್ತಿ-ದಕ್ಷಿಣಾಸ್ಯದರ್ಶಿನೀ

ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಅನಕ್ಷರಸ್ಥರಾಗಿದ್ದರೂ, ಅವರು ಬುದ್ದಿವಂತರೂ ಮತ್ತು ವಿವೇಕವಂತರಾಗಿರುತ್ತಿದ್ದರು. ಅದಕ್ಕೆ ಮುಖ್ಯ ಕಾರಣವೇ ಅವರ ಜೀವನ ಶೈಲಿಯಾಗಿತ್ತು. ಕಾಯಕವೇ ಕೈಲಾಸ ಎಂದು ಹಗಲು ಹೊತ್ತಿನಲ್ಲಿ ಮೈ ಬಗ್ಗಿಸಿ ಬೆವರು ಸುರಿಸಿ ಕೆಲಸ ಮಾಡುತ್ತಿದ್ದಲ್ಲದೇ, ಸಾವಯವವಾಗಿ ಬೆಳೆದಿದ್ದ ಆಹಾರವನ್ನು ಎಷ್ಟು ಬೇಕೋ ಅಷ್ಟನ್ನು ಸೇವಿಸಿ, ಸಂಜೆ ದೇವಾಲಯಗಳಿಗೆ ಹೋಗಿ ಪೂಜೆ ಪುನಸ್ಕಾರ, ಭಜನೆಗಳನ್ನು ಮಾಡಿ ಆನಂತರ ಸ್ವಲ್ಪ ಹೊತ್ತು ಅರಳಿ ಕಟ್ಟೆಯಲ್ಲಿ ಕುಳಿತು ಲೋಕಾಭಿರಾಮವಾಗಿ ಪ್ರಚಲಿತ ವಿದ್ಯಮಾನಗಳ ಕುರಿತಾಗಿ ಮಾತು ಕಥೆ ನಡೆಸಿ, ಸರಳವಾದ ಜೀವನ ಶೈಲಿಯಲ್ಲಿ ನೆಮ್ಮದಿಯಿಂದ ನೂರಾರು ವರ್ಷಗಳ ಕಾಲ ಜೀವನ ನಡೆಸುತ್ತಿದ್ದರು.

ಕಾಲ ಬದಲಾದಂತೆ ಮನುಷ್ಯನ ಅವಶ್ಕಕತೆಗಳು ಬದಲಾದವು. ಸರಳ ಜೀವನದಿಂದ ಐಶಾರಾಮೀ ಜೀವನಕ್ಕೆ ಒಗ್ಗಿಕೊಂಡ ಪರಿಣಾಮ, ಹೆಚ್ಚಿನ ಹಣದ ಅವಶ್ಯಕತೆಗಾಗಿ ಹಗಲು ರಾತ್ರಿ ಎನ್ನದೇ ನಿರಂತರವಾಗಿ ದುಡಿಯತೊಡಗಿಕೊಂಡ ಪರಿಣಾಮವಾಗಿ ಹಣ, ಆಸ್ತಿ, ಅಂತಸ್ತುಗಳ ಹೆಚ್ಚಾಗುವುದರ ಜೊತೆಗೆ ಅವನ ಚಿಂತೆಗಳೂ ಹೆಚ್ಚಾದವು. ಎಷ್ಟು ದುಡಿದರೂ ನೆಮ್ಮದಿಯ ಜೀವನ ನಡೆಸಲಾಗದೇ, ವಿಪರೀತ ಒತ್ತಡಗಳಿಗಾಗಿ ಚಿಕ್ಕವಯಸ್ಸಿನಲ್ಲೇ ವಿವಿವ ಖಾಯಿಲೆಗಳಿಗೆ ತುತ್ತಾಗುತ್ತಿರುವುದು ನಿಜಕ್ಕೂ ವಿಷಾಧನೀಯವಾಗಿದ್ದು, ಇದಕ್ಕೆಲ್ಲಾ ಆಧ್ಯಾತ್ಮವೇ ಪರಿಹಾರ ಎಂಬುದನ್ನು ಕಂಡು ಕೊಳ್ಳುವಷ್ಟರಲ್ಲಿ ಆತನ ಆಯಸ್ಸು ಮುಗಿದು ಹೋಗುತ್ತಿರುವುದು ವಿಷಾಧನೀಯವಾಗಿದೆ.

 

ಅರೇ ಸನಾತನ ಧರ್ಮದ ಆಚರಣೆಗಳು ಕೇವಲ ಮೂಡ ನಂಬಿಕೆಗಳು ಅದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ಹಿನ್ನಲೆಯಿಲ್ಲಾ, ನಮ್ಮ ಸಂಸ್ಕೃತ, ವೇದ, ಶಾಸ್ತ್ರ ಪುರಾಣಗಳೆಲ್ಲವೂ ಇಂದಿನ ಕಾಲಘಟ್ಟಕ್ಕೆ ಅಪ್ರಸ್ತುತ ಎನ್ನುತ್ತಾ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಮಾಡುತ್ತಿರುವ ಇಂದಿನ ಯುವಜನನತೆಗೆ ನಮ್ಮ ಸನಾತನ ಭಾರತೀಯ ಪರಂಪರೆಯಲ್ಲಿ ಹಾಸು ಹೊಕ್ಕಾಗಿರುವ ಆಧುನಿಕ ವಿಜ್ಞಾನದ ಪರಿಚಯವನ್ನು ಮಾಡಿಸುವುದಕ್ಕೆ ವೇದಾಂತಭಾರತೀ ಸಂಸ್ಥೆಯ ಮಹಾಸಂರಕ್ಷಕರಾದ ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠಾಧೀಶ್ವರರಾದ ಜಗದ್ಗುರು ಶಂಕರಾಚಾರ್ಯ ಪರಮಪೂಜ್ಯ ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ದಿವ್ಯಾನುಗ್ರಹದೊಂದಿಗೆ, ಸಂಸ್ಥೆಯ ಸಂರಕ್ಷಕರಾದ ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಇಂದಿನ ಯುವಸಮಾಜಕ್ಕಾಗಿ ವಿವೇಕದೀಪ್ತಿ ಎಂಬ ಮಹಾಭಿಯಾನವನ್ನು ಬೆಂಗಳೂರು ಮಹಾನಗರದ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳ ಅಂತಃಕರಣದಲ್ಲಿ ಶ್ರೀ ಶಂಕರಭಗವತ್ಪಾದರು ರಚಿಸಿರುವ ಶ್ರೀ ದಕ್ಷಿಣಾಮೂರ್ತಿ ಅಷ್ಟಕದಲ್ಲಿ ತಿಳಿಸಿರುವ ಸಾರ್ವಕಾಲಿಕ ವಿಚಾರಗಳಳನ್ನು ಸತ್ಯಾಸತ್ಯತೆಯ ವಿವೇಚನೆಯನ್ನು ಮೂಡಿಸಿ, ಜೀವನವನ್ನು ಸುಗಮವಾಗಿ ಸಾಗಿಸುವ ಮಾರ್ಗವನ್ನು ತೋರಿಸುವ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ನಡೆಸುತ್ತಿರುವುದು ಶ್ಲಾಘನೀಯವಾಗಿದೆ.

ದಕ್ಷಿಣಾಮೂರ್ತಿ ಅಷ್ಟಕದ ಪಠನ ಹಾಗೂ ಚಿಂತನೆಯು ಯುವಮನಸ್ಸುಗಳಲ್ಲಿ ಮೂಡುವ ಗೊಂದಲಗಳನ್ನು ನಿವಾರಿಸಿ, ವಿವೇಕವನ್ನು ಜಾಗೃತಗೊಳಿಸಿ, ವ್ಯಕ್ತಿತ್ವವನ್ನು ಉನ್ನತಗೊಳಿಸಿ, ಸದುದ್ದೇಶ ಸಮರಸಗಳಿಂದ ಕೂಡಿದ ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ಶ್ರೇಷ್ಠವಾದ ಸಾಧನವಾಗಿದೆ. ಈ ಹಿನ್ನೆಲೆಯಲ್ಲಿ ಯುವಸಮುದಾಯವನ್ನು ಗುರಿಯಾಗಿರಿಸಿ ಬೆಂಗಳೂರು ನಗರದಾದ್ಯಂತ ಕೇವಲ ಶಾಲಾ ಕಾಲೇಜುಗಳಲ್ಲದೇ, ಔದ್ಯೋಗಿಕ ಸಂಸ್ಥೆಗಳು, ಯೋಗಕೇಂದ್ರಗಳು ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ವ್ಯಾಪಕವಾಗಿ ದಕ್ಷಿಣಾಮೂರ್ತಿ ಅಷ್ಟಕ ಕುರಿತಾದ ಗೋಷ್ಠಿಗಳನ್ನು ಏರ್ಪಡಿಸಿದ್ದಲ್ಲದೆ, ಅನೇಕ ಪ್ರಾಥಮಿಕ- ಪ್ರೌಢಶಾಲೆಗಳಲ್ಲಿ ಈ ಸ್ತೋತ್ರವನ್ನು ಅಭ್ಯಾಸ ಮಾಡಿಸಿ ಇದರ ಮಹತ್ವವನ್ನು ಕುರಿತು ಉಪನ್ಯಾಸಗಳನ್ನು ನೆರವೇರಿಸಲಾಗಿದೆ. ಇಂತಹ ಮಹಾ ಆಭಿಯಾನದಲ್ಲಿ, ಪುರಸಭೆಯ ಕಾರ್ಮಿಕರು, ದಿವ್ಯಾಂಗರು, ದೃಷ್ಟಿ ಹೀನರು, ಕೊಳಗೇರಿ ಪ್ರದೇಶದ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಸೇರಿದಂತೆ ಲಿಂಗ ವರ್ಣ ವಯೋಭೇದವಿಲ್ಲದೇ, ಆಬಾಲವೃದ್ಧರಾದಿಯಾಗಿ ಸಮಾ ಜದ ಎಲ್ಲ ಸ್ತರದ ಜನರು ಈ ಸ್ತೋತ್ರಗಳ ಅಭ್ಯಾಸ ಹಾಗೂ ಚಿಂತನೆಯ ಗೋಷ್ಠಿಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಅದರ ಲಾಭವನ್ನು ಪಡೆದಿದ್ದಾರೆ.

ಈ ದಕ್ಷಿಣಾಮೂರ್ತಿ ಅಷ್ಟಕದ ತತ್ತ್ವವನ್ನು ವಿದ್ಯಾರ್ಥಿಗಳಿಗೆ ಹಾಗೂ ಇಂದಿನ ಯುವಸಮುದಾಯಕ್ಕೆ ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ವೇದಾಂತಭಾರತೀ ಹಾಗೂ ಪರಮ್ ಫೌಂಡೇಶನ್ ಸಂಸ್ಥೆಯ ಸಹಯೋಗದಲ್ಲಿ 2026ರ ಜನವರಿ 29 ರಿಂದ ಫೆಬ್ರವರಿ 1 ರವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಕಲ್ಯಾಣ ಮಂಟಪದಲ್ಲಿ ದಕ್ಷಿಣಾಸ್ಯದರ್ಶಿನೀ ಎನ್ನುವ ಪ್ರದರ್ಶಿನಿಯೊಂದನ್ನು ಏರ್ಪಡಿಸಲಾಗಿದ್ದು, ಇದರಲ್ಲಿ ಆಧುನಿಕ ವಿಜ್ಞಾನವನ್ನು ಆಧರಿಸಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ತಂತ್ರಜ್ಞಾನ ಮುಂತಾದ ಪ್ರಯೋಗಗಳ ಮೂಲಕ ದಕ್ಷಿಣಾಮೂರ್ತಿ ಅಷ್ಟಕದಲ್ಲಿ ತಿಳಿಸಿದ ವಿಚಾರಗಳನ್ನು ಎಲ್ಲರಿಗೂ ಮನಮುಟ್ಟುವಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಪ್ರಸ್ತುತಪಡಿಸಲಿರುವುದು ಗಮನಾರ್ಹವಾಗಿದೆ. ಇದಕ್ಕೆ ಪೂರಕವಾಗಿ ವೇದಾಂತವನ್ನು ಅಭ್ಯಾಸ ಮಾಡಿದ ಸಂಸ್ಕೃತ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ವಿದ್ವಾಂಸರು ಆಯಾ ಪ್ರಯೋಗಕ್ಕೆ ಸಂಬಂಧಿಸಿದಂತೆ ಆಧ್ಯಾತ್ಮಿಕ ಅಂಶಗಳ ತೌಲನಾತ್ಮಕ ವಿವರಣೆಯನ್ನು ನೀಡಲಿರುವುದು ವಿಶೇಷವಾಗಿದೆ. ಇದರ ಜೊತೆಗೆ ವಿವಿಧ ಕಾಲೇಜು ಮತ್ತು ಸಂಘ ಸಂಸ್ಥೆಗಳ ಸುಮಾರು 50ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳೂ ಪ್ರತಿದಿನ ಬೆಳಿಗ್ಗೆ 10ಗಂಟೆಯಿಂದ ಸಂಜೆ 7.30ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ.

ದಕ್ಷಿಣಾಸ್ಯದರ್ಶಿನಿಯ ಉದ್ಘಾಟನಾ ಕಾರ್ಯಕ್ರಮವು 2026ರ ಜನವರಿ 29ರ ಬೆಳಿಗ್ಗೆ 10ಗಂಟೆಗೆ ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷರೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಗಳೂ ಮತ್ತು ಚಾಣಕ್ಯ ವಿ.ವಿ.ಯ ಕುಲಪತಿಗಳೂ ಆದ ಡಾ|| ಎಸ್. ಸೋಮನಾಥರವರು ಹಾಗೂ ಪ್ರಸಿದ್ಧ ಇತಿಹಾಸ ತಜ್ಞರೂ, ಲೇಖಕರೂ ಆದ ಡಾ|| ವಿಕ್ರಮ್ ಸಂಪತ್ ರವರು ಸಮ್ಮುಖದಲ್ಲಿ ಉದ್ಭಾಟಿಸಲ್ಪಟ್ಟು, ದಿನಾಂಕ 2026ರ ಫೆಬ್ರವರಿ 1ರ ಸಂಜೆ 4.30ರಿಂದ ಡಾ|| ಎಸ್. ಸೋಮನಾಥ್ ಹಾಗೂ ಡಿ.ಆರ್.ಡಿ.ಓ. ಮಾಜಿ ನಿರ್ದೇಶಕರಾದ ಪ್ರದ್ಮಶ್ರೀ ಪುರಸ್ಕೃತ ಶ್ರೀ ಪ್ರಹ್ಲಾದ್ ರಾವ್ ರವರ ಸಮ್ಮುಖದಲ್ಲಿನ ಸಮಾರೋಪ ಸಮಾರಂಭಲ್ಲಿ ಮುಕ್ತಾಯವಾಗಲಿದ್ದು, ಇದೇ ಸಂಧರ್ಭದಲ್ಲಿ ಪ್ರದರ್ಶಿನಿಯಲ್ಲಿ ಪ್ರಸ್ತುತಪಡಿಸಲ್ಪಟ್ಟ ಅತ್ಯುತ್ತಮ ಪ್ರದರ್ಶನಕ್ಕೆ ಬಹುಮಾನ ವಿತರಣೆ ಮತ್ತು ಎಲ್ಲ ಪ್ರದರ್ಶಕರಿಗೂ ಪ್ರೋತ್ಸಾಹಕರ ಸ್ಮರಣಿಕೆಗಳನ್ನು ನೀಡುವ ಕಾರ್ಯಕ್ರಮವಿದೆ.

2026ರ ಜನವರಿ 31ರ ಬೆಳಿಗ್ಗೆ 11ಗಂಟೆಯಿಂದ ಅರಮನೆ ಮೈದಾನ ಕೃಷ್ಣವಿಹಾರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿರುವ ಬೃಹತ್ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯ ಆಸ್ತಿಕ ಬಂಧುಗಳೊಂದಿಗೆ ಸೇರಿ ದಕ್ಷಿಣಾಮೂರ್ತಿ ಅಷ್ಟಕದ ಸಾಮೂಹಿಕ ಪಾರಾಯಣವನನ್ನು ಆಯೋಜಿದಲಾಗಿದ್ದು, ಈ ಕಾರ್ಯಕ್ರಮಕ್ಕೆ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾಪೀಠದ ಜಗದ್ಗುರು ಶಂಕರಾಚಾರ್ಯ ಪರಮಪೂಜ್ಯ ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ದಿವ್ಯ ಸಾನ್ನಿಧ್ಯವನ್ನು ನೀಡಿ ಅನುಗ್ರಹಿಸಲಿದ್ದರೆ, ಈ ಎಲ್ಲ ಕಾರ್ಯಕ್ರಮಗಳು ವೇದಾಂತಭಾರತಿಯ ಸಂರಕ್ಷಕರೂ, ಮಾರ್ಗದರ್ಶಕರೂ ಆಗಿರುವ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳವರ ಹಾಗೂ ಅವರ ಕರಕಮಲಸಂಜಾತರಾದ ಪರಮಪೂಜ್ಯ ಶ್ರೀಶ್ರೀ ಬ್ರಹ್ಮಾನಂದಭಾರತೀ ಸ್ವಾಮಿಗಳವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ನಡೆಯಲಿವೆ.

ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳವರ ಸಾರಥ್ಯದಲ್ಲಿ ಇತ್ತೀಚೆಗಷ್ಟೇ ಮೈಸೂರು ಅರಮನೆ ಆವರಣದಲ್ಲಿ ಅತ್ಯಂತ ಸ್ತುತಿ ಶಂಕರ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಇದೇ ರೀತಿಯ ಹತ್ತಾರು ಕಾರ್ಯಕ್ರಮಗಳು ಶ್ರೀಗಳ ಮಾರ್ಗದರ್ಶನದಲ್ಲಿ ನಾಡಿನಾದ್ಯಂತ ಅತ್ಯಂತ ಯಶಸ್ವಿಯಾಗಿದ್ದು, ಕೆಲವು ವರ್ಷಗಳ ಹಿಂದೆ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರೂ ಸಹಾ ಶ್ರೀಮಠದ ವತಿಯಿಂದ ಇದೇ ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಸಹಾ ಇಲ್ಲಿ ನೆನಪಿಸಿಕೊಳ್ಳ ಬಹುದಾಗಿದೆ. ಈಗ ಮತ್ತೊಮ್ಮೆ ಶೃಂಗೇರಿ ಶಾರದಾ ಮಠದ ಕಿರಿಯ ಮಠಾಧೀಶ ಶ್ರೀ ವಿದುಶೇಖರ ಭಾರತೀ ಸ್ವಾಮೀಜಿಗಳು ಮತ್ತು ಯಡತೊರೆ ಶ್ರೀಗಳ ಸಮಾಗಮದಲ್ಲಿ ನಮ್ಮ ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂತಹ ಬೃಹತ್ ಕಾರ್ಯಕ್ರಮದಲ್ಲಿ ನಾವೂ ನೀವೂ ಭಾಗಿಗಳಾಗಿ ಶ್ರೀ ದಕ್ಷಿಣಾಮೂರ್ತಿ ಅಷ್ಟಕದ ತತ್ತ್ವದ ಸಾರವನ್ನು ತಿಳಿದು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಕಾಶ ಸಿಕ್ಕಿರುವುದು ನಮ್ಮ ಪೂರ್ವಜನ್ಮದ ಸುಕೃತವೇ ಆಗಿದ್ದು, ಈ ವಿಷಯವನ್ನು ನಮ್ಮ ಬಂಧು ಮಿತ್ರರಿಗೂ ತಿಳಿಸಿ, ಎಲ್ಲ ಆಸಕ್ತ ಆಸ್ತಿಕರೊಂದಿಗಿ ಭಾಗವಹಿಸೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment