ನಾವು ಚಿಕ್ಕವರಿರುವಾಗಿ ನಮ್ಮ ಪಠ್ಯಪುಸ್ತಕದದಲ್ಲಿ ವಿ. ಸೀತಾರಾಮಯ್ಯನವರ ಕಾದಿರುವಳು ಶಬರಿ, ರಾಮ ಬರುವನೆಂದು, ತನ್ನ ಪೂಜೆಗೊಳುವನೆಂದು ಎಂಬ ಪದ್ಯವಿತ್ತು. ರಾಮಾಯಣದ ಅರಣ್ಯಕಾಂಡದ ಪ್ರಸಂಗವೊಂದರ ಕುರಿತಾದ ಆ ಪದ್ಯದಲ್ಲಿ ರಾಮನ ಮೇಲಿನ ಉತ್ಕಟ ಶ್ರದ್ಧೆಯುಳ್ಳ ವಯಸ್ಸಾದ ಮಹಿಳೆ ಶಬರಿ, ಕಾಡಿನಲ್ಲಿ ರಾಮನ ದರ್ಶನಕ್ಕಾಗಿಯೇ ತನ್ನ ಜೀವವನ್ನು ಕಾಯ್ದಿಟ್ಟುಕೊಂಡಿರುವ ಮತ್ತು ರಾಮ ಲಕ್ಷಣರನ್ನು ನೋಡಿ ಆವರಿಗೆ ಆತಿಥ್ಯ ಮಾಡಿ ಮುಕ್ತಿ ಹೊಂದುವ ಸುಂದರವಾದ ಪ್ರಸಂಗವಿದ್ದು ಆಕೆಯ ಜಯಂತಿಯಂದು ಆಕೆಯ ಕುರಿತಾಗಿ ಸವಿವರವಾಗಿ ತಿಳಿಯೋಣ ಬನ್ನಿ.
ಬಹುತೇಕರು ಶಬರಿ ಒಬ್ಬ ಬಡ ಮಹಿಳೆ ಎಂದೇ ಭಾವಿಸಿದ್ದಾರಾದರೂ, ಆಕೆಯ ಪೂರ್ವಾಶ್ರಮದ ಹಿನ್ನಲೆ ಅತ್ಯಂತ ರೋಚಕವಾಗಿದೆ. ಶಬರಿಯು ನಿಷಾದ ಬುಡಕಟ್ಟಿನ ಬೇಟೆಗಾರ ರಾಜನ ಮುದ್ದಿನ ಮಗಳಾಗಿದ್ದು, ಆಕೆ ವಿವಾಹದ ವಯಸ್ಸಿಗೆ ಬಂದಾಗ, ಆಕೆಗೊಂದು ಸುಂದರವಾದ ವರನನ್ನು ಹುಡುಕಿ ಆಕೆಯ ಮದುವೆ ಮಾಡಲು ಮುಂದಾಗುತ್ತಾನೆ. ಸಣ್ಣ ಪ್ರಾಯದ ಮದುವೆ ಬಗ್ಗೆ ಏನನ್ನೂ ಅರಿಯದಿದ್ದ ಶಬರಿ ತನ್ನ ಮದುವೆಯ ಔತಣಕ್ಕಾಗಿ ಬಾರೀ ಪ್ರಮಾಣದ ಪ್ರಾಣಿ ಬಲಿಯನ್ನು ಮಾಡಲು ತನ್ನ ತಂದೆ ಮುಂದಾಗಿದ್ದದ್ದನ್ನು ಕಂಡು ಹಾಗೆ ಮಾಡ ಬಾರದೆಂದು ತಂದೆಯನ್ನು ಪರಿ ಪರಿಯಾಗಿ ಕೇಳಿಕೊಂಡರೂ, ಹೇ! ರಾಜನ ಮಗಳ ಮದುವೆ ಎಂದರೆ ಪ್ರಜೆಗಳ ನಿರೀಕ್ಷೆಗಳು ಬಹಳಷ್ಟು ಇರುತ್ತವೆ ಮತ್ತು ಭೂರೀ ಭೋಜನಕ್ಕಾಗಿ ಕಾಯುತ್ತಿರುತ್ತಾರೆ. ಹಾಗಾಗಿ ನಿನಗೇನೂ ತಿಳಿಯದು ಸುಮ್ಮನಿರು ಎಂದು ಗದುರಿಸಿದಾಗ, ತಂದೆಯ ಮಾತಿಗೆ ಎದುರಾಡಲು ಮನಸ್ಸಿಲ್ಲದ ಶಬರಿ ತಾನಿದ್ದರೆ ತಾನೇ ಮದುವೆ? ತನ್ನ ಮದುವೆ ಆದರೆಯಷ್ಟೇ ತಾನೇ ಪ್ರಾಣಿ ಬಲಿ ಎಂದು ಯೋಚಿಸಿ ಪ್ರಾಣಿ ಬಲಿಯನ್ನು ತಪ್ಪಿಸುವ ಸಲುವಾಗಿ ತನ್ನ ಮದುವೆಯ ಹಿಂದಿನ ದಿನ ಯಾರಿಗೂ ತಿಳಿಸದೇ ಮನೆಯಿಂದ ಓಡಿ ಹೋಗಿ ಆ ಸಣ್ಣ ವಯಸ್ಸಿನಲ್ಲಿಯೇ ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಬಯಸಿ ಗುರುಗಳನ್ನು ಅರಸುತ್ತಾ ಹೊರಟಳು
ಆಕೆ ಇನ್ನೂ ಸಣ್ಣ ವಯಸ್ಸಿನವಳು ಮತ್ತು ಆಕೆ ಬೇಡರ ವಂಶದ ಹಿನ್ನಲೆಯವಳಾಗಿದ್ದರಿಂದ ಆಕೆಗೆ ಅಧ್ಯಾತ್ಮದ ಬಗ್ಗೆ ಏನೂ ತಿಳಿದಿರುವುದಿಲ್ಲಾ ಎಂಬ ಕಾರಣದಿಂದಾಗಿ ಅನೇಕ ಋಷಿ ಮುನಿಗಳು ಆಕೆಯನ್ನು ಶಿಷ್ಯಳಾಗಿ ಸ್ವೀಕರಿಸಲು ನಿರಾಕರಿಸಿದಾಗ, ಅಂತಿಮವಾಗಿ ದಕ್ಷಿಣದ ಕಡೆಗೆ ಬಂದಾಗ ಋಷ್ಯಮುಖ ಪರ್ವತದ ತಪ್ಪಲಿನಲ್ಲಿ ಮಾತಂಗ ಋಷಿಯನ್ನು ಭೇಟಿಯಾಗಿ ಆವರು ಆಕೆಯನ್ನು ಶಿಷ್ಯೆಯಾಗಿ ಸ್ವೀಕರಿಸಿ ನಿರಂತರವಾಗಿ ಭಕ್ತಿಯಿಂದ ಗುರುಗಳ ಸೇವೆ ಮಾಡುತ್ತಾ, ಜ್ಞಾನಾರ್ಜನೆಯಲ್ಲಿ ತೊಡಗಿಕೊಂಡಳು. ಮಾತಂಗ ಮಹರ್ಷಿಗಳ ದೇಹಾಂತ್ಯದ ಸಮಯದಲ್ಲಿ ಗುರುಗಳನ್ನು ಅಗಲಿ ತಾನು ಇರಲಾರೆ ಎಂದು ತಾನೂ ಸಹಾ ಗುರುಗಳೊಂದಿಗೆ ಮುಕ್ತಿ ಹೊಂದುವ ಬಯಕೆಯನ್ನು ವ್ಯಕ್ತ ಪಡಿಸಿದಾಗ, ಮಾತಂಗ ಋಷಿಗಳು, ಮಗಳೇ, ನೀನು ಈ ಭೂಮಿಗೆ ಬಂದ ಕಾರ್ಯ ಇನ್ನೂ ನೆರವೇರಿಲ್ಲ. ಮುಂದೊಂದು ದಿನ ವಿಷ್ಣುವಿನ ಅವತಾರವಾದ ಪ್ರಭು ಶ್ರೀರಾಮನು ಇಲ್ಲಿಗೆ ಬಂದಾಗ, ಆತನ ದರ್ಶನ ಪಡೆದು, ಅವನ ಸೇವೆ ಮಾಡಿದ ನಂತರವೇ ನಿನಗೆ ಮುಕ್ತಿ ದೊರೆಯುತ್ತದೆ ಎಂಬ ಗುರುಗಳ ಅನುಗ್ರಹದಂತೆ, ಅಂದಿನಿಂದ ಆಕೆ ಪ್ರಭುಶ್ರೀರಾಮ ಬರುವಿಗೆಗಾಗಿ ಋಷ್ಯಮುಖ ಪರ್ವತದ ತಪ್ಪಲಿನ ಆಶ್ರಮದಲ್ಲಿ ಕಾಯತೊಡಗಿದಳು.
ಪ್ರತಿ ದಿನವೂ ಶಬರಿಯು ತನ್ನ ದಿನ ನಿತ್ಯಕರ್ಮಗಳನ್ನು ಮುಗಿಸಿ ದೇವರ ಪೂಜೆ ಗೈದು ಊರುಗೋಲಿನ ಸಹಾಯದಿಂದ ಆಶ್ರಮದಿಂದ ಹೊರ ಬಂದು ಕಾಡಿನಾದ್ಯಂತ ಸಂಚರಿಸಿ ರಾಮನಿಗೆ ಹಣ್ಣುಗಳನ್ನು ಸಂಗ್ರಹಿಸಿ ತರುತ್ತಿದ್ದಳು. ಹಾಗೆ ತಂದ ಪ್ರತೀ ಹಣ್ಣುಗಳನ್ನೂ ಕಚ್ಚಿ ಅವು ಸಿಹಿಯಾಗಿದ್ದಲ್ಲಿ ಮಾತ್ರವೇ ರಾಮನಿಗೆಂದು ತನ್ನ ಬುಟ್ಟಿಯಲ್ಲಿ ತೆಗೆದಿರಿಸಿ, ಅದು ಹುಳಿ/ಕಹಿಯಾಗಿದ್ದಲ್ಲಿ ಅದನ್ನು ಅಲ್ಲಿಯೇ ಬಿಸಾಕುತ್ತಿದ್ದಳು. ರಾಮನ ಕುರಿತಾಗಿ ಅನನ್ಯ ಭಕ್ತಿಯಲ್ಲಿದ್ದ ಆಕೆಗೆ ಎಂಜಿಲು ಮಾದಿದ ಹಣ್ಣುಗಳು ಪ್ರಭು ಶ್ರೀರಾಮನ ನೈವೇದ್ಯಕ್ಕೆ ಸಲ್ಲುವುದಿಲ್ಲ ಎಂಬ ಪರಿವೇ ಇರುತ್ತಿರಲಿಲ್ಲ. ವರ್ಷದ ಮೇಲೆ ವರ್ಷ ಉರುಳಿದರೂ, ರಾಮನ ಆಗಮನವಾಗದೇ ಹೋದರೂ, ಅತನಿಗಾಗಿ ಕಾಯುವ ಆಕೆಯ ಕಾಯಕದಲ್ಲಿ ಕೊಂಚವೂ ಬದಲಾಗಲಿಲ್ಲ.
ತನ್ನ ಚಿಕ್ಕಮ್ಮ ಕೈಕೇಯಿಗೆ ತನ್ನ ತಂದೆ ಕೊಟ್ಟ ಭಾಷೆಯಂತೆ ರಾಮನು 14ವರ್ಷ ಮಡದಿ ಸೀತೆ ಮತ್ತು ಅನುಜ ಲಕ್ಷ್ಮಣನೊಡನೆ ವನವಾಸ ಮಾಡುತ್ತಿರುವಾಗ ರಾವಣನ ಕಪಟತನದಿಂದ ಸೀತಾಪಹರಣವಾದಾಗ, ಆಕೆಯನ್ನು ಅರಸುತ್ತಾ ರಾಮ ಮತ್ತು ಲಕ್ಷ್ಮಣರು ಋಷ್ಯಮುಖ ಪರ್ವತದ ತಪ್ಪಲಿಗೆ ಬರುತ್ತಿರುವಾಗ ಅದಾಗಲೇ ಕತ್ತಲಾಗಿದ್ದರೂ, ವೃದ್ದೆಯಾದ ಶಬರಿ ತರಗೆಲೆಗಳ ಸದ್ದನ್ನೇ ಆಲಿಸಿ ಯಾರೋ ತಮ್ಮ ಆಶ್ರಮದೆಡೆಗೆ ಬರುತ್ತಿದ್ದಾರಲ್ಲಾ ಎಂದು ತನ್ನ ಊರುಗೋಲಿನ ಸಹಾಯದಿಂದ ಬಂದು ನೋಡಿದರೆ, ಆ ಕತ್ತಲಿನಲ್ಲೂ ಚಂದ್ರನ ಬೆಳಕಿನಿಂದಲೇ ಪ್ರಬಾವಳಿಯಂತೆ ಹೊಳೆಯುತ್ತಿದ್ದ ವ್ಯಕ್ತಿಗಳನ್ನು ನೋಡಿದ ಕೂಡಲೇ, ತಾನು ಇಷ್ಟು ದಿನಗಳ ಕಾಲ ಕಾಯುತ್ತಿದ್ದ ರಾಮ ಇವನೇ ಇರಬೇಕೆಂದು ಭಾವಿಸಿ, ರಾಮಾ! ರಾಮಾ!! ಈ ನಿನ್ನ ಭಕ್ತೆಯನ್ನು ನೋಡಲು ನಿನಗೆ ಈಗ ಸಮಯ ಸಿಕ್ಕಿತೇ! ನಿನಗಾಗಿ ಕಾದೂ ಕಾದೂ ನನ್ನ ಚರ್ಮವೆಲಾ ಹೇಗೆ ಸುಕ್ಕು ಗಟ್ಟಿದೆ ನೋಡು. ಆದರೂ ಪರವಾಗಿಲ್ಲಾ ನಾನು ಸಾಯುವ ಮುನ್ನಾ ನಿನ್ನ ದರ್ಶನದ ಭಾಗ್ಯ ಸಿಕ್ಕಿತಲ್ಲಾ!! ಅದುವೇ ನನ್ನ ಪರಮ ಸೌಭಾಗ್ಯ. ಬಾ!! ಬಾ!! ಎಂದು ರಾಮನ ಕೈಗಳನ್ನು ಹಿಡಿದು ಆಶ್ರಮದ ಕಡೆಗೆ ಕರೆದೊಯ್ಯುತ್ತಿದ್ದರೇ, ರಾಮನ ಪರಿಚಯವೇ ಇಲ್ಲದ ಹೆಂಗಸು ಅದೆಷ್ಟೋ ವರ್ಷಗಳಿಂದಲೂ ಚಿರಪರಿತಳಂತೆ ರಾಮನನ್ನು ಕರೆದು ಕೊಂಡು ಹೋಗುತ್ತಿರುವುದನ್ನು ಕಂಡ ಲಕ್ಷ್ಮಣನಿಗೆ ಆಚ್ಚರಿಯಾದರೂ, ಅಣ್ಣನನ್ನು ಸದ್ದಿಲ್ಲದೇ ಹಿಂಬಾಲಿಸುತ್ತಾನೆ.
ಅಯ್ಯೋ ಅದೆಷ್ಟು ದೂರದಿಂದ ನಡೆದುಕೊಂಡು ಬಂದ್ದೀದ್ದೀರೋ ನಾಕಾಣೆ. ಸಾಕಷ್ಟು ದಣಿವಾಗಿರಬಹುದು ಮತ್ತು ಹೊಟ್ಟೆಯೂ ಹಸಿದಿರಬಹುದು. ಹೋಗಿ ಅಲ್ಲಿರುವ ನೀರಿನಲ್ಲಿ ಕೈಕಾಲು ತೊಳೆದುಕೊಂಡು ಬನ್ನಿ. ಆಷ್ಟರೊಳಗೆ ನಾನು ನಿಮಗೆ ರುಚಿಕರವಾದ ಫಲಾಹಾರವನ್ನು ಸಿದ್ಧ ಪಡಿಸುತ್ತೇನೆ ಎಂದು ಆ ಇಳೀ ವಯಸ್ಸಿನಲ್ಲೂ ರಾಮನನ್ನು ಕಂಡ ಹರುಷದಿಂದ ಸರ ಸರನೇ ಹೋಗಿ ರಾಮನಿಗಾಗಿಯೇ ಸಂಗ್ರಹಿಸಿ ತಂದಿದ್ದ ಗೆಡ್ಡೆ ಗೆಣಸುಗಳು ಮತ್ತು ಹಣ್ಣು ಹಂಪಲನ್ನು ತಂದು ರಾಮನ ಮುಂದಿಟ್ಟು ಬಹಳ ವಿನಮ್ರದಿಂದ ರಾಮಾ ಈ ಬಡವಿಯ ಆತಿಥ್ಯವನ್ನು ಸ್ವೀಕರಿಸು ಎಂದು ಕೋರಿಕೊಂಡಳು.
ಆಕೆಯ ಭಕ್ತಿ ಪರಾಕಾಷ್ಠೆಯ ಪ್ರೀತಿಗೆ ಮಾರು ಹೋದ ರಾಮನು ಒಂದು ಹಣ್ಣನ್ನು ತೆಗೆದುಕೊಂಡು ಇನ್ನೇನು ಹಲ್ಲುಗಳಿಂದ ಕಚ್ಚಿ ತಿನ್ನಬೇಕು ಎನ್ನುವಷ್ಟರಲ್ಲಿ, ಥಟ್ ಎಂದು ರಾಮನ ಕೈಗಳಿಂದ ಹಣ್ಣನ್ನು ಕಿತ್ತುಕೊಂಡ ಶಬರಿ ಕೂಡಲೇ ಆ ಹಣ್ಣನ್ನು ಮತ್ತೊಮ್ಮೆ ಕಚ್ಚಿ, ಛೀ!! ಇದು ಹುಳಿಯಾಗಿದೆ ಇದು ಬೇಡ ಎಂದು ಬೇರೊಂದು ಹಣ್ಣನ್ನು ತೆಗೆದುಕೊಂಡು ಅದು ಸಿಹಿಯಾಗಿದೆ ಎಂದು ಖಾತ್ರಿ ಪಡಿಸಿಕೊಂಡು ತಗೋ ರಾಮಾ!! ಈ ಹಣ್ಣು ತಿನ್ನು ಬಹಳ ರುಚಿಯಾಗಿದೆ ಎಂದು ಹೇಳಿದಾಗ, ತಾನು ತಿನ್ನಬೇಕಾದ ಹಣ್ಣನ್ನು ಆಕೆ ಕಚ್ಚಿ ಎಂಜಲು ಮಾಡಿದ್ದಾಳೆ ಎಂಬುದನ್ನೂ ಲೆಖ್ಖಿಸದ ರಾಮಚಂದ್ರ ಸಂತೋಷದಿಂದ ಶಬರಿ ನೀಡುತ್ತಿದ್ದ ಹಣ್ಣು ಹಂಪಲುಗಳನ್ನು ಒಂದೊಂದಾಗಿ ತಿನ್ನತೊಡಗಿದ.
ಶಬರಿಯ ಎಂಜಿಲು ಹಣ್ಣುಗಳನ್ನು ಲಕ್ಷ್ಮಣನು ತಿನ್ನಲು ಒಪ್ಪದೇ ಹಾಗೇ ಕುಳಿತಿದ್ದದ್ದನ್ನು ಗಮನಿಸಿದ ರಾಮನು ಅಯ್ಯಾ ಅನುಜಾ, ತಾವು ಇದುವರೆಗೂ ಸೇವಿಸಿದ ಬಗೆ ಬಗೆಯ ಆಹಾರಗಳಲ್ಲಿ, ಇಷ್ಟು ಭಕ್ತಿಯಿಂದ ಅರ್ಪಿಸಿದ ಈ ರುಚಿ ರುಚಿಯಾದ ಹಣ್ಣುಗಳಿಗೆ ಸರಿಸಮವಾಗಿ ಇಲ್ಲಾ. ಹಾಗಾಗಿ ನಿಸ್ಸಂಕೋಚವಾಗಿ ಒಂದು ಹಣ್ಣನ್ನು ನೀನು ತಿಂದು ನೋಡು. ಆನಂತರ ನೀನೇ ಇನ್ನಷ್ಟು ಹಣ್ಣುಗಳನ್ನು ಆಕೆಯಿಂದ ಕೇಳಿ ಪಡೆದು ತಿನ್ನುತ್ತೀಯ ಎಂದು ಹೇಳುತ್ತಾ, ಯಾರು ನಮಗೆ ಪ್ರೀತಿಯಿಂದ ಗೆಡ್ಡೆ ಗೆಣಸುಗಳು, ಹಣ್ಣು, ಹೂವು ಅಥವಾ ಕನಿಷ್ಠ ಪಕ್ಷ ನೀರನ್ನಾದರೂ ಅರ್ಪಿಸುತ್ತಾರೋ, ಅದನ್ನು ನಾವು ಯಾವುದೇ ಸಂಕೋಚವಿಲ್ಲದೇ ಸೇವಿಸಿದಾಗಲೇ ಅವರ ಭಕ್ತಿಗೆ ಒಂದು ರೀತಿಯ ಫಲ ದೊರೆಯುತ್ತದೆ. ಹಾಗಾಗಿ ಹಿಂದೂ ಮುಂದೂ ನೋಡದೆ ಸಂತೋಷವಾಗಿ ಆಹಾರವನ್ನು ಸ್ವೀಕರಿಸು ಎಂದು ಹೇಳಿದಾಗ, ಅಣ್ಣನ ಮಾತುಗಳನ್ನು ಎಂದಿಗೂ ಮೀರದ ಲಕ್ಷಣನೂ ಸಹಾ ಫಲಾಹಾರಗಳನ್ನು ಸ್ವೀಕರಿಸಿ ಸಂತುಷ್ಟನಾಗುತ್ತಾನೆ.
ಪ್ರಭು ಶ್ರೀರಾಮ ಚಂದ್ರನ ದರ್ಶನವೇ ತನ್ನ ಜೀವನದ ಅಂತಿಮ ಗುರಿ ಎಂದು ಆತನಿಗಾಗಿ ವರ್ಷಾನುಗಟ್ಟಲೇ ಕಾದಿದ್ದ ಶಬರಿಗೆ ಇಂದಿಗೆ ತನ್ನ ಜೀವನ ಸಾರ್ಥಕವಾಯಿತು. ದಯವಿಟ್ಟು ನನ್ನೀ ದೇಹತ್ಯಾಗ ಮಾಡಿ ನನ್ನ ಗುರು ಮಾತಂಗರನ್ನು ಸೇರಿಕೊಳ್ಳಲು ಅನುಮತಿ ನೀಡು ರಾಮಾ! ಎಂದು ಕೇಳಿಕೊಂಡ ತಕ್ಷಣವೇ ರಾಮನೂ ಸಹಾ ಆಕೆಯ ತಲೆಯ ಮೇಲೆ ಕೈ ಇಡುತ್ತಿದ್ದಂತೆಯೇ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿ ಭಗವಂತನಲ್ಲಿ ಲೀನವಾಗುವುದರೊಂದಿಗೆ ಶಬರಿಯ ಪುರಾಣ ಮುಕ್ತಾಯವಾಗುತ್ತದೆ.
ಇನ್ನು ಶಬರಿಯ ಆಶ್ರಮದ ಬಗ್ಗೆ ಹಲವಾರು ಪ್ರತೀತಿಗಳಿದ್ದು ಒಂದು ಪ್ರತೀತಿಯಂತೆ ಶ್ರೀರಾಮನಿಗಾಗಿ ಕಾಯುತ್ತಿದ್ದ ಶಬರಿಯ ಆಶ್ರಮವು ಇಂದಿನ ಛತ್ತೀಸ್‌ಗಢದ ಜಾಂಜ್‌ಗೀರ್-ಚಂಪಾ ಜಿಲ್ಲೆಯಲ್ಲಿರುವ ಶಿವನಾರಾಯಣದಲ್ಲಿ ನೆಲೆಸಿರುವ ಶಬರಿ ನಾರಾಯಣ ಎಂದು ಪ್ರಸಿದ್ಧಿಯಾಗಿದೆ ಎಂದರೆ, ಇನ್ನೂ ಕೆಲವರು ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿರುವ ಅಯ್ಯಪ್ಪ ಸ್ವಾಮಿ ನೆಲೆಸಿರುವ ಶಬರಿಮಲೆಯಲ್ಲಿಯೇ ಶಬರಿಯ ಆಶ್ರಮವಿದ್ದು ಅಲ್ಲಿಯೇ ಆಕೆಗೆ ರಾಮನ ದರ್ಶನವಾಗಿ ಮುಕ್ತಿ ಪಡೆದ ಕಾರಣ ಆ ಪ್ರದೇಶಕ್ಕೆ ಶಬರಿ ಮಲೈ ಅಥಾವ ಶಬರಿ ಮಲೆ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.
ಇನ್ನು ಪಂಪಾ ಸರೋವರ ಬಳಿ ಶಬರಿಯ ಆಶ್ರಮ ಇತ್ತು ಎಂದು ಹೇಳಲಾಗುತ್ತಿದ್ದು ಆ ಪಂಪ ಸರೋವರವು ಪ್ರಸುತ ಕರ್ನಾಟಕದ ಕೊಪ್ಪಳ ಜಿಲ್ಲೆಯ ಹಂಪೆ ಬಳಿ, ತುಂಗಭದ್ರಾ ನದಿಯ ದಕ್ಷಿಣದಲ್ಲಿದ್ದು ಇಂದಿಗೂ ಕಾಣಾಬಹುದಾಗಿದ್ದು ಇದರ ಸುತ್ತಮುತ್ತಲೇ ಆಂಜನೇಯ, ವಾಲಿ ಮತ್ತು ಸುಗ್ರೀವ ಎಲ್ಲರೂ ವಾಸಿಸುತ್ತಿದ್ದ ಕಿಷ್ಕಿಂದೆಯೂ ಇದ್ದು, ಅದೊಮ್ಮೆ ದುಂದುಭಿ ಎಂಬ ಅಸುರನನ್ನು ಕೊಂದು ಸೋಲಿಸಿದ ವಾಲಿಯು ಕೋಪದಲ್ಲಿ ಆತನ ದೇಹವನ್ನು ಆಕಾಶದಿಂದ ಸುಮಾರು ದೂರ ಎಸೆಯುತ್ತಾನೆ. ಹಾಗೆ ಎಸೆಯುವ ಭರದಲ್ಲಿ, ದುಂದುಭಿಯ ದೇಹದ ಕೆಲವು ಹನಿ ರಕ್ತವು ಗಾಳಿಯಲ್ಲಿ ಹಾರಿ ಮಾತಂಗ ಋಷಿಯ ಆಶ್ರಮದ ಮೇಲೆ ಬಿದ್ದದ್ದನ್ನು ಕಂಡ ಮಾತಂಗ ಋಷಿಗಳು ತಮ್ಮ ಋಷ್ಯಮುಖ ಪರ್ವತದ ಮೇಲೆ ವಾಲಿ ಕಾಲಿಟ್ಟರೆ, ಆತನ ತಲೆ ಸಾವಿರ ಹೋಳಾಗಲಿ ಎಂಬ ಶಾಪವನ್ನು ನೀಡುತ್ತಾರೆ ಎಂಬ ಪ್ರತೀತಿಯೂ ಇದ್ದು, ಈ ಎಲ್ಲಾ ಪುರಾವೆಗಳ ಆಧಾರದ ಮೇಲೆ ಶಬರಿಯು ಇತಿಹಾಸ ಪ್ರಸಿದ್ಧ ಹಂಪೆಯ ಬಳಿಯೇ ವಾಸಿಸುತ್ತಿದ್ದಳು ಎಂಬದು ಖಚಿತವಾಗುತ್ತದೆ.
ಶಬರಿಯ ಆಶ್ರಮದ ಕುರಿತಾಗಿ ಎಷ್ಟೇ ಪ್ರತೀತಿ ಇದ್ದರೂ, ಶಬರಿಯು ತನ್ನ ಜಾತಿ ಮತ್ತು ಸಾಮಾಜಿಕ ಸ್ಥಾನಮಾನವನ್ನೆಲ್ಲವನ್ನೂ ಮೀರಿ ಶುದ್ಧವಾದ ಮತ್ತು ನಿಶ್ಕಲ್ಮಶವಾದ ಭಕ್ತಿಯ ಸಂಕೇತದ ಪ್ರತೀಕ ಎಂದರು ತಪ್ಪಾಗದು. ತನ್ನ ಅಂತಿಮ ಗುರಿಗಾಗಿ ಅಷ್ಟು ವರ್ಷ ಕಾದ ಆಕೆಯು ತಾಳ್ಮೆ, ರಾಮನಿಗೆ ಅರ್ಪಿಸುವ ಹಣ್ಣುಗಳು ಸಿಹಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಲು ಆಕೆ ರುಚಿ ನೋಡಿ ನೋಡಿ ಕೊಡುತ್ತಿದ್ದದ್ದು ಭಕ್ತಿಯ ಪರಾಕಾಷ್ಠೆಯನ್ನು ತೋರಿಸುತ್ತದೆ. ಲೋಕದ ದೃಷ್ಟಿಯಲ್ಲಿ ಶಬರಿ ನೀಡುತ್ತಿದ್ದ ಹಣ್ಣುಗಳು ಎಂಜಲು ಹಣ್ಣುಗಳಾಗಿದ್ದರೂ,ಆಕೆಯ ನಿಷ್ಕಲ್ಮಶವಾದ ಅನನ್ಯ ಭಕ್ತಿಗೆ ಜಾತಿವ್ಕುಲ ಅಥವಾ ಶ್ರೀಮಂತಿಕೆಯ ಹಂಗಿಲ್ಲ ಎಂದು ಸಂತೋಷದಿಂದ ಆ ಹಣ್ಣುಗಳನ್ನು ರಾಮನು ಜಗತ್ತಿಗೆ ಸಾರಿ ಎತ್ತಿ ತೋರಿಸಿದ್ದು ನಮ್ಮ ವಸುದೈವ ಕುಟುಂಬಕಂ ಎಂಬ ಸನಾತನ ಸಂಸ್ಕಾರಕ್ಕೆ ಮಾದರಿ ಆಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ