ಎರಡು ದೇಶದ ನಡುವೆ ಭಯಂಕರವಾಗಿ ಯುದ್ಧ ನಡೆಯುತ್ತದೆ ಎಂದರೆ, ಅದರಲ್ಲಿ ಸಾವಿರಾರು ಸೈನಿಕರು, ಲಕ್ಷಾಂತರ ಮದ್ದುಗುಂಡುಗಳು ಶಸ್ತ್ರಾಸ್ತ್ರಗಳು ಉಪಯೋಗ ಆಗುತ್ತದೆ. ಭಾರೀ ಪ್ರಮಾಣದ ಆಸ್ತಿ ಪಾಸ್ತಿಗಳು ನಷ್ಟವಾಗುತ್ತದೆ. ಶತ್ರು ರಾಷ್ಟ್ರಗಳು ಯಾವಾಗ? ಹೇಗೆ ನಮ್ಮ ಮೇಲೆ ಆಕ್ರಮಣ ಮಾಡುತ್ತಾರೋ? ಎಂದು ಸದಾಕಾಲವೂ ಕಣ್ರೆಪ್ಪೆ ಮುಚ್ಚದೇ ಗಡಿ ಪ್ರದೇಶಗಳನ್ನು ಕಾಯುವುದಕ್ಕಾಗಿಯೇ ಇಂದೆಲ್ಲಾ ಅನೇಕ ಆಧುನಿಕ ತಂತ್ರಜ್ಞಾನಗಳ ಬಳಕೆ ಆಗುತ್ತಿರುವುದನ್ನು ಇತ್ತೀಚಿನ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ನೋಡಿದ್ದೇವೆ. ಆದರೆ 60-70 ದಶಕದಲ್ಲಿ ಇಂತಹ ಯಾವುದೇ ಸೌಲಭ್ಯಗಳು ಇಲ್ಲದೇ ಇರುವಂತಹ ಸಂಧರ್ಭದಲ್ಲಿ ಭಾರತೀಯ ಸೈನ್ಯದ ಒಬ್ಬ ಸಾಮಾನ್ಯ ಮನುಷ್ಯ ಯುದ್ಧ ಭೂಮಿಯ ಆಸುಪಾಸಿನಲ್ಲಿರುವ ಹೆಜ್ಜೆ ಗುರುತುಗಳನ್ನು ನೋಡಿ ಕರಾರುವಾಕ್ಕಾಗಿ ಶತ್ರುಗಳ ಚಲನವಲಗಳನ್ನು ಗುರುತಿಸಿ ಭಾರತೀಯ ಸೈನ್ಯಕ್ಕೆ ಎಚ್ಚರಿಗೆ ನೀಡಿ ಯುದ್ದ ಗೆಲ್ಲಲು ಸಹಾಯ ಮಾಡಿದ ರಾಂಛೋದಾಸ್ ರಬಾರಿ ಎಲ್ಲರ ಪ್ರೀತಿಯ ಪಾಗಿ ಅವರ ಬಗ್ಗೆ ಪ್ರತಿಯೊಬ್ಬ ಭಾರತೀಯರು ತಿಳಿದುಕೊಳ್ಳಲೇ ಬೇಕಿದೆ.
ಅಖಂಡ ಭಾರತದ ಭಾಗವಾಗಿದ್ದ ಮತ್ತು ಪ್ರಸ್ತುತ ಪಾಕೀಸ್ಥಾನದ ಪಾಕಿಸ್ತಾನದ ಸಿಂಧ್ ಪ್ರಾಂತ್ಯಕ್ಕೆ ಸೇರಿರುವ ಪೆಥಾಪುರ್ ಗ್ರಾಮದ ವಭಾಯ್ ಮತ್ತು ನಾತಿಬಾ ದಂಪತಿಗಳಿಗೆ 1901ರಲ್ಲಿ ರಾಂಚೋದ್‌ಭಾಯ್ ಜನಿಸುತ್ತಾರೆ. ಆ ಸಮಯದಲ್ಲೇ ಸುಮಾರು 300 ಎಕರೆ ಭೂಮಿ ಮತ್ತು ಹಸುಗಳು, ಎಮ್ಮೆಗಳು, ಹೋರಿಗಳು, ಕುರಿಗಳು ಮತ್ತು ಮೇಕೆಗಳು ಸೇರಿದಂತೆ ಸುಮಾರು 300 ದನಕರುಗಳನ್ನು ಹೊಂದಿದ್ದ ಸ್ಥಿತಿವಂತ ಕುಟುಂಬ ಆವರದ್ದಾಗಿರುತ್ತದೆ. ಚಿಕ್ಕಂದಿನಿಂದಲೂ ಯಾವುದೇ ಶಾಲೆಗೆ ಹೋಗದೇ ಅನಕ್ಷರಸ್ಥರಾಗಿದ್ದರೂ, ಅಷ್ಟೊಂದು ಪ್ರಾಣಿಗಳ ಒಡನಾಟದಿಂದಾಗಿ ಮಣ್ಣಿನ ಮೇಲೆ ಅವುಗಳು ಮೂಡಿಸುವ ಹೆಜ್ಜೆ ಗುರುತುಗಳ ಆಧಾರದಿಂದಾಲೇ ಆ ಪ್ರಾಣಿ ಅಥವಾ ವ್ಯಕ್ತಿಯ ತೂಕವನ್ನು ನಿಖರವಾಗಿ ಹೇಳಬಲ್ಲಂತಹ ಅದ್ಭುತವಾದ ಕೌಶಲ್ಯವನ್ನು ಅವರಿಗೆ ದೈವದತ್ತವಾಗಿ ಬಂದಿರುತ್ತದೆ.
1947 ರಲ್ಲಿ ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ, ಆಷ್ಟೊಂದು ಜಮೀನನ್ನು ಹೊಂದಿದ್ದ ರಾಂಚೋಡ್ ಅವರ ಕುಟುಂಬವು ಅದೆಲ್ಲವನ್ನೂ ಬಿಟ್ಟು ಬರಲಾಗದೇ ಪಾಕಿಸ್ತಾನದಲ್ಲಿಯೇ ಉಳಿಯಲು ನಿರ್ಧರಿಸುತ್ತಾರೆ. ಆದಾಗಿ ಸ್ವಲ್ಪ ಸಮಯದಲ್ಲೇ ಪಾಕೀಸ್ಥಾನೀ ಪೋಲೀಸರು ಮತ್ತು ಸೈನ್ಯದವರು ಹಿಂದೂಗಳ ಮೆಲೆ ಸತತವಾಗಿ ದಬ್ಬಾಳಿಕೆ ಮತ್ತು ದೌರ್ಜನ್ಯ ನಡೆಶುತ್ತಿದ್ದ ಪ್ರಕ್ರಿಯಲ್ಲಿ ಇವರ ಕುಟುಂಬಕ್ಕೂ ಕಾಟ ನೀಡಿದ್ದನ್ನು ತಾಳಲಾರದೇ, ತಮ್ಮ ಮನೆಗೆ ಬಂದಿದ್ದ ಮೂವರು ಪೋಲೀಸರನ್ನು ರಾಂಚೋಡ್ ಅವರು ಕೊಂದು ಅವರ ಶವಗಳನ್ನು ತಮ್ಮ ಮನೆಯ ಕೋಣೆಯೊಂದರಲ್ಲಿ ಹಾಕಿ, ತಮ್ಮ ಕುಟುಂಬ ಮತ್ತು ದನಕರುಗಳೊಂದಿಗೆ ತಮಗೆ ತಿಳಿದಿದ್ದ ರಹಸ್ಯ ಮಾರ್ಗದ ಮೂಲಕ ಇಂದಿನ ಗುಜರಾತ್‌ನ ಬನಸ್ಕಂತ ಜಿಲ್ಲೆಯ ಪಾಕಿಸ್ತಾನದ ಗಡಿಯಲ್ಲಿರುವ ಪಥಾಪುರ್ ಗತ್ರಾಸ್ ಪ್ರಾಂತದ ಮೊಸಲ್ ಲಿಂಬಾಲಾಕ್ಕೆ ವಲಸೆ ಬರುತ್ತಾರೆ.
ಆತ್ತ ಪಾಕೀಸ್ಥಾನದಲ್ಲಿ ತಮ್ಮ ಪೋಲೀಸ್ ಅಧಿಕಾರಿಗಳನ್ನು ಕೊಂದು ತಪ್ಪಿಸಿಕೊಂಡಿರುವ ರಾಂಚೋಡ್ ಅವರನ್ನು ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಿಸಿದ್ದ ವಿಷಯ, ಲಿಂಬಾಲಾ ಜನರಿಗೂ ಗೊತ್ತಾದಾಗಲೇ ಯಾರೋ ದನಗಾಹಿ ಎಂದು ಕೊಂಡಿದ್ದ ವ್ಯಕ್ತಿ ರಾಂಚೋಡ್ ಸಾಮಾನ್ಯ ವ್ಕಕ್ತಿಯಲ್ಲಾ! ಎಂದು ತಿಳಿಯುತ್ತದೆ. ಆಷ್ಟರಲ್ಲಾಗಲೇ ರಾಚೋಂಡ್, ಮನುಷ್ಯರು ಮತ್ತು ಪ್ರಾಣಿಗಳ ಹೆಜ್ಜೆಯ ಗುರುತಿಸುವ ತನ್ನ ಅದ್ಭುತ ಕೌಶಲ್ಯವನ್ನು ಅಲ್ಲಿಯ ಜನರಿಗೆ ತಿಳಿದಿದ್ದ ಕಾರಣ, ಅವರು ರಾಂಚೋಡ್ ನನ್ನು ತಮ್ಮ ಗ್ರಾಮದ ಕಾವಲುಗಾರನನ್ನಾಗಿ ನೇಮಿಸಿದ್ದು, ತನ್ನ ಹೆಜ್ಜೆಗುರುತುಗಳನ್ನು ಗುರುತಿಸುವ ಮೂಲಕ ಆ ಊರಿನ ಅನೇಕ ಕಳ್ಳರನ್ನು ಹಿಡಿಯಲು ಸಹಕರಿಸಿದ್ದನ್ನು ಗಮನಿಸಿ ಆತನ ಬಗ್ಗೆ ಪಾಕೀಸ್ಥಾನಕ್ಕೆ ಯಾವುದೇ ಮಾಹಿತಿ ನೀಡದಿರಲು ನಿರ್ಧರಿಸುತ್ತಾರೆ. ಆದರೆ ಹೆಚ್ಚೆಗುರುತಿಸುವಿಕೆಯ ಸಾಮರ್ಥ್ಯ ಜನರ ಬಾಯಿಯಿಂದ ಬಾಯಿಗೆ ಅದು ಹೇಗೋ ಅಲ್ಲಿನ ಪೊಲೀಸ್ ಅಧಿಕಾರಿಗಳಿಗೆ ತಿಳಿದು ರಾಂಚೋಡ್ ನ ಸಾಮರ್ಥ್ಯವನ್ನು ಪರೀಕ್ಷಿಸಿ 1962ರಲ್ಲಿ ಆತನ 58 ನೇ ವಯಸ್ಸಿನಲ್ಲಿ, ಬನಸ್ಕಂತ ಪೊಲೀಸ್ ವರಿಷ್ಠಾಧಿಕಾರಿ ವನರಾಜ್ ಸಿಂಗ್ ಝಾಲಾ ಅವರ ಸಹಾಯದಿಂದ ಆತ ಪೊಲೀಸ್ ಮಾರ್ಗದರ್ಶಕರಾಗಿ ನೇಮಕಗೊಂಡ ನಂತರ ಆತನ ಜೀವನವೇ ಬದಲಾಯಿತು ಎಂದರೂ ತಪ್ಪಾಗದು.
1965ರಲ್ಲಿ ಪಾಕೀಸ್ಥಾನ ಭಾರತದ ಮೇಲೆ ಯುದ್ದವನ್ನು ಆರಂಭಿಸಿದ್ದ ಸಮಯದಲ್ಲಿ, ಪಾಕಿಸ್ತಾನವು ವಿಘಾಕೋಟ್ ಅನ್ನು ವಶಪಡಿಸಿಕೊಂಡು ಆ ಕಾಡಿನಿಂದಲೇ ಉಳಿದ ಪ್ರದೇಶಗಳ ಮೇಲೆ ಧಾಳಿ ನಡೆಸುವ ಹುನ್ನಾರವನ್ನು ನಡೆಸಿತ್ತು. ಈ ಸಮಯದಲ್ಲಿ ರಾಂಚೋಡ್, ಅವರ ಹೆಜ್ಜೆ ಗುರುತುಗಳ ಮೂಲಕವೇ ಪಾಕಿಸ್ತಾನಿ ಸೈನಿಕರ ಒಳನುಸುಳುವಿಕೆಯನ್ನು ಪತ್ತೆಹಚ್ಚಿ ಸುಮಾರು 1200 ಸೈನಿಕರು ವಿಘಾಕೋಟ್‌ನಲ್ಲಿ ಜಮಾಯಿಸಿದ್ದು, ಈಗ ಅವರು ಮುನ್ನಡೆಯಲು ಯೋಜಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಭಾರತೀಯ ಸೈನಿಕರಿಗೆ ಸಕಾಲಿಕವಾಗಿ ರವಾನಿಸಿದ್ದಲ್ಲದೇ, ಭಾರತೀಯ ಸೈನಿಕರಿಗೆ ವಿಘಾಕೋಟ್‌ಗೆ ಮತ್ತೊಂದು ರಹಸ್ಯ ಮಾರ್ಗದ ಮೂಲಕ ಹೇಗೆ ತಲುಪಬಹುದು ಎಂಬ ವಿಷಯವನ್ನು ತಿಳಿಸಿದ ಪರಿಣಾಮ, ಆ ಮಾರ್ಗದ ಮೂಲಕ ಭಾರತೀಯ ಸೈನಿಕರು ಪಾಕಿಸ್ತಾನಿ ಸೈನಿಕರ ಮೇಲೆ ದಾಳಿ ಮಾಡಿ ವಿಘಾಕೋಟ್ ಪ್ರದೇಶವನ್ನು ವಶಪಡಿಸಿಕೊಳ್ಳುವುದರಲ್ಲಿ ಸಹಕರಿಸಿದ್ದರು. ಈ ಯುದ್ದದಲ್ಲಿ ಮಾರ್ಗದರ್ಶಿಯಾಗಿದ್ದ ರಾಂಚೋಡ್ ದಾಸ್ ಕೌಶಲ್ಯ ಎಷ್ಟಿತ್ತೆಂದರೆ, ಒಂಟೆಯ ಹೆಜ್ಜೆ ಗುರುತುಗಳನ್ನು ನೋಡುತ್ತಿದ್ದಂತೆಯೇ ಅದರ ಮೇಲೆ ಎಷ್ಟು ಪುರುಷರು ಸವಾರಿ ಮಾಡುತ್ತಿದ್ದಾರೆಂದು ಹೇಳುತ್ತಿದ್ದದ್ದಲ್ಲದೇ, ಮನುಷ್ಯರ ಹೆಜ್ಜೆ ಗುರುತುಗಳನ್ನು ನೋಡಿ, ಅವರ ಅಂದಾಜು ತೂಕ, ವಯಸ್ಸು ಮತ್ತು ಅವರು ಎಷ್ಟು ದೂರ ಕ್ರಮಿಸಿರಬಹುದು ಎಂದು ಊಹಿಸುತ್ತಿದ್ದದ್ದದ್ದು ಇಂದಿನ ಆಧುನಿಕ ಕಂಪ್ಯೂಟರ್ ವಿಶ್ಲೇಷಣೆಯಷ್ಟೇ ನಿಖರತೆಯನ್ನು ಹೊಂದಿದ್ದವು. ಹೀಗೆ ಮರುಭೂಮಿಯ ಹಾದಿಗಳ ಮೇಲಿನ ಅವರ ಹಿಡಿತದಿಂದಾಗಿ, ಅವರು ನಿಗದಿತ ಸಮಯಕ್ಕಿಂತ ಮೊದಲು ಸೈನ್ಯವನ್ನು ಗಮ್ಯಸ್ಥಾನಕ್ಕೆ ಕರೆದೊಯ್ದು ಜಯವನ್ನು ಸಾಧಿಸಲು ಸಹಾಯ ಮಾಡಿದ್ದಕ್ಕಾಗಿ ಸ್ಯಾಮ್ ಸಾಹೇಬ್ ಅವರು ರಾಂಚೋಡ್ ಅವರಿಗೆ ಸೈನ್ಯದಲ್ಲಿ ಪಾಗಿ ಎಂದರೆ ಪಾದಗಳ ಜ್ಞಾನವಿರುವ ವ್ಯಕ್ತಿ ಎಂಬ ವಿಶೇಷ ಹುದ್ದೆಯನ್ನು ರಚಿಸಿದ್ದಲ್ಲದೇ ಅಂದಿನಿಂದ ಅವರನ್ನು ಪ್ರೀತಿಯಿಂದ ಪಾಗಿ ಎಂದೇ ಕರೆಯಲಾರಂಭಿಸಿದರು.
ಅದೇ ರೀತಿಯಲ್ಲಿ 1971ರಲ್ಲಿ ಪಾಕೀಸ್ಥಾನ ಮತ್ತೆ ಕಾಲು ಕೆರೆದುಕೊಂಡು ಭಾರತದ ಮೇಲೆ ಯುದ್ದವನ್ನು ಮಾಡುವ ಸಮಯದಲ್ಲಿ ಪಾಕಿಸ್ತಾನಿ ಸೈನಿಕರು ಧೋರಾ ಪ್ರದೇಶದಲ್ಲಿ ಬೀಡುಬಿಟ್ಟು ಅಲ್ಲಿಂದ ಮುನ್ನಡೆದು ದಾಳಿ ಮಾಡಲು ಯೋಜಿಸುತ್ತಿದ್ದಾರೆಂಬ ವಿಷಯ ರಾಂಚೋಡ್ ಅವರಿಗೆ ತಲುಪುತ್ತಿದ್ದಂತೆಯೇ ರಾಂಚೋಡ್ ತನ್ನ ಒಂಟೆಯ ಮೇಲೆ ಪಾಕಿಸ್ತಾನಿ ಗಡಿಯನ್ನು ತಲುಪಿ ಅದನ್ನೆಲ್ಲವನ್ನೂ ಸೂಕ್ಷ್ಮವಾಗಿ ಅವಲೋಕನ ಮಾಡಿ ಆ ವಿಷಯವನ್ನು ಭಾರತೀಯ ಸೈನ್ಯಕ್ಕೆ ತಿಳಿಸಿದರು. ಅವರ ಮಾಹಿತಿಯ ಆಧಾರದ ಮೇಲೆ, ಭಾರತೀಯ ಸೇನೆಯು ಧೋರಾ ಮೇಲೆ ದಾಳಿ ಮಾಡುವ ಸಮಯದಲ್ಲಿ, ಭಾರತೀಯ ಸೈನಿಕರ ಬಳಿ ಮದ್ದುಗುಂಡುಗಳು ಇನ್ನೇನು ಖಾಲಿ ಆಗುತ್ತಿದೆ ಎಂಬುದನ್ನು ಗಮನಿಸಿದ ರಾಂಚೋಡ್ ಕೂಡಲೇ ಮತ್ತೆ ತಮ್ಮ ಒಂಟೆಯ ಸಹಾಯದಿಂದ 50 ಕಿಮೀ ದೂರದಿಂದ ಮದ್ದು ಗುಂಡುಗಳನ್ನು ಸಾಗಿಸಿ ಸೈನ್ಯಕ್ಕೆ ನೀಡುವ ಮೂಲಕ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ಇತಿಹಾಸದಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿಟ್ಟರು.
ಈ ಯುದ್ದದಲ್ಲಿ ಭಾರತವು ನಾಗರ್ಪರ್ಕರ್ ಕಡೆಗೆ ಅಚ್ಚರಿಯ ದಾಳಿ ನಡೆಸಲು ಯೋಜಿಸಿದಾಗ. ಆ ಪ್ರದೇಶದಲ್ಲಿ ಪಾಕೀಸ್ಥಾನಿಗಳು ಅದಾಗಲೇ ಸಂಪೂರ್ಣವಾಗಿ ಭೂಸ್ಫೋಟಕಗಳನ್ನು ಅಡಗಿಸಿಟ್ಟಿದ್ದನ್ನು ಗಮನಿಸಿದ 70 ವರ್ಷದ ವಯಸ್ಸಿನಲ್ಲಿದ್ದ ಪಾಗಿ, ತಮ್ಮ ಜೀವನದ ಹಂಗನ್ನೂ ತೊರೆದು ಸುಮಾರು 12 ಗಂಟೆಗಳ ಕಾಲ, ಕತ್ತಲೆಯಲ್ಲೇ, ಮರಳಿನಲ್ಲಿನ ಅತಿ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಿ ಅದರಲ್ಲಿ ಹೂತು ಹಾಕಿದ್ದ ಎಲ್ಲಾ ಭೂಸ್ಫೋಟಕಗಳನ್ನು ಪತ್ತೆ ಹಚ್ಚಿ ಅವುಗಳನ್ನು ನಿಷ್ಟ್ರಯಿಸಿ, ಭಾರತೀಯ ಟ್ಯಾಂಕ್‌ಗಳಿಗೆ ಸುರಕ್ಷಿತ ದಾರಿ ತೋರಿಸಿದ ಪರಿಣಾಮ ಇನ್ನೂ ಬೆಳಗಿನ ಜಾವ ನಿದ್ದೆಯಲ್ಲಿದ್ದ ಪಾಕಿಸ್ತಾನೀ ಸೈನಿಕರ ಮೇಳೆ ಭಾರತೀಯ ಕವಚಿತ ಪಡೆ ಧಾಳಿ ನಡೆಸಿ ಹೆಚ್ಚಿನ ಪ್ರತಿರೋಧವಿಲ್ಲದೆ ವಶ ಪಡಿಸಿಕೊಂಡಿತು.
1971ರ ಯುದ್ಧವನ್ನು ಭಾರತ ಗೆದ್ದಾಗ ಸೈನ್ಯದ ಜನರಲ್ ಮಾಣೆಕ್ಷಾ ಅವರು ಢಾಕಾದಲ್ಲಿದ್ದು, ‘ಪಲಿನಗರ’ ಪಟ್ಟಣದ ಮೇಲೆ ಭಾರತೀಯ ತ್ರಿವರ್ಣ ಧ್ವಜದ ಹಾರಿಸಲು ಸಹಾಯ ಮಾಡಿದ ರಾಚೋಡ್ ಭಾಯ್ ಅವರನ್ನು ಭೋಜನಕ್ಕೆ ಆಹ್ವಾನಿಸಿ ಅವರಿಗಾಗಿ ಒಂದು ಹೆಲಿಕಾಪ್ಟರ್ ಕಳುಹಿಸಲಾಯಿತು. ದುರಾದೃಷ್ಟವಷಾತ್ ಅವರು ಹೆಲಿಕಾಪ್ಟರ್ ಹತ್ತುವ ಭರದಲ್ಲಿ ತಮ್ಮ ಚೀಲವನ್ನು ಅಲ್ಲಿಯೇ ಬಿಟ್ಟಿದ್ದನ್ನು ನೆನಪಿಸಿಕೊಂಡು ಮತ್ತೆ ಚೀಲವನ್ನು ತರುವ ಸಲುವಾಗಿ ಅದೇ ಹೆಲಿಕಾಪ್ಟರ್ ಅನ್ನು ಹಿಂದಕ್ಕೆ ಕಳುಹಿಸಿ ಆ ಚೀಲವನ್ನು ತರಲು ಆದೇಶಿಸಲಾಯಿತು. ಹಳೆಯದಾದ ಮಾಸಲು ಚೀಲದಲ್ಲಿ ಅಂತಹದ್ದೇನಿದೆ ಎಂದು ಆಲ್ಲಿನ ಸೇನಾ ಅಧಿಕಾರಿಗಳು ಪರೀಕ್ಷಿಸಿದಾಗ, ಆ ಚೀಲದಲ್ಲಿ ಎರಡು ರೊಟ್ಟಿಗಳು, ಈರುಳ್ಳಿ ಮತ್ತು ಕಡಲೆ ಹಿಟ್ಟು (ಗಥಿಯಾ) ಇದ್ದುದ್ದನ್ನು ಕಂಡು ಅಚ್ಚರಿಗೊಂಡರು. ಪಾಗಿ ಆವರು ಮಾಣಿಕ್ ಷಾ ಅವರನ್ನು ಭೇಟಿಯಾದಾಗ ಬಿಗಿದಪ್ಪಿಕೊಂಡು ಬಹಳ ಸಂತೋಷದಿಂದ ತಮ್ಮ ಜೀಬಿನಿಂದ ಅಂದಿನ ಕಾಲದಲ್ಲೇ 300/- ರೂಪಾಯಿ ಭಕ್ಷೀಸನ್ನು ನೀಡಿದ್ದಲ್ಲದೇ, ಅಂದಿನ ಊಟದ ಸಮಯದಲ್ಲಿ ಪಾಗಿ ತಂದಿದ್ದ ಅದೇ ರೊಟ್ಟಿ ಮತ್ತು ಪಲ್ಯಗಳನ್ನು ಸ್ಯಾಮ್ ಸಾಹಿಬ್ ಮತ್ತು ಪಾಗಿ ಅವರು ಸಂತೋಷದಿಂದ ಸವಿದಿದ್ದರು.
ಈ ರೀತಿಯಾಗಿ 1965 ಮತ್ತು 1971 ಎರಡೂ ಯುದ್ದದಲ್ಲಿ ಅವರ ಐತಿಹಾಸಿಕ ಕೊಡುಗೆಗಳಿಗಾಗಿ ಭಾರತೀಯ ಸೇನೆಯು ಅವರಿಗೆ ಸಂಗ್ರಾಮ್ ಸೇವಾ ಪದಕ, ಪ್ರತಿಭಾನ್ವಿತ ಸೇವೆಗಾಗಿ ಪೊಲೀಸ್ ಪದಕ, ಭಾರತೀಯ ಪೊಲೀಸ್ ಪದಕ ಮತ್ತು ಸಮರ್ ಸೇವಾ ಸ್ಟಾರ್ ಪದಕ -1965 ಹೀಗೆ ಮೂರು ಪದಕಗಳನ್ನು ನೀಡಿ ಗೌರವಿಸಲಾಯಿತು. ಇದಷ್ಟೇ ಅಲ್ಲದೇ ರಾಂಚೋದ್‌ಭಾಯ್ ಅವರ ಶ್ರೇಷ್ಠ ಗೌರವವಾಗಿ ಬಿಎಸ್‌ಎಫ್ ಕಚ್ ಗಡಿಯಲ್ಲಿ ಅವರ ಹೆಸರಿನಲ್ಲಿಯೇ ಒಂದು ಹುದ್ದೆಯನ್ನು ಸ್ಥಾಪಿಸಿ, 990 ಸಂಖ್ಯೆಯ ಸ್ತಂಭವನ್ನು ನಿರ್ಮಿಸಲಾಗಿದೆ. ಉತ್ತರ ಗುಜರಾತ್‌ನ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿರುವ ಸುಯಿಗಾಂವ್ ನ ಗಡಿ ಠಾಣೆಗೆ ರಾಂಚೋದ್ದಾಸ್ ಠಾಣೆ ಎಂದು ಹೆಸರಿಸಲಾಯಿತು. ಸೇನಾ ಠಾಣೆಗೆ ಸಾಮಾನ್ಯ ವ್ಯಕ್ತಿಯ ಹೆಸರಿಡಲಾಗಿದ್ದು, ಅವರ ಪ್ರತಿಮೆಯನ್ನು ಸ್ಥಾಪಿಸಿದ್ದು ಇದೇ ಮೊದಲು.
2008ರಲ್ಲಿ, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷಾ ಅವರು ಅನಾರೋಗ್ಯದಿಂದ ತಮಿಳುನಾಡಿನ ವೆಲ್ಲಿಂಗ್ಟನ್ ಆಸ್ಪತ್ರೆಯಲ್ಲಿ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗಲೂ ಆಗಾಗ್ಗೆ ಪಾಗಿ ಪಾಗಿ ಎಂದು ಕನವರಿಸುತ್ತಿದ್ದನ್ನು ಕೇಳಿ ಅಚ್ಚರಿಗೊಂಡ ಅಲ್ಲಿನ ವೈದ್ಯರು ಈ ಪಾಗಿ ಯಾರು? ಎಂದು ಸೈನಾಧಿಕಾರಿಗಳನ್ನು ಕೇಳಿದ್ದರು ಎಂದರೆ ಸ್ಯಾಮ್ ಸಾಬ್ ಮತ್ತು ಪಾಗಿ ಅವರ ನಡುವಿನ ಅವಿನಾಭಾವ ಸಂಬಂಧ ಎಷ್ಟಿತ್ತು ಎಂಬುದು ಅರಿವಾಗುತ್ತದೆ. ಮುಂದೆ ಜೂನ್ 27, 2008 ರಂದು ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷಾ ನಿಧನರಾಗುತ್ತಿದ್ದಂತೆಯೇ, 2009ರಲ್ಲಿ ಪಾಗಿ ಅವರೂ ಸಹಾ ತಮ್ಮ 108ನೇ ವಯಸ್ಸಿನಲ್ಲಿ ಸೈನ್ಯದಿಂದ ಸ್ವಯಂಪ್ರೇರಿತ ನಿವೃತ್ತಿ ಪಡೆದು, ಜನವರಿ 18, 2013 ರಂದು ತಮ್ಮ 112 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಅಂತಿನ ಆಸೆಯಂತೆ ಅವರ ಅಂತ್ಯಕ್ರಿಯೆಯಲ್ಲಿ ಅವರ ದೇಹದ ಮೇಲೆ ಪೇಟವನ್ನು ಇಟ್ಟು ಅವರದ್ದೇ ಜಮೀನಿನಲ್ಲಿಯೇ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.
ರಾಂಚೋದ್‌ದಾಸ್ ರಬಾರಿ ಅರ್ಥಾತ್ ಎಲ್ಲರ ಪ್ರೀತಿಯ ಪಾಗಿ ಅವರ ದೇಶಭಕ್ತಿ, ಶೌರ್ಯ, ಶೌರ್ಯ, ತ್ಯಾಗ, ಸಮರ್ಪಣೆ ಮತ್ತು ಸಭ್ಯತೆಯಿಂದ ಭಾರತೀಯ ಮಿಲಿಟರಿ ಇತಿಹಾಸದಲ್ಲಿ ಶಾಶ್ವತವಾಗಿ ಅಮರರಾಗಿದ್ದಲ್ಲದೇ, ಇಂದಿಗೂ ಅವರ ಶೌರ್ಯಗಾಥೆಗಳು ಮುಂದಿನ ಪೀಳಿಗೆಯವರಿಗೆ ತಿಳಿಸುವ ಸಲುವಾಗಿ ಗುಜರಾತಿ ಜಾನಪದ ಗೀತೆಗಳ ಭಾಗವಾಗಿದ್ದು, ಅವರ ಸಾಹಸ ಆಚಂದ್ರಾರ್ಕವಾಗಿರುವಂತೆ ಮಾಡಲಾಗಿರುವುದು ಶ್ಲಾಘನೀಯವಾಗಿದೆ. 1965 ಮತ್ತು 1971ರ ಯುದ್ಧಗಳಲ್ಲಿ ಭಾರತದ ವಿಜಯಗಳಲ್ಲಿ ಗೌರವಾನ್ವಿತ ಪಾತ್ರವನ್ನು ವಹಿಸಿದ್ದ ರಾಂಚೋಡ್ ದಾಸ್ ಪಾಗಿ ಅವರ ಜೀವನವನ್ನು ಆಧರಿಸಿದ ಭುಜ್ ಪ್ರೈಡ್ ಆಫ್ ಇಂಡಿಯಾ ಚಿತ್ರವನ್ನು ಅಜಯ್ ದೇವಗನ್ ಅವರು 13 ಆಗಸ್ಟ್ 2021 ರಲ್ಲಿ ನಿರ್ಮಿಸಿರುವುದು ಗಮನಾರ್ಹವಾಗಿದೆ.
ಇಂದು ನಮ್ಮ ಗಡಿಗಳನ್ನು ನಾನಾ ಬಗೆಯ ಉಪಗ್ರಹಗಳು ಮತ್ತು ವಿವಿಧ ಸಂವೇದಕಗಳು ಕಾವಲು ಕಾಯುತ್ತಿವೆಯಾದರೂ, ತಂತ್ರಜ್ಞಾನವು ಅಷ್ಟು ಅಭಿವೃದ್ಧಿಯಾಗಿರದ ಕಾಲದಲ್ಲಿ, ಮರಳಿನಲ್ಲಿನ ಹೆಜ್ಜೆಗುರುತುಗಳ ಮೂಲಕವೇ ಅತ್ಯುತ್ತಮ ನಿಗಾವ್ಯವಸ್ಥೆಯಾಗಿದ್ದ ದನಗಾಹಿ ರಾಂಛೋದಾಸ್ ರಬಾರಿ (ಪಾಗಿ) ಇಂದಿನ ಯಾವ ಶಕ್ತಿ ಶಾಲಿ ಡ್ರೋನ್ ಇಲ್ಲವೇ, ಉಪಗ್ರಹ ಅಥವಾ ರಾಡಾರ್ ಗಿಂತಲೂ ಕಡಿಮೆ ಇರಲಿಲ್ಲ ಎಂದರೂ ತಪ್ಪಾಗದು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಈ ಲೇಖನ ಬರೆಯಲು ಪ್ರೇರೇಪಿಸಿದ ಆತ್ಮೀಯರಾದ ಸಂಸ್ಕಾರ ಭಾರತಿಯ ಶ್ರೀ ಜಯಸಿಂಹ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು