ಸಂಪರ್ಕ ಮತ್ತು ಸೌಹಾರ್ದ

ಅದೊಂದು ಸಂಜೆ ರೀ.. ಹಾಲು ಮೊಸರು ಮುಗಿದು ಹೋಗಿದೆ, ಸ್ವಲ್ಪ ತರ್ತೀರಾ ಎಂದಾಗ, ಮೋಬೈಲಿನಲ್ಲಿ ಕ್ರಿಕೆಟ್ ನೋಡುತ್ತಿದ್ದ ನಾನು ಬೇಸರಿಸಿಕೊಂಡೇ, ಚೀಲದಲ್ಲಿ ಹಾಲು ಮೊಸರು ಕೂಪನ್ನುಗಳನ್ನು ಹಾಕಿಕೊಂಡು ಹಾಲಂಗಡಿಗೆ ಹೋದೆ. ಸಾಧಾರಣವಾಗಿ ನಾನು ಎಲ್ಲಿಗೇ ಹೋಗಲಿ, ಸುಮ್ಮನೆ ನಾನಾಯಿತು ನನ್ನ ಕೆಲಸ ಆಯಿತು ಎನ್ನುವ ಆಸಾಮಿಯೇ ಅಲ್ಲಾ. ದಾರಿಯಲ್ಲಿ ಪರಿಚಯವಿರುವ ಎಲ್ಲರನ್ನೂ ಮಾತನಾಡಿಸಿಕೊಂಡೇ ಹೋಗುವ ಪರಿಪಾಠ. ಅಂದೂ ಸಹಾ ಹಾಲಿನಂಗಡಿಯವರ ಉಭಯ ಕುಶಲೋಪರಿಯನ್ನು ವಿಚಾರಿಸುವಷ್ಟರಲ್ಲೇ ೫-೧೦ ನಿಮಿಷ ಕಳೆದು, ನಂತರ ಮನೆಗೆ ಹಿಂದಿರುಗುವಾಗ, ಬಹಳ ದಿನಗಳ ನಂತರ ಬಾಲ್ಯದ ಗೆಳೆಯರಿಬ್ಬರು ಮುಖಃತಃ ಭೇಟಿಯಾಗುತ್ತಿದ್ದಂತೆಯೇ ರಸ್ತೆಯ ಬದಿಯಲ್ಲೇ ಮಾತಿಗೆ ಇಳಿದೆವು. ಇತ್ತ ಹಾಲು ತರಲು ಹೋದವರು ಅರ್ಧ ಗಂಟೆಯಾದರೂ ಬರಲಿಲ್ಲವಲ್ಲಾ ಎಂದು ಗಾಭರಿಯಿಂದ ಮಡದಿ ಕರೆ ಮಾಡಿ, ರೀ… ಎಲ್ಲಿದ್ದೀರಾ?… ಹಾಲು ತರೋದಿಕ್ಕೆ ಅರ್ಧ ಗಂಟೆ ಬೇಕಾ?…. ಎಂದು ಆತಂಕದಿಂದ ಮೇಲಿಂದ ಮೇಲೆ ಪ್ರಶ್ನೆಗಳ ಮಳೆ ಸುರಿಸಿದಾಗ, ಅಷ್ಟೇ ತಾಳ್ಮೆ ಇಂದಲೇ, ಇಲ್ಲಮ್ಮಾ ಇಲ್ಲೇ ಗೆಳೆಯರು ಸಿಕ್ಕಿದ್ದಾರೆ ಅವರೊಂದಿಗೆ ಮಾತನಾಡುತ್ತಿದ್ದೇನೆ. ಸ್ವಲ್ಪ್ಸ ಸಮಯದ ನಂತರ ಬರ್ತೀನಿ ಹೇಳಿ, ಸುಮಾರು ಹೊತ್ತಿನವರೆಗೂ ಗೆಳೆಯರೊಡನೆ ಬಾಲ್ಯದ ಆಟ ಪಾಠ, ನಮ್ಮ ಸಹಪಾಠಿಗಳೆಲ್ಲ ಯೋಗ ಕ್ಷೇಮವನ್ನು ವಿಚಾರಿಸಿ ಮನೆಗೆ ಹೋದೆ.

ಮಳೆ ನಿಂತು ಹೋದರೂ, ಮರದಿಂದ ಹನಿಯು ಬೀಳುತ್ತದೆ ಎನ್ನುವಂತೆ ನಿಮ್ಮಪ್ಪನಿಗೆ ಮಾತಿಗೆ ಯಾರಾದರೂ ಸಿಕ್ಕರೆ ಸಾಕು ಅಷ್ಟೇ!! ಹೆಂಡತಿ ಮಕ್ಕಳು ಎಲ್ಲರನ್ನೂ ಮರೆತು ಬಿಡ್ತಾರೆ ಎಂದು ಮಡದಿ ಅಡುಗೆ ಮನೆಯಿಂದಲೇ ಮೊದಲ ಬಾಣ ಪ್ರಯೋಗಿಸುತ್ತಿದ್ದಂತೆಯೇ, ಅವರವರ ರೂಮಿನಲ್ಲಿದ್ದ ಮಕ್ಕಳೂ ಆಸಾಮಿ ಹಳ್ಳಕ್ಕೆ ಬಿದ್ದರೇ, ಆಳಿಗೊಂದು ಕಲ್ಲು ಎನ್ನುವಂತೆ ಹೌದೌದು. ಈ ನಡುವೆ ಅಪ್ಪಾ ಬರೀ ಮೊಬೈಲ್, ಬ್ಲಾಗ್ ಯೂಟೂಬ್ ವೀಡೀಯೋ ಅಂತಾನೇ ಇರ್ತಾರೆ, ಇಲ್ಲಾಂದ್ರೇ ಎಲ್ಲೋ ಬೈಠಕ್ಕಿಗೋ, ಭಾಷಣಕ್ಕೋ ಹೋಗ್ತಾರೆ. ನಮ್ಮ ಜೊತೆ ಮುಂಚಿನ ರೀತಿಯಲ್ಲಿ ಇಲ್ಲಾ ಎಂದು ಹೇಳುತ್ತಿದ್ದಂತೆಯೇ, ಈ ಬಡಪಾಯಿ ಅಮಾಯಕನ ಪರಿಸ್ಥಿತಿ ಹೇಗಾಗಿರಬೇಕು ಎಂದು ವರ್ಣಿಸುವುದೇ ಬೇಡ ಅಲ್ವೇ?

ಇಷ್ಟೆಲ್ಲಾ ಪೀಠಿಕೆ ಏಕಪ್ಪಾ ಅಂದ್ರೇ, ಈ ಆಧುನಿಕ ಜಗತ್ತಿನಲ್ಲಿ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ, ಕ್ಷಣಾರ್ಧದಲ್ಲಿ ಸಂಪರ್ಕಿಸಿ ಸೌಹಾರ್ಧತೆಯನ್ನು ಬೆಳಸಿಕೊಳ್ಳುವಂತಹ ಸೌಲಭ್ಯಗಳು ಇದ್ದರೂ, ಇತ್ತೀಚಿನ ದಿನಗಳಲ್ಲಿ ಸಂಪರ್ಕ ಮತ್ತು ಸೌಹಾರ್ಧತೆಯ ಕೊರತೆಯೇ ಬಹಳವಾಗಿ ಕಾಡುತ್ತಿರುವುದು ನಿಜಕ್ಕೂ ವಿಷಾಧನೀಯವಾದ ಆಘಾತಕಾರಿ ಸಂಗತಿಯಾಗಿದೆ. ಹೊರಗಿನವರೊಂದಿಗಿನ ಸಂಪರ್ಕ ಬಿಡಿ, ಕುಟುಂಬದಲ್ಲೇ ಸೌಹಾರ್ಧತೆ ಮಾಯವಾಗಿದೆ. ಹಿಂದೆಲ್ಲಾ ಎಷ್ಟೇ ಬಡತನವಿದ್ದರೂ, ಮಕ್ಕಳಿರಲವ್ವಾ ಮನೆ ತುಂಬಾ ಎನ್ನುವಂತೆ ಮನೆಯ ಪೂರಾ ಮಕ್ಕಳದ್ದೇ ಕಲರವ ಇದ್ದರೂ, ಸಹಾ ಎಲ್ಲರೂ ಒಟ್ಟಾಗಿ ಊಟ ಮತ್ತು ತಿಂಡಿಯನ್ನು ಮಾಡುತ್ತಿದ್ದದ್ದಲ್ಲದೇ, ಸಂಜೆ ನಿಗಧಿತ ಸಮಯದಲ್ಲಿ ಪೂಜೆ, ಭಜನೆ ಇಲ್ಲವೇ ಪರಸ್ಪರ ಸಂಭಾಷಣೆಯ ಮೂಲಕ ಒಟ್ಟಿಗಿರುತ್ತಿದ್ದದ್ದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ

ಆದರೆ ಇಂದು ಆರತಿಗೊಬ್ಬಳು ಮಗಳು, ಕೀರ್ತಿಗೊಬ್ಬ ಮಗ. ಅದೂ ಇಲ್ಲವೇ ಹೆಣ್ಣಾಗಲೀ ಗಂಡಾಗಲೀ ಮಗುವೊಂದೇ ಇರಲೀ ಎನ್ನುವಂತಹ ಸಣ್ಣ ಕುಟುಂಬವಾಗಿದ್ದರೂ ಗಂಡ ಹೆಂಡತಿ ಮಕ್ಕಳೇ ಒಟ್ಟಿಗೆ ಕುಳಿತು ಊಟ ಮಾಡುವುದೇ ಇಲ್ಲಾ. ಇನ್ನೂ ಅಚ್ಚರಿಯ ಸಂಗತಿಯಂದರೆ ಊಟ ಮಾಡಲು ಮಕ್ಕಳನ್ನು ಕರೆಯಲೂ ಸಹಾ WhatsAppನಲ್ಲಿ message ಮಾಡುವುದೋ ಇಲ್ಲವೇ ಮೊಬೈಲ್ ಕರೆ ಮಾಡುವಂತಹ ಪರಿಸ್ಥಿತಿ ಉಂಟಾಗಿರುವುದು ನಿಜಕ್ಕೂ ಶೋಚನೀಯವಾಗಿದೆ.

ತಮ್ಮ ಪ್ರತಿಷ್ಠೆಯ ಸಂಕೇತ ಏನೋ ಎನ್ನುವಂತೆ ಓದುವುದಕ್ಕೆ/ಕೆಲಸಕ್ಕೆ ವಿದೇಶಗಳಿಗೆ ಮಕ್ಕಳನ್ನು ಕಳುಹಿಸಿದ ಪೋಷಕರ ಪಾಡಂತೂ ಕೇಳುವುದೇ ಬೇಡ. ಆರಂಭದ ದಿನಗಳಲ್ಲಿ ದಿನಕ್ಕೊಮ್ಮೆ ಇಲ್ಲವೇ ಎರಡು ಬಾರಿ ಕರೆ ಮಾಡುವ ಮಕ್ಕಳು ನಂತರದ ದಿನಗಳಲ್ಲಿ ಅದು ಎರಡು ಮೂರು ದಿನಗಳಿಗೊಮ್ಮೆ ಕರೆ ಮಾಡುತ್ತಾ, ನಂತರ ವಾರ, ಆದಾದ ನಂತರ ಹದಿನೈದು ದಿನಕ್ಕೊಮ್ಮೆಯೋ ಇಲ್ಲವೇ ತಿಂಗಳಿಗೊಮ್ಮೆ ಕರೆ ಮಾಡಿದರೆ ಉಂಟು ಇಲ್ಲವೆಂದರೆ ಇಲ್ಲವೇ ಇಲ್ಲಾ ಎನ್ನುವುದಕ್ಕೆ ಇತ್ತೀದಿನ ಈ ಪ್ರಸಂಗವೇ ಜ್ವಲಂತ ಉದಾಹರಣೆ.

ಮಧ್ಯಪ್ರದೇಶದ ಇಂದೋರ್‌ನ ಲಸುಡಿಯಾದ ಸ್ಯಾಟಲೈಟ್ ಜಂಕ್ಷನ್ ಪ್ರದೇಶದ ನಿವಾಸದಲ್ಲಿ ಕನ್ಹಯ್ಯಾಲಾಲ್ ಪರನ್ವಾಲ್ ಮತ್ತು ಸ್ಮೃತಿ ಎಂಬ ದಂಪತಿಗಳ ಒಬ್ಬನೇ ಮಗ ಬಹಳ ಹಿಂದೆಯೇ ವಿದೇಶದಲ್ಲಿ ನೆಲಸಿದ್ದ. ಆರಂಭದಲ್ಲಿ ನಮ್ಮ ಮಗ ವಿದೇಶದಲ್ಲಿ ಇದ್ದಾನೆ. ಅಲ್ಲಿಂದಲೇ ಹಣ ಕಳುಹಿಸುತ್ತಿರುವುದರಿಂದ ನಾವುಗಳು ಬಹಳ ಚೆನ್ನಾಗಿ ಇದ್ದೇವೆ ಎಂದು ಎಲ್ಲರೊಡನೆ ಹೇಳಿಕೊಂಡು ಓಡಾಡುತ್ತಿದ್ದರು. ಕಾಲ ಹೀಗೇ ಇರುವುದಿಲ್ಲಾ ಎನ್ನುವಂತೆ ಮಗ ಹಣ ಏನೋ ಕಳುಹಿಸಿಕೊಡುತ್ತಿದ್ದ ಆದರೆ ಕೆಲ ಸಮಯದ ನಂತರ ಆತನಿಂದ ಕರೆಯೇ ಬರುತ್ತಿರಲಿಲ್ಲ. ಅಕಸ್ಮಾತ್ ಇವರೇ ಕರೆ ಮಾಡಿದರೆ ಕರೆಯನ್ನೂ ಸ್ವೀಕರಿಸುತ್ತಿರಲಿಲ್ಲ. ಇದೇ ಕೊರಗಿನಲ್ಲೇ, ಗಂಡ ಕನ್ಹಯ್ಯಾಲಾಲ್ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದರೆ, ಹೆಂಡತಿ ತಮ್ಮ ಪತಿಯನ್ನು ನೋಡಿಕೊಳ್ಳುತ್ತಿದ್ದರಲ್ಲದೇ ಸ್ವಲ್ಪ ಮಾನಸಿಕ ತೊಂದರೆಯಿಂದಲೂ ಬಳಲುತ್ತಿದ್ದರು. ಹಾಗಾಗಿ ನೆರೆ ಹೊರೆಯವರೊಡನೆ ಅವರ ಸಂಪರ್ಕವೂ ಕಡಿದು ಹೋಗಿತ್ತು.

ಸುಮಾರು ದಿನಗಳ ನಂತರ ಅವರ ಮನೆಯಿಂದ ಇದ್ದಕ್ಕಿದ್ದಂತೆಯೇ ದುರ್ವಾಸನೆ ಬರ ತೊಡಗಿದ್ದನ್ನು ಗಮನಿಸಿದ ನೆರೆಯವರು ಎಷ್ಟೇ ಬಾಗಿಲು ಬಡಿದರೂ ಯಾರೂ ಸಹಾ ಬಾಗಿಲು ತೆರಯದೇ ಹೋಗಿದ್ದನ್ನು ಗಮನಿಸಿ ಪೋಲೀಸರಿಗೆ ದೂರು ಸಲ್ಲಿಸಿ, ಅವರು ಬಂದು ಬಾಗಿಲು ಒಡೆದಾಗ ಅಲ್ಲಿನ ದೃಶ್ಯ ಎಂತಹ ಕಲ್ಲು ಮನಸ್ಸಿನವರಿಗೂ ಹೃದಯ ಕರಗುವುದು ಬಿಡಿ ಒಡೆದೇ ಹೋಗುವಂತಹದ್ದಾಗಿತ್ತು. ಪತಿ ಹಾಸಿಗೆಯ ಮೇಲೆ ಮತ್ತು ಪತ್ನಿ ಸ್ನಾನಗೃಹದಲ್ಲಿ ಅನಾಥವಾಗಿ ಬಿದ್ದಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿದಾಗ, ಪತಿ 20 ರಿಂದ 30 ದಿನಗಳ ಹಿಂದೆಯೇ ನಿಧನರಾಗಿದ್ದರೆ, ಪತ್ನಿಯೂ ಕೆಲ ದಿನಗಳ ನಂತರ ಪತಿಯನ್ನು ಹಿಂಬಾಲಿಸಿದ್ದರು. ಈಗ ಅವರ ಮಗ ಎಲ್ಲಿದ್ದಾನೆ? ಹೇಗಿದ್ದಾನೆ ಎಂಬ ವಿಚಾರವೂ ತಿಳಿಯದೇ, ಎಲ್ಲವೂ ಇದ್ದ ಕುಟುಂಬದ ಸದಸ್ಯರು ಅನಾಥರಾಗಿ ಅಂತ್ಯ ಸಂಸ್ಕಾರ ಕಾಣುವಂತಾಗಿತ್ತು.

ಈ ರೀತಿಯ ಸುದ್ದಿ ಇದೇ ಮೊದಲಲ್ಲಾ ಈ ಹಿಂದೆಯೂ ಇದೇ ರೀತಿಯಾಗಿ ನೂರಾರು ಪ್ರಸಂಗಗಳು ಮಾತ್ರಾ ಬೆಳಕೆಗೆ ಬಂದಿದ್ದರೆ, ಸಾವಿರಾರು ಪ್ರಸಂಗಗಳು ಬೆಳಕಿಗೇ ಬಾರದೇ ಹೋಗಿರುವುದು ಸತ್ಯ. ಇದೇ ರೀತಿಯಾದ ಪ್ರಸಂಗ ಸುಮಾರು ನೂರು ವರ್ಷಗಳ ಹಿಂದೆಯೂ ಸ್ವಾಮೀ ವಿವೇಕಾನಂದರ ಬಳಿ ಯಾರೋ ಕೇಳಿದಾಗ ಅದಕ್ಕೆ ಅವರ ವಿವರಣೆ ನಿಜಕ್ಕೂ ಹೃದಯ ಮುಟ್ಟುವಂತಿದೆ.

ಸ್ವಾಮಿಗಳ ಉಪನ್ಯಾಸದ ನಂತರ ಪತ್ರಕರ್ತರೊಬ್ಬರು ಸ್ವಾಮೀ ನಿಮ್ಮ ಉಪನ್ಯಾಸದ ಕೊನೆಯಲ್ಲಿ ಸಂಪರ್ಕ ಮತ್ತು ಸೌಹಾರ್ದ ಬಗ್ಗೆ ಹೇಳಿದ್ದದ್ದು ನನಗೆ ಸರಿಯಾಗಿ ತಿಳಿಯಲಿಲ್ಲ. ದಯವಿಟ್ಟು ಮತ್ತೊಮ್ಮೆ ವಿವರಿಸಿ ಎಂದು ಕೇಳಿದ್ದಕ್ಕೆ, ವಿವೇಕಾನಂದರು ಮುಗುಳ್ನಗುತ್ತಾ, ನಿಮ್ಮ ಮನೆಯಲ್ಲಿ ಎಷ್ಟು ಜನರಿದ್ದೀರೀ? ಎಂದು ಕೇಳುತ್ತಾರೆ. ತಾನು ಕೇಳಿದ ಪ್ರಶ್ನೆಗೆ ಉತ್ತರಿಸದೇ, ನನಗೇ ವಯಕ್ತಿಕ ಪ್ರಶ್ನೆ ಕೇಳುತ್ತಿದ್ದಾರಲ್ಲಾ ಎಂದು ಮುಜುಗೊರಗೊಂಡರೂ, ಕೆಲ ವರ್ಷಗಳ ಹಿಂದೆ ತಾಯಿ ನಿಧನರಾಗಿದ್ದು, ತಂದೆ, ಮೂವರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದು, ಎಲ್ಲರೂ ವಿವಾಹವಾಗಿದ್ದಾರೆ ಎಂದು ಉತ್ತರಿಸುತ್ತಾರೆ.

ಆಗ ಸ್ವಾಮಿಗಳು ಮತ್ತೆ ನೀವು ನಿಮ್ಮ ತಂದೆಯೊಂದಿಗೆ ಕಡೆಯದಾಗಿ ಯಾವಾಗ ಮಾತನಾಡಿದ್ದು? ಎಂದು ಕೇಳಿದ್ದಕ್ಕೆ ಕಕ್ಕಬಿಕ್ಕಿಯಾದ ಪತ್ರಕರ್ತ ಸುಮಾರು ಒಂದು ತಿಂಗಳ ಹಿಂದೆ ಮಾತನಾಡಿದ್ದೆ ಎಂದಾಗ, ಬಹಳ ಸಂತೋಷ ಎಂದ ಸ್ವಾಮಿಗಳು ಸರಿ ನಿಮ್ಮ ಸಹೋದರ ಸಹೋದರಿಯವರನ್ನು ಆಗಾಗ್ಗೆ ಭೇಟಿಯಾಗುತ್ತೀರಾ? ಕಡೆಯದಾಗಿ ನೀವೆಲ್ಲರೂ ಒಟ್ಟಿಗೆ ಸೇರಿದ್ದದ್ದು ನೆನಪಿದೆಯೇ? ಎಂದು ಕೇಳಿದಾಗ, ಪತ್ರಕರ್ತನಿಗೆ ಇಲ್ಲೇನೋ ಸಮಸ್ಯೆ ಇದೆ. ಸಂದರ್ಶನ ಮಾಡಲು ಬಂದವನನ್ನೇ ಇವರು ಸಂದರ್ಶಿಸುತ್ತಿದ್ದಾರೆ ಮತ್ತು ನನ್ನ ವಯಕ್ತಿಕ ವಿಚಾರವನ್ನು ಕೇಳುತ್ತಿದ್ದಾರಲ್ಲಾ ಎಂದು ತಿಳಿದು ನಿಧಾನವಾಗಿ ಅವರ ಹಣೆಯ ಮೇಲೆ ಬೆವರ ಹನಿಗಳು ಕಾಣಿಸ ತೊಡಗುತ್ತದೆ.

ಹಾಗೇ ಹಣೆಯ ಮೇಲಿನ ಬೆವರನ್ನು ಒರಸಿಕೊಂದು ಎರಡು ವರ್ಷಗಳ ಹಿಂದೆ ಕ್ರಿಸ್‌ಮಸ್‌ ಸಮಯದಲ್ಲಿ ಸುಮಾರು ಎರದು ಮೂರು ದಿನಗಳ ಕಾಲ ಒಟ್ಟಿಗೆ ಇದ್ದೆವು ಎಂದಾಗ, ಆಗ ನೀವೆಲ್ಲರೂ ಒಟ್ಟಾಗಿ ಕುಳಿತು ಊಟ ಮಾಡಿದ್ದೀರಾ? ನಿಮ್ಮ ತಾಯಿಯವರು ಗತಿಸಿದ ನಂತರ ನಿಮ್ಮ ತಂದೆಯವರ ಮನಸ್ಥಿತಿ ಹೇಗಿದೆ? ಎಂದು ಎಂದಾದರೂ ನೀವು ವಿಚಾರಿಸಿದ್ದೀರಾ? ಪತ್ರಕರ್ತನಿಗೇ ಅರಿವಿಲ್ಲದಂತೆ ಭಾವೋದ್ವೇಗಕ್ಕೆ ಒಳಗಾಗಿ ಆತನ ಕಣ್ಣುಗಳಿಂದ ಧಾರಾಕಾರವಾಗಿ ಕಣ್ಣೀರು ಸುರಿಯಲಾರಂಭಿಸುತ್ತದೆ.

ಆಗ ಸ್ವಾಮಿಗಳು ಆ ಪತ್ರಕರ್ತನ ಕೈ ಹಿಡಿದು ಮುಜುಗರಪಡಬೇಡಿ ಮತ್ತು ಅಳಬೇಡಿ. ನಾನು ನಿಮ್ಮ ಮನಸ್ಸನ್ನು ನೋಯಿಸಲು ಈ ರೀತಿಯಾಗಿ ಪ್ರಶ್ನೆಗಳನ್ನು ಕೇಳುತ್ತಿಲ್ಲ. ಬದಲಾಗಿ ಸಂಪರ್ಕ ಮತ್ತು ಸೌಹಾರ್ದದ ಬಗ್ಗೆ ನೀವು ಕೇಳಿದ ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನದಲ್ಲಿದ್ದೇನೆ. ನೀವು ನಿಮ್ಮ ತಂದೆ ಮತ್ತು ಕುಟುಂಬದೊಡನೆ ವಿರಳವಾಗಿಯಾದರೂ ಸಂಪರ್ಕದಲ್ಲಿದ್ದೀರಿ ಆದರೆ ಅವರೊಂದಿಗೆ ಸೌಹಾರ್ದವಾಗಿಲ್ಲ. ಕುಟುಂಬದೊಡನೆ ಒಟ್ಟಿಗೆ ಕುಳಿತುಕೊಳ್ಳುವುದು, ಊಟ ಮಾಡುವುದು, ಮನ ಬಿಚ್ಚಿ ಮಾತನಾಡುವುದು, ಪರಸ್ಪರ ಆರೈಕೆ ಮಾಡುವುದು, ಇವೆಲ್ಲವೂ ಸೌಹಾರ್ದತೆಯನ್ನು ಹೆಚ್ಚಿಸುತ್ತದೆ ಎನ್ನುತ್ತಿದ್ದಂತೆಯೇ ತನ್ನ ಕಣ್ಗಳನ್ನು ಒರೆಸಿಕೊಂಡ ಆ ಪತ್ರಕರ್ತ. ನನ್ನ ಜೀವನದಲ್ಲಿ ಮರೆಯಲಾಗದಂತಹ ಅತ್ಯುತ್ತಮ ಪಾಠವನ್ನು ಅತ್ಯಂತ ಸರಳವಾಗಿ ಕಲಿಸಿದ್ದಕ್ಕಾಗಿ ಧನ್ಯವಾದಗಳು ಎನ್ನುತ್ತಾರೆ.

ಅಂದು ವಿವೇಕಾನಂದರು ಹೇಳಿದ ಮಾತುಗಳು ಇಂದಿಗೂ ವಾಸ್ತವವಾಗಿದ್ದು. ಮೊಬೈಲ್ ಮೂಲಕ ಸಂಭಾಷಣೆ ಅಥವಾ ಸಂದೇಶ ರವಾನೆಗಳು ಎಲ್ಲರೊಡನೆ ಸಂಪರ್ಕವನ್ನು ಕಲಿಸುತ್ತದಾದರೂ ಅದು ಸೌಹಾರ್ಧತೆಯನ್ನು ಬೆಳೆಸುವುದಿಲ್ಲಾ. ಹಾಗಾಗಿಯೇ ಈ ಹಿಂದೆ ಇರುತ್ತಿದ್ದ ಅವಿಭಕ್ತ ಕುಟಂಬಗಳಲ್ಲಿ ನೂರಾರು ಜನರಿದ್ದರೂ ಬಹಳ ಅನ್ಯೋನ್ಯವಾಗಿರುತ್ತಿದ್ದರು. ಇನ್ನು ಮದುವೆ, ಮುಂಜಿ, ನಾಮಕರಣದಂತಹ ಶುಭ ಸಮಾರಂಭಗಳಿಗೆ ನೆಂಟರು ವಾರಕ್ಕೆ ಮುಂಚೆಯೇ ಬಂದು ಸಂಭ್ರಮ ಸಡಗರಗಳಿಂದ ಓಡಾಡುತ್ತಿದ್ದರಿಂದ ಎಲ್ಲಾ ಕಾರ್ಯಕ್ರಮಗಳೂ ಯಾವುದೇ ವಿಘ್ನಗಳಿಲ್ಲದೇ ಅದ್ದೂರಿಯಿಂದ ಸುಗಮವಾಗಿ ನಡೆಯುತ್ತಿದ್ದವು.

ಒಬ್ಬರು ಮತ್ತೊಬ್ಬರನ್ನು ಸುಲಭವಾಗಿ ಸಂಪರ್ಕಿಸಲೆಂದೇ ಆವಿಷ್ಕರಿಸಿದ ಮೊಬೈಲ್ ಗಳು ಇಂದು ಕ್ಷಣಾರ್ಧದಲ್ಲಿ ಸಂಪರ್ಕವನ್ನು ಸಾಧಿಸುವುದರಲ್ಲಿ ಯಶಸ್ವಿಯಾದರೂ, ಸೌಹಾರ್ಧತೆಯನ್ನು ಬೆಳೆಸುವುದರಲ್ಲಿ ವಿಫಲವಾಗಿ ಮೊಬೈಲ್ ಎನ್ನುವುದೇ ಈಗ ನನ್ನನ್ನೂ ಸೇರಿಸಿ ಆಬಾಲವೃದ್ಧರಾದಿಯಾಗಿ ವ್ಯಸನಕ್ಕೆ ಕಾರಣವಾಗಿರುವುದು ನಿಜಕ್ಕೂ ವಿಷಾಧನೀಯವಾಗಿದ್ದು, ದಯವಿಟ್ಟು ಈ ಲೇಖನ ಓದಿದ ನಂತರವಾದರೂ ಮೊಬೈಲ್ ಎಲ್ಲಾವನ್ನೂ ಪಕ್ಕಕ್ಕಿಟ್ಟು ಆಗ್ಗಾಗ್ಗೆ ಕುಟುಂಬ, ಬಂಧುಮಿತ್ರರೊಡನೆ ಬಾಂಧವ್ಯವನ್ನು ಬೆಳೆಸೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment