ಕುಂಭಮೇಳದ ಸುಂದರಿ ಮೊನಾಲಿಸಾ ವಿವಾಹ ಕೇರಳ ಸ್ಟೋರಿ-3?

ಸರಿ ಸುಮಾರು 2010ರ  ಜುಲೈ ತಿಂಗಳಿನಲ್ಲಿ ಕಮ್ಯೂನಿಸ್ಟ್ ಪಕ್ಷದ ಕೇರಳದ ಮುಖ್ಯಮಂತ್ರಿಗಳಾಗಿದ್ದಂತಹ ವಿ.ಎಸ್. ಅಚ್ಯುತಾನಂದನ್ ಅವರು ಬಲವಂತದ ಮತಾಂತರದ ಮೂಲಕ ಕೇರಳ ರಾಜ್ಯವನ್ನು ಮುಸ್ಲಿಂ ಬಹುಸಂಖ್ಯಾತ ಪ್ರದೇಶವನ್ನಾಗಿ ಪರಿವರ್ತಿಸುವ ಪ್ರಯತ್ನಗಳ ಕುರಿತಾಗಿ ಬಹಿರಂಗವಾಗಿ ಹೇಳಿದ್ದಲ್ಲದೇ ಈ ಪ್ರಕ್ರಿಯೆಗೆ ಲವ್ ಜಿಹಾದ್  ಎನ್ನಲಾಗುತ್ತದೆ ಎನ್ನುವ ಮೂಲಕ ಇಡೀ ದೇಶದ ಗಮನವನ್ನು ಸೆಳೆದರೂ, ಈ ರೀತಿ ಪ್ರೀತಿಯ ಸೋಗಿನಲ್ಲಿ ಬಲವಂತದ ಧಾರ್ಮಿಕ ಮತಾಂತರದ ಆರೋಪಗಳನ್ನು ಪ್ರಸ್ತುತ ಕೇರಳ ಸರ್ಕಾರ, ಮುಸ್ಲಿಂ ನಾಯಕರುಗಳು ಮತ್ತು ಈ ದೇಶದ ಸ್ವಘೋಷಿತ ಬುದ್ದಿಜೀವಿಗಳು ಅಲ್ಲಗಳಿಯುತ್ತಲೇ ಬಂದಿದ್ದು, ಕೇರಳದಲ್ಲಿ ನಡೆಯುತ್ತಿರುವ ಈ ಕೃತ್ಯದ  ಸಂಬಂಧಿತವಾಗಿ ಕೇರಳಾ ಸ್ಟೋರಿ ಎಂಬ ಚಿತ್ರವು  ಮೇ 5, 2023ರಲ್ಲಿ ಬಿಡುಗಡೆಯಾಗಿ ಸದ್ದು ಮಾಡಿದರೆ  ಇದರ ಮುಂದುವರೆದ ಭಾಗವಾಗಿ ಕೇರಳಾ ಸ್ಟೋರಿ -2 2026ರ ಫೆಬ್ರವರಿ 27ರಂದು ಬಿಡುಗಡೆಯಾಗಿರುವ ಸಂಧರ್ಭದಲ್ಲೇ, ಕೇರಳ ಸರ್ಕಾರದ ಮಂತ್ರಿಗಳು ಮತ್ತು ಸಂಸದರುಗಳ  ಉಪಸ್ಥಿತಿಯಲ್ಲೇ ಮಾರ್ಚ್ 11, 2026ರಂದು ಅಂತರ್ಧಮೀಯ ವಿವಾಹವೊಂದು ನಡೆದಿದ್ದು ವಿವಾದಕ್ಕೆ ಕಾರಣೀಭೂತವಾಗಿದೆ.

ಕೇರಳ ಸ್ಟೋರಿ ಸರಣಿ ಚಿತ್ರಗಳಲ್ಲಿ ತೋರಿಸುತ್ತಿರುವುದೆಲ್ಲವೂ ಸುಳ್ಳು ಎಂದು  ಚಿತ್ರದ ಬಿಡುಗಡೆಗೆ ತಡೆ ಕೋರಿದ್ದ ಪ್ರಸಕ್ತ ಕೇರಳ ಸರ್ಕಾರ ಎರಡು ದಿನಗಳ ಹಿಂದೆ ಮಹಾರಾಷ್ಟ್ರ ಮೂಲದ ಮುಸ್ಲಿಂ ಹುಡುಗ, ಮಧ್ಯ ಪ್ರದೇಶ ಮೂಲದ ಹಿಂದೂ ಹುಡುಗಿ, ಉತ್ತರ ಪ್ರದೇಶದಲ್ಲಿ ಪ್ರೀತಿಸಿದನ್ನು ಆ ಹುಡುಗಿಯ ಪೋಷಕರ ವಿರೋಧ ವ್ಯಕ್ತ ಪಡಿಸಿದ್ದರಿಂದ ಅವರುಗಳು ನೇರವಾಗಿ ಕೇರಳಕ್ಕೆ ಬಂದು ಪೋಲೀಸರ ಪೌರೋಹಿತ್ಯದಲ್ಲಿ, ಸಕಲ ಸರ್ಕಾರಿ ಆತಿಥ್ಯದಲ್ಲಿ ನೂರಾರು ಕಮ್ಯೂನಿಸ್ಟ್ ಕಾರ್ಯಕರ್ತರು ಮತ್ತು ರಾಜಕೀಯ ಧುರೀಣರ ಮುಂದೆ ಮದುವೆ ಆಗುತ್ತಾರೆ ಎಂದರೆ ಲವ್ ಜಿಹಾದ್ ಎಂಬುದು ಸರ್ಕಾರೀ ಕೃಪಾಪೋಷಿತ ಅಲ್ಲದೇ ಮತ್ತೇನು? ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಹಾಗೆ ನೋಡಿದರೆ ಈ ಪ್ರಕರಣದ ಹುಡುಗಿ ಈಗಾಗಲೇ ಕೇವಲ ಭಾರತವೇಕೆ ಇಡೀ ವಿಶ್ವಕ್ಕೇ ಅಮಾಯಕ ಹುಡುಗಿ ಎಂದೇ ಚಿರಪರಿತವಾಗಿದ್ದು, 2025ರಲ್ಲಿ ಉತ್ತರ ಪ್ರದೇಶದ ಅಲಹಾಬಾದಿನಲ್ಲಿ ನಡೆದ ಐತಿಹಾಸಿಕ ಕುಂಭಮೇಳದಲ್ಲಿ ರುದ್ರಾಕ್ಷಿ ಹಾರವನ್ನು ಮಾಡುತ್ತಾ, ತನ್ನ ಆಕರ್ಷಕ ಬೆಕ್ಕಿನ ಕಣ್ಣು ಮತ್ತು ಸ್ನಿಗ್ಧ ಸೌಂದರ್ಯದಿಂದ ಇಡೀ ವಿಶ್ವಾದ್ಯಂತ ವೈರಲ್ ಆಗಿದ್ದ ಹಾರ ಮಾರುತ್ತಿದ್ದ ಯುವತಿ ಮೊನಾಲಿಸಾ ಭೋಸ್ಲೆ ಈಗ ಫರ್ಮಾನ್ ಖಾನ್‌ ಎಂಬ ಯುವಕನೊಂದಿಗೆ ಕೇರಳದಲ್ಲಿ ಅಂತರ್‌ಧರ್ಮೀಯ ವಿವಾಹ ಆಗಿ ಮತ್ತೊಮ್ಮೆ ಸುದ್ದಿ ಆಗುವ ಮೂಲಕ, ಜನರು ಇದು  ಲವ್ ಜಿಹಾದ್ ನ ಮತ್ತೊಂದು ಉದಾರಣೆಯಾಗಿದ್ದು ಮುಂದೆ ಇದೇ ಕಥೆ ಕೇರಳ ಸ್ಟೋರಿ-3 ಗೆ ಸ್ಪೂರ್ತಿ ಆ ಬಹುದು ಎನ್ನುತ್ತಿದ್ದಾರೆ ಹಲವರು.

ಉತ್ತರ ಪ್ರದೇಶ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮಧ್ಯಪ್ರದೇಶ ಮೂಲದ ಮೊನಾಲಿಸಾ  ಎನ್ನುವ ಅಮಾಯಕ ಹುಡುಗಿ ಅದಾವುದೋ ಯೂಟ್ಯೂಬರ್ ಕಣ್ಣಿಗೆ ಬಿದ್ದು, ಆಕೆಯ ಕಣ್ಣುಗಳು ಮತ್ತು ಸೌಂದರ್ಯಕ್ಕೆ ಮನೆಸೋತು  ಆಕೆಯನ್ನು ಸತವಾಗಿ ಹಿಂಬಾಲಿಸಿ ಆಕೆಯ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿ ಅದು ವೈರಲ್‌ ಆಗುತ್ತಿದ್ದಂತೆಯೇ, ಕುಂಭಮೇಳಕ್ಕೆ ಸ್ನಾನಕ್ಕೆ ಹೋಗುವುದಕ್ಕಿಂತಲೂ ಮೊನಾಲಿಸಾಳನ್ನು ನೋಡಿ ಅವಳೊಂದಿಗೆ ಪೋಟೋ ತೆಗೆಸಿಕೊಳ್ಳಲೆಂದೇ ಮುಗಿಬಿದ್ದ ಜನರನ್ನು ಕಂಡು ಬೆಚ್ಚಿಬಿದ್ದ ಆಕೆಯ ಕುಟುಂಬ ಕುಂಭಮೇಳದ ಮಧ್ಯದಲ್ಲೇ ಆಕೆಯನ್ನು ಊರಿಗೆ ಕಳುಹಿಸುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಿದ್ದರು. ಮಳೆ ನಿಂತ ಮೇಲೂ ಮರಗಳ ಹನಿಯಿಂದ ನೀರು ಬೀಳುವಂತೆ, ಆಕೆಯನ್ನು ಹಲವರು ದೈವಕನ್ಯೆ ಕರೆಯುವ ಮೂಲಕ  ದೊಡ್ಡ ಮಟ್ಟದಲ್ಲಿ ಆಕೆಯ ಫೋಟೋಗಳು ವೈರಲ್‌ ಮಾಡಿದ ನಂತರ ಮೊನಾಲಿಸಾಗೆ ವಿವಿಧ  ಟಿವಿ ಚಾನೆಲ್ಲುಗಳ ಕಾರ್ಯಕ್ರಮಗಳಲ್ಲಿ ಮತ್ತು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶಗಳೂ ಸಿಕ್ಕಿದ್ದವು.

ಮೊನಾಲಿಸಾ ಪ್ರಮುಖ ಭೂಮಿಕೆಯಲ್ಲಿದ್ದ ದಿ ಡೈರಿ ಆಫ್ ಮಣಿಪುರ ಎಂಬ ಚಿತ್ರವನ್ನು ಸನೋಜ್ ಮಿಶ್ರಾ ನಿರ್ಮಾಣ ಮಾಡಿದ್ದು, ಇದೀಗ ಆಕೆಯ ಮದುವೆ ಬಗ್ಗೆ ತಿಳಿಯುತ್ತಿದ್ದಂತೆಯೇ, ಅಮಾಯಕ ಹುಡುಗಿಗೆ ತಲೆ ಕೆಡಿಸಿ ಈ ರೀತಿಯಾಗಿ ಮದುವೆ ಮಾಡಲಾಗಿದೆ. ಮೊನಾಲಿಸಾಳಿಗೆ ತಾನು ಪ್ರೀತಿಯನ್ನು ಗೆದ್ದಿದ್ದೀನಿ ಎಂದು ಈಗ ಅನಿಸಬಹುದು ಆದರೆ ವಾಸ್ತವದಲ್ಲಿ, ಇದು ಲವ್ ಜಿಹಾದ್ ಆಗಿದ್ದು, ಅದಕ್ಕೆ ಅವಳು ಬಲಿಯಾಗಿದ್ದು ಈ ಮದುವೆಯ ಹಿಂದೆ ಆಕೆಯ ಮ್ಯಾನೇಜರ್ ಮತ್ತು ಬ್ರೋಕರ್ ಸಹಕಾರವೂ ಇರಬಹುದು ಎಂದು ಆರೋಪಿಸಿರುವುದಲ್ಲದೇ, ಆಕೆಯು ಗಂಗೆಯ ಮಗಳೆಂದು ಭಾವಿಸಿ ಅವಳಿಗೆ ಶಿಕ್ಷಣ ನೀಡುವ ಸಲುವಾಗಿ ಆಕೆಯನ್ನು ನನ್ನ ಸಿನಿಮಾದ ನಾಯಕಿಯಾಗಿ ಆರಿಸಿಕೊಂಡಿದ್ದೆ ಮತ್ತು ಅದಕ್ಕಾಗಿ 10 ಕೋಟಿ ಸಾಲ ಪಡೆದು ಜೈಲಿಗೆ ಹೋಗಿದ್ದೆ. ಈಗ ಒಬ್ಬ ಮುಸ್ಲಿಂ ಯುವಕನ ಜೊತೆ ಓಡಿ ಹೋಗಿ ಎಲ್ಲವನ್ನೂ ನಾಶಮಾಡಿದ್ದಾಳೆ. ಇದು ಪ್ರೀತಿಯ ಹೋರಾಟವಲ್ಲ. ಇದು ಖಂಡಿತವಾಗಿಯೂ ಲವ್ ಜಿಹಾದ್ ಎಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಮದುವೆಯ ನಂತರ ತಿರುವನಂತಪುರಂನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮೊನಾಲಿಸಾ ಭೋಂಸ್ಲೆ ಮತ್ತು ಆಕೆಯ ಪತಿ ಫರ್ಹಾನ್ ಖಾನ್, ಲವ್ ಜಿಹಾದ್ ಅಥವಾ ಮತಾಂತರ ಮಾಡಲಾಗಿದೆ ಎಂಬ ಆರೋಪಗಳು ಸಂಪೂರ್ಣ ಸುಳ್ಳಾಗಿದ್ದು, ತಾವಿಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಈ ಮದುವೆ ಮಾಡಿಕೊಂಡಿದ್ದು ಇದರಲ್ಲಿ ಯಾವುದೇ ಬಲವಂತ ಅಥವಾ ಮತಾಂತರದ ವಿಷಯವೇ ಇಲ್ಲ ಮತ್ತು ಆಕೆ ಪ್ರಾಪ್ತ ವಯಸ್ಕಳಾಗಿದ್ದಾಳೆ ಎನ್ನುವುದಕ್ಕೆ ಆಕೆಯ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣ ಪತ್ರವನ್ನು ತೋರಿಸಿದ್ದಾರೆ.

ಹಾಗೆಯೇ ಮಾತನ್ನು ಮುಂದುವರೆಸಿದ ದಂಪತಿಗಳು ತಮ್ಮಿಬ್ಬರಲ್ಲಿ ಯಾರೂ ಮತಾಂತರಗೊಂಡಿಲ್ಲ. ಮದುವೆ ಆದ ನಂತರವೂ ತಾವಿಬ್ಬರು ನಮ್ಮ ನಮ್ಮ ಧರ್ಮದಲ್ಲೇ ಉಳಿಯುವುದಾಗಿ ತಿಳಿಸಿದ್ದಾರೆ.   ಫರ್ಹಾನ್ ಖಾನ್ ಅವರನ್ನು ಮದುವೆಯಾಗುವ ನಿರ್ಧಾರ ಸಂಪೂರ್ಣವಾಗಿ ತನ್ನದೇ ಎಂದ ಮೊನಾಲಿಸಾ, ಆರಂಭದಲ್ಲಿ ಫರ್ಹಾನ್ ಅವರಿಗೆ ಮದುವೆಯ ಬಗ್ಗೆ ಹಿಂಜರಿಕೆ ಇತ್ತಾದರೂ, ನಾನೇ ಪಟ್ಟು ಹಿಡಿದು ಹಿಂದೂ ಸಂಪ್ರದಾಯದಂತೆ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದು, ನಮ್ಮ ವಿವಾಹವನ್ನು ಕೇರಳ ಸರ್ಕಾರದ K-SMART ಆ್ಯಪ್ ಮೂಲಕ ಕಾನೂನುಬದ್ಧವಾಗಿ ನೋಂದಣಿ ಮಾಡಿಸಿ, ನಾವಿಬ್ಬರೂ ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತೇವೆ ಎಂದು ಫರ್ಹಾನ್ ಖಾನ್ ಮತ್ತು ಮೊನಾಲಿಸಾ ತಿಳಿಸಿದ್ದಾರೆ.

ಕುಂಭಮೇಳದ ಮೊನಾಲಿಸಾ ಎಂದೇ ಪ್ರಸಿದ್ದಿಯಾದ ನಂತರ ಚಿತ್ರವೊಂದರ ಚಿತ್ರೀಕರಣದ ಸಂದರ್ಭದಲ್ಲಿ ನಟ ಮತ್ತು ರೂಪದರ್ಶಿಯಾದ ಫರ್ಮಾನ್ ಖಾನ್ ಅವರ ಭೇಟಿಯಾದ ಮೊದಲ ನೋಟದಲ್ಲೇ ಪ್ರೇಮವಾಗಿ, ಸುಮಾರು ಆರು ತಿಂಗಳುಗಳ ಕಾಲ ಪ್ರೀತಿಸಿ ಈಗ ಅದು ಮದುವೆಯಲ್ಲಿ ಅಂತ್ಯಗೊಂಡಿದೆ. ಈ ವಿವಾಹಕ್ಕೆ ಮೊನಲಿಸಾಳ  ಕುಟುಂಬದಿಂದ ತೀವ್ರ ವಿರೋಧ ಇದ್ದ ಕಾರಣ,  ಕೇರಳದ ತಿರುವನಂತಪುರಂನಲ್ಲಿರುವ ಥಂಪನೂರು ಪೊಲೀಸ್ ಠಾಣೆಗೆ ಹೋಗಿ ರಕ್ಷಣೆ ಕೋರಿದಾಗ, ಅವರುಗಳು ಅಗತ್ಯ ವಿಚಾರಣೆ ನಡೆಸಿ, ಮೊನಾಲಿಸಾ ವಯಸ್ಕಳಾಗಿದ್ದು ಅವಳು ಯಾರನ್ನು ಮದುವೆಯಾಗಬೇಕೆಂದು ನಿರ್ಧರಿಸುವ ಕಾನೂನುಬದ್ಧ ಹಕ್ಕನ್ನು ಹೊಂದಿದ್ದಾಳೆ ಎಂದು ಪೊಲೀಸರು ತೀರ್ಮಾನಿಸಿ ಮಾರ್ಚ್ 11, 2026ರಂದು ಕೇರಳದ ತಿರುವನಂತಪುರದ ಪೂವಾರ್ ಬಳಿಯ ಅರುಮನೂರ್ ನೈನಾರ್ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಕೇರಳ ಸರ್ಕಾರದ ಮಂತ್ರಿಗಳು, ಸಾಂಸದರು ಮತ್ತು  ಅನೇಕ ರಾಜಕೀಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಅವರಿಬ್ಬರ ಮದುವೆ ಮಾಡಿಸಿರುವುದು ಈಗ ಅಚ್ಚರಿಗೆ ಕಾರಣವಾಗಿದೆ.

ಈಗಾಗಲೇ ತಿಳಿಸಿದಂತೆ, ಮಧ್ಯಪ್ರದೇಶದ ಹುಡುಗಿ, ಮಹಾರಾಷ್ಟ್ರದ ಹುಡುಗ ಉತ್ತರ ಪ್ರದೇಶದಲ್ಲಿ ಪ್ರೀತಿಸಿ ಮದುವೆ ಆಗಬೇಕೆಂದು ಬಯಸಿದಲ್ಲಿ ಕೇರಳಕ್ಕೆ ಬರುವ ಅಗತ್ಯವೇನಿತ್ತು?  ಒಂದು ಪಕ್ಷ ಅವರು ಯಾವುವೋ ವಿಷಯಕ್ಕಾಗಿ ಕೇರಳಕ್ಕೆ ಬಂದಿದ್ದರೂ,  ಆ ಮದುವೆಯನ್ನು ತುರಾತುರಿಯಲ್ಲಿ ಪೋಲೀಸರ ಪೌರೋಹಿತ್ಯದಲ್ಲಿ ಸರ್ಕಾರದ ವತಿಯಿಂದ ಏಕೆ ನಡೆಸಲಾಯಿತು?  ದಾಖಲೆಗಳ ಪ್ರಕಾರ ಮೊನಾಲಿಸಾ ಜನವರಿ 1, 2008 ರಂದು ಜನಿಸಿದ್ದು ಈಗಷ್ಟೇ 18 ವರ್ಷ ವಯಸ್ಸಾಗಿದ್ದು, ಇನ್ನೂ ಜೀವನದಲ್ಲಿ ಸಾಧಿಸುವುದು ಬಹಳಷ್ಟು ಇರುವಾಗ, ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಮದುವೆ ಮಾಡಿಸುವ ಅಗತ್ಯವೇನಿತ್ತು? ಎಂದು ಆಕೆಯ ಪೋಷಕರು ಕೇಳುತ್ತಿರುವುದರಲ್ಲಿ ಸತ್ಯವಿದೆ ಎಂದೆನಿಸುತ್ತದೆ.

ಇನ್ನು ಈ ಮದುವೆಯ ಸಮಯದಲ್ಲಿ ಖುದ್ದಾಗಿ ಹಾಜರಿದ್ದ ಕೇರಳದ ಸಚಿವ ಶಿವನ್‌ಕುಟ್ಟಿ ಈ ವಿವಾಹ ರಾಜ್ಯಕ್ಕೆ ಹೆಮ್ಮೆಯ ಕ್ಷಣವಾಗಿದ್ದು, ಇದುವೇ ನಿಜವಾದ ಕೇರಳದ ಕಥೆ ಎಂದ್ದಿದ್ದಾರೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಮತ್ತು ಸಂಸದ ಎ.ಎ. ರಹೀಮ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ಈ ಮದುವೆಯಲ್ಲಿ ಉಪಸ್ಥಿತರಿದ್ದು, ಸಂಸದ ರಹೀಮ್, ಈ ವಿವಾಹವು ಕೇರಳದ ಕೋಮು ಸೌಹಾರ್ದತೆಯ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ. ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಮತ್ತು ಆ ಸ್ವರ್ಗವೇ ಕೇರಳ ಎಂದು ಈ  ಮದುವೆಯನ್ನು ಸಮರ್ಥಿಸಿಕೊಳ್ಳುವುದನ್ನು ನೋಡಿದರೆ, ಇನ್ನೇನು ಕೆಲವೇ ತಿಂಗಳುಗಳಲ್ಲಿ ಕೇರಳದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮುಸಲ್ಮಾನರ ಮತಗಳತ್ತ ಕಣ್ಣಿಟ್ಟಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ

ಯಾವುದೋ ರಾಜ್ಯದಲ್ಲಿ ಪ್ರೀತಿಸಿದ ಜೋಡಿಯಲ್ಲಿ ಹುಡುಗ ಮುಸ್ಲಿಂ ಎಂಬ ಏಕೈಕ ಕಾರಣಕ್ಕಾಗಿ ಕೇರಳದಲ್ಲಿ ಮದುವೆ ಮಾಡಿಸುತ್ತಾರೆ  ಎಂದರೆ, ಲವ್ ಜಿಹಾದ್ ಎನ್ನುವುದು ಅವ್ಯಾಹತವಾಗಿ ನಡೆಯುತ್ತಿದ್ದು ಅದಕ್ಕೆ ಕೇರಳ ಸರ್ಕಾರದ ಪ್ರತ್ಯಕ್ಷ/ಪರೋಕ್ಷ ಬೆಂಬಲವಿದೆಯೇ? ಮದುವೆ ಬಳಿಕ ಆ ಜೋಡಿ ರಿಯಲ್ ಕೇರಳ ಸ್ಟೋರಿ ಎಂದು ಬರೆದ ನಾಮಫಲಕ ಪ್ರದರ್ಶನ ಮಾಡಿರುವುದು ಇದಕ್ಕೆ ಪುಷ್ಟಿಯನ್ನು ಕೊಡುತ್ತಿದೆ. ಇನ್ನು ಮುಂದೆ ಮನೆಯವರ ವಿರೋಧದ ನಡುವೆ ಪ್ರೀತಿಸಿ ಓಡಿ ಹೋಗಿ ಮದುವೆ ಆಗುವ ದೇಶದ ಎಲ್ಲಾ ಅಂತರ್ಧಮೀಯ ಪ್ರೇಮಿಗಳಿಗೂ ಕೇರಳ ಸರ್ಕಾರವೇ ಮದುವೆ ಮಾಡಿಸುವುದೇ? ಎಂದು ಜನರು ಕೇಳುತ್ತಿರುವುದರಲ್ಲಿ ಸತ್ಯವಿದೆ ಎಂದನಿಸುತ್ತಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment