ಸ್ವಾತ್ರಂತ್ರ್ಯ ಹೋರಾಟದ ಸಂಧರ್ಭದಲ್ಲಿ ಸ್ವಾತ್ರಂತ್ರ್ಯದ ಕಲ್ಪನೆ ಹೇಗಿರಬೇಕು? ಎಂದು ಹಿರಿಯ ಹೋರಾಟಗಾರರನ್ನು ಪತ್ರಕರ್ತರೊಬ್ಬರು ಕೇಳಿದಾಗ, ಅ ಹಿರಿಯರು, ನಮ್ಮ ದೇಶದಲ್ಲಿ ಸ್ವಾಂತ್ರಂತ್ರ್ಯ ಹೇಗಿರಬೇಕೆಂದರೆ, ತಡರಾತ್ರಿ 12ರ ಸಮಯದಲ್ಲೂ ಮಹಿಳೆಯರು ನಿರ್ಭಿಡೆಯಾಗಿ ರಸ್ತೆಗಳಲ್ಲಿ ಪುರುಷರಂತೆಯೇ ಓಡಾಡುವಂತಹ ಸ್ವಾತಂತ್ರ್ಯವನ್ನು ಹೊಂದಿರಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಸ್ವಾತ್ರಂತ್ರ್ಯ ಬಂದು 75+ ವರ್ಷಗಳಾದರೂ, ಆ ರೀತಿಯ ಸ್ವಾತ್ರಂತ್ರ್ಯ ಇಂದಿಗೂ ಕನಸಾಗಿಯೇ ಉಳಿದಿದ್ದು, ಹಗಲು ಹೊತ್ತಿನಲ್ಲಿಯೇ ಅಪರಿಚಿತ ಪ್ರದೇಶ ಬಿಡಿ ಪರಿಚಿತ ಪ್ರದೇಶದಲ್ಲೂ ಒಬ್ಬಂಟಿ ಹೆಣ್ಣು ಓಡಾಡಲು ಭಯ ಪಡಬೇಕಾದಂತಹ ಪರಿಸ್ಥಿತಿ ಇರುವಾಗ, ಕಳೆದ ವಾರ ತಡರಾತ್ರಿ 3 ಗಂಟೆಯ ಸಮಯದಲ್ಲಿ ಒಬ್ಬಂಟಿ ಯುವತಿಯೊಬ್ಬರಿಗೆ ಇಬ್ಬರು ಅಪರಿಚಿತರು, ಆಕೆ ಸುರಕ್ಷಿತವಾಗಿ ತನ್ನ ಮನೆಯನ್ನು ತಲುಪಲು ನೆರವಾಗಿ, ಅದರಿಂದ ಸಂತುಷ್ಟಳಾದ ಆಕೆ ಕೃತಜ್ಞತಾ ಪೂರ್ವಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವೀಡಿಯೋ ವೈರಲ್ ಆಗಿದೆ
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸುರಕ್ಷಿತವಾಗಿಲ್ಲಾ ಹಾಗಾಗಿ ಬೆಂಗಳೂರನ್ನು ಬಿಟ್ಟು ಹೋಗುತ್ತಿದ್ದೇವೆ ಎಂದು ಬೊಬ್ಬಿರಿವ ಕೆಲವು ಅಡ್ಡ ಕಸುಬಿ ಜನಗಳಿಗೆ, ಬೆಳಗಿನ ಜಾವ 3 ಗಂಟೆಯ ಸಮಯಲ್ಲೂ ಹೆಣ್ಣುಮಕ್ಕಳು ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಓಡಾಡಬಹುದು. ಆಕೆಯ ರಕ್ಷಣೆಗಾಗಿ ಅಪರಿಚಿತರೂ ಸಹಾ ಯಾವುದೇ ಸ್ವಾರ್ಥವಿಲ್ಲದೇ ಸಹಾಯ ಮಾಡುತ್ತಾರೆ ಎಂಬ ಈ ಹೃದಯಸ್ಪರ್ಶಿ ಘಟನೆಯ ವಿಡಿಯೋ ಪ್ರಪಂಚಾದ್ಯಂತ ವೈರಲ್ ಆಗುವ ಮೂಲಕ ಮತ್ತೆ ಎಲ್ಲರೂ ಬೆಂಗಳೂರಿನತ್ತ ಮುಖ ಮಾಡುವಂತಾಗಿದೆ ಎಂದರೂ ತಪ್ಪಾಗದು. ಸಿಲಿಕಾನ್ ಸಿಟಿ ಬೆಂಗಳೂರು ಎಂದರೆ ಸಾವಿರಾರು ಸ್ಟಾರ್ಟ್ಪಪ್ ಗಳಿರುವ ನಗರವಾಗಿದ್ದು, ಸದಾ ಕಾಲವೂ ಟ್ರಾಫಿಕ್ ಸಮಸ್ಯೆಯಿಂದಾಗಿ, ಜನರ ಜೀವನ ಯಾಂತ್ರಿಕವಾಗಿದೆ. ಸದಾ ಕಾಲವೂ ಇಲ್ಲಿ ಕನ್ನಡಿಗರೂ ಮತ್ತು ಉತ್ತರ ಭಾರತೀಯರ ನಡುವೆ ಅಸ್ಮಿತೆಗಾಗಿ ಜಗಳ ಸಾಮಾನ್ಯವಾಗಿದ್ದು, ಇಲ್ಲಿನ ಜನರಿಗೆ ಮನುಷ್ಯತ್ವವೇ ಇಲ್ಲಾ ಎಂಬಂತಹ ಕೆಟ್ಟ ಸುದ್ದಿಯೇ ಎಲ್ಲೆಡೆಯಲ್ಲಿ ಹರಡಿ, ನೀರು ಕೇಳಿದರೆ, ನೀರಿನ ಜೊತೆಗೆ ಬಾಯಾರೀಕೆಯನ್ನು ತಣಿಸುವ ಬೆಲ್ಲವನ್ನು ನೀಡುವ ಕನ್ನಡಿಗರ ಔದಾರ್ಯವನ್ನು ಮರೆಮಾಚುವಂತಹ ಕೆಟ್ಟ ಸುದ್ದಿಗಳ ನಡುವೆಯೂ ಮರುಭೂಮಿಯಲ್ಲಿ ಓಯಸಿಸ್ ನಲ್ಲಿ ನೀರು ಸಿಗುವಂತೆ ತಡರಾತ್ರಿ ಒಬ್ಬಂಟಿಯಾಗಿದ್ದ ಯುವತಿಯ ಸುರಕ್ಷತೆಗಾಗಿ ಇಬ್ಬರು ಅಪರಿಚಿತ ಗಂಡಸರು ತೋರಿದ ಕಾಳಜಿ ಈಗ ಲಕ್ಷಾಂತರ ಜನರ ಹೃದಯ ಗೆದ್ದಿದೆ.
2026ರ ಏಪ್ರಿಲ್ 05 ರಂದು ಐಶ್ವರ್ಯ ಕಲ್ಪಾರ್ಜುನ್ ಎಂಬ ಒಬ್ಬಂಟಿ ಯುವತಿ ಪರ ರಾಜ್ಯದಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಆಕೆ ಏರ್‌ಪೋರ್ಟ್‌ನ ವಾಯುವಜ್ರ ಬಸ್ ನ ಮೂಲಕ ಕಾಡುಗೋಡಿಗೆ ಬಂದಿಳಿಯುವಷ್ಟರಲ್ಲಿ ಸಮಯ ಸರಿಸುಮಾರು 3 ಗಂಟೆ ಆಗಿರುತ್ತದೆ. ಆ ಬಸ್ ನಿಲ್ದಾಣದಿಂದ ಆಕೆಯ ಮನೆ ಕೇವಲ 3 ಕಿಲೋಮೀಟರ್ ಇದ್ದದ್ದರಿಂದಲೋ ಏನೋ, ಅಷ್ಟು ಕಡಿಮೆ ದೂರಕ್ಕೆ ಬರಲು ಯಾವುದೇ ಟ್ಯಾಕ್ಸಿ ಅಥವಾ ಆಟೋಗಳು ಬರಲು ಸಿದ್ಧವಿರಲಿಲ್ಲ ಮತ್ತು ದುರಾದೃಷ್ಟವಷಾತ್ ಅಷ್ಟು ತಡರಾತ್ರಿಯಲ್ಲಿ ಆನ್‌ಲೈನ್ ಟ್ಯಾಕ್ಸಿ ಆ್ಯಪ್‌ಗಳ ಮೂಲಕ ಯಾವುದೇ ಟ್ಯಾಕ್ಸಿ ಇಲ್ಲವೇ ಆಟೋಗಳ ರೈಡ್ ಬುಕ್ ಆಗದೇ ಆ ಯುವತೆ ಜನನಿಭಿಡ ರಸ್ತೆಯಲ್ಲಿ ಒಬ್ಬಂಟಿಯಾಗಿ ಮನೆಗೆ ಹೋಗುವುದು ಹೇಗೆ ಎಂದು ಭಯದಿಂದ ನಿಂತಿದ್ದ ಸಂಧರ್ಭದಲ್ಲಿ, ದೇವರಂತೆ ಬಂದ ಅಪರಿಚಿತ ಬಸ್ ಕಂಡಕ್ಟರ್ ಒಬ್ಬರು ಆಕೆಯನ್ನು ಮಾತನಾಡಿಸಿ, ನಿಮಗೆ ಟ್ಯಾಕ್ಸಿ ಸಿಗುವವರೆಗೂ ನಾನು ನಿಮ್ಮ ಜೊತೆಯಲ್ಲೇ ಇರುತ್ತೇನೆ. ನೀವು ಭಯಪಡಬೇಡಿ ಎಂದು ಧೈರ್ಯ ಹೇಳೀದ್ದಲ್ಲದೇ, ಆಕೆಗಾಗಿ ಟ್ಯಾಕ್ಸಿ ಇಲ್ವೇ ಆಟೋ ಸಿಗುವಂತಾಗಲೂ ಆ ಸಮಯದಲ್ಲಿ ಆ ರಸ್ತೆಯಲ್ಲಿ ಬಂದ ಎಲ್ಲಾ ವಾಹನಗಳಿಗೂ ಕೈ ತೋರಿಸಿ ಸಹಾಯ ಹಸ್ತ ಚಾಚಿದ್ದಾರೆ.
ಹೀಗೆ ಅಪರಿಚಿತ ವ್ಯಕ್ತಿಯು ತನ್ನ ನೆರವಿಗೆ ಬಂದ ನಂತರ ಸ್ವಲ್ಪ ಧೈರ್ಯ ತೆಗೆದುಕೊಂಡ ಆಕೆ ನಿರಂತವಾಗಿ ಯಾವುದೇ ಕ್ಯಾಬ್ ಮತ್ತು ಆಟೋಗಳು ಬುಕಿಂಗ್ ಆಗದೇ ಹೋಗಿ ಪರಿಸ್ಥಿತಿ ಮತ್ತಷ್ಟು ಜಟಿಲವಾಗುತ್ತಿದ್ದಂತೆಯೇ, ಅದೇ ಸಮಯಕ್ಕೆ ಅಲ್ಲಿಗೆ ಖಾಲಿಯಾಗಿ ರಾಪಿಡೋ ಡ್ರೈವರ್ ಬಂದ್ದದ್ದನ್ನು ಗಮನಿಸಿ ಅವರನ್ನು ನಿಲ್ಲಿಸಿದ ಆಕೆ, ದಯವಿಟ್ಟು ನನ್ನನ್ನು ಮನೆಯವರೆಗೂ ತಲುಪಿಸಲು ಸಾಧ್ಯವೇ? ಎಂದು ಕೊಂಡಾಗಾ, ಆ ಡ್ರೈವರ್ ತುಟಿಕ್ ಪಿಟಿಕ್ ಎನ್ನದೇ, ಸರಿ ಗಾಡಿ ಹತ್ತಿ ಮೇಡಂ ಎಂದಿದ್ದಾರೆ. ಹೆಸರು ಐಶ್ವರ್ಯ ಎಂದಿದ್ದರೂ, ತನ್ನ ಬಳಿ ಎಷ್ಟೇ ಹಣವಿದ್ದರೂ, ಪರಿಸ್ಥಿತಿ ಎಂತಹದ್ದಾಗಿದ್ದರೂ, ಹಣ ಎಂದ ಮೇಲೆ ಆಕೆಯಲ್ಲಿ ಸುಪ್ತ ಮನಸ್ಸು ಜಾಗೃತವಾಗಿ, ಅಣ್ಣಾ ಮೂರು ಕಿ.ಮೀ. ದೂರವಿರುವ ನಮ್ಮ ಮನೆಗೆ ಎಷ್ಟು ಹಣ ಕೊಡಬೇಕು? ಎಂದು ಮುಗ್ಧವಾಗಿ ಕೇಳಿದ್ದಾಳೆ.
ಅಯ್ಯೋ ಮೇಡಂ, ಈ ತಡ ರಾತ್ರಿಯಲ್ಲಿ ಹಣದ ಬಗ್ಗೆ ಚಿಂತೆ ಮಾಡಬೇಡಿ ನಿಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನದು. ಮೊದಲು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಮ್ಯಾಪ್ ಹಾಕಿ ನಿಮ್ಮ ಮನೆಯ ಲೋಕೇಷನ್ ತೋರಿಸಿ ಎಂದು ಹೇಳಿದಾಗ ಇನ್ನು ಹೆಚ್ಚು ಮಾತನಾಡಿದರೆ ಸಿಕ್ಕವರೂ ನನ್ನನ್ನು ಬಿಟ್ಟು ಹೋಗಬಹುದು ಎಂದು ತಿಳಿದು, ತನ್ನ ಸುರಕ್ಷತೆಗಾಗಿ ಅಷ್ಟು ಹೊತ್ತು ತನ್ನ ಜೊತೆಯೇ ಕಾಯುತ್ತಿದ್ದ ಆ ಬಸ್ ಕಂಡಕ್ಟರ್ ಅವರಿಗೆ ಹೃದಯಪೂರ್ಕವಾಗಿ ಕೃತಜ್ಞತೆಗಳನ್ನು ಅರ್ಪಿಸಿ ರಾಪಿಡೋ ಗಾಡಿಯಲ್ಲಿ ಕುಳಿತುಕೊಂಡಿದ್ದಾರೆ ಐಶ್ವರ್ಯ.
ಅಬ್ಬಾ ಬೆಟ್ಟದಂತೆ ಎರಗಿ ಬಂದಿದ್ದ ಸಂಕಷ್ಟ ಮೇಣದಂತೆ ಕರಗಿ ಹೋಯಿತಲ್ಲಾ.. ಅದಕ್ಕೇ ಹೇಳೋದು ಭಗವಂತ ಇದ್ದಾನೆ ಎಂದು ಯೋಚಿಸುವಷ್ಟರಲ್ಲೇ ರಾಪಿಡೋ ಗಾಡಿ ಆಕೆಯ ಮನೆಯ ಮುಂದೆ ಬಂದು ನಿಂತು, ಮೇಡಂ ನಿಮ್ಮ ಲೊಕೇಷನ್ ಬಂದಿದೆ ಎಂದು ಹೇಳಿದಾಗಲೇ ಆಕೆ ವಾಸ್ತವಕ್ಕೆ ಮರಳಿ, ಅಣ್ಣಾ ಇಷ್ಟು ಹೊತ್ತಿನಲ್ಲಿ ನನ್ನನ್ನು ಮನೆಗೆ ತಲುಪಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನಿಮ್ಮೀ ಸಹಾಯಕ್ಕಾಗಿ ನಾನು ಎಷ್ಟು ಹಣದ ಕೊಡಬೇಕು? ಎಂದು ಕೇಳಿದ್ದಕ್ಕೆ, ಮೇಡಂ ಈಗಾಗಲೇ ತುಂಬಾ ಸಮಯವಾಗಿದೆ. ಈ ತಡರಾತ್ರಿಯಲ್ಲಿ ಒಬ್ಬ ಮಹಿಳೆಯ ಸುರಕ್ಷಿತವಾಗಿ ಮನೆಗೆ ತಲುಪಿಸುವುದು ನನ್ನ ಜವಾಬ್ದಾರಿಯಾಗಿತ್ತು ಹಾಗಾಗಿ ನಾನು ಇಷ್ಟೇ ಹಣ ಕೊದಿ ಎಂದು ಕೇಳುವುದಿಲ್ಲ. ನನ್ನ ಸೇವೆಗೆ ನಿಮಗೆ ಎಷ್ಟು ಕೊಡಬೇಕು ಎನಿಸುತ್ತದೆಯೋ ಅಷ್ಟನ್ನೇ ಕೊಡಿ ಎಂದಾಗಲಂತೂ ಅಕೆಗೆ ಅಚ್ಚರಿಯಾಗಿದೆ. ಇಂತಹ ಪರಿಸ್ಥಿತಿಯ ದುರ್ಲಾಭವನ್ನು ಪಡೆದುಕೊಂಡು ಸಾವಿರಾರು ರೂಪಾಯಿ ಹಣವನ್ನು ಕೀಳುವವರೇ ಹೆಚ್ಚಾಗಿರುವಾಗಿ ಹೀಗೂ ಉಂಟೇ!! ಎಂದನಿಸಿದೆ.
ತಡ ರಾತ್ರಿ 3 ರ ಸಮಯದಲ್ಲಿ ಇಬ್ಬರು ಅಪರಿಚಿತರು ತನಗಾಗಿ ತೋರಿದ ಔದಾರ್ಯತೆಗಾಗಿ ಕೃತಜ್ಞತಾ ಪೂರ್ವಕವಾಗಿ ಆಕೆ ಮಾಡಿರುವ ವಿಡಿಯೋಗೆ ಶೀರ್ಷಿಕೆಯಾಗಿ ಎಲ್ಲಾ ಗಂಡಸರೂ ಒಂದೇ ತರಹ ಇರುವುದಿಲ್ಲ. ಇಂದು ನೀವು ನೋಡಿದ ಅತ್ಯಂತ ಸುಂದರವಾದ ವಿಚಾರ ಇದಾಗದಿರಬಹುದು, ಆದರೆ ನನಗೆ ಇದು ನಿಜಕ್ಕೂ ವಿಶೇಷ. ನಡುರಾತ್ರಿ 3 ಗಂಟೆಗೆ ಹೊಸ ನಗರದಲ್ಲಿ ಇಬ್ಬರು ಅಪರಿಚಿತರು ನನಗೆ ತೋರಿದ ಕಾಳಜಿ ನನಗೆ ಸುರಕ್ಷತೆಯ ಭಾವನೆ ಮೂಡಿಸಿತು. ಒಬ್ಬಂಟಿ ಮಹಿಳೆಯಾಗಿ ಪ್ರಯಾಣಿಸುವಾಗ ಸಿಗುವ ಈ ನೆಮ್ಮದಿ ಎಂಥದ್ದು ಎಂಬುದು ಹೆಣ್ಣುಮಕ್ಕಳಿಗೆ ಮಾತ್ರ ಅರ್ಥವಾಗುತ್ತದೆ. ಇಂತಹ ಘಟನೆಗಳು ಅಪರೂಪ ಎಂಬುದು ನಿರಾಸೆ ಮೂಡಿಸಿದರೂ, ಇದು ನೆನಪಿನಲ್ಲಿ ಉಳಿಯುವಂತದ್ದು ಎಂದು ಹೇಳಿರುವಲ್ಲದೇ ಅದನ್ನೇ ಆಕೆ ತನ್ನ ಎಕ್ಸ್ ಖಾತೆಯಲ್ಲಿ ಲಗ್ಗತಿಸಿರುವುದು ಈ ಮೊದಲೇ ಹೇಳಿದಂತೆ ಎಲಾ ಕಡೆಯಲ್ಲೂ ವೈರಲ್ ಆಗಿದ್ದು ಜನರೂ ಸಹಾ ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಐಶ್ವರ್ಯ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾವಿರಾರು ನೆಟ್ಟಿಗರು ತಮ್ಮ ಅಭಿಪ್ರಾಯಗಳ ಸುರಿಮಳೆಯನ್ನೇ ಹರಿಸಿದ್ದು, ಇಂತಹ ಘಟನೆಗಳು ಮಾನವೀಯತೆಯ ಮೇಲಿನ ನಂಬಿಕೆಯನ್ನು ಮರುಕಳಿಸುವಂತೆ ಮಾಡುತ್ತವೆ ಎಂದು ಹೆಚ್ಚಿನವರು ಶ್ಲಾಘಿಸಿದ್ದಾರೆ. ಆ ತಡ ರಾತ್ರಿಯಲ್ಲೂ ಅಪರಿಚಿತ ಯುವತಿಗೆ ವಾಹನ ಸಿಗುವವರೆಗೂ ಆಕೆಯ ಜೊತೆಯಲ್ಲಿದ್ದ ಆ ಅಪರಿಚಿತ ಬಸ್ ಕಂಡಕ್ಟರ್ ಅವರ ಕಾರ್ಯವನ್ನೂ ಸಹಾ ಶ್ರೇಷ್ಠ ಮತ್ತು ಇದುವೇ ನೈಜ ಮಾನವೀಯತೆ ಎಂದು ಮತ್ತೊಬ್ಬರು ಅಭಿಪ್ರಾಯವನ್ನು ವ್ಯತಪಡಿಸಿದ್ದಾರೆ. ಇನ್ನೊಬ್ಬ ಮಹನೀಯರು, ಇಂತಹ ಸಣ್ಣ ಸಣ್ಣ ಕಾಳಜಿಯ ನಡೆಗಳು ಹೊಸ ಊರಿನಲ್ಲಿ ಮಹಿಳೆಯರಿಗೆ ಭರವಸೆ ಮೂಡಿಸುತ್ತವೆ ಎಂದು ಬರೆದಿದ್ದಾರೆ.
ಹೀಗೆ ಒಟ್ಟಾರೆಯಾಗಿ ಬೆಂಗಳೂರೇ ಸರಿ ಇಲ್ಲಾ, ಇಲ್ಲಿರುವ ಕನ್ನಡಿಗರಿಗೆ ಮಾನವೀಯತೆಯೇ ಇಲ್ಲಾ ಎಂದು ಹೇಳುತ್ತಾ ಪದೇ ಪದೇ ಕನ್ನಡಿಗರ ಸ್ವಾಭಿಮಾನವನ್ನು ಕೆಣುಕುತ್ತಾ ಆರನ್ನು ಉದ್ರೇಕಿಸುವ ಜನರೇ ಹೆಚ್ಚಾಗಿರುವ ಇಂದಿನ ಕಾಲದಲ್ಲೂ ಹಣಕ್ಕಿಂತಲೂ ಮಾತವೀಯತೆಯೇ ಮುಖ್ಯ.
ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ |
ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಾಫಲಾಃ ಕ್ರಿಯಾಃ || ಎಂದರೆ ಸ್ತ್ರೀಯರನ್ನು ಗೌರವಿಸುವ ಮತ್ತು ಆದರಿಸುವ ಸ್ಥಳದಲ್ಲಿ ದೇವತೆಗಳು ನೆಲೆಸುತ್ತಾರೆ. ಎನ್ನುವ ಈ ಪ್ರಸಿದ್ಧ ಮನುಸ್ಮೃತಿ ಶ್ಲೋಕದಲ್ಲಿ ಸ್ತ್ರೀಶಕ್ತಿ, ಗೌರವ ಮತ್ತು ಸಮಾನತೆಯನ್ನು ಎತ್ತಿಹಿಡಿಯುತ್ತದೆ. ಹಾಗೆಯೇ ಶ್ಲೋಕದ ಮುಂದುವರೆದ ಭಾಗವಾಗಿ ಎಲ್ಲಿ ಹೆಣ್ಣಿಗೆ ಗೌರವ ಸಿಗುವುದಿಲ್ಲವೋ ಅಂತಹ ಸ್ಥಳಗಳಲ್ಲಿ ಅವರು ಮಾಡುವ ಎಲ್ಲಾ ಪೂಜೆ/ಕಾರ್ಯಗಳು ನಿಷ್ಫಲವಾಗುತ್ತವೆ ಎಂದಿರುವುದನ್ನೇ ಅಕ್ಷರಶಃ ಮಾಡಿತೋರಿಸಿರುವ ಆ ಕಂಡೆಕ್ಟರ್ ಮತ್ತು ರಾಪಿಟೋ ಚಾಲಕರಿಗೆ ನಮ್ಮ ನಿಮ್ಮ ಪರವಾಗಿ ಒಂದು ಅಭಿನಂದನೆಗಳನ್ನು ತಿಳಿಸೋಣ.
ಅದೇ ರೀತಿಯಾಗಿ, ನಾವು ಗಂಡಸರಿಗಿಂತಲೂ ಯಾವುದರಲ್ಲೂ ಕಮ್ಮಿ ಇಲ್ಲಾ ಎನ್ನುವ ಧಿಮಾಕಿನಿಂದ ಹೊತ್ತಲ್ಲಾ ಹೊತ್ತಿನಲ್ಲಿ ಅಂಡೆಲೆಯುವ ಯುವತಿಯರಿಗೂ Every Day is not a Sunday ಎನ್ನುವ ಮಾತಿನಂತೆ ಎಲ್ಲರಿಗೂ ಐಶ್ವರ್ಯಳಂತೆ ಸಜ್ಜನರ ಸಹಕಾರವೇ ಸಿಗುತ್ತದೆ ಎನ್ನುವ ನಂಬಿಕೆ ಇಲ್ಲದ ಕಾರಣ, ಸಂಜೆ ಆಗುತ್ತಿದ್ದಂತೆಯೇ ನೆಮ್ಮದಿಯಾಗಿ ಮನೆಗೆ ಬಂದು ಸೇರಿಕೊಳ್ಳಲಿ ಎನ್ನುವ ಕಿವಿ ಮಾತನ್ನೂ ಹೇಳಿಬಿಡೋಣ ಅಲ್ವೇ? ಏಕೆಂದರೆ ಕಾಲಾನೂ ಕೆಟ್ಟು ಹೋಗಿದ್ದು, ಯಾವ ಹುತ್ತದಲ್ಲಿ ಯಾವ ಹಾವಿರುತ್ತದೆ ಎಂಬುದು ನಮಗೆ ಗೊತ್ತಿರುವುದಿಲ್ಲಾ ಮತ್ತು ಇನ್ನು ಟೆಕ್ನಾಲಜಿಯನ್ನೂ ಶೇ೧೦೦ ರಷ್ಟು ನಂಬಲೂ ಸಾಧ್ಯವಿಲ್ಲಾ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ