ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲಿಯೂ ಗರ್ಭಗುಡಿಯ ಹೊರಗೆ ಇಬ್ಬರು ದೊಡ್ಡ ದೊಡ್ಡ ಮೀಸೆಯುಳ್ಳ, ಕೈಯಲ್ಲಿ ಆಯುಧವನ್ನು ಹಿಡಿದ ರಾಕ್ಷಸ ರೂಪದ ದಾಂಡಿಗರ ಪ್ರತಿಮೆಗಳನ್ನು ಕಾಣಬಹುದಾಗಿದ್ದು, ಇವರುಗಳನ್ನು ದೇವರ ದ್ವಾರ ಪಾಲಕರು ಅಥವಾ ದೇವರ ರಕ್ಷಕರು ಎಂದು ಕರೆಯಲಾಗುತ್ತದೆ. ಇನ್ನೊಂದು ಐತಿಯ್ಹದ ಪ್ರಕಾರ ದೇವಿಯ ಕಾವಲಿಗೆ ಸ್ವತಃ ಕಾಲಭೈರವ ಅರ್ಥಾತ್ ಶಿವನೇ ನೇಮಿಸಿರುವ ಶಿವ ಗಣದ ಅಂಗರಕ್ಷಕರು ಎನ್ನಲಾಗುತ್ತದೆ. ಗ್ರಾಮೀಣ ಭಾಷೆಯಲ್ಲಿ ಈ ಅಂಗರಕ್ಷಕರಿಗೆ ಸೋಮ ಅಥವಾ ಚೋಮ ಎಂದು ಕರೆಯುವ ಸಂಪ್ರದುಯವಿದ್ದು, ನಮ್ಮೂರು ಬಾಳಗಂಚಿಯ ಜಾತ್ರೆಯಲ್ಲಿ ಸೋಮನ ಅಥವಾ ಚೋಮನ ಹಬ್ಬಕ್ಕೇ ಒಂದು ದಿನ ಮೀಸಲಾಗಿಟ್ಟಿದ್ದರೂ ಆ ದಿನದಂದು ಚಾವಟಿಯಮ್ಮನಿಗೆ ವಿಶೇಷವಾದ ಪ್ರಾಧಾನ್ಯತೆ ಇದ್ದು, ಇನ್ನು ಹಸಿರು ಮುಖದ ಹೊನ್ನಮ್ಮನ ಜೊತೆ ಇಬ್ಬರು ಚೋಮನ ಮುಖವಾಡವನ್ನು ಧರಿಸುವವರು ಇರುತ್ತಾರಾದರೂ, ಇಡೀ ಹಬ್ಬದಲ್ಲಿ ಅವರ ಪಾತ್ರ ಗೌಣವಾಗಿರುತ್ತದೆ.
ಆದರೆ, ಗುರುವಾರ ಊರ ಹೊರಗಿನ ದೇವಾಲಯದಲ್ಲಿ ದೊಡ್ಡ ಹಬ್ಬ ಅರ್ಥಾತ್ ಜಾತ್ರೆ ನಡೆದ ನಂತರ ಶುಕ್ರವಾರ ಅದೇ ಜಾತ್ರೆ ಊರ ಒಳಗೆ ರಂಗಮಂಟಪದ ಸುತ್ತಮುತ್ತಲೂ ನಡೆಯುವ ಸಂಜೆ ಸೋಮನ ಕುಣಿತ ಇಲ್ಲವೇ ಜಲ್ಲಿ ಸೋಮನ ಕುಣಿತ ಬಲು ಆರರ್ಷಣೀಯವಾಗಿರುತ್ತದೆ. ಸಾಮಾನ್ಯವಾಗಿ ಹಳೆಯ ಮೈಸೂರು ಪ್ರಾಂತ್ಯದ ತುಮಕೂರು, ಚಿತ್ರದುರ್ಗ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಬಹು ಜನಪ್ರಿಯವಾಗಿರುವ ಈ ಸೋಮನ ಕುಣಿತ, ಈಗ ದೇಶ ವಿದೇಶಗಳಲ್ಲೂ ಪ್ರದರ್ಶಿತವಾಗಿ ವಿಶ್ವದ ಜನರ ಗಮನ ಸೆಳೆದಿರುವುದು ಅಚ್ಚರಿಯ ಮತ್ತು ಹೆಮ್ಮೆಯ ಸಂಗತಿಯಾಗಿದೆ.
ಬಣ್ಣ ಬಣ್ಣದ ವಸ್ತ್ರಗಳ ಅಲಂಕಾರದೊಂದಿಗೆ ರಾಕ್ಷಸನ ಮುಖವಾಡವನ್ನುಳ್ಳ ಸೋಮನ ಕುಣಿತ ದೇವೀ ಆರಾಧನೆಯ ಒಂದು ಅಂಗವಾಗಿದ್ದು, ದೇವಿಯನ್ನು ರಂಜಿಸಲು, ದೇವಿಯ ಮನಸ್ಸನ್ನು ಸಂತೋಷ ಪಡಿಸಲು ಸೋಮ ಕುಣಿಯುತ್ತಾನೆ ಎಂಬುದು ಗ್ರಾಮೀಣ ಜನರ ನಂಬಿಕೆಯಾಗಿದ್ದು, ತಮಟೆ ಮತ್ತು ಡೋಲಿನ ನಾದಕ್ಕೆ ತಕ್ಕಂತೆ ಸೋಮನ ಮುಖವಾಡ ತೊಟ್ಟ ನೃತ್ಯಗಾರರು ಜಾನಪದ ಶೈಲಿಯಲ್ಲಿ ಮಾಡುವ ಸೋಮನ ಕುಣಿತ ನೋಡಲು ಬಹಳ ಸುಂದರವಾಗಿರುತ್ತದೆ.
ಈಗಾಗಲೇ ಹೇಳಿದಂತೆ ಈ ಸೋಮರು ತಾಯಿ ಪಾರ್ವರ್ತಿಯನ್ನು ರಕ್ಷಿಸಲು ಸಾಕ್ಷಾತ್ ಶಿವನೇ ನೇಮಿಸಿರುವ ಶಿವ ಗಣ ಎನ್ನುವುದಾರೇ, ಮತ್ತೊಂದು ಜನಪದ ಕಥೆಯಲ್ಲಿ ಹೇಳಿರುವಂತೆ, ನವ ವಿವಾಹಿತ ಯುವತಿಯೊಬ್ಬಳು ತನ್ನ ತವರಿನಿಂದ ತನ್ನ ಸೋದರ ಮಾವನ ಜತೆಯಲ್ಲಿ ಗಂಡನ ಮನೆಗೆ ಸುಧೀರ್ಘವಾದ ಪ್ರಯಾಣ ಬೆಳೆದಿರುವಾಗ ದಾರಿಯ ಮಧ್ಯದಲ್ಲಿ ಆಕೆಗೆ ಜಲಬಾಧೆ ಕಾಣಿಸಿಕೊಂಡಾಗ, ತಾನು ಪಯಣಿಸುತ್ತಿದ್ದ ಗಾಡಿಯನ್ನು ನಿಲ್ಲಿಸಿ ಮೂತ್ರ ವಿಸರ್ಜಿಸಿ ಬರಲು ಹೋಗುವಾಗ, ತನ್ನ ತಂದೆಯ ಸಮಾನನಾದ ಮಾವನಿಗೆ ವಿರುದ್ಧ ದಿಕ್ಕಿನತ್ತ ತಿರುಗಿ ನಿಂತಿರಲು ಹೇಳಿ ಅಲ್ಲೇ ಇದ್ದ ಹುತ್ತವೊಂದರ ಹಿಂದೆ ಹೋಗುತ್ತಾಳೆ. ಆದರೆ ಆಕೆಗೆ ಕೊಟ್ಟ ಮಾತಿಗೆ ವಿರುದ್ಧವಾಗಿ ಆಕೆಯನ್ನೇ ದಿಟ್ಟಿಸಿ ನೋಡುತ್ತಿದ್ದದ್ದನ್ನು ಗಮನಿಸಿದ ಆಕೆಗೆ ನಾಚಿಕೆಯೂ ಮತ್ತು ಅವಮಾನವೂ ಆಗಿ ಆ ಕೂಡಲೇ ಆಕೆ ಆ ಹುತ್ತವನ್ನು ಪ್ರವೇಶಿಸಿ, ನೋಡ ನೋಡುತ್ತಿದ್ದಂತೆಯೇ ಆಕೆ ಹುತ್ತದಿಂದ ಇಬ್ಬರ ದೈತ್ಯರೊಂದಿಗೆ ದೇವತೆಯಾಗಿ ಹೊರ ಬಂದು ಕಾಮುಕ ದೃಷ್ಟಿಯಿಂದ ನೋಡಿದ ಮಾವನನ್ನು ವಧಿಸಿದಳಂತೆ. ಈ ರೀತಿಯಾಗಿ ದೇವತೆಯ ಅರ್ಥಾತ್ ಸೊಸೆಯ ಜೊತೆ ಕಾಣಿಸಿಕೊಂಡ ಆ ಇಬ್ಬರು ದೈತ್ಯರೇ, ದೇವಿಯ ಅಂಗರಕ್ಷಕರಾದ ಸೋಮರು ಎನ್ನಲಾಗುತ್ತದೆ.
ಸಾಮನ್ಯವಾಗಿ ಗ್ರಾಮದೇವತೆಯ ಜೊತೆ ಸೋಮರು ದೇವತೆಯ ಮುತ್ತೈದೆ ಸೌಭಾಗ್ಯವತಿಯ ಸಂಕೇತವಾಗಿ ಕೆಂಪು ಮತ್ತು ಹಳದಿ ಬಣ್ಣದ ಸೋಮಗಳೇ ಆಗಿದ್ದು, ಕೆಂಪು ಬಣ್ಣದ ಸೋಮನನ್ನು ಕೆಂಪರಾಯನೆಂದೂ, ಹಳದಿ ಬಣ್ಣದ ಸೋಮನನ್ನು ಕೆಂಚರಾಯನೆಂದೂ ಕರೆಯುವ ಸಂಪ್ರದಾಯವಿದೆ. ನಮ್ಮ ಹೆಂಗಳೆಯರು ಒಡವೆ ವಸ್ತುವಿಗಿಂತ ಆರಿಶಿನ ಕುಂಕುಮಕ್ಕೇ ಹೆಚ್ಚಿನ ಪ್ರಾಧಾನ್ಯತೆ ನೀಡಿ ಪ್ರತೀ ದಿನವೂ ಸುಮಂಗಲಿಯ ಸಂಕೇತವಾಗಿ ಅರಿಶಿನವನ್ನು ಪ್ರತಿನಿತ್ಯವೂ ತಮ್ಮ ಮುಖಕ್ಕೆ ಹಚ್ಚಿಕೊಳ್ಳುವ ಕಾರಣ, ಹಳದಿ ಬಣ್ಣದ ಸೋಮ ಹೆಣ್ಣು ಸೋಮ ಎಂದೂ ಕೆಂಪು ಬಣ್ಣದ ಸೋಮ ಗಂಡಸು ಎಂಬ ನಂಬಿಕೆ ಗ್ರಾಮೀಣ ಪ್ರದೇಶದಲ್ಲಿದೆ. ಇನ್ನೂ ಕೆಲವು ಕಡೆ ಈ ಸೋಮರಿಗೆ ಬಹಳ ಪ್ರೀತಿಯಿಂದ ಈರಣ್ಣ, ಪಾಪಣ್ಣ, ಕಪ್ಪಣ್ಣ, ಗುಳ್ಳಣ್ಣ ಎಂಬೆಲ್ಲಾ ಹೆಸರುಗಳಿಂದ ಕರೆಯುತ್ತಾರೆ.
ಈ ಸೋಮನ ಮುಖವಾಡ ತಯಾರಿಸುವುದಕ್ಕೂ ಒಂದು ನೇಮ ನಿಷ್ಠೆ ಇದ್ದು, ಊರಿನ ಆಚಾರಿಗಳು ಗ್ರಾಮೀಣ ಭಾಗದಲ್ಲಿ ದೇವವೃಕ್ಷ ಎಂದು ಕರೆಯುವ ಭೂತಾಳೆ ಮರದಿಂದ ಮಾತ್ರವೇ ಈ ರಾಕ್ಷಸಾಕಾರದ ಮುಖವಾಡ ತಯಾರಿಸಿ ಅದರಲ್ಲಿ ಸಾಮಾನ್ಯ ಮನುಷ್ಯರ ತಲೆ ಹಿಡಿಸುವಷ್ಟು ರಂದ್ರ ಕೊರೆದು ಅದಕ್ಕೆ ಕಣ್ಣು ಮೂಗು ಬಾಯಿ ಮತ್ತು ಕಿವಿಯ ಆಕಾರಗಳನ್ನು ಕೊರೆದು, ಕಣ್ಣುಗಳ ಭಾಗಕ್ಕೆ ಮತ್ತು ಮೂಗಿನ ಹೊಳ್ಳಕ್ಕೆ ತೂತು ಮಾಡಿ ಆ ಮುಖವಾಡಕ್ಕೆ ಚೆಂದನೆಯ ಹಳದಿ ಮತ್ತು ಕೆಂಪು ಬಣ್ಣ ಬಳಿದು, ಗಂಡು ಸೋಮನಿಗೆ ಮೀಸೆ ಹೆಣ್ಣು ಸೋಮಳಿಗೆ ಕೆನ್ನೆಯ ಅರಿಶಿನು ಕುಂಕುಮ ಬಳಿದು ಚಂದಾಗಿ ಕಾಣುವಂತೆ ಮಾಡಿ ಅದಕ್ಕೊಂದು ಪ್ರಭಾವಳಿ ನಿರ್ಮಿಸಿ, ಅದರ ಸುತ್ತಲೂ ಬಣ್ಣಬಣ್ಣದ ಸೀರೆಗಳಿಂದ ಅಲಂಕರಿಸಿ, ಹೂವಿನ ಹಾರ ಹಾಕಿ ಸೋಮರನ್ನು ಸಿದ್ಧಗೊಳಿಸುತ್ತಾರೆ.
ಸಾಮಾನ್ಯವಾಗಿ ಬಹುತೇಕ ಊರುಗಳಲ್ಲಿ ದೇವಾಲಯದ ಅರ್ಚಕರು ಅಥವಾ ಅವರ ವಂಶಸ್ಥರೇ ಸೋಮವನ್ನು ಹೊರುವುದು ವಾಡಿಕೆ ಇದ್ದು, ಸೋಮನ ಮುಖವಾಡವನ್ನು ಧರಿಸುವ ಮೂದಲು ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ಬಹಳ ನೇಮ ನಿಷ್ಟೆಗಳಿಂದ ದೇವಿಯ ಪೂಜೆಯನ್ನು ಮಾಡಿ, ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಹೆಣ್ಣು ಸೋಮ ಉದ್ದನೆಯ ಲಂಗ ತೊಟ್ಟರೆ, ಗಂಡು ಸೋಮ ಕಚ್ಚೆ ಪಂಚೆ ಧರಿಸಿ ಹಣಿಗೆ ತಿಲಕವಿಟ್ಟು ಸೋಮನ ಮುಖವಾಡದಲ್ಲಿ ತಮ್ಮ ತಲೆಯನ್ನು ತೂರಿಸಿ ಎಡಗೈಯ್ಯಲ್ಲಿ ಸೋಮನ ಮುಖವಾಡವನ್ನು ಹಿಡಿದು ಬಲಗೈನಲ್ಲಿ ಬೆತ್ತವನ್ನು ಹಿಡಿದು, ಸೋಮನ ಸುತ್ತಲು ಇರುವ ಪದಗಾರರು, ಅರೆ ವಾದ್ಯಗಾರರು ತಾಳ ಮದ್ದಳೆಯವರು ಹಾಡುವ ಹಾಡಿಗೆ ಅಥವಾ ನುಡಿಸುವ ತಾಳಕ್ಕೆ ತಕ್ಕಂತೆ ಸೋಮ ಹೆಜ್ಜೆ ಹಾಕುತ್ತಾ ಕುಣಿಯುತ್ತಾನೆ. ಹೀಗೆ ಸೋಮನನ್ನು ಹೊತ್ತವರಿಗೆ ಮುಂದೆ ಕಾಣಿಸುವಂತೆ ಕಣ್ಣಿನ ಬಳಿ ಮತ್ತು ಉಸಿರಾಡಲು ಅನುವಾಗುವಂತೆ ಮೂಗಿನ ಹೊಳ್ಳೆಗಳ ಬಳಿ ರಂಧ್ರವನ್ನು ಕೊರೆದಿರುಲಾಗಿರುತ್ತದೆ.
ಬಹುತೇಕ ಊರುಗಳಲ್ಲೂ ಈ ಸೋಮ ಮೊದಲು ದೇವಸ್ಥಾನದ ಎದುರು ಕುಣಿದು, ದೇವಿಯನ್ನು ಸಂತೋಷಗೊಳಿಸಿ, ನಂತರ ಊರಿನ ಪ್ರಮುಖ ಬೀದಿಗಳಲ್ಲಿ ಕುಣಿಯುತ್ತಾ ಹೋಗುವುದು ನೋಡಲು ಮುದ ನೀಡುತ್ತದಾದರೂ ಇದರ ಹಿಂದೆಯೂ ಊರ ಜನರಿಗೆ ನೀಡುವ ಒಂದು ಎಚ್ಚರಿಕೆಯ ಸಂದೇಶವಾಗಿದ್ದು, ತಾನು ದೇವಿಯ ರಕ್ಷಣೆಗೆ ಸದಾ ಕಾಲವೂ ಸನ್ನದ್ದನಾಗಿರುವ ಕಾರಣ ಊರಿನವರು ಎಂದೂ ಸಹಾ ದೇವಿಯ ವಿರುದ್ಧವಾಗಿ ಅಥವಾ ಊರಿನಲ್ಲಿ ಯಾರ ವಿರುದ್ಧವೂ ಪಾಪ ಕಾರ್ಯ ಮಾಡದಂತೆ ಎಚ್ಚರ ಮೂಡಿಸುವುದೇ ಈ ಪ್ರದಕ್ಷಿಣೆಯ ಹಿಂದಿನ ಉದ್ದೇಶವಾಗಿರುತ್ತದೆ, ಹೀಗೆ ದೇವೀ ಆರಾಧನೆಯ ಸುಂದರ ಗ್ರಾಮೀಣ ಕುಣಿತ ಮನಸ್ಸಿಗೆ ಮುದ ನೀಡುವ ಜೊತೆ ಜೊತೆಯಲ್ಲೇ ಊರ ಜನರಿಗೆ ದೇವಿಯ ಮೇಲೆ ಶ್ರದ್ಧಾ ಭಕ್ತಿಗಳನ್ನು ಹೆಚ್ಚಿಸುವ ಕಾರ್ಯವಾಗಿದೆ.
ನಮ್ಮೂರು ಬಾಳಗಂಚಿಯಲ್ಲಿ ಇದಕ್ಕೆ ಸ್ವಲ ವಿಭಿನ್ನವಾಗಿ ಈ ಸೋಮರ ಕುಣಿತ ಮಾಡಲಾಗುತ್ತದೆ. ಈ ಸೋಮನ ಕುಣಿತವನ್ನು ನಮ್ಮೂರಿನಲ್ಲಿ ಜಲ್ಲಿ ಸೋಮನ ಕುಣಿತ ಎಂದು ಕರೆಯಲಾಗುತ್ತದೆ. ಹಿಂದಿನ ದಿನ ಗುರುವಾರ ರಾತ್ರಿ ನಮ್ಮೂರ ಗ್ರಾಮದೇವತೆ ಹೊನ್ನಾದೇವಿಯ ಉತ್ಸವ ಮೂರ್ತಿಯೊಂದಿಗೆ ಭವ್ಯವಾಗಿ ಆಕೆಯ ಅಕ್ಕ ಪಕ್ಕದಲ್ಲಿ ಗೌಡರ ಹಳ್ಳಿಯ ಮಸ್ಣಕಮ್ಮ ಮತ್ತು ಹೊನ್ನಮಾರನಹಳ್ಳಿ ಮಾರಮ್ಮನನನ್ನು ಕೂರಿಸಿ ಮೆರವಣಿಗೆ ಮಾಡಲಾಗಿರುತ್ತದೆ. ಶುಕ್ರವಾರ ಊರ ಮಧ್ಯದಲ್ಲಿರುವ ರಂಗಮಂಟದಪದ ಮುಂದೆ ಈ ಎರಡೂ ದೇವಿಯರಿಗೆ ಊರಿನ ಹೆಂಗಳೆಯರೆಲ್ಲರೂ ಭಕ್ತಿಯಿಂದ ಪೂಜಿಸಿ ಮಡಿಲಕ್ಕಿ ತುಂಬಿಸಿ ಆಕೆಯನ್ನು ಅವರವರ ಊರಿಗೆ ಕಳಿಸುವ ಮುನ್ನಾ ಹೆಂಗಳೆಯರ ಪೂಜೆ ಮಾಡಿ ಆ ಎರಡೂ ದೇವರುಗಳನ್ನೂ ಊರ ಹೆಬ್ಬಾಗಿಲಿನಿಂದ ಆಚೆ ಕಳೆಸುವಷ್ಟರ ಹೊತ್ತೂ ಪಕ್ಕದ ಊರಿನಿಂದ ತರಲಾಗುವ ಈ ಜಲ್ಲಿ ಸೋಮಗಳನ್ನು ನಮ್ಮೂರಿನವರು ಅದರಲ್ಲೂ ಹೆಚ್ಚಾಗಿ ಯುವಕರುಗಳು ಧರಿಸಿ ತಾಳದವರ ಗತ್ತಿಗೆ ಕುಣಿಯುತ್ತಾರೆ. ನಾವೆಲ್ಲಾ ಚಿಕ್ಕವರಿರುವಾಗ ನಮ್ಮ ತಂದೆಯವರು ಮತ್ತು ಅವರ ಜೊತೆಗಾರರು ಜಲ್ಲಿ ಸೋಮನ ಮುಖವಾಡ ಧರಿಸಿ ಕುಣಿಯುತ್ತಿದ್ದ ಪರಿ ನಿಜಕ್ಕೂ ಅದ್ಭುತವಾಗಿದ್ದು, ಇಂದಿನವರು ಕುಣಿಯುವುದು ಅಂದಿನಷ್ಟು ಪ್ರಾಮುಖ್ಯತೆ ಇಲ್ಲದೇ ಇದ್ದರೂ ಈ ಆಧುನಿಕ ಯುಗದಲ್ಲೂ ಈ ಎಲ್ಲಾ ಸಂಪ್ರದಾಯಗಳನ್ನೂ ಆಚರಿಸಿಕೊಂಡು ಹೋಗುತ್ತಿದ್ದಾರಲ್ಲಾ ಎಂಬುದೇ ಸಮಾಧಾನ ತರಿಸುತ್ತದೆ. ಇದರ ಜೊತೆ ಇತ್ತೀಚಿಗೆ ಈ ಸೋಮನನ್ನು ಕುಣಿಯುವುದು ಮಕ್ಕಳಾಟವಾಗಿ ಪರಿವರ್ತಿತವಾಗಿ ದೊಡ್ಡ ದೊಡ್ಡವರು ಸೋಮನ ಕುಣಿಯುವುದನ್ನು ಕಂಡು ಸಣ್ಣ ಸಣ್ಣ ಮಕ್ಕಳೂ ಸಹಾ ಸೋಮನ ಮುಖವಾಡ ಧರಿಸಿ ಚಂದಗೆ ಕುಣಿಯುವುದನ್ನು ನೋಡುವಾಗ, ಎಷ್ಟೇ ಆಧುನಿಕ ಆವಿಷ್ಕಾರಗಳಾಅರೂ, ನಮ್ಮ ಗ್ರಾಮಿಣ ಸೋಗಡಿಗೆ ಕಿಂಚಿತ್ತೂ ಧಕ್ಕೆ ಬಾರದು ಎಂಬ ಹೆಮ್ಮೆಯೂ ಅಗುತ್ತದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ