“ಅನ್ನಂ ಪರಬ್ರಹ್ಮ ಸ್ವರೂಪಂ“ ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಅನ್ನವು ಕೇವಲ ಆಹಾರವಲ್ಲ; ಅದು ದೇವರ ಪ್ರಸಾದ, ರೈತನ ಪರಿಶ್ರಮ, ಪ್ರಕೃತಿಯ ಕೃಪೆ ಮತ್ತು ನಮ್ಮ ಜೀವನದ ಆಧಾರವಾಗಿದೆ. ಆದ್ದರಿಂದಲೇ ಭಾರತೀಯ ಸಂಸ್ಕೃತಿಯಲ್ಲಿ ಅನ್ನವನ್ನು ವ್ಯರ್ಥ ಮಾಡುವುದನ್ನು ಮಹಾಪಾಪವೆಂದು ಪರಿಗಣಿಸಲಾಗಿದೆ ಹಾಗಾಗಿ ಊಟವಾದ ನಂತರರ ತಟ್ಟೆಯಲ್ಲಿ ಅನ್ನವನ್ನು ಏಕೆ ಬಿಡಬಾರದು? ಎಂಬ ಕುರಿತಾಗಿ ತಿಳಿದಿಕೊಳ್ಳೋಣ ಬನ್ನಿ
ನಮ್ಮ ಪೂರ್ವಜರ ಆಚರಣೆ
ನಮ್ಮ ಹಿರಿಯರು ಊಟ ಮುಗಿದ ನಂತರ ತಟ್ಟೆಗೆ ಸ್ವಲ್ಪ ನೀರು ಹಾಕಿ, ಉಳಿದ ಅನ್ನದ ಕಣಗಳನ್ನು ಕಲಸಿ ಕುಡಿಯುತ್ತಿದ್ದರು. ಅದರ ಹಿಂದಿನ ಸಂದೇಶ ಏನೆಂದರೆ:
- ಅನ್ನದ ಒಂದು ಕಣವೂ ವ್ಯರ್ಥವಾಗಬಾರದು.
- ಅನ್ನದಾತನ ಪರಿಶ್ರಮಕ್ಕೆ ಗೌರವ ನೀಡಬೇಕು.
- ಆಹಾರವನ್ನು ದೇವರ ಪ್ರಸಾದವೆಂದು ಸ್ವೀಕರಿಸಬೇಕು.
ಇಂದು ಈ ಆಚರಣೆ ಬಹುತೇಕ ಮರೆಯಾಗುತ್ತಿದ್ದರೂ, ಅದರ ಹಿಂದೆ ಇರುವ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ.
ರಾಮಾಯಣದಲ್ಲಿ ಉಲ್ಲೇಖವಾಗಿರುವ ಸಂದೇಶ
ರಾಮಾಯಣದ ಒಂದು ಪ್ರಸಂಗದ ಪ್ರಕಾರ, ಸೀತಾಮಾತೆಯ ಹುಡುಕಾಟದ ವೇಳೆ ಹನುಮಂತನು ಲಂಕೆಗೆ ಪ್ರವೇಶಿಸಿ ರಾವಣನ ಅರಮನೆಯ ಅಡುಗೆಮನೆಗೆ ಹೋಗುತ್ತಾನೆ. ಅಲ್ಲಿ ರಾವಣ ಮತ್ತು ಅವನ ಕುಟುಂಬದವರು ಊಟದ ತಟ್ಟೆಗಳಲ್ಲಿ ತಿನ್ನದೆ ಬಿಟ್ಟಿದ್ದ ಆಹಾರವನ್ನು ಕಂಡು, ಆ ರಾಜ್ಯದ ನಾಶ ಸಮೀಪಿಸಿದೆ ಎಂದು ಹನುಮಂತನಿಗೆ ಅರಿವಾಗುತ್ತದೆ.
ಏಕೆಂದರೆ ಯಾವ ಮನೆ ಅಥವಾ ರಾಜ್ಯ ಅನ್ನಕ್ಕೆ ಗೌರವ ಕೊಡದೆ ಆಹಾರವನ್ನು ವ್ಯರ್ಥ ಮಾಡುತ್ತದೆಯೋ, ಆ ಮನೆ ಮತ್ತು ಸಮಾಜದ ಮೇಲೆ ದುರಂತದ ನೆರಳು ಬೀಳುತ್ತದೆ ಎಂಬ ನಂಬಿಕೆ ಪ್ರಾಚೀನ ಕಾಲದಿಂದಲೂ ಇದೆ
ಧಾರ್ಮಿಕ ನಂಬಿಕೆಗಳ ಪ್ರಕಾರ
- ಅನ್ನಪೂರ್ಣೇಶ್ವರಿ ಮತ್ತು ಲಕ್ಷ್ಮೀ ದೇವಿಯ ಅವಮಾನ
ತಟ್ಟೆಯಲ್ಲಿ ಆಹಾರವನ್ನು ವ್ಯರ್ಥ ಮಾಡುವುದು ಅನ್ನಪೂರ್ಣೇಶ್ವರಿ ಮತ್ತು ಮಹಾಲಕ್ಷ್ಮಿಗೆ ಮಾಡುವ ಅಪಮಾನವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ:
- ಮನೆಯಲ್ಲಿ ಆರ್ಥಿಕ ಸಂಕಷ್ಟಗಳು ಎದುರಾಗಬಹುದು.
- ಸಂಪತ್ತಿನ ಸ್ಥಿರತೆ ಕಡಿಮೆಯಾಗಬಹುದು.
- ಲಕ್ಷ್ಮೀ ಕಟಾಕ್ಷ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.
- ಮಕ್ಕಳಿಗೆ ಅನ್ನದ ಮೌಲ್ಯ ಕಲಿಸಿ
ಅನ್ನದ ಬೆಲೆ ತಿಳಿಯದಿದ್ದರೆ, ಎಷ್ಟೇ ಸಂಪತ್ತಿದ್ದರೂ ಅದರ ಸಾರ್ಥಕತೆ ಇರುವುದಿಲ್ಲ. ಮಕ್ಕಳಿಗೆ ಬಾಲ್ಯದಿಂದಲೇ ಆಹಾರದ ಮಹತ್ವವನ್ನು ತಿಳಿಸಬೇಕು.
ಜ್ಯೋತಿಷ್ಯದ ದೃಷ್ಟಿಯಿಂದ
ಕೆಲವು ಸಂಪ್ರದಾಯಗಳ ಪ್ರಕಾರ:
- ಆಹಾರವನ್ನು ವ್ಯರ್ಥ ಮಾಡುವುದರಿಂದ ಶನಿ ದೇವರ ಅಸಮಾಧಾನ ಉಂಟಾಗುತ್ತದೆ.
- ಚಂದ್ರನ ಅಶುಭ ಪ್ರಭಾವದಿಂದ ಮನಸ್ಸಿನ ಅಶಾಂತಿ ಮತ್ತು ಒತ್ತಡ ಹೆಚ್ಚಾಗಬಹುದು.
ಇವು ನಂಬಿಕೆಗಳಾಗಿದ್ದರೂ, ಅದರ ಮೂಲ ಸಂದೇಶ ಒಂದೇ – ಅನ್ನವನ್ನು ಗೌರವಿಸಿ, ವ್ಯರ್ಥ ಮಾಡಬೇಡಿ.
ಮದುವೆ ಸಮಾರಂಭಗಳಲ್ಲಿ ನಾವು ಏಕೆ ಹೆಚ್ಚು ವ್ಯರ್ಥ ಮಾಡುತ್ತೇವೆ?
ನಮ್ಮದೇ ಹಣದಲ್ಲಿ:
- ಪಾನಿಪುರಿಯ ನೀರನ್ನೂ ವ್ಯರ್ಥ ಮಾಡುವುದಿಲ್ಲ.
- ಐಸ್ ಕ್ರೀಮ್‌ನ ಮುಚ್ಚಳವನ್ನೂ ನೆಕ್ಕಿ ತಿನ್ನುತ್ತೇವೆ.
- ಕಡಲೆಕಾಯಿಯ ಸಿಪ್ಪೆಯೊಳಗಿನ ಕೊನೆಯ ಬೀಜವನ್ನೂ ಹುಡುಕಿ ತಿನ್ನುತ್ತೇವೆ.
ಆದರೆ ಯಾರಾದರೊಬ್ಬರ ಮದುವೆ ಸಮಾರಂಭದಲ್ಲಿ:
- ತಟ್ಟೆ ತುಂಬ ಆಹಾರ ತೆಗೆದುಕೊಳ್ಳುತ್ತೇವೆ.
- ಅರ್ಧಕ್ಕೂ ಹೆಚ್ಚು ಆಹಾರವನ್ನು ಕಸದ ಬುಟ್ಟಿಗೆ ಹಾಕುತ್ತೇವೆ.
ಒಬ್ಬ ತಂದೆ ತನ್ನ ಮಗಳ ಮದುವೆಗಾಗಿ ಜೀವನಪೂರ್ತಿ ದುಡಿದ ಹಣವನ್ನು ಖರ್ಚು ಮಾಡಿರಬಹುದು. ಆ ಆಹಾರವೂ ಅವನ ಪರಿಶ್ರಮದ ಫಲವೇ ಆಗಿರುತ್ತದೆ.
ಆದ್ದರಿಂದ: “ತಿನ್ನಿ ಬೇಕಾದಷ್ಟು, ಆದರೆ ಬಿಡಬೇಡಿ ಕಣದಷ್ಟು.”
ಅನ್ನದ ಮಹತ್ವ
ಒಂದು ಕಣ ಅನ್ನವನ್ನು ಉತ್ಪಾದಿಸಲು:
- ರೈತನ ಪರಿಶ್ರಮ,
- ಪ್ರಕೃತಿಯ ಮಳೆ,
- ಸೂರ್ಯನ ಬೆಳಕು,
- ಸಾವಿರಾರು ಜನರ ದುಡಿಮೆ ಸೇರಿರುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಟ್ಟೆಯಲ್ಲಿ:
✔ ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿಕೊಳ್ಳಬೇಕು.
✔ ಆಹಾರವನ್ನು ಸಾಧ್ಯವಾದಷ್ಟು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು.
✔ ಉಳಿದಿದ್ದರೆ ಅಗತ್ಯವಿರುವವರಿಗೆ ನೀಡಬೇಕು.
ಆದರೆ ಶ್ರಾದ್ಧ ಅಥವಾ ತಿಥಿ ಸಂದರ್ಭದಲ್ಲಿ ಬ್ರಾಹ್ಮಣರು ಎಲೆಯಲ್ಲಿ ಸ್ವಲ್ಪ ಅನ್ನವನ್ನು ಉದ್ದೇಶಪೂರ್ವಕವಾಗಿ ಬಿಡುವುದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಂದು ವಿಶೇಷ ಆಚರಣೆಯಾಗಿದೆ. ಸಾಮಾನ್ಯ ದಿನಗಳಲ್ಲಿ ತಟ್ಟೆಯಲ್ಲಿ ಅನ್ನವನ್ನು ಬಿಡಬಾರದು ಎಂದು ಹೇಳಿದರೂ, ಶ್ರಾದ್ಧ ಮತ್ತು ತಿಥಿಯ ಸಂದರ್ಭದಲ್ಲಿ ಇದಕ್ಕೆ ಭಿನ್ನವಾದ ಧಾರ್ಮಿಕ ಅರ್ಥವಿದೆ.
ಪಿತೃಗಳಿಗೆ ಅರ್ಪಣೆಯ ಸಂಕೇತ
ಶ್ರಾದ್ಧ ಅಥವಾ ತಿಥಿಯ ಊಟವು ಸಾಮಾನ್ಯ ಊಟವಲ್ಲ. ಅದು ಪಿತೃದೇವತೆಗಳಿಗೆ ಸಮರ್ಪಿತವಾದ ಯಜ್ಞಭಾಗ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಬ್ರಾಹ್ಮಣರಿಗೆ ಬಡಿಸುವ ಊಟವನ್ನು ಪಿತೃಗಳಿಗೆ ಅರ್ಪಿಸಿದ ಪ್ರಸಾದವೆಂದು ಭಾವಿಸಲಾಗುತ್ತದೆ.
ಹಾಗಾಗಿ ಎಲೆಯ ಕೊನೆಯಲ್ಲಿ ಸ್ವಲ್ಪ ಅನ್ನ ಮತ್ತು ಭಕ್ಷವನ್ನು ಈ ಕಾರಣಕ್ಕಾಗಿ ಬಿಡಲಾಗುತ್ತದೆ
- “ಈ ಅನ್ನವು ಕೇವಲ ನನಗಾಗಿ ಅಲ್ಲ, ನಮ್ಮ ಪಿತೃಗಳ ನೆನಪಿಗಾಗಿ ಸಮರ್ಪಿತವಾಗಿದೆ” ಎಂಬ ಸಂಕೇತ.
- ಪಿತೃದೇವತೆಗಳಿಗೆ ಕೃತಜ್ಞತೆ ಸಲ್ಲಿಸುವ ಒಂದು ವಿಧಿ.
- ತೃಪ್ತಿ ಮತ್ತು ಸಮರ್ಪಣೆಯ ಸಂಕೇತ.
ಧರ್ಮಶಾಸ್ತ್ರದ ವಿವರಣೆ
ಕೆಲವು ಗೃಹ್ಯಸೂತ್ರಗಳು ಮತ್ತು ಸ್ಮೃತಿಗಳ ಪ್ರಕಾರ, ಶ್ರಾದ್ಧ ಸಂದರ್ಭದಲ್ಲಿ ಊಟದ ಕೊನೆಯಲ್ಲಿ ಸ್ವಲ್ಪ ಅನ್ನವನ್ನು ಎಲೆಯಲ್ಲಿ ಬಿಡುವುದು ಪಿತೃಗಳಿಗೆ ಮೀಸಲಾದ ಭಾಗ ಎಂದು ಪರಿಗಣಿಸಲಾಗುತ್ತದೆ. ಇದನ್ನು ಕೆಲವೆಡೆ:
- ಪಿತೃಶೇಷ
- ಉಚ್ಚಿಷ್ಟ ಭಾಗ
- ಪಿತೃ ಅರ್ಪಿತ ಅನ್ನ ಎಂದೂ ಕರೆಯುತ್ತಾರೆ.
ಶ್ರಾದ್ಧದ ಸಂದರ್ಭದಲ್ಲಿ ಊಟ ಮಾಡುವ ಬ್ರಾಹ್ಮಣರನ್ನು ನಮ್ಮ ಪಿತೃದೇವತೆಗಳ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಶಾಸ್ತ್ರದ ಪ್ರಕಾರ ಅವರು ಊಟ ಮಾಡುವ ಸಮಯದಲ್ಲಿ ಅನಗತ್ಯವಾಗಿ ಮಾತನಾಡುವುದು ಅಥವಾ ಮಧ್ಯೆ ಮಧ್ಯೆ ಆಹಾರವನ್ನು ಕೇಳುವುದು ಸೂಕ್ತವಲ್ಲ ಎಂದು ಹೇಳಲಾಗಿದೆ. ಇದರಿಂದಾಗಿ ಕೆಲವೊಮ್ಮೆ ಅವರಿಗೆ ಇನ್ನಷ್ಟು ಅನ್ನ ಅಥವಾ ಭಕ್ಷ್ಯದ ಅವಶ್ಯಕತೆ ಇದ್ದರೂ ಸಂಕೋಚದಿಂದ ಕೇಳದೇ, ಹೊಟ್ಟೆ ತುಂಬಾ ಊಟ ಮಾಡದೆ ಬಿಡುವ ಸಾಧ್ಯತೆ ಇರುತ್ತದೆ.
ನಮ್ಮ ಪಿತೃದೇವತೆಗಳು ಸಂಪೂರ್ಣ ಸಂತೃಪ್ತರಾಗಬೇಕು ಎಂಬ ನಂಬಿಕೆಯಿಂದಲೇ, ಊಟದ ಕೊನೆಯಲ್ಲಿ ಬ್ರಾಹ್ಮಣರು ಎಲೆಯ ಒಂದು ಮೂಲೆಯಲ್ಲಿ ಸ್ವಲ್ಪ ಅನ್ನ ಮತ್ತು ಭಕ್ಷ್ಯವನ್ನು ಉದ್ದೇಶಪೂರ್ವಕವಾಗಿ ಬಿಡುವ ಸಂಪ್ರದಾಯ ರೂಢಿಯಾಗಿದೆ. ಇದರ ಅರ್ಥ ಆಹಾರವನ್ನು ವ್ಯರ್ಥ ಮಾಡುವುದು ಅಲ್ಲ; ಬದಲಾಗಿ, “ನಾವು ಬಡಿಸಿದ ಭೋಜನದಿಂದ ಸಂಪೂರ್ಣ ತೃಪ್ತರಾಗಿದ್ದೇವೆ” ಎಂಬ ಸಂದೇಶವನ್ನು ಕತೃಗಳಿಗೆ ಮತ್ತು ಪಿತೃದೇವತೆಗಳಿಗೆ ಸಾಂಕೇತಿಕವಾಗಿ ತಿಳಿಸುವ ಒಂದು ಆಚರಣೆಯಾಗಿದೆ.
ಆದರೆ ದುರಾದೃಷ್ಟವಶಾತ್, ಇತ್ತೀಚಿನ ದಿನಗಳಲ್ಲಿ ಈ ಸಂಪ್ರದಾಯದ ಹಿಂದಿರುವ ನಿಜವಾದ ಅರ್ಥವನ್ನು ಅರಿಯದೆ, ಕತೃಗಳು, ಅಡುಗೆ ಮಾಡುವವರು ಅಥವಾ ಊಟ ಮಾಡುವ ಕೆಲವರು ಅನಗತ್ಯವಾಗಿ ಹೆಚ್ಚಿನ ಪ್ರಮಾಣದ ಆಹಾರವನ್ನು ಬಡಿಸಿಕೊಂಡು, ಅದನ್ನು ಶಾಸ್ತ್ರದ ಹೆಸರಿನಲ್ಲಿ ಎಲೆಯ ಮೇಲೆ ಚೆಲ್ಲುವುದು ಅಥವಾ ವ್ಯರ್ಥ ಮಾಡುವುದು ಕಂಡುಬರುತ್ತಿದೆ. ಇದು ಸಂಪ್ರದಾಯದ ಉದ್ದೇಶಕ್ಕೆ ವಿರುದ್ಧವಾಗಿರುವುದಲ್ಲದೆ, ಅನ್ನದ ಮಹತ್ವವನ್ನು ಅವಮಾನಿಸುವ ಅಕ್ಷಮ್ಯ ಅಪರಾಧವೂ ಆಗಿದೆ.
ನಮ್ಮ ಶಾಸ್ತ್ರಗಳು ಆಹಾರವನ್ನು ವ್ಯರ್ಥ ಮಾಡಲು ಎಂದಿಗೂ ಪ್ರೋತ್ಸಾಹಿಸುವುದಿಲ್ಲ. ಆದ್ದರಿಂದ ಶ್ರಾದ್ಧದ ಸಮಯದಲ್ಲಿ ಎಲೆಯಲ್ಲಿ ಸ್ವಲ್ಪ ಅನ್ನವನ್ನು ಬಿಡುವ ಸಂಪ್ರದಾಯದ ಹಿಂದಿನ ತಾತ್ಪರ್ಯವನ್ನು ಅರಿತು, ಅದನ್ನು ಕೇವಲ ಸಾಂಕೇತಿಕ ಆಚರಣೆಯಾಗಿ ಪಾಲಿಸಬೇಕೇ ಹೊರತು, ಆಹಾರ ವ್ಯರ್ಥ ಮಾಡುವ ನೆಪವಾಗಿ ಬಳಸಬಾರದು.
ಅಕ್ಷತೆಯ ರೂಪದಲ್ಲಿ ಅಕ್ಕಿಯ ಪೋಲು
ನಮ್ಮ ಹಿಂದೂ ಸಂಪ್ರದಾಯದಲ್ಲಿ ಮದುವೆ, ಮುಂಜಿ, ನಾಮಕರಣ ಹಾಗೂ ಇತರ ಶುಭ ಸಮಾರಂಭಗಳಲ್ಲಿ ಆಶೀರ್ವಾದದ ರೂಪವಾಗಿ ಅಕ್ಷತೆ (ಅರಿಶಿನ ಮತ್ತು ಕುಂಕುಮ ಬೆರೆಸಿದ ಅಕ್ಕಿ) ಯನ್ನು ವಧು-ವರರು, ವಟುಗಳು ಅಥವಾ ಶುಭಕಾರ್ಯದ ಕೇಂದ್ರಬಿಂದುವಾಗಿರುವವರ ಮೇಲೆ ಹಾಕುವ ಆಚರಣೆ ಇದೆ. “ಅಕ್ಷತೆ” ಎಂಬ ಪದಕ್ಕೆ ಮುರಿಯದದ್ದು ಅಥವಾ ಅಖಂಡವಾದದ್ದು ಎಂಬ ಅರ್ಥವಿದ್ದು, ಇದು ಸಂಪೂರ್ಣತೆ, ಮಂಗಳ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಅಕ್ಕಿಯು ಅನ್ನದ ಪ್ರತೀಕವಾಗಿರುವುದರ ಜೊತೆಗೆ ಕುಟುಂಬದ ಐಶ್ವರ್ಯ, ಧಾನ್ಯಸಮೃದ್ಧಿ, ಸಂತಾನಾಭಿವೃದ್ಧಿ ಮತ್ತು ಶುಭಫಲಗಳ ಸಂಕೇತವಾಗಿರುವುದರಿಂದ, ಅಕ್ಷತೆಯನ್ನು ಆಶೀರ್ವಾದದ ರೂಪದಲ್ಲಿ ಎರಚುವುದರಿಂದ ದಂಪತಿಗಳಿಗೆ ಅಥವಾ ವಟುಗಳಿಗೆ ಸುಖ, ಸಮೃದ್ಧಿ ಮತ್ತು ಶುಭಾಶಯಗಳು ಲಭಿಸುತ್ತವೆ ಎಂಬ ನಂಬಿಕೆಯಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಸಮಾರಂಭಗಳಲ್ಲಿ ಕೆಜಿಗಟ್ಟಲೆ ಅಕ್ಷತೆಯನ್ನು ಬಳಸುವ ಪದ್ಧತಿ ಹೆಚ್ಚಾಗಿದ್ದು, ಆಶೀರ್ವಾದದ ವೇಳೆ ಎರಚಿದ ಅಕ್ಕಿಯ ಬಹುಪಾಲು ನೆಲದ ಮೇಲೆ ಬಿದ್ದು ನಂತರ ಎಲ್ಲರಿಂದಲೂ ತುಳಿಯಲ್ಪಡುತ್ತದೆ ಅಥವಾ ಕಸದ ರಾಶಿಗೆ ಸೇರುತ್ತದೆ. ಅನ್ನವನ್ನು “ಅನ್ನಬ್ರಹ್ಮ” ಎಂದು ಪೂಜಿಸುವ ನಮ್ಮ ಸಂಸ್ಕೃತಿಯ ದೃಷ್ಟಿಯಿಂದ ಇದು ನೋವುಂಟು ಮಾಡುವ ಸಂಗತಿಯಾಗಿದೆ. ಅನ್ನದ ಪ್ರತಿಯೊಂದು ಕಣವೂ ರೈತನ ಪರಿಶ್ರಮ, ಪ್ರಕೃತಿಯ ಕೃಪೆ ಮತ್ತು ದೇವರ ಅನುಗ್ರಹದ ಫಲವಾಗಿರುವುದರಿಂದ, ಅದನ್ನು ವ್ಯರ್ಥ ಮಾಡುವುದು ಅಥವಾ ತುಳಿಯುವುದು ನಮ್ಮ ಸಂಪ್ರದಾಯದ ಮೂಲ ತತ್ವಗಳಿಗೆ ವಿರುದ್ಧವಾಗಿದೆ.
ಈ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೆಲವು ಮಠಾಧೀಶರು, ಸ್ವಾಮೀಜಿಗಳು ಮತ್ತು ಸಮಾಜದ ಹಿರಿಯರು ಅತ್ಯಂತ ಅರ್ಥಪೂರ್ಣವಾದ ಪರ್ಯಾಯವನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅವರ ಸಲಹೆಯಂತೆ, ಸಾಂಕೇತಿಕವಾಗಿ ಸ್ವಲ್ಪ ಪ್ರಮಾಣದ ಅಕ್ಷತೆಯನ್ನು ಬಳಸಿ, ಅದರೊಂದಿಗೆ ಕೈತುಂಬ ಹೂವುಗಳನ್ನು ಸೇರಿಸಿ ಆಶೀರ್ವಾದ ಮಾಡುವ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಅಲ್ಲದೆ, ಅಕ್ಷತೆ ತಯಾರಿಸಲು ಬಳಸಬಹುದಾದ ಹೆಚ್ಚಿನ ಪ್ರಮಾಣದ ಅಕ್ಕಿಯನ್ನು ವ್ಯರ್ಥ ಮಾಡದೆ ಸಂಗ್ರಹಿಸಿ, ಮದುವೆ ಅಥವಾ ಸಮಾರಂಭದ ನಂತರ ಮಠಗಳ ಅನ್ನದಾಸೋಹಕ್ಕೆ, ಆಶ್ರಮಗಳಿಗೆ, ವಿದ್ಯಾರ್ಥಿನಿಲಯಗಳಿಗೆ ಅಥವಾ ನಿರ್ಗತಿಕರ ಆಹಾರ ಸೇವೆಗೆ ದಾನ ಮಾಡುವ ಅಭ್ಯಾಸವೂ ಬೆಳೆಯುತ್ತಿದೆ.
ಇದು ಕೇವಲ ಆಹಾರ ಉಳಿಸುವ ಕ್ರಮವಲ್ಲ; ಅನ್ನದ ಮಹತ್ವವನ್ನು ಗೌರವಿಸುವುದರ ಜೊತೆಗೆ ಸಮಾಜಸೇವೆಯನ್ನೂ ಒಳಗೊಂಡಿರುವ ಒಂದು ಪುಣ್ಯದ ಕಾರ್ಯವಾಗಿದೆ. ಸಂಪ್ರದಾಯದ ಮೂಲ ಉದ್ದೇಶವಾದ ಶುಭಾಶಯ ಮತ್ತು ಆಶೀರ್ವಾದವನ್ನು ಉಳಿಸಿಕೊಂಡೇ, ಅನ್ನವನ್ನು ವ್ಯರ್ಥವಾಗದಂತೆ ನೋಡಿಕೊಳ್ಳುವ ಈ ಹೊಸ ಚಿಂತನೆ ನಿಜಕ್ಕೂ ಸ್ವಾಗತಾರ್ಹವಾಗಿದೆ.
“ಆಶೀರ್ವಾದಕ್ಕೆ ಅಕ್ಷತೆ ಸಾಕು; ಅನ್ನದಾನಕ್ಕೆ ಉಳಿಸಿದ ಅಕ್ಕಿ ಇನ್ನೂ ಶ್ರೇಷ್ಠ.”
ನಮ್ಮ ಸಂಸ್ಕೃತಿಯ ಸಂದೇಶ
“ವ್ಯರ್ಥವಾಗಿ ಹೋಗದಿರಲಿ ಬಡಿಸಿಕೊಂಡ ಅನ್ನ, ಚರಂಡಿಗೆ ಸೇರುವ ಬದಲು ಯಾರಾದರೊಬ್ಬರ ಹೊಟ್ಟೆಗೆ ಸೇರಲಿ.” ಅನ್ನವೇ ಪರಬ್ರಹ್ಮ. ಅನ್ನಕ್ಕೆ ಗೌರವ ಕೊಡುವುದು ನಮ್ಮ ಸಂಸ್ಕೃತಿಗೆ ಗೌರವ ಕೊಟ್ಟಂತೆಯೇ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
.