ಸುಮಾರು ಮೂರು ಶತಮಾನಗಳ ಕಾಲ ಈಸ್ಟ್ ಇಂಡಿಯಾ ಕಂಪನಿ ಮತ್ತು ನಂತರ ಬ್ರಿಟಿಷ್ ಸಾಮ್ರಾಜ್ಯ ಭಾರತವನ್ನು ತನ್ನ ವಸಾಹತುವನ್ನಾಗಿ ಮಾಡಿಕೊಂಡು ಆಳಿತು. ಈ ಅವಧಿಯಲ್ಲಿ ಭಾರತದ ಅಪಾರ ಸಂಪತ್ತು ವಿದೇಶಗಳಿಗೆ ಹರಿದುಹೋಯಿತು. ನಮ್ಮ ಶಿಕ್ಷಣ ವ್ಯವಸ್ಥೆ, ಗುರುಕುಲ ಪರಂಪರೆ, ಕೈಗಾರಿಕೆಗಳು, ಸಂಸ್ಕೃತಿ ಹಾಗೂ ಸಾಮಾಜಿಕ ರಚನೆಗಳ ಮೇಲೂ ಆಳವಾದ ಪರಿಣಾಮ ಬೀರಿತು. ಬ್ರಿಟಿಷರ ಆಡಳಿತವನ್ನು ಭಾರತೀಯರು ಸ್ವಾತಂತ್ರ್ಯ ಹೋರಾಟದ ಮೂಲಕ ಎದುರಿಸಿದ ಕಾರಣಗಳು ಅನೇಕ.
ಆದರೆ, ಇತಿಹಾಸವನ್ನು ನ್ಯಾಯಯುತವಾಗಿ ನೋಡುವುದಾದರೆ, ಆ ಆಡಳಿತದೊಳಗೆಯೇ ಕೆಲವು ಅಧಿಕಾರಿಗಳು ತಮ್ಮ ಅಧಿಕಾರವನ್ನು ಕೇವಲ ಆಡಳಿತಕ್ಕಾಗಿ ಮಾತ್ರವಲ್ಲ, ಜನಸೇವೆಗೆ ಬಳಸಿದ ಉದಾಹರಣೆಗಳೂ ಕಂಡುಬರುತ್ತವೆ. ತಮಿಳುನಾಡಿನ ಮಧುರೈ, ತೇಣಿ, ದಿಂಡಿಗಲ್, ಶಿವಗಂಗೈ ಮತ್ತು ರಾಮನಾಥಪುರಂ ಜಿಲ್ಲೆಗಳ ಲಕ್ಷಾಂತರ ರೈತರು ತಮ್ಮ ಮನೆಗಳಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಾರೆ. ಅನೇಕ ಮಕ್ಕಳು ಅವರ ಹೆಸರನ್ನೇ ಧರಿಸಿದ್ದಾರೆ. ಪ್ರತಿ ವರ್ಷ ಅವರ ಜನ್ಮದಿನವನ್ನು ರೈತರು ಕೃತಜ್ಞತಾ ದಿನವಾಗಿ ಆಚರಿಸುತ್ತಾರೆ. ಒಬ್ಬ ಬ್ರಿಟಿಷ್ ಅಧಿಕಾರಿಗೆ ಭಾರತೀಯ ರೈತರು ಈ ಮಟ್ಟದ ಗೌರವ ನೀಡುವುದು ವಿಶ್ವ ಇತಿಹಾಸದಲ್ಲಿಯೇ ಅಪರೂಪದ ಸಂಗತಿ. ಹಾಗಾದರೆ ಆ ವ್ಯಕ್ತಿ ಯಾರು? ಅವರು ಏನು ಮಾಡಿದರು? ಏಕೆ ಇಂದಿಗೂ ದೇವರಂತೆ ನೆನಪಾಗುತ್ತಾರೆ? ತಿಳಿಯೋಣ ಬನ್ನಿ
ಬರಗಾಲದ ಭೀಕರ ದುರಂತ
1876–1878ರ ಮಹಾ ಬರಗಾಲ. ಹಿಂದೂ ಪಂಚಾಂಗದ ಆಧಾರದ ಮೇಲೆ ‘ಧಾತು ಈಶ್ವರಿ ಬರಗಾಲ’ ಎಂದೇ ಕರೆಯಲಾದ ಈ ಕೆಟ್ಟ ಅವಧಿಯಲ್ಲಿ, ಭಾರತದ ಇತಿಹಾಸದಲ್ಲೇ ಅತ್ಯಂತ ಭೀಕರ ಪ್ರಕೃತಿ ವಿಕೋಪಗಳಲ್ಲಿ ಒಂದಾಗಿತ್ತು. ಎಲ್-ನಿನೋ ಪರಿಣಾಮದಿಂದ ಮುಂಗಾರು ವಿಫಲಗೊಂಡ ಪರಿಣಾಮ ದಕ್ಷಿಣ ಭಾರತ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿತು.
ಮದ್ರಾಸ್ ಪ್ರೆಸಿಡೆನ್ಸಿಯ ವ್ಯಾಪ್ತಿಯಲ್ಲಿದ್ದ ಇಂದಿನ ತಮಿಳುನಾಡು, ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಹಲವೆಡೆ ಬೆಳೆಗಳು ನಾಶವಾದವು. ಲಕ್ಷಾಂತರ ಜನರು ಹಸಿವಿನಿಂದ ನರಳಿದರು. ಇತಿಹಾಸಕಾರರ ಅಂದಾಜಿನ ಪ್ರಕಾರ ಈ ಬರಗಾಲದಲ್ಲಿ ಸುಮಾರು 50 ಲಕ್ಷದಿಂದ ಒಂದು ಕೋಟಿಗೂ ಅಧಿಕ ಜನರು ಪ್ರಾಣ ಕಳೆದುಕೊಂಡರು.
ಆ ಸಮಯದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಸಾರ್ವಜನಿಕ ಲೋಕೋಪಯೋಗಿ ಇಲಾಖೆಯಲ್ಲಿ (PWD) ಸೇವೆ ಸಲ್ಲಿಸುತ್ತಿದ್ದ ಇಂಜಿನಿಯರ್ ಜಾನ್ ಪೆನ್ನಿಕುಯಿಕ್, ಜನರ ನೋವನ್ನು ಕಣ್ಣಾರೆ ಕಂಡರು.
ಕರ್ನಲ್ ಜಾನ್ ಪೆನ್ನಿಕುಯಿಕ್ (Colonel John Pennycuick). ಶಾಶ್ವತ ಪರಿಹಾರದ ಕನಸು
“ಗಂಜಿ ಕೊಡುವುದಕ್ಕಿಂತ ನೀರು ಕೊಡಿ“
ಬ್ರಿಟಿಷ್ ಸರ್ಕಾರ ಆಗ ಬರಗಾಲ ಪರಿಹಾರ ಕೇಂದ್ರಗಳನ್ನು ತೆರೆದಿತ್ತು. ಆದರೆ ಪೆನ್ನಿಕುಯಿಕ್ ಅವರಿಗೆ ಒಂದು ವಿಷಯ ಸ್ಪಷ್ಟವಾಗಿತ್ತು. “ಜನರಿಗೆ ಪ್ರತೀ ಬರಗಾಲದಲ್ಲೂ ತಾತ್ಕಾಲಿಕ ಗಂಜಿ ಹಂಚುವುದಕ್ಕಿಂತ, ಅವರಿಗೆ ನೀರನ್ನು ಒದಗಿಸಿದರೆ ಅವರು ಸ್ವತಃ ಆಹಾರ ಬೆಳೆಸಿಕೊಳ್ಳಬಹುದು.ಎಂಬುದನ್ನು ಅವರು ಅರಿತರು. ಅವರ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು.
“ಕೇರಳದ ಪಶ್ಚಿಮ ದಿಕ್ಕಿಗೆ ಹರಿದು ಅರಬ್ಬೀ ಸಮುದ್ರ ಸೇರುವ ಪೆರಿಯಾರ್ ನದಿಯ ಅಪಾರ ನೀರನ್ನು ತಮಿಳುನಾಡಿನ ಬರಡು ಪ್ರದೇಶಗಳಿಗೆ ತಿರುಗಿಸಲು ಸಾಧ್ಯವಿಲ್ಲವೇ?”
ಆ ಕಾಲಕ್ಕೆ ಇದು ಅಸಾಧ್ಯವೆನಿಸಿದ ಕಲ್ಪನೆ. ಒಂದೆಡೆ ಪಶ್ಚಿಮ ಘಟ್ಟದ ಎತ್ತರದ ಪರ್ವತಗಳು. ಮತ್ತೊಂದೆಡೆ ದಟ್ಟ ಕಾಡುಗಳು. ಇದರ ನಡುವೆ ನದಿಯ ನೀರನ್ನು ತಿರುಗಿಸುವುದು ಅಂದಿನ ತಂತ್ರಜ್ಞಾನಕ್ಕೆ ಅಸಾಧಾರಣ ಸವಾಲಾಗಿತ್ತು. ಆದರೆ ಪಶ್ಚಿಮಕ್ಕೆ ಹರಿಯುತ್ತಿದ್ದ ಪೆರಿಯಾರ್ ನದಿಯ ನೀರನ್ನು ಪೂರ್ವಕ್ಕೆ ತಿರುಗಿಸಿ ವೈಗೈ ಜಲಾನಯನ ಪ್ರದೇಶಕ್ಕೆ ತಲುಪಿಸಬೇಕೆಂಬ ಕನಸು ಕರ್ನಲ್ ಜಾನ್ ಪೆನ್ನಿಕುಯಿಕ್ ಅವರಿಗಿಂತಲೂ ಸುಮಾರು ಒಂದು ಶತಮಾನ ಮೊದಲು ಹುಟ್ಟಿಕೊಂಡಿತ್ತು ಎನ್ನುವುದು ಅನೇಕರಿಗೆ ತಿಳಿದಿಲ್ಲ.
1789ರಲ್ಲಿಯೇ ರಾಮನಾಡಿನ ರಾಜ ಮುತ್ತುರಾಮಲಿಂಗ ಸೇತುಪತಿ ಅವರ ಪ್ರಧಾನಿಯಾಗಿದ್ದ ಮುತಿರುಳಪ್ಪ ಪಿಳ್ಳೈ ಅವರು ಪೆರಿಯಾರ್ ನದಿಯ ನೀರನ್ನು ಪೂರ್ವಕ್ಕೆ ತಿರುಗಿಸುವ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಆದರೆ ಅಂದಿನ ತಂತ್ರಜ್ಞಾನ ಮತ್ತು ವೆಚ್ಚವನ್ನು ಪರಿಗಣಿಸಿ ಅದು ಕಾರ್ಯಸಾಧ್ಯವಲ್ಲ ಎಂದು ಭಾವಿಸಿ ಕೈಬಿಡಲಾಯಿತು.
ಅದಾದ ನಂತರ 1808ರಲ್ಲಿ ಮದ್ರಾಸ್ ಎಂಜಿನಿಯರಿಂಗ್ ವಿಭಾಗದ ಕ್ಯಾಪ್ಟನ್ ಜೆ. ಎಲ್. ಕಾಲ್ಡ್‌ವೆಲ್ ಅವರು ಯೋಜನೆಯನ್ನು ಮರುಪರಿಶೀಲಿಸಿದರು. ಪರ್ವತವನ್ನು ಕೊರೆದು ಸುಮಾರು ನೂರು ಅಡಿಗೂ ಹೆಚ್ಚು ಆಳದ ಸುರಂಗ ನಿರ್ಮಿಸಬೇಕಾಗುತ್ತದೆ ಎಂಬ ತೀರ್ಮಾನಕ್ಕೆ ಬಂದು, “ಈ ಯೋಜನೆ ವಾಸ್ತವಕ್ಕೆ ದೂರವಾದ ಕಲ್ಪನೆ (Chimerical)” ಎಂದು ತಮ್ಮ ವರದಿಯಲ್ಲಿ ದಾಖಲಿಸಿ ಅದನ್ನೂ ಕೈಬಿಟ್ಟರು.
ಮತ್ತೊಮ್ಮೆ 1850ರಲ್ಲಿ ಮಣ್ಣಿನ ಅಣೆಕಟ್ಟು ನಿರ್ಮಿಸಲು ಪ್ರಯತ್ನಿಸಲಾಯಿತಾದರೂ, ಕಾರ್ಮಿಕರ ಮುಷ್ಕರ ಹಾಗೂ ಅನಾರೋಗ್ಯಕರ ಪರಿಸ್ಥಿತಿಗಳಿಂದ ಕಾಮಗಾರಿ ಸ್ಥಗಿತಗೊಂಡಿತು. ನಂತರ 1862ರಲ್ಲಿ ಕ್ಯಾಪ್ಟನ್ ಜೆ.ಜಿ. ರೈವ್ಸ್ ಹಾಗೂ 1867ರಲ್ಲಿ ಮತ್ತೊಂದು ತಾಂತ್ರಿಕ ಸಮಿತಿ ಸುಮಾರು 62 ಅಡಿ ಎತ್ತರದ ಮಣ್ಣಿನ ಅಣೆಕಟ್ಟು ನಿರ್ಮಿಸುವ ಪ್ರಸ್ತಾವನೆ ಸಲ್ಲಿಸಿತು. ಆದರೆ 1876-77ರ ಭೀಕರ ಬರಗಾಲದ ಪರಿಣಾಮ ಸರ್ಕಾರದ ಆದ್ಯತೆಗಳು ಬದಲಾಗಿದ್ದರಿಂದ ಯೋಜನೆ ಮತ್ತೊಮ್ಮೆ ಮುಂದೂಡಲ್ಪಟ್ಟಿತು.
ಕೊನೆಗೆ 1882ರಲ್ಲಿ ಬ್ರಿಟಿಷ್ ಸರ್ಕಾರ ಯೋಜನೆಗೆ ಅಧಿಕೃತ ಅನುಮೋದನೆ ನೀಡಿದ ನಂತರ ಅದರ ಹೊಣೆಗಾರಿಕೆಯನ್ನು ಮೇಜರ್ ಜಾನ್ ಪೆನ್ನಿಕುಯಿಕ್ ಅವರಿಗೆ ವಹಿಸಲಾಯಿತು. ಇದೇ ಭಾರತೀಯ ನೀರಾವರಿ ಇತಿಹಾಸದ ಹೊಸ ಅಧ್ಯಾಯಕ್ಕೆ ನಾಂದಿಯಾಯಿತು.
1886ರ ಐತಿಹಾಸಿಕ ಗುತ್ತಿಗೆ
ಅಣೆಕಟ್ಟು ನಿರ್ಮಾಣ ಆರಂಭಿಸುವ ಮೊದಲು ಕೇರಳದ ತಿರುವಾಂಕೂರು ಸಂಸ್ಥಾನ ಮತ್ತು ಬ್ರಿಟಿಷ್ ಸರ್ಕಾರದ ನಡುವೆ ದೀರ್ಘಕಾಲದ ಮಾತುಕತೆ ನಡೆಯಿತು. 1886ರ ಅಕ್ಟೋಬರ್ 29ರಂದು ತಿರುವಾಂಕೂರಿನ ಮಹಾರಾಜ ಮೂಲಂ ತಿರುನಾಳ್ ರಾಮ ವರ್ಮ ಹಾಗೂ ಬ್ರಿಟಿಷ್ ಭಾರತದ ಪರವಾಗಿ ಕಾರ್ಯದರ್ಶಿಯ ನಡುವೆ ಐತಿಹಾಸಿಕ 999 ವರ್ಷಗಳ ಗುತ್ತಿಗೆ ಒಪ್ಪಂದ ನಡೆಯಿತು.
ಈ ಒಪ್ಪಂದಕ್ಕೆ ತಿರುವಾಂಕೂರಿನ ದಿವಾನ ವಿ. ರಾಮ್ ಅಯ್ಯಂಗಾರ್ ಮತ್ತು ಮದ್ರಾಸ್ ಸರ್ಕಾರದ ಕಾರ್ಯದರ್ಶಿ ಜೆ.ಸಿ. ಹ್ಯಾನಿಂಗ್ಟನ್ ಸಹಿ ಹಾಕಿದರು.
ಒಪ್ಪಂದದ ಪ್ರಮುಖ ಅಂಶಗಳು:
- ಸುಮಾರು 8,000 ಎಕರೆ ಭೂಮಿಯನ್ನು ಜಲಾಶಯಕ್ಕಾಗಿ ನೀಡಲಾಯಿತು.
- ಅಣೆಕಟ್ಟು ನಿರ್ಮಾಣಕ್ಕಾಗಿ ಹೆಚ್ಚುವರಿಯಾಗಿ 100 ಎಕರೆ ಭೂಮಿ ನೀಡಲಾಯಿತು.
- ಪ್ರತಿ ಎಕರೆಗೆ ವಾರ್ಷಿಕ ₹5 ಬಾಡಿಗೆ ನಿಗದಿಪಡಿಸಲಾಯಿತು.
- ಪೆರಿಯಾರ್ ನದಿಯ ನೀರನ್ನು ನೀರಾವರಿ ಉದ್ದೇಶಕ್ಕಾಗಿ ಬಳಸುವ ಸಂಪೂರ್ಣ ಹಕ್ಕು ಮದ್ರಾಸ್ ಸರ್ಕಾರಕ್ಕೆ ದೊರೆಯಿತು.
- ವಾರ್ಷಿಕ ಸುಮಾರು ₹40,000 ಬಾಡಿಗೆಯನ್ನು ತಿರುವಾಂಕೂರು ಸರ್ಕಾರಕ್ಕೆ ಪಾವತಿಸಲಾಗುತ್ತಿತ್ತು.
ಆ ಕಾಲಕ್ಕೆ ಇದು ಅತ್ಯಂತ ದೂರದೃಷ್ಟಿಯ ಒಪ್ಪಂದವಾಗಿತ್ತು.
ಕಾಡಿನ ಮಧ್ಯೆ ಇಂಜಿನಿಯರಿಂಗ್ ಸಾಹಸ
1881ರಲ್ಲಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಆಗಿ ಬಡ್ತಿ ಪಡೆದ ಪೆನ್ನಿಕುಯಿಕ್, ತಮ್ಮ ತಂಡದೊಂದಿಗೆ ಇಡುಕ್ಕಿಯ ದಟ್ಟ ಅರಣ್ಯ ಪ್ರವೇಶಿಸಿದರು. ಅಲ್ಲಿ ಇರಲಿಲ್ಲ ರಸ್ತೆ. ಇರಲಿಲ್ಲ ವಾಹನ. ಪ್ರತಿ ಹೆಜ್ಜೆಯೂ ಜೀವದ ಹಂಗಿನ ಪ್ರಯಾಣ. ಹುಲಿಗಳು, ಕಾಡಾನೆಗಳು, ವಿಷಸರ್ಪಗಳು, ಮಲೇರಿಯಾ, ದಟ್ಟ ಕಾಡು—ಇವೆಲ್ಲವನ್ನೂ ಎದುರಿಸುತ್ತಾ ಅವರು ತಿಂಗಳುಗಟ್ಟಲೆ ಸಮೀಕ್ಷೆ ನಡೆಸಿದರು. ಕೊನೆಗೆ ಪೆರಿಯಾರ್ ಮತ್ತು ಮುಲ್ಲಯಾರ್ ನದಿಗಳ ಸಂಗಮದ ಸಮೀಪ ಅಣೆಕಟ್ಟು ನಿರ್ಮಿಸಲು ಸೂಕ್ತ ಸ್ಥಳವನ್ನು ಆಯ್ಕೆ ಮಾಡಿದರು.
ತನ್ನ ಕಾಲಕ್ಕಿಂತ ಮುಂದಿದ್ದ ವಿನ್ಯಾಸ
1882ರಲ್ಲಿ ಅವರು ಸಿದ್ಧಪಡಿಸಿದ ಯೋಜನೆ ಅಂದಿನ ಇಂಜಿನಿಯರಿಂಗ್ ಕ್ಷೇತ್ರದಲ್ಲೇ ಅತ್ಯಂತ ಸಾಹಸಮಯ ಬ್ಲೂಪ್ರಿಂಟ್‌ಗಳಲ್ಲಿ ಒಂದಾಗಿತ್ತು.
ಅದರ ಪ್ರಮುಖ ಅಂಶಗಳು:
- ಸುಮಾರು 176 ಅಡಿ ಎತ್ತರದ ಗುರುತ್ವಾಕರ್ಷಣ (Gravity) ಅಣೆಕಟ್ಟು
- ಸುಣ್ಣ, ಬೆಲ್ಲ ಹಾಗೂ ಸುರ್ಕಿ (ಇಟ್ಟಿಗೆ ಪುಡಿ) ಮಿಶ್ರಣದಿಂದ ಅತ್ಯಂತ ಬಲಿಷ್ಠ ಗಾರೆ
- ಪಶ್ಚಿಮ ಘಟ್ಟವನ್ನು ಭೇದಿಸಿ ಸುಮಾರು 1.6 ಕಿ.ಮೀ ಉದ್ದದ ಸುರಂಗ
- ಪೆರಿಯಾರ್ ನೀರನ್ನು ವೈಗೈ ಜಲಾನಯನ ಪ್ರದೇಶಕ್ಕೆ ತಿರುಗಿಸುವ ವ್ಯವಸ್ಥೆ
- ಅಂದಿನ ಲೆಕ್ಕದಲ್ಲಿ ಸುಮಾರು 50 ಲಕ್ಷ ರೂಪಾಯಿ ವೆಚ್ಚದ ಯೋಜನೆ
ಇದು ಕೇವಲ ಅಣೆಕಟ್ಟು ಮಾತ್ರವಲ್ಲ; ದಕ್ಷಿಣ ಭಾರತದ ಭವಿಷ್ಯವನ್ನು ಬದಲಾಯಿಸುವ ಕನಸಾಗಿತ್ತು.
ಸರ್ಕಾರದ ವಿರೋಧ
ಈ ಯೋಜನೆಯನ್ನು ಬ್ರಿಟಿಷ್ ಸರ್ಕಾರ ಆರಂಭದಲ್ಲಿ ತಿರಸ್ಕರಿಸಿತು. ಇದು ಅಸಾಧ್ಯ. ಸರ್ಕಾರದ ಹಣ ವ್ಯರ್ಥ. ಕಾಡಿನ ಮಧ್ಯೆ ಇಂತಹ ಯೋಜನೆ ಸಾಧ್ಯವಿಲ್ಲ. ಇಂತಹ ಅನೇಕ ಆಕ್ಷೇಪಣೆಗಳು ಎದುರಾದವು. ಆದರೂ ಪೆನ್ನಿಕುಯಿಕ್ ಹಿಂಜರಿಯಲಿಲ್ಲ. ಸುಮಾರು ಐದು ವರ್ಷಗಳ ಕಾಲ ಅವರು ಯೋಜನೆಯ ಅಗತ್ಯವನ್ನು ಸಾಬೀತುಪಡಿಸಿ ಸರ್ಕಾರವನ್ನು ಮನವೊಲಿಸಿದರು. 1887ರಲ್ಲಿ ಕಾಮಗಾರಿ ಆರಂಭವಾಯಿತು.
1887ರಲ್ಲಿ ಕಾಮಗಾರಿ ಆರಂಭವಾದಾಗ ಅಲ್ಲಿ ರಸ್ತೆ ಇರಲಿಲ್ಲ. ವಿದ್ಯುತ್ ಇರಲಿಲ್ಲ. ಯಂತ್ರೋಪಕರಣಗಳಿರಲಿಲ್ಲ. ಸಾವಿರಾರು ಕಾರ್ಮಿಕರು ದಟ್ಟ ಅರಣ್ಯದ ಮಧ್ಯೆ ಕೆಲಸ ಮಾಡಬೇಕಾಯಿತು. ಈ ಕಾಮಗಾರಿಯಲ್ಲಿ
- ಮದ್ರಾಸ್ ಪಯೋನಿಯರ್ಸ್‌ನ 1ನೇ ಮತ್ತು 4ನೇ ಬೆಟಾಲಿಯನ್ ಸೈನಿಕರು,
- ಕೊಚ್ಚಿನ್‌ನ ಪರಿಣತ ಪೋರ್ಚುಗೀಸ್ ಬಡಗಿಗಳು,
- ಸಾವಿರಾರು ಭಾರತೀಯ ಕಾರ್ಮಿಕರು ಒಟ್ಟಾಗಿ ದುಡಿದರು.
ಪ್ರಕೃತಿಯ ಮತ್ತೊಂದು ಪರೀಕ್ಷೆ
ಅತ್ಯಂತ ದೊಡ್ಡ ಸವಾಲೆಂದರೆ ಹರಿಯುತ್ತಿದ್ದ ಪೆರಿಯಾರ್ ನದಿಯನ್ನು ತಾತ್ಕಾಲಿಕವಾಗಿ ಬೇರೆಡೆಗೆ ತಿರುಗಿಸುವುದು. ಅದಕ್ಕಾಗಿ ನಿರ್ಮಿಸಿದ್ದ Cofferdam (ತಾತ್ಕಾಲಿಕ ಅಣೆಕಟ್ಟುಗಳು) 1889ರಲ್ಲಿ ಪಶ್ಚಿಮ ಘಟ್ಟದಲ್ಲಿ ಸುರಿದ ಭಾರಿ ಮಳೆಯಿಂದ ನಿರ್ಮಾಣ ಹಂತದ ಬಹುತೇಕ ಕಾಮಗಾರಿ ಕೊಚ್ಚಿಹೋಯಿತು. ಮತ್ತೆ ಕಟ್ಟುವುದು… ಮತ್ತೆ ಕೊಚ್ಚಿಹೋಗುವುದು… ಇದು ಹಲವಾರು ಬಾರಿ ಪುನರಾವರ್ತನೆಯಾಯಿತು. ಸಹಜವಾಗಿ ಇದು ಎಲ್ಲರನ್ನೂ ನಿರಾಶೆಗೊಳಿಸುತ್ತಿದ್ದರಿಂದ ಬೇಸರಗೊಂಡ ಬ್ರಿಟಿಷ್ ಸರ್ಕಾರ ಯೋಜನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿತು ಆದರೆ ಪೆನ್ನಿಕುಯಿಕ್ ಹಿಂದೆ ಸರಿಯಲಿಲ್ಲ. ಅವರು ಹೇಳಿದರೆಂದು ಪ್ರಸಿದ್ಧವಾಗಿರುವ ಮಾತು ಹೀಗಿದೆ:
“ನಾನು ಈ ಲೋಕಕ್ಕೆ ಒಮ್ಮೆ ಮಾತ್ರ ಬಂದಿದ್ದೇನೆ. ಮಾನವಕುಲಕ್ಕೆ ಉಪಯೋಗವಾಗುವ ಈ ಕಾರ್ಯವನ್ನು ಪೂರ್ಣಗೊಳಿಸದೆ ನಾನು ಹಿಂದಿರುಗುವುದಿಲ್ಲ.”
ತನ್ನ ಆಸ್ತಿಯನ್ನೇ ತ್ಯಾಗ ಮಾಡಿದ ಇಂಜಿನಿಯರ್
ಜನಪ್ರಿಯ ಪರಂಪರೆಯ ಪ್ರಕಾರ, ಯೋಜನೆಗೆ ಸರ್ಕಾರದಿಂದ ನೆರವು ನಿಂತಾಗ ಮೈಸೂರು ಒಡೆಯರ್ ಅವರು ತಮ್ಮ ರಾಣಿಯವರ ಒಡವೆಗಳನ್ನು ಮಾರಿ ಕನ್ನಂಬಾಡಿ ಅಣೇಕಟ್ಟನ್ನು ಕಟ್ಟಿದಂತೆ, ಪೆನ್ನಿಕುಯಿಕ್ ಇಂಗ್ಲೆಂಡಿಗೆ ತೆರಳಿ, ಸ್ಕಾಟ್‌ಲೆಂಡ್‌ನಲ್ಲಿದ್ದ ತಮ್ಮ ಪಿತ್ರಾರ್ಜಿತ ಭೂಮಿ ಹಾಗೂ ಎಸ್ಟೇಟ್‌ಗಳನ್ನು ಮತ್ತು ಇಂಗ್ಲೆಂಡ್‌ನ ಸರ್ರೆಯಲ್ಲಿರುವ ತಮ್ಮ ಕುಟುಂಬದ ಐಷಾರಾಮಿ ಮನೆ ಮತ್ತು ಪೂರ್ವಜರಿಂದ ಬಂದಿದ್ದ ಜಮೀನನ್ನು ಮಾರಾಟ ಮಾಡಿ , ಆ ಹಣವನ್ನು ಭಾರತಕ್ಕೆ ತಂದು ಮುಲ್ಲಪೆರಿಯಾರ್ ಅಣೆಕಟ್ಟು ಕಾಮಗಾರಿಯನ್ನು ಮುಂದುವರಿಸಿದರು ಎನ್ನಲಾಗುತ್ತದೆ. ಕೆಲ ಸ್ಥಳೀಯ ಕತೆಗಳ ಪ್ರಕಾರ ಅವರ ಪತ್ನಿಯ ಆಭರಣಗಳನ್ನೂ ಈ ಕಾರ್ಯಕ್ಕೆ ಬಳಸಲಾಯಿತು. ಈ ಕುರಿತು ವಿಭಿನ್ನ ಐತಿಹಾಸಿಕ ಅಭಿಪ್ರಾಯಗಳಿದ್ದರೂ, ಪೆನ್ನಿಕುಯಿಕ್ ಅವರು ಯೋಜನೆ ಪೂರ್ಣಗೊಳಿಸಲು ಅಸಾಮಾನ್ಯ ಸಮರ್ಪಣೆ ಮತ್ತು ವೈಯಕ್ತಿಕ ತ್ಯಾಗ ತೋರಿದರೆಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ವಿಜಯದ ಕ್ಷಣ
1895ರಲ್ಲಿ ಮುಲ್ಲಪೆರಿಯಾರ್ ಅಣೆಕಟ್ಟು ಯಶಸ್ವಿಯಾಗಿ ಪೂರ್ಣಗೊಂಡಿತು. ಪೆರಿಯಾರ್ ನದಿಯ ನೀರು ಪಶ್ಚಿಮದಿಂದ ಪೂರ್ವಕ್ಕೆ ಹರಿಯತೊಡಗಿತು. ಅದರ ಪರಿಣಾಮವಾಗಿ ಇಂದಿನ ತೇಣಿ, ಮಧುರೈ, ದಿಂಡಿಗಲ್, ಶಿವಗಂಗೈ,ರಾಮನಾಥಪುರಂ ಜಿಲ್ಲೆಗಳ ಸುಮಾರು 2.5 ಲಕ್ಷ ಎಕರೆಗಿಂತಲೂ ಹೆಚ್ಚು ಕೃಷಿಭೂಮಿ ನೀರಾವರಿ ಸೌಲಭ್ಯ ಪಡೆದುಕೊಂಡಿತು. ಇಂದು ಲಕ್ಷಾಂತರ ರೈತರ ಬದುಕು ಈ ಅಣೆಕಟ್ಟಿನ ಮೇಲೆ ಅವಲಂಬಿತವಾಗಿದೆ.
ಜನಮನದಲ್ಲಿ ಅಮರರಾದ ಪೆನ್ನಿಕುಯಿಕ್
ಭಾರತವನ್ನು ಆಳಿದ ಸಾವಿರಾರು ಬ್ರಿಟಿಷ್ ಅಧಿಕಾರಿಗಳ ಹೆಸರುಗಳು ಇತಿಹಾಸದ ಪುಟಗಳಲ್ಲಿ ಕಳೆದುಹೋಗಿವೆ. ಆದರೆ ಜಾನ್ ಪೆನ್ನಿಕುಯಿಕ್ ಮಾತ್ರ ತಮಿಳುನಾಡಿನ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಮಂಡ್ಯ ಭಾಗದ ರೈತರುಗಳು ಕನ್ನಂಬಾಡಿ ಅಣೇಕಟ್ಟನ್ನು ಕಟ್ಟಿ ನೀರಾವರಿಯನ್ನು ಒದಗಿಸಿದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯನವರ ಭಾವ ಚಿತ್ರವನ್ನು ತಮ್ಮ ಮನೆಯ ದೇವರು ಮನೆಯಲ್ಲಿಟ್ಟು ಪೂಜಿಸುವಂತೆ ತಮಿಳುನಾಡಿನ ಅನೇಕ ರೈತರು ಇಂದಿಗೂ ತಮ್ಮ ಮನೆಗಳಲ್ಲಿ ಜಾನ್ ಪೆನ್ನಿಕುಯಿಕ್ ಅವರ ಭಾವಚಿತ್ರವನ್ನು ದೇವರ ಚಿತ್ರಗಳ ಜೊತೆಯಲ್ಲಿಯೇ ಇಟ್ಟು ಪೂಜಿಸುತ್ತಾರೆ.
ಮಧುರೈನ ಸಾರ್ವಜನಿಕ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಅವರ ಪ್ರತಿಮೆ ಸ್ಥಾಪಿಸಲಾಗಿದೆ. 2002ರಲ್ಲಿ ಅವರ ಮೊಮ್ಮಗ ಭಾರತಕ್ಕೆ ಭೇಟಿ ನೀಡಿದಾಗ ಸಾವಿರಾರು ರೈತರು ಅವರನ್ನು ಸನ್ಮಾನಿಸಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದರು ಅವರ ಪ್ರತಿಮೆಗಳಿಗೆ ರೈತರು ಹೂವಿನ ಹಾರ ಹಾಕುತ್ತಾರೆ. ಹೊಸ ಬೆಳೆ ಕಟಾವಾದಾಗ ಮೊದಲ ಫಲವನ್ನು ಅವರ ಚಿತ್ರಕ್ಕೆ ಅರ್ಪಿಸುತ್ತಾರೆ. ಕೆಲವರು ತಮ್ಮ ಮಕ್ಕಳಿಗೆ “ಪೆನ್ನಿಕುಯಿಕ್” ಎಂಬ ಹೆಸರನ್ನೇ ಇಡುತ್ತಾರೆ.
ಒಬ್ಬ ವಿದೇಶಿ ಅಧಿಕಾರಿಯನ್ನು ಜನರು ಇಷ್ಟೊಂದು ಪ್ರೀತಿಯಿಂದ ಸ್ಮರಿಸುವುದು ಅಪರೂಪ. ಅಧಿಕಾರದಿಂದ ಗೌರವ ಸಿಗಬಹುದು; ಆದರೆ ನಿಸ್ವಾರ್ಥ ಸೇವೆಯಿಂದ ಮಾತ್ರ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಸಿಗುತ್ತದೆ. ಮುಲ್ಲಪೆರಿಯಾರ್ ಅಣೆಕಟ್ಟು ಕೇವಲ ಕಲ್ಲು ಮತ್ತು ಸುಣ್ಣದಿಂದ ನಿರ್ಮಾಣವಾದ ಕಟ್ಟಡವಲ್ಲ; ಅದು ಒಬ್ಬ ಇಂಜಿನಿಯರ್‌ನ ದೂರದೃಷ್ಟಿ, ಮಾನವೀಯತೆ ಮತ್ತು ಅಚಲ ಸಂಕಲ್ಪದ ಜೀವಂತ ಸ್ಮಾರಕವಾಗಿದೆ ಎಂದರೂ ತಪ್ಪಾಗದು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ