ರಾಮಮಂದಿರದಿಂದ ಬುಲ್ಡೋಜರ್ ವರೆಗೆ 2027ರ ಚುನಾವಣೆ ಯೋಗಿಗೆ ನಿಜವಾದ ಪರೀಕ್ಷೆ
ರಾಮಮಂದಿರದ ಹುಂಡಿ ಕಳ್ಳತನ ಆಗುವುದಕ್ಕೆ ಒಂದು ತಿಂಗಳ ಮುಂಚೆ ಉತ್ತರ ಪ್ರದೇಶದ ತೀರ್ಥಕ್ಷೇತ್ರಕ್ಕೆ ಹೋಗಿದ್ದಾಗ, ಸಹಜವಾಗಿಯೇ, ಅಲ್ಲಿನ ಆಟೋವಾಲಗಳ ಬಳಿ, ಪಾನ್ ವಾಲ ಮತ್ತು ಪಾನೀ ಪೂರಿ ಮತ್ತು ವಿವಿಧ ವ್ಯಾಪಾರಿಗಳು ಮತ್ತು ಹೋಟೆಲ್ಲಿನ ಕೆಲಸಗಾರರನ್ನು ಹಾಗೇಯೇ ಮಾನಾಡಿಸುತ್ತಾ, 2027ರ ಚುನಾವಣೆಯಲ್ಲಿ ಯೋಗಿ ಸರ್ಕಾರ ಗೆಲ್ಲಬಲ್ಲದೇ ಎಂದು ಕೇಳಿದಾಗ, ಬಹುತೇಕರ ಉತ್ತರ ಹಿಂದಿನಂತೆ ಅಭೂತ ಪೂರ್ವ ಜಯವಿಲ್ಲದಿದ್ದರೂ ಸರಳ ಬಹುಮತಕ್ಕೆ ತೊಂದರೆ ಇಲ್ಲಾ ಎಂದಿದ್ದರು.
ಆದರೆ ನಂತರದ ದಿನಗಳಲ್ಲಿ ಬೆಳಕಿಗೆ ಬಂದ ರಾಮಮಂದಿರದ ಹುಂಡಿ ಕಳ್ಳತನದಿಂದಾಗ 2027ರ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಉತ್ತರ ಪ್ರದೇಶದ ಚುನಾವಣೆಯಲ್ಲಿ ಭಾರೀ ಪರಿಣಾಮ ಬೀರಲಿದೆ ಎಂದೇ ಭಾವಿಸಲಾಗಿತ್ತು. ಉತ್ತರಪ್ರದೇಶದ ರಾಜಕೀಯವನ್ನು ಕೇವಲ ಒಂದು ಘಟನೆ, ಒಂದು ಘೋಷಣೆ ಅಥವಾ ಒಂದು ಧಾರ್ಮಿಕ ವಿಚಾರದ ಆಧಾರದ ಮೇಲೆ ಅರ್ಥಮಾಡಿಕೊಳ್ಳುವುದು ಕಷ್ಟ. 2027ರ ವಿಧಾನಸಭಾ ಚುನಾವಣೆ ಯೋಗಿ ಆದಿತ್ಯನಾಥ್ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರಕ್ಕೆ ಮೂರನೇ ಅವಧಿಯ ಪರೀಕ್ಷೆಯಾಗಲಿದೆ. ಪ್ರಶ್ನೆ ಕೇವಲ ಬಿಜೆಪಿ ಗೆಲ್ಲುತ್ತದೆಯೇ?ಎಂಬುದಲ್ಲ 2017 ಮತ್ತು 2022ರಲ್ಲಿ ಜನರು ಬಿಜೆಪಿಗೆ ನೀಡಿದ ರಾಜಕೀಯ ಆದೇಶವನ್ನು 2027ರಲ್ಲಿ ಪುನರಾವರ್ತಿಸುವಷ್ಟು ಬಲವಾದ ಆಡಳಿತಾತ್ಮಕ ಮತ್ತು ರಾಜಕೀಯ ಕಾರಣಗಳು ಇನ್ನೂ ಇವೆಯೇ? ಎಂಬುದಾಗಿದೆ ಉತ್ತರ ಪ್ರದೇಶ ವಿಧಾನಸಭೆಯ ಅವಧಿ 22 ಮೇ 2027ಕ್ಕೆ ಮುಕ್ತಾಯಗೊಳ್ಳಲಿದೆ. 403 ಸದಸ್ಯರ ವಿಧಾನಸಭೆಯಲ್ಲಿ ಬಹುಮತಕ್ಕೆ 202 ಸ್ಥಾನಗಳ ಅಗತ್ಯವಿದೆ.
2017ರ ಬದಲಾವಣೆಯಿಂದ 2022ರ ಪುನರಾಗಮನದವರೆಗೆ
2017ರ ಚುನಾವಣೆಯಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತ ಪಡೆದಿತ್ತು. ಎಸ್‌ಪಿ 47 ಮತ್ತು ಬಿಎಸ್‌ಪಿ 19 ಸ್ಥಾನಗಳಿಗೆ ಕುಸಿದಿದ್ದವು. ಐದು ವರ್ಷಗಳ ಆಡಳಿತದ ನಂತರವೂ 2022ರಲ್ಲಿ ಬಿಜೆಪಿ ತನ್ನ ಬಹುಮತವನ್ನು ಉಳಿಸಿಕೊಂಡಿತು. ಬಿಜೆಪಿ 255 ಸ್ಥಾನಗಳನ್ನು ಗೆದ್ದರೆ, ಅದರ ಮಿತ್ರಪಕ್ಷಗಳೊಂದಿಗೆ ಎನ್‌ಡಿಎ 273 ಸ್ಥಾನಗಳನ್ನು ಪಡೆದಿತ್ತು. ಎಸ್‌ಪಿ 111 ಸ್ಥಾನಗಳೊಂದಿಗೆ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿತು. ಇದು ಒಂದು ಪ್ರಮುಖ ರಾಜಕೀಯ ಸಂದೇಶ ನೀಡುತ್ತದೆ 2017ರ ಬಿಜೆಪಿಯ ಗೆಲುವು ಕೇವಲ ಮೋದಿ ಅಲೆ ಅಥವಾ ರಾಮಮಂದಿರದ ಪರಿಣಾಮ ಮಾತ್ರವಲ್ಲ. ಐದು ವರ್ಷಗಳ ನಂತರವೂ ಮತದಾರರು ಸರ್ಕಾರಕ್ಕೆ ಮತ್ತೊಂದು ಅವಕಾಶ ನೀಡಿದ್ದರು. ಆದರೆ 2027ರ ಚಿತ್ರಣವನ್ನು 2022ರ ಅಂಕಿ-ಅಂಶಗಳಿಂದ ಮಾತ್ರ ಊಹಿಸುವುದು ಅಪಾಯಕಾರಿ.
ಏಕೆಂದರೆ 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ರಾಜಕೀಯ ಸಮೀಕರಣ ಗಮನಾರ್ಹವಾಗಿ ಬದಲಾಗಿತ್ತು. ಎಸ್‌ಪಿ 37 ಲೋಕಸಭಾ ಸ್ಥಾನಗಳನ್ನು ಗೆದ್ದರೆ ಬಿಜೆಪಿ 33ಕ್ಕೆ ಇಳಿಯಿತು. ಕಾಂಗ್ರೆಸ್ 6 ಸ್ಥಾನಗಳನ್ನು ಗೆದ್ದಿತು. ಎನ್‌ಡಿಎ ಮಿತ್ರಪಕ್ಷಗಳಾದ ಆರ್‌ಎಲ್‌ಡಿ ಮತ್ತು ಅಪ್ನಾ ದಳ್ ಸೇರಿ 36 ಸ್ಥಾನಗಳನ್ನು ಪಡೆದವು. ಅಂದರೆ, 2024ರ ಫಲಿತಾಂಶವು 2027ರಲ್ಲಿ ಬಿಜೆಪಿ ಎದುರಿಸುವ ಅಪಾಯದ ಮೊದಲ ದೊಡ್ಡ ಎಚ್ಚರಿಕೆಯ ಗಂಟೆ.
ರಾಮಮಂದಿರ ದೇಣಿಗೆ ಪ್ರಕರಣ ಎಷ್ಟು ದೊಡ್ಡ ಚುನಾವಣಾ ವಿಷಯ?
ಅಯೋಧ್ಯೆಯ ರಾಮಮಂದಿರಕ್ಕೆ ಸಂಬಂಧಿಸಿದ ದೇಣಿಗೆ ಮತ್ತು ಕಾಣಿಕೆಗಳ ಅಕ್ರಮದ ಆರೋಪಗಳನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ರಾಮಮಂದಿರ ಟ್ರಸ್ಟ್‌ನಲ್ಲಿ ನಡೆದಿರುವುದಾಗಿ ಆರೋಪಿಸಲಾದ ಅಕ್ರಮವನ್ನು ನೇರವಾಗಿ ಯೋಗಿ ಸರ್ಕಾರವೇ ದೇಣಿಗೆ ಕದ್ದಿದೆ ಎಂದು ನೇರವಾಗಿ ಯಾರೂ ಸಹಾ ಹೇಳುತ್ತಿಲ್ಲ. ಅದರೆ ಇಡೀ ಪ್ರಕರಣವನ್ನು ಯೋಗಿ ನಿಭಾಯಿಸಿದ ರೀತಿ ಅತ್ಯದ್ಭುತವಾಗಿದ್ದು. ಪ್ರಕರಣದ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಎಸ್‌ಐಟಿ ರಚಿಸಿತು. ಎಸ್‌ಐಟಿ ಪ್ರಾಥಮಿಕ ವರದಿ ಸಲ್ಲಿಸಿದ ನಂತರ ಎಂಟು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸ್ವತಃ ತಾವೇ ನಿಂತು ತನಿಖೆ ನಡೆಸಲು ಆಜ್ಞಾಪಿಸಿ ,ನಂತರದ ತನಿಖೆಯಲ್ಲಿ ಆಡಳಿತಾತ್ಮಕ ಮತ್ತು ಮೇಲ್ವಿಚಾರಣಾ ಲೋಪಗಳ ಬಗ್ಗೆ ಪ್ರಶ್ನೆಗಳು ಎದ್ದವು. ದೇವಾಲಯದ ದೇಣಿಗೆ ನಿರ್ವಹಣೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಟ್ರಸ್ಟ್ ತಂತ್ರಜ್ಞಾನ ಆಧಾರಿತ ಹೊಸ ವ್ಯವಸ್ಥೆಯತ್ತ ಸಾಗುತ್ತಿದೆ. ತಪ್ಪಿತಸ್ಥರನ್ನು ಕೂಡಲೇ ಕಂಡು ಹಿಡಿದು ಅವರಿಂದ ಆದಷ್ಟೂ ಹಣವನ್ನು ವಸೂಲಿ ಮಾಡಿದ್ದಲ್ಲದೇ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟೃಸ್ಟಿಗೆ ನಿವೃತ್ತ ಸೇನಾಧಿಕಾರಿಗಳನ್ನು ಆಡಳಿತಾಧಿಕಾರಿಯನ್ನಾಗಿಸಿ, ವಿರೋಧ ಪಕ್ಷಗಳು ಕೆಮ್ಮದೇ ಹಾಗೆ ಮಾಡಿರುವುದು ಮತ್ತೆ ಪರಿಸ್ಥಿತಿಯನ್ನು ಬದಲಿಸಿದೆ.
ಆದರೆ ತನಿಖೆ ಮುಚ್ಚಿಹಾಕಲಾಗಿದೆ ಅಥವಾ ಪ್ರಭಾವಿಗಳಿಗೆ ರಕ್ಷಣೆ ನೀಡಲಾಗಿದೆ ಎಂಬ ಭಾವನೆ ಮತದಾರರಲ್ಲಿ ಮೂಡಿದರೆ, ಅದರ ಪರಿಣಾಮ ದೊಡ್ಡದಾಗಬಹುದು. ಒಂದು ಹಗರಣ ಚುನಾವಣೆಯನ್ನು ಬದಲಾಯಿಸುವುದಕ್ಕಿಂತ, ಆ ಹಗರಣವನ್ನು ಸರ್ಕಾರ ಹೇಗೆ ನಿರ್ವಹಿಸುತ್ತದೆ ಎಂಬುದೇ ಕೆಲವೊಮ್ಮೆ ಹೆಚ್ಚು ನಿರ್ಣಾಯಕವಾಗುತ್ತದೆ.
2025ರ ಪ್ರಯಾಗ್‌ರಾಜ್ ಮಹಾಕುಂಭ ಮೇಳ ಯೋಗಿ ಸರ್ಕಾರ ನಿಭಾಯಿಸಿದ ರೀತಿ ಮತ್ತು ಗಳಿಸಿದ ಆದಾಯ
ಯೋಗಿ ಸರ್ಕಾರವು ಮಹಾಕುಂಭಕ್ಕೆ ಸುಮಾರು ₹7,000 ಕೋಟಿ ಮಟ್ಟದಲ್ಲಿ ಹೂಡಿಕೆ ಮಾಡಿದ್ದು, ಸರ್ಕಾರಕ್ಕೆ ಸುಮಾರು ₹25,000 ಕೋಟಿ ನೇರ ಆದಾಯ ಬರಲಿದೆ ಎಂದು ಅಂದಾಜಿಸಲಾಗಿತ್ತು. ಇದಕ್ಕಿಂತ ದೊಡ್ಡದಾಗಿ, ಮಹಾಕುಂಭವು ಉತ್ತರ ಪ್ರದೇಶದ ಆರ್ಥಿಕತೆಯಲ್ಲಿ ₹2–2.8 ಲಕ್ಷ ಕೋಟಿಯಷ್ಟು ಒಟ್ಟು ಆರ್ಥಿಕ ಚಟುವಟಿಕೆಯನ್ನು ಸೃಷ್ಟಿಸಿದೆ ಎಂಬ ಅಂದಾಜುಗಳಿವೆ. ಇದು ಮತದಾರರಲ್ಲಿ ಬಹಳ ಪರಿಣಾಮಕಾರಿ ಅಂಶವಾಗಬಹುದು.
ಬಿಜೆಪಿಯ ಅತಿ ದೊಡ್ಡ ಬಲ ಅಭಿವೃದ್ಧಿಯ ಗೋಚರ ಮುಖ
ಯೋಗಿ ಸರ್ಕಾರದ ಪರವಾಗಿ ಮಾತನಾಡುವಾಗ ಕೇವಲ ಭಾವನಾತ್ಮಕ ಅಥವಾ ಧಾರ್ಮಿಕ ವಿಷಯಗಳಲ್ಲದೇ. ಕಳೆದ ಕೆಲವು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ನಡೆದಿರುವ ಬದಲಾವಣೆಗಳು ಗಮನಾರ್ಹ. ರಾಜ್ಯ ಸರ್ಕಾರದ ಹೂಡಿಕೆ ವಿಭಾಗದ ಅಂಕಿಅಂಶಗಳ ಪ್ರಕಾರ, 2017ರಿಂದ 2025ರ ನಡುವೆ ಉತ್ತರ ಪ್ರದೇಶದ GSDP ಸುಮಾರು ₹14.5 ಲಕ್ಷ ಕೋಟಿಯಿಂದ ₹30.8 ಲಕ್ಷ ಕೋಟಿಗೆ ಏರಿದೆ. ಇದೇ ಅವಧಿಯಲ್ಲಿ ರಫ್ತು ₹84,000 ಕೋಟಿಯಿಂದ ₹1.76 ಲಕ್ಷ ಕೋಟಿಗೆ ಏರಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ವಿಮಾನ ಸಂಪರ್ಕದಲ್ಲಿಯೂ ದೊಡ್ಡ ವಿಸ್ತರಣೆ ಕಂಡುಬಂದಿದೆ. 2017ರಲ್ಲಿ ನಾಲ್ಕು ಕಾರ್ಯನಿರ್ವಹಿಸುತ್ತಿದ್ದ ವಿಮಾನ ನಿಲ್ದಾಣಗಳಿದ್ದ ರಾಜ್ಯದಲ್ಲಿ ನಂತರ 15 ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ ಮತ್ತು 80ಕ್ಕೂ ಹೆಚ್ಚು ಗಮ್ಯಸ್ಥಾನಗಳಿಗೆ ಸಂಪರ್ಕವಿದೆ ಎಂದು Invest UP ತಿಳಿಸಿದೆ. ಎಕ್ಸ್‌ಪ್ರೆಸ್‌ವೇಗಳ ವಿಸ್ತರಣೆ ಮತ್ತೊಂದು ದೊಡ್ಡ ಬದಲಾವಣೆ. ಪೂರ್ವಾಂಚಲ, ಬುಂದೇಲ್‌ಖಂಡ್, ಗಂಗಾ ಮತ್ತು ಇತರ ಎಕ್ಸ್‌ಪ್ರೆಸ್‌ವೇ ಯೋಜನೆಗಳು ರಾಜ್ಯದ ವಿವಿಧ ಭಾಗಗಳನ್ನು ಹೊಸ ಆರ್ಥಿಕ ಕಾರಿಡಾರ್‌ಗಳಿಗೆ ಜೋಡಿಸುವ ಪ್ರಯತ್ನದ ಭಾಗವಾಗಿವೆ. ನೋಯ್ಡಾ-ಜೆವಾರ್ ಪ್ರದೇಶದಲ್ಲಿ ಕೈಗಾರಿಕಾ ಹೂಡಿಕೆ, ವಿಮಾನ ನಿಲ್ದಾಣ, ಲಾಜಿಸ್ಟಿಕ್ಸ್ ಮತ್ತು ನಗರ ಮೂಲಸೌಕರ್ಯ ಬೆಳೆಯುತ್ತಿರುವುದು ಉತ್ತರ ಪ್ರದೇಶದ ಹಳೆಯ ರಾಜಕೀಯ ಚಿತ್ರಣದಿಂದ ವಿಭಿನ್ನವಾದ ಹೊಸ ಆರ್ಥಿಕ ಕಥೆಯನ್ನು ಕಟ್ಟುತ್ತಿದೆ.
ಇದೇ ಬಿಜೆಪಿಯ ಅತ್ಯಂತ ಬಲವಾದ ಚುನಾವಣಾ ವಾದವಾಗಬಹುದು ನಾವು ಕೇವಲ ಘೋಷಣೆ ಮಾಡಿಲ್ಲ; ನೆಲದ ಮೇಲೆ ಮೂಲಸೌಕರ್ಯ ನಿರ್ಮಿಸಿದ್ದೇವೆ. ಆದರೆ ಇದಕ್ಕೂ ಒಂದು ಪ್ರಶ್ನೆಯಿದೆ. ಎಕ್ಸ್‌ಪ್ರೆಸ್‌ವೇ ಬಂದರೆ ಉದ್ಯೋಗ ಎಷ್ಟು ಸೃಷ್ಟಿಯಾಯಿತು? ವಿಮಾನ ನಿಲ್ದಾಣ ಬಂದರೆ ಸ್ಥಳೀಯ ಯುವಕರ ಆದಾಯ ಎಷ್ಟು ಹೆಚ್ಚಾಯಿತು? ಕೈಗಾರಿಕೆ ಬಂದರೆ ಎಷ್ಟು ಸ್ಥಳೀಯರಿಗೆ ಉದ್ಯೋಗ ದೊರೆಯಿತು? 2027ರಲ್ಲಿ ಮತದಾರರು ಕೇವಲ ರಸ್ತೆ, ಸೇತುವೆ ಮತ್ತು ವಿಮಾನ ನಿಲ್ದಾಣಗಳನ್ನು ನೋಡುವುದಿಲ್ಲ. ಅವು ತಮ್ಮ ಜೀವನಮಟ್ಟವನ್ನು ಎಷ್ಟು ಬದಲಿಸಿವೆ ಎಂಬುದನ್ನೂ ನೋಡುತ್ತಾರೆ.
ಕಾನೂನು–ಸುವ್ಯವಸ್ಥೆ ಯೋಗಿ ಮಾದರಿಯ ಮತ್ತೊಂದು ಪ್ರಮುಖ ಅಸ್ತ್ರ
ಯೋಗಿ ಸರ್ಕಾರದ ಅತ್ಯಂತ ಪರಿಣಾಮಕಾರಿ ರಾಜಕೀಯ ಸಂದೇಶಗಳಲ್ಲಿ ಒಂದು ಕಾನೂನು–ಸುವ್ಯವಸ್ಥೆ. 2017ಕ್ಕೂ ಮುನ್ನ ಉತ್ತರ ಪ್ರದೇಶದಲ್ಲಿ ಅಪರಾಧ, ರಾಜಕೀಯ ಪ್ರಭಾವ ಮತ್ತು ಮಾಫಿಯಾ ಎಂಬ ಪದಗಳು ಸಾರ್ವಜನಿಕ ಚರ್ಚೆಯಲ್ಲಿ ಬಲವಾಗಿ ಕೇಳಿಬರುತ್ತಿದ್ದವು. ಯೋಗಿ ಸರ್ಕಾರವು ಇದರ ವಿರುದ್ಧ ಕಠಿಣ ಪೊಲೀಸ್ ಕ್ರಮ, ಆಸ್ತಿ ಜಪ್ತಿ, ಗ್ಯಾಂಗ್‌ಗಳ ವಿರುದ್ಧ ಕ್ರಮ ಮತ್ತು ಬುಲ್ಡೋಜರ್ ಕ್ರಮವನ್ನು ತನ್ನ ಆಡಳಿತದ ಗುರುತನ್ನಾಗಿ ಮಾಡಿಕೊಂಡಿತು. ಇದರಿಂದ ಒಂದು ವರ್ಗದ ಮತದಾರರಲ್ಲಿ ಸರ್ಕಾರದಲ್ಲಿ ಭಯವಿಲ್ಲ. ಅಪರಾಧಿಗಳಲ್ಲಿ ಭಯವಿದೆ ಎಂಬ ಭಾವನೆ ಮೂಡಿದೆ.
ಆದರೆ ಕಾನೂನು–ಸುವ್ಯವಸ್ಥೆ ಎಂದರೆ ಕಠಿಣ ಕ್ರಮವೇ? ಅಥವಾ ಕಠಿಣ ಕ್ರಮದ ಜೊತೆಗೆ ಕಾನೂನುಬದ್ಧ ಪ್ರಕ್ರಿಯೆಯೂ ಇರಬೇಕೇ? ಸುಪ್ರೀಂ ಕೋರ್ಟ್ 2024ರಲ್ಲಿ ಅಪರಾಧದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಆಸ್ತಿಯನ್ನು ಕೇವಲ ಆರೋಪದ ಆಧಾರದ ಮೇಲೆ ಶಿಕ್ಷೆಯಂತೆ ಧ್ವಂಸ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು ಮತ್ತು ಸೂಕ್ತ ಕಾನೂನು ಪ್ರಕ್ರಿಯೆಯ ಅಗತ್ಯವನ್ನು ಒತ್ತಿಹೇಳಿತ್ತು. ಹೀಗಾಗಿ ಬಿಜೆಪಿಗೆ ಇರುವ ಸವಾಲು ಸರಳ ಮಾಫಿಯಾವನ್ನು ನಿಯಂತ್ರಿಸುವ ಕಠಿಣ ಸರ್ಕಾರದ ಚಿತ್ರಣವನ್ನು ಉಳಿಸಿಕೊಂಡು, ಅದೇ ಸಮಯದಲ್ಲಿ ಕಾನೂನಿನ ಆಳ್ವಿಕೆ ಮತ್ತು ನ್ಯಾಯಾಂಗ ಪ್ರಕ್ರಿಯೆಯ ಬಗ್ಗೆ ವಿಶ್ವಾಸವನ್ನು ಹೆಚ್ಚಿಸುವುದು.
ಆದರೆ ಹಳೆಯ ಸಮಾಜವಾದಿ ಆಡಳಿತದ ವಿರುದ್ಧದ ವಾದ ಸಾಕಾಗುತ್ತದೆಯೇ?
ಇಲ್ಲಿಯೇ ಬಿಜೆಪಿಯ 2027ರ ದೊಡ್ಡ ಸಮಸ್ಯೆ ಆರಂಭವಾಗಬಹುದು. ಎಸ್‌ಪಿ ಮತ್ತು ಬಿಎಸ್‌ಪಿಯ ಹಿಂದಿನ ಆಡಳಿತದ ವಿರುದ್ಧದ ಟೀಕೆಗಳು ಬಿಜೆಪಿಗೆ ರಾಜಕೀಯವಾಗಿ ನೆರವಾಗಬಹುದು. ಆದರೆ 2027ರ ಚುನಾವಣೆಯಲ್ಲಿ ಮತದಾರರು ಕೇವಲ ಹಿಂದೆ ಯಾರು ಕೆಟ್ಟಿದ್ದರು?ಎಂಬ ಪ್ರಶ್ನೆಗೆ ಮತ ಹಾಕುವುದಿಲ್ಲ. ಅವರು ಕೇಳಬಹುದು
ಮುಂದೆ ಯಾರು ಉತ್ತಮ?ಇದು ಅತ್ಯಂತ ಮಹತ್ವದ ಬದಲಾವಣೆ. 2017ರಲ್ಲಿ ಹಿಂದಿನ ಸರ್ಕಾರಗಳ ವೈಫಲ್ಯಬಿಜೆಪಿಗೆ ದೊಡ್ಡ ಚುನಾವಣಾ ಅಸ್ತ್ರವಾಗಿತ್ತು. 2027ರಲ್ಲಿ ಬಿಜೆಪಿ ಸ್ವತಃ ಒಂದು ದಶಕದ ಆಡಳಿತದ ಹೊಣೆ ಹೊತ್ತಿರಲಿದೆ. ಹೀಗಾಗಿ ಎಸ್‌ಪಿ–ಬಿಎಸ್‌ಪಿ ಕೆಟ್ಟವುಎನ್ನುವುದಕ್ಕಿಂತ ಬಿಜೆಪಿ ಮುಂದಿನ ಐದು ವರ್ಷಗಳಲ್ಲಿ ಏನು ಮಾಡಲಿದೆ?ಎಂಬ ಪ್ರಶ್ನೆ ಹೆಚ್ಚು ಮುಖ್ಯವಾಗುತ್ತದೆ.
ಎಸ್‌ಪಿಯ ಪುನರಾಗಮನವನ್ನು ನಿರ್ಲಕ್ಷಿಸುವುದು ಬಿಜೆಪಿಗೆ ಅಪಾಯಕಾರಿ
2024ರ ಲೋಕಸಭಾ ಚುನಾವಣೆಯ ಫಲಿತಾಂಶ ಬಿಜೆಪಿಗೆ ದೊಡ್ಡ ಎಚ್ಚರಿಕೆ. ಎಸ್‌ಪಿ 37 ಸ್ಥಾನ ಗೆದ್ದು ರಾಜ್ಯದ ಅತಿದೊಡ್ಡ ಪಕ್ಷವಾಯಿತು. ಬಿಜೆಪಿ 33ಕ್ಕೆ ಸೀಮಿತವಾಯಿತು. ಇದಕ್ಕೆ ಹಲವಾರು ಕಾರಣಗಳನ್ನು ರಾಜಕೀಯ ವಿಶ್ಲೇಷಕರು ಗುರುತಿಸಿದ್ದಾರೆ ಜಾತಿ ಸಮೀಕರಣ, ದಲಿತ ಮತಗಳ ಬದಲಾವಣೆ, ಉದ್ಯೋಗ ಮತ್ತು ನಿರುದ್ಯೋಗದ ಪ್ರಶ್ನೆ, ಗ್ರಾಮೀಣ ಅಸಮಾಧಾನ, ಸಂವಿಧಾನ ಮತ್ತು ಮೀಸಲಾತಿ ಕುರಿತ ಆತಂಕಗಳು, ಸ್ಥಳೀಯ ಅಭ್ಯರ್ಥಿಗಳ ವಿರುದ್ಧದ ಅಸಮಾಧಾನ ಮತ್ತು ಎಸ್‌ಪಿ-ಕಾಂಗ್ರೆಸ್ ಮೈತ್ರಿಯ ಪರಿಣಾಮ.
ಅದರಲ್ಲೂ ಮುಖ್ಯವಾಗಿ, ಎಸ್‌ಪಿ ತನ್ನ ಹಳೆಯ ಯಾದವ + ಮುಸ್ಲಿಂ ಸಾಮಾಜಿಕ ನೆಲೆಯನ್ನು ಮೀರಿ ಇತರ ಹಿಂದುಳಿದ ವರ್ಗಗಳು ಮತ್ತು ದಲಿತ ಮತದಾರರ ಕೆಲವು ಭಾಗಗಳನ್ನು ತಲುಪಲು ಪ್ರಯತ್ನಿಸುತ್ತಿರುವುದು ಬಿಜೆಪಿಗೆ ಸವಾಲಾಗಿದೆ. 2027ರಲ್ಲಿ ಈ ಸಾಮಾಜಿಕ ಮೈತ್ರಿ ಇನ್ನಷ್ಟು ಗಟ್ಟಿಯಾದರೆ, 2024ರ ಲೋಕಸಭಾ ಫಲಿತಾಂಶವು ಕೇವಲ ಒಂದು ತಾತ್ಕಾಲಿಕ ವಿಚಲನವಾಗಿರದೆ ಹೊಸ ರಾಜಕೀಯ ಪ್ರವೃತ್ತಿಯ ಆರಂಭವಾಗಬಹುದು.
ಕಾಂಗ್ರೆಸ್‌ಗೆ ಇನ್ನೂ ಅವಕಾಶವಿದೆಯೇ?
ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಮತ್ತೆ ಏಕಾಂಗಿಯಾಗಿ ಅಧಿಕಾರಕ್ಕೆ ಬರುವ ಸಾಧ್ಯತೆ ಪ್ರಸ್ತುತ ಕಡಿಮೆ ಎಂದೇ ಹೇಳಬಹುದು. ಆದರೆ ಕಾಂಗ್ರೆಸ್ ಸಂಪೂರ್ಣ ಅಪ್ರಸ್ತುತ ಎಂದು ಹೇಳುವುದು ಸರಿಯಾಗುವುದಿಲ್ಲ. 2024ರಲ್ಲಿ ಕಾಂಗ್ರೆಸ್ ಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡು ಲೋಕಸಭೆಯಲ್ಲಿ ಆರು ಸ್ಥಾನಗಳನ್ನು ಗೆದ್ದಿತು . ಆದ್ದರಿಂದ 2027ರಲ್ಲಿ ಕಾಂಗ್ರೆಸ್‌ನ ನಿಜವಾದ ಪ್ರಭಾವವು ತನ್ನದೇ ಸ್ಥಾನಗಳಿಗಿಂತ ಎಸ್‌ಪಿಯೊಂದಿಗೆ ಅದು ಹೊಂದಿಸುವ ಮೈತ್ರಿ, ಮತ ವರ್ಗಾವಣೆ ಮತ್ತು ಅಭ್ಯರ್ಥಿ ಆಯ್ಕೆ ಮೇಲೆ ಅವಲಂಬಿತವಾಗಬಹುದು.
ಬಿಎಸ್‌ಪಿ ಕುಸಿತ ಬಿಜೆಪಿಗೆ ಲಾಭವೇ ಅಥವಾ ಎಸ್‌ಪಿಗೆ?
2024ರಲ್ಲಿ ಬಿಎಸ್‌ಪಿ ಒಂದೂ ಲೋಕಸಭಾ ಸ್ಥಾನ ಗೆಲ್ಲಲಿಲ್ಲ. ಅದರ ಮತಪಾಲು ಕೂಡ ಗಮನಾರ್ಹವಾಗಿ ಕುಸಿಯಿತು. ಇದು ಬಿಜೆಪಿಗೂ ಎಸ್‌ಪಿಗೂ ಎರಡಕ್ಕೂ ಮಹತ್ವದ್ದಾಗಿದೆ. ಬಿಎಸ್‌ಪಿಯ ಮತದಾರರು ಬಿಜೆಪಿಯತ್ತ ಹೋದರೆ ಬಿಜೆಪಿ ಬಲಗೊಳ್ಳುತ್ತದೆ. ಅದೇ ಮತದಾರರು ಎಸ್‌ಪಿಯತ್ತ ಸಂಪೂರ್ಣವಾಗಿ ವರ್ಗಾಯಿಸಿದರೆ ಎಸ್‌ಪಿಯ ಗೆಲುವಿನ ಸಾಧ್ಯತೆ ಹೆಚ್ಚುತ್ತದೆ. ಹೀಗಾಗಿ ಮಾಯಾವತಿಯವರ ರಾಜಕೀಯ ಸ್ಥಾನ 2027ರ ಫಲಿತಾಂಶದಲ್ಲಿ ಕಿಂಗ್‌ಮೇಕರ್ರೀತಿಯ ನೇರ ಪಾತ್ರ ವಹಿಸದಿದ್ದರೂ, ಅವರ ಮತಬ್ಯಾಂಕ್ ಯಾರತ್ತ ಸರಿಯುತ್ತದೆ ಎಂಬುದು ಬಹಳ ಮುಖ್ಯವಾಗಬಹುದು.
ರಾಮ ವಿರುದ್ಧ ರೊಟ್ಟಿ ಅಲ್ಲ 2027ರಲ್ಲಿ ಎರಡೂ ಬೇಕಾಗಬಹುದು
ಉತ್ತರ ಪ್ರದೇಶದ ರಾಜಕೀಯವನ್ನು ಕೇವಲ ಹಿಂದುತ್ವದ ದೃಷ್ಟಿಯಿಂದಲೂ, ಕೇವಲ ಅಭಿವೃದ್ಧಿಯ ದೃಷ್ಟಿಯಿಂದಲೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಬಿಜೆಪಿಗೆ ರಾಮಮಂದಿರ, ಹಿಂದುತ್ವ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಯು ಇನ್ನೂ ಪ್ರಮುಖ ರಾಜಕೀಯ ಬಂಡವಾಳ. ಆದರೆ ಅದೇ ಮತದಾರನಿಗೆ
- ಉದ್ಯೋಗ ಬೇಕು
- ಉತ್ತಮ ರಸ್ತೆ ಬೇಕು
- ವಿದ್ಯುತ್ ಬೇಕು
- ಕೃಷಿಗೆ ನ್ಯಾಯಯುತ ಬೆಲೆ ಬೇಕು
- ಕಾನೂನು-ಸುವ್ಯವಸ್ಥೆ ಬೇಕು
- ಯುವಕರಿಗೆ ಅವಕಾಶ ಬೇಕು
- ನಗರಗಳಲ್ಲಿ ಹೂಡಿಕೆ ಬೇಕು
- ಗ್ರಾಮಗಳಲ್ಲಿ ಆದಾಯ ಬೇಕು
- ಮಹಿಳೆಯರಿಗೆ ಸುರಕ್ಷತೆ ಬೇಕು
ಹೀಗಾಗಿ 2027ರ ಚುನಾವಣೆಯ ನಿಜವಾದ ಸೂತ್ರ ರಾಮ + ರೊಟ್ಟಿ + ರೋಜ್‌ಗಾರ್ + ರಸ್ತೆ + ರೈತ ಆಗಬಹುದು.
ಹಾಗಾದರೆ ಯೋಗಿ ಹ್ಯಾಟ್ರಿಕ್ ಹೊಡೆಯಲಿದ್ದಾರೆಯೇ?
ಇದೀಗ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಬಿಜೆಪಿ ಇನ್ನೂ ಪ್ರಮುಖ ಸ್ಪರ್ಧಿ ಎಂಬುದರಲ್ಲಿ ಅನುಮಾನವಿಲ್ಲ. 2017 ಮತ್ತು 2022ರ ವಿಧಾನಸಭಾ ಗೆಲುವು, ದೊಡ್ಡ ಸಂಘಟನಾ ಯಂತ್ರ, ಸರ್ಕಾರದ ಸಂಪನ್ಮೂಲ ಮತ್ತು ಆಡಳಿತದ ನಿರಂತರತೆ, ಮೂಲಸೌಕರ್ಯ ಯೋಜನೆಗಳು, ಕಾನೂನು-ಸುವ್ಯವಸ್ಥೆಯ ರಾಜಕೀಯ ಸಂದೇಶ ಮತ್ತು ಯೋಗಿ ಆದಿತ್ಯನಾಥ್ ಅವರ ವೈಯಕ್ತಿಕ ರಾಜಕೀಯ ಬ್ರ್ಯಾಂಡ್ ಇವೆಲ್ಲ ಬಿಜೆಪಿಯ ಪರವಾಗಿವೆ. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯ ಮತದಾನ ವರ್ತನೆ ಒಂದೇ ಆಗುವುದಿಲ್ಲ. ಸ್ಥಳೀಯ ಶಾಸಕರ ವಿರುದ್ಧದ ಅಸಮಾಧಾನ, ಜಾತಿ ಸಮೀಕರಣ ಮತ್ತು ಅಭ್ಯರ್ಥಿಗಳ ಆಯ್ಕೆ ಅನೇಕ ಕ್ಷೇತ್ರಗಳಲ್ಲಿ ಫಲಿತಾಂಶವನ್ನು ತಿರುಗಿಸಬಹುದು.
ಯೋಗಿಯವವರಿಗೆ ಮುಕ್ತ ಅವಕಾಶ
ಕಳೆದ ಲೋಕಸಭಾ ಚುನಾವಣಾ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿಯ ನಡುವಿನ ಸಮನ್ವಯದ ಕೊರತೆಯಿಂದಾಗಿ, ಅಭ್ಯರ್ಥಿಯ ಆಯ್ಕೆಯಿಂದ ಹಿಡಿದು ಇಡೀ ಚುನಾವಣೆಯನ್ನು ನೇರವಾಗಿ ಕೇಂದ್ರವೇ ನಿರ್ವಹಿಸಿತ್ತು. ಇದು ಯೋಗಿಯವರ ಅಸಮಧಾನಕ್ಕೂ ಕಾರಣವಾಗಿದ್ದಲ್ಲದೇ, ಮೋದಿಯವರ ಉತ್ತರಾಧಿಕಾರಿ ಎಂದೇ ಭಾವಿಸಿರುವ ಯೋಗಿಯವರನ್ನು ಬಿಜೆಪಿಯವರೇ ತುಳಿಯುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಈ ಬಾರಿ ಬಿಜೆಪಿ ಆದರಿಂದ ಎಚ್ಚೆತ್ತುಕೊಂಡಿದ್ದು, ಆಭ್ಯರ್ಥಿಯ ಆಯ್ಕೆಯಿಂದ ಹಿಡಿದು, ಚುನಾವಣಾ ಉಸ್ತುವಾರಿ, ನಿರ್ವಹಣೆ, ಪ್ರಚಾರ, ಸಂಪರ್ಕ ಎಲ್ಲದಕ್ಕೂ ಯೋಗಿಯವರಿಗೆ ಮುಕ್ತ ಅಧಿಕಾರವನ್ನು ನೀಡಿದ್ದು, ಅಗತ್ಯವಿದ್ದಲ್ಲಿ ಕೇಂದ್ರದಿಂದ ಎಂತಹ ಸಹಾಯಕ್ಕೂ ಸಿದ್ಧ ಎಂದು ಘೋಷಿಸಿರುವುದು ಯೋಗಿ ಸರ್ಕಾರಕ್ಕೆ ಆನೆ ಬಲ ಬಂದಂತಾಗಿದೆ.
ಕೊನೆಯ ಮಾತು ಬಿಜೆಪಿ ಸೋಲಬೇಕಾದರೆ ಅದರಿಗಿಂತ ಉತ್ತಮ ಪರ್ಯಾಯ ಬೇಕು
ಉತ್ತರ ಪ್ರದೇಶದ ಮತದಾರರು ಬಿಜೆಪಿಗೆ ಶಾಶ್ವತವಾಗಿ ಬದ್ಧರಾಗಿದ್ದಾರೆ ಎಂದು ಭಾವಿಸುವುದು ಎಷ್ಟು ತಪ್ಪೋ, ರಾಮಮಂದಿರ ದೇಣಿಗೆ ಪ್ರಕರಣದಿಂದಲೇ ಬಿಜೆಪಿ 2027ರಲ್ಲಿ ಸೋಲುತ್ತದೆ ಎಂದು ಭಾವಿಸುವುದೂ ಅಷ್ಟೇ ತಪ್ಪು. ರಾಜಕೀಯದಲ್ಲಿ ಯಾವುದೇ ಪಕ್ಷಕ್ಕೆ ಶಾಶ್ವತ ಮಾಲೀಕತ್ವವಿಲ್ಲ. ಬಿಜೆಪಿಯು 2017ರಲ್ಲಿ ಅಧಿಕಾರಕ್ಕೆ ಬಂದದ್ದು ಹಳೆಯ ವ್ಯವಸ್ಥೆವಿರುದ್ಧದ ಮತದಿಂದ. 2022ರಲ್ಲಿ ಅದು ತನ್ನ ಆಡಳಿತದ ಆಧಾರದ ಮೇಲೆ ಮತ್ತೆ ಗೆದ್ದಿತು. 2024ರಲ್ಲಿ ಮತದಾರರು ಬಿಜೆಪಿಗೆ ಎಚ್ಚರಿಕೆ ನೀಡಿದರು. ಈ ಮೂರು ಫಲಿತಾಂಶಗಳನ್ನು ಒಟ್ಟಿಗೆ ನೋಡಿದರೆ ಒಂದು ಸಂಗತಿ ಸ್ಪಷ್ಟವಾಗುತ್ತದೆ
ಯೋಗಿ ಸರ್ಕಾರ ಇನ್ನೂ ಬಲವಾದ ಸ್ಪರ್ಧಿಯಾಗಿದೆ. ಆದರೆ ಅಜೇಯವಲ್ಲ. ರಾಮಮಂದಿರದ ದೇಣಿಗೆ ಪ್ರಕರಣ ಬಿಜೆಪಿಗೆ ನೈತಿಕ ಮತ್ತು ರಾಜಕೀಯ ಹಾನಿ ಉಂಟುಮಾಡಬಹುದು. ಆದರೆ ಅದೊಂದು ಪ್ರಕರಣ ಮಾತ್ರ 403 ಕ್ಷೇತ್ರಗಳ ಚುನಾವಣೆಯನ್ನು ನಿರ್ಧರಿಸುವ ಸಾಧ್ಯತೆ ಕಡಿಮೆ. ತನಿಖೆಯ ಫಲಿತಾಂಶ, ಸರ್ಕಾರದ ಪ್ರತಿಕ್ರಿಯೆ ಮತ್ತು ಪ್ರಕರಣದ ರಾಜಕೀಯೀಕರಣದ ಮಟ್ಟ ಅದರ ಪರಿಣಾಮವನ್ನು ನಿರ್ಧರಿಸಲಿದೆ. ಬಿಜೆಪಿಯ ಮುಂದೆ ಈಗ ಹೊಸ ಪರೀಕ್ಷೆ ಇದೆ. ಉತ್ತರದಲ್ಲಿ ರಾಮಮಂದಿರವೂ ಇರಬಹುದು. ಅಯೋಧ್ಯೆಯೂ ಇರಬಹುದು. ಎಕ್ಸ್‌ಪ್ರೆಸ್‌ವೇಗಳೂ ಇರಬಹುದು. ನೋಯ್ಡಾದ ಅಭಿವೃದ್ಧಿಯೂ ಇರಬಹುದು. ಮಾಫಿಯಾ ವಿರುದ್ಧದ ಕಠಿಣ ಕ್ರಮವೂ ಇರಬಹುದು. ಆದರೆ ಅಂತಿಮವಾಗಿ ಮತದಾರನ ಪ್ರಶ್ನೆ ಬಹುಶಃ ಇನ್ನೂ ಸರಳವಾಗಿರುತ್ತದೆ
ನನ್ನ ಕುಟುಂಬದ ಜೀವನ ನಿಜವಾಗಿಯೂ ಉತ್ತಮವಾಗಿದೆಯೇ? ಆ ಪ್ರಶ್ನೆಗೆ ಬಿಜೆಪಿ ವಿಶ್ವಾಸಾರ್ಹ ಉತ್ತರ ನೀಡಲು ಸಾಧ್ಯವಾದರೆ ಯೋಗಿ ಆದಿತ್ಯನಾಥ್ ಮೂರನೇ ಅವಧಿಯತ್ತ ಸಾಗುವ ಸಾಧ್ಯತೆ ಗಂಭೀರವಾಗಿದೆ. ಆದರೆ ಎಸ್‌ಪಿ, ಕಾಂಗ್ರೆಸ್ ಅಥವಾ ಮತ್ತೊಂದು ರಾಜಕೀಯ ಶಕ್ತಿ ಬಿಜೆಪಿಗಿಂತ ಉತ್ತಮ ಆಡಳಿತ, ಉತ್ತಮ ಸಾಮಾಜಿಕ ಸಮೀಕರಣ ಮತ್ತು ಹೆಚ್ಚು ವಿಶ್ವಾಸಾರ್ಹ ಪರ್ಯಾಯವನ್ನು ಮತದಾರರ ಮುಂದೆ ಇಡಲು ವಿಫಲವಾಗಿವೆ. ಅಕಸ್ಮಾತ್ ಸಿಜೆಪಿಯೂ ಚುನಾವಣಾ ಕಣಕ್ಕೆ ಇಳಿದು ಝೆನ್ ಜೀಗಳ ಪ್ರಭಾವ ಯಶಸ್ವಿಯಾದರೆ, 2024ರ ಎಚ್ಚರಿಕೆ 2027ರಲ್ಲಿ ಬದಲಾವಣೆಯ ಅಲೆಯಾಗಬಹುದು.
ಹೀಗಾಗಿ 2027ರ ಉತ್ತರ ಪ್ರದೇಶದ ಚುನಾವಣೆ ರಾಮಮಂದಿರ ವಿರುದ್ಧ ಸಮಾಜವಾದ ಎಂಬ ಸರಳ ದ್ವಂದ್ವವಾಗಿರುವ ಸಾಧ್ಯತೆ ಕಡಿಮೆ. ಅದು ಯಾರು ಉತ್ತಮವಾಗಿ ಆಡಳಿತ ನಡೆಸಬಲ್ಲರು?ಎಂಬ ಸ್ಪರ್ಧೆಯಾಗುವ ಸಾಧ್ಯತೆಯೇ ಹೆಚ್ಚು. ಮತ್ತು ಆ ಸ್ಪರ್ಧೆಯಲ್ಲಿ ಬಿಜೆಪಿ ಈಗಲೂ ಮುಂಚೂಣಿಯಲ್ಲಿದೆ ಎಂದರೂ ಚುನಾವಣೆಗೆ ಇನ್ನೂ ಐದಾರು ತಿಂಗಳುಗಳು ಇರುವ ಕಾರಣ, ಕಡೆಯ ಗಳಿಗೆಯಲ್ಲಿ ಎಲ್ಲಾ ಪಕ್ಷಗಳು ತಮಗೆ ತೋಚಿದಂತೆ ಫಲಿತಾಂಶ ಬದಲಿಸುವ ಸಾಧ್ಯತೆ ಇರಬಹುದಾದರೂ, ಲೇಖನದ ಆರಂಭದಲ್ಲಿ ತಿಳಿಸಿದಂತೆ ಸರಳ ಬಹುತದಿಂದಲಾದರೂ ಯೋಗಿ ಹಾಟ್ರಿಕ್ ಗಳಿಸುವುದನ್ನು ತಪ್ಪಿಸುವುದು ಸಾಧ್ಯವಿಲ್ಲ. ಏಕೆಂದರೆ ಧರ್ಮೋ ರಕ್ಷತಿ ರಕ್ಷಿತಃ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ