ಬಾಲ್ಯದಿಂದ ವೈರಾಗ್ಯದ ಪಯಣ, ಪವಾಡಗಳೆಂದು ಪ್ರಸಿದ್ಧವಾದ ನೀಂ ಕರೋಲಿ ಬಾಬಾ ಲೀಲೆಗಳು, ರಾಮದಾಸ್‌ನಂತಹ ಶಿಷ್ಯರ ಮೂಲಕ ವಿಶ್ವಕ್ಕೆ ತಲುಪಿದ ಸಂದೇಶ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ
ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಚಿತ್ರಗಳು ಮಕಾಡೆ ಮಲಗುತ್ತಿರುವ ಸಂಧರ್ಭದಲ್ಲಿ ಕೇವಲ ₹2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ, ವಿಶ್ವಾದ್ಯಂತ ಸುಮಾರು ₹300 ಕೋಟಿಗೂ ಅಧಿಕ ಗಳಿಸುವ ಮೂಲಕ ಹನುಮಾನ್ ಆಂಶ್ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಿನಿಮಾ ಸ್ವಾತಂತ್ರ್ಯ ಪೂರ್ವ ಭಾರತದ ಕಥೆಯಾಗಿದ್ದು, ತಾಯಿಯ ಮರಣದ ಬಳಿಕ ದೇವರನ್ನು ಹುಡುಕುತ್ತಾ ಹೊರಡುವ ಲಕ್ಷ್ಮಿ ನಾರಾಯಣ್ ಎಂಬ ಬಾಲಕನ ಪ್ರಯಾಣ ಮತ್ತು ಅಂತಿಮವಾಗಿ ಅವರು ನೀಮ್ ಕರೋಲಿ ಬಾಬಾ ಆಗಿ ರೂಪುಗೊಳ್ಳುವ ಹಾದಿಯನ್ನು ಇದು ಹೊಂದಿರುವ ಈ ಸಿನಿಮಾ ಆಗಸ್ಟ್ 7, 2026ರಂದು ಬಿಡುಗಡೆಯಾಗಿ ಅಪಾರ ಜನಮನ್ನಣೆಗಳಿಸಿ ಹೋದ ಬಂದ ಕಡೆಯೆಲೆಲ್ಲಾ ಇನ್ನೂ ನೋಡಿಲ್ವಾ, ಆ ಸಿನಿಮಾದ ಬಗ್ಗೆ ಇನ್ನೂ ಏನೂ ಬರದೇ ಇಲ್ವಲ್ಲಾ ಎಂದು ಕೇಳುತ್ತಿದ್ದನ್ನು ಕೇಳಿ ಈ ವಾರಾಂತ್ಯದಲ್ಲಿ ಸಿನಿಮಾ ನೋಡಿದಾಗ, ಬಹಳ ದಿನಗಳ ನಂತರ ಕತ್ತಲಿನಲ್ಲಿ ಬರೇ ಕತ್ತಲೆ ಜಗತ್ತಿನ ಹೊಡಿ ಬಡೀ ಕಡೀ ಸಿನಿಮಾ ನೋಡಿ ಬೇಸತ್ತಿದ್ದವರಿಗೆ ಬಹಳ ನೆಮ್ಮದಿದಯ ಸಿನಿಮಾ ನೋಡಿದ ತೃಪ್ತಿಯಾಗುವುದಂತೂ ಖಂಡಿತ. ಓಟಿಟಿಗೆ ಕಾಯದೇ ಎಲ್ಲರೂ ಚಿತ್ರಮಂದಿರದಲ್ಲೇ ನೋಡಲೇ ಬೇಕಾದ ಸಿನಿಮಾ ಆಗಿರುವುದರಿಂದ ಆ ಸಿನಿಮಾದ ವಿಮರ್ಶೆಗಿಂತಲೂ ನೇರವಾಗಿ ಆ ಸಿನಿಮಾದ ಮುಖ್ಯ ನಾಯಕರಾದ ನೀಂ ಕರೋಲಿ ಬಾಬಾ ಅವರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ ಬನ್ನಿ.
ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಕೆಲವು ಸಂತರು ದೊಡ್ಡ ದೊಡ್ಡ ಗ್ರಂಥಗಳನ್ನು ಬರೆದಿಲ್ಲ. ಅರಮನೆಗಳನ್ನೂ ಕಟ್ಟಲಿಲ್ಲ. ತಮ್ಮ ಹೆಸರಿನಲ್ಲಿ ಪ್ರಚಾರವನ್ನೂ ಮಾಡಿಕೊಳ್ಳಲಿಲ್ಲ. ಆದರೆ ಅವರ ಬದುಕಿನ ಸರಳತೆ, ಮಾತಿನಲ್ಲಿದ್ದ ಆಳ ಮತ್ತು ಜನರ ಮೇಲಿನ ಕರುಣೆ ಅವರನ್ನು ಪೀಳಿಗೆಗಳವರೆಗೆ ಜೀವಂತವಾಗಿರಿಸಿದೆ. ಅಂತಹ ಅಪರೂಪದ ಸಂತ ಪರಂಪರೆಯಲ್ಲಿ ನೀಂ ಕರೋಲಿ ಬಾಬಾ, ಭಕ್ತರಿಂದ ಪ್ರೀತಿಯಿಂದ ಕರೆಯಲ್ಪಡುವ ಮಹಾರಾಜ್ಜಿ, ಅತ್ಯಂತ ವಿಶಿಷ್ಟ ವ್ಯಕ್ತಿತ್ವ. ಒಂದು ಸಾಮಾನ್ಯ ಕಂಬಳಿ ಹೊದ್ದು, ಮರದ ಮಂಚದ ಮೇಲೆ ಕುಳಿತು, ಬರುವವರಿಗೆ ಊಟ ಮಾಡಿಸಿ, ಕೆಲವೊಮ್ಮೆ ಗದರಿಸಿ, ಕೆಲವೊಮ್ಮೆ ನಗಿಸಿ, ಕೆಲವೊಮ್ಮೆ ಒಂದು ಮಾತಿನಲ್ಲಿ ಅವರ ಬದುಕನ್ನೇ ಬದಲಾಯಿಸಿದ ಈ ಸಂತನ ಜೀವನವೇ ಒಂದು ವಿಶಿಷ್ಟ ಅಧ್ಯಾಯ.
ಇಂದು ಉತ್ತರಾಖಂಡದ ಕೈಂಚಿ ಧಾಮ ವಿಶ್ವದ ಅನೇಕ ದೇಶಗಳ ಆಧ್ಯಾತ್ಮಿಕ ಅನ್ವೇಷಕರನ್ನು ಸೆಳೆಯುತ್ತಿದೆ. 1967ರಲ್ಲಿ ಹಾರ್ವರ್ಡ್‌ನ ಮನೋವಿಜ್ಞಾನಿ ರಿಚರ್ಡ್ ಅಲ್ಪರ್ಟ್, ನಂತರ ರಾಮದಾಸ್ ಎಂದು ಪ್ರಸಿದ್ಧರಾದವರು, ಬಾಬಾರನ್ನು ಭೇಟಿಯಾದ ನಂತರ ಅವರ ಜೀವನದ ದಿಕ್ಕೇ ಬದಲಾಯಿತು. ಆದರೆ ನೀಂ ಕರೋಲಿ ಬಾಬಾ ಅವರ ಕಥೆ ಕೇವಲ ರಾಮದಾಸ್‌ನಿಂದ ಆರಂಭವಾಗುವುದಿಲ್ಲ. ಅದು ಅಕಬರ್‌ಪುರದ ಲಕ್ಷ್ಮೀನಾರಾಯಣ ಶರ್ಮಾ ಎಂಬ ಬಾಲಕನಿಂದ ಆರಂಭವಾಗುತ್ತದೆ.
ಅಕಬರ್‌ಪುರದಲ್ಲಿ ಹುಟ್ಟಿದ ಲಕ್ಷ್ಮೀನಾರಾಯಣ
ನೀಂ ಕರೋಲಿ ಬಾಬಾ ಅವರ ಮೂಲ ಹೆಸರು ಲಕ್ಷ್ಮೀನಾರಾಯಣ ಶರ್ಮಾ. ಅವರು ಸುಮಾರು 1900ರ ಹೊತ್ತಿಗೆ ಉತ್ತರ ಪ್ರದೇಶದ ಅಕಬರ್‌ಪುರದಲ್ಲಿ ಒಂದು ಶ್ರೀಮಂತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೇ ಅವರಲ್ಲಿ ಸಾಮಾನ್ಯ ಮಕ್ಕಳಿಗಿಂತ ವಿಭಿನ್ನವಾದ ವೈರಾಗ್ಯದ ಲಕ್ಷಣಗಳು ಕಂಡುಬಂದವು ಎಂದು ಭಕ್ತ ಪರಂಪರೆ ಹೇಳುತ್ತದೆ. ಮನೆಯಲ್ಲಿದ್ದ ಆಹಾರ, ಬಟ್ಟೆ ಮುಂತಾದವುಗಳನ್ನು ಸಾಧು-ಸಂತರಿಗೆ ನೀಡುತ್ತಿದ್ದರೆಂದು ಅವರ ಜೀವನಕಥೆಗಳಲ್ಲಿ ಉಲ್ಲೇಖವಿದೆ. ಐಶ್ವರ್ಯದ ನಡುವೆ ಬೆಳೆದರೂ ಐಶ್ವರ್ಯದ ಮೇಲಿನ ಆಸಕ್ತಿ ಕಡಿಮೆಯಾಗುತ್ತಾ ಹೋಗಿತ್ತು ಎಂಬುದು ಅವರ ಭಕ್ತರ ನಂಬಿಕೆ. ಇದು ಮುಂದೆ ಅವರ ಜೀವನದ ಪ್ರಮುಖ ಗುಣವಾಗಿ ರೂಪುಗೊಂಡಿತು: ಸರಳ ಜೀವನ, ಆಳವಾದ ಆಧ್ಯಾತ್ಮಿಕತೆ.
ಕೇವಲ 11ನೇ ವಯಸ್ಸಿನಲ್ಲೇ ಬಾಲ್ಯ ವಿವಾಹ!
ಆ ಕಾಲದ ಸಾಮಾಜಿಕ ಬಾಲ್ಯ ವಿವಾಹ ಪದ್ಧತಿಯಂತೆ ಲಕ್ಷ್ಮೀನಾರಾಯಣರಿಗೆ ಸುಮಾರು 11ನೇ ವಯಸ್ಸಿನಲ್ಲಿಯೇ ವಿವಾಹ ನಡೆಯಿತು. ವಿವಾಹದ ನಂತರವೂ ಅವರ ಮನಸ್ಸು ಕ್ರಮೇಣ ವೈರಾಗ್ಯದತ್ತ ಸೆಳೆಯಿತು. ಮನೆ, ಕುಟುಂಬ ಮತ್ತು ಲೌಕಿಕ ಜೀವನಕ್ಕಿಂತ ಸಾಧನೆ, ಧ್ಯಾನ ಮತ್ತು ಸತ್ಯದ ಹುಡುಕಾಟ ಅವರಿಗೆ ಹೆಚ್ಚು ಆಕರ್ಷಣೆಯಾಗಿತ್ತು. ತಾಯಿಯ ಮರಣದ ಬಳಿಕ ದೇವರನ್ನು ಹುಡುಕುತ್ತಾ, ಅವರು ಮನೆ ತೊರೆದು ಸಂಚಾರಿ ಸಾಧುವಾಗಿ ಉತ್ತರ ಭಾರತದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿದರು. ಈ ಅವಧಿಯಲ್ಲಿ ಅವರು ಲಕ್ಷ್ಮಣ ದಾಸ್ ಸೇರಿದಂತೆ ಹಲವು ಹೆಸರುಗಳಿಂದ ಪರಿಚಿತರಾಗಿದ್ದರು. ಅವರು ಕೇವಲ ಸನ್ಯಾಸಿಯಾಗಿರದೇ, ಒಂದು ಹಂತದಲ್ಲಿ ಗೃಹಸ್ಥರೂ ಆಗಿದ್ದರು.
ತಂದೆಯ ಮನವಿಯ ಮೇರೆಗೆ ಅವರು ಮತ್ತೆ ಕುಟುಂಬ ಜೀವನಕ್ಕೆ ಮರಳಿದರು. ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗು ಜನಿಸಿದರು. ನಂತರ 1958ರಲ್ಲಿ ಮತ್ತೆ ಮನೆ ತೊರೆದು ಸಂಪೂರ್ಣವಾಗಿ ಸಂಚಾರಿ ಆಧ್ಯಾತ್ಮಿಕ ಜೀವನದತ್ತ ತೆರಳಿದರು.ಅಂದರೆ ಅವರ ಬದುಕಿನಲ್ಲಿ ಗೃಹಸ್ಥಾಶ್ರಮ ಮತ್ತು ವೈರಾಗ್ಯ ಎರಡೂ ಹಂತಗಳು ಇದ್ದವು.
ಲಕ್ಷ್ಮಣ ದಾಸ್‌ನಿಂದ ನೀಂ ಕರೋಲಿ ಬಾಬಾ!
ಮನೆ ತೊರೆದ ನಂತರ ಅವರು ಉತ್ತರ ಮತ್ತು ದಕ್ಷಿಣ ಭಾರತದ ಅನೇಕ ಪ್ರದೇಶಗಳಲ್ಲಿ ಸಂಚರಿಸಿದರು. ಉತ್ತರ ಪ್ರದೇಶದ ನೀಬ್ ಕರೋರಿ/ನೀಂ ಕರೋಲಿ ಎಂಬ ಗ್ರಾಮಕ್ಕೆ ಅವರ ಜೀವನದ ಒಂದು ಪ್ರಮುಖ ಅಧ್ಯಾಯ ಜೋಡಿಸಿಕೊಂಡಿತು. ಅಲ್ಲಿನ ಗುಹೆಯಲ್ಲಿ ಅವರು ದೀರ್ಘಕಾಲ ಸಾಧನೆ ಮಾಡಿದರು ಎಂಬುದು ಭಕ್ತ ಪರಂಪರೆಯಲ್ಲಿದೆ. ಇದೇ ಪ್ರದೇಶದ ಹೆಸರಿನೊಂದಿಗೆ ಮುಂದೆ ಅವರು ನೀಂ ಕರೋಲಿ ಬಾಬಾ ಅಥವಾ ನೀಬ್ ಕರೋರಿ ಬಾಬಾ ಎಂಬ ಹೆಸರಿನಿಂದ ಪ್ರಸಿದ್ಧರಾದರು. ಇಂದು ಅವರ ಹೆಸರನ್ನು ಹೇಳಿದಾಗ ಕೈಂಚಿ ಧಾಮ ನೆನಪಾಗುತ್ತದೆ. ಆದರೆ ಕೈಂಚಿ ಧಾಮ ಅವರ ಜೀವನದ ಕೊನೆಯ ಹಂತದ ಪ್ರಮುಖ ಕೇಂದ್ರ. ಅದಕ್ಕೂ ಮುನ್ನ ಅವರ ಸಂಚಾರಿ ಸಾಧನೆಗೆ ದಶಕಗಳ ಇತಿಹಾಸವಿದೆ.
ರೈಲನ್ನೇ ನಿಲ್ಲಿಸಿದ ನೀಂ ಕರೋಲಿ ಬಾಬಾ ಪವಾಡ
ನೀಂ ಕರೋಲಿ ಬಾಬಾ ಅವರ ಅತ್ಯಂತ ಪ್ರಸಿದ್ಧ ಕಥೆಗಳಲ್ಲಿ ಒಂದು ರೈಲು ಪವಾಡ. ಜನಪ್ರಿಯ ಕಥೆಯ ಪ್ರಕಾರ, ಒಂದು ದಿನ ಟಿಕೆಟ್ ಇಲ್ಲದೆ ರೈಲಿನ ಮೊದಲ ದರ್ಜೆಯ ಬೋಗಿಯಲ್ಲಿ ಕುಳಿತಿದ್ದ ಸಾಧುವನ್ನು ಆ ಬೋಗಿಯಲ್ಲಿದ್ದ ಬ್ರಿಟಿಷ್ ಅಧಿಕಾರಿಯ ಒತ್ತಾಯದ ಮೇರೆಗೆ ಟಿಕೆಟ್ ಪರಿಶೀಲಕ ಕೆಳಗಿಳಿಸಿದನು. ಆ ಸಾಧು ಮತ್ತೇನೂ ಮಾಡದೆ ರೈಲ್ವೆ ನಿಲ್ದಾಣದ ಬಳಿ ಕುಳಿತರು. ಆದರೆ ರೈಲು ಮುಂದೆ ಸಾಗಲಿಲ್ಲ! ಚಾಲಕ ಮತ್ತು ಸಹಾಯಕ ಸಿಬ್ಬಂದಿಗಳು ಎಷ್ಟೇ ಪ್ರಯತ್ನಿಸಿದರರೂ, ತಾಂತ್ರಿಕವಾಗಿ ಪರಿಶೀಲಿಸಿದರೂ, ಮತ್ತೊಂದು ಇಂಜೀನ್ ತಂದು ಸೇರಿಸಿದರೂ ಆ ರೈಲು ಮುಂದೆ ಚಲಿಸಲಿಲ್ಲವಂತೆ..ನಂತರ ಅಧಿಕಾರಿಗಳು ಸಾಧುವನ್ನು ಮರಳಿ ಕರೆದುಕೊಂಡು ಬಂದು ಗೌರವದಿಂದ ರೈಲಿಗೆ ಹತ್ತಿಸಿದ ನಂತರ ಬಾಬಾ ರೈಲಿಗೆ ಕಾಲಿಟ್ಟ ನಂತರ ರೈಲು ಚಲಿಸಿತು ಎಂಬುದು ಪ್ರಸಿದ್ಧ ಕಥೆ. ಈ ಘಟನೆಯ ನಂತರವೇ ಅವರಿಗೆ ನೀಬ್ ಕರೋರಿ ಬಾಬಾ ಎಂಬ ಹೆಸರು ಪ್ರಸಿದ್ಧಿಯಾಯಿತು ಎಂಬ ನಂಬಿಕೆ ಇದೆ.
ಕಂಬಳಿಯೇ ಅವರ ಗುರುತು!

ನೀಂ ಕರೋಲಿ ಬಾಬಾ ಅವರ ಚಿತ್ರವನ್ನು ನೋಡಿದರೆ ಮೊದಲು ಕಣ್ಣಿಗೆ ಬೀಳುವುದು ಅವರ ಕೆಂಪು-ಕಪ್ಪು ಚೌಕಟ್ಟಿನ ಕಂಬಳಿ ಅವಾಗವಾಗ ಕೈಲ್ಲೊಂದು ಕಮಂಡಲ ಮತ್ತು ದಂಡ. ಅವರ ಜೀವನ ಅತ್ಯಂತ ಸರಳವಾಗಿತ್ತು. ಅವರ ಬಳಿ ದೊಡ್ಡ ಆಸ್ತಿ ಇರಲಿಲ್ಲ. ದುಬಾರಿ ವಸ್ತ್ರಗಳಿರಲಿಲ್ಲ. ಆರ್ಭಟವಿರಲಿಲ್ಲ. ಧೋತಿ ಮತ್ತು ಕಂಬಳಿ ಅವರ ಸರಳ ಬದುಕಿನ ಸಂಕೇತವಾಗಿದ್ದವು. ಅವರು ಭಕ್ತರನ್ನು ತಮ್ಮ ಸುತ್ತಲೂ ಸೇರಿಸಿಕೊಂಡರೂ, ತಾವು ದೊಡ್ಡ ಗುರು ಎಂದು ಘೋಷಿಸಿಕೊಂಡಿರಲಿಲ್ಲ. ಔಪಚಾರಿಕ ಉಪನ್ಯಾಸಗಳು, ಸಂಕೀರ್ಣ ದೀಕ್ಷಾ ಪದ್ಧತಿಗಳು ಅಥವಾ ಆಧ್ಯಾತ್ಮಿಕ ಪ್ರದರ್ಶನಗಳಿಗಿಂತ ಪ್ರೀತಿ, ಸೇವೆ ಮತ್ತು ಭಜನೆಗಳ ಮೂಲಕ ದೇವರ ಸ್ಮರಣೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು.
ನೈನಿತಾಲ್‌ನ ಹನುಮಾನ್ ಗಢಿ

1950ರ ದಶಕದಲ್ಲಿ ಅವರ ಆಧ್ಯಾತ್ಮಿಕ ಕಾರ್ಯ ಮತ್ತೊಂದು ಹಂತ ಪ್ರವೇಶಿಸಿತು. ನೈನಿತಾಲ್‌ನ ಹನುಮಾನ್ ಗಢಿ ಅವರೊಂದಿಗೆ ಆಳವಾಗಿ ಸಂಬಂಧ ಹೊಂದಿರುವ ಪ್ರಮುಖ ಕ್ಷೇತ್ರ. 1950ರ ಸುಮಾರಿಗೆ ಅಲ್ಲಿ ಹನುಮಾನ್ ದೇವಾಲಯದ ನಿರ್ಮಾಣಕ್ಕೆ ಅವರು ಪ್ರೇರಣೆ ನೀಡಿದರು ಎಂಬ ದಾಖಲೆಗಳು ಮತ್ತು ಸ್ಥಳೀಯ ಪರಂಪರೆಗಳಿವೆ. ಹನುಮಂತನ ಮೇಲಿನ ಅವರ ಭಕ್ತಿ ಅಪಾರವಾಗಿತ್ತು. ಅವರ ಜೀವನದ ಬಹುತೇಕ ಆಧ್ಯಾತ್ಮಿಕ ಸಂದೇಶದ ಕೇಂದ್ರದಲ್ಲಿದ್ದದ್ದು ರಾಮನಾಮ. ಹನುಮಂತನ ಭಕ್ತಿ. ಸೇವೆ. ಪ್ರೀತಿ.
ಕೈಂಚಿ ಧಾಮ, ಒಂದು ಕಣಿವೆಯಿಂದ ವಿಶ್ವಪ್ರಸಿದ್ಧ ತೀರ್ಥಕ್ಷೇತ್ರದವರೆಗೆ

ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿರುವ ಕೈಂಚಿ ಧಾಮ ಇಂದು ನೀಂ ಕರೋಲಿ ಬಾಬಾ ಅವರ ಹೆಸರಿನೊಂದಿಗೆ ಜಗತ್ತಿನಾದ್ಯಂತ ಗುರುತಿಸಿಕೊಂಡಿದೆ. ಎರಡು ಬೆಟ್ಟಗಳು ಕತ್ತರಿಯಾಕಾರದಂತೆ ಸೇರುವುದರಿಂದ ಈ ಪ್ರದೇಶಕ್ಕೆ ಕೈಂಚಿ ಎಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ. ಬಾಬಾ ಈ ಪ್ರದೇಶಕ್ಕೆ 1940ರ ದಶಕದಲ್ಲಿಯೇ ಬಂದಿದ್ದರು ಎಂಬ ಪರಂಪರೆ ಇದೆ. ನಂತರ 1960ರ ದಶಕದಲ್ಲಿ ಇಲ್ಲಿ ಹನುಮಂತನ ದೇವಾಲಯ ಮತ್ತು ಆಶ್ರಮ ನಿರ್ಮಾಣದ ಕಾರ್ಯ ನಡೆಯಿತು. 15 ಜೂನ್ 1964ರಂದು ಕೈಂಚಿ ಧಾಮದ ಹನುಮಾನ್ ವಿಗ್ರಹದ ಪ್ರಾಣಪ್ರತಿಷ್ಠೆ ನಡೆಯಿತು. ನಂತರ ಜೂನ್ 15ರ ಭಂಡಾರವು ಈ ಕ್ಷೇತ್ರದ ಪ್ರಮುಖ ವಾರ್ಷಿಕ ಆಚರಣೆಯಾಯಿತು. ಇಂದು ಕೈಂಚಿ ಧಾಮಕ್ಕೆ ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ಭಕ್ತರು ಬರುತ್ತಾರೆ.
ಬಾಬಾ ಪವಾಡ ಮಾಡುತ್ತಿದ್ದರು ಎನ್ನುವ ಕಥೆಗಳು
ನೀಂ ಕರೋಲಿ ಬಾಬಾ ಅವರ ಜೀವನದ ಸುತ್ತಲೂ ನೂರಾರು ಲೀಲೆಗಳು ಅಥವಾ ಪವಾಡಕಥೆಗಳು ಹರಿದಾಡುತ್ತವೆ.
ಅವುಗಳಲ್ಲಿ:
- ರೈಲು ಚಲಿಸದ ಘಟನೆ
- ದೂರದಲ್ಲಿರುವ ಘಟನೆಗಳ ಅರಿವು
- ಅನಾರೋಗ್ಯದಲ್ಲಿದ್ದವರಿಗೆ ನೆರವು
- ಅಪಾಯದಲ್ಲಿದ್ದ ಭಕ್ತರನ್ನು ರಕ್ಷಿಸಿದ ಘಟನೆಗಳು
- ಆಹಾರ ಮತ್ತು ಪ್ರಸಾದಕ್ಕೆ ಸಂಬಂಧಿಸಿದ ಅಚ್ಚರಿಯ ಘಟನೆಗಳು
- ಒಂದೇ ಸಮಯದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಕಾಣಿಸಿಕೊಂಡರೆಂಬ ಅನುಭವಗಳು
- ಭವಿಷ್ಯದ ಘಟನೆಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿದರೆಂಬ ಕಥೆಗಳು
ಮುಖ್ಯವಾಗಿವೆ. ಇವುಗಳಲ್ಲಿ ಹಲವು ಭಕ್ತರ ಸಾಕ್ಷ್ಯ, ಶಿಷ್ಯರ ನೆನಪುಗಳು ಮತ್ತು “Miracle of Love”ನಂತಹ ಸಂಗ್ರಹಗಳಲ್ಲಿ ದಾಖಲಾಗಿವೆ.
ರೋಗಿಯನ್ನು ಗುಣಪಡಿಸಿದ ಪವಾಡ?
ರಾಮದಾಸ್ ಸಂಗ್ರಹಿಸಿದ ಭಕ್ತರ ಅನುಭವಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಕಥೆಗಳಿವೆ. ಒಂದು ಪ್ರಸಿದ್ಧ ಕಥೆಯಲ್ಲಿ, ಸಿಡುಬು/ದಡಾರ (ಸ್ಮಾಲ್‌ಪಾಕ್ಸ್) ನಿಂದ ಗಂಭೀರವಾಗಿ ಬಳಲುತ್ತಿದ್ದ ಬಾಲಕನಿಗೆ ಬಾಬಾರ ಪಾದ ತೊಳೆಯಲಾದ ಗಂಗಾಜಲದ ಒಂದು ಹನಿ ನೀಡಲಾಯಿತು. ನಂತರ ಬಾಲಕ ಚೇತರಿಸಿಕೊಂಡನೆಂದು ಕಥೆ ಹೇಳುತ್ತದೆ. ಅದೇ ಸಮಯದಲ್ಲಿ ಬಾಬಾರ ದೇಹದಲ್ಲಿ ಸ್ಮಾಲ್‌ಪಾಕ್ಸ್‌ನಂತಹ ಚುಕ್ಕೆಗಳು ಕಾಣಿಸಿಕೊಂಡು ನಂತರ ಮಾಯವಾದವು ಎಂಬ ವಿವರವೂ ಇದೆ. ಇದು ಭಕ್ತರ ಆಧ್ಯಾತ್ಮಿಕ ಅನುಭವವಾಗಿ ದಾಖಲಾಗಿರುವ ಕಥೆ. ಇಂತಹ ಕಥೆಗಳು ಬಾಬಾರನ್ನು ಭಕ್ತರು ಏಕೆ ಕರುಣಾಮೂರ್ತಿ ಆಗಿ ಎಂದು ಕಂಡರು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ.
ಒಂದು ಛತ್ರಿ, ಮತ್ತು ಐದು ವರ್ಷಗಳ ನಂತರದ ಅರ್ಥ!
ಬಾಬಾರ ಭಕ್ತನೊಬ್ಬನಿಗೆ ಅವರು ಒಂದು ಛತ್ರಿ ನೀಡಿ, ಇದನ್ನು ನಿನ್ನ ಬಳಿ ಇಟ್ಟುಕೋ ಎಂದು ಹೇಳಿದರೆಂಬ ಕಥೆ ಇದೆ. ಭಕ್ತನಿಗೆ ಅದರ ಅರ್ಥ ಅರ್ಥವಾಗಲಿಲ್ಲ. ವರ್ಷಗಳ ನಂತರ ಆ ಛತ್ರಿಯ ಕುರಿತು ಬಾಬಾ ಹೇಳಿದ ಮಾತಿನ ಅರ್ಥ ಅವನಿಗೆ ತಿಳಿಯಿತು ಎಂದು ಭಕ್ತರ ನೆನಪಿನಲ್ಲಿ ದಾಖಲಾಗಿದೆ. ಈ ಕಥೆಯನ್ನು ರಾಮದಾಸ್ ಅವರ ಆಶ್ರಮದ ಮೂಲವೇ ಪ್ರಕಟಿಸಿದೆ. ಇಂತಹ ಘಟನೆಗಳಲ್ಲಿ ಅಚ್ಚರಿಯ ಅಂಶಕ್ಕಿಂತ ಗುರುವಿನ ಮಾತನ್ನು ತಕ್ಷಣ ಅರ್ಥಮಾಡಿಕೊಳ್ಳಲಾಗದಿದ್ದರೂ ಅದರ ಅರ್ಥ ಜೀವನದಲ್ಲಿ ನಂತರ ತೆರೆದುಕೊಳ್ಳಬಹುದು ಎಂಬ ಭಕ್ತಿಯ ಮನೋಭಾವವೇ ಮುಖ್ಯ.
ಅವರಿಗೆ ಪವಾಡಗಳಿಗಿಂತ ಸೇವೆಯೇ ಮುಖ್ಯ!

ನೀಂ ಕರೋಲಿ ಬಾಬಾ ಅವರ ಬಗ್ಗೆ ಸಾವಿರಾರು ಪವಾಡಕಥೆಗಳಿದ್ದರೂ, ಅವರ ಶಿಷ್ಯರ ನೆನಪುಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಒಂದು ವಿಷಯ: ಅವರು ಪವಾಡ ಪ್ರದರ್ಶನಕ್ಕಿಂತ ಸೇವೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಅವರ ಆಶ್ರಮದಲ್ಲಿ ಬರುವವರಿಗೆ ಆಹಾರ ನೀಡಲಾಗುತ್ತಿತ್ತು. ಬಡವರು, ಶ್ರೀಮಂತರು, ಅಧಿಕಾರಿಗಳು, ವಿದೇಶಿಯರು, ಸಾಧುಗಳು—ಎಲ್ಲರೂ ಒಂದೇ ಜಾಗದಲ್ಲಿ ಕುಳಿತುಕೊಳ್ಳುತ್ತಿದ್ದರು. ರಾಮದಾಸ್ ಅವರ ಆಶ್ರಮ ಮೂಲದ ಒಂದು ನೆನಪಿನಲ್ಲಿ, ಬಾಬಾರ ಸುತ್ತಲಿನ ಭಕ್ತರಲ್ಲಿ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು, ಯಹೂದಿಗಳು, ಸಿಖ್ಖರು ಮತ್ತು ನಾಸ್ತಿಕರೂ ಇದ್ದು, ಇದು ಅವರ ಆಧ್ಯಾತ್ಮಿಕ ದೃಷ್ಟಿಯ ಒಂದು ಪ್ರಮುಖ ಅಂಶವಾಗಿತ್ತು.
ಎಲ್ಲರನ್ನು ಪ್ರೀತಿಸು, ಎಲ್ಲರಿಗೂ ಸೇವೆ ಮಾಡು
ನೀಂ ಕರೋಲಿ ಬಾಬಾರ ಸಂದೇಶವನ್ನು ಕೆಲವೇ ಪದಗಳಲ್ಲಿ ಹೇಳಬೇಕಾದರೆ ಅದು ಎಲ್ಲರನ್ನು ಪ್ರೀತಿಸಿ. ಎಲ್ಲರಿಗೂ ಸೇವೆ ಮಾಡಿ. ದೇವರನ್ನು ಸ್ಮರಿಸಿ. ಹಸಿದವರಿಗೆ ಆಹಾರ ನೀಡಿ. ಇದು ಯಾವುದೇ ಒಂದು ವರ್ಗಕ್ಕೆ ಮಾತ್ರ ಸೀಮಿತವಾದ ಸಂದೇಶವಲ್ಲ. ರಾಮದಾಸ್ ಅವರ ಜೀವನಚರಿತ್ರೆಯ ಪ್ರಕಾರ, 1967ರಲ್ಲಿ ಭಾರತಕ್ಕೆ ಬಂದ ರಿಚರ್ಡ್ ಅಲ್ಪರ್ಟ್ ಬಾಬಾರನ್ನು ಭೇಟಿಯಾದ ನಂತರ ರಾಮದಾಸ್ (ದೇವರ ಸೇವಕ) ಎಂಬ ಹೆಸರನ್ನು ಪಡೆದರು.
ರಿಚರ್ಡ್ ಅಲ್ಪರ್ಟ್, ರಾಮದಾಸ್ ಆದದ್ದು ಹೇಗೆ ?
![]()
ಇದು ನೀಂ ಕರೋಲಿ ಬಾಬಾರ ಜಾಗತಿಕ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಅತ್ಯಂತ ಮಹತ್ವದ ಘಟನೆ. ರಿಚರ್ಡ್ ಅಲ್ಪರ್ಟ್ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಮನೋವಿಜ್ಞಾನಿ. 1967ರಲ್ಲಿ ಭಾರತಕ್ಕೆ ಬಂದ ಅವರು ಬಾಬಾರನ್ನು ಭೇಟಿಯಾದರು. ಆ ಭೇಟಿಯ ನಂತರ ಅವರ ಬದುಕಿನಲ್ಲಿ ದೊಡ್ಡ ಬದಲಾವಣೆ ಸಂಭವಿಸಿತು. ಅವರು ರಾಮದಾಸ್ ಎಂಬ ಹೆಸರನ್ನು ಪಡೆದರು. ನಂತರ ಅವರು ಅಮೆರಿಕಕ್ಕೆ ಹಿಂದಿರುಗಿ ಭಾರತೀಯ ಆಧ್ಯಾತ್ಮಿಕತೆ, ಧ್ಯಾನ, ಯೋಗ ಮತ್ತು ಜಾಗೃತ ಜೀವನದ ಕುರಿತು ಮಾತನಾಡಲು ಆರಂಭಿಸಿದರು. 1971ರಲ್ಲಿ ಪ್ರಕಟವಾದ ಅವರ Be Here Now ಪುಸ್ತಕ ಪಾಶ್ಚಾತ್ಯ ಜಗತ್ತಿನಲ್ಲಿ ಪೂರ್ವದ ಆಧ್ಯಾತ್ಮಿಕತೆಯ ಪರಿಚಯವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಿತು. ಅಂದರೆ ಬಾಬಾ ಸ್ವತಃ ಜಗತ್ತನ್ನು ಸುತ್ತಿ ಪ್ರಚಾರ ಮಾಡಲಿಲ್ಲ. ಅವರ ಶಿಷ್ಯರು ಅವರ ಸಂದೇಶವನ್ನು ಜಗತ್ತಿಗೆ ಕೊಂಡೊಯ್ದರು.
ಕೃಷ್ಣ ದಾಸ್, ಲ್ಯಾರಿ ಬ್ರಿಲಿಯಂಟ್ ಮತ್ತು ಇತರರು
ರಾಮದಾಸ್ ಮಾತ್ರವಲ್ಲ. ಕೃಷ್ಣ ದಾಸ್, ಲ್ಯಾರಿ ಬ್ರಿಲಿಯಂಟ್ ಸೇರಿದಂತೆ ಅನೇಕ ಪಾಶ್ಚಾತ್ಯ ಸಾಧಕರು ಬಾಬಾರ ಸಂಪರ್ಕಕ್ಕೆ ಬಂದರು. ವಿಶೇಷವಾಗಿ ಲ್ಯಾರಿ ಬ್ರಿಲಿಯಂಟ್ ಅವರ ಜೀವನದಲ್ಲಿ ಬಾಬಾರ ಪ್ರಭಾವದ ಕಥೆ ಪ್ರಸಿದ್ಧವಾಗಿದೆ. 1970ರ ದಶಕದ ಆರಂಭದಲ್ಲಿ ಅವರು ಕೈಂಚಿ ಧಾಮಕ್ಕೆ ಬಂದಿದ್ದರು. ನಂತರ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿ ಸ್ಮಾಲ್‌ಪಾಕ್ಸ್ ನಿರ್ಮೂಲನಾ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದರು. ಬಾಬಾ ಅವರನ್ನು ದೆಹಲಿಗೆ ಹೋಗಿ ಕೆಲಸ ಮಾಡಲು ಪ್ರೇರೇಪಿಸಿದರು ಎಂಬುದು ಅವರದೇ ನೆನಪುಗಳಲ್ಲಿ ಕಾಣುತ್ತದೆ.
ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್ ಮತ್ತು ಕೈಂಚಿ ಧಾಮ
ನೀಂ ಕರೋಲಿ ಬಾಬಾರ ಜಾಗತಿಕ ಜನಪ್ರಿಯತೆಯ ಕುರಿತು ಮಾತನಾಡುವಾಗ ಸ್ಟೀವ್ ಜಾಬ್ಸ್ ಮತ್ತು ಮಾರ್ಕ್ ಜುಕರ್‌ಬರ್ಗ್ ಹೆಸರುಗಳು ಆಗಾಗ್ಗೆ ಕೇಳಿಬರುತ್ತವೆ. ಸ್ಟೀವ್ ಜಾಬ್ಸ್ ಭಾರತಕ್ಕೆ ಬಂದ ಸಂದರ್ಭದಲ್ಲಿ ಕೈಂಚಿ ಧಾಮಕ್ಕೆ ಭೇಟಿ ನೀಡಿದ್ದರು ಎಂಬುದು ಪ್ರಸಿದ್ಧವಾಗಿದೆ. ಮಾರ್ಕ್ ಜುಕರ್‌ಬರ್ಗ್ ಕೂಡ ಜುಕರ್‌ಬರ್ಗ್ ಅವರ ಜೀವನದ ಪ್ರಮುಖ ಹಂತವೊಂದರಲ್ಲಿ ಕೈಂಚಿ ಧಾಮಕ್ಕೆ ಭೇಟಿ ನೀಡುವಂತೆ ಜಾಬ್ಸ್ ಸಲಹೆ ನೀಡಿದ್ದರು ಎಂದು ವಿವಿಧ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಬಾಬಾರ ಸಮಾಜ ಸೇವೆ ಎಂದರೇನು?
ಅವರು ಆಧುನಿಕ ಅರ್ಥದಲ್ಲಿ ದೊಡ್ಡ NGO ನಡೆಸಲಿಲ್ಲ. ಅವರ ಸೇವೆಯ ವಿಧಾನ ವಿಭಿನ್ನವಾಗಿತ್ತು.
- ಅನ್ನದಾನ ಆಶ್ರಮಕ್ಕೆ ಬಂದವರು ಹಸಿದಿರಬಾರದು ಎಂಬುದು ಅವರ ಪ್ರಮುಖ ಕಾಳಜಿ. 1966ರ ಕುಂಭಮೇಳದಲ್ಲಿ ಬಾಬಾರ ಶಿಬಿರದಲ್ಲಿ ಪ್ರತಿದಿನ ಸಾವಿರಾರು ಜನರಿಗೆ ಆಹಾರ ನೀಡಲಾಗುತ್ತಿತ್ತು ಎಂಬ ಭಕ್ತರ ನೆನಪು ಇದೆ.
- ಸಾಧು-ಸಂತರಿಗೆ ಗೌರವ : ಅವರು ಇತರ ಆಧ್ಯಾತ್ಮಿಕ ಪರಂಪರೆಯ ಸಂತರಿಗೂ ಗೌರವ ನೀಡುತ್ತಿದ್ದರು.
- ಬಡವರಿಗೆ ನೆರವು ಆಹಾರ : ಹಣ, ಬಟ್ಟೆ ಮತ್ತು ಅಗತ್ಯ ನೆರವು ನೀಡಿದ ಅನೇಕ ಘಟನೆಗಳು ಅವರ ಶಿಷ್ಯರ ದಾಖಲೆಯಲ್ಲಿ ಬರುತ್ತವೆ.
- ಸರ್ವಧರ್ಮ ಸಮಭಾವ : ಹಿಂದೂ-ಮುಸ್ಲಿಂ-ಕ್ರೈಸ್ತ ಸೇರಿದಂತೆ ವಿವಿಧ ಹಿನ್ನೆಲೆಯ ಜನರು ಅವರ ಸತ್ಸಂಗದಲ್ಲಿ ಇದ್ದರು ಎಂಬುದು ಅವರ ಶಿಷ್ಯರ ನೆನಪುಗಳಲ್ಲಿ ಕಾಣುತ್ತದೆ.
- ಗೃಹಸ್ಥರಿಗೂ ಆಧ್ಯಾತ್ಮಿಕ ಮಾರ್ಗ : ಎಲ್ಲರೂ ಸನ್ಯಾಸಿಯಾಗಬೇಕು ಎಂದು ಅವರು ಹೇಳಲಿಲ್ಲ. ಬದಲಾಗಿ ಕುಟುಂಬ, ಉದ್ಯೋಗ ಮತ್ತು ಸಮಾಜದ ಜವಾಬ್ದಾರಿಗಳನ್ನು ನಿಭಾಯಿಸುತ್ತಲೇ ಸೇವೆ ಮತ್ತು ದೇವರ ಸ್ಮರಣೆಯೊಂದಿಗೆ ಬದುಕಬಹುದು ಎಂಬ ಮಾರ್ಗವನ್ನು ಪ್ರೋತ್ಸಾಹಿಸಿದರು.
ಅವರ ಮಹತ್ವದ ಸಂದೇಶ: ಕೆಲಸವನ್ನೇ ಪೂಜೆಯಾಗಿ ಮಾಡು
ಬಾಬಾರ ಸಂದೇಶದಲ್ಲಿ ಕರ್ಮಯೋಗದ ಛಾಯೆ ಸ್ಪಷ್ಟವಾಗಿ ಕಾಣುತ್ತದೆ. ಅಂದರೆ:
- ಮನೆ ನೋಡಿಕೊಳ್ಳುವುದೂ ಸೇವೆ.
- ರೋಗಿಯನ್ನು ನೋಡಿಕೊಳ್ಳುವುದೂ ಸೇವೆ.
- ಹಸಿದವನಿಗೆ ಊಟ ನೀಡುವುದೂ ಸೇವೆ.
- ಪ್ರಾಮಾಣಿಕವಾಗಿ ಕೆಲಸ ಮಾಡುವುದೂ ಸೇವೆ.
- ಇತರರಿಗೆ ಸಹಾಯ ಮಾಡುವುದೂ ಸೇವೆ.
ಆದರೆ ಕೆಲಸ ಮಾಡುವಾಗ ದೇವರ ಸ್ಮರಣೆ ಮತ್ತು ಪ್ರೀತಿಯ ಮನೋಭಾವ ಇರಬೇಕು ಎಂಬುದು ಅವರ ಶಿಷ್ಯರ ನೆನಪುಗಳಲ್ಲಿ ಪ್ರಮುಖವಾಗಿ ಬರುತ್ತದೆ.
1973 ಮಹಾಸಮಾಧಿ
ನೀಂ ಕರೋಲಿ ಬಾಬಾ ಅವರು ಹೃದಯದ ಸಮಸ್ಯೆಯ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ತೆರಳಿದ್ದ ಅವರು ವಾಪಸ್ ಪ್ರಯಾಣಿಸುವ ಸಂದರ್ಭದಲ್ಲಿ ಅಸ್ವಸ್ಥರಾದರು. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಅನಂತ ಚತುರ್ದಶಿಯ ದಿನದಂದು 11 ಸೆಪ್ಟೆಂಬರ್ 1973ರಂದು 1:15 ರ ಸುಮಾರಿಗೆ ತಮ್ಮ ದೇಹವನ್ನು ತ್ಯಜಿಸಿ ಸ್ವರ್ಗೀಯ ವಾಸಸ್ಥಾನಕ್ಕೆ ಹೊರಟರು. ಆಗ ಅವರ ವಯಸ್ಸು ಸುಮಾರು 73 ವರ್ಷವಾಗಿತ್ತು. ಆದಾಗ್ಯೂ, ಭೀಮತಾಲ್ ನಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಕೈಂಚಿ ಧಾಮದಲ್ಲಿ ಅವರ ಆಧ್ಯಾತ್ಮಿಕ ಉಪಸ್ಥಿತಿ ಇನ್ನೂ ಇದೆ ಎಂದು ಅವರ ಅನುಯಾಯಿಗಳು ನಂಬುತ್ತಾರೆ ಆದರೆ ಅವರ ಮರಣದೊಂದಿಗೆ ಅವರ ಪ್ರಭಾವ ಮುಗಿಯಲಿಲ್ಲ. ಅದು ಮತ್ತೊಂದು ರೂಪದಲ್ಲಿ ಆರಂಭವಾಯಿತು.
ಮರಣದ ನಂತರವೂ ಹೆಚ್ಚಾದ ಪ್ರಭಾವ
ಇಂದು ಅವರ ಹೆಸರಿನಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಆಶ್ರಮಗಳು, ಹನುಮಾನ್ ದೇವಾಲಯಗಳು ಮತ್ತು ಭಕ್ತ ಸಮುದಾಯಗಳಿವೆ. ಕೈಂಚಿ ಧಾಮವೇ ಅವರ ಆಧ್ಯಾತ್ಮಿಕ ಪರಂಪರೆಯ ಪ್ರಮುಖ ಕೇಂದ್ರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮ, ಪ್ರವಾಸ ಮತ್ತು ಪ್ರಸಿದ್ಧ ವ್ಯಕ್ತಿಗಳ ಕೈಂಚಿ ಧಾಮ ಭೇಟಿಗಳಿಂದ ಅವರ ಹೆಸರು ಹೊಸ ಪೀಳಿಗೆಯಲ್ಲೂ ವೇಗವಾಗಿ ಹರಡಿದೆ. 2026ರ ವರದಿಗಳ ಪ್ರಕಾರ ಕೈಂಚಿ ಧಾಮಕ್ಕೆ ಹೊಸ ತಲೆಮಾರಿನ ಭಕ್ತರ ಪ್ರವಾಹ ಹೆಚ್ಚಾಗಿದ್ದು, ಅವರ ಜೀವನದ ಕುರಿತ ಸಿನಿಮಾ ಕೂಡ ಈ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಎಲ್ಲರನ್ನೂ ಪ್ರೀತಿಸಿ — ಇಂದಿಗೂ ಏಕೆ ಪ್ರಸ್ತುತ?
- ಇಂದು ಮನುಷ್ಯನ ಬಳಿ ಹಣವಿದೆ.
- ತಂತ್ರಜ್ಞಾನವಿದೆ.
- ಸ್ಮಾರ್ಟ್‌ಫೋನ್ ಇದೆ.
- ಕೃತಕ ಬುದ್ಧಿಮತ್ತೆ ಇದೆ.
- ಆದರೆ ಮನಸ್ಸಿಗೆ ನೆಮ್ಮದಿ ಕಡಿಮೆಯಾಗುತ್ತಿದೆ.
- ಸಂಬಂಧಗಳಲ್ಲಿ ಒತ್ತಡ.
- ಸ್ಪರ್ಧೆ.
- ಕೋಪ.
- ಅಸೂಯೆ.
- ಒಂಟಿತನ.
ಅಂತಹ ಕಾಲದಲ್ಲಿ ನೀಂ ಕರೋಲಿ ಬಾಬಾರ ಸರಳ ಸಂದೇಶ:
ಎಲ್ಲರನ್ನೂ ಪ್ರೀತಿಸು.
ಎಲ್ಲರಿಗೂ ಸೇವೆ ಮಾಡು.
ದೇವರನ್ನು ಸ್ಮರಿಸು.
ಹಸಿದವರಿಗೆ ಆಹಾರ ನೀಡಿ.
ಎಂಬುದು ಅತೀ ಸರಳವಾಗಿದ್ದರೂ ಆಳವಾದ ಮಾನವೀಯ ಸಂದೇಶವಾಗಿ ಕಾಣುತ್ತದೆ.
ಕಡೆಯ ಮಾತು

ನೀಂ ಕರೋಲಿ ಬಾಬಾ ಅವರ ಜೀವನವನ್ನು ಕೇವಲ ಪವಾಡಗಳ ಸಂತ ಎಂದು ನೋಡಿದರೆ ಅವರ ವ್ಯಕ್ತಿತ್ವದ ಒಂದು ಸಣ್ಣ ಭಾಗ ಮಾತ್ರ ನಮಗೆ ಕಾಣಿಸುತ್ತದೆ. ಅವರ ಜೀವನದ ಮತ್ತೊಂದು ಮುಖ. ಅಕಬರ್‌ಪುರದ ಲಕ್ಷ್ಮೀನಾರಾಯಣ, ವೈರಾಗ್ಯ ಹುಡುಕಿದ ಲಕ್ಷ್ಮಣ ದಾಸ್, ಕುಟುಂಬ ಜೀವನಕ್ಕೆ ಮರಳಿದ ಗೃಹಸ್ಥ. ಮತ್ತೆ ಎಲ್ಲವನ್ನೂ ತೊರೆದ ಸಂಚಾರಿ ಸಾಧು. ಹನುಮಂತನ ಭಕ್ತ. ಕೈಂಚಿ ಧಾಮದ ಮಹಾರಾಜ್ಜಿ. ಸಾವಿರಾರು ಜನರಿಗೆ ಅನ್ನ ನೀಡಿದ ಕರುಣಾಮೂರ್ತಿ. ರಾಮದಾಸ್‌ನಂತಹ ಶಿಷ್ಯರಿಗೆ ಗುರು. ಮತ್ತು ಪ್ರೀತಿ ಮತ್ತು ಸೇವೆಯನ್ನು ಆಧ್ಯಾತ್ಮಿಕತೆಯ ಕೇಂದ್ರವನ್ನಾಗಿ ಮಾಡಿದ ಸಂತ.
ಅವರ ಜೀವನದಲ್ಲಿ ನಿಜವಾದ ಅಚ್ಚರಿ ಕಂಬಳಿಯಲ್ಲಿರಲಿಲ್ಲ. ಒಬ್ಬ ಸಾಧುವಿನ ಸುತ್ತಲೂ ಶ್ರೀಮಂತರು, ಬಡವರು, ಭಾರತೀಯರು, ವಿದೇಶಿಯರು, ವಿವಿಧ ಧರ್ಮಗಳ ಜನರು ಒಂದೇ ರೀತಿಯಲ್ಲಿ ಕುಳಿತುಕೊಳ್ಳುವಂತಹ ವಾತಾವರಣ ನಿರ್ಮಾಣವಾಗಿತ್ತು ಎಂಬುದೇ ಒಂದು ದೊಡ್ಡ ಸಾಮಾಜಿಕ ಸಂದೇಶ.
ಅವರ ಪವಾಡಗಳ ಸತ್ಯಾಸತ್ಯತೆಯ ಬಗ್ಗೆ ವಿಭಿನ್ನ ಅಭಿಪ್ರಾಯವಿರಬಹುದು. ಆದರೆ ಹಸಿದವನಿಗೆ ಅನ್ನ ನೀಡುವುದು, ದುಃಖಿತನಿಗೆ ಧೈರ್ಯ ನೀಡುವುದು, ದ್ವೇಷದ ಬದಲು ಪ್ರೀತಿಯನ್ನು ಬೆಳೆಸುವುದು ಮತ್ತು ದೇವರನ್ನು ನೆನಪಿಸಿಕೊಂಡು ಸೇವೆ ಮಾಡುವುದು, ಈ ಸಂದೇಶಗಳ ಮೌಲ್ಯವನ್ನು ಯಾವುದೇ ಕಾಲದಲ್ಲೂ ನಿರಾಕರಿಸಲಾಗದು. ಬಹುಶಃ ಅದಕ್ಕಾಗಿಯೇ 1973ರಲ್ಲಿ ದೇಹವನ್ನು ತ್ಯಜಿಸಿದರೂ, ಐದು ದಶಕಗಳ ನಂತರವೂ ಮಹಾರಾಜ್ಜಿ ಎಂಬ ಹೆಸರು ಕೈಂಚಿಯ ಬೆಟ್ಟಗಳಲ್ಲಿ ಮಾತ್ರವಲ್ಲ, ವಿಶ್ವದ ಅನೇಕ ಭಕ್ತರ ಹೃದಯದಲ್ಲೂ ಕೇಳಿಸುತ್ತಿದೆ. ಎಲ್ಲರನ್ನೂ ಪ್ರೀತಿಸಿ ಎಲ್ಲರಿಗೂ ಸೇವೆ ಮಾಡಿ ದೇವರನ್ನು ಸ್ಮರಿಸಿ ಇದೇ ನೀಂ ಕರೋಲಿ ಬಾಬಾ ಅವರ ಬದುಕಿನ ಸರಳವಾದರೂ ಅತ್ಯಂತ ಆಳವಾದ ಸಂದೇಶ ಎಂದೆನಿಸುತ್ತದೆ ಅಲ್ವೇ?
ಏನಂತೀರೀ?
ನಿಮ್ಮವನೇ, ಉಮಾಸುತ