ಅತ್ತೆ-ಸೊಸೆ, ಸಂಬಂಧ-ಅನುಬಂಧ

husbandಪತ್ನಿ ಮತ್ತೆ ಮತ್ತೆ ತಾಯಿಯ ಮೇಲೆ ಆರೋಪ ಮಾಡುತ್ತಿದ್ದಳು. ಆದರೆ ಪತಿ ಅವಳಿಗೆ ತನ್ನ ಮಾತಿನ ಮಿತಿ ಮೀರಬೇಡವೆಂದು ಮನವಿ ಮಾಡುತ್ತಿದ್ದ. ಆದರೂ ಪತ್ನಿ ಮೌನವಾಗದೆ ಜೋರು ಜೋರಾಗಿ ಟೇಬಲ್ ಮೇಲೆ ಕೈಸನ್ನೆ ಮಾಡುತ್ತಾ ಕೂಗಿ ಹೇಳುತ್ತಿದ್ದಳು ನಾನು ಚಿನ್ನದ ಹಾರವನ್ನು ಇಲ್ಲೇ ಟೇಬಲ್ ಮೇಲೆ ಇಟ್ಟಿದ್ದೆ, ನಮ್ಮಿಬ್ಬರನ್ನು ಬಿಟ್ಟರೆ ಬೇರೆ ಯಾರು ಕೋಣೆಯೊಳಗೆ ಬಂದಿಲ್ಲ, ಮನೆಯಲ್ಲಿ ಮೂರನೆಯವರು ನಿಮ್ಮ ತಾಯಿಯೇ. ಹಾಗಾಗಿ ಅವರೇ ಅದನ್ನು ತೆಗೆದುಕೊಂಡಿದ್ದಾರೆ.

ಅಲ್ಲಿಯವರೆಗೂ ಸುಮ್ಮನಿದ್ದ ಪತಿ, ತನ್ನ ತಾಯಿಯ ಮೇಲೆ ಕಳ್ಳತನದ ಆರೋಪ ಬಂದ ಕೂಡಲೇ, ಅವನ ಸಂಯಮವನ್ನೇ ಮೀರಿಸಿತು. ಅವನು ತನ್ನ ಪತ್ನಿಯ ಕಪಾಳಕ್ಕೊಂದು ಜೋರಾಗಿ ಬಾರಿಸಿದ. ಇನ್ನೂ ಮದುವೆಯಾಗಿ ಮೂರು ತಿಂಗಳು ಕಳೆದಿರಲಿಲ್ಲ.

ಹೊಡೆತ ಹೆಂಡತಿಗೆ ಸಹನೆಯಾಗಲಿಲ್ಲ ಮನೆ ಬಿಟ್ಟು ಹೊರಟು ಬಿಟ್ಟಳು.. ಹಾಗೆ ಹೋಗುವಾಗ, ನಿಮಗೆ ತಾಯಿಯ ಮೇಲೆ ಯಾಕೆ ಇಷ್ಟು ಭರವಸೆ ? ಎಂದು ಕೇಳಿಯೇ ಬಿಟ್ಟಳು

ಪತಿ ನೀಡಿದ ಪ್ರತ್ಯುತ್ತರದಿಂದ ಬಾಗಿಲ ಹಿಂದೆ ಬಗ್ಗಿ ಹೋದ ಬಡಕಲು ಶರೀರದ ಹೆತ್ತವ್ವನ ಮನಸ್ಸಿನ ದುಃಖ ಕಣ್ಣಿನ ಮೂಲಕ ಧುಮ್ಮಿಕಿತು.

ಪತಿ ಪತ್ನಿಗೆ ತನ್ನ ಪೂರ್ವ ಇತಿಹಾಸವನ್ನು ಈ ರೀತಿ ಪರಿಚಯಿಸುತ್ತಾನೆ

ನಾನು ಚಿಕ್ಕವನಾಗಿರುವಾಗಲೇ ತಂದೆಯನ್ನು ಕಳೆದು ಕೊಂಡೆ, ನನ್ನ ಪಾಲನೆ ಪೋಷಣೆಗಾಗಿ ಹೆತ್ತ ಅವ್ವ ಬೇರೆಯವರ ಮನೆಯಲ್ಲಿ ಪಾತ್ರೆ ಮುಸುರೆ ತಿಕ್ಕಿ ಏನು ಸಂಪಾದಿಸಲು ಸಾಧ್ಯವಿತ್ತೋ ಅದರಿಂದ ಒಂದು ಹೊತ್ತಿನ ಊಟ ತರುತ್ತಿದ್ದಳು.

ತಾಯಿ ತಟ್ಟೆಯೊಂದರಲ್ಲಿ ನನಗೆ ಊಟ ಬಡಿಸಿ ಖಾಲಿ ಡಬ್ಬವನ್ನು ಮುಚ್ಚಿ ಇಡುತ್ತಿದ್ದಳು. ನನ್ನ ಊಟ ಇದರಲ್ಲಿದೆ ನೀನು ಊಟ ಮಾಡು ಅನ್ನುತ್ತಿದ್ದಳು. ನಾನು ಸಹ ಪ್ರತಿದಿನವೂ ಅರ್ಧ ಊಟ ಮಾಡಿ ಹೊಟ್ಟೆ ತುಂಬಿ ಹೋಯಿತು ಎಂದು ಎದ್ದು ಓಡುತ್ತಿದ್ದೆ. ಅಮ್ಮ ನನ್ನ ಎಂಜಿಲು ಊಟ ಮಾಡಿ ನನ್ನನ್ನು ಬೆಳೆಸಿ ದೊಡ್ಡವನಾಗಿ ಮಾಡಿ ನಾನು ಇಂದು ಮೂರು ಹೊತ್ತು ಊಟ ಸಂಪಾದಿಸುವ ಮಟ್ಟಕ್ಕೆ ತಂದಿದ್ದಾಳೆ ನನಗಾಗಿ ಅವಳು ತನ್ನ ಎಲ್ಲಾ ಇಚ್ಚೆಯನ್ನೇ ಕೊಂದಿದ್ದಾಳೆ.ಆ ತಾಯಿಗೆ ಈ ವಯಸ್ಸಿನಲ್ಲಿ ನಿನ್ನ ಚಿನ್ನದ ಹಾರದ ಹಸಿವು ಇರಲಿಕ್ಕಿಲ್ಲ.

ನನಗೆ ಮೂರು ತಿಂಗಳಿನಿಂದ ನಿನ್ನ ಪರಿಚಯ ಅಷ್ಟೇ, ನನ್ನ ಅವ್ವನ ತಪಸ್ಸನ್ನು ನಾನು ಇಪ್ಪತ್ತೈದು ವರುಷದಿಂದ ನೋಡುತ್ತಿದ್ದೇನೆ.

ಮಗನ ಮಾತನ್ನು ಕೇಳಿದ ಆ ಮುಗ್ಧ ಮಾತೆಗೆ ಕಂಬನಿ ನಯನಗಳಿಂದ ನಿಲ್ಲದೆ ಹರಿಯಿತು ಹೆತ್ತವ್ವನಿಗೆ ಅರ್ಥವೇ ಆಗಲಿಲ್ಲ ತಾನು ಮಗನಿಗೆ ಬಡಿಸಿದ ಅರ್ಧ ಊಟದ ಋುಣ ಅವನು ತೀರಿಸುತ್ತಿದ್ದಾನಾ? ಇಲ್ಲವೇ ಅವನು ಉಳಿಸಿದ ಅರ್ಧ ಊಟದ ಋುಣ ನಾನು ತೀರಿಸುತ್ತಿದ್ದೇನಾ?

#ಕಥೆಯಲ್ಲಾ ಇದು ವ್ಯಕ್ತಿಯ ವ್ಯಥೆ#

ಅಮ್ಮ ದೇವರಲ್ಲ, ಅವಳ ಮುಂದೆ ದೇವರು ಏನೇನೂ ಇಲ್ಲಾ.

ಈ ಕಥೆಯನ್ನು ನನ್ನ ತಂಗಿ ನಮಗೆ ವಾಟ್ಸಾಪ್ ಮುಖಾಂತರ ಕಳುಹಿಸಿದಾಗ ಈ ಕಥೆ ಏಕೋ ಸಂಪೂರ್ಣವಾಗಿರದೇ ಕೇವಲ ಒಂದೇ ದೃಷ್ಟಿಕೋನದಲ್ಲಿದೆ ಎಂದೆನಿಸಿ ನನ್ನ ಕಲ್ಪನೆಯಲ್ಲಿ ಕಥೆಯನ್ನು ಮುಂದುವರಿಸಿದ್ದೇನೆ.

ಹೊಸದಾಗಿ ಮದುವೆಯಾದ ಗಂಡನಿಂದ ಅಚಾನಕ್ಕಾಗಿ ಈ ರೀತಿಯ ಆಘಾತದಿಂದ ಮನನೊಂದ ಹೆಂಡತಿ, ‌ಕೋಪ ಮಾಡಿಕೊಂಡು ದಡದಡನೆ ಕೈಗೆ ಸಿಕ್ಕ ನಾಲ್ಕಾರು. ಬಟ್ಟೆಗಳನ್ನು ಚೀಲಕ್ಕೆ ತುಂಬಿಕೊಂಡು ಮನೆಯಿಂದ ಆಚೇ ಹೋಗ್ತಾಳೆ

ಸೊಸೆ ಕೋಪ ಮಾಡೊಂಡು ಮನೆ ಬಿಟ್ಟು ಹೋಗೋದನ್ನು ತಾಳಲಾಗದ ಅತ್ತೇ, ಮಗೂ ಗಂಡ ಹೆಂಡ್ತಿ ಮಧ್ಯೆ ಸಣ್ಣ ಪುಟ್ಟ ಜಗಳ ಬಂದು ಹೋಗಾ ಇರುತ್ತೆ ಅದಕ್ಕೆ ಹೆಂಡ್ತಿ ಮೇಲೆ ಕೈಮಾಡುವುದು ಸಭ್ಯ ಗಂಡನ ಲಕ್ಷಣವಲ್ಲ. ಹೋಗಿ ನಿನ್ನ ಹೆಂಡ್ತಿನಾ ಕರ್ಕೊಂಡು ಬಾ ಎನ್ನುತ್ತಾರೆ.

ಹೆಂಡತಿ ಮೇಲೆ ಕೈ ಮಾಡಿದ್ದಕ್ಕೆ ಪಶ್ಚಾತ್ತಾಪವಾದರೂ, ತಾನೇ ಹೋಗಿ ಸಮಾಧಾನ ಪಡಿಸಿದರೆ, ಎಲ್ಲಿ ತನ್ನ ಗೌರವ ಕಡಿಮೆ ಆಗುತ್ತದೋ ಎಂಬ ಪುರುಷಪ್ರಧಾನ ಅಹಂ ನಿಂದಾಗಿ. ಸುಮ್ಮನಿರಮ್ಮಾ, ಸಂಜೆ ಹೊತ್ತಿಗೆ ಎಲ್ಲವು ತಣ್ಣಗಾಗಿ ಅವ್ಳೇ ಬರ್ತಾಳೆ ಎಂದು ಅಮ್ಮನ ಮೇಲೆ ತನ್ನ ಉತ್ತರನ ಪೌರುಷ ತೋರಿಸುತ್ತಾನೆ.

ಆಟೋ ಹಿಡಿದು ತವರು ಮನೆಗೆ ಬಂದು ಆಟೋದವನ ಲೆಕ್ಕ ಚುಕ್ತಾ ಮಾಡಿ, ಇನ್ನೇನು ಅಮ್ಮನ ಮನೆಯ ಹೊಸಿಲೊಳಗೆ‌ ಕಾಲು ಇಡಬೇಕು ಎನ್ನುವಷ್ಟರಲ್ಲಿ ಅದಾವುದೋ ಸಮಾರಂಭಕ್ಕೆ ಹೋಗಲು ಸಿದ್ಧರಾಗಿದ್ದ ತನ್ನ ತಂದೆ ತಾಯಿ ಮನೆಯಿಂದ ಹೊರಗೆ ಬರುತ್ತಿದ್ದದ್ದನ್ನು ನೋಡುತ್ತಾಳೆ.

ಅದೇ ಸಮಯಕ್ಕೆ ಮಗಳ ಕಣ್ಣು ತನ್ನ ತಾಯಿಯ ಕುತ್ತಿಗೆಯಲ್ಲಿ ಹಾಕಿಕೊಂಡಿದ್ದ ಆಭರಣಗಳತ್ತ ಹರಿಯುತ್ತದೆ. ತಾನು ಯಾವ ಚಿನ್ನದ ಹಾರ ಕಳುವಾಗಿದೆ ಎಂದು ಕೊಂಡಿದ್ದಳೋ ಅದೇ ಚಿನ್ನದ ಹಾರ ಆಕೆಯ ತಾಯಿಯ ಕೊರಳಲ್ಲಿದ್ದದ್ದು ಕಂಡು ಆಕೆಗೆ ಅಚ್ಚರಿಯ‌ ಜೊತೆಗೆ ಎಂತಹ ಅಚಾತುರ್ಯವಾಗಿ ಹೋಯಿತು ಎಂಬ ಅರಿವಾಗುತ್ತದೆ. ಕೂಡಲೇ ಸಾವರಿಸಿಕೊಂಡು ಏನಮ್ಮಾ ಯಾವ ಕಡೆ‌ ಪ್ರಯಾಣ? ಎನ್ನುತ್ತಾಳೆ.

ಅಯ್ಯೋ ಮಗಳೇ, ಏನು ಬಂದದ್ದು ಏನು ಸಮಾಚಾರ? ಎಲ್ಲಾ ಆರಾಮಾ? ನಾವೇ ಇನ್ನು ಸ್ವಲ್ಪ ಹೊತ್ತಿನಲ್ಲಿ ನಿಮ್ಮ ಮನೆಗೆ ಬರ್ತಾ ಇದ್ವೀ. ನಿಮ್ಮ‌ ಮನೆಯ ಹತ್ತಿರದಲ್ಲೇ, ನಿಮ್ಮಪ್ಪನ ಸ್ನೇಹಿತರ ಮಗಳ ಮದುವೆ ಇದೆ. ಅಲ್ಲಿಗೆ ಬಂದು ಹಾಗೇ ನಿಮ್ಮ‌ ಮನೆಗೆ ಬಂದು ಈ ಚಿನ್ನದ ಹಾರವನ್ನು ‌ಕೊಟ್ಟು ಹೋಗೋಣಾ ಅಂತಿದ್ವಿ ಎನ್ನುತ್ತಾರೆ ಅವರ ತಾಯಿ.

ಮೊನ್ನೆ ನೀನು ಅದ್ಯಾವುದೋ ಪಾರ್ಟಿ ಮುಗಿಸಿ ನಮ್ಮ ಮನೆಗೆ ಬಂದಿದ್ದಾಗ ಬಟ್ಟೆ ಬದಲಾಯಿಸುವಾಗ ಈ ಚಿನ್ನದ ಹಾರವನ್ನೂ ನಿನ್ನ ಡ್ರಸಿಂಗ್ ಟೇಬಲ್ ಮೇಲೆ ಬಿಚ್ಚಿಟ್ಟು ಮರೆತು ಹೋಗಿದ್ದೀ. ನೀನು‌ ಹೋದ್ಮೇಲೆ ನಾವೂ ಗಮನಿಸಿದ್ವೀ. ಹೇಗೂ ಇವತ್ತು ನಿಮ್ಮ ಮನೆ ಹತ್ರಾನೇ ಬರ್ತೀವಲ್ಲಾ, ಆಗ್ಲೇ ಕೊಡೋಣ ಎಂದು ಸುಮ್ಮನಾದ್ವೀ. ಸುಮ್ಮನೆ‌ ವ್ಯಾನಿಟಿ ಬ್ಲಾಗಿನಲ್ಲಿ ಇಟ್ಟುಕೊಳ್ಳುವ ಬದಲು ಕುತ್ತಿಗೆಗೆ ಹಾಕಿಕೊಂಡಿದ್ದೇನೆ. ಬೇಜಾರು‌ ಮಾಡ್ಕೋ ಬೇಡ್ವೇ. ಎಂದು ಬಡ ಬಡನೇ‌ ಹೆಂಡತಿ ಮಾತನಾಡುತ್ತಿದ್ದದ್ದನ್ನು ಕಂಡ ಆಕೆಯ ಯಜಮಾನರು,

ಇದೇನೇ? ಮನೆಗೆ ಬಂದ ಮಗಳನ್ನು ಬಾಗಿಲಲ್ಲೇ ನಿಲ್ಲಿಸಿ‌ ಮಾತ್ನಾಡಿಸ್ತಾ ಇದ್ಯಾ? ಒಳಗೆ‌ ಕರ್ದು ಬಂದ ಸಮಾಚಾರ ವಿಚಾರಿಸು.‌ ಮದುವೆ ಮಹೂರ್ತಕ್ಕೆ‌ ಇನ್ನೂ ಸಮಯವಿದೆ ಎಂದು ಹೇಳುತ್ತಲೇ, ಏನಮ್ಮಾ ಮಗಳೇ, ಒಬ್ಳೇ ಬಂದಿದ್ದೀಯಾ? ಅಳಿಯಂದಿರು ಎಲ್ಲಿ? ನಿಮ್ಮತ್ತೆ ಚೆನ್ನಾಗಿದ್ದಾರಾ? ಅವರು ಬಿಡು ಚೆನ್ನಾಗಿಯೇ ಇರ್ತಾರೆ. ಎಷ್ಠೇ ಆಗಲಿ ನೀನು ನಮ್ಮ ಮಗಳಲ್ಲವೇ,ಅವರನ್ನು ಚೆನ್ನಾಗಿಯೇ ನೋಡ್ಕೋತಿರ್ತೀಯಾ ಎನ್ನುತ್ತಾರೆ.

ಅಪ್ಪನ ಆ ಮಾತುಗಳು ಮಗಳ ಮನಸ್ಸಿಗೆ ಚಾಕು ಚುಚ್ಚಿದಂತೆ ನಾಟಿ, ಕಸಿವಿಸಿಯಾದರೂ,  ಅದನ್ನು ತೋರಿಸಿ ಕೊಳ್ಳದೇ, ಹೂಂ ಅಪ್ಪಾ ಮನೆಯಲ್ಲಿ ಎಲ್ಲರೂ ಚೆನ್ನಾಗಿಯೇ ಇದ್ದೇವೆ. ಇವತ್ತು ಸಂಜೆ ನಮ್ಮ ಮನೆಯವರ ಸ್ನೇಹಿತರ ರಿಸೆಶ್ಪನ್ನಿಗೆ ಹೋಗೋದಿತ್ತು. ಈ ಮೂರು ತಿಂಗ್ಳಲ್ಲಿ, ಅತ್ತೆಯ ಕೈ ರುಚಿ ತಿಂದು ತಿಂದು ಸ್ವಲ್ಪ ದಪ್ಪಗೆ ಆಗಿಬಿಟ್ಟಿರುವ ಕಾರಣ, ಈ ಬಟ್ಟೆಗಳು ಸ್ವಲ್ಪ ಟೈಟಾಗ್ತಾ‌ ಇತ್ತು. ಹಾಗಾಗಿ ಇಲ್ಲೇ ಟೈಲರ್ ಅಂಗಡಿ ಹತ್ರಾ ನಮ್ಮ ಮನೆಯವರೇ ಬಿಟ್ಟು ಅವರು ಆಫೀಸಿಗೆ ಹೋದ್ರು. ಆದ್ರೇ ಟೈಲರ್ ಅಂಗಡಿ ಇನ್ನೂ ತೆಗೆಯಲು‌ ಇನ್ನೂ ಅರ್ಧ‌ ಮುಕ್ಕಾಲು ಗಂಟೆ ಆಗತ್ತೇ ಅಂತ ಅದರ ಪಕ್ಕದ ಅಂಗಡಿಯವರು ಹೇಳಿದ್ರು. ಹಾಗಾಗಿ‌ ಮನೆಗೆ ಬಂದೇ. ನೀವು ಮದುವೆ ಮನೆಗೆ ಹೋಗಿ ಬನ್ನಿ ನಾನು ಟೈಲರ್ ಹತ್ರಾ ಹೋಗಿ ಬರ್ತೀನಿ ಎಂದು ಹೇಳುತ್ತಾ ಮನೆಯ ಒಳಗೂ ಹೋಗದೇ ಮನೆಯ ಹೊರಗೇ ಅಪ್ಪಾ ಅಮ್ಮನ ಕಾಲಿಗೆ ನಮಸ್ಕರಿಸಿ, ಮದ್ವೇ ಮುಗಿಸಿಕೊಂಡು ನಮ್ಮ ಮನೆಗೆ ಬನ್ನಿ ನಾನು ಕಾಯ್ತಾ ಇರ್ತೀನಿ ಎಂದು ಹೇಳಿ ಮನೆಯಿಂದ ಸ್ವಲ್ಪ ದೂರ ಬಂದು ಯಾರಿಗೂ ಕಾಣದ ಹಾಗೆ ಆಟೋ ಹತ್ತಿ ತನ್ನ ಮನೆಗೆ ಹೋದಳು.

ಗಂಡ ಮತ್ತು ಅತ್ತೇ ಮೇಲೆ‌‌ ಕೋಪ ಮಾಡ್ಕೋಂಡು ದುಡುದುಡನೇ ಬ್ಯಾಗ್ ತೆಗೆದುಕೊಂಡು ಹೋದವಳು‌ ಇಷ್ಟು ಬೇಗನೆ ಮನೆಗೆ ಬಂದು ಬಿಟ್ಟಳಲ್ಲಾ? ಎಂದು ಅತ್ತೆ ಆಶ್ಚರ್ಯಚಕಿತರಾಗಿ ನೋಡುತ್ತಿದ್ದರೆ, ಸೀದಾ ಮನೆಯೊಳಗೆ ಬಂದು, ಚಪ್ಪಲಿಯನ್ನು ಮೂಲೆಯಲ್ಲಿ ಬಿಟ್ಟು ಅತ್ತೆಯ ಕಾಲು ಹಿಡಿದು ನನ್ನನ್ನು ಕ್ಷಮಿಸಿ ಬಿಡಿ ಅತ್ತೇ!! ನಾನು ವಿನಾಕಾರಣ ನಿಮ್ಮ ಮೇಲೆ ಆರೋಪ ಮಾಡಿಬಿಟ್ಟೇ ಎಂದು‌ ಕಣ್ಣೀರು ಸುರಿಸುತ್ತಾಳೆ.

ಸೊಸೆಯ ಈ ರೀತಿಯ‌ ಮಾರ್ಪಾಟು ಅತ್ತೆಗೆ ಅಚ್ಚರಿ‌ ಮೂಡಿಸಿತಾದರೂ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದ ಮೇಲೆ ಅವರನ್ನು ಕ್ಷಮಿಸುವುದು ದೊಡ್ಡ ಗುಣ‌ ಎಂದು ಸೊಸೆಯ ಬುಜವನ್ನು ಹಿಡಿದು ಮೇಲಕ್ಕೆ ಎಬ್ಬಿಸಿ ಸಂತೈಸುತ್ತಾರೆ.

atte6ಆತ್ತೆ ಕ್ಷಮಿಸಿದ್ದರಿಂದ ಸಂತಸಗೊಂಡ ಸೊಸೆ, ನಡೆದದ್ದೆಲ್ಲವನ್ನೂ ಕೂಲಂಕುಷವಾಗಿ ಅತ್ತೆಗೆ ತಿಳಿಸಿ ಇನ್ನೆಂದೂ ತನ್ನಿಂದ ಈ ರೀತಿಯ ತಪ್ಪಾಗದು ಎಂದು ಭಾಷೆ ಕೊಡುತ್ತಾಳಲ್ಲದೇ, ಅಂದಿನಿಂದ ಅವರಿಬ್ಬರೂ ಕೇವಲ ಅತ್ತೆ ಸೊಸೆಯಾಗಿರದೇ, ತಾಯಿ‌ ಮಗಳಂತೆ ಅನ್ಯೋನ್ಯವಾಗಿ ಸುಖವಾಗಿ ಬಾಳ ತೊಡಗಿದರು.

ಹಾವು ಮುಂಗುಸಿ ತರಹಾ ಕಿತ್ತಾಡುತ್ತಿದ್ದ ಅತ್ತೇ ಸೊಸೆಯರು ಇದ್ದಕ್ಕಿಂದ್ದಂತೆಯೇ ಒಂದಾಗಿದ್ದದ್ದನ್ನು ಗಮನಿಸಿದ ಮಗ, ಇದು ಹೇಗಾಯ್ತು ಎಂದು ತಿಳಿದುಕೊಳ್ಳುವ ಮನಸ್ಸಾದರೂ, ಜೇನುಗೂಡಿಕೆ ಕಲ್ಲು ಎಸೆದು ಜೇನುಹುಳಗಳಿಂದೇಕೆ ಕಚ್ಚಿಸಿಕೊಳ್ಳಬೇಕು ? ಎಂದು ಸುಮ್ಮನಾಗುತ್ತಾನೆ.

atte4ನಿಜ ಹೇಳ್ಬೇಕು ಅಂದ್ರೇ, ಯಾರ ಮನೆಯಲ್ಲಿ ಅತ್ತೇ ತನ್ನ ಸೊಸೆಯಲ್ಲಿ ಮಗಳನ್ನು ಕಾಣ್ತಾರೋ? ಯಾರ ಮನೆಯಲ್ಲಿ ಸೊಸೆ ತನ್ನ ಅತ್ತೆಯಲ್ಲಿ ತಾಯಿಯನ್ನು ಕಾಣ್ತಾರೋ ಆ ಮನೆ ಖಂಡಿತವಾಗಿಯೂ ನಂದಗೋಕುಲವಾಗಿರುತದೆ. ಅದೇ ರೀತಿ ಎಲ್ಲಾ ಹೆಣ್ಣು ಹೆತ್ತ ತಂದೆ ತಾಯಿಯರೂ ತಮ್ಮ ಮಗಳ ಸಂಸಾರ ಚೆನ್ನಾಗಿ ಇರಲಿ ಎಂದೇ ಬಯಸುತ್ತಾರೆಯೇ ಹೊರತು ಯಾರೂ ಮಗಳ ಸಂಸಾರ ಒಡೆಯಲು ಮುಂದಾಗುವುದಿಲ್ಲ.

atte5ಅದಕ್ಕೇ ನಾನು ಬಹಳಷ್ಟು ಬಾರೀ ಗಂಡು ಹೆಣ್ಣು ಜಾತಕ ಹೊಂದಾಣಿಕೆ ಮಾಡುವ ಸಮಯದಲ್ಲಿ ತಮಾಷೆಗೆಂದು ಹೇಳ್ತಾನೇ ಇರ್ತೀನಿ. ಗಂಡು ಹೆಣ್ಣು ಜಾತಕ ಹೊಂದಾಣಿಕೆ ಆಗ್ದೇ ಹೋದ್ರೋ ಅವರಿಬ್ಬರೂ ಸ್ಚಲ್ಪ ದಿನಗಳ ನಂತರ ಪರಸ್ಪರ ಅರ್ಥಮಾಡ್ಕೊಂಡು ಚೆನ್ನಾಗಿಯೇ ಸಂಸಾರ ಮಾಡಿ ಬಿಡುತ್ತಾರೆ. ಜಾತಕ ನೋಡುವಾಗ ಅತ್ತೇ ಸೊಸೆಯ ಜಾತಕಾ, ಅತ್ತೇ ಅಳಿಯನ ಜಾತಕಗಳು ಹೊಂದಾಣಿಕೆ ಆಗತ್ತಾ ಅಂತ ನೋಡಿಬಿಟ್ಟರೇ ಅವರ ಸಂಸಾರ ಆನಂದ ಸಾಗರವಾಗಿರುತ್ತದೆ ಅಲ್ವೇ?

ಈ ಕಥೆ ಇಷ್ಟ ಆದ್ರೇ ಲೈಕ್ ಮಾಡಿ ಎಲ್ಲಾ ಅಮ್ಮಾ ಅತ್ತೆ ಮತ್ತು ಸೊಸೆಯಂದಿರಿಗೆ ತಲುಪಿಸಿ.

ಏನಂತೀರೀ?

ನಿಮ್ಮವನೇ ಉಮಾಸುತ

KL 7BT 369

ಅರೇ ಇದೇನಿದು KL 7BT 369 ಎಂಬ ವಿಚಿತ್ರ ಶೀರ್ಷಿಕೆ? ಇದು ಯಾವ ನಂಬರ್? ಮತ್ತು ಈ ನಂಬರಿನ ಹಿಂದಿರುವ ರೋಚಕ ಕಥೆಯೇನು ಎಂದು ತಿಳಿಯುವ ಕಾತುರ ನಿಮಗಿದ್ದಲ್ಲಿ, ನಮಗೂ ಸಹಾ ಈ ನಂಬರಿನ ಕೂತೂಹಲಕಾರಿ ವಿಷಯಗಳನ್ನು ನಿಮ್ಮೊಂದಿಗೆ ಬಿಚ್ಚಿಡುವ ಮನಸ್ಸಾಗುತ್ತಿದೆ

ಮೂಲತಃ ಕೇರಳಿಗರಾದರೂ, ದಕ್ಷಿಣ ಭಾರತದ ಸಿನಿಮಾರಂಗದ ಪ್ರಸ್ತುತ ಖ್ಯಾತನಾಮರಾದ ಹಲವರಲ್ಲಿ ಮೊಹಮ್ಮದ್ ಕುಟ್ಟಿ ಇಸ್ಮಾಯಿಲ್ ಪಾನಿ ಪರಂಬಿಲ್  ಅರ್ಥಾತ್ ಎಲ್ಲರ ಪ್ರೀತಿಯ ಮಮ್ಮುಟ್ಟಿ ಅವರ ಪರಿಚಯ ಯಾರಿಗೆ ತಾನೇ ಇಲ್ಲ? ಇತ್ತೀಚೆಗಷ್ಟೇ ತಮ್ಮ  69 ನೇಯ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮುಮ್ಮುಟ್ಟಿ, ಕೇರಳದ ಕೊಟ್ಟಾಯಂ ಜಿಲ್ಲೆಯ ವೈಕೋಮ್ ಬಳಿಯ ಚೆಂಪುವಿನಲ್ಲಿ ಹುಟ್ಟಿ ಬೆಳೆದವರು. ಮಲಯಾಳಂ ಚಿತ್ರಗಳಲ್ಲದೇ ದಕ್ಷಿಣ ಭಾರತದ ಭಾಷೆಗಳಾದ ಕನ್ನಡ, ತಮಿಳು ತೆಲುಗು ಸೇರಿದಂತೆ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯೂ ಸೇರಿದಂತೆ ಸುಮಾರು 400 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸುವ ಮೂಲಕ ಅತ್ಯಂತ ಜನಪ್ರಿಯರಾಗಿದ್ದಾರೆ.

ಕೇವಲ ಚಿತ್ರರಂಗವಲ್ಲದೇ ಅನೇಕ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿರುವ ಮುಮ್ಮುಟ್ಟಿಯವರ ಮತ್ತೊಂದು ವಿಶೇಷವೆಂದರೆ ಅವರ ಕಾರುಗಳ ಸಂಗ್ರಹಗಳ ಹುಚ್ಚು. ಬಹುಶಃ ಪ್ರಪಂಚದ ಸಾಧಾರಣ ಕಾರಿನಿಂದ ಹಿಡಿದು ಇತ್ತೀಚಿನ ಐಶಾರಾಮಿ ಕಾರಿನ ವರೆಗೂ ಅನೇಕ ಬಗೆ ಬಗೆಯ ಸುಂದರವಾದ ನೂರಾರು ಕಾರುಗಳ ಒಡೆಯರಾಗಿದ್ದಾರೆ

ಕೇರಳದ ಸಾಮಾನ್ಯ ಮಧ್ಯಮ ವರ್ಗದ ರೈತ ಕುಟುಂಬದವರಾದ ಮುಮ್ಮುಟ್ಟಿಯವರು ತಮ್ಮ ಎಲ್.ಎಲ್.ಬಿ ಮುಗಿಸಿ ವಕೀಲೀ ವೃತ್ತಿಯನ್ನು ಆರಂಭಿಸುವ ಬದಲು ನಟನೆಗೆ ಆಕರ್ಷಿತರಾಗಿ ತಮ್ಮ ಪ್ರತಿಭೆ ಮತ್ತು ಪ್ರಭುದ್ಧ ನಟನೆಯ ಮೂಲಕ ಕಳೆದ  ಮೂರುವರೆ ದಶಕಗಳಲ್ಲಿ ಚಿತ್ರರಂಗದಲ್ಲಿ  ಅನಭಿಷಕ್ತ ರಾಜನಾಗಿ ಮೆರೆಯುತ್ತಿದ್ದಾರೆ. ಇಂತಹ ಮುಮ್ಮುಟ್ಟಿಯವರ ಬಳಿ ಒಟ್ಟು 369 ಕಾರುಗಳು ಇರುವ ಕಾರಣ ಅವರ ಎಲ್ಲಾ ಕಾರುಗಳ ನೊಂದಾವಣಿ ಸಂಖ್ಯೆ  369ರಿಂದಲೇ ಕೊನೆಗೊಳ್ಳುವುದು ವಿಶೇಷವಾಗಿದೆ. ಮಮ್ಮುಟ್ಟಿಯವರಿಗೆ  Jaguar XJ-L Caviar ಕಾರ್ ಬಹಳ ಇಷ್ಟವಾದ ಕಾರಣ ಈ ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾಡೆಲ್ಗಳನ್ನು ಖರೀದಿಸಿದ್ದಾರೆ. ಆ ಕಾರಿನ ನಂಬರ್ KL 7BT 369 ಆಗಿರುವ ಕಾರಣ ನಮ್ಮ ಇಂದಿನ ಲೇಖನದ ಶೀರ್ಷಿಕೆಯೂ ಅದೇ ಆಗಿದೆ.

ತಮಿಳು ನಾಡಿನ ಮಾಜೀ ಮುಖ್ಯಮಂತ್ರಿ ಮತ್ತು ಚಿತ್ರನಟಿಯೂ ಆಗಿದ್ದ ಜಯಲಲಿತ, ಮತ್ತು ಉದ್ಯಮಿ ಮುಖೇಶ್ ಅಂಬಾನಿಯ ಪತ್ನಿ ನೀತೂ ಅಂಬಾನಿಯವರು  ಪ್ರತೀ ದಿನವೂ ಹೊಸಾ ಹೊಸಾ ಸೀರೆ ಮತ್ತು ಚಪ್ಪಲಿಗಳನ್ನು ಧರಿಸುತ್ತಿದ್ದಂತೆ ಮುಮ್ಮುಟ್ಟಿಯವರೂ ಸಹಾ ಪ್ರತೀ ದಿನವೂ ಒಂದೊಂದು ಕಾರ್ ಬಳಸುವ ಹವ್ಯಾಸವನ್ನು ಇಟ್ಟುಕೊಂಡಿದ್ದು, ಒಮ್ಮೆ ಬಳಸಿದ ಕಾರನ್ನು ಪುನಃ ಬಳಸಲು ಒಂದು ವರ್ಷ ತೆಗೆದುಕೊಳ್ಳುತ್ತಾರೆ. ತಮ್ಮ ಬಳಿ ಇರುವ ಇಷ್ಟೊಂದು ಕಾರುಗಳ ದುರಸ್ತಿಗೆಂದೇ  ತಮ್ಮ ಮಗ ದುಲ್ಕರ್ ಸಲ್ಮಾನ್ ಅವರೊಂದಿಗೆ 369 ಗ್ಯಾರೇಜ್ ಎಂದು ಕರೆಯಲ್ಪಡುವ ತಮ್ಮದೇ ಆದ ಸ್ವಂತದ ಗ್ಯಾರೇಜ್  ಮತ್ತು ಮೆಕ್ಯಾನಿಕ್ಗಳನ್ನು ಇಟ್ಟುಕೊಂಡು ತಮ್ಮ ಕಾರುಗಳನ್ನು ಸದಾಕಾಲವು ಸುಸ್ಥಿತಿಯಲ್ಲಿ ಇಡುತ್ತಾರಂತೆ.

ಮಾರುತಿ ಕಾರ್ ಕೊಳ್ಳುವ ಮೂಲಕ ತಮ್ಮ ಕಾರ್ ಖರೀದಿಯ ಆಬಿಯಾನವನ್ನು ಆರಂಭಿಸಿದ ಮುಮ್ಮುಟ್ಟಿ  ದಕ್ಷಿಣ ಭಾರತದ ಚಲನಚಿತ್ರರಂಗದಲ್ಲಿ ಪ್ರಪ್ರಥಮ ಬಾರಿಗೆ  Audi ಕಾರನ್ನು  ಕೊಂಡ ಹೆಗ್ಗಳಿಕೆ ಮಮ್ಮುಟ್ಟಿ ಅವರಿಗೇ ಸೇರುತ್ತದೆ. ಸದ್ಯ ಅವರ ಬಳಿ ಇರುವ ಕಾರುಗಳಲ್ಲಿ Ferrari Mercedes ಮತ್ತು Audi, Porsche, Mini Cooper S, F10 BMW 530d ಹಾಗೂ 525d, E46 BMW M3, Volkswagen Passat X2, Mitsubishi Pajero Sport, Toyota, Toyota ಲ್ಯಾಂಡ್ ಕ್ರೂಸರ್ LC 200 ಹೀಗೆ ಅನೇಕ SUV ಕಾರುಗಳಲ್ಲದೇ,  Mini Cooper S, F10 BMW 530d ಹಾಗೂ 525d, E46 BMW M3, Volkswagen Passat X2 ಕಾರುಗಳೂ ಇವೆ.  ಇದಲ್ಲದೇ ತಮ್ಮ ಅನುಕೂಲಕ್ಕೆ ತಕ್ಕಂತೆ ಹಲವಾರು ಬದಲಾವಣೆ ಮಾಡಿಕೊಂಡ Eicher ಕ್ಯಾರವಾನ್ ಕೂಡ ಅವರ ಬಳಿ ಇದೆ.

ಕಷ್ಟ ಪಟ್ಟು ತಮ್ಮ ಸ್ವಂತ ಪರಿಶ್ರಮದ ಮೂಲಕ ಇಷ್ಟೊಂದು ಐಶಾರಾಮೀ ಕಾರುಗಳ ಒಡೆಯನಗಿರುವ ಮುಮ್ಮುಟ್ಟಿ.  ಸಾಧಾರಣ ಮಧ್ಯಮ ವರ್ಗದವರೂ ಸಹಾ ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಎಂತಹ ಸ್ಥಿತಿಯನ್ನಾದರೂ ತಲುಪಬಹುದು ಮತ್ತು ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿದ್ದಾರೆ.

ಏನಂತೀರೀ?

ಪಾತಾಳ ಗರಡಿ

ಅದು ಎಪ್ಪತ್ತರ ದಶಕ. ನಾನಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಕಾಲ. ಆಗಿನ್ನೂ ಈಗಿನ ತರಹದಲ್ಲಿ ಮನೆ ಮನೆಗೂ ನಲ್ಲಿಗಳು ಇಲ್ಲದ ಕಾಲ. ನೀರಿಗಾಗಿ ಬಹುತೇಕ ಎಲ್ಲರ ಮನೆಗಳಲ್ಲಿಯೂ ಬಾವಿಯನ್ನೇ ಆಶ್ರಯಿಸುತ್ತಿದ್ದ ಕಾಲವದು. ನಮ್ಮ ತಂದೆಯವರು ಪ್ರತೀ ದಿನ ತಮ್ಮ ಕಛೇರಿಯಿಂದ ಬಂದ ತಕ್ಷಣ ಸ್ವಲ್ಪ ವಿರಾಮ ತೆಗೆದುಕೊಂಡು ಕತ್ತಲಾಗುವ ಮುನ್ನಾ ಬಾವಿಯಿಂದ ಸರಾಗವಾಗಿ ನೀರನ್ನು ಸೇದಿ ನಮ್ಮ ಮನೆಯ ಬಚ್ಚಲು ಮನೆಯಲ್ಲಿದ್ದ ಹಂಡೆ, ನೀರಿನ ತೊಟ್ಟಿಗಳು ಬಕೆಟ್ ಎಲ್ಲದಕ್ಕೂ ತುಂಬಿಸಿಡುತ್ತಿದ್ದದ್ದನ್ನು ನೋಡಿ ನಮಗೆ ಸೋಜಿಗವುಂಟಾಗುತ್ತಿತ್ತು. ಅದೊಮ್ಮೆ ಬಾವಿಯ ರಾಟೆಗೆ ಹಗ್ಗ ಹಾಕಿ ಅದಕ್ಕೆ ಬಿಂದಿಗೆ ಕಟ್ಟಿದ್ದನ್ನು ನೋಡಿ ನಮಗೂ ನೀರನ್ನು ಸೇದುವ ಆಸೆಯಾಗಿ ನಾನು ಮತ್ತು ನನ್ನ ತಂಗಿ ಭಾವಿಯತ್ತ ಓಡಿ, ಸರ ಸರನೆ ಭಾವಿಯೊಳಗೆ ಹಗ್ಗವನ್ನು ಬಿಟ್ಟು ಹತ್ತಾರು ಬಾರಿ ಹಗ್ಗವನ್ನು ಎಳೆದೂ ಎಳೆದೂ ಜಗ್ಗಿ ಹಾಗೂ ಹೀಗೂ ಬಿಂದಿಗೆಯಲ್ಲಿ ನೀರನ್ನು ತುಂಬಿಸಿ ಎಳೆಯಲು ಪ್ರಯತ್ನಿಸುತ್ತೇವೆ. ಊಹೂಂ ನನ್ನ ಕೈಯ್ಯಲ್ಲಿ ಆಗುತ್ತಿಲ್ಲ. ಈ ನೀನೂ ಒಂದು ಕೈ ಹಾಕೇ ಎಂದು ತಂಗಿಯನ್ನು ಕರೆದಾಗ ಅವಳೂ ಸಹಾ ಕೈ ಹಾಕಿ ಹಗ್ಗವನ್ನು ಎಳೆದ ಪರಿಣಾಮ ಒಂದು ನಾಲ್ಕೈದು ಅಡಿ ಎತ್ತರಕ್ಕೆ ಎಳೆದಿರಬಹುದೇನೋ? ನಮ್ಮ ಪುಟ್ಟ ಪುಟ್ಟ ಎಳೆಯ ಕೈಗಳಿಗೆ ಹಗ್ಗದ ನಾರು ಸವೆದು ನೋವಾಗುತ್ತಿದ್ದದ್ದು ಒಂದು ಕಡೆಯಾದರೇ, ನೀರು ತುಂಬಿದ ತಾಮ್ರದ ಬಿಂದಿಗೆಯ ಭಾರವನ್ನು ತಡೆಯಲಾರದೇ, ಸರ ಸರನೆಂದು ಹಗ್ಗ ಕೈಜಾರುತ್ತಾ ಕೈಯ್ಯನ್ನೆಲ್ಲಾ ತರಚಿಕೊಂಡಿದ್ದೇ ತಡಾ ನಾವಿಬ್ಬರೂ ಹಗ್ಗವನ್ನು ಸಡಿಲಗೊಡಿಸಿದೆವು. ಕೂಡಲೇ, ನೀರಿನಿಂದ ತುಂಬಿದ್ದ ಭಾರವಾದ ತಾಮ್ರದ ಬಿಂದಿಗೆ ಡುಂ ಎಂದು ಶಬ್ಧ ಮಾಡುತ್ತಾ ಬಾವಿಯಲ್ಲಿ ಬಿದ್ದು ಹೋಯಿತು ಮತ್ತು ಅದರ ಜೊತೆ ಹಗ್ಗವೂ ಭಾವಿಯ ತಳ ಸೇರಿತ್ತು

ಕೈ ಎಲ್ಲಾ ತರಚಿದ ನೋವು ಒಂದೆಡೆಯಾದರೇ, ಆಳವಾದ ಭಾವಿಯಲ್ಲಿ ಬಿಂದಿಗೆ ಬಿಟ್ಟಿರುವುದು ಅಪ್ಪಾ ಅಮ್ಮನಿಗೆ ಗೊತ್ತಾದರೆ ಗ್ರಹಚಾರ ಹೇಗಪ್ಪಾ ಎಂಬ ಚಿಂತೆ ಮತ್ತೊಂದೆಡೆ. ಶಬ್ಧ ಕೇಳಿ ಮನೆಯೊಳಗಿನಿಂದ ಏನದು ಶಬ್ಧಾ? ಎಂದು ಹಿತ್ತಲಿಗೆ ಅಮ್ಮಾ ಬರುವಷ್ಟರಲ್ಲಿ ನಾವಿಬ್ಬರೂ ದಿಕ್ಕಾಪಾಲಾಗಿ ಓಟ ಕಿತ್ತಿದ್ದೆವು. ಸರಿ ಅಮ್ಮಾ ಬಂದು ಆ ಕಡೆ ಈ ಕಡೆ ಎಲ್ಲಾ ನೋಡಿ ಯಾರು ಇಲ್ಲದಿದ್ದನ್ನು ನೋಡಿ ಸುಮ್ಮನೆ ಒಳ ಹೋಗಿದ್ದನ್ನು ಕದ್ದು ಮುಚ್ಚಿ ನೋಡುತ್ತಿದ್ದ ನಮಗೆ ಬದುಕಿತು ಬಡ ಜೀವ ಎಂದೆನಿಸಿತು. ಸಂಜೆ ತಂದೆಯವರು ಯಥಾ ಪ್ರಕಾರ ನೀರು ಸೇದಲು ಹಗ್ಗಾ ಬಿಂದಿಗೆ ಸಿಗದಿದ್ದಾಗ ಕಡೆಗೆ ಭಾವಿಯಲ್ಲಿ ಹಗ್ಗ ತೇಲುತ್ತಿದ್ದದ್ದನ್ನು ನೋಡಿ ಹೇಳಿದಾಗಲೇ ಅಮ್ಮನಿಗೆ ಮಧ್ಯಾಹ್ನದ ಕೇಳಿದ ಶಭ್ದದ ರಹಸ್ಯ ಅರಿವಾಯಿತ್ತು. ಭಾವಿಗೆ ಬಿಂದಿಗೆ ಬಿಟ್ಟವರು ಯಾರು? ಎಂದು ಹೆಚ್ಚಿಗೆ ತಲೆ ಕೆಡಿಸಿಕೊಳ್ಳದೇ ಮಗೂ, ಮೂಲೇ ಮನೆಗೆ ಹೋಗಿ ಪಾತಾಳ ಗರುಡಿ ಇಸ್ಕೋಂಡು ಬಾ ಅಂದಾಗಲೇ? ಹಾಂ!! ಪಾತಾಳ ಗರುಡಿನಾ? ಎನದು? ಎಂದು ಕೇಳಿದ್ದಕ್ಕೆ ನೀನೂ ಹೋಗಿ ಕೇಳು ಅವರು ಕೊಡ್ತಾರೆ ಆಗ ನಿನಗೇ ಗೊತ್ತಾಗುತ್ತದೆ ಅಂದ್ರು.

patal_sooji

ಅವರ ಮನೆಗೆ ಹೋಗಿ ಅತ್ತೇ (ಆಗೆಲ್ಲಾ ಆಂಟಿ ಅಂಕಲ್ ಸಂಸ್ಕೃತಿ ಇರಲಿಲ್ಲ) ಪಾತಾಳ ಗರುಡಿ ಕೊಡ್ಬೇಕಂತೇ ಅಂತ ಕೇಳ್ದೇ. ಯಾಕೋ ಯಾರ್ ಮನೆ ಭಾವಿಯಲ್ಲಿ ಬಿಂದಿಗೆ ಬಿತ್ತು? ಯಾರು ಬೀಳಿಸಿದ್ರೂ ಅಂತಾ ಕೇಳುತ್ತಲೇ ಮನೆಯೊಳಗಿನಿಂದ ಕಬ್ಬಿಣದ ಮುಳ್ಳು ಮುಳ್ಳುಗಳಿದ್ದ ಒಂದು ಪರಿಕರವನ್ನು ತಂದು ಕೊಟ್ಟರು. ಒಂದು ಅಗಲವಾದ ಕಬ್ಬಿಣದ ತಟ್ಟೆಯಾಕಾರದ ಮಧ್ಯದಲ್ಲಿ ಹಗ್ಗ ಕಟ್ಟಲು ಒಂದು ಸರಳು ಇದ್ದರೆ, ಇಡೀ ತಟ್ಟೆಯಾಕಾರಕ್ಕೆ ಅನೇಕ ಮುಳ್ಳುಗಳನ್ನು ತಗುಲಿ ಹಾಕಿದಂತಿದ್ದು ಅತ್ಯಂತ ಭಾರವಾಗಿತ್ತು. ಹಾಗೂ ಹೀಗೂ ಮಾಡಿ ಮನೆಗೆ ತೆಗೆದುಕೊಂಡು ಹೋಗಿ ಅಪ್ಪನ ಕೈಗೆ ಕೊಟ್ಟಾಗ ಅವರು ಅಟ್ಟದ ಮೇಲಿದ್ದ ಮತ್ತೊಂದು ಹಗ್ಗಕ್ಕೆ ಈ ಪಾತಾಳ ಗರುಡಿಯನ್ನು ಕಟ್ಟಿ ರಾಟೆಯ ಸಹಾಯದಿಂದ ಬಾವಿಯೊಳಗೆ ಬಿಟ್ಟು ಒಂದಷ್ಟು ಕಾಲ ಹಗ್ಗವನ್ನು ಆಚೀಚೆ ಜಗ್ಗಾಡುತ್ತಾ ಭಾವಿಯಲ್ಲಿದ್ದ ಬಿಂದಿಗೆಗೆ ಕಟ್ಟಿದ್ದ ಹಗ್ಗ ಚೆನ್ನಾಗಿ ಆ ಮುಳ್ಳುಗಳಿಗೆ ಸಿಕ್ಕಿಕೊಂಡ ನಂತರ ಸುಲಭವಾಗಿ ನೀರು ಸೇದುವ ಹಾಗಿ ಸೇದಿ ಹಗ್ಗ ಮತ್ತು ಬಿಂದಿಗೆಯನ್ನು ತೆಗೆದಾಗ ಒಂದು ರೀತಿಯ ನೆಮ್ಮದಿ. ಕೂಡಲೇ ಮೂಲೆ ಮನೆಯವರಿಗೆ ಪಾತಾಳ ಗರುಡಿಯನ್ನು ಹಿಂದಿರುಗಿಸಿ ಧನ್ಯವಾದ ಹೇಳಿಬಂದಿದ್ದೆ. ರಾತ್ರಿ ಊಟಕ್ಕೆ ಬಿಸಿ ಬಿಸಿಯಾದ ಅನ್ನದ ಜೊತೆ ಸಾರು ಕಲೆಸಲು ಆಗದೇ ಒದ್ದಾಡುತ್ತಿದ್ದದ್ದನ್ನು ನೋಡಿದಾಗಲೇ ಅಮ್ಮನಿಗೆ ಬಾವಿಗೆ ಬಿಂದಿಗೆಯನ್ನು ಹಾಕಿದವರು ಯಾರು ಎಂಬ ರಹಸ್ಯ ಗೊತ್ತಾಗಿ ಬಿಂದಿಗೆ ಹೋದ್ರೇ ಪರವಾಗಿಲ್ಲ ನೀವೇ ಬಾವಿಯೊಳಗೆ ಬಿದ್ದಿದ್ದರೇ ಏನು ಗತಿ ಎಂತು ಬೈದು ಅನ್ನಾ ಕಲೆಸಿ ಬಾಯಿಗೆ ಇಟ್ಟ ನೆನಪು ಎಷ್ಟು ವರ್ಷಗಳಾದರೂ ಇನ್ನೂ ಹಚ್ಚ ಹಸಿರಾಗಿಯೇ ಇದೆ.
paralsooji

ಹೀಗೆ ಬಾವಿಯಿಂದ ನೀರೆತ್ತುವಾಗ ಕೈಜಾರಿಯೋ ಇಲ್ಲವೇ ಹಗ್ಗ ಸಡಿಲವಾಗಿ ನೀರು ತುಂಬಿದ ಕೊಡ ಬಾವಿಯಲ್ಲಿ ಬಿದ್ದಾಗ ಮೇಲೆತ್ತಲು ಬಳಸುವ ಪದಾರ್ಥವನ್ನೇ ಪಾತಾಳ ಗರಡಿ ಅಥವಾ ಪಾತಾಳ ಸೂಜೀ ಅಂತ ಕರೆಯುತ್ತಾರೆ. ಉದ್ದವಾದ ಹಗ್ಗವನ್ನು ಈ ಪರಿಕರದ ಒಂದು ತುದಿಗೆ ಕಟ್ಟಿ ಅದನ್ನು ಬಾವಿಯ ಒಳಗೆ ಇಳಿಸಿ ಅಚೀಚೆಗೆ ಜಗ್ಗಾಡಿಸುತ್ತಾ ಇದ್ದಲ್ಲಿ ಬಾವಿಯೊಳಗೆ ಬಿದ್ದ ವಸ್ತುಗಳು ಗಾಳಕ್ಕೆ ಸಿಲುಕಿಕೊಳ್ಳುವ ಮೀನಿನಂತೆ ಈ ಪರಿಕರದ ಮುಳ್ಳುಗಳಿಗೆ ಸಿಕ್ಕಿಹಾಕಿಕೊಂಡಾಗ, ನಿಧಾನವಾಗಿ ಹಗ್ಗವನ್ನು ಮೇಲಕ್ಕೆಳೆದುಕೊಳ್ಳಬಹುದಾಗಿದೆ.

ಹೀಗೆ ಪಾತಾಳದಲ್ಲಿ ಬಿದ್ದ ಪದಾರ್ಥಗಳನ್ನೂ ಸುಲಭವಾಗಿ ಎತ್ತಿ ತರಬಲ್ಲುದು ಎಂಬ ಅರ್ಥದಲ್ಲಿ ಇದಕ್ಕೆ ಪಾತಾಳ ಗರಡಿ, ಪಾತಾಳ ಗರುಡಿ, ಮುಳ್ಳುಕೈ, ಪಾತಾಳ ಭೈರಿಗೆ, ಅಥವಾ ಪಾತಾಳ ಸೂಜಿ ಎಂಬ ಸಾರ್ಥಕ ನಾಮವನ್ನು ನಮ್ಮ ಹಿಂದಿನವರು ಇಟ್ಟಿದ್ದಾರೆ. ಸಾಮಾನ್ಯವಾಗಿ ಊರಿನ ಹಿರಿಯ ಗೌಡರ ಮೆನೆಯಲ್ಲಿಯೋ ಅಥವಾ ಕಮ್ಮಾರರ ಮನೆಯಲ್ಲಿ ಈ ರೀತಿಯ ಸಾಧನಗಳು ಇರುತ್ತಿದ್ದವು. ಯಾರಿಗಾದರೂ ಈ ಸಾಧನದ ಅವಶ್ಯಕತೆ ಬಂದಲ್ಲಿ ಅವರ ಮನೆಗೆ ಯಾವುದಾದರೂ ಹಿತ್ತಾಳೆಯ ಅಥವಾ ತಾಮ್ರದ ಪಾತ್ರೆ ಪಗಡ ಇಲ್ಲವೇ ಬಿಂದಿಗೆಯನ್ನು ಅವರಿಗೆ ಒತ್ತೆಯ ರೂಪದಲ್ಲಿ ಕೊಟ್ಟು ಸಾಧನವನ್ನು ಹಿಂದುರಿಗಿಸಿದ ನಂತರ ಆ ಒತ್ತೆಯ ಪಾತ್ರೆಯನ್ನು ತೆಗೆದುಕೊಂಡು ಹೋಗಬಹುದಾಗಿತ್ತು.

ಈಗೆಲ್ಲಾ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಭೂಮಿಯನ್ನು ಎಗ್ಗಿಲ್ಲದೇ ಕೊರೆದ ಕಾರಣ ಅಂತರ್ಜಲ ಬರಿದಾಗಿರುವ ಕಾರಣ ತೆರೆದ ಭಾವಿಗಳೇ ಕಾಣೆಯಾಗಿ ಹೋಗಿದೆ. ಸಾವಿರಾರು ಅಡಿಗಳಷ್ಟು ಆಳಕ್ಕೆ ಕೊಳವೇ ಭಾವಿ ಕೊರೆಸಿ, ಅದಕ್ಕೆ ಮೋಟರ್ ಪಂಪ್ ಅಳವಡಿಸಿ ಸ್ವಿಚ್ ಹಾಕಿದ ತಕ್ಷಣವೇ ಝಳ ಝಳ ಎಂದು ನೀರು ಪಡೆಯುವವರಿಗೆ ಇಂತಹ ಅಪರೂಪದ ಸಾಧನಗಳ ಪರಿಚಯವೇ ಇಲ್ಲದೇ ಹೋಗುತ್ತಿರುವುದು ವಿಷಾಧನೀಯವೇ ಸರಿ.

ನೀವೂ ಸಹಾ ಇಂತಹ ಅಪರೂಪದ ಸಾಧನಗಳನ್ನು ಉಪಯೋಗಿಸಿದ್ದಲ್ಲಿ, ದಯವಿಟ್ಟು ಅದರ ಚಿತ್ರ ಮತ್ತು ನಿಮ್ಮ ಅನುಭವನ್ನು ನಮ್ಮೊಂದಿಗೆ ಹಂಚಿಕೊಂಡಲ್ಲಿ, ಆ ಸಾಧನದ ಪರಿಚಯವನ್ನು ಹತ್ತಾರು ಜನರಿಗೆ ತಿಳಿಸುವ ಪ್ರಯತ್ನವನ್ನು ನಾವು ಮಾಡುತ್ತೇವೆ.

ಏನಂತೀರೀ?

ಐಎಎಸ್ ಅಧಿಕಾರಿ ಆರತಿ ಡೋಗ್ರಾ 

ಮನುಷ್ಯರಿಗೆ ಎಲ್ಲವೂ ಸರಿ ಇದ್ದಾಗಲೇ ಆಡಿ ಕೊಳ್ಳುವವರಿಗೇನೂ ಬರ ಇಲ್ಲ. ಅಂತಹದ್ದರಲ್ಲಿ ದೈಹಿಕವಾಗಿ ನ್ಯೂನತೆ ಇದ್ದರಂತೂ ಹೇಳತೀರದು. ಅಂತಹದ್ದರಲ್ಲಿ ಕೇವಲ 3 ಅಡಿ 2 ಇಂಚು ಎತ್ತರದ ತರುಣಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ 2006ರ ಬ್ಯಾಚ್’ನ IAS ಪರಿಕ್ಷೆಯಲ್ಲಿ ಉತ್ತಿರ್ಣರಾಗಿ ರಾಜಾಸ್ಥಾನದ ಅಜ್ಮೀರ್ ಜಿಲ್ಲಾಧಿಕಾರಿಯಾಗಿ ಬಹಳಷ್ಟು ದಿಟ್ಟತನದಿಂದ ಕರ್ತವ್ಯ ನಿಭಾಯಿಸಿದ ಆರತಿ ಡೋಗ್ರಾ ಅವರ ಸಾಧನೆಯ ಬಗ್ಗೆ ತಿಳಿಯೋಣ.

ಡೆಹ್ರಾಡೂನ್‌ನ ವಿಜಯ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಕರ್ನಲ್ ರಾಜೇಂದ್ರ ದೋಗ್ರಾ ಮತ್ತು ಖಾಸಗಿ ಶಾಲೆಯಲ್ಲಿ ಮುಖ್ಯೋಪಾಧ್ಯಾನಿಯಾಗಿರುವ ಕುಂಕುಮ್ ಎಂಬ ದಂಪತಿಗಳಿಗೆ ಜುಲೈ 1979ರಲ್ಲಿ ಹೆಣ್ಣು ಮಗಳ ಜನನವಾಗುತ್ತದೆ. ಮನೆಗೆ ಬಂದ ಮಹಾಲಕ್ಷ್ಮಿಯನ್ನು ಬಹಳ ಸಂತೋಷದಿಂದ ಸ್ವಾಗತಿಸಿದ ಆ ದಂಪತಿಗಳು ಆಕೆಗೆ ಅರತಿ ಡೋಗ್ರಾ ಎಂದು ನಾಮಕರಣ ಮಾಡುತ್ತಾರೆ. ಆದರೆ ಹುಟ್ಟುವಾಗ ಮಗುವಿನ ಆರೋಗ್ಯ ಎಲ್ಲಾ ಮಕ್ಕಳಂತೆಯೇ ಸಹಜವಾಗಿದ್ದರೂ ದಿನಕಳೆದಂತೆ ಆಕೆ ಕುಬ್ಜೆ ಎನ್ನವ ವಿಚಾರ ಅವರ ಗಮನಕ್ಕೆ ಬರುತ್ತದೆ. ಅವರ ಸಂಬಂಧೀಕರು ಮತ್ತು ನೆರೆಹೊರೆಯವರು ಆರತಿಯ ಭೌತಿಕ ರಚನೆಯ ಬಗ್ಗೆ ಆಕ್ಷೇಪಗಳನ್ನು ಎತ್ತಲಾರಂಭಿಸಿದರೂ ಆಕೆಯ ಪೋಷಕರು ಧೃತಿಗೆಡಲಿಲ್ಲ. ಈಗೆಯನ್ನು ನೋಡಿಕೊಳ್ಳುವ ಸಲುವಾಗಿಯೇ ಆವರು ಇನ್ನೊಂದು ಮಕ್ಕಳನ್ನು ಬಯಸದೇ ತಮ್ಮೆಲ್ಲಾ ಗಮನವನ್ನು ಅರತಿಯ ಆರೈಕೆಗೇ ಮೀಸಲಾಗಿಡುತ್ತಾರೆ ಮತ್ತು ತಮ್ಮ ಮಗಳನ್ನು ಇತರ ಎಲ್ಲಾ ಮಕ್ಕಳೊಂದಿಗೆ ಸಾಮಾನ್ಯ ಶಾಲೆಗೆ ಸೇರಿಸುತ್ತಾರೆ.

arthi2

ಓದಿನಲ್ಲಿ ಚುರುಕಾಗಿದ್ದ ಆರತಿ ಉತ್ತಮ ಅಂಕಗಳೊಡನೆ ತನ್ನ ಪದವಿ ಪೂರ್ಣ ಶಿಕ್ಷಣವನ್ನು ಮುಗಿಸಿ ಪದವಿಗಾಗಿ ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ಲೇಡಿ ಶ್ರೀ ರಾಮ್ ಕಾಲೇಜನ್ನು ಸೇರಿ ಅಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆಯುತ್ತಾಳೆ ನಂತರ ತನ್ನ ಸ್ನಾತಕೋತ್ತರ ಪದವಿಗಾಗಿ ಡೆಹ್ರಾ ಡನ್‌ಗೆ ಹೋಗುತ್ತಾರೆ. ಇದೇ ಸಂದರ್ಭದಲ್ಲಿ ಆಕೆ ಐಎಎಸ್ ಅಧಿಕಾರಿಯಾಗಿದ್ದ ಮನೀಶಾ ಪನ್ವಾರ್ ಅವರನ್ನು ಭೇಟಿಯಾಗುವ ಮೂಲಕ ಅವರ ಬದುಕಿನಲ್ಲಿ ಮಹತ್ತರ ತಿರುವನ್ನು ಪಡೆಯುತ್ತದೆ. ಆಕೆ ಅರತಿಗೆ ಮನಸ್ಥೈರ್ಯವನ್ನು ತುಂಬಿ ಆಕೆ ಐಎಎಸ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಪ್ರೇರೇಪಿಸುತ್ತಾರೆ. ಆರಂಭದಲ್ಲಿ ಆರತಿ ಅಳುಕಿದರೂ ನಂತರ ಆತ್ಮವಿಶ್ವಾಸದಿಂದ ಮತ್ತು ದಿಟ್ಟತನದಿಂದ ಐಎಎಸ್ ಪರೀಕ್ಷೆಯನ್ನು ಎದುರಿಸಿದ್ದಲ್ಲದೇ, 2006ರ ಬ್ಯಾಚ್ ನಲ್ಲಿ ತನ್ನ ಮೊದಲ ಪ್ರಯತ್ನದಲ್ಲಿಯೇ ದೇಶದ ಅತಿದೊಡ್ಡ ಪರೀಕ್ಷೆಯಾದ IAS ಪರಿಕ್ಷೆಯಲ್ಲಿ ಉತ್ತಿರ್ಣವಾಗುವ ಮೂಲಕ ಮಹತ್ತರ ಸಾಧನೆಯನ್ನು ಸಾಧಿಸಿದ್ದಲ್ಲದೇ, ರಾಜಾಸ್ಥಾನದ ಅಜ್ಮೇರ್ ಕಲೆಕ್ಟರ್ ಆಗಿ ನೇಮವಾಗುತ್ತಾರೆ.

ಆಕೆ ಕುಬ್ಜೆ ಎಂದು ತಿಳಿದಾಗ ಬಹುತೇಕರು ಇಂತಹ ಹೆಣ್ಣು ಮಕ್ಕಳು ಮುಂದೆ ಹೊರೆಯಾಗುತ್ತಾರೆ. ಹಾಗಾಗಿ ಆಕೆಯನ್ನು ಉಳಿಸಿಕೊಳ್ಳುವುದಕ್ಕಿಂತಲೂ ಕೊಲ್ಲುವುದೇ ಲೇಸು ಎಂಬ ಸಲಹೆಯನ್ನು ನೀಡಿದ್ದವರೇ ಹೆಚ್ಚು. ಮುಂದೆ ಆಕೆ ಬೆಳೆದು ದೊಡ್ಡವಳಾದಾಗ ಆಕೆಯ ಕುಬ್ಜತೆಯನ್ನು ನೋಡಿ ನಗುತ್ತಾ, ಅಪಹಾಸ್ಯ ಮಾಡಿದವರೆಲ್ಲರೂ ಮೂಗಿನ ಮೇಲೆ ಬೆರಳಿರುವಂತಹ ಸಾಧನೆಯನ್ನು ಮಾಡಿ ತನ್ನ ಮೇಲೆ ನಂಬಿಕೆ ಇಟ್ಟು ಪ್ರೀತಿಯಿಂದ ಸಾಕಿ ಸಲಹಿದ ಪೋಷಕರು ತನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಎತ್ತಿ ಮೆರೆದ ದಿಟ್ಟ ತನದ ಹೆಣ್ಣು ಮಗಳು ಆರತಿ ಡೋಗ್ರ ಎಂದರೂ ತಪ್ಪಾಗಲಾರದು.

ಅಧಿಕಾರವನ್ನು ವಹಿಸಿಕೊಂಡಾಗಲಿಂದಲೂ ಆಕೆಗೆ ತನ್ನ ಕುಬ್ಜತೆ ಎಂದೂ ಅಡ್ಡಿಯಾಗಲೇ ಇಲ್ಲ. ರಾಜಸ್ಥಾನದ ಅಜ್ಮೀರ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಕ ಆದಾಗಲಿಂದಲು ಅನೇಕ ಉತ್ತಮ ಕಾರ್ಯಗಳನ್ನು ಜಾರಿಗೆ ತರುವ ಮೂಲಕ ಜನಮಾನಸದಲ್ಲಿ ಮನ್ನಣೆ ಗಳಿಸುವ ಮೂಲಕ ಅನೇಕ ಮಹಿಳೆಯರಿಗೆ ಸ್ಪೂರ್ತಿಯಗಿದ್ದಾರೆ ಎಂದರೂ ತಪ್ಪಾಗಲಾರದು.

arthi3

ಹೇಳಿ ಕೇಳಿ ರಾಜಾಸ್ಥಾನ ಮರುಭೂಮಿಯ ಪ್ರದೇಶ ಅತ್ಯಂತ ಹಿಂದುಳಿದವರೇ ಹೆಚ್ಚಾಗಿ ವಾಸಿರುವ ಪ್ರದೇಶವದು ಅಲ್ಲಿಯ ಹೆಣ್ಣುಮಕ್ಕಳು ಬಹಿರ್ದಶಗೆ ಮನೆಯಿಂದ ದೂರ ದೂರದಲ್ಲಿರುವ ಬಯಲಿನಲ್ಲಿಯೇ ಬೆಳಕು ಹರಿಯುವ ಮುನ್ನವೇ ಇಲ್ಲಾ ಸಂಜೆ ಕತ್ತಲಾದ ನಂತರವೇ ಹೋಗಬೇಕಾದಂತಹ ಪರಿಸ್ಥಿತಿ ಇತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿಸಿದ ಬಿಕಾನೆರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಆರತಿ ಡೋಗ್ರಾ, ಬಾಕಾ ಬಿಕೋ ಎಂಬ ಅಭಿಯಾನವನ್ನು ಪ್ರಾರಂಭಿಸಿದರು. ಈ ಮೂಲಕ ಗ್ರಾಮ-ಗ್ರಾಗಳಲ್ಲಿಯೂ ಕಾಂಕ್ರೀಟ್ ಶೌಚಾಲಯಗಳನ್ನು ನಿರ್ಮಿಸಲಾಯಿತು ಮತ್ತು ಪ್ರತಿಯೊಬ್ಬರ ಮನೆಗಳಲ್ಲಿಯೂ ತಮ್ಮದೇ ಆದ ಶೌಚಾಲಯವನ್ನು ಕಟ್ಟಿಸಿಕೊಳ್ಳಲು ಜನರಿಗೆ ಸರ್ಕಾರದ ಕಡೆಯಿಂದ ಸಹಕಾರ ನೀಡಲಾಯಿತು. ಆರತಿ ಯವರೇ ಖುದ್ದಾಗಿ ಆ ಎಲ್ಲಾ ಗ್ರಾಮಗಳಿಗೂ ಹೋಗಿ ಅಲ್ಲಿಯ ಜನರಿಗೆ ಬಯಲಿನಲ್ಲಿ ಮಲವಿಸರ್ಜನೆ ಮಾಡದಿರಲು ಕೋರಿದ್ದಲ್ಲದೇ, ಆರಂಭದ ಕೆಲವು ದಿನಗಳು ಮುಂಜಾನೆಯೇ ತಮ್ಮ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ತೆರಳಿ ಜನರು ತೆರೆದ ಮಲವಿಸರ್ಜನೆ ಮಾಡುವುದನ್ನು ತಡೆದರು.

ಈ ಪ್ರಕ್ರಿಯೆ 195 ಗ್ರಾಮ ಪಂಚಾಯಿತಿಗಳಿಗೆ ವಿಸ್ತರಿಸುವ ಮೂಲಕ ಬಾಕಾ ಬಿಕೊ ಆಭಿಯಾನ ಯಶಸ್ವಿಯಾದ ನಂತರ, ಇತರೇ ಜಿಲ್ಲೆಗಳು ಸಹ ಈ ಮಾದರಿಯನ್ನು ಅಳವಡಿಸಿಕೊಂಡಿದ್ದಲ್ಲದೇ, ಈ ಸಾಧನೆಗಾಗಿ ಆರತಿ ಡೋಗ್ರಾ ಅವರಿಗೆ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಅನೇಕ ಪ್ರಶಸ್ತಿಗಳು ಹುಡುಕಿ ಕೊಂಡು ಬಂದವು. ಅವರು ಬಿಕಾನೆರ್‌ನಲ್ಲಿ ಮಿಷನ್ ಎಗೇನ್ಸ್ಟ್ ರಕ್ತಹೀನತೆ (ಎಂಎಎ) ಪ್ರಾರಂಭಿಸಿದರು. ಬಿಕಾನೆರ್‌ನ ಡಿಎಂ ಆಗಿದ್ದಾಗ, ಆರತಿ ಡೋಗ್ರಾ ಅನೇಕ ಅನಾಥ ಹುಡುಗಿಯರಿಗೆ ಸಹಾಯ ಮಾಡಿದ್ದಲ್ಲದೇ ಇಂದಿಗೂ ಸಹಾ ಅವರ ಜೊತೆ ಸಂಪರ್ಕದಲ್ಲಿದ್ದಾರೆ.

ಅಜ್ಮೇರಿನ ನಂತರ ಜೋಧಪುರ್ ಡಿಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡ ಮೊದಲ ಮಹಿಳಾ ಐಎಎಸ್ ಅಧಿಕಾರಿ ಆರತಿ. ಜೋಧ್‌ಪುರ ಡಿಸ್ಕಾಂನಲ್ಲಿನ ವಿದ್ಯುತ್ ತ್ಯಾಜ್ಯ, ವಿದ್ಯುತ್ ತ್ಯಾಜ್ಯವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಗಿ ನಿಭಾಯಿಸಿದ್ದಲ್ಲದೇ, ಎನರ್ಜಿ ಸೇಫ್ಟಿ ಸರ್ವಿಸ್ ಮೂಲಕ 3 ಲಕ್ಷ 27 ಸಾವಿರಕ್ಕೂ ಅಧಿಕ ಎಲ್ಇಡಿ ಬಲ್ಬ್ ವಿತರಿಸುವ ಮೂಲಕ ವಿದ್ಯುತ್ ಬಳಕೆಯನ್ನು ನಿಯಂತ್ರಿಸಲ್ಪಟ್ಟಿತು. ಅದಲ್ಲದೇ ದೂರ ದೂರದ ವಿದ್ಯುತ್ ಇಲ್ಲದಿದ್ದ ಪ್ರದೇಶಗಳ್ಲಿಯೂ ವಿದ್ಯುದೀಕರಣ ಮಾಡುವುದರಲ್ಲಿ ಸಫಲರಾದರು.

ಇತ್ತೀಚೆಗೆ 81 ಐಎಎಸ್ ಅಧಿಕಾರಿಗಳನ್ನು ರಾಜಸ್ಥಾನದಲ್ಲಿ ವರ್ಗಾಯಿಸಲಾಯಿತು. ಆ ವರ್ಗವಣೆಯಲ್ಲಿ ಅತ್ಯಂತ ಹೆಚ್ಚಾಗಿ ಚರ್ಚೆಗೆ ಬಂದ ಹೆಸರೇ ಮಹಿಳಾ ಐಎಎಸ್ ಅಧಿಕಾರಿ ಆರತಿ ಡೋಗ್ರಾ ಅವರದ್ದಾಗಿತ್ತು. ಅವರ ಜನಪ್ರಿಯತೆ ಮತ್ತು ವಿಭಿನ್ನ ಶೈಲಿಯ ಕೆಲಸ ಕಾರ್ಯಗಳಿಂದ ಎಲ್ಲರಿಗೂ ಆಕೆಯನ್ನು ತಮ್ಮ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಳ್ಳಬೇಕೆಂದು ಆಶಿಸುತ್ತಿದ್ದರೆಂದರೆ ಆಕೆಯ ಕರ್ತವ್ಯ ನಿಷ್ಟೆ ಹೇಗಿತ್ತೆಂಬುದು ತಿಳಿದು ಬರುತ್ತದೆ. ಇದುವರೆವಿಗೂ ಆಕೆ ಕೆಲಸ ಮಾಡಿರುವ ಎಲ್ಲಾ ಇಲಾಖೆಯವರೂ ಆಕೆಯ ಕೆಲಸದ ಬಗ್ಗೆ ಎಷ್ಟು ಪ್ರಭಾವಿತರಾದರುಂದರೆ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮೆಚ್ಚುಗೆಯ ಭಾವನೆಗಳನ್ನು ಹಂಚಿಕೊಳ್ಳುವ ಮೂಲಕ ರಾಜಾಸ್ಥಾನದಾದ್ಯಂತ ಆರತಿ ಡೋಗ್ರಾ ಪ್ರಸಿದ್ಧಿಯಾಗುವಂತೆ ಮಾಡಿದ್ದಾರೆ

ಆರತಿ ಡೋಗ್ರಾರವರ ಆಡಳಿತಾತ್ಮಕ ನಿರ್ಧಾರಗಳೊಂದಿಗೆ, ರಾಜಸ್ಥಾನ ಮಾತ್ರವಲ್ಲ, ದೇಶಾದ್ಯಂತದ ಮಹಿಳೆಯರಿಗೆ ಪ್ರೇರಣೆಯಾಗಿರುವುದಲದೇ, ರಾಜಸ್ಥಾನದ ಬಿಕಾನೆರ್, ಜೋಧ್‌ಪುರ ಮತ್ತು ಬುಂಡಿ ಜಿಲ್ಲೆಗಳಲ್ಲಿ ಸಂಗ್ರಾಹಕರಾಗಿದ್ದಾಗ, ಆರತಿ ದೊಡ್ಡ ನಿರ್ಧಾರಗಳನ್ನು ಮತ್ತು ಸಮಾಜದ ಹಿತದೃಷ್ಟಿಯಿಂದ ಆಕೆ ಮಾಡಿದ ಸಾಧನೆಗಳಿಂದ, ಸಮಾಜದಲ್ಲಾದ ಬದಲಾವಣೆಯ ಪರ್ವ ಪ್ರಧಾನಿ ನರೇಂದ್ರ ಮೋದಿಯವರ ವರೆಗೂ ತಲುಪಿ ಅವರೂ ಸಹಾ ಆಕೆಯ ಕಾರ್ಯಗಳನ್ನು ಮನಃಪೂರ್ವಕವಾಗಿ ಶ್ಲಾಘಿಸಿದ್ದಾರೆ.

WhatsApp Image 2020-07-26 at 11.33.43 PM

ಕಿರಣ್ ಬೇಡಿ ಮೊತ್ತ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿ ತನ್ನ ಕಾರ್ಯಗಳಿಂದ ದೇಶಾದ್ಯಂತ ಅನೇಕ ಮಹಿಳೆಯರಿಗೆ ಪ್ರೇರಣಾದಾಯಕರಾದರೆ, ಆರತೀ ಡೋಗ್ರಾ ತಮ್ಮೆಲ್ಲಾ ನೂನ್ಯತೆಗಳನ್ನೂ ಬದಿಗಿಟ್ಟು ಮಹಿಳೆಯರಿಗೆ ಮತ್ತು ಅಂಗವಿಕಲರಿಗೆ ಮಾದರಿಯಾಗಿದ್ದಾರೆ. ಜಗತ್ತು ಏನೇ ಹೇಳಲೀ, ಅಥವಾ ಇಡೀ ಸಮಾಜವೇ ತನ್ನ ವಿರುದ್ಧವಿದ್ದರೂ, ಪೋಷಕರ ಪ್ರೋತಾಹ ಮತ್ತು ತಮ್ಮ ಸ್ವಸಾಮರ್ಥ್ಯದಿಂದ ಎಂತಹ ಬದಲಾವಣೆಯನ್ನಾದರೂ ತರಬಹುದು ಎಂಬುದಕ್ಕೆ ಆರತಿ ಡೋಗ್ರಾ ಅವರು ಜ್ಚಲಂತ ಉದಾಹರಣೆಯಾಗಿದ್ದಾರೆ ಎಂದರೆ ಅತಿಶಯೋಕ್ತಿ ಏನಲ್ಲ.

ಏನಂತೀರೀ?

ದೇವರ ಲೆಕ್ಕಾಚಾರ

ಒಮ್ಮೆ ಇಬ್ಬರು ವ್ಯಕ್ತಿಗಳು ಅರಳೀ ಕಟ್ಟೆಯ ಬಳಿ ಕುಳಿತು ಲೋಕೋಭಿರಾಮವಾಗಿ ಹರಟುತ್ತಿದ್ದರು. ಅದಾಗಲೇ ಸಂಜೆಯಾಗಿದ್ದು ದಟ್ಟವಾದ ಕಾರ್ಮೋಡ ಕವಿದಿತ್ತು. ಅಷ್ಟೊತ್ತಿಗೆ ಅಲ್ಲಿಗೆ ಅಪರಿಚಿತ ವ್ಯಕ್ತಿಯೊಬ್ಬರ ಆಗಮನವಾಗಿ, ಅಭ್ಯಂತರವಿಲ್ಲದಿದ್ದರೆ, ನಾನೂ ನಿಮ್ಮೊಂದಿಗೆ ಸೇರಿಕೊಳ್ಳಬಹುದೇ ಎಂದು ಕೇಳಿದಾಗ ಅವರಿಬ್ಬರೂ ಓಹೋ ಅಗತ್ಯವಾಗಿ ಎಂದು ಹೇಳಿದರು.

ಅವರೆಲ್ಲರೂ ತಮ್ಮ ಮಾತುಕಥೆ ಮುಂದುವರೆಸುತ್ತಿದ್ದಂತೆಯೇ, ಜೋರಾಗಿ ಮಳೆ ಬರಲು ಪ್ರಾರಂಭಿಸಿದಾಗ ಎಲ್ಲರೂ ಹತ್ತಿರದ ದೇವಸ್ಥಾನದ ಒಳಗೆ ಹೋಗಿ ಮಳೆಯಿಂದ ತಮ್ಮನ್ನು ರಕ್ಷಿಸಿಕೊಂಡರು. ಆಷ್ಟರಲ್ಲಿ ಆ ಆಗಂತುಕನು ನನಗೆ ಹಸಿವಾಗುತ್ತಿದೆ ಎಂದಾಗ ಉಳಿದ್ದಬ್ಬರೂ ಸಹಾ ಹೌದು ನಮಗೂ ಹಸಿವಾಗುತ್ತಿದೆ ಎಂದು ಧನಿಗೂಡಿಸಿದರು.

ಒಬ್ಬನ ಬಳಿ 3 ರೊಟ್ಟಿ ಮತ್ತು ಮತ್ತೊಬ್ಬನ ಬಳಿ 5 ರೊಟ್ಟಿಗಳಿದ್ದ ಕಾರಣ ಎಲ್ಲರೂ ಅದನ್ನೇ ಹಂಚಿಕೊಂಡು ತಿನ್ನಲು ನಿರ್ಧರಿಸಿದರು. ಆದರೆ 8 ರೊಟ್ಟಿಗಳನ್ನು 3 ಜನರು ಹೇಗೆ ಹಂಚಿಕೊಳ್ಳುವುದು? ಎಂಬ ಜಿಜ್ಞಾಸೆ ಕಾಡತೊಡಗಿತು.

ಆಗ ಮೊದಲನೇ ವ್ಯಕ್ತಿ ಪ್ರತೀ ರೋಟ್ಟಿಗಳನ್ನು ಮೂರು ಭಾಗಗಳಾಗಿ ಮಾಡಿದಲ್ಲಿ 3×8 = 24 ತುಂಡುಗಳಾಗುತ್ತದೆ. ಆಗ ಸುಲಭವಾಗಿ ಪ್ರತಿಯೊಬ್ಬರೂ ತಲಾ 8 ತುಂಡುಗಳನ್ನು ಹಂಚಿಕೊಂಡು ತಿನ್ನಬಹುದು ಎಂದಾಗ ಎಲ್ಲರಿಗೂ ಆ ನಿರ್ಧಾರ ಸರಿ ಎನಿಸಿ ಅದೇ ರೀತಿಯಾಗಿ ಅವರು 24 ತುಂಡುಗಳನ್ನು ಮಾಡಿ ತಲಾ 8 ತುಂಡುಗಳನ್ನು ತಿಂದು ತಮ್ಮ ಹಸಿವನ್ನು ನೀಗಿಸಿಕೊಂಡಿದ್ದಲ್ಲದೇ, ಮಳೆ ಇನ್ನೂ ಜೋರಾಗಿಯೇ ಸುರಿಯುತ್ತಿದ್ದ ಕಾರಣ ಆ ರಾತ್ರಿ ಅಲ್ಲಿಯೇ ಮಲಗಿದರು.

ಮಾರನೆಯ ದಿನ ಬೆಳಿಗ್ಗೆ ಆ ಆಗಂತಕನು ತಮ್ಮೊಂದಿಗೆ ಸಮಯ ಕಳೆಯಲು ಅವಕಾಶ ಮಾಡಿಕೊಟ್ಟಿದ್ದಲ್ಲದೇ, ತಮ್ಮಲ್ಲಿದ್ದ ರೊಟ್ಟಿಗಳನ್ನೂ ಹಂಚಿಕೊಂಡಿದ್ದಕ್ಕಾಗಿ ಉಳಿದವರಿಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಲ್ಲದೇ, ಕೃತಜ್ಞತಾ ಪೂರ್ವಕವಾಗಿ ಅವರಿಗೆ 8 ಚಿನ್ನದ ನಾಣ್ಯಗಳನ್ನು ನೀಡಿ ಪರಸ್ಪರ ಹಂಚಿಕೊಳ್ಳಲು ತಿಳಿಸಿ ತಮ್ಮ ಮಾರ್ಗವನ್ನು ಮುಂದುವರಿಸಿದನು.

gold_coin

ಅವನು ಹೋದ ನಂತರ, ಮೊದಲ ವ್ಯಕ್ತಿ ತಲಾ 4 ನಾಣ್ಯಗಳನ್ನು ಹಂಚಿಕೊಳ್ಳೋಣ ಎಂದರೆ, ಅದಕ್ಕೊಪ್ಪದ ಎರಡನೆಯ ವ್ಯಕ್ತಿ ನಾನು 5 ರೊಟ್ಟಿಗಳನ್ನು ಮತ್ತು ನೀನು 3 ರೊಟ್ಟಿಗಳನ್ನು ನೀಡಿದ್ದರಿಂದ 5:3ರ ಅನುಪಾತದಲ್ಲಿ ನನಗೆ 5 ಚಿನ್ನದ ನಾಣ್ಯಗಳು ಸಲ್ಲಬೇಕು ಎಂಬ ವಾದವನ್ನು ಮಂಡಿಸಿದನು. ಈ ವಾದಕ್ಕೆ ಒಪ್ಪದ ಮೊದಲನೆಯವನು ಒಪ್ಪದ ಕಾರಣ, ಜಗಳ ತಾರಕ್ಕೇರಿ, ನ್ಯಾಯಕ್ಕಾಗಿ ಗ್ರಾಮದ ಮುಖ್ಯಸ್ಥರ ಬಳಿಗೆ ಹೋದರು. ಇವರಿಬ್ಬರ ವಾದಗಳನ್ನು ಆಲಿಸಿದ ಮುಖ್ಯಸ್ಥರು, ಆ ನಾಣ್ಯಗಳನ್ನು ನನ್ನ ವಶಕ್ಕೊಪ್ಪಿಸಿ ಬಿಡಿ. ನಾನು ಈ ಕುರಿತಂತೆ ಯೋಚಿಸಿ ಮರುದಿನ ತೀರ್ಪು ನೀಡುತ್ತೇನೆ ಎಂದು ಇಬ್ಬರನ್ನೂ ಸಾಗಹಾಕಿದರು.

ಊರಿನ ಮುಖ್ಯಸ್ಥರು, ಊಟವಾದ ನಂತರ ಈ ಸಮಸ್ಯೆಗೆ ಹೇಗೆ ಪರಿಹಾರವನ್ನು ಸೂಚಿಸುವುದೇ ಎಂಬುದನ್ನೇ ಯೋಚಿಸುತ್ತಲೇ ನಿದ್ರೆಗೆ ಜಾರಿದಾಗ, ಅವರ ಕನಸಿನಲ್ಲಿ ದೇವರು ಕಾಣಿಸಿಕೊಂಡು, ಮಾರನೇಯ ದಿನ ನೀನು ಯಾವ ರೀತಿಯಾಗಿ ನ್ಯಾಯ ನೀಡುತ್ತೀಯೇ? ಎಂದು ವಿಚಾರಿಸಿದನು. ಆಗ ಆ ಮುಖ್ಯಸ್ಥನು, ನನಗೆ ಎರಡನೆಯ ವ್ಯಕ್ತಿಯ 5: 3 ಅನುಪಾತ ತಾರ್ಕಿಕವಾಗಿ ಕಾಣುತ್ತಿದೆ ಎಂದನು.

ಅದಕ್ಕೆ ದೇವರು ನಗುತ್ತಾ, ನೀನು ಈ ವಿಷಯದಲ್ಲಿ ಗಂಭೀರವಾದ ಆಲೋಚನೆ ಮಾಡದಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದಿದ್ದಲ್ಲದೇ, ನನ್ನ ನ್ಯಾಯದ ಪ್ರಕಾರ ಮೊದಲ ವ್ಯಕ್ತಿಯು ಕೇವಲ ಒಂದು ಚಿನ್ನದ ನಾಣ್ಯಕ್ಕೆ ಅರ್ಹನಾಗಿರುತ್ತಾನೆ ಮತ್ತು ಉಳಿದ 7 ಚಿನ್ನದ ನಾಣ್ಯಗಳನ್ನು ಎರಡನೆಯ ವ್ಯಕ್ತಿಯು ಪಡೆಯಲು ಆರ್ಹನಾಗಿರುತ್ತಾನೆ ಎಂದು ಹೇಳಿದಾಗ, ಅದನ್ನು ಕೇಳಿದ ಗ್ರಾಮದ ಮುಖ್ಯಸ್ಥರಿಗೆ ಆಶ್ಚರ್ಯವಾಯಿತು.

panchayath

ಮತ್ತೆ ಮಾತನ್ನು ಮುಂದುವರೆಸಿದ ದೇವರು, ಮೊದಲ ವ್ಯಕ್ತಿ ನಿಸ್ಸಂದೇಹವಾಗಿ ತನ್ನ ಮೂರು ರೊಟ್ಟಿಗಳಲ್ಲಿ ಒಂಬತ್ತು ತುಣುಕುಗಳನ್ನು ಮಾಡಿದ್ದು ಹೌದಾದರೂ, ಆದರೆ ಅದರಲ್ಲಿ ಸ್ವತಃ 8 ತುಂಡುಗಳನ್ನು ಅತನೇ ತಿಂದು ಕೇವಲ ಒಂದೇ ಒಂದು ತುಂಡನ್ನು ಮಾತ್ರ ಆಗಂತಕನೊಂದಿಗೆ ಹಂಚಿಕೊಂಡಿದ್ದಾನೆ. ಆದರೆ ಅದೇ, ಎರಡನೇ ವ್ಯಕ್ತಿ ತನ್ನ ಬಳಿ ಇದ್ದ 5 ರೊಟ್ಟಿಗಳಲ್ಲಿ 15 ತುಣುಕುಗಳನ್ನು ಮಾಡಿ ಸ್ವತಃ 8 ತುಂಡುಗಳನ್ನು ತಾನು ತಿಂದು ಉಳಿದ 7 ತುಣುಕುಗಳನ್ನು ಆಗಂತಕನೊಂದಿಗೆ ಹಂಚಿಕೊಂಡಿದ್ದಾನೆ. ಹಾಗಾಗಿ ನನ್ನ ಲೆಕ್ಕಾಚಾರದ ಪ್ರಕಾರ 1: 7 ಹಂಚಿಕೆಯು ನ್ಯಾಯಯುತವಾಗಿದೆ ಎಂದು ತಿಳಿಸಿದನು. ಮರುದಿನ ಬೆಳಿಗ್ಗೆ ಗ್ರಾಮದ ಮುಖ್ಯಸ್ಥರು ದೇವರು ಕನಸಿನಲ್ಲಿ ಹೇಳಿದಂತೆಯೇ ತಾರ್ಕಿಕತೆಯನ್ನು ವಿವರಿಸಿ ಸಮಸ್ಯೆಯನ್ನು ಸೂಕ್ತರೀತಿಯಲ್ಲಿ ಇಬ್ಬರೂ ಒಪ್ಪಿಗೆಯಾಗುವಂತೆ ಬಗೆಹರಿಸಿದನು.

ಈ ಕಥೆಯಿಂದ ನಾವು ಅರ್ಥಮಾಡಿಕೊಳ್ಳುವುದೇನಂದರೇ, ಪ್ರತೀ ಸಮಸ್ಯೆಗಳಿಗೂ ಹಲವಾರು ರೀತಿಯ ಪರಿಹಾರವಿರುತ್ತದೆ ಮತ್ತು ವಿವಿಧ ದೃಷ್ಟಿಕೋನಗಳಿರುತ್ತವೆ. ಹಾಗಾಗಿಯೇ, ಆ ಸಮಸ್ಯೆಯನ್ನು ನಾವು ನೋಡಿದ ರೀತಿಗೂ ದೇವರು ನೋಡಿದ ರೀತಿಗೂ ಬಹಳ ಭಿನ್ನವಾಗಿತ್ತು. 30 ಕೋಟಿ ರೂಪಾಯಿಗಳನ್ನು ಹೊಂದಿದ್ದಂತಹ ವ್ಯಕ್ತಿಕೊಡುವ 3 ಲಕ್ಷ ರೂ. ದೇಣಿಗೆಗಿಂತಲೂ 3000 ರೂಪಾಯಿ ಹೊಂದಿರುವ ವ್ಯಕ್ತಿ ಕೊಡುವ 300 ರೂಗಳು ಹೆಚ್ಚಿನ ಮಹತ್ವವನ್ನು ಪಡೆದಿರುತ್ತದೆ. ಹೆಚ್ಚಿನ ಮೊತ್ತವನ್ನು ನೀಡುವುದು ಮುಖ್ಯವಲ್ಲ, ಆದರೆ ನಮ್ಮಲ್ಲಿರುವ ಪಾಲಿನಲ್ಲಿ ಹೆಚ್ಚಿನ ಅಂಶವನ್ನು ಹಂಚಿಕೊಳ್ಳುವುದು ಮುಖ್ಯವಾಗುತ್ತದೆ.

ನಾವು ಮಾಡುವ ಧಾನ ಧರ್ಮಗಳು ಪ್ರತಿಫಲಾಕ್ಷೆ ಇಲ್ಲದೇ ನಿಸ್ವಾರ್ಥವಾಗಿರ ಬೇಕು.ಬಲಗೈಯಲ್ಲಿ ಕೊಟ್ಟದ್ದು ಎಡಗೈಯ್ಯಿಗೂ ಗೊತ್ತಾಗದ ರೀತಿಯಲ್ಲಿ ಇರಬೇಕು. ನಾವು‌ ಮಾಡುವ ಪ್ರತೀ ಕಾರ್ಯಗಳ ಲೆಕ್ಕಾಚಾರ ಆ ಭಗವಂತನ ಬಳಿ ಇದ್ದು ಅದರ ಫಲವನ್ನು ಖಂಡಿತವಾಗಿಯೂ ಒಂದಲ್ಲಾ ಒಂದು ದಿವಸ ಅನುಭವಿಸಿಯೇ ತೀರುತ್ತೇವೆ. ನಾವು ಅನುಭವಿಸಲು ಸಾಧ್ಯವಾಗದಿದ್ದರೂ ಆ ಪುಣ್ಯಕಾರ್ಯಗಳು ನಮ್ಮ ಕುಟುಂಬವನ್ನು ತಲೆತಲಾಂತರಗಳ ಕಾಲ ಕಾಪಾಡುತ್ತದೆ. ಹಾಗಾಗಿ ನಮಗೆ ಎಷ್ಟು ಬೇಕೋ ಅಷ್ಟುನ್ನು ಇಟ್ಟುಕೊಂಡು ಉಳಿದದ್ದನ್ನು ಹಂಚಿ ತಿನ್ನುವುದರಲ್ಲಿಯೇ ಸ್ವರ್ಗ ಸುಖಃವಿದೆ. ಅದಕ್ಕೇ ಅಲ್ವೇ ಶ್ರೀ ಕೃಷ್ಣ ಪರಮಾತ್ಮ ‌ಗೀತೆಯಲ್ಲಿ ಹೇಳಿರುವುದು, ನಿನ್ನ‌ ಕರ್ಮಗಳನ್ನು ನೀನು ಸರಿಯಾಗಿ ನಿಭಾಯಿಸು. ಫಲಾಪಲಗಳನ್ನು ನನ್ನ ಮೇಲೆ ಬಿಡು ಎಂದು.

ಏನಂತೀರೀ?

ಆತ್ಮೀಯರೊಬ್ಬರು ವಾಟ್ಸಾಪ್ಪಿನಲ್ಲಿ ಕಳುಹಿಸಿದ್ದ ಆಂಗ್ಲ ಸಂದೇಶವೊಂದರ ಭಾವಾನುವಾದವಾಗಿದೆ.

ಅನನ್ಯ ಮತ್ತು ಅನುಕರಣಿಯರು ನಮ್ಮ ಕರಿಯಪ್ಪ ಮೇಷ್ಟ್ರು

ಇವತ್ತಿನ ದಿವಸ ಯಾವುದೇ ಟಿವಿ ಚಾನೆಲ್ ನೋಡಿದ್ರೂ ಅಥವಾ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದರೂ ಕೂರೋನಾ ಬಗ್ಗೆಯೇ ಮಾತು. ಅವರಿಗೆ ಕೋರೋನಾ+ve ಅಂತೇ ಇವರಿಗೆ +ve ಅಂತೇ ಅನ್ನೋದರ ಜೊತೆಗೆ ಆ ಕೂರೋನಾ ಸೆಂಟರ್ನಲ್ಲಿ ಒಂದು ಚೂರೂ ವ್ಯವಸ್ಥೆ ಸರಿ ಇರ್ಲಿಲ್ವಂತೇ. ಅಲ್ಲಿ ಊಟ ತಿಂಡಿ ಹೋಗ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದೇ ಗಲೀಜ್ ಅಂತೇ ಎಂದರೆ. ಮತ್ತೊಬ್ಬರು ನಮ್ಮನ್ನು ಇಂತಹ ಕೆಟ್ಟ ಸ್ಥಳಕ್ಕೆ ಕರೆದುಕೊಂಡು ಬರುವ ಬದಲು ಸೆರೆಮನೆಗೆ ತಳ್ಳಿಬಿಡಿ ಅಲ್ಲಿ ಮುದ್ದೆ ತಿಂದು ಕೊಂಡು ನಿಮ್ಮದಿಯಾಗಿ ಇರುತ್ತೇವೆ ಇನ್ನುವ ಆಕ್ರೋಶದ ಮಾತುಗಳೇ ಕೇಳಿಬರುತ್ತಿರುವ ಸಂದರ್ಭದಲ್ಲಿ ಇಲ್ಲೊಂದು ವಿಭಿನ್ನವಾದ ಅನುಭವದ ಕಥೆ ಮೇಗರವಳ್ಳಿ ಸುಬ್ರಹ್ಮಣ್ಯ ಅವರ ಮುಖಪುಟದಲ್ಲಿ ಓದಿ ಒಂದು ರೀತಿಯ ಸಂತೋಷ ಮತ್ತೊಂದು ರೀತಿಯಲ್ಲಿ ಸಮಾಧಾನವಾಯಿತು.

WhatsApp Image 2020-07-22 at 3.01.13 PM

ಕೈಯಲ್ಲಿ ಪೊರಕೆ ಇಟ್ಕೊಂಡು ಈ ರೀತಿ ಕಸ ಗುಡಿಸ್ತಾ ಇರುವವರು ಶಿವಮೊಗ್ಗದ ದೇವರಾಜ ಅರಸ್ ನಗರದ ಶಿಕ್ಷಕರಾದ ಶ್ರೀಯುತ ಕರಿಯಪ್ಪನವರು. ಅವರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಶಿವಮೊಗ್ಗದ್ದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಪರೀಕ್ಷೆ ನಡೆಸಿದ ಎರಡು ದಿನಗಳ ನಂತರ ಅವರಿಗೆ ಕೂರೋನಾದ ಯಾವುದೇ ರೋಗ ಲಕ್ಷಣಗಳೂ ಇಲ್ಲವೆಂದು ತಿಳಿದು ಐದು ದಿನದ ನಂತರ ರೋಗ ಲಕ್ಷಣ ಇಲ್ಲದವರಿಗಾಗಿ ವ್ಯವಸ್ಥೆ ಮಾಡಿರುವ ಗಾಜನೂರಿನ ಮೊರಾರ್ಜಿ ದೇಸಾಯಿ ಕೇಂದ್ರೀಯ ವಿದ್ಯಾಲಯಕ್ಕೆ ಸ್ಥಳಾಂತರಿಸುತ್ತಾರೆ.

ಅಲ್ಲಿಗೆ ಕಾಲಿಟ್ಟೊಡನೆಯೇ, ಅಲ್ಲಿಯ ಕೊಳಕನ್ನು ಕಂಡು ಒಂದು ಕ್ಷಣ ದಂಗಾದ ಸುಸಂಸ್ಕೃತರಾದ ಕರಿಯಪ್ಪನವರು, ಒಂದು ಕ್ಷಣ ಮೌನವಾಗಿ ಯಾರನ್ನೂ ದೂಷಿಸದೇ, ಅಲ್ಲಿಯೇ ಇದ್ದ ಕಸಪೊರಕೆಯನ್ನು ಹಿಡಿದುಕೊಂಡು ಸ್ಬತಃ ಅವರಿರುವ ವಾರ್ಡ್ ಗುಡಿಸಿ ಸ್ವಚ್ಚಗೊಳಿಸಲು ಆರಂಭಿಸುತ್ತಾರೆ. ಮಕ್ಕಳಿಗೆ ಪಾಠ ಮಾಡೋ ಮೇಷ್ಟ್ರೇ ಈ ರೀತಿ ಸ್ವಚ್ಚತೆಗೆ ಇಳಿದ್ದನ್ನು ನೋಡಿದ ಇನ್ನೂ ಕೆಲವರು ಈ ಸ್ವಚ್ಛ ಭಾರತ್ ಅಭಿಯಾನಕ್ಕೆ ಅವರೊಂದಿಗೆ ಕೈ ಜೋಡಿಸುತ್ತಾರೆ. ನೋಡ ನೋಡತ್ತಿದ್ದಂತೆಯೇ, ಎಲ್ಲಾ ವಾರ್ಡುಗಳು, ವರಾಂಡ, ಸ್ನಾನದ ಮನೆ, ಶೌಚಾಲಯ ಹೀಗೆ ಒಂದೊಂದೇ ಶುಚಿಯಾಗಿ ಬಿಡುತ್ತದೆ.

ನಿಜವಾಗಿಯೂ ಹೇಳಬೇಕೆಂದರೆ ಆರಂಭದಲ್ಲಿ ಆ ಸ್ಥಳ ಹೀಗೆ ಇಷ್ಟು ಕೊಳಗಾಗಿರಲಿಲ್ಲ. ಆದರೆ ಅಲ್ಲಿಗೆ ಬಂದಂತಹವರ ಮನಸ್ಥಿತಿ ಕೊಳಕಾಗಿದ್ದ ಪರಿಣಾಮ, ಪರಿಸರವೂ ಕೊಳಕಾಗಿ ಮಾರ್ಪಟ್ಟಿತ್ತು. ಅಲ್ಲಿದ್ದ ರೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೂ ಸಹಾ ಅಲ್ಲಿದೆ ನಮ್ಮನೆ ಇಲ್ಲಿ ಬಂದೇ ಸುಮ್ಮನೆ ಎನ್ನುವ ರೀತಿ ಅಸಡ್ಡೆ. ತಮ್ಮ ಶ್ರುಶೂಷೆಗಾಗಿ ಸರ್ಕಾರ ಎಷ್ಟೆಲ್ಲಾ ರೀತಿಯ ಶ್ರಮವಹಿಸುತ್ತಿದೆ ಎಂಬುದರ ಪರಿವೆಯಿಲ್ಲದೇ ತಮಗೆ ನೀಡಿದ್ದ ಬಿಸ್ಕತ್ ಪ್ಯಾಕೆಟ್, ಚಾಕಲೇಟ್ ಕವರ್ ಗಳನ್ನೂ ಎಲ್ಲೆಂದರಲ್ಲಿ ಚೆಲ್ಲಿದ್ದೆಲ್ಲದ್ದರ ಪರಿಣಾಮವಾಗಿಯೇ ಅಲ್ಲೊಂದು ಕಸದ ತೊಟ್ಟಿಯಂತಹ ವಾತಾವರಣ ನಿರ್ಮಾಣವಾಗಿ, ಆರೋಗ್ಯಕರವಾಗಿ ಇರಬೇಕಿದ್ದ ಕೇರ್ ಸೇಂಟರ್ ಗಬ್ಬುನಾಥ ಹೊಡೆಯತೊಡಗಿತ್ತು.

ಯಾವಾಗ ಕರಿಯಪ್ಪ ಮೇಷ್ಟ್ರು ಕಸಬರೆಕೆ ಕೈಗೆತ್ತಿಕೊಂಡು ಎಲ್ಲರಿಗೂ ಮಾದರಿಯಾದರೋ, ಆಗ ಅಲ್ಲಿದ್ದವರಿಗೆಲ್ಲಾ ಒಂದು ರೀತಿಯ ಅವಮನವಾಗಿ ಬಹುತೇಕರು ಸ್ವಚ್ಚತೆಗಾಗಿ ಕೈಜೋಡಿಸಿದ್ದರ ಪರಿಣಾಮವಾಗಿ ಕೆಲವೇ ಕೆಲವು ಘಂಟೆಗಳಲ್ಲಿ ಇಡಿ ಕೇರ್ ಸೆಂಟರ್ ಲಕ ಲಕ ಅಂತ ಹೊಳೆಯ ತೊಡಗಿತು. ಇದ್ದಕೇ ಹೇಳೋದು ಜೀವನದಲ್ಲಿ ಮುಂದೆ ಬರಬೇಕಿದ್ದರೆ, ಮುಂದೇ ಗುರಿ ಇರಬೇಕು ಮತ್ತು ಹಿಂದೇ ಗುರು ಇರಬೇಕು ಎಂದು. ನಮ್ಮ ಕೃತಿ ಇನ್ನೊಬ್ಬರಿಗೆ ಪ್ರೇರಣೆ ನೀಡುವಂತಿರಬೇಕು ಎಂಬುದಕ್ಕೆ ಕರಿಯಪ್ಪ ಮೇಷ್ಟ್ರು ಜ್ವಲಂತ ಉದಾರಣೆ ಎಂದರೂ ಉತ್ಪ್ರೇಕ್ಷೆಯೇನಲ್ಲ.

ನಿಜ ಹೇಳಬೇಕೆಂದರೆ, ಹಾವು ಕಡಿದಾಗ ಹಾವಿನ ವಿಷವೇರಿ ಸಾಯುವುದಕ್ಕಿಂದ ಹಾವು ಕಚ್ಚಿದ್ದ ಭಯಕ್ಕೇ ಹಲವರು ಸಾಯುತ್ತಾರಂತೆ. ಅದೇ ರೀತಿ ಕೊರೋನಾ ಎಂಬ ಸಾಂಕ್ರಾಮಿಕ ರೋಗದಿಂದ ಸಾಯುವವರಿಗಿಂತ ಅದರ ಬಗ್ಗೆ ಭಯಪಡುತ್ತಲೇ ನಕರಾತ್ಮಕವಾಗಿ ಯೋಚಿಸುತ್ತಲೇ ಸಾಯುವವರ ಸಂಖ್ಯೆಯೇ ಹೆಚ್ಚು. ಇನ್ನು ಅಲ್ಲಿಯ ಪರಿಸರ ಆನಾರೋಗ್ಯಕರವಾಗಿದ್ದಲ್ಲಿ ಜೀವ ಭಯದಿಂದ, ಬದುಕುವ ನಂಬಿಕೆಯನ್ನೇ ಕಳೆದುಕೊಂಡವರು ಮತ್ತಷ್ಟೂ ನಿಸ್ತೇಜರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಈ ರೀತಿಯಾಗಿ ವಿವಿಧ ಚಟುವಟಿಕೆಗಳಲ್ಲಿ ಸ್ವಚ್ಚತೆಯಲ್ಲಿ ತೊಡಗಿಕೊಳ್ಳುವ ಮೂಲಕ ಪರಸ್ಪರ ಧೈರ್ಯ ತುಂಬುತ್ತಾ, ಧನಾತ್ಮಕವಾಗಿ ಚಿಂತಿಸುತ್ತಾ, ಬದುಕಿನಲ್ಲಿ ಭರವಸೆ ಮೂಡಿಸಬೇಕು. ಬಿಡುವಿನ ಸಮಯದಲ್ಲಿ ಧ್ಯಾನ, ಸರಳ ಯೋಗ ಪ್ರಾಣಾಯಾಮ ಮಾಡುತ್ತಲೋ, ಸಂಜೆ ಅವರವರ ನಂಬಿಕೆಗಳಿಗೆ ಅನುಗುಣವಾಗಿ ಭಜನೆ ಮಾಡುತ್ತಾ, ಸುತ್ತಮುತ್ತಲಿನ ನೈರ್ಮಲ್ಯವನ್ನು ಕಾಪಾಡಿಕೊಂಡು ಬಂದಲ್ಲಿ, ಎಲ್ಲಾ ರೀತಿಯ ರೋಗ ರುಜಿನಗಳು ಮಾಯವಾಗಿ ಕೆಲವೇ ಕೆಲವು ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡು ಮತ್ತೆ ಮೊದಲಿನಂತಾಗ ಬಹುದು.

ಜೀವ ಮತ್ತು ಜೀವನ ಎರಡೂ ನಮ್ಮದು. ಹಾಗಾಗಿ ನಮ್ಮ ಸುರಕ್ಷತೆಯಲ್ಲಿ ನಾವೇ ಇರಬೇಕೇ ಹೊರತು ಎಲ್ಲದ್ದಕ್ಕೂ ಸರ್ಕಾರವನ್ನಾಗಲೀ ಅಥವಾ ಮತ್ತೊಬ್ಬರನ್ನಾಗಲೀ ಅವಲಂಭಿಸಿ ಅಥವಾ, ದೂಷಿಸಿ ಫಲವಿಲ್ಲ. ನಾವು ನಂಬಿದ ಭಗವಂತ ಎಂದೂ ನಮ್ಮನ್ನು ಕೈ ಬಿಡುವುದಿಲ್ಲ ಎಂಬ ಅಚಲ ಧನಾತ್ಮಕ ನಂಬಿಯಲ್ಲಿರಬೇಕು. ಭಗವಂತ ಖಂಡಿತವಾಗಿಯೂ ಯಾವುದೋ ಒಂದು ರೂಪದಲ್ಲಿ ಬಂದು ಕಾಪಾಡಿಯೇ ತೀರುತ್ತಾನೆ. ಇಲ್ಲಿ ಭಗವಂತ ಕರಿಯಪ್ಪ ಮೇಷ್ಟ್ರ ಮುಖಾಂತರದಲ್ಲಿ ಬಂದು ಎಲ್ಲರಿಗೂ ಸ್ವಚ್ಚತೆಯನ್ನು ಕಲಿಸಿದ ಎಂದರೂ ತಪ್ಪಾಗಲಾರದು. ಕರಿಯಪ್ಪನಂತಹ ಗುರುಗಳ ಈ ರೀತಿಯ ಸೇವೆ ಅನನ್ಯ ಮತ್ತು ಅನುಕರಣೀಯ. ಇಂತಹ ನಿಸ್ವಾರ್ಥ ಶಿಕ್ಷಕರ ಸಂಖ್ಯೆ ಅಗಣಿತವಾದಲ್ಲಿ, ಭಾರತ ಮತ್ತೊಮ್ಮೆ ಜಗತ್ತಿಗೇ ಪಾಠ ಕಲಿಸುವಂತಹ ವಿಶ್ವ ಗುರುವಾಗುವುದದಲ್ಲಿ ಸಂದೇಹವೇ ಇಲ್ಲ.

ಏನಂತೀರೀ?

ಇಂತಹ ಮಹತ್ತರ ವಿಷಯವನ್ನು ತಿಳಿಸಿದಂತಹ ಶ್ರೀ ಮೇಗರವಳ್ಳಿ ಸುಬ್ರಹ್ಮಣ್ಯವರಿಗೆ ಧನ್ಯವಾದಗಳು

ಪುನರ್ಜನ್ಮ ನೀಡಿದ ಅಪ್ಪ

ಬಹುಷಃ ಎಪ್ಪತ್ತು ಮತ್ತು ಎಂಭತ್ತರ ದಶಕದಲ್ಲಿ ಬಾಲ್ಯಾವಸ್ಥೆಯನ್ನು ಕಳೆದವರಿಗೆ ನಿಂಬೇಹುಳಿ ಪೆಪ್ಪರ್ಮೆಂಟ್ ಎಂಬ ಹೆಸರನ್ನು ಕೇಳಿದ ಕೂಡಲೇ ಖಂಡಿತವಾಗಿಯೂ ಬಾಯಯಲ್ಲಿ ನೀರು ಬಂದೇ ಬರುತ್ತದೆ. ಏಕೆಂದರೆ ಅಂದೆಲ್ಲಾ ನಮಗೆ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿದ್ದ ಚಾಕ್ಲೇಟ್ ಎಂದರೆ ಅದೊಂದೇ. ಕಡಿಮೆ ಹಣ ಜಾಸ್ತಿ ಹೊತ್ತು ಮಜ ಕೊಡುತ್ತಿದ್ದದ್ದೇ ಈ ನಿಂಬೇಹುಳಿ ಪೆಪ್ಪರ್ಮೆಂಟ್. ನಾವು ಚಿಕ್ಕವರಿದ್ದಾಗ ಮಾಡಿದ ಅತ್ಯುತ್ತಮ ಕೆಲಸಗಳಿಗೆ ಪ್ರೋತ್ಸಾಹಕರವಾಗಿ ಬಹುಮಾನ ರೂಪದಲ್ಲಿ ಸಿಗುತ್ತಿದ್ದದ್ದೇ ಈ ನಿಂಬೇಹುಳಿ ಪೆಪ್ಪರ್ಮೆಂಟ್. ಯಾರಾದರೂ ಚಿಕ್ಕ ಮಕ್ಕಳಿರುವ ಮನೆಗೆ ಬಂದರೆ, ಹೂವು ಹಣ್ಣುಗಳ ಜೊತೆ ಒಂದಿಷ್ಟು ನಿಂಬೇಹುಳಿ ಪೆಪ್ಪರ್ಮೆಂಟ್ ತಂದೇ ತರುತ್ತಿದ್ದರು. ಅಂತಹ ನಿಂಬೇಹುಳಿ ಪೆಪ್ಪರ್ಮೆಂಟ್ ನನ್ನ ಜೀವಕ್ಕೇ ಕುತ್ತು ತಂದು ಕಡೆಗೆ ನಮ್ಮ ತಂದೆಯರಿಂದ ಪುನರ್ಜನ್ಮ ಪಡೆದ ಹೃದಯಸ್ಪರ್ಶಿ ರೋಚಕ ಸನ್ನಿವೇಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

pepprmint

ಸುಮಾರು ವರ್ಷಗಳ ಹಿಂದಿನ ಘಟನೆ. ಬಹುಶಃ ನಾನಾಗ ಮೂರನೆಯದ್ದೋ ಇಲ್ಲವೇ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ. ದಸರಾ ಹಬ್ಬದ ರಜೆ ಬೇರೆ ಬಂದಿತ್ತು. ದಸರಾದ ಪ್ರತೀ ದಿನ ಸಂಜೆಯಾಯ್ತು ಎಂದರೆ ನಾನೂ ಮತ್ತು ನಮ್ಮ ತಂಗಿಯರೆಲ್ಲರೂ ಕೈಯಲ್ಲೊಂದು ಚಿಕ್ಕ ಚೀಲ ಹಿಡಿದುಕೊಂಡು ನೆರೆಹೊರೆಯ ಮನೆಗಳಲ್ಲಿ ಗೊಂಬೆ ನೋಡಿಕೊಂಡು ಬೊಂಬೇ ಬಾಗಿಣ ಇಸ್ಕೋಂಡು ಬರ್ತಾ ಇದ್ವಿ. ಅದರಲ್ಲೊಬ್ಬರು ಬೊಂಬೇ ಬಾಗಿಣಕ್ಕೆ ಏನೂ ಮಾಡಲಾಗದೇ, ನಿಂಬೇಹುಳಿ ಪೆಪ್ಪರ್ಮೆಂಟ್ ಕೊಟ್ಟಿದ್ದರು. ನಾವೆಲ್ಲರೂ ಅತೀ ಖುಷಿಯಿಂದಲೇ ಮನೆಗೆ ಹಿಂದುರಿಗೆ ಬಂದರೆ ನಮ್ಮ ತಾಯಿಯವರೂ ಪಕ್ಕದ ಮನೆಗೆ ಬೊಂಬೆ ನೋಡಲು ಹೋಗಿದ್ದ ಕಾರಣ ಮನೆಯಲ್ಲಿ ಯಾರೂ ಇರಲಿಲ್ಲ. ಇದೇ ಸರಿಯಾದ ಸಮಯ ಅಂತ ನಿಂಬೇಹುಳಿ ಪೆಪ್ಪರ್ಮೆಂಟ್ ಬಾಯಿಗೆ ಹಾಕಿಕೊಂಡು ಚೀಪ ತೋಡಗಿದೆವು. ಹಾಗೇ, ಚೀಪುತ್ತಾ ಆಗ್ಗಿಂದ್ದಾಗ್ಗೆ ಬಾಯಿಂದ ಕೈಗೆ ಹಾಕಿಕೊಂಡು ಯಾರದ್ದು ಎಷ್ಟು ಕರಗಿದೆ? ಯಾರ ಪೆಪ್ಪರ್ಮೆಂಟ್ ಇನ್ನೂ ಕರಗಿಲ್ಲ ಎಂದು ನೋಡಿಕೊಳ್ಳುತ್ತಾ ಆಟ ಆಡುತ್ತಿದ್ದಾಗ, ಅಯ್ಯೋ, ನಿನ್ನ ಪೆಪ್ಪರ್ಮೆಂಟ್ ಇನ್ನೂ ಕರಗೇ ಇಲ್ವಾ? ಅಂತ ನನ್ನ ತಂಗಿ ನನ್ನ ಬಾಯಿಗೆ ಕೈ ಹಾಗಿದಾಗ ನಾನು ಒಮ್ಮಿಂದೊಮ್ಮೆಲ್ಲೆ ಗಬಗ್ ಎಂದು ಬಾಯಿ ಮುಚ್ಚಿದ್ದಷ್ಟೇ ಗೊತ್ತಾಗಿದ್ದು. ಇದ್ದಕ್ಕಿದ್ದಂತೆಯೇ ಗಂಟಲು ಬಿಗಿದು ಕೊಳ್ತಾ ಇದೆ, ಉಸಿರಾಡುವುದಕ್ಕೆ ಆಗ್ತಾ ಇಲ್ಲ. ಜೋರಾಗಿ ಕೂಗಲೂ ಆಗ್ತಾ ಇಲ್ಲ. ಕಣ್ಣುಗಳನ್ನು ತೇಲಿಸುತ್ತಾ ಅಲ್ಲೇ ಒದ್ದಾಡ ತೊಡಗಿದಾಗ, ಗಾಭರಿಯಾದ ನನ್ನ ತಂಗಿಯರು ಅಣ್ಣಾ, ಅಮ್ಮಾ ಅಂತ ಜೋರಾಗಿ ಕೂಗತೊಡಗಿದರು.

ನಮ್ಮ ತಂದೆಯವರು ತಮ್ಮ ಕಾರ್ಖಾನೆಯ ಪಾಳಿ ಮುಗಿಸಿಕೊಂಡು ಆಗ ತಾನೇ ಮನೆಗೆ ಬಂದು ಸೈಕಲ್ ಸ್ಟಾಂಡ್ ಹಾಕುತ್ತಿದ್ದವರು ಈ ಆರ್ತನಾದವನ್ನು ಕೇಳಿ ಸೈಕಲ್ಲನ್ನು ಅಲ್ಲಿಯೇ ಗೋಡೆಗೆ ಒರಗಿಸಿ ಒಳಗೆ ಓಡಿ ಬಂದು ನೋಡಿದವರೇ, ಒಂದು ಕ್ಷಣ ದಂಗಾಗಿ ಅವರಿಗೂ ಏನಾಗುತ್ತಿದೆ ಎಂದೇ ಗೊತ್ತಾಗಲಿಲ್ಲ. ಅದೇ ಸಮಯಕ್ಕೆ ನನ್ನ ತಂಗಿಯರ ಕೈಯ್ಯಲ್ಲಿ ನಿಂಬೇಹುಳಿ ಪೆಪ್ಪರ್ಮೆಂಟ್ ಇದ್ದದ್ದನ್ನು ಗಮನಿಸಿದ ನಮ್ಮ ತಂದೆಯವರು ಕೂಡಲೇ ಪರಿಸ್ಥಿತಿಯನ್ನು ಅರ್ಥೈಸಿಕೊಂಡು, ಕೂಡಲೇ, ನನ್ನನ್ನು ಎತ್ತಿ ಹಿಡಿದು ತಲೆ ಕೆಳಗೆ ಮಾಡಿ ಬೆನ್ನ ಮೇಲೆ ಮೆದುವಾಗಿ ಗುದ್ದಿದ ತಕ್ಷಣವೇ ನನ್ನ ಗಂಟಲೊಳಗೆ ಸಿಕ್ಕಿಹಾಕಿಕೊಂಡಿದ್ದ ನಿಂಬೇಹುಳಿ ಪೆಪ್ಪರ್ಮೆಂಟ್ ನನ್ನ ಬಾಯಿಯಿಂದ ಹೊರಗೆ ಬಿತ್ತು. ಆ ಕೂಡಲೇ ಕಿಟಾರ್ ಎಂದು ನಾನು ಕಿರುಚಿದಾಗ, ಸದ್ಯ ಬದುಕಿತು ಬಡ ಜೀವ ಎಂದು ಎಲ್ಲರಿಗೂ ಅನ್ನಿಸಿದರೆ, ನಾನು ಮಾತ್ರಾ, ಕೂಡಲೇ, ಆ ನನ್ನ ಪೆಪ್ಪರ್ಮೆಂಟ್ ಅಂತ ಕೆಳಗೆ ಬಿದ್ದಿದ್ದ ನಿಂಬೇಹುಳಿ ಪಪ್ಪರ್ಮೆಂಟನ್ನು ತೆಗೆದು ಬಾಯಿಗೆ ಹಾಕಿಕೊಳ್ಳಲು ಹೋಗಿದ್ದನ್ನು ನೋಡಿದ ನಮ್ಮ ತಂದೆ ಕೈ ಹಿಡಿದು ಎಳೆದದ್ದು ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಇದೆ.

shri2

ಬಹುಶಃ ಅಂದು ನನ್ನ ತಂದೆಯವರು ಆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಾರದಿದ್ದರೇ ನಾನಿಂದು ನಿಮ್ಮೊಂದಿಗೆ ಈ ರೋಚಕತೆಯನ್ನು ಹಂಚಿಕೊಳ್ಳಲು ಸಾಧ್ಯವೇ ಇರುತ್ತಿರಲಿಲ್ಲ. ಅಮ್ಮ ಜನ್ಮವನ್ನು ನೀಡಿದರೆ, ಅಪ್ಪ ಪುನರ್ಜನ್ಮವನ್ನು ನೀಡಿದರು ಎಂದರೆ ಅತಿಶಯೋಕ್ತಿಯೇನಲ್ಲ.

ಇಂದು ನಮ್ಮ ತಂದೆಯವರು ನಮ್ಮೊಂದಿಗೆ ಇಲ್ಲದಿದ್ದರೂ ಪ್ರತಿ ಬಾರಿ ನಾನಾಗಲೀ ಅಥವಾ ನಮ್ಮ ಮಕ್ಕಳಾಗಲೀ ಚಾಕ್ಲೇಟ್ ತಿನ್ನುವಾಗ ಈ ಪ್ರಸಂಗ ನೆನಪಿಗೆ ಬಂದು ನಮ್ಮ ತಂದೆಯವರನ್ನು ನೆನೆಯುತ್ತಾ ನನಗೇ ಅರಿವಿಲ್ಲದಂತೆ ನನ್ನ ಕಣ್ಣುಗಳು ಒದ್ದೆಯಾಗುತ್ತವೆ.

ಇಂದು ಜೂನ್ 20. ವಿಶ್ವ ಅಪ್ಪಂದಿರ ದಿನ. ಇಂದು ನಮ್ಮ ತಂದೆಯವರು ನಮ್ಮೊಂದಿಗೆ ಭೌತಿಕವಾಗಿ ಇಲ್ಲದಿದ್ದರೂ, ಮಾನಸಿಕವಾಗಿ ಸದಾಕಾಲವೂ ನಮ್ಮೊಂದಿಗೆ ಇದ್ದಾರೆ. ಅವರ ಅಗಲಿಕೆ ನಮ್ಮನ್ನು ಕಾಡುತ್ತದಾದರೂ ಅವರ ಆಶೀರ್ವಾದ ನಮ್ಮನ್ನು ಸದಾಕಾಲವೂ ಕಾಪಾಡುತ್ತದೆ.

ಅಪ್ಪಾ, ನೀವಂದ್ರೇ ನನಗಿಷ್ಟ. ನಿಮ್ಮ ಆಶೀರ್ವಾದ , ಪರಿಹರಿಸತ್ತೆ ನಮ್ಮೆಲ್ಲಾ ಕಷ್ಟ.

ಮಾತೃದೇವೋ ಭವ, ಪಿತೃದೇವೋಭವ ಎಂದು ಪ್ರತಿದಿನವೂ ತಂದೆ ತಾಯಿಯರನ್ನು ನೆನೆಯುತ್ತಾ, ಅಪ್ಪಾ ಅಮ್ಮಂದಿರನ್ನು ನಮಿಸುವ ಭಾರತೀಯರಿಗೆ ಪ್ರತಿದಿನವೂ ಅಪ್ಪಾ ಅಮ್ಮಂದಿರ ದಿನವೇ ಹೌದು.

ಏನಂತೀರೀ?

ನಿಮ್ಮವನೇ ಉಮಾಸುತ

ಗಜ ಗಾಂಭೀರ್ಯ

ಆದೊಂದು ರಾಜನ ಅರಮನೆಯಲ್ಲಿ ಪಟ್ಟದಾನೆ ಮತ್ತು ಅರಮನೆಯಲ್ಲಿದ್ದ ನಾಯಿ ಎರಡೂ ಒಂದೇ ಸಮಯದಲ್ಲಿ ಗರ್ಭಿಣಿಯಾದವು. ಅದಾಗಿ ಮೂರು ತಿಂಗಳ ನಂತರ ಆ ನಾಯಿ ಆರು ನಾಯಿಮರಿಗಳಿಗೆ ಜನ್ಮ ನೀಡಿತು. ಮತ್ತೆ ಆರು ತಿಂಗಳ ನಂತರ ಅದೇ ನಾಯಿ ಪುನಃ ಗರ್ಭಿಣಿಯಾಗಿ ಆರು ಮರಿಗಳಿಗೆ ಜನ್ಮ ನೀಡಿ ಒಟ್ಟು ಒಂಬತ್ತು ತಿಂಗಳುಗಳೊಳಗೆ ಒಂದು ಡಜನ್ ನಾಯಿಮರಿಗಳಿಗೆ ಜನ್ಮ ನೀಡಿತು ಮತ್ತು ಅದರ ಹೆರಿಗೆಯ ಕಾರ್ಯ ಹಾಗೇ ಮುಂದುವರೆಯಿತು.

ele2ಆನೆ ಗರ್ಭಿಣಿಯಾಗಿ ಹದಿನೆಂಟು ತಿಂಗಳು ಕಳೆದರೂ ಪ್ರಸವವಾಗದಿದ್ದನ್ನು ನೋಡಿದ ನಾಯಿಗೆ ಅನುಮಾನ ಬಂದು, ಆನೆಯನ್ನು ಪ್ರಶ್ನಿಸುತ್ತಾ, ನೀವು ನಿಜವಾಗಿಯೂ ಗರ್ಭಿಣಿಯಾಗಿದ್ದೀರಿ ಎಂದು ನಿಮಗೆ ಖಚಿತವಾಗಿದೆಯೇ? ಏಕೆಂದರೇ ಹದಿನೆಂಟು ತಿಂಗಳ ಹಿಂದೆ ನಾವಿಬ್ಬರೂ ಒಟ್ಟಿಗೆ ಗರ್ಭಿಣಿಯಾದೆವು. ಈ ಸಮಯದಲ್ಲಿ ನಾನು ಡಜನ್ ಗಳಿಗೂ ಅಧಿಕ ಸಂಖ್ಯೆಯ ಮರಿಗಳಿಗೆ ಮೂರು ಬಾರಿ ಜನ್ಮ ನೀಡಿದ್ದೇನೆ ಮತ್ತು ಆ ಮರಿಗಳು ಈಗ ದೊಡ್ಡ ದೊಡ್ಡ ನಾಯಿಗಳಾಗಿ ಬೆಳೆದು ಬಿಟ್ಟಿವೆ. ಆದರೆ ನೀವಿನ್ನೂ ಗರ್ಭಿಣಿಯಾಗಿಯೇ ಇದ್ದೀರಿ. ಏನಾಗುತ್ತಿದೆ ಇಲ್ಲಿ? ಎಂದು ಕೇಳಿತು.

ele3ನಾಯಿಯ ಪ್ರಶ್ನೆಯಿಂದ ಒಂದು ಚೂರೂ ವಿಚಲಿತವಾಗದ ಆನೆ, ನಾನು ಹೊತ್ತಿರುವುದು ಆನೆ. ನಾಯಿಮರಿಗಳನ್ನಲ್ಲ. ಎಂದು ತಿಳಿಯಪಡಿಸುತ್ತೇನೆ. ಗಜಗರ್ಭದ ಪ್ರಸವ ಏನಿದ್ದರೂ ಸುಮಾರು ಎರಡು ವರ್ಷಗಳಾಗಿರುತ್ತವೆ ಮತ್ತು ಒಮ್ಮೆ ನಮ್ಮ ಮರಿ ನನ್ನ ಗರ್ಭದಿಂದ ಭೂಮಿಯ ಮೇಲೆ ಬೀಳುತ್ತಿದ್ದಂತೆಯೇ ಆ ಕ್ಷಣದಲ್ಲಿ ಅಲ್ಲಿ ಸಣ್ಣದಾಗಿ ಭೂಕಂಪನವಾಗುತ್ತದೆ. ಭೂದೇವಿಗೂ ಕೂಡಾ ನನ್ನ ಮರಿಯ ಆಗಮನದ ಅರಿವಾಗುತ್ತದೆ. ನನ್ನ ಮಗು ನೆಲಕ್ಕೆ ಬಡಿದಾಗ, ಭೂಮಿಯು ಅದನ್ನು ಅನುಭವಿಸುತ್ತದೆ. ಯಾವಾಗ ನನ್ನ ಮಗು ರಸ್ತೆ ದಾಟಲು ಆರಂಭಿಸುತ್ತದೆಯೋ, ಆಗ ಮಾನವರೂ ಸಹಾ ತಮ್ಮ ಕೆಲಸವನ್ನು ನಿಲ್ಲಿಸಿ ಪಕ್ಕಕ್ಕೆ ನಿಂತು ಮೆಚ್ಚುಗೆಯಿಂದ ನಾವು ಹೋಗುವುದನ್ನು ನೋಡುತ್ತಾರೆ. ಹಾಗಾಗಿ ನಾನು ಹೊತ್ತುಕೊಂಡಿರುವುದು ಇಡೀ ಜಗತ್ತನ್ನೇ ಗಮನವನ್ನು ಸೆಳೆಯುವ ಅದ್ಭುತವಾದ ಮತ್ತು ಆಷ್ಟೇ ಪ್ರಬಲವಾದ ಕಂದನನ್ನು ಎಂದು ಹೇಳಿ ನಾಯಿಯ ಬಾಯಿಯನ್ನು ಮುಚ್ಚಿಸಿತು.

ಇತರ ಅಲ್ಪ ಯಶಸ್ಸನ್ನೇ ಮಹಾ ಸಾಧನೆ ಎಂದುಕೊಂಡು ನಮ್ಮ ನಮ್ಮ ನಂಬಿಕೆಯನ್ನು ಕಳೆದುಕೊಳ್ಳಬಾರದು. ಅವರ ಕ್ಷಣಿಕ ಫಲಿತಾಂಶಗಳ ಬಗ್ಗೆ ಅಸೂಯೆ ಪಡಬಾರದು ಮತ್ತು ನಿರಾಶೆಯಾಗ ಬಾರದು.

ನನ್ನ ಸಮಯ ಬಂದೇ ಬರುತ್ತದೆ ಮತ್ತು ಆಗ ಇಡೀ ವಿಶ್ವವೇ ನಮ್ಮ ಕಡೆ ಗಮನ ಹರಿಸುತ್ತದೆ ಎಂಬುದನ್ನು ಸದಾಕಾಲಾವೂ ಮನಸ್ಸಿನಲ್ಲಿ ಇಟ್ಟು ಕೊಂಡು ಕಾರ್ಯನಿರತರಾಗಬೇಕು ಎಂಬುದು ಈ ಕಥೆಯ ಸಾರವಾಗಿದೆ

ಆನೆ ಅಂಬಾರಿ ಹೋಗ್ತಾ ಇದ್ರೇ ಜನ ಗೌರವದಿಂದ ನಿಂತು ಕೈ ಮುಗಿತಾರೆ. ಅದನ್ನು ನೋಡಿ ಬೊಗಳುವ ನಾಯಿಗಳಿಗೆ ಹಚ್ಚಾ ಎಂದು ಕಲ್ಲು ಒಗೀತಾರೆ. ಇದಕ್ಕೇ ಅಲ್ವೇ ಹೇಳೋದು ಗಜ ಗಾಂಭೀರ್ಯ ಎಂದು?

ಯಾಕೋ ಏನೂ? ಸ್ವಾರ್ಥಕ್ಕಾಗಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವರ್ಷದಲ್ಲಿ ಹತ್ತಾರು ದಿನಗಳ ಕಾಲ ಬಂದ್ ಕರೆ ನೀಡಿ ಅದನ್ನು ಬಲವಂತದಿಂದ ಜನರ ಮೇಲೇ ಹೇರಲು ಹೋಗುವವರ ಮಧ್ಯೆ , ದೇಶವಾಸಿಗಳ ಹಿತಕ್ಕಾಗಿ ಮತ್ತು ಅವರ ಆರೋಗ್ಯಕ್ಕಾಗಿ 14 ಗಂಟೆಗಳ ಕಾಲ ಜನತಾ ಕರ್ಫ್ಯೂಗೆ ಸಹಕರಿಸಲು ಸಾರ್ವಜನಿಕರನ್ನು ಕೇಳಿ ಕೊಂಡಲ್ಲಿ , ಜನರೇ ಸ್ವಪ್ರೇರಣೆಯಿಂದ ಕೇವಲ 14 ಗಂಟೆಗಳೇಕೆ 36 ಗಂಟೆ ಕಾಲ ಸಹಕರಿಸುತ್ತೇವೆ ಎಂದು ನಭೂತೋ ನಭವಿಷ್ಯತಿ ಮಾದರಿಯಲ್ಲಿ ಜನತಾ ಕರ್ಫ್ಫೂವನ್ನು ಅಭೂತ ಪೂರ್ವವಾಗಿ ಯಶಸ್ವಿಗೊಳಿಸಿದ ಸಮಯದಲ್ಲಿ ಎಂದೋ ಕೇಳಿದ ಆಥವಾ ಓದಿದ ಈ ಆನೆ ಮತ್ತು ನಾಯಿಯ ಕಥೆ ಈಗ ನೆನಪಿಗೆ ಬಂದಿತು.

ಈ ಕಥೆ ಓದಿದ ಮೇಲೆ ಆನೆ ಯಾರು ನಾಯಿ ಯಾರು? ಎಂಬುದನ್ನು ನಿಮ್ಮಗಳ ಅರಿವಿಗೇ ಬಿಟ್ಟಿದ್ದೇನೆ. ಅವರವರ ಭಾವಕ್ಕೆ ಅವರವರ ಭಕುತಿ.

Public_Ranga

ಏನಂತೀರೀ?

ಲಭ್ಯ

ಹೆಣ್ಣು, ಹೊನ್ನು ಮತ್ತು ಮಣ್ಣು ಎಲ್ಲವೂ ಲಭ್ಯ ಇದ್ದಲ್ಲಿ ಮಾತ್ರವೇ ಎಲ್ಲರಿಗೂ ಸಿಗುತ್ತದೆ ಎನ್ನುವುದು ದೊಡ್ಡವರು ಹೇಳುವ ಮಾತು. ಕಷ್ಟ ಪಟ್ಟು, ಬಿಸಿಲಿನಲ್ಲಿ ಬವಳಿ ಬೆಂದು, ಅಕ್ಕ ಪಕ್ಕದವರೊಡನೆ ಕಾದಾಡಿ, ಹೋರಾಡಿ ಸರದಿಯಲ್ಲಿ ನಿಂತು ಖರೀದಿಸಿದ ಕಲ್ಲೆಣ್ಣೆ (ಸೀಮೇಎಣ್ಣೆ ) ಅಂತಿಮವಾಗಿ ನಮಗೆ ಸಿಗದೇ, ಲಭ್ಯ ಇದ್ದವರಿಗೇ ಸಿಕ್ಕಾಗ ಆಗುವ ಸಿಟ್ಟು ಸೆಡವು ನಿಜಕ್ಕೂ ಹೇಳಲಾಗದು. ಅಂತಹ ರೋಚಕ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಆಗ ಎಂಭತ್ತರ ದಶಕ. ಆಗ ತಾನೇ ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದೆ. ಊರಿನಲ್ಲಿದ್ದ ನಮ್ಮ ತಂದೆಯ ಅಣ್ಣ, ನನ್ನ ದೊಡ್ಡಪ್ಪನವರು ಅನಾರೋಗ್ಯದಿಂದ ಬೆಂಗಳೂರಿನ ಕೆಲವು ಪ್ರಸಿದ್ಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೊಳಗಾಗಿ, ಚಿಕಿತ್ಸೆ ಫಲಕಾರಿಯಾಗದೇ ನಮ್ಮನ್ನಗಲಿ ಹೋಗಿದ್ದರು. ನಮ್ಮ ಹೆಚ್ಚಿನ ಬಂಧುಗಳು ಬೆಂಗಳೂರಿನಲ್ಲಿಯೇ ಇದ್ದ ಕಾರಣ ಅವರ ಅಂತಿಮ ವಿಧಿವಿಧಾನಗಳನ್ನು ಇಲ್ಲಿಯೇ ಮುಗಿಸಿ ಅವರ ಅಪರ ಕರ್ಮ ಕಾರ್ಯಗಳನ್ನು ನಮ್ಮ ಮನೆಯಲ್ಲಿಯೇ ಮಾಡಲು ಗುರು ಹಿರಿಯರು ನಿರ್ಧರಿಸಿದ್ದರು. ಹೇಳಿ ಕೇಳಿ ನಮ್ಮದು ದೊಡ್ಡ ಕುಟುಂಬ. ಹಾಗಾಗಿ ಬಹುತೇಕ ಸಂಬಂಧೀಕರು ನಮ್ಮ ಮನೆಯಲ್ಲಿಯೇ ಉಳಿದುಕೊಂಡಿದ್ದರು. ನಿಜ ಹೇಳ ಬೇಕೆಂದರೆ ಅಷ್ಟೂ ಜನಕ್ಕೆ ಸಾಕಾಗುವಷ್ಟು ದೊಡ್ಡ ಮನೆ ನಮ್ಮದಲ್ಲದಿದ್ದರೂ ಆಗ ನಮ್ಮವರೆಲ್ಲರ ಮನಸ್ಸು ದೊಡ್ಡದಾಗಿದ್ದ ಕಾರಣ ಎಲ್ಲರೂ ಅದೇ ಮನೆಯಲ್ಲಿಯೇ ಅನುಸರಿಸಿಕೊಂಡು ಹೋಗಿದ್ದರು.

ಒಂಭತ್ತನೇಯ ದಿನದಿಂದ ಅಪರಕ್ರಿಯೆಗಳನ್ನು ಮಾಡುವುದೆಂದು ತೀರ್ಮಾನಿಸಿ ಅದಕ್ಕಾಗಿ ಸಾಮಾನು ಸರಂಜಾಮುಗಳನ್ನು ಒಟ್ಟುಗೂಡಿಸುವ ಕಾರ್ಯದಲ್ಲಿ ನನ್ನನ್ನೂ ಒಳಗೊಂಡಂತೆ ಎಲ್ಲರೂ ಸಹಭಾಗಿತ್ವವನ್ನು ತೆಗೆದುಕೊಂಡಿದ್ದೆವು. ಆಷ್ಟೂ ದಿನಗಳ ಆಡುಗೆ ಮಾಡಲು ಸುಮಾರು 35-40 ಲೀಟರ್ ಸೀಮೇಎಣ್ಣೆ ಬೇಕಾಗುತ್ತದೆ ಎಂದು ಅಡಿಗೆಯವರು ಬರೆದು ಕೊಟ್ಟಿದ್ದರು. ತಿಂಗಳಿಗೆ ಪ್ರತೀ ಮನೆಯೊಂದಕ್ಕೆ 16ಲೀ ಸೀಮೇಎಣ್ಣೆಗಳನ್ನು ಕೊಡುತ್ತಿದ್ದರು. ಅದಾಗಲೇ ಮೊದಲ ಕಂತಾದ 8 ಲೀ ತೆಗೆದುಕೊಂಡಿದ್ದರಿಂದ ಉಳಿದ 8 ಲೀ ನಮ್ಮ ಪಡಿತರ ಚೀಟಿಯಲ್ಲಿ ದೊರೆಯುತ್ತಿದ್ದ ಕಾರಣ, ಅಕ್ಕ ಪಕ್ಕದವರ ಮನೆಗಳ ಚೀಟಿಯನ್ನೂ ಪಡೆಕೊಂಡು ಹೋಗಿದ್ದೆವು. ನಮ್ಮ ಮನೆಯ ಪರಿಸ್ಥಿತಿಯ ಅರಿವಿದ್ದ ನಮ್ಮ ನೆರೆಹೊರೆಯವರು ಧಾರಾಳವಾಗಿಯೇ ಅವರ ಪಡಿತರ ಚೀಟಿಗಳನ್ನು ನಮಗೆ ಕೊಟ್ಟಿದ್ದರು. ಹಾಗಾಗಿ ನಾನು ಮತ್ತು ನಮ್ಮ ಅಣ್ಣಂದಿರಿಬ್ಬರೂ ಸೇರಿ ಒಟ್ಟು ಮೂರು ಜನ ಸೀಮೇ ಎಣ್ಣೆ ತರಲು ಮೂರು ಸೈಕಲ್ಲಿನಲ್ಲಿ ಡಬ್ಬಗಳನ್ನು ಹಿಡಿದುಕೊಂಡು ಪಡಿತರ ಅಂಗಡಿಗೆ ಹೋಗಿದ್ದೆವು.

koil2

ನಮ್ಮ ಮನೆಯ ಬಳಿ ಸಾಮಾನುಗಳನ್ನು ಕೊಂಡು ಕೊಳ್ಳಲು ಹತ್ತಾರು ಪಡಿತರ ಅಂಗಡಿಗಳಿದ್ದರೂ ಸೀಮೇಎಣ್ಣೆ ಮಾತ್ರಾ ಒಂದೇ ಕಡೆ ವಿತರಿಸುತ್ತಿದ್ದರಿಂದ ಸುತ್ತ ಮುತ್ತಲಿನ ಎಲ್ಲರೂ ಅಲ್ಲಿಗೇ ಬರಬೇಕಿದ್ದ ಕಾರಣ, ಸೀಮೇ ಎಣ್ಣೆಯ ಸರದಿಯ ಸಾಲು ಹನುಮಂತನ ಬಾಲಕ್ಕಿಂತಲೂ ಅತ್ಯಂತ ದೊಡ್ಡದಾಗಿತ್ತು. ಸಾಧಾರಣ ದಿನಗಳಲ್ಲಾದರೇ ಮತ್ತೊಂದು ದಿನ ತೆಗೆದುಕೊಳ್ಳೋಣ ಎಂದು ವಾಪಸ್ಸು ಬರುತ್ತಿದ್ದೆ. ಆದರೆ ಮನೆಯಲ್ಲಿ ಶ್ರಾಧ್ಧ ಕಾರ್ಯಗಳಿದ್ದರಿಂದ ಸೀಮೇ ಎಣ್ಣೆ ಅತ್ಯಗತ್ಯವಾಗಿದ್ದರಿಂದ ಮರು ಮಾತಿಲ್ಲದೆ ನಮ್ಮಗಳ ಡಬ್ಬವನ್ನು ಸರದಿಯ ಸಾಲಿನ ಕಡೆಯಲ್ಲಿ ಇಟ್ಟು ಒಂದೊಂದಾಗಿ ಡಬ್ಬಗಳನ್ನು ಜರುಗಿಸುತ್ತಾ ನಮ್ಮ ಪಾಳಿಯ ಬರುವಿಕೆಗಾಗಿ ಕಾಯುತ್ತಿದ್ದೆವು.

koil1

ಸರದಿಯಲ್ಲಿ ನಮ್ಮ ಹಿಂದೆ ಒಬ್ಬ ಸುಂದರ ತರುಣಿಯೊಬ್ಬಳೂ ಸಹಾ ಸೀಮೇ ಎಣ್ಣೆಗಾಗಿ ತನ್ನ ಡಬ್ಬವನ್ನಿಟ್ಟು ಸರದಿಯಲ್ಲಿ ಕಾಯುತ್ತಿದ್ದಳು. ನೋಡಲು ನಿಜಕ್ಕೂ ರೂಪವತಿಯಾಗಿದ್ದಳು. ಬಹುಶಃ ವಯಸ್ಸಿನಲ್ಲಿ ನನಗಿಂತ ಸ್ವಲ್ಪ ದೊಡ್ಡವಳಾಗಿದ್ದಳು. ನಾವು ಮೂರು ಜನರೂ ಹದಿಹರೆಯದ ವಯಸ್ಸು. ಕದ್ದು ಮುಚ್ಚಿ ಆಗ್ಗಿಂದ್ದಾಗ್ಗೆ ಆಕೆಯನ್ನು ನೋಡುತ್ತಿದ್ದದ್ದು ಆಕೆಯ ಗಮನಕ್ಕೂ ಬಂದು ಒಂದೆರಡು ಬಾರಿ ದುರು ದುರುಗುಟ್ಟಿ ನೋಡಿದ್ದೂ ಉಂಟು. ಆಕೆಯ ಕಣ್ಣೇಟಿಗೇ ಹೆದರಿ ಸುಮ್ಮನಾಗಿದ್ದೆವು. ಇದ್ದಕ್ಕಿದ್ದಂತೆಯೇ ಸರದಿಯ ಸಾಲು ಮುಂದುವರೆಯುವುದು ಸ್ವಲ್ಪ ತಡವಾಗತೊಡಗಿತು. ನೆತ್ತಿಯ ಮೇಲೆ ಸೂರ್ಯ ಜೋರಾಗಿಯೇ ಸುಡುತ್ತಿದ್ದ. ಬಿಸಿಲಿನಿಂದ ಬಸವಳಿದ ನಾವುಗಳು ಡಬ್ಬವನ್ನು ಸಾಲಿನಲ್ಲಿಯೇ ಇಟ್ಟು ಅಲ್ಲಿಯೇ ಇದ್ದ ಮರದ ನೆರಳಿಗೆ ಬಂದು ನಿಂತೆವು. ಸ್ವಲ್ಪ ಸಮಯದ ನಂತರ ಸಾಲು ಮುಂದುವರೆದಾಗ, ಆರಂಭದಲ್ಲಿ ಆ ತರುಣಿ ನಮ್ಮ ಡಬ್ಬಗಳನ್ನೂ ತಾನೇ ಖುದ್ದಾಗಿ ಜರುಗಿಸಿ ಅವುಗಳ ಹಿಂದೆ ತನ್ನ ಡಬ್ಬವನ್ನು ಜರುಗಿಸುತ್ತಿದ್ದಳು. ಹೇಗೂ ಆಕೆ ನಮ್ಮ ಡಬ್ಬಗಳನ್ನು ಜರುಗಿಸುತ್ತಿದ್ದಾಳಲ್ಲಾ ಎಂದು ನಾವೂ ಸಹಾ ನೆಮ್ಮದಿಯಾಗಿ ಮರದ ನೆರಳಿನಲ್ಲಿಯೇ ಕಾಲ ಕಳೆಯುತ್ತಿದ್ದೆವು. ಈಗ ಬರುಬಹುದು, ಆಗ ಬರಬಹುದು ಎಂದು ನಮ್ಮ ಬರುವಿಕೆಯನ್ನೇ ಎದುರು ನೋಡುತ್ತಿದ್ದಳು ಆಕೆ. ಎಷ್ಟು ಹೊತ್ತಾದರೂ ಭಂಡರು ನಾವು ಅತ್ತ ಕಡೆ ಸುಳಿಯಲಿಲ್ಲವಾದ್ದರಿಂದ ಬಿಸಿಲಿನ ಝಳವನ್ನು ತಡೆಯಲಾರದೆ ಆಕೆ ನಮ್ಮ ಡಬ್ಬಗಳನ್ನು ಅಲ್ಲಿಯೇ ಬಿಟ್ಟು ತನ್ನ ಡಬ್ಬವನ್ನು ನಮಗಿಂತ ಮುಂದಕ್ಕೆ ಇಟ್ಟುಕೊಂಡಿದ್ದನ್ನು ನೋಡಿದ ಕೂಡಲೇ ನಮಗೆ ಎಲ್ಲಿಲ್ಲದ ರೋಶ ಉಕ್ಕೇರಿತು

ಆ ಕೂಡಲೇ ನಾವೆಲ್ಲರೂ ಅಲ್ಲಿಗೆ ಧಾವಿಸಿ, ಆಕೆಯ ಡಬ್ಬವನ್ನು ಎತ್ತಿ ಹಿಡಿದು ನಮ್ಮ ಡಬ್ಬವನ್ನು ಮುಂದಕ್ಕೆ ಇಟ್ಟು ಆಕೆಯ ಡಬ್ಬವನ್ನು ಹಿಂದಕ್ಕೆ ಇಟ್ಟೆವು. ಹೇಳದೇ ಕೇಳದೆ ಗೂಳಿಗಳಂತೆ ನುಗ್ಗಿ ಆಕೆಯ ಅನುಮತಿ ಇಲ್ಲದೇ ಆಕೆಯ ಸೀಮೇ ಎಣ್ಣೆ ಡಬ್ಬವನ್ನು ನಾವುಗಳು ಮುಟ್ಟಿದ್ದು ಆಕೆಗೆ ಕೋಪವನ್ನು ತರಿಸಿತು. ಕೂಡಲೇ ರಣಚಂಡಿಯಂತೆ ನಮ್ಮ ಮೇಲೆ ಕೂಗಾಡ ತೊಡಗಿದಳು. ನಾವುಗಳು ಅಷ್ಟೇ ಜೋರಾಗಿ ಅವಳನ್ನು ಎದುರಿಸಲು ಹೋದೆವಾದರೂ ಅಕ್ಕ ಪಕ್ಕದವರೆಲ್ಲಾ ಹೆಣ್ಣೆಂಬ ಕಾರಣದಿಂದಾಗಿ ಅವಳ ನೆರವಿಗೇ ಬಂದ ಕಾರಣ ಅಂ… ಸುಟ್ಟ ಬೆಕ್ಕಿನಂತಾದೆವು ನಾವು. ಆಕೆಯ ಸರದಿ ಬಂದಾಗ ನಮಗಿಂತಲೂ ಮುಂದಾಗಿ 8 ಲೀ. ಸೀಮೇಎಣ್ಣೆ ತೆಗೆದುಕೊಂಡು ಪ್ರಪಂಚವನ್ನೇ ಗೆದ್ದೇ ಎನ್ನುವಂತೆ ಜಂಬದಿಂದ ವಯ್ಯಾರದಿಂದ ಜಡೆಯನ್ನು ಅತ್ತಿಂದಿತ್ತ ಅಲ್ಲಾಡಿಸಿಕೊಂಡು ನಮ್ಮ ಕಣ್ಣ ಮುಂದೆಯೇ ಹೋಗಿದ್ದು ನಮ್ಮ ಗಂಡಸು ತನಕ್ಕೆ ಆದ ಆವಮಾನ ಎಂದು ಭಾವಿಸಿದೆವಾದರೂ ಏನೂ ಮಾಡಲಾಗದೇ ಸುಮ್ಮನೆ ಒಟ್ಟಿಗೆ 24(8×3) ಲೀ. ಸೀಮೇ ಎಣ್ಣೆ ತೆಗೆದುಕೊಂಡು ನಮ್ಮ ಮನೆಗೆ ಬಂದೆವು.

ಆಡುಗೆಯವರು 35-40 ಲೀಟರ್ ಸೀಮೇಎಣ್ಣೆ ಬರೆದಿದ್ದಾರೆ ಈಗ 24ಲೀ. ಇದೆ ಉಳಿದದ್ದಕ್ಕೆ ಏನು ಮಾಡುವುದು ಎಂದು ನಮ್ಮ ಅಮ್ಮನಲ್ಲಿ ಕೇಳಿದಾಗ, ನೋಡೋಣ. ಇನ್ನೂ ಇಬ್ಬರು ಮೂವರಿಗೆ ಕಾರ್ಡ್ ಕೊಡಲು ಕೇಳಿದ್ದೇನೆ. ಸಿಗಬಹುದು ಎಂದರು. ಅದಾಗಿ ಸ್ವಲ್ಪ ಹೊತ್ತಿನಲ್ಲಿಯೇ ನಮ್ಮ ಮನೆಯ ಕಡೆ ದೂರದಲ್ಲಿ ಒಬ್ಬಳು ತಾಯಿ ಮತ್ತು ಮಗಳು ಕೈಯಲ್ಲಿ ಸೀಮೇಎಣ್ಣೆ ಹಿಡಿದುಕೊಂಡು ನಮ್ಮ ಮನೆಯ ಕಡೆಗೇ ಬರುತ್ತಿದ್ದದ್ದನ್ನು ನೋಡಿ. ಇದು ಯಾರಪ್ಪಾ ಎಂದು ಹಾಗೆಯೇ ಗಮನಿಸುತ್ತಿದ್ದಾಗ, ಸ್ವಲ್ಪ ಹತ್ತಿರ ಬಂದಾಗ ನೋಡಿದರೇ ನಮ್ಮೊಡನೆ ಕಾದಾಡಿ ಜಂಬದಿಂದ ಸೀಮೇ ಎಣ್ಣೆ ತೆಗೆದುಕೊಂಡು ಹೋಗಿದ್ದ ಹುಡುಗಿಯೇ ಅವಳಾಗಿರ ಬೇಕೇ? ಅಮ್ಮಾ ಮಗಳು ಅದೇನೋ ಜೋರು ಜೋರಾಗಿ ಮಾತಾನಾಡಿಕೊಂಡು ನಮ್ಮ ಮನೆಯತ್ತಲೇ ಬರುತ್ತಿರುವುದನ್ನು ನೋಡಿ ನಮ್ಮೆಲ್ಲರಿಗೂ ಗಾಭರಿಯಾಯಿತು. ಅವಳ ಜೊತೆ ಬರುತ್ತಿದ್ದವರು ನಮ್ಮ ತಾಯಿಯ ಸ್ನೇಹಿತೆಯಾಗಿದ್ದರು. ಅವರೇಕೆ ಇವಳ ಜೊತೆ ಬರುತ್ತಿದ್ದಾರೆ? ಏನೋ ಗ್ರಹಚಾರ ಕಾದಿದೆ ನಮಗೆ ಅನ್ನೋ ಭಯ ಶುರುವಾಯಿತು ನಮಗೆ.

ಈ ಹೆಂಗಸರು ಏನಪ್ಪಾ ಹೀಗೆ? ಅಷ್ಟು ಸಣ್ಣ ಜಗಳಕ್ಕೆಲ್ಲಾ ಮನೆಗೆ ಬಂದು ಬಿಡೋದಾ? ಎಂದು ಸುಮ್ಮನೆ ಅವರಿಗೆ ಕಾಣದಂತೆ ಗುಟ್ಟಾಗಿ ಮಹಡಿಯ ಮೇಲೆ ಓಡಿ ಹೋಗಿ ಅವರು ಏನು ಮಾತಾನಾಡುತ್ತಿದ್ದಾರೆ ಎಂದು ಗುಟ್ಟಾಗಿ ಕೇಳಿಸಿಕೊಳ್ಳಲು ಸಿದ್ಧವಾದೆವು. ಮಟ ಮಟ ಮಧ್ಯಾಹ್ನದ ಬಿಸಿಲಿನಲ್ಲಿ ಅವರಿಬ್ಬರನ್ನು ನೋಡಿ ನಮ್ಮ ತಾಯಿಯವರು ಇದೇನ್ರೀ ಪಾರ್ವತಿ? ಇಷ್ಟು ಹೊತ್ತಿನಲ್ಲಿ ಅದೂ ಸೀಮೇಎಣ್ಣೆ ಡಬ್ಬಾ ಹಿಡಿದುಕೊಂಡು ಬಂದಿದ್ದೀರಾ? ಎಂದು ಕೇಳುತ್ತಾ, ಮನೆಯಲ್ಲಿ ಸೂತಕವಿದ್ದ ಕಾರಣ, ಮನೆಯ ಹೊರಗೆಯೇ ಛಾವಡಿಯ ನೆರಳಿನಲ್ಲಿಯೇ ಕೂರಿಸಿ ನೀರು ಕುಡಿಯೋದಕ್ಕೆ ಏನೂ ದೋಷ ಇಲ್ಲಾ ತಾನೇ ಎಂದು ವಿಚಾರಿಸಿದರು. ಅಯ್ಯೋ ಸಾವಿಲ್ಲದ ಮನೆಯಲ್ಲಿ ಸಾಸಿವೆ ಕಾಳು ತನ್ನಿ ಎನ್ನುವಂತೆ ಯಾರ ಮನೆಯಲ್ಲಿ ಸಾವಾಗುವುದಿಲ್ಲ. ಪರವಾಗಿಲ್ಲ. ನೀರು ಕೊಡಿ. ಹಾಗೆ ತಗೊಳ್ಳಿ ಈ 8 ಲೀ. ಸೀಮೇಎಣ್ಣೆ ಎಂದು ಡಬ್ಬವನ್ನು ನಮ್ಮ ಅಮ್ಮನವರ ಮುಂದೆ ಇಟ್ಟರು. ಇದೇನ್ರೀ ಕಾರ್ಡ್ ಕೇಳಿದ್ರೇ ಎಣ್ಣೇನೇ ಕೊಡ್ತಾ ಇದ್ದೀರಿ. ಕಾರ್ಡ್ ಕೊಟ್ಟಿದ್ರೇ ನಮ್ಮ ಮಗನನ್ನು ಕಳುಹಿಸಿ ನಾವೇ ತೆಗೆದುಕೊಳ್ತಾ ಇದ್ವಿ. ಸುಮ್ಮನೇ ನಿಮಗೆ ತೊಂದ್ರೇ ಕೊಟ್ಟ ಹಾಗಾಯ್ತು ಎಂದು ಮುಮ್ಮುಲ ಮರುಗಿದರು ನಮ್ಮಮ್ಮ. ಅಯ್ಯೋ ಅದ್ರಲ್ಲೇನೂ ತೊಂದ್ರೇ. ಹೇಗೋ ಮಗಳಿಗೆ ಇವತ್ತು ಕಾಲೇಜಿಗೆ ರಜೆ ಇತ್ತು ಹಾಗಾಗಿ ಅವಳೇ ಹೋಗಿ ಕ್ಯೂ ನಿಂತ್ಕೊಂಡ್ ಅದ್ಯಾರೋ ಹುಡುಗ್ರ ಜೊತೆ ಜಗಳ ಕಾಯ್ಕೊಂಡ್ ಸೀಮೇ ಎಣ್ಣೆ ತಂದಿದಾಳೆ ನೋಡಿ. ಅದೇನು ಹುಡುಗ್ರೋ? ಹೆಣ್ಣು ಮಕ್ಕಳು ಅಂತ ಸ್ವಲ್ಪನೂ ದಯೆ ದಾಕ್ಷಿಣ್ಯ ಇಲ್ಲದೇ ಕಾದಾಡ್ತಾರೆ ಅಂದ್ರು. ಅವರ ಮಾತುಗಳನ್ನು ಹೇಳಿ ನಮಗೆಲ್ಲರಿಗೂ ಮುಸಿ ಮುಸಿ ನಗು. ನಮ್ಮೊಂದಿಗೆ ಅಷ್ಟೆಲ್ಲಾ ರಂಪ ರಾಮಾಯಣ ಮಾಡಿ ನಮ್ಮುಂದೆ ಜಂಬದಿಂದ ತೆಗೆದುಕೊಂಡು ಹೋದ ಸೀಮೇಎಣ್ಣೆ ನಮ್ಮ ಮನೆಗೇ ಅದೂ ಅವಳೇ ತಂದು ಕೊಡ್ಬೇಕಾಯ್ತಲ್ಲಾ? ಅದಕ್ಕೇ ಹೇಳೋದು ಭಗವಂತ ಎಲ್ಲದರ ಮೇಲೂ ಹೆಸರು ಬರೆದು ಬಿಟ್ಟಿರ್ತಾನೆ. ಆ ವಸ್ತುಗಳ ಮೇಲೆ ಅವರ ಹೆಸರಿಲ್ಲದಿದ್ದರೇ ಎಷ್ಟೇ ಕಷ್ಟ ಪಟ್ರೂ ಅದನ್ನು ಅನುಭವಿಸುವುದಕ್ಕೆ ಆಗುವುದಿಲ್ಲ ಎಂದು, ಏನೋ ದೊಡ್ಡ ವೇದಾಂತಿಯಂತೆ ನಮ್ಮ ಅಣ್ಣಂದಿರ ಮುಂದೆ ಹೇಳಿದರೆ ಅವರೂ ಸಹಾ ಕೋಲೇ ಬಸವನಂತೆ ಹೂಂಗುಟ್ಟಿದರು.

ಅಷ್ಟರೊಳಗೆ ನಮ್ಮ ಅಕ್ಕ ಬಂದು ಇದೇನ್ರೋ? ಹೆಂಗಸರು ಮಾತಾಡ್ತಾ ಇರೋದನ್ನಾ ಕದ್ದು ಮುಚ್ಚಿ ಕೇಳ್ತಾ ಇದ್ದೀರಲ್ಲಾ ನಾಚ್ಕೆ ಆಗೋಲ್ವಾ ನಿಮ್ಗೆ ಎಂದು, ನಡೀರೀ ನಡೀರೀ ಎಂದು ಗದುರಿದಾಗ, ನಾವೆಲ್ಲರೂ ಸುಮ್ಮನೆ ತಲೆ ತಗ್ಗಿಸಿ ಹೊರಗೆ ಬಂದೆವು. ನಮ್ಮನ್ನು ನೋಡಿದ ಕೂಡಲೇ ಆಕೆಗೆ ಈವರ್ಯಾಕೆ ಇಲ್ಲಿದ್ದಾರೆ ಅಂತಾ ಆಶ್ವರ್ಯವಾಗಿ, ಅವರಮ್ಮನ ಕಡೆ ತಿರುಗಿ ಅದೇನೋ ಅವರ ಭಾಷೆಯಲ್ಲಿ ಅದೇನೋ ಹೇಳಿದಳು. ನಾನು ಇಂಗು ತಿಂದ ಮಂಗನಂತಾಗಿ, ಏನು ಮರಾಠಿ ಆಂಟಿ ಚೆನ್ನಾಗಿದ್ದಿರಾ ಎಂದೇ. ಅದಕ್ಕೇ ಅವರು ನಾನು ಚೆನ್ನಾಗಿದ್ದೀನಿ. ಯಾಕೆ ನೀನು ನಮ್ಮ ಮಗಳನ್ನು ನೋಡಿರ್ಲಿಲ್ವಾ ಎಂದು ಕೇಳಿದರು. ಇಲ್ಲಾ ಆಂಟಿ. ನಿಮ್ಮ ಮಗ ಗೊತ್ತು. ಆದ್ರೇ ಕಾಲೇಜಿಗೆ ಹೋಗಾ ಅಕ್ಕನ (ಅಕ್ಕ ಅಂತಾ ಹೇಳಿ ಅಪಾಯ ತಪ್ಪಿಸಿಕೊಳ್ಳುವ ಉಪಾಯ) ಪರಿಚಯ ಇರಲಿಲ್ಲಾ. ಅಕ್ಕಾ ಸಾರಿ. ಸೀಮೇಎಣ್ಣೆ ತೆಗೆದುಕೊಳ್ವಾಗ ನೀವೂ ಅಂತಾ ಗೊತ್ತಿಲ್ದೇ ಕಿತಾಡ್ಬಿಟ್ವೀ ಅಂದೇ. ಆಕೆಗೋ ಒಳಗೊಳಗೇ ಕೋಪ. ಅದ್ರೇ ನಾನು ಕಿಲಾಡಿ ತನದಿಂದ ಅಕ್ಕಾ ಎಂದು ಹೇಳಿ ತಪ್ಪಾಯ್ತು ಅಂತಾ ಬೇರೇ ಕೇಳಿದ್ದೀನಿ. ಸರಿ ಸರಿ ಅಂತಾ ಬಾಯಲ್ಲಿ ಹೇಳಿದ್ರೂ ಕಣ್ಣುಗಳು ಮಾತ್ರಾ ನಮ್ಮನ್ನು ಸುಟ್ಟು ಭಸ್ಮ ಮಾಡುವ ಹಾಗೇ ಇತ್ತು. ನಮ್ಮ ಅಣ್ಣಂದಿರಿಬ್ಬರೂ ಬದುಕಿದೆಯಾ ಬಡಜೀವ ಎಂಬಂತೆ ಸದ್ದಿಲ್ಲದೇ ಮನೆಯ ಹೊರಗೆ ಹೋಗಿಬಿಟ್ಟೆವು. ಅಂದಿನಿಂದ ಆಕೆಯ ನಿಜವಾದ ಹೆಸರಿಗಿಂತಲೂ ಸೀಮೇಎಣ್ಣೇ ಎಂದೇ ನಾವೆಲ್ಲರೂ ಹಾಸ್ಯ ಮಾಡುತ್ತಿದ್ದೇವು.

ಮೊನ್ನೆ ನಮ್ಮ ದೇವಾಸ್ಥಾನದ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮತ್ತೆ ಮರಾಠಿ ಆಂಟಿಯನ್ನು ನೋಡಿದಾಗ, ಅಗಲಿದ ನಮ್ಮ ತಾಯಿಯವರ ನೆನಪಾಗಿ ಗಂಟಲು ಗದ್ಗತವಾಯಿತು ಮತ್ತು ಕಣ್ಣಿನಲ್ಲಿ ನೀರು ಫಳ ಫಳನೇ ಜಾರಿಬಂತು ಅದನ್ನೆಲ್ಲಾ ಸಾವರಿಸಿಕೊಳ್ಳುತ್ತಾ ಮೆಲ್ಲಗೇ ಹೇಗಿದ್ದೀರೀ ಆಂಟಿ. ಮನೆಯವರೆಲ್ಲಾ ಹೇಗಿದ್ದಾರೆ ಎಂದೇ? ಏ ನಾವೆಲ್ಲಾ ಚೆನ್ನಾಗಿದ್ದೇವೆ. ಇಲ್ನೋಡೋ ಸೀಮೇಎಣ್ಣೆ ಬಂದಿದ್ದಾಳೆ ಅಂತಾ ಅವರ ಮಗಳನ್ನು ಕರೆದು ತೋರಿಸಿದರು. ಸುಮಾರು ಹದಿನೈದು ಇಪ್ಪತ್ತು ವರ್ಷಗಳ ನಂತರ ಆಕೆಯನ್ನು ನೋಡಿ ಇಬ್ಬರೂ ಅಂದಿನ ನಮ್ಮ ಪೆದ್ದು ತನದ ಸೀಮೇಎಣ್ಣೆಯ ಪ್ರಸಂಗವನ್ನು ನೆನಪಿಸಿಕೊಂಡು ಗಟ್ಟಿಯಾಗಿ ನಕ್ಕು ಬಿಟ್ಟೆವು.

ನೆರೆ ಹೊರೆ ಅಂದಿನ ಕಾಲದಲ್ಲಿ ಎಷ್ಟು ಚೆನ್ನಾಗಿತ್ತಲ್ವಾ? ಸೀಮೇ ಎಣ್ಣೆ ಕಾರ್ಡ್ ಕೇಳಿದ್ರೇ ಸೀಮೇ ಎಣ್ಣೇನೇ ತಂದು ಕೊಡುವವರು. ಈಗ ನೋಡಿ, ಕುಡಿಯಲು ನೀರು ಕೇಳಿದ್ರೇ ಅಂಗಡಿಯಲ್ಲಿ ಕೊಂಡು ಕುಡೀರಿ ಅಂತಾ ಹೇಳುವವರೇ ಹೆಚ್ಚಾಗಿದ್ದಾರೆ. ಕಾಲಾ ಕೆಟ್ಟು ಹೋಗಿದೆ ಅಂತಾರೆ ಅದು ನಿಜಾನಾ?

ಏನಂತೀರೀ?