ಮೊದಲನೆಯದು ಕ್ಷಮ್ಯ, ಎರಡನೆಯದು ಅಕ್ಷಮ್ಯ

cremationವಯಸ್ಸಾದ ತಂದೆ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಗ, ಸೊಸೆ ಮತ್ತು ಕಾಲೇಜಿಗೆ ಹೋಗುತ್ತಿದ್ದ ಮೊಮ್ಮಗನಿದ್ದ ಅದೊಂದು ಸುಂದರ ಕುಟುಂಬ. ತಂದೆ-ಮಗ, ತಾತ-ಮೊಮ್ಮಗ ಬಹಳ ಅನ್ಯೋನ್ಯವಾಗಿದ್ದಂತಹ ಸಂಬಂಧ. ತಾತನಿಗೆ ವಯಸ್ಸಾಗಿದ್ದ ಕಾರಣ ಮನೆಯಲ್ಲಿಯೇ ಇರುತ್ತಿದ್ದರು. ಅದು ಹೇಗೋ ಮೊಮ್ಮಗನಿಗೆ ಕರೋನಾ ಸೋಂಕು ತಗುಲಿ ಅಲ್ಲಿಂದ ತಾತನಿಗೆ, ನಂತರ ಮಗ ಸೊಸೆ ಹೀಗೆ ಇಡೀ ಕುಟುಂಬವೇ ಕರೋನಾ ಸೋಂಕಿಗೆ ಬಲಿಯಾದ ಕಾರಣ ವಿಧಿ ಇಲ್ಲದೇ ಎಲ್ಲರೂ ಆಸ್ಪತ್ರೆಗೆ ಸೇರಬೇಕಾಯಿತು. ವಯಸ್ಸಾದ ಹಿರಿಯರು ತೀವ್ರವಾದ ಸೋಂಕಿಗೆ ಬಲಿಯಾಗಿದ್ದ ಕಾರಣ ಐ.ಸಿ.ಯು ನಲ್ಲಿಟ್ಟು ಚಿಕಿತ್ಸೆ ಕೊಟ್ಟರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಸ್ವತಃ ಇಡೀ ಕುಟುಂಬವೇ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಯಾರಿಗೂ ತಂದೆಯವರ, ಮಾವನವರ, ತಾತನ ಮುಖವನ್ನೂ ನೋಡಲಾಗಲಿಲ್ಲ. ಆಗಿನ್ನೂ ಲಾಕ್ದೌನ್ ತೀವ್ರವಾಗಿದ್ದ ಕಾರಣ ಸರ್ಕಾರಿ ಲೆಖ್ಖದಲ್ಲಿಯೇ ವೈದ್ಯಕೀಯ ಸಿಬ್ಬಂದಿಗಳೇ ಅವರ ಅಂತಿಮ ಸಂಸ್ಕಾರವನ್ನು ಮಾಡಿದ್ದರು. ಹೆತ್ತ ತಂದೆಯ ಮುಖವನ್ನೂ ನೋಡಲಾಗಲಿಲ್ಲವಲ್ಲಾ, ಅವರ ಅಂತಿಮ ವಿಧಿವಿಧಾನಗಳನ್ನೂ ಮಾಡಲಾಗಲಿಲ್ಲವಲ್ಲಾ ಎಂದು ಮಗನಿಗೆ ತೀವ್ರತರವಾದ ನೋವಿನಿಂದ ಬಹಳ ದಿನಗಳವರೆಗೂ ಖಿನ್ನತೆಗೆ ಒಳಗಾಗಿ ಹಲವು ತಿಂಗಳುಗಳ ನಂತರ ಸುಧಾರಿಸಿಕೊಳ್ಳುತ್ತಿದ್ದಾರೆ.corona1ಮತ್ತೊಂದು ಕುಟುಂಬ. ಇಲ್ಲಿ ತಾಯಿ, ಮಗ ಸೊಸೆ ಮತ್ತು ಮೊಮ್ಮಗ ಇದ್ದಂತಂಹ ಕುಟುಂಬ. ಮೈಸೂರಿನಲ್ಲಿ ತಮ್ಮ ಸಂಬಂಧಿಗಳ ಸಮಾರಂಭಕ್ಕೆ ಹೋಗಿ ಬಂದ ಕೆಲವೇ ದಿನಗಳಲ್ಲಿ ಕುಟುಂಬವಿಡೀ ಕೊರೋನಾ ಸೊಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಗೆ ಸೇರುತ್ತಾರೆ. ಅವರ ಇಡೀ ರಸ್ತೆಯನ್ನೇ ಸೀಲ್ಡೌನ್ ಮಾಡುವ ಮೂಲಕ ಏನೂ ಮಾಡದ ಅವರ ರಸ್ತೆಯವರೆಲ್ಲರೂ ತೊಂದರೆ ಅನುಭವಿಸುವಂತಾಗುತ್ತದೆ. ಅದೃಷ್ಠವಶಾತ್ ಅಜ್ಜಿ ಮತ್ತು ಮೊಮ್ಮಗ ಬಹಳ ಬೇಗನೇ ಗುಣಮುಖರಾಗುತ್ತಾರಾದರೂ ಮಗ ಮತ್ತು ಸೊಸೆಯವರಿಗೆ ತೀವ್ರವಾದ ಉಸಿರಾಟದ ತೊಂದರೆಯಿಂದಾಗಿ ಸುಮಾರು ಒಂದು ತಿಂಗಳುಗಳ ಕಾಲ ಐಸಿಯುವಿನಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ನರಳಿ, ಲಕ್ಷಾಂತರ ರೂಪಾಯಿಗಳ ಖರ್ಚು ಮಾಡಿ, ವೈದ್ಯರುಗಳ ಚಿಕಿತ್ಸೆ ಮತ್ತು ದೇವರ ದಯೆಯಿಂದಾಗಿ ಮನೆಗೆ ಬಂದು ಸುಮಾರು ವಾರಗಳ ಕಾಲ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಂಡು ಈಗ ಹುಶಾರಾಗಿದ್ದಾರೆ.corona2ಮನೆಯಲ್ಲಿ ಇದ್ದಕ್ಕಿದ್ದಂತೆಯೇ ಆರೋಗ್ಯ ತಪ್ಪಿದ ಹಿರಿಯರೊಬ್ಬರನ್ನು ಕೋವಿಡ್ ಪರೀಕ್ಷೆ ಮಾಡಿಸಿದ ಒಂದು ದಿನದ ಬಳಿಕ ಅವರ ಮೊಬೈಲಿನಲ್ಲಿ ಅವರಿಗೆ ಕೋವಿಡ್+ ಬಂದಿದೆ, ಹಾಗಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ಬರುತ್ತದೆ. ಹಾಗಾಗಿ ಸಿದ್ಧವಾಗಿರಿ ಎಂಬ ಸಂದೇಶ ಬಂದ ಕೂಡಲೇ ಆ ಹಿರಿಯರ ನಾಲ್ಕಾರು ಬಟ್ಟೆಗಳನ್ನು ಚೀಲದಲ್ಲಿಟ್ಟು ಮನೆಯ ಹಿರಿಯವರು ಎಂಬ ಮಾನವೀಯತೆಯನ್ನೂ ಮರೆತು ಅವರನ್ನು ಮನೆಯ ಹೊರಗೆ ಹಾಕಿ ಬಾಗಿಲು ಹಾಕಿ ಕೊಳ್ಳುತ್ತಾರೆ. ಅದು ಯಾವ ಕಾರಣಕ್ಕೋ ಏನೋ? ಅವರನ್ನು ಕರೆದುಕೊಂಡು ಹೋಗಲು ಬರಬೇಕಿದ್ದ ಆಂಬ್ಯುಲೆನ್ಸ್ ಕೂಡಾ ಬಹಳ ತಡವಾಗಿ ಬಂದು ನೋಡಿದರೆ ಮನೆಯ ಮುಂದೆಯೇ ಬೀದಿ ಹೆಣವಾಗಿರುತ್ತಾರೆ ಆ ಹಿರಿಯರು. ಅವರನ್ನು ನೋಡಲೂ ಸಹಾ ಅವರ ಮನೆಯವರು ಹೊರಗೆ ಬಾರದಂತಹ ಹೃದಯವಿದ್ರಾವಕ ಘಟನೆಯೂ ನಡೆದಿದೆ.

ಹೀಗೆ ಬರೆಯುತ್ತಾ ಹೋದರೆ ಲೆಕ್ಕವಿಲ್ಲದಷ್ಟು ಇಂತಹ ದುರ್ಘಟನೆಗಳು ಕಳೆದೊಂದು ವರ್ಷದಲ್ಲಿ ನಮ್ಮ ಕಣ್ಣ ಮುಂದೆ ನಡೆದುಹೋಗಿದೆ. ನಮ್ಮ ನಿಮ್ಮೆಲ್ಲರ ಮಧ್ಯೆ ಆರೋಗ್ಯದಿಂದ ಇದ್ದವರು ನೋಡ ನೋಡುತ್ತಿದ್ದಂತೆಯೇ ಗೋಡೆಯಲ್ಲಿ ಫೋಟೋವಾಗಿ ಬಿಟ್ಟಿದ್ದಾರೆ.

lockdownಸರ್ಕಾರವೂ ಸಹಾ ಈ ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ಸುಮಾರು ಮೂರು ತಿಂಗಳುಗಳ ಕಾಲ ಲಾಕ್ಡೌನ್ ಮಾಡಿದರೂ, ಅಂತರ್ ರಾಜ್ಯಗಳ ಗಡಿಗಳನ್ನು ಮುಚ್ಚಿದ್ದರೂ, ಕೆಲವು ಅನಕ್ಷರಸ್ಥ ಕಿಡಿಗೇಡಿಗಳು ಮತ್ತು ಪುಂಡು ಪೋಕರಿಗಳು ಸರ್ಕಾರದ ನೀತಿನಿಯಮಗಳನ್ನು ಗಾಳಿಗೆ ತೂರಿದರೆ, ಜನರ ಹಿತಕ್ಕಿಂತಲೂ ತಮ್ಮ ರಾಜಕೀಯ ತೆವಲುಗಳಿಗೆ ಮತ್ತು ಆಡಳಿತ ಪಕ್ಷಕ್ಕೆ ಭಂಗ ತರಲೆಂದೇ ದೇಶದ ಹಿತಶತ್ರುಗಳಾಗಿ ಕಾಡಿದ ವಿರೋಧ ಪಕ್ಷಗಳು ಪ್ರಜೆಗಳ ಹಿತವನ್ನೂ ಅಲಕ್ಷಿಸಿ, ಅಂತರ್ ರಾಜ್ಯಗಳ ಗಡಿಯನ್ನು ತೆರೆಯಲು ಹೋರಾಟ ನಡೆಸಿದ್ದಲ್ಲದೇ, ಹೇಳೋದು ಶಾಸ್ತ್ರ ತಿನ್ನೋದು ಬದನೇಕಾಯಿ ಎನ್ನುವಂತೆ ತಮ್ಮ ಮನೆಯ ಮದುವೆ, ಮುಂಜಿ, ನಾಮಕರಣ ಹುಟ್ಟು ಹಬ್ಬಗಳಲ್ಲಿ ಸಾವಿರಾರು ಜನರನ್ನು ಒಟ್ಟು ಗೂಡಿಸಿ ಆಡಳಿತ ಪಕ್ಷಗಳ ಪ್ರತಿಯೊಂದು ನಡೆಯನ್ನೂ ವಿರೋಧಿಸುತ್ತಲೇ ಪರೋಕ್ಷವಾಗಿ ಕೊರೋನಾ ಹಬ್ಬಲು ಸಹಕರಿಸಿದವು ಎಂದರೂ ತಪ್ಪಾಗಲಾರದು.marshalಇಡೀ ಪ್ರಪಂಚವೇ ಈ ಮಹಾಮಾರಿಯಿಂದ ತಲ್ಲಣಿಸಿ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಕುಗ್ಗಿದ್ದರೂ ಸರ್ಕಾರ ಕೊರೋನ ನಿಯಂತ್ರಣದ ಹೆಸರಿನಲ್ಲಿ ಮಾರ್ಷಲ್ ಗಳ ಮೂಲಕ ಮಾಸ್ಕ್ ಹಾಕಿಲ್ಲದ ಅಮಾಯಕರ ಬಳಿ ಐದು ನೂರು ಸಾವಿರ ರೂಪಾಯಿಗಳ ದಂಡ ಕಸಿಯುವ ಮೂಲಕ ಅಕ್ಷರಶಃ ಹಗಲು ದರೋಡೆಗೆ ಇಳಿಯುವ ಮೂಲಕ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಪ್ರಯತ್ನಿಸಿದ್ದದ್ದು ನಿಜಕ್ಕೂ ಹೇಯಕರವಾದ ಸಂಗತಿಯೇ.marketಲಾಕ್ಡೌನ್ ಹಂತ ಹಂತವಾಗಿ ಸಡಿಲ ಗೊಳಿಸಿದ್ದೇ ತಡಾ ಜನ ಕೊರೋನಾ ಮಹಾಮಾರಿಯೇ ಬಂದಿಲ್ಲವೇನೋ ಇವರು ಹೋಟೇಲ್, ಮಾಲು, ಬಾರು, ಸಿನಿಮಾ, ಈಜುಗೊಳ, ಜಿಮ್, ಮಾರುಕಟ್ಟೆಗಳಿಗೆ ಹೋಗದಿದ್ದರೇ ಪ್ರಪಂಚವೇ ಮುಳುಗಿ ಹೋಗುತ್ತದೆಯೇನೋ ಎನ್ನುವಂತೆ ಎಲ್ಲಾ ಕಡೆಯಲ್ಲಿಯೂ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದೇ, ಸಾಮಾಜಿಕ ಅಂತರವನ್ನು ಮರೆತು,ರಾಜಾ ರೋಷದಿಂದ ಗೂಳಿ ನುಗ್ಗಿದ ಹಾಗೆ ನುಗ್ಗಿದ ಪರಿಣಾಮ ಸ್ವಲ್ಪ ತಹಬದಿಗೆ ಬಂದಿದ್ದ ಕೊರೋನ, ಮತ್ತೆ ಪ್ರಜ್ವಲಿಸುತ್ತಾ 2ನೇ ಅಲೆಯ ಮೂಲಕ ತನ್ನ ಕೆನ್ನಾಲಿಗೆಯನ್ನು ಚಾಚುತ್ತಾ ಸದ್ಯದ ಪರಿಸ್ಥಿತಿಯಲ್ಲಿ ಪ್ರಪಂಚಾದ್ಯಂತ 30 ಲಕ್ಷಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿದೆ. ಪ್ರತಿ ದಿನವೂ ಸಹಸ್ರಾರು ಜನರು ,+veಎಂಬ ಅಂಕಿ ಅಂಶ ಕಣ್ಣ ಮುಂದೆ ರಾಚುತ್ತಿದೆ.2ndwave1ಕೊರೋನಾ ಗಿರೋನಾ ಏನೂ ಇಲ್ಲಾ ಇದೆಲ್ಲವೂ ಈ ಭ್ರಷ್ಟ ರಾಜಕಾರಣಿಗಳು ದುಡ್ಡು ಹೊಡೆಯುವ ಹುನ್ನಾರದ ಭಾಗ ಎನ್ನುವವರಿಗೆ, ಕಬ್ಬು ತಿಂದವರಿಗೆ ಮಾತ್ರವೇ ರುಚಿ ಗೊತ್ತಾಗುತ್ತದೆ ಎನ್ನುವಂತೆ ಕೊರೋನಿಂದ ಭಾಧಿತರಾದವರಿಗೆ ಮಾತ್ರವೇ ಅದರ ಅನುಭವ ಗೊತ್ತಿರುತ್ತದೆ. ಖ್ಯಾತ ಕಲಾವಿದ ದಂಪತಿಗಳಾದ ಸುನೇತ್ರ ಮತ್ತು ಪಂಡಿತ್ ದಂಪತಿಗಳು ತಮ್ಮ ಕುಟಂಬಸ್ಥರನ್ನು ಕಳೆದುಕೊಂಡು ಮಾಧ್ಯಮದ ಮುಂದೆ ರೋಧಿಸಿದ ಪರಿ ನಿಜಕ್ಕೂ ಕರುಳು ಚುರಕ್ ಎನಿಸಿತ್ತು. ನಿಜ ಕೆಲವೊಂದು ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ಈ ಸಂಧರ್ಭದಲ್ಲಿಯೂ ಅಕ್ರಮ ಹಣವನ್ನು ಮಾಡಿರುವುದನ್ನು ಅಲ್ಲಗಳಿಯಲು ಆಗದಾದರೂ, ಇದೇ ಕಾರಣಕ್ಕೆ ಕೊರೋನಾನೇ ಇಲ್ಲ ಎಂದು ಹೇಳಲಾಗದು.ನಿಜ ಹೇಳ ಬೇಕೆಂದರೆ ಈ ಕೊರೋನ ಅಸ್ತಿ ಅಂತಸ್ತು ಅಧಿಕಾರ ನೋಡಿ ಕೊಂಡು ಬರೋದಿಲ್ಲ . ಈಗಾಗಲೇ ಹೆಸರಾಂತರ ಕಲಾವಿದರು, ರಾಜಕಾರಣಿಗಳು, ಕೇಂದ್ರ ಸಚಿವರು, ಸಂಸದರು,ಹಿರಿಯ ಗಣ್ಯರು, ಅಧಿಕಾರಿಗಳು, ವೈದ್ಯರುಗಳು, ಜನಸಾಮಾನ್ಯರು ಹೀಗೆ ಯಾವ ವರ್ಗವೆಂಬ ತಾರತಮ್ಯವಿಲ್ಲದೇ, ಈ ಕೊರೋನಾ ಮಾಹಾಮಾರಿಗೆ ಬಲಿಯಾಗಿದ್ದಾರೆ.ಬೆಂಗಳೂರಿನ ವಿದ್ಯಾರಣ್ಯಪುರದ ಬಳಿಯ ಲಕ್ಷ್ಮೀಪುರ ಮೇಡಿ ಅಗ್ರಹಾರ ವಿದ್ಯುತ್ ಚಿತಾಗಾರದಲ್ಲಿ ಸಾಲುಗಟ್ಟಿ ನಿಂತಿರುವ ಕೊರೋನದಿಂದ ಮೃತಪಟ್ಟ ಶವಗಳು ಸಾಲು ನೋಡಿದರೇ ಸಾಕು ಕೊರೋನ‌ ತೀವ್ರತೆಯ ಅನುಭವಾಗುತ್ತದೆ. ಸಾಧಾರಣ ದಿನಗಳಲ್ಲಿ ಮೂರ್ನಾಲ್ಕು ಶವಗಳು ಬರುತ್ತಿದ್ದ ಸ್ಮಶಾನದಲ್ಲಿ ಈಗ ಪ್ರತೀ‌ ದಿನವೂ 25-30ರ ವರೆಗೆ ಬಂದು ಆಂಬ್ಯುಲೆನ್ಸ್ ಸಾಲು ಸಾಲಾಗಿ ನಿಂತಿರುವ ಹೃದಯವಿದ್ರಾವಕ ದೃಶ್ಯ ಮನಕಲಕಿಸುತ್ತದೆ.ಲಾಕ್ಡೌನ್ ಸ್ಪಲ್ಪ ಸಡಿಲಗೊಳಿಸಿದ ತಕ್ಷಣ, ಮನೆ ಮಠ ಬಿಟ್ಟು ತನ್ನ ಗಡ್ಡ ಕೆರ್ಕೊಂಡು ಸಿನಿಮಾ ಅಂತ ಮಠ ಚಲನಚಿತ್ರದ ಖ್ಯಾತಿಯ ಗುರುಪ್ರಸಾದ್ ಹುಚ್ಚು‌ ಕುದುರೆ ತರಹಾ ಎಲ್ಲೆಂದರಲ್ಲಿ ಸ್ವಚ್ಚಂದವಾಗಿ ಬೀದಿ ಬೀದಿ ಸುತ್ತಾಡಿ ಕೊರೋನ ಹತ್ತಿಸಿಕೊಂಡು ಈಗ ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಅಂತ ರಾಜ್ಯ ಸರ್ಕಾರವನ್ನು ತೆಗಳುತ್ತಾ ತನ್ನ ಸಾವಿಗೆ ಸರ್ಕಾರವೇ ಕಾರಣ ಎಂಬ ವರಾತ ತೆಗೆದರೆ ಯಾವುದೇ ಪ್ರಯೋಜನ ಆಗದು. ಸುಮ್ಮನೇ ಸರ್ಕಾರ ಹೇಳಿದ ಹಾಗೆ ಮಾಸ್ಕ್ ಹಾಕ್ಕೊಂಡು, ಸಾಮಾಜಿಕ ಅಂತರ ಕಾಪಾಡಿಕೊಂಡಿದ್ರೇ ಈತನಿಗೆ ಕೊರೋನಾ ಬರ್ತಿತ್ತಾ?ದೇಶದ ಜವಾಬ್ದಾರಿಯುತ ನಾಗರೀಕರಾಗಿ ವಯಕ್ತಿವಾಗಿ ಕೆಲವೊಂದು ನೀತಿ ನಿಯಮಗಳನ್ನು ಮತ್ತು ಅನುಶಾಸನಗಳನ್ನು ಸ್ವಯಂ ಪಾಲಿಸಲೇ ಬೇಕಾಗುತ್ತದೆ

 • ಸರ್ಕಾರ ಲಾಕ್ಡೌನ್ ಮಾಡುತ್ತದೆಯೋ ಬಿಡುತ್ತದೆಯೋ, ದಯವಿಟ್ಟು ಇನ್ನೂ ಕೆಲ ಕಾಲ ಸ್ವಯಂ ಲಾಕ್ ಡೌನ್ ಒಳಗಾಗಿ ಮನೆಯಲ್ಲಿಯೇ ಸುರಕ್ಷಿತವಾಗಿ ಇರೋಣ.
 • ನಮ್ಮ ನಮ್ಮ ವಯಸ್ಸಿನ ಅನುಗುಣವಾಗಿ ಎರಡೂ ಬಾರಿ ಖಡ್ಡಾಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳೋಣ.
 • ಒಂದಷ್ಟು ದಿನ ಸಭೆ, ಸಮಾರಂಭ, ಮದುವೆ ಮುಂಜಿ, ನಾಮಕರಣ ಮುಂತಾದ ಹೆಚ್ಚು ಜನರು ಸೇರುವಲ್ಲಿ ಹೋಗುವುದನ್ನು ಮುಂದು ಹಾಕೋಣ.
 • ಅನಗತ್ಯವಾಗಿ ಹೊರಗೆಲ್ಲೂ ಓಡಾಡದೇ, ಅನಿವಾರ್ಯವಾಗಿ ಹೊರಗೆ ಹೋಗಲೇ ಬೇಕಾದಲ್ಲಿ ಮೂಗು ಮುಚ್ಚುವಂತೆ ಮಾಸ್ಕ್ ಧರಿಸಿ ಓಡಾಡೋಣ ಮತ್ತು ಮನೆಗೆ ಬಂದ ತಕ್ಷಣ ಸಾಬೂನಿನಿಂದ ಕೈ ಕಾಲು ಮುಖವನ್ನು ತೊಳೆಯೋಣ.
 • ವಾರಕ್ಕೊಮ್ಮೆ ಪ್ರಾರ್ಥನೆ, ದೇವಸ್ಥಾನ, ಚರ್ಚ್ ಮಸೀದಿ ಎಂದು ತೀರ್ಥಕ್ಷೇತ್ರ, ಜಾತ್ರೆ, ಕುಂಭಮೇಳ ಎಂದು ಎಲ್ಲಿಗೂ ಹೋಗದೇ, ಸದ್ಯದ ಪರಿಸ್ಥಿತಿಯಲ್ಲಿ ಸರ್ವಾಂತರ್ಯಾಮಿಯಾದ ಭಗವಂತನನ್ನು ಮನೆಯಿಂದಲೇ ಪ್ರಾರ್ಥಿಸೋಣ.
 • ಸಾಧ್ಯವಾದಷ್ಟೂ ಹೊರಗಡೆಯ ತಿಂಡಿ ತೀರ್ಥಗಳನ್ನು ಸೇವಿಸುವುದನ್ನು ನಿಲ್ಲಿಸೋಣ.
 • ಆದಷ್ಘೂ ಬಿಸಿ ನೀರು ಮತ್ತು ಬಿಸಿಬಿಸಿಯಾದ ಆಹಾರವನ್ನು ಅಚ್ಚುಕಟ್ಟಾಗಿ ಮನೆಯಲ್ಲಿಯೇ ಮಾಡಿಕೊಂಡು ಸೇವಿಸೋಣ.
 • ಮೆಣಸು, ಜೀರಿಗೆ, ಅರಿಶಿನ, ಚಕ್ಕೆ, ಕರಿಬೇವು, ದನಿಯಾ ಮುಂತಾದವುಗಳಿಂದ ತಯಾರಿಸಿದ ಕಷಾಯವನ್ನು ಆಗ್ಗಾಗ್ಗೆ ಸೇವಿಸುವ ಮೂಲಕ ಕೊರೋನಾ ಸೋಂಕು ನಮಗೆ ತಗುಲಿದ್ದರೂ ಅದು ನಾಶವಾಗುವಂತೆ ನೋಡಿಕೊಳ್ಳೋಣ.
 • ಸರ್ಕಸ್, ಸಿನಿಮಾ, ನಾಟಕ ಮತ್ತು ಪ್ರವಾಸಗಳನ್ನು ಕೆಲ ದಿನಗಳ ಕಾಲ ಮುಂದೂಡಿದರೆ ಜಗತ್ ಪ್ರಳಯವೇನೂ ಆಗದು ಎಂಬುದು ತಿಳಿದಿರಲಿ.
 • ಸರ್ಕಾರಕ್ಕೂ ಈ ಮೊದಲು ದೂರಲು ಚೀನ ದೇಶವಿತ್ತು, ತಬ್ಲೀಗ್ ಗಳು ಇದ್ದರು. ಆದರೆ ಈ ಬಾರೀ ಆ ಕಾರಣಗಳು ಯಾವುವೂ ಇಲ್ಲ. ಈ ಬಾರಿ ತಪ್ಪೆಲ್ಲಾ ನಮ್ದೇ.
 • ನುಡಿದಂತೆ ನಡೆ. ನಡೆಯುವುದಕ್ಕೆ ಆಗುವುದನ್ನೇ ನುಡಿ ಎನ್ನುವಂತೆ Rules is a rules even for fools ಎನ್ನುವಂತೆ ಮುಖಾಮೂತಿ ನೋಡದೇ, ಬಡವ, ಬಲ್ಲಿದ, ರಾಜಕಾರಣಿ, ಮಠಾಧಿಪತಿ, ಮೌಲ್ವಿ ಅಥವಾ ಪಾದ್ರಿ ಎನ್ನುವ ತಾರತಾಮ್ಯವಿಲ್ಲದೇ ತಪ್ಪು ಮಾಡಿದವರಿಗೆಲ್ಲರಿಗೂ ಶಿಕ್ಷೆಯಾಗಲಿ.
 • ಹಾಗೆಂದ ಮಾತ್ರಕ್ಕೆ ಶಿಕ್ಷೆಯೇ ಪರಮೋಚ್ಚ ಗುರಿಯಾಗಿರದೇ, ಸಮಾಜವನ್ನು ಸರಿ ದಾರಿಗೆ ಕರೆದುಕೊಂಡು ಹೋಗುವ ಗುರುತರ ಜವಾಬ್ದಾರಿ ಸರ್ಕಾರದ್ದೇ ಆಗಿರುತ್ತದೆ.
 • ಥೂ! ಈ ಸರ್ಕಾರ ಸರೀ ಇಲ್ಲಾ, ಈ ಜನಾನೇ ಸರಿ ಇಲ್ಲಾ! ಕೊರೋನಾನೇ ಇಲ್ಲ ಎಂದು ವಿತಂಡ ವಾದ ಮಾಡುತ್ತಾ ಸಮಾಜವನ್ನು ದೂರುವುದನ್ನು ಬಿಟ್ಟು ಸ್ವಯಂ ನಿರ್ಬಂಧ ಹೇರಿಕೊಂಡು ಸುರಕ್ಷಿತವಾಗಿರೋಣ.

ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲಾ ವೆಂಟಿಲೇಟರ್ಗಳಿಗೆ ಬರ ಎಂದ ಬೀದಿ ಬೀದಿಗಳಲ್ಲಿ ಬಾಯಿ ಬಡಿದುಕೊಳ್ಳುವ ಬದಲು ಸರ್ಕಾರ ಹೇಳಿದ ಹಾಗೆ ಮಾಸ್ಕ್ ಹಾಕ್ಕೊಂಡ್ ಸಾಮಾಜಿಕ ಅಂತರ ಕಾಪಾಡಿಕೊಂಡ್ರೇ ಈ ರೀತಿಯಲ್ಲಿ ಬಾಯಿ ಬಡಿದುಕೊಳ್ಳಬೇಕಾದ ಪರಿಸ್ಥಿತಿ ಇರ್ತಿರ್ಲಿಲ್ಲಾ ಅಲ್ವೇ?ಈ ಲೇಖನ ಕೇವಲ ಓದುಗರನ್ನು ಹೆದರಿಸುವುದಕ್ಕೆ ಆಗಲೀ ಸರ್ಕಾರದ ಪರ ಅಥವಾ ವಿರೋಧವಾಗಿರದೇ, ಜನರಿಗೆ ಎಚ್ಚರಿಕೆಯ ಗಂಟೆಯಾಗಿದೆ. ನಾನಾ ಕಾರಣಗಳಿಂದ ಕೊರೋನ ಸೋಂಕಿತರಾಗಿ ಸೂಕ್ತ ಚಿಕಿತ್ಸಾ ವಿಧಾನಗಳಿಂದ ಗುಣಮುಖರಾದ ಸಂಖ್ಯೆಯೂ ಲಕ್ಷಾಂತರವಿದೆ.ಜೀವ ಇದ್ರೇ ಮಾತ್ರ ಜೀವನ. ಸುರಕ್ಷಿತವಾಗಿ ಇದ್ದರೆ ಬರೋದಿಲ್ಲ ಕೊರೋನ ಎನ್ನುವು್ಉ ಮಾತ್ರವೇ ಸತ್ಯ. ಮೊದಲನೆಯ ಸಲಾ ತಪ್ಪು ಮಾಡಿದರೆ ಕ್ಷಮೆ ಇರುತ್ತದೆ ಆದರೆ ಎರಡನೆಯ ಸಲಾ ಅದೇ ತಪ್ಪು ಮಾಡಿದರೆ ಅದು ಅಕ್ಷಮ್ಯ ಅಪರಾಧವಾಗುತ್ತದೆ. ಹಾಗಾಗಿ ಈ ಸಲ ನಮ್ಮಿಂದ ತಪ್ಪಾಗುವುದು ಬೇಡ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಕೂರೋನ ಇನ್ನೆಷ್ಟೂ ಅಂತಾ ಮನೆಯೊಳಗೇ ಕೂರೋಣಾ?

ಚೀನಾದ ದೇಶದ ವುಹಾನ್ ಪಟ್ಟಣದಲ್ಲಿ ಬಾವಲಿಗಳಿಂದ ಮೊದಲು ಕಾಣಿಸಿಕೊಂಡ ಕೂರೋನ ಎಂಬ ಮಹಾಮಾರಿ ಸೋಂಕು ನೋಡ ನೋಡುತ್ತಿದ್ದಂತೆಯೇ ಕೆಲವೇ ಕೆಲವು ದಿನಗಳಲ್ಲಿ ಪ್ರಪಂಚಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಸೋಂಕು ನಮ್ಮ ದೇಶದಲ್ಲಿ ಹರಡಬಾರದೆಂಬ ಮುಂಜಾಗೃತಾ ಕ್ರಮವಾಗಿ ಆರಂಭದಲ್ಲಿ ಏಪ್ರಿಲ್ 14 ರವಗೆ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿ, ಪರಿಸ್ಥಿತಿ ಸುಧಾರಿಸದ ಕಾರಣ ಅದನ್ನು ಎರಡನೆಯ ಬಾರಿಗೆ ಮೇ 3 ರವರೆಗೆ ವಿಸ್ತರಿಸಲಾಗಿದೆ. ಈಗ ಬಲ್ಲ ಮೂಲಗಳಿಂದ ತಿಳಿದ ಬಂದ ವರದಿಯ ಪ್ರಕಾರ ಮೂರನೇ ಬಾರಿಗೂ ಲಾಕ್ ಡೌನ್ ವಿಸ್ತರಿಸುವ ಎಲ್ಲಾ ಸಾಧ್ಯತೆಗಳೂ ಹೆಚ್ಚ್ಆಗಿದೆ. ಇಂತಹ ಲಾಕ್ ಡೌನ್, ದೇಶದ ಆರ್ಥಿಕ ಪರಿಸ್ಥಿತಿಯ ಜೊತೆ ಮಧ್ಯಮ ವರ್ಗದವರ ಮಾನಸಿಕ ಮನೋಬಲವನ್ನು ಹೇಗೆ ಕುಗ್ಗಿಸುತ್ತಿದೆ ಮತ್ತು ಮಧ್ಯಮವರ್ಗದವರ ಬವಣೆ ಏನು ಎಂಬುದನ್ನು ತಿಳಿಸುವ ಪ್ರಯತ್ನವೇ ಈ ಲೇಖನ.

ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 24 ರಂದು,21 ದಿನಗಳ ಕಾಲ ರಾಷ್ಟ್ರವ್ಯಾಪಿ ಲಾಕ್ ಡೌನ್ ಮಾಡಲು ಆದೇಶಿಸುವ ಒಂದು ವಾರದ ಮೊದಲೇ ಬಹುತೇಕ ಕಂಪನಿಗಳು ತಮ್ಮ ತಮ್ಮ ಕೆಲಸಗಾರರಿಗೆ ಮುಂಜಾಗ್ರತಾ ಕ್ರಮವಾಗಿ ಮನೆಯಿಂದಲೇ ಕೆಲಸ ಮಾಡಲು ತಿಳಿಸಿದ್ದರಿಂದ ಆರಂಭದಲ್ಲಿ ಎಲ್ಲರೂ ವಾರೆ ವಾಹ್! ಸದಾ ಕಾಲವೂ ಕೆಲಸ ಕೆಲಸ ಎಂದು ಮೂರು ಹೊತ್ತು ಮನೆಯ ಹೊರಗೇ ಕಾಲ ಕಳೆಯುತ್ತಿದ್ದಾಗ, ಈ ನೆಪದಲ್ಲಾದರೂ ಇಡೀ ದಿವಸ ಮನೆಯಲ್ಲಿಯೇ ಕುಟುಂಬಸ್ತರೆಲ್ಲರೂ ಕಾಲ ಕಳೆಯುವಂತಾಯಿತಲ್ಲಾ ಎಂದು ಸಂತೋಷ ಪಟ್ಟಿದ್ದು 100 ಕ್ಕೆ 100 ರಷ್ಟು ಸತ್ಯ.

ಪ್ರತೀ ದಿನ ಬೆಳಿಗ್ಗೆ ಹೊತ್ತಿಗೆ ಮುಂಚೆ ಎದ್ದು ಮನೆಯವರಿಗೆಲ್ಲರಿಗೂ ತಿಂಡಿ, ಊಟವನ್ನು ಒಂದೇ ಉಸಿರಿನಲ್ಲಿ ಮಾಡಿಟ್ಟು ಅವರು ಶಾಲಾ ಕಾಲೇಜು, ಕಛೇರಿಗಳಿಗೆ ಹೋದ ನಂತರ ತಮ್ಮ ನಿತ್ಯಕರ್ಮಾದಿಗಳನ್ನು ಮುಗಿಸುವಷ್ಟರಲ್ಲಿ ಪುನಃ ರಾತ್ರಿಯ ಊಟದ ವ್ಯವಸ್ಥೆ ಮಾಡುವುದರಲ್ಲಿಯೇ ಸರಿಹೋಗುತ್ತಿದ್ದ ಬಹುತೇಕ ಗೃಹಿಣಿಯರಿಗೆ ಈಗ ಸ್ವಲ್ಪ ನೆಮ್ಮದಿ ತಂದಿತ್ತು. ಎಲ್ಲರೂ ಮನೆಯಲ್ಲಿಯೇ ಇರುವುದರಿಂದ ಆರಾಮಾಗಿ ಎದ್ದು ಬೆಳಿಗ್ಗೆ ತಿಂಡಿ ಮಧ್ಯಾಹ್ನ ಊಟ, ಸಂಜೆ ಲೋಕಾಭಿರಾಮವಾಗಿ ಹರಟುತ್ತಾ ಕುರುಕಲು ತಿಂಡಿಯ ವ್ಯವಸ್ಥೆ ಇನ್ನು ರಾತ್ರಿ ಅಲ್ಪಾಹಾರ ಮಾಡಿದರೆ ಸಾಕು ಎಂದು ಆರಂಭದಲ್ಲಿ ಅಂದುಕೊಂಡರೂ ನಂತರ ಮನೆಯವರೆಲ್ಲರನ್ನೂ ಸಂತೋಷ ಪಡಿಸಲೆಂದೇ, ಪ್ರತೀ ದಿನ ಹೊಸ ಹೊಸ ರೀತಿಯ ಬಗೆ ಬಗೆಯ ತಿಂಡಿಗಳು, ಭಕ್ಷ ಭೋಜನಗಳು, ವಾರಾಂತ್ಯಗಳಲ್ಲಿ ಮಾತ್ರವೇ ತಿನ್ನುತ್ತಿದ್ದ ಬಜ್ಜಿ, ಬೋಂಡಾ, ಚಾಟ್ಸಗಳು, ಕೇಕ್ ಐಸ್ ಕ್ರೀಂ ಹೀಗೆ ಎಲ್ಲವನ್ನೂ ಪ್ರತೀ ದಿನ ಸಂಜೆ ಮನೆಯಲ್ಲಿಯೇ ಮಾಡಿ ಮನೆಯವರೆಲ್ಲರ ಮೆಚ್ಚುಗೆಗೆ ಪಾತ್ರರಾದರು.

WhatsApp Image 2020-04-26 at 10.40.09 AMಹೇ! ಮಡದಿಯೇ ಇಷ್ಟೋಂದನ್ನು ಮಾಡುತ್ತಿರುವಾಗ ನಾವೆಲ್ಲಾ ಸುಮ್ಮನಿದ್ದರೆ ಹೇಗೆ ಎಂದು ಭಾವಿಸಿದ ಗಂಡಸರಾದಿಯಾಗಿ ಮನೆಮಂದಿಯೆಲ್ಲಾ ಆರಂಭದಲ್ಲಿ ಅಡುಗೆ ಮನೆಯಲ್ಲಿ , ಮನೆ ಕೆಲಸಗಳಲ್ಲಿ ಸಹಾಯ ಮಾಡ ತೊಡಗಿದರು. ಇದೆಲ್ಲಾ ಒಂದೆರಡು ವಾರಗಳ ಮಟ್ಟಿಗೆ ಎಂದು ಭಾವಿಸಿ ಆರಂಭದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತಾದರೂ, ಕ್ರಮೇಣವಾಗಿ ಲಾಕ್ ಡೌನ್ ಕಾಲ ಕಾಲಕ್ಕೆ ವಿಸ್ತರಣೆಯಾಗುತ್ತಾ ಹೋದಂತೆಲ್ಲಾ ಎಲ್ಲರೂ ಭ್ರಮನಿರಸವಾಗತೊಡಗಿದರು.  ಹೇಗೋ ಗಂಡಾ ಎನ್ನುವ ಪ್ರಾಣಿ ಮನೆಯಲ್ಲಿದ್ದಾನಲ್ಲಾ ಅವನೇ ಮಾಡಲಿ ಎಂದು ಹೆಂಡತಿ, ಅರೇ ನಾನು ಕಛೇರಿಯ ಕೆಲಸ ಮಧ್ಯೆ ಸಹಾಯ ಮಾಡಿದರೇ ಕಡೆಗೆ ಇದು ನನ್ನದೇ ಕೆಲಸವಾಯಿತಲ್ಲಾ ಎಂದು ಗಂಡ ಭಾವಿಸತೊಡಗಿದಂತೆಯೇ ಗಂಡ ಹೆಂಡಿರ ಮಧ್ಯೆ ಸಣ್ಣದಾದ ವಿರಸ ತೋರತೊಡಗಿತು

ಇನ್ನು ಕಛೇರಿಯಲ್ಲೂ ಇದಕ್ಕಿಂತಲೂ ಭಿನ್ನವಾಗಿರಲಿಲ್ಲ. ನಾಡಿನಾದ್ಯಂತ ಲಾಕ್ ಡೌನ್ ಇದ್ದರೂ ಕೆಲವರು ಅದೇನು ಮಾಡುತ್ತೀಯೋ ಗೊತ್ತಿಲ್ಲ. ನನ್ನ ಕೆಲಸವಾಗಿಯೇ ಬಿಡಬೇಕು. ಈ ಕೆಲಸ ಇಂದೇ ಆಗದಿದ್ದಲ್ಲಿ ಕಂಪನಿಗೆ ಲಕ್ಷಾಂತರ ರೂಪಾಯಿಗಳ ನಷ್ಟವಾಗುತ್ತದೆ ಎಂದು ಭಯ ಹುಟ್ಟಿಸುವುದಲ್ಲದೇ, ಅವರಿಗೆ ಹೇಳುತ್ತೇನೆ. ಇವರಿಗೆ ಹೇಳುತ್ತೇನೆ ಎಂದು ಗೊಡ್ಡು ಬೆದರಿಕೆಯನ್ನೂ ಹಾಕತೊಡಗಿದರು. ಸರಿ ಅವರಿಗೆ ಸಹಾಯ ಮಾಡಲೆಂದು ನಿರ್ಧರಿಸಿ ಎಲ್ಲಾ ಸಹೋದ್ಯೋಗಿಗಳನ್ನು ಕರೆದು ಈ ಕೆಲಸ ಆಗಬೇಕು ಎಂದು ಕೇಳಿಕೊಂಡರೇ, ನಮಗೂ ಹೆಂಡ್ತಿ ಮಕ್ಕಳು ಇದ್ದಾರೆ ಸಾರ್. ನಾವು ಆಫೀಸಿಗೆ ಬಂದು ನಮಗೆ ಹೆಚ್ಚು ಕಡಿಮೆ ಆದ್ರೇ ನಮ್ಮನ್ನು ಯಾರು ನೋಡ್ಕೋತಾರೆ ಸಾರ್ ಎನ್ನುವ ಅಸಹಕಾರ. ಇದೊಂದು ರೀತಿಯ ಅತ್ತ ದರಿ ಇತ್ತ ಪುಲಿ ಎನ್ನುವ ಉಭಯ ಸಂಕಟ.

house_arrest2ರೀ ಇದೊಂದು ಸ್ವಲ್ಪ ಮಾಡ್ತೀರಾ? ಕೆಲಸದವಳು ಬಂದಿಲ್ಲಾ ನೋಡಿ ಹೋರಗೆ ನಾನು ರಂಗೋಲಿ ಹಾಕಿ ಬರೋಷ್ಟರಲ್ಲಿ ನೀವು ಮನೆ ಕಸ ಗುಡಿಸಿ ಓರಿಸಿ ಬಿಡಿ. ಓಲೆ ಮೇಲೆ ಸಾರು ಕುದ್ದಿದ್ರೇ ಸ್ವಲ್ಪ ಆರಿಸಿ ಬಿಡಿ. ಮಳೆ ಬರೋಹಾಗಿದೆ ಮೇಲೆ ಒಣಗಿ ಹಾಕಿರೋ ಬಟ್ಟೆ ತರ್ತೀರಾ, ಉಫ್!! ಒಂದೇ ಎರಡೇ ಕುದುರೆ ಕಂಡ್ರೇ ಕಾಲು ನೋವು ಅನ್ನೋ ಹಾಗೆ ಎಲ್ಲಾ ಕೆಲಸಗಳನ್ನೂ ಸುಲಭವಾಗಿ ಹೇರ ತೊಡಗಿದ್ದಂತೂ ಸುಳ್ಳಲ್ಲ. ಇನ್ನು ಮಕ್ಕಳೋ, ಅಪ್ಪಾ ನನ್ನ online assignmentಗೆ ಸ್ವಲ್ಪ ಸಹಾಯ ಮಾಡ್ತೀರಾ ಅಂತ ಮತ್ತೊಂದು ಕಡೆ. ಅಲ್ರೋ.. ನಾನೇನು ಸುಮ್ಮನೆ ಕೂತ್ಕೊಂಡು ಮಜಾ ಮಾಡ್ತಾ ಇದ್ದೀನಾ? ಆಫೀಸ್ ಕೆಲ್ಸ ಮಾಡ್ತಾ ಇಲ್ವಾ ಅಂದ್ರೇ ಸಾಕು. ಸಾಕು ಸುಮ್ನಿರಿ. ನಾನೂ ನೋಡ್ತಾ ಇದ್ದೀನಿ ನೀವು ಕೆಲಸ ಮಾಡೋದನ್ನ. OK Ok. I know, i am on it. i will post you an update ಅಂತಾ ಹೇಳೋದು ಒಂದು ಕೆಲಸಾನಾ ಅಂತಾ ಮಕ್ಕಳು ರೇಗಿಸಿದರೇ, ಅವ್ಯಾವನೋ ಹೇಳ್ದ್ರೇ, ಬಾಯಿ ಮುಚ್ಕೊಂಡು ಕೆಲ್ಸಾ ಮಾಡ್ತೀರೀ? ಮನೆ ಕೆಲ್ಸ ಅಂದ್ರೇ ನಿಮ್ಗೆ ತಾತ್ಸಾರನಾ?. ಅಂತಾ ಮನೆಯಾಕಿಯ ಮೂದಲಿಕೆ.

ಸಾಕಪ್ಪಾ ಸಾಕು ಈ ರೀತಿಯ ಅಪಮಾನ ಮತ್ತು ಅವಮಾನ. ಸುಮ್ಮನೆ ಬೆಳಗ್ಗೆ ಎದ್ದು ಸ್ವಲ್ಪ ವ್ಯಾಯಾಮ ಮಾಡಿ ಸ್ನಾನ ಸಂಧ್ಯಾವಂದನೆ ಮುಗಿಸಿ ತಿಂಡಿ ತಿಂದು ಆಫೀಸಿಗೆ ಹೋಗಿ ಅಲ್ಲಿ ನೆಮ್ಮದಿಯಾಗಿ ಕೆಲಸ ಮಾಡುತ್ತಾ, ಮಧ್ಯಾಹ್ನ ಊಟ, ಹೊತ್ತೊತ್ತಿಗೆ ಟೀ ಕಾಫಿ ಬ್ರೇಕ್ ತೆಗೆದುಕೊಳ್ಳುತ್ತಾ ಸಂಜೆ ಉಸ್ಸಪ್ಪಾ ಎಂದು ಮನೆಗೆ ಬಂದು ಕೈಕಾಲು ತೊಳೆದು ಮಡದಿ ಕೊಟ್ಟಿದ್ದನ್ನು ತಿಂದು, ಸ್ವಲ್ಪ ಹೊತ್ತು ಟಿವಿ ನೋಡಿ ಕಣ್ತುಂಬ ನಿದ್ದೆ ಮಾಡ್ತಾ, ಇನ್ನೂ ವಾರಾಂತ್ಯದಲ್ಲಿ ಹೊರಗೆಲ್ಲೋ ತಿರುಗಾಡಿ, ಮನೆ ಮಂದಿಯ ಜೊತೆ ಸಂತೋಷವಾಗಿ ಸಿನಿಮಾ ಇಲ್ಲವೇ ಊಟ/ತಿಂಡಿ ಮಾಡ್ಕೊಂಡು ನೆಮ್ಮದಿಯಾಗಿದ್ವಿ. ಈಗ ನೋಡಿದ್ರೇ ಇಪ್ಪತ್ನಾಲ್ಕು ಗಂಟೆನೂ ಮನೆಯಲ್ಲಿಯೇ ನಾಲ್ಕು ಗೋಡೆಗಳ ಮಧ್ಯೆ ಇರೋದು ತುಂಬಾನೇ ಬೇಜಾರಾಗಿ ಹೋಗಿದೆ.

ನಿಜ ಹೇಳ್ಬೇಕೂ ಅಂದ್ರೇ ಅತಿ ಕಡು ಬಡವರು, ದಿನ ನಿತ್ಯದ ಕೂಲಿ ಮಾಡಿ ಕೊಂಡು ಜೀವ ನಡೆಸುತ್ತಿರುವವರಿಗೆ, ಸರ್ಕಾರ, ವಿವಿಧ ರಾಜಕೀಯ ಪಕ್ಷಗಳು ಮತ್ತು ನಾನಾ ರೀತಿಯ ಸ್ವಯಂಸೇವಾ ಸಂಸ್ಥೆಗಳು ಉಚಿತವಾಗಿ ದವಸ ಧಾನ್ಯಗಳನ್ನು ಮನೆಯ ಬಾಗಿಲಿಗೇ ತಂದು ಕೊಡ್ತಾ ಇದ್ದಾರೆ. ಅವರೆಲ್ಲರೂ ಹೊಟ್ಟೆ ತುಂಬಾ ಊಟ ಮಾಡ್ತಾ ನಾಳೆಯ ಚಿಂತೆ ಇಲ್ಲದೇ ನೆಮ್ಮದಿಯಾಗಿದ್ದಾರೆ.

ಇನ್ನೂ ಸಾಹುಕಾರರು ಮತ್ತು ರಾಜಕಾರಣಿಗಳಿಗೆ ಈ ಲಾಕ್ ಡೌನ್ ಪ್ರಭಾವವೇ ಬೀರ್ತಾ ಇಲ್ಲ. ಅವರ ಮನೆಗಳಲ್ಲಿ ಎಲ್ಲವೂ ಯಥಾ ಸ್ಥಿತಿಯಲ್ಲಿಯೇ ನಡೆದುಕೊಂಡು ಹೋಗುತ್ತಿದೆ. ಅವರ ಮನೆಯ ಮದುವೆ, ಮುಂಜಿ, ನಾಮಕರಣ, ಹುಟ್ಟು ಹಬ್ಬ ಇದ್ಯಾವುದೋ ನಿಂತಿಲ್ಲ. ಲೋಕದ ಕಣ್ಣಿಗೆ ಮೂವತ್ತು ಜನಾ ಅಂತ ತಿಪ್ಪೇ ಸಾರಿಸಿ ಮುನ್ನೂರು ಜನ ಎಗ್ಗಿಲ್ಲದೇ ಸಂಭ್ರಮಿಸ್ತಾ ಇದ್ದಾರೆ.

WhatsApp Image 2020-04-26 at 11.47.04 AMಅದ್ರೇ ನಿಜವಾದ ಕಷ್ಟ ಇರೋದೇ ನಮ್ಮಂತಹ ಮಧ್ಯಮವರ್ಗದವರಿಗೆ. ಕಷ್ಟದ ಸಮಯದಲ್ಲಿ ಆಗಲಿ ಅಂತಾ ಅಷ್ಟೋ ಇಷ್ಟೋ ಕೂಡಿಟ್ಟ ಹಣ ಎಲ್ಲವೂ ಖರ್ಚಾಗಿ ಹೋಗುತ್ತಿದೆ. ಮನೇಲಿ ತಿನ್ನೋದಿಕ್ಕೆ ಇಲ್ಲಾ ಅಂತಾ ಯಾರ ಹತ್ರಾನೂ ಬೇಡಿ ತಿನ್ನೋಕೆ ಮನಸ್ಸು ಬರೋದಿಲ್ಲ. ಇನ್ನೂ ಮರ್ಯಾದೆ ಬಿಟ್ಟು ನಮ್ಗೂ ಕಷ್ಟ ಆಗಿದೆ ಸ್ವಲ್ಪ ದವಸ ಧಾನ್ಯ ಕೊಡಿ ಅಂತಾ ಕೇಳಿದ್ರೇ, ನಿಮಗೇನ್ರೀ ಕಷ್ಟ? ಕಾರು, ಬಂಗಲೆ ಎಲ್ಲಾ ಇದೆ ಅಂತಾರೆ. ಆದ್ರೇ ಅವೆಲ್ಲವೂ ಸಾಲದ ಕಂತಿನಲ್ಲಿ ತೆಗೆದುಕೊಂಡಿದ್ದು. ಎರಡು ತಿಂಗಳು ಕಂತು ಕಟ್ಟಿಲ್ಲಾ ಅಂದ್ರೇ ಎಲ್ಲಾ ಮುಟ್ಟು ಗೋಲು ಹಾಕ್ಕೊಂಡು ಬೀದಿ ಪಾಲು ಮಾಡ್ತಾರೇ ಎನ್ನುವ ಕಠು ಸತ್ಯವನ್ನು ಅವರ ಬಳಿ ಹೇಳ್ಕೊಳ್ಳೋದಿಕ್ಕೆ ಆಗೋದಿಲ್ಲ ಅಲ್ವೇ? . ಇನ್ನು ಸಾಲ ಸೋಲ ಮಾಡೋಣ ಅಂದ್ರೇ, ಸಾಲ ಕೋಡೋರು ಯಾರೂ ಇಲ್ಲ. ಒಂದು ಪಕ್ಷ ಸಾಲ ಸಿಕ್ಕರೂ ಅದನ್ನು ತೀರ್ಸೋದು ಹೇಗಪ್ಪಾ ಅನ್ನೋ ಚಿಂತೆ. ಯಾಕೆಂದ್ರೇ, ಈಗಾಗಲೇ ಹಲವಾರು ಕಂಪನಿಗಳು ಆರ್ಥಿಕ ಪರಿಸ್ಥಿತಿಯ ನೆಪವೊಡ್ಡಿ ಈ ಪರಿಸ್ಥಿತಿಯ ದುರ್ಲಾಭ ಪಡೆದುಕೊಂಡು ತಮ್ಮ ಕೆಲಸಗಾರರನ್ನು ತೆಗೆದು ಹಾಕ್ತಾ ಇದ್ದಾರೆ. ಇಲ್ವೇ, ಕೊಡೋ ಸಂಬಳಕ್ಕೂ ಕತ್ತರಿ ಹಾಕುವ ಮುನ್ಸೂಚನೆ ತೋರಿಸ್ತಾ ಇದ್ದಾರೆ. ಈಗ ಬರ್ತಾ ಇರೋ ಸಂಬಳವನ್ನು ನೆಚ್ಚಿಕೊಂಡೇ, ನಮ್ಮ ಜೀವನ ಶೈಲಿ ರೊಡಿಸಿಕೊಂಡಿರುವ ಮಧ್ಯಮವರ್ಗದವರಿಗೆ ಅದರಲ್ಲಿ ಅಲ್ಪ ಸ್ವಲ್ಪ ಬದಲಾವಣೆಯಾದ್ರೂ ತುಂಬಾನೇ ಕಷ್ಟ ಆಗುತ್ತದೆ.

house3ಹಾಗಾಗಿ ಕೂರೋನಾ ಅಂತಾ ಇನ್ನೆಷ್ಟು ದಿನಾ ಮನೆಲಿ ಕೂರೋಣ? ಅಂತ ಎಲ್ಲರಿಗೂ ಅನ್ನಿಸಿರುವುದಂತೂ ಸುಳ್ಳಲ್ಲ. ಪ್ರಧಾನಿಗಳ ಮಾತಿಗೆ ಗೌರವ ನೀಡಿ ಸುಮಾರು ಒಂದೂವರೆ ತಿಂಗಳು ಮನೆಯಲ್ಲಿ ಇದ್ದದ್ದು ಸಾಕಾಯ್ತು. ಇನ್ನೇನಿದ್ರೂ ಸ್ವಲ್ಪ ಸ್ವಾರ್ಥಿಗಳಾಗಿ ನಾವು ನಮ್ಮ ಕುಟುಂಬ ಅಂತಾ ಜೀವನ ನೋಡ್ಕೋ ಬೇಕಾಗಿದೆ. ದೇಶವ್ಯಾಪಿ ಲಾಕ್ ಡೌನ್ ಮಾಡಿ, ಮನೆ ಮನೆಯಿಂದ ಹೊರಗೆ ಬರ್ಬೇಡಿ ಅಂತಾ ಪರಿ ಪರಿಯಾಗಿ ಕೇಳ್ಕೊಂಡ್ರೂ ಸುಮಾರು 15-20% ಜನಾ ಇದೆಲ್ಲಾ ನಮಗೆ ಅನ್ವಯಿಸೋದಿಲ್ಲಾ. ನಾವಿರೋದೇ ಹೀಗೆ ಅಂತಾ ತಿರ್ಗಾಡ್ತಾನೇ ಇದ್ದಾರೆ. ಕೊರೋನಾ ಹಬ್ಬಿಸ್ತಾನೇ ಇದ್ದಾರೆ. ದಿನದಿಂದ ದಿನಕ್ಕೆ ಸೋಂಕು ತಗುಲಿದವರ ಸಂಖ್ಯೆ ಇಳಿಮುಖ ಆಗೋದಕ್ಕಿಂತ ಹೆಚ್ಚಾಗ್ತಾನೇ ಇದೆ. ಹಾಗಾಗಿ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಏಕೆ ಬರೆ ಹಾಕ ಬೇಕು?. ಈ ರೋಗ ಎಲ್ಲೆಲ್ಲಿ, ಯಾರ್ಯಾರಿಗೆ ಬಂದಿದೆ ಅಂತಾ ಈಗ ಎಲ್ಲರಿಗೂ ತಿಳಿದಿದೆ. ಅಂತಹವರನ್ನೂ ಮತ್ತು ಆ ಪ್ರದೇಶಗಳನ್ನು ಸೀಲ್ ಡೌನ್ ಮಾಡಿ ಉಳಿದವರಿಗೆ ಸ್ವಲ್ಪ ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿ ಕೊಡುವಂತಾಗಬೇಕು.

ಈ ಮಹಾಮಾರಿ ಒಂದೆರಡು ತಿಂಗಳಲ್ಲಿ ಹೊರಟು ಹೋಗುತ್ತದೆ. ಆದಾದ ನಂತರ ನಮ್ಮೆಲ್ಲರ ಪರಿಸ್ಥಿತಿ ಸರಿದಾರಿಗೆ ಬರುತ್ತದೆ ಎನ್ನುವುದು ನೀರಿನ ಮೇಲಿನ ಗುಳ್ಳೆಯೇ. ಸರ್ಕಾರ ಏನೇನೇ ಕ್ರಮ ಕೈಗೊಂಡರೂ, ಪ್ರಪಂಚಾದ್ಯಂತ ಪರಿಸ್ಥಿತಿ ತಿಳಿಯಾಗುವುದಕ್ಕೆ ಕನಿಷ್ಟ ಪಕ್ಷ ಇನ್ನೂ ಮೂರ್ನಾಲ್ಕು ತಿಂಗಳು ಇಲ್ಲವೇ ಅದಕ್ಕಿಂತಲೂ ಹೆಚ್ಚೇ ಹಿಡಿಸಬಹುದು. ಅಲ್ಲಿಯವರೆಗೂ ಸಾರ್ವಜನಿಕ ಸಂಪರ್ಕ ಸಾಧನಗಳನ್ನು ನಿರ್ಭಂಧಿಸಿ ಎಲ್ಲರೂ ತಮ್ಮ ತಮ್ಮ ಖಾಸಗೀ ವಾಹನಗಳಲ್ಲಿ ತಮ್ಮ ನಗರದ ವ್ಯಾಪ್ತಿಯೊಳಗೆ Social distance ಪಾಲಿಸುತ್ತಾ ದಿನ ನಿತ್ಯದ ಕಾರ್ಯಗಳನ್ನು ಮಾಡಿಕೊಳ್ಳುವಂತಾಗ ಬೇಕು.

ಜಾತಸ್ಯ ಮರಣಂ ಧೃವಂ ಅಂದರೆ ಹುಟ್ಟಿದರು ಸಾಯಲೇ ಬೇಕು ಎಂಬುದು ಜಗದ ನಿಯಮ. ಹಾಗಾಗಿ ಸಾಯ್ಬೇಕು ಅಂತ ನಮ್ಮ ಹಣೆಲೇ ಬರ್ದಿದ್ರೇ, ಈ ರೀತಿ ಮನೆಯಲ್ಲಿಯೇ ಬಂಧಿಯಾಗಿ ನಿಧಾನವಾಗಿ ಮಾನಸಿಕವಾಗಿ ಜರ್ಜರಿತರಾಗಿ ಸಾಯುವ ಬದಲು ಸ್ವಚ್ಚಂದವಾಗಿ ತಿರ್ಗಾಡ್ತಾ ಸಾಯೋದೇ ಮೇಲು ಅಂತಾ ಬಹುತೇಕರಿಗೆ ಅನ್ನಿಸ್ತಾ ಇರೋದೋ ಸುಳ್ಳಲ್ಲ. ಶಿಕ್ಷೆಯ ರೂಪದಲ್ಲಿ ಗೃಹಬಂಧನದಲ್ಲಿ ಇರುವ ಅನೇಕ ಮಂದಿಗಳು ತಮ್ಮ ಅಳಲನ್ನು ತೋಡಿಕೊಳ್ಳುವುದನ್ನು ಟಿವಿಯಲ್ಲಿ ನೋಡಿದಾಗ ಮತ್ತು ವೃತ್ತ ಪತ್ರಿಕೆಯಲ್ಲಿ ಓದುವಾಗ, ಅರೇ ಇದೇನಪ್ಪಾ ಎಲ್ಲಾ ಸೌಲಭ್ಯಗಳೂ ಇದ್ಮೇಲೆ ಮನೆಯಲ್ಲಿ ಇರೋದಿಕ್ಕೆ ಇವರಿಗೇನು ಕಷ್ಟ ಅಂತಾ ಅನ್ಕೋತಾ ಇದ್ವೀ. ಈಗ ನಮಗೇ ಅದರ ಅನುಭವವಾಗುತ್ತಿದೆ. ಕಬ್ಬು ತಿಂದಾಗಲೇ, ಅದರ ರುಚಿ ಗೊತ್ತಾಗುವುದು ಅಲ್ಚೇ?

ಏನಂತೀರೀ?

ವಂಗ್ಯಚಿತ್ರ ಆತ್ಮೀಯ Ta Chi ಅವರಿಂದ ಎರವಲು ಪಡೆದದ್ದು. ಮಿಕ್ಕ ಪೋಟೋಗಳು ಅಂತರ್ಜಾಲದಿಂದ ನಕಲು ಮಾಡಿದೆ.