ವಯಸ್ಸಾದ ತಂದೆ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಗ, ಸೊಸೆ ಮತ್ತು ಕಾಲೇಜಿಗೆ ಹೋಗುತ್ತಿದ್ದ ಮೊಮ್ಮಗನಿದ್ದ ಅದೊಂದು ಸುಂದರ ಕುಟುಂಬ. ತಂದೆ-ಮಗ, ತಾತ-ಮೊಮ್ಮಗ ಬಹಳ ಅನ್ಯೋನ್ಯವಾಗಿದ್ದಂತಹ ಸಂಬಂಧ. ತಾತನಿಗೆ ವಯಸ್ಸಾಗಿದ್ದ ಕಾರಣ ಮನೆಯಲ್ಲಿಯೇ ಇರುತ್ತಿದ್ದರು. ಅದು ಹೇಗೋ ಮೊಮ್ಮಗನಿಗೆ ಕರೋನಾ ಸೋಂಕು ತಗುಲಿ ಅಲ್ಲಿಂದ ತಾತನಿಗೆ, ನಂತರ ಮಗ ಸೊಸೆ ಹೀಗೆ ಇಡೀ ಕುಟುಂಬವೇ ಕರೋನಾ ಸೋಂಕಿಗೆ ಬಲಿಯಾದ ಕಾರಣ ವಿಧಿ ಇಲ್ಲದೇ ಎಲ್ಲರೂ ಆಸ್ಪತ್ರೆಗೆ ಸೇರಬೇಕಾಯಿತು. ವಯಸ್ಸಾದ ಹಿರಿಯರು ತೀವ್ರವಾದ ಸೋಂಕಿಗೆ ಬಲಿಯಾಗಿದ್ದ ಕಾರಣ ಐ.ಸಿ.ಯು ನಲ್ಲಿಟ್ಟು ಚಿಕಿತ್ಸೆ ಕೊಟ್ಟರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಸ್ವತಃ ಇಡೀ ಕುಟುಂಬವೇ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಯಾರಿಗೂ ತಂದೆಯವರ, ಮಾವನವರ, ತಾತನ ಮುಖವನ್ನೂ ನೋಡಲಾಗಲಿಲ್ಲ. ಆಗಿನ್ನೂ ಲಾಕ್ದೌನ್ ತೀವ್ರವಾಗಿದ್ದ ಕಾರಣ ಸರ್ಕಾರಿ ಲೆಖ್ಖದಲ್ಲಿಯೇ ವೈದ್ಯಕೀಯ ಸಿಬ್ಬಂದಿಗಳೇ ಅವರ ಅಂತಿಮ ಸಂಸ್ಕಾರವನ್ನು ಮಾಡಿದ್ದರು. ಹೆತ್ತ ತಂದೆಯ ಮುಖವನ್ನೂ ನೋಡಲಾಗಲಿಲ್ಲವಲ್ಲಾ, ಅವರ ಅಂತಿಮ ವಿಧಿವಿಧಾನಗಳನ್ನೂ ಮಾಡಲಾಗಲಿಲ್ಲವಲ್ಲಾ ಎಂದು ಮಗನಿಗೆ ತೀವ್ರತರವಾದ ನೋವಿನಿಂದ ಬಹಳ ದಿನಗಳವರೆಗೂ ಖಿನ್ನತೆಗೆ ಒಳಗಾಗಿ ಹಲವು ತಿಂಗಳುಗಳ ನಂತರ ಸುಧಾರಿಸಿಕೊಳ್ಳುತ್ತಿದ್ದಾರೆ.
ಮತ್ತೊಂದು ಕುಟುಂಬ. ಇಲ್ಲಿ ತಾಯಿ, ಮಗ ಸೊಸೆ ಮತ್ತು ಮೊಮ್ಮಗ ಇದ್ದಂತಂಹ ಕುಟುಂಬ. ಮೈಸೂರಿನಲ್ಲಿ ತಮ್ಮ ಸಂಬಂಧಿಗಳ ಸಮಾರಂಭಕ್ಕೆ ಹೋಗಿ ಬಂದ ಕೆಲವೇ ದಿನಗಳಲ್ಲಿ ಕುಟುಂಬವಿಡೀ ಕೊರೋನಾ ಸೊಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಗೆ ಸೇರುತ್ತಾರೆ. ಅವರ ಇಡೀ ರಸ್ತೆಯನ್ನೇ ಸೀಲ್ಡೌನ್ ಮಾಡುವ ಮೂಲಕ ಏನೂ ಮಾಡದ ಅವರ ರಸ್ತೆಯವರೆಲ್ಲರೂ ತೊಂದರೆ ಅನುಭವಿಸುವಂತಾಗುತ್ತದೆ. ಅದೃಷ್ಠವಶಾತ್ ಅಜ್ಜಿ ಮತ್ತು ಮೊಮ್ಮಗ ಬಹಳ ಬೇಗನೇ ಗುಣಮುಖರಾಗುತ್ತಾರಾದರೂ ಮಗ ಮತ್ತು ಸೊಸೆಯವರಿಗೆ ತೀವ್ರವಾದ ಉಸಿರಾಟದ ತೊಂದರೆಯಿಂದಾಗಿ ಸುಮಾರು ಒಂದು ತಿಂಗಳುಗಳ ಕಾಲ ಐಸಿಯುವಿನಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ನರಳಿ, ಲಕ್ಷಾಂತರ ರೂಪಾಯಿಗಳ ಖರ್ಚು ಮಾಡಿ, ವೈದ್ಯರುಗಳ ಚಿಕಿತ್ಸೆ ಮತ್ತು ದೇವರ ದಯೆಯಿಂದಾಗಿ ಮನೆಗೆ ಬಂದು ಸುಮಾರು ವಾರಗಳ ಕಾಲ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಂಡು ಈಗ ಹುಶಾರಾಗಿದ್ದಾರೆ.
ಮನೆಯಲ್ಲಿ ಇದ್ದಕ್ಕಿದ್ದಂತೆಯೇ ಆರೋಗ್ಯ ತಪ್ಪಿದ ಹಿರಿಯರೊಬ್ಬರನ್ನು ಕೋವಿಡ್ ಪರೀಕ್ಷೆ ಮಾಡಿಸಿದ ಒಂದು ದಿನದ ಬಳಿಕ ಅವರ ಮೊಬೈಲಿನಲ್ಲಿ ಅವರಿಗೆ ಕೋವಿಡ್+ ಬಂದಿದೆ, ಹಾಗಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ಬರುತ್ತದೆ. ಹಾಗಾಗಿ ಸಿದ್ಧವಾಗಿರಿ ಎಂಬ ಸಂದೇಶ ಬಂದ ಕೂಡಲೇ ಆ ಹಿರಿಯರ ನಾಲ್ಕಾರು ಬಟ್ಟೆಗಳನ್ನು ಚೀಲದಲ್ಲಿಟ್ಟು ಮನೆಯ ಹಿರಿಯವರು ಎಂಬ ಮಾನವೀಯತೆಯನ್ನೂ ಮರೆತು ಅವರನ್ನು ಮನೆಯ ಹೊರಗೆ ಹಾಕಿ ಬಾಗಿಲು ಹಾಕಿ ಕೊಳ್ಳುತ್ತಾರೆ. ಅದು ಯಾವ ಕಾರಣಕ್ಕೋ ಏನೋ? ಅವರನ್ನು ಕರೆದುಕೊಂಡು ಹೋಗಲು ಬರಬೇಕಿದ್ದ ಆಂಬ್ಯುಲೆನ್ಸ್ ಕೂಡಾ ಬಹಳ ತಡವಾಗಿ ಬಂದು ನೋಡಿದರೆ ಮನೆಯ ಮುಂದೆಯೇ ಬೀದಿ ಹೆಣವಾಗಿರುತ್ತಾರೆ ಆ ಹಿರಿಯರು. ಅವರನ್ನು ನೋಡಲೂ ಸಹಾ ಅವರ ಮನೆಯವರು ಹೊರಗೆ ಬಾರದಂತಹ ಹೃದಯವಿದ್ರಾವಕ ಘಟನೆಯೂ ನಡೆದಿದೆ.
ಹೀಗೆ ಬರೆಯುತ್ತಾ ಹೋದರೆ ಲೆಕ್ಕವಿಲ್ಲದಷ್ಟು ಇಂತಹ ದುರ್ಘಟನೆಗಳು ಕಳೆದೊಂದು ವರ್ಷದಲ್ಲಿ ನಮ್ಮ ಕಣ್ಣ ಮುಂದೆ ನಡೆದುಹೋಗಿದೆ. ನಮ್ಮ ನಿಮ್ಮೆಲ್ಲರ ಮಧ್ಯೆ ಆರೋಗ್ಯದಿಂದ ಇದ್ದವರು ನೋಡ ನೋಡುತ್ತಿದ್ದಂತೆಯೇ ಗೋಡೆಯಲ್ಲಿ ಫೋಟೋವಾಗಿ ಬಿಟ್ಟಿದ್ದಾರೆ.
ಸರ್ಕಾರವೂ ಸಹಾ ಈ ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ಸುಮಾರು ಮೂರು ತಿಂಗಳುಗಳ ಕಾಲ ಲಾಕ್ಡೌನ್ ಮಾಡಿದರೂ, ಅಂತರ್ ರಾಜ್ಯಗಳ ಗಡಿಗಳನ್ನು ಮುಚ್ಚಿದ್ದರೂ, ಕೆಲವು ಅನಕ್ಷರಸ್ಥ ಕಿಡಿಗೇಡಿಗಳು ಮತ್ತು ಪುಂಡು ಪೋಕರಿಗಳು ಸರ್ಕಾರದ ನೀತಿನಿಯಮಗಳನ್ನು ಗಾಳಿಗೆ ತೂರಿದರೆ, ಜನರ ಹಿತಕ್ಕಿಂತಲೂ ತಮ್ಮ ರಾಜಕೀಯ ತೆವಲುಗಳಿಗೆ ಮತ್ತು ಆಡಳಿತ ಪಕ್ಷಕ್ಕೆ ಭಂಗ ತರಲೆಂದೇ ದೇಶದ ಹಿತಶತ್ರುಗಳಾಗಿ ಕಾಡಿದ ವಿರೋಧ ಪಕ್ಷಗಳು ಪ್ರಜೆಗಳ ಹಿತವನ್ನೂ ಅಲಕ್ಷಿಸಿ, ಅಂತರ್ ರಾಜ್ಯಗಳ ಗಡಿಯನ್ನು ತೆರೆಯಲು ಹೋರಾಟ ನಡೆಸಿದ್ದಲ್ಲದೇ, ಹೇಳೋದು ಶಾಸ್ತ್ರ ತಿನ್ನೋದು ಬದನೇಕಾಯಿ ಎನ್ನುವಂತೆ ತಮ್ಮ ಮನೆಯ ಮದುವೆ, ಮುಂಜಿ, ನಾಮಕರಣ ಹುಟ್ಟು ಹಬ್ಬಗಳಲ್ಲಿ ಸಾವಿರಾರು ಜನರನ್ನು ಒಟ್ಟು ಗೂಡಿಸಿ ಆಡಳಿತ ಪಕ್ಷಗಳ ಪ್ರತಿಯೊಂದು ನಡೆಯನ್ನೂ ವಿರೋಧಿಸುತ್ತಲೇ ಪರೋಕ್ಷವಾಗಿ ಕೊರೋನಾ ಹಬ್ಬಲು ಸಹಕರಿಸಿದವು ಎಂದರೂ ತಪ್ಪಾಗಲಾರದು.
ಇಡೀ ಪ್ರಪಂಚವೇ ಈ ಮಹಾಮಾರಿಯಿಂದ ತಲ್ಲಣಿಸಿ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಕುಗ್ಗಿದ್ದರೂ ಸರ್ಕಾರ ಕೊರೋನ ನಿಯಂತ್ರಣದ ಹೆಸರಿನಲ್ಲಿ ಮಾರ್ಷಲ್ ಗಳ ಮೂಲಕ ಮಾಸ್ಕ್ ಹಾಕಿಲ್ಲದ ಅಮಾಯಕರ ಬಳಿ ಐದು ನೂರು ಸಾವಿರ ರೂಪಾಯಿಗಳ ದಂಡ ಕಸಿಯುವ ಮೂಲಕ ಅಕ್ಷರಶಃ ಹಗಲು ದರೋಡೆಗೆ ಇಳಿಯುವ ಮೂಲಕ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಪ್ರಯತ್ನಿಸಿದ್ದದ್ದು ನಿಜಕ್ಕೂ ಹೇಯಕರವಾದ ಸಂಗತಿಯೇ.
ಲಾಕ್ಡೌನ್ ಹಂತ ಹಂತವಾಗಿ ಸಡಿಲ ಗೊಳಿಸಿದ್ದೇ ತಡಾ ಜನ ಕೊರೋನಾ ಮಹಾಮಾರಿಯೇ ಬಂದಿಲ್ಲವೇನೋ ಇವರು ಹೋಟೇಲ್, ಮಾಲು, ಬಾರು, ಸಿನಿಮಾ, ಈಜುಗೊಳ, ಜಿಮ್, ಮಾರುಕಟ್ಟೆಗಳಿಗೆ ಹೋಗದಿದ್ದರೇ ಪ್ರಪಂಚವೇ ಮುಳುಗಿ ಹೋಗುತ್ತದೆಯೇನೋ ಎನ್ನುವಂತೆ ಎಲ್ಲಾ ಕಡೆಯಲ್ಲಿಯೂ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದೇ, ಸಾಮಾಜಿಕ ಅಂತರವನ್ನು ಮರೆತು,ರಾಜಾ ರೋಷದಿಂದ ಗೂಳಿ ನುಗ್ಗಿದ ಹಾಗೆ ನುಗ್ಗಿದ ಪರಿಣಾಮ ಸ್ವಲ್ಪ ತಹಬದಿಗೆ ಬಂದಿದ್ದ ಕೊರೋನ, ಮತ್ತೆ ಪ್ರಜ್ವಲಿಸುತ್ತಾ 2ನೇ ಅಲೆಯ ಮೂಲಕ ತನ್ನ ಕೆನ್ನಾಲಿಗೆಯನ್ನು ಚಾಚುತ್ತಾ ಸದ್ಯದ ಪರಿಸ್ಥಿತಿಯಲ್ಲಿ ಪ್ರಪಂಚಾದ್ಯಂತ 30 ಲಕ್ಷಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿದೆ. ಪ್ರತಿ ದಿನವೂ ಸಹಸ್ರಾರು ಜನರು ,+veಎಂಬ ಅಂಕಿ ಅಂಶ ಕಣ್ಣ ಮುಂದೆ ರಾಚುತ್ತಿದೆ.
ಕೊರೋನಾ ಗಿರೋನಾ ಏನೂ ಇಲ್ಲಾ ಇದೆಲ್ಲವೂ ಈ ಭ್ರಷ್ಟ ರಾಜಕಾರಣಿಗಳು ದುಡ್ಡು ಹೊಡೆಯುವ ಹುನ್ನಾರದ ಭಾಗ ಎನ್ನುವವರಿಗೆ, ಕಬ್ಬು ತಿಂದವರಿಗೆ ಮಾತ್ರವೇ ರುಚಿ ಗೊತ್ತಾಗುತ್ತದೆ ಎನ್ನುವಂತೆ ಕೊರೋನಿಂದ ಭಾಧಿತರಾದವರಿಗೆ ಮಾತ್ರವೇ ಅದರ ಅನುಭವ ಗೊತ್ತಿರುತ್ತದೆ. ಖ್ಯಾತ ಕಲಾವಿದ ದಂಪತಿಗಳಾದ ಸುನೇತ್ರ ಮತ್ತು ಪಂಡಿತ್ ದಂಪತಿಗಳು ತಮ್ಮ ಕುಟಂಬಸ್ಥರನ್ನು ಕಳೆದುಕೊಂಡು ಮಾಧ್ಯಮದ ಮುಂದೆ ರೋಧಿಸಿದ ಪರಿ ನಿಜಕ್ಕೂ ಕರುಳು ಚುರಕ್ ಎನಿಸಿತ್ತು. ನಿಜ ಕೆಲವೊಂದು ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳು ಈ ಸಂಧರ್ಭದಲ್ಲಿಯೂ ಅಕ್ರಮ ಹಣವನ್ನು ಮಾಡಿರುವುದನ್ನು ಅಲ್ಲಗಳಿಯಲು ಆಗದಾದರೂ, ಇದೇ ಕಾರಣಕ್ಕೆ ಕೊರೋನಾನೇ ಇಲ್ಲ ಎಂದು ಹೇಳಲಾಗದು.ನಿಜ ಹೇಳ ಬೇಕೆಂದರೆ ಈ ಕೊರೋನ ಅಸ್ತಿ ಅಂತಸ್ತು ಅಧಿಕಾರ ನೋಡಿ ಕೊಂಡು ಬರೋದಿಲ್ಲ . ಈಗಾಗಲೇ ಹೆಸರಾಂತರ ಕಲಾವಿದರು, ರಾಜಕಾರಣಿಗಳು, ಕೇಂದ್ರ ಸಚಿವರು, ಸಂಸದರು,ಹಿರಿಯ ಗಣ್ಯರು, ಅಧಿಕಾರಿಗಳು, ವೈದ್ಯರುಗಳು, ಜನಸಾಮಾನ್ಯರು ಹೀಗೆ ಯಾವ ವರ್ಗವೆಂಬ ತಾರತಮ್ಯವಿಲ್ಲದೇ, ಈ ಕೊರೋನಾ ಮಾಹಾಮಾರಿಗೆ ಬಲಿಯಾಗಿದ್ದಾರೆ.
ಬೆಂಗಳೂರಿನ ವಿದ್ಯಾರಣ್ಯಪುರದ ಬಳಿಯ ಲಕ್ಷ್ಮೀಪುರ ಮೇಡಿ ಅಗ್ರಹಾರ ವಿದ್ಯುತ್ ಚಿತಾಗಾರದಲ್ಲಿ ಸಾಲುಗಟ್ಟಿ ನಿಂತಿರುವ ಕೊರೋನದಿಂದ ಮೃತಪಟ್ಟ ಶವಗಳು ಸಾಲು ನೋಡಿದರೇ ಸಾಕು ಕೊರೋನ ತೀವ್ರತೆಯ ಅನುಭವಾಗುತ್ತದೆ. ಸಾಧಾರಣ ದಿನಗಳಲ್ಲಿ ಮೂರ್ನಾಲ್ಕು ಶವಗಳು ಬರುತ್ತಿದ್ದ ಸ್ಮಶಾನದಲ್ಲಿ ಈಗ ಪ್ರತೀ ದಿನವೂ 25-30ರ ವರೆಗೆ ಬಂದು ಆಂಬ್ಯುಲೆನ್ಸ್ ಸಾಲು ಸಾಲಾಗಿ ನಿಂತಿರುವ ಹೃದಯವಿದ್ರಾವಕ ದೃಶ್ಯ ಮನಕಲಕಿಸುತ್ತದೆ.
ಲಾಕ್ಡೌನ್ ಸ್ಪಲ್ಪ ಸಡಿಲಗೊಳಿಸಿದ ತಕ್ಷಣ, ಮನೆ ಮಠ ಬಿಟ್ಟು ತನ್ನ ಗಡ್ಡ ಕೆರ್ಕೊಂಡು ಸಿನಿಮಾ ಅಂತ ಮಠ ಚಲನಚಿತ್ರದ ಖ್ಯಾತಿಯ ಗುರುಪ್ರಸಾದ್ ಹುಚ್ಚು ಕುದುರೆ ತರಹಾ ಎಲ್ಲೆಂದರಲ್ಲಿ ಸ್ವಚ್ಚಂದವಾಗಿ ಬೀದಿ ಬೀದಿ ಸುತ್ತಾಡಿ ಕೊರೋನ ಹತ್ತಿಸಿಕೊಂಡು ಈಗ ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಅಂತ ರಾಜ್ಯ ಸರ್ಕಾರವನ್ನು ತೆಗಳುತ್ತಾ ತನ್ನ ಸಾವಿಗೆ ಸರ್ಕಾರವೇ ಕಾರಣ ಎಂಬ ವರಾತ ತೆಗೆದರೆ ಯಾವುದೇ ಪ್ರಯೋಜನ ಆಗದು. ಸುಮ್ಮನೇ ಸರ್ಕಾರ ಹೇಳಿದ ಹಾಗೆ ಮಾಸ್ಕ್ ಹಾಕ್ಕೊಂಡು, ಸಾಮಾಜಿಕ ಅಂತರ ಕಾಪಾಡಿಕೊಂಡಿದ್ರೇ ಈತನಿಗೆ ಕೊರೋನಾ ಬರ್ತಿತ್ತಾ?ದೇಶದ ಜವಾಬ್ದಾರಿಯುತ ನಾಗರೀಕರಾಗಿ ವಯಕ್ತಿವಾಗಿ ಕೆಲವೊಂದು ನೀತಿ ನಿಯಮಗಳನ್ನು ಮತ್ತು ಅನುಶಾಸನಗಳನ್ನು ಸ್ವಯಂ ಪಾಲಿಸಲೇ ಬೇಕಾಗುತ್ತದೆ
- ಸರ್ಕಾರ ಲಾಕ್ಡೌನ್ ಮಾಡುತ್ತದೆಯೋ ಬಿಡುತ್ತದೆಯೋ, ದಯವಿಟ್ಟು ಇನ್ನೂ ಕೆಲ ಕಾಲ ಸ್ವಯಂ ಲಾಕ್ ಡೌನ್ ಒಳಗಾಗಿ ಮನೆಯಲ್ಲಿಯೇ ಸುರಕ್ಷಿತವಾಗಿ ಇರೋಣ.
- ನಮ್ಮ ನಮ್ಮ ವಯಸ್ಸಿನ ಅನುಗುಣವಾಗಿ ಎರಡೂ ಬಾರಿ ಖಡ್ಡಾಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳೋಣ.
- ಒಂದಷ್ಟು ದಿನ ಸಭೆ, ಸಮಾರಂಭ, ಮದುವೆ ಮುಂಜಿ, ನಾಮಕರಣ ಮುಂತಾದ ಹೆಚ್ಚು ಜನರು ಸೇರುವಲ್ಲಿ ಹೋಗುವುದನ್ನು ಮುಂದು ಹಾಕೋಣ.
- ಅನಗತ್ಯವಾಗಿ ಹೊರಗೆಲ್ಲೂ ಓಡಾಡದೇ, ಅನಿವಾರ್ಯವಾಗಿ ಹೊರಗೆ ಹೋಗಲೇ ಬೇಕಾದಲ್ಲಿ ಮೂಗು ಮುಚ್ಚುವಂತೆ ಮಾಸ್ಕ್ ಧರಿಸಿ ಓಡಾಡೋಣ ಮತ್ತು ಮನೆಗೆ ಬಂದ ತಕ್ಷಣ ಸಾಬೂನಿನಿಂದ ಕೈ ಕಾಲು ಮುಖವನ್ನು ತೊಳೆಯೋಣ.
- ವಾರಕ್ಕೊಮ್ಮೆ ಪ್ರಾರ್ಥನೆ, ದೇವಸ್ಥಾನ, ಚರ್ಚ್ ಮಸೀದಿ ಎಂದು ತೀರ್ಥಕ್ಷೇತ್ರ, ಜಾತ್ರೆ, ಕುಂಭಮೇಳ ಎಂದು ಎಲ್ಲಿಗೂ ಹೋಗದೇ, ಸದ್ಯದ ಪರಿಸ್ಥಿತಿಯಲ್ಲಿ ಸರ್ವಾಂತರ್ಯಾಮಿಯಾದ ಭಗವಂತನನ್ನು ಮನೆಯಿಂದಲೇ ಪ್ರಾರ್ಥಿಸೋಣ.
- ಸಾಧ್ಯವಾದಷ್ಟೂ ಹೊರಗಡೆಯ ತಿಂಡಿ ತೀರ್ಥಗಳನ್ನು ಸೇವಿಸುವುದನ್ನು ನಿಲ್ಲಿಸೋಣ.
- ಆದಷ್ಘೂ ಬಿಸಿ ನೀರು ಮತ್ತು ಬಿಸಿಬಿಸಿಯಾದ ಆಹಾರವನ್ನು ಅಚ್ಚುಕಟ್ಟಾಗಿ ಮನೆಯಲ್ಲಿಯೇ ಮಾಡಿಕೊಂಡು ಸೇವಿಸೋಣ.
- ಮೆಣಸು, ಜೀರಿಗೆ, ಅರಿಶಿನ, ಚಕ್ಕೆ, ಕರಿಬೇವು, ದನಿಯಾ ಮುಂತಾದವುಗಳಿಂದ ತಯಾರಿಸಿದ ಕಷಾಯವನ್ನು ಆಗ್ಗಾಗ್ಗೆ ಸೇವಿಸುವ ಮೂಲಕ ಕೊರೋನಾ ಸೋಂಕು ನಮಗೆ ತಗುಲಿದ್ದರೂ ಅದು ನಾಶವಾಗುವಂತೆ ನೋಡಿಕೊಳ್ಳೋಣ.
- ಸರ್ಕಸ್, ಸಿನಿಮಾ, ನಾಟಕ ಮತ್ತು ಪ್ರವಾಸಗಳನ್ನು ಕೆಲ ದಿನಗಳ ಕಾಲ ಮುಂದೂಡಿದರೆ ಜಗತ್ ಪ್ರಳಯವೇನೂ ಆಗದು ಎಂಬುದು ತಿಳಿದಿರಲಿ.
- ಸರ್ಕಾರಕ್ಕೂ ಈ ಮೊದಲು ದೂರಲು ಚೀನ ದೇಶವಿತ್ತು, ತಬ್ಲೀಗ್ ಗಳು ಇದ್ದರು. ಆದರೆ ಈ ಬಾರೀ ಆ ಕಾರಣಗಳು ಯಾವುವೂ ಇಲ್ಲ. ಈ ಬಾರಿ ತಪ್ಪೆಲ್ಲಾ ನಮ್ದೇ.
- ನುಡಿದಂತೆ ನಡೆ. ನಡೆಯುವುದಕ್ಕೆ ಆಗುವುದನ್ನೇ ನುಡಿ ಎನ್ನುವಂತೆ Rules is a rules even for fools ಎನ್ನುವಂತೆ ಮುಖಾಮೂತಿ ನೋಡದೇ, ಬಡವ, ಬಲ್ಲಿದ, ರಾಜಕಾರಣಿ, ಮಠಾಧಿಪತಿ, ಮೌಲ್ವಿ ಅಥವಾ ಪಾದ್ರಿ ಎನ್ನುವ ತಾರತಾಮ್ಯವಿಲ್ಲದೇ ತಪ್ಪು ಮಾಡಿದವರಿಗೆಲ್ಲರಿಗೂ ಶಿಕ್ಷೆಯಾಗಲಿ.
- ಹಾಗೆಂದ ಮಾತ್ರಕ್ಕೆ ಶಿಕ್ಷೆಯೇ ಪರಮೋಚ್ಚ ಗುರಿಯಾಗಿರದೇ, ಸಮಾಜವನ್ನು ಸರಿ ದಾರಿಗೆ ಕರೆದುಕೊಂಡು ಹೋಗುವ ಗುರುತರ ಜವಾಬ್ದಾರಿ ಸರ್ಕಾರದ್ದೇ ಆಗಿರುತ್ತದೆ.
- ಥೂ! ಈ ಸರ್ಕಾರ ಸರೀ ಇಲ್ಲಾ, ಈ ಜನಾನೇ ಸರಿ ಇಲ್ಲಾ! ಕೊರೋನಾನೇ ಇಲ್ಲ ಎಂದು ವಿತಂಡ ವಾದ ಮಾಡುತ್ತಾ ಸಮಾಜವನ್ನು ದೂರುವುದನ್ನು ಬಿಟ್ಟು ಸ್ವಯಂ ನಿರ್ಬಂಧ ಹೇರಿಕೊಂಡು ಸುರಕ್ಷಿತವಾಗಿರೋಣ.
ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲಾ ವೆಂಟಿಲೇಟರ್ಗಳಿಗೆ ಬರ ಎಂದ ಬೀದಿ ಬೀದಿಗಳಲ್ಲಿ ಬಾಯಿ ಬಡಿದುಕೊಳ್ಳುವ ಬದಲು ಸರ್ಕಾರ ಹೇಳಿದ ಹಾಗೆ ಮಾಸ್ಕ್ ಹಾಕ್ಕೊಂಡ್ ಸಾಮಾಜಿಕ ಅಂತರ ಕಾಪಾಡಿಕೊಂಡ್ರೇ ಈ ರೀತಿಯಲ್ಲಿ ಬಾಯಿ ಬಡಿದುಕೊಳ್ಳಬೇಕಾದ ಪರಿಸ್ಥಿತಿ ಇರ್ತಿರ್ಲಿಲ್ಲಾ ಅಲ್ವೇ?ಈ ಲೇಖನ ಕೇವಲ ಓದುಗರನ್ನು ಹೆದರಿಸುವುದಕ್ಕೆ ಆಗಲೀ ಸರ್ಕಾರದ ಪರ ಅಥವಾ ವಿರೋಧವಾಗಿರದೇ, ಜನರಿಗೆ ಎಚ್ಚರಿಕೆಯ ಗಂಟೆಯಾಗಿದೆ. ನಾನಾ ಕಾರಣಗಳಿಂದ ಕೊರೋನ ಸೋಂಕಿತರಾಗಿ ಸೂಕ್ತ ಚಿಕಿತ್ಸಾ ವಿಧಾನಗಳಿಂದ ಗುಣಮುಖರಾದ ಸಂಖ್ಯೆಯೂ ಲಕ್ಷಾಂತರವಿದೆ.ಜೀವ ಇದ್ರೇ ಮಾತ್ರ ಜೀವನ. ಸುರಕ್ಷಿತವಾಗಿ ಇದ್ದರೆ ಬರೋದಿಲ್ಲ ಕೊರೋನ ಎನ್ನುವು್ಉ ಮಾತ್ರವೇ ಸತ್ಯ. ಮೊದಲನೆಯ ಸಲಾ ತಪ್ಪು ಮಾಡಿದರೆ ಕ್ಷಮೆ ಇರುತ್ತದೆ ಆದರೆ ಎರಡನೆಯ ಸಲಾ ಅದೇ ತಪ್ಪು ಮಾಡಿದರೆ ಅದು ಅಕ್ಷಮ್ಯ ಅಪರಾಧವಾಗುತ್ತದೆ. ಹಾಗಾಗಿ ಈ ಸಲ ನಮ್ಮಿಂದ ತಪ್ಪಾಗುವುದು ಬೇಡ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಸಮಯೋಚಿತ ಲೇಖನ
LikeLiked by 1 person