ಶಿಕ್ಷಣ

whatsapp-image-2019-10-22-at-7.25.46-am.jpegಇವತ್ತು ಬೆಳೆಗ್ಗೆ ಜಿಟಿ ಜಿಟಿ ಮಳೆ ಬೀಳ್ತಾ ಇದ್ದದ್ದರಿಂದ ಮುಂಜಾನೆಯ ವೃತ್ತ ಪತ್ರಿಕೆ ಎಲ್ಲಾ ಒದ್ದೆ ಮುದ್ದೆಯಾಗಿತ್ತು. ನನಗೆ ಒಂದು ಪಕ್ಷ ತಿಂಡಿ ತಿನ್ನೋದನ್ನ ಬಿಟ್ರೂ ಬೇಜಾರಿಲ್ಲ. ಆದರೆ ಬೆಳಗಿನ ಪೇಪರ್ ಓದದೇ ಹೋದ್ರೆ ಏನೋ ಕಳೆದು ಕೊಂಡ ಅನುಭವ. ಆಷ್ಟೆಲ್ಲ ಟಿವಿಯಲ್ಲಿ ವಾರ್ತೆಗಳನ್ನು ನೋಡಿದ್ರೂ, ಇಂಟರ್ನೆಟ್ಟಲ್ಲಿ ಸುದ್ದಿಗಳನ್ನು ಓದಿದ್ರೂ, ಪೇಪರ್ ಓದೋ ಮಜಾನೇ ಬೇರೆ. ಹಾಗೆ ಒದ್ದೆ ಆದ ಪೇಪರನ್ನು ಇಸ್ತ್ರಿಪೆಟ್ಟಿಗೆಯಲ್ಲಿ ಇಸ್ತ್ರಿ ಮಾಡಿಕೊಂಡು ಓದಲು ಪುಟ ತಿರುವು ಹಾಕುತ್ತಿದ್ದಂತೆಯೇ ಗಕ್ಕನೆ ಕಾಲೇಜಿನ ಏಳನೇ ಮಹಡಿಯಿಂದ ಜಿಗಿದು ಎಂಜಿನೆಯರಿಂಗ್ ವಿಧ್ಯಾರ್ಥಿ ಆತ್ಮಹತ್ಯೆ ಎನ್ನುವ ಸುದ್ದಿ ನೋಡಿ ಒಂದು ಕ್ಷಣ ಮನಸ್ಸಿಗೆ ದುಃಖವಾಗಿದ್ದಲ್ಲದೇ ಖೇದವೂ ಆಯಿತು. ಹಿಂದಿನ ದಿನ ನಮ್ಮ ಅಕ್ಕ ಒಬ್ಬ ಹಾಸ್ಟೆಲ್ನಲ್ಲಿ ಓದುತ್ತಿರುವ ಹುಡುಗನ ಹುಡುಗಾಟಿಕೆ ಇಲ್ಲವೇ ಧಾರ್ಮಿಕ ವಿಷಯದ ಪರಿಜ್ಞಾನ ಇಲ್ಲದೇ ಅಭಾಸಕ್ಕೊಳಗಾದ ವ್ಯಾಟ್ಯಾಪ್ ಸಂದೇಶ ಕಳುಹಿಸಿ, ಇದರ ಬಗ್ಗೆ ಹೆಚ್ಚಿಗೆ ಏನಾದರೂ ಬರೆಯಬಹುದಾ ಎಂದೂ ಹೇಳಿದ್ದೂ ನೆನಪಿಗೆ ಬಂದಾಗ ನನ್ನ ಮನಸ್ಸಿನಲ್ಲಾದ ತುಮುಲವೇ ಈ ಲೇಖನ.

ಅಕ್ಕ ಕಳುಹಿಸಿದ ಸಂದೇಶದ ಸಾರಾಂಶ ಹೀಗಿದೆ. ಅಪ್ಪಾ ಮತ್ತು ಅಮ್ಮಾ ಇಬ್ಬರೂ ಕೆಲಸಕ್ಕೆ ಹೋಗುವಂತಹ ಸ್ಥಿತಿವಂತರ ಕುಟುಂಬದ ಹಾಸ್ಟೆಲ್ಲಿನಲ್ಲಿ ಓದುತ್ತಿರುವ ಹೆಚ್ಚಿನ ಅಂಕ ಗಳಿಸುವ ಜಾಣ ಹುಡುಗ ತನ್ನ ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವ ಎಂದು ತನ್ನ ಊರಿಗೆ ಬಂದಿದ್ದ. ಯಥಾ ಪ್ರಕಾರ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವಷ್ಟೂ ಪುರುಸೊತ್ತಿಲ್ಲದ ಅಪ್ಪಾ ಅಮ್ಮ, ಮಗನಿಗೆ 501 ರೂಪಾಯಿಗಳನ್ನು ಕೊಟ್ಟು ಅವರ ಮನೆಯ ಹತ್ತಿರದಲ್ಲೇ ಇರುವ ರಾಯರ ಮಠದಲ್ಲಿ ಯಾವುದಾದರೂ ಸೇವೆ ಮಾಡಿಸಿಕೊಂಡು ಬರಲು ಹೇಳಿ ಕಳುಹಿಸಿದರು.

ಪೋಷಕರ ಆಜ್ಞೆಯ ಮೇರೆಗೆ ರಾಯರ ಮಠಕ್ಕೆ ಬಂದ ಹುಡುಗ ಮಠದ ಸೇವಾ ಶುಲ್ಕ ಪಟ್ಟಿ ಅವಲೋಕಿಸಿದ. ಅದು ಅವನಿಗೆ ಹೋಟೆಲ್ನಲ್ಲಿರುವ ಮೆನು ಕಾರ್ಡಿನಂತಯೇ ಭಾಸವಾಗಿ, ಎಡಗಡೆಯ ಪೂಜೆಗಳಿಗಿಂತ ಬಲಗಡೆಯಲ್ಲಿ ನಮೂದಿಸಿದ್ದ ಬೆಲೆಯ ಕಡೆಯೇ ಹರಿದಿತ್ತು ಅವನ ಚಿತ್ತ.

ರಥೋತ್ಸವ,1000 ರೂ.
ಕನಕಾಭೀಶೇಕ 5000ರೂ ಹೀಗೇ ನೋಡುತ್ತಾ ಹೋದಾಗ,
ಚಟಕ ಶ್ರಾದ್ಧ 501 ರೂ ಎಂದು ನಮೂದಿಸಿದ್ದು ಕಂಡು ತನ್ನ ಬಳಿ ಇದ್ದ 501 ರೂಪಾಯಿಗಳಿಗೆ ಇದೇ ಸರಿಯಾದ ಸೇವೆ ಎಂದು ಭಾವಿಸಿ, ಕೌಂಟರ್ಗೆ ಹೋಗಿ ಚಟಕ ಶ್ರಾದ್ಧ ಎಂದು ಹೇಳಿ receipt ಪಡೆದು , ಪುರೋಹಿತರ ಕರೆಗಾಗಿ ಕಾಯುತ್ತಾ ಕುಳಿತ.

ಸ್ವಲ್ಪ ಹೊತ್ತಿಗೆ ಆಚಾರ್ ಅವರು ಆತನನ್ನು ಕರೆದು ಅವನ ತಂದೆಯ ಶ್ರಾದ್ದ ಮಾಡಿಸಿ, ಭೂರಿ ಭೋಜನ ಮಾಡಿಸಿ, ಇವತ್ತು ರಾತ್ರಿ ಊಟ ಮಾಡಕೂಡದು ಎಂದು ತಿಳಿಸಿದರು.ಆವರ ಮಾತಿಗೆ ತಬ್ಬಿಬ್ಬದ ಹುಡುಗ , ಆಚಾರ್ರೇ ಇವೊತ್ತು ನನ್ ತಂದೆ ತಾಯಿಯ ವೆಡ್ಡಿಂಗ್ ಆನಿವರ್ಸರಿ, ರಾತ್ರಿ ಪಾರ್ಟಿಗೆ ಹೋಗ್ತಾ ಇದ್ದೀವಿ. ಬೇಗನೆ ಪ್ರಸಾದ ಕೊಡಿ ನಾನು ಮನೆಗೆ ಹೋಗ್ವೇಕು ಎಂದ.

ಹುಡುಗನ ಮಾತಿಗೆ ಆಚಾರ್ ಅವರು ಕಕ್ಕಾಬಿಕ್ಕಿಯಾಗಿ, ಏನಪ್ಪಾ ಹಾಸ್ಟೆಲ್ಲ್ಲಿ ಕಲಿತಾ ಇದ್ಯಾ ಎಂದು ಕೇಳಿ, ಹುಡುಗ ಹೂಂ ಎಂದ ಮೇಲೆ, ಪುಸ್ತಕದಿಂದ ಯಾವ ಜ್ಞಾನ ಪಡೀತೀಯೋ, ಅದಕ್ಕೂ ಹೆಚ್ಚು ಮುಖ್ಯ ಸಾಮಾನ್ಯ ಜ್ಞಾನ. ಇವತ್ತು ನಾನು ಮಾಡಿಸಿದ್ದು ನಿನ್ನ ತಂದೆ ತೀರಿದ ಮೇಲೇ ಮಾಡುವ ತಿಥಿ, ಇರಲಿ, ತಿಳಿಯದೆ ಆದ ಪ್ರಮಾದ, ಗುರುರಾಯರಿಗೆ ತಂದೆ ತಾಯಿಗಳಿಗೆ ಮನಸ್ಸಲ್ಲಿ ವಂದಿಸಿ ಕ್ಷಮಿಸಿ ಅಂತ ಕೇಳು ಎಂದು ತಿಳಿ ಹೇಳಿ, ಇನ್ನು ಮುಂದೆ ನಿಮ್ಮ ಹಿರಿಯರಲ್ಲಿ ಕೇಳಿ ಮನೆಯ ಆಚಾರ ವಿಚಾರ ಮತ್ತು ಸಂಪ್ರದಾಯಗಳನ್ನು ತಿಳಿದುಕೋ ಎಂದು ತಿಳಿಸಿ, ಈ ರೀತಿಯಾದ ಪ್ರಮಾದ ಆಗಿರುವುದನ್ನು ತಂದೆ ತಾಯಿಗೆ ಹೇಳಬೇಡ ಎಂದು ತಿಳಿಸಿ, ಅವನಿಗೆ ರಾಯರ ಪ್ರಸಾದ ಕೊಟ್ಟು ದೇವರು ನಿಮಗೆ ಒಳ್ಳೇದು ಮಾಡಲಿ ಎಂದು ಹಾರೈಸಿದರು ಎನ್ನುವುದು ಸಾರಾಂಶ.

ಹಿಂದೆಲ್ಲಾ ಈ ರೀತಿಯ ಅಭಾಸಗಳು ಆಗುವುದಕ್ಕೆ ಅವಕಾಶವೇ ಇರದಂತೆ ಮನೆಯೇ ಮೊದಲ ಪಾಠ ಶಾಲೆ, ತಂದೆ ತಾಯಿಯೇ ಮೊದಲ ಗುರುವಾಗುತ್ತಿದ್ದರು, ಇಲ್ಲವೇ ಬಹುತೇಕವಾಗಿ ಇರುತ್ತಿದ್ದ ಅವಿಭಕ್ತ ಕುಟುಂಬಳಲ್ಲಿ ಮನೆಯಲ್ಲಿರುವ ಹಿರಿಯರಾದ ಅಜ್ಜಿ ತಮ್ಮ ಮೊಮ್ಮಕ್ಕಳನ್ನು ತೊಡೆಯ ಮೇಲೆ ಕುಳ್ಳಸಿಕೊಂಡು ಅವರಿಗೆ ನಮ್ಮ ಪುರಾಣ ಪುರುಷರ ಕಥೆಗಳನ್ನು ಹೇಳುತ್ತಾ ಹಾಡು ಹಸೆಗಳನ್ನು ಹೇಳಿಕೊಡುತ್ತಿದ್ದರೆ , ತಾತ ಅವರ ಮೊಮ್ಮಕ್ಕಳಿಗೆ ಬಾಲ ಪಾಠಗಳನ್ನೂ, ಶ್ಲೋಕಗಳನ್ನು ಶಾಸ್ತ್ರ ಸಂಪ್ರದಾಯಗಳನ್ನೂ ವೀರ ಯೋಧರ, ಸ್ವಾತಂತ್ಯ್ರ ಹೋರಾಟಗಾರರ ಯಶೋಗಾಥೆಯನ್ನು ಮಕ್ಕಳಿಗೆ ಅರ್ಥವಾಗುವಂತೆ ಮನನಮಾಡಿಸುತ್ತಿದ್ದರು.

ಇಂದಿನ ಕಾಲದಲ್ಲಿ ಹಾಸ್ಟೆಲ್ ವಿದ್ಯಾಭ್ಯಾಸ ಇರುವಂತೆಯೇ ಅಂದಿನ ಕಾಲದಲ್ಲೂ ಮಕ್ಕಳು ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಅಲ್ಲಿ ಬಡವ ಬಲ್ಲದ, ಅರಸ ಆಳು ಎನ್ನುವ ಬೇಧ ಭಾವವಿಲ್ಲದೇ ಎಲ್ಲರಿಗೂ ಸಮಾನರೀತಿಯಾಗಿ 64 ವಿದ್ಯೆಗಳನ್ನೂ ಕಲಿಸಿ ನಂತರ ಆತ ಯಾವ ವಿದ್ಯೆಯಲ್ಲಿ ಹೆಚ್ಚಿನ ಪ್ರಾವೀಣ್ಯತೆ ಗಳಿಸುತ್ತಾನೋ ಅದಕ್ಕೆ ಸೂಕ್ತ ರೀತಿಯ ಕೆಲಸಗಳನ್ನು ಮಾಡುತ್ತಿದ್ದನು. ಆಗೆಲ್ಲಾ ಜಾತಿ ಪದ್ದತಿ ಇಲ್ಲದೇ ಕಲಿತ ವಿದ್ಯೆ ಮತ್ತು ಮಾಡುವ ಕೆಲಸಗಳ ಮೇಲೆ ವರ್ಣಾಶ್ರಮದ ರೀತಿ ಜಾರಿಗೆಯಲ್ಲಿತ್ತು. ಸಕಲಕಲಾ ವಲ್ಲಭರಾಗಿದ್ದ ಅವರು ಯಾವುದೇ ಕೆಲಸಗಳನ್ನೂ ಸುಲಲಿತವಾಗಿ ಮಾಡುವಂತಿದ್ದರು. ಊರಿನ ಪುರೋಹಿತರು (ಪುರದ ಹಿತವನ್ನು ಬಯಸುವವರು) ಅರಳಿಕಟ್ಟೆಯ ಮೇಲೆ ಕುಳಿತು ಎಲ್ಲರಿಗೂ ಅರ್ಥವಾಗುವಂತೆ ಪಾಠ ಪ್ರವಚನಗಳನ್ನು ಮಾಡತ್ತಾ , ಆ ಜನರುಗಳು ಅನಕ್ಷರಸ್ಥರಾಗಿದ್ದರೂ, ದೈನಂದಿನ ವ್ಯವಹಾರಕ್ಕೆ ತಕ್ಕಷ್ಟು ಲೆಕ್ಕಾಚಾರ ಬಲ್ಲವರಾಗಿರುತ್ತಿದ್ದರು. ನಂತರ ಕಾಲ ಕ್ರಮೇಣ ಅದೇ ವರ್ಣಾಶ್ರಮಗಳು ಜಾತಿಗಳಾಗಿ ಪರಿವರ್ತಿತವಾಗಿ ಎಲ್ಲರ ಹೆಸರಿನೊಂದಿಗೆ ಅವರವರ ಜಾತಿಗಳೇ ಉಪನಾಮಗಳಾಗಿ ಹೋಗಿದ್ದದ್ದು ವಿಷಾಧನೀಯ.

ತುಂಬಾ ಹಿಂದೆ ಹೋಗುವುದು ಬೇಡ. ಸಾವಿರ ವರ್ಷಗಳ ಹಿಂದೆ ಮುಸಲ್ಮಾನರು ಭಾರತಕ್ಕೆ ಧಾಳಿ ಮಾಡುವುದಕ್ಕಿಂತ ಮುಂಚೆ ನಮ್ಮ ದೇಶ ಅತ್ಯಂತ ಸುಭಿಕ್ಷವಾಗಿ ಜಗತ್ತಿನಲ್ಲಿಯೇ ಅತ್ಯಂತ ಒಳ್ಳೆಯ ನಾಗರೀಕತೆ ಹೊಂದಿರುವಂತಹ ರಾಷ್ಟ್ರವಾಗಿತ್ತು. ಎಲ್ಲರೂ ಸುಖಃ ಶಾಂತಿಯಿಂದ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದರು. ನಮ್ಮ ನಳಂದ ವಿಶ್ವವಿದ್ಯಾನಿಯಕ್ಕೆ ಅಭ್ಯಾಸಕ್ಕೆಂದು ಬಂದ ಹುಯ್ಯನ್ ಸ್ಯಾಂಗ್ ಮತ್ತು ಪಾಹಿಯಾನ್ ಅಂತಹ ವಿದೇಶಿಗರೇ ಬರೆದಿರುವಂತೆ ಇಡೀ ದೇಶದಲ್ಲಿ ಹುಡುಕಿದರೂ ಒಬ್ಬನೇ ಒಬ್ಬ ಭಿಕ್ಷುಕನನ್ನು ನೋಡಿರಲಿಲ್ಲವಂತೆ. ವಿಜಯನಗರದ ಕಾಲದಲ್ಲಿ ಮುತ್ತು ರತ್ನಗಳನ್ನು ಬಳ್ಳ ಬಳ್ಳಗಳಲ್ಲಿ ಈಗ ರಸ್ತೆಗಳ ಬದಿಯಲ್ಲಿ ತರಕಾರಿ ಮಾರುವಂತೆ ಮಾರುತ್ತಿದ್ದರಂತೆ. ಆದರೆ ನಳಂದ ವಿಶ್ವವಿದ್ಯಾನಿಲಯ ಧಾಳಿಕೋರರ ಬೆಂಕಿಗೆ ಆಹುತಿಯಾಗಿ ಆರು ತಿಂಗಳುಗಳ ಕಾಲ ಸುಟ್ಟುಹೋದ ನಂತರ ಶಿಕ್ಷಣದಲ್ಲಿಯೂ ಕುಂಠಿತವಾಗ ತೊಡಗಿತು. ನಂತರ ವ್ಯಾಪಾರಕ್ಕೆಂದು ಬಂದು ನಮ್ಮ ನಮ್ಮ ಒಳಜಗಳಗಳನ್ನೇ ಆಧಾರವಾಗಿಟ್ಟು ಕೊಂಡು ನಮ್ಮ ನಮ್ಮಲಿಯೇ ಜಗಳತಂದು ದೇಶವನ್ನು ದಾಸ್ಯಕ್ಕೆ ತಳ್ಳಿದ ಬ್ರಿಟೀಷರಿಗೆ ತಮ್ಮ ಆಳ್ವಿಕೆಯನ್ನು ಜಾರಿಗೊಳಿಸಲು ಪ್ರತೀಬಾರಿಯೂ ಇಂಗ್ಲೇಂಡಿನಿಂದ ಜನರನ್ನು ಕರೆತರುವುದು ದುಬಾರಿ ಎನಿಸಿದಾಗಲೇ ಲಾರ್ಡ್ ಮೆಕಾಲೆ ಸರಿಯಾಗಿ ಯೋಚಿಸಿ, ಬಣ್ಣದಲ್ಲಿ ಭಾರತೀಯರು ಬುದ್ಧಿ ಮತ್ತು ಆಲೋಚನೆಯಲ್ಲಿ ಬ್ರಿಟಿಷರಂತೆ ಇರುವಂತೆ ಸ್ಥಳೀಯರನ್ನು ತಯಾರು ಮಾಡಲೆಂದೇ ನಮ್ಮ ಸಂಸ್ಕೃತಿಯ ತಳಹಳಿಯಾದ ಭಧ್ರ ಬುನಾದಿಯಾದ ಗುರುಕುಲದ ವಿದ್ಯಾಭ್ಯಾಸ ಪದ್ದತಿಗೆ ಕೊಡಲಿ ಹಾಕಿ ಪಾಶ್ವ್ಯಾತ್ಯ ರೀತಿಯ ಶಿಕ್ಷಣ ಪದ್ದತಿ ಬಲವಂತವಾಗಿ ಹೇರಿದ ಪರಿಣಾಮವೇ ಇಂದಿನ ಎಲ್ಲಾ ಅದ್ವಾನಗಳಿಗೆ ಮತ್ತು ಅಭಾಸಗಳಿಗೆ ಕಾರಣ ಎಂದರೆ ತಪ್ಪಾಗಲಾರದು.

education1

ನಾವೆಲ್ಲಾ ಚಿಕ್ಕವರಿದ್ದಾಗಲೂ ನಮ್ಮ ಪೋಷಕರು ನಮ್ಮ ಶಾಲೆಯ ವಿದ್ಯೆಯ ಜೊತೆಗೆ, ಮನೆಯಲ್ಲಿಯೇ ಸಂಗೀತ, ನಾಟಕ, ನೃತ್ಯ ಪಕ್ಕವಾದ್ಯ, ಸಂಸ್ಕೃತ, ವೇದ, ಪುರಾಣ, ಯೋಗ, ಅಡುಗೆ ಮುಂತಾದ ವಿಷಯಗಳಲ್ಲಿ ನಮ್ಮೆಲ್ಲರನ್ನೂ ತಯಾರು ಮಾಡುತ್ತಿದ್ದರು. ಸುಮ್ಮನೆ ಜಂಬ ಕೊಚ್ಛಿಕೊಳ್ಳುತ್ತಿದ್ದೇನೆ ಎಂದಲ್ಲಾ , ಆರ್ಥಿಕವಾಗಿ ಸದೃಢವಾಗಿದ್ದರೂ ನಾನು ಚಿಕ್ಕವನಿದ್ದಾಗ ಬೆಳ್ಳಂಬೆಳಿಗ್ಗೆ ಚುಮು ಚುಮು ಚಳಿಗಾಳಿ ಮಳೆಯನ್ನೂ ಲೆಕ್ಕಿಸದೇ ಮನೆ ಮನೆಗಳಿಗೆ ಹಾಲು (ನನ್ನ ಮೊದಲ ಸಂಪಾದನೆ ಮತ್ತು  ದುಡ್ಡಿನ ಮಹತ್ವ ಕುರಿತಾದ  ಲೇಖನ   https://wp.me/paLWvR-48ಮತ್ತು ವೃತ್ತಪತ್ರಿಕೆಗಳನ್ನು ಹಾಕಿದ್ದೆ. ನಮ್ಮ ತಂದೆಯವರೂ ವಾರಾನ್ನದ  (ವಾರನ್ನ ಕುರಿತಾದ ಲೇಖನ https://wp.me/paLWvR-37ಜೊತೆ ಜೊತೆಗೆ ಪೇಪರ್ ಮಾರಿ ಗಳಿಸಿದ ಹಣದಲ್ಲಿ ತಮ್ಮ ವಿದ್ಯಾಭ್ಯಾಸ ಮಾಡಿದ್ದರಿಂದ ನಮಗೂ ಅದರ ಅನುಭವ ಇರಲಿ ಎಂದು ಸಣ್ಣ ಪುಟ್ಟ ಕೆಲಸಕ್ಕೆ ಅನುವು ಮಾಡಿಕೊಟ್ಟಿದ್ದರು. ಬೇಸಿಗೆ ರಜಾ ಇಲ್ಲವೇ ದಸರಾ ರಜೆ ಬಂದಾಗ ಅಡುಗೆ ಕೆಲಸಕ್ಕೂ ಹೋಗಿರುವ ಅನುಭವವಿದೆ. ಮುಂದೆ ಕಾಲೇಜಿಗೆ ಹೋಗುವಾಗ ವಿದ್ಯಾಭ್ಯಾಸದ ಖರ್ಚಿಗೆ ತಂದೆಯವರನ್ನೇ ಅವಲಂಬಿಸದೇ ಇತರೇ ಮಕ್ಕಳ ಬುಕ್ ಬೈಡಿಂಗ್ ಜೊತೆ ಜೊತೆಗೆ ಸ್ಕ್ರೀನ್ ಪ್ರಿಂಟಿಂಗ್ ಮಾಡಿ ವಿದ್ಯಾಭ್ಯಾಸ ಮಾಡಿ, ನಂತರ ನನ್ನ ಸ್ನೇಹಿರೊಂದಿಗೆ ಸ್ವಲ್ಪ ವರ್ಷ ನನ್ನದೇ ಕಂಪನಿಯೊಂದನ್ನು ಯಶಸ್ವಿಯಾಗಿ ನಡೆಸಿ, ಕಾರಣಾಂತರಗಳಿಂದ ಅಲ್ಲಿಂದ ಹೊರಬಂದು ಈಗ ಬಹುರಾಷ್ಟ್ರೀಯ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದೇನೆ.

ನನ್ನ ಇಡೀ ವಿದ್ಯಾಭ್ಯಾಸದ ಸಮಯದಲ್ಲಿ ನಮ್ಮ ಪೋಷಕರೆಂದೂ ನನ್ನ ಅಂಕಗಳ ಹಿಂದೆ ಬಿದ್ದಿರಲಿಲ್ಲ. ಅವರಿಗೆ ನನ್ನ ಅಂಕಗಳಿಗಿಂತ ಪ್ರತಿಯೊಂದು ವಿಷಯದ ಆಳಕ್ಕಿಳಿದು ಜ್ಣಾನಾರ್ಜನೆ ಮಾಡುವುದಷ್ಟೇ ಮುಖ್ಯವಾಗಿತ್ತು. ಪ್ರತಿಬಾರಿಯೂ ಫಲಿತಾಂಶ ಬಂದಾಗ ಅಣ್ಣಾ ಫಸ್ಟ್ ಕ್ಲಾಸಿನಲ್ಲಿ ಪಾಸ್ ಎಂದರೆ ಸಾಕಾಗಿತ್ತು. ಅವರೆಂದೂ ನಾನೂ ಕಂಪ್ಯೂಟರ್ ಇಂಜಿನಿಯರೇ ಆಗಬೇಕೆಂದು ಬಯಸಿರಲಿಲ್ಲ. ನನಗೆ ಕಂಪ್ಯೂಟರ್ ಹೊರತಾಗಿಯೂ ಜೀವನ ಮಾಡುವಷ್ಟರ ಮಟ್ಟಿನ ವಿದ್ಯೆಯನ್ನು ಮತ್ತು ಧೈರ್ಯವನ್ನು ಕಲಿಸಿಕೊಟ್ಟಿದ್ದಾರೆ. ನಾನೇಕೆ ನನ್ನ ಅತ್ತೆಯ ಮಗಳೂ, ವಿಜ್ಞಾನದ ಮಾಸ್ಟರ್ ಪದವಿಯ ಜೊತೆ ಜೊತೆಗೇ ಕಲಿತ ಭರತನಾಟ್ಯದಿಂದ ಈಗ ದೂರದ ಅಮೇರೀಕಾದಲ್ಲಿ ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಅಲ್ಲಿಯ ಮಕ್ಕಳಿಗೆ ಹೇಳಿಕೊಡುವ ಜೊತೆ ಜೊತೆಗೆ ತನ್ನ ಮನೆಯವರಷ್ಟೇ ಸಂಪಾದನೆ ಮಾಡುತ್ತಿದ್ದಾಳೆ. ಈಗ ಅದನ್ನೇ ನನ್ನ ತಂಗಿಯ ಮಕ್ಕಳುಗಳೂ ಮುಂದುವರೆಸಿ ನೃತ್ಯದಲ್ಲೇ ಮಾಸ್ಟರ್ಸ್ ಮುಗಿಸಿ ನೂರಾರು ವಿದ್ಯಾರ್ಥಿಗಳಿಗೆ ತಾವು ಕಲಿತದ್ದನ್ನು ಹೇಳಿಕೊಡುತ್ತಾ ಸ್ವಾಮಿ ಕಾರ್ಯದ ಜೊತೆಗೆ ಸ್ವಕಾರ್ಯವನ್ನೂ ನೋಡಿಕೊಳ್ಳುತ್ತಿದ್ದಾರೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಎಲ್ಲರೂ ಬಹಳಷ್ಟು ಬದಲಾಗಿದ್ದಾರೆ. ಎಲ್ಲರೂ ಅಂಕಗಳ ಹಿಂದೆ ಬಿದ್ದಿದ್ದಾರೆ. ಅರವತ್ತು ವರ್ಷಗಳ ಹಿಂದೆ ಪಾಸ್ ಆಗಿದ್ದರೆ ಸಾಕಿತ್ತು. ಮೂವತ್ತು ವರ್ಷಗಳ ಹಿಂದೆ ಫಸ್ಟ್ ಕ್ಲಾಸ್ ಬಂದರೆ ಸಾಕಿತ್ತು. ಹತ್ತು ವರ್ಷಗಳ ಹಿಂದೆ ಡಿಸ್ಟಿಂಗ್ಷನ್ ತೆಗೆದುಕೊಂಡರೆ ಗೌವವಿಸುತ್ತಿದ್ದರು. ಈಗೆಲ್ಲಾ ತಮ್ಮ ಮಕ್ಕಳು ಪ್ರತೀ ವಿಷಯದಲ್ಲೂ ನೂರಕ್ಕೆ ನೂರು ಅಂಕವನ್ನೇ ಪಡೆಯಬೇಕು. ಡಾಕ್ಟರ್ ಇಲವೇ ಇಂಜೀನಿಯರ್ ಆಗಲೇ ಬೇಕು. ಡಿಗ್ರಿ ಮುಗಿದ ನಂತರ ವಿದೇಶಕ್ಕೆ ಫಲಾಯನ ಮಾಡಿ ಹೆತ್ತ ಅಪ್ಪಾ ಅಮ್ಮನನ್ನು ಮರೆತು ಲಕ್ಷ ಲಕ್ಷ ಸಂಪಾದಿಸ ಬೇಕು ಎಂಬುದನ್ನೇ ಬಯಸುವುದರಿಂದ ವಿದ್ಯಾರ್ಥ್ದಿಗಳ ಮೇಲೆ ಅನಗತ್ಯ ಹೇರಿಕೆಯಾಗುತ್ತಿದೆ. ಬಾಲ್ಯದಿಂದಲೇ ಅವರ ಆಟ, ಸಾಂಸ್ಕೃತಿಯ ಚಟುವಟಿಕೆಗಳಿಗೆ ಸಂಪೂರ್ಣ ನಿಷೇಧ ಹೇರಲ್ಪಟ್ಟಿರುತ್ತದೆ. ಸದಾಕಾಲವೂ ಪುಸ್ತಕದ ಹುಳುವಾಗಿ, ವಿಷಯವನ್ನು ಅರ್ಥಮಾಡಿಕೊಳ್ಳದೇ, ಉರು ಹೊಡೆದು ಮಕ್ಕೀ ಕಾ ಮಕ್ಕಿಯಾಗಿ ಓದಿದ್ದನ್ನು ಕಕ್ಕಿ ಅಂಕ ಗಳಿಸುವ ಭರದಲ್ಲಿರುತ್ತಾರೆ. ಕೇವಲ ಅಂಕಗಳನ್ನು ಗಳಿಸುವ ಭರದಲ್ಲಿ ಲೋಕ ಜ್ಞಾನ, ವ್ಯಾವಹಾರಿಕ ಜ್ಞಾನ, ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳ ಬಗ್ಗೆ ಕಲಿಯುವ ಆಸಕ್ತಿಯೇ ಇರುವುದಿಲ್ಲವಾದ ಕಾರಣದಿಂದಾಗಿಯೇ ಅಪ್ಪಾ ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೂ ಶ್ರಾಧ್ದಕ್ಕೂ ವೆತ್ಯಾಸವೇ ತಿಳಿಯದವರಾಗರುತ್ತಾರೆ. ಅಂತಯೇ ಆ ರೀತಿಯಾಗಿ ಅಂಕಗಳಿಸುವುದರಲ್ಲಿ ಒಂದಿಷ್ಟು ಆಚೀಚೆಯಾದರೂ ಅತ್ಯಂತ ದುರ್ಬಲ ಮನಸ್ಸಿನವರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಮಕ್ಕಳಿಗೆ ಜನ್ಮ ನೀಡಿ ಅವರಿಗೆ ಹೊತ್ತು ಹೊತ್ತಿಗೆ ತಿನ್ನಿಸಿ, ಕಾಲ ಕಾಲಕ್ಕೆ ಕೇಳಿದ್ದನ್ನು ಕೊಡಿಸಿ, ಒಳ್ಳೋಳ್ಳೆ ಶಾಲಾ ಕಾಲೇಜುಗಳಲ್ಲಿ ವಿದ್ಯೆ ಕೊಡಿಸಿ ಐಶಾರಾಮ್ಯ ಗಾಡಿಗಳಲ್ಲಿ ಓಡಾಡಿಸಿ, ತಮ್ಮ ಪಾಡಿಗೆ ತಮ್ಮ ಕೆಲಸಗಳಲ್ಲಿ ಮಗ್ನರಾಗಿ ಹೋದರೆ ತಂದೆ ಮತ್ತು ತಾಯಿಯರ ಕರ್ತವ್ಯ ಮುಗಿದು ಹೋಗುತ್ತದೆ ಎಂದು ಭಾವಿಸಬಾರದು. ಮಕ್ಕಳ ಜೊತೆ ಒಳ್ಳೆಯ ಸಮಯವನ್ನು ಕಳೆಯಬೇಕು. ಮಕ್ಕಳಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು, ನಾಲ್ಕಾರು ಜನರನ್ನು ಏಕಕಾಲಕ್ಕೆ ಹೇಗೆ ಸಂಭಾಳಿಸುವುದು, ಎಲ್ಲರ ಜೊತೆಗೆ ಹೇಗೆ ಕಳೆಯುವುದು ಎನ್ನುವುದನ್ನೂ ಕಲಿಸಬೇಕು. ಇಲ್ಲದಿದ್ದಲ್ಲಿ ಪಡೆದ ಶಿಕ್ಷಣವು, ಶಿಕ್ಷಣವಾಗದೆ ಶಿಕ್ಷೆಯಾಗುತ್ತದೆ.

ನಾಲ್ಕಾರು ಪದವಿ ಪಡೆದಿದ್ದರೇನು? ವಿದೇಶದಲ್ಲಿ ಓದಿದ್ದರೇನು?
ವಿನಯ ಮತ್ತು ವಿವೇಚನೆ ಇಲ್ಲದಿದ್ದರೆ, ಪಡೆದ ವಿದ್ಯೆಯೆಲ್ಲವೂ ತೃಣಕ್ಕೆ ಸಮಾನ
ವಿದ್ಯೆಯ ಜೊತೆಗೆ ವಿನಯ ಮತ್ತು ವಿವೇಚನೆ ಹೆಚ್ಚಿಸುವತ್ತ ಚಿತ್ತ ಹರಿಸೋಣ

ನಾವು ಕಲಿಯುತ್ತಿರುವ ವಿದ್ಯೆ , ಕೇವಲ ಡಿಗ್ರಿ ಪಡೆದು
ನೌಕರಿ ಗಿಟ್ಟಿಸಿ ಐದಂಕಿಯ ಸಂಬಳ ಪಡೆಯುವುದಕ್ಕಲ್ಲ
ಕಲಿತ ಡಿಗ್ರಿಗಳು ಕೆಲ ಸಮಯ ಉಪಯೋಗಕ್ಕೆ ಬಾರದಿದ್ದರೂ,
ಸಾಮಾನ್ಯ ಜ್ಞಾನ ಜೀವನದಲ್ಲಿ ಖಂಡಿತಾ ಉಪಯೋಗಕ್ಕೆ ಬಂದೇ ಬರುತ್ತದೆ.
ಆದ ಕಾರಣ, ವಿದ್ಯೆಯ ಜೊತೆ ಸಾಮಾನ್ಯ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳೋಣ
ಸಮಾಜದಲ್ಲಿ ವಿವೇಕವಂತರಾಗಿ, ಸತ್ಪ್ರಜೆಯಾಗಿ, ನೆಮ್ಮದಿಯ ಜೀವನ ನಡೆಸೋಣ.

ದುಡ್ಡಿನಿಂದ ಏನು ಬೇಕಾದರೂ ಕೊಂಡು ಕೊಳ್ಳಬಹುದು
ಏಂದು ಎಣಿಸಿದ್ದರೆ ಅದು ಖಂಡಿತವಾಗಿಯೂ ತಪ್ಪು.
ದುಡ್ದಿನಿಂದ ಆಸ್ತಿ ಪಾಸ್ತಿ ಕೊಳ್ಳಬಹುದೇ ಹೊರತು ಮನ ಶಾಂತಿಯನ್ನಲ್ಲಾ
ಆತ್ಮ ಸಂತೃಪ್ತಿಯ ಮುಂದೆ ಕೋಟ್ಯಾಂತರ ರೂಪಾಯಿಯೂ ನಗಣ್ಯ

ಏನಂತೀರೀ?