ಕೂರೋನ ಇನ್ನೆಷ್ಟೂ ಅಂತಾ ಮನೆಯೊಳಗೇ ಕೂರೋಣಾ?

ಚೀನಾದ ದೇಶದ ವುಹಾನ್ ಪಟ್ಟಣದಲ್ಲಿ ಬಾವಲಿಗಳಿಂದ ಮೊದಲು ಕಾಣಿಸಿಕೊಂಡ ಕೂರೋನ ಎಂಬ ಮಹಾಮಾರಿ ಸೋಂಕು ನೋಡ ನೋಡುತ್ತಿದ್ದಂತೆಯೇ ಕೆಲವೇ ಕೆಲವು ದಿನಗಳಲ್ಲಿ ಪ್ರಪಂಚಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಸೋಂಕು ನಮ್ಮ ದೇಶದಲ್ಲಿ ಹರಡಬಾರದೆಂಬ ಮುಂಜಾಗೃತಾ ಕ್ರಮವಾಗಿ ಆರಂಭದಲ್ಲಿ ಏಪ್ರಿಲ್ 14 ರವಗೆ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿ, ಪರಿಸ್ಥಿತಿ ಸುಧಾರಿಸದ ಕಾರಣ ಅದನ್ನು ಎರಡನೆಯ ಬಾರಿಗೆ ಮೇ 3 ರವರೆಗೆ ವಿಸ್ತರಿಸಲಾಗಿದೆ. ಈಗ ಬಲ್ಲ ಮೂಲಗಳಿಂದ ತಿಳಿದ ಬಂದ ವರದಿಯ ಪ್ರಕಾರ ಮೂರನೇ ಬಾರಿಗೂ ಲಾಕ್ ಡೌನ್ ವಿಸ್ತರಿಸುವ ಎಲ್ಲಾ ಸಾಧ್ಯತೆಗಳೂ ಹೆಚ್ಚ್ಆಗಿದೆ. ಇಂತಹ ಲಾಕ್ ಡೌನ್, ದೇಶದ ಆರ್ಥಿಕ ಪರಿಸ್ಥಿತಿಯ ಜೊತೆ ಮಧ್ಯಮ ವರ್ಗದವರ ಮಾನಸಿಕ ಮನೋಬಲವನ್ನು ಹೇಗೆ ಕುಗ್ಗಿಸುತ್ತಿದೆ ಮತ್ತು ಮಧ್ಯಮವರ್ಗದವರ ಬವಣೆ ಏನು ಎಂಬುದನ್ನು ತಿಳಿಸುವ ಪ್ರಯತ್ನವೇ ಈ ಲೇಖನ.

ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 24 ರಂದು,21 ದಿನಗಳ ಕಾಲ ರಾಷ್ಟ್ರವ್ಯಾಪಿ ಲಾಕ್ ಡೌನ್ ಮಾಡಲು ಆದೇಶಿಸುವ ಒಂದು ವಾರದ ಮೊದಲೇ ಬಹುತೇಕ ಕಂಪನಿಗಳು ತಮ್ಮ ತಮ್ಮ ಕೆಲಸಗಾರರಿಗೆ ಮುಂಜಾಗ್ರತಾ ಕ್ರಮವಾಗಿ ಮನೆಯಿಂದಲೇ ಕೆಲಸ ಮಾಡಲು ತಿಳಿಸಿದ್ದರಿಂದ ಆರಂಭದಲ್ಲಿ ಎಲ್ಲರೂ ವಾರೆ ವಾಹ್! ಸದಾ ಕಾಲವೂ ಕೆಲಸ ಕೆಲಸ ಎಂದು ಮೂರು ಹೊತ್ತು ಮನೆಯ ಹೊರಗೇ ಕಾಲ ಕಳೆಯುತ್ತಿದ್ದಾಗ, ಈ ನೆಪದಲ್ಲಾದರೂ ಇಡೀ ದಿವಸ ಮನೆಯಲ್ಲಿಯೇ ಕುಟುಂಬಸ್ತರೆಲ್ಲರೂ ಕಾಲ ಕಳೆಯುವಂತಾಯಿತಲ್ಲಾ ಎಂದು ಸಂತೋಷ ಪಟ್ಟಿದ್ದು 100 ಕ್ಕೆ 100 ರಷ್ಟು ಸತ್ಯ.

ಪ್ರತೀ ದಿನ ಬೆಳಿಗ್ಗೆ ಹೊತ್ತಿಗೆ ಮುಂಚೆ ಎದ್ದು ಮನೆಯವರಿಗೆಲ್ಲರಿಗೂ ತಿಂಡಿ, ಊಟವನ್ನು ಒಂದೇ ಉಸಿರಿನಲ್ಲಿ ಮಾಡಿಟ್ಟು ಅವರು ಶಾಲಾ ಕಾಲೇಜು, ಕಛೇರಿಗಳಿಗೆ ಹೋದ ನಂತರ ತಮ್ಮ ನಿತ್ಯಕರ್ಮಾದಿಗಳನ್ನು ಮುಗಿಸುವಷ್ಟರಲ್ಲಿ ಪುನಃ ರಾತ್ರಿಯ ಊಟದ ವ್ಯವಸ್ಥೆ ಮಾಡುವುದರಲ್ಲಿಯೇ ಸರಿಹೋಗುತ್ತಿದ್ದ ಬಹುತೇಕ ಗೃಹಿಣಿಯರಿಗೆ ಈಗ ಸ್ವಲ್ಪ ನೆಮ್ಮದಿ ತಂದಿತ್ತು. ಎಲ್ಲರೂ ಮನೆಯಲ್ಲಿಯೇ ಇರುವುದರಿಂದ ಆರಾಮಾಗಿ ಎದ್ದು ಬೆಳಿಗ್ಗೆ ತಿಂಡಿ ಮಧ್ಯಾಹ್ನ ಊಟ, ಸಂಜೆ ಲೋಕಾಭಿರಾಮವಾಗಿ ಹರಟುತ್ತಾ ಕುರುಕಲು ತಿಂಡಿಯ ವ್ಯವಸ್ಥೆ ಇನ್ನು ರಾತ್ರಿ ಅಲ್ಪಾಹಾರ ಮಾಡಿದರೆ ಸಾಕು ಎಂದು ಆರಂಭದಲ್ಲಿ ಅಂದುಕೊಂಡರೂ ನಂತರ ಮನೆಯವರೆಲ್ಲರನ್ನೂ ಸಂತೋಷ ಪಡಿಸಲೆಂದೇ, ಪ್ರತೀ ದಿನ ಹೊಸ ಹೊಸ ರೀತಿಯ ಬಗೆ ಬಗೆಯ ತಿಂಡಿಗಳು, ಭಕ್ಷ ಭೋಜನಗಳು, ವಾರಾಂತ್ಯಗಳಲ್ಲಿ ಮಾತ್ರವೇ ತಿನ್ನುತ್ತಿದ್ದ ಬಜ್ಜಿ, ಬೋಂಡಾ, ಚಾಟ್ಸಗಳು, ಕೇಕ್ ಐಸ್ ಕ್ರೀಂ ಹೀಗೆ ಎಲ್ಲವನ್ನೂ ಪ್ರತೀ ದಿನ ಸಂಜೆ ಮನೆಯಲ್ಲಿಯೇ ಮಾಡಿ ಮನೆಯವರೆಲ್ಲರ ಮೆಚ್ಚುಗೆಗೆ ಪಾತ್ರರಾದರು.

WhatsApp Image 2020-04-26 at 10.40.09 AMಹೇ! ಮಡದಿಯೇ ಇಷ್ಟೋಂದನ್ನು ಮಾಡುತ್ತಿರುವಾಗ ನಾವೆಲ್ಲಾ ಸುಮ್ಮನಿದ್ದರೆ ಹೇಗೆ ಎಂದು ಭಾವಿಸಿದ ಗಂಡಸರಾದಿಯಾಗಿ ಮನೆಮಂದಿಯೆಲ್ಲಾ ಆರಂಭದಲ್ಲಿ ಅಡುಗೆ ಮನೆಯಲ್ಲಿ , ಮನೆ ಕೆಲಸಗಳಲ್ಲಿ ಸಹಾಯ ಮಾಡ ತೊಡಗಿದರು. ಇದೆಲ್ಲಾ ಒಂದೆರಡು ವಾರಗಳ ಮಟ್ಟಿಗೆ ಎಂದು ಭಾವಿಸಿ ಆರಂಭದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತಾದರೂ, ಕ್ರಮೇಣವಾಗಿ ಲಾಕ್ ಡೌನ್ ಕಾಲ ಕಾಲಕ್ಕೆ ವಿಸ್ತರಣೆಯಾಗುತ್ತಾ ಹೋದಂತೆಲ್ಲಾ ಎಲ್ಲರೂ ಭ್ರಮನಿರಸವಾಗತೊಡಗಿದರು.  ಹೇಗೋ ಗಂಡಾ ಎನ್ನುವ ಪ್ರಾಣಿ ಮನೆಯಲ್ಲಿದ್ದಾನಲ್ಲಾ ಅವನೇ ಮಾಡಲಿ ಎಂದು ಹೆಂಡತಿ, ಅರೇ ನಾನು ಕಛೇರಿಯ ಕೆಲಸ ಮಧ್ಯೆ ಸಹಾಯ ಮಾಡಿದರೇ ಕಡೆಗೆ ಇದು ನನ್ನದೇ ಕೆಲಸವಾಯಿತಲ್ಲಾ ಎಂದು ಗಂಡ ಭಾವಿಸತೊಡಗಿದಂತೆಯೇ ಗಂಡ ಹೆಂಡಿರ ಮಧ್ಯೆ ಸಣ್ಣದಾದ ವಿರಸ ತೋರತೊಡಗಿತು

ಇನ್ನು ಕಛೇರಿಯಲ್ಲೂ ಇದಕ್ಕಿಂತಲೂ ಭಿನ್ನವಾಗಿರಲಿಲ್ಲ. ನಾಡಿನಾದ್ಯಂತ ಲಾಕ್ ಡೌನ್ ಇದ್ದರೂ ಕೆಲವರು ಅದೇನು ಮಾಡುತ್ತೀಯೋ ಗೊತ್ತಿಲ್ಲ. ನನ್ನ ಕೆಲಸವಾಗಿಯೇ ಬಿಡಬೇಕು. ಈ ಕೆಲಸ ಇಂದೇ ಆಗದಿದ್ದಲ್ಲಿ ಕಂಪನಿಗೆ ಲಕ್ಷಾಂತರ ರೂಪಾಯಿಗಳ ನಷ್ಟವಾಗುತ್ತದೆ ಎಂದು ಭಯ ಹುಟ್ಟಿಸುವುದಲ್ಲದೇ, ಅವರಿಗೆ ಹೇಳುತ್ತೇನೆ. ಇವರಿಗೆ ಹೇಳುತ್ತೇನೆ ಎಂದು ಗೊಡ್ಡು ಬೆದರಿಕೆಯನ್ನೂ ಹಾಕತೊಡಗಿದರು. ಸರಿ ಅವರಿಗೆ ಸಹಾಯ ಮಾಡಲೆಂದು ನಿರ್ಧರಿಸಿ ಎಲ್ಲಾ ಸಹೋದ್ಯೋಗಿಗಳನ್ನು ಕರೆದು ಈ ಕೆಲಸ ಆಗಬೇಕು ಎಂದು ಕೇಳಿಕೊಂಡರೇ, ನಮಗೂ ಹೆಂಡ್ತಿ ಮಕ್ಕಳು ಇದ್ದಾರೆ ಸಾರ್. ನಾವು ಆಫೀಸಿಗೆ ಬಂದು ನಮಗೆ ಹೆಚ್ಚು ಕಡಿಮೆ ಆದ್ರೇ ನಮ್ಮನ್ನು ಯಾರು ನೋಡ್ಕೋತಾರೆ ಸಾರ್ ಎನ್ನುವ ಅಸಹಕಾರ. ಇದೊಂದು ರೀತಿಯ ಅತ್ತ ದರಿ ಇತ್ತ ಪುಲಿ ಎನ್ನುವ ಉಭಯ ಸಂಕಟ.

house_arrest2ರೀ ಇದೊಂದು ಸ್ವಲ್ಪ ಮಾಡ್ತೀರಾ? ಕೆಲಸದವಳು ಬಂದಿಲ್ಲಾ ನೋಡಿ ಹೋರಗೆ ನಾನು ರಂಗೋಲಿ ಹಾಕಿ ಬರೋಷ್ಟರಲ್ಲಿ ನೀವು ಮನೆ ಕಸ ಗುಡಿಸಿ ಓರಿಸಿ ಬಿಡಿ. ಓಲೆ ಮೇಲೆ ಸಾರು ಕುದ್ದಿದ್ರೇ ಸ್ವಲ್ಪ ಆರಿಸಿ ಬಿಡಿ. ಮಳೆ ಬರೋಹಾಗಿದೆ ಮೇಲೆ ಒಣಗಿ ಹಾಕಿರೋ ಬಟ್ಟೆ ತರ್ತೀರಾ, ಉಫ್!! ಒಂದೇ ಎರಡೇ ಕುದುರೆ ಕಂಡ್ರೇ ಕಾಲು ನೋವು ಅನ್ನೋ ಹಾಗೆ ಎಲ್ಲಾ ಕೆಲಸಗಳನ್ನೂ ಸುಲಭವಾಗಿ ಹೇರ ತೊಡಗಿದ್ದಂತೂ ಸುಳ್ಳಲ್ಲ. ಇನ್ನು ಮಕ್ಕಳೋ, ಅಪ್ಪಾ ನನ್ನ online assignmentಗೆ ಸ್ವಲ್ಪ ಸಹಾಯ ಮಾಡ್ತೀರಾ ಅಂತ ಮತ್ತೊಂದು ಕಡೆ. ಅಲ್ರೋ.. ನಾನೇನು ಸುಮ್ಮನೆ ಕೂತ್ಕೊಂಡು ಮಜಾ ಮಾಡ್ತಾ ಇದ್ದೀನಾ? ಆಫೀಸ್ ಕೆಲ್ಸ ಮಾಡ್ತಾ ಇಲ್ವಾ ಅಂದ್ರೇ ಸಾಕು. ಸಾಕು ಸುಮ್ನಿರಿ. ನಾನೂ ನೋಡ್ತಾ ಇದ್ದೀನಿ ನೀವು ಕೆಲಸ ಮಾಡೋದನ್ನ. OK Ok. I know, i am on it. i will post you an update ಅಂತಾ ಹೇಳೋದು ಒಂದು ಕೆಲಸಾನಾ ಅಂತಾ ಮಕ್ಕಳು ರೇಗಿಸಿದರೇ, ಅವ್ಯಾವನೋ ಹೇಳ್ದ್ರೇ, ಬಾಯಿ ಮುಚ್ಕೊಂಡು ಕೆಲ್ಸಾ ಮಾಡ್ತೀರೀ? ಮನೆ ಕೆಲ್ಸ ಅಂದ್ರೇ ನಿಮ್ಗೆ ತಾತ್ಸಾರನಾ?. ಅಂತಾ ಮನೆಯಾಕಿಯ ಮೂದಲಿಕೆ.

ಸಾಕಪ್ಪಾ ಸಾಕು ಈ ರೀತಿಯ ಅಪಮಾನ ಮತ್ತು ಅವಮಾನ. ಸುಮ್ಮನೆ ಬೆಳಗ್ಗೆ ಎದ್ದು ಸ್ವಲ್ಪ ವ್ಯಾಯಾಮ ಮಾಡಿ ಸ್ನಾನ ಸಂಧ್ಯಾವಂದನೆ ಮುಗಿಸಿ ತಿಂಡಿ ತಿಂದು ಆಫೀಸಿಗೆ ಹೋಗಿ ಅಲ್ಲಿ ನೆಮ್ಮದಿಯಾಗಿ ಕೆಲಸ ಮಾಡುತ್ತಾ, ಮಧ್ಯಾಹ್ನ ಊಟ, ಹೊತ್ತೊತ್ತಿಗೆ ಟೀ ಕಾಫಿ ಬ್ರೇಕ್ ತೆಗೆದುಕೊಳ್ಳುತ್ತಾ ಸಂಜೆ ಉಸ್ಸಪ್ಪಾ ಎಂದು ಮನೆಗೆ ಬಂದು ಕೈಕಾಲು ತೊಳೆದು ಮಡದಿ ಕೊಟ್ಟಿದ್ದನ್ನು ತಿಂದು, ಸ್ವಲ್ಪ ಹೊತ್ತು ಟಿವಿ ನೋಡಿ ಕಣ್ತುಂಬ ನಿದ್ದೆ ಮಾಡ್ತಾ, ಇನ್ನೂ ವಾರಾಂತ್ಯದಲ್ಲಿ ಹೊರಗೆಲ್ಲೋ ತಿರುಗಾಡಿ, ಮನೆ ಮಂದಿಯ ಜೊತೆ ಸಂತೋಷವಾಗಿ ಸಿನಿಮಾ ಇಲ್ಲವೇ ಊಟ/ತಿಂಡಿ ಮಾಡ್ಕೊಂಡು ನೆಮ್ಮದಿಯಾಗಿದ್ವಿ. ಈಗ ನೋಡಿದ್ರೇ ಇಪ್ಪತ್ನಾಲ್ಕು ಗಂಟೆನೂ ಮನೆಯಲ್ಲಿಯೇ ನಾಲ್ಕು ಗೋಡೆಗಳ ಮಧ್ಯೆ ಇರೋದು ತುಂಬಾನೇ ಬೇಜಾರಾಗಿ ಹೋಗಿದೆ.

ನಿಜ ಹೇಳ್ಬೇಕೂ ಅಂದ್ರೇ ಅತಿ ಕಡು ಬಡವರು, ದಿನ ನಿತ್ಯದ ಕೂಲಿ ಮಾಡಿ ಕೊಂಡು ಜೀವ ನಡೆಸುತ್ತಿರುವವರಿಗೆ, ಸರ್ಕಾರ, ವಿವಿಧ ರಾಜಕೀಯ ಪಕ್ಷಗಳು ಮತ್ತು ನಾನಾ ರೀತಿಯ ಸ್ವಯಂಸೇವಾ ಸಂಸ್ಥೆಗಳು ಉಚಿತವಾಗಿ ದವಸ ಧಾನ್ಯಗಳನ್ನು ಮನೆಯ ಬಾಗಿಲಿಗೇ ತಂದು ಕೊಡ್ತಾ ಇದ್ದಾರೆ. ಅವರೆಲ್ಲರೂ ಹೊಟ್ಟೆ ತುಂಬಾ ಊಟ ಮಾಡ್ತಾ ನಾಳೆಯ ಚಿಂತೆ ಇಲ್ಲದೇ ನೆಮ್ಮದಿಯಾಗಿದ್ದಾರೆ.

ಇನ್ನೂ ಸಾಹುಕಾರರು ಮತ್ತು ರಾಜಕಾರಣಿಗಳಿಗೆ ಈ ಲಾಕ್ ಡೌನ್ ಪ್ರಭಾವವೇ ಬೀರ್ತಾ ಇಲ್ಲ. ಅವರ ಮನೆಗಳಲ್ಲಿ ಎಲ್ಲವೂ ಯಥಾ ಸ್ಥಿತಿಯಲ್ಲಿಯೇ ನಡೆದುಕೊಂಡು ಹೋಗುತ್ತಿದೆ. ಅವರ ಮನೆಯ ಮದುವೆ, ಮುಂಜಿ, ನಾಮಕರಣ, ಹುಟ್ಟು ಹಬ್ಬ ಇದ್ಯಾವುದೋ ನಿಂತಿಲ್ಲ. ಲೋಕದ ಕಣ್ಣಿಗೆ ಮೂವತ್ತು ಜನಾ ಅಂತ ತಿಪ್ಪೇ ಸಾರಿಸಿ ಮುನ್ನೂರು ಜನ ಎಗ್ಗಿಲ್ಲದೇ ಸಂಭ್ರಮಿಸ್ತಾ ಇದ್ದಾರೆ.

WhatsApp Image 2020-04-26 at 11.47.04 AMಅದ್ರೇ ನಿಜವಾದ ಕಷ್ಟ ಇರೋದೇ ನಮ್ಮಂತಹ ಮಧ್ಯಮವರ್ಗದವರಿಗೆ. ಕಷ್ಟದ ಸಮಯದಲ್ಲಿ ಆಗಲಿ ಅಂತಾ ಅಷ್ಟೋ ಇಷ್ಟೋ ಕೂಡಿಟ್ಟ ಹಣ ಎಲ್ಲವೂ ಖರ್ಚಾಗಿ ಹೋಗುತ್ತಿದೆ. ಮನೇಲಿ ತಿನ್ನೋದಿಕ್ಕೆ ಇಲ್ಲಾ ಅಂತಾ ಯಾರ ಹತ್ರಾನೂ ಬೇಡಿ ತಿನ್ನೋಕೆ ಮನಸ್ಸು ಬರೋದಿಲ್ಲ. ಇನ್ನೂ ಮರ್ಯಾದೆ ಬಿಟ್ಟು ನಮ್ಗೂ ಕಷ್ಟ ಆಗಿದೆ ಸ್ವಲ್ಪ ದವಸ ಧಾನ್ಯ ಕೊಡಿ ಅಂತಾ ಕೇಳಿದ್ರೇ, ನಿಮಗೇನ್ರೀ ಕಷ್ಟ? ಕಾರು, ಬಂಗಲೆ ಎಲ್ಲಾ ಇದೆ ಅಂತಾರೆ. ಆದ್ರೇ ಅವೆಲ್ಲವೂ ಸಾಲದ ಕಂತಿನಲ್ಲಿ ತೆಗೆದುಕೊಂಡಿದ್ದು. ಎರಡು ತಿಂಗಳು ಕಂತು ಕಟ್ಟಿಲ್ಲಾ ಅಂದ್ರೇ ಎಲ್ಲಾ ಮುಟ್ಟು ಗೋಲು ಹಾಕ್ಕೊಂಡು ಬೀದಿ ಪಾಲು ಮಾಡ್ತಾರೇ ಎನ್ನುವ ಕಠು ಸತ್ಯವನ್ನು ಅವರ ಬಳಿ ಹೇಳ್ಕೊಳ್ಳೋದಿಕ್ಕೆ ಆಗೋದಿಲ್ಲ ಅಲ್ವೇ? . ಇನ್ನು ಸಾಲ ಸೋಲ ಮಾಡೋಣ ಅಂದ್ರೇ, ಸಾಲ ಕೋಡೋರು ಯಾರೂ ಇಲ್ಲ. ಒಂದು ಪಕ್ಷ ಸಾಲ ಸಿಕ್ಕರೂ ಅದನ್ನು ತೀರ್ಸೋದು ಹೇಗಪ್ಪಾ ಅನ್ನೋ ಚಿಂತೆ. ಯಾಕೆಂದ್ರೇ, ಈಗಾಗಲೇ ಹಲವಾರು ಕಂಪನಿಗಳು ಆರ್ಥಿಕ ಪರಿಸ್ಥಿತಿಯ ನೆಪವೊಡ್ಡಿ ಈ ಪರಿಸ್ಥಿತಿಯ ದುರ್ಲಾಭ ಪಡೆದುಕೊಂಡು ತಮ್ಮ ಕೆಲಸಗಾರರನ್ನು ತೆಗೆದು ಹಾಕ್ತಾ ಇದ್ದಾರೆ. ಇಲ್ವೇ, ಕೊಡೋ ಸಂಬಳಕ್ಕೂ ಕತ್ತರಿ ಹಾಕುವ ಮುನ್ಸೂಚನೆ ತೋರಿಸ್ತಾ ಇದ್ದಾರೆ. ಈಗ ಬರ್ತಾ ಇರೋ ಸಂಬಳವನ್ನು ನೆಚ್ಚಿಕೊಂಡೇ, ನಮ್ಮ ಜೀವನ ಶೈಲಿ ರೊಡಿಸಿಕೊಂಡಿರುವ ಮಧ್ಯಮವರ್ಗದವರಿಗೆ ಅದರಲ್ಲಿ ಅಲ್ಪ ಸ್ವಲ್ಪ ಬದಲಾವಣೆಯಾದ್ರೂ ತುಂಬಾನೇ ಕಷ್ಟ ಆಗುತ್ತದೆ.

house3ಹಾಗಾಗಿ ಕೂರೋನಾ ಅಂತಾ ಇನ್ನೆಷ್ಟು ದಿನಾ ಮನೆಲಿ ಕೂರೋಣ? ಅಂತ ಎಲ್ಲರಿಗೂ ಅನ್ನಿಸಿರುವುದಂತೂ ಸುಳ್ಳಲ್ಲ. ಪ್ರಧಾನಿಗಳ ಮಾತಿಗೆ ಗೌರವ ನೀಡಿ ಸುಮಾರು ಒಂದೂವರೆ ತಿಂಗಳು ಮನೆಯಲ್ಲಿ ಇದ್ದದ್ದು ಸಾಕಾಯ್ತು. ಇನ್ನೇನಿದ್ರೂ ಸ್ವಲ್ಪ ಸ್ವಾರ್ಥಿಗಳಾಗಿ ನಾವು ನಮ್ಮ ಕುಟುಂಬ ಅಂತಾ ಜೀವನ ನೋಡ್ಕೋ ಬೇಕಾಗಿದೆ. ದೇಶವ್ಯಾಪಿ ಲಾಕ್ ಡೌನ್ ಮಾಡಿ, ಮನೆ ಮನೆಯಿಂದ ಹೊರಗೆ ಬರ್ಬೇಡಿ ಅಂತಾ ಪರಿ ಪರಿಯಾಗಿ ಕೇಳ್ಕೊಂಡ್ರೂ ಸುಮಾರು 15-20% ಜನಾ ಇದೆಲ್ಲಾ ನಮಗೆ ಅನ್ವಯಿಸೋದಿಲ್ಲಾ. ನಾವಿರೋದೇ ಹೀಗೆ ಅಂತಾ ತಿರ್ಗಾಡ್ತಾನೇ ಇದ್ದಾರೆ. ಕೊರೋನಾ ಹಬ್ಬಿಸ್ತಾನೇ ಇದ್ದಾರೆ. ದಿನದಿಂದ ದಿನಕ್ಕೆ ಸೋಂಕು ತಗುಲಿದವರ ಸಂಖ್ಯೆ ಇಳಿಮುಖ ಆಗೋದಕ್ಕಿಂತ ಹೆಚ್ಚಾಗ್ತಾನೇ ಇದೆ. ಹಾಗಾಗಿ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಏಕೆ ಬರೆ ಹಾಕ ಬೇಕು?. ಈ ರೋಗ ಎಲ್ಲೆಲ್ಲಿ, ಯಾರ್ಯಾರಿಗೆ ಬಂದಿದೆ ಅಂತಾ ಈಗ ಎಲ್ಲರಿಗೂ ತಿಳಿದಿದೆ. ಅಂತಹವರನ್ನೂ ಮತ್ತು ಆ ಪ್ರದೇಶಗಳನ್ನು ಸೀಲ್ ಡೌನ್ ಮಾಡಿ ಉಳಿದವರಿಗೆ ಸ್ವಲ್ಪ ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿ ಕೊಡುವಂತಾಗಬೇಕು.

ಈ ಮಹಾಮಾರಿ ಒಂದೆರಡು ತಿಂಗಳಲ್ಲಿ ಹೊರಟು ಹೋಗುತ್ತದೆ. ಆದಾದ ನಂತರ ನಮ್ಮೆಲ್ಲರ ಪರಿಸ್ಥಿತಿ ಸರಿದಾರಿಗೆ ಬರುತ್ತದೆ ಎನ್ನುವುದು ನೀರಿನ ಮೇಲಿನ ಗುಳ್ಳೆಯೇ. ಸರ್ಕಾರ ಏನೇನೇ ಕ್ರಮ ಕೈಗೊಂಡರೂ, ಪ್ರಪಂಚಾದ್ಯಂತ ಪರಿಸ್ಥಿತಿ ತಿಳಿಯಾಗುವುದಕ್ಕೆ ಕನಿಷ್ಟ ಪಕ್ಷ ಇನ್ನೂ ಮೂರ್ನಾಲ್ಕು ತಿಂಗಳು ಇಲ್ಲವೇ ಅದಕ್ಕಿಂತಲೂ ಹೆಚ್ಚೇ ಹಿಡಿಸಬಹುದು. ಅಲ್ಲಿಯವರೆಗೂ ಸಾರ್ವಜನಿಕ ಸಂಪರ್ಕ ಸಾಧನಗಳನ್ನು ನಿರ್ಭಂಧಿಸಿ ಎಲ್ಲರೂ ತಮ್ಮ ತಮ್ಮ ಖಾಸಗೀ ವಾಹನಗಳಲ್ಲಿ ತಮ್ಮ ನಗರದ ವ್ಯಾಪ್ತಿಯೊಳಗೆ Social distance ಪಾಲಿಸುತ್ತಾ ದಿನ ನಿತ್ಯದ ಕಾರ್ಯಗಳನ್ನು ಮಾಡಿಕೊಳ್ಳುವಂತಾಗ ಬೇಕು.

ಜಾತಸ್ಯ ಮರಣಂ ಧೃವಂ ಅಂದರೆ ಹುಟ್ಟಿದರು ಸಾಯಲೇ ಬೇಕು ಎಂಬುದು ಜಗದ ನಿಯಮ. ಹಾಗಾಗಿ ಸಾಯ್ಬೇಕು ಅಂತ ನಮ್ಮ ಹಣೆಲೇ ಬರ್ದಿದ್ರೇ, ಈ ರೀತಿ ಮನೆಯಲ್ಲಿಯೇ ಬಂಧಿಯಾಗಿ ನಿಧಾನವಾಗಿ ಮಾನಸಿಕವಾಗಿ ಜರ್ಜರಿತರಾಗಿ ಸಾಯುವ ಬದಲು ಸ್ವಚ್ಚಂದವಾಗಿ ತಿರ್ಗಾಡ್ತಾ ಸಾಯೋದೇ ಮೇಲು ಅಂತಾ ಬಹುತೇಕರಿಗೆ ಅನ್ನಿಸ್ತಾ ಇರೋದೋ ಸುಳ್ಳಲ್ಲ. ಶಿಕ್ಷೆಯ ರೂಪದಲ್ಲಿ ಗೃಹಬಂಧನದಲ್ಲಿ ಇರುವ ಅನೇಕ ಮಂದಿಗಳು ತಮ್ಮ ಅಳಲನ್ನು ತೋಡಿಕೊಳ್ಳುವುದನ್ನು ಟಿವಿಯಲ್ಲಿ ನೋಡಿದಾಗ ಮತ್ತು ವೃತ್ತ ಪತ್ರಿಕೆಯಲ್ಲಿ ಓದುವಾಗ, ಅರೇ ಇದೇನಪ್ಪಾ ಎಲ್ಲಾ ಸೌಲಭ್ಯಗಳೂ ಇದ್ಮೇಲೆ ಮನೆಯಲ್ಲಿ ಇರೋದಿಕ್ಕೆ ಇವರಿಗೇನು ಕಷ್ಟ ಅಂತಾ ಅನ್ಕೋತಾ ಇದ್ವೀ. ಈಗ ನಮಗೇ ಅದರ ಅನುಭವವಾಗುತ್ತಿದೆ. ಕಬ್ಬು ತಿಂದಾಗಲೇ, ಅದರ ರುಚಿ ಗೊತ್ತಾಗುವುದು ಅಲ್ಚೇ?

ಏನಂತೀರೀ?

ವಂಗ್ಯಚಿತ್ರ ಆತ್ಮೀಯ Ta Chi ಅವರಿಂದ ಎರವಲು ಪಡೆದದ್ದು. ಮಿಕ್ಕ ಪೋಟೋಗಳು ಅಂತರ್ಜಾಲದಿಂದ ನಕಲು ಮಾಡಿದೆ.