ರಂಗು ರಂಗಿನ ಶಬ್ಧ ಮತ್ತು ಬೆಳಕಿನ ಸಮ್ಮಿಳನದ ದೀಪಾವಳಿ ಹಬ್ಬ ಮುಗಿದು ಕನ್ನಡದ ಹಬ್ಬ ಕರ್ನಾಟಕ ರಾಜ್ಯೋತ್ಸವದ ಇಡೀ ತಿಂಗಳ ಭರಾಟೆ ಮುಗಿದು ಪ್ರಕೃತಿಯಲ್ಲೂ ತೀವ್ರವಾದ ಬದಲಾವಣೆಯಾಗಿ ಜನರನ್ನೆಲ್ಲಾ ಮಾಗಿಯ ಚಳಿಯಲ್ಲಿ ಗಡ ಗಡ ನಡುಗಿಸುತ್ತಾ ಮನೆಯಿಂದ ಹೊರಗಡೆ ಬಾರದಂತೆ ತಡೆದರೂ, ಬೆಂಗಳೂರಿನ ಜನರನ್ನೆಲ್ಲಾ ಸುಮಾರು ಎರಡು ವಾರಗಳ ಕಾಲ ಒಂದೆಡೆ ಒಗ್ಗೂಡಿಸುವ ಕಾರ್ಯಕ್ರಮವೆಂದರೆ ಬೆಂಗಳೂರಿನ ವಿಶ್ವೇಶ್ವರ ಪುರಂ ನ ತಿಂಡಿ ಬೀದಿಯಲ್ಲಿ ಪ್ರತೀವರ್ಷವೂ ವಾಸವೀ ಕಾಂಡಿಮೆಂಟ್ಸ್ ಅವರ ವತಿಯಿಂದ ನೆಡೆಸಲ್ಪಡುವ ಅವರೇ ಮೇಳ ಎಂದರೆ ಅತಿಶಯೋಕ್ತಿಯೇನಲ್ಲ.
ಧನುರ್ಮಾಸದ ಇಬ್ಬನಿಯು ಅವರೇಕಾಯಿಯ ಮೇಲೆ ಬಿದ್ದು ಒಂದು ರೀತಿಯ ಅಪ್ಯಾಯಮಾನವಾದ ಅವರೇಕಾಯಿಯ ಸೊಗಡಿನ ಘಮಲನ್ನು ಹೇಳಿ ಕೇಳುವುದಕ್ಕಿಂತ ಅನುಭವಿಸಿದರೇ ಒಂದು ರೀತಿಯ ಮಹದಾನಂದ. ಮೊದಲೆಲ್ಲಾ ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಬಹುತೇಕ ಎಲ್ಲರ ಮನೆಗಳಲ್ಲಿಯ ಅಡುಗೆ ಮನೆಯಲ್ಲಿ ಬಳೆಸುವ ಒಂದು ಸಾಮಾನ್ಯ ಪದಾರ್ಥವೆಂದರೆ ಅವರೇಕಾಯಿ. ಅವರೇಕಾಯಿ ಉಪ್ಪಿಟ್ಟು, ಆವರೇಕಾಯಿ ಬಾತ್, ಅವರೇಕಾಯಿ ರೊಟ್ಟಿ, ಅವರೇ ಕಾಯಿ ಹುಳಿ, ಹಿತಕಿದ ಅವರೇಕಾಯಿ ಹುಳಿ, ಅವರೇಬೇಳೆ ಹುಗ್ಗಿ, ಅವರೇಕಾಯಿ ನುಚ್ಚಿನ ಉಂಡೆ, ಅವರೇಕಾಯಿ ಆಂಬೊಡೆ, ಖಾರದ ಅವರೆಕಾಳು ಹೀಗೆ ಅವರೇಕಾಯಿಂದ ಈ ರೀತಿಯಾದ ಕೆಲವೇ ಕೆಲವು ತಿಂಡಿಗಳು ತಯಾರಿಸಿ ಸವಿಯುತ್ತಿದ್ದದ್ದು ಸಹಜವಾಗಿರುತ್ತಿತ್ತು.
ಕಳೆದ ಎಂಟು ಹತ್ತು ವರ್ಷಗಳಲ್ಲಿ ಬೆಂಗಳೂರಿನ ವಿಶ್ವೇಶ್ವರ ಪುರಂ ನ ತಿಂಡಿ ಬೀದಿಯ ವಾಸವೀ ಕಾಂಡಿಮೆಂಟ್ಸ್ ಅವರು ನಿಜಕ್ಕೂ ಅವರೇಕಾಯಿಯಿಂದ ಊಹಿಸಲೂ ಅಸಾಧ್ಯವಾದ ಬಗೆ ಬಗೆಯಾದ ರುಚಿಕರವಾದ ತಿಂಡಿತಿನಿಸುಗಳನ್ನು ತಯಾರಿಸಿ ಅವರೇಕಾಯಿಯ ಮಹತ್ವವನ್ನು ಇನ್ನೂ ಹೆಚ್ಚಿಸಿದ್ದಾರೆ ಮತ್ತು ಅದನ್ನು ಪ್ರತೀ ವರ್ಷವೂ ಅದ್ದೂರಿಯಾಗಿ ಇನ್ನೂ ಬಗೆ ಬಗೆಯ ಹೊಸ ಹೊಸ ಅವರೇಕಾಯಿ ತಿನಿಸುಗಳನ್ನು ಆವಿಷ್ಕಾರ ಮಾಡುತ್ತಾ ಸಂಭ್ರಮದ ತಿನಿಸುಗಳ ಮೇಳ, ಜಾತ್ರೆಯನ್ನು ಏರ್ಪಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ. ಅದರ ಪ್ರತೀಕವಾಗಿ ಪ್ರತೀ ತಿಂಗಳು 1ನೇ ತಾರೀಖಿನಿಂದ 8ನೇ ತಾರೀಖಿನವರೆಗೂ ವಿ.ವಿ.ಪುರಂ ಫುಡ್ ಸ್ತ್ರೀಟ್ನಲ್ಲಿ ಅವರೇಮೇಳ ನಡೆಯುತ್ತಿದೆ. ಕಳೆದ ವರ್ಷ ಸ್ಥಳೀಯ ನಗರಪಾಲಿಕೆಯ ಸದಸ್ಯರು ಶುಚಿತ್ವದ. ಆಕ್ಷೇಪ ತೆಗೆದು ಅವರೇಮೇಳವನ್ನು ತಡೆಯಲು ಸಮರ್ಥರಾದರೆ, ಈ ವರ್ಷ ಅವರ ಪಾಲನ್ನು ಕರೋನ ಮಹಾಮಾರಿ ನುಂಗಿಹಾಕಿದೆ.
ಎರಡು ವರ್ಷದ ಹಿಂದೆ ಮಡದಿಯೊಂದಿಗೆ ಈ ಅವರೇ ಮೇಳಕ್ಕೆ ಹೋಗಿ ಬಗೆ ಬಗೆಯ ಅವರೇ ಖಾದ್ಯಗಳನ್ನು ಸವಿದಿದ್ದ ರಸಾನುಭವ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಆರಂಭದ ದಿನಗಳ ಜನಜಂಗುಳಿ ಕಡಿಮೆಯಾದ ಮೇಲೆ ಹೋಗೋಣ ಎಂದು ನಿರ್ಧರಿಸಿ ವಾರಾಂತ್ಯದ ಶನಿವಾರ ಮಧ್ಯಾಹ್ನ ಪತ್ನಿ ಸಮೇತನಾಗಿ ಅಲ್ಲಿಗೆ ಹೋದರೆ ಅಲ್ಲಿಯ ವಾತಾವರಣ ನಿಜಕ್ಕೂ ಅಚ್ಚರಿ ತರಿಸಿತು. ಬೆಂಗಳೂರಿನ ಜನರಿಗೆ ಶುಚಿರುಚಿಕರವಾದ ತಿಂಡಿತಿನಿಸುಗಳು ಎಲ್ಲಿಯೇ ಸಿಗಲಿ, ಅದು ಹೇಗೆಯೇ ಇರಲಿ, ಆರಂಭದ ದಿನದಿಂದ ಅಂತಿಮ ದಿನದ, ಅಂತಿಮ ಕ್ಷಣದವರೆಗೂ ಅದರ ಸಂಪೂರ್ಣ ಲಾಭವನ್ನು ಪಡೆಯುತ್ತಾರೆ ಎನ್ನುವುದಕ್ಕೆ ಇದುವೇ ಸಾಕ್ಷಿಯಾಗಿತ್ತು. ಇನ್ನೂ ಹಾಲು ಕುಡಿಯುತ್ತಿರುವ ಹಸುಗಲ್ಲದ ಮಗುವಿನಿಂದ ಹಿಡಿದು ವಯೋವೃಧ್ಧರವರೆಗೂ ಆಬಾಲವೃಧ್ಧರಾದಿಯಾಗಿ ಅಲ್ಲಿ ಸರತಿಯಲ್ಲಿ ನಿಂತು ಬಗೆ ಬಗೆ ತಿಂಡಿಯ ರುಚಿಯನ್ನು ಸವಿಯುವುದನ್ನು ನೋಡುವುದೇ ಒಂದು ಆನಂದ.
ಅವರೇ ಕಾಯಿ ದೋಸೆ, ಪಡ್ಡು,, ಬಿಸಿ ಬಿಸಿ ಮಸಾಲೆ ವಡೆ, ಹುಸ್ಲಿ, ಉಪ್ಪಿಟ್ಟು, ಅವರೇಕಾಯಿ ಚಿತ್ರಾನ್ನ, ಆವರೇಕಾಯಿ ಬಾತ್, ಅವರೇ ಕಾಯಿ ಇಡ್ಲಿ ಕಡುಬು, ರೊಟ್ಟಿ, ಅವರೇಕಾಯಿ ಒತ್ತು ಶ್ಯಾವಿಗೆ ಹೀಗೆ ರುಚಿಕರವಾದ ತಿಂಡಿಗಳಾದರೆ, ಅವರೇಕಾಯಿ ಜಾಮೂನು, ಜಿಲೇಬಿ, ಬರ್ಫಿ, ಅವರೇಕಾಯಿ ಒಬ್ಬಟ್ಟು ಹೀಗೆ ಬಗೆ ಬಗೆಯ ಸಿಹಿ ತಿಂಡಿಗಳ ಜೊತೆ ಇತ್ತೀಚಿನ ಮಕ್ಕಳು ಮತ್ತು ಯುವ ಜನತೆ ಇಷ್ಟಪಡುವ ಅವರೇಬೇಳೆ ರೋಲ್, ಅವರೇಕಾಳು ಬೇಬಿ ಕಾರ್ನ್, ಅವರೇ ಮಶ್ರೂಮ್, ಆವರೇಕಾಳು ಮಂಚೂರಿಯನ್, ಅವರೇಕಾಳು ಪಾವ್ ಬಾಜಿ, ಎಲ್ಲದ್ದಕ್ಕೂ ಮಿಗಿಲಾಗಿ ಅವರೇಕಾಯಿ ಪಾನಿಪುರಿ ನಿಜಕ್ಕೂ ಬಾಯಿರುಚಿಯನ್ನು ಹೆಚ್ಚಿಸಿದ್ದಂತೂ ಸುಳ್ಳಲ್ಲ. ಅವರೇ ಕಾಯಿ ಐಸ್ ಕ್ರೀಂ ಬಗ್ಗೆ ನಾನು ವಿವರಿಸುವುದಕ್ಕಿಂತ ನೀವೇ ಅದನ್ನು ತಿಂದು ಸವಿದರೇನೇ ಚೆಂದ.
ಸಿಲಿಕಾನ್ ಸಿಟಿ. ಇಲ್ಲಿ ಸಾಫ್ಟ್ವೇರ್ ಕಂಪನಿಗಳು ಹೆಚ್ಚಾಗಿ ಬೆಂಗಳೂರಿನ ಜನರು ಐಶಾರಾಮಿ ಹೋಟೆಲ್ಗಳಲ್ಲಿಯೇ ಹೆಚ್ಚಾಗಿ ತಿನ್ನುವುದು ಎಂದು ಹೊರ ಜಗತ್ತು ನಂಬಿದ್ದರೆ ಅದು ಶುಧ್ಧ ಸುಳ್ಳು. ರುಚಿಯಾಗಿದ್ದರೆ, ಶುಚಿಯ ಕಡೆಯೂ ಗಮನ ಹರಿಸದೆ ರಸ್ತೆಯ ಬದಿಯಲ್ಲೇ ತಿಂದು ಮೂಲೆಯಲ್ಲಿ ಕೈ ತೊಳೆದು, ಸಣ್ಣಗೆ ಡರ್ ಎಂದು ತೇಗುವುದನ್ನು ನೋಡಲು ಇಲ್ಲಿಗೆ ಬರಲೇ ಬೇಕು. ಮನೆಯಲ್ಲಿ ಆರೋಗ್ಯದ ನೆಪದಲ್ಲಿ ಅನ್ನ, ಕರಿದ ತಿಂಡಿ. ತುಪ್ಪಾ / ಎಣ್ಣೆ ಪದಾರ್ಥಗಳಿಂದ ದೂರವಿರುವ ಮಂದಿ ಇಲ್ಲಿ ಅದನ್ನೆಲ್ಲಾ ಬದಿಗಿಟ್ಟು ದೋಸೆ ಬೇಯಿಸುವಾಗ ಸುರಿಯುವ ಎಣ್ಣೆ, ಹೋಳಿಗೆಯ ರುಚಿಯನ್ನು ಹೆಚ್ಚಿಸಲು ಪಿಚಕಾರಿಯ ರೀತಿಯಲ್ಲಿ ಸುರಿಯುವ ತುಪ್ಪಾ, ಕೈ ಇದೆ ಎನ್ನುವುದನ್ನು ಮರೆತು ಎಲ್ಲದ್ದಕ್ಕೂ ಚಮಚಗಳನ್ನು ಬಳೆಸುವ ಮಂದಿ ಅದೆಲ್ಲವನ್ನೂ ಮರೆತು ಇಲ್ಲಿ ಐದೂ ಬೆರಳುಗಳನ್ನು ಬಾಯಿಯೊಳಗೆ ಹಾಕಿಕೊಂಡು ಸೊರ್ ಸೊರ್ ಎಂದು ಹಿತಕವರೇ ಬೇಳೆ ಹುಳಿಯನ್ನು ಸವಿಯುವುದು, ಕೈ ತೊಳೆಯಲು ನೀರೀಲ್ಲ, ಒರೆಸಿಕೊಳ್ಳಲು ಟಿಶ್ಯು ಪೇಪರ್ ಸಿಗುವುದಿಲ್ಲ ಎನ್ನುವುದನ್ನು ಮನಗೊಂಡು ಎಲ್ಲಾ ತಿಂದು ಮುಗಿದ ನಂತರ ಅಕ್ಕ ಪಕ್ಕದವರು ನೋಡುತ್ತಿದ್ದಾರೆ ಎನ್ನುವುದನ್ನೂ ಮರೆತು ಎಲ್ಲಾ ಬೆರಳುಗಳನ್ನು ಒಂದೊಂದಾಗಿ ಚೀಪುವುದನ್ನು ನೋಡುವುದೇ ಬಲು ಗಮ್ಮತ್ತು. ಮನೆಯಲ್ಲಿ ಒಬ್ಬರ ತಟ್ಟೆಯಲ್ಲಿ ಮತ್ತೊಬ್ಬರು ಎಂದೂ ಕೈ ಹಾಕದವರು, ಎಂಜಲು ತಿನ್ನದವರು, ಇಲ್ಲಿ ಬಂದ ಮೇಲೆ ಎಲ್ಲಾ ತಿಂಡಿಗಳ ರುಚಿಯನ್ನು ಸವಿಯಲೇ ಬೇಕು ಎಂದು ನಿರ್ಧರಿಸಿ ಇಡೀ ಕುಟುಂಬದವರೆಲ್ಲಾ ಬಗೆ ಬಗೆಯ ತಿಂಡಿಗಳನ್ನು ತೆಗೆದುಕೊಂಡು ಎಲ್ಲರೂ ಒಂದೇ ತಟ್ಟೆಗೆ ಕೈ ಹಾಕಿ ತಿನ್ನುವುದು ನಿಜಕ್ಕೂ ಬಂಧು ಬಾಂಧವ್ಯವನ್ನು ಹೆಚ್ಚಿಸುವುದರಲ್ಲಿ ಮಹತ್ತರ ಪಾತ್ರವಹಿಸುತ್ತಿದೆ ಎಂದರೆ ಸುಳ್ಳಾಗದು.
ಅವರೇ ಮೇಳ ಒಂದು ವಾರದಿಂದ ಹತ್ತು ದಿನಗಳು ಇರುತ್ತದೆ ಎಂದು ನಿರ್ಧರಿಸಿರುತ್ತಾರಾದರೂ, ಜನರ ಅಪೇಕ್ಷೆಯಂತೆ ಮಳೆ ನಿಂತು ಹೋದ ಮೇಲೇ ಹನಿಗಳು ಉದುರುವ ಹಾಗೆ ಮತ್ತೆ ಕೆಲವು ದಿನಗಳ ಕಾಲ ಮುಂದುವರೆಸುವುದು ಅವರೇಮೇಳದ ಖ್ಯಾತಿಯನ್ನು ತೋರಿಸುತ್ತದೆ. ಮುಂದಿನ ವರ್ಷ ಈ ಕರೋನ ಸಾಂಕ್ರಾಮಿಕ ರೋಗ ಕಳೆದು, ನಗರಪಾಲಿಕೆಯ ಸಂಕಷ್ಟಗಳೆಲ್ಲವೂ ಕಳೆದು ಮತ್ತೆ ಅವರೇ ಮೇಳ ಆರಂಭವಾದಲ್ಲಿ, ಖಂಡಿತವಾಗಿಯೂ ಸಮಯ ಮಾಡಿಕೊಂಡು ಕುಟುಂಬದ ಸಮೇತರಾಗಿ ಅವರೇ ಮೇಳಕ್ಕೆ ಹೋಗಿ ರುಚಿ ರುಚಿಯಾದ, ಬಿಸಿ ಬಿಸಿಯಾದ, ಬಗೆ ಬಗೆಯಾದ ತಿಂಡಿಗಳನ್ನು ಸವಿಯೋಣ. ಅಲ್ಲಿ ಎಲ್ಲಾ ಬಗೆಯ ತಿಂಡಿಗಳ ಪಾರ್ಸಲ್ ವ್ಯವಸ್ಥೆ ಇದ್ದರೂ, ಮನೆಗೆ ತಂದು ತಣ್ಣಗೆ ತಿನ್ನುವ ಬದಲು, ನಮ್ಮೆಲ್ಲಾ ಹಮ್ಮು ಬಿಮ್ಮು ಬಿಟ್ಟು ಅಲ್ಲಿಯೇ ಸರದಿಯಲ್ಲಿ ಕಾಯುತ್ತಾ ಬಿಸಿ ಬಿಸಿಯಾಗಿ ತಿನ್ನುವ ಮಜವೇ ಬೇರೆ.
ಏನಂತೀರೀ
ನಿಮ್ಮವನೇ ಉಮಾಸುತ