ಬುದ್ಧಿವಂತ ರೈತ

ಅದೊ೦ದು ಪುಟ್ಟ ಹಳ್ಳಿ, ಅಲ್ಲೊಬ್ಬ ರೈತ ತನ್ನ ಪಾಲಿಗೆ ಬಂದಿದ್ದ ಜಮೀನಿನಲ್ಲಿ ಬೇಸಾಯ ಮಾಡುತ್ತಾ ಜೊತೆ ಜೊತೆಗೆ ಹೈನುಗಾರಿಕೆ ಮಾಡುತ್ತಾ ತನ್ನ ಸಂಸಾರದೊಂದಿಗೆ ಸುಖ:ದಿಂದಿದ್ದನು. ಅವನ ಬಳಿ ಇದ್ದ ಒಂದು ದೇಸೀ ಹಸು ದಷ್ಟ ಪುಷ್ಟವಾಗಿದ್ದು ಪ್ರತಿದಿನ ಬೆಳಿಗ್ಗೆ‍ ಸಂಜೆ ಸುಮಾರು ಎಂಟರಿಂದ ಹತ್ತು ಲೀಟರ್ ಹಾಲನ್ನು ಕೊಡುತ್ತಿದ್ದರಿಂದ ಆ ಹಸು ಆ ರೈತನ ಅಚ್ಚುಮೆಚ್ಚಾಗಿತ್ತು. ಒಂದು ದಿನ ಅಚಾನಕ್ಕಾಗಿ ಆ ಹಸುವಿಗೆ ಕಾಯಿಲೆ ಬಂದು, ಇದ್ದಕ್ಕಿದ್ದಂತೆ ಹಾಲಿನ ಪ್ರಮಾಣದಲ್ಲಿ ಕಡಿಮೆಯಾಗಿ, ಬರಬರುತ್ತಾ ಹಸು ಬಡಕಲಾಗ ತೊಡಗಿತು. ಇದರಿಂದ ಚಿಂತಿತನಾದ ರೈತನು ತನಗೆ ತಿಳಿದಿದ್ದ ಎಲ್ಲಾ ರೀತಿಯ ನಾಟಿ  ಔಷಧಿಗಳನ್ನು  ಹಸುವಿಗೆ ಕೊಟ್ಟರೂ ಹಸುವಿನ ಆರೋಗ್ಯ ಸುಧಾರಿಸಲೇ ಇಲ್ಗ. ಹತ್ತಿರದ ಪಶು ವೈದ್ಯರ ಚಿಕಿತ್ಸೆಗಳು ಫಲಕಾರಿಯಾಗದಿದ್ದಾಗ  ತನ್ನ  ಮೆನೆಯವರ ಒತ್ತಾಯದ ಮೇರೆಗೆ ದೇವಸ್ಠಾನಕ್ಕೆ ಹೋಗಿ ಭಕ್ತಿಯಂದ ತನ್ನ ಹಸುವಿನ ಕಾಯಿಲೆಯನ್ನು ಶೀಘ್ರವಾಗಿ ಗುಣಪಡಿಸ ಬೇಕೆಂದು ಕೋರಿದ.  ಅಲ್ಲಿಯೇ ಇದ್ದ ದೇವಾಲಯದ ಅರ್ಚಕರು, ಬರೀ ಬಾಯಿ ಮಾತಿನಿಂದ ಕೇಳಿದರೆ ಸಾಲದು. ಏನಾದರೂ ಕಾಣಿಕೆ ಕಟ್ಟಿ ಹರಕೆ ಕೋರಿಕೊಳ್ಳಲು ಸೂಚಿಸಿದಾಗ, ಎಲ್ಲ ರೀತಿಯ ಭರವಸೆಗಳೂ ಕೈಗೂಡದೆ ಹತಾಶನಾಗಿದ್ದ  ರೈತ ಕೊನೆಯ ಆಸೆಯಂತೆ, ಹೇ ದೇವಾ, ಈವರೆಗೆ ನಾನು ಮಾಡಿದ ಎಲ್ಲ ರೀತಿಯ ಪ್ರಯತ್ನಗಳೂ ಫಲಕಾರಿಯಾಗದೆ ನಾನು ಬಹಳ ನೊಂದು ಕಟ್ಟಕಡೆಯ ಆಸೆಯಂದಿಗೆ ನಿನ್ನ  ಮೊರೆ ಹೋಗುತ್ತಿದ್ದೇನೆ.  ನೀನೇನಾದರೂ ಈ ಹಸುವಿನ ಕಾಯಿಲೆ ಗುಣಪಡಿಸಿದಲ್ಲಿ, ಆ ಹಸುವನ್ನು ಆ ಕೂಡಲೇ ಮಾರಿ ಅದರಿಂದ ಬಂದ ಲಾಭದ ಅರ್ಧ ಪಾಲನ್ನು  ನಿನಗೇ ಸಮರ್ಪಿಸುತ್ತೇನೆ ಎಂದು ಅರ್ಚಕರ ಸಮ್ಮುಖದಲ್ಲಿ ಹರಕೆ ಕೈಗೊಳ್ಳುತ್ತಾನೆ.  ಅರ್ಚಕರು ದೇವರಿಗೆ ರೈತನ ಹೆಸರಿನಲ್ಲಿ ಅರ್ಚನೆ ಮಾಡಿ, ದೇವರ ತೀರ್ಥವನ್ನು ಹಸುವಿಗೆ ಪ್ರೋಕ್ಷಿಸಿ, ಹಸುವಿನ ಕೊರಳಿಗೆ ತಾಯಿತವೊಂದನ್ನು ಕಟ್ಟಿ, ಹೇ ಭಗವಂತಾ  ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಿ ಕಡೆಗೆ ನಿನ್ನ ಮೊರೆ ಹೊಕ್ಕಿರುವ ಈ ಬಡ ರೈತನ ಕೋರಿಕೆಯನ್ನು ಮನ್ನಿಸಿ ಹಸುವಿನ ಆರೋಗ್ಯವನ್ನು ಆದಷ್ಟು ಬೇಗನೆ ಸರಿಪಡಿಸು ಎಂದು ಭಕ್ತಿಯಿಂದ ಕೇಳಿಕೊಳ್ಳುತ್ತಾರೆ.

ಕಾಕತಾಳೀಯವೋ, ಭಗವಂತನ ಅನುಗ್ರಹವೂ ಅಥವ ರೈತನ ಅದೃಫ್ಹ್ಟವೋ ಏನೋ, ಹಸುವಿನ ಆರೋಗ್ಯ ದಿನೇ ದಿನೇ ಚೇತರಿಸಿಕೊಂಡು ಮುಂಚಿನಷ್ಟಲ್ಲದಿದ್ದರೂ, ದಿನಕ್ಕೆ ನಾಲ್ಕೈದು ಲೀಟರ್ ಹಾಲನ್ನು ಕೊಡಲು ಶುರುವಾದಾಗ ರೈತನ ಮುಖದಲ್ಲಿ ಸ್ವಲ್ಪ ನಗು ಕಾಣಬರುತ್ತದೆ. ಇದನ್ನೆಲ್ಲಾ ಗಮನಿಸುತ್ತಿದ್ದ ಅರ್ಚಕರು ರೈತನಿಗೆ ಆತನು ದೇವರ ಸಮ್ಮುಖದಲ್ಲಿ ಹೊತ್ತಿದ್ದ ಹರಕೆಯನ್ನು ನೆನೆಪಿಸಿದಾಗ, ಉಡಾಫೆಯಿಂದ ನನ್ನ ಹಸು ಸಂಪೂರ್ಣವಾಗಿ ಚೇತರಿಕೊಂಡು ಮುಂಚಿನಂತೆಯೇ ಹಾಲನ್ನು ಕೊಟ್ಟಾಗ ಮಾತ್ರ ಮಾರುತ್ತೇನೆ ಎಂದಾಗ, ಅರ್ಚಕರು ಆತನ ವಚನ ಭ್ರಷ್ಟತೆಗೆ ಮನನೊಂದು  ಸಮಯಕ್ಕೆ ಸಹಾಯ ಮಾಡಿದವರನ್ನೂ, ಹತ್ತಲು ಉಪಯೋಗಿಸಿದ ಏಣಿಯನ್ನು ಒದೆಯುವುದು ಒಳ್ಳೆಯ ಗುಣವಲ್ಲಾ ಎಂದು ಹೇಳಿ ನಿನಗೆ ತಿಳಿದ ಹಾಗೆ ಮಾಡಪ್ಪಾ ಎಂದು ಹೊರಟು ಬಿಡುತ್ತಾರೆ. ಹಾಗೆಯೇ ಸ್ವಲ್ಪ ದಿನಗಳು ಕಳೆದು ಹಸುವಿನ ಆರೋಗ್ಯ ಮತ್ತಷ್ಟೂ ಚೇತರಿಕೆಯಾಗಿ ಕೊಡುವ ಹಾಲಿನ ಪ್ರಮಾಣ ಹೆಚ್ಚಾಗಿ ಮೊದಲಿನಂತೆಯೇ ಆದಾಗ ಆ ರೈತನ ಮಡದಿಯೂ ಹಾಗೂ ಅವನ ತಾಯಿಯು, ದೇವರ ಹರಕೆಯ ಬಗ್ಗೆ ಮತ್ತೊಮ್ಮೆ ನೆನಪಿಸುತ್ತಾರೆ. ಒಲ್ಲದ ಮನಸ್ಸಿನಿಂದ ಮನೆಯವರ ಒತ್ತಾಯಕ್ಕೂ ಹಾಗೂ ದೈವನಿಂದನೆಯ ಶಾಪ ತಟ್ಟಿ ತನ್ನ ಮಕ್ಕಳಿಗೆ ಮುಂದಾಗ ಬಹುದಾದ  ವಿಪತ್ತುಗಳಿಗೆ ಹೆದರಿದರೂ ಈ ಸಮಸ್ಯೆಯನ್ನು ಬೇರಾವ ರೀತಿಯಿಂದ ಬಗೆ ಹರಿಸಬಹುದೆಂದು ಯೋಚಿಸುತ್ತಿರುವಾಲೇ ಅವನ ತಲೆಯಲ್ಲಿ ಒಂದು ಉಪಾಯ ಹೊಳೆದು ಮುಖದಲ್ಲಿ ಸಣ್ಣ ಮಂದಹಾಸ ಮೂಡುತ್ತದೆ.

ಮಾರನೇ ದಿನ ಬೆಳಗಿನ ಜಾವವೇ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ ಭಗವಂತನಿಗೆ ಕೈ ಮುಗಿದು ಹತ್ತಿರದ ಸಂತೆಗೆ ತನ್ನ ಹಸುವನ್ನು ಮಾರಲು ಹೊರಡುತ್ತಾನೆ.  ಸಂತೆಯಲ್ಲಿ , ರೈತನು ಎತ್ತರದ ಧನಿಯಲ್ಲಿ  ಈ ಹಸುವಿನ ಬೆಲೆ ಕೇವಲ ಸಾವಿರ ರೂಪಾಯಿಗಳು, ಕೊಳ್ಳಲು ಆಸಕ್ತಿಯಿದ್ದವರು ಈ ಕೂಡಲೇ ಬನ್ನಿ ಎಂದಾಗ, ನೆರೆದಿದ್ದವರೆಲ್ಲರೂ ಆಶ್ಛರ್ಯಚಕಿತರಾಗುತ್ತಾರೆ. ಈತನ ಹಸವಿನ ಹಾಲು ಕೊಡುವ ಸಾಮರ್ಥ್ಯ ಹಾಗೂ ಅವನು ಹಸುವನ್ನು ಮಾರಲು ಬಂದಿರುವ ಹಿನ್ನಲೆ ತಿಳಿದಿದ್ದ ಹಲವು ಹಸುವನ್ನು ಇಷ್ಟು ಕಡಿಮೆ ಬೆಲೆಯಲ್ಲಿ ಮಾರಲು ಏನು ಕಾರಣ ಎಂದು ಯೋಚಿಸುತ್ತಿದ್ದಂತೆಯೇ ಅವರುಗಳ ಪೈಕಿ ಒಬ್ಬ ರೈತನು ಓಡೋಡಿ ಬಂದು, ರೈತನ ಕೈಯಲ್ಲಿ ಸಾವಿರದ ಒಂದು ರೂಗಳನ್ನಿಟ್ಟು, ಹಸುವಿನ ಹಗ್ಗವನ್ನು ಹಿಡಿದು ಎಳೆದೊಯ್ಯಲು ಪ್ರಯತ್ನಿಸುತ್ತಿದ್ದಂತೆಯೇ, ಹಸುವಿನ ಮಾಲಿಕ ಆ ರೈತನ ಕೈ ಹಿಡಿದು ಈ ಹಸುವನ್ನು ಒಂದು ಸಾವಿರಕ್ಕೆ ಕೊಳ್ಳಬಯಸುವವರು, ಈ ಹಸುವಿನ ಜೊತೆಗೆ ಅದರ ಜೊತೆಗಿರುವ ಎತ್ತನ್ನೂ ಕೊಳ್ಳಬೇಕು ಎಂದಾಗ ಇಂತಹ ದಷ್ಟ ಪುಷ್ಟ ಹಸುವಿಗೇ ಸಾವಿರ ರೂಪಾಯಿಗಳಾದರೆ ಈ ಬಡಕಲು ಎತ್ತಿಗೆ ಇನ್ನೆಷ್ಟಿರಬಹುದೆಂದು ಮರು ಯೋಚಿಸದೆ ಹಸುವಿನ ಜೊತೆಗೆ ಎತ್ತನ್ನೂ ಕೊಳ್ಳುತ್ತೇನೆ ಎಂದು ಗಟ್ಟಿಯಾಗಿ ನೆರೆದಿದ್ದವರೆಲ್ಲರಿಗೂ ಕೇಳುವಂತೆ ಹೇಳೀ ಎತ್ತಿನ ಬೆಲೆ ಎಷ್ಟೆಂದು ಕೇಳುತ್ತಾನೆ. ಇತಂಹ ಅವಕಾಶಕ್ಕೇ ಕಾಯುತ್ತಿದ್ದ ಆ ಕೃತ್ರಿಮ  ರೈತ, ಹಸುವಿನ ಬೆಲೆ ಕೇವಲ ಒಂದು ಸಾವಿರ  ರೂಪಾಯಿಗಳು ಆದರೆ, ಈ ಎತ್ತಿನ ಬೆಲೆ ಐವತ್ತು ಸಾವಿರವೆಂದಾಗ ಕೊಳ್ಳಲು ಬಂದ ರೈತನ ಮುಖ ಇಂಗು ತಿಂದ ಮಂಗನಂತಾದರೂ ಕೊಟ್ಟಮಾತಿಗೆ ತಪ್ಪಲಾರದೆ, ರೈತನ ಮೋಸವನ್ನು ಮನಸ್ಸಿನಲ್ಲೇ ಶಪಿಸುತ್ತಾ ಐವತ್ತೊಂದು ಸಾವಿರಗಳನ್ನು ರೈತನ ಕೈಗಿತ್ತು ಹಸುವನ್ನೂ , ಬಡಕಲು ಎತ್ತನ್ನು ಹೊಡೆದು ಕೊಂಡು ಅವನ ಮನೆಯ ಕಡೆ ಹೊರಟರೆ, ಈ ರೈತ ಊರಿಗೆ ಮರಳಿ, ಮನೆಗೂ ಹೋಗದೇ ನೇರವಾಗಿ ದೇವರ ಗುಡಿಗೇ ಹೋಗಿ ಅರ್ಚಕರ ಮತ್ತು  ಅಲ್ಲಿದ್ದ   ಭಕ್ತಾದಿಗಳ ಸಮ್ಮುಖದಲ್ಲಿ ಭಗವಂತನ ಹುಂಡಿಗೆ ಹಸುವನ್ನು ಮಾರಿದ  ಬೆಲೆಯಾದ ಸಾವಿರರೂಗಳಲ್ಲಿ ಐದು ನೂರುರೂಗಳನ್ನು ಹಾಕಿ ಜೋರು ಧನಿಯಲ್ಲಿ ಭಗವಂತಾ, ನನ್ನಂತಹ ಆಡಿದ ಮಾತನ್ನು ಸರಿಯಾಗಿ ಉಳಿಸಿ ಕೊಳ್ಳುವ  ಭಕ್ತರನ್ನು ಪಡೆದ ನೀನೇ ಪುಣ್ಯವಂತ. ನನ್ನ ಹಾಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಭಕ್ತರು ನಿನಗೆ ಸಿಗುವುದು ಅಪರೂಪ. ಸದಾ ನಿನ್ನ ಕರುಣೆ ನನ್ನ ಮೇಲಿರಲಿ ಎಂದು ಕೈ ಮುಗಿದು. ಭಗವಂತನಿಗೇ ಮೂರು ಪಂಗನಾಮ ಹಾಕಿ, ಎತ್ತು ಮಾರಿದ ದುಡ್ಡನ್ನು ಭದ್ರವಾಗಿಟ್ಟುಕೊಂಡು, ಭಗವಂತನಿಗೆ ಬೇಸ್ತು ಬೀಳಿಸಿದ ತನ್ನ ಬುದ್ದಿವಂತಿಕೆಯನ್ನು ತಾನೇ ಮೆಚ್ಚಿಕೊಳ್ಳುತ್ತಾ ಮನೆ ಕಡೆಗೆ ನಡೆದ.

ಯಾಕೋ ಏನೋ, ಅಡಿಕಾರಕ್ಕೇರಿದ ಇಪ್ಪನ್ಕಾಲ್ಕು ಗಂಟೆಯೊಳಗೆ ಎಲ್ಗ್ಲ ರೀತಿಯ ಸಾಲ ಮನ್ನಾ ಮಾಡುವೆನೆಂದು ಹೇಳೀ,  ಸಾಂದರ್ಭಿಕ ಶಿಶುವಿನಂತೆ ಪುಣ್ಯಾತ್ಮನ ಕೃಪೆಯಿಂದ ಅಧಿಕಾರಕ್ಕೆ ಬಂದು, ಪೂರ್ಣಬಹುಮತ ಬಾರದ ಕಾರಣ ಸಾಲ ಮನ್ನ ಮಾಡಲಾಗದೆಂದು ವರಾತೆ ತೆಗೆದು, ಕೊನೆಗೆ ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದು, ದಿನ, ವಾರ, ಪಕ್ಷ ಎಂದು ಕಾಲಮಿತಿ ಕೋರಿ, ಅತ್ತೂ ಕರೆದು, ಸಾರ್ವಜನಿಕರ ಅತ್ಯಗತ್ಯ  ವಸ್ತುಗಳಾದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ, ವಿದ್ಯುತ್ಛಕ್ತಿ ಬೆಲೆ ಏರಿಸಿ, ರೈತರ ಮೂಗಿಗೆ ತುಪ್ಪ ಸವರಿದಂತೆ ಭಾಗಶಃ ಸಾಲ ಮನ್ನಾ ಮಾಡಿ,  ತನ್ನನ್ನೇ ತಾನು ಆತ್ಮರತಿಯಂತೆ ರೈತರ ಬಂಧು, ಕಲಿಯುಗ ಕರ್ಣ ಎಂದು ಹೊಗಳಿ  ಕೊಳ್ಳುತ್ತಿರುವ ರಾಜ್ಯದ ಮುಖ್ಯಮಂತ್ರಿಯನ್ನು  ನೋಡಿ ಈ ಮೇಲಿನ ಪ್ರಸಂಗ ನೆನಪಿಗೆ ಬಂದಿತು.

ಜನರ ಸೇವೆ ಜನಾರ್ಧನರ ಸೇವೆ ಎನ್ನುತ್ತಾ ಕೇವಲ ಮೂರೇ ಮೂರು ಜಿಲ್ಲೆಗಳಿಗೆ ಪ್ರಾತಿನಿಧ್ಯ ಕೊಡುತ್ತಿರುವ ಇವರನ್ನು ಮೂರುಕಾಸಿನ ಮುಖ್ಯಮಂತ್ರಿ ಎನ್ನಲು ಅಡ್ಡಿ ಇಲ್ಲ ಅಲ್ಲವೇ?

ಏನಂತೀರೀ?

Leave a comment