ದುಡ್ಡಿನ ಮಹತ್ವ

ಸುಮಾರು ಸಾವಿರದ ಒಂಬೈನೊರ ಎಂಬತ್ತಾರು, ಎಂಬತ್ತೇಳರ ಸಮಯ, ನಾನಿನ್ನೂ ಆಗಷ್ಟೇ ಕಾಲೇಜಿಗೆ ಸೇರಿದ್ದನಷ್ಟೆ. ಕಾಲೇಜಿಗೆ ಹೋಗುವ ಹುಡುಗನಾದರೂ ನೋಡಲು ಏಳು ಅಥವಾ ಎಂಟನೇ ತರಗತಿಯ ‌ವಿದ್ಯಾರ್ಥಿ ಅನ್ನುವ ಹಾಗೆ ಕಾಣುತ್ತಿದೆ. ಕುಳ್ಳಗೆ ಸಣ್ಣಗಿದ್ದ ನನ್ನನ್ನು ನನ್ನ ತಾಯಿ ವೈದ್ಯರ ಬಳಿ‌ ಕರೆದುಕೊಂಡು ಹೋಗಿ‌ ಡಾಕ್ಟ್ರೇ ನನ್ನ ‌ಮಗನಿಗೆ ಯಾವುದಾದರು ವಿಟಮಿನ್ ಟಾನಿಕ್‌ ಕೊಡಿ‌ ಸ್ವಲ್ಪ ಉದ್ದ ಮತ್ತು ಗಾತ್ರವಾಗಲಿ‌ ಎಂದು‌‌ ಕೋರಿದ್ದೂ ಉಂಟು. ಆದರೆ ನನ್ನ ತಂದೆ ‌ನಮ್ಮ ವಂಶದಲ್ಲಿ ಗಂಡುಮಕ್ಕಳೆಲ್ಲರೂ ಹದಿನೆಂಟರ ನಂತರವೇ ಬೆಳಯುವುದು ಎಂದು‌ ನಮ್ಮ ತಾಯಿಯವರನ್ನು  ಸಮಾಧಾನ ಪಡಿಸುತ್ತಿದ್ದದ್ದು ನಮ್ಮ ಕುಟುಂಬದಲ್ಲಿ ಸಹಜ‌ ಪ್ರಕ್ರಿಯೆಯಾಗಿತ್ತು.

ಅದೊಂದು‌ ದಿನ‌‌ ಸಂಜೆ ಸುಮಾರು ಆರು ಗಂಟೆಯ ಸಮಯ, ನಮ್ಮ ಅಮ್ಮ ಅಂಗಡಿಯಿಂದ ಮನೆಗೆ ದಿನಸಿ‌ ತರಲು ಕೈಚೀಲ ಮತ್ತು ನೂರು ರೂಗಳನ್ನು ಕೊಟ್ಟು ಕಳಿಸಿದರು. ನಾನು ನನ್ನ ‌ಚೆಡ್ಡಿ ಜೋಬಿನೊಳಗೆ ದುಡ್ಡನ್ನು ಇಟ್ಟುಕೊಂಡು ಸೈಕಲ್ಲನ್ನೇರಿ ಅಂಗಡಿಗೆ ಹೋಗಿ ಸಾಮನುಗಳನ್ನು ಕೊಂಡು ಕೊಂಡು ಅಂಗಡಿಯವರಿಗೆ ಹಣ ಕೊಡಲು ಜೋಬಿಗೆ ಕೈಹಾಕಿದರೆ, ಹಣವೇ ನಾಪತ್ತೆ!! ಚೆಡ್ಡಿ‌ ಮತ್ತು ಅಂಗಿಗಳ ಎಲ್ಲಾ ಜೋಬುಗಳನ್ನು ತಡೆಕಾಡಿದ್ದಾಯ್ತು. ಕೈಚೀಲದಲ್ಲೂ ಹುಡುಕಾಡಿದರೆ ಹಣದ ಪತ್ತೆಯೇ ಇಲ್ಲಾ. ಅಂಗಡಿಯವರಿಗೆ ಸಾಮಾನುಗಳನ್ನು ಹಾಗೆಯೇ‌ ಇಡಲು‌ ಹೇಳಿ, ಮನೆಯ‌ ಕಡೆ ಹಣ ಹುಡುಕುತ್ತಾ, ಹಣ ಕಳೆದು‌‌ ಹೋಗಿರುವುದನ್ನು ಮನೆಯವರಿಗೆ ಹೇಗೆ  ಹೇಳುವುದೆಂದು ಯೋಚಿಸಿತ್ತಾ ಬಂದು, ಸಮ್ಮನೆ ಮನೆಯಲ್ಲಿ ತಡಕಾಡುತ್ತಿದ್ದನ್ನು ನೋಡಿ ಏನಾಯ್ತೆಂದು ಅಮ್ಮಾ ಕೇಳಲು, ವಿಧಿಯಿಲ್ಲದೆ ಬಾಯಿ ಬಿಟ್ಟಾಗ ಅಲ್ಲಿಯೇ ಇದ್ದ ನಮ್ಮ‌ ತಂದೆಯವರು ಏನನ್ನೂ ಹೇಳದೆ ನೂರರ‌ ಮತ್ತೊಂದು ನೋಟೋಂದನ್ನು ಕೈಗಿತ್ತು ಸಾಮನುಗಳನ್ನು ತರಲು ಹೇಳಿದರು. ಅಬ್ಬಾ, ಬೀಸೋ‌ ದೊಣ್ಣೆ ತಪ್ಪಿದರೆ ‌ಸಾವಿರ ವರ್ಷ ಆಯಸ್ಸು ಎಂದುಕೊಂಡು ಒಂದೇ‌ ಉಸಿರಿನಲ್ಲಿ ಅಂಗಡಿಯವರಿಗೆ ಕೊಡಬೇಕಾದ ದುಡ್ಡು‌ ಕೊಟ್ಟು ನಿರಾಳವಾಗಿ ದಿನಸಿಯನ್ನು ತಂದಿಟ್ಟೆ.

ಆಗ ಶುರುವಾಯಿತು ನಮ್ಮ ಅಮ್ಮನ ಸಹಸ್ರ ನಾಮಾರ್ಚನೆ. ಮೈಮೇಲೆ ಜ್ಞಾನ ಇಲ್ಲ, ಪ್ರತಿಯೊಂದಕ್ಕೂ ಉಡಾಫೆ‌ ಹಾಗೆ ಹೀಗೆ ಎನ್ನುತ್ತಿದ್ದಾಗ ರೂಮಿನಿಂದ ಬಂದ ನಮ್ಮ ತಂದೆಯವರು ಸುಮ್ಮನೆ ಬೈಯ್ಯುವದರಿಂದ ಏನೂ ಪ್ರಯೋಜನವಿಲ್ಲ‌, ಏಕೆಂದರೆ ಅವನಿಗೆ ದುಡ್ಡಿನ ಬೆಲೆ ಗೊತ್ತಿಲ್ಲ. ಅವನು ದುಡಿದು ಸಂಪಾದಿಸಿದ್ದರೆ ಅವನಿಗೆ ಗೊತ್ತಾಗುತ್ತಿತ್ತು ಎಂದು  ಭಜನೆ ಮಾಡಲು‌ ದೇವಸ್ಥಾನಕ್ಕೆ ಹೊರಟೇ ಬಿಟ್ಟರು. ಒಂದೇಟು ಹೊಡೆದು ಬಿಟ್ಟಿದ್ದರೆ ಕೆಲ‌ಕಾಲ‌ ನೋವಿನಿಂದ ನರಳಿ‌ ನಂತರ ಸುಮ್ಮನಾಗಬಹುದಿತ್ತೇನೋ? ಅದರೆ ಅವರಾಡಿದ  ಮಾತು ನನ್ನ‌ ಮನಸ್ಸನ್ನು ‌ಬಹಳವಾಗಿ‌‌ ನಾಟಿತು. ಅಂದು‌‌ ಇಡೀ ರಾತ್ರಿ ನಿದ್ರೆಯೇ ಬರಲಿಲ್ಲ. ಬೆಳಗ್ಗೆ ಯಾವಗ ಆಗುವುದೋ, ಹೇಗಾದರೂ ಮಾಡಿ ಆ ಕಳೆದು‌ಕೊಂಡ ನೂರ ರೂಪಾಯಿಯನ್ನು  ನನ್ನ‌ ತಂದೆಯವರಿಗೆ ಹಿಂದುರಿಗಿಸಿ ಋಣ ಮುಕ್ತನಾಗುವ ಸಂಕಲ್ಪ ‌ತೊಟ್ಟೇ‌ ಬಿಟ್ಟೆ. ಕನಸು ಕಾಣುವುದು ‌ಸುಲಭ ಆದರೆ‌ ಅದನ್ನು  ಕಾರ್ಯಸಾಧಿಸುವುದು ಬಹಳ ಕಷ್ಟ‌ ಎಂಬುದನ್ನು ಅರಿಯಲು ಬಹಳ‌ ಸಮಯ ಬೇಕಾಗಲಿಲ್ಲ. ಆದರೂ‌ ತೊಟ್ಟ ಫಣ ಬಿಡುವ ಮನಸ್ಸಾಗದೆ ಏನು ಮಾಡುವುದೆಂದು ಯೋಚಿಸುತ್ತಿರುವಾಗಲೇ‌, ಪೋಂ ಪೋಂ ಎಂದು‌ ಹಾಲಿನ‌ ಹುಡುಗನ ಶಬ್ದ ‌ಕಿವಿಗೆ ಕೇಳಿಸಿತು. ಆಹಾ ಮರುಭೂಮಿಯಲ್ಲಿ‌ ನೀರು ಸಿಕ್ಕ‌ ಅನುಭವ ನನಗೆ. ಕೂಡಲೇ‌ ಹಾಲಿನ ಹುಡುಗನ ಬಳಿಯೋಡಿ,‌ ರಾಜಾ‌ ನಿಮ್ಮ ಹಾಲು‌ ಹಾಕೋದಕ್ಕೆ ಯಾರಾದರೂ ಹುಡುಗರು‌‌ ಬೇಕಾ ಎಂದು‌‌ ಕೇಳಿದೆ.‌‌ಅದಕ್ಕವನು ಹೌದು ಒಂದೆರಡು‌ ಹೊಸಾ ರೂಟಿಗೆ ಹುಡುಗರನ್ನು ಹುಡುಕುತ್ತಿದ್ದಾರೆ‌‌ ಎಂದಾಗ. ರೊಟ್ಟಿ ಜಾರಿ‌‌ ತುಪ್ಪಕ್ಕೆ‌ ಬಿದ್ದ ಅನುಭವ ನನಗೆ. ಆ ಕೂಡಲೇ‌ ಸೈಕಲ್ ‌ಹತ್ತಿ‌ ಒಂದೇ‌ ಉಸಿರಿನಲ್ಲಿ‌ ಹಾಲಂಗಡಿಯ ಮುಂದಿದ್ದೆ. ಹಾಲಿನವನು  ಮೊದ‌ಮೊದಲು‌ ನನ್ನನ್ನು ‌ಕೆಲಸಕ್ಕೆ ಸೇರಿಸಿಕೊಳ್ಳಲು‌‌ ನಿರಾಕರಿಸಿದರೂ ಮೂರ್ನಾಲ್ಕು ‌ದಿನಗಳ ನನ್ನ‌ ಸತತ ಕಾಟ ತಡೆಯಲಾರದೆ ಮಾರನೇ‌ ದಿನದಿಂದ‌‌‌ ಹಾಲು ಹಾಕಲು ಬರಲು ಹೇಳಿದಾಗ ಸ್ವರ್ಗಕ್ಕೆ ಮೂರೇ ಮೆಟ್ಟಲಿನ ಹತ್ತಿರವಿರುವ ಅನುಭವ ನನಗೆ.

ಅಂದಿನ ರಾತ್ರಿಯೂ ಸರಿಯಾಗಿ ನಿದ್ದೆ ಬಾರದೆ. ಅಲರಾಂ ಬೆಳಗ್ಗೆ ನಾಲ್ಕು ಮುಕ್ಕಾಲಿಗೆ  ಇಟ್ಟಿದ್ದರೂ ನಾಲ್ಕಕ್ಕೇ ಎಚ್ಚರವಾಗಿ ಹಾಸಿಗೆಯ ಮೇಲೆ‌‌‌ ಅತ್ತಿಂದಿತ್ತ ಹೊರಳಾಡಿ‌ ಎದ್ದು ಪ್ರಾತರ್ವಿಧಿಯನ್ನು ಮುಗಿಸಿ  ಮನೆಯವರಿಗೆ ಗೊತ್ತಾಗದಂತೆ ಬಾಗಿಲು ತೆಗೆದು ಚುಮು ಚುಮು ಚಳಿಯನ್ನೂ‌ ಲೆಕ್ಕಿಸದೆ ಸೈಕಲ್ಲನ್ನು ಏರಿ‌ ಸರಿಯಾಗಿ ಐದಕ್ಕೆ ಹಾಲಿನಂಗಡಿಯ ಮುಂದಿದ್ದೆ.  ಮೊದಲ‌ ಐದಾರು ದಿನ ಕಷ್ಟವೆನಿಸಿದರೂ ನಂತರ ‌ಅಭ್ಯಾಸವಾಗ ತೊಡಗಿತು. ಇದೆಲ್ಲವನ್ನೂ ಸುಮ್ಮನೆ ಗಮನಿಸುತ್ತಿದ್ದ ನನ್ನ‌ ತಂದೆಯವರು ಯಾವುದೇ‌‌ ಪ್ರತಿಕ್ರಿಯೆ ‌ತೋರದಿದ್ದದ್ದು ನನಗೆ ಆಶ್ಚರ್ಯ ಎನಿಸಿದರೂ ಅವರ‌ ಕೈಗೆ ನಾನು ಕಷ್ಟ ಪಟ್ಟು ಸಂಪಾದಿಸಿ ನೂರು ರೂಗಳನ್ನು ಕೊಟ್ಟು ಮಾತಾಡೋಣವೆಂಬ ಹುಂಬತನ ನನ್ನದು.

ಹಾಗೂ‌ ಹೀಗೂ‌ ಒಂದು‌ ತಿಂಗಳು ಕಳೆದು ಹೋದದ್ದೇ ಗೊತ್ತಾಗಲಿಲ್ಲ. ನಾನು‌‌ ಕಾಯುತ್ತಿದ್ದ ಸಮಯ‌ ಬಂದೇ ಬಿಟ್ಟಿತು. ನನ್ನ ಹಾಲಿನಂಗಡಿಯ‌ ಯಜಮಾನ ಕರೆದು‌ ನನ್ನ‌ ಒಂದು ತಿಂಗಳ ಪರಿಶ್ರಮಕ್ಕೆ ತೊಂಬ್ಬಂತ್ತು‌ ರೂಪಾಯಿಗಳನ್ನು ನನ್ನ ಕೈಗಿತ್ತಾಗ ಆದ ಅನುಭವ ವರ್ಣಿಸಲಸದಳ. ಅದಕ್ಕಿಂತ ಮುಂಚೆ ಅಪ್ಪಾ ಕೊಟ್ಟ ಎಷ್ಟೋ ದುಡ್ಡನ್ನು ಜೋಬಿನಲ್ಲಿ‌ ಇಟ್ಟುಕೊಂಡು ಓಡಾಡಿದ್ದರೂ ಅಂದು ಸ್ವಂತ ಪರಿಶ್ರಮದಿಂದ ದುಡಿದ ದುಡ್ಡನ್ನು ಜೋಬಿನಲ್ಲಿ‌ ಇಟ್ಟಿಕೊಂಡಿದ್ದರ‌ ಅನುಭವವೇ ಬೇರಾಗಿತ್ತು. ಹಾಲಿನಂಗಡಿಯಿಂದ ಮನೆಗೆ ಬರುವವರೆಗೂ ಕ್ಷಣ ಕ್ಷಣಕ್ಕೂ‌ ‌ಜೋಬನ್ನು ಮುಟ್ಟಿ‌‌ಕೊಂಡು  ಹಣ ಭದ್ರವಾಗಿರುವುದನ್ನು ಮುಟ್ಟಿ ಮುಟ್ಟಿ ನೋಡಿ ಕೊಳ್ಳುತ್ತಾ‌ ಮನೆಗೆ‌‌ ಬಂದು ಅಪ್ಪಾ ಅಮ್ಮಂದಿರ‌‌ ಮುಂದೆ ‌ನಿಂತಾಗ ಇಡೀ ಜಗತ್ತನ್ನೇ ಗೆದ್ದ ಅನುಭವ.

ಜೋಬಿನಿಂದ‌ ತೊಂಬತ್ತು ರೂಪಾಯಿಗಳನ್ನು ಅಪ್ಪಾನ ಕೈಗಿತ್ತು‌ ಮಿಕ್ಕ‌ ಹತ್ತು ರೂಪಯಿಗಳನ್ನು ಮುಂದಿನ ತಿಂಗಳು ಕೊಡುತ್ತೇನೆ‌ ಎಂದು ದರ್ಪದಿಂದ ಹೇಳಿದಾಗ, ಅಷ್ಟೇ ಸಮಚಿತ್ತದಿಂದ ಹಸನ್ಮುಖರಾಗಿ ನಮ್ಮ‌‌ ತಂದೆಯವರು ಆ ದುಡ್ಡನ್ನು ನಮ್ಮ ತಾಯಿಯವರ ಕೈಗಿತ್ತು ನಂಜನಗೂಡಿನ ಶ್ರೀಕಂಠೇಶ್ವರನ ಜಾತ್ರೆಗೆ ಸಂಗ್ರಹ ಮಾಡುತ್ತಿದ್ದ ಹುಂಡಿಗೆ‌ ಹಾಕಲು‌ ಹೇಳಿದಾಗ ನನ್ನ ಪಿತ್ತ ನೆತ್ತಿಗೇರಿತ್ತು. ನಾನು ಅಷ್ಟು ಕಷ್ಟ ಪಟ್ಟು ದುಡಿದು ತಂದ ಹಣವನ್ನು ಅಪ್ಪಾ ತಿರಸ್ಕರಿಸಿ, ದೇವರ ಹುಂಡಿಗೆ ಹಾಕಿ ನನ್ನನ್ನು ಮತ್ತು ನನ್ನ ಪರಿಶ್ರಮವನ್ನೂ ಅವಮಾನ ಪಡಿಸಿದಕ್ಕೆ ಕೋಪ ಬೇರೆ.  ನನ್ನ‌ ಆ ಪರಿಸ್ಥಿತಿಯನ್ನು‌‌ ಸೂಕ್ಷ್ಮವಾಗಿ ಗಮನಿಸಿದ ನನ್ನ ತಂದೆಯವರು  ಮಗೂ ಇಂದು‌ ನನಗೆ ಹೆಮ್ಮೆಯ ದಿನ. ನನ್ನ ಮಗನಿಗೆ ದುಡ್ಡಿನ ಮಹತ್ವ ಅರಿವಾಗಿದೆ. ನಾವು ಎಷ್ಟೇ ಪರಿಶ್ರಮ ಪಟ್ಟು ದುಡಿದರೂ ಅದಕ್ಕೆ ಭಗವಂತ ಪ್ರೇರಣೆ ಇಲ್ಲದೆ ಅಸಾಧ್ಯ  ತೇನ ವಿನಾ ತೃಣಮಪಿ ನಚಲತಿ‌.

ಮೂಕಂ ಕರೋತಿ ವಾಚಾಲಂ! ಫಗುಂ ಲಂಘಯತೇ ಗಿರಿಂ! ಯತ್ಕೃಪಾ ತಮಹಂ ವಂದೇ! ಪರಮಾನಂದ ಮಾಧವಂ!! ಎಂಬ ಶ್ಲೋಕವನ್ನು ಹೇಳಿ.  ಆ ಭಗವಂತನ ಅನುಗ್ರಹವಿದ್ದಲ್ಲಿ ಮಾತನ್ನೇ ಆಡದ ಮೂಕನೂ ವಾಚಾಳಿಯಾಗುತ್ತಾನೆ. ನಡೆಯಲು ಸಾಧ್ಯವಾಗದ ಹೆಳವನೂ ಕೂಡ ಬೆಟ್ಟವನ್ನೇ ಜಿಗಿಯುವ ಮಟ್ಟಕ್ಕೇರುತ್ತಾನೆ. ಹಾಗಾಗಿ ಆ ಭಗವಂತನ ಪ್ರೇರಣೆಯಿಂದಲೇ  ನೀನೀ ಹಣ ಸಂಪಾದಿಸಿರುವ ಕಾರಣದಿಂದ ಅದರ ಮೊದಲ ಪಾಲು ಅವನಿಗೇ ಸಲ್ಲಬೇಕು ಎಂದು ತಿಳಿ ಹೇಳಿದಾಗ ನೆತ್ತಿಗೇರಿದ್ದ ಪಿತ್ತ ಜರ್ ಎಂದು ಕೆಳಗಿಳಿದು ನನ್ನ ಅರಿವಿಗೇ ಬಾರದೆ ಅಪ್ಪನ‌‌ ಕಾಲಿಗೆರಗಿದ್ದೆ.

ಅಕ್ಕರೆಯಿಂದ ಮೈದಡವುತ್ತಾ ಮಗು ಕಳ್ಳತನ‌ ಮಾಡದೆ, ಸುಳ್ಳನ್ನಾಡದೆ ಕಷ್ಟ ಪಟ್ಟು ಸಂಪಾದಿಸಲು ನಿನಗಿನ್ನೂ ಸಮಯವಿದೆ. ಈಗ ವಿದ್ಯಾಭ್ಯಾದ ಕಡೆ ಚಿತ್ತ ಹರಿಸು‌ ಎಂದು ಆಶೀರ್ವದಿಸಿದರು. ಪರೀಕ್ಷೆಗೆ ಇನ್ನೂ‌ ಬಹಳ ಸಮಯವಿದ್ದುದರಿಂದ ಇನ್ನೂ‌ ಎಂಟು ಹತ್ತು ‌ತಿಂಗಳು‌ ನನ್ನ‌ ಕಾಯಕವನ್ನು ಮುಂದುವರಿಸಿ ‌ಪರೀಕ್ಷೆಯ ನೆಪವೊಡ್ಡಿ ಹಾಲಂಗಡಿ‌ ಮಾಲಿಕನಿಗೆ ಬೇಸರ‌ ತಾರದೆ ಕೆಲಸವನ್ನು ಬಿಟ್ಟು ವಿದ್ಯಾಭ್ಯಾಸದ ಕಡೆ ಆಸಕ್ತಿವಹಿಸಿ‌ ತಕ್ಕ‌ ಮಟ್ಟಗಿನ ವಿದ್ಯೆ ಪಡೆದು‌ ಇಂದು‌‌ ಜಗದ್ವಿಖ್ಯಾತ  ಕಂಪನಿಯಲ್ಲಿ ಉನ್ನತ ‌ಪದವಿ ಪಡೆದು, ಕೈ‌ ತುಂಬಾ ಸಂಬಳ ಪಡೆಯುತ್ತಿದ್ದರೂ ಮೊಟ್ಟ ‌ಮೊದಲು‌ ಪಡೆದ ಎರಡಂಕಿಯ ಸಂಬಳವೇ ಹೆಚ್ಚೆನಿಸುತ್ತಿದೆ.

ನನ್ನ  ಇಂದಿನ ಈ ಸ್ಥಿತಿಗೆ ತಲುಪಲು‌

ನನ್ನ ಜನ್ಮದಾತರಾಗಿ,

ನನ್ನ‌ ಆಶ್ರಯದಾತರಾಗಿ,

ನನ್ನ ಮಾರ್ಗದರ್ಶಕರಾಗಿ,

ನನ್ನ ಹಿತಚಿಂತಕರಾಗಿ, ಕಡೆಗೆ ನನ್ನ ಅತ್ಯುತ್ತಮ ಸ್ನೇಹಿತರಾಗಿದ್ದ

ನನ್ನ ‌ತಂದೆ ಶ್ರೀ ಶಿವಮೂರ್ತಿಯವರಿಗೆ ತಂದೆಯಂದಿರ ದಿನದಂದು ನನ್ನ  ಹೃದಯಪೂರ್ವಕ ಸಾಷ್ಟಾಂಗ ನಮನಗಳು.

ನಿಮ್ಮ ಅಗಲಿಕೆ ನಮ್ಮನ್ನು ಸದಾ ಕಾಡುತ್ತದೆಯಾದರೂ, ನಿಮ್ಮ ಆಶೀರ್ವಾದ ನಮ್ಮನ್ನು ಸದಾ ಕಾಪಾಡುತ್ತದೆ

ಭಗವಂತಾ ನನಗೆ ಮುಂದಿನ‌ ಜನ್ಮ ಕೊಡವ ಮನಸ್ಸು ನಿನಗಿದ್ದರೆ, ದಯವಿಟ್ಟು‌ ಇದೇ‌ ತಂದೆ ತಾಯಂದಿರ ಮಗನಾಗುವ ಭಾಗ್ಯ‌ ಕರುಣಿಸಿಸು 🙏🙏🙏🙏

ವೀಡಿಯೋ : https://youtu.be/WA__9v2PBYs

 

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

2 thoughts on “ದುಡ್ಡಿನ ಮಹತ್ವ”

  1. ವೀಡಿಯೊ ಪೂರ್ತಿ ನೋಡಿದೆ. ನೀವಿ ಹೇಳಿರುವುದು ನೂರಕ್ಕೆ ನೂರು ಸರಿ. ಮಕ್ಕಳಿಗೆ ಹಣ ಕೊಟ್ಟರೂ ಲೆಕ್ಕ ಕೇಳಿ ಹಣ ಸದುಪಯೋಗವಾಗುವಂತೆ ನೋಡಿಕೊಳ್ಳುವುದಲ್ಲದೆ ಅವರಿಗೆ ಹಣದ ಬೆಲೆ ಗೊತ್ತಾಗುವಂತೆ ಮಾಡಬೇಕು ಎಂಬುದು ಸರಿಯಾದ ಮಾತು.
    ಎಸ್.ದ್ವಾರಕಾನಾಥ್

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s