ತೈಲ ಬೆಲೆ

ದೇಶದ ಪ್ರಸಕ್ತ ವಿದ್ಯಮಾನದಲ್ಲಿ ಬಹು ಚರ್ಚಿತವಾಗುತ್ತಿರುವುದು ಎರಡು ವಿಷಯಗಳು. ಒಂದು ರಫೈಲ್ ಯುದ್ಧ ವಿಮಾನಗಳ ಖರೀದಿಯ ಹಗರಣ ಮತ್ತೊಂದು ತೈಲ ಬೆಲೆ ಏರಿಕೆ.  ರಫೈಲ್ ಪ್ರಕರಣವು ಕೇವಲ ಆರೋಪಕ್ಕಷ್ಟೇ ಸೀಮೀತವಾಗಿ ಯಾವುದೇ ಸಾಕ್ಷಾಧಾರಗಳನ್ನು ಒದಗಿಸದೆ , ಪ್ರತೀಬಾರಿ ಒಂದೊಂದು ಅಂಕಿ ಅಂಶಗಳನ್ನು ಒದಗಿಸುತ್ತಾ ಹಗರಣವನ್ನು ಕೇವಲ ಜನ ಮಾನಸದಲ್ಲಿ ಮಾತ್ರ  ಸಾಬೀತು ಮಾಡಲು ಪರಿತಪಿಸುತ್ತಿರುವ ಕಾರಣ ಹೆಚ್ಚಿನ ಗಮನ ಹರಿಸುವುದು ಕೇವಲ ಸಮಯ ವ್ಯರ್ಥವಷ್ಟೇ.

ಆದರೆ ಮತ್ತೊಂದು ಸಮಸ್ಯೆಯಾದ ತೈಲ ಬೆಲೆ ಏರಿಕೆ ನಿಜಕ್ಕೂ ಕಳವಳಕಾರಿ ಮತ್ತು ದೇಶದ ಆರ್ಥಿಕ ಪರಿಸ್ಥಿತಿಯನ್ನೂ, ಜನಸಾಮನ್ಯರ ದಿನದಿತ್ಯದ ಆಗುಹೋಗುಗಳಿಗೆ ನೇರವಾದ ಹೊಣೆಯಾಗುತ್ತಲಿದೆ.  ನಾಲ್ಕು ವರ್ಷಗಳ ಹಿಂದೆ ಸುಮಾರು ಎಂಬತ್ತು ರೂಪಾಯಿ ಆಸುಪಾಸಿನಲ್ಲಿದ್ದ ಪೆಟ್ರೋಲ್ ಬೆಲೆ ನಂತರ ಸ್ವಲ್ಪ ಕಡಿಮೆಯಾಗಿ ಒಂದೆರಡು ವರ್ಷ ಅರವತ್ತು ರೂಪಾಯಿಗಳಿಗೆ ಜಾರಿ, ಕಳೆದ ಒಂದು ವರ್ಷದಲ್ಲಿ ರೊಯ್ಯನೆ ಏರಿ, ಇಂದು ಸರಿ ಸುಮಾರು ತೊಂಬ್ಬತ್ತು ರೂಪಾಯಿಗಳಿದ್ದು, ಯಾವುದೇ ಸಮಯದಲ್ಲಿ ನೂರರ ಗಡಿ ದಾಟಬಹುದಾಗಿದೆ.  ತೈಲ ಬೆಲೆ ಏರಿಕೆಗಳು ಕೇವಲ ಸಂಪರ್ಕ ಸಾಧನಗಳ ಬೆಲೆಯನ್ನು ಹೆಚ್ಚಿಸದೆ ಅದನ್ನೇ ಅವಲಂಭಿತವಾಗಿರುವ ಪ್ರತಿಯೊಂದು ಆಹಾರ ಪದಾರ್ಥಗಳು, ಹಣ್ಣು ತರಕಾರಿಗಳೂ,  ಕಡೆಗೆ ಮುಖ  ಕ್ಷೌರ ಮಾಡಿಸುವುದಕ್ಕೂ ಬಿಸಿ ತಟ್ಟಿರುವುದು ಎಲ್ಲರಿಗೂ ತಿಳಿದಿರುವ ಸತ್ಯ.   ಜಾಗತಿಕವಾಗಿ ತೈಲ ಬೆಲೆ ಏರಿಕೆಯ ಪರಿಣಾಮದಿಂದ, ಒಪೆಕ್ ರಾಘ್ಟ್ರಗಳು, ಅಮೇರಿಕಾ ದೇಶ ಹಾಗೂ ಇತರೇ ತೈಲ ಉತ್ಪಾದನಾ ದೇಶಗಳ ನಡುವಿನ ಸಂವಹನ ಕೊರತೆಯಿಂದ ಜಿಗುಟು ಮನಸ್ಸಿನ ವ್ಯವಹಾರಗಳಿಂದ ಕಚ್ಚಾ ತೈಲದ ಬೆಲೆ ದಿನದಿಂದ ಏರುತ್ತಿರುವುದನ್ನು ಕಾಣ ಬಹುದಾಗಿದೆ. ಆಮದಾದ ಕಚ್ಚಾ ತೈಲಗಳನ್ನು ಸಂಸ್ಕರಿಸಿ ಪ್ರತೀ ಲೀಟರಿಗೂ ಇಂತಿಷ್ಟು ತೆರಿಗೆ ಹಾಕಿ ರಾಜ್ಯಸರ್ಕಾರಗಳಿಗೆ  ತೈಲ ಕಂಪನಿಗಳ ಮೂಲಕ ಕೇಂದ್ರ ಸರ್ಕಾರ ಸರಬರಾಜು ಮಾಡಿದರೆ, ಗಾಯದ ಮೇಲೆ ಬರೆ ಎಳೆದಂತೆ ರಾಜ್ಯಸರ್ಕಾರಗಳು ಮನ ಬಂದಂತೆ ಮತ್ತಷ್ಟೂ ತರಿಗೆಗಳನ್ನು ಸೇರಿಸಿ ಕಡೆಗೆ ಸಾಮಾನ್ಯ ಜನರ ಬಳಿಗೆ ಬರುವಷ್ಟರಲ್ಲಿ ಮೇಲೆ ತಿಳಿಸಿದಂತಹ ಬೆಲೆಯಾಗಿರುತ್ತದೆ.  ಯಾವುದೇ ಸರ್ಕಾರಗಳಿಗೆ ಆದಯ ಕೊರತೆಯಾದಾಗಲೆಲ್ಲಾ, ಮೊತ್ತ ಮೊದಲು ಅವರ ಗಮನಕ್ಕೆ ಬರುವುದು ತೈಲ ಮತ್ತು ಅಬ್ಕಾರಿ ಬೆಲೆ ಏರಿಕೆಯೇ ಎನ್ನುವುದು ಗಮನಿಸಬೇಕಾದಂತಹ ಮತ್ತು ಯೋಚಿಸಬೇಕಾದಂತಹ ವಿಷಯವೇ ಆಗಿದೆ. ಈಗಲೇ ಅನೇಕ ರಾಜಕೀಯ ಮತ್ತು ರಾಜಕೀಯೇತರ ಪಕ್ಷಗಳು  ತೈಲ ಬೆಲೆ ಏರಿಕೆಯ ವಿರುಧ್ಧ ದೇಶಾದ್ಯಂತ ಬಂದ್ ಕೂಡಾ ನಡೆಸಿ ಕೋಟ್ಯಾಂತರ ರೂಪಾಯಿಗಳ ನಷ್ಟವನ್ನೂ ಮಾಡಿದ್ದಲ್ಲದೆ, ಬೆಲೆಗಳು ಇದೇ ರೀತಿ ಮುಂದುವರೆದರೆ ಜನಸಾಮಾನ್ಯರೇ ದಂಗೆ ಏಳಬಹುದು ಎಂಬ ಎಚ್ಚರಿಕೆಯ ಗಂಟೆಯನ್ನು ಸರ್ಕಾರಗಳಿಗೆ ಕೊಟ್ಟಾಗಿದೆ.

ನಮಗೆಲ್ಲರಿಗೂ ಅರಿವಿದ್ದಂತೆ ಭೂಗರ್ಭದಲ್ಲಿರುವ ತೈಲದಲ್ಲಿ ಅರ್ಧಕ್ಕೂ ಹೆಚ್ಚಿನದ್ದನ್ನು ಈಗಾಗಲೇ ನಾವುಗಳು ಬಸಿದಿದ್ದು ಇನ್ನು ಉಳಿದಿರುವುವ ತೈಲಗಳು ಸರಿ ಸುಮಾರು ಇಪ್ಪತೈದರಿಂದ ಮೂವತ್ತು ವರ್ಷಗಳವರೆಗೆ ಲಭ್ಯವಾಗುವ ಸಂಭವವಿದೆ. ಇರುವ ತೈಲವೆಲ್ಲಾ ಬರಿದಾದ ಮೇಲೆ ಮಾಡುವುದೇನು? ಸಂಪರ್ಕ ಸಾಧನಗಳಿಗೆ ಇಂಧನ ಅತ್ಯವಶ್ಯಕವಾದ ಕಾರಣ ಬದಲೀ ವ್ಯವಸ್ಥೆ ಏನು?  ತೈಲ ಬೆಲೆ ನಿಯಂತ್ರಣ ಕೇವಲ ಸರ್ಕಾರದ ಕೆಲಸವೇ? ಜನಸಾಮಾನ್ಯರೂ ಹೇಗೆ ಕೈ ಜೋಡಿಸಬಹುದು?  ಎಂಬ ಬಗ್ಗೆ ತುಸು ಗಮನಹರಿಸುವ ಸಮಯ ಬಂದೊದಗಿದೆ.

ಜನ ಸಾಮಾನ್ಯರ ಕೊಡುಗೆ

 • ಅನಗತ್ಯ ವಾಹನ ಬಳಕೆ ಕಡಿಮೆ ಮಾಡಿ ಕಾಲ್ನಡಿಗೆ ಅಥವಾ ಸೈಕಲ್ ಬಳೆಸುವುದರಿಂದ ತೈಲದ ಬಳಕೆಯೂ ತಪ್ಪುತ್ತದೆ. ದೈಹಿಕ ವ್ಯಾಯಾಮವೂ ಆಗಿ ಆರೋಗ್ಯವೂ  ಚೆನ್ನಾಗಿರುತ್ತದೆ.
 • ವಾಹನಗಳನ್ನು ಕಾಲ ಕಾಲಕ್ಕೆ ದುರಸ್ತಿಮಾಡಿಸಿ  ಸದಾ ಸುಸ್ಥಿತಿಯಲ್ಲಿಟ್ಟು ಕೊಳ್ಳುವುದರಿಂದ ತೈಲದ ಬಳಕೆ ಕಡಿಮೆಯಾಗಿ ಕಡಿಮೆ ಇಂಧನದಲ್ಲಿ ಹೆಚ್ಚಿನ ದೂರವನ್ನು ಕ್ರಮಿಸಬಹುದಾಗಿದೆ.
 • ಒಬ್ಬಿಬ್ಬರ  ದೂರದ ಪ್ರಯಾಣಗಳಿಗೆ ಸ್ವಂತ ವಾಹನಗಳನ್ನು ಬಳೆಸದೆ,  ಸಾರ್ವಜನಿಕ ಸಂಪರ್ಕ ವಾಹನಗಳನ್ನು ಬಳೆಸುವ  ಮೂಲಕ ತೈಲದ ಬಳಕೆ ಕಡಿಮೆ ಮಾಡಬಹುದಾಗಿದೆ.
 • ಸಹೋದ್ಯೋಗಿಗಳೆಲ್ಲಾ ಒಟ್ಟಿಗೆ ಕಛೇರಿಗೆ ಹೋಗಿ ಬರುವುದರ ಮೂಲಕ ಏಕಕಾಲದಲ್ಲಿ ಹಲವರು ಒಂದೇ ವಾಹನ ಬಳೆಸಬಹುದಾಗಿದೆ.
 • ಮನೆಗಳಲ್ಲಿ ಆದಷ್ಟೂ ಸೌರವಿದ್ಯುತ್ ಬಳಕೆ ಮಾಡುವುದರ ಮೂಲಕ ಜೆನ್ ಸೆಟ್ ಬಳಕೆ ತಗ್ಗಿಸಬಹುದಾಗಿದೆ
 • ಮನೆಗಲ್ಲಿಯೇ ಗೋಬರ್ಗ್ಯಾಸ್ ಮತ್ತು  ಬಯೋ ಗ್ಯಾಸ್ ತಯಾರಿಸಿಕೊಂಡು ಆಡುಗೆ ಅನಿಲಗಳ ಬಳಕೆ ಕಡಿಮೆ ಮಾಡಬಹುದಗಿದೆ
 • ಮನೆಗೆ ಅಗತ್ಯವಿದ್ದಷ್ಟು  ಆಡುಗೆಯನ್ನು ಏಕಕಾಲದಲ್ಲಿಯೇ ಪ್ರೆಶರ್ ಕುಕ್ಕರ್ ಬಳೆಸಿ ತಯಾರಿಸುವುದರಿಂದ ಅಡುಗೆ ಅನಿಲದ ಬಳಕೆ ತಗ್ಗಿಸಬಹುದಾಗಿದೆ

ಸರ್ಕಾರದ ಜವಾಬ್ಡಾರಿ

 • ಏಲ್ಲ ರಸ್ತೆಗಳನ್ನು ಸದಾ ಸುಸ್ಥಿತಿಯಲ್ಲಿಡುವುದರ ಮತ್ತು ಅಗತ್ಯವಿರುವ ಕಡೆಯಲ್ಲೆಲ್ಲಾ ಮೇಲ್ಸೇತುವೆ ನಿರ್ಮಿಸಿ, ರಸ್ತೆಗಳನ್ನು   ಸಿಗ್ನಲ್ ಮುಕ್ತ ಮಾಡುವ ಮೂಲಕ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡಿ ತೈಲ ಉಳಿಸ ಬಹುದಾಗಿದೆ (ಪ್ರತಿ ದಿನ ಒಂದು ಗಂಟೆಯಿಂದ ಒಂದೂವರೆ ಗಂಟೆಯಲ್ಲಿ ಮನೆಯಿಂದ ಕಛೇರಿಗೆ ತಲುಪುತ್ತಿದ್ದ ನಾವು, ಕೆಟ್ಟ ರಸ್ತೆ ಹಾಗೂ ವಾಹನಗಳ ದಟ್ಟಣೆಯಿಂದಾಗಿ ಕಛೇರಿ ತಲುಪಲು  ಎರಡೂವರೆ ಗಂಟೆ ತೆಗೆದು ಕೊಳ್ಳುತ್ತಿದ್ದೇವೆ. ಮೊದಲೆಲ್ಲಾ ಒಂದು ಲೀಟರಿಗೆ  18-19 ಕಿಲೋಮೀಟರ್  ದೂರ ಪ್ರಯಾಣಿಸುತ್ತಿದ್ದ  ವಾಹನದಲ್ಲಿ ಇಂದು ಕೇವಲ  13-14 ಕಿ.ಮೀ. ಮಾತ್ರ ತಲುಪಲು ಸಾಧ್ಯವಾಗುತ್ತಿದೆ)
 • ಸಾರ್ವಜನಿಕ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ ಸಮಯಪಾಲನೆ ಮತ್ತು ಸುಸ್ಥಿತಿಯಲ್ಲಿಡುವುದರ ಮೂಲಕ ಹೆಚ್ಚೆನ ಜನ ಇದರ ಸದ್ಬಳಕೆ ಮಾಡಿಕೊಂಡು ಅನಗತ್ಯವಾಗಿ ವಯಕ್ತಿಕ ವಾಹನಗಳ ಬಳಕೆಯನ್ನು ತಗ್ಗಿಸಬಹುದಾಗಿದೆ.
 • ಮೆಟ್ರೋ, ಮೋನೋ, ಬುಲೆಟ್  ರೈಲ್ಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ ಅವುಗಳೆಲ್ಲಾ ಅತೀ ಶೀಘ್ರವಾಗಿ ಕಾರ್ಯೋನ್ಮುಖವಾಗುವಂತಹ ವ್ಯವಸ್ಥೆಗಳನ್ನು ತರಬೇಕು.  ಏಕೆಂದರೆ  “ನಮ್ಮ ಮೆಟ್ರೋ” ಎಂಬ ಧ್ಯೇಯ ವಾಕ್ಯ ನಮ್ಮ ಕಾಲದಲ್ಲಿ ಅಳವಡಿಕೆಯಾಗದೇ “ನಮ್ಮ ಮಕ್ಕಳ ಮೆಟ್ರೋ” ಎನ್ನುವಂತಾಗಿರುವುದು ವಿಪರ್ಯಾಸವೇ ಸರಿ.
 • ಬದಲೀ ಇಂಧನ ವ್ಯವಸ್ಥೆಗಳಾದ ಎಥೆನಾಲ್, ಮೆಥೆನಾಲ್, ಜಲಜನಕ, ಪ್ರೋಪೇನ್, ಸೌರಶಕ್ತಿ, ವಿದ್ಯುಚ್ಛಕ್ತಿ, ಸಸ್ಯಜನಿಕ ಇಂಧನಗಳ
 • ಹೆಚ್ಚಿನ ಉತ್ಪಾದನೆ ಮತ್ತು ಬಳಕೆಯನ್ನು  ಹೆಚ್ಚಿಸುವುದರ ಮೂಲಕ ಆಮದು ತೈಲದ ಬಳಕೆಯನ್ನು ತಗ್ಗಿಸ ಬಹುದಾಗಿದೆ.

ನಾನು ತಿಳಿಸಿರುವುದು ಕೆಲವೇ ಆಗಿದ್ದು ಈ ಎಲ್ಲಾ  ವಿಷಯಗಳೂ ನಮಗೆಲ್ಲರಿಗೂ ತಿಳಿದಿರುವಂತಹದ್ದೇ ಹೊರತು, ಹೆಚ್ಚಿನದ್ದೇನನ್ನೂ ನಾನು ಹೇಳಿಲ್ಲವಾದರೂ, ಮತ್ತೆ ಮತ್ತೆ ಅದೇ ವಿಷಯಗಳನ್ನು ಪುನರಾವರ್ತಿಸುವುದರ ಮೂಲಕ ಮನಸ್ಸಿಗೆ ಮನನವಾಗಿ ವಯಕ್ತಿಕವಾಗಿ ತೈಲದ ಅನಗತ್ಯವಾದ  ಬಳಕೆಯನ್ನು ತಗ್ಗಿಸಬಹುದಲ್ಲವೇ?.  ನನ್ನೀ ಬರಹದಿಂದ ಸರ್ಕಾರ ಎಚ್ಚೆತ್ತು ಕೊಂಡು ಈ ಕೂಡಲೇ ಕಾರ್ಯಪ್ರವ್ಟತ್ತವಾಗುತ್ತದೆ ಎಂಬ ಹುಂಬತನವು ನನಗಿಲ್ಲವಾದರೂ, ಇಂತಹ ವಿಷಯಗಳು ಜನರಿಂದ ಜನರಿಗೆ ಸಾಮಾಜಿಕ ಜಾಲತಾಣಗಳ ಮುಖಾಂತರ ಹರಡಿ ಕೊನೆಗೊಮ್ಮೆ ನಮ್ಮ ಜನನಾಯಕರಿಗೂ ತಲುಪಿ ಅಲ್ಪ ಸ್ವಲ್ಪ ಮಾರ್ಪಾಡು ಮಾಡುವುದರ ಮೂಲಕ ವಿದೇಶೀ ತೈಲದ ಆಮದನ್ನು ಕಡಿಮೆ ಮಾಡಿಕೊಂಡು ನಮ್ಮಲ್ಲೇ ಇರುವ ಬದಲೀ ಇಂಧನಗಳನ್ನು ಬಳೆಸಿಕೊಂಡು ತೈಲದ ಬೆಲೆಯನ್ನು  ನಿಯಂತ್ರಿಸಬಹುದೇನೋ ಎನ್ನುವ ಆಶಾಭಾವನೆಯಷ್ಟೇ.

ಜನಸಾಮ್ಯಾನ್ಯರು ತೈಲ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವುದನ್ನು ನಮ್ಮ ಜನನಾಯಕರು ನೋಡಿಕೊಂಡು ಸುಮ್ಮನೆ ಕುಳಿತಿಲ್ಲ. 2019ರ ಚುನಾವಣೆ ಇಷ್ಟು ಸಮೀಪವಿರುವಾಗ ಜನರ ಆಕ್ರೋಶ  ಅವರಿಗೆ ತಿರುಗುಬಾಣವಾಗುವ ಸಂಭವಬವೂ ಹೆಚ್ಚಾಗಿರುವುದರಿಂದ  ನನ್ನ ನಂಬಿಕೆಯಂತೆ, ಅವರೂ ಕೂಡಾ ತಮ್ಮ ಕೈಯಲ್ಲಿ ಸಾಧ್ಯವಾದಷ್ಟರ ಮಟ್ಟಿಗೆ ನಿಯಂತ್ರಿಸಲು ಪ್ರಯತ್ನಿಸುತ್ತಲೇ ಇದ್ದಾರೆ.  ಕೇಂದ್ರ ಮತ್ತು ರಾಜ್ಯಸರ್ಕಾರಗಳ ಆದಾಯಕ್ಕೆ ತೈಲದ ಮೇಲಿನ ತೆರಿಗೆಯೇ ಹೆಚ್ಚಾದ್ದರಿಂದ  ಇತರೇ ಆದಯದ ಮೂಲವನ್ನು ಹುಡುಕುತ್ತಿರಬಹುದು.  ಅಬ್ರಾಹಂ ಲಂಕನ್ ಹೇಳಿದಂತೆ ದೇಶ ನನಗೆ ಏನು ಕೊಟ್ಟಿದೆ ಎನ್ನುವುದನ್ನು ಯೋಚಿಸುತ್ತಲೇ ಸಮಯ ಹಾಳು ಮಾಡುವ ಬದಲು, ದೇಶಕ್ಕೇ ನಾವೇನು ಕೊಡಬಹುದು ಎಂದು ಯೋಚಿಸುತ್ತಾ, ಈ ರೀತಿಯಾಗಿ ಅಲ್ಪ ಸ್ವಲ್ಪ ಅಳಿಲು ಸೇವೆಯಂತೆ ತೈಲ ಬಳಕೆಯನ್ನು ವಯಕ್ತಿಕ ಮಟ್ಟದಲ್ಲಿ ತಗ್ಗಿಸುತ್ತಾ  ತೈಲ ಬೆಲೆ ನಿಯಂತ್ರಿಸಲು ಸಹರಿಸಬಹುದು. ಬಳಕೆ ಹೆಚ್ಚಾದಂತೆಲ್ಲಾ ಬೆಲೆಯೂ ಹೆಚ್ಚುವ ಹಾಗೆ,  ಬಳಕೆ ತಗ್ಗಿದ್ದಂತೆ ಬೆಲೆಯೂ ಕಡಿಮೆ ಆಗ ಬಹುದಲ್ಲವೇ?

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s