ಇನ್ನೇನು ಸಂಕ್ರಾಂತಿ ಹಬ್ಬ ಬರ್ತಾಇದೆ. ಸಂಕ್ರಾಂತಿಯಿಂದ ರಥ ಸಪ್ತಮಿ ಮುಗಿಯುವವರೆಗೂ ಎಲ್ಲರ ಮನೆಯಲ್ಲಿ ಸಂಭ್ರಮದ ವಾತಾವರಣ. ಸಂಬಂಧೀಕರ ಮತ್ತು ಆಪ್ತ ಸ್ನೇಹಿತರ ಮನೆಗೆಳಿಗೆ ಹೋಗಿ ಎಳ್ಳು ಬೀರುತ್ತಾ, ಎಳ್ಳು ಬೆಲ್ಲಾ ತಿಂದು ಒಳ್ಳೇ ಮತಾನಾಡೋಣ ಎನ್ನುತ್ತಾ ಬಾಂಧ್ಯವ್ಯ/ಗೆಳೆತನ ಹೆಚ್ಚಿಸುಕೊಳ್ಳುವ ಉತ್ತಮ ಕಾರ್ಯಕ್ರಮ. ನಮ್ಮ ಎಲ್ಲಾ ಹಬ್ಬಗಳ ಹಿಂದಿನ ಸಾರವೂ ಅದೇ. ಹಬ್ಬಗಳ ನೆಪದಲ್ಲಿ ಎಲ್ಲಾ ಕಷ್ಟಗಳನ್ನು, ದ್ವೇಷಗಳನ್ನು ಮರೆತು ಒಟ್ಟಿಗೆ ಒಂದೆಡೆ ಸೇರಿ ಯಥಾಶಕ್ತಿ ಅಥಿತಿ ಸತ್ಕಾರ ಮಾಡುತ್ತಲೋ ಇಲ್ಲವೇ ಮಾಡಿಸಿಕೊಳ್ಳುವ ಸತ್ ಸಂಪ್ರದಾಯ ನಮ್ಮಲ್ಲಿ ಹಿಂದಿನಿಂದಲೂ ರೂಡಿಯಲ್ಲಿದೆ. ಕೆಲ ವರ್ಷಗಳ ಹಿಂದೆ ಹಾಗೆ ನಮ್ಮ ಶ್ರೀಮತಿಯ ಜೊತೆಗೆ ನಮ್ಮ ಆಪ್ತ ಗೆಳೆಯರ ಮನೆಗೆ ಎಳ್ಳು ಬೀರಲು ಹೋಗಿದ್ದಾಗ ಆದ ಮೋಜಿನ ಸಂಗತಿ ಇದೋ ನಿಮಗಾಗಿ.
ಎಳ್ಳು ಬೀರಲು ಎರಡು ಮೂರು ಬಾರಿ ಅವರ ಮನೆಗೆ ಹೋಗಿದ್ದಾಗಲೂ ಅವರು ಮನೆಯಲ್ಲಿ ಸಿಗದಿದ್ದರೂ ಈ ಬಾರಿಯಾದರೂ ಸಿಗಬಹುದೆಂಬ ನಿರೀಕ್ಷೆಯಲ್ಲಿ ಯಾವುದೇ ಮುನ್ಸೂಚನೆ ನೀಡದೆ ಅವರನ್ನು ಭೇಟಿ ಮಾಡಲು ಹೊರಟೆವು. ಒಂದು ಬಾರಿ ನಾವು ಅವರಿಗೆ ಕರೆ ಮಾಡಿ ಬರುವ ಮುನ್ಸೂಚನೆ ಕೊಟ್ಟಲ್ಲಿ ಪಾಕ ಶಾಸ್ತ್ರ ಪ್ರವೀಣೆಯಾದ ನಮ್ಮ ಗೆಳೆಯರ ಮಡದಿ ಏನಾದರೂ ವಿಶೇಷವಾಗಿ ಮಾಡಿಬಿಡುತ್ತಾರೆ. ನಾವು ಇನ್ನೂ ಮೂರ್ನಾಲ್ಕು ಮನೆಯಮನೆಗೆ ಹೋಗಬೇಕೆಂದು ನಿರ್ಧಾರ ಮಾಡಿದ್ದರಿಂದ ಮತ್ತು ಅವರಿಗೆ ತೊಂದರೆ ಕೊಡಬಾರದೆಂದು,ಅವರಿಗೆ ಹೇಳದೆಯೇ ಅವರನ್ನು ಆಶ್ಚಯಚಕಿತರನ್ನಾಗಿ ಮಾಡಲು ಅವರ ಮನೆಗೆ ಹೋದಾಗ, ಮನೆಯ ಹೊರಗೆ ಕಾರ್ ನಿಂತಿತ್ತಾದರೂ ಮನೆಯ ಒಳಗಿನಿಂದ ಯಾವುದೇ ಶಬ್ಧವಿರಲಿಲ್ಲ. ನಿಧಾನವಾಗಿ ಕರೆ ಎರಡು ಮೂರು ಬಾರಿ ಕರೆಗಂಟೆ ಮಾಡಿದಾಗ ಅವರ ಹಿರಿಯ ಮಗ ಬಂದು ಬಾಗಿಲು ತೆಗೆದಾಗ, ಅಪ್ಪಾ ಅಮ್ಮಾ ಇದ್ದಾರ? ಎಂದು ನಾವಿಬ್ಬರೂ ಒಕ್ಕೊರಲಿನಿಂದಲೇ ಕೇಳಿದೆವು. ಅದಕ್ಕವನು ಅಷ್ಟೇ ವಿನಯದಿಂದ ನಮಸ್ಕಾರ ಅಂಕಲ್. ಹೇಗಿದ್ದೀರೀ? ಒಳಗೆ ಬನ್ನಿ ಇಬ್ಬರೂ ಇದ್ದಾರೆ ಎಂದು ಮನೆಯೊಳಗೆ ಆತ್ಮೀಯವಾಗಿ ಬರಮಾಡಿಕೊಳ್ಳುವಷ್ಟರಲ್ಲಿ ಅವರ ಕಿರಿಯ ಮಗನೂ ತನ್ನ ಕೊಠಡಿಯಿಂದ ಬಂದವರಾರೆಂದು ಇಣುಕಿ ನೋಡಿ ನಮಗೆ ನಮಸ್ಕರಿಸಿ ಕುಡಿಯಲು ನೀರು ತರಲು ಒಳಗೆ ಓಡಿದ.
ಅಚಾನಕ್ಕಾಗಿ ಹೇಳದೇ ಕೇಳದೆ ಹೋದ ನಮ್ಮಿಬ್ಬರನ್ನು ಕಂಡ ನಮ್ಮ ಸ್ನೇಹಿತರ ಶ್ರೀಮತಿಯವರು ಸಂತೋಷದಿಂದ ಓಹೋ ನೀವೇ ಬಂದು ಬಿಟ್ರಾ? ನಾವೇ ನಿಮ್ಮ ಮನೆಗೆ ಬರಬೇಕು ಅಂದುಕೊಂಡಿದ್ವಿ. ಬಹಳ ಸಮಯ ಆಯ್ತು ಭೇಟಿ ಆಗಿ ಬನ್ನಿ ಕುಳಿತುಕೊಳ್ಳಿ ಏನು ಕೊಡಲಿ ಕುಡಿಯುವದಕ್ಕೆ ಎಂದು ವಿಚಾರಿಸುತ್ತಿದ್ದಾಗ ನನ್ನ ಕಣ್ಣೆಲ್ಲಾ ನಮ್ಮ ಸ್ನೇಹಿತರನ್ನೇ ಹುಡುಕುತ್ತಿದ್ದನ್ನು ಕಂಡ ಅವರ ಹಿರಿಯ ಮಗ ಅಪ್ಪಾ ಈಗ ತಾನೇ ಮನೆಗೆ ಬಂದ್ರು. ಫ್ರೆಷ್ ಆಗ್ತಾ ಇದ್ದಾರೆ. ಇನ್ನೇನು ಬಂದು ಬಿಡ್ತಾರೆ ಅಂತ ಹೇಳುವಷ್ಟರಲ್ಲಿಯೇ ಅವರೇ ಒಳಗಿನಿಂದ ಬಂದು ನಮ್ಮನ್ನು ನೋಡಿ, ನೀವು ಮನೆಗೆ ಬಂದದ್ದು ಸಂತೋಷವಾಯಿತು ಎಂದು ಮಾತನ್ನು ಆರಂಭಿಸುವಷ್ಟರಲ್ಲಿಯೇ ಅವರ ಮೊಬೈಲ್ಗೆ ಕರೆಯೊಂದು ಬಂದಿತು. ಹಾಗೆ ಕರೆ ಸ್ವೀಕರಿಸುತ್ತಿದ್ದಂತಯೇ ಅವರ ಮುಖದಲ್ಲಿ ಆಗುತ್ತಿದ್ದ ಬದಲಾವಣೆ ಏನೋ ತೊಂದರೆಯಲ್ಲಿ ಸಿಕ್ಕಿ ಕೊಂಡಿರಬಹುದೆಂದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಓಹೋ ಹಾಗಾ ಎಷ್ಟು ಹಣ ಇತ್ತು? ಎಲ್ಲಿ ಕಳೆದು ಹೋಯಿತು? ಏನೂ ಅಕೌಂಟ್ ನಂಬರ್ ಗೊತ್ತಿಲ್ವಾ? ಹಾಂ ಎಟಿಎಂ ಪಿನ್ ನಂಬರ್ ಕೂಡಾ ಅದರ ಮೇಲೇ ಬರ್ದಿದ್ರಾ? ಅಂತ ಕೇಳ್ತಾ ಇದ್ದಾ ಹಾಗೆ ನಮಗೆ ವಿಷಯದ ಸ್ಪಷ್ಟ ಚಿತ್ರಣ ತಿಳಿಯತೊಡಗಿತು. ಸರಿ ಸರಿ ಒಂದು ಐದು ಹತ್ತು ನಿಮಿಷ ಕೊಡಿ ನಾನೂ ನನಗೆ ಗೊತ್ತಿರುವರ ಬಳಿ ಏನು ಮಾಡಬಹುದೆಂದು ಕೇಳಿ ತಿಳಿಸ್ತೀನಿ ಎಂದು ಕರೆ ಕಟ್ ಮಾಡಿ, ಮಾಡಿ. ಸಾರಿ ಸರ್, ನಮ್ಮ ಸಂಬಂಧೀಕರು ಪೂನಾದಿಂದ ರೈಲಿನಲ್ಲಿ ಬೆಂಗಳೂರಿಗೆ ಬರುವಾಗ ಬ್ಯಾಂಕ್ ಡೆಬಿಟ್ ಕಾರ್ಡ್ ಎಲ್ಲೋ ಕಳೆದು ಕೊಂಡು ಬಿಟ್ಟಿದ್ದಾರೆ ಅಥವಾ ಯಾರೋ ಪಿಕ್ ಪಾಕೆಟ್ ಮಾಡಿ ಬಿಟ್ಟಿದ್ದಾರೆ. ಅದೂ ಅಲ್ದೇ ಆ ಕವರ್ ಮೇಲೆ ಪಿನ್ ನಂಬರ್ ಕೂಡಾ ಬರೆದಿದ್ರಂತೆ ಈಗೇನು ಮಾಡಬಹುದು? ಎಂದು ನನ್ನನ್ನೇ ಮರು ಪ್ರಶ್ನಿಸಿದರು. ಮೊದಲೇ ಅದು ಗ್ರಾಮೀಣ ಬ್ಯಾಂಕಿನ ಕಾರ್ಡ್. ಕಾರ್ಡ್ ನಂಬರ್ ಅವರಿಗೆ ಗೊತ್ತಿಲ್ಲ. ಕಾರ್ಡ್ಗೆ ಮೊಬೈಲ್ ನಂಬರ್ ಕೂಡಾ ಲಿಂಕ್ ಮಾಡಿಲ್ಲ. ಅಕೌಂಟ್ನಲ್ಲಿ ಹಣ ಕೂಡಾ ಸಾಕಷ್ಟಿದೆ. ಕಾಲ್ ಸೆಂಟರ್ಗೆ ಫೋನ್ ಮಾಡಿದ್ರೂ ಏನೂ ಪ್ರಯೋಜನ ಆಗೋದಿಲ್ಲ. ಅದಕ್ಕೇ ಹೋಮ್ ಬ್ರಾಂಚ್ಗೆ ಹೋಗಿಯೇ ಲಿಖಿತ ದೂರನ್ನೇ ನೀಡಬೇಕು ಎಂದು ನನಗೆ ಗೊತ್ತಿರುವಷ್ಟನ್ನು ತಿಳಿಸಿದೆ.
ಅದೇ ಸಮಯಕ್ಕೆ ಅವರ ಮನೆಗೆ ಅವರ ಇನ್ನಿಬ್ಬರು ಸ್ನೇಹಿತರು ಬಂದರು. ಅವರಲ್ಲಿ ಒಬ್ಬರು ನನಗೆ ಕೂಡಾ ಪರಿಚಯದವರಾದ್ದರಿಂದ ನನ್ನನ್ನು ಆತ್ಮೀಯವಾಗಿ ಮಾತನಾಡಿಸಿ ಸಮೀಪದಲ್ಲಿಯೇ ಅವರ ಮನೆಯಿರುವ ಕಾರಣ ಅವರ ಮನೆಗೆ ಬರಲು ಆಹ್ವಾನಿಸುತ್ತಿರುವಾಗಲೇ ನಮ್ಮ ಸ್ನೇಹಿತರು ಅವರ ಪರಿಚಯಸ್ಥ ಬ್ಯಾಂಕ್ ಮ್ಯಾನೇಜರ್ ಅವರಿಗೆ ಕರೆ ಮಾಡಿ ಏನು ಮಾಡಬಹುದೆಂದು ವಿಚಾರಿಸುತ್ತಿರುವಾಗಲೇ ಆಗ ತಾನೇ ಮನೆಗೆ ಬಂದ ಅತಿಥಿಗಳಿಗೂ ವಿಷಯದ ಅರಿವಾಗಿ ಅವರೂ ಸಹಾ ತಮ್ಮ ಪರಿಚಯವಿದ್ದ ಅದೇ ಗ್ರಾಮೀಣ ಬ್ಯಾಂಕ್ ನ ಮತ್ತೊಬ್ಬ ಸಿಬ್ಬಂಧಿಯವರೊಂದಿಗೆ ಮಾತನಾಡಲು ಕರೆ ಮಾಡಿದರು. ಒಟ್ಟಿನಲ್ಲಿ ಕೇವಲ ಒಂದು ಐದು ಹತ್ತು ನಿಮಿಷಗಳಲ್ಲಿಯೇ ಇಡೀ ಮನೆ ಕಾಲ್ ಸೆಂಟರ್ ಮಾದರಿಯಾಗಿ ಹೋಯಿತು. ಎಲ್ಲರೂ ಅವರವರಿಗೆ ತೋಚಿದಂತೆ ಅರಿವಿನಂತೆ ಸಹಾಯ ಮಾಡಲು ಮುಂದಾದರು.
ಇವುಗಳ ಮಧ್ಯೆ ಮನೆಗೆ ಬಂದಿದ್ದ ಮತ್ತೊಬ್ಬ ಸ್ನೇಹಿತರು, ಅಯ್ಯೋ ಮೊನ್ನೆ ನಮ್ಮ ಜಡ್ಜ್ ಅವರಿಗೂ ಕೂಡಾ ಹೀಗೇ ಆಗಿ ಎಪ್ಪತ್ತು ಸಾವಿರ ಕಳೆದು ಕೊಂಡರು. ಇನ್ನು ಜಡ್ಜ್ ಗಳಿಗೇ ಹೀಗಾದ್ರೆ ಇನ್ನು ಸಾಮಾನ್ಯರ ಗತಿ ಅಷ್ಟೇ ಎನ್ನುತ್ತಿದ್ದಂತೆಯೇ. ಕೆಲವು ತಿಂಗಳ ಹಿಂದೆ ನಮ್ಮ ತಂದೆಯವರ ಮನೆಯಲ್ಲೂ ಹೀಗೇ ಆಯ್ತು ಎಂದು ನಮ್ಮ ಶ್ರೀಮತಿ ಅವರ ತಂದೆಯವರಿಗೆ ಯಾರೋ ಬ್ಯಾಂಕ್ ಸಿಬ್ಬಂದಿ ಎಂದು ಹಿಂದಿ ಭಾಷೆಯಲ್ಲಿ ಕರೆ ಮಾಡಿ ಯಾವುದೇ ಅನುಮಾನ ಬಾರದಂತೆ ಪಿನ್ ನಂಬರ್ ಕೇಳಿ ಪಡೆದು ಹದಿನೈದು ಸಾವಿರ ದುಡ್ಡು ಲಪಟಾಯಿಸಿದ್ದನ್ನು ಸವಿರವಾಗಿ ವಿವರಿಸುತ್ತಿದ್ದಂತೆ ಇಡೀ ಮನೆಯಲ್ಲಿ ಒಂದು ಕ್ಷಣ ಮೌನ. ಗಾಮೀಣ ಬ್ಯಾಂಕ್ ಕಾರ್ಡ್ ಆಗಿರುವುದರಿಂದ ಹೆಚ್ಚೆಂದರೆ ಪ್ರತಿದಿನ ಇಪ್ಪತ್ತು ಸಾವಿರದಷ್ಟು ದುಡ್ಡನ್ನು ಡ್ರಾ ಮಾಡಬಹುದು. ಕಾರ್ಡ್ ಸಿಕ್ಕಿರುವ ಮನುಷ್ಯ ಬುದ್ದಿವಂತನಾಗಿದ್ದಲ್ಲಿ ಈಗ ಇಪ್ಪತ್ತು ಸಾವಿರ ಮತ್ತು ರಾತ್ರಿ ಹನ್ನೆರಡರ ನಂತರ ಮತ್ತೂ ಇಪ್ಪತ್ತು ಸಾವಿರ ಡ್ರಾ ಮಾಡಿಕೊಳ್ಳಬಹುದು ಎಂದು ಆತಂಕ ವ್ಯಕ್ತ ಪಡಿಸಿದರು. ಒಟ್ಟಿನಲ್ಲಿ ಪೂನಾದಲ್ಲಿ ಕಳೆದು ಹೋದ ಡೆಬಿಟ್ ಕಾರ್ಡ್ ಬಗ್ಗೆ ಬೆಂಗಳೂರಿನಲ್ಲಿ ಬರಪೂರ ಚರ್ಚೆ ನಡೆಯುತ್ತಿತ್ತು. ಹೇಗಾದರೂ ಮಾಡಿ ನಾಳೆ ಬೆಳೆಗ್ಗೆಯೊಳಗೆ ಕಾರ್ಡ್ ಬ್ಲಾಕ್ ಮಾಡಿಸಿದಲ್ಲಿ ಹೆಚ್ಚಿನ ಅನಾಹುತ ತಪ್ಪಿಸಬಹುದು ಎಂದು ಯೋಚಿಸುತ್ತಿರುವಾಗ ನಮ್ಮ ಸ್ನೇಹಿತರಿಗೆ ,ಆ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಕರೆ ಮಾಡಿ ಅವರ ಡೆಬಿಟ್ ಕಾರ್ಡ್ ಹೊಸದಾಗಿ ಚಿಪ್ ಇರುವ ಕಾರ್ಡ್ ಇಲ್ಲವೇ ಹಳೆಯ ಕಾರ್ಡೋ ಎಂದು ವಿಚಾರಿಸಿ. ಇನ್ನೂ ಹಳೆಯ ಕಾರ್ಡ್ ಆಗಿದ್ದಲ್ಲಿ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಜನವರಿ ಒಂದನೇ ತಾರೀಖಿನಿಂದ ಎಲ್ಲಾ ಹಳೆಯ ಕಾರ್ಡ್ಗಳನ್ನು ಬ್ಲಾಕ್ ಮಾಡಿ ಹೊಸಾ ಕಾರ್ಡ್ಗೆ ಬದಲಾಯಿಕೊಳ್ಳಲು ಸೂಚಿಸಲಾಗಿದೆ. ನಾಳೆ ಬೆಳಿಗ್ಗೆ ಬ್ಯಾಂಕ್ ತೆರೆದಕೂಡಲೇ ಅವರ ಹೆಸರಿನಿಂದ ಅವರ ಅಕೌಂಟ್ ನಂಬರ್ ಹುಡುಕಿ ಕಾರ್ಡ್ ಬ್ಲಾಕ್ ಮಾಡಲು ವ್ಯವಸ್ಥೆ ಮಾಡುತ್ತೇನೆ. ಅಲ್ಲಿಯವರೆಗೆ ಯಾವುದೇ ರೀತಿಯ ತೊಂದರೆ ಆಗದಿರಲೆಂದು ಆ ಭಗವಂತನನ್ನು ಪ್ರಾರ್ಥಿಸೋಣ ಎಂದಾಗ ನಮಗೆಲ್ಲಾ ಸ್ವಲ್ಪ ನಿರಾಳವಾಯಿತು.
ಸರಿ ಅವರ ಡೆಬಿಟ್ ಕಾರ್ಡ್ ಹೊಸದೋ ಇಲ್ಲವೋ ಹಳೆಯದ್ದೋ ಎಂದು ಕೇಳಲು ಅವರ ಸಂಬಂಧೀಕರ ಮೊಬೈಲ್ಗೆ ಕರೆ ಮಾಡಿದರೆ, ನೀವು ಕರೆ ಮಾಡಿದ ಚಂದಾದಾರು ಮತ್ತೊಂದು ಕರೆಯಲ್ಲಿ ನಿರತರಾಗಿದ್ದಾರೆ. ಸ್ವಲ್ಪ ಸಮಯದ ನಂತರ ಕರೆ ಮಾಡಿ ಎಂಬ ಸಂದೇಶ . ಇದೇ ರೀತಿಯ ಸಂದೇಶ ಒಂದು ಹತ್ತು ನಿಮಿಷಗಳ ಅಂತರದಲ್ಲಿ ಏರಡು ಮೂರು ಬಾರಿ ನಮಗೆ ಕೇಳಿ ಬಂದಾಗ ನಮ್ಮೆಲ್ಲರಿಗೂ ಆತಂಕ ಇನ್ನೂ ಹೆಚ್ಚಾಗಿ, ಛೇ ಎಂತ ಮನುಷ್ಯರಪ್ಪಾ? ವಿದ್ಯಾವಂತರಾಗಿಯೂ ಅಷ್ಟೆಲ್ಲಾ ತಿಳುವಳಿಕೆ ಇದ್ದೂ ಎಲ್ಲರೂ ಎಷ್ಟೆಲ್ಲಾ ತಿಳುವಳಿಕೆ ಹೇಳಿದರೂ ಪಿನ್ ನಂಬರ್ ಕಾರ್ಡ್ ಮೇಲೇ ಬರೀತಾರ? ಸರಿ ಈಗ ಆಗಿರುವ ತಪ್ಪಿಗೆ ಹೆಚ್ಚಿನ ಶಿಕ್ಷೆಯಾಗದಿರಲಿ ಎಂದು ಮಾತಾನಾಡಿಕೊಳ್ಳುತ್ತಿದ್ದಂತೆಯೇ, ಡೆಬಿಟ್ ಕಾರ್ಡ್ ಕಳೆದು ಕೊಂಡವರಿಂದಲೇ ನಮ್ಮ ಸ್ನೇಹಿತರಿಗೆ ಕರೆ ಬಂದಿತು. ಆ ಕೂಡಲೇ ಕರೆ ತೆಗೆದು ಕೊಂಡ ನನ್ನ ಸ್ನೇಹಿತರು ಆ ಕಡೆಯವರಿಗೆ ಮಾತಾನಾಡಲೂ ಅವಕಾಶ ಕೊಡದೆ ಹೇ, ನಿನ್ ಕಾರ್ಡ್ ಚಿಪ್ ಇದ್ದದ್ದೋ, ಇಲ್ಲವೋ ? ಚಿಪ್ ಇಲ್ಲದ ಕಾರ್ಡ್ ಆಗಿದ್ರೆ ಏನೂ ಆತಂಕ ಪಡುವ ಅವಶ್ಯಕತೆ ಇಲ್ಲಾ ಏಕೆಂದರೆ ಬ್ಯಾಂಕ್ನವರೇ ಆ ಎಲ್ಲಾ ಕಾರ್ಡ್ ಬ್ಲಾಕ್ ಮಾಡಿದ್ದಾರಂತೆ. ನಾನು ಬ್ಯಾಂಕ್ ಮ್ಯಾನೇಜರ್ ಅವರ ಬಳಿ ಮಾತನಾಡಿದ್ದೀನಿ. ನಾಳೆ ಬೆಳಿಗ್ಗೆ ಅವರನ್ನು ಭೇಟಿ ಮಾಡು ಇಲ್ಲವೇ ಯಾರನ್ನಾದರೂ ಕಳುಹಿಸು ಅವರು ನಿನಗೆ ಹೊಸಾ ಕಾರ್ಡ್ ಕೊಡಿಸುವ ವ್ಯವಸ್ಥೆ ಮಾಡುತ್ತಾರೆ ಎಂದು ಒಂದೇ ಉಸಿರಿನಿಂದ ಹೇಳುತ್ತಿದ್ದರೆ. ಆ ಕಡೆಯಿಂದ ಅಷ್ಟೆ ನಿರಾತಂಕವಾಗಿ ಹೇ ತಮ್ಮಾ, ಅದರ ಚಿಂತಿ ಈಗಿಲ್ಲ. ನಿರಾಳಾಗು. ಅದೇನಾಯ್ತು ಅಂದ್ರೇ, ನಾವು ಹೊರಡುವ ಭರದಲ್ಲಿ ಕಾರ್ಡ್ ಇದ್ದ ಪರ್ಸನ್ನು ಮನೆಯಲ್ಲೇ ಬಿಟ್ಟು ಬಂದೀವಿ. ಈಗ ಮನೆಗೆ ಫೋನ್ ಮಾಡಿದಾಗ ಮನೆಯಲ್ಲೇ ಪರ್ಸ್ ಬಿಟ್ಟು ಬಂದಿರುವ ವಿಷಯ ತಿಳೀತ್ ನೋಡು. ಏನೂ ಬ್ಯಾಸರ ಮಾಡಿಕೊಳ್ಳಬೇಡ ನಿಮಗೆಲ್ಲಾ ಭಾಳ ತ್ರಾಸ್ ಕೊಟ್ಟೀನಿ, ನಿನ್ ತರಹ ಇನ್ನೂ ಬಾಳ್ ಮಂದೀಗೆ ಫೋನ್ ಹಚ್ಚಿ ತ್ರಾಸ ಕೊಟ್ಟೀನಿ. ಈಗ ಒಬ್ಬೊಬ್ಬರಿಗೇ ಕರೆ ಹಚ್ಚಿ ಹೇಳಕತ್ತೀನಿ ಅದಕ್ಕೆ ನಿನ್ ಕಾಲ್ ಹಚ್ಚೋದಿಕ್ಕೆ ತಡ ಆತು. ನಾಳೆ ಬಂದು ಭೇಟಿ ಮಾಡ್ತೀನಿ ಅಂದಾಗ, ಇಂಗು ತಿಂದ ಮಂಗನ ಪರಿಸ್ಥಿತಿ ನಮ್ಮದಾಗಿತ್ತು. ಅಷ್ಟರಲ್ಲಾಗಲೇ ಗಂಟೆ ಹತ್ತಾಗಿತ್ತು.
ಅವರ ಮನೆಗೆ ಹೋಗಿದ್ದಾಗ ಊಟ ಮಾಡಿ ಬಂದಿದ್ದೇವೆ ಏನೂ ಬೇಡ, ಬೇಡ ಅಂದರೂ ಚೂಡಾ, ಮೈಸೂರ್‌ಪಾಕ್ ಮತ್ತು ಜ್ಯೂಸ್ ತಂದಿಟ್ಟಿದ್ದರು. ಹೊಟ್ಟೆ ತುಂಬಿದ್ದ ಕಾರಣ ಅಷ್ಟು ಹೊತ್ತು ಅದನ್ನು ಮುಟ್ಟುವುದಿರಲಿ, ಮೂಸಿಯೂ ನೋಡಿರಲಿಲ್ಲ. ಈ ಪ್ರಸಂಗದಿಂದ ತಲೆ ಕೆಟ್ಟು ಗೊಬ್ಬರ ಆಗಿದ್ದರಿಂದ ತಟ್ಟೆಯಲ್ಲಿಟ್ಟಿದ್ದನ್ನು ಗಬಗಬನೆ ತಿಂದು ಗಟಗಟನೆ ಜ್ಯೂಸ್ ಜೊತೆ ನೀರನ್ನು ಕುಡಿದು ತಲೆ ತಂಪು ಮಾಡಿ ಕೊಂಡೆ.
ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ನಮ್ಮ ಹಣವನ್ನು ಪಡೆಯಲು ಸಾದ್ಯವಾಗಲೆಂದು ಎಲ್ಲಾ ಬ್ಯಾಂಕಿನವರೂ ಆಧುನೀಕಣಗೊಂಡು ಡೆಬಿಟ್ ಕಾರ್ಡ್ ಕೊಟ್ಟು ಭದ್ರತೆಗಾಗಿ ರಹಸ್ಯ ಪಿನ್ ಕೊಟ್ಟಿರುತ್ತಾರೆ. ದಯವಿಟ್ಟು ಆ ಕೋಡ್ ನಂಬರನ್ನು ಯಾರೊಂದಿಗೂ ಹಂಚಿಕೊಳ್ಳ ಬಾರದು ಮತ್ತು ಅದು ಮತ್ತೊಬ್ಬರಿಗೆ ಸುಲಭವಾಗಿ ಸಿಗುವಂತಾಗಬಾರದು. ಎಲ್ಲದಕ್ಕಿಂತ ಮೊದಲು ಆ ಡೆಬಿಟ್ ಕಾರ್ಡ್ಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಇಟ್ಟುಕೊಂಡಲ್ಲಿ ಇಂತಹ ಮುಜುಗರಗಳನ್ನು ತಪ್ಪಿಸಬಹುದಲ್ಲವೇ?
ಏನಂತೀರೀ
ನಿಮ್ಮವನೇ ಉಮಾಸುತ
ಮಕರ ಸಂಕ್ರಾಂತಿ ದಿವಸ ನಿಮ್ಮ ಸ್ನೇಹಿತರ ಮನೆಗೆ ಎಳ್ಳು ಬೀರಲು ಹೋದಾಗ ಆದ “ಡೆಬಿಟ್ ಕಾರ್ಡ್ ಅವಾಂತರ” ಓದಿದೆ. ಒಮ್ಮೊಮ್ಮೆ ಹೀಗೆಲ್ಲ ಆಗುತ್ತವೆ. ಈಗ ಗೂಗಲ್ ಪೇ, ಫೋನ್ ಪೇಗೆ ಅವಕಾಶವಿರುವುದರಿಂದ ಸಾಮಾನ್ಯವಾಗಿ ಹಣ ಜೇಬಿನಲ್ಲಿಟ್ಟುಕೊಂಡು ಯಾರೂ ಅಂಗಡಿಗಳಿಗೆ ಹೋಗುವುದಿಲ್ಲ. ಡೆಬಿಟ್ ಕಾರ್ಡ್ ನಿಂದ ತುಂಬಾ ಉಪಯೋಗ ಆಗುತ್ತಿದೆ. ಹಣ ಎಣಿಸಿ ಕೊಡಬೇಕಾಗಿಲ್ಲ. ಹಣ ಕಳೆದುಹೋಗುತ್ತದೆಂಬ ಭಯವಿಲ್ಲ. ಚಿಲ್ಲರೆ ಇಲ್ಲ ಎನ್ನುವ ಸಮಸ್ಯೆಯಿಲ್ಲ. ಹೀಗಿರುವಾಗ ಎಲ್ಲರೂ ಕಾರ್ಡ್ ಬಳಸುತ್ತಾರೆ. ಆದರೆ ಎಷ್ಟು ಅನುಕೂಲವಿದೆಯೋ ಎಚ್ಚರ ತಪ್ಪಿದರೆ ಅಷ್ಟೇ ಅಪಾಯವೂ ಇದೆ. ಹಾಗಾಗಿ ತುಂಬಾ ಎಚ್ಚರಿಕೆಯಿಂದ ಇರಬೇಕು. ಆದರೂ ನೀವು ಹೇಳಿದಂತೆ ಹಬ್ಬಗಳ ಕಾರಣದಿಂದ ಬಂಧುಗಳ, ಸ್ನೇಹಿತರ ಮನೆಗಳಿಗೆ ಭೇಟಿ ಕೊಟ್ಟು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಮಾತನಾಡುವುದರಿಂದ ಮನಸ್ಸಿಗೆ ಆನಂದವಾಗುತ್ತದೆ. ಹಾಸ್ಯ ಮನೋಭಾವದವರಾದರಂತೂ ಅದರ ಗಮ್ಮತ್ತೇ ಬೇರೆ. ಹಿಂದಿನವರು ಮಾಡಿರುವ ಸಂಪ್ರದಾಯಗಳು ನಿಜಕ್ಕೂ ಅರ್ಥಪೂರ್ಣ.
LikeLike