ಪ್ರತೀ ತಿಂಗಳ ಎರಡನೇ ಮತ್ತು ನಾಲ್ಕನೇ ಭಾನುವಾರ, ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಸ್ವದೇಶೀ ಜಾಗರಣ ಮಂಚ್ ನೇತೃತ್ವದಲ್ಲಿ ನೆಡೆಯುತ್ತಿರುವ ಸಾವಯವ ಸಂತೆ ನಿಮ್ಮೆಲ್ಲರ ಸಹಕಾರದಿಂದ ಇಂದೂ ಕೂಡಾ ಅಭೂತಪೂರ್ವ ಯಶಸ್ವಿಯಾಗಿ ನಡೆಯಿತು ಎಂದು ತಿಳಿಸಲು ಹರ್ಷಿಸುತ್ತೇವೆ. ಇಂದು ಬೆಳಿಗ್ಗೆ ನಿಗಧಿತ ಸಮಯವಾದ 8.00 ಗಂಟೆಗೆ ಆರಂಭವಾಗುತ್ತದೆ ಎಂದು ತಿಳಿಸಿದ್ದರೂ ಹಲವಾರು ಜನ 7:30 ಕ್ಕೆಲ್ಲಾ ಆಗಮಿಸಿ ಕಾರ್ಯಕ್ರಮದ ಆಯೋಜಕರಿಗೆ ಇನ್ನೂ ಯಾಕೆ ಶುರುಮಾಡಿಲ್ಲ ಎಂದು ಪ್ರಶ್ನಿಸುತ್ತಿದ್ದದ್ದು ನಿಜಕ್ಕೂ ಅದ್ಭುತವಾಗಿತ್ತು. ಇನ್ನೂ ಕೆಲವು ಸಾರ್ವಜನಿಕರು ರೈತರಿಗೆ ಅವರ ತರಕಾರಿ ಮತ್ತು ಸೊಪ್ಪುಗಳನ್ನು ಜೋಡಿಸಲು ಸಹಕರಿಸಿದ್ದು ಎಲ್ಲರ ಮನ ಸೆಳೆಯುವಂತಿತ್ತು. ಎಂದಿನಂತೆ ರೈತರೇ ಸಾವಯವ ಕೃಷಿಯಾಧಾರಿತವಾಗಿ ಬೆಳೆದ ತಮ್ಮ ಸೊಪ್ಪು, ತರಕಾರಿಗಳನ್ನು ಮತ್ತು ಹಣ್ಣುಗಳನ್ನು ನೇರವಾಗಿ ಸಾರ್ವಜನಿಕರಿಗೆ ತಲುಪಿಸುತ್ತಿರುವ ಈ ಪ್ರಯತ್ನವನ್ನು ಅನೇಕ ಸಾರ್ವಜನಿಕರಿಗೆ ಮೆಚ್ಚಿಗೆಯಾದರೇ ಇನ್ನೂ ಕೆಲವರು ಪ್ರತೀ ವಾರಕ್ಕೊಮ್ಮೆ ಇಂತಹ ಸಾವಯವ ಸಂತೆಯನ್ನು ಮಾಡಬೇಕೆಂದು ಆಯೋಜಕರಲ್ಲಿ ಮನವಿ ಮಾಡುತ್ತಿದ್ದದ್ದು ಕಾರ್ಯಕ್ರಮದ ಯಶಸ್ವಿಯನ್ನು ಎತ್ತಿ ತೋರಿಸುತ್ತಿತ್ತು
ಕೇವಲ ತಾಜ ತಾಜ ತರಕಾರಿ, ಸೊಪ್ಪು ಮತ್ತು ಹಣ್ಣುಗಳಲ್ಲದೆ, ನಾಲಿಗೆಯ ರುಚಿಯನ್ನು ತಣಿಸಲು ನವಣೆ ಶ್ಯಾವಿಗೆ, ಜೋಳದ ರೊಟ್ಟಿ, ಎಣ್ಗಾಯಿ ಮತ್ತು ಕಾಯಿ ಪಲ್ಲೆಗಳು ಎಲ್ಲರ ಹಸಿವನ್ನು ನೀಗಿಸಿದವು. ಇವೆಲ್ಲದರ ಜೊತೆ ನೈಸರ್ಗಿಕವಾಗಿ ಯಾವುದೇ ರೀತಿಯ ಮಿಶ್ರಣವಿಲ್ಲದ ತೆಂಗಿನ ಎಣ್ಣೆ, ಕಡಲೇಕಾಯಿ ಎಣ್ಣೆ, ಹಲವಾರು ಮತ್ತೆ ಕೆಲವು ಗಿಡಮೂಲಿಗೆಗಳು ಜೊತೆ ಸಿರಿಧಾನ್ಯಗಳೂ ಸಹಾ ಮಾರಟಕ್ಕಿದ್ದರೆ, ಎಂದಿನಂತೆ ಗುಡಿ ಕೈಗಾರಿಕೆ ರೀತಿಯಲ್ಲಿ ತಯಾರು ಮಾಡಿದ ಮಡಕೆ ಕುಡಿಕೆಗಳೂ ಸಹಾ ಲಭ್ಯವಾಗಿದ್ದದ್ದು ಸಾರ್ವಜನಿಕರ ಮೆಚ್ಚಿಗೆ ಗಳಿಸಿತು.
ಓಹೋ, ಈ ಕಾರ್ಯಕ್ರಮಕ್ಕೆ ನಾವು ಬರಲಾಗಲಿಲ್ಲ, ಇಂತಹ ಸುವರ್ಣಾವಕಾಶವನ್ನು ತಪ್ಪಿಸಿಕೊಂಡೆವೆಲ್ಲಾ ಎಂದು ಬೇಸರ ಮಾದಿಕೊಳ್ತೀದ್ದೀರಾ? ಇಂತಹ ತಾಜಾ ಸೊಪ್ಪು ತರಕಾರಿ ಹಣ್ಣುಗಳು ನಮಗೆ ಯಾವಾಗ ಸಿಗುವುದು ಎಂದು ಯೋಚಿಸುತ್ತಿದ್ದೀರಾ? ನಿರಾಶೆಯಾಗದಿರಿ ಎಂದಿನಂತೆ ಮುಂದಿನ ತಿಂಗಳು ಎರಡನೇ ಭಾನುವಾರ ಮತ್ತೆ ಇದೇ ಜಾಗದಲ್ಲಿ ಮತ್ತಷ್ಟು ಉತ್ಪನ್ನಗಳೊಂದಿಗೆ ಭೇಟಿಯಾಗೋಣ. ಅಲ್ಲಿಯವರೆಗೂ ನಮ್ಮ ಎಲ್ಲಾ ಬಂಧು ಮಿತ್ರರಿಗೂ ಈ ಕಾರ್ಯಕ್ರಮದ ಬಗ್ಗೆ ತಿಳಿಸುತ್ತಿರೋಣ. ನಿಮ್ಮ ಸಹಕಾರ ಹೀಗೆಯೇ ಮುಂದುವರೆದು, ಈ ಸಾವಯವ ಸಂತೆ ಎಲ್ಲರ ಆಶಯದಂತೆ ತಿಂಗಳಿಗೆ ಎರಡೂ ಅಥವಾ ನಾಲ್ಕು ಬಾರಿ ನಡೆಯುವಂತಾಗಲಿ
ಏನಂತೀರೀ?