ಈ ಹಿಂದೆ ನಾನೇ ಹಲವಾರು ನನ್ನ ಬರಹಗಳಲ್ಲಿ ತಿಳಿಸಿದ್ದಂತೆ ನಾನು ಕಾಲೇಜು ಓದುತ್ತಿರುವಾಗಲೂ ಸಣ್ಣಗೆ ಕುಳ್ಳಗಿದ್ದು , ನಮ್ಮ ತಾಯಿವರು ಕುಟುಂಬದ ವೈದ್ಯರ ಬಳಿ ಹಲವಾರು ಸಲ ತೋರಿಸಿ, ನಮ್ಮ ಮಗನಿಗೆ ಸ್ವಲ್ಪ ಉದ್ದ ಹಾಗು ದಷ್ಟ ಪುಷ್ಟವಾಗಿ ಆಗುವಂತೆ ಏನಾದರೂ ಔಷಧಿ ಇದ್ದರೆ ಕೊಡಿ ಎಂದು ಕೇಳಿದ್ದದ್ದು ಇನ್ನೂ ಹಚ್ಚ ಹಸುರಾಗಿದೆ. ನಂತರ ವಯೋಗುಣವಾಗಿ ಬೆಳೆದನಾದರೂ ಸಣ್ಣಗೇ ಇದ್ದೆ. ಮದುವೆ ಸಮಯದಲ್ಲೂ ಮದುವೆಗೆ ಬಂದಿದ್ದ ನೆಂಟರಿಷ್ಟರೂ, ಸ್ನೇಹಿತರುಗಳು ನನ್ನನ್ನೂ ಮತ್ತು ನನ್ನ ಅರ್ಧಾಂಗಿಯನ್ನು ನೋಡಿ, ಇದೇನು ಬಾಲ್ಯ ವಿವಾಹ ಮಾಡಿದಂತಿದೆ ಎಂದು ರೇಗಿಸಿದ್ದೂ ಇದೆ. ಮದುವೆಯಾದ ಸುಮಾರು ವಾರಾಂತ್ಯದಲ್ಲಿ ಎಲ್ಲಾ ಬಂಧು-ಮಿತ್ರರ ಮನೆಯಲ್ಲಿನ ಔತಣದ ಪ್ರಭಾವವೋ, ಮಾತೆಯ ಮತ್ತು ಮನದನ್ನೆಯ ಶುವಿ ರುಚಿಯಾದ ಅಡುಗೆ ಮತ್ತು ಆರೈಕೆಗಳ ಪ್ರಭಾವವೋ, ದೈನಂದಿನ ವ್ಯಾಯಮಗಳನ್ನು ಕಡಿಮೆ ಮಾಡಿದ ಪ್ರಬಾವವೋ, ತಪ್ಪದೇ ವಾರಾತ್ಯಂದಲ್ಲಿ ದಿನವಿಡೀ ಕ್ರಿಕೆಟ್ ಆಡುತ್ತಿದ್ದನ್ನು ನಿಲ್ಲಿಸಿದುದರ ಪ್ರಭಾವವೋ, ಕೆಲಸದ ಒತ್ತಡದ ಪ್ರಭಾವದಿಂದಾಗಿಯೋ ಏನೋ ದಿನೇ ದಿನೇ ಮೈ ಕೈ ತುಂಬಿ ಕೊಂಡು ದಷ್ಟ ಪುಷ್ಟವಾಗ ತೊಡಗಿದಾಗ ಹೇಗೋ ಪೀಚಾಗಿದ್ದೆ. ಈಗ ಸ್ವಲ್ಪ ನೋಡುವುದಕ್ಕೆ ಚೆನ್ನಾಗಿ ಕಾಣುತ್ತಿದ್ದೀಯೇ ಎಂದು ನನ್ನ ಪೋಷಕರು ಮತ್ತು ಹಿತೈಷಿಗಳು ಹೇಳಿದಾಗ ಮನಸ್ಸಂತೋಷದಿಂದ ನೆಮ್ಮದಿಯಿಂದ ದಿನ ಕಳೆಯುತ್ತಿದ್ದೆ. ಇಷ್ಟರಲ್ಲಾಗಲೇ ನಿವೇಶನ ಖರೀದಿಸಿ ಮನೆಯನ್ನು ಕಟ್ಟಿ ಎರಡು ಮಕ್ಕಳ ತಂದೆಯಾಗಿ ಕೆಲಸ ಮತ್ತು ಕುಟುಂಬದ ಹೊರತಾಗಿ ಮತ್ತಾವುದರ ಬಗ್ಗೆ ಗಮನ ಹರಿಸದೆ ಇದ್ದ ಕಾರಣ ಬಲೂನಿನಂತೆ ಊದುತ್ತಲೇ ಹೋದೆ. ಅಚಾನಕ್ಕಾಗಿ ನನ್ನ ಬೈಕ್ ಅಪಘಾತಕ್ಕೀಡಾಗಿ ಮೈ ಕೈಯೆಲ್ಲಾ ಗಾಯಮಾಡಿಕೊಂಡು, ಕಾಲು ಮುರಿದುಕೊಂಡು ಶಸ್ತ್ರಚಿಕಿತ್ಸೆತೊಳಗಾಗಿ ಐದಾರು ತಿಂಗಳು ಹಾಸಿಗೆಯ ಮೇಲೆಯೇ ಕಳೆಯುವಂತಾದೆ. ಮೊದಲೇ ಸೋಮಾರಿ, ಇನ್ನು ಕಾಲು ಮುರಿದುಕೊಂಡು ಓಡಾಡಲು ಆಗದಿದ್ದಾಗ ಕಳ್ಳನಿಗೆ ಒಂದು ಪಿಳ್ಳೆ ನೆವ ಎನ್ನುವ ಹಾಗೆ ಎಲ್ಲಾ ರೀತಿಯ ದೈಹಿಕ ಕಸರತ್ತುಗಳಿಂದ ಒಂದೆರಡು ವರ್ಷ ದೂರವಿದ್ದ ಪರಿಣಾಮ, ಶಕ್ತಿ ವರ್ಧಕ ಔಷಧಿಯ ಪ್ರಭಾವ ಹಾಗೂ ಮಡದಿಯ ಅಕ್ಕರೆಯ ಸಕ್ಕರೆಯ ಆರೈಕೆಯಿಂದಾಗಿ ಮತ್ತಷ್ಟು ದೇಹದ ತೂಕ ಹೆಚ್ಚಿಸಿಕೊಂಡೆ. ಮೊದ ಮೊದಲು ಮನೆಯ ಹತ್ತಿದರ ಕೆಲಸಗಳಿಗೆಲ್ಲಾ ನಡೆದು ಕೊಂಡು ಹೋಗುತ್ತಿದ್ದವನು ಕಾಲ ಕ್ರಮೇಣ ಸಣ್ಣ ಪುಟ್ಟ ಕೆಲಸಗಳಿಗೂ ವಾಹನದ ಮೊರೆ ಹೊಕ್ಕೆ. ನನ್ನೀ ಸೋಮಾರಿತನದ ನಡವಳಿಗೆಯಿಂದ ಬೇಸತ್ತ ನನ್ನ ತಂದೆಯವರು ಸದ್ಯ ಅಡಿಗೆ ಮನೆ, ಬಚ್ಚಲು ಮನೆಗೆ ಓಡಾಡಲು ಗಾಡಿ ಬಳೆಸುತ್ತಿಲ್ಲವಲ್ಲಾ ಎಂದು ಹೀಯಾಳಿಸಿದರೂ,ಆವರ ಹೇಳುತ್ತಿರುವುದು ನನಗಲ್ಲಾ, ಎಂದು ನಾನೇ ಬೇರೆ ನನ್ನ ಸ್ಟೈಲ್ ಬೇರೆ ಎಂದು ತಿರುಗಾಡುತ್ತಿದೆ. ನನ್ನಮ್ಮ ಹಾಗೂ ನನ್ನ ಮನೆಯಾಕೆ ಇಬ್ಬರೂ ಪಾಕ ಶಾಸ್ತ್ರ ಪ್ರವೀಣರೇ. ಒಬ್ಬರಿಗಿಂತ ಒಬ್ಬರ ಕೈ ರುಚಿ ಅಧ್ಭುತ. ಸಾರು, ಮಜ್ಜಿಗೆ ಹುಳಿ, ಕಲಸಿದ ಅನ್ನಗಳು ಪೂರಿ ಸಾಗು, ಒತ್ತು ಶಾವಿಗೆ, ತರತಹದ ಪಲ್ಯಗಳು, ಬೊಂಡ ಬಜ್ಜಿಗಳ ಅಮ್ಮನದ್ದಾದರೆ. ಪಲಾವು, ಪುಳಿಯೋಗರೆ, ರವೆ ರೊಟ್ಟಿ. ಮೆಂತ್ಯದಬಾತ್,ಘೀರೈಸ್ ಕುರ್ಮಾ, ಹೆಸರು ಬೇಳೆ ಅಕ್ಕಿ ಉಪ್ಪಿಟ್ಟು, ಹುಳಿಯವಲಕ್ಕಿಗಳಿಗೆ ನನ್ನ ಮನೆಯೊಡತಿ ಫೇಮಸ್ಸು. ಇದರ ಜೊತೆಗೆ ಕಲಿ ಯುಗದ ನಳ ಮಹರಾಜನೋ ಎನ್ನುವಂತೆ ಸ್ವತ ನಾನೇ: ಮಾಡುತ್ತಿದ್ದ ಫ್ರೈಡ್ ರೈಸ್, ತರತಹದ ಮಂಚೂರಿಗಳು, ಪಾನಿಪುರಿ, ಬೇಲ್ ಪುರಿ ಹೀಗೆ, ಹುಟ್ಟಿರುವುದೇ ತಿನ್ನುವುದಕ್ಕಾಗಿ ಎಂದು ಗೊತ್ತು ಗುರಿ ಇಲ್ಲದೆ ತಿನ್ನುತ್ತಾ ಹೋದೆ. ಹಗಲು ಹೊತ್ತಿನಲ್ಲಿ ರಾಜನಂತೆ ಉಣ್ಣು, ರಾತ್ರಿಹೊತ್ತಿನಲ್ಲಿ ಭಿಕ್ಷುಕನಂತೆ ತಿನ್ನು ಎನ್ನವ ಗಾದೆ ಮಾತು ಗೊತ್ತಿದ್ದರೂ ಜಾಣ ಮೌನದಿಂದ ರಾತ್ರಿ ಮಡದಿ ಮಾಡಿರುತ್ತಿದ್ದ ಚಪಾತಿ ಪಲ್ಯಗಳನ್ನು ತಿಂದಾದ ನಂತರ ಪಾತ್ರೆಯಲ್ಲಿ ಮಿಕ್ಕಿದ್ದ ಅನ್ನವನ್ನು ಬಿಸಾಡಲು ಮನಸ್ಸು ಬಾರದೆ, ಉಳಿದ ಅಷ್ಟೂ ಅನ್ನಕ್ಕೆ, ಉಳಿದಿದ್ದ ಸಾರು, ಹುಳಿ ಪಲ್ಯಗಳನ್ನು ಕಲೆಸಿಕೊಂಡು ತಿಂದು ಡರ್ ಎಂದು ತೇಗಿ ಗೊರ್ ಎಂದು ಗೊರಕೆ ಹೊಡೆಯುವುದು ನಿತ್ಯ ಕಾಯಕವಾಗಿತ್ತು. ಮದುವೆಯ ಸಮಯದಲ್ಲಿ ಸುಮಾರು ಅರವತ್ತರ ಆಸು ಪಾಸಿನಲ್ಲಿದ್ದ ನನ್ನ ತೂಕ ಹತ್ತು ಹದಿನೈದು ವರ್ಷಗಳೊಳಗೇ ತೊಂಬ್ಬತ್ತರ ಗಡಿ ದಾಟಿ ಅಮೋಘ ಶತಕದತ್ತ ಸಾಗುತ್ತಲಿತ್ತು .
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕನಾಗಿದ್ದು, ನಾನು ಸಂಘದ ಘೋಶ್ ಟೋಳಿಯಲ್ಲಿ ಪಣವದ ಜೊತೆಗೆ ಮೈಲು ಗಟ್ಟಲೆ ಪಥಸಂಚಲನ ಮಾಡುತ್ತಿದ್ದ ನನಗೆ ಬರ ಬರುತ್ತಾ ಐನೂರು, ಸಾವಿರ ಹೆಜ್ಜೆಗಳನ್ನು ಹಾಕವಷ್ಟರಲ್ಲಿಯೇ ಏದುಸಿರು ಬಿಡುವಂತಾಗ ತೊಡಗಿತ್ತು. ಪಣವದ ಜೊತೆ ದೊಳ್ಳು ಹೊಟ್ಟೆಯ ಭಾರದಿಂದಾಗಿ ಹತ್ತಾರು ಹೆಜ್ಜೆಗಳು ನಡೆವಷ್ಟರಲ್ಲಿಯೇ ವಿಪರೀತ ಬೆನ್ನು ನೋವು ಬಂದು ಎಲ್ಲವನ್ನೂ ಕಿತ್ತೊಗೆದು ನೆಲಕ್ಕೆ ಮೈಚಾಚಿ ಮಲಗಿ ಬಿಡುವ ಹಾಗಾಗುತ್ತಿತ್ತು. ವರ್ಷಕ್ಕೆರಡು ಅಥವಾ ಮೂರು ಬಾರಿ ಅವಶ್ಯಕತೆಗಳಿಗೆ ಅನುಗುಣವಾಗಿ ರಕ್ತ ದಾನ ಮಾದುತ್ತಿದ್ದ ನನ್ನಂತಹವನಿಗೆ ದೇಹದ ತೂಕ ಹಾಗು ಅಧಿಕ ರಕ್ತದೊತ್ತಡದಿಂದಾಗಿ ರಕ್ತವನ್ನು ತೆಗೆದುಕೊಳ್ಳಲು ನಿರಾಕರಿಸಿದಾಗ ಆಕಾಶವೇ ತಲೆ ಮೇಲೆ ಬಿದ್ದಂತಹ ಅನುಭವ. ಬಹು ಮಹಡಿಯ ಕಛೇರಿಯಲ್ಲಿ ಒಂದೆರಡು ಮಹಡಿಗಳನ್ನು ಮೆಟ್ಟಿಲಿನ ಮುಖಾಂತರ ಹತ್ತುವುದಕ್ಕೂ ಆಗದೆ, ಕಷ್ಟ ಪಟ್ಟು ಹತ್ತಿದರೂ, ಹತ್ತು ಹದಿನೈದು ನಿಮಿಷಗಳಷ್ಟು ಹೊತ್ತು ಸುಢಾರಿಸಿಕೊಳ್ಳ ಬೇಕಾದ ಅನಿವಾರ್ಯ ಪರಿಸ್ಠಿತಿ ಬಂದೊದಗಿತ್ತು. ಕುಟುಂಬದೊಡಗೆ ಪ್ರವಾಸಕ್ಕೆಂದು ಕೊಡಚಾದ್ರಿ, ಶಿವಗಂಗೆ ಬೆಟ್ಟಗಳಿಗೆ ಎಪ್ಪತ್ತು ಎಂಬ್ಬತ್ತರ ನಮ್ಮ ತಂದೆ ಮತ್ತು ನಮ್ಮ ದೊಡ್ಡ ಮಾವನವರು ನಿರಾಯಸವಾಗಿ ಹತ್ತುತ್ತಿದ್ದರೆ ಅವರ ಅರ್ಧ ವಯಸ್ಸಿನವನಾದ ನಾನು ಪಾಡುತ್ತಿದ್ದ ಕಷ್ಟ ನಿಜಕ್ಕೂ ಶೋಚನೀಯವಾಗಿತ್ತು.
ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ನನ್ನೋಡತಿ ಸಾರಿ ಸಾರಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಲಹೆ ಕೊಡುತ್ತಿದ್ದಳಾದರೂ, ಅವಳ ಮಾತಿಗೆ ಬೆಲೆ ಕೊಡದೆ ಪಾಲಿಗೆ ಬಂದದ್ದು ಪಂಚಾಮೃತ ಎಂದು ಜೀವನ ಸಾಗಿಸುತ್ತಲಿದ್ದೆ. ಹೇಗಾದರೂ ಮಾಡಿ ನನ್ನನ್ನು ಸಣ್ಣ ಮಾಡಿಸುವ ಧೃಡ ಸಂಕಲ್ಪತೊಟ್ಟ ನನ್ನ ಶ್ರೀಮತಿ ನನ್ನ ಹುಟ್ಟು ಹಬ್ಬದ ಉಡುಗೊರೆಯಾಗಿ ನಮ್ಮ ಬಡಾವಣೆಯ ಪ್ರತಿಷ್ಟಿತ ಜಿಮ್ ಒಂದಕ್ಕೆ ನನ್ನನ್ನು ಸೇರಿಸಿದಳು. ನಾನೋ ಹೋದ ಪುಟ್ಟಾ, ಬಂದಾ ಪುಟ್ಟಾ ಎನ್ನುವ ಹಾಗೆ ಜಿಮ್ಗ್ ಹೋಗಿ ಅಲ್ಲಿದ ಎಲ್ಲಾ ಉಪಕರಣಗಳನ್ನೂ ಮುಟ್ಟಿ ನೋಡಿ ಬರುತ್ತಿದ್ದ ಕಾರಣ ಮೂರ್ನಾಲ್ಕು ತಿಂಗಳಾದರೂ ಒಂದು ಚೂರೂ ಬದಲಾವಣೆಯಾಗಲಿಲ್ಲ, ಆದೊಂದು ದಿನ ನನ್ನ ಹೈಸ್ಕೂಲ್ ಓದುತ್ತಿದ್ದ ನನ್ನ ಮಗಳನ್ನು ಶಾಲೆಗೆ ಬಿಡಲು ಗಾಡಿಯಲ್ಲಿ ತರೆದೊಯ್ದು ಇನ್ನೇನು ಶಾಲೆಗೆ ಇನ್ನೂರು ಮುನ್ನೂರು ಹೆಜ್ಜೆಗಳ ಸಮೀಪ ಇರುವಾಗಲೇ ಮಗಳು ಗಾಡಿಯನ್ನು ನಿಲ್ಲಿಸಲು ಹೇಳಿ ಅಲ್ಲಿಂದಲೇ ಅವಳು ನಡೆದುಕೊಂಡು ಹೋಗುವುದಾಗಿ ಹೇಳಿದಾಗ ನನಗೆ ಆಶ್ಚರ್ಯವಾಯಿತು. ಇದೇನೇ ಪುಟ್ಟಿ, ಇಲ್ಲಿಂದ ಏಕೆ ನಡೆದು ಕೊಂಡು ಹೋಗುತ್ತೀ, ನಾನೇ ಅಲ್ಲಿಯವರೆಗೆ ಬಿಟ್ಟು ಬಿಡುತ್ತೇನೆ ನನಗೇನು ಅವಸರವಿಲ್ಲ ಎಂದೆ. ಅದಕ್ಕವಳು ಅವಸರದ ಮಾತೇನಿಲ್ಲ,. ನೀವು ಶಾಲೆಯವರೆಗೆ ಬರುವ ಅವಶ್ಯಕತೆ ಇಲ್ಲ. ನೀವೀಗಲೇ ಇಲ್ಲಿಂದಲೇ ಹಿಂತಿರುಗಿ ಎಂದು ಧೃಡವಾಗಿ ಹೇಳಿದಾಗ ಸ್ವಲ್ಪ ವಿಚಲಿತನಾಗಿ ಕೋಪಗೊಂಡನಾದರೂ ರಸ್ತೆಯಲ್ಲಿ ಕೋಪ ತಾಪವೇಕೆ ಎಂದು ಕೊಂಡು ಮರುಮಾತನಾಡದೆ ಅವಳಿಚ್ಚೆಯಂತಯೇ ಅವಳನ್ನು ಅಲ್ಲಿಯೇ ಬಿಟ್ಟು ಮನೆಯ ಕಡೆಗೆ ಹಿಂತಿರುಗುವ ಮಾರ್ಗದ ಪೂರ್ತಿ, ಮುದ್ದಿನ ಮಗಳೇಕೆ ಹೀಗೆ ಹೇಳಿದಳು? ನಾನು ಹಾಕಿಕೊಂಡಿರುವ ಬಟ್ಟೆ ಸರಿಯಾಗಿಯೇ ಇದೆ, ನೋಡಲೂ ಸರಿ ಸುಮಾರಾಗೇ ಇದ್ದೇನೆ. ಗಾಡಿ ಕೂಡಾ ಹೊಸಾದೇ, ಹೀಗೆ ನಾನಾ ರೀತಿಯಾಗಿ ಯೋಚಿಸುತ್ತಾ ಮನೆ ತಲುಪಿದ್ದೇ ಗೊತ್ತಾಗಲಿಲ್ಲ. ಮನೆಗೆ ಬಂದರೂ ಅನ್ಯ ಮನಸ್ಕನಾಗಿದ್ದ ನನ್ನನ್ನು ಗಮನಿಸಿದ ಪತ್ನಿ ಕಾರಣವೇನೆಂದು ಕೇಳಲು ಮಗಳನ್ನು ಶಾಲೆಗೆ ಬಿಡಲು ಹೋದಾಗ ಆದ ಮುಜುಗರವನ್ನು ಹೇಳಿದಾಗ ಆಕೆಯೂ ಗಾಭರಿಗೊಂಡು ನನ್ನ ಮಗಳು ಹಾಗೆ ಹೇಳಿರಲಿಕ್ಕಿಲ್ಲ. ಸರಿ ಆಕೆ ಶಾಲೆಯಿಂದ ಬಂದ ಮೇಲೆ ಹಾಗೇಕೆ ಹೇಳಿದಳೆಂದು ಕೇಳಿದರಾಯ್ತು ಎಂದು ಸಮಾಧಾನ ಪಡಿಸಿದಳಾದರೂ ಇದೀ ದಿನ ಅದೇ ನನ್ನ ಮನಸ್ಸನ್ನು ಕಾಡಿದ್ದಂತೂ ಸುಳ್ಳಲ್ಲ. ಆಕೆ ಶಾಲೆಯಿಂದ ಬರುವುದನ್ನೇ ಜಾತಕ ಪಕ್ಷಿಯಂತೆ ಕಾಯ್ದು ಆಕೆ ಮನೆಗೆ ಮರಳುತ್ತಿದ್ದಂತೆ, ಆಪ್ಪಾ, ಹೇಗಿದ್ದೀರಿ? ಏನು ರಜೆ ದಿವಸಾನೂ ಮನೆಯಲ್ಲೇ ಇದ್ದೀರಿ ಎಲ್ಲೂ ಹೋಗಿಲ್ಲವಾ ಎಂದು ಕೇಳಿದಾಗ, ತುಸು ಕೋಪದಿಂದ ನೀನು ನನ್ನನ್ನು ಅಪ್ಪಾ ಎಂದು ಕರೆಯ ಬೇಡ. ನನ್ನ ಜೊತೆ ಮಾತನಾಡಿಸಲೂ ಬೇಡ, ಇನ್ನು ಮೇಲೆ ನೀನುಂಟು ನಿಮ್ಮಮ್ಮ ಉಂಟು. ನಿಮ್ಮಿಬ್ಬರ ಗೋಜಿಗೆ ನಾನು ಬರುವುದಿಲ್ಲ. ಇನ್ನು ಮುಂದೆ ನಿನ್ನನ್ನು ನನ್ನ ಜೊತೆ ಎಲ್ಲೂ ಕರೆದು ಕೊಂಡು ಹೋಗುವುದಿಲ್ಲಾ ಎಂದು ತುಸು ಏರು ಧನಿಯಲ್ಲಿಯೇ ಹೇಳಿದಾಗ ಆವಳೊಮ್ಮೆ ಅವಕ್ಕಾಗಿ, ಅಮ್ಮಾ, ಅಪ್ಪನಿಗೇನಾಯ್ತು? ಯಾಕೆ ಹೀಗಾಡ್ತಾ ಇದ್ದಾರೆ? ನೀವಿಬ್ಬರೇನಾದರೂ ಕಿತ್ತಾಡ್ಕೊಂಡ್ರಾ? ನಿಮ್ಮ ಮೇಲಿನ ಕೋಪ ನನ್ನ ಮೇಲೆ ತೀರಿಸಿಕೊಳ್ತಾ ಇದ್ದಾರ? ಎಂದು ಸಹಜ ಕುತೂಹಲದಿಂದಲೇ ಕೇಳಿದಳು. ಅದಕ್ಕೆ ನನ್ನ ಹೆಂಡತಿ ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ಜಗಳ ಕದನವೇನಿಲ್ಲಾ, ಎಲ್ಲಾ ನಿನ್ನಿಂದಲೇ ಆಗಿರೋದು. ಅಪ್ಪಾ ಅನ್ಣೋ ಗೌರವ ಬೇಡ್ವಾ ನಿನಗೇ, ಶಾಲೆಯ ಮುಂದೆ ಅವರನ್ನು ಅವಮಾನಿಸಿ ಕಳುಹಿಸಿದ್ದೀಯಾ, ಇಡೀ ದಿನ ಅವರು ಅದೇ ವಿಷಯದ ಬಗ್ಗೆ ಕೊರಗುತ್ತಾ ಊಟ ಕೂಡಾ ಸರಿಯಾಗಿ ಮಾಡಿಲ್ಲ ಅಂದಾಗ, ಮಗಳು,ಅರೇ ಶಾಲೆಯ ಬಳಿ ಅಂತಹದ್ದೇನಾಯ್ತು? ಎಂದು ಯೋಚಿಸುತ್ತಿರುವಾಗಲೇ ನಾನು ಮಗಳ ಬಳಿ ನೀನೇಕೆ ನನ್ನನ್ನು ಶಾಲೆಯ ಹತ್ತಿರ ಬರವೇಡ ಎಂದೆ? ಅಂತಹದ್ದೇನಾಗಿದೆ ನನ್ನಲ್ಲಿ ಎಂದು ಕೇಳಿದೆ. ಓಹೋ ಇದಾ ನಿಮ್ಮಿಬ್ಬರ ಕೋಪಕ್ಕೆ ಕಾರಣ. *ಹೌದು, ನಾನೇ ನಿಮಗೆ ಶಾಲೆಯ ಹತ್ತಿರ ಬರಬೇಡಿ ಅಂತಾ ಹೇಳಿದ್ದು, ಯಾಕೆಂದರೆ ನೀವು ಮುಂಚಿನಂತೆ ಬೆನ್ನಾಗಿ ಕಾಣುತ್ತಿಲ್ಲ. ದಪ್ಪಗಾಗಿ ಅಸಹ್ಯಕರವಾಗಿದ್ದೀರಿ. ನನ್ನ ಸ್ನೇಹತರ ಅಪ್ಪಂದಿರನ್ನು ನೋಡಿ ಹೇಗೆ ತೆಳ್ಳಗೆ ಬೆನ್ನಾಗಿದ್ದಾರೆ* ಎಂದು ಒಂದೇ ಉಸಿರಿನಲ್ಲಿ ಹೇಳಿದಾಗ ನನಗೆ ಕೋಪ ನೆತ್ತಿಗೇರಿತ್ತಾದರೂ ಮಗಳೆಂಬ ಮಮಕರದಿಂದ ಮತ್ತು ನನ್ನನ್ನು ತೆಳ್ಳಗೆ ನೋಡಲು ಬಯಸುತ್ತಿರುವುದರಿಂದ ಕೋಪವನ್ನು ತಾಳಿಕೊಂಡು, ಓಹೋ ಹಾಗಾ, *ನೋಡ್ತಾ ಇರು, ಇನ್ನು ಆರು ತಿಂಗಳೊಳಗೆ ನಾನು ಹೇಗಾಗುತ್ತೀನಿ. ನಾವಿಬ್ಬರೂ ಒಟ್ಟಿಗೆ ಹೋಗುವಾಗ ಜನ ಅಪ್ಪಾ ಮಗಳು ಒಟ್ಟಿಗೆ ಹೋಗುತ್ತಿದ್ದಾರೆ ಎಂದು ಭಾವಿಸದೇ, ಅಣ್ಣಾ ತಂಗಿ ಒಟ್ಟಿಗೆ ಹೋಗುತ್ತಿದ್ದಾರೆ* ಅಂತ ಹೇಳದಿದ್ದರೆ ನಾನು ನಿನ್ನ ಅಪ್ಪನೇ ಅಲ್ಲಾ ಎಂದು ಅವಳಿಗೆ ಸವಾಲ್ ಹಾಕಿಯೇ ಬಿಟ್ಟೆ ಇಂತಹ ಅದೆಷ್ಟೋ ಸವಾಲುಗಳನ್ನು ಕೇಳಿದ್ದ ನನ್ನ ಮಗಳು ಇದು ಕೂಡಾ ಅಂತಹದ್ದೇ ಎಂದು ಕೊಂಡು, ಸರಿ ಹಾಗೇ ಆಗಲಿ ನಾನೂ ನೋಡಿಯೇ ಬಿಡುತ್ತೇನೆ ಎಂದು ಮರು ಸವಾಲು ಹಾಕಿಯೇ ಬಿಟ್ಟಳು. ಕೋಪದಲ್ಲಿ ಕೊಯ್ದು ಕೊಂಡ ಮೂಗು, ಆಡಿದ ಮಾತು ಹಿಂತಿರುಗಿ ಬಾರದು ಎಂದು ಅರಿವಾಗಲು ಹೆಚ್ಚಿನ ಸಮಯವಾಗಲಿಲ್ಲ. ಅವಳಿಗೆ ಹಾಗಿದ ಸವಾಲು ಕುಂತಾಗ, ನಿಂತಾಗ ಮನಸ್ಸನ್ನು ಕಾಡುತ್ತಾಲೇ ಇತ್ತು. ಜಿಮ್ನಲ್ಲಿ ಕಠಿಣ ಪರಿಶ್ರಮ ಪಡಲು ಶುರು ಮಾಡಿದನಾದರೂ ಆಹಾರದ ಬಗ್ಗೆ ಕಾಳಜಿ ವಹಿಸದ ಕಾರಣ ದೇಹದಲ್ಲೇನೂ ಅಂತಹ ಹೆಚ್ಚಿನ ಬದಲಾವಣೆ ಕಾಣದಿದ್ದಾಗ, ನನ್ನಂತೆಯೇ ಗುಂಡು ಗುಂಡಾಗಿದ್ದ ನನ್ನ ಪ್ರಾಣ ಸ್ನೇಹಿತನನ್ನು ಬಹಳ ದಿನಗಳ ನಂತರ ಬೇಟಿಯಾದಾಗ ಅವನಲ್ಲಾಗಿದ್ದ ಬದಲಾವಣೆ ಕಂಡು ಸಂತೋಷಗೊಂಡು ಅದು ಹೇಗೆ ತೆಳ್ಳಗಾದೆ, ನನಗೂ ಸ್ವಲ್ಪ ತಿಳಿಸು ಎಂದು ಕೇಳಿ ಕೊಂಡು ಮಗಳ ಜೊತೆಗಿನ ನನ್ನ ಸವಾಲನ್ನು ತಿಳಿಸಿದೆ, ಅದಕ್ಕವನು, ಅಷ್ಟೆನಾ ಮಗಾ, ಬೇಜಾರು ಮಾಡಿಕೊಳ್ಳಬೇಡಾ, ನಾನಿದ್ದೇನೆ. ಇನ್ನು ಮೂರು ತಿಂಗಳೊಳಗೆ ನಿನ್ನನ್ನು ಸಣ್ಣದಾಗಿ ಮಾದುವ ಜವಾಬ್ಡಾರಿ ನನ್ನದು ಎಂದಾಗ ಮರಳುಗಾಡಿಯಲ್ಲಿ ನೀರು ಸಿಕ್ಕ ಆನುಭವ. ಸರಿ ಸರಿ ಅದು ಹೇಗೆ ಹೇಳು? ಏನು ಮಾಡ ಬೇಕು? ಏನು ತಿನ್ನ ಬೇಕು? ಖರ್ಚು ಎಷ್ಟಾಗಬಹುದು? ಎಂದು ಒಂದೇ ಉಸಿರಿನಲ್ಲಿ ಕೇಳಿದಾಗ, ಸ್ವಲ್ಪ ತಡೆದು ಕೊಳ್ಳೋ ರಾಜಾ, ಇನ್ನೂಂದು ಎರಡು ಮೂರು ವಾರಗಳೊಳಗೆ ನಾನು ಎಲ್ಲವನ್ನೂ ತಿಳಿಸುತ್ತೇನೆ ಎಂದಾಗ, ಎರಡು ಮೂರು ವಾರಗಳು, ನನಗೆ ಎರಡು ಮೂರು ವರ್ಷಗಳೇನೂ ಅನ್ನುವ ಹಾಗೆ ಭಾಸವಾಗ ತೊಡಗಿತು. ಮಾತಿಗೆ ತಪ್ಪದ ಗೆಳೆಯ ನನ್ನನ್ನು ಮೂರು ತಿಂಗಳ onine free diet program http://www.hfen.uk program ಸೇರಿಸಿದಾಗ ನನ್ನ ಆನಂದಕ್ಕೇ ಪಾರವೇ ಇರಲಿಲ್ಲ. ಪ್ರತಿವಾರ ಅವರು ಕಳುಹಿಸುತ್ತಿದ್ದ diet chart ಗೆ ತಕ್ಕಂತೆ ನನ್ನ ಆಹಾರ ಪದ್ದತಿ ಅಳವಡಿಸಿಕೊಂಡು ಅವರು ಹೇಳಿದ್ದಕ್ಕಿಂತಲೂ ತುಸು ಹೆಚ್ಚೇ ವ್ಯಾಯಾಮ ಮಾಡುತ್ತಾ ತೂಕ ಕಡಿಮೆಯಾಗುವುದರ ಕನಸನ್ನು ಕಾಣುತ್ತಿದ್ದ ನನಗೆ ಎರಡು ಮೂರು ವಾರಗಳಾದರೂ ತೂಕದಲ್ಲಿ ಕಿಂಚಿತ್ತೂ ಬದಲಾಗದಿದ್ದದ್ದು ನಿರಾಶೆ ತರಿಸಿತ್ತು. ನನ್ಣೀ ಅವಸ್ಥೆ ನನ್ನ ಗೆಳೆಯನಿಗೂ ಗಾಭರಿಯಾಗಿ ನನಗೆ, ಥೈರಾಯಿಡ್ ಒಳಗೊಂಡಂತೆ ಎಲ್ಲಾ ರೀತಿಯ ವೈದ್ಯಕೀಯ ಪರೀಕ್ಷೆಗಳನ್ನು ಮಾಡಲು ಸೂಚಿಸಿದಾಗ, ತಪ್ಪದೇ ಅದನ್ನೂ ಮಾಡಿಸಿ ಎಲ್ಲವೂ ಸರಿಯಾಗಿದೆ ಎಂದು ತಿಳಿದು ಹರ್ಷಿತನಾದರೂ ತೂಕ ಇಳಿಕೆಯಾಗದ್ದೇ ಕಾಡುತ್ತಿದ್ದರೂ ಗೆಳೆಯನ ಮೇಲೆಯೂ, ದೇವರ ಮೇಲೆಯೂ ಭಾರ ಹಾಕಿ ಮುಂದುವರಿಸಿದೆ. ನನ್ನ ತಪಸ್ಸಿಗೆ ಕಂಡಿತವಾಗಿಯೂ ದೇವರು ಒಲಿದಂತಾಗಿ, ನಾಲ್ಕನೇ ವಾರದಿಂದ ದೇಹದ ತೂಕದಲ್ಲಿ
ಸ್ವಲ್ಪ ಬದಲಾವಣೆ ಕಾಣಲಾರಂಭಿಸಿ, ಅಪ್ಪಟ ಕನ್ನಡಿಗನಾದರೂ ಟಿಬೆಟ್ ಮೂಲದವನಂತೆ ಮುಖವೆಲ್ಲಾ ಊದಿಕೊಂಡು ಗಣೇಶನ ಕಣ್ಣುಗಳಂತೆ ಸಣ್ಣ ಸಣ್ಣದಾಗಿ ಕಾಣುತ್ತಿದ್ದದ್ದು ನಿಧಾನವಾಗಿ ಮುಖದ ಮೇಲಿದ್ದ ಕೊಬ್ಬೆಲ್ಲಾ ಕರಗಿ ಕಣ್ಣುಗಳು ಸರಿಯಾಗಿ
ಗೋಚರಿಲಾರಂಭಿಸಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಶ್ರಧ್ಧೆಯಿಂದ ಮೂರು ತಿಂಗಳವರೆಗೂ ಚಾಚೂ ತಪ್ಪದೆ ವ್ರತ ಪಾಲಿಸಿದಂತೆ diet ಮಾಡಿದರ ಪರವಾಗಿ 12 ಕೆಜಿ ತೂಕ ಕಳೆದುಕೊಂಡಾಗ ನನ್ನನ್ನು ಹಿಡಿಯುವವರೇ ಇರಲಿಲ್ಲ. ನನ್ನ ಮಡದಿ ಮತ್ತು ಮಕ್ಕಳಂತೂ ನೀವು ಆಕಾಶದಲ್ಲಿ ತೇಲಾಡುತ್ತೀದ್ದೀರಿ ಎಂದು ರೇಗಿಸುತ್ತಿದ್ದದ್ದು ಇನ್ನೂ ಕಿವಿಯ ಮೇಲೇ ಗುಂಯ್ ಗುಡುತ್ತಿದೆ.
ಒಮ್ಮೆ ಹಾಲಿನ ರುಚಿಕಂಡ ಬೆಕ್ಕು ಮತ್ತೆ ಮತ್ತೆ ಹಾಲನ್ನು ಮತ್ತೆ ಮತ್ತೆ ಕದ್ದು ಕುಡಿಯುವ ರೀತಿ diet programಗೆ ಒಗ್ಗಿ ಹೋಗಿದ್ದ ದೇಹ ಮತ್ತೆರಡು ಬಾರಿ ಅದೇ ಕಾರ್ಯಕ್ರಮವನ್ನು ಮುಂದುವರಿಸಿ ಒಂಬತ್ತು ತಿಂಗಳಲ್ಲಿ ಆರೋಗ್ಯಕರ ರೀತಿಯಲ್ಲಿ ಒಟ್ಟು 26 ಕೆಜಿ ತೂಕವನ್ನು ಕಳೆದುಕೊಂಡ ಅನುಭವನ್ನು ಕೇವಲ ಓದಿ ಆಥವಾ ಕೇಳಿ ತಿಳಿಯದೆ ಅನುಭವಿಸಿದರಷ್ಟೇ ಅರಿವಾಗುವುದು. 40ರಷ್ಟಿದ್ದ ಸೊಂಟದ ಅಳತೆ 32 ಕ್ಕೆ ಇಳಿದು, 44/ XXL ಸೈಜಿನಲ್ಲಿದ್ದ ಅಂಗಿ 38/L ಗೆ ಇಳಿದು ಮನೆಯ ಕಪಾಟಿನಲ್ಲಿದ್ದ ಅಷ್ಟೂ ಬಟ್ಟೆಗಳನ್ನು ಬದಲಾಯಿಸಬೇಕಾಯಿತು. ಅಂದು ಐದುನೂರು ಮೀಟರ್ ದೂರ ನಡೆಯಲು ಏದುಸಿರು ಬಿಡುತ್ತಿದ್ದ ನನಗೆ ಇಂದ ಹತ್ತು ಹದಿನೈದು ಕಿಲೋಮೀಟರ್ ನಡೆಯುವುದು ಸುಲಲಿತವಾಯಿತು ಒಮ್ಮೆ ಸೈಕಲ್ ಹತ್ತಿದನೆಂದರೆ ಮೂವತ್ತರಿಂದ ಮೂವತ್ತೈದು ಕಿಲೋಮೀಟರ್ ಅಡ್ಡಾಡಿ ಬರುವುದು ಅಭ್ಯಾಸವಾಯಿತು. ಕೇವಲ ಎರಡು ವಾರದ ಹಿಂದೆಯೇ ನಿರಾಯಾಸವಾಗಿ ರಕ್ತದಾನವನ್ನೂ ಮಾಡಿಯಾಯ್ತು. ಅಂದು ಕಷ್ಟಪಟ್ಟು ಆರಮಕ್ಕೆ ಕಲಿತ ಸೈಕಲ್, ನಂತರ ಆಹಾರಕ್ಕಾಗಿ ತುಳಿದ ಸೈಕಲ್, ಇಂದು ಆರೋಗ್ಯಕ್ಕಾಗಿ ಸೈಕಲ್ ತುಳಿಯುತ್ತಿದ್ದೇನೆ. ಸೈಕಲ್ ಮಾತ್ರ ನಿಶ್ಚಲ ಉಪಯೋಗಿಸುವಿಕೆ ಬದಲಾದದ್ದು ವಿಪರ್ಯಾಸ.
ಒಮ್ಮಿಂದೊಮ್ಮೆಲೆ ಸಣ್ಣಗಾದ ನನ್ನನ್ನು ಜನ ಗುರುತಿಸಲು ಬಹಳ ಸಮಯ ತೆಗೆದುಕೊಳ್ಳುತ್ತಿದ್ದದ್ದ ಸಂಗತಿ ನನಗೆ ಮೋಜಿನದ್ದಾಗಿತ್ತು. ಬಹಳ ಸಮಯದ ನಂತರ ನೋಡುತ್ತಿದ್ದ ಬಹುತೇಕರು ನನ್ನ ಬಳಿ ಬಂದು ಕೇಳುತ್ತಿದ್ದ ಸಾಮಾನ್ಯ ಪ್ರಶ್ನೆ, ಯಾಕೇ ಇದ್ದಂಕ್ಕಿದ್ದಂತೆ ಸೊರಗಿ ಹೋಗಿದ್ದೀ, ಆರೋಗ್ಯ ಸರಿಯಾಗಿದೆ ತಾನೇ? ಶುಗರ್ ಏನಾದರು ಬಂತಾ? ಈಪಾಟಿ ಸಣ್ಣಗಾಗಬಾರದು ಎಂದು ನನ್ನ ಬಗ್ಗೆ ಕನಿಕರ ತೋರುತ್ತಿದ್ದವರಿಗೆಲ್ಲಾ ನನ್ನ ಉತ್ತರ ಒಂದೇ. ನನ್ನ ಆರೋಗ್ಯದ ಬಗ್ಗಿನ ಕಾಳಜಿಗೆ ಧನ್ಯವಾದಗಳು. ನಾನೇ ಬಯಸಿ, *ಇಷೃ ಪಟ್ಟು ಕಷ್ಟ ಪಟ್ಟು ಆರೋಗ್ಯಕರ ರೀತಿಯಲ್ಲಿ ತೆಳ್ಳಗಾಗಿದ್ದೇನೆ* ಎನ್ನುತ್ತಿದ್ದೆ,. ಇನ್ನೂ ಹಲವರು ನನ್ನನ್ನು ಗುರುತಿಸಲು ಪರಿಪಾಟಲು ಪಟ್ಟ ಕೆಲವು ರಸ ಕ್ಷಣಗಳನ್ನು ನಿಮ್ಮಲ್ಲಿ ಹಂಚಿಕೊಳ್ಳದೆ ಹೋದರೆ ಈ ಬರಹಕ್ಕೆ ಸ್ವಾರಸ್ಯವೇ ಇರುವುದಿಲ್ಲ.
ಒಮ್ಮೆ ಸಂಬಂಧೀಕರ ಗೃಹಪ್ರವೇಶಕ್ಕೆ ಹೋದಾಗ ನಮ್ಮ ದೂರದ ಸಂಬಂಧೀಕರೊಬ್ಬರು ನನ್ನನ್ನು ನೋಡಿ ಎಲ್ಲೋ ನೋಡಿದ ನೆನಪಂತೆ ನಕ್ಕು ಸುಮ್ಮನಾದರು. ನಾನೂ ಕೂಡ ಅವರಿಗೆ ಪ್ರತಿ ನಮಸ್ಕರಿಸಿ ಪೂಜೆ ಪುನಸ್ಕಾರಗಳೆಲ್ಲಾ ಮುಗಿದು ಊಟಕ್ಕೆ ಎದುರು ಬದುರು ಕುಳಿತಾಗ, ಆ ದಂಪತಿಗಳಿಬ್ಬರು ನನ್ನನ್ನೇ ದಿಟ್ಟಿಸಿ ನೋಡುತ್ತಾ, ಏನೋ ಗುಸು ಗುಸು ಮಾತನಾಡುವುದನ್ನು ಗಮನಿಸಿದ ನಾನು, ಏನು ರಾಯರೇ, ಚೆನ್ನಾಗಿದ್ದೀರಾ? ಮನೆಯಲ್ಲಿ ಎಲ್ಲರೂ ಕ್ಷೇಮವೇ ಎಂದು ವಿಚಾರಿಸಿ ನಾನು ಯಾರೆಂದು ತಿಳಿಯಿತೇ ಎಂದೆ. ಅದಕ್ಕಾ ದಂಪತಿಗಳು ನಮ್ಮ ಪರಿಚಿತರು ಶ್ರೀಕಂಠು ಅಂತಾ ಒಬ್ಬರು ನಿಮ್ಮಹಾಗೆಯೇ ಇದ್ದಾರೆ. ಆದರೆ ಅವರು ನೀವಲ್ಲ ಬಿಡಿ. ಆವರು ಇನ್ನೂ ದಪ್ಪಗಿದ್ದಾರೆ ಎಂದಾಗ, ನಾನು ಮತ್ತು ನನ್ನ ಪಕ್ಕದಲ್ಲಿದ್ದ ನನ್ನ ತಂದೆಯವರು ಜೋರಾಗಿ ನಕ್ಕು ಬಿಟ್ಟೆವು. ಹೀಗೆ ಅಚಾನಕ್ಕಾಗಿ ನಕ್ಕಾಗ, ಅವರಿಗೆ ಸ್ವಲ್ಪ ಮುಜುಗರವಾಗಿ ಕಸಿವಿಸಿಗೊಂಡಿದ್ದನು ಗಮನಿಸಿದ ನಾವು, ರಾಯರೇ ನಿಮಗೆ ದಯವಿಟ್ಟು ಕ್ಷಮಿಸಿ. ನಿಮ್ಮನ್ನು ಅಪಹಾಸ್ಯಕ್ಕೆ ಈಡುಮಾಡುವ ಉದ್ದೇಶನಮಗಿಲ್ಲ. ನಿಮಗೆ ತಿಳಿದಿರುವ ಆ ಶ್ರೀಕಂಠನೇ ಎಂದಾಗ ಒಂದು ಕ್ಷಣ ಮೌನಾವರಿಸಿತ್ತು.
ಯಾವುದೇ ಸಭೆ ಸಮಾರಂಭಗಳಿಗೆ ಹೋದರೂ ಮಿಕ್ಕೆಲ್ಲ ವಿಚಾರಗಳೂ ಗೌಣವಾಗಿ ಎಲ್ಲರೂ ನನ್ನನ್ನು ಸುತ್ತುವರೆದು ಕೆಲವರು, ಏ ಇದೇಕೆ ಹೀಗೆ ಸೊರಗಿದ್ದೀಯೇ? ನೋಡಲಾಗುತ್ತಿಲ್ಲ. ಚೆನ್ನಾಗಿ ತಿಂದುಂಡು ದಷ್ಟ ಪುಷ್ಟವಾಗಿರಬೇಕು ಎಂದರೆ, ಇನ್ನೂ ಹಲವರು, ನಾನು ಸಣ್ಣಗಾದ ಹಾಗೆ ಅವರೂ ನನ್ನಂತಯೇ ಸಣ್ಣಗಾಗ ಬೇಕೆಂಬ ಇಂಗಿತವನ್ನು ವ್ಯಕ್ತಪಡಿದುತ್ತಿದ್ದನ್ನು ಹೆಮ್ಮೆಯಂದ ನೋಡುತ್ತಿದ್ದ ನಮ್ಮ ತಂದೆಯವರು. ಅಭಿಮಾನದಿಂದ ನನ್ನ ಸಾಧನೆಯನ್ನು ಹೊಗಳಿ ಕೊಳ್ಳುತ್ತಾ ಹೇ ಹೇ ಅದೆಲ್ಲ ನಿಮ್ಮಿಂದಾಗದ ಕೆಲಸ. ಆದಕ್ಕೆ ಚೆನ್ನಾಗಿ ಬಾಯಿ ಕಟ್ಟಬೇಕು. ಒಳ್ಳೆಯ ಕಸರತ್ತು ಮಾಡಬೇಕು. ಒಳ್ಳೆ ನಿಷ್ಠೆ ನಿಯಮದಿಂದ ತಪಸ್ಸು ಮಾಡುವ ಹಾಗೆ ಇರಬೇಕು. ಅನ್ನಾ ಗಿನ್ನ ತಿನ್ನುವಹಾಗಿಲ್ಲ. ಬರೀ ಕಾಳುಗಳು, ಸಿರಿದಾನ್ಯ, ಹಣ್ಣು, ತರಕಾರಿ, ಸೊಪ್ಪು ಸೆದೆ ತಿನ್ನಬೇಕು ಎಂದು ಹೇಳುತ್ತಿದ್ದರೆ. ಅಪ್ಪಾ ನಮ್ಮ ಕೈಯಲ್ಲಿ ಅದು ಸಾಧ್ಯವಿಲ್ಲ. ನಾವು ಹೇಗಿದ್ದಿವೋ ಹಾಗೆಯೇ ತಿಂದುಂಡು ಇದ್ದುಬಿಡುತ್ತೇವೆ ಎಂದಾಗ, ಅಯ್ಯೋ ಕರ್ಮವೇ ಎಂದು ನಮ್ಮ ತಂದೆಯವರು ಹೇಳುತ್ತಿದ್ದದ್ದು ನನಗಿನ್ನೂ ಕಿವಿಯ ಮೇಲೆಯೇ ಇದೆ.
ಮತ್ತೊಮ್ಮೆ ನಮ್ಮ ವಿದ್ಯಾರಣ್ಯಪುರದ ದುರ್ಗಾದೇವಿಯ ವಿಜಯದಶಮಿಯ ಮೆರವಣಿಗೆಯಲ್ಲಿ ಪಾಲ್ಗೊಂಡು ವಿದ್ಯಾರಣ್ಯಪುರದ ಕೊನೆಯ ಬಸ್ ನಿಲ್ದಾಣದಲ್ಲಿ ಅತ್ಯದ್ಭುತವಾಗಿ ಗಂಟೆಗಟ್ಟಲೆ ಸಿಡಿ ಮದ್ದುಗಳನ್ನು ಸಿಡಿಸುವುದನ್ನು ನೋಡುತ್ತಿದ್ದ ಸಾವಿರಾರು ಜನರ ಮಧ್ಯೆ ನಾನೂ ಕೂಡಾ ಇದ್ದೆ, ಸಹಜವಾಗಿ ಅಷ್ಟೊಂದು ಜನ ಸೇರಿದ ಮೇಲೆ, ಶಾಂತಿ ಸುವ್ಯವಸ್ಥೆ ಕಾಪಾಡಲು ಪೋಲೀಸ್ ಸಿಬ್ಬಂಧಿಗಳೂ ಜೊತೆಗೆ ಇನ್ಸ್ಪೆಕ್ಟರ್ ಕೂಡಾ ಇದ್ದರು. ಸಿಡಿ ಮದ್ದುಗಳನ್ನು ನೋಡುತ್ತಾ ಸ್ನೇಹಿತರೊಂದಿಗೆ ಇದ್ದ ನನ್ನನು ಕಂಡ ಇನ್ಸ್ಪೆಕ್ಟರ್ ಒಂದು ಕ್ಷಣ ಅವಕ್ಕಾಗಿ ನನ್ನ ಕೈ ಹಿಡಿದು ದರ ದರನೆ ಪಕ್ಕಕ್ಕೆ ಎಳೆದುಕೊಂಡು ಹೋದಾಗ ಸುತ್ತ ಮುತ್ತಲಿದ್ದವರಿಗೆ ಗಾಭರಿ. ಇದೇನಪ್ಪಾ ಸುಮ್ಮನೆ ನಿಂತಿದ್ದ ವ್ಯಕ್ತಿಯನ್ನೇಕೆ ಹೀಗೆ ಎಳೆದುಕೊಂಡು ಹೋಗುತ್ತಿದ್ದಾರಲ್ಲಾ ಎಂದು ನನ್ನ ಸ್ನೇಹಿತರೂ ಆತಂಕದಿಂದ ನನ್ನನ್ನು ಹಿಂಬಾಲಿಸಿದರು. ನನ್ನನ್ನು ಪಕ್ಕಕೆ ಕರೆದು ಕೊಂಡ ಹೋದ ಇನ್ಸ್ಪೆಕ್ಟರ್ ಕೇಳಿದ ಪ್ರಶ್ನೆ. *ಶ್ರೀಕಂಠಾ ನೀವು ಮಾತ್ರ ಯೋಗ, ಗೀಗಾ ಮಾಡಿ RSSನಲ್ಲಿ ವ್ಯಾಯಮ ಮಾಡಿ ಸಣ್ಣಗಾಗಿ ಬಿಟ್ರೆ ಸಾಲದು, ನಮಗೂ ಸ್ವಲ್ಪ ತಿಳಿಸಿ* ಎಂದಾಗ ನಾನೂ ಮತ್ತು ನನ್ನ ಸ್ನೇಹಿತರು ನಿಟ್ಟುಸಿರು ಬಿಟ್ಟಿದ್ದೆವು. ಯೋಗಾ ಡೇ, ಸಾರ್ವಜನಿಕ ಗಣೇಶೋತ್ಸವ, RSS ಪಥಸಂಚಲನ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುವಾಗ ಪೋಲೀಸರ ಅನುಮತಿಗಾಗಿ ಹಲವಾರು ಬಾರಿ ಠಾಣೆಗೆ ಹೋಗುತ್ತಿದ್ದಾಗ ಪರಿಚಯವಿದ್ದ ಇನ್ಸ್ಪೆಕ್ಟರ್ ನನ್ನನ್ನು ಬೇಸ್ತುಗೊಳಿಸಿದ್ದಂತೂ ಮರೆಯಲಾಗದ ಸಂಗತಿ. ಅದಾದ ನಂತರ ಹಲವಾರು ಬಾರೀ ಅವರನ್ನು ಅವರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಭೀಟಿ ಮಾಡಿದಾಗಲೂ, ಎಲ್ಲದ್ದಕ್ಕಿಂತ ಮುಂಚೆ ಅವರೇ ನನ್ನನ್ನು ಅವರ ಹಿರಿಯ ಅಧಿಕಾರಿಗಳಿಗೆ ಸಾರ್, ಇವರು ಶ್ರೀಕಂಠಾ ಅಂತ, ಹೆಸರಿಗೆ ತಕ್ಕಂತೆ ಮೈಸೂರು ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ತರಹನೇ ಬಾರೀ ದಪ್ಪಗಿದ್ದರು. ಈಗ ಡಯಟ್, ಯೋಗ, ಕಸರತ್ತು ಮಾಡಿ ತೆಳ್ಳಗಾಗಿದ್ದಾರೆ ಎಂದು ಪರಿಚಯಿಸುವಾಗ ನನ್ನ ಮನಸ್ಸಿನಲ್ಲಾಗುತ್ತಿದ್ದ ಆನಂದ ಅವರ್ಣನೀಯ.
ಇನ್ನೂ ಹೈಸ್ಕೂಲ್ ಮುಗಿಸಿ ಕಾಲೇಜ್ ಸೇರಿದ್ದ ಮಗಳನ್ನು ಪ್ರತಿದಿನ ಕಾಲೇಜಿಗೆ ದ್ವಿಚಕ್ರ ವಾಹನದಲ್ಲಿ ಬಿಟ್ಟು ಬರುವ ಪಾಳಿ ನನ್ನದಾಗಿತ್ತು. ನಮ್ಮ ಪಕ್ಕದ ರಸ್ತೆಯಲ್ಲಿಯೇ ಇದ್ದ ಮಗಳ ಸ್ನೇಹಿತೆಯನ್ನೂ ಕೂರಿಸಿಕೊಂಡು ಒಟ್ಟಿಗೆ ಮೂರೂ ಜನ ರಸ್ತೆ ನಿಯಮಗಳನ್ನು ಧಿಕ್ಕರಿಸಿ ಕಾಲೇಜಿಗೆ ಹೋಗುತ್ತಿದ್ದದ್ದು ನಿತ್ಯಸಂಗತಿಯಾಗಿತ್ತು, ನಂತರ ನನ್ನ ಮಗಳು ಮತ್ತು ಆಕೆಯ ಸ್ನೇಹಿತೆ ಒಂದು ದಿನ ಅವಳ ತಂದೆ ಮತ್ತೊಂದು ದಿನ ನನ್ನ ಜೊತೆ ಕಾಲೇಜಿಗೆ ಹೋಗುವಂತೆ ಒಪ್ಪಂದ ಮಾಡಿಕೊಂಡು ಕಾಲೇಜಿಗೆ ಮಕ್ಕಳನ್ನು ಬಿಟ್ಟು ಬರುವುದು ವಾಡಿಕೆಯಾಗಿತ್ತು. ನನ್ನ ಮಗಳು ಮತ್ತು ಆಕೆಯ ಸ್ನೇಹಿತೆ ನೋಡಲು ಒಂದೇ ರೀತಿ ಇದ್ದು ಪ್ರತಿ ದಿನ ಒಟ್ಟಿಗೆ ಬಂದು ಹೋಗುತ್ತಿದ್ದದ್ದನ್ನು ಗಮನಿಸುತ್ತಿದ್ದ ಅವಳ ಅಧ್ಯಾಪಕರು ಅವರಿಬ್ಬರನ್ನೂ ಅಕ್ಕತಂಗಿಯರೆಂದೇ ನಂಬಿ, ಒಮ್ಮೆ ನನ್ನ ಮಗಳ ಬಳಿ ಬಂದು ನಾನು ಕುತೂಹಲದಿಂದ ಗಮನಿಸುತ್ತಿದ್ದೇನೆ. ನೀನು ನಿಮ್ಮ ತಂದೆಯವರ ಜೊತೆ ಕಾಲೇಜಿಗೆ ಬರುವಾಗ ಕೊನೆಯಲ್ಲಿ ಕುಳಿತು ಕೊಂಡಿರುತ್ತೀಯೇ, ಅದೇ ನಿಮ್ಮ ಅಣ್ಣನ ಜೊತೆ ಬರುವಾಗ ಮಧ್ಯೆ ಕುಳಿತು ಕೊಂಡಿರುತ್ತೀಯೇ? ಆಣ್ಣನೆಂದರೆ ನಿನಗೆ ಅಷ್ಟೊಂದು ಇಷ್ಟವೇ ಎಂದು ಕೇಳಿದರಂತೆ. ಅವರ ಪ್ರಶ್ನೆ ಒಂದು ಕ್ಷಣ ಅರ್ಥವಾಗದೆ ಕಸಿವಿಸಿಗೊಂಡ ಮಗಳು ನಂತರ ಅರ್ಥಮಾಡಿಕೊಂಡು. ಸಾರ್, ನಾವಿಬ್ಬರೂ ಅಕ್ಕ ತಂಗಿಯರಲ್ಲ, ಸ್ನೇಹಿತೆಯರು. ಅವಳ ತಂದೆ ಜೊತೆ ಬರುವಾಗ, ಅವರ ಹಿಂದೆ ಸ್ನೇಹಿತೆ ಮತ್ತು ಅವಳ ಹಿಂದೆ ನಾನು ಕುಳಿತು ಕೊಳ್ಳುತ್ತೇನೆ. ನನ್ನ ತಂದೆಯವರ ಜೊತೆ ಬಂದಾಗ, ನನ್ನ ತಂದೆಯ ಹಿಂದೆ ನಾನು, ನನ್ನ ಹಿಂದೆ ಸ್ನೇಹಿತೆ ಕುಳಿತುಕೊಳ್ಳುತ್ತಾಳೆ. ನೀವು ಎಣಿಸಿದಂತೆ ಅವರು ನನ್ನ ಅಣ್ಣನಲ್ಲ. ಅವರು ನನ್ನ ತಂದೆ ಎಂದಾಗ, ಅಷ್ಟು ಚಿಕ್ಕ ವಯಸ್ಸಿನವರೇ ನಿಮ್ಮ ತಂದೆಯವರು ಎಂದು ಆಶ್ವರ್ಯಚಕಿತರಾಗಿದ್ದನ್ನು ನನ್ನ ಮಗಳು ತನ್ನ ತಾಯಿಯ ಬಳಿ ವಿವರಿಸಿ. ಅಮ್ಮಾ ಇನ್ನು ಮುಂದೆ ನಾನು ಅಪ್ಪನ ಜೊತೆ ಕಾಲೇಜಿಗೆ ಹೋಗೋದಿಲ್ಲಾ. ಅಪ್ಪನದ್ದು ಸ್ವಲ್ಪ ಸ್ಟೈಲ್ ಜಾಸ್ತಿಯಾಯ್ತು. ಸ್ವಲ್ಪ ಸಣ್ಣಗಾಗಿಬಿಟ್ರೆ ಅದು ಹೇಗೆ ಅಪ್ಪಾ, ಅಣ್ಣ ಆಗ್ಬಿಡ್ತಾರೆ? ಎಂದು ಹುಸಿ ಕೋಪಗೊಂಡದ್ದನ್ನು, ನನ್ನ ಮನೆಯಾಕಿ ನನಗೆ ವಿವರಿಸುತ್ತಿದ್ದಾಗ ಅಕೆಯ ಕಣ್ಣುಗಳಿದ್ದ ಸಂತೋಷ, ನನ್ನನ್ನು ತೆಳ್ಳಗಾಗಿಸಲು ಆಕೆಯ ಪಟ್ಟ ಶ್ರಮಕ್ಕೆ ಸಿಗುತ್ತಿರುವ ಫಲ ನಿಜಕ್ಕೂ ಹೇಳಲಸಾಧ್ಯ. ನನಗೂ ಆಂದು ತಿಳಿಯದೇ ಮಗಳೊಂದಿಗೆ ಹಾಕಿದ್ದ ಸವಾಲನ್ನು ತೀರಿಸಿದರ ಸುಖಾನುಭವ.
ಕಳೆದ ಎರಡು ವರ್ಷಗಳಿಂದ ಅದೇ ರೀತಿಯ ಆಹಾರ ಪದ್ದತಿ ಮತ್ತು ವ್ಯಾಯಾಮಗಳನ್ನು ದಿನ ನಿತ್ಯದ ಜೀವನ ಶೈಲಿಯಲ್ಲಿ ಇಡೀ ಕುಟುಂಬ ಅಳವಡಿಸಿಕೊಂಡ ಪರಿಣಾಮವಾಗಿ ಅದೇ ತೂಕ ಮತ್ತು ದೇಹಸ್ಥಿತಿಯನ್ನು ಕಾಪಾಡುಕೊಂಡು ಬರುವಲ್ಲಿ ಸಫಲನಾಗಿದ್ದೇನೆ. ಹಬ್ಬ ಹರಿ ದಿನಗಳಲ್ಲಿ , ತಿಥಿ, ಮುಂಜಿ ಮದುವೆಗಳಿಗೆ ಹೋದಾಗ ಮುಂಚಿಂತೆ ಹೊಟ್ಟೆ ಬಿರಿಯುವಂತೆ ತಿನ್ನದೆ, ದೇಹಕ್ಕೆ ಎಷ್ಟು ಅಗತ್ಯವೋ ಅಷ್ಟನ್ನು ತಿನ್ನುತ್ತಾ, ಅದಷ್ಟೂ ಅನ್ನದ ಪದಾರ್ಥಗಳನ್ನು ಕರಿದ ಪದಾರ್ಥಗಳನ್ನು ಕಡಿಮೆ ಮಾಡಿ, ತರಕಾರಿ, ಹಣ್ಣುಗಳು, ಸಿರಿದಾನ್ಯಗಳನನ್ನು ಆಹಾರ ಪದ್ದತಿಗಳಲ್ಲಿ ಆಳವಡಿಸಿಕೊಂಡು, ದೇಹಕ್ಕೆ ಅಗತ್ಯವಿರುವ 6-7 ಗಂಟೆಯಷ್ಟು ಕಣ್ತುಂಬ ನಿದ್ರೆ ಮಾಡುತ್ತಾ, ನಿಯಮಿತ ರೀತಿಯಲ್ಲಿ ವ್ಯಾಯಾಮ, ಯೋಗ, ಸೈಕಲಿಂಗ್ ಮಾಡುತ್ತಾ ಆರೋಗ್ಯವನ್ನು ಕಾಪಾಡುಕೊಳ್ಳುತ್ತಿರುವದಲ್ಲದೇ, ಬಹುತೇಕ ನನ್ನ ಸಂಬಂಧೀಕರು, ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಪರಿವಯಸ್ಥರಲ್ಲೂ ಉತ್ತಮ ಆಹಾರ ಮತ್ತು ಆರೋಗ್ಯದ ಕಾಳಜಿ ಮೂಡಿಸಿ ಸರಿ ಸುಮಾರು 200ಕ್ಕೂ ಅಧಿಕ ಜನರ ಆರೋಗ್ಯಕರ ದೈಹಿಕ ಬದಲಾವಣೆಗೆ ಕಾರಣೀಭೂತನಾಗಿರುವುದು ಹೆಮ್ಮೆಯ ಜೊತೆ ಮನಸ್ಸಿಗೆ ನಮ್ಮಯನ್ನೂ ಕೊಡುತ್ತಿದೆ. ಇಂದು ನನ್ನ ಬಳಿ ಯಾರಾದರೂ ಸ್ಥೂಲಕಾಯರು ಸುಳಿದಾಡಿದಲ್ಲಿ ಅಗತ್ಯವಾಗಿ ನಾನೇ ಖುದ್ಡಾಗಿ ಅವರನ್ನು ಮಾತನಾಡಿಸಿ ಅವರಿಗೆ ಉತ್ತಮ ಆರೋಗ್ಯದ ತಿಳುವಳಿಕೆ ನೀಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದೇನೆ.
ಈ ಬರಹ ನನ್ನನ್ನು ಸ್ವತಃ ಹೊಗಳಿ ಕೊಳ್ಳುವುದಕ್ಕಾಗಲೀ ಅಥವಾ ಇನ್ನಾವುದೇ ವ್ಯಾವಹಾರಿಕೆಯಿಂದಾಗಲಿ ಪ್ರಕಟಿಸುತ್ತಿಲ್ಲ ಪ್ರಜೆಗಳೆಲ್ಲಾ ಆರೋಗ್ಯಕರವಾಗಿದ್ದಲ್ಲಿ ದೇಶವೂ ಕೂಡಾ ಸಂಪತ್ಭರಿತವಾಗಿರುತ್ತದೆ ಎಂದು ತೋರಿಸಲು ಬರೆದಿದ್ದೀನಷ್ಟೇ. ಆಂಗ್ಲ ಭಾಷೆಯಲ್ಲಿ *impossible ಅಂದರೆ ಅಸಾಧ್ಯ ಎಂದರ್ಥ. ಅದೇ ಪದವನ್ನು i, m, possible ಎಂದು ಬಿಡಿಸಿ ಓದಿದಲ್ಲಿ ಇದು ನನ್ನಿಂದ ಸಾಧ್ಯ ಎಂದು ಅರ್ಥ ಬರುತ್ತದೆ*. ನನ್ನಂತ ಸ್ಥೂಲಕಾಯ ಸಾಮಾನ್ಯ ವ್ಯಕ್ತಿ ಯಾವುದೇ ಔಷಧಿ ಅಥವಾ ಪಥ್ಯವಿಲ್ಲದೆ, ಮಿತ ಆಹಾರ, ಉತ್ತಮ ಜೀವನ ಶೈಲಿ ಮತ್ತು ಸರಳ ವ್ಯಾಯಾಮಗಳಿಂದ ತೆಳ್ಳಗಾಗಲು ಸಾದ್ಯವಾದಲ್ಲಿ ಉಳಿದವರೂ ಕೂಡಾ ಸ್ವಲ್ಪ ಪರಿಶ್ರಮ ಪಟ್ಟಲ್ಲಿ ಕಂಡಿತವಾಗಿಯೂ ಫಲ ನೀಡುತ್ತದೆ ಎಂಬುದಕ್ಕೆ ಪುರಾವೆ ಇದು.
ಇರುವುದೊಂದು ಜೀವ ಹಾಗೆಂದು ಸಿಕ್ಕಾ ಪಟ್ಟೆ, ನೋಡಿದ್ದೆಲ್ಲಾ ತಿಂದು ಅರಗಿಸಿಕೊಳ್ಳಲು ನಮ್ಮ ಹೊಟ್ಟೆಯೇನೂ ತಿಪ್ಪೇ ಗುಂಡಿಯಲ್ಲಾ. ನಮಗೆ ಏಷ್ಟು ಅಗತ್ಯವಿದೆಯೋ ಅಷ್ಟನ್ನೇ ಶುಚಿ ರುಚಿಯಾಗಿ ತಿಂದು ಮಿತವಾಗಿ ವ್ಯಾಯಾಮ ಮಾಡಿಕೊಂಡು ಸಧೃಡರಾಗಿದ್ದು ಮಡದಿ ಮಕ್ಕಳೊಂದಿಗೆ ಸಂತೋಷದಿಂದಿರೋಣಾ
ಏನಂತೀರೀ?
ಈ ಲೇಖನವನ್ನು ನನ್ನನ್ನು ತೆಳ್ಳಗಾಗಿಸಲು ಪ್ರೇರೇಪಿಸಿದ ನನ್ನ ಮಗಳಿಗೂ, http://www.hfen.uk ನಂತಹ ಉತ್ತಮ diet programನ ಕಾರಣೀಕರ್ಥ ಅಂಬಾವಾಲನ್ ( ಪ್ರದೀಪ್) ಮತ್ತು ಅದಕ್ಕೆ ನನ್ನನ್ನು ಪರಿಚಯಿಸಿದ ನನ್ನ ಗೆಳೆಯ ಸುರೇಶನಿಗೂ ಮತ್ತು ನನ್ನೇಲ್ಲಾ ತಿಕ್ಕಲು ತನಗಳಿಗೆ ಬೇಸರಗೊಳ್ಳದೆ ಸದಾ ನನ್ನ ಜೊತೆಗೇ ಇದ್ದು ನನ್ನ ಹಿತವನ್ನೇ ಬಯಸುವ ನನ್ನ ಧರ್ಮ ಪತ್ನಿಗೂ ಹಾಗೂ ನನ್ನ ಪ್ರತಿಯೊಂದು ಕೆಲಗಳಿಗೂ ಬೆನ್ನೆಲುಬಾಗಿದ್ದು ಸದಾ ನನ್ನನ್ನು ಪ್ರೋತ್ಸಾಹಿಸುತ್ತಾ ಇತ್ತೀಚೆಗೆ ನಮ್ಮನ್ನಗಲಿದ ನನ್ನ ಪೂಜ್ಯ ತಂದೆಯವರಿಗೆ ಅರ್ಪಿಸುತ್ತಿದ್ದೇನೆ.
ಸಣ್ಣಗಾಗಲು ಪಟ್ಟ ಪರಿಶ್ರಮ ತುಂಬಾ ಸೊಗಸಾಗಿದೆ.
ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ
ಓದಿ ತುಂಬಾ ಸಂತೋಷವಾಯಿತು.
LikeLiked by 1 person
ಹೌದು ಸಣ್ಣಗಾದ ಮೇಲೆ ದೈಹಿಕ ಸಾಮಾರ್ಥ್ಯವೂ ಹೆಚ್ಚಾಗಿದೆ. ಆರೋಗ್ಯವೋ ಚೆನ್ನಾಗಿದೆ.
LikeLike
ಚೆನ್ನಾಗಿದೆ…
ಇದು ಅಗತ್ಯ ಇರುವವರಿಗೆಲ್ಲ ಪ್ರೇರಣೆಯಾಗಲಿ
LikeLike
ತುಂಬಾ ಚೆನ್ನಾಗಿ ಬರೆದಿದ್ದೀರಿ.
ಖುಷಿಯಾಯಿತು.
ನಾನೂ ಇದೇ ರೀತಿಯಲ್ಲಿ, ನನ್ನದೇ ವಿಧಾನ ಅನುಸರಿಸಿ ತೆಳ್ಳಗಾದೆ.
LikeLiked by 1 person