ಅಜೇಯ

ajaeya4

ಅಜೇಯ ಎಂದರೆ ಎಂದೂ ಸೋಲಿಲ್ಲದ ಸರದಾರ ಎಂದರ್ಥ. ಚಂದ್ರಶೇಖರ್ ಆಝಾದ್ ಅದಕ್ಕೆ ಅನ್ವರ್ಥ. ಚಿಕ್ಕಚಯಸ್ಸಿನಲ್ಲಿ ನನ್ನ ಮೇಲೇಯೂ ಮತ್ತು ಹಲವಾರು ಜನರ ಮೇಲೆ ಅತ್ಯಂತ ಪ್ರಭಾವ ಬೀರಿರುವ ಪುಸ್ತಕ ಒಂದಿದ್ದರೆ ಅದು ಬಾಬು ಕೃಷ್ಣಮೂರ್ತಿಯವರ ವಿರಚಿತ ಅಜೇಯ ಎಂದರೆ ತಪ್ಪಾಗಲಾರದು. ಒಮ್ಮೆ ಆ ಪುಸ್ತಕ ಹಿಡಿದರೆ ಇಡೀ ಪುಸ್ತಕವನ್ನು ಓದಿ ಮುಗಿಸದೆ ಪಕ್ಕಕ್ಕೆ ಎತ್ತಿಡಲಾಗದ ಪುಸ್ತಕವದು. ಯಾವುದೇ ಪುಸ್ತಕದ ಎರಡು ಪುಟಗಳನ್ನು ನಾವು ಓದಬೇಕು. ನಂತರ ಉಳಿದ ಪುಟಗಳನ್ನು ಲೇಖಕ ತನ್ನ ಭಾಷಾ ಪಾಂಡಿತ್ಯದಿಂದ, ಆಸಕ್ತಿಕರ ವಿಷಯಗಳಿಂದ ನಮ್ಮನ್ನು ಹಿಡಿದಿಟ್ಟುಕೊಂಡು ಇಡೀ ಪುಸ್ತಕವೇ ನಮ್ಮನ್ನು ಓದಿಸಿಕೊಂಡು ಹೋಗಬೇಕು. ಅಂಥಹ ಕೆಲವೇ ಕೆಲವು ಪುಸ್ತಕ್ತಗಳಲ್ಲಿ ಅಜೇಯ ಪುಸ್ತಕವೂ ಒಂದು ಎಂದರೆ ಅತಿಶಯೋಕ್ತಿಯೇನಲ್ಲ. ಇಂದು ಅಜೇಯ ಪುಸ್ತಕ ಓದಿ ಪ್ರಭಾವಿತರಾದ ಕೆಲವು ಪ್ರಸಂಗಗಳನ್ನು ಹೇಳಿಕೊಳ್ಳಲು ಇಚ್ಚಿಸುತ್ತೇನೆ.

ತೊಂಬತ್ತರ ದಶಕ ನಾನಾಗ ಕಾಲೇಜಿನಲ್ಲಿ ಓದುತ್ತಿದ್ದೆ. ಅನಾರೋಗ್ಯದ ಕಾರಣದಿಂದಾಗಿ ನಾಲ್ಕೈದು ದಿನ ಆಸ್ಪತ್ರೆಗೆ ಸೇರಿ ಕಾಲ ಕಳೆಯುವುದೇ ಕಷ್ಟವಾಗಿದ್ದಾಗ, ನನ್ನ ಪ್ರಾಣ ಸ್ನೇಹಿತ ಹರಿ, ನಮ್ಮಿಬ್ಬರ ಆತ್ಮೀಯ ಗುರುಗಳಾಗಿದ್ದ ದಿವಂಗತ ರಂಗನಾಥ ಮೇಷ್ಟ್ರ ಮನೆಯಿಂದ ಅಜೇಯ ಪುಸ್ತಕ ತಂದು ನನ್ನ ಕೈಗಿತ್ತ. ಮೊದಲೇ ಅನಾರೋಗ್ಯದಿಂದ ಸುಸ್ತಾಗಿದ್ದ ನನಗೆ ಪುಸ್ತಕದ ಗಾತ್ರ ನೋಡೇ ಭಯವಾಯಿತಾದರೂ, ಅತ್ಯಂತ ಪ್ರೀತಿಯಿಂದ ಗೆಳೆಯ ಪುಸ್ತಕ ತಂದು ಕೊಟ್ಟಾಗ ಅವನ ಮನಸ್ಸನ್ನು ನೋಯಿಸಬಾರದೆಂದು ಭಾವಿಸಿ ತೆಗೆದುಕೊಂಡೆ. ಮಧ್ಯಾಹ್ನ ಊಟ ಮಾಡಿ ಔಷದಿಗಳನ್ನೆಲ್ಲಾ ತೆಗೆದಕೊಂಡು ಸರಿ ಒಂದೆರೆಡು ಪುಟಗಳನ್ನು ತಿರುವಿ ಹಾಕಿ ಹಾಗೆಯೇ ನಿದ್ದೆ ಮಾಡೋಣ ಎಂದು ಪುಸ್ತಕ ಕೈಗೆ ತೆಗೆದುಕೊಂಡವನು ಓದುತ್ತಾ ಬ್ರಿಟಿಷರ ಕಾಲ ಘಟ್ಟಕ್ಕೇ ಹೋಗಿ ಸಂಜೆ ವೈದ್ಯರು ಪರೀಕ್ಷೆಗೆ ಬಂದಾಗಲೇ ಬಾಹ್ಯ ಪ್ರಂಪಚಕ್ಕೆ ಮರಳಿದ್ದು. ರಾತ್ರಿ ಊಟ ಮುಗಿದ ನಂತರ ತಡ ರಾತ್ರಿಯವರೆಗೂ ಓದಿ ನಂತರ ಮಾರನೇದಿವಿಡೀ ಓದಿ ಇಡೀ ಪುಸ್ತಕವನ್ನು ಓದಿದ ನಂತರವೇ ಮನಸ್ಸಿಗೆ ಸಮಾಧಾವಾಯಿತು. ಪುಸ್ತಕ ಓದುತ್ತಿದ್ದಾಗ ನನಗರಿವಿಲ್ಲದಂತೆಯೇ, ನಾನೇ ಸ್ವತಃ ಆಜಾದಾಗಿ ಬಾಲ್ಯದ ತುಂಟತನ, ಛಡಿ ಏಟಿನ ಶಿಕ್ಷಗೆ ಒಳಗಾದ ಅನುಭವ. ಮೈ ಆಜಾದ್ ಹೂಂ, ಔರ್ ಆಜಾದ್ ಹೀ ರಹೂಂಗ ಎಂದು ತನ್ನ ಕೈಯಾರೆ ತನ್ನ ತಲೆಗೆ ಗುಂಡನ್ನು ಹಾರಿಸಿ ಕೊಂಡು ಬ್ರಿಟಿಷರ ಕೈಯಲ್ಲಿ ಸೆರೆ ಸಿಕ್ಕದೆ ಮರಣ ಹೊಂದಿದಾಗ ನನಗಾಗ ಬ್ರಿಟಿಷರ ಮೇಲೆ ಆದ ಆಕ್ರೋಶ ಅಷ್ಟಿಷ್ಟಲ್ಲ. ಪುಸ್ತಕ ಓದಿ ಪರಿಣಾಮವೋ ಏನೋ ಕೆಲವೇ ದಿನಗಳಲ್ಲಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಮರಳಿ ಸಹಜ ಸ್ಥಿತಿಗೆ ಮರಳಿದ್ದೆ.

ಆಸ್ಪತ್ರೆಯಿಂದ ಮನೆಗೆ ಮರಳಿದ ನಂತರ ಅಜೇಯ ಪುಸ್ತಕ ಇನ್ನೂ ನಮ್ಮ ಗುರುಗಳಿಗೆ ಹಿಂದುರಿಗಿಸದೇ ಮನೆಯಲ್ಲೇ ಇತ್ತು. ಆಗ ನಮ್ಮ ಮನೆಗೆ ಬಾಣಂತನಕ್ಕೆ ಬಂದಿದ್ದ ತುಂಬು ಗರ್ಭಿಣಿ ನನ್ನ ಸಹೋದರಿಯ ಕಣ್ಣಿಗೆ ಬಿದ್ದು ಆಕೆಯೂ ಕೂಡಾ ಒಂದೇ ಗುಕ್ಕಿನಲ್ಲಿ ಪುಸ್ತಕವನ್ನು ಓದಿ ಮುಗಿಸಿದ್ದಳು. ನಂತರದ ಕೆಲವೇ ದಿನಗಳಲ್ಲಿ ದೇವರ ದಯೆ, ಗುರು ಹಿರಿಯರ ಆಶೀರ್ವಾದದಿಂದ ಸುಸೂತ್ರವಾಗಿ ಗಂಡು ಮಗುವಿನ ತಾಯಿಯಾದಾಗ ನಮಗೆ ಆದ ಆನಂದಕ್ಕೆ ಪಾರವೇ ಇಲ್ಲ. ಬಹು ವರ್ಷಗಳ ನಂತರ ಮನೆಯಲ್ಲಿ ಮಗುವಿನ ಆಗಮನ ನಮಗೆಲ್ಲಾ ಸಂಭ್ರಮದ ವಾತಾವರಣ. ಕುಟುಂಬದ ಮೊದಲನೇ ಮೊಮ್ಮಗನಿಗೆ ಕೇಳಿದ್ದೆಲ್ಲವೂ ಕೈಗೆಟುಕುತ್ತಿತ್ತು. ಮನೆಯ ತುಂಬಾ ಆಟದ ಸಾಮಾನುಗಳ ರಾಶಿಯೋ ರಾಶಿ. ತರ ತರಹದ ಬೊಂಬೆಗಳು, ಬಣ್ಣ ಬಣ್ಣದ ಚೆಂಡುಗಳು, ಬುಗರಿ, ಗಿರಿಗಿಟ್ಟಲೆ ಒಂದೇ ಎರಡೇ, ಅಬ್ಬಬ್ಬಾ ಎಷ್ಟೋಂದು ಆಟಿಕೆಗಳು ಇದ್ದರೂ, ನನ್ನ ಸೋದರಳಿಯನಿಗೆ ಅದಾವುದರ ಮೇಲೂ ಆಸೆಯೇ ಇಲ್ಲದಂತಾಗಿ ಕೇವಲ ಬಂದೂಕೇ ಅವನ ಮೆಚ್ಚಿನ ಆಟಿಕೆಯಾಗಿತ್ತು . ಯಾವುದೇ ಆಟದ ಮಳಿಗೆಗೆ ಕರೆದುಕೊಂಡು ಹೋದರೂ ನನ್ನ ತಂಗಿಯ ಮಗ ಮೊದಲು ಕೈ ಹಾಕುತ್ತಿದ್ದದ್ದು ಬಂದೂಕಿಗೇ. ನಮೆಗೆಲ್ಲಾ ಅಚ್ಚರಿಯ ಸಂಗತಿಯಾಗಿ ಇವನು ಬೆಳೆದು ದೊಡ್ಡವನಾಗಿ ಪೋಲೀಸ್ ಅಧಿಕಾರಿಯಾಗುತ್ತಾನೋ ಎಂದು ತಮಾಷಿಯಾಗಿ ಚೇಡಿಸುತ್ತಿದ್ದದ್ದೂ ಉಂಟು. ಆದರೆ ನಂತರ ನಿಧಾನವಾಗಿ ಯೋಚಿಸಿದಾಗ ನಮಗೆ ತಿಳಿದ ಬಂದ ಅಂಶವೆಂದರೆ, ನನ್ನ ತಂಗಿ ಗರ್ಭಿಣಿಯಾಗಿದ್ದಾಗ ಆಕೆ ಅಜೇಯ ಓದಿದ್ದ ಪರಿಣಾಮವೋ ಏನೂ ಕ್ರಾಂತಿಕಾರಿ ಅಜಾದರ ಬಂದೂಕಿನ ಮೇಲಿನ ಪ್ರೇಮದ ಪ್ರಭಾವ ನಮ್ಮ ಸೋದರ ಅಳಿಯ ಮೇಲೆ ಆಗಿದ್ದಂತೂ ಸತ್ಯವೇ ಸರಿ. ಚಕ್ರವ್ಯೂಹ ಬೇಧಿಸುವ ಕಲೆಯನ್ನು ತಾಯಿ ಸುಭದ್ರೆಯ ಹೊಟ್ಟೆಯಲ್ಲೇ ತನ್ನ ಮಾವ ಶ್ರೀ ಕೃಷ್ಣನಿಂದ ಕೇಳಿ ತಿಳಿದುಕೊಂಡಿದ್ದ ಅಭಿಮನ್ಯುವಿನ ಕಥೆ ನೆನಪಾಗಿದ್ದಂತೂ ಸುಳ್ಳಲ್ಲ.

azad

ಅದೇ ರೀತಿ ಮತ್ತೊಬ್ಬ ತಾಯಿ ತಮ್ಮ ಗರ್ಭಿಣಿಯ ಸಮಯದಲ್ಲಿ ಅಜೇಯ ಪುಸ್ತಕವನ್ನು ಓದಿ ಪ್ರಭಾವಿತರಾಗಿ ತಮಗೇನಾದರೂ ಗಂಡು ಮಗುವಾದಲ್ಲಿ ಅಜೇಯ ಎಂದೇ ಹೆಸರಿಡಲು ನಿರ್ಧರಿಸಿದ್ದರಂತೆ. ಆದರೆ ದೇವರ ಆಟವನ್ನು ಯಾರೂ ಊಹಿಸಲು ಸಾಧ್ಯವಿಲ್ಲಂತೆ ಆಕೆಗೆ ಹೆಣ್ಣು ಮಗುವಾಗಿ ಮನೆಗೆ ಮಹಾಲಕ್ಷ್ಮಿ ಬಂದಳೆಂದು ಹರ್ಷಿತಗೊಂಡರೂ ಅಜೇಯ ಎಂಬ ಹೆಸರು ಇಡಲಾಗಲಿಲ್ಲವಲ್ಲಾ ಎಂದು ಬೇಸರಗೊಂಡಿದ್ದರು. ನಂತರ ಮಗಳು ದೊಡ್ಡವಳಾಗಿ ಓದೆಲ್ಲಾ ಮುಗಿಸಿ ಮದುವೆಯ ವಯಸ್ಸಿಗೆ ಬಂದು ಸೂಕ್ತ ವರನ್ನು ಹುಡುಕುತ್ತಿದ್ದಾಗ ಒಳ್ಳೆಯ ಸಂಪ್ರದಾಯಸ್ಥರ ಮನೆಯ ಹುಡುಗನೊಬ್ಬನ ಜೊತೆ ಸಂಬಂಧ ಕೂಡಿ ಬಂದು ತನ್ನ ಭಾವೀ ಅಳಿಯನ ಹೆಸರು ಕೇಳಿದಾಗ ಆಕೆಗೆ ತಲೆ ತಿರುಗುವುದೊಂದೇ ಬಾಕಿಯಿತ್ತು. ಕಾಕತಾಳೀಯವೋ ಎಂಬಂತೆ ಆ ವರನ ಹೆಸರು ಅಜೇಯ ಎಂದಿತ್ತು. ಸಂಬಂಧವೆಲ್ಲಾ ಗಟ್ಟಿಯಾಗಿ ಮದುವೆಯ ಮಾತು ಕಥೆಯ ಸಮಯದಲ್ಲಿ ಕುತೂಹಲದಿಂದ ತಮ್ಮ ಭಾವೀ ಬೀಗಿತ್ತಿಯ ಬಳಿ ಬಂದು ಒಂದು ವಿಷಯ ಕೇಳುತ್ತೇನೆ ಬೇಸರಿ ಕೊಳ್ಳಬಾರದು. ಸಾಧಾರಣವಾಗಿ ಜಯ್, ವಿಜಯ್ ಅಥವಾ ಅಜಯ್ ಎಂದು ಹೆಸರಿಡುತ್ತಾರೆ. ಆದರೆ ನೀವೇಕೇ ನಿಮ್ಮ ಮಗನ ಹೆಸರನ್ನು ಅಜೇಯ ಎಂದು ನಾಮಕರಣ ಮಾಡಿದಿರಿ? ಎಂದು ಕೇಳಲು. ಓ ಅದಾ, ಅದೊಂದು ದೊಡ್ಡ ಕಥೆ. ನಾನು ಗರ್ಭಿಣಿಯಾಗಿದ್ದ ಸಮಯದಲ್ಲಿ, ಒಳ್ಳೆ ಒಳ್ಳೆಯ ಪುರಾಣ ಪುರುಷರ ಪುಸ್ತಕಗಳನ್ನು ಓದಿದರೆ ಹೊಟ್ಟೆಯಲ್ಲಿರುವ ಮಕ್ಕಳಿಗೂ ಅದೇ ಸಂಸ್ಕಾರ ಬರುವುದೆಂದು ಎಣಿಸಿ ಹಲವಾರು ಪುಸ್ತಕಗಳನ್ನು ಓದಿದ್ದೆ. ಅದರಲ್ಲಿ ಚಂದ್ರಶೇಖರ ಆಜಾದರ ಅಜೇಯ ಪುಸ್ತಕದ ಪ್ರಭಾವ ಅತ್ಯಂತ ಹೆಚ್ಚಾಗಿದ್ದರ ಪರಿಣಾಮ ಮಗ ಹುಟ್ಟಿದಾಗ ಅಜೇಯ ಬಿಟ್ಟು ಬೇರಾವುದೇ ಹೆಸರು ಮನಸ್ಸಿಗೆ ಬಾರದೇ ಅಜೇಯನೆಂದೇ ನಾಮಕರಣ ಮಾಡಿದೆವೆಂದು ಹೇಳಿದಾಗ. ಹುಡುಗಿಯ ತಾಯಿಯ ಕಣ್ಣಿನಲ್ಲಿ ಆನಂದ ಭಾಷ್ಪ ಉಕ್ಕಿ ಹರಿದು ತಮ್ಮ ಗರ್ಭಿಣಿಯ ಸಮಯದಲ್ಲೂ ಅದೇ ಅನುಭವವಾದ್ದದ್ದನ್ನು ಸವಿಸ್ತಾರವಾಗಿ ಬೀಗಿತ್ತಿಯ ಬಳಿ ಹಂಚಿ ಕೊಂಡು, ಮಗನಿಗೆ ಅಜೇಯ ಎಂದು ಹೆಸರಿಡಲು ಸಾಧ್ಯವಾಗದಿದ್ದರೇನಂತೆ. ಮಗನ ಸಮಾನರಾದ ಅಜೇಯನಾದ ಅಳಿಯನನ್ನೇ ಭಗವಂತನು ದಯಪಾಲಿಸಿದ್ದಾನೆ ಎಂದು ತಮ್ಮ ಅದೃಷ್ಟವನ್ನು ಅವರೇ ಕೊಂಡಾಡಿಕೊಂಡಿದ್ದರು.

ಅದೇ ರೀತಿ ಕರ್ನಾಟಕದ ಹಾಗೂ ಆಂಧ್ರದ ಗಡಿ ಭಾಗದಲ್ಲಿರುವ ಹುರಿದ ಕಡಲೇಬೀಜಗಳಿಗೆ ಪ್ರಸಿದ್ಢವಾದ, ಕರ್ನಾಟಕದ ಭಾಗವಾದರೂ ತೆಲುಗು ಮಯವಾದ ಚಿಂತಾಮಣಿಯಲ್ಲಿ ಅಜೇಯ ಪುಸ್ತಕ ಓದಿ ಪ್ರಭಾವಿತರಾದ ಮಧ್ಯವಯಸ್ಸಿನ ಒಬ್ಬರು ಹಲವಾರು ವರ್ಷಗಳು ತಮ್ಮ ಸಂಪಾದನೆಯಲ್ಲಿ ಅಲ್ಪ ಸ್ವಲ್ಪ ಹಣವನ್ನು ಕೂಡಿಟ್ಟು. ಇತ್ತೀಚೆಗಷ್ಟೇ, ಅಜೇಯ ಪುಸ್ತಕದ ಲೇಖಕರಾದ ಬಾಬೂ ಕೃಷ್ಣಮೂರ್ತಿಗಳ ಅಮೃತ ಹಸ್ತದಿಂದಲೇ ಚಂದ್ರಶೇಖರ್ ಅಝಾದರ ಪುತ್ಥಳಿಯನ್ನು ಅನಾವರಣ ಮಾಡಿಸಿ ತಮ್ಮ ಉತ್ಕಟ ಬಯಕೆಯನ್ನು ಈ ಇಳಿ ವಯಸ್ಸಿನಲ್ಲಿ ತೀರಿಸಿಕೊಂಡಿದ್ದು ಮರೆಯಲಾಗದ ಹಾಗು ಅನುಕರಣೀಯ ಸಂಗತಿ

Chandra-Shekhar-Azad

27 ಫೆಬ್ರವರಿ 1931 ರಂದು ಬ್ರಿಟೀಷರ ಸೈನ್ಯದೊಡನೆ ವೀರಾವೇಶದಿಂದ ಹೋರಾಡಿ ಅವರ ಕೈಯ್ಯಲ್ಲಿ ಸಿಕ್ಕಿ ಹಾಕಿಕೊಳ್ಳಬಾರದೆಂದು ನಿರ್ಧರಿಸಿ, ಅಲಹಾಬಾದಿನ ಉದ್ಯಾವನದ ಮರದಡಿಯಲ್ಲಿ ದೇಶಕ್ಕಾಗಿ ತಮ್ಮನ್ನು ತಾವೇ ಅರ್ಪಿಸಿಕೊಂಡ ಸ್ಥಳದಲ್ಲಿಯೇ ಚಂದ್ರಶೇಖರ್ ಆಜಾದ್ ಅವರ ಸುಂದರ ಪುತ್ತಳಿಯನ್ನು ಪ್ರತಿಷ್ಟಾಪಿಸಿ ಇಂದಿನ ಯುವಜನತೆಗೂ ಅಜಾದ್ ಆವರ ತ್ಯಾಗ ಮತ್ತು ಬಲಿದಾನಗಳನ್ನು ನೆನಪಿಸುವಂತೆ ಅಲ್ಲಿನ ಸರ್ಕಾರವು ಮಾಡಿರುವುದು ಅಭಿನಂದನಾರ್ಹವಾಗಿದೆ.

bk

ಹೀಗೆ ಒಬ್ಬ ದೇಶಭಕ್ತ ಕ್ರಾಂತಿಕಾರಿ ತನ್ನ ಜೀವಿತಾವಧಿ ಮುಗಿದ ನಂತರವೂ ಹಲವಾರು ಜನರ ಮೇಲಿನ ಪ್ರಭಾವವನ್ನು ಬೀರುವ ಹಾಗೆ ಚಿತ್ರಿಸಿ ಕೊಟ್ಟ ಎಪ್ಪತ್ತಾರರ ಹರೆಯದ ಶ್ರೀಯುತ ಬಾಬೂ ಕೃಷ್ಣ ಮೂರ್ತಿಯವರಿಗೆ ತುಂಬು ಹೃದಯದ ಪ್ರಣಾಮಗಳು ಅಜೇಯದ ಹೊರತಾಗಿಯೂ ಹಲವಾರು ಪುಸ್ತಕಗಳನ್ನು ಅವರು ಬರೆದಿದ್ದರೂ, ಇಂದಿಗೂ ಸಹಾ ಜನತೆ ಅವರನ್ನು ಗುರುತಿಸುವುದು ಅವರ ಪ್ರಥಮ ಕೃತಿಯಾದ ಅಜೇಯದಿಂದಲೇ.

ಜುಲೈ 23. ಚಂದ್ರಶೇಖರ ಅಝಾದ್ ಅವರ ಜಯಂತಿ. ದೇಶದ ಸ್ವಾತಂತ್ರ್ಯಕ್ಕಾಗಿ ‌ತನ್ನನ್ನೇ ತಾನು ಅರ್ಪಿಸಿಕೊಂಡದ್ದಲ್ಲದೇ, ಅನೇಕ ದೇಶಭಕ್ತರಿಗೆ ಪ್ರೇರಣಾದಾಯಕರಾಗಿದ್ದ ಚಂದ್ರಶೇಖರ ಆಝಾದ್ ಅವರಿಗೆ ಭಕ್ತಿ ಪೂರ್ವಕ ಪ್ರಧಾನಗಳನ್ನು ಸಲ್ಲಿಸೋಣ.

ಜಾತಸ್ಯ ಮರಣಂ ಧೃವಂ. ಅಂದರೆ, ಹುಟ್ಟಿದ ಮನುಷ್ಯ ಸಾಯಲೇ ಬೇಕು. ಆದರೆ ಆತ ಸತ್ತ ನಂತರವೂ ಆತನ ಪ್ರಭಾವ ಎಲ್ಲರ ಮೇಲೆ ಬೀರುತ್ತದೆ ಎಂದಾದರೆ ಆತ ಮಾಹಾನ್ ವೀರ ಪುರುಷನೇ ಆಗಿರಬೇಕು ಮತ್ತು ಅಜೇಯನೇ ಆಗಿರಬೇಕು

ಏನಂತೀರಿ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s