ವಿವಾಹ ವಾರ್ಷಿಕೋತ್ಸವ

ರೀ ಉಮಾ ಹೇಗಿದ್ದೀರೀ? ಮನೆಯವರೆಲ್ಲಾ ಚೆನ್ನಾಗಿದ್ದಾರಾ? ನೀವು ಬಿಡಿ. ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣುಮಕ್ಕಳಿಗೆ ಮದುವೆ ಮಾಡಿ ಜವಾಬ್ದಾರಿಯನ್ನು ಮುಗಿಸಿಕೊಂಡು ನೆಮ್ಮದಿಯಾಗಿ ಮೊಮ್ಮಕ್ಕಳ ಜೊತೆ ಆಟಾವಾಡ್ತಾ ಇದ್ದೀರಿ. ಹೆಣ್ಣು ಮಕ್ಕಳಿಗೇನೋ ಮದುವೆ ಮಾಡಿಬಿಟ್ರಿ ಆದರೆ ಮಗನಿಗೆ ಮದುವೇ ಮಾಡೋದಿಲ್ವಾ? ಅವನಿಗೂ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಬಿಡಿ ಮಗ, ಸೊಸೆ ಜೊತೆ ಸುಂದರವಾಗಿರುತ್ತೆ ನಿಮ್ಮ ಸಂಸಾರ. ಅಯ್ಯೋ ನಮಗೂ ಅದೇ ಅಸೆ ರೀ .ಆದ್ರೆ ಅವನೇ ಇನ್ನೂ ಇಷ್ಟು ಬೇಗ ಬೇಡ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು. ಕೈ ತುಂಬಾ ಸಂಪಾದನೆ ಮಾಡಿ ತನ್ನ ಕಾಲು ಮೇಲೆ ತಾನೇ ನಿಲ್ಲಬೇಕು. ತನ್ನ ಮದುವೆ ಖರ್ಚನ್ನು ತಾನೇ ಸಂಪಾದಿಸಬೇಕು ಅಂತಿರ್ತಾನೆ. ನಿಮ್ಮ ಕಡೆ ಯಾವುದಾದರೂ ಒಳ್ಳೆ ಸಂಬಂಧದ, ಕೆಲಸಕ್ಕೆ ಹೋಗುವ ಹುಡುಗಿ ಇದ್ರೆ ಹೇಳ್ರಿ. ಜಾತಕ ಕೂಡಿ ಬಂದು ಋಣಾನು ಸಂಬಂಧ ಇದ್ರೆ, ಊದಿಸೋದೇ ಓಲಗ. ಹೀಗೆ ಇಪ್ಪತ್ತು ವರ್ಷಗಳ ಹಿಂದೆ ನಮ್ಮ ತಾಯಿ ನನ್ನ ಮದುವೆಗೆ ನಾಂದಿ ಹಾಡಿ ಒಳ್ಳೆಯ ಸಂಬಂಧ ಹುಡುಕಲು ಆರಂಭಿಸಿಯೇ ಬಿಟ್ಟರು.

ಕೆಲವು ಹಿತೈಷಿಗಳು ಮತ್ತು ಸಂಬಂಧಿಕರೂ ಅದಕ್ಕೆ ಸ್ಪಂದಿಸಿ ತಮಗೆ ಗೊತ್ತಿದ್ದ ಒಂದೆರಡು ಹುಡುಗಿಯರ ಜಾತಕ ಫೋಟೋಗಳನ್ನೂ ಅಮ್ಮನ ಕೈಗೆ ತಲುಪಿಸಿಯೇ ಬಿಟ್ಟರು. ಸ್ವಲ್ಪ ಸಂಪ್ರದಾಯಸ್ಥ ಕುಟುಂಬದವರಾದ್ದರಿಂದ ಮೊದಲು ಹುಡುಗಾ ಹುಡುಗಿ ಜಾತಕ ಕೂಡಿ ಬಂದು. ನಮ್ಮ ತಂದೆ ತಾಯಿ ಹುಡುಗಿಯನ್ನು ನೋಡಿ ಅವರ ಮನೆಯ ಪೂರ್ವಾಪರ ವಿಚಾರಿಸಿ ಅವರಿಗೆ ಎಲ್ಲವೂ ಒಪ್ಪಿದಲ್ಲಿ ಮಾತ್ರವೇ ನನಗೆ ಹುಡುಗಿಯನ್ನು ತೋರಿಸ ಬೇಕೆಂಬ ಅಲಿಖಿತ ಒಪ್ಪಂದವಾಗಿತ್ತು. ಹಾಗಾಗಿ ಬಂದ ಸಂಬಂಧಗಳೆಲ್ಲವೂ ಮೊದಲ ಹಂತದಲ್ಲಿಯೇ ಮುಗಿದು ಹೋಗಿ ನನಗೆ ಉಪ್ಪಿಟ್ಟು, ಬಾದಾಮಿ ಹಾಲು (ನನಗೆ ಕಾಫಿ, ಟೀ ಅಭ್ಯಾಸವೇ ಇಲ್ಲ) ಸವಿಯುವ ಸಂಧರ್ಭವೇ ಬಂದಿರಲಿಲ್ಲ. ನನಗೆ ಯಾವುದೇ ಹೆಣ್ಣಿನ ಜಾತಕಗಳು ಬಂದರೂ ನಮ್ಮ ದೂರದ ಸಂಬಂಧಿಕರೇ ಆಗಿದ್ದ ಶಾಸ್ತ್ರಿಗಳ ಬಳಿ ತೋರಿಸಿ ಅವರ ನಿರ್ಣಯದಂತೆ ಮುಂದುವರಿಸುತ್ತಿದ್ದರು. ಆ ಶಾಸ್ತ್ರಿಗಳಿಗೂ ಮದುವೆ ವಯಸ್ಸಿನ ಮಗನೊಬ್ಬನಿದ್ದು (ನನ್ನ ಶಾಲೆಯಲ್ಲಿ ನನಗಿಂತ ಒಂದು ವರ್ಷ ಹಿರಿಯವ) ಆತ ಸೈನ್ಯದಲ್ಲಿದ್ದ. ಅವನಿಗೂ ಮದುವೆ ಮಾಡಲು ಹೆಣ್ಣನ್ನು ಹುಡುಕುತ್ತಿದ್ದರು. ನನಗೆ ಬಂದ ಜಾತಕ ಹೊಂದಾಣಿಕೆಯಾಗದಿದ್ದಲ್ಲಿ ಅದನ್ನು ಆವನ ಜಾತಕದ ಜೊತೆ ತಾಳೆ ಹಾಕುತ್ತಿದ್ದರು. ಅಂತೆಯೇ ಅವನಿಗೆ ಹೊಂದಾಣಿಕೆ ಆಗದಿದ್ದ ಜಾತಕಗಳನ್ನು ನನ್ನ ಜಾತಕ್ಕೆ ಹೊಂದಾಣಿಕೆ ನೋಡುತ್ತಿದ್ದರು. ಹಾಗೆ ಅವರ ಮಗನಿಗೆ ಬಂದ ಜಾತಕವೊಂದು ಅವನಿಗೆ ಹೊಂದಾಣಿಕೆಯಾಗದೆ ನನ್ನ ಜಾತಕಕ್ಕೆ 36 ಗುಣಗಳಲ್ಲಿ 32 ಗುಣಗಳು ಹೊಂದಾಣಿಕೆ ಯಾಗುತ್ತಿದ್ದರಿಂದ ಅವರು ನಮ್ಮ ತಂದೆಯವರನ್ನು ಕರೆದು. ಶಿವಮೂರ್ತಿ, ಈ ಹುಡುಗಿಯ ಜಾತಕ ಶ್ರೀಕಂಠನ ಜಾತಕಕ್ಕೆ ಸರಿಯಾಗಿ ಹೊಂದುತ್ತಿದೆ. ಅವನಿಗೆ ತಕ್ಕ ಹುಡುಗಿ. ಪದವೀಧರೆ. ಸರ್ಕಾರಿ ಕೆಲಸದಲ್ಲಿದ್ದಾಳೆ. ಸಂಬಂಧ ಮುಂದುವರಿಸು ಎಂದಿದ್ದರು. ಅದೇ ಸಮಯದಲ್ಲಿ ನಾನು ಕೆಲಸದ ನಿಮಿತ್ತ ಹೊರರಾಜ್ಯಕ್ಕೆ ಹೋಗಿದ್ದೆ. ನಾನು ಹಿಂದಿರಿಗಿ ಬರುವಷ್ಟರಲ್ಲಿ ನಮ್ಮ ಫೋಷಕರು ಹುಡುಗಿಯ ಮನೆಗೆ ಹೋಗಿ ಎಲ್ಲವನ್ನೂ ನಿಶ್ಚಯಿಸಿಕೊಂಡು ಬಂದ್ದಿದ್ದಾಗಿತ್ತು. ನಾನು ಊರಿಗೆ ಬಂದದಿನವೇ ನನ್ನ ತಂಗಿಯ ಪುಟ್ಟ ಮಗಳು ಐಶ್ವರ್ಯ ಎಲ್ಲವನ್ನೂ ಅವಳ ಮುದ್ದು ಮಾತಿನಲ್ಲಿ ಪಟ ಪಟನೇ ನನಗೆ ವರದಿ ಒಪ್ಪಿಸಿಬಿಟ್ಟಳು. ಅಂದಿನ ಸಂಜೆಯೇ ನಮ್ಮ ಮನೆಯಿಂದ ಸುಮಾರು ಮೂರ್ನಾಲಕ್ಕು ಕಿಲೋ ಮೀಟರ್ ದೂರವಿದ್ದ ಹುಡುಗಿಯ ಮನೆಗೆ ಕರೆದು ಕೊಂಡು ಹೋಗಿಯೇ ಬಿಟ್ಟರು. ಸಂಪ್ರದಾಯದಂತೆ ಹುಡುಗ ಮತ್ತು ಹುಡುಗಿಯನ್ನು ನೋಡುತ್ತಾ ಕೊಟ್ಟ ಉಪ್ಪಿಟ್ಟು ಕೇಸರಿಬಾತ್ ತಿನ್ನುತ್ತಿರುವಾಗಲೇ, ಹುಡುಗಿಗೇ ಹಾಡು ಹಸೆ ಬರುತ್ತಾ ಎಂದು ನಮ್ಮ ಅಮ್ಮ ಕೇಳಿದ್ಡೇ ತಡಾ, ಹುಡುಗಿಯ ತಂದೆ, ಓ ನಮ್ಮ ಮಗಳಿಗೆ ಸಂಗೀತ ಆಗಿದೆ. ಪರೀಕ್ಷೆ ಕಟ್ಟಿಲ್ಲ ಅಷ್ಟೇ ಎಂದು ಒಂದೇ ಉಸಿರಿನಲ್ಲಿ ಹೇಳಿ, ಮಗಳಿಗೆ ಹಾಡಲು ಕಣ್ಸನ್ನೆ ಮಾಡಿಯೇಬಿಟ್ಟರು. ಇದೆಲ್ಲವೂ ಪೂರ್ವನಿರ್ಧಾರದಂತೆಯೇ ಇದ್ದುದ್ದರಿಂದ ಅದಕ್ಕೆಲ್ಲಾ ಸಿದ್ಧಾಳಾಗಿದ್ದ ಹುಡುಗಿಯೂ, ದಾಸನ ಮಾಡಿಕೋ ಎನ್ನಾ, ಸ್ವಾಮಿ, ಸಾಸಿರ ನಾಮದ ವೇಂಕಟ ರಮಣಾ ಎಂದು ಸುಶ್ರಾವ್ಯವಾಗಿ ಹಾಡಿದಾಗ ಒಳ್ಳೆಯ ಸಂಗೀತಗಾರರಾಗಿದ್ದ ನಮ್ಮ ತಂದೆಯವರೂ ತಲೆದೂಗಿಯೇ ಬಿಟ್ಟಾಗ ಬೇರೆ ಯಾವ ನೆಪವನ್ನೂ ಹೇಳದೆ ನನ್ನ ಜೀವನದ ಚರಣದಾಸಿಯನ್ನಾಗಿ ಮಾಡಿಕೊಳ್ಳಲು ಒಪ್ಪಿಯೇ ಬಿಟ್ಟೆ. ಒಪ್ಪಿಗೆ ಕೊಟ್ಟ ನಂತರದ ಕೆಲವೇ ದಿನಗಳಲ್ಲಿ ನಮ್ಮ ತಂದೆಯವರ ಅರವತ್ತನೇ ವರ್ಷದ ಶಾಂತಿ ಮಹೂರ್ತವಿದ್ದುದರಿಂದ ಅಂದೇ ನಮ್ಮಿಬ್ಬರ ನಿಶ್ಚಿತಾರ್ಥವೂ ನೆರವೇರಿತು. ನಿಶ್ವಿತಾರ್ಥ ಮತ್ತು ಮದುವೆಯ ಮಧ್ಯೆ ಐದಾರು ತಿಂಗಳುಗಳ ಅಂತರವಿದ್ದರೂ ನಮ್ಮಿಬ್ಬರ ಮಾತು ಕತೆ ಅಷ್ಟಕ್ಕಷ್ಟೆ. ಕೇವಲ ಒಡವೆ, ಸೀರೆ, ಬಟ್ಟೆಗಳನ್ನು ತರಲು ಹೋದಾಗ ಮಾತ್ರ ಮುಖಃತಃ ಭೇಟಿ. ಒಮ್ಮೆ ಮಾತ್ರ ಅವರ ಕಛೇರಿಯ ಸಮೀಪದಲ್ಲೇ ಇದ್ದ ಲಾಲ್ ಭಾಗ್ ಫಲಪುಷ್ಬ ಪ್ರದರ್ಶನಕ್ಕೆ ಭೇಟಿ. ಅದೂ ನನ್ನ ತಂಗಿಯ ಮಗಳು ಐಶ್ವರ್ಯಳನ್ನು ಒಡಗೂಡಿ.

ನಮ್ಮ ಮಾವನವರ ಕೈ ತುಂಬಾ ಧಾರಳ. ಎಲ್ಲದರಲ್ಲೂ ಅವರಿಗೆ ಸಾಂಗವಾಗಿಯೇ ಆಗ ಬೇಕು. ಇರುವ ಮಗಳೊಬ್ಬಳ ಮದುವೆ ಅದ್ಧೂರಿಯನ್ನಾಗಿ ಮಾಡಬೇಕೆಂದು ಆಗಿನ್ನೂ ಹೊಸದಾಗಿ ಉದ್ಘಾಟನೆಯಾಗಿದ್ದ ಸಾಕಷ್ಟು ವಿಶಾಲವಾಗಿದ್ದ ಯಶವಂತಪುರದ ಮುನಿಸ್ವಾಮಿ ಕಲ್ಯಾಣ ಮಂಟಪದಲ್ಲಿ ದಿನಾಂಕ 13.11. 1998 ಶುಕ್ರವಾರ ಬೆಳಿಗ್ಗೆ ಶುಭಲಗ್ನದಲ್ಲಿ ಅದ್ದೂರಿಯಾಗಿ ಚಿರೋಟಿ (ಆಗಿನ ಕಾಲಕ್ಕೆ ದುಬಾರಿಯಾದ ಸಿಹಿ)ಊಟದ ಹಾಕಿಸಿ ಬಂದರೆಲ್ಲರೂ ಒಪ್ಪಿಕೊಳ್ಳುವಂತೆ ಅಚ್ಚುಕಟ್ಟಾಗಿ ತಮ್ಮ ಮಗಳು ಮಂಜುಳ (ಮಮತ)ಳನ್ನು ನನ್ನ ಕೈಗಿತ್ತು ಧಾರೆ ಎರೆದು ಕೊಟ್ಟು ನನ್ನನ್ನು ಚತುರ್ಭುಜನನ್ನಾಗಿಸಿ ನನ್ನ ಜವಾಬ್ಧಾರಿ ಹೆಚ್ಚಿಸಿಯೇ ಬಿಟ್ಟರು.

ಹೀಗೆ ನಮ್ಮ ಮನೆಯ ಹೊಸಿಲಿನ ಮೇಲೆ ಅಕ್ಕಿ ಬೆಲ್ಲದಿಂದ ತುಂಬಿಟ್ಟಿದ್ದ ಸೇರನ್ನು ಬಲಗಾಲಿನಲ್ಲಿ ಒದ್ದು ನಮ್ಮ ಮನೆಗೆ ಕಾಲಿಟ್ಟು ಒಂದಾದ *ನಮ್ಮಿಬ್ಬರ ದಾಂಪತ್ಯ ಜೀವನಕ್ಕೆ ಇಂದು ಸರಿಯಾಗಿ ಇಪ್ಪತ್ತು ವರ್ಷಗಳು*. ವರ್ಷಗಳೇನೂ ಇಪ್ಪತ್ತಾಗಿರಬಹುದು. ಆದರೆ ಪ್ರತಿಯೊಂದು ನೆನಪುಗಳು ನೆನ್ನೆ ಮೊನ್ನೆ ನಡೆದ ಹಾಗಿ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ. ಮದುವೆ ಸುಸೂತ್ರವಾಗಿ ಮುಗಿದರೆ ನಿನ್ನ ದರ್ಶನಕ್ಕೆ ಮಗಳು ಮತ್ತು ಅಳಿಯಂದಿರ ಜೊತೆಗೆ ಬರುತ್ತೇನೆ ಎಂದು ಹರೆಸಿಕೊಂಡಿದ್ದರ ಫಲವಾಗಿ ಗೊರವನಹಳ್ಳಿ, ಹೊರನಾಡು, ಶೃಂಗೇರೀ, ಧರ್ಮಸ್ಥಳ, ಉಡುಪಿ ಶ್ರೀಕ್ಷೇತ್ರಗಳಿಗೆ ಎರಡೂ ಕುಟುಂಬಗಳೊಂದಿಗೆ ಭೇಟಿಯಾಗಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ, ಫೂರ್ವ ನಿರ್ಧಾರದಂತೆ (ನನ್ನ ಕಾಲೇಜು ದಿನಗಳಲ್ಲಿಯೇ ನಿರ್ಧರಿಸಿದ್ದೆ) ಬಾಂಬೆ, ರಾಜಸ್ಥಾನದ ಜೈಪುರ ಮತ್ತು ಉದಯಪುರಕ್ಕೆ ಮಧುಚಂದ್ರಕ್ಕೆ ಹೋಗುವ ಮೂಲಕ ಒಬ್ಬರೊನ್ನಬ್ಬರು ಅರಿತುಕೊಳ್ಳುತ್ತಾ ನಮ್ಮ ದಾಂಪತ್ಯ ಜೀವನ ಶುರುವಾಯಿತು.

ನನ್ನ ಅರ್ಧಾಂಗಿಗೆ ನಮ್ಮ ಮನೆಯಲ್ಲಿ ಆರಂಭದಲ್ಲಿ ಎಲ್ಲವೂ ಹೊಸತು. ಸದಾ ಸ್ನೇಹಿತರು, ಸಂಬಂಧಿಕರಿಂದ ಗಿಜಿ ಗಿಜಿ ಗುಟ್ಟುವ ತುಂಬು ಸಂಸಾರ. ತಿಂಡಿ ಊಟಗಳಲ್ಲಿಯೂ ಅವರ ತಾಯಿಯ ಮನೆಗಿಂತ ವಿಭಿನ್ನ. ಅವರ ಮನೆಯಲ್ಲಿ ತರಕಾರಿ ಹುಳಿಯನ್ನು ಹುಳಿಪುಡಿ ಹಾಕಿ ನೀರಾಗಿ ಮಾಡಿದರೆ ನಮ್ಮ ಮನೆಯಲ್ಲಿ ಪ್ರತಿಯೊಂದಕ್ಕೂ ಯಥೇಚ್ಚವಾಗಿ ಕಾಯಿಹಾಕಿ (ಆಗ ನಮ್ಮ ಮನೆಯಲ್ಲಿ ಐದು ತೆಂಗಿನ ಮರಗಳಿದ್ದವು) ರುಬ್ಬಿ ಗಟ್ಟಿಯಾಗಿ ಮಾಡಬೇಕು. ಅವರ ಮನೆಯಲ್ಲಿ ತಿಳಿಸಾರು ಮಾಡಿದರೆ, ನಮ್ಮ ಮನೆಯಲ್ಲಿ ಬೇಳೆ ಜಾಸ್ತಿಹಾಕಿ, ಇಂಗಿನ ಒಗ್ಗರಣೆಯಿಂದ ಕೂಡಿದ ಗಟ್ಟಿ ಚರಟದ ಸಾರು. ನಮ್ಮ ಕುಟುಂಬಲ್ಲಿ ನಮ್ಮ ಅಮ್ಮ ಬಹಳ ಚುರುಕಿಗೆ ಹೆಸರುವಾಸಿ. ಹಾಗಾಗಿ ಪ್ರತಿಯೊಬ್ಬರೂ ಅದನ್ನೇ ನನ್ನ ಮನೆಯೊಡತಿಯಲ್ಲೂ ನಿರೀಕ್ಷಿಸುತ್ತಿದ್ದರು. ಎಲ್ಲರ ನಿರೀಕ್ಷೆಗಳಿಗೂ ಮೀರಿ ನನ್ನ ಮನದನ್ನೆ ಅತೀ ಶೀಘ್ರದಲ್ಲಿಯೇ ನಮ್ಮ ಮನೆಗೆ ಒಗ್ಗಿಕೊಂಡು ಹೋಗಿ ನಮ್ಮ ಮನೆಯ ರೀತಿಯಲ್ಲಿಯೇ ಅಡುಗೆ ಮಾಡುವುದನ್ನು ಕಲಿತು ಜೊತೆ ಜೊತೆಯಲ್ಲಿ ಅವಳ ತಾಯಿಯ ಮನೆಯಲ್ಲಿ ಕಲಿತಿದ್ದ ಪಲಾವ್, ಅಕ್ಕಿ ಹೆಸರಬೇಳೆ ಉಪ್ಪಿಟ್ಟು, ರವೇ ರೊಟ್ಟಿ ಹೀಗೆ ನಾನಾ ರೀತಿಯ ರುಚಿ ರುಚಿ ಆಡುಗೆಗಳಿಂದ ಎಲ್ಲರ ಮನಗಳನ್ನೂ ಸೂರೆ ಮಾಡಿದ್ದಂತೂ ಸುಳ್ಳಲ್ಲ. ನೋಡಲು ನಮ್ಮ ಅಮ್ಮನ ತದ್ರೂಪಿನಂತೆಯೇ ಇರುವ ನನ್ನವಳು, ನನ್ನ ಅಮ್ಮನಂತೆಯೇ ಚುರುಕುತನವನ್ನು ರೂಡಿಸಿಕೊಂಡು ಅವರಿಗಿಂತಲೂ ರುಚಿಯಾಗಿ ಅಡುಗೆ ಮಾಡುತ್ತಾ , ಸರ್ಕಾರಿ ಕೆಲಸದ ಜೊತೆ ಮನೆಯಲ್ಲೂ ಎಲ್ಲರ ಸರಿಸಮನಾಗಿ ದುಡಿಯುತ್ತಾ ಅತೀ ಕಡಿಮೆ ಸಮಯದಲ್ಲಿ ನಮ್ಮೆಲ್ಲರ ಮನೆ ಸೂರೆಗೊಂಡಿದ್ದಂತೂ ಶ್ಲಾಘನೀಯವೇ ಸರಿ.

ಮದುವೆಯ ಸಮಯದಲ್ಲಿ ಸ್ನೇಹಿತರೊಡಗೂಡಿ ಕಂಪ್ಯೂಟರ್ ವ್ಯವಹಾರ ಮಾಡುತ್ತಿದ್ದ ನಾನು ಕೆಲ ತಿಂಗಳಿನಲ್ಲಿಯೇ ಸ್ನೇಹಿತರೊಂದಿಗೆ ಉತ್ತಮ ರೀತಿಯಿಂದಲೇ ಹೊರ ಬಂದು ಖಾಸಗೀ ಕಂಪನಿಯಲ್ಲಿ ಕೆಲಸ ಗಿಟ್ಟಿಸಿ ಕೊಂಡಿದ್ದೆ. ನಾನು ಓದಿದ್ದು ಕಂಪ್ಯೂಟರ್ ಸೈನ್ಸ್ ಡಿಪ್ಲೋಮೋ, ನನ್ನಾಕಿ ಬಿಕಾಂ ಪದವೀಧರೆ, ಜೊತೆಗೆ ಕನ್ನಡ, ಇಂಗ್ಲೀಷ್ ಟೈಪಿಂಗ್, ಶಾರ್ಟ್ ಹ್ಯಾಂಡ್ನಲ್ಲಿ ಸೀನಿಯರ್ ಮುಗಿಸಿದ್ದವಳು. ನಮ್ಮ ತಂದೆಯವರೂ ಕೂಡಾ ಸದಾ ನೀನು ಅಂಡರ್ ಗ್ರಾಜ್ಯುಯೇಟ್ ಎಂದು ರೇಗಿಸುತ್ತಿದ್ದನ್ನು ನೋಡಿದ್ದ ನನ್ನಾಕಿ, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ಪದ್ದತಿಯಲ್ಲಿ ಪೋಲಿಟಿಕಲ್ ಸೈನ್ಸ್ ಎಂ.ಎ ಮಾಡಲು ನನ್ನನ್ನು ಪ್ರೇರೇಪಿಸಿದಳು. ಮೊದಲ ಒಂದು ವರ್ಷದಲ್ಲಿ ಬೆಂಗಳೂರಿನ ಸುತ್ತದ ಜಾಗವಿಲ್ಲ ಚಾಟ್ಸ್ ಮತ್ತು ತಿಂಡಿ ತಿನ್ನದ ಜಾಗವೇ ಇಲ್ಲ ಎನ್ನಬಹುದು. ಅವಳಿಗೂ ಚಲನ ಚಿತ್ರಗಳನ್ನು ನೋಡುವ ಆಸೆ. ಅದರಲ್ಲೂ ಹಿಂದಿ ಚಿತ್ರಗಳು. ನನಗೆ ಮೊದಲಿನಿಂದಲೂ ಚಲಚಿತ್ರಗಳು ಅಷ್ಟಕ್ಕಷ್ಟೇ. ಅವಳ ಬಲವಂತಕ್ಕೆ ಆರಂಭದಲ್ಲಿ ಕೆಲವು ಹಿಂದಿ ಚಲಚಿತ್ರಗಳಿಗೆ ಹೋಗಿ ಥಿಯೇಟರಿನಲ್ಲಿ ಗೊರ್ ಎಂದು ಗೊರಕೆ ಹೊಡೆಯುತ್ತಿದ್ದ ನನ್ನನ್ನು ಗಮನಿಸಿದವಳು ನನಗಾಗಿ ಕನ್ನಡ ಚಿತ್ರಗಳನ್ನು ನೋಡಲಾರಂಭಿಸಿದಳು. ನಮ್ಮಿಬ್ಬರ ಸುಖಃ ದಾಂಪತ್ಯದ ಫಲವಾಗಿ ನನ್ನಾಕೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾಗಲೇ ನಮ್ಮ ತಂದೆಯವರ ಹುಟ್ಟು ಹಬ್ಬಕ್ಕೆ ತುಂಬು ಬಸುರಿ ಎಂಬುದನ್ನೂ ಲೆಕ್ಕಿಸಿದೆ ಅಂಗಡಿಯಿಂದ TVS XL ಚಲಾಯಿಸಿ ಕೊಂಡು ಬಂದು ಮಾವನವರಿಗೆ ಉಡುಗೊರೆಯಾಗಿ ಕೊಟ್ಟು ಮನೆಯವನ್ನೆಲ್ಲಾ ಆಶ್ಚರ್ಯಪಡಿಸಿದ್ದಳು. ಆದಾದ ಮರು ದಿನವೇ ನಮಗೆ ಮುದ್ದಾದ ಮಗಳು ಜನಿಸಿದಾಗ ಮನೆಯಲ್ಲಿ ಮಹಾಲಕ್ಷ್ಮಿ ಬಂದ ಸಂತಸ. ಅದೇ ಸಮಯದಲ್ಲಿ ನನ್ನ ಅಂತಿಮ ವರ್ಷದ ಎಂ.ಎ ಪರೀಕ್ಷೆಗಳೂ ನಡೆಯುತ್ತಿತ್ತು. ಮಗಳ ಜವಾಬ್ದಾರಿಯನ್ನು ನಾನು ನೋಡಿಕೊಳ್ಳುತ್ತೇನೆ. ನೀವು ಮೊದಲು ಓದಿನ ಕಡೆ ಗಮನವಿಡಿ ಎಂದು ಹುರಿದುಂಬಿಸಿ ಮಗಳು ಹುಟ್ಟುದ ಹನ್ನೊಂದನೆಯ ದಿನ ಕಡೆಯ ಪರೀಕ್ಷೆ ಮುಗಿಸಿಕೊಂಡು ಹನ್ನೆರಡನೇ ದಿನ ಮಗಳ ನಾಮಕರಣ ಮಾಡಿದ್ದದ್ದು ಇನ್ನೂ ನೆನಪಿನಲ್ಲಿದೆ. ಮಗಳು ಜನಿಸಿದ ಅದೃಷ್ಟವೂ ಏನೂ ಕೆಲದಲ್ಲೂ ಮುಂಬಡ್ತಿ ದೊರೆತು ಮನೆಗೆ ಮೊದಲ ನಾಲ್ಕು ಚಕ್ರವಾಹನ ತರುವುದಲ್ಲಿ ನನ್ನಾಕೆಯ ಪಾತ್ರ ಬಹಳ ಮುಖ್ಯವಾಗಿತ್ತು. ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದೆ ಎಂದು ಭಾವಿಸಿರುವಾಗಲೇ ನಾವೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಜಾಗತಿಕ ಪರಿಣಾಮದ ಪರಿಣಾಮದಿಂದಾಗಿ ಪ್ರಪಂಚಾದ್ಯಂತ ಸಾಫ್ಟ್ವೇರ್ ಕಂಪನಿಗಳು ಮುಚ್ಚಿಹೋದಾಗ ಅದರಲ್ಲಿ ನಮ್ಮ ಕಂಪನಿಯೂ ಒಂದಾಗಿತ್ತು. ಎಷ್ಟೇ ಹುಡುಕಾಡಿದರೂ, ಎಲ್ಲೇ ಹುಡುಕಾಡಿದರೂ ಯಾವುದೇ ಕೆಲಸ ಸುಮಾರು ಆರು ತಿಂಗಳ ವರಗೆ ಸಿಕ್ಕದೆ ಕೈಯಲ್ಲಿದ್ದ ಹಣವೆಲ್ಲಾ ಖಾಲಿಯಾಗಿದ್ದಾಗ, ಇಡೀ ಮನೆಯ ಜವಾಬ್ಡಾರಿಯನ್ನು ಹೊತ್ತುಕೊಂಡು ನನಗೂ ಧೈರ್ಯ ನೀಡುತ್ತಾ ಸಂಸಾರವನ್ನು ನಿಭಾಯಿಸಿದಳು ನನ್ನಾಕಿ.

ದೇವರ ದಯೆ ಹೊಸ ಕೆಲಸ ಸಿಕ್ಕಿ ಸ್ವಲ್ಪ ಸಮಯದ ನಂತರ ಅಪ್ಪನ ಮನೆ ಇದ್ದರೂ ನಮ್ಮದೇ ಸ್ವಯಾರ್ಜಿತ ಮನೆಯಿರ ಬೇಕೆಂದು ಹಿತೈಷಿಗಳೊಬ್ಬರ ಸಲಹೆ ಮೇರೆಗೆ ನಿವೇಶನ ಕೊಳ್ಳಲು ಮೂಲಧನ ಒಂದು ಲಕ್ಷ ನನ್ನಾಕೆಯದ್ದೇ ಆಗಿತ್ತು. ತಂದೆ ತಾಯಿಯವರ ನೇತೃತ್ವ, ಮಾವ ಅತ್ತೆಯವರ ಸಹಕಾರದಿಂದ ನಮ್ಮದೇ ಮನೆ ಕಟ್ಟಿ ಮುಗಿಸಿ ಗೃಹಪ್ರವೇಶ ಮಾಡಿದಾಗ ನನ್ನಾಕೆ ಎರಡನೇ ಮಗುವಿನ ತುಂಬು ಗರ್ಭಿಣಿ. ಹೆಣ್ಣಾಗಲೀ , ಗಂಡಾಗಲೀ, ಮಕ್ಕಳೆರಡಿರಲಿ ಎಂಬುದು ನಮ್ಮ ನಿಲುವಿದ್ದರೆ, ಹೇಗೂ ಮೊದಲನೆಯದ್ದು ಮೊಮ್ಮಗಳು, ಎರಡನೆಯದ್ದು ಮೊಮ್ಮಗ ಹುಟ್ಟಿದರೆ ವಂಶ ಉದ್ಧಾರವಾಗುತ್ತದೆ ಎನ್ನುವುದು ನಮ್ಮ ತಂದೆ ತಾಯಿಯರ ಆಶಯವಾಗಿತ್ತು. ಇದನ್ನು ಅರಿತಿದ್ದ ನನ್ನಾಕೆ ಹಲವಾರು ಬಾರಿ ನಮಗೆ ಎರಡನೆಯದ್ದೂ ಹೆಣ್ಣುಮಗುವಾದರೆ ಏನು ಮಾಡುತ್ತೀರಿ ಎಂದು ಕೇಳಿದ್ದೂ ಉಂಟು. ದೇವರ ದಯೆಯೋ ನಮ್ಮ ತಂದೆತಾಯಿಯರ ಆಶೀರ್ವಾದದಂತೆ ಮಗ ಹುಟ್ಟಿದಾಗ ಮನೆಯವರ ಸಂಭ್ರಮ ಕಾರಣೀಭೂತಳಾದವಳೂ ನನ್ನಾಕಿ.

ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ, ಸಂಪ್ರದಾಯಸ್ಥ, ಸುಸಂಸ್ಖೃತ ತಂದೆ ತಾಯಿ, ಮನ ಮೆಚ್ಚಿದ ಮಡದಿ. ಇರಲು ಒಂದು ಸೂರು, ಉಡಲು ಮೆಚ್ಚಿನ ಬಟ್ಟೆಗಳು, ಹೊಟ್ಟೆ ತುಂಬಾ ಊಣ್ಣಲು ಊಟ ಇದಾವುದಕ್ಕೂ ಕಡಿಮೆ ಇಲ್ಲದೆ ಸ್ವರ್ಗಕ್ಕೇ ಕಿಚ್ಚು ಹತ್ತಿಸುವಂತೆ ನಮ್ಮ ಸಂಸಾರ ಸಾಗುತ್ತಿರಲು. ಅದೊಂದು ದಿನ ಕಛೇರಿಗೆ ನಾವಿಬ್ಬರೂ ಹೊಗುತ್ತಿದ್ದಾಗ ಅಚಾನಕ್ಕಾಗಿ ರಸ್ತೆ ಅಪಘಾತದಲ್ಲಿ ನನ್ನ ಕಾಲು ಮೂಳೆ ಮುರಿದು ಶಸ್ತ್ರ ಚಿಕಿತ್ಸೆಗಳೊಗಾಗಿ ಸುಮಾರು ಐದಾರು ತಿಂಗಳು ಮನೆಯಲ್ಲೇ ಉಳಿಯಬೇಕಾದಾಗ, ಅಕ್ಷರಶಃ ನನ್ನಾಕೆ ನನ್ನ ಪಾಲಿನ ಅಮ್ಮನೇ ಆದಳು. ಆಸ್ಪತ್ರೆಯಲ್ಲಿ ಸುಮಾರು ಒಂದು, ಒಂದೂವರೆ ತಿಂಗಳು, ಮನೆಯಲ್ಲಿಯೂ ನನಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಕೆಲಸಕ್ಕೂ ಹೋಗುತ್ತಾ ನನ್ನನ್ನೂ ನೋಡಿಕೊಳ್ಳುತ್ತಾ ನಾನು ಪುನಃ ಮೊದಲಿನಂತೆ ನಡೆಯುವಂತಾಗಲು ಕಾರಣಿಭೂತಳಾದವಳೇ ನನ್ನಾಕಿ.

ನಮ್ಮ ತಾಯಿಯವರು ಅಕಾಲಿಕವಾಗಿ ಮರಣ ಹೊಂದಿದಾಗ, ಇಡೀ ಕುಟುಂಬದ ಜವಾಬ್ಡಾರಿ ನನ್ನಾಕೆಯ ಮೇಲೆಯೇ ಬಿತ್ತು. ತನ್ನದೇ ಕಛೇರಿಯ ಕೆಲಸ, ವಯಸ್ಸಾದ ಮಾವನವರು, ಚಿಕ್ಕ ಚಿಕ್ಕ ಮಕ್ಕಳು, ಸಮಯದ ಪರಿವೇ ಇಲ್ಲದೆ ಕೆಲಸ ಮಾಡುತ್ತಿದ್ದ ನಾನು ಇವೆಲ್ಲವನ್ನೂ ಸರಿದೂಗಿಸಿಕೊಂಡು ಸಂಸಾರವನ್ನು ನಿಭಾಯಿಸದವಳೇ ನನ್ನಾಕೆ. ಮನೆಯಲ್ಲಿ ದುಡ್ಡು ಎಷ್ಟೇ ಇದ್ದರೂ ಒಂದು ಹೆಣ್ಣಿನ ದಿಕ್ಕಿಲ್ಲದಿದ್ದರೆ ಅದು ಸರಿಯಾಗಿ ಹೋಗದು ಎಂಬುದನ್ನು ಅರಿಯಲು ಬಹಳ ಸಮಯ ಬೇಕಾಗಲಿಲ್ಲ. ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಯಾವುದಾರದೂ ಖಾಸಗಿ ಕಛೇರಿಗಳಲ್ಲಿ ಕೆಲಸ ಗಿಟ್ಟಿಸಿ ಐದೋ ಇಲ್ಲವೇ ಹತ್ತು ಸಾವಿರ ಸಂಬಳ ತೆಗೆದುಕೊಂಡರೆ ಕೈಯಲ್ಲಿ ಹಿಡಿಯಲಾಗುವುದಿಲ್ಲ. ಅಂತಹದ್ದರಲ್ಲಿ, ಸರ್ಕಾರಿ ಕೆಲಸದಲ್ಲಿದ್ದು, ಕೈತುಂಬಾ ಸಂಬಳ ಬರುತ್ತಿದ್ದರೂ ಮಕ್ಕಳನ್ನು ಮತ್ತು ಮಾವನವರನ್ನು ನೋಡಿಕೊಳ್ಳುವ ಸಲುವಾಗಿ ಇನ್ನೂ ಸುಮಾರು ಇಪ್ಪತ್ತೈದು ವರ್ಷಗಳ ಕೆಲಸವಿದ್ದರೂ ಅದನ್ನು ಲೆಖ್ಖಿಸದೇ ಕೆಲಸಕ್ಕೆ ಸ್ವಯಂ ನಿವೃತ್ತಿ ಪಡೆದು ಕುಟುಂಬಕ್ಕೆ ನಿಜವಾದ ತ್ಯಾಗಮಯೀಯಾದವಳೇ ನನ್ನಾಕಿ.

ಮೊದಲೇ ಹೆಸರಿಗೆ ತಕ್ಕಂತೆ ಮಮತಾಮಯಿ ಆದ ನನ್ನಾಕಿ ಇನ್ನೂ ಕೆಲಸಕ್ಕೆ ನಿವೃತ್ತಿ ತೆಗೆದುಕೊಂಡ ಮೇಲಂತೂ ಇಡೀ ಸಮಯವನ್ನು ಕುಟುಂಬಕ್ಕೇ ಮೀಸಲಿಟ್ಟಳು. ಅಲ್ಲಿಯವರೆಗೂ ಮಕ್ಕಳನ್ನು ಶಾಲೆಗೆ ಬಿಡಲು ಮತ್ತು ಕರೆ ತರಲು ಹೋಗುತ್ತಿದ್ದ, ಮನೆಗೆ ಸಣ್ಣ ಪುಟ್ಟ ಸಾಮಾನುಗಳನ್ನು ತರುತ್ತಿದ್ದ, ವಿದ್ಯುತ್, ನೀರಿನ ಬಿಲ್ ಕಟ್ಟುತ್ತಿದ್ದ ಮಾವನವರಿಗೆ ಎಲ್ಲಾ ರೀತಿಯ ಕೆಲಸಗಳಿಂದಲೂ ಮುಕ್ತಿ ಕೊಟ್ಟು ಎಲ್ಲವನ್ನೂ ತಾನೇ ನಿಭಾಯಸಲು ಮುಂದಾದಳು ನನ್ನಾಕಿ.

ಈ ಮೊದಲೇ ಹೇಳಿದಂತೆ ಅತ್ಯುತ್ತಮ ಆಡುಗೆ ಮಾಡುತ್ತಿದ್ದವಳು, ಇನ್ನು ಕೆಲಸ ಬಿಟ್ಟು ಮನೆಯಲ್ಲಿ ಉಳಿದ ಮೇಲಂತೂ ಹೊಸ ರುಚಿಗಳತ್ತ ಹರಿಸಿದಳು ತನ್ನ ಚಿತ್ತ. ಮಕ್ಕಳಿಗೆ ಒಂದು, ಮಾವನವರಿಗೆ ಮತ್ತೊಂದು, ಗಂಡನಿಗೆ ಇನ್ನೊಂದು ಹೀಗೆ ಬಗೆ ಬಗೆಯ ಆಡುಗೆ ತಿಂಡಿಗಳನ್ನು ಶುಚಿ ರುಚಿಯಾಗಿ ಮಾಡಿ ಹಾಕುತ್ತಾ, ಸೊರಗಿ ಹೋಗಿದ್ದ ಇಡೀ ಸಂಸಾರವನ್ನು ಗುಂಡು ಗುಂಡಾಗಿ ಮಾಡಿದ್ದಳು ನನ್ನಾಕಿ.

ನನ್ನ ಕೆಲಸದಲ್ಲಿ ಮೇಲಧಿಕಾರಿಗಳ ವಿಪರೀತ ಒತ್ತಡಕ್ಕೊಳಗಾಗಿ, ನನ್ನ ಆರೋಗ್ಯದ ಮೇಲೂ ಪರಿಣಾಮವಾಗಿ ಕೆಲಸದಿಂದ ವಿಮುಕ್ತನಾದಾಗ ನನ್ನಲ್ಲಿ ಧೈರ್ಯ ತುಂಬಿ , ನಿಮ್ಮ ಕಂಪನಿಗೆ ನಿಮ್ಮಂತಹ ನೂರಾರು ಕೆಲಸಗಾರರು ಸಿಗಬಹುದು. ಅದರೆ ನಮ್ಮ ಮನೆಗೆ ಮತ್ತೊಬ್ಬ ಮಗ, ಗಂಡ, ತಂದೆ ಸಿಗಲಾರರು. ಹಾಗಾಗಿ, ಬಸ್ ಸ್ಟಾಂಡಿನಲ್ಲಿ ಬಟಾಣಿ ಬೇಕಾದರೂ ಮಾರಿ ಸಂಸಾರ ನಡೆಸೋಣ ಹೆದರದಿರಿ ಎಂದು ನನ್ನಲ್ಲಿ ಸ್ಥೈರ್ಯ ತುಂಬಿ ಹೊಸಾ ಕೆಲಸವನ್ನು ಹುಡುಕಲು ಹುಮ್ಮಸ್ಸು ತುಂಬಿದವಳೇ ನನ್ನಾಕಿ.

ಕೆಲಸದೊತ್ತಡದಿಂದ ದೇಹದ ಕಡೆಗೆ ಗಮನ ಕೊಡದೆ, ಯಾವುದೇ ವ್ಯಾಯಾಮವನ್ನೂ ಮಾಡದೆ ಬೂದು ಕಂಬಳ ಕಾಯಿಯಂತೆ ಉಬ್ಬಿಹೋಗಿದ್ದ ನನ್ನನ್ನು, ಹುಟ್ಟು ಹಬ್ಬದ ಉಡುಗೊರೆ ರೂಪದಲ್ಲಿ ಜಿಮ್ಗೆ ಸೇರಿಸಿ, ಸರಿಯಾದ ಆಹಾರ ಪದ್ದತಿಯಿಂದ ಸಿರಿದ್ಯಾನ್ಯಗಳನ್ನೂ, ಬಗೆ ಬಗೆಯ ಹಣ್ಣು, ತರಕಾರಿಗಳನ್ನು ಆರೋಗ್ಯಕರ ರೀತಿಯಲ್ಲಿ ಇಡೀ ಮನೆಯಲ್ಲಿ ಅಳವಡಿಸಿ, ನನ್ನ ದೇಹದಲ್ಲಿದ್ದ ಕೊಬ್ಬನ್ನು ಕರೆಗಿಸಿ ನನ್ನನ್ನು ದೈಹಿಕವಾಗಿ ಸದೃಢನನ್ನಾಗಿ ಮಾಡಿದ್ದೇ ನನ್ನಾಕಿ.

ಮನೆಯ ಯಜಮಾನರಾಗಿದ್ದ ನಮ್ಮ ತಂದೆಯವರು ಇದ್ದಕ್ಕಿದ್ದಂತೆಯೇ ಮೃತರಾದಾಗ, ಕುಗ್ಗಿ ಹೋಗಿದ್ದ ನನ್ನನ್ನೂ ಮತ್ತು ನನ್ನ ಸಹೋದರಿಯರನ್ನು ಒಗ್ಗೂಡಿಸಿ ಎಲ್ಲರನ್ನೂ ಸಾಂತ್ವನಗೊಳಿಸಿ ತಂದೆಯವರ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ವರ್ಷವಿಡೀ ಕಾಲಕಾಲಕ್ಕೆ ನಡೆಯುವಂತೆ ನೋಡಿಕೊಂಡು ಮಾವನವರಿಗೆ ಸದ್ಬತಿಯನ್ನು ಕೊಡಿಸುವುದರಲ್ಲಿ ಹೆಚ್ಚಿನ ಪಾತ್ರ ವಹಿಸಿದ್ದದ್ದೇ ನನ್ನಾಕಿ.

ಹವ್ಯಾಸಿ ಬರಹಗಾರನಾಗಿ, ಮುಖಪುಟ ಮತ್ತು ವಾಟ್ಯಾಪ್ನಲ್ಲಿ ರಾಜಕೀಯ ಪ್ರೇರಿತ ಬರಹಗಳನ್ನೇ ಹೆಚ್ಚಾಗಿ ಬರೆಯುತ್ತಾ, ಸುಖಾ ಸುಮ್ಮನೆ ಅನಗತ್ಯವಾಗಿ ಕಂಡವರ ದ್ವೇಷಕ್ಕೆ ತುತ್ತಾಗುತ್ತಿದ್ದನ್ನು ಸೂಕ್ಷ್ಮವಾಗಿ ಗಮನಿಸಿದ ನನ್ನಾಕೆ, ನನ್ನಲ್ಲಿದ್ದ ಸಾಮಾಜಿಕ ಕಳಕಳಿಯ ಬರಹಗಾರನನ್ನು ಜಾಗೃತಗೊಳಿಸಿ ಇಂದಿನ ಬರಹವೂ ಸೇರಿದಂತೆ ನನ್ನೆಲ್ಲಾ ಇತ್ತೀಚಿನ ಬರವಣಿಗೆಗಳಿಗೆ ಪ್ರೇರಣೆಯಾಗಿರುವವಳೂ ನನ್ನಾಕಿ.

ನಮ್ಮ ಮಗಳು ಮತ್ತು ಮಗನ ಎಲ್ಲಾ ರೀತಿಯ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ನನ್ನದೇನಿದ್ದರೂ ಆರ್ಥಿಕ ಶಕ್ತಿಯಾದರೇ, ಅವರ ಎಲ್ಲಾ ಏಳಿಗೆಯ ಹಿಂದಿನ ಸಂಪೂರ್ಣ ಶಕ್ತಿ ನನ್ನಾಕಿಯೇ. ಅವರ ಪರೀಕ್ಷೆಗಳಿದ್ದರೆ ಅದು ತನ್ನೇದೇ ಪರೀಕ್ಷೆ ಎನ್ನುವಂತೆ ಮಕ್ಕಳ ಜೊತೆಯಲ್ಲಿಯೇ ಇದ್ದು ಅವರ ಎಲ್ಲಾ ರೀತಿಯ ಅವಶ್ಯಕತೆಗಳನ್ನು ಕಾಲ ಕಾಲಕ್ಕೆ ಪೂರೈಸುತ್ತಾ ಅವರು ಉತ್ತಮ ರೀತಿಯ ಫಲಿತಾಂಶ ಪಡೆಯುತ್ತಿರುವುದರ ಹಿಂದಿನ ರಹಸ್ಯವೇ ನನ್ನಾಕಿ.

ಒಟ್ಟಿನಲ್ಲಿ ಕಳೆದ ಇಪ್ಪತ್ತು ವರ್ಷಗಳ ಹಿಂದೆ ನನ್ನ ಬಾಳಿನಲ್ಲಿ ಹೆಂಡತಿಯಾಗಿ ಪ್ರವೇಶಿಸಿ, ನನ್ನೆಲ್ಲಾ ತಿಕ್ಕಲುತನಗಳನ್ನೆಲ್ಲ ಸಹಿಸಿಕೊಂಡು, ಕಾಲ ಕಾಲಕ್ಕೆ ನನ್ನನ್ನು ತಿದ್ದಿ ತೀಡಿ, ನನಗೆ ಮನ ಮೆಚ್ಚುವ ಮಡದಿಯಾಗಿ, ನನ್ನ ತಂದೆ ತಾಯಿಯರಿಗೆ ಮುದ್ದಿನ ಸೊಸೆಯಾಗಿ, ನನ್ನ ತಂಗಿಯರಿಗೆ ಅಕ್ಕರೆಯ ಅತ್ತಿಗೆಯಾಗಿ, ನನ್ನ ಸೋದರ ಅಳಿಯ ಮತ್ತು ಸೊಸೆಯಂದಿರಿಗೆ ಮಮತೆಯ ಅತ್ತೆಯಾಗಿ, ನನ್ನ ಮಕ್ಕಳಿಗೆ ಮುದ್ದಿನ ಅಮ್ಮನಾಗಿರುವ ನನ್ನಾಕಿಗೆ ಹೃತ್ಪೂರ್ವಕ ನಮೋ ನಮಃ.

ಈ ಜನ್ಮದಲ್ಲಿ ನಾನು ಅವಳ ಋಣವನ್ನು ಖಂಡಿತವಾಗಿಯೂ ತೀರಿಸಲು ಸಾಧ್ಯವಾಗದ ಕಾರಣ, ಆ ಭಗವಂತನಲ್ಲಿ ಪ್ರಾರ್ಥಿಸುವುದಿಷ್ಟೇ. ಮುಂದಿನ ಜನ್ಮದಲ್ಲಿ ನಾನು ಹೆಣ್ಣಾಗಿ ಅವಳು ಗಂಡಾಗಿ, ನಾವಿಬ್ಬರೂ ಮತ್ತೆ ಸತಿ ಪತಿಗಳಾಗಿ ಅವಳ ಋಣವನ್ನು ತೀರಿಸುವಂತಹ ಭಾಗ್ಯವನ್ನು ನನಗೆ ಕರುಣಿಸಲಿ.

ಮಂಜುಳಾ, ವಿವಾಹದ ಇಪ್ಪತ್ತನೇ ವಾರ್ಷಿಕೋತ್ಸವಕ್ಕೆ ಹಾರ್ಧಿಕ ಶುಭಾಷಯಗಳು. ನಮ್ಮಿಬ್ಬರ ದಾಂಪತ್ಯ ಜೀವನ ಹೀಗೆಯೇ ನೂರ್ಕಾಲ ಸುಖಃಮಯವಾಗಿಟ್ಟಿರಲಿ ಎಂದು ಆ ಭಗವಂತನಲ್ಲಿ ಇಬ್ಬರು ಕೂಡಿ ಪ್ರಾರ್ಥಿಸುವಾ.

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿರೂಪಾಯಿ. ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s