ತಾತ ಮೊಮ್ಮಗನ ಸಂಬಂಧ- ಅನುಬಂಧ

ಶಂಕರ ಆಗಿನ್ನು ಚಿಕ್ಕ ಹುಡುಗ. ನಾಲ್ಕನೇಯದೋ ಇಲ್ಲವೇ ಐದನೆಯ ತರಗತಿಯಲ್ಲಿ ಓದುತ್ತಿದ್ದ. ಅದೊಂದು ದಿನ ಸಂಜೆ ಊರಿನಿಂದ ಅವರ ಮನೆಗೆ Father is serious. Start immediately ಎನ್ನುವ ಸಂದೇಶವಿದ್ದ ಟೆಲಿಗ್ರಾಂ ಬಂದಿತು. ಸರಿ ಆಷ್ಟು ಹೊತ್ತಿನಲಲ್ಲಿ ಮಕ್ಕಳನ್ನು ಎಲ್ಲಿಗೆ ಬಿಟ್ಟು ಹೋಗುವುದು ಎಂದು ತಿಳಿದು ಶಂಕರ, ಅವನ ತಂಗಿಯರನ್ನೂ ಕರೆದುಕೊಂಡು ಶಂಕರನ ತಂದೆ ಮತ್ತು ತಾಯಿ ಊರಿಗೆ ಹೋಗಲು ಮೆಜೆಸ್ಟಿಕ್ ಬಸ್ ಹತ್ತಿ , ಆಗಿನ್ನೂ ಟೆಲಿಫೋನ್ ಇಲ್ಲದಿದ್ದರಿಂದ ಮಲ್ಲೇಶ್ವರದಲ್ಲಿಯೇ ಶಂಕರನ ತಂದೆ ಇಳಿದು ಅವರ ತಮ್ಮನ ಮನೆಗೆ ಹೋಗಿ ಅವರನ್ನೂ ಕರೆದುಕೊಂಡು ಎಲ್ಲರೂ ಊರಿನ ಬಸ್ ಹತ್ತಿದಾಗ ಗಂಟೆ ಸುಮಾರು ಏಳುವರೆ ಆಗಿತ್ತು. ಎಲ್ಲರಿಗೂ ತಾತನವರ ಆರೋಗ್ಯದ ಬಗ್ಗೆಯೇ ಧಾವಂತ. ದಾರಿಯ ಮಧ್ಯದಲ್ಲಿ ಬಸ್ ಊಟಕ್ಕೆ ನಿಲ್ಲಿಸಿದಾಗ ಯಾರಿಗೂ ತಿನ್ನುವ ಮನಸ್ಸಿಲ್ಲದಿದ್ದರೂ ಏನೋ ಚೂರು ಪಾರು ತಿಂದು ಊರಿನ ಸಮೀಪ ಬಂದಾಗ ಗಂಟೆ ಹನ್ನೊಂದಾಗಿತ್ತು. ಎಲ್ಲರೂ ಬಸ್ ಇಳಿದು ಆ ನಟ್ಟ ರಾತ್ರಿಯಲ್ಲಿ ಕಡುಗತ್ತಲೆಯಲ್ಲಿ ಹಳ್ಳಿಯ ಗಾಡೀ ಜಾಡಿನ ರಸ್ತೆಯಲ್ಲಿ ಸುಮಾರು ಮೂರ್ನಾಲ್ಕು ಮೈಲಿ ನಡೆದು ಮನೆ ತಲುಪಿದಾಗ ಗಂಟೆ ರಾತ್ರಿ ಹನ್ನೆರಡುವರೆ ಇಲ್ಲವೇ ಒಂದಾಗಿತ್ತು.

ಟೆಲಿಗ್ರಾಂ ಕಳುಹಿಸಿದ್ದರಿಂದ ಎಷ್ಟು ಹೊತ್ತೇ ಆಗಲೀ ಮಕ್ಕಳು ಬಂದೇ ಬರುತ್ತಾರೆ ಎಂಬ ನಂಬಿಕೆಯಿಂದ ಶಂಕರನ ಅಜ್ಜಿ ಇನ್ನೂ ಎಚ್ಚರವಾಗಿಯೇ ಇದ್ದು ಬಾಗಿಲು ಬಡಿದ ತಕ್ಷಣವೇ ಯಾರೂ? ಬಂದೆ ಬಂದೆ ಎಂದು ಬಾಗಿಲು ತೆಗೆದಾಗ, ಎಲ್ಲರೂ ಮನೆ ಒಳಗೆ ಹೋದರೆ, ಗಬ್ಬೆಂದು ಮೂಗಿಗೆ ಕೆಟ್ಟ ವಾಸನೆ. ಶಂಕರನ ತಾತ ಅಲ್ಲಿಯೇ ಹಜಾರದಲ್ಲಿ ಹಾಸಿಗೆಯ ಮೇಲೆ ನಿತ್ರಾಣರಾಗಿ ಮಲಗಿದ್ದಾರೆ. ಮೂಲೆಯಲ್ಲೇ ನಾಲ್ಕೈದು ಪಂಚೆಗಳು ಮುದುರಿ ಎಸೆಯಲ್ಪಟ್ಟಿದೆ. ತಂದೆಯವರಿಗೆ ಏನಾಯ್ತಾಮ್ಮಾ? ಎಂದು ಕೇಳಿದರೆ, ಎರಡು ದಿನ ಹಿಂದೆ ಅಲ್ಲೇ ಪಕ್ಕದ ಊರಿನ ಯಾವುದೋ ಸಮಾರಂಭಕ್ಕೆ ಹೋಗಿಬಂದ ತಾತನವರಿಗೆ ಇದ್ದಕ್ಕಿದಂತೆಯೇ ಹೊಟ್ಟೆ ಕೆಟ್ಟು ವಾಂತಿ ಬೇಧಿ ಶುರುವಾಗಿದೆ. ಹಿಂದಿನ ದಿನ ತಿಂದ ಆಹಾರ ಅರಗಿಲ್ಲವೇನೋ ಎಂದು ಮನೆ ಮದ್ದನ್ನೇ ತೆಗೆದು ಕೊಂಡು ಸುಮ್ಮನಾಗಿದ್ದಾರೆ. ಆದರೆ ಮಧ್ಯಾಹ್ನದ ವೇಳೆ ಬೇದಿ ಹೆಚ್ಚಾಗಿ ಎದ್ದು ಕೂರಲು ಆಗದೇ ಸಂಕಟ ಪಡುತ್ತಿದ್ದದ್ದನು ನೋಡಿ ಗಾಭರಿಗೊಂಡು ಮಕ್ಕಳಿಗೆ ತುರ್ತಾಗಿ ಬರಲು ಟಿಲಿಗ್ರಾಂ ಕಳುಹಿಸಿ ಮಕ್ಕಳ ಬರುವನ್ನೇ ಕಾಯುತ್ತಿದ್ದರು ಶಂಕರನ ಅಜ್ಜಿ.

ಸರಿ ಈಗ ಸದ್ಯಕ್ಕೆ ಮನೆ ಔಷಧಿಯನ್ನೇ ಕೊಡೋಣ. ಬೆಳಗಾದ ಕೂಡಲೇ ಗಾಡಿ ಮಾಡಿಕೊಂಡು ಹಿರಿಸಾವೆಗೆ ಹೋಗಿ ಅಲ್ಲಿ ಡಾಕ್ಟರ್ಗೆ ತೋರಿಸಿ ಅಲ್ಲಿಂದ ಬೇಕಿದ್ರೆ ಬೆಂಗಳೂರಿಗೆ ಕರೆದುಕೊಂಡು ಹೋಗೋಣ ಎಂದು ತೀರ್ಮಾನಿಸಿದ ಶಂಕರನ ತಂದೆ ಮತ್ತು ಚಿಕ್ಕಪ್ಪ ಆ ಹೊತ್ತಿನಲ್ಲಿ ಅವರಮ್ಮ ಮಾಡಿದ ಕಾಫಿ ಕುಡಿದು ಎಲ್ಲರೂ ಅಲ್ಲೇ ಹಾಸಿಗೆ ಹಾಸಿಕೊಂಡು ಮಲಗಲು ಸಜ್ಜಾದರು.

ಇದಾವುದರ ಪರಿವೇ ಇಲ್ಲದ ಪುಟ್ಟ ಶಂಕರನಿಗೆ ತಾತಾ ಮಲಗಿದ್ದನ್ನು ಕಂಡು ಕರುಳು ಚುರುಕ್ ಎಂದಿತು. ಸರಿ ಹಾಗೆಯೇ ತಾತನ ಪಕ್ಕದಲ್ಲಿಯೇ ಸ್ಚಲ್ಪ ಜಾಗ ಮಾಡಿಕೊಂಡು ತಾತನ ಕೆನ್ನೆಗೆ ಮತ್ತು ಹಣೆಗೆ ಮುತ್ತು ಕೊಟ್ಟ. ತಾತ ಮೂರ್ನಾಲ್ಕು ದಿನಗಳಿಂದ ಕ್ಷೌರ ಮಾಡದಿದ್ದ ಕಾರಣ ಕುರುಚಲು ಗಡ್ಡ ಶಂಕರನಿಗೆ ನೋವು ಮಾಡಿದರೂ ತಾತನ ಮೇಲಿನ ಪ್ರೀತಿಯ ಮುಂದೆ ಅದು ನೋವು ಎನಿಸಲಿಲ್ಲ. ಇದ್ದಕ್ಕಿದ್ದಂತೆಯೇ ಯಾರೋ ಮುತ್ತಿಕ್ಕಿದ್ದನ್ನು ನೋಡಿದ ತಾತನಿಗೆ ಮೊಮ್ಮಗನನ್ನು ನೋಡಿ ಕೂಡಲೇ ಒಮ್ಮೆಲೆ ಆಶ್ವರ್ಯ ಮತ್ತು ಸಂತೋಷ. ಅದನ್ನು ಗಮನಿಸಿದ ಶಂಕರನ ತಂದೆ. ಸರಿ ಸರಿ ನಿಮಗೆ ಸುಸ್ತಾಗಿದೆ ಮತ್ತು ತಡ ರಾತ್ರಿಯಾಗಿದೆ ಹಾಗಿ ಸುಮ್ಮನೆ ಮಲಗಿ ಬಿಡಿ. ಬೆಳಿಗ್ಗೆ ಊರಿಗೆ ಕರೆದು ಕೊಂಡು ಹೋಗುತ್ತೀವಿ ಎಂದರು. ಸುಮಾರು ದಿನಗಳಿಂದ ಮಗ ಸೊಸೆ ಮತ್ತು ಮೊಮ್ಮಕ್ಕಳನ್ನು ನೋಡಿರದಿದ್ದ ತಾತನಿಗೆ ಇದ್ದಕ್ಕಿದ್ದಂತೆಯೇ ಎಲ್ಲರೂ ತಮ್ಮನ್ನು ನೋಡಲು ಊರಿಗೆ ಬಂದಿರುವುದು ಸಂತೋಷವಾಯಿತಾದರೂ ಆದನ್ನು ವ್ಯಕ್ತ ಪಡಿಸಲು ದೇಹದ ಆರೋಗ್ಯ ಬಿಟ್ಟಿರಲಿಲ್ಲ. ಹಾಗೇ ಮೊಮ್ಮಗನನ್ನು ಬರ ಸೆಳೆದು ಬಾಚಿ ಮುದ್ದಾಡಿ ತಮ್ಮ ಪಕ್ಕದಲ್ಲಿಯೇ ಮಲಗಿಸಿಕೊಂಡರು. ಅದಾಗಲೇ ತಡ ರಾತ್ರಿಯಾಗಿದ್ದ ಕಾರಣವೋ ಆಷ್ಟು ದೂರ ನಡೆದಿದ್ದ ಕಾರಣವೋ ಏನೋ, ಆ ಪುಟ್ಟ ಶಂಕರನಿಗೂ ನಿದ್ದೆ ಹತ್ತೇ ಬಿಟ್ಟಿತು. ಒಂದು ಕಡೆ ಬೇದಿ ಮಾಡಿಕೊಂಡಿದ್ದ ವಾಸನೆ. ಮತ್ತೊಂದು ಕಡೆ ತಾನ ನೆಶ್ಯದ ವಾಸನೆ ಇದಾವುದೂ ಶಂಕರನನ್ನು ಕಾಡಲೇ ಇಲ್ಲ. ಅವನೂ ಕೂಡಾ ತಾತನನ್ನು ತಬ್ಬಿ ಕೊಂಡು ಮಲಗೇ ಬಿಟ್ಟ.

ಬೆಳಿಗ್ಗೆ ಶಂಕರನ ಅಜ್ಜಿ ಹೊತ್ತಿಗೆ ಮುಂಚೆ ಎದ್ದು ತಾತನ ಪಂಚೆಗಳನ್ನೆಲ್ಲಾ ಒಗೆದು, ಕೊಟ್ಟಿಗೆ ಗುಡಿಸಿ ಹಾಲು ಕರೆದು ಕಾಯಿಸಿ ಮಕ್ಕಳು ಮೊಮ್ಮಕ್ಕಳನ್ನೆಲ್ಲಾ ಎಬ್ಬಿಸಲು ಪಡಸಾಲೆಗೆ ಬಂದರೆ ತಾತ ಮೊಮ್ಮಗ ಕಾಣ್ತಾನೇ ಇಲ್ಲಾ. ಅಯ್ಯೋ ದೇವ್ರೇ? ರಾತ್ರಿ ಪೂರ್ತಿ ಎದ್ದೂ ಕೂರಲೂ ಆಗದಷ್ಟು ನಿತ್ರಾಣವಾಗಿದ್ದವರು ಬೆಳ್ಳಂಬೆಳಿಗ್ಗೆ ಎಲ್ಲಿ ಹೋದ್ರಪ್ಪ ಎಂದು ಮನೆಯ ಹೊರಗೆ ಬಂದ್ರೆ, ತಾತಾ ಜಗಲಿಯ ಮೇಲೆ ಅವರ ತೊಡೆಯ ಮೇಲೆ ಮೊಮ್ಮಗ ಕುಳಿತು ಲೋಕಾಭಿರಾಮವಾಗಿ ಮಾತಾಡ್ತಾ ಇದ್ದಾರೆ. ಹಾಗೆ ಅವರಿಬ್ಬರೂ ಮಾತಾಡ್ತಾ ಇರುವವರಿಗೆ ತೊಂದರೆ ಕೊಡದೆ ಒಳಗೆ ಹೋಗಿ ಶಂಕರನ ಅಪ್ಪ, ಅಮ್ಮ ಮತ್ತು ಚಿಕ್ಕಪ್ಪನನ್ನು ಎಬ್ಬಿಸಿಕೊಂಡು ಬಂದು ತಾತಾ ಮೊಮ್ಮಗನ ಅವಿನಾವಬಂಧ ಸಂಬಂಧವನ್ನು ತೋರಿಸುತ್ತಾರೆ.

ಮೆಲ್ಲಗೆ ಹತ್ತಿರ ಹೋಗಿ ಏನು ಮಾತಾಡ್ತಾ ಇದ್ದಾರೆ ಅಂತ ಕೇಳಿದರೆ, ರಾಮ ಲಕ್ಷ್ಮಣ ವಿದ್ಯಾಭ್ಯಾಸಕ್ಕೆಂದು ಕಾಡಿಗೆ ಹೋದಾಗ ದಶರಥ ಅನುಭವಿಸಿದ ಕಷ್ಟಗಳ ಬಗ್ಗೆ ಅದೆಂದೋ ಹೇಳಿದ್ದ ಕಥೆಯ ಬಗ್ಗೆ ಈಗ ಅವರಿಬ್ಬರೂ ಗಹನವಾಗಿ ಚರ್ಚೆ ಮಾಡುತ್ತಿದ್ದರು. ಇದೇನಪ್ಪಾ ರಾತ್ರಿ ಎಲ್ಲಾ ಅಷ್ಟು ಸುಸ್ತು ಪಡಿತ್ತಿದ್ದವರು ಈಗ ಒಳ್ಳೆ ಪಾದರಸದ ತರಹ ಆಗ್ಬಿಟ್ರೀ ಅಂತ ಶಂಕರನ ತಂದೆ ಕೇಳಿದ್ರೆ ಹೇ ಹೇ ಹೇ ಎಂದು ದೇಶಾವರಿ ನಗೆ ಬೀರಿ, ಮೊಮ್ಮಗನ ಕಡೆ ನೋಡಿದ ತಾತ, ಮತ್ತೊಮ್ಮೆ ಮೊಮ್ಮಗನನ್ನು ಮುದ್ದು ಮಾಡಿ, ನಾನು ಹುಷಾರಿಲ್ಲದಿದ್ದಾಗ ಟೆಲಿಗ್ರಾಂ ಕಳುಹಿಸಿದ ತಕ್ಷಣವೇ, ನನ್ನನ್ನು ನೋಡೋದಕ್ಕೆ ನೀವೆಲ್ಲಾ ಬಂದ್ರಲ್ಲಪ್ಪಾ ಅದಕ್ಕೇ ನೋಡು ಹುಶಾರಿಗಿಬಿಟ್ಟೆ. ಈಗ ಏನೂ ಭಯವಿಲ್ಲ. ಗುಂಡು ಕಲ್ಲು ಇದ್ದಹಾಗೆ ಇದ್ದೀನಿ ಅಂದರು ತಾತ. ಹಾಗೇ ಮಾತು ಮುಂದುವರೆಸುತ್ತಾ ನಮಗೂ ವಯಸ್ಸಾಯ್ತು. ನಮ್ಮ ಕಡೆಗಾಲದಲ್ಲಿ ಮಕ್ಕಳು ಮೊಮ್ಮಕ್ಕಳ ಜೊತೆಲೇ ಕಾಲ ಕಳೀಬೇಕು ಅಂತಾ ಅನ್ನಿಸಿದರೂ, ನರಸಿಂಹಸ್ವಾಮಿ ದೇವರ ಪೂಜೆ ಮಾಡುವುದು ತಪ್ಪಿಹೋಗುತ್ತದಲ್ಲಾ ಎಂದು ಇಲ್ಲಿಯೇ ಊರಿನಲ್ಲಿಯೇ ಇದ್ದೇವೆ ಎಂದು ಹೇಳಿ. ನನಗೆ ಎಲ್ಲಾ ಭಾಗ್ಯವೂ ಸಿಕ್ಕಿದೆ. ಕಡೇದಾಗಿ ಒಂದು ಮಾತು ನಡೆಸಿಕೊಡ್ತೀಯಾ ಅಂತಾ ಶಂಕರನ ತಂದೆಯ ಹತ್ತಿಯ ಕೇಳಿದಾಗ. ಅದೇನು ಹೇಳಿ ನಿಮ್ಮ ಮಾತನ್ನು ಎಂದಾದರೂ ತೆಗೆದು ಹಾಕಿದ್ದೀವಾ ಎಂದು ಶಂಕರನ ತಂದೆ ಹೇಳಿದಾಗ, ಅಂತಹದ್ದೇನೂ ಇಲ್ಲಪ್ಪಾ, ಈಗ ತಾನೇ ನಾವಿಬ್ಬರೂ ಚರ್ಚೆ ಮಾಡುತ್ತಿದ್ದ ಹಾಗೆ ನನ್ನ ಕಡೇ ಕಾಲದಲ್ಲಿ ನನಗೆ ದಶರಥನ ತರಹ ಪುತ್ರ ವಿರಹಿ ಸಮಸ್ಯೆ ಬಾರದಂತೆ ನೋಡಿಕೊಳ್ಳಿ. ಮೂವರು ಗಂಡು ಮಕ್ಕಳಿದ್ದರೂ ಅನಾಥವಾಗಿ ಸಾಯಲು ನನಗೆ ಇಷ್ಟವಿಲ್ಲ ಎಂದಾಗ, ಅಯ್ಯೋ ಸಾಯುವ ಮಾತನ್ನು ಈಗೇಕೆ ಆಡ್ತೀರೀ ಎಂದ ಶಂಕರ ತಂದೆ ಅವರ ಚಿಕ್ಕಪ್ಪನನ್ನೂ ಒಳಗೊಂಡಂತೇ ನಾಲ್ಕೂ ಜನರೂ ಒಟ್ಟಿಗೆ ತಬ್ಬಿಕೊಂಡು ನೀವೇನು ಚಿಂತೆ ಮಾಡದಿರಿ. ಖಂಡಿತವಾಗಿಯೂ ನಿಮಗೆ ದಶರಥನಿಗಾದ ಕಷ್ಟವನ್ನು ಕೂಡುವುದಿಲ್ಲ ಎಂದು ಭಾಷೆ ಕೊಟ್ಟರು. ಮನೆಯ ಗಂಡಸರೆಲ್ಲಾ ಜಗುಲಿಯ ಮೇಲೆ ಒಟ್ಟಾಗಿ ತಬ್ಬಿ ಕುಳಿತಿದ್ದನ್ನು ನೋಡಿದ ಅತ್ತೇ ಸೊಸೆ, ಸರಿ ಸರಿ ಒಳಗೆ ಬನ್ನಿ. ಬೇರೆಯವರು ಯಾರಾದ್ರೂ ನೋಡಿದ್ರೆ, ಸುಮ್ಮನೆ ಕಣ್ಣು ಬೀಳುತ್ತದೆ ಎಂದು ಎಲ್ಲರನ್ನೂ ಮನೆಯೊಳಗೆ ಕರೆದು ಕೊಂಡು ಹೋದರು. ಎಲ್ಲರೂ ಸ್ನಾನ ಸಂಧ್ಯಾವಂದನೆ ಮುಗಿಸಿ ತಮ್ಮ ಮನೆಯ ಹಿಂದೆಯೇ ಇದ್ದ ತಮ್ಮ ಆರಾಧ್ಯ ದೈವ ಲಕ್ಷ್ಮೀ ನರಸಿಂಹಸ್ವಾಮಿಯ ಗುಡಿಗೆ ಹೋಗಿ ಸಾಂಗೋಪಾಂಗವಾಗಿ ಪೂಜೆ ಮಾಡಿ ಎಲ್ಲರೂ ಒಟ್ಟಿಗೆ ತಿಂಡಿ ಮುಗಿಸಿ. ಶಂಕರನ ತಾತ ಬೇಡ ಬೇಡವಂದರೂ ಒಳ್ಳೆಯ ವೈದ್ಯರ ಬಳಿ ತಪಾಸಣೆ ಮಾಡಿಸಲು ಬೆಂಗಳೂರಿಗೇ ಕರೆದು ಕೊಂಡು ಬಂದರು. ಹಾಗೆಯೇ ಆಗಾಗ ಊರಿಂದ ಬೆಂಗಳೂರಿಗೆ ಹೋಗಿ ಬಂದು ಮಾಡುತ್ತಿರುವಾಗಲೇ ಅಚಾನಕ್ಕಾಗಿ
ಬೆಂಗಳೂರಿನ ರಸ್ತೆಯಲ್ಲಿ ಒಮ್ಮೆ ಕಾಲು ಜಾರಿ ಬಿದ್ದದ್ದೇ ನೆಪವಾಗಿ ಆಸ್ಪತ್ರೆ ಸೇರಿದರು ಶಂಕರನ ತಾತ. ತಂದೆಯವರಿಗೆ ಕೊಟ್ಟ ಮಾತಿನಂತೆ ಮೂವರೂ ಗಂಡು ಮಕ್ಕಳು ಸರದಿಯಂತೆ ತಮ್ಮ ತಂದೆಯವರ ಸೇವೆಯನ್ನು ಯಾವುದೇ ಬೇಸರವವಿಲ್ಲದೇ ಮಾಡಿದರೂ ತಾತ ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. ರಾಮ ನಾಮ ಕೇಳುತ್ತಲೇ ತಮ್ಮ ಮೂವರೂ ಮಕ್ಕಳ ಸಮ್ಮುಖದಲ್ಲಿಯೇ ಇಹಲೋಕ ತ್ಯಜಿಸಿದರು ಶಂಕರನ ತಾತ.

ವಯಸ್ಸಾದ ತಂದೆ ತಾಯಿಯರು ತಮ್ಮ ಮಕ್ಕಳಿಂದ ದುಡ್ಡು, ಕಾಸು, ಒಡವೆ, ಐಶ್ವರ್ಯ, ಅಂತಸ್ತನ್ನು ಬಯಸುವುದಿಲ್ಲ. ಅವರ ಅಂತ್ಯ ಕಾಲದಲ್ಲಿ ಮಕ್ಕಳು ಮೊಮ್ಮಕ್ಕಳು ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬಯಸುತ್ತಾರೆ ಅಷ್ಟೇ. ಹೆತ್ತ ತಂದೆ ತಾಯಿಯರ ಋಣ ಏನು ಮಾಡಿದರೂ ತೀರಿಸಲು ಸಾಧ್ಯವಿಲ್ಲ. ಕಡೇ ಪಕ್ಷ ಅವರ ವೃದ್ದಾಪ್ಯ ದಿನಗಳಲ್ಲಿ ಅವರನ್ನು ಪ್ರೀತಿ ಆದರಗಳಿಂದ ನೋಡಿ ಕೊಳ್ಳುವ ಮೂಲಕ ಸಾಧ್ಯವಾದಷ್ಟು ಋಣ ತೀರಿಸಬಹುದಷ್ಟೇ. ಆದರೆ ಇಂದು ಬಹುತೇಕ ಮಕ್ಕಳು ತಮ್ಮ ವೃಧ್ಧ ತಂದೆ ತಾಯಂದಿರನ್ನು ಮನೆಯಲ್ಲಿ ನೋಡಿ ಕೊಳ್ಳಲಾಗದೇ ವೃದ್ಧಾಶ್ರಮಕ್ಕೆ ಕಳುಹಿಸುತ್ತಿರುವುದು ನಿಜಕ್ಕೂ ಶೋಚನೀಯವೇ ಸರಿ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s