ಅರ್ಥ ಪೂರ್ಣ ಬಸವ ಜಯಂತಿಯ ಆಚರಣೆ

basava2ನೆನ್ನೆ ತಡರಾತ್ರಿ, ಬಸವ ಜಯಂತಿಯ ಪ್ರಯುಕ್ತ ಜಗಜ್ಯೋತಿ ಬಸವೇಶ್ವರ ಭಾವಚಿತ್ರದೊಂದಿಗೆ ಶುಭಾಶಯಗಳನ್ನು ಎಲ್ಲರೊಂದಿಗೆ ಹಂಚಿಕೊಂಡಾಗ, ಕೂಡಲೇ ಗೆಳೆಯ ನೀಲಕಂಠ ಸ್ವಲ್ಪ ವಿಭಿನ್ನವಾಗಿ ಮೇಲ್ಕಾಣಿಸಿದ ಬಸವನ ಭಾವಚಿತ್ರದೊಂದಿಗೆ ಬಸವ ಜಯಂತಿಯ ಶುಭಾಶಯಗಳನ್ನು ಕೋರಿದಾಗ ಮನಸ್ಸು ಸ್ವಲ್ಪ ಕಸಿವಿಸಿಗೊಂಡು, ಇಂದು ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿ, ಇದು ಕೋಲೇ ಬಸವಣ್ಣನವರ ಆಚರಣೆಯಲ್ಲ ಎಂದು ತುಸು ಖಾರವಾಗಿಯೇ ಪ್ರತಿಕ್ರಿಯಿಸಿದೆ. ಕೂಡಲೇ ಗೆಳೆಯ ನೀಲಕಂಠರ ಈ ಪ್ರತಿಕ್ರಿಯೆ ನಿಜಕ್ಕೂ ನನ್ನ ಕಣ್ಮನ ತೆರೆಸಿತು ಎಂದರೆ ತಪ್ಪಾಗಲಾರದು.

ನಾವೆಲ್ಲಾ ರೈತರು ಬೇಸಾಯಕ್ಕೆ ಅಂತ ಎತ್ತಿಗೆ ಎಷ್ಟು ಕಷ್ಟ ಕೊಡುತ್ತೀವಿ ತಾನೇ? ಅದಕ್ಕೇ, ಬಸವಣ್ಣನವರು ಹುಟ್ಟಿದ ದಿನನಾದ್ರೂ, ನಾವು ಕಣ್ಮುಂದೆ ಇರುವ ಬಸವನ ಸೇವೆ ಮಾಡೋಕೋಸ್ಕರ ಈ ಹಬ್ಬ ಮಾಡುತ್ತೇವೆ. ನಗರ ಪ್ರದೇಶಗಳಲ್ಲಿ ಆಚರಿಸುವ ಬಸವ ಜಯಂತಿಗೂ ಹಳ್ಳಿಗಳಲ್ಲಿ ಆಚರಿಸುವ ಬಸವ ಜಯಂತಿಗೂ ಅಜಗಜಾಂತರ ವೆತ್ಯಾಸವಿದೆ. ಅಂದು ರಾಜ್ಯ ಸರ್ಕಾರ ತನ್ನ ಸಿಬ್ಬಂಧಿ ವರ್ಗಕ್ಕೆ ರಜೆ ಕೊಟ್ಟರೆ, ಅವರ ಅನುಯಾಯಿಗಳು ಜಗಜ್ಯೋತಿ ಬಸವಣ್ಣನವರ ಫೋಟೋ ಅಥವಾ ವಿಗ್ರಹಕ್ಕೆ ಹಾರ ಹಾಕಿ, ಅವರು ಹುಟ್ಟಿದ ದಿನ ಎಂದು ಬಸವ ಜಯಂತಿ ಅನ್ನೋ ಹೆಸರಲ್ಲಿ ಆಚರಿಸುವ ಪಧ್ಧತಿ ರೂಢಿಯಲ್ಲಿದೆ ಬಸವಣ್ಣನವರ ಹುಟ್ಟು, ಜೀವನ ಸಾಧನೆ, ಆದರ್ಶಗಳ ನೆನಪು ಜೊತೆಗೊಂದಿಷ್ಟು ವಚನಗಳ ಸಾರ ಇವುಗಳನ್ನು ಸ್ಮರಿಸಿಕೊಳ್ಳುವ ಮೂಲಕ ಬಸವ ಜಯಂತಿಯನ್ನು ಆಚರಿಸುತ್ತಾರೆ.

ಅದೇ ನಾವು ಹಳ್ಳಿಗಳಲ್ಲಿ ಮಾಡುವ ಬಸವನ ಹಬ್ಬ ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬಂದದ್ದು. ಈ ಕ್ಯಾಲೆಂಡರ್ನಲ್ಲಿ ನೋಡುವ ಸರಕಾರೀ ಬಸವ ಜಯಂತಿಯು ಇತ್ತೀಚಿಗೆ ಶುರುವಾದದ್ದು. ಮುರುಘಾ ಮಠದ ಮೃತ್ಯುಂಜಯ ಸ್ವಾಮೀಜಿ ಮತ್ತು ಕರ್ನಾಟಕದ ಗಾಂಧಿ ಎಂದೇ ಹೆಸರಾಗಿರುವ ಹರ್ಡೇಕರ ಮಂಜಪ್ಪ ಬಸವ ಜಯಂತಿ ಆಚರಣೆಯನ್ನು ಶುರುಮಾಡಿದರು. ಹರ್ಡೇಕರ್ ಮಂಜಪ್ಪನವರು ಅಂದಿನ ಅನೇಕ ವಿದ್ವಾಂಸರಿಗೆ ಮತ್ತು ಜ್ಯೋತಿಷ್ಯಶಾಸ್ತ್ರಜ್ಞರಿಗೆ ಪತ್ರಗಳನ್ನು ಬರೆದು ಬಸವಣ್ಣನವರ ಹುಟ್ಟಿದ ದಿನವನ್ನ ಕಂಡು ಹಿಡಿಯಲು / ಗುರ್ತಿಸಲು ಕೇಳಿಕೊಂಡರು. ಭೀಮಕವಿಯ ಬಸವ ಪುರಾಣಷಟ್ಪದಿಯ ಆಧಾರದ ಮೇಲೆ ಬಸವಣ್ಣನವರು, ಆನಂದನಾಮ ಸಂವತ್ಸರದಲ್ಲಿ, ಚಾಂದ್ರಮಾನ ಲೆಕ್ಕದ, ವೈಶಾಖ ಮಾಸ – ರೋಹಿಣಿ ನಕ್ಷತ್ರ (ವೃಷಭ ರಾಶಿ) ದಲ್ಲಿ ಹುಟ್ಟಿದರು ಮತ್ತು ಅಂದು ಅಕ್ಷಯ ತೃತೀಯ ಹಬ್ಬವಾಗಿತ್ತು ಎಂದು ಕಂಡು ಕೊಂಡರು. ಇದು ಆದುನಿಕ ಕ್ಯಾಲೆಂಡರ್ ಪ್ರಕಾರ ದಿನಾಂಕ 30 ಮಾರ್ಚ್ 1134 ಎಂದೂ ಲೆಕ್ಕ ಹಾಕಲಾಯಿತು. ಬಸವಣ್ಣನವರು ಹುಟ್ಟಿದ ವರ್ಷ 1105 ಎಂದೂ ಹಲವು ಪ್ರಮುಖ ಗ್ರಂಥಗಳಲ್ಲಿ ನಮೂದಾಗಿದೆ. ಬಸವಣ್ಣ ಹುಟ್ಟಿದಂದಿನಿಂದ ಶುರುವಾದ ಬಸವ ಶಕೆ ಇಂದಿಗೂ ಬಳಕೆಯಲ್ಲಿದೆ ಮತ್ತು ಪಂಚಾಂಗಗಳಲ್ಲಿ ಅನೂಚಾನವಾಗಿ ಈ ಬಸವಶಕೆಯ ವರ್ಷಗಳು ಬಳಕೆಯಾಗುತ್ತ ಬಂದಿತು ಇದು (ಆಧುನಿಕ ವರ್ಷ 2022) ಬಸವ ಶಕೆ 889.

ದಾವಣಗೆರೆಯಲ್ಲಿ ಬಸವಜಯಂತಿಯನ್ನು ಮೊತ್ತ ಮೊದಲ ಬಾರಿಗೆ 1913ರಲ್ಲಿ ಆಚರಿಸಲಾಯಿತು. ನಂತರ ಇದು ಕರ್ನಾಟಕಾದ್ಯಂತ ತುಂಬಾ ಪ್ರಸಿದ್ದಿಯಾಯಿತು ಮತ್ತು ಮೂಲೆ ಮೂಲೆಗಳಲ್ಲಿ ಆಚರಣೆಯಾಗ್ತಾ ಬಂತು. ಮುಂದೆ ಕರ್ನಾಟಕ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರ ಈ ದಿನವನ್ನು ಸರ್ಕಾರಿ ದಿನಗಳಾಗಿ ಘೋಷಣೆ ಮಾಡಿದವು ಮತ್ತು ಸರ್ಕಾರದ ಮೂಲಕವೂ ಆಚರಣೆ ಮಾಡುತ್ತಾ ಬಂದವು ಎಂಬುದಾಗಿ ಸವಿವರವಾಗಿ ತಿಳಿಸಿದರು.

ಅವರ ಪ್ರತ್ಯುತ್ತರ ಓದುತ್ತಿರುವ ಹಾಗೆ ಅದೇ ಗುಂಪಿನಲ್ಲಿರುವ ಮತ್ತೊಬ್ಬ ಗೆಳೆಯ ಅಂಕುಶ್ ಕೂಡ ಈ ರೀತಿಯಾಗಿ ಪ್ರತಿಕ್ರಿಯಿಸಿದರು.

basava1ನನಗೆ ಹಾಗೂ ನನ್ನ ಊರಿನಲ್ಲಿ ಎಂದೂ ಬಸವಣ್ಣನ ಪೋಟೋ ಇಟ್ಟು ಪೂಜೆ ಮಾಡಿದ ನೆನಪೇ ಇಲ್ಲ ಇವತ್ತು ಕೂಡ ಬಸವಣ್ಣನ ಜಯಂತಿ ಎಂದರೆ ನೀವು ಹೇಳಿದ ಕೋಲೆ ಬಸವಣ್ಣನನ್ನೆ ನಾವು ಪೂಜಿಸುವುದು. ಈ ದಿನ ಬಸವಣ್ಣನನ್ನು ಸ್ನಾನ ಮಾಡಿಸಿ ಸಿಂಗರಿಸುವ ಪದ್ದತಿ ಇದೆ ಮರೆತಿದ್ದೆ ಈ ದಿನ ಬಸವಣ್ಣನ ದೇವಸ್ಥಾನಕ್ಕೆ ಎಡೆ ಹಾಗೂ ಪೂಜೆ ಮಾಡುವ ಸಂಪ್ರದಾಯ ಇದೆ.

etuಈ ರೀತಿಯ ಆಚರಣೆಗಳ ಬಗ್ಗೆ ಕೇಳುತ್ತಿದ್ದಾಗ, ಬಸವಣ್ಣನವರು ಹೇಳಿದ್ದೂ ಕಾಯಕವೇ ಕೈಲಾಸ ಎಂದು. ಇಂದಿನ ಈ ಆಧುನಿಕ ಯುಗದಲ್ಲೂ ನಿಜಕ್ಕೂ ಗೋವುಗಳೇ ಪ್ರಾಮಾಣಿಕವಾಗಿ, ನಿಸ್ವಾರ್ಥಕ್ಕಾಗಿ ತನ್ನ ಯಜಮಾನನ ಹಿತಕ್ಕಾಕಿ ಕಾಯಕವನ್ನು ಮಾಡುತ್ತಿರುವುದು. ಹಾಗಾಗಿ ಬಸವಣ್ಣನವರ ಜಯಂತಿಯ ದಿನದಂದು ಬಸವಣ್ಣನವರ ಭಾವಚಿತ್ರ ಅಥವಾ ಪ್ರತಿಮೆಗಳಿಗೆ ಪೂಜಿಸುವುದರೊಂದಿಗೆ ನೀ ಯಾರಿಗಾದೆಯೋ ಎಲೆ ಮಾನವಾ, ಹರಿ ಹರಿ ಗೋವು ನಾನು ಎಂದು ಜಗತ್ತಿಗೇ ಸಾರಿ ಹೇಳಿದ ಗೋವುಗಳನ್ನು ಪೂಜಿಸುವುದು ಮತ್ತು ಅವುಗಳಿಗೆ ಹೊಟ್ಟೆಯ ತುಂಬಾ ಎಡೆ ಇಡುವುದರೊಂದಿಗೆ ಸಾರ್ಥಕವಾಗಿ ಮತ್ತು ಅತ್ಯಂತ ಅರ್ಥ ಪೂರ್ಣವಾಗಿ ಬಸವ ಜಯಂತಿಯನ್ನು ಆಚರಿಸಬಹುದಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

One thought on “ಅರ್ಥ ಪೂರ್ಣ ಬಸವ ಜಯಂತಿಯ ಆಚರಣೆ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s