ಅಮ್ಮಾ= ಅ+ಮ+ಮ+ಆ. ಅಕ್ಕರೆಯಿಂದ , ಮಮತೆ ಮತ್ತು ಮಮಕಾರದಿಂದ, ಆರೈಕೆ ಮಾಡುವವಳೇ ಅಮ್ಮಾ. ಜಗತ್ತಿನಲ್ಲಿ ಯಾರಿಗೇ ಆಗಲಿ ಅಥವಾ ಯಾವುದ್ದಕ್ಕೇ ಆಗಲಿ ಪರ್ಯಾಯ ಹುಡುಕ ಬಹುದೇನೋ, ಆದರೆ ಅಮ್ಮನಿಗೆ ಮಾತ್ರ ಪರ್ಯಾಯವೇ ಇಲ್ಲಾ. ಆಕೆ ಮಾತ್ರಾ ಅದ್ವಿತಿಯಳು, ಅನುಕರಣಿಯಳು, ಸದಾವಂದಿತಳು. ತಾಯಿ ಇಲ್ಲದೇ ಜಗವಿಲ್ಲಾ. ತಾಯಿ ಇಲ್ಲದೇ ನಾವಿಲ್ಲ.
ಒಂಭತ್ತು ತಿಂಗಳು ತನ್ನ ಗರ್ಭದಲ್ಲಿ ಅಂಡಾಣುವಿನಿಂದ ಮಗುವಿನ ರೂಪ ತಾಳುವವರೆಗೆ ಜೋಪಾನವಾಗಿಟ್ಟುಕೊಂಡು, ತಾನು ತಿನ್ನುವ ಆಹಾರವನ್ನೇ ತನ್ನ ಒಡಲಿನಲ್ಲಿರುವ ಮಗುವಿನೊಂದಿಗೆ ಕರಳು ಬಳ್ಳಿಯ ಮೂಲಕ ಹಂಚಿಕೊಂಡು ದೇಹದ ನೂರಾರು ಮೂಳೆಗಳು ಮುರಿದಾಗ ಆಗುವ ನೋವಿನಷ್ಟೇ ಕಷ್ಟ ಪ್ರಸವ ಸಮಯದಲ್ಲಿ ಆದರೂ ಅದನ್ನೆಲ್ಲಾ ತಾಳಿಕೊಂಡು ಸಂತೋಷದಿಂದ ನಮಗೆ ಜನ್ಮ ಕೊಡುತ್ತಾಳೆ. ಜನ್ಮ ಕೊಟ್ಟ ನಂತರ ತನ್ನ ತನ್ನ ಎದೆಹಾಲನ್ನು ಉಣಿಸುತ್ತಾ ತನ್ನೆಲ್ಲಾ ಕಷ್ಟ ಮತ್ತು ನೋವಿನ ನಡುವೆಯೂ ತನ್ನ ಬಹುಪಾಲು ಸಮಯವನ್ನು ನಮ್ಮ ಆರೈಕೆಗಳಿಗೇ ಮೀಸಲಿಟ್ಟು ನಮ್ಮ ಎಲ್ಲಾ ಆವಶ್ಯಕತೆಗಳನ್ನೂ ಪೂರೈಸುತ್ತಾಳೆ. ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು ಎನ್ನುವಂತೆ ನಮ್ಮ ತೊದಲು ನುಡಿಗಳನ್ನು ಅರ್ಥೈಸಿಕೊಂಡು ಅದಕ್ಕೊಂದು ಸರಿಯಾದ ಭಾಷಾ ಸ್ವರೂಪ ನೀಡಿ, ನಮ್ಮನ್ನು ತಿದ್ದಿ ತೀಡೀ ದೊಡ್ಡವರನ್ನಾಗಿ ಮಾಡುತ್ತಾಳೆ.
ಈ ಭೂಮಿಯಲ್ಲಿ ಹಲವಾರು ತರಹದವರಿರುತ್ತಾರೆ ಕೆಲವರು ಒಳ್ಳೆಯವರಿದ್ದರೆ, ಕೆಲವರು ಕೆಟ್ಟವರಾಗಿರುತ್ತಾರೆ. ನಾನಾ ರೀತಿಯ ಅಪರಾಧಗಳನ್ನು ಮಾಡಿದವರಾಗಿರುತ್ತಾರೆ. ಆದರೆ ಅದಕ್ಕಾಗಿ ಭೂಮಿ ತಾಯಿಯನ್ನು ಹೇಗೆ ದೂಷಿಸಲು ಆಗುವುದಿಲ್ಲವೋ ಹಾಗೆಯೇ ಮಕ್ಕಳು ಮಾಡಿದ ತಪ್ಪಿಗೆ ತಾಯಿಯನ್ನು ದೂಷಿಸಲಾಗದು. ಸಾಮಾನ್ಯವಾಗಿ ಮಕ್ಕಳು ತಪ್ಪುಮಾಡಿದಲ್ಲಿ, ಏನು ಕಲಿಸಿಕೊಟ್ಟಳೋ ನಿನ್ನ ಹೆಡೆದವ್ವಾ ಎಂದು ತಾಯಿಯನ್ನೇ ದೂಷಿಸುವುದು ಈ ಸಮಾಜದಲ್ಲಿ ಸರ್ವೇಸಾಮಾನ್ಯವಾಗಿದೆ. ಅದಕ್ಕಾಗಿಯೇ ಈ ಭೂಮಿಯಲ್ಲಿ ಕೆಟ್ಟ ಮಕ್ಕಳಿರಬಹುದು. ಆದರೆ ಖಂಡಿತವಾಗಿಯೂ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ. ಆಕೆ ಭೂದೇವಿಯಂತೆ ತನ್ನ ಮೇಲೆ ನಡೆವ ಎಲ್ಲಾ ದೌರ್ಜನ್ಯಗಳನ್ನೂ ತನ್ನ ಒಡಲೊಳಗೆ ನುಂಗಿಕೊಂಡು ಕ್ಷಮಯಾ ಧರಿತ್ರಿಯಾಗುವ ಹಾಗೆ, ತಾಯಿಯೂ ಕೂಡಾ ತನ್ನ ಮಕ್ಕಳು ಏಷ್ಟೇ ಕಷ್ಟಗಳನ್ನು ಕೊಟ್ಟರೂ, ಎಲ್ಲವನ್ನೂ ತನ್ನ ಹೊಟ್ಟೆಗೆ ಹಾಕಿಕೊಳ್ಳುವ ಮಮತಾಮಯಿ. ಒಂದು ತಾಯಿ ಹತ್ತು ಮಕ್ಕಳನ್ನು ಸಾಕಬಹುದು ಆದರೆ, ಅದೇ ಹತ್ತು ಮಕ್ಕಳು ಒಬ್ಬ ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಕೇವಲ ಗಾದೆ ಮಾತಾಗದೆ, ಸಮಾಜದಲ್ಲಿ ನಾವಿಂದು ಪ್ರತಿನಿತ್ಯ ನೋಡುತ್ತಿರುವ ಘನ ಘೋರ ಸತ್ಯವಾಗಿದೆ.
ಇಂದು ವಿಶ್ವ ಅಮ್ಮಂದಿರ ದಿನ. ನಮ್ಮನ್ನು ಈ ಜಗಕ್ಕೆ ಕರೆತಂದು ನಮ್ಮನ್ನು ಹೊತ್ತು, ಹೆತ್ತು ಸಾಕಿ ಸಲಹಿ, ಸ್ದದ್ವಿದ್ಯೆ ಸದ್ಬುದ್ದಿ ಕೊಟ್ಟು ಸಮಾಜದಲ್ಲಿ ಸತ್ಪ್ರಜೆಯನ್ನಾಗಿ ಮಾಡಿದ ನಮ್ಮ ಅಮ್ಮನಿಗೆ ನಾವು ಏನು ಕೊಟ್ಟರೂ ಸಾಲಾದಾದರೂ, ಆಕೆ ನಮ್ಮಿಂದ ಏನನ್ನೂ ಬಯಸದೇ ಸದಾ ನಮ್ಮ ಹಿತವನ್ನೇ ಬಯಸುವವಳಾದರೂ, ಆವಳಿಗೆ ನಮ್ಮ ಹೃದಯಾಂತರಾಳದಿಂದ ನಮಸ್ಕರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅಮ್ಮಂದಿರು ಇರುವವರು ಅವರಿಗೊಂದು ಸಾಷ್ಟಾಂಗ ನಮಿಸಿ, ಒಂದು ಬಾರಿ ಅಪ್ಪಿ , ತಬ್ಬಿಕೊಂಡು ಮುತ್ತಿಟ್ಟು ನೋಡಿ. ಆಕೆಯ ಮುಖ ಮತ್ತು ಮನಸ್ಸಿನಲ್ಲಾಗುವ ಸಂತೋಷ ಅವರ್ಣನೀಯ. ತಾಯಿ ಕಳೆದುಕೊಂಡವರು ಮನಸ್ಸಿನಲ್ಲಿಯೇ ಆ ತಾಯಿಯನ್ನು ನೆನೆಪಿಸಿಕೊಂಡು ಭಕ್ತಿ ಪೂರ್ವಕವಾಗಿ ಒಮ್ಮೇ ಜೋರಾಗಿ ಅಮ್ಮಾ….. ಎಂದರೆ ಸಾಕು. ನಮ್ಮ ಆ ಕರುಳಿನ ಆ ಆರ್ತನಾದ, ಆ ಮೂರು ಲೋಕದಲ್ಲಿ ಎಲ್ಲೋ ಇರುವ ನಮ್ಮ ಹೆತ್ತಮ್ಮನಿಗೆ ತಲುಪಿ ಆಕೆ ಅಲ್ಲಿಂದಲೇ ಖಂಡಿತವಾಗಿಯೂ ನಮ್ಮನ್ನು ಹೃದಯಪೂರ್ವಕವಾಗಿ ಆಶೀರ್ವದಿಸುತ್ತಾಳೆ.
ವೈಶಾಖ ಬಹುಳ ತೃತೀಯದಂದು ಕೆಲ ವರ್ಷಗಳ ಹಿಂದೆ ನಮ್ಮನಗಲಿದ ನಮ್ಮ ಅಮ್ಮನ ಬಗ್ಗೆ ಹೇಳಬೇಕೆಂದರೆ ಆಕೆ ಒಂದು ನಡೆದಾಡುವ ಕೋಶವೇ ಹೌದು. ಕೆನ್ನೆಯ ತುಂಬಾ ಅರಿಶಿನ, ಹಣೆಯಲ್ಲಿ ಅಗಲವಾದ ಕುಂಕುಮ, ಅಚ್ಚುಕಟ್ಟಾದ ಜಡೆ ಅದಕ್ಕೊಂದು ತಕ್ಕದಾಗಿ ಮುಡಿದ ಹೂ ಹೀಗೆ ಸೌಂದರ್ಯದ ಖನಿಯೇ ನಮ್ಮಮ್ಮ. ಚುರುಕು ಎನ್ನುವ ಪದಕ್ಕೆ ಅನ್ವರ್ಥವೇ ನಮ್ಮಮ್ಮ. ಕನ್ನಡ, ತಮಿಳು, ತೆಲುಗು ಭಾಷೆಗಳನ್ನು ನಿರರ್ಗಳವಾಗಿ ಹಿಂದಿ, ಇಂಗ್ಲೀಷ್ ಭಾಷೆಯನ್ನು ತಕ್ಕ ಮಟ್ಟಿಗೆ ಅರಿತವಳು ಮತ್ತು ಅಷ್ಟೂ ಭಾಷೆಯನ್ನೂ ಮಕ್ಕಳೆಲ್ಲರಿಗೂ ಕಳಿಸಿದವರು ನಮ್ಮಮ್ಮ. ಅಪ್ಪ ಅಕ್ಕಿಯಲ್ಲಿ ಓಂಕಾರ ಬರೆಸಿ ಶಾಸ್ತ್ರೋಕ್ತವಾಗಿ ಚೌಲದ ಸಮಯದಲ್ಲಿ ಅಕ್ಷರಾಭ್ಯಾಸವನ್ನು ಮಾಡಿಸುವ ಮೊದಲೇ, ನನಗೆ ಕೋಡುಬಳೆಯಲ್ಲಿ ಆ ಆ ಇ ಈ ಮಾಡಿ ಕೊಟ್ಟು ಅದರ ಮೂಲಕ ಕನ್ನಡ ವರ್ಣಮಾಲೆಯನ್ನು ಕಳಿಸಿದವರು ನಮ್ಮಮ್ಮ. ವಾರ ವಾರವೂ ಅಜ್ಜಿ ತಾತಂದರಿಗೆ ಬರೆವ ಪೋಸ್ಟ್ ಕಾರ್ಡ್ ಮತ್ತು ಇನ್ಲ್ಯಾಂಡ್ ಲೆಟರಿನಲ್ಲಿ ನನಗಾಗಿಯೇ ಸ್ವಲ್ಪ ಜಾಗವನ್ನು ಮೀಸಲಿಟ್ಟು ಆವರೆಗೆ ನಾನು ಕಲಿತದ್ದೆಲ್ಲವನ್ನೂ ಬರೆಸಿ ದೂರದ ಊರಿನಲ್ಲಿದ್ದ ತಾತ ಅಜ್ಜಿ, ಮಾವ ಅಜ್ಜಿಯರ ಮುಖದಲ್ಲಿ ಸಂತಸವನ್ನು ಅರಳಿಸಿದವರು ನಮ್ಮಮ್ಮ. ಅರೇ ನೀವು SSLC ಅಷ್ಟೇನಾ ಓದಿರುವುದು ಅಂತಾ ನನ್ನ ಶಾಲೆಗೆ ಸೇರಿಸುವಾಗ ನಾನು ಕೇಳಿದ್ದಕ್ಕೆ ನನಗಾಗಿಯೇ ನನ್ನ ಪೆನ್ಸಿಲ್ ಮತ್ತು ಪೆನ್ ತೆಗೆದುಕೊಂಡು TCH ಕಲಿತು ನಮಗೆಲ್ಲಾ ಪಾಠ ಹೇಳಿಕೊಟ್ಟವರು ನಮ್ಮಮ್ಮ. ತಂಗಿಯರ ಜೊತೆ ಕಿತ್ತಾಡುವ ಬದಲು, ಸುಧಾ. ಪ್ರಜಾಮತ, ಮಯೂರ, ತರಂಗ, ಬಾಲಮಂಗಳ ಪುಸ್ತಕವನ್ನು ಓದಿ ಜ್ಞಾನ ಸಂಪಾದನೆ ಮಾಡಿಕೋ ಎಂದು ಬಾಲ್ಯದಿಂದಲೇ ಪುಸ್ತಕಗಳನ್ನು ಓದುವ ಗೀಳನ್ನು ಹಚ್ಚಿಸಿದರೇ ನಮ್ಮಮ್ಮ. ತಾನು ಪ್ರತೀ ದಿನ ಲೀಟರ್ ಗಟ್ಟಲೆ ಕಾಫೀ ಕುಡಿಯುತ್ತಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರೂ ಮಕ್ಕಳಿಗೆ ಕಾಫಿ ಮತ್ತು ಟೀ ಅಭ್ಯಾಸ ಮಾಡಿಸದೇ ಅಚ್ಚುಕಟ್ಟಾಗಿ ಶಿಸ್ತಿನಿಂದ ಬೆಳೆಸಿದವರು ನಮ್ಮಮ್ಮ. ಅಪರೂಪಕ್ಕೊಮ್ಮೆ ಗಂಡ ಹೆಂಡತಿಯರು ಸಿನಿಮಾಗೆ ಹೋದರೂ ಸಿನಿಮಾದ ಟಿಕೆಟ್ಟಿನ ದುಡ್ಡನ್ನು ಮಕ್ಕಳಾದ ನಮಗೆ ಕೊಟ್ಟು ಅದನ್ನು ಜೋಪಾನವಾಗಿ ಬ್ಯಾಂಕಿನ ಹುಂಡಿಯಲ್ಲಿ ಹಾಕಿಸುವ ಮೂಲಕ ಚಿಕ್ಕಂದಿನಲ್ಲೇ ಉಳಿತಾಯವನ್ನು ಹೇಳಿಕೊಟ್ಟವರು ನಮ್ಮಮ್ಮ. ಕಸದಿಂದ ರಸವನ್ನು ಮಾಡುತ್ತಿದ್ದವರು ನಮ್ಮಮ್ಮ. ಮಲ್ಲಿಗೆ, ಸಂಪಿಗೆ, ಕಾಕಡ, ಕನಕಾಂಬರ ಈ ರೀತಿ ಯಾವುದೇ ಹೂಗಳನ್ನು ಆಕೆಯ ಕೈಗಿತ್ತಲ್ಲಿ ಅದರ ಜೊತೆ ಅಕ್ಕ ಪಕ್ಕ ಸಿಗುವ ಪತ್ರೆಗಳನ್ನೇ ಸೇರಿಸಿಕೊಂಡು ಸರ ಸರನೆ ಎಲ್ಲರೂ ಮೆಚ್ಚುವಂತೆ ಚೆಂದದ ಹೂಮಾಲೆಯನ್ನೋ ತೋಮಾಲೆಯನ್ನೋ ಕಟ್ಟಿಬಿಡುತ್ತಿದ್ದರು ನಮ್ಮಮ್ಮ. ಅಮ್ಮಾ ತನ್ನ ಕೈಚಳಕದಿಂದ ಹಾಕಿಕೊಟ್ಟ ವೈರ್ ಬುಟ್ಟಿಗಳೆಷ್ಟೋ? ಇನ್ನು ಉಲ್ಲನ್ ಉಂಡೆ ಕೈಗೆ ಸಿಕ್ಕರಂತೂ, ಚಕ ಚಕಾಂತ ಬೆಚ್ಚನೆಯ ಸ್ವೆಟರ್, ಟೋಪಿಗಳನ್ನು ಅದೆಷ್ಟೋ ಜನರಿಗೆ ಹೆಣೆದುಕೊಟ್ಟಿದ್ದರೋ ಲೆಕ್ಕವಿಟ್ಟಿರಲಿಲ್ಲ.
ಮನೆಗೆ ಬಂದ ಅತಿಥಿಗಳ ಸತ್ಕಾರದಲ್ಲಿ ಅಮ್ಮನಿಗೆ ಅಮ್ಮನೇ ಸಾಟಿ. ಬಂದವರನ್ನು ಮಾತನಾಡಿಸುತ್ತಲೇ ಅದಾವ ಕ್ಷಣದಲ್ಲಿ ರುಚಿ ರುಚಿಯಾದ ಬಗೆ ಬಗೆಯ ಅಡುಗೆಗಳನ್ನು ಮಾಡಿ ಬಡಿಸುತ್ತಿದ್ದರೆಂದರೆ ಬಂದವರೂ ಮೂಗಿನ ಮೇಲೆ ಬೆರಳಿಟ್ಟುಕೊಂಡು ಬಾಯಿ ಚಪ್ಪರಿಕೊಂಡು ಉಂಡು ಮನಸ್ಸುತಂಬಾ ಹೊಗಳಿ ಹೋಗುತ್ತಿದ್ದರು. ಯಾರೇ ಆಗಲಿ ಯಾವುದೇ ಖಾಯಿಲೆ ಕಸಾಲೆ ಎಂದು ಹೇಳಿಕೊಂಡ ಕೂಡಲೇ ಥಟ್ ಎಂದು ಒಂದು ಮನೆ ಮದ್ದನ್ನು ಹೇಳುತ್ತಿದ್ದರು ನಮ್ಮಮ್ಮ. ಕಲ್ಲನ್ನೂ ಮಾತನಾಡಿಸಿ ಕ್ಷಣ ಮಾತ್ರದಲ್ಲಿಯೇ ಗೆಳೆತನ ಮಾಡಿಕೊಳ್ಳುತ್ತಿದ್ದವರು ನಮ್ಮಮ್ಮ. ರೀ ನಿಮ್ಮ ಮಗಳಿಗೆ/ಮಗನಿಗೆ ಮದುವೆ ಆಯ್ತಾ? ಇಲ್ವಾ? ಹಾಗಿದ್ರೇ ಇಲ್ನೋಡಿ ತಂಬಾ ಒಳ್ಳೇ ಹುಡ್ಗಾ/ಹುಡ್ಗಿ ಇದ್ದಾರೆ ಅಂತಾ ನಿಸ್ವಾರ್ಥವಾಗಿ ಸಂಬಂಧ ಕೂಡಿಸಿ, ಮಾಡಿಸಿದ ಮದುವೆಗಳಿಗೆ ಲೆಖ್ಖವೇ ಇಡಲಿಲ್ಲ ನಮ್ಮಮ್ಮ. ಹೀಗೆ ಎಷ್ಟು ಹೇಳಿದರೂ ಮುಗಿಯದು ನಮ್ಮಮ್ಮನ ಗುಣಗಾನ.
ಕಡೆಯದಾಗಿ ಎಲ್ಲರಲ್ಲೂ ಒಂದು ಸವಿನಯ ಪ್ರಾರ್ಥನೆ. ಇಂದು ನಾವೆಲ್ಲಾ ಈ ರೀತಿಯಾಗಿರಲು ನಮ್ಮ ತಾಯಿ ತಂದೆಯರೇ ಕಾರಣೀಭೂತರಾಗಿರುವುದನ್ನು ಎಂದಿಗೂ ಮರೆಯದಿರೋಣ. ಮುತ್ತು ಕೊಟ್ಟವಳು ಬಂದಾಗ, ತುತ್ತು ಕೊಟ್ಟವಳನ್ನು ಮರೆಯದೆ, ಕಷ್ಟವೋ ಸುಖಃವೋ, ನಾವು ಇರುವ ಮನೆಗಳಲ್ಲಿಯೇ ನಮ್ಮ ಜನ್ಮದಾತರಿಗೆ ಆಶ್ರಯ ನೀಡೋಣ. ನಾವು ಏನನ್ನು ತಿನ್ನುತ್ತೇವೆಯೋ ಅದನ್ನೇ ಅವರೊಂದಿಗೆ ಹಂಚಿಕೊಂಡು ತಿನ್ನೋಣ. ಈ ರೀತಿಯಾಗಿ ಮಾಡುವುದು ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯವೂ ಕೂಡ. ನಾವೇ ನಮ್ಮ ಜನ್ಮದಾತರನ್ನು ಸರಿಯಾಗಿ ನೋಡಿಕೊಳ್ಳಲಾಗದೇ ವೃಧ್ಧಾಶ್ರಮದಲ್ಲಿ ಬಿಟ್ಟರೆ, ಸಂಬಂಧವೇ ಇಲ್ಲದ ಜನ ಅವರನ್ನು ಸರಿಯಾಗಿ ನೋಡಿಕೊಳ್ಳುವರೆಂಬುದು ಯಾವ ಖಾತ್ರಿ ?
ಮತ್ತೊಮ್ಮೆ ವಿಶ್ವ ತಾಯಂದಿರ ದಿನದಂದು, ನಮ್ಮನ್ನು ಹೆಡೆದ ತಾಯಿ, ನಮ್ಮನ್ನು ಹೊತ್ತಿರುವ ಭೂಮಿ ತಾಯಿ, ಒಡಹುಟ್ಟಿದ ಅಕ್ಕ ತಂಗಿಯರು, ಚಿಕ್ಕಮ್ಮ, ದೊಡ್ಡಮ್ಮ, ಸೋದರತ್ತೆ, ಹೆಣ್ಣು ಕೊಟ್ಟ ಅತ್ತೆ, ವಿದ್ಯೆ ಕಲಿಸಿದ ಶಿಕ್ಷಕಿಯರು, ಗೆಳತಿಯರು, ಜೀವನದ ಅರ್ಧಾಂಗಿಯಾದ ಮಡದಿ, ಮಗಳು, ಸೋದರ ಸೊಸೆಯಂದಿರು ಹೀಗೆ ಎಲ್ಲಾ ಹೆಣ್ಣುಮಕ್ಕಳೂ ನಮಗೆ ಒಂದಲ್ಲಾ ಒಂದು ರೀತಿಯಾಗಿ ತಾಯಿಯಂದಿರ ಸ್ವರೂಪವೇ. ಹಾಗಾಗಿ ಅವರೆಲ್ಲರಿಗೂ ನಮ್ಮ ಶತ ನಮನಗಳನ್ನು ಸಲ್ಲಿಸೋಣ. ಈ ಸತ್ ಸಂಪ್ರದಾಯ ಕೇವಲ ಇದೊಂದು ದಿನಕ್ಕೇ ಮಾತ್ರವೇ ಸೀಮಿತವಾಗಿರದೇ ವರ್ಷವಿಡೀ ರೂಢಿಯಲ್ಲಿರಬೇಕು. ನಮ್ಮ ತಾಯಿ ತಂದೆ ಇರುವವರಿಗೂ ಅವರಿಗೆ ನಾವು ನಮಸ್ಕರಿಸಿ ಅವರ ಆಶೀರ್ವಾದ ತೆಗೆದುಕೊಂಡು ನಮ್ಮ ಕೆಲಸ ಮಾಡುತ್ತಿದ್ದೆವು.
ಏನಂತೀರೀ?
ನಿಮ್ಮವನೇ ಉಮಾಸುತ
ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂಬ ನುಡಿ ಎಷ್ಟು ಸತ್ಯ. ಹೇಗೆ ಮಹಾತಾಯಿ ರಮಾ ನಿತ್ಯ ಮುಕ್ತಳೊ ಹಾಗಯೇ ನಿತ್ಯವೂ ತಾಯಂದಿರ ದಿನವೇ… ಈ ದಿನದ ಸಾಂಕೇತಿಕ ಆಚರಣೆ ನಮನ ಸಲ್ಲಿಸಲು ಒಂದು ಸದವಕಾಶ…🙏🙏
LikeLike
ತಾಯಿಗಿಂತ ಮಿಗಿಲಾದ ದೇವರಿಲ್ಲ. ನಿಮ್ಮ ನುಡಿಗಳು ತುಂಬಾ ಅರ್ಥ ಪೂರ್ಣವಾಗಿತ್ತು ಸರ್ 🙏🙏🙏
LikeLike