ಮಳೆ ನೀರು ಕೂಯ್ಲು ಮತ್ತು ನೀರಿನ ಸದ್ಬಳಕೆ

ನೀರು ಮನುಷ್ಯನ ಅತ್ಯಗತ್ಯ ಜೀವನಾಂಶಕ ಪದಾರ್ಥವಾಗಿದೆ. ಒಂದು ಪಕ್ಷ ಆಹಾರವಿಲ್ಲದೇ ಕೆಲವು ದಿನಗಳು ಜೀವಿಸಬಲ್ಲ. ಆದರೆ ನೀರಿಲ್ಲದೆ ಒಂದು ದಿನವೂ ಇರಲಾರ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಕಿಕೊಂಡಾರೂ ಜೀವನ ಮಾಡ್ತೀವಿ ಎನ್ನುವ ಮಾತುಗಳನ್ನು ಸಾಮಾನ್ಯವಾಗಿ ನಾವೆಲ್ಲರೂ ಕೇಳಿರುತ್ತೇವೆ. ಹಿಂದೆಲ್ಲಾ ನಿತ್ಯಹರಿದ್ವರ್ಣ ಕಾಡುಗಳಿದ್ದವು. ಎಲ್ಲಾ ಕಡೆಯಲ್ಲೂ ಹಸಿರು ಮಯವಾಗಿರುತ್ತಿದ್ದು. ಹಾಗಾಗಿ ಕಾಲ ಕಾಲಕ್ಕೆ ಯಥೇಚ್ಚವಾಗಿ ಮಳೆಗಳು ಆಗುತ್ತಿದ್ದವು. ಕೆರೆ ಕಟ್ಟೆಗಳು, ಕಲ್ಯಾಣಿ, ಭಾವಿ ಮತ್ತು ಮತ್ತು ನದಿಗಳು ತುಂಬಿ ಹರಿಯುತ್ತಿದ್ದವು. ಇದರಿಂದ ಯಾರಿಗೂ ನೀರಿನ ಸಮಸ್ಯೆಗಳು ಇರುತ್ತಿರಲಿಲ್ಲ. ಇಂದು ಕೃಷಿ ಭೂಮಿಗಳೆಲ್ಲಾ ನಗರ ಪ್ರದೇಶಗಳಾಗಿ ಯದ್ವಾತದ್ವಾವಾಗಿ ಬೆಳೆಯುತ್ತಿವೆ. ಇದ್ದ ಕಾಡುಗಳನ್ನೆಲ್ಲಾ ಕಡಿದು ನಾಡುಗಳನ್ನಾಗಿ ಮಾಡುತ್ತಿದ್ದೇವೆ. ಮನುಷ್ಯನ ಭೂಮಿಯಾಸೆಗಾಗಿ ಕೆರೆ ಕಟ್ಟೆಗಳನ್ನೆಲ್ಲಾ ಮುಚ್ಚಿ ಅದರ ಮೇಲೆ ನಾಯಿಕೊಡೆಗಳಂತೆ ಬಹುಮಹಡಿ ಕಟ್ಟಡಗಳು ಎದ್ದು ನಿಲ್ಲುತ್ತಿವೆ. ಮರಗಳೇ ಇಲ್ಲದಿದ್ದಲ್ಲಿ ಮಳೆ ಎಲ್ಲಿಂದ ಬರುತ್ತದೆ? ಮಳೆಯೇ ಇಲ್ಲದಿದ್ದಲ್ಲಿ ಕರೆ ಕಟ್ಟೆ, ಭಾವಿ, ನದಿಗಳಿಗೆ ನೀರು ಎಲ್ಲಿಂದ ಬರುತ್ತದೆ? ಸಾವಿರಾರು ಅಡಿಗಳಷ್ಟು ಕೊರೆದ ಕೊಳವೆ ಭಾವಿಗಳಿಂದಾಗಿ ಅಂತರ್ಜಲವೂ ಬರಿದಾಗುತ್ತಿದೆ. ಇದಕ್ಕೆಲ್ಲಾ ಪರಿಹಾರವೇನು? ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಪಟ್ಟಣ ಈಗಾಗಲೇ ನೀರಿಲ್ಲದ ಬರಡು ಪ್ರದೇಶ ಎಂದು ಘೋಷಿಸಲಾಗಿದೆ. ನಮ್ಮ ದೇಶದಲ್ಲೂ ಅನೇಕ ಪಟ್ಟಣಗಳಲ್ಲಿ ಇದಕ್ಕಿಂತಲೂ ಭಿನ್ನವಾದ ಪರಿಸ್ಥಿತಿ ಇಲ್ಲದಾಗಿದೆ. ಕುಡಿಯುವ ನೀರನ್ನು ಈಗಾಗಲೇ ಕೊಂಡು ಕೊಳ್ಳುತ್ತಿರುವ ನಾವು, ಮುಂದೊಂದು ದಿನ ಹನಿ ಹನಿ ನೀರಿಗಾಗಿ ಹಾಹಾಕಾರ ಎದ್ದರೂ ಆಶ್ಚರ್ಯವಿಲ್ಲ. ಗಡ್ಡಕ್ಕೆ ಬೆಂಕಿ ಹತ್ತಿದ ಮೇಲೆ ಬಾವಿ ತೋಡುವ ಬದಲು, ಅಳಿದುಳಿದಿರುವ ನೀರನ್ನು ಅಗತ್ಯಕ್ಕೆ ತಕ್ಕಷ್ಟು ಮಾತ್ರವೇ ಬಳೆಸಿಕೊಂಡು ಉಳಿತಾಯ ಮಾಡಿಕೊಳ್ಳುತ್ತಾ ಅದನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸುಕೊಳ್ಳುವುದು ಉತ್ತಮ ಮಾರ್ಗವಾಗಿದೆ.

ಭೂಮಿಯ ಮೇಲೆ ಜನಸಂಖ್ಯೆ ಹೆಚ್ಚಾದಂತೆಲ್ಲಾ ಭೂಮಿಯಿಂದ ನೀರನ್ನು ಬಸಿಯುವ ಪ್ರಮಾಣವೂ ಹೆಚ್ಚಾಗುತ್ತಿದೆ. ನದಿಗಳಿಂದ, ಕೆರೆ ಕಟ್ಟೆಗಳು ಬರಿದಾಗುತ್ತಿರುವ ಕಾರಣದಿಂದಾಗಿ ಕೊಳವೆ ಬಾವಿಗಳನ್ನು ಎಗ್ಗಿಲ್ಲದೆ ತೋಡಲಾಗುತ್ತಿದೆ. ಮನುಷ್ಯನ ದುರಾಸೆಯಿಂದಾಗಿ ನೀರು ಸಿಗುವವರೆಗೂ ಭೂಮಿಯ ಒಡಲಿಗೆ ಕನ್ನಹಾಕುವ ತಂತ್ರಜ್ಞಾನದಿಂದಾಗಿ ಅಂತರ್ಜಲದ ಮಟ್ಟ ದಿನೇದಿನೇ ಕುಸಿದು ಸಾವಿರಾರು ಅಡಿಗಳಷ್ಟು ಪಾತಾಳಕ್ಕೆ ಇಳಿದಿದೆ. ಭೂಮಿಯಿಂದ ನೀರನ್ನು ಕದಿಯುವುದು ಗೊತ್ತೇ ವಿನಃ, ಪುನಃ ಅಂತರ್ಜಲವನ್ನು ಹೆಚ್ಚಿಸಲು ಯಾವುದೇ ಯೋಜನೆಗಳನ್ನು ಹಾಕಿಕೊಳ್ಳದಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಹಾಗಾಗಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು  ಕೊಯ್ಲು (rain harvesting) ಅತ್ಯುತ್ತಮ ಮಾರ್ಗವಾಗಿದೆ. ಅತ್ಯಂತ ಸುಲಭ ಮಾರ್ಗದಲ್ಲಿ ಹೆಚ್ಚು ಖರ್ಚಿಲ್ಲದೆ ಸರಳವಿಧಾನದಲ್ಲಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ ಮಳೆಕೊಯ್ಲು ಮಾಡಬಹುದಾಗಿದೆ. ಮಳೆಯ ಮೂಲಕ ಬೀಳುವ ಶುದ್ಧ ನೀರು ಸುಮ್ಮನೇ ಹರಿದು, ಚರಂಡಿ ಸೇರಿ ಮುಂದೆ ಕೊಳಚೆ ನೀರಾಗಿ ಎಲ್ಲೋ ವ್ಯರ್ಥವಾಗಿ ಹೋಗುವುದರ ಬದಲು ಅದನ್ನೇ ಹಿಡಿದಿಟ್ಟು ಮರು ಬಳಕೆ ಮಾಡಿಕೊಳ್ಳುವುದು ಮತ್ತು ಹೆಚ್ಚಾದ ನೀರನ್ನು ನಮ್ಮ ಕೊಳವೆ ಭಾವಿಗಳ ಸುತ್ತ ಇಂಗು ಗುಂಡಿಗಳ (ಚಿತ್ರದಲ್ಲಿ ವಿವರಿಸಲಾಗಿದೆ) ಮೂಲಕ ಪುನಃ ಅದೇ ನೀರನ್ನು ಅಂತರ್ಜಲಕ್ಕೆ ಸೇರಿಸುವುದೇ ಮಳೆಕೊಯ್ಲಿ ಉದ್ದೇಶವಾಗಿದೆ. ಮನೆ ಕಟ್ಟುವ ವೇಳೆಯಲ್ಲಾಗಲೀ ಅಥವಾ ನಂತರದಲ್ಲಾಗಲೀ ಒಮ್ಮೆ ಮಳೆ ನೀರ ಕೊಯ್ಲು ಪದ್ದತಿಯನ್ನು ಅಳವಡಿಸಿಕೊಂಡರೆ ಮುಂದೆ ಹತ್ತಾರು ವರ್ಷಗಳು, ಸಣ್ಣ – ಪುಟ್ಟ ನಿರ್ವಹಣೆಗಳ ವೆಚ್ಚದ ಹೊರತಾಗಿ ನಿಶ್ವಿಂತೆಯಿಂದ ನೀರನ್ನು ಸದ್ಬಳಕೆ ಮಾಡಿ ಕೊಳ್ಳ ಬಹುದು. ಈ ರೀತಿಯಾಗಿ ಸಂಗ್ರಹಿಸುವ ನೀರು ಎಷ್ಟಾಗಬಹುದೆಂಬ ಈ ಸಣ್ಣ ಅಂದಾಜು ನೋಡಿದಲ್ಲಿ ಖಂಡಿತವಾಗಿಯೂ ಎಲ್ಲರೂ ಮಳೆ ನೀರಿನ ಕೊಯ್ಲನ್ನು ಇಂದಿನಿಂದಲೇ ಆರಂಭಿಸುವುದರಲ್ಲಿ ಉತ್ಪ್ರೇಕ್ಷೇ ಏನಿಲ್ಲ.

ಬೆಂಗಳೂರಿನಂತಹ ನಗರದಲ್ಲಿ ಒಂದು ವರ್ಷಕ್ಕೆ ಅಂದಾಜಿನ ಪ್ರಕಾರ 60-65 ದಿನಗಳಷ್ಟು ಸರಾಸರಿ 30 ಮಿಲಿ ಮೀಟರ್ನಷ್ಟು ಮಳೆಯಾಗುತ್ತದೆ. ಒಂದು 30×40 ವಿಸ್ತೀರ್ಣದ ವಸತಿ ಪ್ರದೇಶದಲ್ಲಿ ಸುಮಾರು ಒಂದು ಲಕ್ಷ ಲೀಟರ್ ನಷ್ಟು ಮಳೆ ಸುರಿಯುತ್ತದೆ, ಈಗ ಯೋಚಿಸಿ ನೋಡಿ. ನಾವೆಷ್ಟು ನೀರನ್ನು ಪೋಲು ಮಾಡುತ್ತಿದ್ದೇವೆ ಎಂದು. ಹಾಗಾಗಿ ಈ ರೀತಿಯಾಗಿ ಹರಿದು ಹೋಗುವ ಮಳೆ ನೀರನ್ನು ನಮ್ಮಲ್ಲಿರುವ ಸೀಮಿತ ಸಂಪನ್ಮೂಲಗಳಿಂದಲೇ ಸಂಗ್ರಹ ಮಾಡಿಕೊಂಡು ಸದ್ಬಳಕೆ ಮಾಡಿಕೊಳ್ಳುವ ಮೂಲಕ ನಮ್ಮ ನೀರಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಕಾರ್ಯದಲ್ಲಿ ನಮ್ಮ ಅಳಿಲು ಸೇವೆಯನ್ನೂ ಸಲ್ಲಿಸಬಹುದು.

ಮಳೆಕೊಯ್ಲು ಮಾಡುವ ಸರಳ ರೀತಿ ಹೀಗಿದೆ:

  • ಮನೆಯ ಛಾಚಣಿಯ ಮೇಲೆ ಬೀಳುವ ನೀರನ್ನು ಪೈಪ್ ಮೂಲಕ ಒಂದೇ ಕಡೆ ಬರುವಂತೆ ಮಾಡಿಕೊಳ್ಳಿ
  • ಹಾಗೆ ಬಂದ ನೀರನ್ನು ಸಂಗ್ರಸಲು ಒಂದು ಡ್ರಮ್ ಅಥವಾ ಸಂಪಿನೊಳಗೆ ಹೋಗುವಂತೆ ಮಾಡಿ.
  • ನೀರು ನೇರವಾಗಿ ಪೈಪಿನ ಮೂಲಕ ಡ್ರಮ್-ಗೆ ಅಥವಾ ಸಂಪಿನೊಳಗೆ ಸೇರುವುದರ ಮೊದಲು ಜಾಲರವನ್ನು ಅಳವಡಿಸಿ ಕಸ ಕಡ್ಡಿಗಳನ್ನು ನೀರಿನಿಂದ ಬೇರ್ಪಡಿಸಿ.
  • ಹೀಗೆ ಸಂಗ್ರಹಿಸಿದ ನೀರನ್ನು ಗಿಡಗಳಿಗೆ, ಪಾತ್ರೆ ಮತ್ತು ಬಟ್ಟೆ ತೊಳೆಯಲು ಉಪಯೋಗಿಸಿಕೊಳ್ಳ ಬಹುದು.

ಇನ್ನು ಈ ಮಳೆ ಕೊಯ್ಲು ನೀರನ್ನು ಕುಡಿಯಲು ಉಪಯೋಗಿಸಿಕೊಳ್ಳಬೇಕಾದರೆ,

  • ಛಾಚಣಿಯಲ್ಲಿ ಸಂಗ್ರಹವಾದ ಮಳೆನೀರನ್ನು ಪೈಪೊಂದರಲ್ಲಿ ಬರುವಂತೆ ಮಾಡಬೇಕು.
  • ನೆಲಮಟ್ಟದಲ್ಲಿ 4ರಿಂದ 6 ಅಡಿ ಎತ್ತರ – 3 ಅಡಿ ಅಗಲದ ಫಿಲ್ಟರ್ ನಿರ್ಮಿಸಬೇಕು.
  • ನೀರನ್ನು ಶುದ್ಧಗೊಳಿಸಲು 4 ಇಂಚು ಇದ್ದಿಲು ಮತ್ತು 4 ಇಂಚು ಮರಳು ಮತ್ತು 2 ಇಂಚು ಜೆಲ್ಲಿ ಕಲ್ಲನ್ನು ಫಿಲ್ಟರ್ ಗೆ ಸೇರಿಸಬೇಕು.
  • ಇದರ ಮೂಲಕ ಹಾಯುವ ಮಳೆ ನೀರು ಶುದ್ಧಗೊಂಡು ಪೈಪ್ ಮುಖಾಂತರ ಸಂಪನ್ನು ಸೇರುತ್ತದೆ.
  • ಸಂಪಿನಲ್ಲಿ ಸಂಗ್ರಹಗೊಂಡ ನೀರನ್ನು over head tankಗೆ ಸೇರಿಸಿ ಬಳಸಬಹುದು.

ಈ ರೀತಿಯಾಗಿ ಮಳೆ ಕೂಯ್ಲು ನೀರನ್ನು ಕುಡಿಯಲು ಬಳೆಸಿಕೊಳ್ಳುವವರು ಸದಾ ತಮ್ಮ ಛಾಚಣಿಯನ್ನು ಶುದ್ದವಾಗಿಟ್ಟು ಕೊಳ್ಳುವುದು ಅತ್ಯಾವಶ್ಯಕ.

ಮಳೆ ನೀರು ಕೊಯ್ಲಿನ ಲಾಭಗಳು
• ಪರಿಸರಸ್ನೇಹಿ ಸರಳ ತಂತ್ರಜ್ಞಾನವಾಗಿದ್ದು ಕಡಿಮೆ ಖರ್ಚಿನಲ್ಲಿ ನಿರ್ವಹಿಸಬಹುದು
• ಬರಗಾಲದಲ್ಲಿ ನೆರವಾಗುವುದು ಹಾಗು ಅಂತರ್ಜಲವನ್ನು ಹೆಚ್ಚಿಸಿ ಮಣ್ಣಿನ ಕೊಚ್ಚಣೆ ತಡೆಯುವುದು
• ತಗ್ಗಿನ ಪ್ರದೇಶಗಳಿಗೆ ಬರುವ ನೆರೆ ಪ್ರವಾಹವನ್ನು ತಡೆಗಟ್ಟುವುದು
• ನೀರಿನ ಉಳಿತಾಯವಾಗುವುದು
• ನಿಖರವಾದ ಸ್ಥಳಗಳಲ್ಲಿ / ಸಮಯದಲ್ಲಿ ನೀರಿನ ಪೂರೈಕೆಯಾಗುವುದು
• ಜಲಭರಗಳಲ್ಲಿ ಗುಣಮಟ್ಟದ ನೀರಿನ ಸಂಗ್ರಹಣೆಯಾಗುವುದು
• ಸಮುದ್ರದ ನೀರು ಅಂತರ್ಜಲದಲ್ಲಿ ಸೇರುವುದನ್ನು ತಡೆಗಟ್ಟುವುದು

ಈ ರೀತಿಯಾಗಿ ಮಳೆಕೊಯ್ಲಿನಿಂದ ಮಳೆ ನೀರನ್ನು ಗಾಳಿ, ಬೆಳಕು ಬೀಳದ ಜಾಗದಲ್ಲಿ ಸಂಗ್ರಹಿಸಿಟ್ಟು ನಮಗೆ ಬೇಕಾದಾಗ ಉಪಯೋಗಿಸಿಕೊಳ್ಳಬಹುದು. ಯಾವುದೇ ವಸ್ತು ಯಥೇಚ್ಚಚಾಗಿ, ಸುಲಭವಾಗಿ ನಮ್ಮ ಕೈಗೆ ಸಿಗುತ್ತಿರುವಾಗ ನಮಗೆ ಅದರ ಬೆಲೆ ಗೊತ್ತಾಗುವುದಿಲ್ಲ. ಅದೇ ವಸ್ತು ನಮಗೆ ದುರ್ಲಭವಾಗುತ್ತಿದ್ದಂತೆಯೇ ಅದರ ಮಹತ್ವ ನಮಗೆ ತಿಳಿಯುತ್ತದೆ. ಹಿಂದೆಲ್ಲಾ ಹೆಚ್ಚಾಗಿ ಮಳೆ ಬೀಳುತ್ತಿದ್ದಾಗ ಅದರ ಪ್ರಾಮುಖ್ಯತೆ ತಿಳಿದಿರಲಿಲ್ಲ ಈಗ ಮಳೆಯೇ ಇಲ್ಲದಿರುವ ಸಮಯದಲ್ಲಿ ನದಿಯಲ್ಲಿ ಏಕೆ ನಮ್ಮ ಕಣ್ಣಿನಲ್ಲಿಯೂ ಕೂಡಾ ಒಂದು ಹನಿ ನೀರು ಬಾರದಿರುವ ಪರಿಸ್ಥಿತಿಗೆ ತಲುಪಿದ್ದೇವೆ. . ಹಾಗಾಗಿ, ಈ ಬಿರು ಬೇಸಗೆಯಲ್ಲೇ, ಮಳೆ ನೀರು ಕೊಯ್ಲಿಗೆ ಬೇಕಾದ ಸಕಲ ಸಿದ್ಥತೆ ಮಾಡಿಕೊಳ್ಳೋಣ. ನೀರನ್ನು ಸಂಗ್ರಹಿಸಿಟ್ಟು ಕೊಂಡು ಸದ್ಬಳಕೆ ಮಾಡಿ ಕೊಳ್ಳೋಣ. ಹನಿ ಹನಿ ಗೂಡಿದರೆ ಹಳ್ಳ. ತೆನೆ ತೆನೆ ಗೂಡಿದರೆ ಬಳ್ಳ,

ಇನ್ನು ವಯಕ್ತಿಕವಾಗಿ ಹೇಳಬೇಕೆಂದರೆ, ನಮ್ಮ ಮನೆಯನ್ನು ಕಟ್ಟುವಾಗಲೇ, ನಾವು ನಮ್ಮ ಮನೆಯ ಛಾವಣಿಯ ಮೇಲೆ ಬೀಳುವ ನೀರನ್ನು ಸಂಗ್ರಹಿಸಲು ಸುಮಾರು 12000 ಲೀಟರ್ ಸಾಮರ್ಥ್ಯದ ಪ್ರತ್ಯೇಕ ನೀರಿನ ತೊಟ್ಟಿಯನ್ನು ಕಟ್ಟಿಸಿರುವ ಕಾರಣ ವರ್ಷದ ಮೊದಲ ಎರಡು ಮೂರು ಉತ್ತಮ ಮಳೆಯಲ್ಲೇ ನಮ್ಮ ನೀರಿನ ತೊಟ್ಟಿ ತುಂಬಿ ತುಳುಕಾಡುತ್ತದೆ. ಇದೇ ನೀರನ್ನೇ ನಾವು ನಮ್ಮ ಮನೆಯ ಮುಂದಿನ ಕೈ ತೋಟ ಮತ್ತು ನಮ್ಮ ಮನೆಯ ವಾಹನಗಳನ್ನು ತೊಳೆಯಲು ಬಳಸಿ ಕೊಳ್ಳುತ್ತೇವೆ. ಇನ್ನು ವರ್ಷವಿಡೀ ಸುರಿಯುವ ಅಕಾಲಿಕ ಮಳೆಯಿಂದಾಗಿ ಮತ್ತೆ ಮತ್ತೆ ನೀರು ತುಂಬುತ್ತಲೇ ಹೋಗುವ ಕಾರಣ ವರ್ಷವಿಡೀ ನಮ್ಮ ತೋಟಕ್ಕೆ ಮತ್ತು ವಾರಾ ವಾರ ಕಾರುಗಳನ್ನು ತೊಳೆಯಲು ಮಳೆ ನೀರು ಸಾಕಷ್ಟಾಗುವ ಕಾರಣ, ಕಾವೇರಿ ನೀರನ್ನು ಕುಡಿಯಲು ಮತ್ತು ಗೃಹೋಪಯೋಗಕ್ಕೆ ಬಳಸುವ ಮೂಲಕ ನೀರನ್ನು ಸಾಧ್ಯವಾದಷ್ಟು ಸದ್ಬಳಕೆ ಮಾಡಿಕೊಳ್ಳುತ್ತಿದ್ದೇವೆ.

ದಯವಿಟ್ಟು ಈ ಲೇಖನವನ್ನು ಸಾಧ್ಯವಾದಷ್ಟೂ ನಮ್ಮ ನೆರೆಹೊರೆಯವರಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ತಲುಪಿಸೋಣ. ಇದು ಕೇವಲ ನಮ್ಮ ವಯಕ್ತಿಕ ಹಿತಾಸಕ್ತಿಯಲ್ಲದೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಪತ್ತು ಎಂಬುದಾಗಿ ತಿಳಿಹೇಳೋಣ. ನೀರು ಒಂದೆಡೆ ಸೇರಿಸಲು ಕೆಲ ಪಿವಿಸಿ ಪೈಪ್, ಸಂಗ್ರಹಿಸಲು ಡ್ರಮ್, ಶುದ್ಧೀಕರಿಸಲು ಮರಳು, ಇದ್ದಿಲು ಮತ್ತು ಜೆಲ್ಲಿಕಲ್ಲು. ಅಗ್ಯತ್ಯವಿದ್ದಲ್ಲಿ ಸ್ವಲ್ಪ ಸಿಮೆಂಟ್ ಮತ್ತು ಕಾರ್ಮಿಕ ವೆಚ್ಚ. ಇವೆಲ್ಲವೂ ಸೇರಿದಂತೆ 8-10 ಸಾವಿರಗಳಾಗಬಹುದು. ಆದರೆ ದೀರ್ಘಕಾಲದಲ್ಲಿ ಈ ರೀತಿಯ ಮಳೆ ಕೊಯ್ಲು ಪದ್ದತಿಯಿಂದ ನೀರನ್ನು ಸಂಗ್ರಹಿಸಿ ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಉಳಿಸುವುದಲ್ಲದೆ, ಪರಿಸರವನ್ನೂ ಕಾಪಾಡಬಹುದು ಮತ್ತು ನಮ್ಮ ಮುಂದಿನ ಪೀಳಿಗೆಗೂ ನೀರನ್ನು ಉಳಿಸ ಬಹುದು.

ಏನಂತೀರೀ?
ನಿಮ್ಮವನೇ ಉಮಾಸುತ

borewell_harvest

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s