ವಿದ್ಯಾರಣ್ಯಪುರ ಮಂಥನದ ಒಂಬತ್ತನೇ ಕಾರ್ಯಕ್ರಮ ನಿಗಧಿಯಾಗಿದ್ದಂತೆ, ಸರಸ್ವತಿ ನದಿ ಮತ್ತವಳ ಪುನಶ್ವೇತನದ ಕುರಿತಾದ ವಿಷಯದ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀಯುತ ಆರ್. ಕೃಷ್ಣಮೂರ್ತಿ( ಖಾಸಗೀ ಕಂಪನಿಯ ಉದ್ಯೋಗಿಗಳು ಮತ್ತು ಇತಿಹಾಸ ಸಂಕಲನಕಾರರು) ಅವರ ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಲಕ್ಷ್ಮೀ ಆನಂದ್ ಮತ್ತು ಅವರ ಮಗಳು ಅನನ್ಯಳ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಒಂದು ದೇಶದ ನಾಗರೀಕತೆ ಮತ್ತು ಸಂಸ್ಕೃತಿಗಳು ಬಹುತೇಕ ಒಂದಲ್ಲಾ ಒಂದು ನದಿ ಪಾತ್ರದ ಸುತ್ತಮುತ್ತಲೇ ಬೆಳೆದು ಬಂದಿರುತ್ತದೆ ಅಂತೆಯೇ ನೈಲ್ ನದಿಯ ಸುತ್ತಲೇ ಗ್ರೀಕ್ ಸಂಸ್ಕೃತಿ ಬೆಳೆದಿದ್ದರೆ, ಭಾರತೀಯ ಸಂಸ್ಕೃತಿ ಸಿಂಧು ನದಿಯ ಸುತ್ತಮತ್ತಲಿನದ್ದು ಎಂದೇ ನಾವುಗಳು ನಮ್ಮ ಇತಿಹಾಸದಲ್ಲಿ ಇಲ್ಲಿಯವರೆಗೆ ಓದಿಕೊಂಡು ಬಂದಿದ್ದೇವೆ. ಸಿಂಧೂ ಜನಾಂಗದವರು ಎಂದು ಹೇಳಲು ಬಾಯಿ ತಿರುಗದ ಬ್ರಿಟಿಷರು ಅದನ್ನೇ ಇಂದೂ ಎಂದು ಹೇಳಿ ಕಡೆಗೆ ನಮ್ಮನ್ನು ಇಂಡಿಯನ್ನರು ಎಂದು ಕೆರೆದದ್ದು ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. 3000 ವರ್ಷಗಳಷ್ಟು ಹಳೆಯದಾದ ಹರಪ್ಪ ಮಹೆಂಜದಾರೂ ಸಂಸ್ಕೃತಿಯೇ ಮತ್ತು ಸಿಂಧೂ ನದಿಯೇ ನಮ್ಮ ಮೂಲ ಎಂದು ಬಿಂಬಿಸಲಾಗಿದೆ ಮತ್ತು ಅದನ್ನೇ ನಮಗೆ ನಂಬಿಸಲಾಗಿದೆ. ಆದರೆ ಗ್ರೀಕ್ ನಾಗರೀಕತೆಗೂ ಹಿಂದಿನ, ಸಿಂಧೂ ನದಿಗಿಂತಲೂ ಬಹಳ ಹಳೆಯದಾದ, ಸಿಂದೂ ನದಿಗಿಂತಲೂ ಹತ್ತಾರು ಪಟ್ಟು ವಿಶಾಲವಾದ, ನೂರಾರು ಮೈಲಿಗಳಷ್ಟು ದೊಡ್ದದಾದ ಮತ್ತು ಇತಿಹಾಸ ಪ್ರಸಿದ್ಧವಾದ ವೈದಿಕ ನದಿಯೊಂದು ನಮ್ಮ ದೇಶದ ಮೂಲ ಸಂಸ್ಕೃತಿ ಎಂದು ಹೇಳಿದರೆ ಬಹುತೇಕರಿಗೆ ಇಂದು ಆಶ್ವರ್ಯವಾಗಬಹುದು. ಹೌದು ಇದು ಆಶ್ವರ್ಯವಾದರೂ ನಂಬಲೇ ಬೇಕಾದ ಕಠು ಸತ್ಯವೇ ಹೌದು. ನಾವಿಂದು ತಿಳಿಯ ಹೊರಟಿರುವುದು ವೈದೀಕ ನದಿ ಸರಸ್ವತಿಯ ಬಗ್ಗೆ.
ಭಾರತದ ದೊಡ್ಡ ನದಿಗಳಾದ ಸಪ್ತ ನದಿಗಳ ಉಗಮ ಸ್ಥಾನವು ಹಿಮಾಲಯದ ತಪ್ಪಲಿನಲ್ಲಿ ಹಿಮಗಳು ಕರಗಿ ನೀರಾಗಿ ಹರಿಯುವುದರ ಮೂಲಕವೇ ಆಗಿದೆ. ಋಗ್ವೇದದ ಒಂದು ಶ್ಲೋಕದಲ್ಲಿ ತಿಳಿಸಿರುವ ಪ್ರಕಾರ ನಮ್ಮ ಭೂಮಿ ಉಗಮವಾಗಿರುವುದು 4320000000 ವರ್ಷಗಳ ಹಿಂದೆ. 110000 ಮಿಲಿಯನ್ ವರ್ಷದ ಹಿಂದೆ ವೈವಸ್ವತ ಮನ್ಬಂತರ ಶುರುವಾಗುವ ಮೊದಲು ಈಗಿರುವ ಏಳೂ ಖಂಡಗಳು ಅಂಟಾರ್ಕಟಿಕದ ಭಾಗಿವಾಗಿದ್ದು ನಿಧಾನವಾಗಿ ಚಲಿಸುತ್ತಾ 75 ಮಿಲಿಯನ್ ವರ್ಷಗಳ ಹಿಂದೆ ಒಂದೊಕ್ಕೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಭೂಭಾಗ ಉಬ್ಬಿಕೊಂಡು ಎತ್ತರದ ಹಿಮಾಲಯ ಉದ್ಬವವಾಗಿ, ಭೂಮಿಯಿಂದ ಎತ್ತರೆತ್ತರಕ್ಕೆ ಹೋದಂತೆಲ್ಲಾ ಉಷ್ಣಾಂಷ ಕಡಿಮೆಯಾಗುತ್ತಾ ಹೋಗಿ, ಉಷ್ಣಾಂಶ -3 ಡಿಗ್ರಿಗಿಂತಲೂ ಕಡಿಮೆಯಾದಾಗ ನೀರು ಘನೀಕೃತವಾಗಿ ಹಿಮವಾಗುತ್ತದೆ. ನಂತರ ಇದೇ ನೀರು ಕರಗುತ್ತಾ ಗಂಗಾ, ಯಮುನಾ, ಸರಸ್ವತಿ, ಬ್ರಹ್ಮಪುತ್ರ, ಸಟ್ಲೇಜ್, ಬಿಯಾಸ್ ರಾವಿ, ಝೀಲಂ ನದಿಗಳ ಉಗಮಕ್ಕೆ ಕಾರಣೀಭೂತವಾಯಿತು ಎಂದು ನಮ್ಮ ಪುರಾಣಗಳು ಹೇಳುತ್ತವೆ ಮತ್ತು ಇದನ್ನೇ NASA & ISRO ಉಪಗ್ರಹಗಳು ಮತ್ತು ಪುರಾತನ ತತ್ವ ಶಾಸ್ತ್ರದ ಇಲಾಖೆಗಳು ಪುರಸ್ಕರಿಸುತ್ತಿವೆ. ಹೀಗಾಗಿ ನಮ್ಮ ದೇಶದ ನಾಗರೀಕತೆ ಮತ್ತು ಸಂಸ್ಕೃತಿ ಇಡೀ ಬಹಳ ಪುರಾತನದ್ದು ಅಂದರೆ ಗ್ರೀಕ್ ಇತಿಹಾಸಕ್ಕಿಂತಲೂ ಮುಂಚಿನದು ಎಂಬುದನ್ನು ಪುಷ್ಟೀಕರಿಸುತ್ತದೆ.
ಹೀಗೆ ಉಗಮವಾದ ಬಹುತೇಕ ನದಿಗಳು ಪೂರ್ವದಿಕ್ಕಿನತ್ತ ಹರಿದರೆ, ಸರಸ್ವತಿ ನದಿ ಪಶ್ಚಿಮದ ಕಡೆ ಹರಿಯುತ್ತಾ, ಕುರುಕ್ಷೇತ್ರ ಅಂದರೆ ಈಗಿನ ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶಗಳ ಮೂಲಕ ಗುಜರಾತ್ ಪ್ರವೇಶಿಸಿ, ಸಮುದ್ರ ತಳದಲ್ಲಿ ಮುಳುಗಿ ಹೋಗಿರುವ ದ್ವಾರಕೆಯ ಬಳಿ ಸಮುದ್ರ ಸೇರುತ್ತಿತ್ತು ಎಂಬುದನ್ನು ನಮ್ಮ ಪುರಾಣಗಳು ತಿಳಿಸುತ್ತವೆ. ಋಗ್ವೇದದಲ್ಲಿ 64 ಬಾರಿ ಸರಸ್ವತಿ ನದಿಯ ಉಲ್ಲೇಖವಿದ್ದರೆ, ರಾಮಾಯಣದಲ್ಲಿ 7 ಬಾರಿ ಮತ್ತು ಮಹಾಭಾರದದಲ್ಲಿ 235 ಸಲ ಸರಸ್ವತಿ ನದಿಯ ಬಗ್ಗೆ ಉಲ್ಲೇಖವಿದೆ. ಬಲರಾಮ ತನ್ನ ಪಾಪ ಪ್ರಾಯಶ್ಚಿತ್ತಕ್ಕಾಗಿ ಸರಸ್ವತಿ ನದಿಯ ಪಾತ್ರದ ಮುಖಾಂತರವೇ ಹಿಮಾಲಯವನ್ನು ತಲುಪಿ ತನ್ನ ಪಾಪವನ್ನು ಕಳೆದು ಕೊಂಡ ಎಂದು ಪುರಾಣ ಹೇಳುತ್ತದೆ. ಅರ್ಜುನ ಪಾಶುಪಥಾಸ್ತ್ರವನ್ನು ಪಡೆಯುವಾಗ ತಪ್ಪಸ್ಸು ಮಾಡಿದ್ದೂ ಇದೇ ಸರಸ್ವತಿಯ ತಟದಲ್ಲಿ ಎಂಬ ಉಲ್ಲೇಖವಿದೆ. ಸ್ಕಂದ ಪುರಾಣ, ನಾರದ ಪುರಾಣಗಳಲ್ಲಿಯೂ ಮಾರ್ಕಂಡೇಯ ಋಷಿಗಳು ಇದೇ ಸರಸ್ವತಿನದಿಯ ತಟದಲ್ಲಿಯೇ ವಾಸಿಸುತ್ತಿದ್ದರು ಎಂದು ತಿಳಿಸುತ್ತದೆ. ಪ್ರಸ್ತುತ ಗಂಗಾ ನದಿಗಿಂತಲೂ 16-20ರಷ್ಟು ದೊಡ್ಡದಾದ ನದಿ ಪಾತ್ರವನ್ನು ಹೊಂದಿದ್ದ ಸರಸ್ವತಿ ನದಿ ಅಂದಿನ ಕಾಲಕ್ಕೆ ಅತೀ ದೊಡ್ಡ ನದಿಯಾಗಿದ್ದು ಅದರ ಪಾತ್ರದ ಸುತ್ತಮುತ್ತಲಿನ ಭೂಮಿ ಅತ್ಯಂತ ಫಲವತ್ತತೆಯಿಂದ ಕೂಡಿತ್ತು ಇಂದಿನ ರಾಜಾಸ್ಥಾನದ ಥಾರ್ ಮರುಭೂಮಿಯಲ್ಲಿಯೂ ಒಂದು ಕಾಲದಲ್ಲಿ ಸರಸ್ವತಿ ನದಿ ಹರಿಯುತ್ತಿದ್ದಳು ಎಂಬುದಾಗಿ ಇತಿಹಾಸ ಹೇಳುತ್ತದೆ. ಇಷ್ಟೆಲ್ಲಾ ಪ್ರಸಿದ್ಧಿ ಹೊಂದಿದ್ದ ಸರಸ್ವತಿ ನದಿ ಇಂದೇಕೆ ನಮಗೆ ಗೋಚರಿಸುತ್ತಿಲ್ಲ? ಸರಸ್ವತಿ ನದಿಯನ್ನು ಗುಪ್ತಗಾಮಿನಿ ಎಂದೇಕೆ ಕರೆಯುತ್ತಾರೆ ? ಹದಿನೆಂಟನೇ ಶತಮಾನದಲ್ಲಿ ಕೆಲ ಆಂಗ್ಲ ಇತಿಹಾಸಕಾರರು ಇದನ್ನೇ ನೆಪವಾಗಿಟ್ಟು ಕೊಂಡು ಸರಸ್ವತಿ ಎಂಬ ನದಿಯೇ ಇರಲಿಲ್ಲ. ಅದು ಕೇವಲ ಕಾಲ್ಪನಿಕ. ರಾಮಾಯಣ ಮತ್ತು ಮಹಾಭಾರತಗಳು ನಡದೇ ಇಲ್ಲ. ಅವೆಲ್ಲವೂ ಕಾಲ್ಪನಿಕ ಕಥೆಗಳು ಎಂಬುದಾಗಿ ಹಸಿ ಸುಳ್ಳನ್ನು ಹೇಳುತ್ತಾ ಬಂದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಸಾವಿರಾರು ವರ್ಷಗಳ ಹಿಂದೆಯೇ ಸರಸ್ವತಿ ನದಿ ಕಾಣೆಯಾಗಿದ್ದರೂ ಇಂದಿಗೂ ಜನ ಮಾನಸದಲ್ಲಿ ಸರಸ್ವತಿ ನದಿ ಇದೆ ಮತ್ತು ರಾಮಾಯಣ, ಮಹಾಭಾರತದ ನಡೆದ ಕುರುಹಾಗಿ ಅದರಲ್ಲಿ ಉಲ್ಲೇಖವಾಗಿರುವ ಬಹುತೇಕ ಪ್ರದೇಶಗಳು ಭೂಭಾಗಗಳು ಇಂದಿಗೂ ನಮಗೆ ಕಾಣ ಸಿಗುತ್ತವೆ ಎಂದರೆ ಅವೆಲ್ಲವೂ ಸತ್ಯ ಎಂಬುದನ್ನು ಜಗತ್ತಿಗೆ ಸಾರಿ ಹೇಳಬೇಕಾಗಿದೆ.
ಹಿಮಾಲಯದ ತಪ್ಪಲಿನಲ್ಲಿ ಕಾಲ ಕಾಲಕ್ಕೆ ತಕ್ಕಂತೆ ಭೂಕಂಪಗಳು ಆಗುತ್ತಲೇ ಇರುತ್ತವೆ. ಕಳೆದ ಎರಡು ವರ್ಷಗಳ ಹಿಂದೆ ನಡೆದ ಅಂತಹದ್ದೇ ಭೂಕಂಪದಲ್ಲಿ ಅರ್ಧಕ್ಕರ್ಧ ನೇಪಾಳ ರಾಷ್ಟ್ರ ವಿಪತ್ತಿಗೆ ಒಳಗಾಗಿ, ಜಲ ಪ್ರಳಯವಾಗಿ ಇನ್ನೂ ಚೇತರಿಸಿಕೊಳ್ಳುತ್ತಿರುವುದು ನಮಗೆಲ್ಲಾ ತಿಳಿದಿರುವ ವಿಷಯವೇ ಆಗಿದೆ. ಅಂತೆಯೇ ಸಾವಿರಾರು ವರ್ಷಗಳ ಹಿಂದೆ ಸರಸ್ವತಿ ನದಿ ಪಾತ್ರದಲ್ಲಾದ ಭೂಕಂಪದಿಂದಾಗಿ ಸರಸ್ವತಿ ನದಿ ಇಬ್ಬಾಗವಾಗಿ ಒಂದು ಭಾಗ ತಮಸಾ ನದಿಯ ಮೂಲಕ ಈಗಿನ ಯಮುನಾ ನದಿಗೆ ಸೇರಿಕೊಂಡಿತು ಮತ್ತು ಮತ್ತೊಂದು ಭಾಗ ಭೂಮಿಯೊಳಗೆ ಅಂತರ್ಮುಖಿಯಾಗುತ್ತದೆ.ಸರಸ್ವತಿಯ ಉಪನದಿಯಾದ ಶತಧೃ ಹರ್ಯಾಣದ ರೋಪಾರ್ ಬಳಿ (ಈಗಿನ ರೂಪ್ ನಗರ) U-Turn ತೆಗೆದುಕೊಂಡು ಇಂದಿನ ಹರಿಯಾಣದ ಬಳಿ ಸಟ್ಲೇಜ್ ನದಿಯ ಮುಖಂತರ ಬಿಯಾಸ್ ನದಿಯಲ್ಲಿ ಲೀನವಾಗುವ ಕಾರಣದಿಂದಾಗಿಯೇ ಸರಸ್ವತಿ ನದಿಯ ಪಾತ್ರ ಬದಲಾಯಿತು ಎಂದು ಹೇಳುತ್ತದೆ ನಮ್ಮ ಇತಿಹಾಸ. ಆದರೆ ಇಂದಿಗೂ ಕೂಡಾ ಸರಸ್ವತಿ ನದಿಯ ಪಾತ್ರದಲ್ಲಿದ್ದ ಹಲವಾರು ಉಪನದಿಗಳು ಮಳೆಗಾಲದಲ್ಲಿ ಉಕ್ಕಿಹರಿಯುತ್ತಿರುವುದನ್ನು ಕಾಣ ಬಹುದಾಗಿದೆ ಅಂತಹ ನದಿಗಳಲ್ಲಿ ಗಗ್ಗರ್ ನದಿಯೂ ಒಂದಾಗಿದೆ. ಮತ್ತು ಅದೇ ನದಿಯ ಪಾತ್ರದಲ್ಲಿದ್ದ ನೂರಾರು ಮೀಟರ್ಗಳ ಉದ್ದ ಮತ್ತು ಅಗಲದ ಹಲವಾರು ಸರೋವರಗಳು ಇಂದಿಗೂ ಪ್ರಸ್ತುತವಾಗಿರುವುದು ಸರಸ್ವತಿ ನದಿಯ ಉಪಸ್ಥಿತಿಯನ್ನು ಸಾರಿ ಹೇಳುತ್ತವೆ. ರಾಜಾಸ್ಥಾನದ ಮರುಭೂಮಿಯಲ್ಲಿ ಮಣ್ಣು ಪರೀಕ್ಷೆ ಮಾಡಿ ನೋಡಿದಾಗ ಸಾವಿರಾರು ವರ್ಷಗಳ ಹಿಂದೆ ಅಲ್ಲಿ ಒಕ್ಕಲುತನ ಮಾಡುತ್ತಿದ್ದ ಕುರುಹು ಸಿಕ್ಕಿದೆ.
ಗುಜರಾತಿನ ಧೋಲಾವೀರಾ ಬಳಿ ನಡೆದ ಉತ್ಕತನದಲ್ಲಿ ಸಿಕ್ಕ ಮಡಿಕೆ ಕುಡಿಕೆಗಳು, ಹೂಜಿಗಳು ಸುಟ್ಟ ಇಟ್ಟಿಗೆಗಳು ಸುಸಜ್ಜಿತವಾದ ರಸ್ತೆಗಳು ಮತ್ತು ಪಾದಾಚಾರಿ ರಸ್ತೆಗಳು ನೀರು ಸೂಕ್ತರೀತಿಯಲ್ಲಿ ಹರಿಯಲು ಕಾಲುವೆಗಳು ಅಲ್ಲಿ ಸಹಸ್ರಾರು ವರ್ಷಗಳ ಹಿಂದೆ ಒಂದು ಒಳ್ಳೆಯ ನಾಗರೀಕತೆ ಇತ್ತೆಂದು ಇಡೀ ಜಗತ್ತಿಗೇ ಸಾರಿ ಹೇಳುತ್ತಿವೆ. ಅದೇ ಅಲ್ಲದೆ ಆ ಭಾಗದ ಸುತ್ತಮುತ್ತಲಿನ ಸುಮಾರು ಹದಿನಾರು ಸರೋವರಗಳು ತುಂಬಿ ಅದೇ ನೀರಿನ್ನೇ ಇಂದಿಗೂ ಕೂಡ ಕುಡಿಯಲು ಮತ್ತು ಕೃಷಿಗೆ ಬಳೆಸಿಕೊಳ್ಳುತ್ತಿದ್ದಾರೆ ಎಂದರೆ ಅಂದಿನಕಾಲದಲ್ಲಿಯೇ ನಮ್ಮಲ್ಲಿ ಮಳೆ ಕೊಯ್ಲಿನ ಪದ್ದತಿ (Rain harvesting ) ಇತ್ತೆಂದು ಜಗಜ್ಜಾಹೀರಾತಾಗಿದೆ. ಹಾಗೂ ಇದೇ ಸರಸ್ವತಿ ನದಿಯನ್ನೇ ಜಲಸಾರಿಗೆಯಂತೆ ಉಪಯೋಗಿಸಿಕೊಂಡು ವ್ಯಾಪಾರ ಮತ್ತು ವಹಿವಾಟುಗಳನ್ನು ನಡೆಸುತ್ತಿದ್ದರು ಎಂದು ತಿಳಿದು ಬರುತ್ತದೆ.
ಇಷ್ಟೆಲ್ಲಾ ಇತಿಹಾಸವಿರುವ ಸರಸ್ವತಿ ನದಿ ಮತ್ತು ನದಿ ಪಾತ್ರವವನ್ನು ಹುಡಕಲೇ ಬೇಕೆಂದು ನಿರ್ಧರಿಸಿದ ಕೆಲವರು ಅದರಲ್ಲೂ ಮಾನನೀಯ ಶ್ರೀ ವಿಷ್ಣು ಶ್ರೀಧರ್ ವಾಕಣಕರ್ ಮತ್ತು ಶ್ರೀ ಮೋರೊಪಂತ ನೀಲಕಂಠ ಪಿಂಗಳೆಯವರ ನಾಲ್ಕು-ಐದು ವಿದ್ವಾಂಸರ ತಂಡ, ನವ ದೆಹಲಿಯ ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನ ತಂಡದ ನೇತೃತ್ವದಲ್ಲಿ ಸರಸ್ವತಿ ನದಿಯ ಪಾತ್ರದ ಅಡಿಯಿಂದ ಮುಡಿಯವರೆಗೂ ಸುಮಾರು ಮೂರು- ನಾಲ್ಕು ತಿಂಗಳಗಳ ಕಾಲ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ ಹಲವಾರು ಕಡೆ ಉತ್ಕತನಗಳನ್ನು ನಡೆಸಿ ಅಲ್ಲಿ ಸರಸ್ವತಿ ನದಿ ಮತ್ತು ಅದರ ಸುತ್ತಮುತ್ತಲಿನ ನಾಗರೀಕತೆಯ ಅಸ್ಥಿತ್ವ ಕಂಡು ಬಂದಿದೆ. ಮೀರಟ್ ಪ್ರದೇಶದ ಸಮೀಪದ ಭಾಗ್ಪತ್ ಎಂಬಲ್ಲಿನ ಉತ್ಕತನದಲ್ಲಿ ಯೋಧರು ಯುದ್ದಕ್ಕೆ ಉಪಯೋಗಿಸುತ್ತಿದ್ದ ರಥ, ಯುದ್ದಕ್ಕೆ ಬಳೆಸುತ್ತಿದ್ದ ಖಡ್ಗ ಅದರೆ ಜೊತೆ ಆನೆಯ ದಂತಗಳಿಂದ ಮಾಡಿದ ಕೆಲ ಆಟಿಕೆಗಳು ಬಾಚಣಿಗೆ ಮುಂತಾದ ವಸ್ತುಗಳು ಸಿಕ್ಕಿವೆ ಮತ್ತು ಶಾಸ್ತ್ರೋಕ್ತವಾಗಿ ಮೃತರ ಸಮಾದಿ ಮಾಡುತ್ತಿದ್ದ ಪದ್ದತಿ ಇತ್ತೆಂದು ತಿಳಿದು ಬರುತ್ತದೆ. ಅದೇ ರೀತಿ ಬಿ. ಬಿ ಲಾಲ್ ಅವರ ನೇತೃತ್ವದ ತಂಡ ಪಾಂಡವರ ರಾಜಧಾನಿ ಕೌಷಂಬಿಯನ್ನು ಉತ್ಖನ ಮಾಡಿ ಮಹಾಭಾರತದಲ್ಲಿ ಉಲ್ಲೇಖಿಸಲಾಗಿದ್ದ ಪ್ರದೇಶಗಳಿಗೂ ಇಲ್ಲಿಗೂ ಸಾಮ್ಯವಿದ್ದದ್ದು ಕಂಡು ಬಂದಿರುತ್ತದೆ ಅದರಲ್ಲೂ ವಿಶೇಷವಾಗಿ ಶ್ರೀಕೃಷ್ಣನು ಪಾಂಡವರ ಪರವಾಗಿ ಧೃರ್ಯೋಧನದ ಬಳಿ ಸಂಧಾನಕ್ಕೆಂದು ಬಂದು ಕೇಳಿದ ಐದು ಗ್ರಾಮಗಳಾದ ಪಾಣೀಪತ್, ಸೋನೆಪತ್, ಭಾಗ್ ಪತ್, ಇಂದ್ರಪ್ರಸ್ಥ ಮತ್ತು ತಿಲ್ ಪತ್ ಗ್ರಾಮಗಳು ಇಂದಿಗೂ ಸರಸ್ವತಿ ನದಿಯ ಪಾತ್ರದಲ್ಲಿ ಇರುವುದು ಗಮನಿಸ ಬೇಕಾದ ಆಂಶವಾಗಿದೆ.
ಇವೆಲ್ಲಾ ಸಾಕ್ಷಾಧಾರಗಳಿಂದ ಉತ್ಸಾಹಿತವಾದ ಪ್ರಸಕ್ತ ಹರ್ಯಾಣ ಸರ್ಕಾರ ಸರಸ್ವತಿ ನದಿಯ ಪುನಶ್ವೇತನಕ್ಕೆಂದೇ ಒಂದು ವೀಶೇಷವಾದ ಮಂಡಳಿಯನ್ನು ರಚಿಸಿ ಅದಕ್ಕೆ ಸಾಕಷ್ಟು ಪ್ರೋತ್ಸಾಹ ಧನವನ್ನು ಮೀಸಲಾಗಿಸಿ ಸರಸ್ವತಿ ನದಿಯನ್ನು ಮತ್ತೆ ಹಿಂದಿನ ರೀತಿಯಲ್ಲಿಯೇ ಪುನಶ್ವೇತನ ಗೊಳಿಸಲು ಕಠಿಬದ್ದರಾಗಿ ಹೊರಟಿರುವುದು ನಿಜಕ್ಕೂ ಶ್ಲಾಘನೀಯವಾದ ಸಂಗತಿಯಾಗಿದೆ. ಈಗಾಗಲೇ ಆ ನದಿ ಪಾತ್ರದಲ್ಲಿದ್ದ ಜನರನ್ನು ಒಕ್ಕಲೆಬ್ಬಿಸಿ ಅಲ್ಲಿ ಕಾಲುವೆಗಳನ್ನು ಮಾಡಿಸಿ ಮಳೆಗಾಲದಲ್ಲಿ ತುಂಬಿ ನೀರು ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ಕೆಲಸಗಳಿಗೂ ಸಂಘಪರಿವಾರ ಹಿರಿಯಣ್ಣನ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡುತ್ತಲಿದೆ. ಇದುವರೆಗೂ ನಡೆದಿರುವ ಕೆಲಸ ಮತ್ತು ಎಲ್ಲರ ಉತ್ಸಾಹಗಳನ್ನು ಗಮನಿಸಿದಲ್ಲಿ ಇನ್ನೂ ಕೆಲವೇ ವರ್ಷಗಳಲ್ಲಿ ಜೀವಂತ ಸರಸ್ವತಿ ನದಿಯನ್ನು ಕಾಣುವ ಸುಯೋಗ ನಮಗೆ ಖಂಡಿತವಾಗಿಯೂ ಬಂದೇ ಬರಲಿದೆ ಮತ್ತು ನದಿಯ ಪಾತ್ರದ ಸುತ್ತ ಮುತ್ತಲಿನ ಅಂದಿನ ನಾಗರೀಕತೆ ಮರುಕಳಿಸಿ ಭಾರತೀಯ ಜೀವನ ಪದ್ದತಿ ಮತ್ತು ಇತಿಹಾಸ ಜಗತ್ತಿನ ಎಲ್ಲಾ ಸಂಸ್ಕೃತಿಗಳಿಗಿಂತಲೂ ಹಳೆಯದ್ದಾಗಿದೆ ಎಂಬುದನ್ನು ಇಡೀ ಜಗತ್ತಿಗೇ ಸಾರಬಹುದಾಗಿದೆ ಎಂದು ತಿಳಿಸಿ ಶ್ರೀ ಕೃಷ್ಣಮೂರ್ತಿಗಳು ತಮ್ಮ ಮಾತನ್ನು ಮುಗಿಸಿ ಸಭಿಕರಿಂದ ತೂರಿಬಂದ ಪ್ರಶ್ನೆಗಳಿಗೆ ಸೂಕ್ತರೀತಿಯಲ್ಲಿ ಸಮರ್ಪಕ ಉತ್ತರ ನೀಡಿದರು ಅದೇ ರೀತಿ ಪ್ರಶ್ನೋತ್ತರ ವೇಳೆಯಲ್ಲಿಯೇ ಒಂದು ಹಂತದಲ್ಲಿ ಒಂದು ವಿಷಯದ ಬಗ್ಗೆ ಗಹನವಾದ ಚರ್ಬೆ ನಡೆದು ತಾರಕ್ಕಕ್ಕೇರಿದರೂ ಕೃಷ್ಣಮೂರ್ತಿಗಳು ತಮ್ಮಆಪಾರ ಅನುಭವ ಮತ್ತು ತಾಳ್ಮೆಯಿಂದ ಜಾಣ್ಮೆಯ ಉತ್ತರ ನೀಡಿ ಚರ್ಚೆಯನ್ನು ತಹಬದಿಗೆ ತಂದಿದ್ದದ್ದು ಎಲ್ಲರ ಮನಸೂರೆಗೊಂಡಿತು.
ಒಬ್ಬ ಸಭಿಕಾನಾಗಿ ಅವರ ಆಳವಾದ ವಿಷಯ ಮಂಡನೆ ಕೇಳುತ್ತಾ ಹೋದಂತೆ ನಾವೆಲ್ಲೋ ತ್ರೇತಾಯುಗ ಇಲ್ಲವೇ ದ್ವಾಪರಯುಗದಲ್ಲಿ ಇದ್ದೇವೇನೋ ಎಂಬಂತೆ ಭಾಸವಾಗಿ ಅವರು ಹೇಳಿದ ಅನೇಕ ಅಂಕಿ ಅಂಶಗಳನ್ನು ಮತ್ತು ವಿಷಯಗಳನ್ನು ನಾನು ದಾಖಲು ಮಾಡಿಕೊಳ್ಳುವುದನ್ನು ಮರೆತಿದ್ದೇನೆ. ಹಾಗಾಗಿ ನನ್ನೀ ವರದಿಗಿಂತಲೂ ಅವರು ಪ್ರಸ್ತಾಪಿಸಿದ ಅನೇಕ ವಿಷಯಗಳನ್ನು ಅವರ ಬಾಯಿಯಿಂದಲೇ ಕೇಳಿದ್ದರೇ ಸೂಕ್ತ ಎಂದನಿಸುತ್ತದೆ. ಇಷ್ಟು ಸಣ್ಣ ವಯಸ್ಸಿನ ಕೃಷ್ಣಮೂರ್ತಿಗಳು ಕಳೆದ ಇಪ್ಪತ್ತು-ಇಪ್ಪತ್ತೈದು ವರ್ಷಗಳಿಂದ ಸಾವಿರಾರು ಭಾರತೀಯ ಇತಿಹಾಸ ಕುರಿತಾದ ಪುಸ್ತಕಗಳನ್ನು ಓದಿ ಅಪಾರವಾದ ಜ್ಞಾನ ಸಂಪಾದನೆ ಮಾಡಿ, ಯಾವ ಬ್ರಿಟೀಷರು ನಮ್ಮನ್ನು ಹತ್ತಿಕ್ಕಲು ಮತ್ತು ನಮ್ಮ ನಮ್ಮಲ್ಲಿಯೇ ಜಗಳವನ್ನು ತಂದಿಡಲು ಸುಳ್ಳು ಸುಳ್ಳು ಕಾಲ್ಪನಿಕ ಇತಿಹಾಸವನ್ನು ಮೆಕಾಲೇ ಶಿಕ್ಷಣ ಪದ್ದತಿಯ ಪುಸ್ತಕಗಳ ಮೂಲಕ ನಮ್ಮೆಲ್ಲರ ಮಸ್ತಕದಲ್ಲಿ ತುಂಬಿದ್ದಾರೋ ಅದೆಲ್ಲವನ್ನೂ ಇಂತಹ ನೂರಾರು ಇತಿಹಾಸ ಸಂಕಲನಕಾರರ ಪರಿಶ್ರಮದಿಂದ ನಿಜವಾದ ಭಾರತೀಯ ಇತಿಹಾಸ, ನಾಗರೀಕತೆ ಮತ್ತು ಸಂಸ್ಕೃತಿಗಳನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ಇನ್ನು ಕೆಲವೇ ವರ್ಷಗಳಲ್ಲಿ ಕಲಿಸಬಹುದು ಎಂದರೆ ಉತ್ಪೇಕ್ಷೆಯೇನಲ್ಲ.
ಶ್ರೀಯುತ ಕೃಷ್ಣಮೂರ್ತಿಗಳೊಂದಿಗೆ ಬಂದಿದ್ದ ಮತ್ತೊಬ್ಬ ಯುವ ಇತಿಹಾಸ ಸಂಕಲನಕಾರ ಶ್ರೀ ವಾಗೀಶ್ ಕೂಡ ನಶಿಸಿ ಹೋಗುತ್ತಿರುವ ಅನೇಕ ಹಸ್ತಪ್ರತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ನಮ್ಮೆಲ್ಲಾ ಗ್ರಂಥಗಳು ಇನ್ನೂ ನಾಲ್ಕು ನೂರು- ಐದು ನೂರು ವರ್ಷಗಳ ವರೆಗೂ ಮುಂದಿನ ಹತ್ತಾರು ತಲೆಮಾರಿನವರೆಗೆ ಉಳಿಯಬೇಕೆಂದರೆ ತಾಳೇ ಗರಿಯಲ್ಲಿ ಬರೆದಿಡುವುದೇ ಸೂಕ್ತ ಎಂದು ಮಂಡಿಸಿದರು. ಈಗಿನ ಕಾಗದ ಪುಸ್ತಕ ಹೆಚ್ಚೆಂದರೆ 60-80 ವರ್ಷಗಳವರೆಗೆ ಉಳಿಯಬಹುದು. ಇನ್ನೂ ಅದನ್ನು ಡಿಜಿಟಲೀಕರಣ ಮಾಡಿಟ್ಟಲ್ಲಿ ಅವೆಲ್ಲವನ್ನೂ ರಕ್ಷಿಸಿದ ಹಾರ್ಡ್ ಡಿಸ್ಕ್ ತೊಂದರೆಯಾದಲ್ಲಿ ಅಥವಾ ಕ್ಲೌಡ್ನಲ್ಲಿ ಸಂಗ್ರಹಿಸಿಟ್ಟ ವಿಷಯಗಳನ್ನು ಬಳೆಸಲು ಸಾಧ್ಯವಾಗದ ಪರಿಸ್ಥಿತಿ ಬಂದೊದಗಿದಲ್ಲಿ ನಮ್ಮ ಬಳಿಯೇ ಸಂಗ್ರಹಿಸಿ ಇಟ್ಟು ಕೊಳ್ಳಬಹುದಾದ ನೂರಾರು ವರ್ಷಗಳಷ್ಟು ದಿನ ಉಳಿಯುವ ತಾಳೇ ಗರಿಯೇ ಸೂಕ್ತ ಎಂದು ತಿಳಿಸಿದರು.
ಇದರ ಅಂಗವಾಗಿ ಮೇಲುಕೋಟೆಯ ವಯೋ ವೃದ್ಧ ಪಂಡಿತರಾದ ಶ್ರೀ ತಾತಾಚಾರ್ ಅವರ ಸಮ್ಮುಖದಲ್ಲಿ ನಮ್ಮೆಲ್ಲಾ ಧಾರ್ಮಿಕ ಗ್ರಂಥಗಳನ್ನು ತಾಳೇಗರಿಯಲ್ಲಿ ಬರೆದಿಡುವ ಅಭಿಯಾನ ಶುರುವಾಗಿದೆ. ಹಾಗೆ ಬರೆದು ಕೊಡುವವರಿಗೆ ಎಲ್ಲಾ ರೀತಿಯ ಸಲಕರಣೆಗಳೊಂದಿಗೆ ಸೂಕ್ತ ಸಂಭಾವನೆಯನ್ನೂ ಕೊಡುವುದಾಗಿ ತಿಳಿಸಿದರು. ಈ ಆಭಿಯಾನದಲ್ಲಿ ಭಾಗವಹಿಸಲು ಇಚ್ಚಿಸುವವರು 9972899775/ 9880189873 ಈ ನಂಬರಿಗೆ ಕರೆ ಮಾಡಿದಲ್ಲಿ ಅವರ ಕಡೆಯಿಂದ ಸೂಕ್ತ ತರಭೇತಿಯನ್ನು ನೀಡಲಾಗುವುದು ಎಂದು ತಿಳಿಸಿ, ಈಗಾಗಲೇ ಬೆಂಗಳೂರಿನ ಒಂದು ತಂಡ ಒಂದೀಡೀ ಗ್ರಂಥವನ್ನು ತಾಳೇಗರಿಗೆ ಲಿಪ್ಯಂತರ ಗೊಳಿಸಿ ಲೋಕಾರ್ಪಣೆ ಮಾಡಲಾಗಿದೆ ಎಂದು ತಿಳಿಸಿದರು.
ಇತಿಹಾಸ ಸಂಕಲನದ ಬಗ್ಗೆ ಈ ಕೆಳಕಂಡ ವಿಧಾನಗಳಲ್ಲಿ ಹೆಚ್ಚಿನ ವಿಷಯಗಳನ್ನು ಅರಿತು ಕೊಳ್ಳಬಹುದು ಎಂದು ತಿಳಿಸಿದರು.
http://www.trueindianhistory.org
ಮೀಮಿಂಚೆ : itihasablr@gmail.com
Face Book : Bharatiya Itiasa Sankalana Samithi
ಕಾರ್ಯಕ್ರಮವನ್ನು ಶ್ರೀ ಜಯಂತ್ ಅವರು ಸರಳ ಮತ್ತು ಸುಂದರವಾಗಿ ನಿರೂಪಣೆ ಮಾಡಿದರೆ, ಎಂದಿನಂತೆ ಶ್ರೀಕಂಠ ಬಾಳಗಂಚಿಯವರ ವಂದಾನಾರ್ಪಣೆ ಮತ್ತು ಶ್ರೀಮತಿ ಶೃತಿಕೀರ್ತಿ ಸುಬ್ರಹ್ಮಣ್ಯರವರ ಕಂಚಿನ ಕಂಠದೊಂದಿಗೆ ಬಂದಿದ್ದವರೆಲ್ಲರ ಒಕ್ಕೊರಲಿನ ವಂದೇಮಾತರಂನೊಂದಿಗೆ ಈ ತಿಂಗಳ ಮಂಥನ ಭಾರತ ಮತ್ತು ಪಾಕೀಸ್ಥಾನಗಳ ನಡುವಿನ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದ್ದಾಗಲೂ ಅತ್ಯಂತ ಹೆಚ್ಚಿನ ಸಂಖ್ಯೆಯ ಆಸಕ್ತ ಸಭಿಕರ ಸಮ್ಮುಖದಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು.
ಮುಂದಿನ ತಿಂಗಳ ಮೂರನೇ ಭಾನುವಾರ ಮತ್ತೊಂದು ರೋಚಕವಾದ ವಿಷಯದೊಂದಿಗೆ ಮತ್ತೆ ಇದೇ ಸಮಯದಲ್ಲಿ ಇದೇ ಜಾಗದಲ್ಲಿ ಭೇಟಿಯಾಗೋಣ. ಅಲ್ಲಿಯವರೆಗೂ ನಮ್ಮ ದೇಶದ ನಿಜವಾದ ಇತಿಹಾಸವನ್ನು ಮತ್ತು ಸಂಸ್ಕೃತಿಗಳನ್ನು ನಾವುಗಳು ಸರಿಯಾದ ರೀತಿಯಲ್ಲಿ ಆಭ್ಯಸಿಸಿ ಅದನ್ನೇ ನಮ್ಮ ಮಕ್ಕಳಿಗೆ ಕಲಿಸುವುದರ ಮೂಲಕ ನಮ್ಮ ನಮ್ಮ ಭಾರತ ದೇಶವನ್ನು ಆದಷ್ಟು ಶೀಘ್ರದಲ್ಲಿಯೇ ಮತ್ತೊಮ್ಮೆ ವಿಶ್ವ ಗುರುವಾಗಿಸುವ ಮಹತ್ಕಾರ್ಯದಲ್ಲಿ ನಮ್ಮ ಅಳಿಲು ಪ್ರಯತ್ನವನ್ನು ಮುಂದುವರಿಸೋಣ.
ಏನಂತೀರೀ?
good information. i was told during my visit to badrinath that saraswati river born there hardly flows about 800mts and becomes guptagamini once it joins alkananda..is there any information on that..
LikeLike