ಹೊಸದಾಗಿ ಮದುವೆಯಾದ ಸಹೋದ್ಯೋಗಿ ಸುಮಾರು ಎಂಟು ಗಂಟೆಯಾದರೂ ಇನ್ನೂ ಕಛೇರಿಯಲ್ಲಿಯೇ ಇದ್ದದ್ದನ್ನು ಗಮನಿಸಿದ ನಾನು, ಏನಪ್ಪಾ ರಾಜಾ, ಮನೆಗೆ ಹೋಗುವುದಿಲ್ಲವಾ? ಮೊನ್ನೆ ಮೊನ್ನೆ ತಾನೇ ಮದುವೆ ಆಗಿದ್ದೀಯಾ,ನಿಮ್ಮ ಮನೆಯಲ್ಲಿ ನಿಮ್ಮ ಮನೆಯವರು ಒಬ್ಬರೇ ಇರುತ್ತಾರೆ ಮತ್ತು ನಿನ್ನ ಆಗಮನವನ್ನೇ ಕಾಯುತ್ತಿರುತ್ತಾರೆ. ಪರವಾಗಿಲ್ಲಾ ನಾಳೆ ಕೆಲಸ ಮುಂದುವರಿಸುವಂತೆ ಎಂದು ತಿಳಿಹೇಳಿದೆ. ಅದಕ್ಕವನು ಸಾರ್, ಹಾಗೇನಿಲ್ಲ ಸಾರ್. ಮನೆಯಲ್ಲಿ ಯಾರೂ ಇಲ್ಲಾ. ಸುಮ್ಮನೆ ಮನೆಗೆ ಹೋಗಿ ಮಾಡಲು ಏನೂ ಕೆಲಸ ಇಲ್ಲ. ಅದೇ ಟಿವಿ ನೋಡುವ ಬದಲು ಎಲ್ಲಾ ಕೆಲಸ ಮುಗಿಸ್ತಾಇದ್ದೀನಿ ಅಂದ. ಯಾಕೇ? ಮನೆಯವರು ಇಲ್ವಾ? ಎಲ್ಲಿಗೆ ಹೋಗಿದ್ದಾರೆ ಅಂತಾ ಕೇಳಿದ್ದಕ್ಕೆ. ಸ್ವಲ್ಪ ಬೇಸರದಿಂದ. ಸಾರ್ ಹೋದವಾರನೇ ಅವರ ಅಪ್ಪಾ ಅಮ್ಮಾ ಬಂದು ಆಷಾಡ ಮಾಸ ಅಂತ ತವರಿಗೆ ಕರೆದುಕೊಂಡು ಹೋದ್ರು ಅಂದ. ಓಹೋ!! ರಾಯರ ಬೇಸರಕ್ಕೆ ಇದಾ ಕಾರಣ. ಹಾಗಿದ್ರೆ ರಾಯರು ಮದುವೆಯಾದ ಮೇಲಿನ ಬ್ರಹ್ಮಚಾರಿ ಎಂದು ಅವನ ಕಾಲೆಳೆದು ನಮ್ಮ ಮೊದಲ ಆಷಾಡದ ವಿರಹ ವೇದನೆಯನ್ನು ನೆನೆಸಿ ಕೊಂಡೆ.
ಮದುವೆಯಾದ ಮೊದಲ ವರ್ಷದ ಆಷಾಡ ಮಾಸದಲ್ಲಿ ಅತ್ತೆ ಸೊಸೆ ಒಂದೇ ಸೂರಿನಡಿಯಲ್ಲಿ ಇರಬಾರದೆಂಬ ಶಾಸ್ತ್ರದ ಪ್ರಕಾರ ನಮ್ಮ ಮನೆಯವರನ್ನು ನಮ್ಮ ಮನೆಯಿಂದ ಸುಮಾರು ಮೂರ್ನಾಲ್ಕು ಕಿಮೀ ದೂರದಲ್ಲಿಯೇ ಇದ್ದ ಅವರ ತವರು ಮನೆಗೆ ಕಳುಹಿಸಿದ್ದೆವಾದರೂ ಅಗಾಗ ಕಛೇರಿ ಮುಗಿಸಿ ಸಂಜೆ ಭೇಟಿಯಾಗಲು ತೊಂದರೆ ಇರಲಿಲ್ಲ. ವಾಸ್ತವವಾಗಿ ಆ ಒಂದು ತಿಂಗಳಿನಲ್ಲಿಯೇ ನಾವು ಅತ್ಯಂತ ಹೆಚ್ಚಿನ ಸಮಯ ಕಳೆದಿದ್ದೆವು. ಬಹಳಷ್ಟು ದಿನ ಸಂಜೆ ನೇರವಾಗಿ ನಮ್ಮ ಮನೆಯವರ ಕಛೇರಿಗೆ ಹೋಗಿ ಅವಳನ್ನು ಕರೆದುಕೊಂಡು ಸುತ್ತದ ಜಾಗವಿಲ್ಲ ತಿನ್ನದೇ ಇರುವ ಪ್ರದೇಶಗಳೇ ಇಲ್ಲವೇನೋ. ಇಂದಿಗೂ ನಮ್ಮಾಕಿ, ನೀವು ತುಂಬಾ ಬದಲಾಗಿದ್ದೀರಿ, ಮುಂಚಿನಂತೆ ಎಲ್ಲಿಗೂ ಕರೆದು ಕೊಂಡು ಹೋಗುವುದೇ ಇಲ್ಲಾ ಎಂದು ಮೊದಲ ಆಷಾಡ ಮಾಸದ ಮೆಲಕನ್ನೇ ಹಾಕುತ್ತಿರುತ್ತಾಳೆ. ನಿಜಕ್ಕೂ ಹೇಳಬೇಕೆಂದರೆ, ಆಷಾಡ ಮಾಸದ ಸಮಯ ಬೇಸಾಯದ ಸಮಯ. ಆಗಷ್ಟೇ ಮಳೆ ಬಿದ್ದು ಭೂಮಿ ಹಸನಾಗಿರುತ್ತದೆ. ರೈತಾಪಿ ಜನರು ಭೂಮಿಯನ್ನು ಚೆನ್ನಾಗಿ ಉತ್ತಿ ಬೀಜ ಬಿತ್ತುವ ಕಾಯಕದಲ್ಲಿ ತೊಡಗಿರುತ್ತಾರೆ. ಹಾಗಾಗಿ ಹೊಸದಾಗಿ ಮದುವೆಯಾಗಿರುವವರು ಅದೇ ಗುಂಗಿನಲ್ಲಿಯೇ ಹೆಂಡತಿಯ ಸೆರಗಿನಲ್ಲಿಯೇ ಇದ್ದು ಬೇಸಾಯದಿಂದ ವಿಮುಖರಾಗದಿರಲೆಂದು ಈ ಪದ್ದತಿಯನ್ನು ನಮ್ಮ ಹಿರಿಯರು ಮಾಡಿರಬಹುದು ಎನ್ನುವುದು ನನ್ನ ಅಭಿಪ್ರಾಯ. ಸಂಬಂಧೀಕರ ಇಲ್ಲವೇ ಸ್ನೇಹಿತರ ಶುಭಸಮಾರಂಭಕ್ಕೆ ಅಂದೆಲ್ಲಾ ಕನಿಷ್ಟ ಪಕ್ಷ ಒಂದು ವಾರದ ಮುಂಚೆಯೇ ಬಂದು ಸಮಾರಂಭ ಮುಗಿದ ಒಂದು ವಾರದವರೆಗೂ ಅಲ್ಲಿಯೇ ಇದ್ದು ಸಂಭ್ರಮಿಸುವ ಪರಿಪಾಠವಿದ್ದ ಕಾರಣ, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗ ಬಾರದೆಂಬ ಕಾರಣದಿಂದಾಗಿ ಈ ತಿಂಗಳಿನಲ್ಲಿ ಯಾವುದೇ ಶುಭ ಕಾರ್ಯಗಳಾಗಲೀ, ಶುಭ ಸಮಾರಂಭಗಳನ್ನೂ ಮಾಡುವುದಿಲ್ಲ. ಇಂದಿಗೆ ಬೇಸಾಯ ಮಾಡುವವರೇ ಕಡಿಮೆಯಾಗಿ ಹೋದರೂ ಆ ಪದ್ದತಿಯನ್ನು ಇನ್ನೂ ಹಾಗೆಯೇ ಮುಂದುವರಿಸಿಕೊಂಡು ಬಂದಿರುವುದು ಅನೇಕ ನವ ದಂಪತಿಗಳ ವಿರಹ ವೇದನೆಗೆ ಕಾರಣವಾಗಿರುವುದು ನಿಜಕ್ಕೂ ದೌರ್ಭಾಗ್ಯ. ಕಾಲ ಬದಲಾದಂತೆ ಬಹುತೇಕ ಪದ್ದತಿಗಳು ಬದಲಾದರೂ ಇದೊಂದು ಮಾತ್ರ ಹಾಗೆಯೇ ಉಳಿದುರುವುದು ನಿಜಕ್ಕೂ ನವದಂಪತಿಗಳ ಪಾಲಿಗೆ ಶೋಚನೀಯವೇ ಸರಿ.
ಇನ್ನು ನಾವು ಬಾಲ್ಯದಲ್ಲಿದ್ದಾಗ ನಮಗೆಲ್ಲಾ ಆಷಾಡ ಮಾಸ ಬಂದಿತೆಂದರೆ ನಮಗೆ ಸಂಭ್ರಮವೋ ಸಂಭ್ರಮ. ಆಷಾಡ ಮಾಸದಲ್ಲಿ ಗಾಳಿ ಹೆಚ್ಚಾಗಿರುವ ಕಾರಣ ನಮಗೆಲ್ಲಾ ಗಾಳಿಪಟ ಹಾರಿಸುವ ಆನಂದ. ಹಾಗಾಗಿ ನಮ್ಮ ಕಡೆ ಆಷಾಢ ಮಾಸದ ಪ್ರಥಮ ಏಕದಶಿಯಂದು ಗಾಳೀಪಟದ ವನ್ನು ಆಚರಿಸುತ್ತಾರೆ. ಪ್ರಥಮ ಏಕಾದಶಿಯಂದು ಗಾಳೀ ಪಟ ಹಬ್ಬವಿದ್ದರೂ ನಮಗೆಲ್ಲಾ ಇಡೀ ತಿಂಗಳೂ ಗಾಳಿ ಪಟ ಹಾರಿಸುವುದೇ ಆಟ. ಗಾಳಿಪಟ ಹಬ್ಬ ಬರುವುದಕ್ಕೆ ಮುಂಚೆಯೇ ಅದಕ್ಕೆ ಜೋರು ತಯಾರಿ ನಡೆದಿರುತ್ತದೆ. ಪಟಕ್ಕೆ ಮುಖ್ಯ ಆಧಾರವಾದ ದಾರ. ದಾರ ಗಟ್ಟಿ ಇಲ್ಲದಿದ್ದಲ್ಲಿ ಗಾಳಿಯ ರಭಸಕ್ಕೆ ಪಟದ ಜಗ್ಗಾಟಕ್ಕೆ ಕಿತ್ತು ಹೋಗಿ ಪಟ ದಿಕ್ಕಾಪಾಲಾಗಿ ಹೋಗುತ್ತದೆ. ಹಾಗಾಗಿ ಮೊದಲು ದಾರವನ್ನು ಗಟ್ಟಿ ಮಾಡಿಕೊಳ್ಳುವುದಕ್ಕಾಗಿಯೇ ಮಾಂಜಾ ಹಾಕುವ ಪ್ರಕ್ರಿಯೆ ಶುರುವಾಗುತ್ತದೆ. ಗಾಜನ್ನು ಸಣ್ಣ ಸಣ್ಣದಾಗಿ ಪುಡಿ ಮಾಡಿ ಅದಕ್ಕೆ ಮರದ ಅಂಟು ಅರ್ಥಾತ್, ಗೊಂದು ಇಲ್ಲವೇ ಮರವಜ್ರವನ್ನು ಕಾಯಿಸಿ ದ್ರವರೂಪಕ್ಕೆ ತಂದು ಅದಕ್ಕೆ ಪುಡಿ ಮಾಡಿದ ಗಾಜಿನ ಪುಡಿಯನ್ನು ಹಾಕಿ ಚೆಂದವಾಗಿ ಕಾಣಲು ಬಣ್ಣವನ್ನು ಬೆರೆಸಿ ಆ ದ್ರಾವಣವನ್ನು ಬಟ್ಟೆಯಲ್ಲಿ ಅದ್ದಿಕೊಂಡು ದಾರಕ್ಕೆ ಬಳಿಯುವುದಕ್ಕೇ ಮಾಂಜಾ ಹಾಕುವುದು ಎನ್ನುತ್ತಾರೆ. ಮರವಜ್ರ ಇಲ್ಲವೇ ಗೋಂದಿನ ಬದಲಾಗಿ ಅನ್ನದ ಗಂಜಿಯೋ ಇಲ್ಲವೇ ಮೈದ ಗಂಜಿಯನ್ನೂ ಬಳೆಸುವುದೂ ವಾಡಿಕೆಯಲ್ಲಿದೆ. ಮಾಂಜಾ ಹಾಕುವ ಮುನ್ನಾ ಎರಡು ದೊದ್ಡ ಮರಗಳ ಕೊಂಬೆಗಳಿಗೋ ಇಲ್ಲವೇ ಒಂದು ಮನೆಯ ಗೇಟಿನಿಂದ ಮತ್ತೊಂದು ಮನೆಯ ಗೇಟಿಗೆ ದಾರವನ್ನು ಉದ್ದ ಉದ್ದವಾಗಿ ಕಟ್ಟಿ ಕೈಗೆ ಬಟ್ಟೆ ಕಟ್ಟಿಕೊಂಡು ಮಾಂಜಾ ಹಾಕುತ್ತಾರೆ. ಈ ಪ್ರಕ್ರಿಯೆಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕೈ ಕೊಯ್ದುಕೊಂಡು ರಕ್ತ ಬರುವ ಸಂಭವ ಇದ್ದರೂ, ಒಂದು ಪಕ್ಷ ಕೈ ಕೊಯ್ದು ಕೊಂಡು ರಕ್ತ ಬಂದರೂ ಅದನ್ನೇ ಶೌರ್ಯದ ಪ್ರತೀಕ ಎಂದು ಬಿಂಬಿಸುವ ಪರಿಪಾಠವಿತ್ತು. ಹಾಗೆ ಮಾಂಜಾ ಹಾಕಿ ಒಣಗಿಸಿದ ದಾರವನ್ನು ಮರದ ರಾಟೆ ಇಲ್ಲವೇ ಡೀಲ್ನಲ್ಲಿ ಸುತ್ತಿಟ್ಟು ಯಾರ ಬಳಿ ದೊಡ್ದ ದೊಡ್ಡದಾದ ಡೀಲ್ ಇರುತ್ತದೋ ಅವನೇ ಆ ಮಕ್ಕಳ ನಡುವೆ ಹೀರೋ ಎನ್ನುವ ಭಾವ ಇರುತ್ತಿತ್ತು . ಸಾಧಾರಣವಾಗಿ ಮರದ ರಾಟೆಗಳು ಮಗ್ಗದವರ ಬಳಿ ಇರುತ್ತಿದ್ದರಿಂದ ಅವರನ್ನು ಕಾಡಿ ಬೇಡಿ ಹಳೆಯ ರಾಟೆಗಳನ್ನು ತಂದು ಅದಕ್ಕೆ ಮಾಂಜ ಹಾಗಿದ ದಾರವನ್ನು ಜೋಪಾನವಾಗಿ ಸುತ್ತುತ್ತಿದ್ದೆವು.
ಇನ್ನೂ ಗಾಳಿಪಟ ಮಾಡಲು ಮನೆಯಲ್ಲಿರುವ ಹಳೇ ವೃತ್ತಪತ್ರಿಕೆ ಮತ್ತು ತೆಂಗಿನ ಕಡ್ದಿಯ ಪೊರಕೆಯ ಕಡ್ಡಿಗಳು ಮತ್ತು ಅಂಟಿಸಲು ಗೋಂದು ಇದ್ದರೆ ಸಾಕು. ಬಹಳಷ್ಟು ಸಲಾ ಗೋಂದು ಇಲ್ಲದ ಕಾರಣ ಅನ್ನ ಇಲ್ಲವೇ ರಾಗಿ ಮುದ್ದೆಯನ್ನೇ ಅಂಟಿಸಲು ಬಳೆಸಿರುವ ಉದಾರಣೆಗಳಿಗೆ. ಚಚ್ಚೌಕವಾಗಿ ಪತ್ರಿಕೆಯನ್ನು ಕತ್ತರಿಸಿಕೊಂಡು ಅದರ ಎರಡೂ ತುದಿಗಳಿಗೆ ಸರಿಯಾಗಿ ಬಿಲ್ಲಿನಂತೆ ಬಾಗುವ ಹಾಗೆ ಸಾಲುವ ಕಡ್ದಿಯನ್ನು ಅಂಟಿಸಿ ಅದರ ಮೇಲೆ ಬಾಣದ ಆಕಾರದಲ್ಲಿ ಮತ್ತೊಂದು ತೆಂಗಿನ ಕಡ್ಡಿಯನ್ನು ಅಂಟಿಸಿ ಕಡ್ಡಿಯ ಎಲ್ಲಾ ತುದಿಗಳು ಮತ್ತು ಕಡ್ಡಿಗಳು ಒಂದು ಗೂಡುವ ಕಡೆಗಳಲ್ಲಿ ಭದ್ರವಾಗಿ ಚಚ್ಚೌಕಾರವಾಗಿ ಕತ್ತರಿಸಿದ ಕಾಗದ ತುಣುಕುಗಳನ್ನು ಅಂಟಿಸಿ ಬಾಣದ ಹಾಗೆ ಇರುವ ತಳ ತುದಿಗೆ ಉದ್ದನೆಯ ಬಾಲಗಂಚಿಯನ್ನು ಅಂಟಿಸಿದರೆ ಗಾಳಿಪಟ ತಯಾರು. ಗಾಳಿಪಟ ಸರಿಯಾಗಿ ಹಾರಲು ನಾವು ಹಾಕುವ ಸೂತ್ರ ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಗಾಳಿಪಟದ ಮೇಲ್ತುದಿ ಮತ್ತು ಕೆಳತುದಿಯಿಂದ ಸಮಾನ ಅಂತರದಲ್ಲಿ ಬಾಣದ ಹಾಗೆ ಅಂಟಿಸಿರುವ ಕಡ್ದಿಯ ಇಕ್ಕೆಲಗಳಲ್ಲಿ ದಾರ ತೂರುವಷ್ಟು ಎರಡು ರಂಧ್ರಗಳನ್ನು ಮಾಡಿ ಅದರೊಳಗೆ ದಾರ ತೂರಿಸಿ ಅದನ್ನು ಸರಿಯಾಗಿ ಮಧ್ಯಕ್ಕೆ ಬರವ ಹಾಗೆ ಒಂದು ಗಂಟು ಹಾಕಿದರೆ ಗಾಳಿಪಟ ಸಿದ್ಧ. ಆ ಸೂತ್ರದ ಮಧ್ಯಕ್ಕೆ ಸರಿಯಾಗಿ ರಾಟೆಯಲ್ಲಿ ಸುತ್ತಿಟ್ಟಿದ್ದ ದಾರದ ತುದಿಯನ್ನು ಕಟ್ಟಿದಲ್ಲಿ ಗಾಳಿಪಟ ಹಾರಲು ಸಿದ್ಧ. ಸಾಧಾರಣವಾಗಿ ಪಟದ ಎರಡೂ ತುದಿಯನ್ನು ಗಾಳಿಬೀಸುವ ದಿಕ್ಕಿನಲ್ಲಿ ಒಬ್ಬ ಹಿಡಿದು ಕೊಂಡರೆ ಮತ್ತೊಬ್ಬ ದಾರವನ್ನು ಹಿಡಿದುಕೊಂಡು ಜೋರಾಗಿ ಗಾಳಿಯತ್ತ ಗಾಳಿಪಟವನ್ನು ತೂರಿಬಿಡುತ್ತಾನೆ. ಆಗ ದಾರ ಹಿಡಿದಿರುವಾತ ಗಾಳಿಗೆ ತಕ್ಕಂತೆ ಮೇಲೆ ಏರುವ ಪಟಕ್ಕೆ ಅಗತ್ಯವಾದಷ್ಟು ದಾರವನ್ನು ಬಿಡುತ್ತಾ , ಆಗಾಗ ದಾರವನ್ನು ಕೆಳೆಗೆ ಇಲ್ಲವೇ ಆಚಿವೆ ಎಳೆಯುತ್ತಾ ಪಟವನ್ನು ಹಾರಿಸುತ್ತಾನೆ. ಸೂತ್ರ ಸರಿಯಾಗಿ ಇದ್ದು ಬಾಲಗೋಂಚಿಯ ಭಾರ ಸರಿಯಾಗಿದ್ದಲ್ಲಿ ಗಾಳಿಯ ರಭಸಕ್ಕೆ ಪಟ ಕೆಲವೇ ಕ್ಷಣಗಳಲ್ಲಿ ಬಾನೆತ್ತರಕ್ಕೆ ಹಾರುತ್ತದೆ. ಅದರಲ್ಲಿ ಯಾವುದೇ ಒಂದು ಸರಿಇಲ್ಲದಿದ್ದಲ್ಲಿ, ಗಿರಿಗಿರನೇ ಸುತ್ತುತ್ತಾ ಅಲ್ಲಿಯೇ ಬಿದ್ದು ಬಿಡುತ್ತದೆ. ಹಾಗೆ ಬಿದ್ದಾಗ ಅದನ್ನು ಲಾಂಡ ಪಟ ಎಂದು ಕರೆಯುತ್ತಾರೆ. ಕೂಡಲೇ ಆ ಪಟದ ಸೂತ್ರವನ್ನೋ ಇಲ್ಲವೇ ಬಾಲಗೋಂಚಿ ಭಾರವನ್ನು ಹೆಚ್ಚು ಕಡಿಮೆ ಮಾಡಿ ಯಶಸ್ವಿಯಾಗಿ ಆಗಸದತ್ತ ಹಾರಿಸಿದಾಗ ಆಗುವ ಆನಂದವನ್ನು ಪದಗಳಲ್ಲಿ ವರ್ಣಿಸುವುದಕ್ಕಿಂತ ಅನುಭವಿಸಿದರೇ ಹೆಚ್ಚು ಆನಂದಮಯ.
ಸಾಧಾರವಾಗಿ ಮೈದಾನಗಳಲ್ಲಿ ಅನೇಕರು ಇದೇ ರೀತಿ ಗಾಳಿಪಟವನ್ನು ಮಾಡಿ ಹಾರಿಸುತ್ತಿರುವಾಗ ಅವರಿಗೆ ಅರಿವಿಲ್ಲದಂತೆಯೇ ಒಂದು ರೀತಿಯ ಸ್ವರ್ಧೆ ಎರ್ಪಟ್ಟು ಯಾರ ಪಟ ಹೆಚ್ಚು ಮೇಲೆ ಏರುತ್ತದೆ? ಯಾರ ಪಟ ಅತ್ಯಂತ ದೀರ್ಘಕಾಲ ಬಾನಿನಲ್ಲಿ ಹಾರಡುತ್ತದೆ ಎನ್ನುವುದರ ಮೇಲೆ ಫಲಿತಾಂಶ ನಿರ್ಧರಿಸಲ್ಪಡುತ್ತದೆ. ಕೆಲವೊಮ್ಮೆ ಒಬ್ಬರ ಮೇಲೆ ಒಬ್ಬರಿಗೆ ವೈಮನಸ್ಯವಾಗಿ ಒಬ್ಬರ ಪಟವನ್ನು ಮತ್ತೊಂದು ಪಟದ ದಾರದಿಂದ ಕೀಳಲು ಪ್ರಯತ್ನಿಸುವುದೂ ಉಂಟು ಈ ಪ್ರಕ್ರಿಯನ್ನು ಪೇಂಚ್ ಹಾಕುವುದು ಎನ್ನುತ್ತಾರೆ. ಯಾರ ಮಾಂಜಾ ದಾರ ಚೆನ್ನಾಗಿರುತ್ತದೋ ಅದರಲ್ಲಿರುವ ಗಾಜಿನ ಅಂಶ ಮತ್ತೊಂದು ಪಟದ ದಾರವನ್ನು ಹರಿದು ಹಾಕಿದರೆ ಅದೇನೋ ಯುದ್ಧ ಗೆದ್ದ ಸಂಭ್ರಮ. ಹಾಗೆ ದಾರ ಹರಿದು ಗೊತ್ತು ಗುರಿ ಇಲ್ಲದೇ ಹಾರುವ ಪಟವನ್ನು ಹಿಡಿಯಲು ಅದೆಷ್ಟೂ ದೂರ ದಿಕ್ಕಾಪಾಲಾಗಿ ಆ ಪಟದ ವಾರಸುದಾರರು ಓಡುವುದೂ ಉಂಟು. ಒಟ್ಟಿನಲ್ಲಿ ಆಷಾಡ ಮಾಸದ ಗಾಳಿಯನ್ನು ಬಳಸಿಕೊಂಡು ಗಾಳಿಪಟ ಹಾರಿಸುವ ಆಟ ಅಂದು ನಮಗೆ ಅತ್ಯಂತ ಮೋಜಿನ ಖುಷಿ ಕೊಡುವ ಸಂಗತಿಯೇ ಆಗಿತ್ತು.
ಹೀಗೆ ಗಾಳಿಪಟ ಮಾಡುವಾಗ ಅನೇಕ ಯಡವಟ್ಟುಗಳನ್ನು ಮಾಡಿ ಹಿರಿಯರ ಕೈಯಲ್ಲಿ ಒದೆ ತಿಂದ ಉದಾರಣೆಗಳು ಬಹಳಷ್ಟು. ಅದೊಮ್ಮೆ ಪಟ ಮಾಡಲು ಮನೆಯಲ್ಲಿ ವೃತ್ತ ಪತ್ರಿಕೆಯನ್ನು ಹುಡುಕಿದರೆ, ದುರದೃಷ್ಟವಶಾತ್ ಅಂದಿನ ಬೆಳಿಗ್ಗೆಯೇ ನಮ್ಮ ತಾಯಿಯವರು ರದ್ದಿಗೆ ಹಾಕಿದ್ದಾಗ ಮನೆಯಲ್ಲಾ ತಡಕಿ ಬೀರುವಿನ ಮೇಲೆ ಇಟ್ಟಿದ್ದ ಪೇಪರನ್ನು ಹರಿದು ಕೊಂಡು ಗಾಳಿಪಟ ಮಾಡಿ ಹಾರಿಸಿ ಸಂಭ್ರಮದಿಂದ ಮನೆಗೆ ಬಂದಾಗಲೇ ನನಗೆ ತಿಳಿದಿದ್ದ ನಾನು ಪಟ ಮಾಡಲು ಬಳೆಸಿದ್ದು ನಮ್ಮ ತಂದೆಯವರು ಅತ್ಯಂತ ಜೋಪಾನವಾಗಿ ಎತ್ತಿಟ್ಟಿದ್ದ ಪ್ರಜಾವಾಣಿ ಪತ್ರಿಕೆಯಲ್ಲಿ ಅನಕೃ ಕುರಿತಾದ ಪ್ರಕಟವಾಗಿದ್ದ ವಿಶೇಷ ಸಂಚಿಕೆಯ ಪ್ರತಿ. ಕತ್ತೇಗೇನು ಗೊತ್ತು ಕಸ್ತೂರಿ ಪರಿಮಳ ಎನ್ನುವಂತೆ ಆ ಸಂಚಿಕೆಯ ಮಹತ್ವ ಗೊತ್ತಿಲ್ಲದೆ ಹರಿದು ಹಾಕಿದ್ದರ ಪರಿಣಾಮ ಒಂದೆರಡು ಗೂಸಾ ಬಿದ್ದಿತ್ತು. ಇನ್ನು ದೊಡ್ಡ ದೊಡ್ಡ ಪಟ ಮಾಡಲು ಮೈದಾಹಿಟ್ಟಿನ ಗೋಂದು ಮಾಡಲು ಹೋಗಿ ಅಡುಗೆಮನೆಯಲ್ಲಾ ಗಲೀಜು ಮಾಡಿಟ್ಟು ಅಮ್ಮನ ಕೈಯಿಂದ ಬಾಸುಂಡೆ ತಿಂದ ಸಂದರ್ಭಗಳು ಅದೆಷ್ಟೋ ಇವೆ.
ಗಾಳಿಪಟ ಎಂದ ಮೇಲೆ ನಮ್ಮ ಕೀರ್ತಿಶೇಷ ರಾಮಕೃಷ್ಣಾ ಚಿಕ್ಕಪ್ಪನವರನ್ನು ನೆನಯಲೇ ಬೇಕು. ಕೇವಲ ಚೌಕಾಕಾರದ ಸಾಧಾರಣ ಪಟ ಮಾಡುತ್ತಿದ್ದ ನನಗೆ ಎಂಟು ಕಡ್ದಿಯ ಪಟ, ಹದಿನಾರು ಕಡ್ಡಿಯ ಆಯಾತಾಕಾರದ ಪಟ, ನಕ್ಷಾತ್ರಾಕಾರದ ಪಟ, ಮತ್ತು ಪಟದ ತುದಿಯಲ್ಲಿ ಕೋಡಿನಂತೆ ಕಡ್ಡಿಗಳನ್ನು ಬಿಟ್ಟು ಅವುಗಳ ನಡುವೆ ತೋರಣಗಳಂತೆ ಪೇಪರಿನಲ್ಲಿ ಕತ್ತರಿಸಿ ಅಂಟಿಸಿ ಅವುಗಳು ಗಾಳಿಯಲ್ಲಿ ಹಾರುವಾಗ ಪಟ ಪಟ ಎಂದು ಮಾಡುತ್ತಿದ್ದ ಶಬ್ಧ ನನ್ನ ಕಿವಿಯಲ್ಲಿ ಇನ್ನೂ ಹಾಗೆಯೇ ಇದೆ. ಸಾಧಾರಣ ವೃತ್ತ ಪತ್ರಿಕೆಯಲ್ಲಿ ಮಾಡಿದ ಪಟ ಗಾಳಿಯ ರಭಸಕ್ಕೆ ಹರಿದು ಹೋಗುತ್ತಿದ್ದ ಕಾರಣ ಆಸ್ಪತ್ರೆಯಲ್ಲಿ ಎಕ್ಸರೇ ಹಾಕಿಡಲು ಬಳೆಸುತ್ತಿದ್ದ ದಪ್ಪನೆಯ ಹಳದೀ ಇಲ್ಲವೇ ಬೂದು ಬಣ್ಣದ ಕಾಗದ ನಂತರ ಪ್ಲಾಸ್ಟಿಕ್ ಪಟವನ್ನೂ ಮಾಡಲು ಹೇಳಿಕೊಟ್ಟವರೇ ಆವರು. ಅಯಾಯಾ ಪಟಕ್ಕೆ ತಕ್ಕಂತೆ ಹೇಗೆ ಸೂತ್ರವನ್ನು ಹಾಕಬೇಕೆಂಬ ಲೆಕ್ಕಾಚಾರ ಕಲಿತದ್ದೂ ಅವರಿಂದಲೇ. ಅನೇಕ ರಜಾ ದಿನಗಳಲ್ಲಿ ಅವರೊಂದಿಗೆ ಗಾಳಿಪಟ ಹಾರಿಸಿ ಆನಂದಿಸಿದ ರಸಗಳಿಗೆಗಳನ್ನು ನನ್ನ ಜೀವನ ಪರ್ಯಂತ ಮರೆಯಾಗದು. ಅಂತಹ ಸುಂದರ ಕ್ಷಣಗಳು ಮತ್ತೆ ಖಂಡಿತವಾಗಿಯೂ ಬಾರದು.
ಗಾಳಿಪಟ ನಮ್ಮ ಜೀವನಕ್ಕೆ ಬಲು ಹತ್ತಿರದ ಸಂಗಾತಿ ಎಂದರೂ ತಪ್ಪಾಗಲಾದರು. ಗಾಳಿಪಟದ ಏರಿಳಿತದಂತೆ ನಮ್ಮ ಜೀವನದಲ್ಲಿಯೂ ಏರಿಳಿತವಿದ್ದೇ ಇರುತ್ತದೆ. ಗಾಳಿಪಟದ ಸೂತ್ರ ಅಥವಾ ಬಾಲಂಗೋಚಿ ಸರಿ ಇಲ್ಲದಿದ್ದಲ್ಲಿ ಅದು ಹೇಗೆ ಗಾಳಿಪಟ ಇದ್ದಲ್ಲಿಯೇ ಗಿರಿಕಿ ಹೊಡೆಯುತ್ತದೆಯೋ ಅಂತೆಯೇ ನಮ್ಮ ಜೀವನದಲ್ಲಿ ಗುರಿ ಇಲ್ಲದೆ ಮುನ್ನಡೆಯಲು ಹೋದರೆ ಗೊತ್ತು ಗುರಿ ಇಲ್ಲದಂತೆಯೇ ಗಿರಿಕಿ ಹೊಡೆಯುವುದು ಖಂಡಿತವೇ ಸರಿ. ಹೇಗೆ ಗಾಳಿ ಬಳೆಸಿಕೊಂಡು ಪಟ ಎತ್ತರೆತ್ತರಕ್ಕೆ ಹಾರುತ್ತದೆಯೋ ಹಾಗೆಯೇ ನಾವೂ ಕೂಡಾ ಜೀವನದಲ್ಲಿ ಬರುವ ಅವಕಾಶಗಳನ್ನು ಬಳೆಸಿಕೊಂಡು ಎತ್ತರಕ್ಕೇರುಲು ಪ್ರಯತ್ನಿಸಬೇಕು. ಪಟ ಮೇಲಕ್ಕೆ ಎಷ್ಟೇ ಏರಿದರೂ ಅದನ್ನು ಹಾರಿಸುವ ಇಲ್ಲವೇ ತೂರಾಡುತ್ತಿದ್ದಾಗ ಆದನ್ನು ಸರಿಪಡಿಸುವ ಸಾಮರ್ಥ್ಯ ದಾರ ಹಿಡಿದವನ ಬಳಿಯೇ ಇರುವ ಹಾಗೆ ನಮ್ಮನ್ನು ಜೀವನದಲ್ಲಿ ಎತ್ತರೆಕ್ಕೆ ಏರಿಸುವ ಮತ್ತು ಅಡ್ಡದಾರಿಯನ್ನು ಹಿಡಿದಾಗ ಸರಿಪಡಿಸಲು ನಮ್ಮ ಹಿರಿಯರು ಬಳಿ ನಮ್ಮ ಸೂತ್ರ ಇದ್ದೇ ಇರುತ್ತದೆ.
ಇದೇ ಸಮಯದಲ್ಲಿ ನನ್ನ ತಂಗಿಯ ಬಾಲ್ಯದ ಪಠ್ಯದಲ್ಲಿದ್ದ ಮತ್ತು ಆಕೆ ಮುದ್ದು ಮುದ್ದಾಗಿ ತೊದಲು ನುಡಿಯಲ್ಲಿ ಸದಾ ಹೇಳುತ್ತಿದ್ದ ಗಾಳಿಪಟ ಕುರಿತಾದ ಪದ್ಯ ನೆನಪಿಗೆ ಬರುತ್ತದೆ. ಅಂದು ಆಕೆ ಹಾಗೆ ಪದ್ಯವನ್ನು ಉಲಿಯುತ್ತಿದ್ದರೆ ಅದು ನನಗೇ ಹೇಳುತ್ತಿದ್ದಳೇನೋ ಎನಿಸುತ್ತಿತ್ತು.
ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ
ನೀಲಿಯ ಬಾನಲಿ ತೇಲುವ ಸುಂದರ
ಬಾಲಂಗೋಚಿಯ ನನ್ನ ಪಟ
ಬಿದಿರಿನ ಕಡ್ಡಿಯ ಗಾಳಿಪಟ
ಬೆದರದ ಬೆಚ್ಚದ ಗಾಳಿಪಟ
ದಾರವ ಜಗ್ಗಿ ದೂರದಿ ಬಗ್ಗಿ
ತಾರೆಯ ನಗಿಸುವ ನನ್ನ ಪಟ
ಉದ್ದದ ಬಾಲದ ಗಾಳಿಪಟ
ನನ್ನಯ ಮುದ್ದಿನ ಗಾಳಿಪಟ
ಇಂದು ತರತರಹದ ಬಣ್ಣ ಬಣ್ಣದ ಸಿದ್ದ ಪಡಿಸಿದ ಗಾಳಿಪಟಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಚೀನಾ ಕೂಡ ತರ ತರಹದ ಪ್ಲಾಸ್ಟಿಕ್ ಮತ್ತು ನೈಲಾನ್ ಬಟ್ಟೆಯ, ಗಾಳಿ ಊದಿ ಬೆದರು ಬೊಂಬೆ ಮಾದರಿಯ ಇಲ್ಲವೇ ಡ್ರಾಗನ್ ಮಾದರಿಯ ತರತರಾವರಿ ಗಾಳಿಪಟವನ್ನು ಮಾರುಕಟ್ಟೆಗೆ ತಂದಿದ್ದಾರೆ. ಉತ್ತರ ಭಾರತದ ಕೆಲವು ಭಾಗದಲ್ಲಿ ಕೇವಲ ಆಷಾಡ ಮಾಸವಲ್ಲದೆ ಸಂಕ್ರಾಂತಿ ಹಬ್ಬದ ಸಮಯದಲ್ಲೂ ಗಾಳಿಪಟ ಹಾರಿಸುವ ಸಂಪ್ರದಾಯವಿದೆ. ಅನೇಕ ಕಡೆ ಗಾಳಿಪಟ ಸ್ಪರ್ಧೆಗಳನ್ನೂ ಏರ್ಪಡಿಸುತ್ತಾರದರೂ ನಾವು ನಮ್ಮ ಕೈಯಾರೆ ಮಾಡಿ ಸರಿಯಾಗಿ ಸೂತ್ರ ಹಾಕಿ ಬಾನೇತ್ತರಕ್ಕೆ ಹಾರಿಸಿ ಆನಂದ ಪಡುವುದರ ಮುಂದೆ ಕೊಂಡು ತಂದು ಹಾರಿಸುವ ಪಟ ಮಜಾ ಕೊಡದು.
ಆಷಾಢ ಮಾಸದ ಪ್ರಥಮ ಏಕದಶಿಯಂದು ಆಚರಿಸಲ್ಪಡುವ ಗಾಳೀಪಟದ ಹಬ್ಬಕ್ಕೆ ನಿಮಗೆಲ್ಲರಿಗೂ ಹಾರ್ಧಿಕ ಶುಭಾಶಯಗಳು.
ಪಟ ಮೇಲಕ್ಕೆ ಎಷ್ಟೇ ಏರಿದರೂ ಅದರ ಸೂತ್ರ ದಾರ ಹಿಡಿದವನ ಬಳಿಯೇ ಇರುವ ಹಾಗೆ ನಮ್ಮ ಜೀವನದಲ್ಲಿ ನಾವು ಎಷ್ಟೇ ಏರಿದರೂ ನಮ್ಮೆಲ್ಲರ ಸೂತ್ರ ಆ ಭಗವಂತನ ಬಳಿಯೇ ಇರುತ್ತದೆ. ಜೀವನದಲ್ಲಿ ಅವನು ಸೂತ್ರಧಾರಿ ನಾವು ಕೇವಲ ಅವನಾಡಿಸುವ ಪಾತ್ರಧಾರಿಗಳಷ್ಟೇ.
ಏನಂತೀರೀ?
ಗಾಳಿ ಪಟ ಮಾಡುವ ವಿಧಾನದಿಂದ ಹಿಡಿದು ಸೂತ್ರಧಾರಿ ಭಗವಂತ ಎನ್ನುವ ವರೆಗೆ, ಆಷಾಢ ಮಾಸದಲ್ಲಿ ಏಕೆ ಕೆಲವು ನಿಯಮಗಳು ಎನ್ನುವುದರ ಬಗ್ಗೆ, ಶ್ರೀ ರಾಮಕೃಷ್ಣರವರ ಗಾಳಿ ಪಟದ ತಯಾರಿಕೆಯ ಪರಿಣತಿಯ ಬಗ್ಗೆ ಬರೆದಿರುವ ಲೇಖನ ಅತ್ಯಂತ ಸೊಗಸಾಗಿ ಮೊಡಿ ಬಂದಿದೆ. ಸರಾಗವಾಗಿ ಓದಿಸಿಕೊಂಡು ಹೋಯಿತು. ಅಭಿನಂದನೆಗಳು.
LikeLiked by 1 person