ಅಂತಿಮ ಪಯಣಕ್ಕೂ ದೊರೆಯುವುದಿಲ್ಲಾ ಪುಗಸಟ್ಟೆ ಪರ್ಮಿಟ್

ಕಳೆದ ಎರಡು ದಿನಗಳಿಂದಲೂ ರಾಜ್ಯದಲ್ಲಿ ಒಂದು ರೀತಿಯ ಸೂತಕದ ಛಾಯೆ. ಕರ್ನಾಟಕದ ಕಾಫಿಯ ಕಂಪನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಿದ್ದ , ಹತ್ತು ರೂಪಾಯಿಗೆ ಬಿಸಿ ಬಿಸಿ ಕಾಫಿ ಕುಡಿಯಲು ಹಿಂದು ಮುಂದು ನೋಡುತ್ತಿದ್ದ ಭಾರತೀಯರಿಗೆ ಅದೇ ಕಾಫಿಯನ್ನು ತಣ್ಣಗೆ ಮಾಡಿ ನೂರಾರು ರೂಪಾಯಿಗಳಿಗೆ ಕುಡಿಸುವ ಚಟವನ್ನು ಹತ್ತಿಸಿದ್ದ , ತನ್ಮೂಲಕವೇ ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದ್ದ ಉದ್ಯಮಿಯ ನಾಪತ್ತೆಯ ವಿಷಯ ಎಲ್ಲರ ಮನಸ್ಸಿನಲ್ಲಿ ದುಗುಡ ತುಂಬಿತ್ತು. ಇಡೀ ಜಿಲ್ಲಾಡಳಿತವೇ ಸಜ್ಜಾಗಿ ನಾನಾ ರೀತಿಯಲ್ಲಿ ಅವರನ್ನು ಹುಡುಕುವ ಪ್ರಯತ್ನ ನಡೆದಿತ್ತು. ಅದಕ್ಕಾಗಿಯೇ ವಿಶೇಷ ತಂಡ ರಚಿಸಲಾಗಿತ್ತು. ಆ ತಂಡದಲ್ಲಿ ಅತ್ಯಂತ ನುರಿತ ವೈದ್ಯರೂ ಇ‍‍ದ್ದದ್ದು ಗಮನಾರ್ಹವಾಗಿತ್ತು. ರಾಜ್ಯ, ಮತ್ತು ದೇಶದ ಪ್ರಮುಖ ರಾಜಕೀಯ ನಾಯಕರುಗಳೆಲ್ಲರೂ ಆ ಉದ್ಯಮಿಯ ಮನೆಯವರನ್ನು ಭೇಟಿ ಮಾಡಿ ಸಾಂತ್ವನವನ್ನು ಹೇಳುತ್ತಿದ್ದರೇ, ಇನ್ನು ತಮಗೆ ಸಂಬಂಧವೇ ಇಲ್ಲದಿದ್ದರೂ, ಮಾನವೀಯ ದೃಷ್ಟಿಯಿಂದಾಗಿ ನೇತ್ರಾವತಿ ನದಿಯ ಬಳಿಯಲ್ಲಿ ಸೇರಿದ್ದ ಎಲ್ಲರೂ ತಮ್ಮ ಕೈಲಾದ ಮಟ್ಟಿಗೆ ಉದ್ಯಮಿಯವರನ್ನು ಹುಡುಕುವ ಪ್ರಯತ್ನದಲ್ಲಿದ್ದರು. ಇನ್ನೂ ಅನೇಕರು ಭಗವಂತಾ ಅವರು ಸಜೀವವಾಗಿ ಮನೆಗೆ ಮರಳುವಂತೆ ಮಾಡು ಎಂದು ಪ್ರಾರ್ಥಿಸುತ್ತಿದ್ದದ್ದು ಪ್ರಮುಖ ಸುದ್ದಿಯಾಗಿತ್ತು. ಆದರೆ ಇಂತಹ ಸೌಲಭ್ಯಗಳು ಜನ ಸಾಮಾನ್ಯರಿಗೆ ಇನ್ನೂ ಮರೀಚಿಕೆಯಾಗಿಯೇ ಉಳಿದು ಹೋಗಿರುವುದು ನಿಜಕ್ಕೂ ವಿಪರ್ಯಾಸ. ಅಂತಹ ದಾರುಣ ಕಥೆಯನ್ನೇ ಎಲ್ಲರ ಬಳಿ ಹಂಚಿಕೊಳ್ಳಲು ಬಯಸುತ್ತಿದ್ದೇನೆ.

ಬೆಂಗಳೂರಿನ ರಾಮಯ್ಯ ಕಾಲೇಜಿನ ಬಳಿಯಲ್ಲಿ ವಾಸವಾಗಿರುವ, ನಮ್ಮ ಆತ್ಮೀಯ ಹಿತೈಷಿಗಳೊಬ್ಬರಾದ. ಅಣ್ಣ, ತಮ್ಮ ಮತ್ತು ತಂಗಿ ಮೂವರೇ ಇರುವ ಸಂಪ್ರದಾಯಸ್ಥ ಸಂಸಾರ, ಕಳೆದ ಐವತ್ತು-ಅರವತ್ತು ವರ್ಷಗಳಿಂದಲೂ ಅದೇ ಮನೆಯಲ್ಲಿಯೇ ಅವರು ವಾಸಿಸುತ್ತಿದ್ದರೂ ಅವರ ಅಕ್ಕ ಪಕ್ಕದವರಿಗೆ ಇನ್ನೂ ಅಪರಿಚಿತರಾಗಿಯೇ ಇದ್ದ ಕುಟುಂಬ. ತಾವಾಯಿತು ತಮ್ಮ ಕೆಲಸವಾಯಿತು ಎನ್ನುವ ಜನ. ಅವರೆಲ್ಲರ ಸರಿ ಸುಮಾರು ವಯಸ್ಸೂ ಸುಮಾರು ಅರವತ್ತಾಗಿತ್ತು ಮತ್ತು ವಿಶೇಷವಾಗಿ ಅವರೆಲ್ಲರೂ ಅವಿವಾಹಿತರೇ.

ನೆನ್ನೆ ರಾತ್ರಿ ಊಟವಾದ ನಂತರ ಸರಿ ಸುಮಾರು 8:30ರ ಆಸು ಪಾಸಿನಲ್ಲಿ ಆ ಮನೆಯ ಹಿರಿಯಣ್ಣ ಇದ್ದಕ್ಕಿದ್ದಂತೆ ತಮ್ಮ ವಯೋ ಸಹಜ ಖಾಯಿಲೆಗಳಿಂದಾಗಿ ತಮ್ಮ ದೇಹ ತ್ಯಾಗ ಮಾಡಿದರು. ಮೊದಲೇ ಹೇಳಿದಂತೆ ಎಲ್ಲರೂ ವಯಸ್ಸಾದವರೂ ಆ ಕೂಡಲೇ ಏನು ಮಾಡುವುದು ಎಂದು ತಿಳಿಯದೇ ಕೂಡಲೇ ಅಣ್ಣಾ ಮತ್ತು ತಮ್ಮ ಇಬ್ಬರೂ ಕೆಲಸ ಮಾಡಿ ನಿವೃತ್ತಿ ಹೊಂದಿದ್ದ ಟಾಟಾ ಇನ್ಸ್ಟಿಟ್ಯೂಟ್ ಮೆಡಿಕಲ್ ಕೇರಿನ ವೈದ್ಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಮ್ಮಲ್ಲಿ ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿದೆ. ಅಂದರೆ ವೈದ್ಯಕೀಯ ವೃತ್ತಿಯಲ್ಲಿರುವವರು ದೇವರಿಗೆ ಸಮಾನ. ಆತ ಸದಾ ನಿಸ್ವಾರ್ಥವಾಗಿ ತಮ್ಮ ಜೀವನವನ್ನು ಜನರಿಗಾಗಿ ಅವರ ಅರೋಗ್ಯದ ರಕ್ಷಣೆಗಾಗಿ ಸೇವೆ ಮಾಡಲು ಸಿದ್ಧನಿರಬೇಕು ಎಂದರ್ಧ. ಆದರೆ ಹೇಳೋದು ಶಾಸ್ತ್ರ ತಿನ್ನೋದು ಬದನೇಕಾಯಿ ಎನ್ನುವಂತೆ ಆ ವೈದ್ಯರು ಅಲ್ಲಿಯೇ ಅಕ್ಕ ಪಕ್ಕದ ನರ್ಸಿಂಗ್ ಹೋಮಿಗೆ ಕರೆದು ಕೊಂಡು ಹೋಗಿ ಎಂದು ಸೂಚಿಸಿ ಕರೆ ಕತ್ತರಿಸಿದ್ದಾರೆ.

ವಿಧಿ ಇಲ್ಲದೆ, ಕೂಡಲೇ ಮನೆಯ ಸಮೀಪದಲ್ಲಿರುವ ಸುಬ್ಬಯ್ಯ ಆಸ್ಪತ್ರೆಗೆ ಹೋಗಿ ವಿಚಾರಿಸಿದಲ್ಲಿ , ಮೃತರು ತಮ್ಮ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯದ ಕಾರಣ ಮತ್ತು ಮನೆಯಲ್ಲಿಯೇ ಮೃತಪಟ್ಟಿರುವ ಕಾರಣ ಮರಣ ಪ್ರಮಾಣ ಪತ್ರ ಕೊಡಲು ಸಾಧ್ಯವಿಲ್ಲ ಮತ್ತು ಮನೆಗೂ ಬಂದು ನೋಡಲು ಸಾಧ್ಯವಿಲ್ಲ ಎಂದು ಖಡಾ ಖಂಡಿತವಾಗಿ ತಿಳಿಸಿ ಸಾಗ ಹಾಕಿದ್ದಾರೆ. ಅಷ್ಟರಲ್ಲಿಯೇ ಯಾರೋ ಒಬ್ಬರ ಸಲಹೆ ಮೇರೆಗೆ 108 ಆಂಬ್ಯುಲೆನ್ಸ್ ಗೆ ಕರೆಮಾಡಿದರೆ, ಅವರು ಪ್ರಾಮಾಣಿಕವಾಗಿ ಬಂದು ಮೃತರನ್ನು ಪರೀಕ್ಷಿಸಿ ನೋಡಿ, ಸಾರ್ ಇವರು ಸತ್ತು ಹೋಗಿದ್ದಾರೆ. ಯಾವ ಆಸ್ಪತ್ರೆಗೂ ಕರೆದು ಕೊಂಡು ಹೋದರೂ ಪ್ರಯೋಜನವಿಲ್ಲ ಎಂದು ಬಿಟ್ಟಿ ಸಲಹೆ ಕೊಟ್ಟು ಹೋಗಿದ್ದಾರೆ. ಆಷ್ಟು ಹೊತ್ತಿನಲ್ಲಿ ಸುತ್ತಮತ್ತಲಿನ ನಾಲ್ಕಾರು ಕ್ಲಿನಿಕ್ ಸಂಪರ್ಕಿಸಿದರೂ ಅದೇ ಕಥೆ. ಎಲ್ಲಾ ವೈದ್ಯರೂ ತಮ್ಮ ವೃತ್ತಿ ಧರ್ಮ ಮತ್ತು ವೈದ್ಯಕೀಯ ಪದವಿ ಪಡೆಯುವಾಗ ತೆಗೆದುಕೊಂಡ ಪ್ರಮಾಣವನ್ನು ಮರೆತು ಹೋಗಿ ಸ್ವಾರ್ಥಿಗಳಾಗಿದ್ದದ್ದು ಕ್ಷಮಿಸಲಾಗದ ಅಪರಾಧವೇ ಸರಿ. ಇನ್ನು ದೊಡ್ಡ ಆಸ್ಪತ್ರೆಗಳಿಗೆ ಕರೆದು ಕೊಂಡು ಹೋಗೋಣ ಎಂದರೆ ಅವರೆ ಬಳಿ ಸೂಕ್ತ ವಾಹನ ಇಲ್ಲ. ಇನ್ನು ಅಕ್ಕ ಪಕ್ಕದವರನ್ನು ಕೇಳೋಣ ಎಂದರೆ ಅವರ ಪರಿಚಯವೇ ಅಷ್ಟಿಲ್ಲವಾದ್ದರಿಂದ ಆ ತಡ ರಾತ್ರಿಯಲ್ಲಿ ಬೇರೆಯವರಿಗೇಕೆ ತೊಂದರೆ ಕೊಡುವುದು ಎಂದು ನಿರ್ಧರಿಸಿ ಇಡೀ ರಾತ್ರಿ ಅಣ್ಣ ತಂಗಿ ಇಬ್ಬರೇ, ಮನೆಯಲ್ಲಿ ತಮ್ಮ ಅಣ್ಣನ ಮೃತ ದೇಹವನ್ನು ಜತನದಿಂದ ನೋಡಿ ಕೊಂಡು ಇಂದು ಬೆಳಿಗ್ಗೆ ಎಲ್ಲರಿಗೂ ಕರೆ ಮಾಡಿ ತಿಳಿಸಿದ್ದಾರೆ.

ವಿಷಯ ತಿಳಿದ ಕೂಡಲೇ ಅವರಿಂದ ಬಹಳವಾಗಿಯೇ ಉಪಕೃತನಾಗಿ ಅವರ ಋಣ ನನ್ನ ಮೇಲೆ ತುಂಬಾನೇ ಇರುವುದರಿಂದ ಕೂಡಲೇ ನನಗೆ ತಿಳಿದವರಿಗೆಲ್ಲಾರಿಗೂ ವಿಷಯ ತಿಳಿಸಿ ತಂಗಿಯರೊಂದಿಗೆ ಅವರ ಮನೆಗೆ ಹೋದಾಗಲೇ ಮೇಲೆ ತಿಳಿದ ವಿಷಯವೆಲ್ಲಾ ತಿಳಿಯಿತು. ಸರಿ ನನಗೆ ಗೊತ್ತಿರುವ ವೈದ್ಯರ ಸಹಾಯ ಪಡೆಯಬಹುದೇ ಎಂದು ವಿಚಾರಿಸಲು ಹೋದರೆ, ತಿಳಿದು ಬಂದ ಮತ್ತೊಂದು ಸಂಗತಿಯೆಂದರೆ, ಇಡೀ ದೇಶಾದ್ಯಂತ ಇರುವ ವೈದ್ಯರು ಕೇಂದ್ರ ಸರ್ಕಾರ ಹೊರಡಿಸಿರುವ ಕಾನೂನಿನ ವಿರುದ್ಧ ಇಂದು ಪ್ರತಿಭಟನೆ ಮಾಡುತ್ತಿರುವ ಕಾರಣ ಯಾವುದೇ ವೈದ್ಯರು ಕರೆಗೆ ಸಿಗುತ್ತಿಲ್ಲ.

ಮತ್ತೊಮ್ಮೆ ಅವರು ಕೆಲಸ ಮಾಡುತ್ತಿದ್ದ ಟಾಟಾ ಇನ್ಸ್ಟಿಟ್ಯೂಟ್ ಮೆಡಿಕಲ್ ಕೇರಿಗೆ ಖುದ್ದಾಗಿ ಹೋಗಿ ವೈದ್ಯರನ್ನು ಭೇಟಿ ಮಾಡಲು ಹೋದಾಗ ನಮ್ಮ ಮಾವ ಇನ್ಸ್ಟಿಟ್ಯೂಟ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಅವರಿಂದ ಸಹಾಯ ಪಡೆಯಲ್ಪಟ್ಟ ಅನೇಕರು ನಮ್ಮ ಮಾವನವರಿಗೆ ನಗು ಮುಖದಿಂದ ಸ್ವಾಗತಿಸಿದರಾದರೂ ವಿಷಯ ತಿಳಿದ ತಕ್ಷಣವೇ ಅಯ್ಯೋ ಪಾಪಾ ಎಂದು ಹೇಳುತ್ತಾ ಸುಮ್ಮನೆ ತಮ್ಮ ಜಾಗ ಖಾಲಿ ಮಾಡಿದ್ದಷ್ಟೇ ಬಂತು. ಅವರ ಸಾಂತ್ವಾನದಿಂದ ಯಾವುದೇ ಹೆಚ್ಚಿನ ಪ್ರಯೋಜನವೇನೂ ಆಗಲೇ ಇಲ್ಲ. ಸುಂಕದವನ ಮುಂದೆ ಸಂಕಟ ಹೇಳಿಕೊಂಡರೆ ಏನು ಪ್ರಯೋಜನ ಎಂದು ತಿಳಿದು ಇನ್ನು ಹೆಚ್ಚಿನ ಸಮಯ ಅಲ್ಲೇ ವ್ಯರ್ಥಮಾಡಿದರೆ ಮುಂದಿನ ಅಂತಿಮ ವಿಧಿವಿಧಾನಗಳಿಗೆ ತಡವಾಗುತ್ತದೆ ಎಂದು ನಿರ್ಧರಿಸಿ ಬೇರೇ ಯಾವುದಾದರೂ ಮಾರ್ಗವಿದೆಯೇ ಎಂದು ವಿಚಾರಿಸುತ್ತಿದ್ದಾಗ ಅಲ್ಲಿ ಸಿಕ್ಕ ಒಬ್ಬ ವೈದ್ಯ ಮಹಾಶಯರು ಮರಣ ಪತ್ರವೇನೋ ಕೋಡ್ತೀನಿ. ಇವತ್ತು ಮುಷ್ಕರ ಬೇರೆ ಅದಕ್ಕೆ ಬಹಳ ಖರ್ಚು ಆಗುತ್ತದೆ ಎಂದಾಗ ಸರಿ ಎಷ್ಟು ಕೊಡಬೇಕು ಎಂದು ವಿಚಾರಿಸಿದಾಗ ಅವರು ಕೇಳಿದ ಮೊತ್ತ ನಿಜಕ್ಕೂ ನಮ್ಮನ್ನು ಮೂರ್ಛೆಗೆ ಬೀಳಿಸುವಂತಿತ್ತು .

ಕೂಡಲೇ ನಮ್ಮ ಮನೆಯ ಬಳಿಯೇ ಇರುವ ನಮ್ಮ ಕುಟುಂಬ ವೈದ್ಯರಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದಾಗ, ಅಷ್ಟೇ ತಾನೆ, ನಾನೀಗ ಮನೆಯಲ್ಲಿ ಇಲ್ಲ. ಸುಮಾರು ಹನ್ನೊಂದು ಗಂಟೆಹೊತ್ತಿಗೆ ಬರುತ್ತೀನಿ. ಬಂದ ಕೂಡಲೇ ಕರೆ ಮಾಡುತ್ತೀನಿ ಎಂದಾಗ ಮರುಭೂಮಿಯಲ್ಲಿ  ನೀರು ಸಿಗುವ ಓಯಸಿಸ್ ನಂತೆ ಆಯಿತು. ಅಷ್ಟರಲ್ಲಿ ಸಂಬಂಧೀಕರು ಎಲ್ಲಾ ಬಂದು ಪುರೋಹಿತರು ಅಂತಿಮ ವಿಧಿ ವಿಧಾನಗಳನ್ನು ಆರಂಭಿಸುವಷ್ಟರಲ್ಲಿ ಅವರ ದೂರದ ಸಂಬಂಧೀಕರೊಬ್ಬರು ತಮ್ಮ ಪರಿಚಯಸ್ಥ ವೈದ್ಯರ ಬಳಿಯಿಂದ ಅಗತ್ಯವಿದ್ದ ಪ್ರಮಾಣ ಪತ್ರ ತಂದ ಪರಿಣಾಮ ಎಲ್ಲರಿಗೂ ಸಮಾಧಾನವಾಗಿ ಮನೆಯಲ್ಲಿ ಮಾಡಬೇಕಿದ್ದ ಕಾರ್ಯಗಳನ್ನೆಲ್ಲಾ ಮುಗಿಸಿ, ಹರಿಶ್ವಂದ್ರ ಘಾಟಿಗೆ ಹೋದರೆ ಅಲ್ಲಿ ಮತ್ತೊಂದು ಘೋರ ಅನುಭವ.

ಬೆಂಗಳೂರಿನ ಮಹಾನಗರ ಪಾಲಿಕೆಯವರು ನಗರಾದ್ಯಂತ ಸಾರ್ವಜನಿಕರ ಅನುಕೂಲಕ್ಕಾಗಿ ಹಲವಾರು ವಿದ್ಯುತ್ ಚಿತಾಗಾರವನ್ನು ಕಟ್ಟಿಸಿರುವುದು ನಿಜಕ್ಕೂ ಉತ್ತಮ ವಿಷಯವೇ ಸರಿ. ಅಲ್ಲಿಗೆ ಹೋದ ತಕ್ಷಣ ಕಣ್ಣಿಗೆ ಕಾಣುವುದೇ ಅವರ ನಿಯಮಾವಳಿಗಳು. ಆದರಲ್ಲಿ ದೊಡ್ಡದಾಗಿ ಬರೆದಿರುವುದು ಆವರಣದ ಸ್ವಚ್ಚತೆ ಕಾಪಾಡಿ ಮತ್ತು ಹೆಣ ಸುಡುವುದಕ್ಕೆ ರೂ 250ಕ್ಕಿಂತ ಹೆಚ್ಚಿನ ಹಣವನ್ನು ಕೊಡಬಾರದು ಎಂಬುದು ಎದ್ದು ಕಾಣುತ್ತದೆ. ಆದರೆ ಅಲ್ಲಿ ಮನುಷ್ಯರಿಗಿಂತ ನಾಯಿಗಳೇ ಹೆಚ್ಚಾಗಿ ಕಾಣ ಬರುತ್ತದೆ. ಸ್ವಚ್ಚತೆಗಿಂತ ಎಲ್ಲೆಲ್ಲೂ ಒಡೆದ ಮಡಕೆಗಳು, ಒಣಗಿದ ಹೂವಿನ ಹಾರಗಳು ಜೊತೆಗೆ ಪಾನ್ ಗುಟ್ಕಾ ಪ್ಯಾಕೆಟ್, ಸಿಗರೇಟ್ ತುಂಡು ಹೀಗೆ ಅತ್ಯಂತ ಕೆಟ್ಟದಾಗಿದೆ. ಹೆಸರಿಗೆ ಮಾತ್ರವೇ ರೂ 250 ಅಂತ ಇದ್ದರೂ ಅಲ್ಲಿರುವ ಗುಮಾಸ್ತರು 500-750ಕ್ಕೂ ಕಡಿಮೆ ಮುಟ್ಟುವುದೇ ಇಲ್ಲಾ. ಇನ್ನು ಚಿತಾಗಾರದೊಳಗೆ ಮೃತರ ದೇಹವನ್ನು ತಳ್ಳುತ್ತಿದ್ದಂತೆಯೇ ತಟ್ಟೇ ಕಾಸು ಎಂದು ದಕ್ಷಿಣೆ ಹಾಕಿಸಿಕೊಳ್ಳುವುದಲ್ಲದೇ ಐದಾರು ಜನ ಇದ್ದೀವಿ 500- 600ರೂಗಳನ್ನು ಕೊಡಿ ಎಂದು ಬಲವಂತದ ಬೇಡಿಕೆ ಇಟ್ಟು ಮೊದಲೇ ದುಃಖತಪ್ತರನ್ನು ಮತ್ತಷ್ಟೂ ದುಃಖಕ್ಕೆ ತಳ್ಳುತ್ತಾರೆ. ನಾವೇ ತಂದ ಚಟ್ಟವನ್ನು ಕಟ್ಟಿಕೊಡುವುದಕ್ಕೆ 500 ರೂಪಾಯಿ ಕೊಡಲೇ ಬೇಕು. ಇನ್ನೂ ಅಲ್ಲಿಯವರೆಗೂ ಶಾಸ್ತ್ರ ವಿಧಿ ವಿಧಾನಗಳಲ್ಲಿ ಮಗ್ನರಾಗಿದ್ದ ಪುರೋಹಿತರು 2000-3000ಕ್ಕೆ ಕಡಿಮೆ ತೆಗೆದು ಕೊಳ್ಳುವುದೇ ಇಲ್ಲಾ. ಅದೇ ರೀತಿ ಆಂಬ್ಯುಲೆನ್ಸ್ ಬಾಡಿಗೆ ಎಂದು 1000-1500 ಕಿತ್ತರೆ , ಬಾಟ ಎಂದು 500 ಕೊಡುವವರೆಗೂ ಜಾಗ ಬಿಟ್ಟು ಕದಲುವುದೇ ಇಲ್ಲ. ಒಟ್ಟಿನಲ್ಲಿ ಎಲ್ಲರೂ ಬೆಂಕಿ ಬಿದ್ದ ಮನೆಯಲ್ಲಿ ಗಳ ಹೀರುವವರೇ. ಇನ್ನೂ ಸರಿಯಾಗಿ ಹೇಳಬೇಕೆಂದರೆ, ಸಾವಿನ ಮನೆಯ ಮುಂದೆ ಹಾಕಿರುವ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವವರು ಕೆಲವರಾದರೆ, ಮತ್ತೆ ಹಲವರೂ ಅದೇ ಬೆಂಕಿಯಿಂದ ಬೀಡಿ ಹಚ್ಚಿಸಿಕೊಂಡು ಶೋಕಿ ಮಾಡುವ ಜನರೇ ಹೆಚ್ಚಾಗಿರುವುದು ನಿಜಕ್ಕೂ ಛೇದಕರ.

ಒಟ್ಟಿನಲ್ಲಿ ಇಂದಿನ ಪರಿಸ್ಥಿತಿ ಹೇಗಾಗಿದೆ ಎಂದರೆ ಸತ್ತವರು ತಮ್ಮ ಪಾಲಿನ ಆಯಸ್ಸನ್ನು ಮುಗಿಸಿಕೊಂಡು ಇಹಲೋಕ ತ್ಯಜಿಸಿದರೆ ಈ ವೈದ್ಯರುಗಳು ಮತ್ತು ಚಿತಾಗಾರದ ಸಿಬ್ಬಂಧಿಗಳಿಂದಾಗಿ ಬದುಕಿರುವ ಸಂಬಂಧಿಗಳನ್ನು ಅಕ್ಷರಶಃ ಸಾಯಿಸಿಯೇ ಬಿಡುತ್ತಾರೆ ಎಂದರೆ ತಪ್ಪಾಗಲಾರದು. ಇನ್ನು ಮುಂದೆ ಸಾಯುವವರೂ ತಾವು ಸಾಯುವುದಕ್ಕೂ ಮುಂಚೆಯೇ ಮುಂಬರುವ ಇಂತಹ ಖರ್ಚಿಗಾಗಿಯೇ ಪ್ರತ್ಯೇಕ ಹಣ ಎತ್ತಿಡುವ ಪರಿಸ್ಥಿತಿ ಬಂದರೂ ಬರ ಬಹುದು. ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದಂತೆ ಸಾವಿಗೂ ಮುಂಚೆಯೇ ಅಗತ್ಯವಿರುವ ಪರ್ಮೀಷನ್ ಪಡೆದು ಕೊಳ್ಳಬೇಕಾಗಬಹುದೇನೋ? ಸರ್ಕಾರ ಈ ಬಗ್ಗೆ ತುಸು ಹೆಚ್ಚಿನ ಆಸ್ಥೆ ವಹಿಸಿ ಎಲ್ಲಾ ಸರ್ಕಾರಿ ಮತ್ತು ಖಾಸಗೀ ಆಸ್ಪತ್ರೆಗಳಿಗೆ ಆದೇಶ ಹೊರಡಿಸಿ ಯಾರಿಗೂ ಇಂತಹ ತೊಂದರೆ ಆಗದಂತೆ ಸರಿಯಾದ ಪರೀಕ್ಷೆ ನಡೆಸಿ ಅಗತ್ಯಬಿದ್ದರೆ ಪೋಸ್ಟ್ ಮಾರ್ಟಂ ನಡೆಸಿ ಸರಿ ಇದ್ದಲ್ಲಿ ಮರಣ ಪತ್ರ ಕೊಡಲೇ ಕೊಂಡುವಂತಾಗಬೇಕು. ಹಾಗೇನಾದರೂ ತೊಂದರೆ ಕಂಡು ಬಂದಲ್ಲಿ ಪೋಲೀಸರಿಗೆ ತಿಳಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲು ಸಹಕರಿಸ ಬಹುದು. ಅದೇ ರೀತಿ ಚಿತಾಗಾರದಲ್ಲಿಯೂ ಅತ್ಯಗತ್ಯವಾದ ಸ್ವಚ್ಚತೆಯನ್ನು ಕಾಪಾಡಿ ಅನಗತ್ಯ ಸುಲಿಗೆಯನ್ನು ನಿಲ್ಲಿವಂತೆ ಕಠಿಣ ಕ್ರಮವನ್ನು ತೆಗೆದುಕೊಂಡಲ್ಲಿ ಮಾತ್ರವೇ ಎಲ್ಲರಿಗೂ ನೆಮ್ಮದಿ ಸಿಗುವಂತಾಗುತ್ತದೆ. ಸತ್ತವರಿಗೂ ನಿಜವಾದ ನೆಮ್ಮದಿ ಸಿಗುವಂತಾಗುತ್ತದೆ.

ಎಲ್ಲದ್ದಕ್ಕೂ ಸರ್ಕಾರವನ್ನೇ ನೆಚ್ಚಿಕೊಳ್ಳದೆ ಇಂತಹ ಪರಿಸ್ಥಿತಿಯನ್ನು ತಪ್ಪಿಸಬೇಕಾದರೆ ನಾವೂ ಕೂಡಾ ಕೆಲವೊಂದು ಅಂಶಗಳತ್ತ ಗಮನಿಸಬೇಕು.

  • ದಯವಿಟ್ಟು ಮನೆಯವರೆಲ್ಲರಿಗೂ ಸೇರಿಸಿ ತಪ್ಪದೇ ಖಡ್ಡಾಯವಾಗಿ ಇನ್ಷೂರೆನ್ಸ್ ಮಾಡಿಸಬೇಕು.
    ನೆರೆ ಹೊರೆಯವರೊಂದಿಗೆ ಸದಾಕಾಲವೂ ಸಂಪರ್ಕದಲ್ಲಿರ ಬೇಕು
  • ಇನ್ನು ವಯಸ್ಸಾದವರು ಇದ್ದಲ್ಲಿ ಅವರ ಹತ್ತಿರದ ಸಂಬಂಧೀಕರ ಪರಿಚಯವನ್ನು ಅಕ್ಕ ಪಕ್ಕದವರಿಗೆ ಮಾಡಿಸಿ. ತುರ್ತು ಪರಿಸ್ಥಿಯಲ್ಲಿ ಅವರನ್ನು ಸಂಪರ್ಕಿಸುವಂತೆ ತಿಳಿಸಿರಬೇಕು.
  • ಮನೆಯ ಹತ್ತಿರದ ಯಾವುದಾದರೂ ಕ್ಲಿನಿಕ್ ಅಥವಾ ವೈದ್ಯರನ್ನು ಪರಿಚಯ ಮಾಡಿಕೊಂಡು ಆಗ್ಗಿಂದಾಗ್ಗೆ ಅವರ ಬಳಿ ಪರೀಕ್ಷೆ ಮಾಡಿಸಿಕೊಂಡು ದೇಹವನ್ನು ಸುಸ್ಥಿತಿಯಲ್ಲಿಡಬೇಕು.
  • ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ತಮ್ಮ ಸಮವಯಸ್ಕರೊಂದಿಗೆ ಹತ್ತಿರದ ಪಾರ್ಕಿನಲ್ಲಿಯೋ ಅಥವಾ ದೇವಸ್ಥಾನದಲ್ಲಿ ಭೇಟಿ ಮಾಡಿ ಸುಖಃ ದುಃಖಗಳನ್ನು ಹಂಚಿಕೊಳ್ಳುವಂತಿರಬೇಕು.
  • ಹತ್ತಿರದ ಸಂಬಂಧೀಕರ ಮತ್ತು ಸ್ನೇಹಿತರ ಮನೆಗಳಿಗೆ ಆಗ್ಗಿಂದ್ದಾಗ್ಗೆ ಹೋಗಿ ಬಂದು ಸಂಬಂಧವನ್ನು ಚೆನ್ನಾಗಿ ಇಟ್ಟುಕೊಂಡಿರಬೇಕು.
  • ಪ್ರತಿ ತಿಂಗಳೂ ಸ್ವಲ್ಪ ಆಪತ್ ಧನ ಎಂದು ಕೈಯಲ್ಲಾದಷ್ಟನ್ನು ತೆಗೆದಿಡುವ ಹವ್ಯಾಸ ಬೆಳೆಸಿಕೊಂಡಲ್ಲಿ ತುರ್ತುಪರಿಸ್ಥಿತಿಯಲ್ಲಿ ಆ ಹಣ ಅಗತ್ಯಕ್ಕೆ ಬರಬಹುದು.

ಹೋದವರೆಲ್ಲಾ ಒಳ್ಳೆಯವರು ಹರಸೋ ಹಿರಿಯರು ಅವರ ಅಗಲಿಕೆ ನಮ್ಮನ್ನು ಸದಾ ಕಾಡುತ್ತದಾದರೂ ಅವರ ಆಶೀರ್ವಾದ ನಮ್ಮನ್ನು ಸದಾ ಕಾಲವೂ ಕಾಪಾಡುತ್ತಲೇ ಇರುತ್ತದೆ ಎನ್ನುವುದು ನಿಜವಾದರೂ ಅವರು ಸತ್ತಾಗ ನೂರಾರು ಜನರನ್ನು ಕರೆಸಿ ಲಕ್ಷಂತರ ಖರ್ಚು ಮಾಡಿ ಆಡಂಬರದಿಂದ ಭಕ್ಷ ಭೋಜನ ಹಾಕಿಸುವ ಬದಲು, ಇರುವಾಗ ಅವರನ್ನು ಚೆನ್ನಾಗಿ ನೋಡಿಕೊಂಡರೆ ಇನ್ನೂ ಸ್ವಲ್ಪ ಹೆಚ್ಚಿನ ದಿನ ಬಾಳುತ್ತಾರೆ ಅಲ್ಲವೇ?

ಏನಂತೀರೀ?

2 thoughts on “ಅಂತಿಮ ಪಯಣಕ್ಕೂ ದೊರೆಯುವುದಿಲ್ಲಾ ಪುಗಸಟ್ಟೆ ಪರ್ಮಿಟ್

  1. ಬಹಳ ಖೇಧಕರ ವಿಚಾರ. ಹಾಗಾದರೇ ಸಾಯುವುದಕ್ಕೂ ಪರ್ಮಿಟ್ಟು ಪಡೀಬೇಕಾ? ಲೇಖನ ಮನಕಲಕುವಂತಿದೆ. ಸರ್ಕಾರೀ ಆಸ್ಪತ್ರೆಗಳಾದಿಯಾಗಿ ಎಲ್ಲರೂ ಸುಲಿಗೆಕೋರಪ್ರವೃತ್ತಿ ತೋರಿದರೆ ಬಡವರು ಸಾಯಲೇಬಾರದೇ. ಈಲೇಖನ ಪತ್ರಿಕೆಗಳಲ್ಲಿ ಬರುವಂತೆ ಮಾಡಿ ಸರ್ಕಾರೀಯಂತ್ರಕ್ಕೆ ಹಿಡಿದಿರುವ ತುಕ್ಕು ಕೊಡವಬೇಕು. ಧನ್ಯವಾದಗಳು.

    Liked by 1 person

  2. ನಿಮ್ಮ ಈ ಅನುಭವ ಬಹಳಷ್ಟು ಜನರಿಗೆ ಆಗಿದೆ. ಇದರ ಬಗ್ಗೆ ಬರೆದು ಬೇರೆಯವರಿಗೆ ಅರಿವು ಮೂಡಿಸುವ ಪ್ರಯತ್ನ ಶ್ಲಾಘನೀಯ. ದೊಡ್ಡ ಆಸ್ಪತ್ರೆಯಲ್ಲಿ ಸುಮಾರು ದಿನ ಇದ್ದು ಚಿಕಿತ್ಸೆ ಪಡೆದು ನಂತರ ಮನೆಗೆ ಬಂದು ಪ್ರಾಣ ಬಿಟ್ಟರೂ ಆ ಆಸ್ಪತ್ರೆಯವರು ಮರಣಪ್ರಮಾಣ ಪತ್ರ ಕೂಡುವುದಿಲ್ಲ. ಹಾಗಾಗಿ ಒಬ್ಬ ಪ್ರಾಮಾಣಿಕ ವೈದ್ಯರ ಪರಿಚಯ ಮತ್ತು ಅಂತಿಮ ವಿಧಿಗಳಿಗೆ ಹಣವನ್ನು ಎತ್ತಿಡುವುದು ಸೂಕ್ತ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s