ಹುಡುಗಿಯರು ಕಲಿಯುತ್ತಿರುವ ಪ್ರೌಢಶಾಲೆಯ ಅಧ್ಯಾಪಿಕೆಯಾಗಿದ್ದಳು ಆಕೆ…
ಪಾಠ ಹೇಳಿ ಕೊಡಲು ಸಮರ್ಥರಾದ ಅಧ್ಯಾಪಿಕೆಯರಲ್ಲಿ ಒಬ್ಬಳಾಗಿದ್ದಳು ಮತ್ತು ಚೆಲುವೆಯಾಗಿದ್ದಳು ಆಕೆ… ಆಕೆಯ ಮದುವೆ ಆಗಿರಲಿಲ್ಲ….
ಒಂದು ದಿನ ತರಗತಿಯ ಹೆಣ್ಣು ಮಕ್ಕಳು ಆ ಟೀಚರ್ ಹತ್ತಿರ ಕೇಳಿದರು –
“ ಮಿಸ್.. ನೀವು ಮದುವೆಯಾಗದೇ ಇರೋದು ಯಾಕೆ…?”
ಟೀಚರ್ ಹೇಳಿದರು – ” ನಾನೊಂದು ಕಥೆ ಹೇಳುತ್ತೇನೆ. ಎಲ್ಲರೂ ಶ್ರಧ್ಧೆಯಿಂದ ಕೇಳಬೇಕು…”
ಟೀಚರ್ ಕಥೆ ಶುರು ಮಾಡಿದರು – ಒಂದು ಮನೆಯಲ್ಲಿ ನಾಲ್ಕು ಹೆಣ್ಣು ಮಕ್ಕಳಿದ್ದರು… ಐದನೆಯ ಬಾರಿಯೂ ಆ ತಾಯಿ ಗರ್ಭಿಣಿಯಾದಳು… ಪ್ರಸವದ ದಿನ ಹತ್ತಿರವಾಗುತ್ತಿದ್ದಂತೆ ಆಕೆಯ ಪತಿಯು
ಈ ಮಗು ಕೂಡಾ ಹೆಣ್ಣುಮಗುವಾದರೆ ಅದನ್ನು ಎಲ್ಲಾದರು ತಗೊಂಡುಹೋಗಿ ಬಿಸಾಕುತ್ತೇನೆ ಅಂತ ಎಚ್ಚರಿಸುತ್ತಲೇ ಇದ್ದರು….
ಆದರೆ , ವಿಧಿಯನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಅಲ್ಲವೇ…. ಈ ಬಾರಿಯೂ ಹೆಣ್ಣುಮಗುವಿಗೇ ಜನ್ಮವಿತ್ತಳು ಆ ತಾಯಿ….
ಅಂದು ರಾತ್ರಿ ಆ ತಂದೆಯು ಆ ನವಜಾತ ಶಿಶುವನ್ನು ತಗೊಂಡು ಹೋಗಿ ದೂರ ಬೀದಿದೀಪದ ಹತ್ತಿರ ಮಲಗಿಸಿ ವಾಪಾಸಾದರು…
ಪಾಪ ಆ ತಾಯಿಯು ಆ ಮಗುವಿಗಾಗಿ ಪ್ರಾರ್ಥಿಸುತ್ತಿದ್ದಳು… ಮರುದಿನ ಬೆಳ್ಳಂಬೆಳಿಗ್ಗೆ ಆ ತಂದೆಯು ಆ ಬೀದಿ ದೀಪದ ಹತ್ತಿರ ಹೋಗಿ ನೋಡಿದಾಗ ಆ ಮಗುವು ಅಲ್ಲೇ ಇತ್ತು…. ಮಗುವನ್ನು ಯಾರೂ ಕೊಂಡೊಯ್ದಿರಲಿಲ್ಲ….
ಆ ತಂದೆಯು ಮಗುವನ್ನು ಎತ್ತಿಕೊಂಡು ಮನೆಗೆ ಮರಳಿದರು.
ಮರುದಿನವು ರಾತ್ರಿ ಆ ತಂದೆಯು ಆ ಮಗುವನ್ನು ಎತ್ತಿಕೊಂಡು ಹೋಗಿ ದೂರದ ಬೀದಿದೀಪದ ಹತ್ತಿರ ಇಟ್ಟು ಬಂದರು..
ಆದರೆ , ಆ ತಂದೆ ಮರುದಿನ ಬೆಳಿಗ್ಗೆ ಹೋಗಿ ನೋಡಿದಾಗಲೂ ಆ ಮಗು ಅಲ್ಲೇ ಇತ್ತು. ಹೀಗೇ ಮೂರನೇ ದಿನವು ಆ ತಂದೆಯು ಮಗುವನ್ನು ಬಿಟ್ಟು ಬಂದಿದ್ದರು. ಆದರೆ ಮಗುವನ್ನು ಯಾರೂ ಕೊಂಡೊಯ್ದಿರಲಿಲ್ಲ.
ಕೊನೆಗೆ ಆ ತಂದೆಯು ಸೃಷ್ಟಿಕರ್ತನ ವಿಧಿಯನ್ನು ಸ್ವೀಕರಿಸುತ್ತಾ ಆ ಮಗುವನ್ನು ಬಿಸಾಕುವ ಪ್ರಯತ್ನವನ್ನು ಕೈಬಿಟ್ಟರು…
ಒಂದೂವರೆ ವರ್ಷದ ನಂತರ ಆ ತಾಯಿ ಪುನಃ ಒಂದು ಮಗುವಿಗೆ ಜನ್ಮವಿತ್ತಳು…. ಅದು ಗಂಡು ಮಗುವಾಗಿತ್ತು….
ಆದರೆ ಕೆಲವೇ ತಿಂಗಳೊಳಗೆ ಐದು ಹೆಣ್ಣು ಮಕ್ಕಳಲ್ಲಿ ಒಬ್ಬಳು ಹೆಣ್ಣು ಮಗಳು ರೋಗಪೀಡಿತಳಾಗಿ ಸಾವನ್ನಪ್ಪಿದಳು….
ಪುನಃ ಆ ತಾಯಿ ಗಂಡು ಮಗುವೊಂದಕ್ಕೆ ಜನ್ಮಕೊಟ್ಟಳು… ಆದರೆ ವಿಧಿ ಆ ತಾಯಿಯನ್ನು ಪರೀಕ್ಷಿಸುತ್ತಲೇ ಇತ್ತು…
ಒಂದೊಂದು ಗಂಡು ಮಗು ಹುಟ್ಟುವಾಗಲೂ, ತಿಂಗಳುಗಳೊಳಗೆ ಒಂದೊಂದು ಹೆಣ್ಣುಮಗು ರೋಗಪೀಡಿತಳಾಗಿ ಅಥವಾ ಅಪಘಾತದಲ್ಲಿ ಸತ್ತು ಹೋಗುತ್ತಲೇ ಇತ್ತು….
ಕೊನೆಗೆ ಆ ಮನೆಯಲ್ಲಿ ಹೆಣ್ಣು ಮಗಳಾಗಿ ಒಬ್ಬಳು ಮಾತ್ರ ಉಳಿದಳು. ಆ ಹೆಣ್ಣು ಮಗಳು ಆ ತಂದೆಯು ಬಿಸಾಕಲು ಕೊಂಡು ಹೋಗಿದ್ದ ಹೆಣ್ಣು ಮಗಳೇ ಆಗಿದ್ದಳು..
ಒಂದು ದಿನ ಆ ತಾಯಿಯೂ ಸಾವನ್ನಪ್ಪಿದಳು….
ನಾಲ್ಕು ಗಂಡುಮಕ್ಕಳು, ಒಬ್ಬಳು ಹೆಣ್ಣು ಮಗಳು ಮತ್ತು ಆ ತಂದೆ ಆ ಮನೆಯಲ್ಲಿ ವಾಸವಾಗಿದ್ದರು…
ಕಾಲಚಕ್ರ ಉರುಳುತ್ತಿದ್ದಂತೆ ಮಕ್ಕಳೆಲ್ಲರೂ ಬೆಳೆದು ದೊಡ್ಡವರಾದರು…
ಆ ಟೀಚರ್ ನಿಟ್ಟುಸಿರು ಬಿಡುತ್ತಾ ಮುಂದುವರಿಸಿದರು…
ಆ ಮನೆಯ ತಂದೆಯು ಬಿಸಾಕಲು ಪ್ರಯತ್ನಿಸಿದ್ದ ಆ ಹೆಣ್ಣುಮಗಳೇ ನಾನು…..
ಮಕ್ಕಳೆಲ್ಲರೂ ಮೂಖವಿಸ್ಮಿತರಾಗಿ ತದೇಕಚಿತ್ತದಿಂದ ಟೀಚರ್ ನ ಮಾತುಗಳನ್ನೇ ಆಲಿಸುತ್ತಿದ್ದರು…
ನಾನು ಮದುವೆಯಾಗದಿರಲು ಕಾರಣವನ್ನು ಈಗ ಹೇಳುತ್ತೇನೆ –
ನನ್ನ ತಂದೆಗೆ ವಯಸಾಗಿದೆ…. ಸ್ವತಃ ಆಹಾರವನ್ನು ಕೂಡಾ ತಿನ್ನೋದಕ್ಕೆ ಆಗುತ್ತಿಲ್ಲ…
ನನ್ನ ಸಹೋದರರೆಲ್ಲರೂ ಮದುವೆಯಾಗಿ ಅವರವರ ಪಾಡಿಗೆ ಹೋದರು…. ಈಗ ತಂದೆಯ ಯೋಗಕ್ಷೇಮವನ್ನು ನೋಡೋದಕ್ಕಾಗಲಿ, ಪರಿಚರಿಸಲಿಕ್ಕಾಗಲಿ ನಾನಲ್ಲದೆ ಬೇರೆ ಯಾರೂ ಇಲ್ಲ…..
ನನ್ನ ತಂದೆ ಆವಾಗಾವಾಗ ಅಳುತ್ತಾ ಹೇಳುತ್ತಾರೆ – ನೀನು ನವಜಾತ ಶಿಶುವಾಗಿದ್ದಾಗ ನಾನು ನಿನ್ನ ಮೇಲೆ ಮಾಡಿದ ತಪ್ಪನ್ನು ಕ್ಷಮಿಸಿಬಿಡು ಮಗಳೇ ಅಂತ….
ಟೀಚರ್ ತುಂಬಿ ಬಂದ ಕಣ್ಣೀರನ್ನು ಸೀರೆಯ ಸೆರಗಿನಿಂದ ಒರೆಸುತ್ತಾ ಕಥೆಯನ್ನು ನಿಲ್ಲಿಸಿದರು….
ನೆನಪಿರಲಿ ಸ್ನೇಹಿತರೇ…. ಒಬ್ಬ ತಂದೆಗೆ ಸೃಷ್ಟಿಕರ್ತನಿಂದ ಸಿಗುವ ಅತ್ಯಂತ ಅಮೂಲ್ಯವಾದ ವರದಾನಗಳಲ್ಲಿ ಒಂದಾಗಿದೆ ಹೆಣ್ಣುಮಕ್ಕಳು…..
ಆಕೆಗೆ ಸ್ತ್ರೀ ಅಂದರೆ ಅಷ್ಟೇ ಸಾಕೇ…….
ಇಂದು ಮುಂಜಾನೆ ನನ್ನ ಗೆಳೆಯರೊಬ್ಬರು ವ್ಯಾಟ್ಯಾಪ್ ಮುಖಾಂತರ ಕಳುಹಿಸಿದ ಈ ಸುಂದರ ಕಥೆಯ ಅನಾಮಿಕ ಮೂಲ ಲೇಖಕ/ಲೇಖಕಿಗೆ ನನ್ನ ಹೃತ್ಪೂರ್ವಕ ವಂದನೆಗಳನ್ನು ಅರ್ಪಿಸುತ್ತೇನೆ.
ನನ್ನ ಭಾವನೆಯಲ್ಲಿ ಈ ಲೇಖನದ ಮುಂದುವರೆದ ಭಾಗವಾಗಿ ನನ್ನ ದೃಷ್ಟಿಯಲ್ಲಿ ಹೆಣ್ಣುಮಗಳನ್ನು ಕೇವಲ ಸ್ತ್ರೀ ಎಂದು ಅಲ್ಲಿಗೇ ನಿಲ್ಲಿಸದೇ ಆಕೆಯ ನಾನಾ ರೂಪಗಳು ಹೀಗಿವೆ.
ಹುಟ್ಟಿದಾಗ ಮಗಳು , ಬೆಳೆಯುತ್ತಾ ಒಡಹುಟ್ಟಿದವರಿಗೆ ಸಹೋದರಿ, ಸಹಪಾಠಿಗಳಿಗೆ ಗೆಳತಿ, ಮದುವೆಯಾದಾಗ ಒಬ್ಬರ ಮಡದಿ ಮತ್ತೊಬ್ಬರ ಸೊಸೆ, ಮಕ್ಕಳಾದ ಕೂಡಲೇ ಮಮತಾಮಯಿಯಾದ ತಾಯಿ, ಮಂದೆ ತಾನೇ ಹೆತ್ತ ಮಕ್ಕಳಿಗೆ ಮದುವೆಯಾದಾಗ, ಬರುವ ಅಳಿಯಂದಿರಿಗೆ ಮತ್ರು ಸೊಸೆಯರಿಗೆ ಅತ್ತೆ, ಆ ಮಕ್ಕಳಿಗೆ ಮಕ್ಕಳಾದಾಗ, ಆ ಮೊಮ್ಮಕ್ಕಳಿಗೆ ಪ್ರೀತಿ ಪಾತ್ರವಾದ ಅಜ್ಜಿ. . ಹೀಗೆ ಒಂದು ಹೆಣ್ಣು ಹುಟ್ಟಿನಿಂದ ಆಕೆ ಜೀವಿತವಿರುವವರೆಗೂ ಸಂಧರ್ಭಕ್ಕೆ ತಕ್ಕಂತೆ ನಾನಾ ಪಾತ್ರಗಳಲ್ಲಿ ತನ್ನನ್ನು ತಾನು ಒಗ್ಗಿಕೊಂಡು ಹೋಗುತ್ತಾಳೆ. ಅದಕ್ಕೇ ಆಕೆಯನ್ನು ಗಂಗೆ ಹೋಲಿಸಲಾಗುತ್ತದೆ. ನೀರಿಗೆ ಬಣ್ಣವಿಲ್ಲ ವಾಸನೆಯಿಲ್ಲ, ಆಕಾರವಿಲ್ಲ, ರುಚಿಯಿಲ್ಲ, ಹಾಕಿದ ಪಾತ್ರೆಗೆ ಒಗ್ಗಿ ಕೊಳ್ಳುತ್ತದೆ. ಬೆರೆಸಿದ ಬಣ್ಣಕ್ಕೆ ತಕ್ಕಂತೆ ತನ್ನ ಬಣ್ಣವನ್ನು ಬದಲಿಸಿಕೊಳ್ಳುತ್ತದೆ. ಸಕ್ಕರೆ ಹಾಕಿದಲ್ಲಿ ಸಿಹಿ, ಉಪ್ಪು ಹಾಕಿದಲ್ಲಿ ಉಪ್ಪುಪ್ಪು, ಹುಳಿ ಹಿಂಡಿದಲ್ಲಿ ಹುಳಿ ಹೀಗೆ ನೀರು ಎಲ್ಲರೊಳಗೆ ಒಂದಾಗುವಂತೆ ಹೆಣ್ಣು ಕೂಡಾ ಕುಟುಂಬದಲ್ಲಿ ಒಂದಾಗಿ ಕುಟುಂಬದ ಕಣ್ಣಾಗಿ ಕಡೆಗೆ ಕುಟುಂಬದ ಅಧಾರವಾಗುತ್ತಾಳೆ. ಒಂದು ತಾಯಿ ಹತ್ತು ಗಂಡು ಮಕ್ಕಳನ್ನು ಸಾಕಿ ಬೆಳಸಬಹುದು ಆದರೆ ಅದೇ ಹತ್ತು ಗಂಡು ಮಕ್ಕಳು ಆ ತಾಯಿಯನ್ನು ಸುಖಃವಾಗಿ ನೆಮ್ಮದಿಯಾಗಿ ನೋಡಿಕೊಳ್ಳಲು ಸಾಧ್ಯವಾಗದಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ.
ಈ ಆಧುನಿಕ ಯುಗದಲ್ಲಿ ಹೆಣ್ಣುಮಕ್ಕಳು ಯಾವುದೇ ಕುಟುಂಬಕ್ಕೆ ಹೊರೆಯಲ್ಲ. ಹಾಗಾಗಿ ಹೆಣ್ಣು ಮತ್ತು ಗಂಡು ಎಂಬ ತಾರತಮ್ಯ ಬೇಡ. ಒಂದು ಕುಟುಂಬದಲ್ಲಿ ಹೆಣ್ಣಾಗಲೀ, ಗಂಡಾಗಲಿ ಮಕ್ಕಳೆರಡೇ ಇರಲಿ. ಒಂದೇ ಮಗುವಾದರೆ ಆ ಮಗುವಿಗೆ ಮುಂದೆ ಯಾವುದೇ ರಕ್ತಸಂಬಂಧವೇ ಇರದಿರುವ ಕಾರಣ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಯಾರೂ ಇರದಿರುವ ಕಾರಣ ಎರಡು ಮಕ್ಕಳಿರಬೇಕು ಎನ್ನುವುದು ನನ್ನ ವಯಕ್ತಿಕ ಆಭಿಪ್ರಾಯ. ಅದೇ ರೀತಿ ಈ ಲೇಖನದಲ್ಲಿಯೇ ತಿಳಿಸಿದಂತೆ ದುರದೃಷ್ಟವಶಾತ್ ಒಂದು ಮಗುವಿಗೆ ಹೆಚ್ಚು ಕಡಿಮೆಯಾದಲ್ಲಿ (ಯಾರಿಗೂ ಹಾಗಾಗುವುದು ಬೇಡ) ಮತ್ತೊಂದು ಮಗು ಇರುತ್ತದೆ ಎನ್ನುವುದು ಮತ್ತೊಂದು ವಾದ. ದಯವಿಟ್ಟು ಹೆಣ್ಣು ಮಕ್ಕಳನ್ನು ಉಳಿಸಿ ಮತ್ತು ಬೆಳಸಿ ಅದಕ್ಕೆಂದೇ ಸರ್ಕಾರವೂ ಕೂಡಾ ಬೇಟಿ ಬಚಾವ್ ಮತ್ತು ಬೇಟಿ ಪಡಾವ್ ಎಂಬ ಆಂಧೋಲನವೂ ಇದೇ. ಭ್ಯಾಗ್ಯಲಕ್ಷ್ಮೀ ಎಂಬ ಯೋಜನೆಯನ್ನೂ ಜಾರಿ ಗೊಳಿಸಿದೆ. ವಿದ್ಯೆ ಕಲಿತ ನಾರಿ ದೇಶಕ್ಕೆ ದಾರಿ ಎಂಬಂತೆ ಇಂದು ಮಹಿಳೆಯರು ಪುರುಷರಿಗೆ ಸರಿಸಮನಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ದುಡಿಯುತ್ತಿದ್ದಾರೆ. ವೈಜ್ಞಾನಿಕ ಕ್ಷೇತ್ರ, ಸಾಮಾಜಿಕ, ಕಲೆ ಸಾಹಿತ್ಯ, ರಂಗಭೂಮಿ, ರಾಜಕೀಯ ಯಾವುದೇ ಕ್ಷೇತ್ರವಿರಲಿ ಪ್ರಮಿಳೆಯರದ್ದೇ ಪ್ರಾಭಲ್ಯ. ಊರಿಗೆ ಅರಸನಾದರೂ ತಾಯಿಗೆ ಮಗ/ಹೆಂಡತಿಗೆ ಗುಲಾಮ ಎನ್ನುವ ಗಾದೆ ಮಾತೇ ಇದೆ. ಇಂದಿಗೂ ಕೂಡ ನಮ್ಮ ದೇಶ ಆರ್ಥಿಕವಾಗಿ ಸಧೃಢವಾಗಿದೆ ಎಂದರೆ ಅದರ ಹಿಂದೆ ಮನೆಯಲ್ಲಿ ನಮ್ಮ ಹೆಣ್ಣುಮಕ್ಕಳು ಸಾಸಿವೆ ಡಬ್ಬಿಯಲ್ಲಿ ಪೈಸೆ ಪೈಸೇ ಎತ್ತಿಟ್ಟು ಮಾಡುವ ಉಳಿತಾಯವೇ ಆಗಿದೆ. ಹಾಗಾಗಿಯೇ ನಾವಿಂದು, ನಮ್ಮ ದೇಶದ ಹಣಕಾಸನ್ನು ನಿರ್ವಹಿಸಲು ಹೆಣ್ಣುಮಗಳ ಕೈಗೇ ಅಧಿಕಾರವನ್ನು ಕೊಟ್ಟಿದ್ದೇವೆ.
ಹೆಣ್ಣು ಒಂದು ಮಾತೃ ಸ್ವರೂಪಿ, ಬಹುರೂಪಿ, ಕರುಣಾಮಯಿ. ಆಕೆ ಒಂದು ಶಕ್ತಿ ಸ್ವರೂಪ, ನಮ್ಮ ಪುರಾಣಗಳಲ್ಲಿಯೂ ದುಷ್ಟರ ಶಿಕ್ಷೆಗಾಗಿ ದುರ್ಗೇ, ಚಾಮುಂಡಿ ತಾಯಿಯರನ್ನೇ ಆಶ್ರಯಿಸಿದ್ದೇವೆ. ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ ಎಂಬ ಗಾದೇ ಮಾತೂ ಇದೆ. ಹಾಗಾಗಿ ಆಕೆಯನ್ನು ಕೇವಲ ಸ್ತ್ರೀ ಎಂಬ ಒಂದೇ ಒಂದು ಪದಕ್ಕೇ ಸೀಮಿತ ಗೊಳಿಸದೇ ಆಕೆಯನ್ನು ಇಡೀ ಜಗತ್ತನ್ನೇ ಎತ್ತಿ ಹಿಡಿದಿರುವ ಭೂಮಿ ತಾಯಿಯ ರೂಪದಲ್ಲಿ ನೋಡ ಬಯಸುತ್ತೇನೆ. ನಾವು ಎನೇ ತಪ್ಪು ಮಾಡಿದರೂ, ಎಷ್ಟೇ ತಪ್ಪು ಮಾಡಿದರೂ, ಅಕೆಯ ಒಡಲನ್ನು ಅಗೆದು ಬಗೆದು ಸೋಸಿದರೂ, ನಮ್ಮ ಮೇಲೆ ಒಂದು ಚೂರು ಬೇಸರಿ ಕೊಳ್ಳದೇ ಎಲ್ಲವನ್ನೂ ತನ್ನ ಮಡಿಲಲ್ಲಿ ಹಾಕಿಕೊಂಡು ಸಲಹುತ್ತಿರುವ ತಾಯಿಯವಳು .ಹಾಗಾ ಹಾಗಾಗಿ ನನ್ನ ಪಾಲಿಗೆ ಆಕೆ ಕೇವಲ ಸ್ರೀ ಮಾತ್ರ ಆಗಿರದೆ, ಆಕೆ ಕ್ಷಮಯಾಧರಿತ್ರೀ .
ಮನೆ ಮನೆಯಲ್ಲಿ ದೀಪ ಮುಡಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ ……!!
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆದರ ಮತ್ತು ಆಚರಣೆಗಳು ಕೇವಲ ಮಾರ್ಚ್ 8 ಒಂದೇ ದಿನಕ್ಕೇ ಸೀಮಿತವಾಗಿರದೇ, ಅದು ನಿರಂತರವಾಗಿರುವಂತೆ ನೋಡಿಕೊಳ್ಳುವ ಜವಾಬ್ಧಾರಿಯೂ ನಮ್ಮದೇ ಅಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ
😓heart touching story
LikeLike
ಅಜ್ಜಿ, ಅತ್ತೆ, ತಾಯಿ, ಮಗಳು,ಸಹೋದರಿ, ಹೆಂಡತಿ,ಸ್ತ್ರೀ =ಹೆಣ್ಣು
LikeLike
Super ji
LikeLiked by 1 person
ಧನ್ಯೋಸ್ಮಿ
LikeLike