ದಸರಾಹಬ್ಬ ಮೈಸೂರು ಪ್ರಾಂತದ ನಾಡಹಬ್ಬ ಒಂಭತ್ತು ರಾತ್ರಿಗಳು ಸೇರಿ ಒಟ್ಟು ಹತ್ತು ದಿನಗಳು ನಾಡಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಹಳೇ ಮೈಸೂರು ಪ್ರಾಂತ್ಯದ ಬಹುತೇಕರ ಮನೆಗಳಲ್ಲಿ ರಾಜಾ ರಾಣಿಯರ ಪಟ್ಟದ ಗೊಂಬೆಗಳ ಜೊತೆ ವಿವಿಧ ರೀತಿಯ ಅಲಂಕಾರಿಕ ಗೊಂಬೆಗಳನ್ನು ಇಟ್ಟು ಜೊತೆಗೆ ಕಳಸ ಮತ್ತು ದೇವಿಯನ್ನಿಟ್ಟು ಬಗೆ ಬಗೆಯ ರೀತಿಯ ಅಲಂಕಾರಗಳನ್ನು ಮಾಡಿ ಪ್ರತೀದಿನವೂ ಭಕ್ತಿಯಿಂದ ನೈವೇದ್ಯ ಮಾಡಿ ಮಕ್ಕಳಿಗೆ ಬೊಂಬೇ ಬಾಗಿಣ ಕೊಡುವುದು ಸಂಪ್ರದಾಯ.
ನವರಾತ್ರಿಯ ಪ್ರತೀ ದಿನದ ದೇವಿಯ ಅಲಂಕಾರ, ಆಕೆಗೆ ಇಷ್ಟವಾದ ಹೂವು, ಅಂದು ಇಷ್ಟವಾದ ನೈವೇದ್ಯ. ಆ ದಿನ ಇಡಬೇಕಾದ ರಂಗೋಲಿ, ಆಕೆಯನ್ನು ಒಲಿಸಿಕೊಳ್ಳಲು ರಾಗದ ಜೊತೆಗೆ ಅವಳನ್ನು ಆರಾಧಿಸುವ ಶ್ಲೋಕಗಳು ಈ ರೀತಿಯಾಗಿವೆ.
ನವರಾತ್ರಿ ದಿನ 1

- ದೇವಿ: ಮಹೇಶ್ವರಿ
- ಹೂ: ಮಲ್ಲಿಗೆ
- ನೈವೇದ್ಯ ಖಾರ ಹುಗ್ಗಿ (ಪೊಂಗಲ್)
- ತಿಥಿ: ಪಾಡ್ಯ
- ರಂಗೋಲಿ : ಅಕ್ಕಿ ಹಿಟ್ಟನ್ನು ಬಳಸಿ ರಂಗೋಲಿ ಬಿಡಿಸಬೇಕು
- ರಾಗ: ತೋಡಿ
- ಶ್ಲೋಕ: ಓಂ ಶ್ವೇತವರ್ಣಾಯೈ ವಿಧ್ಮಹೇ ಶೂಲಾ ಹಸ್ತಾಯೈ ಧೀಮಾಹಿ ತನ್ನೋ ಮಹೇಶ್ವರಿ ಪ್ರಚೋದಯಾತ್!
ದೇವಿ ಮಹೇಶ್ವರಿಯು ಹಿಂದೂ ಧರ್ಮದ ಶಕ್ತಿಶಾಲಿ ದೇವತೆಗಳಲ್ಲಿ ಒಬ್ಬಳಾಗಿದ್ದು, ಆಕೆ ಶಕ್ತಿ, ಬುದ್ಧಿವಂತಿಕೆ ಮತ್ತು ರಕ್ಷಣೆಯ ಸಂಕೇತವಾಗಿದ್ದಾಳೆ, ದುಷ್ಟಶಕ್ತಿಗಳನ್ನು ನಿವಾರಿಸಿ ಭಕ್ತರಿಗೆ ಸಮೃದ್ಧಿ ಮತ್ತು ಸುರಕ್ಷತೆಯನ್ನು ಕರುಣಿಸುತ್ತಾಳೆ ಎನ್ನುವ ಪ್ರತೀತಿ ಇದೆ.
ನವರಾತ್ರಿಯ 2ನೇ ದಿನ

- ದೇವಿ: ಕೌಮಾರಿ
- ಹೂ: ಕಣಗಲೆ
- ನೈವೇದ್ಯ ಪುಳಿಯೋಗರೆ
- ತಿಥಿ: ದ್ವಿತಿಯ
- ರಂಗೋಲಿ: ಒದ್ದೆಯಾದ ಹಿಟ್ಟನ್ನು ಬಳಸಿ ರಂಗೋಲಿ ಬಿಡಿಸಬೇಕು
- ರಾಗ: ಕಲ್ಯಾಣಿ
- ಶ್ಲೋಕ : ಓಂ ಶಿಕಿ ವಾಹನಾಯ ವಿದ್ಮಹೇ ಶಕ್ತಿ ಹಸ್ತಾಯೈ ಧೀಮಹಿ ತನ್ನೋ ಕೌಮಾರಿ ಪ್ರಚೋದಯಾತ್!
ಕೌಮಾರಿ ಎಂಬುದು ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲಾದ ಎಂಟು ಶಕ್ತಿ ದೇವತೆಗಳ ಮಾತೃಕೆಗಳಲ್ಲಿ ಒಬ್ಬಳಾಗಿದ್ದು ಸುಬ್ರಹ್ಮಣ್ಯನಂತೆಯೇ, ಇವಳೂ ಸಹಾ ನವಿಲಿನ ಮೇಲೆ ಕುಳಿತು ರಾಕ್ಷಸರನ್ನು ಸಂಹರಿಸಲು ಕೈಯಲ್ಲಿ ಆಯುಧಗಳನ್ನು ಹಿಡಿದು ಅವತರಿಸಿದ್ದಾಳೆ. ಕೌಮರಿಯ ಒಂದು ಮುಖ, ಎರಡು ಕಣ್ಣುಗಳು ಮತ್ತು ನಾಲ್ಕು ಕೈಗಳನ್ನು ಹೊಂದಿದ್ದು, ಅವಳು ಕಿರೀಟಪ್ರಾಯಳಾಗಿ ಜಡೆ ಕೂದಲನ್ನು ಹೊಂದಿದ್ದಾಳೆ ಮತ್ತು ಚಿರಯೌವನೆ ಎಂದು ಉಲ್ಲೇಖಿಸಲಾಗಿದೆ.
ನವರಾತ್ರಿಯ 3ನೇ ದಿನ

- ದೇವಿ: ವಾರಹಿ
- ಹೂ: ಸಂಪಿಗೆ
- ನೈವೇದ್ಯ ಬೆಲ್ಲದನ್ನ ( ಸಕ್ಕರೆ ಪೊಂಗಲ್)
- ತಿಥಿ: ತೃತಿಯಾ
- ರಂಗೋಲಿ:ಹೂವಿನಿಂದ ರಂಗೋಲಿ ಬಿಡಿಸ ಬೇಕು
- ರಾಗ: ಕಾಂಭೋಧಿ
- ಶ್ಲೋಕ: ಓಂ ಮಹಿಶತ್ವಜಾಯ ವಿದ್ಮಹೇ ತಂಡ ಹಸ್ತಾಯ ಧೀಮಹಿ ತನ್ನೋ ವಾರಾಹಿ ಪ್ರಚೋದಯಾತ್!
ವಾರಹಿದೇವಿ ಹಿಂದೂ ಧರ್ಮದ ಸಪ್ತ ಮಾತೃಕೆಗಳಲ್ಲಿ ಒಬ್ಬಳಾಗಿದ್ದು ಹಂದಿಯ ತಲೆಯನ್ನು ಹೊಂದಿರುವ, ಮಹಾವಿಷ್ಣುವಿನ ವರಾಹ ಅವತಾರದ ಸ್ತ್ರೀ ಶಕ್ತಿಯಾಗಿದ್ದಾಳೆ. ಇವಳನ್ನು ಶೈವ, ವೈಷ್ಣವ ಮತ್ತು ಶಾಕ್ತ ಪಂಥಗಳ ಅನುಯಾಯಿಗಳು ಸಾಮಾನ್ಯವಾಗಿ ರಾತ್ರಿ ಹೊತ್ತಿನಲ್ಲಿ, ವಾಮಾಚಾರ ತಾಂತ್ರಿಕ ಪದ್ಧತಿಗಳ ಮೂಲಕ ಪೂಜಿಸಲಾಗುತ್ತದೆ. ಈಕೆಯು ಲಲಿತಾ ತ್ರಿಪುರ ಸುಂದರಿ ದೇವಿಯ ಮಹಾದಂಡನಾಯಕಿಯಾಗಿ ಕಾರ್ಯನಿರ್ವಹಿಸುವುದಲ್ಲದೇ, ಶ್ರೀ ಚಕ್ರದ ಶಕ್ತಿಯ ಪ್ರತಿನಿಧಿಯಾಗಿದ್ದಾಳೆ.
ನವರಾತ್ರಿಯ 4ನೇ ದಿನ

- ದೇವಿ: ಲಕ್ಷ್ಮಿ
- ಹೂ: ಜಾಜಿ
- ನೈವೇದ್ಯ ಹುಳಿಯನ್ನ (ಬಿಸಿಬೇಳೇ ಬಾತ್)
- ತಿಥಿ: ಚತುರ್ಥಿ
- ಶ್ಲೋಕ: ಅಕ್ಕಿ, ಅರಿಶಿನ ಮತ್ತು ತುಪ್ಪ ಬೆರೆಸಿ ಎಳೆ ಎಳೆಯಾಗಿ ರಂಗೋಲಿಯನ್ನು ಬಿಡಬೇಕು
- ರಾಗ: ಭೈರವಿ
- ಶ್ಲೋಕ: ಓಂ ಪದ್ಮ ವಾಸನ್ಯೈ ಚ ವಿದ್ಮಹೀ ಪದ್ಮಲೋಚನೀ ಸ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್!
ಲಕ್ಷ್ಮಿ ದೇವಿಯು ಸಂಪತ್ತು, ಐಶ್ವರ್ಯ ಮತ್ತು ಸಮೃದ್ಧಿಯ ದೇವತೆಯಾಗಿದ್ದು ಆಕೆ ಮಹಾವಿಷ್ಣುವಿನ ಧರ್ಮಪತ್ನಿಯಾಗಿದ್ದು, ಮಹಾಲಕ್ಷ್ಮಿ ಎಂದೂ ಖ್ಯಾತಳಾಗಿದ್ದಾಳೆ ನವರಾತ್ರಿಯ ಸಂದರ್ಭಗಳಲ್ಲಿ ಶ್ರದ್ಧಾ ಭಕ್ತಿಗಳಿಂದ ಆಕೆಯನ್ನು ಪೂಜಿಸಿದರೆ, ಲಕ್ಷ್ಮಿ ದೇವಿಯು ಧನ ಸಂಪತ್ತು ಮತ್ತು ಅದೃಷ್ಟವನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ. ಬಡ ಬಗ್ಗರಿಗೆ ಮತ್ತು ಅವಶ್ಯವಿದ್ದವರಿಗೆ ದಾನ ಧರ್ಮಗಳನ್ನು ಮಾಡುವ ಮೂಲಕವೂ ಲಕ್ಷ್ಮಿ ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬಹುದಾಗಿದೆ.
ನವರಾತ್ರಿಯ 5ನೇ ದಿನ

- ದೇವಿ: ವೈಷ್ಣವಿ
- ಹೂ: ಪಾರಿಜಾತ ಮತ್ತು ಮಲ್ಲೇ
- ನೈವೇದ್ಯ ಮೊಸರನ್ನ
- ತಿಥಿ: ಪಂಚಮಿ
- ರಂಗೋಲಿ: ಕಡಲೇ ಹಿಟ್ಟಿನಿಂದ ಪಕ್ಷಿಯ ರೂಪದ ರಂಗೋಲಿಯನ್ನು ಬಿಡಿಸಬೇಕು
- ರಾಗ: ಪಂಚಮ ವರ್ಣ ಕೀರ್ತನೆ, ಪಂತುವರಾಲಿ
- ಶ್ಲೋಕ: ಓಂ ಶ್ಯಾಮವರ್ಣಾಯೈ ವಿದ್ಮಹಿ ಚಕ್ರ ಹಸ್ತಾಯೈ ಧೀಮಹಿ ತನ್ನೋ ವೈಷ್ಣವಿ ಪ್ರಚೋದಯಾತ್!
ವೈಷ್ಣವಿ ದೇವಿ ಎಂದರೆ ವಿಷ್ಣುವಿನ ಶಕ್ತಿ ಸ್ವರೂಪಳಾದ ದೇವತೆಯಾಗಿದ್ದು ಈಕೆಯನ್ನು ಮಹಾ ಲಕ್ಷ್ಮಿಯ ರೂಪ ಎಂದು ಪರಿಗಣಿಸಲಾಗುತ್ತದೆ. ಈಕೆಯನ್ನು ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ದೇವತೆಗಳ ಸಂಯೋಜಿತ ಅವತಾರವಾಗಿಯೂ ಪೂಜಿಸಲಾಗುತ್ತದೆ. ವೈಷ್ಣವಿ ದೇವಿಯು ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶ ಎಂಬ ಮೂರು ಪ್ರಮುಖ ದೈವಿಕ ಸ್ತ್ರೀಲಿಂಗದ ಅಂಶಗಳನ್ನು ಪ್ರತಿನಿಧಿಸುತ್ತಾಳೆ. ಈಕೆಯು ಕೌಮಾರಿ ದೇವತೆಯ ಕೈಯಿಂದ ಹೊರಹೊಮ್ಮಿದಳು ಮತ್ತು ಗರುಡನ ಮೇಲೆ ಕುಳಿತು ಶಂಖ, ಚಕ್ರ, ಗದಾ, ಖಡ್ಗ, ಬಿಲ್ಲು ಮತ್ತು ಬಾಣಗಳನ್ನು ಹಿಡಿದಿದ್ದಾಳೆ ಎಂದು ವರ್ಣಿಸಲಾಗಿದೆ.
ನವರಾತ್ರಿಯ 6ನೇ ದಿನ

- ದೇವಿ: ಇಂದ್ರಾಣಿ
- ಹೂ: ದಾಸವಾಳ
- ನೈವೇದ್ಯ: ಕಾಯನ್ನ
- ತಿಥಿ: ಷಷ್ಠಿ
- ರಂಗೋಲಿ: ಕಡಲೇ ಹಿಟ್ಟಿನಿಂದ ದೇವಿಯ ಹೆಸರನ್ನು ಬರೆಯಬೇಕು
- ರಾಗ: ನೀಲಾಂಬರಿ
- ಶ್ಲೋಕ: ಓಂ ಕಜತ್ವಜಾಯೈ ವಿದ್ಮಹಿ ವಜ್ರ ಹಸ್ತಾಯ ಧೀಮಹಿ ತನ್ನೋ ಇಂದ್ರಾಯೀ ಪ್ರಚೋದಯಾತ್!
ಇಂದ್ರಾಣಿ ದೇವಿಯು ಹಿಂದೂ ಸಂಪ್ರದಾಯದಲ್ಲಿ ದೈವಿಕ ಸ್ತ್ರೀಲಿಂಗ ಶಕ್ತಿಯಾಗಿದ್ದು, ದೇವತೆಗಳ ರಾಜ ಮತ್ತು ಸ್ವರ್ಗದ ದೊರೆ ಭಗವಾನ್ ಇಂದ್ರನ ಪತ್ನಿಯಾಗಿರುವ ಕಾರಣ, ಈಕೆಯನ್ನು ದೇವತೆಗಳ ರಾಣಿ ಎಂದೂ ಸಹಾ ಕರೆಯಲಾಗುತ್ತದೆ. ಈಕೆಯೂ ಸಹಾ ಸಪ್ತ ಮಾತೃಕೆಗಳಲ್ಲಿ ಒಬ್ಬಳಾಗಿದ್ದು, ಒಂದು ಸಾವಿರ ಕಣ್ಣುಗಳುಳ್ಳ ಸುಂದರಿ ಆಗಿದ್ದಾಳೆ. ಋಗ್ವೇದದ ಮೂಲಕ ಇಂದ್ರಾಣಿ ಅಮರತ್ವವನ್ನು ಅಂಗೀಕರಿಸಿ ತನ್ನ ಪತಿಗೆ ಅದೃಷ್ಟಕಾರಕ ಸ್ತ್ರೀ ಎಂದು ಪರಿಗಣಿಸಲಾಗಿದೆ.
ನವರಾತ್ರಿಯ 7ನೇ ದಿನ

- ದೇವಿ: ಸರಸ್ವತಿ
- ಹೂವು: ಮಲ್ಲಿಗೆ ಮತ್ತು ಮಲ್ಲೇ
- ನೈವೇದ್ಯ: ನಿಂಬೇಹಣ್ಣಿನ ಚೆತ್ರಾನ್ನ
- ತಿಥಿ: ಸಪ್ತಮಿ
- ರಂಗೋಲಿ: ಪರಿಮಳಯುಕ್ತ ಹೂಗಳನ್ನು ಬಳೆಸಿ ರಂಗೋಲಿಯನ್ನು ಹಾಕಬೇಕು
- ರಾಗ: ಬಿಲಹರಿ
- ಶ್ಲೋಕ : ಓಂ ವಾಗ್ಧೇವ್ಯೈ ವಿದ್ಮಹಿ ವೃಂಜಿ ಪತ್ನಯೈ ಸ ಧೀಮಹಿತನ್ನೋ ವಾಣಿ ಪ್ರಚೋದಯಾತ್!
ಸರಸ್ವತಿ ದೇವಿಯು ಹಿಂದೂ ಧರ್ಮದದಲ್ಲಿ ಜ್ಞಾನ, ಸಂಗೀತ, ಕಲೆ, ಬುದ್ಧಿವಂತಿಕೆ ಮತ್ತು ಕಲಿಕೆಯ ದೇವತೆ ಎಂದೇ ಪೂಜಿಸಲ್ಪಡುತ್ತಾಳೆ. ಈಗೆ ಬ್ರಹ್ಮನ ಪತ್ನಿಯಾಗಿದ್ದು ತ್ರಿದೇವಿಯರಲ್ಲಿ ಒಬ್ಬಳಾಗಿ ಶಾರದೆ, ವಿದ್ಯಾಧಿ ದೇವತೆ ಎಂಬ ಹೆಸರುಗಳಿಂದ ಪ್ರಖ್ಯಾತಳಾಗಿದ್ದಾಳೆ. ನೀರಿನಲ್ಲಿರುವ ಕಮಲದ ಮೇಲೆ ವೀಣೆ, ಅಕ್ಷಮಾಲೆ ಮತ್ತು ಪುಸ್ತಕಗಳನ್ನು ಹಿಡಿದಿರುವ ಬಿಳಿ ವಸ್ತ್ರಧಾರಿಣಿಯಾಗಿ ಕುಳಿತಿರುತ್ತಾಳೆ. ವಿದ್ಯಾರ್ಥಿಗಳು ಸರಸ್ವತಿ ಹಬ್ಬದಂದು ತಮ್ಮ ಪುಸ್ತಕಗಳು ಮತ್ತು ಸಂಗೀತ ಉಪಕರಣಗಳನ್ನು ದೇವಿಯ ಮುಂದೆ ಇಟ್ಟು ಪೂಜಿಸುವ ಸಂಪ್ರದಾಯವಿದೆ.
ನವರಾತ್ರಿಯ 8ನೇ ದಿನ

- ದೇವಿ: ದುರ್ಗೆ
- ಹೂ: ಗುಲಾಬಿ
- ನೈವೇದ್ಯ: ಅಕ್ಕೀ ಕಡಲೇಬೇಳೆ ಪಾಯಸ
- ತಿಥಿ: ಅಷ್ಟಮಿ
- ರಂಗೋಲಿ: ಕಮಲದ ಆಕಾರದ ರಂಗೋಲಿ ಹಾಕಬೇಕು
- ರಾಗ:ಪುನ್ನಗಾವರಾಲಿ
- ಶ್ಲೋಕ: ಓಂ ಮಹಿಷಮರ್ದಿನ್ಯೈ ಚ ವಿದ್ಮಹೀ ದುರ್ಗಾ ದೇವ್ಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್!
ಶ್ರೀ ದುರ್ಗಾ ದೇವಿಯು ಹಿಂದೂ ಧರ್ಮದ ಒಬ್ಬ ಪ್ರಮುಖ ದೇವತೆಯಾಗಿದ್ದು, ಶಕ್ತಿ, ಧೈರ್ಯ, ಮತ್ತು ರಕ್ಷಣೆಯ ಸಂಕೇತವಾಗಿದೆ. ಇವಳು ಶಕ್ತಿ ಸಂಪ್ರದಾಯದಲ್ಲಿ ಕೇಂದ್ರ ಸ್ಥಾನದಲ್ಲಿದ್ದು, ದುಷ್ಟ ಶಕ್ತಿಗಳನ್ನು ಸಂಹರಿಸಿ ಲೋಕ ಕಲ್ಯಾಣ ಮಾಡುವವಳೆಂದು ನಂಬಲಾಗಿದೆ. ನವರಾತ್ರಿ ಹಬ್ಬದ ಪ್ರಮುಖ ದೇವತೆಯಾದ ಇವಳು ಸಿಂಹ ಅಥವಾ ಹುಲಿಯ ಮೇಲೆ ಕುಳಿತುಕೊಂಡು ಅನೇಕ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ದುಷ್ಟ ಶಕ್ತಿಗಳು ಮತ್ತು ಅನ್ಯಾಯವನ್ನು ಸಂಹರಿಸಿ ಶಾಂತಿ, ಸಮೃದ್ಧಿ ಮತ್ತು ಧರ್ಮವನ್ನು ಸ್ಥಾಪಿಸಲು ಅವತರಿಸಿದಳು ಎನ್ನುವ ಪ್ರತೀತಿ ಇದೆ.
ನವರಾತ್ರಿಯ 9ನೇ ದಿನ ಆಯುಧ ಪೂಜೆ

- ದೇವಿ : ಚಾಮುಂಡಿ
- ಹೂವು: ತಾವರೆ
- ನೈವೇದ್ಯ: ಕ್ಷೀರಾನ್ನ
- ತಿಥಿ: ನವಮಿ
- ರಂಗೋಲಿ: ಪರಿಮಳಯುಕ್ತ ಪುಡಿಯನ್ನು ಬಳಸಿ ಶಸ್ತ್ರಾಸ್ತ್ರ ಆಕಾರದ ರಂಗೋಲಿಯನ್ನು ಎಳೆಯಿರಿ.
- ರಾಗ: ವಸಂತ
- ಶ್ಲೋಕ: ಓಂ ಕೃಷ್ಣವರ್ಣಾಯೈ ವಿದ್ಮಹೀ ಶೂಲ ಹಸ್ತಾಯೈ ಧೀಮಹಿ ತನ್ನೋ ಜಾಮುಂಡಾ ಪ್ರಚೋದಯಾತ್!
ಚಾಮುಂಡಿ ದೇವಿಯು ದುರ್ಗಾ ದೇವಿಯ ಒಂದು ಉಗ್ರ ರೂಪವಾಗಿದ್ದು, ಪ್ರಜಾಪೀಡಕ ಮಹಿಷಾಸುರ ಎಂಬ ರಾಕ್ಷಸನನ್ನು ವಧಿಸಿದ ನಂತರ ಈಕೆಗೆ ಶ್ರೀ ಮಹಿಷ ಮರ್ಧಿನಿ, ಶ್ರೀ ಚಾಮುಂಡೇಶ್ವರಿ ಎಂಬ ಹೆಸರು ಬಂದಿದೆ. ಈಕೆ ತಾಮಸ ಗುಣದ ದೇವತೆಯಾಗಿದ್ದು, ಎಂಟು ಕೈಗಳಲ್ಲಿ ಆಯುಧಗಳನ್ನುಹ ಹಿಡಿದು, ಕೊರಳಲ್ಲಿ ರುಂಡಮಾಲೆಯನ್ನು ಧರಿಸಿದ್ದಾಳೆ. ಮೈಸೂರು ಅರಸರ ಕಾಲದಿಂದಲೂ ಈಕೆಯನ್ನು ಕರ್ನಾಟಕದ ನಾಡದೇವತೆಯಾಗಿ ಪೂಜಿಸಲಾಗುತ್ತದೆ.
ನವರಾತ್ರಿಯ 10ನೇ ದಿನ ವಿಜಯ ದಶಮಿ

- ದೇವಿ: ವಿಜಯ
- ಹೂವು: ಮಲ್ಲಿಗೆ, ಗುಲಾಬಿ
- ನೈವೇದ್ಯ : ಕಲ್ಲು ಸಕ್ಕರೆ ಅನ್ನ ಹಾಗೂ ಸಿಹಿ ಭಕ್ಷ್ಯ
- ಶ್ಲೋಕ: ಓಂ ವಿಜಯಾ ದಿವ್ಯೈ ವಿದ್ಮಹೀ ಮಹಾ ನಿತ್ಯಾಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್!
ಕ್ಷೇಮರಾಜನ ನೇತ್ರತಂತ್ರದ ಪ್ರಕಾರ, ವಿಜಯದೇವಿಯು ತುಂಬುರು ಜೊತೆ ಸಂಬಂಧ ಹೊಂದಿರುವ ದೇವಿಯರಲ್ಲಿ ಒಬ್ಬಳು ಎನ್ನಲಾಗುತ್ತದೆ. ವಿಜಯ ದೇವಿಯು ಬಿಳಿ, ಕೆಂಪು, ಹಳದಿ ಮತ್ತು ಕಪ್ಪು, ನಾಲ್ಕು ಮುಖಗಳು, ನಾಲ್ಕು ಶಸ್ತ್ರಸಜ್ಜಿತ ತೋಳುಗಳು, ಮೂರು ಕಣ್ಣುಗಳು ಮತ್ತು ಕೈಗಳಲ್ಲಿ ಚಿನ್ನದ ಕೋಲುಗಳು ಮತ್ತು ಜಪಮಾಲೆಗಳನ್ನು ಹೊಂದಿದ್ದಾಳೆ ಆಧ್ಯಾತ್ಮಿಕತೆ, ವಿಶ್ವವಿಜ್ಞಾನ ಮತ್ತು ಸಮಾಜಶಾಸ್ತ್ರವ ಅಧಿಪತಿಯಾಗಿದ್ದು, ಈಕೆಯ ಸಾಧಕರಿಗೆ ಸಿದ್ಧಿಯ ಫಲಗಳನ್ನು ನೀಡುತ್ತಾಳೆ ಎನ್ನಲಾಗುತ್ತದೆ.
ನಾಡದೇವಿ ಚಾಮುಂಡೇಶ್ವರಿಯ ಕೈಪಾಶೀರ್ವಾದ ನಮ್ಮ ನಿಮ್ಮೆಲ್ಲರ ಮೇಲಿದ್ದು ನಾಡ ಹಬ್ಬ ದಸರಾ ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆರಿಸೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಈ ಲೇಖನ 2022ರ ಕನ್ನಡಪ್ರಭ ವೆಬ್ ಸೈಟಿನಲ್ಲಿ ಪ್ರಕಟವಾಗಿದೆ.
ಬಹು ಉತ್ತಮಮ್ . ಧನ್ಯವಾದಗಳು ದೇವಿಕೃಪೆ ಸದಾ ನಿಮಗೂ ನಿಮ್ಮಕುಟುಂಬದವರಿಗೂ ಇರಲಿ
LikeLike